Political Science ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Political Science ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 31, 2017

ಲಂಡನ್ ದಾಳಿ ಮತ್ತು ಒಂಟಿ ತೋಳದ ಕಟ್ಟುಕತೆ

ಉಗ್ರ ದಾಳಿ ಪ್ರಕರಣಗಳಲ್ಲಿ ಸರಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳು 'ಒಂಟಿ ತೋಳದ ಕಟ್ಟುಕತೆ'ಯನ್ನು ಬಳಸಿ ಜವಾಬ್ದಾರಿ ಕಳೆದುಕೊಳ್ಳಬಹುದು. ಆದರೆ ದೀರ್ಘಕಾಲೀನ ಉಗ್ರ ನಿಗ್ರಹ ಪ್ರಯತ್ನಗಳಿಗೆ ಈ ಪರಿಕಲ್ಪನೆ ಶಾಪವಾಗಿ ಕಾಡುವ ಸಾಧ್ಯತೆಗಳಿವೆ
-      ಕೀರ್ತಿರಾಜ್


22 ಮಾರ್ಚ್ ಬ್ರಿಟಿಷ್ ಸಂಸತ್ತಿನ ಸನಿಹದಲ್ಲಿ ಉಗ್ರ ದಾಳಿಯೊಂದಕ್ಕೆ ಸಾಕ್ಷಿಯಾಗುತ್ತದೆ. ಲಂಡನ್ನಿನ ವೆಸ್ಟ್ ಮಿನಸ್ಟರ್ ಸೇತುವೆಯ ಬಳಿ ಜನರ ಮೇಲೆಯೇ ಕಾರೊಂದನ್ನು ಚಲಾಯಿಸಿಕೊಂಡು ಖಾಲಿದ್ ಮಸೂದ್ ಎಂಬ ಬ್ರಿಟಿಷ್ ಪ್ರಜೆಯೊಬ್ಬ ಸಂಸತ್ತಿನ ರಕ್ಷಣೆಯ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಚೂರಿಯಿಂದ ತಿವಿದು ಕೊಲ್ಲುತ್ತಾನೆ. ಒಟ್ಟಾರೆ ಈ ಪ್ರಕರಣ ಮಸೂದ್ ನನ್ನೂ ಒಳಗೊಂಡಂತೆ ನಾಲ್ಕು ಜನರ ಸಾವು ಮತ್ತು ಐವತ್ತಕ್ಕೂ ಹೆಚ್ಚು ಜನರನ್ನು ಗಾಯಾಳುಗಳನ್ನಾಗಿಸುತ್ತದೆ. ಈ ಹಿಂದೆಯೂ ವಾಹನಗಳನ್ನು ಬಳಸಿ ಲಂಡನ್ ದಾಳಿಯನ್ನೇ ಹೋಲುವಂಥಾ ಉಗ್ರ ದಾಳಿಗಳಾಗಿವೆ. ಕಳೆದ ವರ್ಷ 2016ರಲ್ಲಿ ಬರ್ಲಿನ್ ಮತ್ತು ನೀಸ್ ಗಳಲ್ಲಿ ಜನರ ಗುಂಪನ್ನು ಗುರಿಯಾಗಿರಿಸಿಕೊಂಡು ದೊಡ್ಡ ವಾಹನಗಳನ್ನು ಬಳಸಿ ಮಾರಣಹೋಮ ನಡೆಸಲಾಗಿತ್ತು. ಇಂಥಾ ದಾಳಿಗಳನ್ನು ಭಯೋತ್ಪಾದನಾ ನಿಗ್ರಹ ಪರಿಣತರು ಮತ್ತು ಮಿಲಿಟರಿ ಗುರುತಿಸುವುದು 'ಒಂಟಿ ತೋಳದ ದಾಳಿ' ( Lone Wolf Attack). ಯಾವುದೇ ಬಾಹ್ಯ ಗುಂಪಿನ ನೆರವು ಅಥವಾ ಆದೇಶಗಳಿಲ್ಲದೇ, ತನ್ನಿಂದ ತಾನೇ ಪ್ರೇರೇಪಿತನಾಗಿ ಉಗ್ರ ಕೃತ್ಯಗಳನ್ನು ಎಸಗುವ ಏಕಾಂಗಿ ವ್ಯಕ್ತಿಯನ್ನು 'ಒಂಟಿ ತೋಳ' ಎಂದೂ, ಹೆಚ್ಚಿನ ಯೋಜನೆಗಳಿಲ್ಲದೆ ಹಠಾತ್ತನೆ ನಡೆಯುವ ಈ ಪ್ರಕರಣಗಳನ್ನು 'ಒಂಟಿ ತೋಳದ ದಾಳಿ' ಎಂದೂ ಗುರುತಿಸಲಾಗುತ್ತದೆ. ಲಂಡನ್ ದಾಳಿಯೂ ಕೂಡ ಇದೇ ಹಣೆಪಟ್ಟಿ ಹಚ್ಚಿಕೊಳ್ಳಲು ಸಿದ್ಧವಾಗಿರುವಂತೆ, ಈ ಒಂಟಿ ತೋಳದ ಪರಿಕಲ್ಪನೆಗೆ ವಿರೋಧಗಳೂ ವ್ಯಕ್ತವಾಗಿವೆ. ಉಗ್ರರನ್ನು ಒಂಟಿ ತೋಳವೆಂದು ಪರಿಗಣಿಸುವ ತತ್ವದಿಂದಾಗಿ ಭಯೋತ್ಪಾದನಾ ನಿಗ್ರಹ ಇನ್ನಷ್ಟು ಹದಗೆಡಲಿದೆ ಮತ್ತು ಈ ಎಲ್ಲಾ ದಾಳಿಗಳ ಹಿಂದೆ ಬಹುಕಾಲದ ಕರಾರುವಕ್ ಯೋಜನೆ ಮತ್ತು ದೊಡ್ಡದೊಂದು ಉಗ್ರ ಜಾಲ ಕಾರ್ಯನಿರ್ವಹಿಸುತ್ತದೆ ಮತ್ತು 'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಈ ಎಲ್ಲಾ ಪುರಾವೆಗಳನ್ನು ಕಡೆಗಣಿಸುವುದರ ಮೂಲಕ ಭದ್ರತಾ ವೈಫಲ್ಯಗಳಿಗೆ ದಾರಿಮಾಡಿಕೊಡುವ ಸಾಧ್ಯತೆಗಳೂ ಇಲ್ಲದ್ದಿಲ್ಲ.

ಇತ್ತೀಚೆಗೆ ಬರ್ಮಿಂಗ್ ಹ್ಯಾಮ್ ನಲ್ಲಿ ವಾಸಿಸುತ್ತಿದ್ದ ಲಂಡನ್ ದಾಳಿಯ ದುಷ್ಕರ್ಮಿ  52 ವರ್ಷದ ಖಾಲಿದ್ ಮಸೂದ್ ನ ಮೂಲ ಹೆಸರು ಆಡ್ರಿಯಾನ್ ರಸೆಲ್ ಎಲ್ಮ್ಸ್. ನಂತರ ಇಸ್ಲಾಮಿಗೆ ಮತಾಂತರವಾಗಿದ್ದ ಈತನಿಗೆ ಮದುವೆಯಾಗಿ ಮಕ್ಕಳೂ ಇದ್ದರು. ಈ ಹಿಂದೆಯೂ ಒಂದು ಬಾರಿ ಈತ ಪೊಲೀಸ್ ವಿಚಾರಣೆಗೆ ಒಳಗಾಗಿದ್ದನಾದರೂ, ಈತನಿಂದ ಯಾವುದೇ ತೊಂದರೆಯಿಲ್ಲ ಎಂದು ಪೊಲೀಸರಿಗೆ ನಂಬಿಸುವಲ್ಲಿ ಯಶಸ್ವಿಯಾಗಿದ್ದ! ಲಂಡನ್ ದಾಳಿಯಾದ ತಕ್ಷಣ ಕಾರ್ಯಪ್ರವೃತ್ತರಾದ ಲಂಡನ್ ಪೊಲೀಸರು ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ನಲ್ಲಿ ಮೂರು ಮಹಿಳೆಯರನ್ನೂ ಒಳಗೊಂಡಂತೆ ಹನ್ನೊಂದು ಜನರನ್ನು ಬಂಧಿಸುತ್ತಾರೆ. ಇದರೊಂದಿಗೆ ಸ್ಪಷ್ಟವಾದ ವಿಚಾರವೇನೆಂದರೆ ಲಂಡನ್ ದಾಳಿಯಲ್ಲಿ ಖಾಲಿದ್ ಮಸೂದ್ ಏಕಾಂಗಿಯಾಗಿರಲಿಲ್ಲ. ಬರ್ಮಿಂಗ್ ಹ್ಯಾಮ್, ಇಸ್ಲಾಮಿಕ್ ಸ್ಟೇಟ್ ಉಗ್ರರ ನೇಮಕಾತಿ ಪ್ರದೇಶವೆಂದು ಕುಖ್ಯಾತಿ ಪಡೆದಿದೆ. ಖಾಲಿದ್ ಮಸೂದ್ ಈ ಹಿಂದೆ ವಾಸವಾಗಿದ್ದ ಲಂಡನ್ನಿನ ಉತ್ತರದಲ್ಲಿರುವ ಲ್ಯುಟನ್ ಪಟ್ಟಣದಲ್ಲೂ ಉಗ್ರರ ಪ್ರಭಾವ ಹೇರಳವಾಗಿದೆ. ಲಂಡನ್ ದಾಳಿಯಾದ ಕೆಲವೇ ಗಂಟೆಗಳ ಬಳಿಕ ಅನ್ಸಾರ್ ಅಲ್ ಮುಜಾಹಿದ್ದೀನ್ ಗುಂಪು ತನ್ನ ಆನ್ ಲೈನ್ ಫೋರಮ್ ನಲ್ಲಿ ಈ ಕೃತ್ಯದ ಹೊಣೆ ಹೊತ್ತುಕೊಳ್ಳುತ್ತದೆ. ಈ ಗುಂಪು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಗುರುತಿಸಿಕೊಂಡಿದೆಯಷ್ಟೇ ಅಲ್ಲದೇ ದಾಳಿಯಾದ ಮರುದಿನ ಇಸ್ಲಾಮಿಕ್ ಸ್ಟೇಟ್ ನ ವಾರ್ತಾ ವಿಭಾಗ 'ಅಮಾಕ್' ಖಾಲಿದ್ ಮಸೂದ್ ನನ್ನು "ಇಸ್ಲಾಮಿಕ್ ಸ್ಟೇಟ್ ನ ಯೋಧ" ಎಂದು ಗುರುತಿಸಿತ್ತು. ಹೀಗೆ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಪರಿಭಾವಿಸಿದ ಕ್ಷಣದಲ್ಲೇ ಆ ಪ್ರಕರಣ ಹಳ್ಳ ಹಿಡಿಯುತ್ತವೆ. ಇದೇ ಮಾದರಿಯಲ್ಲಿ ಇತ್ತೀಚಗೆ ನಡೆದ ಬರ್ಲಿನ್ ಮತ್ತು ನೀಸ್ ದಾಳಿಗಳನ್ನು ಗಮನಿಸಿದಲ್ಲಿ ಈ ಪ್ರಕರಣದ ರಹಸ್ಯ ಚುಕ್ಕೆಗಳನ್ನು ಜೋಡಿಸುವುದು ಕಷ್ಟಸಾಧ್ಯವೇನಲ್ಲ.
Image may contain: 1 person19 ಡಿಸೆಂಬರ್ 2016ರಂದು ಅನಿಸ್ ಅಮ್ರಿ ಎಂಬ ಟ್ಯುನಿಸಿಯನ್ ಉಗ್ರನೊಬ್ಬ ಟ್ರಕ್ ಒಂದನ್ನು ಬರ್ಲಿನ್ ನ ಮಾರುಕಟ್ಟೆಯೊಂದಕ್ಕೆ ನುಗ್ಗಿಸಿ ಹನ್ನೆರಡು ಜನರ ಸಾವಿಗೆ ಕಾರಣನಾಗಿದ್ದ. ಮೇಲ್ನೋಟಕ್ಕೆ ಇದು ಏಕಾಂಗಿಯಾಗಿ ಮಾಡಿದ ಕೃತ್ಯ ಅಥವಾ ಒಂಟಿ ತೋಳದ ದಾಳಿಯಂತಿದ್ದರೂ, ವಾಸ್ತವವಾಗಿ ಆ ದಾಳಿಯ ಹಿಂದೆ ಇಟಲಿ ಮೂಲದ ಇಸ್ಲಾಮಿಕ್ ಸ್ಟೇಟ್ ಮತ್ತು ಸ್ಥಳೀಯ ಉಗ್ರ ಜಾಲಗಳ ವ್ಯವಸ್ಥಿತ ಸಂಚಿತ್ತು! ದಾಳಿಯ ನಂತರದಲ್ಲಿ ಸಿಸಿಟಿವಿ ಕ್ಯಾಮರದಲ್ಲಿ ಅಮ್ರಿ ತನ್ನ ತೋರುಬೆರಳನ್ನು ತೋರಿಸಿ, ಇಸ್ಲಾಮಿಕ್ ಸ್ಟೇಟ್ ನ ವಿಶಿಷ್ಟ ಸಂಕೇತವನ್ನು ಪ್ರದರ್ಶಿಸಿದ್ದು ಸ್ಪಷ್ಟವಾಗಿತ್ತು. ದಾಳಿಯಾಗಿ ನಾಲ್ಕು ದಿನಗಳ ನಂತರ ಡಿಸೆಂಬರ್ 23ರಂದು ಮಿಲಾನ್ ನಗರದಲ್ಲಿ ಅಮ್ರಿ ಪೊಲೀಸ್ ಗುಂಡಿಗೆ ಬಲಿಯಾಗುತ್ತಾನೆ. ಇದಾದ ಬಳಿಕ ಬರ್ಲಿನ್ ದಾಳಿ ಒಂಟಿ ತೋಳದ ದಾಳಿಯಲ್ಲ ಎನ್ನುವುದು ರುಜುವಾತಾಗುತ್ತಾ ಸಾಗುತ್ತದೆ. ಅನಿಸ್ ಅಮ್ರಿಯ ಸಾವಿನ ನಂತರ ಇಸ್ಲಾಮಿಕ್ ಸ್ಟೇಟ್, ಆತ ತಮ್ಮ ಖಲೀಫ ಅಲ್ ಬಗ್ದಾದಿಗೆ ವಿಧೇಯನಾಗಿದ್ದ ಎಂಬ ಪುರಾವೆ ಒದಗಿಸುವಂಥ ವಿಡಿಯೋ ಬಿಡುಗಡೆ ಮಾಡುತ್ತದೆ. ಮತ್ತು ಅನಿಸ್ ಅಮ್ರಿ 'ಉಮ್ಮಾ'ಗೋಸ್ಕರ ಹುತಾತ್ಮನಾದ ವ್ಯಕ್ತಿ ಎಂದು ಬಿಂಬಿಸುತ್ತದೆ(ಜಿಹಾದಿಗಳು ಮತ್ತು ಇಸ್ಲಾಮಿಸ್ಟ್ ಗಳು 'ಮುಸ್ಲಿಂ ರಾಷ್ಟ್ರ'ಕ್ಕೆ ಸಮಾನಾರ್ಥಕವಾಗಿ 'ಉಮ್ಮಾ' ಎಂಬ ಪದ ಬಳಸುತ್ತಾರೆ). ಬರ್ಲಿನ್ ನಲ್ಲಿದ್ದ ಮಸೀದಿಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ನೇಮಕಾತಿ ನಡೆಯುತ್ತದೆ ಎಂಬ ಸಂದೇಹದ ಮೇಲೆ ಜರ್ಮನ್ ಅಧಿಕಾರಿಗಳು ಆ ಮಸೀದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಬರ್ಲಿನ್ ನಲ್ಲಿ ರಕ್ತದೋಕುಳಿ ನಡೆಸಿದ ಅಮ್ರಿ ದಾಳಿಗೆ ಮೊದಲು ಈ ಮಸೀದಿಗೆ ಭೇಟಿ ನೀಡಿದ್ದ. ಇಟಲಿಯಲ್ಲೂ ಕೂಡ ಅನೇಕ ಟ್ಯೂನಿಶಿಯನ್ ಪ್ರಜೆಗಳನ್ನು ಗಡಿಪಾರು ಮಾಡಲಾಗುತ್ತದೆ. ಈ ರೀತಿಯಾಗಿ ಬರ್ಲಿನ್ ದಾಳಿ ಒಂದು ವ್ಯವಸ್ಥಿತ ದಾಳಿಯಾಗಿತ್ತು ಎಂಬ ಸತ್ಯ ಬೆಳಕಿಗೆ ಬರುತ್ತದೆ.

