RAW ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
RAW ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಫೆಬ್ರವರಿ 10, 2017

'ರಾ' ಹದ್ದಿನ ಕಣ್ಣಲ್ಲಿ ಪಾಕ್ ಅಣ್ವಸ್ತ್ರ ಯೋಜನೆ


ರಾಷ್ಟ್ರಗಳ ನಡುವಿನ ಶಕ್ತಿ ರಾಜಕೀಯದಲ್ಲಿ ಸ್ವಂತ ಶಕ್ತಿ ಎಷ್ಟು ಪ್ರಮುಖವೋ, ಶತ್ರುವಿನ ಬಲಾಬಲಗಳ ಪರಿಚಯ ಅಷ್ಟೇ ಮುಖ್ಯ. ಇದೇ ಕಾರಣಕ್ಕಾಗಿ, ಪ್ರತೀ ದೇಶದಲ್ಲೂ ಅವರದ್ದೇ ಆದ ಆದ ಗುಪ್ತಚರ ದಳಗಳಿವೆ. ಒಂದು ರೀತಿಯಲ್ಲಿ ಎಲ್ಲಾ ರಾಷ್ಟ್ರಗಳೂ ತಮ್ಮ ವೈರಿಗಳು ಮಾತ್ರವಲ್ಲದೇ ಮಿತ್ರರ ಮೇಲೂ ಒಂದು ರೀತಿಯ ಛಾಯಾ ಯುದ್ಧದಲ್ಲಿ ತೊಡಗಿರುತ್ತವೆ. ಇತರ ದೇಶಗಳ ಸಣ್ಣ ಪುಟ್ಟ ರಹಸ್ಯಗಳನ್ನೂ ತಮ್ಮ ದೇಶದ ಪರವಾಗಿ ಬಳಸಿಕೊಳ್ಳುವ ಗುಪ್ತಚರ ಸಂಸ್ಥೆಗಳ ಉದಾಹರಣೆಗಳಿದ್ದಂತೆ, ಈ ಸಂಸ್ಥೆಗಳ ಒಂದು ಕ್ಷಣದ ಮೈಮರೆವು ದೇಶಕ್ಕೆ ಗಂಡಾಂತರ ತಂದ ನಿದರ್ಶನಗಳೂ ಇವೆ. ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಕುರಿತಾಗಿಯೂ ಭಾರತದ ಗುಪ್ತಚರ ದಳ 'ರಾ' ಹದ್ದಿನ ಕಣ್ಣಿಟ್ಟಿತ್ತು. ಈ ಬಗ್ಗೆ ದಶಕಗಳಿಂದ ರಹಸ್ಯವಾಗಿದ್ದ ಕಡತಗಳು ಮತ್ತು ದಾಖಲೆಗಳು ವಿವರ್ಗೀಕರಿಸಲ್ಪಟ್ಟು, ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ 'ರಾ' ಸಂಗ್ರಹಿಸಿದ್ದ ಮಾಹಿತಿಗಳು ಹೊರಬಿದ್ದಿವೆ. 1970ಕ್ಕೂ ಹಿಂದಿನಿಂದಲೇ 'ರಾ' ಅಧಿಕಾರಿಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ ಹಂತ ಹಂತವಾಗಿ ಮಾಹಿತಿ ಕಲೆ ಹಾಕಿದ್ದರು!

1970ರ ದಶಕದಲ್ಲಿ ಪಾಕಿಸ್ತಾನದ ಸಂಸ್ಕರಣ ಸಾಮರ್ಥ್ಯ ಮತ್ತು 1980ರ ದಶಕದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸುವ ಸಾಮರ್ಥ್ಯದ ಕುರಿತಾಗಿ ವಿಶೇಷ ಮಾಹಿತಿಗಳನ್ನು ಭಾರತ ಸಂಗ್ರಹಿಸಿತ್ತು. 1990ರ ದಶಕದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಕ್ಷಿಪಣಿ ಕಾರ್ಯಕ್ರಮಕ್ಕೆ ಚೀನಾದ ಬೆಂಬಲ ಮತ್ತು ಈ ಕ್ಷಿಪಣಿ ಯೋಜನೆಯನ್ನು ಉತ್ತರ ಕೊರಿಯಾಗೆ ಹೊರಗುತ್ತಿಗೆ ನೀಡುವ ಚೀನಾ ಷಡ್ಯಂತ್ರಗಳೆಲ್ಲವನ್ನೂ ಭಾರತೀಯ ಗುಪ್ತಚರ ಸಂಸ್ಥೆ ತಿಳಿದುಕೊಂಡಿತ್ತು. 2004ರಲ್ಲಿ ಪಾಕಿಸ್ತಾನ ಪರೀಕ್ಷಿಸಿದ ಶಹೀನ್-II ಖಂಡಾಂತರ ಕ್ಷಿಪಣಿಯ ಕುರಿತಾಗಿ ನಾಲ್ಕು ವರ್ಷಗಳ ಹಿಂದೆಯೇ 'ರಾ' ಮಾಹಿತಿ ಕಲೆಹಾಕಿತ್ತು. ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕಿದ್ದರೂ, ಈ ಮಾಹಿತಿಗಳೆಲ್ಲವನ್ನೂ ರಹಸ್ಯವಾಗಿಡಲಾಗಿತ್ತು. ಇತ್ತೀಚೆಗೆ ಬಹಿರಂಗಗೊಳಿಸಲಾದ ಕಡತಗಳಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ್ದ ಕೆಲವೊಂದು ಮಾಹಿತಿಗಳು ಹೀಗಿವೆ.

