communism ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
communism ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 26, 2017

ನೂರು ವರ್ಷಗಳ ಹಿಂದೆ ನಡೆದ ಕ್ರಾಂತಿಯೊಂದರ ನೆನಪು

1917ರಲ್ಲಿ ರಷ್ಯಾ ಬೃಹತ್ ರಾಜಕೀಯ ಬದಲಾವಣೆಯೊಂದಕ್ಕೆ ಸಾಕ್ಷಿಯಾಗುತ್ತದೆ. ಸರಿಯಾಗಿ ನೂರು ವರ್ಷಗಳ ಹಿಂದೆ ವಿಶ್ವ ರಾಜಕೀಯದ ಪಥ ಬದಲಾಯಿಸುವಂಥಾ ಕ್ರಾಂತಿಯೊಂದು 1917ರ ಮಾರ್ಚ್ ನಲ್ಲಿ ನಡೆಯುತ್ತದೆ. ಕ್ರಾಂತಿ ನಡೆದಿದ್ದು ಮಾರ್ಚ್ ನಲ್ಲೇ ಆದರೂ ಅವತ್ತಿಗೆ ರಷ್ಯನ್ನರು ಪಾಲಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆ ಕ್ರಾಂತಿ ಫೆಬ್ರವರಿ ಕ್ರಾಂತಿ ಎಂದೇ ಪ್ರಸಿದ್ಧಿಯಾಗುತ್ತದೆ. ರಷ್ಯಾದ ಸರ್ವಾಧಿಕಾರಿ ದೊರೆಯಾಗಿದ್ದ ಝಾರ್ ದ್ವಿತೀಯ ನಿಕೊಲಾಸ್, ರಷ್ಯನ್ನರ ಆಕ್ರೋಶಕ್ಕೆ ಮಣಿದು ತನ್ನ ಪದತ್ಯಾಗ ಮಾಡಬೇಕಾಯ್ತು. ಇದೇ ಕ್ರಾಂತಿ ಮುಂದೆ ವಿಭಿನ್ನ ಸ್ವರೂಪ ಪಡೆದುಕೊಂಡು, ಅಕ್ಟೋಬರ್ ಕ್ರಾಂತಿಗೂ ದಾರಿ ಮಾಡಿಕೊಡುತ್ತದೆ. ವಿಶ್ವ ಭೂಪಟದಲ್ಲಿ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟದ ನಿರ್ಮಾಣಕ್ಕೂ ವೇದಿಕೆ ಸಿದ್ಧಗೊಳಿಸಿದ ಕ್ರಾಂತಿಯಿದು. ಆದರೆ ಗಮನಿಸಬೇಕಾದ ಅಂಶವೇನೆಂದರೆ ರಷ್ಯಾದಲ್ಲಿ ಕಮ್ಯುನಿಸಂ ನೆಲೆಗೊಳಿಸಿದ ಈ ಫೆಬ್ರವರಿ ಕ್ರಾಂತಿ, ಸೈದ್ಧಾಂತಿಕ ಕ್ರಾಂತಿಯಾಗಿರಲಿಲ್ಲ! ಯಾವ ಕಮ್ಯುನಿಸ್ಟ್ ನಾಯಕರೂ ಈ ಕ್ರಾಂತಿಯನ್ನು ಯೋಜಿಸಿರಲಿಲ್ಲ! ಮತ್ತು ಈ ಕ್ರಾಂತಿಯ ಹಾದಿಯನ್ನು ಯಾರೂ ಸಂಘಟಿಸಿರಲಿಲ್ಲ! ಅದೆಲ್ಲಕ್ಕಿಂತ ಮಿಗಿಲಾಗಿ, ಇಂಥ ಕ್ರಾಂತಿಯೊಂದರ ಕನಸಿನಲ್ಲೇ ವರ್ಷಗಳನ್ನು ಕಳೆದ ಲೆನಿನ್ ನೇತೃತ್ವದ ಬೊಲ್ಶೆವಿಕ್ ಗುಂಪು ಕೂಡ ಫೆಬ್ರವರಿ ಕ್ರಾಂತಿಯನ್ನು ಊಹಿಸಿರಲಿಲ್ಲ.!

ವ್ಲಾದಿಮಿರ್ ಲೆನಿನ್ ಪ್ರಕಾರ ಕ್ರಾಂತಿಯೊಂದು ಸಂಭವಿಸಬೇಕಾದಲ್ಲಿ ಮೂರು ಅಂಶಗಳ ಅವಶ್ಯಕತೆಯಿರುತ್ತದೆ. ಮೇಲ್ವರ್ಗಗಳ ಬಿಕ್ಕಟ್ಟು, ಶೋಷಿತ ವರ್ಗಗಳ ನೋವು ಮತ್ತು ಜನಸಾಮಾನ್ಯರು ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಕ್ರಾಂತಿಗೆ ಅವಶ್ಯಕ ಎಂದು ಲೆನಿನ್ ಹೇಳಿದ ಮೂರು ಅಂಶಗಳೂ 1917ರ ಮಾರ್ಚ್ ಗಿಂತ ಮೊದಲೇ ರಷ್ಯಾ ಪರಿಸ್ಥಿತಿಗೆ ಸರಿಹೊಂದುವಂತಿತ್ತು. ಲೆನಿನ್ ಹೇಳಿದ ಮೂರು ಅಂಶಗಳು ರಷ್ಯಾ ಸಮಾಜದಲ್ಲಿದ್ದಾಗ್ಯೂ ಹತ್ತಿಕೊಳ್ಳದ ಕ್ರಾಂತಿ ಕಿಡಿ, 1917ರ ಮಾರ್ಚ್ ನಲ್ಲಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ರಷ್ಯಾದಲ್ಲಿ ತಲೆಮಾರುಗಳಿಂದ ಬೇರೂರಿದ್ದ ಝಾರ್ ಸರ್ವಾಧಿಕಾರವನ್ನು ಬುಡಸಮೇತ ಕಿತ್ತುಹಾಕಿತ್ತು. ಸಿದ್ಧಾಂತದ ಗೊಡವೆಯಿಲ್ಲದೇ, ಯೋಜನೆಗಳ ನೀಲನಕ್ಷೆಯಿಲ್ಲದೇ, ಅಧಿಕೃತವಾಗಿ ಒಬ್ಬ ನಾಯಕನೂ ಇಲ್ಲದ ಈ ಕ್ರಾಂತಿ ರಷ್ಯಾದಲ್ಲಿ ಹೊಸ ಯುಗವೊಂದನ್ನು ತೆರೆದಿಟ್ಟಿತ್ತು.