14 ಜೂನ್ , 2016ರಂದು ಫ್ರಾನ್ಸಿನ ನೀಸ್ ನಗರ ಫ್ರೆಂಚರ ರಾಷ್ಟ್ರೀಯ ಸಂಭ್ರಮಾಚರಣೆ ಕಾರಾಗ್ರಹ ದಿನಾಚರಣೆಯ ( Bastille Day) ಸಂಭ್ರಮದಲ್ಲಿದ್ದಾಗ, ಮಹಮ್ಮದ್ ಲಾಹೊಜ್ ಬೌಹ್ಲೆಲ್ ಎಂಬ ಉಗ್ರನೊಬ್ಬ ಜನರ ಮೇಲೆ ಟ್ರಕ್ ಅನ್ನು ಅಡ್ಡಾದಿಡ್ಡಿ ಚಲಾಯಿಸುತ್ತಾನೆ. 84 ಜನ ಸಾವನ್ನಪ್ಪಿದರೆ 400 ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರುತ್ತಾರೆ. ಫ್ರೆಂಚ್ ಪೊಲೀಸರು ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸುತ್ತಾರೆ. ಅದರೆ ಐದು ವಾರಗಳ ನಂತರ ಫ್ರಾಂಕಾಯ್ಸ್ ಮಾಲಿನ್ಸ್, ನೀಸ್ ದಾಳಿಯ ಹಿಂದೆ ಜಿಹಾದಿಸ್ಟ್ ಗುಂಪುಗಳು ಹಲವು ತಿಂಗಳುಗಳು ವ್ಯವಸ್ಥಿತವಾಗಿ ಕಾರ್ಯವೆಸಗಿದ್ದನ್ನು ಸಾಕ್ಷಿ ಸಮೇತ ರುಜುವಾತುಪಡಿಸಿದ್ದರು. ಇದಾದ ನಂತರ ಈ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್, ದಾಳಿಗೆ ಕಾರಣನಾದ ದುಷ್ಕರ್ಮಿ ತನ್ನ ತೋರುಬೆರಳನ್ನು ಮೇಲೆತ್ತಿ ಇಸ್ಲಾಮಿಕ್ ಸ್ಟೇಟ್ ಸಂಕೇತ ಪ್ರದರ್ಶಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಫ್ರೆಂಚ್ ಸರಕಾರ ಮತ್ತು ಪೊಲೀಸರು ಆತುರದಿಂದ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸಿದ್ದರಾದರೂ ಈ ಮಾರಣಹೋಮ ಒಬ್ಬ ವ್ಯಕ್ತಿಯ ಕೆಲಸವಾಗಿರಲಿಲ್ಲ ಎನ್ನುವುದು ತಡವಾಗಿಯಾದರೂ ಅರಿವಾಗುತ್ತದೆ.

ಇಷ್ಟಕ್ಕೂ ಆಯಾ ದೇಶದ ಸರಕಾರ, ಪೊಲೀಸ್, ಗುಪ್ತಚರ ಅಥವಾ ಇನ್ನಿತರ ಭದ್ರತಾ ಪಡೆಗಳು, ಇಂಥ ದಾಳಿಗಳು ನಡೆದ ಕೂಡಲೇ  'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಕಟ್ಟಲು ಕಾರಣಗಳೂ ಇವೆ. ಇಂಥ ದಾಳಿಗಳಾದ ಕೂಡಲೇ, ಭದ್ರತಾ ವಿಫಲತೆ, ಗುಪ್ತಚರ ವೈಫಲ್ಯ ಮೊದಲಾದ ಪ್ರಶ್ನೆಗಳ ಸುರಿಮಳೆಯಿಂದಾಗಿ ಪೇಚಿಗೆ ಸಿಲುಕುವ ಸರಕಾರಕ್ಕೆ ಹುಲ್ಲುಕಡ್ಡಿಯಂತೆ ಆಸರೆಯಾಗುವುದು ಇದೇ 'ಒಂಟಿ ತೋಳದ ದಾಳಿ ತತ್ವ'! ಉದಾಹರಣೆಗೆ ಲಂಡನ್ ದಾಳಿಯಾದ ನಂತರ ಬ್ರಿಟಿಷ್ ರಕ್ಷಣಾ ಮಂತ್ರಿ ಮೈಕೆಲ್ ಫಾಲನ್ ಬಿಬಿಸಿಗೆ ಉತ್ತರಿಸಿದ ರೀತಿ, "ಈ ದಾಳಿ ಒಂಟಿ ತೋಳದ ದಾಳಿ, ವಾಹನ, ಚೂರಿ ಅಥವಾ ಇನ್ನಿತರ ದಿನನಿತ್ಯ ಸಾಮಾನ್ಯವಾಗಿ ಬಳಸುವ ವಸ್ತುಗಳನ್ನು ಬಳಸಿಕೊಂಡು ಮಾಡುವ ದಾಳಿಗಳನ್ನು ಊಹಿಸುವುದು ಕಷ್ಟಸಾಧ್ಯ..." ಒಂಟಿ ತೋಳದ ದಾಳಿ ಪ್ರಕರಣಗಳು ಹೆಚ್ಚಿನ ಯೋಜನೆಯಿಲ್ಲದೆ, ಹಠಾತ್ತನೆ ಸಂಭವಿಸುವುದರಿಂದ, ಇದನ್ನು ತಡೆಯಲು ಗುಪ್ತಚರ ಮಾಹಿತಿ ಮತ್ತಿನ್ನಿತರ ಭದ್ರತಾ ವ್ಯವಸ್ಥೆಗಳನ್ನು ಯೋಜಿಸುವುದು ಸಾಧ್ಯವಿಲ್ಲ ಎಂಬ ತರ್ಕದ ಆಧಾರದಲ್ಲಿ ಸರಕಾರ ಹೆಚ್ಚಿನ ಶ್ರಮವಿಲ್ಲದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು. ಈ ವಾದದಲ್ಲಿ ಸತ್ಯಾಂಶವಿರುವುದು ನಿಜವೇ ಆದರೂ, ಇತ್ತೀಚಿನ ಉಗ್ರ ಪ್ರಕರಣಗಳಲ್ಲಿ ಆಯಾ ದೇಶಗಳ ಸರಕಾರಗಳು ತಮ್ಮ ಭದ್ರತಾ ವೈಫಲ್ಯದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ 'ಒಂಟಿ ತೋಳದ ದಾಳಿ'ಯ ಕಟ್ಟುಕತೆ ಅಪ್ಯಾಯಮಾನವಾಗುತ್ತಿರುವುದು ಸುಳ್ಳಲ್ಲ.

ಸರಕಾರಗಳು ಮಾತ್ರವಲ್ಲದೇ ಭಯೋತ್ಪಾದಕ ಸಂಘಟನೆಗಳೂ ಈ 'ಒಂಟಿ ತೋಳ'ದ ಪರಿಕಲ್ಪನೆಯ ಪರವಾಗಿದ್ದಾರೆ. ಉಗ್ರರ ಲೆಕ್ಕಾಚಾರದ ಪ್ರಕಾರ, ಒಂಟಿ ತೋಳದ ದಾಳಿಯ ಪರಿಕಲ್ಪನೆಯನ್ನು ಜಗತ್ತು ನಂಬಿರುವ ತನಕ, ಪ್ರತಿ ಮುಸ್ಲಿಂ ವ್ಯಕ್ತಿಯನ್ನು ಅನುಮಾನದಿಂದ ನೋಡಲಾಗುತ್ತದೆ. ಈ ಮೂಲಕ ಉಗ್ರರಲ್ಲದ ಮುಸ್ಲಿಮರೂ ಕೂಡ ಮುಖ್ಯವಾಹಿನಿ ಸಮಾಜದೊಂದಿಗೆ ಬೆರೆಯಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಮೂಲಕ ಇಸ್ಲಾಮಿಕ್ ಸ್ಟೇಟ್ ನಂಥಾ ಸಂಘಟನೆಗಳು ನಿರಾತಂಕವಾಗಿ ತಮ್ಮ ದುರುದ್ದೇಶಗಳನ್ನು ಸಾಧಿಸಿಕೊಳ್ಳಬಹುದು! ಮಾಧ್ಯಮಗಳು ಅಥವಾ ಇನ್ಯಾವುದೋ ಒತ್ತಡಕ್ಕೆ ಮಣಿದು ಒಂಟಿ ತೋಳದ ಕಟ್ಟುಕತೆಯನ್ನು ಮುಂದಿಡುವ ಅನಿವಾರ್ಯತೆ ಸರಕಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಿಗಿವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಈ ಪ್ರವೃತ್ತಿ ಮುಂದುವರಿದರೆ ತೋಳ ಬಂತು ತೋಳ ಕಥೆಯಂತೆಯೇ, ಇವತ್ತು ವಿಶ್ವದಾದ್ಯಂಥ ಭದ್ರತಾ ವಲಯದಲ್ಲಿ ಪ್ರಚಲಿತದಲ್ಲಿರುವ ಒಂಟಿ ತೋಳದ ಕಟ್ಟುಕತೆ ಮುಂದೊಂದು ದಿನ ದುಬಾರಿಯಾಗಿ ಪರಿಗಣಿಸಬಹುದು.




(This article was published in Hosadigantha Newsapaper on 29 March 2017)

Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶುಕ್ರವಾರ, ಫೆಬ್ರವರಿ 10, 2017

ಸ್ಟೀವ್ ಬ್ಯಾನನ್ ಬಾಯಲ್ಲಿ ಭಗವದ್ಗೀತೆ!

ಹಿಂದೂ ಪುರಾಣಗಳು, ಮಹಾಕಾವ್ಯಗಳು ಇನ್ನಿತರ ಧರ್ಮ ಗ್ರಂಥಗಳು ಜಗತ್ತಿನಾದ್ಯಂಥ ಕುತೂಹಲ ಮೂಡಿಸಿವೆ. ಇತ್ತೀಚೆಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಮುಖ್ಯ ಸಮರತಾಂತ್ರಿಕ ಸಲಹೆಗಾರರಾಗಿರುವ ಸ್ಟೀವ್ ಬ್ಯಾನನ್ ಭಗವದ್ಗೀತೆಯೆ ಕಡೆಗೆ ತಮ್ಮ ಒಲವು ವ್ಯಕ್ತಪಡಿಸಿದ್ದು, ವಿಶ್ವ ರಾಜಕೀಯದೆಡೆಗಿನ ಅವರ ದೃಷ್ಟಿಕೋನವೂ ಗೀತೆಯ ಧರ್ಮಯುದ್ಧವನ್ನು ಪ್ರತಿನಿಧಿಸುತ್ತಿದೆ. ಹಾಗೆ ನೋಡಿದಲ್ಲಿ ಹಿಂದೂ ಧರ್ಮಗ್ರಂಥಗಳು ವಿದೇಶೀಯರನ್ನು ಆಕರ್ಷಿಸಿದ್ದು ಇದೇ ಮೊದಲ ಬಾರಿಯೇನಲ್ಲ. ಕಳೆದೆರಡು ಶತಮಾನಗಳಿಂದ ಪಾಶ್ಚಾತ್ಯ ವಿಜ್ಞಾನಿಗಳು ಮತ್ತು ಚಿಂತಕರನ್ನು  ಆಕರ್ಷಿಸಿದ ಹೆಗ್ಗಳಿಕೆ ಈ ವಿಶಿಷ್ಟ ಗ್ರಂಥಗಳಿಗಿವೆ. ಬ್ರಿಟನ್ನಿನ ಖ್ಯಾತ ತತ್ವಶಾಸ್ತ್ರಜ್ಞ  ಆಲ್ಡಸ್ ಹಕ್ಸ್‌ಲಿ ತನ್ನ ಕೃತಿ Brave New World ಬರೆಯುವಾಗ ಆತನ ತಲೆ ತುಂಬಾ ಭಗವದ್ಗೀತೆಯೇ ತುಂಬಿತ್ತು. ನಾಝಿ ಜರ್ಮನಿಯ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದ ಹೆನ್ರಿಚ್ ಹಿಮ್ಲರ್ ಕೂಡ ತಾನು ಗೀತೆಯೆ ಉಪದೇಶಗಳಿಂದ ಪ್ರಭಾವಿತನಾಗಿದ್ದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಇವಿಷ್ಟೇ ಅಲ್ಲದೇ 'ಲಾಸ್ ಅಲಮೊಸ್'ನ ಪ್ರಯೋಗಾಲಯದಲ್ಲಿ ವಿಶ್ವದ ಪ್ರಪ್ರಥಮ ಅಣ್ವಸ್ತ್ರವನ್ನು ಪರೀಕ್ಷಿಸಿದ ನಂತರ ರಾಬರ್ಟ್ ಒಪೆನ್ಹೈಮರ್ ಉದ್ಗರಿಸಿದ್ದು, " “Now I am become Death, the destroyer of worlds." ಈ ಮಾತುಗಳ ಹಿಂದಿನ ಪ್ರೇರಣೆ ಕೃಷ್ಣನ ವಿಶ್ವರೂಪ ದರ್ಶನ, "ನಾನೇ ಕಾಲ. ಎಲ್ಲಾ ಲೋಕಗಳ ಮಹಾನ್ ಕ್ಷಯಕಾರಿ..." (ಭಗವದ್ಗೀತೆ 11.32)

ಮಹಾಕಾವ್ಯ ಮಹಾಭಾರತದ ಒಂದು ಭಾಗವಾಗಿದ್ದರೂ ಭಗವದ್ಗೀತೆ ಇವತ್ತಿಗೆ ತನ್ನದೇ ಆದ ಪ್ರತ್ಯೇಕ ಅಸ್ಮಿತೆಯನ್ನೂ ಜನಮಾನಸದಲ್ಲಿ ಸೃಷ್ಟಿಸಿದೆ. ಮಹಾಭಾರತದ ಹೃದಯಭಾಗವಾದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಶತ್ರುಪಾಳಯದಲ್ಲಿ ತಮ್ಮವರನ್ನೇ ಕಂಡು ಕರಗಿ ನೀರಾಗಿ ಯುದ್ಧ ಬೇಡ ಎಂದಾಗ ಸಾರಥಿಯಾಗಿದ್ದ ಕೃಷ್ಣ ಅರ್ಜುನನಿಗೆ ಯುದ್ಧಧರ್ಮ ಮಾತ್ರವಲ್ಲದೇ ಜೀವನ ಧರ್ಮ ಸಾರವನ್ನೇ ತಿಳಿಸಿಕೊಡುತ್ತಾನೆ. ಪ್ರಪಂಚದಲ್ಲಿ ಧರ್ಮವನ್ನು ನೆಲೆಗೊಳಿಸಲು ಶ್ರೀಕೃಷ್ಣ ಅರ್ಜುನನ ಕಣ್ತೆರಿಸಿದ ರೀತಿ, ಇವತ್ತಿಗೆ ಜಗತ್ತಿಗೆ ದಾರಿ ದೀಪವಾಗುವ ಭಗವದ್ಗೀತೆಯ ರೂಪದಲ್ಲಿ ನಮ್ಮ ಮುಂದಿದೆ. ಎಲ್ಲಾ ಬಂಧಗಳಿಗಿಂತ ಧರ್ಮ ಸಂಸ್ಥಾಪನೆ ಮುಖ್ಯ ಎಂದ ಗೀತೆ ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮದಲ್ಲೂ ಅನೇಕ ಪ್ರಭಾವಿ ವ್ಯಕ್ತಿತ್ವಗಳನ್ನು ಪ್ರಭಾವಿಸಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮುಖ್ಯ ಸಮರತಾಂತ್ರಿಕ ಸಲಹೆಗಾರ ಸ್ಟೀಫನ್ ಕೆವಿನ್ ಸ್ಟೀವ್ ಬ್ಯಾನನ್!

Image may contain: 1 personಬ್ಯಾನನ್ ಬಹಳಷ್ಟು ಹಿಂದಿನಿಂದಲೂ 'ಧರ್ಮ' ಎಂಬ ಪರಿಕಲ್ಪನೆಯ ಕುರಿತಾಗಿ ತಮ್ಮ ಆಪ್ತವಲಯದಲ್ಲಿ ಬಹಳಷ್ಟು ಚರ್ಚಿಸುತ್ತಿದ್ದರು. ಧರ್ಮ ಎಂಬ ಸಂಸ್ಕೃತ ಪದಕ್ಕೆ ಆಂಗ್ಲ ಭಾಷೆಯಲ್ಲಿ ಪರಿಪೂರ್ಣವಾಗಿ ಹೊಂದುವಂತಾ ಪರ್ಯಾಯ ಪದವಿಲ್ಲ. ಧರ್ಮಕ್ಕೊಂದು ಪರ್ಯಾಯ ಪದ ಹುಡುಕುವುದು ಕಷ್ಟ ಸಾಧ್ಯವೇ ಸರಿ. ಧರ್ಮ ಕೆಲವೊಮ್ಮೆ ಸರಿಯಾದದ್ದನ್ನೇ ಮಾಡುವುದು ಎಂಬರ್ಥ ನೀಡಿದರೆ, ಕೆಲವೊಂದು ಸಂದರ್ಭದಲ್ಲಿ ಅದೊಂದು ಕರ್ತವ್ಯ, ಇನ್ನೊಮ್ಮೆ ನಾವು ಮಾಡುವ ಕೆಲಸಕ್ಕೆ ಒದಗಿಸುವ ನ್ಯಾಯದಂತೆ ಕಾಣುತ್ತದೆ. ಆದರೆ ಇದ್ಯಾವುದೂ ಧರ್ಮ ಎಂಬ ಪದದ ಮೂಲ ಅರ್ಥಕ್ಕೆ ಸರಿಸಾಟಿಯಾಗಲಾರದು ಎನ್ನುವುದೂ ಅಷ್ಟೇ ಸತ್ಯ. ಈ ಮೇಲೆ ವಿವರಿಸಿದ ಸಾಲುಗಳೆಲ್ಲವನ್ನು ಒಳಗೊಂಡು, ಇವೆಲ್ಲವುಗಳಿಗೂ ಮೀರಿದ ಪರಿಕಲ್ಪನೆಯೇ ಧರ್ಮ. ಪ್ರತಿಯೊಬ್ಬ ವ್ಯಕ್ತಿಗೂ ಆತನ ಸ್ವಭಾವ ಮತ್ತು ಸಾಮಾಜಿಕ ಬದ್ಧತೆಗಳಿಗೆ ಅನುಗುಣವಾಗುವಂತೆ ಆತನದ್ದೇ ಆದ ಧರ್ಮವೊಂದಿದ್ದು ಅದನ್ನು ಪಾಲಿಸಬೇಕಾಗುತ್ತದೆ. ಗೀತೆಯ ಹದಿನೆಂಟನೇ ಅಧ್ಯಾಯದ 47ನೇ ಶ್ಲೋಕ ಪರಧರ್ಮವನ್ನು ಸ್ವೀಕರಿಸಿ ಅದನ್ನು ಪರಿಪೂರ್ಣವಾಗಿ ನಿಭಾಯಿಸುವುದಕ್ಕಿಂತ, ಸ್ವಧರ್ಮವನ್ನು ಅಪರಿಪೂರ್ಣವಾಗಿ ಮಾಡುವುದೇ ಶ್ರೇಯಸ್ಕರ. ತನ್ನ ಸ್ವಭಾವಕ್ಕನುಗುಣವಾಗಿ ವಿಧಿಸಿದ ಕರ್ತವ್ಯಗಳನ್ನು ಮಾಡುವುದು ಉತ್ತಮ ಎನ್ನುತ್ತದೆ. ಈ ತರ್ಕ ಬ್ಯಾನನ್ ಜೀವನದಲ್ಲಿ ಬಹಳಷ್ಟು ಪ್ರಭಾವಿಸಿತ್ತು. ನೀವು ಯಾವುದೇ ಹಿಂದೂ       ಧರ್ಮ ಗ್ರಂಥವನ್ನು ಗಮನಿಸಿದರೂ ಅಲ್ಲೊಂದು ಸಾಮಾನ್ಯ ಅಂಶವಿದೆ. ಅದೇನೆಂದರೆ, ಎಲ್ಲಾ ಗ್ರಂಥಗಳಲ್ಲೂ ಎಲ್ಲಾ ವ್ಯಕ್ತಿಗಳೂ ಒಂದೋ ಧರ್ಮವನ್ನು ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುತ್ತಿರುತ್ತಾರೆ. ಈ ಹೋರಾಟ ಸಾಮಾಜಿಕ ನ್ಯಾಯ, ರಾಜಕೀಯ ಹಿತಾಸಕ್ತಿ ಅಥವಾ ಮಿಲಿಟರಿ ಸಂಘರ್ಷದ ರೂಪದಲ್ಲೂ ಇರಬಹುದು. ಈ ಎಲ್ಲಾ ವಿಚಾರಗಳು ಬ್ಯಾನನ್ ವೈಚಾರಿಕತೆಯ ಪ್ರತಿ ಮಗ್ಗುಲಲ್ಲೂ ಕಾಣಸಿಗುತ್ತದೆ.