ಅಣ್ವಸ್ತ್ರಗಳನ್ನು ಉತ್ಪಾದಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ವಿಶ್ಲೇಷಿಸಿ 1975ರ ಮಾರ್ಚ್ ನಲ್ಲಿ ಭಾರತದ ಜಂಟಿ ಗುಪ್ತಚರ ಮಂಡಳಿ (JIC - Joint Intelligence Committee Report) ದಾಖಲೆ ಪತ್ರವೊಂದನ್ನು ಸಿದ್ಧಪಡಿಸಿತ್ತು ಮತ್ತು ಫೆಬ್ರವರಿ 1976ರಲ್ಲಿ ಕೆಲ ಬದಲಾವಣೆಗಳೊಂದಿಗೆ ಈ ದಾಖಲೆ ಪತ್ರವನ್ನು ಪುನರ್ ವಿಮರ್ಶಿಸಲಾಗಿತ್ತು. ಈ ದಾಖಲೆಗಳ ಪ್ರಕಾರ, ಆ ಸಮಯದಲ್ಲೇ ಭಾರತದ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಶಕ್ತಿಯ ಸಂಭವನೀಯತೆಗಳನ್ನು ಮನಗಂಡಿದ್ದರು. ಪ್ಲುಟೋನಿಯಂ-239 ಅಥವಾ ಯುರೇನಿಯಂ-235ಗಳ ಕೊರೆತೆಯಿರುವ ಕಾರಣ ಮುಂದಿನ ನಾಲ್ಕು ವರ್ಷಗಳವರೆಗೆ ಅಣ್ವಸ್ತ್ರ ಉತ್ಪಾದಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದನ್ನು 1975ರ ದಾಖಲೆ ಪತ್ರಗಳು ಸ್ಪಷ್ಟಪಡಿಸುತ್ತವೆ. ಜಂಟಿ ಗುಪ್ತಚರ ಮಂಡಳಿಯ ವರದಿಯ ಪ್ರಕಾರ, ಪಾಕಿಸ್ತಾನ ಮಹತ್ವಾಕಾಂಕ್ಷೆಯೊಂದಿಗೆ ಕರಾಚಿಯಲ್ಲಿ ಸ್ಥಾಪಿಸಿದ್ದ ಅಣ್ವಸ್ತ್ರ ಸ್ಥಾವರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು. ಬಾಯ್ಲರ್ ಗಳಲ್ಲಿ ಸೋರಿಕೆಯಿಂದಾಗಿ ರಿಯಾಕ್ಟರ್ ಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು. 1975ರಲ್ಲೇ ಈ ಅಣುಕೇಂದ್ರವನ್ನು ಆರು ಬಾರಿ ಮುಚ್ಚಬೇಕಾಗಿ ಬಂತು. ಒಂದು ಬಾರಿ ಈ ಸಮಸ್ಯೆ ವಿಕೋಪಕ್ಕೆ ತಿರುಗಿಕೊಂಡು, ಕೆನಡಾ ತಂತ್ರಜ್ಞರು ಬಂದು ಸರಿ ಪಡಿಸಬೇಕಾಯ್ತು ಎಂಬ ರಹಸ್ಯ ಮಾಹಿತಿಗಳು ಭಾರತಕ್ಕೂ ತಿಳಿದಿತ್ತು!
Image may contain: 1 person
1976ರಲ್ಲಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿದ್ದ ಭಾರತೀಯ ದೂತಾವಾಸದಿಂದ ಭಾರತಕ್ಕೆ ಕಳುಹಿಸಿದ ರಹಸ್ಯ ರಾಜತಾಂತ್ರಿಕ ಸಂದೇಶಗಳನ್ನು ಗಮನಿಸಿದಾಗ, ಬಹಳಷ್ಟು ಹಿಂದೆಯೇ, ಪಾಕಿಸ್ತಾನದಲ್ಲಿ ಚೀನೀ ವಿಜ್ಞಾನಿಗಳು ಕಾರ್ಯನಿರತವಾಗಿರುವ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಕರಾಚಿಯಲ್ಲಿದ್ದ ಅಣ್ವಸ್ತ್ರ ಸ್ಥಾವರ, ಅಂತರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (IAEA) ಅಧೀನದಲ್ಲಿದ್ದರೂ, ಕೆನಡಾದ ಅಣ್ವಸ್ತ್ರ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಬಳಸಲು ಚೀನೀ ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿತ್ತು ಪಾಕಿಸ್ತಾನ! ಈ ರಹಸ್ಯವನ್ನು ಹಂಗೇರಿಯ ರಾಜತಂತ್ರಜ್ಞನೊಬ್ಬ ಒಟ್ಟಾವದಲ್ಲಿದ್ದ ಭಾರತದ ರಾಯಭಾರಿಗೆ ತಿಳಿಸಿದ್ದ. ಚೀನಾದ ಮಿಲಿಟರಿ ಪೂರೈಕೆಗಳಿಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ಬಳಿಯಿದ್ದ ಕೆನಡಾದ ತಂತ್ರಜ್ಞಾನವನ್ನು ಚೀನಾದೊಂದಿಗೆ ಹಂಚಿಕೊಂಡಿತ್ತು. 1981ರಲ್ಲಿ ಇಸ್ಲಾಮಾಬಾದ್ ನಲ್ಲಿದ್ದ ಭಾರತೀಯ ದೂತಾವಾಸ ಕಳುಹಿಸಿದ 'ತಿಂಗಳ ವರದಿ'ಯಲ್ಲಿ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಯಶಸ್ವಿಯಾಗಲಿದೆ ಮತ್ತು ಪಾಕಿಸ್ತಾನ ಜಿಯಾ ಇದೇ ವರ್ಷ ಅಣ್ವಸ್ತ್ರ ಪರೀಕ್ಷಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂದಿತ್ತು. ಇದೇ ವರ್ಷ ಜೆ. ಎನ್ ದೀಕ್ಷಿತ್ ರವರ ( ಮುಂದೆ 2004-2005ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು)  ಅಧ್ಯಯನ ವರದಿ, ಪಾಕಿಸ್ತಾನದ ಕಹುಟಾ, ಇಸ್ಲಾಮಾಬಾದ್ ಮತ್ತು ಸಿಹಾಲಗಳಲ್ಲಿ ತ್ರಿಕೋನ ಅಣ್ವಸ್ತ್ರ ಯೋಜನೆಗಳು ಮತ್ತು ಯುರೇನಿಯಂ ಹೆಕ್ಸಾಫ್ಲುರೈಡ್ ತಯಾರಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಎಚ್ಚರಿಸಿದ್ದರು.