Image may contain: 1 personರಷ್ಯನ್ ಚರಿತ್ರೆಯ ಬಗೆಗೆ ನಡೆದ ಅಧ್ಯಯನಗಳ ಪ್ರಕಾರ ಫೆಬ್ರವರಿ ಕ್ರಾಂತಿಗೆ ಮೂಲ ಕಾರಣ ಆ ಸಮಯದಲ್ಲಿ ರಷ್ಯಾವನ್ನು ಆವರಿಸಿದ ತೀವ್ರ ಚಳಿಯ ವಾತಾವರಣ. ತೀವ್ರ ಹಿಮಗಾಳಿ ಮತ್ತು ಹಿಮಪಾತದಿಂದಾಗಿ ರಷ್ಯಾದ ಜನಜೀವನ ಅಸ್ತವ್ಯಸ್ತವಾಗಿತ್ತಲ್ಲದೇ ರೈಲ್ವೆ ವ್ಯವಸ್ಥೆಯೂ ದಿಕ್ಕೆಟ್ಟು ನಿಂತಿತ್ತು. ಕಾರ್ಖಾನೆಗಳಿಗೂ ಬೀಗ ಜಡಿಯಲಾಗಿ, ಸಾವಿರಾರು ಹತಾಶ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಸಮಯಕ್ಕಾಗಿ ಕಾಯುತ್ತಿದ್ದರು. ಅನಿರೀಕ್ಷಿತವಾಗಿ ರಷ್ಯಾದ ವಾತಾವರಣ ಶೀತಲತೆಯಿಂದ ಬದಲಾಗಿ ಬಿಸಿಯೇರುತ್ತಿದ್ದಂತೆ, ರಷ್ಯನ್ ಕಾರ್ಮಿಕರು ಬೀದಿಗಿಳಿದುಬಿಟ್ಟಿದ್ದರು! ರಷ್ಯಾ ರಾಜಧಾನಿಯಲ್ಲಿ ಯಾವತ್ತೂ ಬರಿದಾಗದೇ ಇದ್ದ ಆಹಾರ ದಾಸ್ತಾನುಗಳ ಬಗೆಗೂ ವದಂತಿಗಳೂ ಹಬ್ಬಲಾರಂಬಿಸಿದವು. ರೈಲ್ವೇ ಸಂಪರ್ಕದಲ್ಲಾದ ತೊಡಕುಗಳಿಂದಾಗಿ ರಷ್ಯಾ ರಾಜಧಾನಿಯ ಕೆಲ ಅಂಗಡಿಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಸುಳ್ಳು ವದಂತಿಗಳನ್ನು ಇನ್ನಷ್ಟು ಬಲಪಡಿಸಿದ್ದವು. ಅನಾನುಕೂಲಕರ ವಾತಾವರಣ ಮತ್ತು ಆಹಾರದ ಕೊರತೆಯ ಕುರಿತಾಗಿ ಹಬ್ಬಿದ ಸುಳ್ಳು ಸುದ್ಧಿಗಳು ರಷ್ಯನ್ನರು ಯೋಚಿಸುವ ಧಾಟಿಯನ್ನು ಬದಲಾಯಿಸಿಬಿಟ್ಟಿದ್ದವು. ಆದರೆ ಕೇವಲ ಈ ಕಾರಣಗಳಿಂದಾಗಿಯೇ ಕ್ರಾಂತಿ ನಡೆಯುತ್ತದೆ ಎಂದುಕೊಂಡರೆ ಅದು ಖಂಡಿತ ಅತಿಶಯೋಕ್ತಿಯೇ ಸರಿ. ಯಾಕೆಂದರೆ ಈ ಹಿಂದೆಯೂ ಶೀತಲ ವಾತಾವರಣ ಮತ್ತು ಆಹಾರ ಸಮಸ್ಯೆ ರಷ್ಯಾ ರಾಜಧಾನಿಯನ್ನು ಕಾಡಿತ್ತಾದರೂ ಮತ್ತೆ ಆಹಾರ ಪೂರೈಕೆಯಾದಾಗ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇವಿಷ್ಟೇ ಅಲ್ಲದೇ ರಷ್ಯಾದ ಆಂತರಿಕ ಭದ್ರತೆಯ ಮುಖ್ಯಸ್ಥನಾಗಿದ್ದ ಅಲೆಕ್ಸಾಂಡರ್ ಪ್ರೊಟೊಪೊಪೊವ್, ಅನೇಕ ಸಮಾಜವಾದಿ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧನದಿಂದ ತಪ್ಪಿಸಿಕೊಂಡ ವ್ಲಾದಿಮಿರ್ ಲೆನಿನ್ ಮತ್ತು ಲಿಯೊನ್ ಟ್ರಾಟ್ ಸ್ಕಿ ಮುಂತಾದವರಿಗೆ ಕ್ರಾಂತಿಯೊಂದು ಸಂಭವಿಸಲಿದೆ ಎಂಬ ಕಲ್ಪನೆಯೂ ಇರಲಿಲ್ಲ!