ಸ್ಟೀವನ್ ಬ್ಯಾನನ್ ಪ್ರಕಾರ ವಿಶ್ವ ಅದರಲ್ಲೂ ಮುಖ್ಯವಾಗಿ ಪಾಶ್ಚಾತ್ಯ ಸಮಾಜ ನೈತಿಕ ಮತ್ತು ಆರ್ಥಿಕ ಅಧಃಪತನದತ್ತ ಸಾಗುತ್ತಿದೆ. ಬ್ಯಾನನ್ ಗಮನಿಸಿದ ಪ್ರಕಾರ ಸಾಂಪ್ರದಾಯಿಕ ಮೌಲ್ಯಗಳ ಕೊರೆತೆಯಿಂದ ಪಾಶ್ಚಾತ್ಯರು ಎಲ್ಲವನ್ನು ಕಳೆದುಕೊಂಡು ಅಧೋಗತಿಯತ್ತ ಸಾಗುತ್ತಿದ್ದಾರೆ ಎಂದು ವಾದಿಸುತ್ತಿದ್ದ ಬ್ಯಾನನ್, 'ಧರ್ಮ'ದ ಪರಿಕಲ್ಪನೆಯನ್ನು ತಮ್ಮ ವಾದಗಳಲ್ಲಿ ಬಳಸಿಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಧರ್ಮದ ಕೊರತೆಯೇ ಪಶ್ಚಿಮಾತ್ಯರು ಇವತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಮತ್ತು ಸಮಾಜದಲ್ಲಿ ಮತ್ತು ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಜನರ ಪ್ರತಿಕ್ರಿಯೆಗಳ ಬಗೆಗೂ ಬ್ಯಾನನ್ ಕಳವಳ ವ್ಯಕ್ತಪಡಿಸುತ್ತಾರೆ. ಮಹಾಭಾರತದ ಅತ್ಯಂತ ಮುಖ್ಯ ಭಾಗ ಕುರುಕ್ಷೇತ್ರ ಯುದ್ಧ ಬರಿಯ ಪಾಂಡವ-ಕೌರವರ ನಡುವಿನ ತಿಕ್ಕಾಟಕ್ಕಷ್ಟೇ ಸೀಮಿತವಾಗದೆ ಶತ ಶತಮಾನಗಳ ಆಧ್ಯಾತ್ಮಿಕ ಆದರ್ಶಗಳಿಗೂ ಸಾಕ್ಷಿಯಾಗಿ ನಿಲ್ಲುತ್ತದೆ. ಧರ್ಮದ ಬಗೆಗಿನ ಸ್ಪಷ್ಟ ನಿದರ್ಶನಗಳು, ಜನಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸುವ ಹೆಗ್ಗಳಿಕೆ ಮಹಾಭಾರತಕ್ಕೆ ಸಲ್ಲುತ್ತದೆ.

ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಂತೆ "ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ನಾನು ಸ್ವಯಂ ಅವತಾರ ಮಾಡುತ್ತೇನೆ. ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶ ಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ." ಭಗವದ್ಗೀತೆಯಲ್ಲಿರುವ ಈ ಕಾಲಜ್ಞಾನದ ಜಗದ್ವಿಖ್ಯಾತ ಸಾಲುಗಳ ಪ್ರತಿಫಲನ ಬ್ಯಾನನ್ ಚಿಂತನೆಗಳಲ್ಲಿ ಮೇಲಿಂದ ಮೇಲೆ ಕಾಣಸಿಗುತ್ತವೆ.  ಬ್ಯಾನನ್ ಹೇಳಿರುವಂತೆ, " ನಾವು ಕ್ರೂರ ಮತ್ತು ರಕ್ತಸಿಕ್ತ ಯುದ್ಧವೊಂದರ ಪ್ರಾರಂಭಿಕ ಹಂತದಲ್ಲಿದ್ದೇವೆ. ನಮ್ಮ ನಂಬಿಕೆಗಳಿಗೋಸ್ಕರ ಈ ಹೋರಾಟ. ನಾವು 2,500 ವರ್ಷಗಳಿಂದ ಕಟ್ಟಿಕೊಂಡದ್ದೆಲ್ಲವನ್ನು ನಾಶಮಾಡಬಲ್ಲ ಹೊಸ ಕ್ರೌರ್ಯವೊಂದರ ವಿರುದ್ಧ ನಾವು ಹೋರಾಡಬೇಕಾಗಿದೆ"ಓರ್ವ ವ್ಯಕ್ತಿ ತನ್ನನ್ನು ತಾನು ಒಂದು ಮಹತ್ತರ ಉದ್ದೇಶದ ಸಾಧನೆಯ ಆಯುಧವಾಗಿ ಪರಿಗಣಿಸಿಕೊಳ್ಳುವ ಈ ಮನಸ್ಥಿತಿ ಭಗವದ್ಗೀತೆಯ ಮೂಲ ವಿಷಯವನ್ನು ನೆನಪಿಸುವಂತಿದೆ. ಸಂಬಂಧಿಕರ ಹತ್ಯೆಯ ಬಗೆಗೆ ಅರ್ಜುನನ ಅನುಮಾನಕ್ಕೆ ಉತ್ತರಿಸುವ ಕೃಷ್ಣ, ನಿನ್ನ ಶತ್ರುಗಳು ಈಗಾಗಲೇ ನನ್ನಿಂದ ನಾಶವಾಗಿದ್ದಾರೆ, ನೀನು ಈ ಯುದ್ಧದಲ್ಲಿ ಒಂದು ನಿಮಿತ್ತ ಮಾತ್ರ ಎನ್ನುವಾಗ, ನಿನ್ನ ಕರ್ಮವನ್ನು ಮಾಡು ಫಲಾಫಲಗಳನ್ನು ನನಗೆ ಬಿಡು ಎಂದಾಗಲೂ ಒಬ್ಬ ವ್ಯಕ್ತಿಯನ್ನು ವಿಶ್ವವ್ಯಾಪಿ ಮಹಾನ್ ಉದ್ದೇಶವೊಂದರ ಭಾಗವನ್ನಾಗಿಸುವ ಪ್ರಯತ್ನವನ್ನು ಗಮನಿಸಬಹುದು.

ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿರುವ ವಿಶ್ವವ್ಯಾಪಿ ರಣರಂಗದ ಪರಿಕಲ್ಪನೆ ಬ್ಯಾನನ್ ಚಿಂತನೆಗಳಲ್ಲಿ ಪುನರಾವರ್ತಿತವಾಗುತ್ತಿದೆ. ಬ್ಯಾನನ್ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಪದೇ ಪದೇ ವಿಶ್ವರಣರಂಗದಲ್ಲಿ ತನ್ನನ್ನು ತಾನು ಧರ್ಮವನ್ನು ರಕ್ಷಿಸುವ ಯೋಧನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಧರ್ಮದ ಜೊತೆ ಜೊತೆಗೆ ಹಂಟಿಗ್ಟನ್ ರ  ನಾಗರಿಕತೆಗಳ ಸಂಘರ್ಷವೂ ಬ್ಯಾನನ್ ಯೋಜನೆಗಳ ತಳಹದಿ ರೂಪಿಸುತ್ತಿವೆ. ಸ್ಟೀವ್ ಬ್ಯಾನನ್ ಭಗವದ್ಗೀತೆಯಿಂದ ಪ್ರಭಾವಿತನಾಗಿರುವ ಪರಿ, ಜಾಗತಿಕ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಹೊಸ ದೃಷ್ಟಿಕೋನದೊಂದಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಹುಟ್ಟಿಸಿದೆ.

(This article was published in Hosa Digantha Newsapaper on 9 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

'ರಾ' ಹದ್ದಿನ ಕಣ್ಣಲ್ಲಿ ಪಾಕ್ ಅಣ್ವಸ್ತ್ರ ಯೋಜನೆ


ರಾಷ್ಟ್ರಗಳ ನಡುವಿನ ಶಕ್ತಿ ರಾಜಕೀಯದಲ್ಲಿ ಸ್ವಂತ ಶಕ್ತಿ ಎಷ್ಟು ಪ್ರಮುಖವೋ, ಶತ್ರುವಿನ ಬಲಾಬಲಗಳ ಪರಿಚಯ ಅಷ್ಟೇ ಮುಖ್ಯ. ಇದೇ ಕಾರಣಕ್ಕಾಗಿ, ಪ್ರತೀ ದೇಶದಲ್ಲೂ ಅವರದ್ದೇ ಆದ ಆದ ಗುಪ್ತಚರ ದಳಗಳಿವೆ. ಒಂದು ರೀತಿಯಲ್ಲಿ ಎಲ್ಲಾ ರಾಷ್ಟ್ರಗಳೂ ತಮ್ಮ ವೈರಿಗಳು ಮಾತ್ರವಲ್ಲದೇ ಮಿತ್ರರ ಮೇಲೂ ಒಂದು ರೀತಿಯ ಛಾಯಾ ಯುದ್ಧದಲ್ಲಿ ತೊಡಗಿರುತ್ತವೆ. ಇತರ ದೇಶಗಳ ಸಣ್ಣ ಪುಟ್ಟ ರಹಸ್ಯಗಳನ್ನೂ ತಮ್ಮ ದೇಶದ ಪರವಾಗಿ ಬಳಸಿಕೊಳ್ಳುವ ಗುಪ್ತಚರ ಸಂಸ್ಥೆಗಳ ಉದಾಹರಣೆಗಳಿದ್ದಂತೆ, ಈ ಸಂಸ್ಥೆಗಳ ಒಂದು ಕ್ಷಣದ ಮೈಮರೆವು ದೇಶಕ್ಕೆ ಗಂಡಾಂತರ ತಂದ ನಿದರ್ಶನಗಳೂ ಇವೆ. ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಕುರಿತಾಗಿಯೂ ಭಾರತದ ಗುಪ್ತಚರ ದಳ 'ರಾ' ಹದ್ದಿನ ಕಣ್ಣಿಟ್ಟಿತ್ತು. ಈ ಬಗ್ಗೆ ದಶಕಗಳಿಂದ ರಹಸ್ಯವಾಗಿದ್ದ ಕಡತಗಳು ಮತ್ತು ದಾಖಲೆಗಳು ವಿವರ್ಗೀಕರಿಸಲ್ಪಟ್ಟು, ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ 'ರಾ' ಸಂಗ್ರಹಿಸಿದ್ದ ಮಾಹಿತಿಗಳು ಹೊರಬಿದ್ದಿವೆ. 1970ಕ್ಕೂ ಹಿಂದಿನಿಂದಲೇ 'ರಾ' ಅಧಿಕಾರಿಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ ಹಂತ ಹಂತವಾಗಿ ಮಾಹಿತಿ ಕಲೆ ಹಾಕಿದ್ದರು!

1970ರ ದಶಕದಲ್ಲಿ ಪಾಕಿಸ್ತಾನದ ಸಂಸ್ಕರಣ ಸಾಮರ್ಥ್ಯ ಮತ್ತು 1980ರ ದಶಕದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸುವ ಸಾಮರ್ಥ್ಯದ ಕುರಿತಾಗಿ ವಿಶೇಷ ಮಾಹಿತಿಗಳನ್ನು ಭಾರತ ಸಂಗ್ರಹಿಸಿತ್ತು. 1990ರ ದಶಕದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಕ್ಷಿಪಣಿ ಕಾರ್ಯಕ್ರಮಕ್ಕೆ ಚೀನಾದ ಬೆಂಬಲ ಮತ್ತು ಈ ಕ್ಷಿಪಣಿ ಯೋಜನೆಯನ್ನು ಉತ್ತರ ಕೊರಿಯಾಗೆ ಹೊರಗುತ್ತಿಗೆ ನೀಡುವ ಚೀನಾ ಷಡ್ಯಂತ್ರಗಳೆಲ್ಲವನ್ನೂ ಭಾರತೀಯ ಗುಪ್ತಚರ ಸಂಸ್ಥೆ ತಿಳಿದುಕೊಂಡಿತ್ತು. 2004ರಲ್ಲಿ ಪಾಕಿಸ್ತಾನ ಪರೀಕ್ಷಿಸಿದ ಶಹೀನ್-II ಖಂಡಾಂತರ ಕ್ಷಿಪಣಿಯ ಕುರಿತಾಗಿ ನಾಲ್ಕು ವರ್ಷಗಳ ಹಿಂದೆಯೇ 'ರಾ' ಮಾಹಿತಿ ಕಲೆಹಾಕಿತ್ತು. ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕಿದ್ದರೂ, ಈ ಮಾಹಿತಿಗಳೆಲ್ಲವನ್ನೂ ರಹಸ್ಯವಾಗಿಡಲಾಗಿತ್ತು. ಇತ್ತೀಚೆಗೆ ಬಹಿರಂಗಗೊಳಿಸಲಾದ ಕಡತಗಳಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ್ದ ಕೆಲವೊಂದು ಮಾಹಿತಿಗಳು ಹೀಗಿವೆ.

