ಭಾರತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾರತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 6, 2017

ಪ್ರಾದೇಶಿಕ ಸ್ಥಿರತೆಯ ನಿರೀಕ್ಷೆಯಲ್ಲಿ ಭಾರತ-ಜಪಾನ್ ಮೈತ್ರಿ

ಭಾರತ ಮತ್ತು ಜಪಾನ್ ಮೈತ್ರಿ ಈ ಎರಡು ದೇಶಗಳ ಭದ್ರತೆಯ ಪ್ರಶ್ನೆ ಮಾತ್ರವಲ್ಲ, ಏಷ್ಯಾದ ಸ್ಥಿರತೆ ಮತ್ತು ಭವಿಷ್ಯ ರೂಪಿಸುವಲ್ಲೂ ಈ ಮೈತ್ರಿ ಮುಖ್ಯಪಾತ್ರ ವಹಿಸಲಿದೆ. ಚದುರಂಗದಾಟದಲ್ಲಿ ತಾನು ನಡೆದಿದ್ದೇ ದಾರಿ ಎಂದುಕೊಂಡಿರುವ ಚೀನಾಗೆ ಚೆಕ್ ಮೇಟ್ ಇಡುವ ಪ್ರಯತ್ನವೊಂದು ಜಾರಿಯಲ್ಲಿದೆ.
-  ಕೀರ್ತಿರಾಜ್


ಮಿತ್ರ ರಾಷ್ಟ್ರಗಳಿಗೆ ಅಮೆರಿಕಾ ನೀಡುತ್ತಿದ್ದ ರಕ್ಷಣಾ ನೆರವಿನ ವಿರುದ್ಧ ಅಸಡ್ಡೆ ವ್ಯಕ್ತಪಡಿಸುತ್ತಿರುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗಳಲ್ಲಿ  ಜಯಗಳಿಸುತ್ತಿದ್ದಂತೆ, ಅಮೆರಿಕಾದ ಮಿತ್ರ ರಾಷ್ಟ್ರಗಳು ತಮ್ಮ ತಮ್ಮ ಭದ್ರತೆಯನ್ನು ಬಲ ಪಡಿಸಿಕೊಳ್ಳಲು ಅನ್ಯದಾರಿ ಹುಡುಕಿಕೊಳ್ಳುವಲ್ಲಿ ನಿರತವಾಗಿವೆ. ದಶಕಗಳಿಂದ ಅಮೆರಿಕಾದ ರಕ್ಷಣೆಯಲ್ಲಿದ್ದ ಜಪಾನ್ ಕೂಡ, ಸದ್ಯದ ವಿದ್ಯಮಾನಗಳಿಂದ ಎಚ್ಚೆತ್ತುಕೊಂಡು ತನ್ನ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚೀನಾ ಆಕ್ರಮಣಕಾರಿ ನಡೆಗಳಿಗೆ ತಕ್ಕ ಉತ್ತರ ನೀಡಿ ಪ್ರಾದೇಶಿಕ ಸ್ಥಿರತೆ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಜಪಾನ್, ಸಮಾನಮನಸ್ಕ ಮಿತೃರಿಗಾಗಿ ಹುಡುಕಾಟ ನಡೆಸಿದೆ. ಇವೆಲ್ಲವುಗಳ ಫಲಿತಾಂಶವೇ ಬೆಳೆಯುತ್ತಿರುವ ಭಾರತ- ಜಪಾನ್ ಬಾಂಧವ್ಯ. ನವೆಬರ್ 11ರಂದು ಪ್ರಧಾನಿ ಮೋದಿಯವರು ಜಪಾನ್ ಗೆ ನೀಡಿದ ಭೇಟಿ ಹಾಗೂ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಈ ಎರಡು ದೇಶಗಳ ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ತಿರುವು ನೀಡಿದ್ದಲ್ಲದೇ, ಅಣು ಸಹಕಾರ, ಭಯೋತ್ಪಾದನಾ ನಿಗ್ರಹ, ಪ್ರಾದೇಶಿಕ ಸ್ಥಿರತೆಯಲ್ಲಿ ಸಮನ್ವಯ ಮತ್ತು ರಕ್ಷಣಾ ವಲಯದ ಸಹಕಾರಗಳಲ್ಲಿ ಮಾರ್ಮಿಕ ಬದಲಾವಣೆಗಳನ್ನು ತರಲಿದೆ.

ಆರು ವರ್ಷಗಳ ಸುದೀರ್ಘ ಮಾತುಕತೆಗಳು ಮತ್ತು ಏರಿಳಿತಗಳ ನಂತರ ಭಾರತ ಮತ್ತು ಜಪಾನ್ ನಾಗರಿಕ ಅಣು ಒಪ್ಪಂದ ಒಂದು ಹಂತಕ್ಕೆ ತಲುಪಿದೆ. ಭಾರತದ ಹೊರತಾಗಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ಯಾವುದೇ ದೇಶದ ಜೊತೆಗೂ ಜಪಾನ್ ಈ ಮಟ್ಟದ ವಿಶ್ವಾಸ ತೋರಿಸಿಲ್ಲ ಎನ್ನುವುದು ಈ ಒಪ್ಪಂದದ ವಿಶೇಷತೆ. ಪ್ರಧಾನಿ ಮೋದಿಯವರ ಜಪಾನ್ ಭೇಟಿ ನಾಗರಿಕ ಅಣು ಒಪ್ಪಂದವಷ್ಟೇ ಅಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.  ನವೆಬರ್ 11ರಂದು 'ಅಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರದ ಒಪ್ಪಂದ' ಕೆಲವೊಂದು ಅಡೆತಡೆಗಳ ಹೊರತಾಗಿಯೂ ಅಂತರಾಷ್ಟ್ರೀಯ ರಾಜಕೀಯದಲ್ಲಿ ದಿಟ್ಟ ಹೆಜ್ಜೆಯೇ ಸರಿ. ಭಾರತದ ಎನ್.ಎಸ್.ಜಿ ಸದಸ್ಯತ್ವವನ್ನು ಚೀನಾ ಬಲವಾಗಿ ವಿರೋಧಿಸುತ್ತಿರಲು ಬೆಳೆಯುತ್ತಿರುವ ಭಾರತ ಜಪಾನ್ ಗಳ ಮಿತೃತ್ವವೂ ಕಾರಣ ಎಂಬುದನ್ನು ತಳ್ಳಿಹಾಕುವಂತಿಲ್ಲ. ಉರಿ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ ಹಲವಾರು ದಿಟ್ಟ ಕ್ರಮ ಕೈಗೊಂಡಿರುವ ಭಾರತ, ಭಯೋತ್ಪಾದನೆಯ ಬಗೆಗೂ ಸ್ಪಷ್ಟ ವಿದೇಶಾಂಗ ನೀತಿ ರೂಪಿಸಿ ವಿಶ್ವ ಶಕ್ತಿಗಳ ಬೆಂಬಲ ಗಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿದೆ. ಈವರೆಗೆ ಭಾರತ ಮತ್ತು ಪಾಕಿಸ್ತಾನಗಳ ವಿಚಾರದಲ್ಲಿ ಸಮತೋಲನ ಕಾಯ್ದುಕೊಂಡಿದ್ದ ಜಪಾನ್ ಇದೀಗ ಸ್ಪಷ್ಟವಾಗಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದು ಭಾರತದ ಪಾಲಿಗೆ ಭಾರೀ ರಾಜತಾಂತ್ರಿಕ ಯಶಸ್ಸೇ ಸರಿ. ಜಂಟಿ ಹೇಳಿಕೆಯೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನ ಮತ್ತು ಪಾಕ್ ಪ್ರಾಯೋಜಿತ ಭಯೋತ್ಪಾದಕರ ವಿರುದ್ದ ನೇರವಾಗಿ ಕಿಡಿ ಕಾರಿರುವ ಜಪಾನ್, ಭಯೋತ್ಪಾದನಾ ನಿಗ್ರಹದಲ್ಲಿ ಭಾರತದ ಪ್ರಯತ್ನಕ್ಕೆ ಹೆಗಲು ನೀಡುವ ಆಶಯ ವ್ಯಕ್ತಪಡಿಸಿದೆ.

Image may contain: 3 peopleಪ್ರಾದೇಶಿಕ ಮಟ್ಟದ ಭದ್ರತೆಯಲ್ಲೂ ಭಾರತ ಮತ್ತು ಜಪಾನ್ ಗಳೂ ಮುಖ್ಯ ಪಾತ್ರವಹಿಸುವಲ್ಲಿ ಎರಡೂ ದೇಶಗಳ ನಾಯಕರು ಉತ್ಸುಕರಾಗಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಭಾವಕ್ಕೆ ಪ್ರತ್ಯುತ್ತರ ನೀಡಿ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಜಪಾನ್ ಗಳು ಒಂದುಗೂಡಲಿವೆ. ದಕ್ಷಿಣ ಚೀನಾ ಸಮುದ್ರ ವಿವಾದಕ್ಕೂ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಏಷ್ಯಾದ ಈ ಎರಡು ರಾಷ್ಟ್ರಗಳ ಉಪಸ್ಥಿತಿ ಮತ್ತು ಪಾಲುದಾರಿಕೆ ಅವಶ್ಯಕ ಮತ್ತು ಇಂಥದ್ದೊಂದು ಪ್ರಕ್ರಿಯೆ ಜಾರಿಯಲ್ಲಿರುವುದು ಚೀನಾ ಬೆಚ್ಚಿ ಬೀಳುವಂತೆ ಮಾಡಿದೆ. ಜಪಾನ್ ಮತ್ತು ಭಾರತಗಳೆರಡೂ ಜಂಟಿಯಾಗಿ ನಿರ್ಮಿಸುತ್ತಿರುವ ಇರಾನ್ ನ ಚಬಾರ್ ಬಂದರು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗಳನ್ನು ಸಂಪರ್ಕಿಸಲು ಮಹತ್ವದ ಹೆಜ್ಜೆಯಾಗಲಿದೆ. ಚಬಾರ್ ಬಂದರು ಪ್ರಮುಖ ತೈಲ ಸಾಗಾಟದ ಮಾರ್ಗಗಳಿಗೆ ಹತ್ತಿರವಾಗಿದ್ದು ಆರ್ಥಿಕವಾಗಿಯೂ ಅನುಕೂಲಕರ ಸ್ಥಿತಿಯಲ್ಲಿದೆ. ಈಗಾಗಲೇ ಮಧ್ಯ ಏಷ್ಯಾದಲ್ಲಿ ಹಿಡಿತ ಬಿಗಿಗೊಳಿಸುತ್ತಿರುವ ಪಾಕ್-ಚೀನಾ ಜೋಡಿಗೆ ಪ್ರತ್ಯುತ್ತರ ನೀಡುವ ಜರೂರತ್ತಿನಲ್ಲಿದ್ದ ಭಾರತಕ್ಕೆ ಸಮರ್ಥ ಜೊತೆ ನೀಡಲು ಜಪಾನ್ ಮುಂದೆ ಬಂದಿರುವುದು ಈ ಪ್ರಾದೇಶಿಕ ಪೈಪೋಟಿಯನ್ನು ಮತ್ತಷ್ಟು ರೋಚಕವನ್ನಾಗಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಭಾರತದ ನೌಕಾದಳ ಮತ್ತು ಅಲ್ಲಿರುವ ವಾಯುನೆಲೆಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಜಪಾನ್ ಆರ್ಥಿಕ ಮತ್ತು ತಂತ್ರಜಾನದ ನೆರವು ನೀಡಲು ಸಿದ್ಧವಾಗಿದೆ. ಈ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚೀನಾ ಜಲಾಂತರ್ಗಾಮಿ ನೌಕೆಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿಯೂ ಜಪಾನ್ ಮತ್ತು ಭಾರತಗಳ ಸಮರತಾಂತ್ರಿಕ ಜಾಲ ಕಾರ್ಯನಿರ್ವಹಿಸಲಿದೆಯಷ್ಟೇ ಅಲ್ಲದೇ ಈ ಸರಪಳಿ ಮುಂದುವರಿದು ಜಪಾನ್-ಅಮೆರಿಕಾಗಳ 'ಫಿಶ್ ಹಿಕ್' ಕಣ್ಗಾವಲು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲಿದೆ! ಈ ಮೂಲಕ ಭಾರತ-ಅಮೆರಿಕಾ-ಜಪಾನ್ ಗಳನ್ನೊಳಗೊಂಡ ಬಲಿಷ್ಟ ಸಾಗರ ಸಮರ ಮೈತ್ರಿಯೊಂದು ಚೀನಾ ಆಕ್ರಮಣಕ್ಕೆ ತಡೆಯಾಗಿ ನಿಲ್ಲಬಲ್ಲುದು.

ವರ್ಷದ ಕೊನೆಯಲ್ಲಿ ಭಾರತ ಜಪಾನ್ ಮತ್ತು ಅಮೆರಿಕಾಗಳ ನೌಕಾಶಕ್ತಿಗಳು ಸೇರಿಕೊಂಡು ಮಲಬಾರ್ ಸಾಗರ ಸಮರಾಭ್ಯಾಸವೊಂದನ್ನು ನಡೆಸಿದ್ದು ಸ್ಪಷ್ಟವಾಗಿ ಚೀನಾದ ಆಕ್ರಮಣಕ್ಕೊಂದು ಎಚ್ಚರಿಕೆಯೇ ಸರಿ. ಈ ಬೃಹತ್ ಸಮರಾಭ್ಯಾಸದಲ್ಲಿ ಪಾಲ್ಗೊಂಡ ನೌಕಾಶಕ್ತಿಗಳು ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನೀ ಜಲಾಂತರ್ಗಾಮಿಗಳ ಆಟಾಟೋಪಗಳನ್ನು ನಿಯಂತ್ರಿಸಲಿದೆ. 1992ರಲ್ಲೇ ಭಾರತ ಮತ್ತು ಅಮೆರಿಕಾಗಳ ಜಂಟಿ ಸಮರಾಭ್ಯಾಸದ ರೂಪದಲ್ಲಿ ಮಲಬಾರ್ ಸಮರಾಭ್ಯಾಸ ಅಸ್ತಿತ್ವದಲ್ಲಿತ್ತು. 2007ರಲ್ಲಿ ಜಪಾನ್ ನೌಕಾದಳ ಸೇರಿಕೊಳ್ಳುವುದರೊಂದಿಗೆ ಇದೊಂದು ತ್ರಿವಳಿ ಶಕ್ತಿಗಳ ಸಂಗಮವಲ್ಲದೆ, ಹೆಚ್ಚಿನ ವ್ಯಾಪ್ತಿಯ ಸಾಗರ ಪ್ರದೇಶಗಳವರೆಗೆ ತನ್ನ ಪ್ರಭಾವ ವೃದ್ಧಿಸಿಕೊಂಡಿತ್ತು. ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಚಾಣಕ್ಯನೀತಿಯಂತೆ, ಅಮೆರಿಕಾ ಮತ್ತು ಜಪಾನ್ ಗಳ ಸ್ವಹಿತಾಸಕ್ತಿಗಳು ಏನೇ ಇದ್ದರೂ ಸಮರತಾಂತ್ರಿಕ ದೃಷ್ಟಿಯಿಂದ ಈ ಬೆಳವಣಿಗೆ ಭಾರತದ ಪರವಾಗಿಯೇ ಇದೆ. 