ಪಾಕಿಸ್ತಾನ ಸಿಂಧ್, ಬಲೂಚಿಸ್ತಾನ್ ಅಥವಾ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (ಖೈಬರ್ ಪಕ್ತೂನ್ಕಾವ) ಭೂಮಿಯ ಅಡಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮಾಹಿತಿ ಭಾರತಕ್ಕೆ ತಿಳಿದಿತ್ತು. ಇದೇ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟದ ಉಪಗ್ರಹಗಳು ರಾಸ್ ಕೊಹ್ ಪ್ರದೇಶದಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ಸುರಂಗಗಳನ್ನು ಪತ್ತೆಹಚ್ಚಿತ್ತು. ಪಾಕ್ ಅಣ್ವಸ್ತ್ರ ಯೋಜನೆಗೆ ಲಿಬಿಯಾ ಜೊತೆಯಲ್ಲೂ ಕೊಂಡಿಗಳಿವೆ ಎಂವ ವಿಚಾರವೂ ಭಾರತದ ಗಮನಕ್ಕೆ ಬಂದಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕಾ ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧಗಳನ್ನು ಉನ್ನತ ಮಟ್ಟಕ್ಕೇರಿಸಿ, 3 ಬಿಲಿಯನ್ ಅಮೆರಿಕನ್ ಡಾಲರ್ಗಳ ನೆರವು ನೀಡಿದ್ದಷ್ಟೇ ಅಲ್ಲದೇ  F-16 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಿದಾಗ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ರೇಗನ್ ಮತ್ತಿತರ ಅಧಿಕಾರಿಗಳು ಭಾರತವನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದರು. ಈ ಹೊತ್ತಿನಲ್ಲಿಯೇ ಜಿಯಾ, ಭಾರತ ಮತ್ತು ಪಾಕಿಸ್ತಾನಗಳ ಅಣ್ವಸ್ತ್ರ ಕೇಂದ್ರಗಳ ಪರಸ್ಪರ ತಪಾಸಣೆಗೊಳಪಡಿಸುವ ತನ್ನ ಇಚ್ಛೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು. ಆದರೆ ಈ ಪ್ರಯತ್ನಗಳು ಭಾರತವನ್ನು ಓಲೈಸುವಲ್ಲಿ ವಿಫಲವಾಗುತ್ತವೆ.

ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಕುರಿತಾಗಿ ಅಗಾಧ ಮಾಹಿತಿ ಸಂಗ್ರಹಿಸಿದ್ದರೂ, ಅದನ್ನು ತಡೆಗಟ್ಟಲು ಭಾರತ ಯಾವುದೇ ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಲಿಲ್ಲ. ಆದರೆ ಪಾಕಿಸ್ತಾನದ ರಿಯಾಕ್ಟರ್ ಗಳನ್ನು ನಾಶಪಡಿಸಲು ಇಸ್ರೇಲ್ ಮುಂದೆ ಬಂದಿತ್ತು. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಭಾರತದ ಸಹಕಾರವನ್ನು ನಿರೀಕ್ಷಿಸಿತ್ತಾದರೂ, ಕಾರಣಾಂತರಗಳಿಂದ ಭಾರತ ಇಸ್ರೇಲ್ ಪ್ರಸ್ತಾವನೆಯನ್ನು ನಿರಾಕರಿಸುತ್ತದೆ. ಕೊನೆಗೂ  ಭಾರತ ಮತ್ತು ಪಾಕಿಸ್ತಾನಗಳೆರಡೂ ಅಣ್ವಸ್ತ್ರ ಶಕ್ತಿಗಳಾಗಿ ಬದಲಾಗಿವೆಯಷ್ಟೇ ಅಲ್ಲದೆ ಜಾಗತಿಕ ಅಣ್ವಸ್ತ್ರ ಸಂಘರ್ಷಗಳ ಬಗೆಗಿನ ಯಾವುದೇ ಚರ್ಚೆ ದಕ್ಷಿಣ ಏಷ್ಯಾದ ಅಣ್ವಸ್ತ್ರ ತಿಕ್ಕಾಟವನ್ನು ಪ್ರಸ್ತಾಪಿಸದೆ ಕೊನೆಗೊಳ್ಳುವುದಿಲ್ಲ. ಇತ್ತೀಚಿನ ಗುಪ್ತಚರ ಕಡತಗಳು ಮತ್ತು ದಾಖಲೆ ಪತ್ರಗಳ ವಿವರ್ಗೀಕರಣ ಇವೆಲ್ಲವುಗಳನ್ನು ನೆನಪಿಸುವಂತಿತ್ತು.

(This article was published in Vishwavani Newsapaper on 8 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಬುಧವಾರ, ನವೆಂಬರ್ 25, 2015

ಗಂಗಾ ವಿಮಾನ ಅಪಹರಣ ಮತ್ತು1971ರ ಇಂಡೋ-ಪಾಕ್ ಯುದ್ಧ

ಭಾರತ ಕೇವಲ ನೈತಿಕ ಶಕ್ತಿ ಮಾತ್ರವಲ್ಲ, ರಣ ನೀತಿಯಲ್ಲಿ ತಂತ್ರ ಮತ್ತು ರಣರಂಗದಲ್ಲಿ ಕ್ಷಾತ್ರ ತೇಜ ತೋರುವ ತಂತ್ರ-ಕ್ಷಾತ್ರಗಳ ಸಮ್ಮಿಲನ ಎಂದು ನಿರೂಪಿಸಿದ್ದು ನಮ್ಮ ಹೆಮ್ಮೆಯ ಗುಪ್ತಚರ ವಿಭಾಗ ‘ರಾ’.
- ಕೀರ್ತಿರಾಜ್ 

1971 ರ ಭಾರತ ಪಾಕಿಸ್ತಾನ ಯುದ್ಧ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳಿಗೆ ಹಿಡಿದಕನ್ನಡಿಯೆಂದರೆ ತಪ್ಪಾಗಲಾರದು. ಪಾಕಿಸ್ತಾನಕ್ಕೆ ಭಾರತ ಸೇನಾ ಪ್ರಾಬಲ್ಯವನ್ನು ಸ್ಪಷ್ಟವಾಗಿ ಪರಿಚಯಿಸಿದ ಯುದ್ಧ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು ಮುಕ್ತಗೊಳಿಸಿ, ವಿಶ್ವ ಭೂಪಟದಲ್ಲಿ ಬಾಂಗ್ಲಾದೇಶವೆಂಬ ಒಂದು ಹೊಸ ದೇಶವನ್ನೇ ಸೃಷ್ಟಿಸಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸೇನಾ ಮುಖ್ಯಸ್ಥ  ಫ್ರೀಲ್ಡ್ ಮಾರ್ಷಲ್ ಮಾನೆಕ್ ಷಾ ತೋರಿದ ದಿಟ್ಟತನ, ಭಾರತೀಯ ಸೇನೆಯ ಅಸೀಮ ಶೌರ್ಯ ಇಂದಿಗೂ ವಿಶ್ವದ ರಾಜಕೀಯದಲ್ಲಿ ಮಾಸದ ನೆನಪು. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾರತ ತನ್ನ ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಒಂದು ಸ್ಪಷ್ಟವಾದ ಸಂದೇಶ ರವಾನಿಸಿತ್ತು. ಈ ಚಾರಿತ್ರಿಕ ವಿಜಯದ ಹಿಂದೆ ಹಲವಾರು ರೋಚಕ ಅಧ್ಯಾಯಗಳಿವೆ. ‘ಗಂಗಾ ವಿಮಾನ ಅಪಹರಣ ಪ್ರಕರಣ’ ಇವುಗಳಲ್ಲೊಂದು.ಯುದ್ಧ ಪ್ರಾರಂಭವಾಗುವ ಕೆಲ ತಿಂಗಳುಗಳ ಹಿಂದೆ, ಅಂದರೆ ಜನವರಿ 1971ರಲ್ಲಿ ಕಾಶ್ಮೀರದ ನ್ಯಾಷನಲ್ ಲಿಬರೇಶನ್ ಫ್ರಂಟ್ ಸಂಘಟನೆಗೆ ಸೇರಿದ ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ಎಂಬ ಇಬ್ಬರು ಯುವಕರು ಗಂಗಾ ಎಂಬ ಹೆಸರಿನ ವಿಮಾನವನ್ನು ಅಪಹರಿಸಿ ಪಾಕಿಸ್ತಾನದ ನೆರವಿನಿಂದ ಅದನ್ನು ಲಾಹೋರ್‌ನಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಪಾಕಿಸ್ತಾನ ಕೂಡ ಈ ವಿಮಾನ ಅಪಹರಣವನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಉತ್ಸುಕವಾಗಿತ್ತು.
ಪಾಕಿಸ್ತಾನ ಇದೇ ಅವಕಾಶಕ್ಕೋಸ್ಕರ ಕಾಯುತ್ತಿತ್ತೇನೋ ಎಂಬಂತೆ, ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಜುಲಿಕರ್ ಆಲಿ ಭುಟ್ಟೋ ಸ್ವತಃ ಅಪಹರಣಕಾರರನ್ನು ಭೇಟಿಯಾದರು. ಈ ವಿಮಾನ ಅಪಹರಣವನ್ನು ಬಳಸಿಕೊಂಡು ಪಾಕಿಸ್ತಾನದ ನಾಯಕರು ಭಾರತವನ್ನು ಬೆದರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಅತೀ ಉತ್ಸಾಹದಲ್ಲಿದ್ದರು.‘ಗಂಗಾ ವಿಮಾನ ಅಪಹರಣ ಪ್ರಕರಣ’ ನಂತರದಲ್ಲಿ ಹೊಸ ತಿರುವನ್ನು ಪಡೆದುಕೊಂಡಿತು. ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಅತಿಯಾದ ಒತ್ತಡ ತರುವಲ್ಲಿ ಯಶಸ್ವಿಯಾಯಿತು. ಒತ್ತೆಯಾಳುಗಳಾಗಿದ್ದ ಎಲ್ಲಾ ಪ್ರಯಾಣಿಕರನ್ನು ಭಾರತಕ್ಕೆ ಹಿಂದಿರುಗಿಸಬೇಕಾಯ್ತು. ಆದರೆ ವಿಮಾನವನ್ನು ಅಪಹರಣಕಾರರು ನಾಶಪಡಿಸಿದ್ದರು.ಇದೇ ಕಾರಣವನ್ನು ಮುಂದಿಟ್ಟುಕೊಂಡು ಭಾರತವು ತನ್ನ ಭೂಪ್ರದೇಶದಲ್ಲಿ ಎಲ್ಲಾ ಪಾಕಿಸ್ತಾನಿ ವಿಮಾನಗಳ ಹಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತು. ಈ ನಿಷೇಧಾಜ್ಞೆ ಮುಂದೆ ನಡೆದ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಕಿಸ್ತಾನ ತನ್ನ ಸೇನೆಯನ್ನು ಪೂರ್ವ ಪಾಕಿಸ್ತಾನಕ್ಕೆ ಕಳುಹಿಸಲು ಪರದಾಡುವಂತೆ ಮಾಡಿತು ಈ ನಿಷೇಧಾಜ್ಞೆ! ಪಾಕಿಸ್ತಾನಿ ಸೇನೆ ಯಾವುದೋ ದೂರದ ದಾರಿಯಿಂದ ಇಡೀ ಭಾರತಕ್ಕೆ ಪ್ರದಕ್ಷಿಣೆ ಹಾಕಿಕೊಂಡು ಯುದ್ಧ ರಂಗ ಸೇರುವಂತಾಯಿತು.
‘ಗಂಗಾ ವಿಮಾನ ಅಪಹರಣ ಪ್ರಕರಣ’ವನ್ನು ಪಾಕಿಸ್ತಾನ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೆ, ಕೊನೆಗೆ ಇದೇ ಪ್ರಕರಣ ಭಾರತದ ಪರವಾಗಿ, ಪಾಕಿಸ್ತಾನದ ಹೀನಾಯ ಸೋಲಿಗೆ ಕಾರಣವಾಯಿತು! ತಮಾಷೆಯ ವಿಷಯವೆಂದರೆ ಆದಿಯಿಂದ ಅಂತ್ಯದವರೆಗೆ, ‘ಗಂಗಾ ವಿಮಾನ
ಅಪಹರಣ ಪ್ರಕರಣ’ವನ್ನು ನಿಯಂತ್ರಿಸಿದ್ದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ ! ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಸದಸ್ಯರಾಗಿರಲಿಲ್ಲ, ಅಪಹರಣಕಾರರ ಸೋಗು ಹಾಕಿದ್ದ ಭಾರತದ ‘ರಾ’ ಏಜೆಂಟ್‌ಗಳಾಗಿದ್ದರು. ಅಪಹರಿಸಲ್ಪಟ್ಟ ‘ಗಂಗಾ’ ಭಾರತದ ಹಳೆಯ, ಉಪಯೋಗಿಸಲ್ಪಡದ ವಿಮಾನವಾಗಿತ್ತು. ಕೆಲವೇ ವಾರಗಳ ಹಿಂದೆ ಭಾರತವು ಅಪಹರಣದ ನಾಟಕಕ್ಕೋಸ್ಕರವೇ ಈ ವಿಮಾನವನ್ನು ಮರುಬಳಕೆಗೆ ತಂದಿತ್ತು!ಯುದ್ಧದ ಪ್ರಾರಂಭಕ್ಕೆ ಮೊದಲೇ ಭಾರತವು ಪಾಕಿಸ್ತಾನಿ ವಿಮಾನಗಳು ನೇರವಾಗಿ ಪೂರ್ವ ಪಾಕಿಸ್ತಾನ ತಲುಪುವುದನ್ನು ನಿಷೇಧಿಸಲು ಯೋಚಿಸಿತ್ತು. ಈ ಜವಾಬ್ದಾರಿ ಭಾರತದ ಗುಪ್ತಚರ ವಿಭಾಗ ‘ರಾ’ ಹೆಗಲಿಗೆ ಬಿತ್ತು. ಅಂದಿನ ‘ರಾ’ ಮುಖ್ಯಸ್ಥರಾಗಿದ್ದ ಆರ್. ಎನ್. ಕಾವ್ ಈ ಜವಾಬ್ದಾರಿಯನ್ನು ದಕ್ಷವಾಗಿ ನಿಭಾಯಿಸಿದರು. ‘ಗಂಗಾ ವಿಮಾನ ಅಪಹರಣ’ದ ಪ್ರತಿ ಹಂತವೂ ಪೂರ್ವನಿಯೋಜಿತವಾಗಿತ್ತು. 1968ರಲ್ಲಿ ಸ್ಥಾಪನೆಯಾಗಿ, ಆಗಷ್ಟೇ ಅಂಬೆಗಾಲಿಡುತ್ತಿದ್ದ ‘ರಾ’ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತ!
ವಿಶ್ವದ ಬಲಾಢ್ಯ ಗುಪ್ತಚರ ಸಂಸ್ಥೆಗಳು, ಭಾರತದ ಈ ಗುಪ್ತಚರ ಚಾಣಾಕ್ಷತೆಯನ್ನು ತಿರುಗಿ ನೋಡುವಂತೆ ಮಾಡಿತ್ತು ‘ಗಂಗಾ ವಿಮಾನ ಅಪಹರಣ ಪ್ರಕರಣ’.ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ, ಪಾಕಿಸ್ತಾನ ಭಾರತಕ್ಕೆ ಕೇಡು ಬಯಸುವ ಅವಸರದಲ್ಲಿ ‘ರಾ’ ಖೆಡ್ಡಾದಲ್ಲಿ ಬಿತ್ತು. 1948ರಲ್ಲೇ ಸ್ಥಾಪನೆಗೊಂಡು, ಭಾರತವನ್ನು ನಿರಂತರ ಕೆಣಕುತ್ತಿದ್ದ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಅವಮಾನದಿಂದ ಕೈಲಾಗದೆ ಮೈ ಪರಚಿಕೊಂಡಿತ್ತು. ಹೀಗೆ ಇಂದಿಗೂ ವಿಶ್ವ ಗುಪ್ತಚರ ವಿಭಾಗದ ರೋಚಕ ಕಥನಗಳಲ್ಲಿ ಅಚ್ಚಳಿಯದೆ, ಭಾರತದ ಗುಪ್ತಚರ ವಿಭಾಗದ ಮುಕುಟಪ್ರಾಯವಾಗಿ ನಿಲ್ಲುವ ಉದಾಹರಣೆ ‘ಗಂಗಾ ವಿಮಾನ ಅಪಹರಣ ಪ್ರಕರಣ’. ಮುಂದೆ ಕೆಲವೇ ತಿಂಗಳಲ್ಲಿ ನಡೆದ 1971ರ ಇಂಡೋ-ಪಾಕ್ ಯುದ್ಧ, ಮತ್ತದರ ಫಲಿತಾಂಶ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸತ್ಯ. ‘ರಾ’ ಸ್ಥಾಪನೆಯೊಂದಿಗೆ ಭಾರತ ಅಧಿಕೃತವಾಗಿ ರವಾನಿಸಿದ ಸಂದೇಶ ಸ್ಪಷ್ಟ, ಶತ್ರು ಸಂಹಾರದಲ್ಲಿ ಭಾರತ ಚಾಣಕ್ಯನೇ, ಅಂದಿಗೂ ಇಂದಿಗೂ ಎಂದೆಂದಿಗೂ!



 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 24 November 2015)

ಶುಕ್ರವಾರ, ನವೆಂಬರ್ 13, 2015

'ರೆಡ್ ಸೆಲ್’: ಶತ್ರುವಿನಂತೆ ಯೋಚಿಸಿ!


ರಾಷ್ಟ್ರೀಯ ಭಧ್ರತೆಗೆ ತೊಡಕಾಗುವ ಶತ್ರುಗಳನ್ನು ನಿವಾರಿಸಲು, ಶತ್ರುವಿನಂತೆ ಯೋಚಿಸಿ, ಅವರಿಗಿಂತ ಮೊದಲೇ ಕಾರ್ಯ ಪ್ರವೃತ್ತವಾಗುವ ಮಿಂಚಿನ ವೇಗದ ಸೈನ್ಯದ ಅವಶ್ಯಕತೆ ಬಹಳಷ್ಟಿದೆ.


-      ಕೀರ್ತಿರಾಜ್



ಒಂದು ರಾಷ್ಟ್ರ ಅಥವಾ ರಾಜ್ಯದ ಪ್ರಮುಖ ಉದ್ದೇಶ ಮತ್ತು ನಿರ್ವಹಿಸಬೇಕಾದ ಕರ್ತವ್ಯಗಳು ಹಲವಾರಿದ್ದರೂ, ತನ್ನ ರಾಷ್ಟ್ರೀಯ ಭದ್ರತೆ ಅಗ್ರಗಣ್ಯ ಆದ್ಯತೆಯ ವಲಯ. ಪ್ರತಿ ರಾಷ್ಟ್ರವೂ ಕೂಡ ತನ್ನ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಣೆ ಮಾಡಲು ಯಾವುದೇ ಕಾರ್ಯಾಚರಣೆಗೂ ಮುಂದಾಗುತ್ತದೆ. ಚರಿತ್ರೆ ನೆನಪಿಟ್ಟುಕೊಂಡಿರುವ ಸಾಲು ಸಾಲು ಸಮರಗಳೇ ಇದಕ್ಕೆ ಸಾಕ್ಷಿ. ಒಂದು ರೀತಿಯಲ್ಲಿ ಇತಿಹಾಸವೆಂದರೆ ಯುದ್ಧಗಳ ಕಥೆಯೇ !
ಕಣ್ಣಿಗೆ ಕಾಣುವ ಯುದ್ಧ, ರಾಷ್ಟ್ರೀಯ ಹಿತಾಸಕ್ತಿಯನ್ನು ಮತ್ತು ವಿದೇಶಾಂಗ ನೀತಿಯ ಕೊನೆಯ ಪ್ರಯತ್ನ. ಆದರೆ ಯುದ್ಧ ಮಾತ್ರ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಸಾಧನವಲ್ಲ. ಜನಸಾಮಾನ್ಯರ ಕಣ್ಣಿಗೆ ಕಾಣದ, ಕೆಲವೊಮ್ಮೆ ಅವರ ಊಹೆಗೂ ನಿಲುಕದ ರೀತಿಯಲ್ಲಿ ಕೆಲವೊಂದು ಸಂಸ್ಥೆಗಳು ರಾಷ್ಟ್ರದ ಹಿತಾಸಕ್ತಿಯಲ್ಲಿ ಎಳ್ಳಷ್ಟೂ ಕುಂದುಂಟಾಗದಂತೆ ಕಾರ್ಯವೆಸಗುತ್ತವೆ. ಒಂದು ರಾಷ್ಟ್ರದ ಬಲಾಬಲಗಳನ್ನು ಅದರ ಸೇನಾ ಶಕ್ತಿ ಮತ್ತು ಶಸ್ತ್ರಾಗಾರದಿಂದ ಅಳೆಯುವಂತಿಲ್ಲ. ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ದೇಶದ ಗುಪ್ತಚರ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳ ಕಾರ್ಯವೈಕರಿಯ ಬಗೆಗೆ ಸಾಮಾನ್ಯ ಕುತೂಹಲ ಇದ್ದಿದ್ದೇ. ಪ್ರತಿಯೊಂದು ರಾಷ್ಟ್ರ ತನ್ನದೇ ಆದ ಗುಪ್ತಚರ ವಿಭಾಗ ಹೊಂದಿರುತ್ತದೆ. ಉದಾಹರಣೆಗೆ ಭಾರತದ ರಾ, ಅಮೆರಿಕಾದ ಸಿಐಎ, ಇಸ್ರೇಲ್ ನ ಮೊಸ್ಸಾದ್, ಪಾಕಿಸ್ತಾನದ ಐ.ಎಸ್.ಐ ಹೀಗೆ ಗುಪ್ತಚರ ವಿಭಾಗಗಳು ಆಯಾ ದೇಶದ ಕಣ್ಣು ಮತ್ತು ಕಿವಿಗಳಾಗಿ ಕೆಲಸ ಮಾಡುತ್ತವೆ.
ಗುಪ್ತಚರ ವಿಭಾಗ ಇತ್ತೀಚಿನ ಬೆಳವಣಿಗೆಯೇನಲ್ಲ, ಚಾಣಕ್ಯ ಬಹಳ ಹಿಂದೆಯೇ ಗುಪ್ತಚಾರ ವಿಭಾಗದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಗುಪ್ತಚಾರ ವಿಭಾಗದ ಒಂದು ಸಣ್ಣ ಲೋಪವೂ ದೇಶಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಬಲ್ಲದು. ಪ್ರಪಂಚದ ಯಾವುದೇ ದಿಕ್ಕಿನಿಂದ ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆಗೆ ಸವಾಲಾಗುವ ಪ್ರತಿ ಶತ್ರುವಿನ ಮೇಲೂ ಹದ್ದಿನ ಕಣ್ಣಿಟ್ಟು, ಇಡೀ ರಾಷ್ಟ್ರಕ್ಕೆ ಉಕ್ಕಿನ ಕವಚವಾಗಿ ರಕ್ಶಿಸುವ ಮಹತ್ತರ ಜವಾಬ್ದಾರಿ ಹೊತ್ತ ಅತ್ಯಂತ ಚುರುಕು ಸೈನ್ಯವೇ ಗುಪ್ತಚರ ವಿಭಾಗ. ಎಲ್ಲಾ ಸಾಂಪ್ರದಾಯಿಕ ಯೋಚನಾ ವಿಧಾನಗಳಿಂದ ಹೊರಬಂದು, ಪ್ರತಿ ಕ್ಷಣ ಹೊಸ ಅಪಾಯದ ಬಗೆಗೆ ಹೊಸ ರೀತಿಯಲ್ಲಿ ಯೋಚಿಸುವುದೇ ಗುಪ್ತಚರ ವಿಭಾಗದ ವಿಶೇಷತೆ.
11 ಸೆಪ್ಟೆಂಬರ್ 2001, ಉಗ್ರರ ದಾಳಿಯಿಂದ ಅಮೇರಿಕಾ ತತ್ತರಿಸಿದ ದಿನ. ಈ ದುರ್ಘಟನೆಯ ಬಳಿಕ ಅಮೆರಿಕಾದ ವಿದೇಶಾಂಗ ನೀತಿ ಮತ್ತು ವಿಶ್ವ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾದವು. ಆದರೆ ಈ ಘಟನೆ ಅಮೆರಿಕಾ ಗುಪ್ತಚರ ಸಂಸ್ಥೆ ಸಿ.ಐ.ಎ ಮಹತ್ತರ ಬದಲಾವಣೆಯೊಂದಕ್ಕೆ ಸಾಕ್ಷಿಯಾಯಿತು. 9/11 ರ ಕುಖ್ಯಾತ ಉಗ್ರ ದಾಳಿಯ ನಂತರ ಅಮೆರಿಕಾ ನೆಲದಲ್ಲಿ ಇನ್ನಷ್ಟು ಉಗ್ರ ಚಟುವಟಿಕೆಗಳ ನಡೆಯುವ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಸಿಕ್ಕಿತ್ತು. ಮುಂದೆ ನಡೆಯುವ ಎಲ್ಲಾ ಉಗ್ರ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕುವ ಜವಾಬ್ದಾರಿ ಸಿ.ಐ.ಎ ಗಿತ್ತು. ಆಗಿನ ಸಿ.ಐ.ಎ ನಿರ್ದೇಶಕರಾಗಿದ್ದ ಜಾರ್ಜ್ ಟಿನೆಟ್ ಉನ್ನತ ಅಧಿಕಾರಿಗಳ ರಹಸ್ಯ ಸಭೆಯೊಂದರಲ್ಲಿ ಒಂದು ವಿಶೇಷ ತಂಡದ ರಚನೆಗೆ ಮುಂದಾಗುತ್ತಾರೆ.
ಟಿನೆಟ್ ಪ್ರಸ್ತಾಪಿಸಿದ ವಿಶೇಷ ತಂಡ, ಉಗ್ರರ ಎಲ್ಲಾ ಅನಿರೀಕ್ಷಿತ ದಾಳಿಯ ಸಾಧ್ಯತೆಗಳನ್ನು ಶತ್ರುವಿನಂತೆ ಯೋಚಿಸಿ, ಶತ್ರುವಿಗಿಂತ ಮೊದಲೇ ಕಾರ್ಯೋನ್ಮುಖವಾಗಬೇಕಿತ್ತು. ಈ ತಂಡ ಸಾಂಪ್ರದಾಯಿಕ ಗುಪ್ತಚರ ಮಾಹಿತಿ ಮತ್ತು ವಿಶ್ಲೇಷಣೆಗಿಂತ ವಿಭಿನ್ನವಾಗಿದ್ದು, ದೇಶದ ರಕ್ಷಣಾ ವ್ಯವಸ್ಥೆಯ ಹಳೆಯ ಚಿಂತನೆಗೆ ಪರ್ಯಾಯವಾದ ಹೊಸ ವಿಚಾರಗಳನ್ನು ನೀಡಬೇಕಾಗಿತ್ತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ಭಯವಿಲ್ಲದೇ, ನಿರ್ಭಿಡೆಯಿಂದ ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸುವ ಕೆಲವರನ್ನು ಆಯ್ದುಕೊಳ್ಳಲಾಯಿತು. ಈ ವಿಶೇಷ ತಂಡಕ್ಕೆ ಟಿನೆಟ್ ನೀಡಿದ ಹೆಸರು 'ರೆಡ್ ಸೆಲ್'!
ಹೀಗೆ ಸೃಷ್ಠಿಯಾದ 'ರೆಡ್ ಸೆಲ್' ಮುಂದೆ ಅಮೆರಿಕಾದ ಗುಪ್ತಚರ ಸಂಸ್ಥೆಯ ಅವಿಭಾಜ್ಯ ಅಂಗವಾಗಿ, ಇಂದಿಗೂ ತನ್ನ ಕಾರ್ಯ ನಿರ್ವಹಿಸುತ್ತಿದೆ. 'ರೆಡ್ ಸೆಲ್'ನ ಪ್ರಮುಖ ಉದ್ದೇಶವೇ ಶತ್ರುವಿನಂತೆ ಯೋಚಿಸುವುದು. ಶತ್ರುಗಳ ದೃಷ್ಠಿಯಲ್ಲಿ ತನ್ನ ರಕ್ಷಣಾ ವ್ಯವಸ್ಥೆಯ ಲೋಪ ಕಂಡುಕೊಳ್ಳುವುದು ಮತ್ತು ಶತ್ರುವಿನ ನಿರೀಕ್ಷಿತ ದಾಳಿಗೆ ಸನ್ನದ್ಧರಾಗಿರುವುದು. ಈ ವಿಶೇಷ ತಂಡದ ವಿಶ್ಲೇಷಣೆಗಳು, ಮಖ್ಯವಾಹಿನಿ ರಕ್ಷಣಾ ವಿಶ್ಲೇಷಣೆಗಳಿಗಿಂತ ಅಂದರೆ ಹಿರಿಯ ವಿಶ್ಲೇಷಕರಿಗಿಂತ ವಿಭಿನ್ನವಾಗಿತ್ತು. ಹಾಗಾಗಿ ರೆಡ್ ಸೆಲ್ ಹಿರಿಯ ಮುಖ್ಯವಾಹಿನಿ ರಕ್ಷಣಾ ವಿಶ್ಲೇಷಕರ ಕೆಂಗಣ್ಣಿಗೂ ಗುರಿಯಾಯಿತು.
ರೆಡ್ ಸೆಲ್ ತಂಡಕ್ಕೆ ಸದಸ್ಯರನ್ನು ನೇರವಾಗಿ ಸಿ.ಐ.ಎ ನಿರ್ದೇಶಕರೇ ಮಾಡುತ್ತಾರೆ. ಅತ್ಯಂತ ಅರ್ಹ ಮತ್ತು ಪ್ರತಿಭಾವಂತರ ಮಧ್ಯೆ, ನಿರ್ಭೀತ ವಿಶ್ಲೇಷಣೆ, ಶ್ರೇಷ್ಠ ಬರವಣಿಗೆ, ಮತ್ತು ಜಾಗತಿಕ ರಾಜಕೀಯದ ಬಗೆಗಿನ ಆಳವಾದ ಅಧ್ಯಯನ ಆಯ್ಕೆಗೆ ಮಾನದಂಡಗಳಾಗುತ್ತವೆ. ಈ ವಿಶ್ಲೇಷಕರು ರೆಡ್ ಸೆಲ್ ನಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುವಂತಿಲ್ಲ. ಹೀಗೆ ರೆಡ್ ಸೆಲ್ ಶತ್ರುಗಳಿಗೆ ಸಿಂಹಸ್ವಪ್ನವಾಗಿ, ನಿರಂತರ ಹೊಸ ಆಲೋಚನೆಗಳೊಂದಿಗೆ ಗುಪ್ತಚರ ವಿಭಾಗದಲ್ಲೇ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಪ್ರಸ್ತುತ ಇತರ ದೇಶಗಳು ಕೂಡ ಈ ಮಾದರಿಯತ್ತ ಒಲವು ತೋರಿಸುತ್ತಿರುವುದು ಗಮನಾರ್ಹ.
ಗುಪ್ತಚರ ವಿಭಾಗ ತನ್ನದೇ ಶೈಲಿಯ ಕಾರ್ಯಾಚರಣೆ, ಯಾರ ಪ್ರಭಾವಕ್ಕೂ ಒಳಪಡದೆ ಕೈಗೊಳ್ಳುವ ಸ್ವತಂತ್ರ ನಿರ್ಧಾರಗಳು ಕೆಲವೊಂದು ಟೀಕೆಗಳಿಗೆ ಒಳಗಾದರೂ, ಗುಪ್ತಚರ ದಳದ ಅನುಪಸ್ಥಿತಿಯಲ್ಲಿ ದೇಶದ ರಕ್ಷಣೆಯನ್ನು ಊಹಿಸಲೂ ಅಸಾಧ್ಯ. ಭಾರತದ ದೃಷ್ಠಿಯಿಂದಲೂ ಈ ಮಾದರಿ ಹೊಸತೇನಲ್ಲ. ಬಹಳ ಹಿಂದೆಯೇ ಚಾಣಕ್ಯ ಒಬ್ಬ ರಾಜನಿಗಿರಬೇಕಾದ ಗುಣಗಳ ಬಗ್ಗೆ ವಿವರಿಸುತ್ತಾ, ರಾಜ ಕುತಂತ್ರದಲ್ಲಿ ನರಿಯಂತೆ,ಬುದ್ಧಿವಂತಿಕೆಯಲ್ಲಿ ಕಾಗೆ ಹಾಗೂ ಧೈರ್ಯದಲ್ಲಿ ಸಿಂಹದಂತಿರಬೇಕು ಎಂದಿದ್ದಾನೆ. ಇಂದಿನ ರಾಜನೀತಿಗೂ ಇದು ಸ್ಪಷ್ಟವಾಗಿ ಅನ್ವಯಿಸುತ್ತದೆ.
ಸಾಮಾನ್ಯರ ಊಹೆಗೆ ನಿಲುಕದ ರೀತಿಯಲ್ಲಿ ದೇಶ ಪ್ರತಿ ಕ್ಷಣವೂ ನೂರಾರು ಗಂಡಾಂತರಗಳನ್ನು ಎದುರಿಸುತ್ತಿದೆ. ಗಡಿ ಕಾಯುವ ಯೋಧರಿಂದ ಹಿಡಿದು ಶತ್ರುಗಳನ್ನೇ ಕಾಯುವ ಗುಪ್ತಚರ ವಿಭಾಗದವರೆಗೆ ಯಾರೇ ಒಂದು ಕ್ಷಣ ಮೈಮರೆತರೂ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗಳಿಗೆ ಮಾರಣಾಂತಿಕ ಹೊಡೆತ ಖಂಡಿತ.


 
  
 KEERTHIRAJ (keerthiraj886@gmail.com)

·   Currently serving as a Visiting Faculty for International Relations and Political Science at Alliance University, Bangalore. 
      (This article was published in Hosa Digantha newspaper on 10 November 2015)