ಅಣ್ವಸ್ತ್ರಗಳನ್ನು ಉತ್ಪಾದಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ವಿಶ್ಲೇಷಿಸಿ 1975ರ ಮಾರ್ಚ್ ನಲ್ಲಿ ಭಾರತದ ಜಂಟಿ ಗುಪ್ತಚರ ಮಂಡಳಿ (JIC - Joint Intelligence Committee Report) ದಾಖಲೆ ಪತ್ರವೊಂದನ್ನು ಸಿದ್ಧಪಡಿಸಿತ್ತು ಮತ್ತು ಫೆಬ್ರವರಿ 1976ರಲ್ಲಿ ಕೆಲ ಬದಲಾವಣೆಗಳೊಂದಿಗೆ ಈ ದಾಖಲೆ ಪತ್ರವನ್ನು ಪುನರ್ ವಿಮರ್ಶಿಸಲಾಗಿತ್ತು. ಈ ದಾಖಲೆಗಳ ಪ್ರಕಾರ, ಆ ಸಮಯದಲ್ಲೇ ಭಾರತದ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಶಕ್ತಿಯ ಸಂಭವನೀಯತೆಗಳನ್ನು ಮನಗಂಡಿದ್ದರು. ಪ್ಲುಟೋನಿಯಂ-239 ಅಥವಾ ಯುರೇನಿಯಂ-235ಗಳ ಕೊರೆತೆಯಿರುವ ಕಾರಣ ಮುಂದಿನ ನಾಲ್ಕು ವರ್ಷಗಳವರೆಗೆ ಅಣ್ವಸ್ತ್ರ ಉತ್ಪಾದಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದನ್ನು 1975ರ ದಾಖಲೆ ಪತ್ರಗಳು ಸ್ಪಷ್ಟಪಡಿಸುತ್ತವೆ. ಜಂಟಿ ಗುಪ್ತಚರ ಮಂಡಳಿಯ ವರದಿಯ ಪ್ರಕಾರ, ಪಾಕಿಸ್ತಾನ ಮಹತ್ವಾಕಾಂಕ್ಷೆಯೊಂದಿಗೆ ಕರಾಚಿಯಲ್ಲಿ ಸ್ಥಾಪಿಸಿದ್ದ ಅಣ್ವಸ್ತ್ರ ಸ್ಥಾವರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು. ಬಾಯ್ಲರ್ ಗಳಲ್ಲಿ ಸೋರಿಕೆಯಿಂದಾಗಿ ರಿಯಾಕ್ಟರ್ ಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು. 1975ರಲ್ಲೇ ಈ ಅಣುಕೇಂದ್ರವನ್ನು ಆರು ಬಾರಿ ಮುಚ್ಚಬೇಕಾಗಿ ಬಂತು. ಒಂದು ಬಾರಿ ಈ ಸಮಸ್ಯೆ ವಿಕೋಪಕ್ಕೆ ತಿರುಗಿಕೊಂಡು, ಕೆನಡಾ ತಂತ್ರಜ್ಞರು ಬಂದು ಸರಿ ಪಡಿಸಬೇಕಾಯ್ತು ಎಂಬ ರಹಸ್ಯ ಮಾಹಿತಿಗಳು ಭಾರತಕ್ಕೂ ತಿಳಿದಿತ್ತು!
Image may contain: 1 person
1976ರಲ್ಲಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿದ್ದ ಭಾರತೀಯ ದೂತಾವಾಸದಿಂದ ಭಾರತಕ್ಕೆ ಕಳುಹಿಸಿದ ರಹಸ್ಯ ರಾಜತಾಂತ್ರಿಕ ಸಂದೇಶಗಳನ್ನು ಗಮನಿಸಿದಾಗ, ಬಹಳಷ್ಟು ಹಿಂದೆಯೇ, ಪಾಕಿಸ್ತಾನದಲ್ಲಿ ಚೀನೀ ವಿಜ್ಞಾನಿಗಳು ಕಾರ್ಯನಿರತವಾಗಿರುವ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಕರಾಚಿಯಲ್ಲಿದ್ದ ಅಣ್ವಸ್ತ್ರ ಸ್ಥಾವರ, ಅಂತರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (IAEA) ಅಧೀನದಲ್ಲಿದ್ದರೂ, ಕೆನಡಾದ ಅಣ್ವಸ್ತ್ರ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಬಳಸಲು ಚೀನೀ ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿತ್ತು ಪಾಕಿಸ್ತಾನ! ಈ ರಹಸ್ಯವನ್ನು ಹಂಗೇರಿಯ ರಾಜತಂತ್ರಜ್ಞನೊಬ್ಬ ಒಟ್ಟಾವದಲ್ಲಿದ್ದ ಭಾರತದ ರಾಯಭಾರಿಗೆ ತಿಳಿಸಿದ್ದ. ಚೀನಾದ ಮಿಲಿಟರಿ ಪೂರೈಕೆಗಳಿಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ಬಳಿಯಿದ್ದ ಕೆನಡಾದ ತಂತ್ರಜ್ಞಾನವನ್ನು ಚೀನಾದೊಂದಿಗೆ ಹಂಚಿಕೊಂಡಿತ್ತು. 1981ರಲ್ಲಿ ಇಸ್ಲಾಮಾಬಾದ್ ನಲ್ಲಿದ್ದ ಭಾರತೀಯ ದೂತಾವಾಸ ಕಳುಹಿಸಿದ 'ತಿಂಗಳ ವರದಿ'ಯಲ್ಲಿ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಯಶಸ್ವಿಯಾಗಲಿದೆ ಮತ್ತು ಪಾಕಿಸ್ತಾನ ಜಿಯಾ ಇದೇ ವರ್ಷ ಅಣ್ವಸ್ತ್ರ ಪರೀಕ್ಷಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂದಿತ್ತು. ಇದೇ ವರ್ಷ ಜೆ. ಎನ್ ದೀಕ್ಷಿತ್ ರವರ ( ಮುಂದೆ 2004-2005ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು)  ಅಧ್ಯಯನ ವರದಿ, ಪಾಕಿಸ್ತಾನದ ಕಹುಟಾ, ಇಸ್ಲಾಮಾಬಾದ್ ಮತ್ತು ಸಿಹಾಲಗಳಲ್ಲಿ ತ್ರಿಕೋನ ಅಣ್ವಸ್ತ್ರ ಯೋಜನೆಗಳು ಮತ್ತು ಯುರೇನಿಯಂ ಹೆಕ್ಸಾಫ್ಲುರೈಡ್ ತಯಾರಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಎಚ್ಚರಿಸಿದ್ದರು.

ಪಾಕಿಸ್ತಾನ ಸಿಂಧ್, ಬಲೂಚಿಸ್ತಾನ್ ಅಥವಾ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (ಖೈಬರ್ ಪಕ್ತೂನ್ಕಾವ) ಭೂಮಿಯ ಅಡಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮಾಹಿತಿ ಭಾರತಕ್ಕೆ ತಿಳಿದಿತ್ತು. ಇದೇ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟದ ಉಪಗ್ರಹಗಳು ರಾಸ್ ಕೊಹ್ ಪ್ರದೇಶದಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ಸುರಂಗಗಳನ್ನು ಪತ್ತೆಹಚ್ಚಿತ್ತು. ಪಾಕ್ ಅಣ್ವಸ್ತ್ರ ಯೋಜನೆಗೆ ಲಿಬಿಯಾ ಜೊತೆಯಲ್ಲೂ ಕೊಂಡಿಗಳಿವೆ ಎಂವ ವಿಚಾರವೂ ಭಾರತದ ಗಮನಕ್ಕೆ ಬಂದಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕಾ ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧಗಳನ್ನು ಉನ್ನತ ಮಟ್ಟಕ್ಕೇರಿಸಿ, 3 ಬಿಲಿಯನ್ ಅಮೆರಿಕನ್ ಡಾಲರ್ಗಳ ನೆರವು ನೀಡಿದ್ದಷ್ಟೇ ಅಲ್ಲದೇ  F-16 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಿದಾಗ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ರೇಗನ್ ಮತ್ತಿತರ ಅಧಿಕಾರಿಗಳು ಭಾರತವನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದರು. ಈ ಹೊತ್ತಿನಲ್ಲಿಯೇ ಜಿಯಾ, ಭಾರತ ಮತ್ತು ಪಾಕಿಸ್ತಾನಗಳ ಅಣ್ವಸ್ತ್ರ ಕೇಂದ್ರಗಳ ಪರಸ್ಪರ ತಪಾಸಣೆಗೊಳಪಡಿಸುವ ತನ್ನ ಇಚ್ಛೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು. ಆದರೆ ಈ ಪ್ರಯತ್ನಗಳು ಭಾರತವನ್ನು ಓಲೈಸುವಲ್ಲಿ ವಿಫಲವಾಗುತ್ತವೆ.

ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಕುರಿತಾಗಿ ಅಗಾಧ ಮಾಹಿತಿ ಸಂಗ್ರಹಿಸಿದ್ದರೂ, ಅದನ್ನು ತಡೆಗಟ್ಟಲು ಭಾರತ ಯಾವುದೇ ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಲಿಲ್ಲ. ಆದರೆ ಪಾಕಿಸ್ತಾನದ ರಿಯಾಕ್ಟರ್ ಗಳನ್ನು ನಾಶಪಡಿಸಲು ಇಸ್ರೇಲ್ ಮುಂದೆ ಬಂದಿತ್ತು. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಭಾರತದ ಸಹಕಾರವನ್ನು ನಿರೀಕ್ಷಿಸಿತ್ತಾದರೂ, ಕಾರಣಾಂತರಗಳಿಂದ ಭಾರತ ಇಸ್ರೇಲ್ ಪ್ರಸ್ತಾವನೆಯನ್ನು ನಿರಾಕರಿಸುತ್ತದೆ. ಕೊನೆಗೂ  ಭಾರತ ಮತ್ತು ಪಾಕಿಸ್ತಾನಗಳೆರಡೂ ಅಣ್ವಸ್ತ್ರ ಶಕ್ತಿಗಳಾಗಿ ಬದಲಾಗಿವೆಯಷ್ಟೇ ಅಲ್ಲದೆ ಜಾಗತಿಕ ಅಣ್ವಸ್ತ್ರ ಸಂಘರ್ಷಗಳ ಬಗೆಗಿನ ಯಾವುದೇ ಚರ್ಚೆ ದಕ್ಷಿಣ ಏಷ್ಯಾದ ಅಣ್ವಸ್ತ್ರ ತಿಕ್ಕಾಟವನ್ನು ಪ್ರಸ್ತಾಪಿಸದೆ ಕೊನೆಗೊಳ್ಳುವುದಿಲ್ಲ. ಇತ್ತೀಚಿನ ಗುಪ್ತಚರ ಕಡತಗಳು ಮತ್ತು ದಾಖಲೆ ಪತ್ರಗಳ ವಿವರ್ಗೀಕರಣ ಇವೆಲ್ಲವುಗಳನ್ನು ನೆನಪಿಸುವಂತಿತ್ತು.

(This article was published in Vishwavani Newsapaper on 8 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗಣರಾಜ್ಯೋತ್ಸವದ ಜೊತೆಗೊಂದು ರಾಜತಾಂತ್ರಿಕ ನಡೆ

ಭಾರತದ 68ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅಬುಧಾಬಿಯ ರಾಜಕುಮಾರ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರವರು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ತಮ್ಮ ರಾಜತಾಂತ್ರಿಕ ಚತುರತೆ ಮೆರೆದಿದ್ದಾರೆ. 2016ರಲ್ಲಿ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಮುಖ್ಯ ಅತಿಥಿಯ ಗೌರವ ನೀಡಿ ಫ್ರಾನ್ಸ್ ಮತ್ತು ಭಾರತಗಳ ಬಾಂಧವ್ಯದಲ್ಲಿ ಹೊಸ ಅವಕಾಶಗಳನ್ನು ತೆರೆದಿದ್ದ ಮೋದಿ, ಈ ಬಾರಿ ಅರಬ್ ಸಂಯುಕ್ತ ರಾಷ್ಟ್ರಗಳ (UAE) ಜೊತೆಗಿನ ಸ್ನೇಹಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಈ ಬಾರಿ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಅಬುಧಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಅರಬ್ ಸಂಯುಕ್ತ ರಾಷ್ಟ್ರಗಳ ಸಶಸ್ತ್ರ ಪಡೆಗಳ  ಉಪ ಮಹಾ ದಂಡನಾಯಕನೂ ಆಗಿದ್ದು, ಇದೇ ಮೊದಲಬಾರಿಗೆ ಜನವರಿ 26ರಂದು ಅರಬ್ ಸೈನಿಕರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದ್ದಾರೆ. ಶೇಕ್ ಮೊಹಮ್ಮದ್ ವರ ಈ ಭೇಟಿ ಯುಎಇ ಜೊತೆಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು 'ಪ್ರಮುಖ ಪಾಲುದಾರ' ಮಟ್ಟಕ್ಕೆ ಏರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ.

ಆಗಸ್ಟ್ 2015ರಲ್ಲಿ ಮೋದಿಯವರು ಅಬುಧಾಬಿಗೆ ಭೇಟಿ ನೀಡಿದ ಬಳಿಕ, ಭಾರತ-ಯುಎಇ ಗಳ ದ್ವಿಪಕ್ಷೀಯ ಸಂಬಂಧಗಳು ನವೋತ್ಸಾಹ ಪಡೆದುಕೊಂಡಿತ್ತು. 34 ವರ್ಷಗಳ ಹಿಂದಿನ ಇಂದಿರಾ ಗಾಂಧಿ ಭೇಟಿಯ ನಂತರದ ಸುದೀರ್ಘ ಕಾಲಾವಧಿಯಲ್ಲಿ ಜಡ್ಡುಗಟ್ಟಿದ್ದ ಸ್ನೇಹಕ್ಕೆ ಹೊಸ ಶಕ್ತಿ ತುಂಬಿತ್ತು ಈ ಭೇಟಿ. ವಿದೇಶೀ ಬಂಡವಾಳ ಹೂಡಿಕೆಗೆ ಭಾರತ ತೆರೆದುಕೊಂಡ ರೀತಿ ಮತ್ತು ಯುಎಇನಲ್ಲಿ ಹೊಸ ಆರ್ಥಿಕ ಮೂಲಗಳ ಹಿನ್ನೆಲೆಯಲ್ಲಿ ಉಧ್ಬವಿಸಿದ 'ನವ ತೈಲ ರಾಜತಂತ್ರ' ಈ ಎರಡು ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿತ್ತು. ತ್ವರಿತಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಇನ್ನಿತರ ಸನ್ನಿವೇಶಗಳು, ಭಾರತ ಮತ್ತು ಯುಎಇ ಗಳ ನಡುವೆ ಆಯಕಟ್ಟಿನ ದ್ವಿಪಕ್ಷೀಯ ಸಹಕಾರ ಒಪ್ಪಂದವೊಂದರ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತವೆ.