ವಾತಾವರಣ ಮತ್ತು ಆಹಾರದ ಕೊರತೆಯಷ್ಟೇ ಕ್ರಾಂತಿಯ ಕಾರಣಗಳಾಗಿದ್ದರೆ ಝಾರ್ ರಾಜಪ್ರಭುತ್ವ ಯಾವತ್ತೋ ಅಧಿಕಾರ ಕಳೆದುಕೊಳ್ಳುತ್ತಿತ್ತು. ಆದರೆ ಈ ಕಾರಣಗಳ ಜೊತೆ ಜೊತೆಗೆ ಕೊನೆಯ ಝಾರ್ ರಾಜನಾಗಿದ್ದ ಎರಡನೇ ನಿಕೊಲಾಸ್ ವಿವೇಚನಾರಹಿತನಾಗಿ ಕೈಗೊಂಡ ಕೆಲ ತಪ್ಪು ರಾಜಕೀಯ ನಿರ್ಧಾರಗಳು ಕ್ರಾಂತಿಯ ಜ್ವಾಲೆಗೆ ತುಪ್ಪ ಸುರಿದಿದ್ದವು. 1905ರಲ್ಲೇ ರಷ್ಯಾದಲ್ಲಿ ನಡೆದ  ಶಾಂತಿಯುತ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗುಂಡಿಕ್ಕಲು ಆದೇಶ ನೀಡಿದ್ದ ಝಾರ್ ನಿಕೊಲಾಸ್, 1905ರ ಮೊದಲನೇ ರಷ್ಯಾ ಕ್ರಾಂತಿಗೆ ಕಾರಣನಾಗಿದ್ದ. ಹನ್ನೆರಡು ವರ್ಷಗಳ ಬಳಿಕ 1917ರಲ್ಲಿ ಝಾರ್ ನಿಕೊಲಾಸ್ ಮತ್ತದೇ ತಪ್ಪನ್ನು ಪುನರಾವರ್ತಿಸಿದ್ದ! ಝಾರ್ ರಷ್ಯಾದ ರಾಜಧಾನಿ ಪೆಟ್ರೊಗ್ರಾಡ್ (ಈಗಿನ ಸೈಂಟ್ ಪೀಟರ್ಸ್ ಬರ್ಗ್) ನಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರನ್ನು ಹೇಗಾದರೂ ಹಿಮ್ಮೆಟ್ಟಿಸುವಂತೆ, ಜನರಲ್ ಸೆರ್ಗೆಯ್ ಕಬಲೊವ್ ನಿಗೆ ಟೆಲಿಗ್ರಾಫ್ ಮೂಲಕ ಆದೇಶ ನೀಡಿದ್ದ ಝಾರ್ ನಿಕೊಲಾಸ್! ಪ್ರತಿಭಟನೆಯನ್ನು ತಡೆಯುವ ಆತುರದಲ್ಲಿ ರಷ್ಯನ್ ಸೇನೆ ಸುಮಾರು 200 ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತದೆ. ಆದರೆ ಆ ಹೊತ್ತಿಗಾಗಲೇ ಕ್ರಾಂತಿಯ ಪ್ರಭಾವ ರಷ್ಯನ್ ಸೇನೆಯೊಳಗೂ ನುಸುಳಿಕೊಂಡಿತ್ತು. ಸೈನಿಕರು ರಾಜನ ವಿರುದ್ಧ ದಂಗೆಯೆದ್ದು ಕ್ರಾಂತಿಗೆ ಬೆಂಬಲ ನೀಡುತ್ತಾರೆ. ಪ್ರಥಮ ವಿಶ್ವಯುದ್ಧದ ಬಳಿಕ, ರಷ್ಯನ ಜನಸಾಮಾನ್ಯರಲ್ಲಷ್ಟೇ ಅಲ್ಲದೇ ರಷ್ಯನ್ ಯೋಧರಲ್ಲೂ ಝಾರ್ ಆಳ್ವಿಕೆಯ ಮೇಲೆ ವಿಶ್ವಾಸ ಕಡಿಮೆಯಾಗಿತ್ತು. ಝಾರ್ ಗೆ ನಿಷ್ಠರಾಗಿ ಕ್ರಾಂತಿಯನ್ನು ತಡೆಯೆಲೆತ್ನಿಸಿದ ಪೊಲೀಸರನ್ನು ಮತ್ತು ಸೈನಿಕರನ್ನು ಕೊಂದು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತದೆಯಷ್ಟೇ ಅಲ್ಲದೇ ಝಾರ್ ಅಧಿಕಾರ ವ್ಯವಸ್ಥೆ ಶೀಘ್ರವಾಗಿ ಪತನದತ್ತ ಸಾಗುತ್ತದೆ. ಮೂರು ದಿನಗಳ ನಂತರ ಝಾರ್ ನಿಕೊಲಾಸ್, ಪದತ್ಯಾಗ ಮಾಡುತ್ತಾನೆ ಮತ್ತು ತಾತ್ಕಾಲಿಕವಾಗಿ ಪ್ರಜಾಪ್ರಭುತ್ವ ತತ್ವಗಳ ಆಧಾರದಲ್ಲಿ ಸರಕಾರವೊಂದು ರಚಿಸಲ್ಪಡುತ್ತದೆ.


ಫೆಬ್ರವರಿ ಕ್ರಾಂತಿಯಿಂದಾಗಿ ರಚಿಸಲ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಕಾಲ ಬಾಳಲಿಲ್ಲ.  ಮುಂದೆ 1917ರ ನವೆಂಬರ್ ನಲ್ಲಿ ನಡೆದ (ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್) ಅಕ್ಟೋಬರ್ ಕ್ರಾಂತಿ ರಷ್ಯಾವನ್ನು ಕಮ್ಯುನಿಸ್ಟ್ ಆಡಳಿತ ತನ್ನ ಹಿಡಿತ ಬಿಗಿಗೊಳಿಸುತ್ತದೆ. ಫೆಬ್ರವರಿ ಕ್ರಾಂತಿಯನ್ನು ಊಹಿಸಲು ವಿಫಲರಾಗಿದ್ದ ಲೆನಿನ್ ಮತ್ತು ಆತನ ಸಂಗಡಿಗರು ಈ ಕ್ರಾಂತಿಯ ನಂತರದ ದಿನಗಳನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ರಷ್ಯಾ, ಕಮ್ಯುನಿಸಂನ ಕಬ್ಬಿಣದ ಪರದೆಯಡಿಯಲ್ಲಿ ಸೊವಿಯೆತ್ ಒಕ್ಕೂಟದ ಹೆಸರಿನಲ್ಲಿ ವಿಶ್ವದ ಎರಡು ಸೂಪರ್ ಪವರ್ ಗಳಲ್ಲಿ ಒಂದಾಗುತ್ತದೆ. ಆದರೆ ಕಮ್ಯುನಿಸ್ಟ್ ಆಡಳಿತದ ಸೊವಿಯೆತ್ ರಷ್ಯಾದಲ್ಲಿ ಫೆಬ್ರವರಿ ಕ್ರಾಂತಿಯನ್ನು ಕಡೆಗಣಿಸಿ, ಅಕ್ಟೋಬರ್ ಕ್ರಾಂತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇವತ್ತಿಗೂ ರಷ್ಯಾ ಮತ್ತು ವಿಶ್ವದ ವಿವಿಧ ಭಾಗಗಳ ವಿದ್ವಾಂಸರು,  ರಷ್ಯಾಗೆ ಮೊದಲ ಬಾರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ ಈ ಫೆಬ್ರವರಿ ಕ್ರಾಂತಿಯನ್ನು, ವಿಶ್ವ ಕಂಡ ಮಹತ್ವದ ರಾಜಕೀಯ ಬದಲಾವಣೆಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಅಕ್ಟೋಬರ್ ಕಮ್ಯುನಿಸ್ಟ್ ಕ್ರಾಂತಿಯ ವೈಭವೀಕರಣದಿಂದಾಗಿ, ಮಾಸಿಹೋಗುತ್ತಿರುವ ಫೆಬ್ರವರಿ ಕ್ರಾಂತಿಗೆ ಈ ಮಾರ್ಚ್ ನಲ್ಲಿ ಶತಕದ ಸಂಭ್ರಮ. ಚರಿತ್ರೆಯ ಪುಟಗಳಲ್ಲಿ ಹುದುಗಿಕೊಂಡ ನೆನಪುಗಳನ್ನು ಹೊರತೆಗೆಯಲು ಇದಕ್ಕಿಂತ ಒಳ್ಳೆಯ ಸಮಯ ಸಿಗಲು ಸಾಧ್ಯವೇ?

(This article was published in Vishwavani Newsapaper on 9 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗುರುವಾರ, ಅಕ್ಟೋಬರ್ 22, 2015

ಸರ್ವಾಧಿಕಾರ, ಸಮಾಜವಾದ, ಪ್ರಜಾಪ್ರಭುತ್ವ: ವ್ಯತ್ಯಾಸವೇನು?



ಸರ್ವಾಧಿಕಾರ, ಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಅಧಿಕಾರ ಪೂರ್ವದ ಹಾದಿಯೂ,
ಅಧಿಕಾರ ನಂತರದ ಆಳ್ವಿಕೆಯೂ ಒಂದೇ ಆಗಿರುತ್ತದೆ.


-      ಕೀರ್ತಿರಾಜ್
 



ಇದ್ಯಾಕೋ ಅಸಂಬದ್ಧ ಶೀರ್ಷಿಕೆಯಂತಿದೆ ಎಂದು ನಿಮಗನ್ನಿಸಬಹುದು. ಪರಸ್ಪರ ವಿರೋಧಾಭಾಸಗಳಿರುವ ಪ್ರಜಾಪ್ರಭುತ್ವ, ಸರ್ವಾಧಿಕಾರ, ಸಮಾಜವಾದಗಳನ್ನು ಒಂದೇ ಕಡೆ ಸೇರಿಸಿಬಿಟ್ಟಿರುವ ರಹಸ್ಯ ಏನು ಎಂದು ನೀವು ಯೋಚಿಸುತ್ತಿರಬಹುದು. ಅಧಿಕಾರ ಪೂರ್ವದ ಆದರ್ಶ ಮತ್ತು ಅಧಿಕಾರ ಸಿಕ್ಕಿದ ನಂತರದ ಆಳ್ವಿಕೆಗಳ ನಡುವೆ ಒಂದು ಸಣ್ಣ ಗೆರೆ ಇದೆ. ಮೇಲ್ನೋಟಕ್ಕೆ ಇದು ಸಣ್ಣ ಗೆರೆಯಾದರೂ, ಅಧಿಕಾರ ಪೂರ್ವಕ್ಕೂ ಆಳ್ವಿಕೆಗೂ ನಡುವೆ ಅಜಗಜಾಂತರ ಕಂದಕವನ್ನೇ ಸೃಷ್ಟಿಸಿಬಿಡುತ್ತದೆ.
ಜನಬೆಂಬಲ ಪ್ರಜಾನುರಾಗದಿಂದಲೇ ಅಧಿಕಾರ ಪಡೆದುಕೊಂಡಿದ್ದರೂ, ಅಧಿಕಾರಕ್ಕೇರಿದ ಬಳಿಕ ಜನರಿಗೆ ತಮ್ಮದೇ ಆಯ್ಕೆಯ ಬಗೆಗೆ ಜಿಗುಪ್ಸೆ ಮೂಡಲು ಕಾರಣವೇನು? ನಮ್ಮಿಂದ, ನಮಗಾಗಿ, ನಮಗೋಸ್ಕರವೇ ರಚಿಸಲ್ಪಟ್ಟ ಸರಕಾರದ ಆಡಳಿತ ಅಪಥ್ಯವಾಗಲು ಕಾರಣವೇನು? ಭಾರತೀಯರಿಗೆ ಪ್ರಜಾಪ್ರಭುತ್ವ ಸೂಕ್ತವಲ್ಲ, ಬ್ರಿಟಿಷ್ ಆಡಳಿತವೇ ಹೇಳಿ ಮಾಡಿಸಿದ್ದು   ಎಂಬ 'ಓರಿಯೆಂಟಲಿಸಂ' (ಪೌರಾತ್ಯವಾದ) ಸಾಲುಗಳು ಭಾರತೀಯರ ಬಾಯಿಯಿಂದಲೇ ಬರಲಾರಂಭಿಸಿದೆಯೆಂದರೆ, ನಮ್ಮ ಪ್ರಜಾಪ್ರಭುತ್ವ ಏನಾಗಬೇಕೆಂದು ಸ್ವಾತಂತ್ರ್ಯ ಪೂರ್ವದ ಭಾರತ ಬಯಸಿತ್ತೋ ಅದು ಇನ್ನೂ ಈಡೇರಿಸಲಾಗದ ಕನಸಾಗಿಯೇ ಉಳಿದಿದೆ ಎಂದರ್ಥ. ಇದೇ ಪ್ರಜಾಪ್ರಭುತ್ವಕ್ಕೋಸ್ಕರವೇ ತಾನೆ ಲಕ್ಷಾಂತರ ಜನ ತಮ್ಮದೆಲ್ಲವನ್ನೂ ತೊರೆದು, ತ್ಯಾಗ ಬಲಿದಾನಗಳನ್ನು ಮಾಡಿ ಹುತಾತ್ಮರಾಗಿದ್ದು?
ಇಲ್ಲಿ ಚರ್ಚೆಯಾಗುತ್ತಿರುವ ವಿಷಯ, ಇದರ ಉದ್ದೇಶ ಹೊಸತೇನಲ್ಲ. ದಶಕಗಳಿಂದ ಚರ್ಚೆಯಾಗಿದ್ದರೂ ಇಂದಿಗೂ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳದ, ಒಂದು ರೀತಿಯಲ್ಲಿ ನಿತ್ಯವಿನೂತನ ವಿಷಯವೆಂದರೂ ತಪ್ಪಾಗಲಾರದು. ಸಹಜವಾಗಿ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯೊಬ್ಬ ವಿವಿಧ ರೀತಿಯ ಸರಕಾರಗಳನ್ನು ಅಥವಾ ಆಳ್ವಿಕೆಯನ್ನು ಗುರುತಿಸುವಾಗ ಪ್ರಜಾಪ್ರಭುತ್ವ, ಸರ್ವಾಧಿಕಾರ ಮತ್ತು ಸಮಾಜವಾದಿ ಸರಕಾರಗಳೆಂಬ ಮೂರು ಹಣೆಪಟ್ಟಿಗಳಲ್ಲಿ ಗುರುತಿಸುವುದು ಸಾಮಾನ್ಯ. ಈ ಮೂರು ರೂಪಗಳು ಪ್ರತ್ಯೇಕ ಆದರ್ಶ ಗುಣಗಳಿಂದ ಒಂದಕ್ಕೊಂದು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ವಿದ್ವಾಂಸರ ಪ್ರಕಾರ ಕಮ್ಯುನಿಸಂ ಅಥವಾ ಸಮಾಜವಾದ ಒಂದು ರಾಜಕೀಯ ರೂಪವಲ್ಲ ಬದಲಿಗೆ ಕೇವಲ ಆರ್ಥಿಕ ಸಿದ್ಧಾಂತವಾಗಿ ಪರಿಗಣಿಸುತ್ತಾರೆ. ಅದೇನೇ ಇರಲಿ ಎಲ್ಲಾ ಪ್ರಕಾರಗಳಲ್ಲೂ  ಬಹಳ ಪ್ರಮುಖ್ಯವಾದ  ಕೆಲವು ಸಾಮ್ಯತೆಗಳಿವೆ.
ಪ್ರಜಾಪ್ರಭುತ್ವ, ಸರ್ವಾಧಿಕಾರ ಮತ್ತು ಸಮಾಜವಾದ ಮೂಲಭೂತವಾಗಿ ವಿಭಿನ್ನ ಎಂದು ನಾವು ಪರಿಗಣಿಸಿದ್ದರೂ, ಎಲ್ಲಾ ಪ್ರಕಾರಗಳೂ ಕೆಲವೊಂದು ಸಾಮಾನ್ಯ ಅಂಶಗಳನ್ನು ಪರಸ್ಪರ ಹಂಚಿಕೊಂಡಿವೆ. ಈ ಸಾಮ್ಯತೆಗಳನ್ನು ಸರಳವಾಗಿ ಎರಡು ವಿಭಾಗಗಳಲ್ಲಿ ಚರ್ಚಿಸಲು ಇಚ್ಛಿಸುತ್ತೇನೆ. ಅಧಿಕಾರಪೂರ್ವದಲ್ಲಿ ಸರ್ವಾಧಿಕಾರವೂ ಕೂಡ ಪ್ರಜಾಪ್ರಭುತ್ವದಂತೆ ಗೋಚರಿಸುತ್ತದೆ, ಅಧಿಕಾರ ನಂತರದಲ್ಲಿ ಪ್ರಜಾಪ್ರಭುತ್ವವೂ ಸರ್ವಾಧಿಕರದಂತೆ ಕಾರ್ಯನಿರ್ವಹಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹೆಗಲ್ ಒಂದು ಕಡೆ ಹೇಳುತ್ತಾನೆ " ಪ್ರತಿಯೊಂದು ಐತಿಹಾಸಿಕ ಸನ್ನಿವೇಶಗಳು ಮತ್ತು ಪಾತ್ರಗಳು ಎರಡು ಬಾರಿ ಸಂಭವಿಸುತ್ತವೆ." ಮಾರ್ಕ್ಸ್ ಇದೇ ಮಾತನ್ನು ಈ ರೀತಿ ಮುಂದುವರಿಸುತ್ತಾನೆ, "ಇತಿಹಾಸದ ಮರುಕಳಿಸುವಿಕೆ ಮೊದಲನೇ ಬಾರಿ ದುರಂತವಾಗಿರುತ್ತದೆ, ಹಾಗೂ ಎರಡನೇ ಬಾರಿ ಅಪಹಾಸ್ಯ / ವ್ಯಂಗ್ಯದಂತಿರುತ್ತದೆ." ("History repeats itself, first as tragedy, second as farce.")
ಈ ಮಾತು ಸರ್ವಾಧಿಕಾರ, ಸಮಾಜವಾದ, ಪ್ರಜಾಪ್ರಭುತ್ವ ಅಥವಾ ಇನ್ಯಾವುದೇ ಪ್ರಕಾರದ ಸರಕಾರಕ್ಕೂ ಸಾರ್ವಕಾಲಿಕವಾಗಿ ಸಲ್ಲುತ್ತದೆ. ಪ್ರತಿಯೊಂದು ಪ್ರಕಾರವೂ ದುರಂತದ ಧೂಳಿನಿಂದಲೇ ಎದ್ದು ಅಧಿಕಾರದ ಗದ್ದುಗೆಯೇರುತ್ತದೆ. ಆಳ್ವಿಕೆ ಮತ್ತೆ ದುರಂತವನ್ನು ನೆನಪಿಸುತ್ತದೆ. ಆದರೆ ಮಾರ್ಕ್ಸ್ ಸ್ವತಃ ಹೇಳುವಂತೆ, ಆ ದುರಂತ ವ್ಯಂಗ್ಯದ ರೂಪದಲ್ಲಿರುತ್ತದೆ!