ರಕ್ಷಣಾ ವಲಯದಲ್ಲೂ ಭಾರತ ಮತ್ತು ಜಪಾನ್ ಗಳು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಪ್ರವೃತ್ತವಾಗಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ತಂತ್ರಜಾನದ ಬೆಳವಣಿಗೆಯಲ್ಲಿ ಈ ಎರಡೂ ದೇಶಗಳ ಸಹಕಾರ ಮತ್ತು ಸಮನ್ವಯದ ಅವಶ್ಯಕತೆಯನ್ನೂ ಪುನರ್ ಪ್ರಸ್ತಾವಿಸಿದ್ದು ಇದರ ಮಹತ್ವಕ್ಕೆ ಸಾಕ್ಷಿ. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ರಕ್ಷಣೆ ಮತ್ತು ಅಂತರಿಕ್ಷಯಾನ ಜಪಾನ್ ತನ್ನನ್ನು ತಾನು ಧನಾತ್ಮಕವಾಗಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಈಗಾಗಲೇ US-2 ಯುದ್ಧವಿಮಾನಗಳ ವಿಚಾರದಲ್ಲಿ ಭಾರತ ಮತ್ತು ಜಪಾನ್ ಗಳ ಮಧ್ಯೆ ವಿಚಾರ ವಿನಿಮಯ ಧನಾತ್ಮಕ ಪರಿಣಾಮಗಳತ್ತ ಹೊರಳಿಕೊಳ್ಳುತ್ತಿದೆ. 2016ರ ವಾರ್ಷಿಕ ಶೃಂಗಸಭೆಯೂ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಜಪಾನ್ ಗಳು ಮಹತ್ತರ ಪಾತ್ರ ವಹಿಸಲಿದೆ ಎನ್ನುವುದನ್ನು ಮರುದೃಡಿಕರಿಸಿದೆ. ಪ್ರಾದೇಶಿಕ ಹಿತಾಸಕ್ತಿಗಳ ವಿಚಾರದಲ್ಲೂ ಈ ಎರಡೂ ದೇಶಗಳ ಆಶಯ ಆಸಕ್ತಿಗಳಲ್ಲಿ ಸಾಮ್ಯತೆಗಳಿದ್ದು, ಭಾರತ ಮತ್ತು ಜಪಾನ್ ಗಳ ಸಮರತಾಂತ್ರಿಕ ಹಾಗೂ ರಾಜತಾಂತ್ರಿಕ ಬಾಂಧವ್ಯ ಇನ್ನಷ್ಟು ವಿಸ್ತಾರಗೊಳ್ಳುವುದರಲ್ಲಿ ಅನುಮಾನವಿಲ್ಲ. ಎರಡು ರಾಷ್ಟ್ರಗಳ ವೈಯಕ್ತಿಕ ಭದ್ರತೆಗಳಷ್ಟೇ ಅಲ್ಲದೇ, ಏಷ್ಯಾ ಪ್ರಾದೇಶಿಕ ರಾಜಕೀಯಕ್ಕೊಂದು ನೈತಿಕ ಸ್ಥೈರ್ಯ ತುಂಬುವಲ್ಲೂ ಇಂಥದ್ದೊಂದು ಮೈತ್ರಿಯ ಅವಶ್ಯಕತೆಯಿದೆ. 


(This article was published in Hosa Digantha Newsapaper on 06 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶನಿವಾರ, ಡಿಸೆಂಬರ್ 17, 2016

ಮಧ್ಯ ಏಷ್ಯಾದಲ್ಲಿ ಭಾರತದ ರಾಜತಾಂತ್ರಿಕ ನಡೆ

ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆಗಿನ ಭಾರತದ ರಾಜಕೀಯ ಸಂಬಂಧಗಳು ಇಂದು ನಿನ್ನೆಯದಲ್ಲ. ಸಹಸ್ರಾರು ವರ್ಷಗಳ ಹಿಂದಿನಿಂದಲೂ ಮಧ್ಯ ಏಷ್ಯಾದ ಚರಿತ್ರೆಯ ವಿವಿಧ ಆಯಾಮಗಳು ಭಾರತದ ಜೊತೆಗೂ ತಳುಕುಹಾಕಿಕೊಂಡಿದೆ. ಉದಾಹರಣೆಗೆ ಕುಶಾನರ ಸಾಮ್ರಾಜ್ಯ ಈ ಎರಡು ಪ್ರದೇಶಗಳನ್ನು ರಾಜಕೀಯವಾಗಿ ತುಂಬಾ ಹತ್ತಿರಕ್ಕೂ ತಂದಿತ್ತು. ಮುಂದೆ ಉತ್ತರ ಭಾರತಕ್ಕೆ ಲಗ್ಗೆ ಹಾಕಿದ ಅನೇಕ ಹೆಚ್ಚಿನ ಮುಸ್ಲಿಂ ದೊರೆಗಳ ಮೂಲವೂ ಮಧ್ಯ ಏಷ್ಯಾವೇ ಆಗಿತ್ತು. ಪ್ರಸಕ್ತ ಭಾರತದ ವಿದೇಶಾಂಗ ನೀತಿಯೂ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ 'ವಿಸ್ತ್ರತ ನೆರೆಹೊರೆ'ಯ (Extended Neighbourhood) ಸ್ಥಾನಮಾನ ನೀಡಿದೆ. ಈ ಪ್ರದೇಶದಲ್ಲಿರುವ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳು ಸೊವಿಯೆತ್ ಒಕ್ಕೂಟದ ಭಾಗಗಳಾಗಿದ್ದು, ಸೊವಿಯೆತ್ ಒಕ್ಕೂಟ ಹೊಡೆದುಹೋದಾಗ 1991ರಲ್ಲಿ ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳಾದವು. ಸೊವಿಯೆತ್ ಒಕ್ಕೂಟದ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದ ಭಾರತಕ್ಕೆ ಸಹಜವಾಗಿಯೇ ಮಧ್ಯ ಏಷ್ಯಾದ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಲುಗೆ ಬೆಳೆದಿತ್ತು.

ಸೊವಿಯೆತ್ ಒಕ್ಕೂಟದ ಪತನದೊಂದಿಗೆ ಬದಲಾದ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ತರಾತುರಿಯಲ್ಲಿದ್ದ ಭಾರತ ಭಾರತದ ಮಧ್ಯ ಏಷ್ಯಾದ ಕಡೆಗೆ ಅಷ್ಟೊಂದು ಗಮನ ನೀಡಲಾಗಲಿಲ್ಲ. ಸೊವಿಯೆತ್ ಒಕ್ಕೂಟದ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ರಷ್ಯಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಶೀತಲ ಸಮರೋತ್ತರ ಕಾಲದಲ್ಲಿ ಭಾರತಕ್ಕೆ ತನ್ನ ದ್ವಿಪಕ್ಷೀಯ ಒಪ್ಪಂದಗಳ ಪುನರ್ ವಿಮರ್ಶೆಯ ಅನಿವಾರ್ಯತೆಯೂ ಬಹಳಷ್ಟಿತ್ತು. ಈ ಎಲ್ಲಾ ಒತ್ತಡಗಳು ಮಧ್ಯ ಏಷ್ಯಾ ರಾಷ್ಟ್ರಗಳನ್ನು ಮುಂದಿನ ಸುಮಾರು ಒಂದು ದಶಕದವರೆಗೆ ಭಾರತದ ವಿದೇಶಾಂಗ ನೀತಿಯ ಆದ್ಯತೆಗಳ ಪಟ್ಟಿಯಿಂದ ಹೊರಗುಳಿಯುವಂತೆ ಮಾಡಿತ್ತು. ಆದರೆ ಕಳೆದೊಂದು ದಶಕ ಜಾಗತಿಕ ರಾಜಕೀಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮಧ್ಯ ಏಷ್ಯಾ ನೈಸರ್ಗಿಕ ಸಂಪನ್ಮೂಲಗಳ ಕಾರಣಕ್ಕಾಗಿ ವಿಶ್ವಶಕ್ತಿಗಳ ಮಧ್ಯೆ ಪೈಪೋಟಿಗೆ ಕಾರಣವಾಗಿದೆ. ಇದೇ ವೇಳೆ ಭಾರತ ನಿಧಾನವಾಗಿ ಎಚ್ಚೆತ್ತುಕೊಂಡು ವಿಶ್ವದ ಆರ್ಥಿಕ ಶಕ್ತಿಯಾಗಿ ಮತ್ತು ಏಷ್ಯಾದ ಪ್ರಾದೇಶಿಕ ಶಕ್ತಿಯಾಗಿಯೂ ಗುರುತಿಸಿಕೊಂಡಿದೆ. ಭಾರತದ ಪ್ರಾದೇಶಿಕ ಪ್ರಭಾವಕ್ಕೆ ಏಟು ನೀಡಲು ತನ್ನ ಸಾಮರ್ಥ್ಯ ಮೀರಿದ ಪ್ರಯತ್ನಗಳನ್ನು ಮಾಡುತ್ತಿರುವ ಚೀನಾ ಭಾರತದ ನೆರೆಹೊರೆಯ ರಾಷ್ಟ್ರಗಳನ್ನು ತನ್ನ ಪ್ರಭಾವದ ತೆಕ್ಕೆಗೆ ಎಳೆದುಕೊಂಡಿದೆ. ತನ್ನೆಲ್ಲಾ ನೆರೆಹೊರೆಯ ರಾಷ್ಟ್ರಗಳಲ್ಲಿ ಚೀನಾ ಪ್ರಭಾವವಿರುವುದು ಸಮರತಾಂತ್ರಿಕ ದೃಷ್ಟಿಯಿಂದ ಭಾರತದ ಪಾಲಿಗೆ ಕಳವಳಕಾರಿ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಭಾರತ ತನ್ನ ಪ್ರಾದೇಶಿಕ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಮಧ್ಯ ಏಷ್ಯಾದಲ್ಲಿ ಭಾರತಕ್ಕಿರುವ ಐತಿಹಾಸಿಕ ಬಾಂಧವ್ಯವನ್ನು ಮರು ದೃಢಪಡಿಸಿಕೊಳ್ಳುವುದು ಅನಿವಾರ್ಯ.