ಜಾಗತಿಕ ತೈಲ ಬೆಲೆಗಳ ಕುಸಿತದ ಹಿನ್ನೆಲೆಯಲ್ಲಿ ಅಬು ಧಾಬಿ ತೈಲೇತರ ವಲಯಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ತೈಲದಿಂದ ದೊರೆಯುತ್ತಿರುವ ಆದಾಯ ಕಡಿಮೆಯಾಗುತ್ತಿರುವುದಷ್ಟೇ ಅಲ್ಲದೇ ಭವಿಷ್ಯದ ದೃಷ್ಟಿಯಿಂದ ತೈಲದಿಂದ ಸಿಗುವ ಆದಾಯದ ಅನಿಶ್ಚಿತತೆ ಅರಬ್ ನಾಯಕರನ್ನು ಇನ್ನಿತರ ಆದಾಯದ ಮೂಲಗಳನ್ನು ಹುಡುಕುವಂತೆ ಮಾಡಿದೆ. ಹೊಸ ಆದಾಯ ಮೂಲಗಳು ಮತ್ತು ಆರ್ಥಿಕ ವಲಯಗಳ ಹುಡುಕಾಟದಲ್ಲಿರುವ ಯುಎಇ ಗೆ ಭಾರತದ ನೆರವಿನ ಅವಶ್ಯಕತೆಯಿದೆ. ಆರ್ಥಿಕ ಕಾರಣಗಳನ್ನು ಒತ್ತಟ್ಟಿಗಿರಿಸಿದರೂ, ರಾಜಕೀಯ ಪರಿಸ್ಥಿತಿಗಳು, ಯುಎಇ ತನ್ನ ಹಳೆಯ ಸಂಬಂಧಗಳನ್ನು ಪುನರ್ ವಿಮರ್ಶಿಸುವ ಸಮಯ ಬಂದಿದೆ. ಬ್ರೆಕ್ಸಿಟ್, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆ, ಜರ್ಮನಿಯಲ್ಲಿ ಮುಂಬರಲಿರುವ ಚುನಾವಣೆಗಳು, ಇದೇ ಮೇ ತಿಂಗಳಲ್ಲಿ ನಡೆಯಲಿರುವ ಇರಾನಿನ ಅಧ್ಯಕ್ಷೀಯ ಚುನಾವಣೆ ಮತ್ತಿನ್ನಿತರ ಜಾಗತಿಕ ರಾಜಕೀಯ ತಿರುವುಗಳು ಯುಎಇ ವಿದೇಶಾಂಗ ನೀತಿಯ ನಿರ್ಧಾರಗಳಿಗೆ ಸವಾಲಾಗಲಿವೆ.
Image may contain: 4 people
ಯುಎಇ  ತನ್ನ ಆರ್ಥಿಕತೆಯನ್ನು ಅರಬ್ ಜಗತ್ತಿನೊಂದಿಗೆ ವಿಲೀನಗೊಳಿಸಿಕೊಂಡಿರುವುದು ಇವತ್ತಿಗೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಪ್ರತಿನಿತ್ಯ ಯಾವುದಾದರೊಂದು ಸಂಘರ್ಷ ಅಥವಾ ಗದ್ದಲಗಳಲ್ಲಿ ಕಾಲ ನೂಕುತ್ತಿರುವ ಸಿರಿಯಾ, ಇರಾಕ್, ಲಿಬಿಯಾ ಮತ್ತು ಯೆಮೆನ್ ನಂಥಾ ಅರಬ್ ರಾಷ್ಟ್ರಗಳ ದೆಸೆಯಿಂದಾಗಿ, ಏಕೀಕೃತ ಅರಬ್ ಆರ್ಥಿಕ ಪ್ರಗತಿಯ ಕನಸು ನನಸಾಗುವ ಯಾವುದೇ ಲಕ್ಷಣಗಳಿಲ್ಲ. ಇಂಥ ಒಂದು ರೋಗಗ್ರಸ್ತ ಆರ್ಥಿಕ ವ್ಯವಸ್ಥೆಯ ಜೊತೆ ತನ್ನ ಆರ್ಥಿಕತೆಯನ್ನು ತಳುಕುಹಾಕಿ ಕೊಂಡ ಅವಿವೇಕಕ್ಕೆ ಯುಎಇ ತನ್ನನ್ನು ತಾನೇ ಶಪಿಸಿಕೊಳ್ಳುವಂತಾಗಿದೆ. ನಿರುದ್ಯೋಗಿ ಯುವಕರು ಹಿಂಡು ಹಿಂಡಾಗಿ ಭಯೋತ್ಪಾದನೆಯತ್ತ ಮುಖ ಮಾಡಿರುವುದೂ ಇನ್ನಷ್ಟು ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ. ಯುರೋಪಿಯನ್ ಒಕ್ಕೂಟದ ಮಾದರಿಯಲ್ಲಿ ಗಲ್ಫ್ ರಾಷ್ಟ್ರಗಳು ಜಿ.ಸಿ.ಸಿ (Gulf Cooperation Council) ಸ್ವಲ್ಪ ಮಟ್ಟಿಗೆ ಭರವಸೆ ತುಂಬಿದ್ದರೂ, ಅದರ ಧ್ಯೇಯೋದ್ದೇಶಗಳು ಪೂರ್ಣ ಫಲ ಕಾಣಲು ವರ್ಷಗಳೇ ಬೇಕಾಗಬಹುದು. ಈ ಎಲ್ಲಾ ಸಂದಿಗ್ಧತೆಗಳಿಂದ ಹೊರ ಬೀಳುವ ತವಕದಲ್ಲಿರುವ ಯುಎಇ ಭಾರತದತ್ತ ಸ್ನೇಹ ಹಸ್ತ ಚಾಚಿದ್ದು ಅಸಹಜವೇನಲ್ಲ.
ಭಾರತದ ಅವಶ್ಯಕತೆಗಳಿಗೂ, ಯುಎಇ ಸ್ನೇಹ ಪೂರಕವಾಗಿಯೇ ಕೆಲಸ ಮಾಡಬಲ್ಲುದು. ತೈಲ ಮತ್ತಿನ್ನಿತರ ಶಕ್ತಿಮೂಲಗಳ ಪೂರೈಕೆ ಹಾಗೂ ದೇಶದೊಳಗಡೆ ಹೊಸ ಬಂಡವಾಳ ಹೂಡಿಕೆಗೆ ಈ ದ್ವಿಪಕ್ಷೀಯ ಮಾತುಕತೆಗಳು ಸದೃಢ ಅಡಿಪಾಯ ಹಾಕುತ್ತದೆ. ಈಗಾಗಲೇ ಭಾರತ ಮತ್ತು ಯುಎಇಗಳ ನಡುವೆ ಉತ್ತಮ ಆರ್ಥಿಕ ಸಂಬಂಧಗಳಿವೆ. 2015ರಲ್ಲಿ ಭಾರತ-ಯುಎಇಗಳ ವ್ಯಾಪಾರ ವಹಿವಾಟು ಸುಮಾರು 60 ಬಿಲಿಯನ್ ಡಾಲರ್ ಗಳಷ್ತಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಇದನ್ನು 60 ಪ್ರತಿಶತ ಹೆಚ್ಚಿಸುವ ತವಕದಲ್ಲಿರುವ ಎರಡೂ ರಾಷ್ಟ್ರಗಳು 2020ರಲ್ಲಿ 100 ಬಿಲಿಯನ್ ಡಾಲರ್ ಗಳಷ್ಟು ವ್ಯಾಪಾರ ವಹಿವಾಟು ನಡೆಸುವ ಗುರಿ ಇಟ್ಟುಕೊಂಡಿವೆ. ಭಾರತದ ಮೂಲಸೌಕರ್ಯಗಳನ್ನು ಸುಧಾರಿಸಲು 75 ಬಿಲಿಯನ್ ಡಾಲರ್ ಗಳ ಅನುದಾನ ನಿಗದಿಯಾಗಿದ್ದು, ಬಂಡವಾಳ ಆಕರ್ಷಣೆಗೆ ಹೊಸ ತಂಡವೊಂದನ್ನು ರಚಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆಗಳ ಅನಿಶ್ಚಿತತೆಯಿಂದಾಗಿ, ಯುಎಇ ನ ಎಮಿರೇಟ್ ಗಳಾದ ದುಬೈ ಮತ್ತು ಅಬು ದಾಬಿಗಳು ತಮ್ಮ ಆದಾಯ ಮೂಲಗಳಲ್ಲಿ ವೈವಿಧ್ಯತೆ ಹುಡುಕಲಾರಂಬಿಸಿವೆ. ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿವೆ. 2008ರ Abu Dhabi Economic Vision 2030 ಯೋಜನೆ ತೈಲೇತರ ವಲಯಗಳ ಸುಧಾರಣೆ ಮತ್ತು ಪ್ರಚಾರಕ್ಕೆ ಒತ್ತು ನೀಡುತ್ತಿದೆ. ಯುಇನ ಅತ್ಯಂತ ಶ್ರೀಮಂತ ಎಮಿರೇಟ್ ಆಗಿರುವ ಅಬು ದಾಬಿಯೂ ಇತ್ತೀಚೆಗೆ ತನ್ನ ಆರ್ಥಿಕ ವಲಯಗಳನ್ನು ತೈಲ ಪೂರೈಕೆಗೆ ಮಾತ್ರ ಸೀಮಿತಗೊಳಿಸದೆ, ಅದರಾಚೆಗೂ ಬೇರೆ ವಲಯಗಳಿಗೆ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ಪ್ರಯತ್ನಪಡುತ್ತಿರುವುದು ಗಮನಾರ್ಹ. ಯುಎಇ ತನ್ನ ಯುವಜನಾಂಗಕ್ಕೆ ಪುನಶ್ಚೇತನ ನೀಡುಲು, 'UAE Vision 2021'ನಂತಾ ಅಲ್ಪಾವಧಿ ಯೋಜನೆಗಳನ್ನೂ ಜಾರಿಗೊಳಿಸಿದೆ. ಇತ್ತೀಚೆಗೆ ಸಂತೋಷ, ಸಹಿಷ್ಣುತೆ ಮತ್ತು ಭವಿಷ್ಯಕ್ಕೋಸ್ಕರ ಹೊಸ ಸಚಿವಾಲಯವನ್ನು (Ministry of Happiness, Tolerance, and the Future) ತೆರೆದಿರುವ ಯುಎಇ, ಯುವಕರು ಮತಾಂಧರಾಗುವುದನ್ನು ತಡೆದು ಅವರಲ್ಲಿನ ಪ್ರತಿಭೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗಿದೆ. ಯುಎಇನ ಈ ಧನಾತ್ಮಕ ಬೆಳವಣಿಗೆಗಳಲ್ಲಿ ಪಾಲುದಾರನಾಗುವ ಅವಕಾಶವೊಂದು ಭಾರತಕ್ಕಿದೆ.

ಯುಎಇನಲ್ಲಿ ನೆಲೆಯಾಗಿರುವ ವಿದೇಶೀಯರಲ್ಲಿ ಅತೀ ಹೆಚ್ಚಿನ ವಲಸಿಗರು ಭಾರತೀಯರು ಎನ್ನುವ ಅಂಶವೂ ಗಮನಾರ್ಹ. ಯುಎಇನಲ್ಲಿ ಸುಮಾರು 2.6 ಮಿಲಿಯನ್ ನಷ್ಟು ಭಾರತೀಯರಿದ್ದು, ಇದು ಯುಎಇನ ಜನಸಂಖ್ಯೆಯ 30 ಪ್ರತಿಶತ! ಶಿಕ್ಷಣ, ತಂತ್ರಜ್ಞಾನ ಮತ್ತು ಇನ್ನಿತರ ವಲಯಗಳಲ್ಲಿ ಸವಾಲುಗಳನ್ನು ಎದುರಿಸಿ ಯಶಸ್ವಿಯಾದ ಭಾರತದ ಅನುಭವವನ್ನು ಬಳಸಿಕೊಳ್ಳಲು ಯುಎಇ ಎದುರುನೋಡುತ್ತಿದ್ದರೆ, ಮಧ್ಯಪ್ರಾಚ್ಯದಲ್ಲಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಂಡು ತೈಲ ಇನ್ನಿತರ ಶಕ್ತಿಮೂಲಗಳ ಕೊರತೆ ನೀಗಿಸಿಕೊಳ್ಳುವತ್ತ ಗಮನಹರಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಾರತ ತೈಲ ವ್ಯಾಪಾರಕ್ಕೆ ಸೀಮಿತವಾಗದೆ ಪ್ರಾದೇಶಿಕ ಸ್ಥಿರತೆ ಮತ್ತು ಚೀನಾ ಪ್ರಭಾವಕ್ಕೆ ಕಡಿವಾಣ ಹಾಕುವತ್ತಲೂ ಕಾರ್ಯಪ್ರವೃತ್ತವಾಗಲಿದೆ.  ಅಬು ದಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಬಾರಿಯ ಭಾರತ ಭೇಟಿ, ಯುಎಇ ಮತ್ತು ಭಾರತಗಳೆರ ಪರಸ್ಪರ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ, ಮಧ್ಯಪ್ರಾಚ್ಯ ಕುರಿತಾದ ಭಾರತದ ವಿದೇಶಾಂಗ ನೀತಿಯ ಹೆಬ್ಬಾಗಿಲಾಗಿ ಪರಿಣಮಿಸಲಿದೆ.


(This article was published in Hosa Digantha Newsapaper on 24 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಚೀನಾ-ಪಾಕ್ ಸರ್ವಋತು ಸ್ನೇಹದಲ್ಲೊಂದು ಅಪಸ್ವರ!

" ಪಾಕಿಸ್ತಾನ-ಚೀನಾಗಳ ಸ್ನೇಹ ಪರ್ವತಗಳಿಗಿಂತ ಎತ್ತರ, ಸಮುದ್ರಗಳಿಗಿಂತ ಆಳ, ಜೇನಿಗಿಂತ ಸಿಹಿ ಮತ್ತು ಉಕ್ಕಿಗಿಂತಲೂ ಶಕ್ತಿಶಾಲಿ" ಈ ಮಾತುಗಳನ್ನು ಪಾಕಿಸ್ತಾನದ ನಾಯಕರು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ.  ಕಮ್ಯುನಿಸ್ಟ್ ಚೀನಾ ಕೂಡ ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರದ ಸ್ಥಾನ ನೀಡಿ ಪೋಷಿಸಿಕೊಂಡು ಬಂದಿದೆ. ಇಂಥದ್ದೊಂದು ಸ್ನೇಹಕ್ಕೆ ಈ ಎರಡೂ ರಾಷ್ಟ್ರಗಳ ಭಾರತ ದ್ವೇಷೀ ಮನೋಭಾವವೂ ಒಂದಷ್ಟು ಕೊಡುಗೆ ನೀಡಿದೆ. ಭಾರತ ಜಾಗತಿಕ ರಾಜಕೀಯದಲ್ಲಿಡುತ್ತಿರುವ ಆತ್ಮವಿಶ್ವಾಸದ ಹೆಜ್ಜೆಗಳಿಂದಾಗಿ ಪಾಕಿಸ್ತಾನ ಮೈಪರಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚೀನಾ ಆಕ್ರಮಣಶೀಲತೆಗೆ ತಡೆಯಾಗಿ ನಿಲ್ಲುವ ಪ್ರಭಾವಿ ಶಕ್ತಿಯೊಂದು ತನ್ನ ಮಗ್ಗುಲಲ್ಲೇ ಬೆಳೆಯುತ್ತಿರುವುದು ಚೀನಿ ಕಮ್ಯುನಿಸ್ಟ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಚೀನಾ ತನ್ನ ಕೀಳರಿಮೆಯನ್ನು ಕಡಿಮೆ ಮಾಡಿಕೊಳ್ಳಲು ಭಾರತದ ವಿರುದ್ಧ ಪಾಕಿಸ್ತಾನವನ್ನು ಛೂ ಬಿಡುತ್ತಿರುವುದು ಇವತ್ತಿಗೆ ಗುಟ್ಟಾಗಿ ಉಳಿದಿಲ್ಲ. ಪಾಕಿಸ್ತಾನ ಭಾರತದ ವಿರುದ್ಧ ಮಾಡಿದ ಎಲ್ಲಾ ಮಸಲತ್ತುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚೀನಾ ಕೈವಾಡ ಇದ್ದೇ ಇತ್ತು. ಕಾರಣಗಳೇನೆ ಇರಲಿ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ವಿಚಿತ್ರ ಎನಿಸಿದರೂ ಸರ್ವಋತು ಸ್ನೇಹ ಬೆಳೆದಿರುವುದಂತೂ ನಿಜ!

ಈ ಎರಡು ರಾಷ್ಟ್ರಗಳ ಸ್ನೇಹದ ಕುರುಹಾಗಿ ಚೀನಾ ನೇತೃತ್ವದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ'ಯೊಂದು ( China­Pakistan Economic Corridor-CPEC) ಜಾರಿಯಲ್ಲಿದೆ. ಈ ಯೋಜನೆಯೊಂದಿಗೆ ಪಾಕಿಸ್ತಾನ ಮತ್ತು ಚೀನಾಗಳ ತಮ್ಮ ಸರ್ವಋತು ಗೆಳೆತನದ ಇತಿಮಿತಿಗಳು ಎರಡೂ ದೇಶಗಳಿಗೆ ಅರಿವಾಗತೊಡಗಿದೆ. ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ರಾಜತಾಂತ್ರಿಕ ಮತ್ತು ಮಿಲಿಟರಿ ವಲಯದಲ್ಲಿ ಯಶಸ್ಸು ಕಂಡಿತ್ತಾದರೂ, ಸಾರ್ವಜನಿಕ ವಲಯದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಪಾಕಿಸ್ತಾನದೊಳಗಡೆ ಅನೇಕ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. ಪಾಕಿಸ್ತಾನದಲ್ಲಿ ಚೀನಾಗಿಂತ ಭಿನ್ನ ರಾಜಕೀಯ ವ್ಯವಸ್ಥೆ, ವಿಭಿನ್ನ ಸಾಂಸ್ಕೃತಿಕ ಅಸ್ಮಿತೆಗಳಿರುವುದು ಮತ್ತು ಮುಖ್ಯವಾಗಿ ಈ ಎರಡು ರಾಷ್ಟ್ರಗಳ ಸಂಬಂಧಗಳ ಮೇಲೆ ಇದು ಬೀರುವ ಪರಿಣಾಮಗಳು ಚೀನಾಗೆ ಅರಿವಾಗಿದ್ದು ಈ ಹೊಸ ಯೋಜನೆ ಕಾರ್ಯರೂಪಕ್ಕಿಳಿದಾಗಲೇ! ಎರಡು ದೇಶಗಳ ರಾಜತಂತ್ರಜ್ಞರು ಮತ್ತು ಮಿಲಿಟರಿಗಳ ನಡುವಿನ ಬಾಂಧವ್ಯ ಮಾತ್ರವಲ್ಲದೇ ಇಂಥಾ ಯೋಜನೆಗಳ ಅನುಷ್ಠಾನಗಳಿಗೆ ಆ ದೇಶಗಳ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯಗಳ ಪರಿಚಯವೂ ಅತ್ಯವಶ್ಯಕ. ಈಗಾಗಲೇ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್  ಗೆ ಪಾಕಿಸ್ತಾನದೊಳಗಡೆ ಚೀನಾಗೆ ಭದ್ರತೆಯ ಕುರಿತಾಗಿ ಅನುಮಾನಗಳಿವೆ. ಇದರ ಮೇಲೆ ಪಾಕಿಸ್ತಾನದ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಈ ಮಲ್ಟಿ-ಬಿಲಿಯನ್ ಯೋಜನೆಯನ್ನು ನಿರ್ವಹಿಸಿದ ರೀತಿಯಲ್ಲಿ ಚೀನಾಗೆ ಅಸಮಧಾನವಿರುವುದು ಈ ಎರಡು ದೇಶಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿದೆ. ಈ ಬಿನ್ನಾಭಿಪ್ರಾಯದಿಂದ ಭಾರತವೂ ಸೇರಿದಂತೆ ವಿಶ್ವದ ಹಲವು ಶಕ್ತಿಗಳಿಗೆ ಪರೋಕ್ಷವಾಗಿ ಲಾಭವೇ ಆಗಲಿದೆ ಎನ್ನುವುದು ವಿಶೇಷ!

ಚೀನಾದಲ್ಲಿ ಏಕ ಪಕ್ಷ ವ್ಯವಸ್ಥೆಯಿದ್ದು, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಕೇಂದ್ರೀಕೃತವಾಗಿದೆ. ಚೀನಾದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೆಳಹಂತದ ಪ್ರಾಂತೀಯ ಸರಕಾರಗಳಿಗೆ, ಕೇಂದ್ರದ ನಿರ್ಧಾರಗಳನ್ನು ತಮ್ಮ ವಿವೇಚನೆಗೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ನಿರ್ವಹಿಸುವ ಅಧಿಕಾರವಿದ್ದರೂ, ರಾಷ್ಟ್ರೀಯ ಹಿತಾಸಕ್ತಿ ಅಥವಾ ವಿದೇಶಾಂಗ ನೀತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರಗಳು ಅಂತಿಮವಾಗಿದ್ದು, ಚೀನಾದ ಕೇಂದ್ರ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಪ್ರಾಂತೀಯ ಸರಕಾರಗಳ ಸಂಕೀರ್ಣ ವ್ಯವಸ್ಥೆಯಿಂದ ಮಾಧ್ಯಮ ಕ್ಷೇತ್ರದವರೆಗೆ ಚೀನಾದ ಎಲ್ಲಾ ಸಂಸ್ಥೆಗಳು ಕೇಂದ್ರ ಸರಕಾರದ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತವೆ ಮತ್ತು ಚಾಚೂ ತಪ್ಪದೆ ಪಾಲಿಸುತ್ತವೆ. Belt and Road Initiative (BRI)ನಂಥಾ ಹಿಂದಿನ ಕೆಲ ಯೋಜನೆಗಳಲ್ಲಿ ಚೀನಾದ ತಳಹಂತದ ರಾಜಕೀಯ ವ್ಯವಸ್ಥೆ ಮತ್ತು ಮಾಧ್ಯಮಗಳು ಕಾರ್ಯನಿರ್ವಹಿಸಿದ ರೀತಿ, ಚೀನಾದ ಕೇಂದ್ರೀಕೃತ ನಿರ್ಧಾರಗಳ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಒಟ್ಟಿನಲ್ಲಿ ಚೀನಾದ ಕೇಂದ್ರ ಕಮ್ಯುನಿಸ್ಟ್ ಪಕ್ಷದ ನಿರ್ಧಾರಗಳು ಚೀನಾದ ಮೂಲೆ ಮೂಲೆಯಲ್ಲೂ ಪ್ರಶ್ನಾತೀತವಾಗಿ ಪಾಲಿಸಲ್ಪಡುತ್ತವೆ.