ಸರ್ವಾಧಿಕಾರ, ಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಅಧಿಕಾರ ಪೂರ್ವದ ಹಾದಿ ಒಂದೇ ಆಗಿರುತ್ತದೆ
ಯಾವುದೇ ವಿಧದ ಸಿದ್ಧಾಂತವೇ ಆಗಿರಲಿ ಅಧಿಕಾರದ ಹಾದಿ ಸುಲಭವಲ್ಲ. ಸರ್ವಾಧಿಕಾರ, ಸಮಾಜವಾದ ಮತ್ತು ಪ್ರಜಾಪ್ರಭುತ್ವಗಳ ವಿಷಯದಲ್ಲೂ ಇದು ಸಾರ್ವತ್ರಿಕ ಸತ್ಯ. ಯಾವುದೇ ವಿಧದ ಸರಕಾರವೇ ಆದರೂ ಹಲವಾರು ಪ್ರಯತ್ನ, ತ್ಯಾಗ ಮತ್ತು ಬಲಿದಾನಗಳ ಮೂಲಕವೇ ಅಧಿಕಾರದ ಗದ್ದುಗೆಯೇರುತ್ತದೆ. ಮೇಲ್ನೋಟಕ್ಕೆ ಪ್ರಜಾಪ್ರಭುತ್ವ ಮಾತ್ರವೇ ಪ್ರಜೆಗಳ ಆಡಳಿತದ ಪ್ರತಿರೂಪದಂತೆ ಕಂಡರೂ, ಉಳಿದ ಎರಡು ಪ್ರಕಾರಗಳಾದ ಸಮಾಜವಾದ ಮತ್ತು ಸರ್ವಾಧಿಕಾರಗಳೂ ಕೂಡ ಅಧಿಕಾರ ಪೂರ್ವದಲ್ಲಿ ಜನಬೆಂಬಲ ಗಳಿಸಲು ಪ್ರಯತ್ನ ಪಟ್ಟಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಪ್ರತಿಯೊಬ್ಬ ಸರ್ವಾಧಿಕಾರಿಯೂ ಒಂದು ಆದರ್ಶವಿಟ್ಟುಕೊಂಡೇ ಅಧಿಕಾರ ಪಡೆದುಕೊಂಡುತ್ತಿರುತ್ತಾನೆ. ಹಿಟ್ಲರ್ ನಿಂದ ಸದ್ದಾಂ ಹುಸೇನ್ ವರೆಗೂ ಈ ಪ್ರಕ್ರಿಯೆ ನಡೆದಿತ್ತು. ಸರ್ವಾಧಿಕಾರಿಗಳು ಆದರ್ಶ ಪಾಲಿಸುತ್ತಾರೆಂದರೆ ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವೇ. ಅಜೆಂಡಾ ಎನ್ನುವುದು ಸೂಕ್ತವೇನೋ! ಆದರೆ ಎರಡನೆ ಜಾಗತಿಕ ಯುದ್ಧದಲ್ಲಿ ಜನಾಂಗೀಯ ಅಜೆಂಡಾವನ್ನು, ಆದರ್ಶವಾಗಿ ಪರಿವರ್ತಿಸಿ ಜರ್ಮನ್ನರ ಬೆಂಬಲ ಪಡೆಯುವಲ್ಲಿ ಹಿಟ್ಲರ್ ಯಶಸ್ವಿಯಾಗಿದ್ದ. ಗಲ್ಫ್ ಯುದ್ಧದ ಸಂದರ್ಭದಲ್ಲಿ ತನ್ನ ಅಜೆಂಡಾವನ್ನು ಇಸ್ಲಾಂ ನೊಂದಿಗೆ ವಿಲೀನಗೊಳಿಸಿ ಹೊಸ ಆದರ್ಶ ಸೃಷ್ಟಿಸಿದ್ದ ಸದ್ದಾಂ ಹುಸೇನ್. ಹಿಟ್ಲರ್‘ಗೆ ರಾಷ್ಟ್ರೀಯವಾದ, ಜನಾಂಗಗಳು ಜನ ಬೆಂಬಲ ದೊರಕಿಸಿಕೊಟ್ಟರೆ, ಕೆಲವು ಸರ್ವಾಧಿಕಾರಿಗಳು ಧರ್ಮದ ಹೆಸರಿನಲ್ಲೋ ಅಥವಾ ಇನ್ಯಾವುದೋ ತಂತ್ರದ ಮೂಲಕ ಜನಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.
ಕಮ್ಯುನಿಸಂ ಆರ್ಥಿಕ ನೀತಿಗಳು ಅಸಮಾನತೆಯ ವಿರುದ್ಧದ ಹೋರಾಟಗಳಿಂದಲೇ ಜನಬೆಂಬಲ ಗಳಿಸಿಕೊಳ್ಳುತ್ತಾರೆ. ಕಮ್ಯುನಿಸಂಗೆ ಕಾರ್ಲ್ ಮಾರ್ಕ್ಸ್ ನಂಥ ಮೇಧಾವಿ ಹಾಕಿಕೊಟ್ಟ ಆದರ್ಶಗಳಿವೆ. ಆ ಆದರ್ಶಗಳನ್ನು ಅರ್ಥೈಸಿಕೊಂಡ ರೀತಿ, ಅನುಷ್ಠಾನಗೊಳಿಸಿದ ರೀತಿ ಪ್ರಶ್ನಾರ್ಹವೇ ಆದರೂ ಕಮ್ಯುನಿಸಂ ಜನವಿರೋಧಿ ನೀತಿಯಾಗಿ ಅಧಿಕಾರ ಪಡೆದುಕೊಂಡಿಲ್ಲ , ಹಲವಾರು ಆದರ್ಶಗಳ ಮೂಲಕ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ನಂತರವೇ ಅಧಿಕಾರದ ಗದ್ದುಗೆ ಏರಿದೆ ಎನ್ನುವುದು ಗಮನಿಸಬೇಕಾದ ಅಂಶ.
ಪ್ರಜಾಪ್ರಭುತ್ವದ ಬಗೆಗೆ ವಿಶ್ಲೇಷಿಸುವುದು ಸ್ವಲ್ಪ ಕಷ್ಟವೇ, ನಿಮಗೆ ಗೊತ್ತಿಲ್ಲದ್ದೇನಿಲ್ಲ. ಕನಿಷ್ಟ ಪಕ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳ ಹಿಂದಿನ ದಿವಸವಾದರೂ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ದೇಶಕ್ಕೋಸ್ಕರ ಪ್ರಜಾಪ್ರಭುತ್ವಕ್ಕೋಸ್ಕರ ನಮ್ಮ ಪೂರ್ವಿಕರು ಪಟ್ಟ ಪಾಡು ಬಲಿದಾನಗಳು ಮಿಂಚುತ್ತವೆ. ಗಾಂಧೀಜಿ, ನೇತಾಜಿ, ಭಗತ್ ಸಿಂಗ್ ಇತರೆಲ್ಲಾ ಹುತಾತ್ಮರು ಮುಖಪುಟದಲ್ಲಿ, ಮುಖ ತೋರಿಸಿ ಹೋಗುತ್ತಾರೆ. , ಅಷ್ಟೊಂದು ತ್ಯಾಗ ಬಲಿದಾನಗಳು ನಾವೀಗ ಕಾಣುತ್ತಿರುವ ಪ್ರಜಾಪ್ರಭುತ್ವಕ್ಕೋಸ್ಕರವೇ? ಎಂಬ ಪ್ರಶ್ನೆಯೊಂದು ಕೊನೆಯವರೆಗೂ ಮನಸ್ಸಿನಲ್ಲಿ ಹಾಗೇ ಉಳಿದುಹೋಗುತ್ತದೆ
ಇದನ್ನೆಲ್ಲಾ ಸರಿಯಾಗಿ ಗಮನಿಸಿದರೆ, ಯಾವುದೇ ಪ್ರಕಾರದ ಆಡಳಿತವಿರಲಿ ಅಧಿಕಾರ ಪೂರ್ವದಲ್ಲಿ ತನ್ನನ್ನು ಜನಪರ ಮತ್ತು ಪ್ರಜಾಪೋಷಕ ಎಂದೇ ತೋರಿಸಿಕೊಳ್ಳುತ್ತದೆ. ಈ ಮಾತು ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಸರ್ವಾಧಿಕಾರಗಳೆಲ್ಲಕ್ಕೂ ಸರ್ವಸಮಾನವಾಗಿ ಅನ್ವಯಿಸುತ್ತದೆ.

ಸರ್ವಾಧಿಕಾರ, ಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಆಳ್ವಿಕೆಯ ಪರಿಣಾಮವೂ ಒಂದೇ ಆಗಿರುತ್ತದೆ
ಬಹಳಷ್ಟು ಸರ್ವಾಧಿಕಾರಿಗಳು ಜನರ ಹೆಸರಿನಲ್ಲೇ ಅಧಿಕಾರಕ್ಕೆ ಬಂದು ದಶಕಗಳವರೆಗೆ ದೇಶವನ್ನೇ ಕಪಿ ಮುಷ್ಟಿಯಲ್ಲಿಟ್ಟುಕೊಂಡಿದ್ದು ಕೊನೆಗೆ ದಾರುಣ ಅಂತ್ಯ ಕಂಡಿದ್ದು ಈಗ ಇತಿಹಾಸ. ಒಂದು ರೀತಿಯಲ್ಲಿ ಸರ್ವಾದಿಕಾರಿಗಳ ಆಡಳಿತದ ಬಗೆಗೆ ವಿವರಿಸುವ ಅವಶ್ಯಕತೆಯೇನಿಲ್ಲ. ಕಣ್ಣಿಗೆ ಕಾಣುವ ಕ್ರೌರ್ಯ, ಶೋಷಣೆಗಳು. ಸರ್ವಾಧಿಕಾರಿಯ ಜೀವನ ಶೈಲಿಯೇ ಆ ಕೆಲಸ ಮಾಡಿಬಿಡುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಶೋಷಣೆ ಅವಿತಿಟ್ಟುಕೊಂಡಿರುತ್ತದೆ. ಅಭಿವೃದ್ಧಿಯ ಹೆಸರಿನಲ್ಲೇ ಶೋಷಣೆಯನ್ನು ಅಡಗಿಸಿಕೊಳ್ಳುವುದು ಪ್ರಜಾಪ್ರಭುತ್ವದ ಸಾಮರ್ಥ್ಯವೂ ಹೌದು, ವಿಪರ್ಯಾಸವೂ ಹೌದು!
ಉದಾಹರಣೆಗೆ ನಮ್ಮ ಭಾರತದ ರಾಜಕೀಯ ಪರಿಸ್ಥಿತಿಯನ್ನೇ ಗಮನಿಸಿ. ಎಲ್ಲಾ ಪಕ್ಷ, ನಾಯಕರ ಆಡಳಿತ ನೋಡಿ ರೋಸಿ ಹೋಗಿದ್ದ ಆಮ್ ಆದ್ಮಿಗಳು, ಪ್ರಜಾಪ್ರಭುತ್ವದ ಹೊಸ ಪ್ರಯತ್ನ ಆಮ್ ಆದ್ಮಿ (ಆಪ್) ಪಕ್ಷದ ಮೇಲೆ ಹಿಮಾಲಯದಷ್ಟು ನಿರೀಕ್ಷೆ, ಕನಸು ಕಟ್ಟಿಕೊಂಡಿದ್ದರು. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ, ಆಮ್ ಆದ್ಮಿ ಎಂಬ ಹೊಸ ಪ್ರಯತ್ನ , 'ಭಾರತದ ಪ್ರಜಾಪ್ರಭುತ್ವದಲ್ಲಿ ಯಾವುದೇ ಹೊಸ ಅವಿಷ್ಕಾರವೇ ಆದರೂ ಕಿಂಚಿತ್ತೂ ನಂಬಿಕೆ ಇಡಬೇಡಿ' ಎಂಬ ಸ್ಪಷ್ಟ ಸಂದೇಶ ರವಾನಿಸಿದಂತಿದೆ.
ಕಮ್ಯುನಿಸಂ ಮತ್ತು ಸಮಾಜವಾದ ಕೂಡ ಅಧಿಕಾರ ಪೂರ್ವದಲ್ಲಿ ಅಸಂಖ್ಯಾತ ಜನರ ಕಣ್ಣಲ್ಲಿ ಹೊಳಪು ಮೂಡಿಸಿದ ಸಿದ್ಧಾಂತ. ಬಂಡವಾಳಶಾಹಿಗಳ ಶೋಷಣೆಯಲ್ಲಿ ನಲುಗಿ ಇಂಗಿ ಹೋಗಿದ್ದ ಕಣ್ಣುಗುಡ್ಡೆಗಳಲ್ಲೂ ಹೊಸ ಹೊಳಪು ಮೂಡಿಸಿದ, ಬಳಲಿದ್ದ ದೇಹಕ್ಕೆ ಕ್ರಾಂತಿಯ ಚೈತನ್ಯ ತುಂಬಿಸಿ, ಬಂಡವಾಳಶಾಹಿಗಳ ಅಸ್ತಿತ್ವವನ್ನೇ ಅಲುಗಾಡಿಸಿದ ಮೇಧಾವಿ ಕಾರ್ಲ್ ಮಾರ್ಕ್ಸ್. ಅದರೆ ಕಾರ್ಲ್ ಮಾರ್ಕ್ಸ್ ಹೇಳಿದ್ದೆಲ್ಲವನ್ನೂ ಚಾಚು ತಪ್ಪದೆ ಅನುಷ್ಠಾನಕ್ಕೆ ತರಲು ಇದು ರಾಮಾಯಣದ ರಾಮ, ಲಕ್ಷ್ಮಣ, ಭರತರ ಕಥೆಯಲ್ಲವಲ್ಲ! 1917ರಲ್ಲಿ ರಷ್ಯನ್ನರು ಅದೇನೋ ಅಸೆ ಆಕಾಂಕ್ಷೆಗಳನ್ನಿಟ್ಟುಕೊಂಡು ಕಮ್ಯುನಿಸಂ ಸ್ಥಾಪಿಸಿದ ಬಳಿಕವೂ ಸಮಸ್ಯೆಗಳು ಹೆಚ್ಚಾಗಲು ಕಾರಣವೇನು? ಜಾರ್ಜ್ ಆರ್ವೆಲ್ ತನ್ನ ಕೃತಿ 'ಅನಿಮಲ್ ಫಾರ್ಮ್'ನಲ್ಲಿ ಕಮ್ಯುನಿಷ್ಟ್ ಕ್ರಾಂತಿಯ ನಂತರದ ರಷ್ಯಾದ ಪರಿಸ್ಥಿತಿ, ಕ್ರಾಂತಿಕಾರಿ ನಾಯಕರೇ ಕೊನೆಗೆ ಶೋಷಣೆ ಮಾಡುವ ಬಂಡವಾಳಶಾಹಿಗಳಾಗಿ ರೂಪುಗೊಂಡ ವಾಸ್ತವವನ್ನು ತನ್ನದೇ ವ್ಯಂಗ್ಯಭರಿತ ಶೈಲಿಯಲ್ಲಿ ಮಾರ್ಮಿಕವಾಗಿ ಬಿಚ್ಚಿಡುತ್ತಾನೆ.
ಮಾರ್ಕ್ಸ್ ಕೊಟ್ಟ ತತ್ವಾದರ್ಶಗಳು, ಸಿದ್ಧಾಂತಗಳು 'ಪ್ರಾಕ್ಟಿಕಲ್' ಎಂಬ ಹೆಸರಿನಲ್ಲಿ ತಿರುಚಲ್ಪಟ್ಟವು. ತನ್ನ ಅಂತಿಮ ದಿನಗಳಲ್ಲಿ ಮಾರ್ಕ್ಸ್ "ನಾನು ಮಾರ್ಕ್ಸಿಸ್ಟ್ ಅಲ್ಲ" ಎಂದು ಹೇಳುವಷ್ಟರ ಮಟ್ಟಿಗೆ ಹತಾಶನಾಗಲು ಕಾರಣವು ಇಲ್ಲದ್ದಿಲ್ಲ. ಮಾರ್ಕ್ಸ್ ವಾದದ ಅನುಷ್ಠಾನ ಅರ್ಥಾತ್ 'ರೆಜಿಮೆಂಟೆಡ್ ಕಮ್ಯುನಿಸಂ', ಅಣು ಅಣುವಾಗಿ ಮಾರ್ಕ್ಸ್ ನನ್ನು ಮಾರ್ಕ್ಸ್ ವಾದದಿಂದ ದೂರ ಮಾಡಿಬಿಟ್ಟಿತು. ಅಣ್ಣಾ ಹಜಾರೆ ಕೂಡ ಸದ್ಯದಲ್ಲೇ "ನಾನು ಪ್ರಜಾಪ್ರಭುತ್ವವಾದಿಯಲ್ಲ" ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದಕ್ಕೆ ಕಾರಣ ಯಾವುದೋ ಕಾಣದ ಬಾಹ್ಯ ಶಕ್ತಿಯಲ್ಲ, ನಮ್ಮ ನಿಮ್ಮ ಕಣ್ಣೆದುರಿಗೇ ಇರುವ 'ರೆಜಿಮೆಂಟೆಡ್ ಡೆಮಾಕ್ರಸಿ' ಅಂದರೆ ಪ್ರಜಾಪ್ರಭುತ್ವ ಅನುಷ್ಠಾನಗೊಳ್ಳುತ್ತಿರುವ ರೀತಿ!
ಇದೆಲ್ಲವನ್ನೂ ಗಮನಿಸಿದ ಮೇಲೆ ಸರ್ವಾಧಿಕಾರ, ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವಗಳ ಮಧ್ಯೆ ಇರುವ ಅಂಥ ದೊಡ್ಡ ವ್ಯತ್ಯಾಸವಾದ್ರೂ ಏನು? ಎಂಬ ಪ್ರಶ್ನೆ ನಿಮ್ಮನ್ನು ಕಾಡದೇ ಇರದು.





 
  
 KEERTHIRAJ 

·   Currently serving as a Visiting Faculty for International Relations and Political Science at Alliance University, Bangalore. 
      (This article was published in Hosa Digantha newspaper on 15 September 2015)