ಮಧ್ಯ ಏಷ್ಯಾ ಕುರಿತಾದ ಭಾರತದ ವಿದೇಶಾಂಗ ನೀತಿಯ ಪ್ರಮುಖ ಮೈಲಿಗಲ್ಲು 2012ರ ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ. ಈ ಯೋಜನೆಯ ಮುಖ್ಯ ಗುರಿ ಹಳಿ ತಪ್ಪಿರುವ ಭಾರತ-ಪೂರ್ವ ಏಷ್ಯಾ ರಾಜಕೀಯ ಸಂಪರ್ಕವನ್ನು ಪುನರ್ ಸ್ಥಾಪಿಸುವುದು. ರಾಜಕೀಯ, ಆರ್ಥಿಕ, ಸಮರತಾಂತ್ರಿಕ, ತಂತ್ರಜ್ಞಾನ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಮನ್ವಯತೆಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರಾದೇಶಿಕ ಸಂಪರ್ಕ ಮತ್ತು ಮಾಹಿತಿ ತಂತ್ರಜಾನದಲ್ಲೂ ಮಧ್ಯ ಏಷ್ಯಾ ದೇಶಗಳ ಜೊತೆಗೆ ತೊಡಗಿಸಿಕೊಳ್ಳುವ ಆಲೋಚನೆ ಭಾರತಕ್ಕಿದೆ. ಯುರೋಪ್ ಮತ್ತು ಏಷ್ಯಾಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಂತಿರುವ ಮಧ್ಯ ಏಷ್ಯಾ ಜಾಗತಿಕ ರಾಜಕಾರಣದಲ್ಲಿ ಆಯಕಟ್ಟಿನ ಪ್ರದೇಶವೂ ಹೌದು. ಕಚ್ಚಾತೈಲ, ನೈಸರ್ಗಿಕ ಅನಿಲ, ಹತ್ತಿ, ಬಂಗಾರ, ಅಲ್ಯೂಮಿನಿಯಂ, ಕಬ್ಬಿಣ ಮತ್ತಿತರ ನೈಸರ್ಗಿಕ ಸಂಪನ್ಪೂಲಗಳ ವಿಚಾರದಲ್ಲೂ ಮಧ್ಯ ಏಷ್ಯಾ ಶ್ರೀಮಂತ ಭೂಪ್ರದೇಶವೇ ಸರಿ. ಇವೆಲ್ಲವುಗಳ ಜೊತೆ, ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ ಮತ್ತು ಅಫಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವುದು ಭಾರತ ಮತ್ತು ಮಧ್ಯ ಏಷ್ಯಾಗಳ ತತ್ ಕ್ಷಣದ ಕಾಳಜಿಗಳಾಗಿದ್ದು ಈ ಸಾಮ್ಯತೆಗಳು ಭಾರತಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳನ್ನು ಇನ್ನಷ್ಟು ಹತ್ತಿರವಾಗಿಸಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳ ಮಧ್ಯೆ ಅನ್ಯೋನ್ಯ ಕೊಡುಕೊಳ್ಳುವಿಕೆಯಿದೆ. ಮಧ್ಯ ಏಷ್ಯಾದ ವಿಧ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಭಾರತವನ್ನು ಆಶ್ರಯಿಸುತ್ತಿದ್ದಾರೆ. ಅಮೆರಿಕಾ, ಯುರೋಪ್ ಗಳಲ್ಲಿ ಶಿಕ್ಷಣದ ವೆಚ್ಚಗಳಿಗೆ ಹೋಲಿಸಿದಲ್ಲಿ ಭಾರತ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಮಿತವ್ಯಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿದೆ. ಭಾರತದ ವಿದ್ಯಾರ್ಥಿಗಳೂ ಸಂಶೋಧನೆ ಮತ್ತಿನ್ನಿತರ ಕಾರಣಗಳಿಗೆ ಮಧ್ಯ ಏಷ್ಯಾ ಪ್ರವೇಶಿಸುತ್ತಿದ್ದಾರೆ.
Image may contain: 1 person
ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆಯಲ್ಲಿ ನಿರೀಕ್ಷೆಗಳು ಮತ್ತು ಉಜ್ವಲ ಅವಕಾಶಗಳಿದ್ದಂತೆ ಸಮಸ್ಯೆಗಳೂ ಬಹಳಷ್ಟಿವೆ. ಭಾರತ ಮತ್ತು ಪೂರ್ವ ಏಷ್ಯಾವನ್ನು ಸಂಪರ್ಕಿಸಲು ಅತ್ಯಂತ ಹತ್ತಿರದ ಹಾದಿಯೆಂದರೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳನ್ನು ಹಾದುಹೋಗುವುದು. ಅದರೆ ಪಾಕಿಸ್ತಾನ ಮತ್ತು ಭಾರತಗಳ ವೈರತ್ವ ಹಾಗೂ ಪಾಕಿಸ್ತಾನವನ್ನು ಎಲ್ಲಾ ರೀತಿಯಲ್ಲೂ ಅಂಕೆಯಲ್ಲಿಟ್ಟುಕೊಂಡಿರುವ ಚೀನಾಗಳಿಂದಾಗಿ ಇದು ಕಷ್ಟಸಾಧ್ಯ. ಇಷ್ಟಕ್ಕೂ ಒಂದು ವೇಳೆ ಪಾಕಿಸ್ತಾನದ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದರೂ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿರುವ ಅಸ್ಥಿರತೆ ಗೊಂದಲಗಳಿಂದಾಗಿ, ವ್ಯಾಪಾರ ವಾಣಿಜ್ಯೋದ್ದೇಶಗಳಿಗೆ ಈ ಮಾರ್ಗ ಖಂಡಿತಾ ಒಳ್ಳೆಯ ಆಯ್ತ್ಕೆಯಂತೂ ಅಲ್ಲ. ಇದೇ ಕಾರಣಕ್ಕಾಗಿಯೇ 'ಟರ್ಕ್ ಮೆನಿಸ್ತಾನ್ ಅಫಘಾನಿಸ್ತಾನ್ ಪಾಕಿಸ್ತಾನ್ ಭಾರತ ಪೈಪ್ ಲೈನ್ ಯೋಜನೆ' (TAPI) ಇವತ್ತಿಗೂ ಕಾರ್ಯರೂಪಕ್ಕೆ ಬರದೆ ಯೋಜನೆಯಾಗಿಯೇ ಉಳಿದಿದೆ. ಇದರಿಂದಾಗಿಯೇ ಇಲ್ಲಿಯವರೆಗೆ ಮಧ್ಯ ಏಷ್ಯಾದಿಂದ ಒಂದು ತೊಟ್ಟು ತೈಲವೂ ಭಾರತಕ್ಕೆ ತಲುಪಿಲ್ಲ! ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳಿಗೆ ಭೇಟಿ ನೀಡಿದ್ದು ರಾಜತಾಂತ್ರಿಕ ಸಂಬಂಧಗಳೊಂದಿಗೆ, ಈ ಪ್ರದೇಶದಲ್ಲಿರುವ ಉಗ್ರ ಗುಂಪುಗಳನ್ನು ನಿಗ್ರಹಿಸುವ ಬಗೆಗೂ ಮಾತುಕತೆಗಳಾಗಿವೆ. ಇಸ್ಲಾಮಿಕ್ ಮೂವಮೆಂಟ್ ಆಫ್ ಉಜ್ಬೇಕಿಸ್ತಾನ್ ಮತ್ತು ಜುಂಡ್-ಅಲ್- ಖಿಲಾಫಾಹ್ ಈ ಪ್ರದೇಶದ ಎರಡು ಪ್ರಮುಖ ಉಗ್ರ ಸಂಘಟನೆಗಳಾಗಿದ್ದು ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್-ಖೈದಾ ಸ್ಪರ್ಧೆಯೂ ಈ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸುತ್ತಿವೆ. 

ಮಧ್ಯ ಏಷ್ಯಾ ಕಡೆಗಿನ ರಾಜತಾಂತ್ರಿಕ ಪ್ರಯತ್ನಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಭಾರತದ ಸಾಂಸ್ಕ್ರತಿಕ ಹಿರಿಮೆ ಇನ್ನಷ್ಟು ಬಲ ತುಂಬಲಿದೆ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಈ ಪ್ರದೇಶದಲ್ಲಿ ಭಾರತದ ಸಂಸ್ಕೃತಿಗೆ ಬಹಳಷ್ಟು ಜನಪ್ರಿಯತೆ ಪಡೆದಿದೆ. ಇಲ್ಲಿನ ಜನರು ಹಿಂದಿ ಗೀತೆಗಳನ್ನು ಆಲಿಸುತ್ತಾರಷ್ಟೇ ಅಲ್ಲದೇ ಬಾಲಿವುಡ್ ಸಿನಿಮಾಗಳನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಈ ಅಂಶಗಳು ಭಾರತಕ್ಕೆ ಮಧ್ಯ ಏಷ್ಯಾದಲ್ಲಿ ವಿಶಿಷ್ಟ ಅವಕಾಶಗಳನ್ನು ತೆರೆದಿಟ್ಟಿವೆ. ಭಾರತ ಈ ಪ್ರದೇಶದಲ್ಲಿ ತನ್ನ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತನ್ನ ನೈತಿಕ ಶಕ್ತಿಯನ್ನು ಬಳಸಿಕೊಳ್ಳುವುದು ಜಾಣತನದ ಹೆಜ್ಜೆ. ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.

(This article was published in Hosa Digantha newspaper on 6 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗುರುವಾರ, ಡಿಸೆಂಬರ್ 1, 2016

ಮೈತ್ರಿಯಿಂದ ಮರೆಯಾದ 'ರಾಜತಾಂತ್ರಿಕ ಸಂಕೋಚ'!

ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! 
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಸ್ವತಂತ್ರ ಭಾರತದ ಇಷ್ಟು ವರ್ಷಗಳ ವಿದೇಶಾಂಗ ನೀತಿಯಲ್ಲಿ ಭಾರತವನ್ನು ಬಿಟ್ಟೂ ಬಿಡದಂತೆ ಕಾಡಿದ್ದು ಎರಡು ಪ್ರಮುಖ ಅಂಶಗಳು. ಮೊದಲನೆಯದಾಗಿ ಪಾಕಿಸ್ತಾನ, ಚೀನಾ ಮಾತ್ರವಲ್ಲದೇ, ಉಳಿದ ಎಲ್ಲಾ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಭಾರತಕ್ಕಿರುವ ಮನಸ್ತಾಪಗಳು. ಎರಡನೆಯದಾಗಿ ಮತ್ತು ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುವ ಅಂಶ ಭಯೋತ್ಪಾದಕರ ಹುಚ್ಚಾಟಗಳು. ಭಾರತ ಪದೇ ಪದೇ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿದಾಗ, ವಿಶ್ವ ಶಕ್ತಿಗಳಿಗೆ ಭಾರತದ ವಾದ ತಮಾಷೆಯ ವಿಷಯವಾಗಿತ್ತು.  2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ತನ್ನ ವಕ್ರದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು! ತದನಂತರ ಭಯೋತ್ಪಾದಕರನ್ನು ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಅಮೆರಿಕಾ ಅಬ್ಬರಿಸಿದರೂ, ಭಾರತದ ಸಮಸ್ಯೆಗಳ ಪರಿಹಾರಕ್ಕೇನೂ ದೊಡ್ಡ ಮಟ್ಟಿನ ಅನುಕೂಲವಾಗಿರಲಿಲ್ಲ. ಇದಕ್ಕೆಲ್ಲಾ ಕಾರಣ ಭಾರತದಲ್ಲಾಗುತ್ತಿರುವ ಭಯೋತ್ಪಾನೆಯ ಅನುಭವಗಳಿಗೂ ಅಮೆರಿಕಾ ಮತ್ತಿತರ ಯುರೋಪಿಯನ್ ರಾಷ್ಟ್ರಗಳು ಭಯೋತ್ಪಾದನೆಯನ್ನು ಪರಿಭಾವಿಸುತ್ತಿರುವ ರೀತಿಗೂ ಇರುವ ಅಜಗಜಾಂತರ ವ್ಯತ್ಯಾಸಗಳು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತ- ಇಸ್ರೇಲ್ ರಾಜತಾಂತ್ರಿಕ ಸಂಬಂಧಗಳಲ್ಲಿ ಇತ್ತೀಚಿನ ವಿದ್ಯಮಾನಗಳು ಹೊಸ ಹುರುಪು ತುಂಬುತ್ತಿರುವುದೂ ಧನಾತ್ಮಕ ಬೆಳವಣಿಗೆಯೇ ಸರಿ. 

ಇಸ್ರೇಲಿನ ಅಧ್ಯಕ್ಷ ರೂವೆನ್ ರಿವಿನ್ ಭಾರತಕ್ಕೆ ಆರು ದಿನಗಳ ಭೇಟಿ ನೀಡಿದ್ದರು. ಈ ಬಾರಿ ರೂವೆನ್ ರಿವಿನ್ ಭಾರತ ಮತ್ತು ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಮೆರುಗು ನೀಡುವ ಮಾತುಗಳನ್ನಾಡಿದ್ದು, ಭಾರತ ಮತ್ತು ಇಸ್ರೇಲ್ ಗಳ ನಡುವೆ ಬೆಳೆಯುತ್ತಿರುವ ಸ್ನೇಹ, ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರಗಳು ಭವಿಷ್ಯದಲ್ಲಿ ಧನಾತ್ಮಕ ಫಲ ನೀಡಲಿದೆ ಎಂದಿದ್ದಾರೆ. ಈ ಎರಡೂ ರಾಷ್ಟ್ರಗಳಿಗೂ ಸಮಾನ ಶತ್ರುವಾಗಿರುವ ಭಯೋತ್ಪಾದನೆ ನಿರ್ಮೂಲನೆಯಲ್ಲೂ ಇಸ್ರೇಲ್ - ಭಾರತಗಳು ಕಾರ್ಯನಿರ್ವಹಿಸುತ್ತಿರುವ ನೀತಿಯ ಬಗೆಗೂ ಪ್ರಸ್ತಾವಿಸಿದ ರಿವಿನ್, ಭಾರತದ ಕೃಷಿ, ರಕ್ಷಣಾ ಮತ್ತು ಸೈಬರ್ ಯುದ್ಧಗಳ ವಿಚಾರದಲ್ಲೂ ನೆರವು ನೀಡಲು ಇಸ್ರೇಲ್ ಸಿದ್ಧವಾಗಿದೆ ಎನ್ನುವ ಮೂಲಕ ಇಸ್ರೇಲ್ ಭಾರತ ಸಂಬಂಧಗಳನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳೂ ಕಂಡು ಬಂದಿವೆ. ಇಸ್ರೇಲೀ ಅಧ್ಯಕ್ಷರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ, ಭಾರತ- ಇಸ್ರೇಲ್ ನ ಭವಿಷ್ಯದ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಬೆಳಕೊಂದು ಕಂಡಿದ್ದರಲ್ಲಿ ತಪ್ಪೇನೂ ಇಲ್ಲ. ಈ ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಇದೇ ವೇಗ ಉಳಿಸಿಕೊಂಡು ಇನ್ನಷ್ಟು ಬಲ ತುಂಬಲು ಪ್ರಧಾನಿ ನರೇಂದ್ರ  ಮೋದಿಯವರು ಜನವರಿ 2017ರಲ್ಲಿ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2006ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಇಸ್ರೇಲ್ ಭೇಟಿ ಮಾಡಿದ್ದ ನರೇಂದ್ರ ಮೋದಿ, ಈ ಬಾರಿ ಪ್ರಧಾನಿಯಾಗಿ ನೀಡುವ ಭೇಟಿ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಈ ಭೇಟಿಯ ಮೂಲಕ ಇಸ್ರೇಲ್ ಗೆ ಭೇಟಿ ನೀಡಿದ ಪ್ರಪ್ರಥಮ ಭಾರತದ ಪ್ರಧಾನಿಯೆನಿಸಿಕೊಳ್ಳಲಿದ್ದಾರೆ ಮೋದಿ.

1992ರಲ್ಲಿ ಇಸ್ರೇಲ್-ಭಾರತಗಳ ಬಾಂಧವ್ಯಕ್ಕೆ ನೆಲೆಗಟ್ಟನ್ನು ಹಾಕಿಕೊಟ್ಟ ಕೀರ್ತಿ ಆಗಿನ ಪ್ರಧಾನಿ ನರಸಿಂಹ ರಾವ್ ಅವರಿಗೆ ಸಲ್ಲುತ್ತದೆ. ಕೃಷಿ, ರಕ್ಷಣೆ, ಭಯೋತ್ಪಾದನಾ ನಿಗ್ರಹ ಇನ್ನಿತರ ವಿಚಾರಗಳಲ್ಲಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ಜೊತೆಗೆ ಭಾರತದ ಬಾಂಧವ್ಯ ಉತ್ತಮವಾಗಿಯೇ ಮುಂದುವರಿದಿತ್ತಾದರೂ, ವಿಶ್ವಮಟ್ಟದಲ್ಲಿ ಇಸ್ರೇಲ್ ಜೊತೆಗೆ ಮುಕ್ತವಾಗಿ ಗುರುತಿಸಿಕೊಳ್ಳಲು ಭಾರತ ಹಿಂಜರಿಯುತ್ತಿತ್ತು! ಈ ಹಿಂಜರಿಕೆ ಮತ್ತು ಸಂಕೋಚಗಳಿಗೆ ಕಾರಣಗಳೂ ಇಲ್ಲದಿಲ್ಲ. ಇಸ್ರೇಲ್ ಜೊತೆಗಿನ ಅತಿಯಾದ ನಂಟು, ಅರಬ್ ರಾಷ್ಟ್ರಗಳ ವಿರೋಧಕ್ಕೆ ಕಾರಣವಾಗಬಹುದು ಎಂಬ ಭೀತಿ ಭಾರತೀಯ ನಾಯಕರನ್ನು ಈ ಇಬ್ಬಂದಿ ನೀತಿಯತ್ತ ವಾಲುವಂತೆ ಮಾಡಿತ್ತು. ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಆಕಾಂಕ್ಷೆ ಮತ್ತಿನ್ನಿತರ ಜಾಗತಿಕ ವಿಚಾರಗಳಲ್ಲಿ ಅರಬ್ ರಾಷ್ಟ್ರಗಳ ಉಪಸ್ಥಿತಿ ಮತ್ತು ಪ್ರಭಾವವನ್ನು ಕಡೆಗಣಿಸುವಂತಿಲ್ಲ. ಪಾಕಿಸ್ತಾನದ ವಿಚಾರದಲ್ಲೂ ಅರಬ್ ರಾಷ್ಟ್ರಗಳು ಭಾರತದ ಪರ ನಿಲ್ಲುವ ದೂರದ ಆಸೆ ಇಟ್ಟುಕೊಂಡ ಭಾರತದ ವಿದೇಶಾಂಗ ನೀತಿ ಅರಬ್ ರಾಷ್ಟ್ರಗಳ ವಿಶ್ವಾಸ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವಾಗ ಅರಬ್ಬರ ಬದ್ಧವೈರಿಯಾದ ಇಸ್ರೇಲ್ ಜೊತೆಗೆ ಭಾರತ ಹೇಗೆ ತಾನೆ ಗುರುತಿಸಿಕೊಂಡೀತು? ಪ್ಯಾಲೆಸ್ಟೀನ್ ವಿವಾದ ಯಾವುದೇ ರಾಷ್ಟ್ರದ ಮಧ್ಯಪ್ರಾಚ್ಯದ ವಿದೇಶಾಂಗ ನೀತಿಯ ಅಳತೆಗೋಲು ಎಂದರೆ ಅತಿಶಯೋಕ್ತಿಯೇನಿಲ್ಲ. ಭಾರತ ತನ್ನ ಪ್ಯಾಲೆಸ್ಟೀನ್ ನೀತಿಯುದ್ದಕ್ಕೂ ಅರಬ್ ರಾಷ್ಟ್ರಗಳನ್ನು ಓಲೈಸುವ ಪ್ರಯತ್ನದಲ್ಲಿ ಪ್ಯಾಲೆಸ್ಟೀನಿಯರ ಪರವಹಿಸಿಕೊಂಡು, ಇಸ್ರೇಲನ್ನು ದೂರ ಮಾಡಿಕೊಂಡಿದ್ದು ಸ್ಪಷ್ಟವಾಗಿತ್ತು. ಭಾರತದ ವಿದೇಶಾಂಗ ನೀತಿಯ ಈ 'ರಾಜತಾಂತ್ರಿಕ ಸಂಕೋಚ' ಭಾರತದ ಜೊತೆಗೆ ವಿಶ್ವಾಸಾರ್ಹ ಸಂಬಂಧಗಳನ್ನು ಹೊಂದಿದ್ದ ಇಸ್ರೇಲನ್ನು ಉದ್ದೇಶಪೂರ್ವಕವಾಗಿಯೇ ದೂರವಿಡುವಂತೆ ಮಾಡಿತ್ತು. ಈ ಇಬ್ಬಂದಿತನದಿಂದಾಗಿ ಇಸ್ರೇಲ್ ಕೂಡ ಭಾರತದ ಜೊತೆಗೆ ಹೆಚ್ಚಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು ಆಸಕ್ತಿ ವಹಿಸದಂತೆ ಮಾಡಿಬಿಟ್ಟಿತ್ತು

ಇಸ್ರೇಲ್ ವಿರೋಧವನ್ನೂ ಕಟ್ಟಿಕೊಂಡು, ಅರಬ್ ನಾಯಕರನ್ನು ಒಲೈಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದ ಭಾರತಕ್ಕೆ ವಾಸ್ತವ ಅರಿವಾದಾಗ ದಿಗ್ಭ್ರಮೆಯಾಗಿತ್ತು. ಭಾರತದ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಅರಬ್ ರಾಷ್ಟ್ರಗಳು ಮಾತ್ರ, "ಕೊಟ್ಟವ ಕೋಡಂಗಿ, ಈಸ್ಕೊಂಡವ ವೀರಭದ್ರ" ಎಂಬಂತೆ ಭಾರತದ ಬೆಂಬಲ ಸಹಕಾರಗಳನ್ನೆಲ್ಲಾ ಪಡೆದುಕೊಂಡು ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವು ನೀಡುವ ಚಾಳಿ ಮುಂದುವರಿಸಿದ್ದವು! ಎಲ್ಲೋ ದೂರದ ಸಮಸ್ಯೆಗೆ ಅರಬ್ಬರಿಗೆ ಸಹಾಯ ಮಾಡಲು ಹೋದ ಭಾರತಕ್ಕೆ, ತನ್ನ ನೆರೆಹೊರೆಯ ಸಮಸ್ಯೆಗೂ ಅರಬ್ಬರ ಸಹಾಯ ದೊರೆಯಲಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೊಂಬರಾಟಗಳು, ಭಯೋತ್ಪಾದಕರಿಗೆ ನೀಡುತ್ತಿರುವ ಕುಮ್ಮಕ್ಕು ಇನ್ನಿತರ ಪಾಕಿಸ್ತಾನದ ಹುಚ್ಚಾಟಗಳಿಗೆ ಅರಬ್ ರಾಷ್ಟ್ರಗಳು ಬೆಂಬಲ ನೀಡಿವೆಯೇ ಹೊರತು ಬುದ್ಧಿ ಹೇಳುವ ಪ್ರಯತ್ನ ಮಾಡಿಲ್ಲ. ಅರಬ್ ರಾಷ್ಟ್ರಗಳೆಲ್ಲಾ ಸೇರಿಕೊಂಡು Organization of Islamic Conference (OIC) ಎಂಬ ಹೆಸರಿನಲ್ಲಿ ನೇರವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದಾಗ, ಭಾರತದ ವಿದೇಶಾಂಗ ನೀತಿ ತಪ್ಪು ಹಾದಿಯಲ್ಲಿ ನಡೆದಿದ್ದು ಸ್ಪಷ್ಟವಾಗಿತ್ತು. ಇಷ್ಟೆಲ್ಲಾ ನಡೆದ ಮೇಲೆ ಮತ್ತೆ ಇಸ್ರೇಲ್ ಜೊತೆಗಿನ ವಿಶ್ವಾಸ ವೃದ್ಧಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ಹೀಗಿದ್ದಾಗ್ಯೂ ಮೋದಿ ಸರಕಾರ ಭಾರತದ ಸ್ನೇಹದಲ್ಲಿ ಇಸ್ರೇಲ್ ಗೆ ವಿಶ್ವಾಸ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೋದಿ ದೇಶ ಮತ್ತು ವಿದೇಶಗಳಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಯಾವುದೇ ಸಂಕೋಚ ಮತ್ತು ಗೊಂದಲಗಳಿಲ್ಲದೇ ಬಹಳ ಸ್ಪಷ್ಟವಾಗಿ ಪ್ರಸ್ತುತ ಪಡಿಸುತ್ತಿರುವುದು ಭಾರತದ ವಿದೇಶಾಂಗ ನೀತಿಯ ಟ್ರಂಪ್ ಕಾರ್ಡ್ ಆಗಿ ಬದಲಾಗುತ್ತಿದೆ.

ಭಾರತ ತನ್ನ ಹಿಂದಿನ 'ರಾಜತಾಂತ್ರಿಕ ಸಂಕೋಚ'ದ ನೀತಿಯನ್ನು ಕೈಬಿಟ್ಟುಇಸ್ರೇಲ್ ಗೆಳೆತನವನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಅವಶ್ಯಕತೆ ಇಂದೆಂದಿಗಿಂತಲೂ ಹೆಚ್ಚಿದೆ. 1990ರಿಂದೀಚೆಗೆ ಭಾರತ ಹಂತ ಹಂತವಾಗಿ ಪ್ಯಾಲೆಸ್ಟೀನ್ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಇಸ್ರೇಲ್ ನತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಭಾರತ ಇಸ್ರೇಲ್ ಜೊತೆಗೆ ವ್ಯವಹರಿಸುವಲ್ಲಿ ರಾಜತಾಂತ್ರಿಕ ಸಂಕೋಚ ಗೊಂದಲಗಳನ್ನು ವ್ಯಕ್ತಪಡಿಸಿದ್ದರೂ ಇಸ್ರೇಲ್ ಮಾತ್ರ ಭಾರತಕ್ಕೆ ಅವಶ್ಯಕತೆ ಬಿದ್ದಾಗಲೆಲ್ಲಾ ಷರತ್ತುರಹಿತ ಬೆಂಬಲ ನೀಡಿದೆ. ಉದಾಹರಣೆಗೆ ಮೇ 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲೂ ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಇಚ್ಚೆ ವ್ಯಕ್ತಪಡಿಸಿತ್ತು! 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ತನ್ನ ಮಾನವರಹಿತ ವಿಮಾನಗಳನ್ನು (UAV) ಉಪಯೋಗಿಸಿಕೊಂಡು ಪಾಕಿಸ್ತಾನದ ಮಿಲಿಟರಿ ನೆಲೆಗಳು ಮತ್ತಿತರ ಸಮರತಾಂತ್ರಿಕ ಮಹತ್ವದ ಮಾಹಿತಿಗಳನ್ನು ದೃಶ್ಯಾವಳಿಗಳ ಸಮೇತ ಭಾರತೀಯ ಸೇನೆಗೆ ಒದಗಿಸಿತ್ತು! ಇಸ್ರೇಲ್ ನೀಡಿದ ಈ ವಿಶೇಷ ನೆರವು ಕಾರ್ಗಿಲ್ ನಲ್ಲಿ ವೈರಿಗಳ ಸದ್ದಡಗಿಸಿ ವಿಜಯ್ ದಿವಸ್ ಆಚರಿಸುವಲ್ಲಿ ಬೃಹತ್ ಪಾತ್ರ ವಹಿಸಿತ್ತು. 2002ರಲ್ಲಿ ಪಾಕಿಸ್ತಾನದ ನಿರಂತರ ಕೆಣಕುವಿಕೆಗೆ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಭಾರತೀಯ ಸೇನೆ ನೀಡಿದ ಉತ್ತರ 'ಆಪರೇಶನ್ ಪರಾಕ್ರಮ್'! ಈ ಕಾರ್ಯಾಚರಣೆಯಲ್ಲೂ ಭಾರತದ ಸೇನೆಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಕ್ಷಿಪ್ರಗತಿಯಲ್ಲಿ ತನ್ನ ವಿಶೇಷ ವಿಮಾನಗಳ ಮೂಲಕ ಒದಗಿಸಿದ್ದು ಇದೇ ಇಸ್ರೇಲ್! ಹೀಗಿರುವಾಗ ಇಸ್ರೇಲ್ ಜೊತೆಗಿನ ಭಾರತದ ರಾಜತಾಂತ್ರಿಕ ನಂಟನ್ನು ನೇರವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ಸಂಶಯವೂ ಬೇಕಾಗಿಲ್ಲ. ಈ ಧೀಮಂತ ನಡೆ ಇಸ್ರೇಲ್ ಭಾರತಕ್ಕೆ ನೀಡಿದ ಷರತ್ತುರಹಿತ ಬೆಂಬಲಗಳಿಗೆ ಸ್ನೇಹಪೂರ್ವಕ ಗೌರವ ಸೂಚಿಸಿದಂತೆಯೂ ಆಗುತ್ತದೆ.

(This article was published in Vishwavani newspaper on 1 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶನಿವಾರ, ನವೆಂಬರ್ 19, 2016

ಭಾರತ-ಇಸ್ರೇಲ್ ಮೈತ್ರಿ ಮತ್ತು ಪ್ಯಾಲೆಸ್ಟೀನ್ ವಿವಾದ ?

ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೇರುವುದರೊಂದಿಗೆ, ಪಶ್ಚಿಮ ಏಷ್ಯಾ ರಾಷ್ಟ್ರಗಳತ್ತ ಭಾರತದ ವಿದೇಶಾಂಗ ನೀತಿ ಹೊಸ ತಿರುವು ಪಡೆದುಕೊಂಡಿದೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವತ್ತ ಭಾರತ ಹೆಚ್ಚಿನ ಒಲವು ತೋರಿಸುತ್ತಿದೆ. ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಮತ್ತಿನ್ನಿತರ ಕ್ಷೇತ್ರಗಳಲ್ಲಿ ಈಗಾಗಲೇ ಭಾರತ ಮತ್ತು ಇಸ್ರೇಲ್ ಗಳ ನಡುವೆ ಗಮನಾರ್ಹ ಬಾಂಧವ್ಯವಿದೆ. ಇಸ್ರೇಲ್ ಜೊತೆಗೆ ಮೋದಿ ಸಂಬಂಧ ಹೊಸದೇನಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ, ಗುಜರಾತ್ ಕೇಂದ್ರ ಸರಕಾರಕ್ಕಿಂತ ವಿಭಿನ್ನ ಮತ್ತು ಸ್ವತಂತ್ರ ಆರ್ಥಿಕ ಯೋಜನೆಗಳನ್ನು ಅಳವಡಿಸಿಕೊಂಡು ಬೆಳೆಯುವುದರ ಹಿಂದೆಯೂ ಇಸ್ರೇಲ್ ಪ್ರಮುಖ ಪಾತ್ರ ವಹಿಸಿತ್ತು! ಹೀಗಂದ ಮಾತ್ರಕ್ಕೆ ಮೋದಿ ಪ್ರಧಾನಿಯಾದ ಕೂಡಲೇ ಪ್ಯಾಲೆಸ್ಟೀನ್ ಕುರಿತಾಗಿ ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿಯಲ್ಲೇನೂ ಮೂಲಭೂತ ಬದಲಾವಣೆಗಳಾಗಿಲ್ಲ. ಆದರೆ ಪ್ಯಾಲೆಸ್ಟೀನ್ ವಿಷಯದಲ್ಲಿ ಭಾರತ ತನ್ನನ್ನು ತಾನು ಗಮನಾರ್ಹವಾಗಿ ಸೀಮಿತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಆರಂಭದಿಂದಲೂ ಭಾರತ ಮತ್ತು ಇಸ್ರೇಲ್ ಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಇಸ್ರೇಲ್-ಪ್ಯಾಲೆಸ್ಟೀನ್ ಸಮಸ್ಯೆ ಆಗಾಧ ಪರಿಣಾಮ ಬೀರಿದೆ. ಭಾರತದ ವಿದೇಶಾಂಗ ನೀತಿ ಪ್ಯಾಲೆಸ್ಟೀನ್ ಪರವಾಗಿದ್ದು, ಭಾರತ ಜಾಗತಿಕ ವೇದಿಕೆಯಲ್ಲಿ ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರದ ಪರ ನಿಲುವನ್ನು ಕಾಪಾಡಿಕೊಂಡು ಬಂದಿದೆ. ಪಶ್ಚಿಮ ಏಷ್ಯಾದ ಅರಬ್ ದೇಶಗಳೊಂದಿಗೆ ಸೌಹಾರ್ದ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಭಾರತ ಕಡೆಗಣಿಸಬೇಕಾಯ್ತು. 1992ರಲ್ಲಿ ನರಸಿಂಹ ರಾವ್ ಮುಂದಾಳತ್ವ ಇಸ್ರೇಲ್ ಜೊತೆಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ನಡೆಗಳಿಗೆ ಸಾಕ್ಷಿಯಾದರೂ, ಭಾರತ ಪ್ಯಾಲೆಸ್ಟೀನ್ ಗೆ ನೀಡುತ್ತಿದ್ದ ಬೆಂಬಲ ಕಡಿಮೆಯಾಗಿಲ್ಲದೇ ಇರುವುದು ಭಾರತ- ಇಸ್ರೇಲ್ ಸಂಬಂಧಗಳಲ್ಲಿರುವ ವಿರೋಧಾಭಾಸಗಳಿಗೆ ಸಾಕ್ಷಿಯಾಗಿದೆ.

ಈವರೆಗೆ ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ರಾಜತಾಂತ್ರಿಕ ಪ್ರತಿನಿಧಿಗಳು, ಪ್ಯಾಲೆಸ್ಟೀನ್ ಗೂ ಭೇಟಿ ನೀಡುವುದರ ಮೂಲಕ ಭಾರತಕ್ಕೆ ಪ್ಯಾಲೆಸ್ಟೀನ್ ಜೊತೆಗಿನ ಸಂಬಂಧಗಳೂ ಮಹತ್ವಪೂರ್ಣ ಎಂಬ ಸಂದೇಶ ರವಾನೆಯಾಗಿದೆ. 2000ದಲ್ಲಿ ಕೇಂದ್ರ ಗೃಹ ಸಚಿವ ಎಲ್. ಕೆ. ಅಡ್ವಾನಿ ಮತ್ತು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ 2012ರಲ್ಲಿ ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಇಸ್ರೇಲ್ ಭೇಟಿ ನೀಡುತ್ತಾರೆ. ಅದರೆ ಈ ವಿದೇಶ ಪ್ರವಾಸ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತದ ಸಚಿವರು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರೊಂದಿಗೆ ಸಮಾನ ಮಾತುಕತೆ ನಡೆಸುತ್ತಾರೆ . ಹೀಗಾಗಿ ಈ ಪ್ರಯತ್ನಗಳು ಪ್ರಾದೇಶಿಕ ಭೇಟಿಗಳಾಗಿ ಪರಿಗಣಿಸಲ್ಪಟ್ಟಿವೆಯೇ ವಿನಃ ಇಸ್ರೇಲ್ ಭೇಟಿ ಎಂದಲ್ಲ. ಈ ಹಿನ್ನೆಲೆಯಲ್ಲಿ 2014 ರ ನವೆಂಬರ್ ನಲ್ಲಿ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಇಸ್ರೇಲ್ ಭೇಟಿ ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ಗುರುತಿಸಲ್ಪಡುತ್ತದೆ. ಕಾರಣ ರಾಜನಾಥ್ ಸಿಂಗ್ ಭೇಟಿ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುತ್ತದೆ. ಪ್ಯಾಲೆಸ್ಟೀನ್ ಕಡೆಗಣಿಸುವ ಮೂಲಕ ಮೋದಿ ಸರಕಾರ ಪಶ್ಚಿಮ ಏಷ್ಯಾ ಕುರಿತಾದ ಸಾಂಪ್ರದಾಯಿಕ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಎಂಬ ಬಗ್ಗೆ ಚರ್ಚೆಗಳೂ ನಡೆದಿತ್ತು. ಈ ವಿಷಯವಾಗಿ ಹೆಚ್ಚಿನ ಚರ್ಚೆ ವಿವಾದಗಳಿಗೆ ಆಸ್ಪದ ನೀಡದೆ ಮುಂದೆ ಅಕ್ಟೋಬರ್ 2015ರಲ್ಲಿ ಪ್ರಣಬ್ ಮುಖರ್ಜಿ ಇಸ್ರೇಲ್ ಜೊತೆಗೆ ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿದ್ದರು. ಜನವರಿ 2016 ರ ವಿದೇಶ ಪ್ರವಾಸದಲ್ಲಿ ಸುಷ್ಮಾ ಸ್ವರಾಜ್ ಇಸ್ರೇಲ್, ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿ ಪ್ಯಾಲೆಸ್ಟೀನ್ ಪರವಾದ ಭಾರತದ ನಿಲುವನ್ನು ಸಮರ್ಥಿಸಿಕೊಂಡರು.

ಸೆಪ್ಟೆಂಬರ್ 2014ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಮೋದಿಯವರನ್ನು ಇಸ್ರೇಲ್ ಗೆ ಆಹ್ವಾನಿಸಿದ್ದಾರೆ. ಮುಂದೆ ಮಾರ್ಚ್ 2015ರಲ್ಲಿ ಸಿಂಗಾಪೂರ್ ನಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಅಧ್ಯಕ್ಷ ರೇವೆನ್ ರಿವ್ಲಿನ್ ರನ್ನು ಭೇಟಿ ಮಾಡಿದ ಮೋದಿ ಇಸ್ರೇಲ್ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೋದಿ ಇಸ್ರೇಲ್ ಗೆ ಮಾತ್ರ ಭೇಟಿ ನೀಡಿದಲ್ಲಿ ಭಾರತ ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದ ಸಾಂಪ್ರದಾಯಿಕ ವಿದೇಶಾಂಗ ನೀತಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಸ್ವತಂತ್ರ ಪ್ಯಾಲೆಸ್ಟೀನ್ ರಾಜ್ಯವನ್ನು ಸತತವಾಗಿ ಬೆಂಬಲಿಸಿಕೊಂಡು ಬಂದ ಭಾರತ ತನ್ನ ನೀತಿಯನ್ನು ಇಸ್ರೇಲ್ ಪರ ನೀತಿಯನ್ನಾಗಿ ಬದಲಾಯಿಸಿಕೊಳ್ಳುತ್ತದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಅರಬ್ ರಾಷ್ಟ್ರಗಳೊಂದಿಗೆ ಕಾಪಾಡಿಕೊಂಡು ಬಂದ ಸೌಹಾರ್ದತೆಯನ್ನೂ ಇಸ್ರೇಲ್ ಮಿತೃತ್ವಕ್ಕೋಸ್ಕರ ಪಣಕ್ಕಿಡಬೇಕಾಗುತ್ತದೆ. ಪೆಟ್ರೋಲಿಯಂ ಇನ್ನಿತರ ಶಕ್ತಿಮೂಲಗಳಿಗಾಗಿ ಇರಾನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ಭಾರತ ಅವಲಂಬಿತವಾಗಿದ್ದು ಇಸ್ರೇಲ್ ಸ್ನೇಹ ಈ ದೇಶಗಳೊಂದಿಗೆ ವೈರತ್ವಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದಲ್ಲದೇ 2017ರ ಉತ್ತರ ಪ್ರದೇಶ ಚುನಾವಣೆಗಳ ಮೇಲೆ ಇದು ದುಬಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿರುವ ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡರೆ, ಬಿ.ಜೆ.ಪಿ ಗೆ ಪ್ಯಾಲೆಸ್ಟೀನ್ ವಿರೋಧಿ ನೀತಿ ಮುಂದಿನ ಚುನಾವಣೆಯಲ್ಲಿ ಮಾರಕವಾಗಬಹುದು. ಅಂತರಾಷ್ಟ್ರೀಯ ಮಟ್ಟದಲ್ಲೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿರುವ ಭಾರತಕ್ಕೆ ಅರಬ್ ದೇಶಗಳ ಬೆಂಬಲ ಅತ್ಯಗತ್ಯ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅರಬ್ ದೇಶಗಳ ಸಂಖ್ಯಾಬಲ ಭಾರತದ ಆಕಾಂಕ್ಷೆಗೆ ಮುಳ್ಳಾಗಬಹುದು. ಹೀಗಾಗಿ ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.

ನಡೆದುಹೋದ ಘಟನೆಗಳೇನೇ ಇದ್ದರೂ ಭಾರತ ವಿದೇಶಾಂಗ ನೀತಿ ಚರಿತ್ರೆಯ ಸಂಕೋಲೆಗಳನ್ನು ಬೀಡಿಸಿಕೊಂಡು ಹೊಸ ಗಮ್ಯದತ್ತ ದೃಷ್ಟಿ ನೆಟ್ಟಿದೆ. ಎಪ್ರಿಲ್ 2016ರಲ್ಲಿ ಯುನೆಸ್ಕೋ ಸಾಮಾನ್ಯ ಸಭೆಯೊಂದರಲ್ಲಿ ಭಾರತ ಮತ್ತು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳು ಅಲ್- ಅಕ್ಸಾ ಮಸೀದಿ ಮತ್ತು ಹರಾಮ್ ಅಲ್-ಶರೀಫ್ ಗಳಲ್ಲಿ ಇಸ್ರೇಲ್ ದೌರ್ಜನ್ಯ ವಿರೋಧಿಸಿ ಇಸ್ರೇಲನ್ನು ಖಂಡಿಸಿದ್ದವು. ಆದರೆ ಇದೇ ವಿಷಯ ಅಕ್ಟೋಬರ್ 2016ರಲ್ಲಿ ಚರ್ಚೆಗೆ ಬಂದಾಗ ಇಸ್ರೇಲ್ ವಿರುದ್ಧ ಮತ ಹಾಕಲು ಭಾರತ ನಿರಾಕರಿಸಿತ್ತು! ಈ ಎರಡೂ ಸಂದರ್ಭಗಳಲ್ಲಿ ಚರ್ಚಾವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಇಸ್ರೇಲ್ ಕುರಿತಾದ ಭಾರತದ ಧೋರಣೆ ಬದಲಾಗಿತ್ತು! ಇತ್ತೀಚೆಗೆ ಹಿಮಾಚಲ ಪ್ರದೇಶದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರು ಭಾರತೀಯರ ಸೈನಿಕರ ಶೌರ್ಯ, ಪರಾಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ ಸರ್ಜಿಕಲ್ ಸ್ಟ್ರೈಕ್ ಗಳನ್ನು ಈ ಹಿಂದೆ  ಇಸ್ರೇಲ್ ಕಾರ್ಯರೂಪಕ್ಕಿಳಿಸಿತ್ತು ಮತ್ತು ಭಾರತದ ಸೇನೆ ವಿಶ್ವದ ಯಾವುದೇ ಸೇನೆಗೂ ಕಡಿಮೆಯಿಲ್ಲ ಎಂದಿದ್ದರು. ಈ ಸಂದರ್ಭ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮುಖ್ಯವಾಹಿನಿ ಮಾಧ್ಯಮಗಳವರೆಗೂ ಇಸ್ರೇಲ್ ಯುದ್ಧ ನೀತಿ ಮತ್ತು ಸಮರ ತಂತ್ರಗಳ ಬಗ್ಗೆ ಚರ್ಚೆಯಾಗಿತ್ತು.

ಇತ್ತೀಚೆಗೆ ಪಶ್ಚಿಮ ಏಷ್ಯಾದ ವಾತಾವರಣವೂ ಬಹಳಷ್ಟು ಬದಲಾಗಿದ್ದು, ಈ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸೃಷ್ಟಿಸಿದ ಗೊಂದಲಗಳು ಮತ್ತು ಕೋಲಾಹಲಗಳಿಂದಾಗಿ ಇಸ್ರೇಲ್-ಪ್ಯಾಲೆಸ್ಟೀನ್ ವಿವಾದ ಮಸುಕಾಗಿದೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳು ತಮ್ಮ ಒಳಜಗಳಗಳು ಮತ್ತು ಉಗ್ರರ ವಿಧ್ವಂಸಕ ಕೃತ್ಯಗಳಿಂದಾಗಿ ಭಾರತ-ಇಸ್ರೇಲ್ ಸಂಬಂಧಗಳ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿಲ್ಲ. ಈ ಅಪರೂಪದ ಅವಕಾಶ ಭಾರತ-ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅತ್ತ ಪಶ್ಚಿಮ ಏಷ್ಯಾದ ಅರಬ್ ರಾಷ್ಟ್ರಗಳೊಂದಿಗೂ ವಿಶ್ವಾಸ ಉಳಿಸಿಕೊಂಡು ಇಸ್ರೇಲ್ ಮಿತೃತ್ವವನ್ನೂ ಗಟ್ಟಿ ಮಾಡಿಕೊಳ್ಳುವ ರಾಜತಾಂತ್ರಿಕ ಮುತ್ಸದ್ಧಿತನ ಭಾರತದ ವಿದೇಶಾಂಗ ನೀತಿಯ ಸದ್ಯದ ಅವಶ್ಯಕತೆ.

(This article was published in Hosa Digantha newspaper on 8 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಭಾರತದ ಭವಿಷ್ಯದ ಬಗ್ಗೆ ಕರ್ಜನ್ ಹೇಳಿದ್ದೇನು?

ಮಹಾಬಲಿ ಆನೆಯನ್ನು ಮಾವುತ ಅಂಕುಶದಿಂದ ನಿಯಂತ್ರಿಸಿದಂತೆ, ಬ್ರಿಟಿಷರು ತಮ್ಮ ಕುಟಿಲ ನೀತಿಯಿಂದ ಭಾರತೀಯರನ್ನು ಅಡಿಯಾಳಾಗಿಸಿಕೊಂಡರು.ಅದರಲ್ಲೂ ಚಾಣಾಕ್ಷ ಕರ್ಜನ್ ಭಾರತದ ಶಕ್ತಿಯ ಬಗ್ಗೆ 1909ರಲ್ಲೇ ಅಂದಾಜಿಸಿದ್ದ!
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಪಾಕಿಸ್ತಾನ ತನ್ನ ಹೇಡಿತನದ ಕೃತ್ಯಗಳ ಮೂಲಕ ಕಾಲು ಕೆರೆದುಕೊಂಡು ಭಾರತವನ್ನು ಕೆಣಕುತ್ತಿರುವುದರಲ್ಲೇ ಸಮಯ ಕಳೆಯುತ್ತಿರುವಾಗ, ವಿಶ್ವಮಟ್ಟದಲ್ಲಿ ಭಾರತದ ಕುರಿತಾಗಿ ಇನ್ನೊಂದು ಚರ್ಚೆ ಆರಂಭವಾಗಿದೆ. ಏಷ್ಯಾ ಮತ್ತು ವಿಶ್ವ ಭದ್ರತೆಯಲ್ಲಿ ಭಾರತದ ಪಾತ್ರವನ್ನು ನಿರ್ಧರಿಸುವತ್ತ ಗಂಭೀರ ಚಿಂತನೆಗಳು ನಡೆದಿವೆ. ಭೌಗೋಳಿಕವಾಗಿಯೂ ರಾಜಕೀಯವಾಗಿಯೂ ಭಾರತ ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಂಡಿದೆ. ಪೂರ್ವ ಏಷ್ಯಾ, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯಗಳನ್ನು ಪ್ರಭಾವಿಸುವಂಥ ಅಧಿಕಾರಯುತ ಸ್ಥಾನದಲ್ಲಿದ್ದರೂ, ಭಾರತ ಸ್ವತಂತ್ರ ರಾಷ್ಟ್ರವಾದ ಮೇಲೆ ಗಳಿಸಿದ ರಾಜತಾಂತ್ರಿಕ ಯಶಸ್ಸುಗಳು ವಿರಳ ಎನ್ನುವುದು ವಿಪರ್ಯಾಸ 

ಭಾರತದಲ್ಲಿ ಬ್ರಿಟಿಷ್ ಅಧಿಕಾರಶಾಹಿ ಅಸ್ತಿತ್ವದಲ್ಲಿದ್ದಾಗ ಭಾರತವನ್ನು ಆಳಿದ ವೈಸರಾಯ್ ಗಳಲ್ಲಿ ಲಾರ್ಡ್ ಜಾರ್ಜ್ ಕರ್ಜನ್ ಕೂಡ ಒಬ್ಬ. ಇವತ್ತಿಗೆ ಕರ್ಜನ್ ಭಾರತೀಯರ ನೆನಪಿನಲ್ಲಿರುವುದು ಬಂಗಾಳದ ವಿಭಜನೆಗೆ ಕಾರಣನಾದ ಬ್ರಿಟಿಷ್ ವೈಸರಾಯ್ ಎಂದಷ್ಟೇ.  ಹೌದು, ಲಾರ್ಡ್ ಕರ್ಜನ್ ಕುಟಿಲ ರಾಜನೀತಿಯಿಂದಾಗಿ 1905 ರಲ್ಲಿ ಹಿಂದೂ - ಮುಸಲ್ಮಾನರ ಕೋಮುಗಳ ಆಧಾರದಲ್ಲಿ ಬಂಗಾಳವನ್ನು ವಿಭಜಿಸಿಬಿಡುತ್ತಾನೆ. ಇದೇ ಕರ್ಜನ್ 1909ರಲ್ಲಿ ಭಾರತದ ಕುರಿತಾಗಿ ಈ ರೀತಿ ಬರೆಯುತ್ತಾನೆ, "ನಿಸ್ಸಂಶಯವಾಗಿಯೂ ಭಾರತ ಆಧುನಿಕ ಕಾಲಘಟ್ಟದಲ್ಲಿ ಏಷ್ಯಾದ ಬಲಿಷ್ಟ ಶಕ್ತಿಯಾಗಿ ಹೊರಹೊಮ್ಮುತ್ತದೆಯಷ್ಟೇ ಅಲ್ಲ, ವಿಶ್ವ ರಾಜಕೀಯದಲ್ಲೇ ಶ್ರೇಷ್ಟ ಶಕ್ತಿಯೆಂದು ಗುರುತಿಸಲ್ಪಡುತ್ತದೆ. ಆಯಕಟ್ಟಿನ ಭೂಪ್ರದೇಶ, ಸಮೃದ್ಧ ನೈಸರ್ಗಿಕ ಸಂಪತ್ತು, ಅಗಾಧ ಮಾನವ ಶಕ್ತಿ, ಶ್ರೀಮಂತ ರೇವು ಬಂದರುಗಳಷ್ಟೇ ಅಲ್ಲದೇ ಭಾರತದ ಮೀಸಲು ಮಿಲಿಟರಿ ಪಡೆ ಉನ್ನತ ಮಟ್ಟದ ದಕ್ಷತೆಯಿಂದ ಕೂಡಿದ್ದು, ಯಾವುದೇ ಕ್ಷಣದಲ್ಲೂ ವೈರಿಯ ಸದ್ದಡಗಿಸುವ ಕ್ಷಮತೆ ಹೊಂದಿದೆ..."

ಶತಮಾನಕ್ಕೂ ಹಿಂದೆ ಕರ್ಜನ್ ಬರೆದಿದ್ದ ಪ್ರತಿ ಅಕ್ಷರವೂ ಇವತ್ತಿನ ಭಾರತದ ಪರಿಸ್ಥಿತಿಯ ವಿಶ್ಲೇಷಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ, ಭಾರತದ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳು ಬ್ರಿಟಿಷರ ಹಲವು ಯೋಜನೆಗಳಿಗೆ ಬೆನ್ನೆಲುಬಾಗಿದ್ದವು. ಹತ್ತೊಂಬತ್ತನೇ ಶತಮಾನದುದ್ದಕ್ಕೂ ಮತ್ತು ಇಪ್ಪತ್ತೊಂದನೆಯ ಶತಮಾನದ ಆರಂಭದ ವರ್ಷಗಳಲ್ಲಿ ಬ್ರಿಟನ್ ಹಿಂದೂ ಮಹಾಸಾಗರವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದು ಭಾರತದ ಭೌಗೋಳಿಕ ಮತ್ತು ಮಿಲಿಟರಿ ಅನುಕೂಲತೆಗಳಿಂದಾಗಿಯೇ! ಅಡೆನ್, ಸಿಂಗಾಪುರ್, ಅಫ್ಘಾನಿಸ್ತಾನ, ಇರಾಕ್ ಮತ್ತು ಚೀನಾಗಳಲ್ಲೂ ಬ್ರಿಟನ್ ಪಾರಮ್ಯ ಸಾಧ್ಯವಾಗಿದ್ದು ಭಾರತದ ಮೇಲೆ ಬ್ರಿಟನ್ ಗಿದ್ದ ಹಿಡಿತದಿಂದಾಗಿಯೇ ಸರಿ. ಜನ್ಜೀಬಾದಿಂದ ಹಾಂಕಾಂಗ್ ವರೆಗೆ ವ್ಯಾಪಿಸಿದ್ದರೆ ಮುಕ್ತ ಸರೋವರಗಳಲ್ಲಿ ಬ್ರಿಟನ್ ಪರವಾಗಿ ಗಸ್ತು ತಿರುಗುತ್ತಿದ್ದು ಭಾರತೀಯರೇ!

ಮಹಾಬಲಿ ಆನೆಯನ್ನು ಮಾವುತ ಅಂಕುಶದಿಂದ ನಿಯಂತ್ರಿಸಿದಂತೆ, ಬ್ರಿಟಿಷರು ತಮ್ಮ ಕುಟಿಲ ನೀತಿಯಿಂದ ಭಾರತೀಯರನ್ನು ಅಡಿಯಾಳಾಗಿಸಿಕೊಂಡರು. ಅದರಲ್ಲೂ ಚಾಣಾಕ್ಷ ಕರ್ಜನ್ ಭಾರತದ ಶಕ್ತಿಯ ಬಗ್ಗೆ 1909ರಲ್ಲೇ ಅಂದಾಜಿಸಿದ್ದ! ಹೀಗಿದ್ದಾಗ್ಯೂ 1947ರಲ್ಲಿ ಸ್ವತಂತ್ರ ರಾಷ್ಟ್ರವಾಗುವುದರೊಂದಿಗೆ ಭಾರತದ ರಾಜತಾಂತ್ರಿಕ ಪ್ರಾಮುಖ್ಯತೆ ಮಸುಕಾಗುತ್ತದೆ. ಭಾರತದ ಪ್ರಭಾವ ಕಡಿಮೆಯಾಗಲು ಎರಡು ಪ್ರಮುಖ ಕಾರಣಗಳಿವೆ. ಸೈದ್ಧಾಂತಿಕ ಮತ್ತು ಭೂರಾಜಕೀಯ. ಸೈದ್ಧಾಂತಿಕವಾಗಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಶಕ್ತಿ ರಾಜಕೀಯದ ಬಗ್ಗೆ ತೋರಿದ ದಿವ್ಯ ನಿರ್ಲಕ್ಷ್ಯ. ಆಲಿಪ್ತ ನೀತಿಯತ್ತ ವಾಲಿಕೊಂಡ ಭಾರತಕ್ಕೆ ಶಕ್ತಿ ರಾಜಕೀಯದಲ್ಲಿ ತನ್ನ ಪಾತ್ರ ಮರೆತುಹೋಗಿತ್ತು! ಅಲಿಪ್ತ ನೀತಿಯೂ ವಿಶ್ವರಾಜಕೀಯದಲ್ಲಿ ಭಾರತಕ್ಕೊಂದು ವರ್ಚಸ್ಸು ಒದಗಿಸಿದರೂ, ನಿರೀಕ್ಷೆಯ ಮಟ್ಟ ತಲುಪಲಾಗಲಿಲ್ಲ. ಇನ್ನು ಭೂರಾಜಕೀಯದ ದೃಷ್ಟಿಯಿಂದಲೂ ಭಾರತಕ್ಜೆ ಸ್ವಾತಂತ್ರ್ಯದೊಂದಿಗೆ, ಪಾಕಿಸ್ತಾನವೆಂಬ ಮಗ್ಗುಲ ಮುಳ್ಳೂ ಸೃಷ್ಟಿಯಾಗಿ ಹೋಗುತ್ತದೆ. ಪಾಕಿಸ್ತಾನದ ಉದಯ ಭಾರತವನ್ಬು ಮಧ್ಯ ಪ್ರಾಚ್ಯ ಮತ್ತು ಮಧ್ಯ ಏಷ್ಯಾಗಳ ಜೊತೆ ಭಾರತದ ನೇರ ಸಂಪರ್ಕಕ್ಜೆ ಅಂತ್ಯ ಹಾಡಿತ್ತು. ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಗಡಿ ವಿವಾದಗಳಲ್ಲೇ ಭಾರತ ಸಮಯ ವ್ಯರ್ಥ ಮಾಡಿಕೊಳ್ಳುವಂತಾಯ್ತು. ಈ ಎಲ್ಲಾ ಸಮಸ್ಯೆಗಳು ಭಾರತವನ್ನು ನೆರೆಹೊರೆಯ ರಾಜಕೀಯಕ್ಕೆ ಸೀಮಿತಗೊಳಿಸುವ, ವಿಶ್ವಶಕ್ತಯಾಗುವ ಅವಕಾಶಗಳಿಗೆ ತಣ್ಣೀರೆರಚಿತ್ತು. ಇದಲ್ಲದೆ ಶೀತಲ ಸಮರದ ಅಂತ್ಯದ ನಂತರ ಅಲಿಪ್ತ ಚಳುವಳಿಯೂ ಮೂಲೆಗುಂಪಾಗುವುದರೊಂದಿಗೆ ಭಾರತದ ನಾಯಕತ್ವವೂ ತೆರೆಗೆ ಸರಿಯುವ ಲಕ್ಷಣಗಳು ನಿಚ್ಛಳವಾಗಿದ್ದವು. ಮಧ್ಯ ಪ್ರಾಚ್ಯದಲ್ಲಾದ ರಾಜಕೀಯ ಬದಲಾವಣೆಗಳು, ಭಯೋತ್ಪಾದನೆ, ಪೂರ್ವ ಏಷ್ಯಾದಲ್ಲಿ ದೈತ್ಯ ಪ್ರಭಾವವಾಗಿ ಹೊರಹೊಮ್ಮಿದ್ದ ಚೀನಾ, ಭಾರತ ವಿಶ್ವಶಕ್ತಿಯಾಗಿ ಬೆಳೆಯುವ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು.

ಈ ಎಲ್ಲಾ ಮಿತಿಗಳನ್ನೂ ಮೀರಿ ಭಾರತ ವಿಶ್ವ ಮಟ್ಟದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಾದಲ್ಲಿ, ಸೈದ್ಧಾಂತಿಕ ಮತ್ತು ಭೂರಾಜಕೀಯದಲ್ಲಿ ಭಾರತ ತನಗಿರುವ ತೊಡಕುಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಶಕ್ತಿರಾಜಕೀಯದ ವಿಚಾರವಾಗಿ ಭಾರತ ಸನ್ಯಾಸವನ್ನು ಬದಲಾಯಿಸಬೇಕಾಗುತ್ತದೆ. ಭಾರತ ಹಲವಾರು ಸಂಸ್ಕೃತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಒಂದು ಪ್ರತ್ಯೇಕ ಪ್ರಪಂಚವನ್ನೇ ಪ್ರತಿನಿಧಿಸುತ್ತದೆ. ಇಂಥ ಒಂದು ರಾಜಕೀಯ ವ್ಯವಸ್ಥೆ, ರಾಜಕಾರಣಿಗಳಿಂದ ನಿರಂತರವಾಗಿ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಭಾರತದ ನಾಯಕರೂ ಆಂತರಿಕ ನೀತಿಗೆ ನೀಡಿದಷ್ಟು ಪ್ರಾಮುಖ್ಯತೆ ವಿದೇಶಾಂಗ ನೀತಿಗೆ ನೀಡಿಲ್ಲ. ಈ ಎಲ್ಲಾ ಮಿತಿಗಳನ್ನೂ ಮೀರಿ ಪ್ರಧಾನಿ ಮೋದಿಯವರು ವಿದೇಶಾಂಗ ನೀತಿಗೂ ಸಮಾನ ಪ್ರಾಮುಖ್ಯತೆ ನೀಡಿ ಆಂತರಿಕ ರಾಜಕೀಯದ ಜೊತೆಗೂ ಸಮತೋಲನ ಕಾಯ್ದುಕೊಂಡು ಹೊಸ ರಾಜತಾಂತ್ರಿಕ ಮನಸ್ಥಿತಿಗೆ ನಾಂದಿ ಹಾಡಿದ್ದಾರೆ.

ಅಖಿಲೇಶ್ ಪಿಲ್ಲಾಮಾರಿಯವರು ಗುರುತಿಸಿದಂತೆ ಭಾರತದ ಯಶಸ್ಸಿನ ಹಾದಿಯಲ್ಲಿರುವ ಮುಖ್ಯ ಸವಾಲು ಪಾಕಿಸ್ತಾನವನ್ನು ನಿಗ್ರಹಿಸಲು ಎರಡು ತಂತ್ರಗಳನ್ನು ಬಳಸಬಹುದು. ಇಪ್ಪತೊಂದನೇ ಶತಮಾನದ ತಂತ್ರ ಮತ್ತು ಹತ್ತೊಂಬತ್ತನೇ ಶತಮಾನದ ತಂತ್ರ. ಇಪ್ಪತ್ತೊಂದನೆಯ ಶತಮಾನದ ತಂತ್ರದ ಪ್ರಕಾರ ಸಹಕಾರ ಮತ್ತು ಸೌಹಾರದತೆಯ ಮೂಲಕ ಪಾಕಿಸ್ತಾನವನ್ನು ಆರ್ಥಿಕ ತಂತ್ರಗಳಿಂದ ತನಗೆ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವುದು. ಭಾರತ ಮತ್ತು ಪಾಕಿಸ್ತಾನಗಳಿಗಿಂತ ಹೆಚ್ಚು ದ್ವೇಷ ಕಾರಿಕೊಳ್ಳುತ್ತಿದ್ದ ಫ್ರಾನ್ಸ್ ಮತ್ತು ಜರ್ಮನಿಗಳು ಇದೇ ವಿಧಾನ ಅನುಸರಿಸಿ ಯಶ ಕಂಡಿವೆ. ಇದಲ್ಲದಿದ್ದರೆ ಎರಡನೇ ತಂತ್ರ ಅಂದರೆ ಹತ್ತೊಂಬತ್ತನೇ ಶತಮಾನದ ತಂತ್ರದ ಪ್ರಕಾರ ಪಾಕಿಸ್ತಾನದಲ್ಲಿರುವ ಅನೇಕ ಅತೃಪ್ತ ಸಮುದಾಯಗಳಿಗೆ ನೆರವು ನೀಡಿ ಪಾಕಿಸ್ತಾನದ ವಿಭಜನೆಗೆ ಪ್ರಚೋದಿಸಿ, ವಿಭಜಿತ ಗುಂಪುಗಳನ್ನು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಪರವಾಗಿ ಉಪಯೋಗಿಸಿಕೊಳ್ಳುವುದು. ಈ ಮೂಲಕ ಪಾಕ್ ಅಟ್ಟಹಾಸವನ್ನು ಮಟ್ಟ ಹಾಕುವುದು ಹತ್ತೊಂಬತ್ತನೆಯ ಶತಮಾನದ ತಂತ್ರದ ಹೆಚ್ಚುಗಾರಿಕೆ.

ಇವಿಷ್ಟೇ ಅಲ್ಲದೇ ಭಾರತಕ್ಕೆ ಇನ್ನೂ ಹಲವಾರು ಸಮರತಾಂತ್ರಿಕ ಅವಕಾಶಗಳಿವೆ. ಭಾರತ ತನ್ನ ಬಲಿಷ್ಠ ನೌಕಾಸೇನೆಯನ್ನು ಇನ್ನಷ್ಟು ಬಲಪಡಿಸಿಕೊಂಡು, ಸಾಗರದ ಮೇಲೆ ಅಧಿಪತ್ಯ ಸಾಧಿಸುವತ್ತ ಗಮನಹರಿಸುವುದು. ಅಫ್ಘಾನಿಸ್ತಾನದಲ್ಲಿ ಭಾರತ ತನಗಿರುವ ರಾಜತಾಂತ್ರಿಕ ಅವಕಾಶಗಳನ್ನು ಉಪಯೋಗಿಸಿಕೊಂಡು, ತನ್ನ ನೆಲೆಗಳನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನಗಳು ಈಗಾಗಲೇ ಜಾರಿಯಲ್ಲಿವೆ. ಏಷ್ಯಾದ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಭಾರತ ಪಾಕಿಸ್ತಾನವನ್ನು ಒಬ್ಬಂಟಿಯನ್ನಾಗಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಪಾಕಿಸ್ತಾನವನ್ಬು ನೇರವಾಗಿ ಸಮರ್ಥಿಸಿಕೊಳ್ಳಲು ಯೋಚಿಸುವಂತಾಗಿದೆ. ಚೀನಾ, ರಷ್ಯಾ, ಅಮೆರಿಕಾ, ಮತ್ತು ಯುರೋಪಿನ ರಾಷ್ಟ್ರಗಳನ್ನು ಬಳಸಿಕೊಳ್ಳುವ ರಾಜತಾಂತ್ರಿಕ ಚಾಣಾಕ್ಷತೆ ಅತ್ಯವಶ್ಯಕ. ವಿಯೆಟ್ನಾಮ್, ಜಪಾನ್, ಸೌದಿ ಅರೇಬಿಯಾ, ಇಸ್ರೇಲ್ ಇನ್ನಿತರ ದೇಶಗಳ ಜೊತೆಗಿನ ಗೆಳೆತನದಲ್ಲೂ ಸಮಯಪ್ರಜ್ಞೆ ತೋರಬೇಕಾದ ಸಮಯ ಬಂದಿದೆ. 


(This article was published in Hosa Digantha newspaper on 18 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 




ಶುಕ್ರವಾರ, ಅಕ್ಟೋಬರ್ 14, 2016

ಪಾಕಿಸ್ತಾನವನ್ನು ನಿಜಕ್ಕೂ ಆಳುತ್ತಿರುವವರ್ಯಾರು?

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಪಾಕಿಸ್ತಾನದ ರಾಜಕೀಯ ನಾಯಕರು ಕಮಂಗಿಗಳಾದರೆ ಪಾಕ್ ಮಿಲಿಟರಿ ಅಧಿಕಾರಿಗಳು ಎಡಬಿಡಂಗಿಗಳೆಂತೆ ವರ್ತಿಸುತ್ತಿದ್ದಾರೆ.

-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಕಳೆದ ಎಪ್ಪತ್ತು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದಲ್ಲಿ ಪ್ರಭಾವ ಸ್ಥಾಪಿಸುವುದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿವೆ. 3 ಇಂಡೋ-ಪಾಕ್ ಯುದ್ಧಗಳೂ ನಡೆದುಹೋಗಿವೆ. ಉರಿ ದಾಳಿ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕುತಂತ್ರಗಳಲ್ಲಿ ಮೊದಲನೆಯೆದೇನೂ ಅಲ್ಲ. ಇಂಥ ಹಲವಾರು ಘಟನೆಗಳನ್ನು ಭಾರತ ದಶಕಗಳಿಂದ ಸಹಿಸಿಕೊಂಡಿದೆ. ಅಂತರ್ರಾಷ್ಟ್ರೀಯ ಕಾನೂನುಗಳು ಮತ್ತು ನಡಾವಳಿಗಳನ್ನು ಮುರಿಯಲಿಚ್ಚಿಸದ ಭಾರತ ಪಾಕಿಸ್ತಾನದ ವಿಷಯದಲ್ಲಿ ಸಂಯಮದಿಂದಲೇ ನಡೆದುಕೊಂಡಿದೆ. ಬಹುಕಾಲದಿಂದ ಪಾಕಿಸ್ತಾನದ ಉದ್ಧಟತನಕ್ಕೆ ನಿರ್ಲಿಪ್ತ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ನೀತಿಯೇ Strategic Restraint! ಆದರೆ ಪ್ರಸಕ್ತ ಭಾರತ ಬದಲಾಗಿದೆ. ಭಾರತದ ತಾಳ್ಮೆಯ ಕಟ್ಟೆಯೊಡೆದಿದೆ. ಪ್ರತಿ ಬಾರಿಯೂ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ತಟಸ್ಥಗೊಳಿಸಾಲಾಗದು ಎಂಬ ಸತ್ಯ ಪಾಕಿಸ್ತಾನಕ್ಕೂ ಅರಿವಾಗುವ ಕಾಲ ಬಂದಿದೆ.

ಕಳೆದ ಎಪ್ಪತ್ತು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದಲ್ಲಿ ಪ್ರಭಾವ ಸ್ಥಾಪಿಸುವುದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿವೆ. 3 ಇಂಡೋ-ಪಾಕ್ ಯುದ್ಧಗಳೂ ನಡೆದುಹೋಗಿವೆ. ಉರಿ ದಾಳಿ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕುತಂತ್ರಗಳಲ್ಲಿ ಮೊದಲನೆಯೆದೇನೂ ಅಲ್ಲ. ಇಂಥ ಹಲವಾರು ಘಟನೆಗಳನ್ನು ಭಾರತ ದಶಕಗಳಿಂದ ಸಹಿಸಿಕೊಂಡಿದೆ. ಅಂತರ್ರಾಷ್ಟ್ರೀಯ ಕಾನೂನುಗಳು ಮತ್ತು ನಡಾವಳಿಗಳನ್ನು ಮುರಿಯಲಿಚ್ಚಿಸದ ಭಾರತ ಪಾಕಿಸ್ತಾನದ ವಿಷಯದಲ್ಲಿ ಸಂಯಮದಿಂದಲೇ ನಡೆದುಕೊಂಡಿದೆ. ಬಹುಕಾಲದಿಂದ ಪಾಕಿಸ್ತಾನದ ಉದ್ಧಟತನಕ್ಕೆ ನಿರ್ಲಿಪ್ತ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ನೀತಿಯೇ Strategic Restraint! ಆದರೆ ಪ್ರಸಕ್ತ ಭಾರತ ಬದಲಾಗಿದೆ. ಭಾರತದ ತಾಳ್ಮೆಯ ಕಟ್ಟೆಯೊಡೆದಿದೆ. ಪ್ರತಿ ಬಾರಿಯೂ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ತಟಸ್ಥಗೊಳಿಸಾಲಾಗದು ಎಂಬ ಸತ್ಯ ಪಾಕಿಸ್ತಾನಕ್ಕೂ ಅರಿವಾಗುವ ಕಾಲ ಬಂದಿದೆ.

28 ಸೆಪ್ಟೆಂಬರ್ 2016ರಂದು ಭಾರತದ ವಿಶೇಷ ಪಡೆಗಳು ಗಡಿ ನಿಯಂತ್ರಣ ರೇಖೆ ಮೀರಿ ಪಾಕ್ ಆಕ್ರಮಿತ ಕಾಶ್ಮೀರದ ಒಳ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯೊಂದರಲ್ಲಿ ಭಯೋತ್ಪಾದಕಾರ ಶಿಬಿರಗಳನ್ನು ದ್ವಂಸಗೊಳಿಸಿದ್ದಾರೆ. ಪಾಕಿಸ್ತಾನದ ಕೃಪಾಕಟಾಕ್ಷದಲ್ಲಿ ಬೆಚ್ಚಗೆ ಮಲಗಿದ್ದ ಉಗ್ರರಿಗೆ ಭಾರತೀಯ ಸೇನೆಯ ರುದ್ರ ದರ್ಶನವಾಗಿದೆ! ಇಷ್ಟಕ್ಕೆ ಎಲ್ಲಾ ಮುಗಿಯಿತು ಎಂದುಕೊಳ್ಳುವಂತಿಲ್ಲ. ಹಾಗೆ ನೋಡಿದಲ್ಲಿ ಭಾರತ ಸರ್ಜಿಕಲ್ ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಭಾರತದ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ ಉದಾಹರಣೆಗಳಿವೆ. ಆದರೆ ಈ ಬಾರಿಯ ಸರ್ಜಿಕಲ್ ಸ್ಟ್ರೈಕ್ಸ್ ಹಿಂದೆ ನಡೆದ ಕಾರ್ಯಾಚರಣೆಗಳಿಗಿಂತ ವಿಭಿನ್ನ. ಹಿಂದಿನ ಕಾರ್ಯಾಚರಣೆಗಳ ಬಗ್ಗೆ ಭಾರತ ಯಾವತ್ತೂ ಮುಕ್ತವಾಗಿ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಆದರೆ ಈ ಬಾರಿಯ ಕಾರ್ಯಾಚರಣೆಯ ಬಗ್ಗೆ ಸ್ವತಃ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್(DGMO), ಲೆಫ್ಟಿನೆಂಟ್ ಜನರಲ್ ರಣಬಿರ್ ಸಿಂಗ್ ಸೆಪ್ಟೆಂಬರ್ 28ರಂದು ನಡೆದ ಸರ್ಜಿಕಲ್ ಸ್ಟ್ರೈಕ್ಸ್ ಬಗ್ಗೆ ಅಧಿಕೃತವಾಗಿ ಸಾರ್ವಜನಿಕ ಹೇಳಿಕೆ ಕೊಟ್ಟಿದ್ದಾರೆ. ಪ್ರಧಾನಿ ನರೆಂದ್ರ ಮೋದಿಯವರು ಕೂಡ ಭಾರತ ಪಾಕಿಸ್ತಾನಗಳ ನಡುವಿನ ಆಟದ ನಿಯಮಗಳು ಬದಲಾಗುತ್ತಿವೆ ಎಂದಿದ್ದು ಭಾರತ ತನ್ನ ಸಂಯಮ ಮತ್ತು ಸಂಕೋಚಗಳ ಸಂಕೋಲೆಗಳನ್ನು ಬಿಡಿಸಿಕೊಳ್ಳುತ್ತಿರುವ ಸೂಚನೆ. ಈ ಎಲ್ಲಾ ಬೆಳವಣಿಗೆಗಳು ಭಾರತ ತನ್ನ ದಶಕಗಳ ಸಂಯಮದ ನೀತಿಯಾದ Strategic Restraint ನಿಂದ ಹೊರಬರುತ್ತಿರುವುದನ್ನು ಚಾತಮ್ ಹೌಸ್ ವಿಶ್ಲೇಷಣಾ ಸಂಸ್ಥೆಯ ಚಾರು ಲತ ಹಾಗ್ ಸರಿಯಾಗಿಯೇ ಗುರುತಿಸಿದ್ದಾರೆ.

ಸ್ವಾತಂತ್ರ್ಯಾನಂತರದಲ್ಲಿ ಕಾಶ್ಮೀರದ ಅಧಿಕಾರ ಯಾರ ಪಾಲಿಗೆ ದಕ್ಕಬೇಕು ಎನ್ನುವುದರ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಕಿತ್ತಾಡಿಕೊಂಡಿರುವುದು ಎಷ್ಟು ಸತ್ಯವೋ, ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದೊಳಗೆ ಚುನಾಯಿತ ಸರಕಾರ ಮತ್ತು ಪಾಕ್ ಸೇನೆ ಕಚ್ಚಾಡಿಕೊಳ್ಳುತ್ತಿರುವುದೂ ಅಷ್ಟೇ ಸತ್ಯ! ಬುರ್ಹಾನ್ ವಾನಿ ಹತ್ಯಾನಂತರದಲ್ಲಿ ನಡೆದ ಘಟನೆಗಳನ್ನು ಉತ್ಪ್ರೇಕ್ಷಿಸಿ ಭಾರತೀಯ ಸೈನ್ಯ ಮತ್ತು ಒಟ್ಟಿನಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವೊಂದನ್ನು ಷರೀಫ್ ಮಾಡಿದ್ದರು. ಈ ಮೂಲಕ ಭಾರತವನ್ನು ಉಗ್ರ ರಾಷ್ಟ್ರ ಎಂದು ಬಿಂಬಿಸಿ ಮೂಲೆಗುಂಪು ಮಾಡಿ, ಕಾಶ್ಮೀರದ ವಿಷಯದಲ್ಲಿ ತನ್ನ ಪರವಾಗಿ ವಿಶ್ವ ಶಕ್ತಿಗಳ ಬೆಂಬಲವನ್ನು ಪಡೆದುಕೊಳ್ಳುವ ರಾಜತಾಂತ್ರಿಕ ಹುನ್ನಾರ ಪಾಕಿಸ್ತಾನದ ಪ್ರಧಾನಿಯ ತಲೆಯಲ್ಲಿ ರೂಪುಗೊಂಡಿತ್ತು. ಅಷ್ಟರಲ್ಲಾಗಲೇ ಪಾಕಿಸ್ತಾನದ ಸೇನೆ ಭಯೋತ್ಪಾದಕರ ಜೊತೆ ಸೇರಿಕೊಂಡು ಉರಿ ದಾಳಿಗೆ ಕಾರಣವಾಗುತ್ತದೆ. ಪಾಕ್ ಸೇನೆಯ ಈ ಎಡವಟ್ಟಿನ ಕೆಲಸದಿಂದಾಗಿ, ಷರೀಫ್ ಕುತಂತ್ರಗಳೆಲ್ಲವೂ ತಲೆಕೆಳಗಾಗಿ ಇಂದು ವಿಶ್ವಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಮತ್ತೆ ದೃಡಪಡಿಸಿಕೊಂಡಿದೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಪಾಕಿಸ್ತಾನದ ರಾಜಕೀಯ ನಾಯಕರು ಕಮಂಗಿಗಳಾದರೆ ಪಾಕ್ ಮಿಲಿಟರಿ ಅಧಿಕಾರಿಗಳು ಎಡಬಿಡಂಗಿಗಳೆಂತೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಮುಖ್ಯಸ್ಥರಿಬ್ಬರೂ ಭಾರತ ವಿರೋಧಿಗಳೇ ಆದರೂ, ಅವರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಪಾಕಿಸ್ತಾನದ ಆಡಳಿತ ಚುನಾಯಿತ ಸರಕಾರದ ಕೈಯಲ್ಲಿದೆಯೋ ಅಥವಾ ಮಿಲಿಟರಿ ಕಪಿಮುಷ್ಟಿಯಲ್ಲಿದೆಯೋ ಎನ್ನುವುದು ಯಕ್ಷಪ್ರಶ್ನೆಯಲ್ಲದೇ ಹೋದರೂ ಗೊಂದಲದ ಪ್ರಶ್ನೆಯೇ ಸರಿ. 1947-48ರ ಯುದ್ದದ ಸಮಯದಿಂದಲೇ ಪಾಕಿಸ್ತಾನದ ರಾಜಕೀಯ ನಾಯಕತ್ವ ಕಾಶ್ಮೀರದ ವಿಷಯದಲ್ಲಿ ರಾಜತಾಂತ್ರಿಕ ನಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮಿಲಿಟರಿ ನಾಯಕತ್ವ ಯುದ್ಧದ ಮೂಲಕವೇ ಕಾಶ್ಮೀರವನ್ನು ಪಡೆದುಕೊಳ್ಳುವ ಭ್ರಮೆಯಲ್ಲಿದೆ. ಅಕಿಲ್ ಶಾ ತಮ್ಮ The Army and Democracy: Military Politics in Pakistan ಎಂಬ ಪುಸ್ತಕದಲ್ಲಿ 1947-48ರ ಯುದ್ಧದಲ್ಲಿ ಪಾಕಿಸ್ತಾನದ ರಾಜಕೀಯ ನಾಯಕರು ಯುದ್ಧವಿರಾಮಕ್ಕೆ ಒಪ್ಪಿಕೊಂಡಿದ್ದು ಪಾಕ್ ಮಿಲಿಟರಿಯ ಅಸಮಧಾನಕ್ಕೆ ಕಾರಣವಾಗಿತ್ತು ಎಂದು ಬರೆದಿದ್ದಾರೆ. ಇದೇ ಅಸಮಾಧಾನ ಮುಂದೆ 1951ರಲ್ಲಿ ಪಾಕಿಸ್ತಾನದಲ್ಲಿ 'ರಾವಲ್ಪಿಂಡಿ ಪಿತೂರಿ' ಎಂಬ ಹೆಸರಿನ ಮೊದಲ ಮಿಲಿಟರಿ ದಂಗೆಗೂ ಕಾರಣವಾಯಿತು ಎಂಬ ಬಗ್ಗೆ ಬರೆಯುತ್ತಾರೆ. ಪಾಕಿಸ್ತಾನದ ಮೇಜರ್ ಜನರಲ್ ಅಕ್ಬರ್ ಖಾನ್ ಮತ್ತವನ ಮಿಲಿಟರಿ ಸಹಚರರ ರಾವಲ್ಪಿಂಡಿ ಪಿತೂರಿ ಯಶಸ್ವಿಯಾಗಲಿಲ್ಲ ಎನ್ನುವುದು ಬೇರೆ ಕಥೆಯಾದರೂ ಪಾಕ್ ಸೃಷ್ಟಿಯ ಆರಂಭದಲ್ಲೇ ರಾಜಕೀಯ-ಮಿಲಿಟರಿ ಮುಖ್ಯಸ್ಥರ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಯಶಸ್ವೀ ದಂಗೆಗಾಗಿ ಪಾಕ್ ಸೈನ್ಯ ಮತ್ತೆ ಏಳು ವರ್ಷಗಳು ಕಾಯಬೇಕಾಯ್ತು. 1958ರಲ್ಲಿ ಜನರಲ್ ಆಯೂಬ್ ಖಾನ್ ಚುನಾಯಿತ ಸರಕಾರವನ್ನು ಕಿತ್ತೊಗೆದು ಮಿಲಿಟರಿ ಸರ್ವಾಧಿಕಾರಿಯಾಗುತ್ತಾನೆ.

1958ರಿಂದ 1971ರವರೆಗಿನ ಸುದೀರ್ಘ ಸರ್ವಾಧಿಕಾರದ ನಂತರ1971ರಲ್ಲಿ ಮತ್ತೆ ಜುಲ್ಫೀಕರ್ ಆಲಿ ಭುಟ್ಟೋ ಪ್ರಧಾನಿಯಾಗುತ್ತಾರೆ. ಭುಟ್ಟೋ ಅಧಿಕಾರಾವಧಿಯಲ್ಲಿ ಸಿಮ್ಲಾ ಒಪ್ಪಂದಕ್ಕೆ ಭಾರತ ಪಾಕಿಸ್ತಾನಗಳೆರಡೂ ಸಹಿ ಹಾಕುತ್ತವೆ. ಈ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ದ್ವಿಪಕ್ಷೀಯ ಮಾತುಕತೆಗಳಿಂದ ಬಗೆಹರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಎರಡೂ ದೇಶಗಳ ಸಂಸತ್ತುಗಳು ಈ ನಿರ್ಣಯವನ್ನು ಒಪ್ಪಿಕೊಂಡಾಗ ಕಾಶ್ಮೀರ ರಾಜತಾಂತ್ರಿಕ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡಿತ್ತು. ಆದರೆ ಈ ಪ್ರಯತ್ನಗಳು ಯಶ ಕಾಣುವ ಮುನ್ನವೇ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರೆಯಾಗಿ ಜನರಲ್ ಜಿಯಾ ಉಲ್ ಹಕ್ ನೇತೃತ್ವದಲ್ಲಿ ಹಿಂದಿರುಗಿದ್ದ ಮಿಲಿಟರಿ ಸರ್ವಾಧಿಕಾರ ಕೊನೆಯಾಗಿದ್ದು 1988ರ ವಿಮಾನ ಅಪಘಾತದಲ್ಲಿ ಜಿಯಾ ಮಡಿದಾಗಲೇ. ನಂತರ ಬೆನಜೀರ್ ಭುಟ್ಟೋ ನೇತೃತ್ವದಲ್ಲಿ ಬಂದ ಸರಕಾರ ಭಾರತದೊಂದಿಗಿನ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿತ್ತು. 1989ರಲ್ಲಿ ಪಾಕ್ ಪ್ರಧಾನಿ ಭುಟ್ಟೋ, ಭಾರತದ ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿಯಾಗುತ್ತಾರೆ. ಆ ಹೊತ್ತಿಗಾಗಲೇ ಈ ಭೇಟಿಯನ್ನು ವಿರೋಧಿಸಿ ಪಾಕ್ ಸೇನೆ ಜರ್ಬ್-ಇ-ಅಮಿನ್ ಎನ್ನುವ ಬೃಹತ್ ಸಮರಾಭ್ಯಾಸ ನಡೆಸುವ ಮೂಲಕ ಪ್ರಧಾನಿ ಭುಟ್ಟೋಗೆ ನೇರ ಸಂದೇಶ ರವಾನಿಸಿತ್ತು. 1990ರಲ್ಲಿ ಬೆನಜಿರ್ ಭುಟ್ಟೊರವರ ಸರಕಾರವನ್ನು ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ವಜಾಗೊಳಿಸುತ್ತಾರೆ Pakistan: Between Mosque and Military ಪುಸ್ತಕದ ಲೇಖಕ ಹುಸೈನ್ ಹಕ್ಕಾನಿಯವರು, ಅಧ್ಯಕ್ಷ ಇಶಾಕ್ ಖಾನ್ ರವರನ್ನು ಸಂದರ್ಶಿಸಿದಾಗ, ಮಿಲಿಟರಿಯಿಂದ ಭುಟ್ಟೋ ಪದಚ್ಯುತಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರಕಾರವನ್ನು ವಜಾಗೊಳಿಸಲಾಯಿತು ಎಂದು ಒಪ್ಪಿಕೊಂಡಿದ್ದಾರೆ. 1999ರ ಫೆಬ್ರವರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಷರೀಫ್ ಐತಿಹಾಸಿಕ ಲಾಹೋರ್ ಘೋಷಣೆಗೆ ಸಹಿ ಹಾಕಿದಾಗ, ಪಾಕ್ ಸೇನಾ ಮುಖ್ಯಸ್ಥ ಜನರಲ್ ಮುಶರಫ್ ಕಾರ್ಗಿಲ್ ಕಾರ್ಯಾಚರಣೆಗೆ ಸಿದ್ಧನಾಗಿದ್ದ! "ಕಾರ್ಗಿಲ್ ಕಾರ್ಯಾಚರಣೆ ವಾಜಪೇಯಿ ಬೆನ್ನಿಗೆ ಹಾಕಿದ ಚೂರಿ" ಎನ್ನುವುದನ್ನು ಷರೀಫ್ ಅವರೇ ಒಪ್ಪಿಕೊಂಡಿದ್ದಾರೆ!

ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳ ತಾಕಲಾಟ ಇಂದು ನಿನ್ನೆಯದಲ್ಲ. ಈ ಎರಡೂ ಶಕ್ತಿಗಳೂ ಭಾರತ ವಿರೋಧಿ ನೀತಿಯನ್ನೇ ಅನುಸರಿಸಿದರೂ, ಇವರ ಮಧ್ಯೆ ಸಾವಿರ ಭಿನ್ನಾಭಿಪ್ರಾಯಗಳಿವೆ. ಈ ಎರಡೂ ಶಕ್ತಿಗಳಲ್ಲಿ ಯಾರೂ ಭಾರತಕ್ಕೆ ಹಿತವರಲ್ಲ ಎನ್ನುವುದು ನೆನಪಿಟ್ಟುಕೊಳ್ಳಬೇಕಾದ ವಿಚಾರ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟೈಕ್ ಗಳು, ನಿಗೂಡ ಕಾರ್ಯಾಚರಣೆಗಳು ಅಥವಾ ನೇರ ಯುದ್ಧವೇ ಇರಲಿ ಪಾಕಿಸ್ತಾನದ ಈ ದ್ವಂದ್ವಗಳನ್ನು ಅರಿತುಕೊಳ್ಳುವುದು ಭಾರತದ ಸಮರತಾಂತ್ರಿಕ ದೃಷ್ಟಿಯಿಂದ ಅತ್ಯವಶ್ಯಕ. ಆಂತರಿಕವಾಗಿ ಮತ್ತು ಅಂತರಾಷ್ಟ್ರೀಯವಾಗಿಯೂ ಪಾಕಿಸ್ತಾನ ಈಗಾಗಲೇ ಸೋತುಹೋಗಿದೆ. ಸಾರ್ವಕಾಲಿಕ ಸಮರ ತಂತ್ರ ನಿಪುಣ ಮತ್ತು ತತ್ವಶಾಸ್ತ್ರಜ್ಞ ಸನ್ ತ್ಸು ಹೇಳುತ್ತಾನೆ, “ಯಶಸ್ವೀ ಸೈನ್ಯ ಮೊದಲು ಗೆಲ್ಲುತ್ತದೆ, ನಂತರವಷ್ಟೇ ರಣರಂಗ ಪ್ರವೇಶಿಸುತ್ತದೆ. ಆದರೆ ಸೋಲುವ ಸೈನ್ಯ ರಣರಂಗ ಪ್ರವೇಶಿಸಿದ ಬಳಿಕ ಗೆಲ್ಲಲು ಪ್ರಯತ್ನಿಸುತ್ತದೆ." ಈ ನಿಟ್ಟಿನಲ್ಲಿ ಭಾರತ ಈಗಾಗಲೇ ಯುದ್ಧ ಗೆಲ್ಲುವ ಎಲ್ಲಾ ಮಾನಸಿಕ ಮತ್ತು ರಾಜತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಾಗಿದೆ. ಇನ್ನೇನಿದ್ದರೂ ಭಾರತ ತನ್ನ ಗೆಲುವನ್ನು ದೃಡಪಡಿಸಿಕೊಳ್ಳುವುದಷ್ಟೇ ಬಾಕಿ ಉಳಿದಿರುವ ಕೆಲಸ.

(This article was published in Vishwavani newspaper on 05 October 2016)







      KEERTHIRAJ (keerthiraj092@gmail.com)
      Assistant Professor
International Relations and Political Science
Alliance University, Bangalore.