Image may contain: 2 peopleಚೀನಾ ವ್ಯವಸ್ಥೆಗೆ ತದ್ವಿರುದ್ಧವಾಗಿ, ಪಾಕಿಸ್ತಾನ ಕಳೆದ ಹತ್ತು ವರ್ಷಗಳ ಪ್ರಜಾಪ್ರಭುತ್ವ, ವಿಕೇಂದ್ರೀಕರಣಕ್ಕೆ ಪ್ರಾಮುಖ್ಯತೆ ನೀಡಿದೆ. ಪಾಕಿಸ್ತಾನದ ಸಂವಿಧಾನಕ್ಕೆ ಹದಿನೆಂಟನೇ ತಿದ್ದುಪಡಿಯಾದ ಮೇಲಂತೂ ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆ ಇನ್ನಷ್ಟು ಗಟ್ಟಿಯಾಗಿದೆ. ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳೆರಡೂ ಜನರಿಂದಲೇ ಆಯ್ಕೆಯಾಗಿದ್ದು ಕೇಂದ್ರ ಏಕಪಕ್ಷೀಯವಾಗಿ ವರ್ತಿಸುವಂತಿಲ್ಲ. ಪ್ರಾಂತೀಯ ಸರಕಾರಗಳಿಗೆ ಸಂವಿಧಾನಬದ್ಧವಾದ ಅಧಿಕಾರಗಳಿರುವುದರ ಜೊತೆ, ಆಳ್ವಿಕೆಗೆ ಒಳಪಡುವ ವಿಷಯಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಇದಷ್ಟೇ ಅಲ್ಲದೆ, ಭಿನ್ನಾಭಿಪ್ರಾಯಗಳು ಉದ್ಭವವಾದಾಗ ಕೇಂದ್ರ ಸರಕಾರದ ನೀತಿಗಳನ್ನು ಸಾರಾಸಗಟಾಗಿ ವಿರೋಧಿಸುವ ಅಧಿಕಾರ ಪ್ರಾಂತೀಯ ಸರಕಾರಗಳಿಗಿದೆ. ಪಾಕಿಸ್ತಾನದ ಪ್ರಾಂತ್ಯಗಳ ನಡುವೆ ಇರುವ ಜನಾಂಗೀಯ ವ್ಯತ್ಯಾಸಗಳು ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇನ್ನು ಪಾಕಿಸ್ತಾನದ ಮಾಧ್ಯಮಗಳು, ಚೀನಾ ಮಾಧ್ಯಮ ವ್ಯವಸ್ಥೆಯಂತಿಲ್ಲದೆ, ತಮ್ಮ ಸರಕಾರವನ್ನು ಮತ್ತದರ ನಿರ್ಧಾರಗಳನ್ನು ಖಂಡಿಸುವಷ್ಟು ಮುಕ್ತವಾಗಿವೆ. ಮುಖ್ಯವಾದ ಮತ್ತು ಅತ್ಯಂತ ಸೂಕ್ಷ್ಮ ವಿಚಾರಗಳಲ್ಲೂ ಪಾಕಿಸ್ತಾನ ಕೇಂದ್ರ ಸರಕಾರದ ವಿರುದ್ಧ ಅಸಮ್ಮತಿಯ ಧ್ವನಿಗಳು ಕೇಳಿಬರುವುದರಿಂದ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಗೂ ಈಗಾಗಲೇ ಅಪಸ್ವರಗಳೆದ್ದಿವೆ. ಇತ್ತೀಚೆಗಂತೂ ಪಾಕಿಸ್ತಾನದ ಪ್ರಾಂತ್ಯಗಳಲ್ಲಿ ಪ್ರಾದೇಶಿಕತೆಯ ಕೂಗು ಹೆಚ್ಚಾಗುತ್ತಿರುವುದು, ಪಾಕಿಸ್ತಾನದ ಕೇಂದ್ರ ಸರಕಾರಕ್ಕೆ ಪರ್ಯಾಯ ಶಕ್ತಿ ಕೇಂದ್ರಗಳು ಪ್ರಾಂತ್ಯಗಳಲ್ಲೂ ಹುಟ್ಟಿಕೊಳ್ಳುತ್ತಿವೆ. ಈ ಎಲ್ಲಾ ಗಡಿಬಿಡಿಗಳ ಮಧ್ಯೆ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ' ಚೀನಾಗೆ ಅತ್ತ ನುಂಗಲೂ ಆಗದೆ, ಇತ್ತ ಉಗುಳಲೂ ಮನಸ್ಸಿಲ್ಲದ ಬಿಸಿತುಪ್ಪದಂತಾಗಿದೆ.

ಪಾಕಿಸ್ತಾನದ ರಾಜಕಾರಣಿಗಳು ಈ ವಿಷಯವಾಗಿ ವಿಭಿನ್ನ ನಿಲುವುಗಳನ್ನು ತಳೆದಿದ್ದು, ಅವರದ್ದೇ ಆದ ಲೆಕ್ಕಾಚಾರದೊಂದಿಗೆ ಚೀನಾದ ಹೊಸ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮಾಧ್ಯಮಗಳು, ಈ ಯೋಜನೆಯ ಅಪಾರದರ್ಶಕತೆಯ ಕುರಿತು ಅಸಮಧಾನ ವ್ಯಕ್ತಪಡಿಸಿ, ಆರ್ಥಿಕ ಮತ್ತು ಪರಿಸರದ ಮೇಲಿನ ಪ್ರಭಾವಗಳ ಬಗ್ಗೆ ಪ್ರಶ್ನೆ ಮಾಡುತ್ತಿವೆ. 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್', ಪಾಕಿಸ್ತಾನಕ್ಕೆ ಇನ್ನೊಂದು ' ಈಸ್ಟ್ ಇಂಡಿಯಾ ಕಂಪೆನಿ' ಯಾಗಿ, ಪಾಕಿಸ್ತಾನದ ಸಾರ್ವಭೌಮತ್ವ ಕಸಿದುಕೊಂಡು ಚೀನಾದ ಪರೋಕ್ಷ ವಸಾಹತುವನ್ನಾಗಿ ಪರಿವರ್ತಿಸಲಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಯೋಜನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಇತರ ಪ್ರಾಂತ್ಯಗಳಿಗೆ ಮೋಸ ಮಾಡಲಿದೆ ಎಂಬ ಪ್ರಾದೇಶಿಕತೆಯ ಧ್ವನಿಯೂ ಚೀನಾ ಯೋಜನೆಗೆ ದೊಡ್ಡ ತಲೆನೋವು. ಪ್ರಜಾಪ್ರಭುತ್ವ ಮತ್ತು ಸಂಯುಕ್ತ ವ್ಯವಸ್ಥೆಯ ಸಂಕೀರ್ಣತೆಗಳು ಚೀನಾದ ಏಕಿಕೃತ ವ್ಯವಸ್ಥೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಸತ್ಯ ಚೀನಾದ ಯೋಜನೆಯನ್ನು ದಿಕ್ಕೆಡಿಸಿದೆ. ಚೀನಾ ನಾಯಕರು ಪಾಕಿಸ್ತಾನಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನಗಳು ಜಾರಿಯಲ್ಲಿದ್ದರೂ, ಫಲಿತಾಂಶ ಅಷ್ಟಕಷ್ಟೇ ಎನ್ನುವಂತಿದೆ.

ರಾಜತಾಂತ್ರಿಕತೆಯ ವಿಷಯಕ್ಕೆ ಬಂದಾಗ ಚೀನಾ ಎಂಥಾ ಬಿಕ್ಕಟ್ಟಿನ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿರುವುದು ದಶಕಗಳಿಂದ ನಡೆದುಬಂದ ರೀತಿ.  ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಪಾಕಿಸ್ತಾನದ ವಿಚಾರದಲ್ಲಿ ಚೀನಾ ತಾಳ್ಮೆ ಕಳೆದುಕೊಳ್ಳುತ್ತಿದೆ ಮತ್ತು ಚೀನಾ ತನ್ನ ಹತಾಶೆಯನ್ನು ಗುಟ್ಟಾಗಿಡುವ ಪ್ರಯತ್ನವನ್ನೂ ಮಾಡಿಲ್ಲ. ಪಾಕಿಸ್ತಾನದಲ್ಲಿ ತಮ್ಮ ಯೋಜನೆಯ ವಿರುದ್ಧ ಧ್ವನಿ ಎತ್ತಿದವರನ್ನು ' ಪಾಕಿಸ್ತಾನದ ಶತ್ರುಗಳು', 'ಅಪಪ್ರಚಾರಕರು' ಎಂದು ಜರೆಯುವ ಮೂಲಕ ವಿರೋಧಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಚೀನಾ ಕಮ್ಯುನಿಸ್ಟ್ ವ್ಯವಸ್ಥೆ! ಇವಿಷ್ಟು ಸಮಸ್ಯೆಗಳ ಮಧ್ಯೆ ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಹುಚ್ಚು ಆಲೋಚನೆಗಳು ತಮ್ಮ ಯೋಜನೆಗೆ ಕೊಡಲಿ ಪೆಟ್ಟಾಗಬಹುದು ಎಂಬ ಅಭದ್ರತೆಯ ಭಾವನೆ ಚೀನೀಯರಲ್ಲಿದೆ. ಪಾಕಿಸ್ಥಾನದ ರಾಜಕೀಯ ವ್ಯವಸ್ಥೆಯ ಅಸ್ಥಿರತೆ ಮತ್ತು ಯಾವ ಕ್ಷಣದಲ್ಲಾದರೂ ಬದಲಾಗಬಲ್ಲ ವಿಚಿತ್ರ ಲಕ್ಷಣ, ಇನ್ನಿತರ ಹತ್ತು ಹಲವು ಅವ್ಯವಸ್ಥೆಗಳ ನೆರಳಲ್ಲಿವೆ ಚೀನಾ ಪ್ರಯತ್ನಗಳು. ಈ ಎರಡು ರಾಷ್ಟ್ರಗಳ ಸ್ನೇಹದ ಉದ್ದೇಶ ವಿಶ್ವ ಶಾಂತಿಗೆ ಧಕ್ಕೆ ತರುವುದೇ ಆಗಿರುವುದರಿಂದ, 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಕಾರಣಕ್ಕಾಗಿ ಈ ದುಷ್ಟ ಕೂಟದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿ, ಈ ದೇಶಗಳು ದೂರವಾದರೂ ಸಂಕಟಪಡುವವರ್ಯಾರೂ ಇಲ್ಲ ಎನ್ನುವುದು ಖಂಡಿತ.


(This article was published in Vishwavani Newsapaper on 19 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಬುಧವಾರ, ಜನವರಿ 18, 2017

ಚೀನಾ ಆಕ್ರಮಣಕ್ಕೆ ಅಮೆರಿಕಾ-ಭಾರತ ಪ್ರತಿಬಾಣ

ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.
-  ಕೀರ್ತಿರಾಜ್

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನೀ ಮಿಲಿಟರಿ ಪ್ರಭಾವ ಮತ್ತು ಚೀನಾದ ಯುದ್ಧ ದಾಹಗಳಿಗೆ ಇದುವರೆಗೆ ಪರಿಣಾಮಕಾರಿ ಎದುರೇಟು ನೀಡಲು ಸಾಧ್ಯವಾಗಿಲ್ಲ. ತನ್ನ ನೆರೆಹೊರೆಯ ಎಲ್ಲಾ ದೇಶಗಳೊಂದಿಗೆ ವೈರತ್ವ ಸಾಧಿಸಿದಾಗಲೂ, ಅಮೆರಿಕಾವನ್ನೇ ಕೆಣಕುವ ಸಾಹಸ ಮಾಡಿದ್ದರೂ, ಚೀನಾಗೆ ಯಾರೂ ಏನೂ ಮಾಡಲಾರರು ಎಂಬ ವಿಷಯ ಮತ್ತೆ ಸಮರ್ಥಿಸಲ್ಪಟ್ಟಿತ್ತು. ಇತ್ತೀಚೆಗೆ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ತನ್ನ ತಂಟೆಗೆ ಬಂದರೆ ಅಮೆರಿಕಾ ಮೇಲೆ ಯುದ್ಧ ಸಾರುವುದಕ್ಕೂ ಸಿದ್ಧ ಎಂದಿರುವ ಚೀನಾ ವಿಶ್ವ ರಾಜಕೀಯದಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಚೀನಾವನ್ನು ಕಟ್ಟಿಹಾಕುವಂಥಾ ಸಮರ್ಥ ರಾಷ್ಟ್ರವೊಂದರ ಕೊರತೆ ಎದ್ದು ಕಾಣುತ್ತಿದೆ. ಚೀನಾ ಆಕ್ರಮಣಕಾರಿ ವರ್ತನೆ ಅಮೆರಿಕಾಗೆ ವಿಶ್ವ ನಾಯಕತ್ವದ ಪ್ರಶ್ನೆಯಾದರೆ, ಭಾರತಕ್ಕದು ಮೂಲ ರಾಷ್ಟ್ರೀಯ ಹಿತಾಸಕ್ತಿಗಳ ಪ್ರಶ್ನೆಯಾಗಿ ಕಾಡುತ್ತಿದೆ. ಚೀನಾ ವಿಶ್ವಶಕ್ತಿಯಾಗಿ ಅಮೆರಿಕಾವನ್ನು ಸರಿಗಟ್ಟಬೇಕಾದಲ್ಲಿ, ಕ್ರಮಿಸಬೇಕಾದ ದೂರ ಬಹಳಷ್ಟಿದೆಯಾದರೂ, ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರ ನೀಡುವಲ್ಲಿ ಅಮೆರಿಕಾ ಸೋಲುತ್ತಿದೆ ಎನ್ನುವುದೂ ಅಷ್ಟೇ ಸತ್ಯ!

ಚೀನಾವನ್ನು ನಿಯಂತ್ರಿಸಲು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಮಿತ್ರ ರಾಷ್ಟ್ರಗಳಾದ ಪಿಲಿಪ್ಪೈನ್ಸ್, ಜಪಾನ್, ಆಸ್ಟ್ರೇಲಿಯಾ ಸಿಂಗಾಪೂರ ಮತ್ತಿತರ ರಾಷ್ಟ್ರಗಳ ಕಡೆಗೆ ಅತಿಯಾಗಿ ಗಮನಹರಿಸುತ್ತಿರುವ ಅಮೆರಿಕಾದ ವಿದೇಶಾಂಗ ನೀತಿ ಧನಾತ್ಮಕ ಫಲಿತಾಂಶ ನೀಡಿಲ್ಲ. ಈ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಸದೃಡವಾಗಿದ್ದರೂ, ದೈತ್ಯ ಚೀನಾ ಆರ್ಭಟ ಮತ್ತು ಬೆದರಿಕೆಗೆ ಒಳಗಾಗಿವೆಯೇ ವಿನಹ ಚೀನಾಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಸವಾಲು ಒಡ್ಡುವುದು ದೂರದ ಮಾತು.  ಈ ಎಲ್ಲಾ ಕಾರಣಗಳಿಂದ,  ಅಮೆರಿಕಾ ವಿದೇಶಾಂಗ ನೀತಿ ತಜ್ಞರ ಗಮನ ಭಾರತದತ್ತ ತಿರುಗಿದೆ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ದಿನೇ ದಿನೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ಭಾರತ ಈ ನಿಟ್ಟಿನಲ್ಲಿ ಅಮೆರಿಕಾದ ಏಕೈಕ ಆಯ್ಕೆ ಎನ್ನುವುದನ್ನು ಅಮೆರಿಕಾದ ರಾಜತಾಂತ್ರಿಕ ನಿಪುಣರು ಮನಗಂಡಿದ್ದಾರೆ. ಟ್ರಂಪ್ ಅಥವಾ ಇನ್ಯಾರೇ ಅಧ್ಯಕ್ಷರಾಗಿದ್ದರೂ, ಏಷ್ಯಾ ಪೆಸಿಫಿಕ್ ನಲ್ಲಿ ಅಮೆರಿಕಾ ಮರುಸಮತೋಲನ ಸಾಧಿಸಲು ಭಾರತದ ಜೊತೆಗಿನ ಮಿತ್ರತ್ವ ಅಮೆರಿಕಾದ ಪಾಲಿಗೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಎರಡು ಬೃಹತ್ ಪ್ರಜಾಪ್ರಭುತ್ವಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಸಹಕಾರಗಳನ್ನು ವೃದ್ಧಿಸಿಕೊಳ್ಳಲಿವೆ. ಭಾರತ ಮತ್ತು ಅಮೆರಿಕಾಗಳ ಸದ್ಯದ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆಲಿಪ್ತ ನೀತಿಯಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತ  ಜಾಗತಿಕ ಮಟ್ಟದಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಿರುವ ರೀತಿಯಲ್ಲಿ ಬದಲಾವಣೆಗಳಾಗಿವೆ. ಅಮೆರಿಕಾವನ್ನು ಸಂಪೂರ್ಣವಾಗಿ ಭಾರತ ಒಪ್ಪಿಕೊಂಡಿಲ್ಲವಾದರೂ, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಾಷಿಂಗ್ಟನ್-ದೆಹಲಿ ರಕ್ಷಣಾ ಒಪ್ಪಂದಗಳು ಬಹುಮುಖ್ಯ ಪಾತ್ರವಹಿಸಲಿದೆ.

Image may contain: 1 personಹಿಂದೆಲ್ಲಾ ಪಾಕಿಸ್ತಾನದ ಪರವಹಿಸಿಕೊಂಡು ಭಾರತವನ್ನು ಟೀಕಿಸುತ್ತಿದ್ದ ಅಮೆರಿಕಾದ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನದ ಕಿಡಿಗೇಡಿ ಚಟುವಟಿಕೆಗಳಿಗೆ ಉತ್ತರವಾಗಿ ಭಾರತೀಯ ಸೇನೆ ಗಡಿನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸ ಮಾಡಿದಾಗ, ಈ ಕೃತ್ಯಕ್ಕಾಗಿ ಅಮೆರಿಕಾ ಭಾರತವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭ್ರಮನಿರಸನವಾಗಿತ್ತು. ತನ್ನ ಎಂದಿನ ವರಸೆ ಬದಲಿಸಿದ ಅಮೆರಿಕಾ, ಭಾರತವನ್ನು ಟೀಕಿಸದೆ ಎರಡೂ ದೇಶಗಳು ಈ ವಿವಾದಗಳನ್ನು ಕೊನೆಗೊಳಿಸಲು ಶ್ರಮಪಡಬೇಕು ಎಂದು ಕೈತೊಳೆದುಕೊಂಡಿತ್ತು. ಭಾರತದ ಸ್ನೇಹ ಕಳೆದುಕೊಳ್ಳಲು ಇಷ್ಟವಿಲ್ಲದೇ ಅಮೆರಿಕಾ ರಾಜಕೀಯ ಸಂದರ್ಭಕ್ಕೆ ಸರಿಯಾದ (Politically Correct) ಹೇಳಿಕೆ ಕೊಟ್ಟು ಜಾಣತನ ತೋರಿಸಿತ್ತು! ಈ ನಡೆ ಭಾರತದ ರಾಜಕಾರಣಿಗಳಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲೂ ಅಮೆರಿಕಾ ಭಾರತದ ಪರವಾಗಿದೆ ಎಂಬ ಭಾವನೆ ಮೂಡಿಸಿದ್ದಷ್ಟೇ ಅಲ್ಲದೇ ಅಮೆರಿಕಾ ತನ್ನ ವಿದೇಶಾಂಗ ನೀತಿಯ ಆದ್ಯತೆಯಾಗಿ ಪಾಕಿಸ್ತಾನದ ಬದಲು ಭಾರತವನ್ನು ಆಯ್ದುಕೊಂಡಿದ್ದು ಸ್ಪಷ್ಟ. ದಶಕಗಳಿಂದ ಪಾಕಿಸ್ತಾನ ಅಮೆರಿಕಾದ ನೆರವು ಪಡೆದುಕೊಂಡು ಅಮೆರಿಕಾದ ಬೆನ್ನಿಗೆ ಚೂರಿ ಹಾಕುತ್ತದೆ ಎಂಬ ವಿಚಾರ ತಡವಾಗಿಯಾದರೂ ಅಮೆರಿಕಾಗೆ ಅರಿವಾಗಿದೆ. ದೀರ್ಘಕಾಲದ ರಾಜತಾಂತ್ರಿಕ ಗೆಳೆತನಕ್ಕೆ ಸಮಯಸಾಧಕತೆಗಿಂತ, ಆಯಾ ರಾಷ್ಟ್ರಗಳ ಐತಿಹಾಸಿಕ ಮೌಲ್ಯಗಳು ಮುಖ್ಯವಾಗುತ್ತವೆ. ಈ ವಿಚಾರ ಅಮೆರಿಕಾ ಮತ್ತು ಭಾರತಗಳಿಗೂ ಅನ್ವಯವಾಗುತ್ತದೆ.

1962ರ ಯುದ್ಧದ ಸಂದರ್ಭದಲ್ಲಿ ಚೀನಾದಿಂದ ಭಾರತಕ್ಕಿದ್ದ ಸವಾಲುಗಳು ಇವತ್ತಿನ ಸವಾಲುಗಳಿಗಿಂತ ಭಿನ್ನ. 1962ರಲ್ಲಿ ಭಾರತವನ್ನು ಉತ್ತರದ ಗಡಿಗಳಲ್ಲಿ ಕಾಡಿದ್ದ ಚೀನಾ ನೌಕಾಶಕ್ತಿ ಅಷ್ಟಕ್ಕಷ್ಟೇ ಎಂಬತ್ತಿತ್ತು. ಆದರೆ ಇವತ್ತಿಗೆ ಚೀನಾ ತನ್ನ ನೌಕಾಬಲವನ್ನು ವ್ಯವಸ್ಥಿತ ರೀತಿಯಲ್ಲಿ ಬಲಿಷ್ಟವನ್ನಾಗಿಸಿದೆ. ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬನ್ತೋಟಾ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತಿತರ ಕಡೆಗಳಲ್ಲಿ ನೌಕಾನೆಲೆ ಸ್ಥಾಪಿಸಿಕೊಂಡು ಭಾರತವನ್ನು ಸುತ್ತುವರಿದಿರುವ ಚೀನಾ ಸಮರತಂತ್ರ  ರಾಜತಂತ್ರಜ್ಞರ ವಲಯದಲ್ಲಿ ಮುತ್ತಿನ ಹಾರದ ನೀತಿ (String of Pearls) ಎಂದೇ ಚಿರಪರಿಚಿತ! ಇತ್ತೀಚೆಗೆ ಚೀನಾ ಹಿಂದೂಮಹಾಸಾಗರವನ್ನು ನಿಯಂತ್ರಿಸಲು, ಕನಿಷ್ಟ ಪಕ್ಷ ಈ ಪ್ರದೇಶದಲ್ಲಿ ಪ್ರಭಾವ ವಿಸ್ತರಿಸಲು ಪ್ರಯತ್ನಿಸುತ್ತಿರುವುದು, ಭಾರತ ಈ ಪ್ರದೇಶದಲ್ಲಿ ದಶಕಗಳಿಂದ ಕಾಪಾಡಿಕೊಂಡಿದ್ದ ಪ್ರಭಾವಕ್ಕೆ ಸವಾಲೊಡ್ಡುತ್ತಿದೆ. ಹೀಗಾಗಿ ಇವತ್ತಿಗೆ ಭಾರತ ಎಲ್ಲಾ ದಿಕ್ಕುಗಳಿಂದಲೂ ಚೀನಾದ ಪ್ರಭಾವದ ವಿರುದ್ಧ ಹೋರಾಡಬೇಕಾದ ಸಂದಿಗ್ಧತೆ ಮತ್ತು ಅನಿವಾರ್ಯತೆಗಳಿವೆ. ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.

ಭಾರತ ವಿಶ್ವಮಟ್ಟದಲ್ಲಿ ಪ್ರಭಾವಿ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತದ ಏಕಾಗ್ರತೆ ಕೆಡಿಸಲು ಪಾಕಿಸ್ತಾನವನ್ನು ಬಳಸಿಕೊಂಡು, ಭಾರತದ ಗಡಿಗಳಲ್ಲಿ ಒತ್ತಡ ಸಂಘರ್ಷಗಳನ್ನು ಸೃಷ್ಟಿಸುತ್ತಿದೆ ಚೀನಾ! ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿರುವ ಚೀನಾ ನಿಲುವುಗಳಿಗೂ, ತಕ್ಕ ಉತ್ತರ ನೀಡುತ್ತಿರುವ ಭಾರತಕ್ಕೆ ಅಮೆರಿಕಾ ಬೆಂಬಲ ಆನೆ ಬಲ ತುಂಬಿದಂತಾಗಿದೆ. ಚೀನಾದ ವೈರತ್ವಕ್ಕೆ ಒಳಗಾದ ದಲಾಯಿ ಲಾಮರವರಿಗೆ ಆಶ್ರಯ ನೀಡಲು ಏಷ್ಯಾದ ಬೇರೆ ಯಾವುದೇ ದೇಶವೂ ಒಪ್ಪಿಕೊಳ್ಳುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಚೀನಾಗೆ ಸಡ್ಡು ಹೊಡೆದು ಭಾರತ ದಲಾಯಿ ಲಾಮರವರಿಗೆ ಆಶ್ರಯ ನೀಡಿರುವುದು ರಾಜತಾಂತ್ರಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಇವತ್ತು ಜಾಗತಿಕ ರಾಜಕೀಯದಲ್ಲಿ ಭಾರತದ ರಾಜತಾಂತ್ರಿಕತೆಯಲ್ಲಿ ಕಾಣಿಸುತ್ತಿರುವ ಆತ್ಮವಿಶ್ವಾಸ ಚೀನಾದ ನಿದ್ದೆಗೆಡಿಸುತ್ತಿರುವುದು ಸುಳ್ಳಲ್ಲ. ರಾಜತಾಂತ್ರಿಕ ಸಂಕೋಚಗಳಿಂದ ನಿಧಾನವಾಗಿ ಹೊರಬರುತ್ತಿರುವ ಭಾರತ ಅಮೆರಿಕಾದೊಂದಿಗೆ ಸೇರಿಕೊಂಡು ಚೀನಾವನ್ನು ಕಟ್ಟಿಹಾಕುವಂಥಾ ಸಮರತಂತ್ರವೊಂದನ್ನು ರೂಪಿಸಿದರೂ ಆಶ್ಚರ್ಯವೇನಿಲ್ಲ.

ಅಮೆರಿಕಾ ಮತ್ತು ಭಾರತದ ಸಂಪೂರ್ಣವಾಗಿ ರಾಜತಾಂತ್ರಿಕ ಕೊಡುಕೊಳ್ಳುವಿಕೆಗಳಿಗೆ ಕೆಲ ಅಡೆತಡೆಗಳಿವೆ. ಈ ಹಿಂದೆ ಅಮೆರಿಕಾ ಮತ್ತು ಭಾರತಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹಾಗೂ ಅಂತರಾಷ್ಟ್ರೀಯ ವ್ಯವಸ್ಥೆ ಮತ್ತು ಒಪ್ಪಂದಗಳಲ್ಲಿ ಭಾರತದ ನಿಲುವುಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕಾ ಭಾರತದ ಮೇಲೆ ಕೆಲ ನಿರ್ಬಂಧಗಳನ್ನು ಹೇರಿತ್ತು. ಈ ನಿರ್ಬಂಧಗಳು ಇವತ್ತು ಅಮೆರಿಕಾದಿಂದ ತಂತ್ರಜ್ಞಾನ ವರ್ಗಾವಣೆ ಮತ್ತು ರಕ್ಷಣಾ ಸಹಕಾರಗಳಿಗೆ ತಡೆಯಾಗಿವೆ. ಈ ಎಲ್ಲಾ ಅಡೆ ತಡೆಗಳು ಸಣ್ಣಪ್ರಮಾಣದಲ್ಲಿದ್ದು, ಇವುಗಳನ್ನು ಬದಲಾಯಿಸಿಕೊಂಡು, ಭಾರತದ ಜೊತೆ ಸಹಕಾರ ಬೆಳೆಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.  ಚೀನಾದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಭಾರತ ಮತ್ತು ಅಮೆರಿಕಾಗಳ ಹಿತಾಸಕ್ತಿಗಳಿಗೆ ಮಾರಕ ಎನ್ನುವುದನ್ನು ಎರಡೂ ದೇಶಗಳು ಒಪ್ಪಿಕೊಂಡಿರುವುದರಿಂದ, ಈ ಎರಡು ದೇಶಗಳ ಮಧ್ಯೆ ದೊಡ್ಡ ಮಟ್ಟದ ಸಹಕಾರ ಈ ಹೊತ್ತಿನ ರಾಜತಾಂತ್ರಿಕ ಅವಶ್ಯಕತೆಯಾಗಿ ಬದಲಾಗಿದೆ. ಅಮೆರಿಕಾದ ವಿದೇಶಾಂಗ ನೀತಿ ನಿಪುಣರು ಭಾರತದ ಜೊತೆಗೆ ರಾಜತಾಂತ್ರಿಕ ಸಹಕಾರಕ್ಕಿರುವ ತಡೆಗಳನ್ನು ನಿವಾರಿಸುವಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದರೊಂದಿಗೆ, ಚೀನೀ ಡ್ರ್ಯಾಗನ್ ಆಟಾಟೋಪಗಳಿಗೆ ಕಡಿವಾಣ ಹಾಕಿ ಪಾಕಿಸ್ತಾನದ ತಲೆಯ ಮೇಲೂ ಮೊಟಕುವುದಕ್ಕೂ ಸುವರ್ಣಾವಕಾಶವೊಂದನ್ನು ಕಲ್ಪಿಸಿದಂತಾಗಿದೆ.

(This article was published in Hosa Digantha Newsapaper on 17 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ರಷ್ಯಾ-ಚೀನಾ ಮೈತ್ರಿಗೆ ನಿಕ್ಸನ್-ಕಿಸಿಂಜರ್ ಪ್ರತಿತಂತ್ರ?

ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್

ಬದಲಾವಣೆಯ ಹೊರತಾಗಿ ಶಾಶ್ವತವಾದುದು ಬೇರಾವುದೂ ಇಲ್ಲ. ಪರಿವರ್ತನೆ ಜಗದ ನಿಯಮ ಎಂಬಂತೆ ಪ್ರಪಂಚ ಬದಲಾಗುತ್ತಲೇ ಇರುತ್ತದೆ. ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್, ಹೀಗಾಗಿ ಪ್ರಪಂಚವೆಂದರೆ ನಮ್ಮನ್ನು ಬಿಟ್ಟರೆ ಯಾರಿಲ್ಲ ಎಂಬಂತೆ ಮೆರೆಯುತ್ತಿದ್ದ ಬ್ರಿಟನ್ ಎರಡು ವಿಶ್ವಯುದ್ಧಗಳ ನಂತರ ಮಂಕಾಗಿ ಹೋಗಿತ್ತು. ವಿಶ್ವದ ಶಕ್ತಿಕೇಂದ್ರ ಯುರೋಪಿನ ಬ್ರಿಟನ್ ನಿಂದ, ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಮೆರಿಕಾಕ್ಕೆ ಪ್ರತಿ ಶಕ್ತಿಯಾಗಿ ಸೊವಿಯೆತ್ ಒಕ್ಕೂಟವೆಂಬ ಕಮ್ಯುನಿಸ್ಟ್ ದೈತ್ಯನೂ ಹುಟ್ಟಿಕೊಂಡು ಹಲವು ದಶಕಗಳ ಶೀತಲ ಸಮರಕ್ಕೂ ಸಾಕ್ಷಿಯಾಯ್ತು. ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಗಳು ಕೇವಲ ಆ ಎರಡು ರಾಷ್ಟ್ರಗಳಿಗಷ್ಟೇ ಸಂಬಂಧಿಸದೆ, ಇಡೀ ವಿಶ್ವ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿಶದಪಡಿಸಿತ್ತು ಈ ಛಾಯಾ ಯುದ್ಧ! ಈ ಛಾಯಾ ಯುದ್ಧದ ನಿರ್ವಹಣೆಯಲ್ಲಿ ಅಮೆರಿಕಾ ತೋರಿದ ರಾಜತಾಂತ್ರಿಕ ಚಾಕಚಕ್ಯತೆಯಲ್ಲಿ ಅಗ್ರಸ್ಥಾನ ಅಲಂಕರಿಸುವುದು, ಸೊವಿಯೆತ್ ಮತ್ತು ಚೀನಾಗಳ ಗೆಳೆತನ ಮುರಿದು, ಶಕ್ತಿರಾಜಕೀಯದಲ್ಲಿ ಸಮತೋಲನ ಕಾಯ್ದುಕೊಂಡ ಅಮೆರಿಕಾದ ಜಾಣತನ.

ಶೀತಲ ಸಮರ ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳ ಘರ್ಷನೆಯಾಗಿ ಬಿಂಬಿತವಾದರೂ, ಚೀನಾ ತನ್ನದೇ ಆದ ಪಾತ್ರ ನಿರ್ವಹಿಸಿತ್ತು. ಶೀತಲ ಸಮರದ ಆರಂಭದ ದಿನಗಳಲ್ಲಿ ಚೀನಾ ಕಮ್ಯುನಿಸ್ಟ್ ಎಂಬ ಕಾರಣಕ್ಕಾಗಿ, ಸೊವಿಯೆತ್ ಒಕ್ಕೂಟದ ಬೆಂಬಲಕ್ಕೆ ನಿಂತಿತ್ತು. ವಿಶ್ವದ ಈ ಎರಡು ಕಮ್ಯುನಿಸ್ಟ್ ದೈತ್ಯರನ್ನು ಒಟ್ಟಾಗಿರುವಾಗ ಎದುರಿಸುವುದು ಕಷ್ಟಸಾಧ್ಯ ಎನ್ನುವುದು ಅಮೆರಿಕಾಗೆ ತಿಳಿಯದ ವಿಷಯವೇನಾಗಿರಲಿಲ್ಲ. ಇಬ್ಬರು ಬಲಿಷ್ಟ ಎದುರಾಳಿಗಳು ಒಂದಾದಾಗ ಚಾಣಕ್ಯನ ಭೇದ ನೀತಿಯನ್ನು ಅನುಸರಿಸುವುದು ಅಮೆರಿಕಾಗೆ ಅನಿವಾರ್ಯವಾಗಿತ್ತು. ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕಿಳಿಸಿದ ಕೀರ್ತಿ ನಿಕ್ಸನ್-ಕಿಸಿಂಜರ್ ಜೋಡಿಗೆ ಸಲ್ಲುತ್ತದೆ. ಭೇದ ನೀತಿಯ ಯಶಸ್ಸಿನ ಕುರುಹಾಗಿ ಸೊವಿಯೆತ್ ಒಕ್ಕೂಟದಿಂದ ಚೀನಾ ದೂರವಾಗುತ್ತದೆ ಮತ್ತು ಅಮೆರಿಕಾಗೆ ಹತ್ತಿರವಾಗಿ ಸೊವಿಯೆತ್ ಒಕ್ಕೂಟದ ಬಲ ಕುಗ್ಗುವಂತೆ ಮಾಡುತ್ತದೆ.

1945ರಲ್ಲಿ ಜಪಾನ್ ಶರಣಾಗತಿಯೊಂದಿಗೆ, ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವೊಂದರ ನಿರ್ಮಾಣ ಮಾವೊ ನೇತೃತ್ವದಲ್ಲಿ ಭರದಿಂದ ಸಾಗುತ್ತದೆ. ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಸ್ಥಾಪಿಸಲು ಮಾವೊ ಮತ್ತು ಆತನ ಕಮ್ಯುನಿಸ್ಟ್ ಸಹವರ್ತಿಗಳಿಗೆ ಬೆಂಬಲ ನೀಡಿದ್ದು ಸೊವಿಯೆತ್ ಒಕ್ಕೂಟದ ಜೊಸೆಫ್ ಸ್ಟಾಲಿನ್! ಸ್ಟಾಲಿನ್ ಬೆಂಬಲ ದೊರೆಯದಿದ್ದರೆ ಮಾವೊ ಚೀನಾದಲ್ಲೊಂದು ಕಮ್ಯುನಿಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಲೂ ಇರಲಿಲ್ಲ, ಮಾನವ ಜನಾಂಗದ ಇತಿಹಾಸದಲ್ಲಿ ಬೃಹತ್ ಹತ್ಯಾಕಾಂಡ ನಡೆಸಿದವರ ಸಾಲಿನಲ್ಲಿ ಮಾವೊ ಹೆಸರು ಸೇರಿಕೊಳ್ಳುತಲೂ ಇರಲಿಲ್ಲ. ಅದೇನೆ ಇದ್ದರೂ 1949ರಲ್ಲಿ ಚೀನಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಹೆಸರಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಸೊವಿಯೆತ್ ಒಕ್ಕೂಟ ಮತ್ತು ಚೀನಾಗಳ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಸ್ಟಾಲಿನ್ ನ ನಾಯಕತ್ವವನ್ನು ಮಾವೊ ಒಪ್ಪಿಕೊಂಡಿದ್ದ ಮತ್ತು ಆರಂಭಿಕ ಹಂತದಲ್ಲಿ ಸೊವಿಯೆತ್ ಕಮ್ಯುನಿಸ್ಟ್ ಜಗತ್ತಿನ ನಾಯಕ ಎನ್ನುವುದನ್ನು ಒಲ್ಲದ ಮನಸ್ಸಿನಿಂದಲೇ ಚೀನಾ ಒಪ್ಪಿಕೊಳ್ಳಬೇಕಾಯ್ತು.

Image may contain: 1 person1953ರಲ್ಲಿ ಸ್ಟಾಲಿನ್ ಸಾವಿನೊಂದಿಗೆ ಚೀನಾ ಮತ್ತು ಸೊವಿಯೆತ್ ಗಳ ಸಂಬಂಧಗಳೂ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಲಾರಂಬಿಸುತ್ತವೆ. ಸ್ಟಾಲಿನ್ ನಂತರ ಸೊವಿಯೆತ್ ಅಧಿಕಾರದ ಚುಕ್ಕಾಣಿ ಹಿಡಿದ ನಿಕಿತಾ ಕ್ರುಶ್ಚೆವ್ ಸರಕಾರ, ಮಾರ್ಕ್ಸಿಸ್ಟ್-ಲೆನಿನಿಸಂ ತತ್ವದ ಪರಿಶುದ್ಧ ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸ್ಟಾಲಿನ್ ಜಾರಿಗೆ ತಂದಿದ್ದ ಹಲವು ವಿಚಾರಗಳನ್ನು ಮೂಲೆಗೆ ತಳ್ಳುವ ಪ್ರಕ್ರಿಯೆ (De-Stalinization) ಹೊಸ ಸರಕಾರದಿಂದಾಗುತ್ತದೆ. ಈ ಎಲ್ಲಾ ಬೆಳವಣಿಗಗಳು ಸೊವಿಯೆತ್ ಮತ್ತು ಚೀನಾಗಳ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯಗಳ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸೊವಿಯೆತ್ ನಾಯಕ ಕ್ರುಶ್ಚೆವ್ ಪಶ್ಚಿಮದ ರಾಷ್ಟ್ರಗಳೊಂದಿಗೆ 'ಶಾಂತಿಯುತ ಸಹಬಾಳ್ವೆ'ಯನ್ನು (peaceful coexistence) ಒಪ್ಪಿಕೊಂಡಿದ್ದನ್ನು ಮಾವೊ ಮುಕ್ತವಾಗಿಯೇ ವಿರೋಧಿಸುತ್ತಾರೆ. ಈ ಎರಡು ದೈತ್ಯ ರಾಷ್ಟ್ರಗಳು ಕಮ್ಯುನಿಸ್ಟ್ ಜಗತ್ತಿನ ನಾಯಕತ್ವಕ್ಕಾಗಿ ಸ್ಪರ್ಧಿಸತೊಡಗುತ್ತವೆ. ಕೆಲ ಕಮ್ಯುನಿಸ್ಟ್ ರಾಷ್ಟ್ರಗಳು ಸೊವಿಯೆತ್ ಬಣದಲ್ಲಿ ಗುರುತಿಸಿಕೊಂಡರೆ, ಕೆಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಚೀನಾ ಪ್ರಭಾವ ವಿಸ್ತರಿಸಿಕೊಳ್ಳುತ್ತದೆ. ಈ ಪೈಪೋಟಿಯಲ್ಲಿ ಸೊವಿಯೆತ್ ಒಕ್ಕೂಟ ಭಾರತದ ಸ್ನೇಹ ಸಂಪಾದಿಸಿ, ಚೀನಾ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನೂ ಮಾಡಿತ್ತು! ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸೊವಿಯೆತ್ ರಾಜಿ ಮಾಡಿಕೊಂಡಿದ್ದನ್ನೂ ಚೀನಾ ಕಟುವಾಗಿ ಟೀಕಿಸಿತ್ತು. 1969ರಲ್ಲಿ ಗಡಿವಿವಾದಗಳು ಸೊವಿಯೆತ್ ಮತ್ತು ಚೀನಾ ಮಿಲಿಟರಿ ಹಣಾಹಣಿಯ ಮಟ್ಟಕ್ಕೆ ತಲುಪಿದ್ದು, ಈ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ನಡುವಿನ ವೈಷಮ್ಯಕ್ಕೆ ಸಾಕ್ಷಿ.

ಈ ಎರಡು ಕಮ್ಯುನಿಸ್ಟ್ ದೇಶಗಳ ಪ್ರಭಾವ ವಿಸ್ತರಿಸಿದ ಕಡೆಯೆಲ್ಲಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯ್ತು. ಆಫ್ರಿಕಾ ಖಂಡದಲ್ಲಿ ನಡೆದ ದಂಗೆ, ಘರ್ಷಣೆಗಳಲ್ಲಿ ಚೀನಾ ಒಂದು ಗುಂಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಸೊವಿಯೆತ್ ಇನ್ನೊಂದು ಗುಂಪು ಸೇರಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ವಿಯೆಟ್ನಾಮ್, ಅಫ್ಘಾನಿಸ್ತಾನ್ ಮತ್ತಿತರ ಪ್ರದೇಶಗಳಲ್ಲಿ ಸೊವಿಯೆತ್ ಮತ್ತು  ಚೀನಾಗಳು ಪರಸ್ಪರ ಮುಸುಕಿನ ಗುದ್ದಾಟ ನಡೆಸಿಕೊಂಡವು. ನಂತರದ ವರ್ಷಗಳಲ್ಲಿ ಈ ವೈಷಮ್ಯ ಸ್ವಲ್ಪ ಮಟ್ಟಿಗೆ ತಗ್ಗಿತಾದರೂ, ಮಾವೊ-ಕ್ರುಶ್ಚೇವ್ ಸಮಯದಲ್ಲಿ ಈ ಎರಡು ರಾಷ್ಟ್ರಗಳು ಸೃಷ್ಟಿಸಿಕೊಂಡ ಸಮಸ್ಯೆಗಳು, ಏಕೀಕೃತ ಕಮ್ಯುನಿಸ್ಟ್ ಬಣದ ಕಲ್ಪನೆಯನ್ನು ರಿಪೇರಿ ಮಾಡಲಾಗದಷ್ಟು ಕೆಡಿಸಿಬಿಟ್ಟಿತ್ತು! ಚೀನಾ ಮತ್ತು ಸೋವಿಯೆತ್ ಗಳು ಪರಸ್ಪರ ಮಿಲಿಟರಿ ಸಂಘರ್ಷದ ಹಂತಕ್ಕೆ ಬಂದ ಮೇಲಂತೂ ಮಾವೊ ಆಲೋಚನಾ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ಶತ್ರುಗಳಿಬ್ಬರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ಅಮೆರಿಕಾ ಪಾಲಿಗೆ ಬಯಸದೇ ಬಂದ ಭಾಗ್ಯದಂತಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಆಗಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾ ಜೊತೆ ನಡೆಸಿದ ರಾಜತಾಂತ್ರಿಕ ಮಾತುಕತೆ ಧನಾತ್ಮಕ ಫಲ ನೀಡಿತ್ತು. 1969ರಲ್ಲಿ ಚೀನಾದ ಮೇಲೆ ವಿಧಿಸಿದ್ದ ವ್ಯಾಪಾರ ಮತ್ತು ಪ್ರಯಾಣದ ನಿರ್ಬಂಧಗಳನ್ನು ಅಮೆರಿಕಾ ಸಡಿಲಿಸಿತ್ತು! ಪಾಕಿಸ್ತಾನವನ್ನು ರಾಜತಾಂತ್ರಿಕ ಮಧ್ಯವರ್ತಿಯಾಗಿ ಸಮರ್ಪಕವಾಗಿ ಬಳಸಿಕೊಂಡ ನಿಕ್ಸನ್ ಚಾಣಾಕ್ಷತೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ಸ್ನೇಹವನ್ನು ಮುರಿದುಬಿಡುತ್ತದೆ.

1971ರಲ್ಲಿ ಅಮೆರಿಕಾದ ಟೇಬಲ್ ಟೆನ್ನಿಸ್ ತಂಡವೊಂದು ಚೀನಾಗೆ ಭೇಟಿ ನೀಡುವುದರೊಂದಿಗೆ, ಎರಡು ದೇಶಗಳ ಮಧ್ಯೆ ನಡೆದ ರಾಜತಾಂತ್ರಿಕ ನಡೆಗಳು 'ಪಿಂಗ್-ಪಾಂಗ್ ರಾಜತಾಂತ್ರಿಕತೆ' (ping-pong diplomacy) ಎಂದೇ ಪ್ರಸಿದ್ಧ. ನಿಕ್ಸನ್ ನ ಪರಮಾಪ್ತ ಮತ್ತು ಅಮೆರಿಕಾದ ಸಾರ್ವಕಾಲಿಕ ರಾಜತಾಂತ್ರ ನಿಪುಣ ಹೆನ್ರಿ ಕಿಸಿಂಜರ್ 1971 ಜುಲೈನಲ್ಲಿ ಪಾಕಿಸ್ತಾನ ಪ್ರವಾಸದ ನೆಪದಲ್ಲಿ, ರಹಸ್ಯವಾಗಿ ಬೀಜಿಂಗ್ ಗೂ ಭೇಟಿ ನೀಡುತ್ತಾನೆ. ಅದೇ ವರ್ಷ ಅಕ್ಟೋಬರ್ ನಲ್ಲಿ ಚೀನಾಗೆ ಭೇಟಿ ನೀಡುವ ಕಿಸಿಂಜರ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗೆ ವಿಶ್ವಸಂಸ್ಥೆಯ ಸದಸ್ಯನಾಗಿಸಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿಸುವ ಪ್ರಕ್ರಿಯೆಗೆ ಅಮೆರಿಕಾದ ಬೆಂಬಲವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಫೆಬ್ರವರಿ 1972ರಂದು ನಿಕ್ಸನ್ ಮೊದಲ ಬಾರಿ ಚೀನಾಗೆ ಭೇಟಿ ನೀಡುತ್ತಾರೆ. ಇಷ್ಟಾದರೂ ನಿಕ್ಸನ್ ಕಾಲದಲ್ಲಿ ಅಮೆರಿಕಾ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಲಾಗಲಿಲ್ಲ. ಮುಂದೆ 1979ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್, ರಿಪಬ್ಲಿಕ್ ಆಫ್ ಚೀನಾದೊಂದಿಗೆ(ತೈವಾನ್) ಸಂಬಂಧಗಳನ್ನು ಅಂತ್ಯಗೊಳಿಸಿದಾಗಲೇ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಕಮ್ಯುನಿಸ್ಟ್ ಚೀನಾ) ಅಮೆರಿಕಾ ಜೊತೆಗಿನ ರಾಜತಾಂತ್ರಿಕ ವ್ಯವಹಾರಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು. ಈ ಪ್ರಕ್ರಿಯೆಗಳು ಅಮೆರಿಕಾ ಮತ್ತು ಚೀನಾಗಳನ್ನು ಆಪ್ತ ರಾಷ್ಟ್ರಗಳನ್ನಾಗಿಸದೇ ಹೋದರೂ, ಇಂಥಾ ಸಂದರ್ಭವನ್ನು ನಾಜೂಕಾಗಿ ನಿರ್ವಹಿಸಿ ಅಮೆರಿಕಾ ವಿರುದ್ಧದ ಸೊವಿಯೆತ್-ಚೀನಾ ಸಂಭವನೀಯ ಮೈತ್ರಿಯೊಂದನ್ನು ತಡೆದ ಹೆಗ್ಗಳಿಕೆ ನಿಕ್ಸನ್-ಕಿಸಿಂಜರ್ ರಾಜತಾಂತ್ರಿಕ ಪ್ರಯತ್ನಗಳಿಗೆ ಸಲ್ಲುತ್ತದೆ.

ಆಧುನಿಕ ವಿಶ್ವರಾಜಕೀಯ ಮತ್ತೆ ನವ ಶೀತಲ ಸಮರದತ್ತ ಸಾಗುತ್ತಿದೆ. ಸೊವಿಯೆತ್ ಒಕ್ಕೂಟದ ಆಕ್ರಮಣಶೀಲತೆಯನ್ನು ರಷ್ಯಾ ಮತ್ತೆ ನೆನಪಿಸುತ್ತಿದೆಯಷ್ಟೇ ಅಲ್ಲದೇ, ರಷ್ಯಾ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಚೀನಾ ಕಡೆಗೆ ವಾಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚೀನಾದ ಉದ್ದೇಶಗಳು ಮತ್ತು ಜಾಗತಿಕ ಅಜೆಂಡಾಗಳು ಚೀನಾ ಮತ್ತು ರಷ್ಯಾದ ಮಿಲಿಟರಿ ಮೈತ್ರಿಯೊಂದಕ್ಕೆ ದಾರಿ ಮಾಡಿಕೊಟ್ಟಿರುವುದೂ ಸುಳ್ಳಲ್ಲ. ಒಬಾಮ ಆಡಳಿತದಲ್ಲಿ ಅಮೆರಿಕಾ ಚೀನಾ ಮತ್ತು ರಷ್ಯಾಗಳೆರಡನ್ನೂ ನಿಯಂತ್ರಿಸುವ ಪ್ರಯತ್ನದಲ್ಲಿ ಈ ಎರಡು ದೇಶಗಳ ವಿರೋಧ ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ರಷ್ಯಾ-ಚೀನಾಗಳು ಇನ್ನಷ್ಟು ಹತ್ತಿರವಾಗಲು ಪರೋಕ್ಷವಾಗಿ ಸಹಕರಿಸಿದಂತಾಗಿದೆ. ಇವತ್ತಿಗೆ ಅಮೆರಿಕಾ ಎದುರಿಸಬೇಕಾಗಿರುವ ಸವಾಲುಗಳು ಹಿಂದೆಂದಿಗಿಂತಲೂ ವಿಭಿನ್ನ. ಚೀನಾ, ರಷ್ಯಾ, ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಜುವೆಲಾ, ಇಸ್ಲಾಮಿಕ್ ಸ್ಟೇಟ್ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಏಕಕಾಲಕ್ಕೆ ಎದುರಿಸಬೇಕಾದ ಸವಾಲು ಅಮೆರಿಕಾ ಮುಂದಿದೆ. ಜೈವಿಕ, ರಾಸಾಯನಿಕ ಮತ್ತು ಅಣ್ವಸ್ತ್ರಗಳ ಅಸ್ತಿತ್ವದೊಂದಿಗೆ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಸಣ್ಣ ಘರ್ಷಣೆ ಈಡೀ ವಿಶ್ವದ ಅಳಿವು-ಉಳಿವಿನ ಪ್ರಶ್ನೆಯಾಗುತ್ತದೆ! ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.

(This article was published in Vishwavani Newsapaper on 13 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru