Russia ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Russia ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 26, 2017

ನೂರು ವರ್ಷಗಳ ಹಿಂದೆ ನಡೆದ ಕ್ರಾಂತಿಯೊಂದರ ನೆನಪು

1917ರಲ್ಲಿ ರಷ್ಯಾ ಬೃಹತ್ ರಾಜಕೀಯ ಬದಲಾವಣೆಯೊಂದಕ್ಕೆ ಸಾಕ್ಷಿಯಾಗುತ್ತದೆ. ಸರಿಯಾಗಿ ನೂರು ವರ್ಷಗಳ ಹಿಂದೆ ವಿಶ್ವ ರಾಜಕೀಯದ ಪಥ ಬದಲಾಯಿಸುವಂಥಾ ಕ್ರಾಂತಿಯೊಂದು 1917ರ ಮಾರ್ಚ್ ನಲ್ಲಿ ನಡೆಯುತ್ತದೆ. ಕ್ರಾಂತಿ ನಡೆದಿದ್ದು ಮಾರ್ಚ್ ನಲ್ಲೇ ಆದರೂ ಅವತ್ತಿಗೆ ರಷ್ಯನ್ನರು ಪಾಲಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆ ಕ್ರಾಂತಿ ಫೆಬ್ರವರಿ ಕ್ರಾಂತಿ ಎಂದೇ ಪ್ರಸಿದ್ಧಿಯಾಗುತ್ತದೆ. ರಷ್ಯಾದ ಸರ್ವಾಧಿಕಾರಿ ದೊರೆಯಾಗಿದ್ದ ಝಾರ್ ದ್ವಿತೀಯ ನಿಕೊಲಾಸ್, ರಷ್ಯನ್ನರ ಆಕ್ರೋಶಕ್ಕೆ ಮಣಿದು ತನ್ನ ಪದತ್ಯಾಗ ಮಾಡಬೇಕಾಯ್ತು. ಇದೇ ಕ್ರಾಂತಿ ಮುಂದೆ ವಿಭಿನ್ನ ಸ್ವರೂಪ ಪಡೆದುಕೊಂಡು, ಅಕ್ಟೋಬರ್ ಕ್ರಾಂತಿಗೂ ದಾರಿ ಮಾಡಿಕೊಡುತ್ತದೆ. ವಿಶ್ವ ಭೂಪಟದಲ್ಲಿ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟದ ನಿರ್ಮಾಣಕ್ಕೂ ವೇದಿಕೆ ಸಿದ್ಧಗೊಳಿಸಿದ ಕ್ರಾಂತಿಯಿದು. ಆದರೆ ಗಮನಿಸಬೇಕಾದ ಅಂಶವೇನೆಂದರೆ ರಷ್ಯಾದಲ್ಲಿ ಕಮ್ಯುನಿಸಂ ನೆಲೆಗೊಳಿಸಿದ ಈ ಫೆಬ್ರವರಿ ಕ್ರಾಂತಿ, ಸೈದ್ಧಾಂತಿಕ ಕ್ರಾಂತಿಯಾಗಿರಲಿಲ್ಲ! ಯಾವ ಕಮ್ಯುನಿಸ್ಟ್ ನಾಯಕರೂ ಈ ಕ್ರಾಂತಿಯನ್ನು ಯೋಜಿಸಿರಲಿಲ್ಲ! ಮತ್ತು ಈ ಕ್ರಾಂತಿಯ ಹಾದಿಯನ್ನು ಯಾರೂ ಸಂಘಟಿಸಿರಲಿಲ್ಲ! ಅದೆಲ್ಲಕ್ಕಿಂತ ಮಿಗಿಲಾಗಿ, ಇಂಥ ಕ್ರಾಂತಿಯೊಂದರ ಕನಸಿನಲ್ಲೇ ವರ್ಷಗಳನ್ನು ಕಳೆದ ಲೆನಿನ್ ನೇತೃತ್ವದ ಬೊಲ್ಶೆವಿಕ್ ಗುಂಪು ಕೂಡ ಫೆಬ್ರವರಿ ಕ್ರಾಂತಿಯನ್ನು ಊಹಿಸಿರಲಿಲ್ಲ.!

ವ್ಲಾದಿಮಿರ್ ಲೆನಿನ್ ಪ್ರಕಾರ ಕ್ರಾಂತಿಯೊಂದು ಸಂಭವಿಸಬೇಕಾದಲ್ಲಿ ಮೂರು ಅಂಶಗಳ ಅವಶ್ಯಕತೆಯಿರುತ್ತದೆ. ಮೇಲ್ವರ್ಗಗಳ ಬಿಕ್ಕಟ್ಟು, ಶೋಷಿತ ವರ್ಗಗಳ ನೋವು ಮತ್ತು ಜನಸಾಮಾನ್ಯರು ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಕ್ರಾಂತಿಗೆ ಅವಶ್ಯಕ ಎಂದು ಲೆನಿನ್ ಹೇಳಿದ ಮೂರು ಅಂಶಗಳೂ 1917ರ ಮಾರ್ಚ್ ಗಿಂತ ಮೊದಲೇ ರಷ್ಯಾ ಪರಿಸ್ಥಿತಿಗೆ ಸರಿಹೊಂದುವಂತಿತ್ತು. ಲೆನಿನ್ ಹೇಳಿದ ಮೂರು ಅಂಶಗಳು ರಷ್ಯಾ ಸಮಾಜದಲ್ಲಿದ್ದಾಗ್ಯೂ ಹತ್ತಿಕೊಳ್ಳದ ಕ್ರಾಂತಿ ಕಿಡಿ, 1917ರ ಮಾರ್ಚ್ ನಲ್ಲಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ರಷ್ಯಾದಲ್ಲಿ ತಲೆಮಾರುಗಳಿಂದ ಬೇರೂರಿದ್ದ ಝಾರ್ ಸರ್ವಾಧಿಕಾರವನ್ನು ಬುಡಸಮೇತ ಕಿತ್ತುಹಾಕಿತ್ತು. ಸಿದ್ಧಾಂತದ ಗೊಡವೆಯಿಲ್ಲದೇ, ಯೋಜನೆಗಳ ನೀಲನಕ್ಷೆಯಿಲ್ಲದೇ, ಅಧಿಕೃತವಾಗಿ ಒಬ್ಬ ನಾಯಕನೂ ಇಲ್ಲದ ಈ ಕ್ರಾಂತಿ ರಷ್ಯಾದಲ್ಲಿ ಹೊಸ ಯುಗವೊಂದನ್ನು ತೆರೆದಿಟ್ಟಿತ್ತು.

Image may contain: 1 personರಷ್ಯನ್ ಚರಿತ್ರೆಯ ಬಗೆಗೆ ನಡೆದ ಅಧ್ಯಯನಗಳ ಪ್ರಕಾರ ಫೆಬ್ರವರಿ ಕ್ರಾಂತಿಗೆ ಮೂಲ ಕಾರಣ ಆ ಸಮಯದಲ್ಲಿ ರಷ್ಯಾವನ್ನು ಆವರಿಸಿದ ತೀವ್ರ ಚಳಿಯ ವಾತಾವರಣ. ತೀವ್ರ ಹಿಮಗಾಳಿ ಮತ್ತು ಹಿಮಪಾತದಿಂದಾಗಿ ರಷ್ಯಾದ ಜನಜೀವನ ಅಸ್ತವ್ಯಸ್ತವಾಗಿತ್ತಲ್ಲದೇ ರೈಲ್ವೆ ವ್ಯವಸ್ಥೆಯೂ ದಿಕ್ಕೆಟ್ಟು ನಿಂತಿತ್ತು. ಕಾರ್ಖಾನೆಗಳಿಗೂ ಬೀಗ ಜಡಿಯಲಾಗಿ, ಸಾವಿರಾರು ಹತಾಶ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಸಮಯಕ್ಕಾಗಿ ಕಾಯುತ್ತಿದ್ದರು. ಅನಿರೀಕ್ಷಿತವಾಗಿ ರಷ್ಯಾದ ವಾತಾವರಣ ಶೀತಲತೆಯಿಂದ ಬದಲಾಗಿ ಬಿಸಿಯೇರುತ್ತಿದ್ದಂತೆ, ರಷ್ಯನ್ ಕಾರ್ಮಿಕರು ಬೀದಿಗಿಳಿದುಬಿಟ್ಟಿದ್ದರು! ರಷ್ಯಾ ರಾಜಧಾನಿಯಲ್ಲಿ ಯಾವತ್ತೂ ಬರಿದಾಗದೇ ಇದ್ದ ಆಹಾರ ದಾಸ್ತಾನುಗಳ ಬಗೆಗೂ ವದಂತಿಗಳೂ ಹಬ್ಬಲಾರಂಬಿಸಿದವು. ರೈಲ್ವೇ ಸಂಪರ್ಕದಲ್ಲಾದ ತೊಡಕುಗಳಿಂದಾಗಿ ರಷ್ಯಾ ರಾಜಧಾನಿಯ ಕೆಲ ಅಂಗಡಿಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಸುಳ್ಳು ವದಂತಿಗಳನ್ನು ಇನ್ನಷ್ಟು ಬಲಪಡಿಸಿದ್ದವು. ಅನಾನುಕೂಲಕರ ವಾತಾವರಣ ಮತ್ತು ಆಹಾರದ ಕೊರತೆಯ ಕುರಿತಾಗಿ ಹಬ್ಬಿದ ಸುಳ್ಳು ಸುದ್ಧಿಗಳು ರಷ್ಯನ್ನರು ಯೋಚಿಸುವ ಧಾಟಿಯನ್ನು ಬದಲಾಯಿಸಿಬಿಟ್ಟಿದ್ದವು. ಆದರೆ ಕೇವಲ ಈ ಕಾರಣಗಳಿಂದಾಗಿಯೇ ಕ್ರಾಂತಿ ನಡೆಯುತ್ತದೆ ಎಂದುಕೊಂಡರೆ ಅದು ಖಂಡಿತ ಅತಿಶಯೋಕ್ತಿಯೇ ಸರಿ. ಯಾಕೆಂದರೆ ಈ ಹಿಂದೆಯೂ ಶೀತಲ ವಾತಾವರಣ ಮತ್ತು ಆಹಾರ ಸಮಸ್ಯೆ ರಷ್ಯಾ ರಾಜಧಾನಿಯನ್ನು ಕಾಡಿತ್ತಾದರೂ ಮತ್ತೆ ಆಹಾರ ಪೂರೈಕೆಯಾದಾಗ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇವಿಷ್ಟೇ ಅಲ್ಲದೇ ರಷ್ಯಾದ ಆಂತರಿಕ ಭದ್ರತೆಯ ಮುಖ್ಯಸ್ಥನಾಗಿದ್ದ ಅಲೆಕ್ಸಾಂಡರ್ ಪ್ರೊಟೊಪೊಪೊವ್, ಅನೇಕ ಸಮಾಜವಾದಿ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧನದಿಂದ ತಪ್ಪಿಸಿಕೊಂಡ ವ್ಲಾದಿಮಿರ್ ಲೆನಿನ್ ಮತ್ತು ಲಿಯೊನ್ ಟ್ರಾಟ್ ಸ್ಕಿ ಮುಂತಾದವರಿಗೆ ಕ್ರಾಂತಿಯೊಂದು ಸಂಭವಿಸಲಿದೆ ಎಂಬ ಕಲ್ಪನೆಯೂ ಇರಲಿಲ್ಲ!

ವಾತಾವರಣ ಮತ್ತು ಆಹಾರದ ಕೊರತೆಯಷ್ಟೇ ಕ್ರಾಂತಿಯ ಕಾರಣಗಳಾಗಿದ್ದರೆ ಝಾರ್ ರಾಜಪ್ರಭುತ್ವ ಯಾವತ್ತೋ ಅಧಿಕಾರ ಕಳೆದುಕೊಳ್ಳುತ್ತಿತ್ತು. ಆದರೆ ಈ ಕಾರಣಗಳ ಜೊತೆ ಜೊತೆಗೆ ಕೊನೆಯ ಝಾರ್ ರಾಜನಾಗಿದ್ದ ಎರಡನೇ ನಿಕೊಲಾಸ್ ವಿವೇಚನಾರಹಿತನಾಗಿ ಕೈಗೊಂಡ ಕೆಲ ತಪ್ಪು ರಾಜಕೀಯ ನಿರ್ಧಾರಗಳು ಕ್ರಾಂತಿಯ ಜ್ವಾಲೆಗೆ ತುಪ್ಪ ಸುರಿದಿದ್ದವು. 1905ರಲ್ಲೇ ರಷ್ಯಾದಲ್ಲಿ ನಡೆದ  ಶಾಂತಿಯುತ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗುಂಡಿಕ್ಕಲು ಆದೇಶ ನೀಡಿದ್ದ ಝಾರ್ ನಿಕೊಲಾಸ್, 1905ರ ಮೊದಲನೇ ರಷ್ಯಾ ಕ್ರಾಂತಿಗೆ ಕಾರಣನಾಗಿದ್ದ. ಹನ್ನೆರಡು ವರ್ಷಗಳ ಬಳಿಕ 1917ರಲ್ಲಿ ಝಾರ್ ನಿಕೊಲಾಸ್ ಮತ್ತದೇ ತಪ್ಪನ್ನು ಪುನರಾವರ್ತಿಸಿದ್ದ! ಝಾರ್ ರಷ್ಯಾದ ರಾಜಧಾನಿ ಪೆಟ್ರೊಗ್ರಾಡ್ (ಈಗಿನ ಸೈಂಟ್ ಪೀಟರ್ಸ್ ಬರ್ಗ್) ನಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರನ್ನು ಹೇಗಾದರೂ ಹಿಮ್ಮೆಟ್ಟಿಸುವಂತೆ, ಜನರಲ್ ಸೆರ್ಗೆಯ್ ಕಬಲೊವ್ ನಿಗೆ ಟೆಲಿಗ್ರಾಫ್ ಮೂಲಕ ಆದೇಶ ನೀಡಿದ್ದ ಝಾರ್ ನಿಕೊಲಾಸ್! ಪ್ರತಿಭಟನೆಯನ್ನು ತಡೆಯುವ ಆತುರದಲ್ಲಿ ರಷ್ಯನ್ ಸೇನೆ ಸುಮಾರು 200 ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತದೆ. ಆದರೆ ಆ ಹೊತ್ತಿಗಾಗಲೇ ಕ್ರಾಂತಿಯ ಪ್ರಭಾವ ರಷ್ಯನ್ ಸೇನೆಯೊಳಗೂ ನುಸುಳಿಕೊಂಡಿತ್ತು. ಸೈನಿಕರು ರಾಜನ ವಿರುದ್ಧ ದಂಗೆಯೆದ್ದು ಕ್ರಾಂತಿಗೆ ಬೆಂಬಲ ನೀಡುತ್ತಾರೆ. ಪ್ರಥಮ ವಿಶ್ವಯುದ್ಧದ ಬಳಿಕ, ರಷ್ಯನ ಜನಸಾಮಾನ್ಯರಲ್ಲಷ್ಟೇ ಅಲ್ಲದೇ ರಷ್ಯನ್ ಯೋಧರಲ್ಲೂ ಝಾರ್ ಆಳ್ವಿಕೆಯ ಮೇಲೆ ವಿಶ್ವಾಸ ಕಡಿಮೆಯಾಗಿತ್ತು. ಝಾರ್ ಗೆ ನಿಷ್ಠರಾಗಿ ಕ್ರಾಂತಿಯನ್ನು ತಡೆಯೆಲೆತ್ನಿಸಿದ ಪೊಲೀಸರನ್ನು ಮತ್ತು ಸೈನಿಕರನ್ನು ಕೊಂದು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತದೆಯಷ್ಟೇ ಅಲ್ಲದೇ ಝಾರ್ ಅಧಿಕಾರ ವ್ಯವಸ್ಥೆ ಶೀಘ್ರವಾಗಿ ಪತನದತ್ತ ಸಾಗುತ್ತದೆ. ಮೂರು ದಿನಗಳ ನಂತರ ಝಾರ್ ನಿಕೊಲಾಸ್, ಪದತ್ಯಾಗ ಮಾಡುತ್ತಾನೆ ಮತ್ತು ತಾತ್ಕಾಲಿಕವಾಗಿ ಪ್ರಜಾಪ್ರಭುತ್ವ ತತ್ವಗಳ ಆಧಾರದಲ್ಲಿ ಸರಕಾರವೊಂದು ರಚಿಸಲ್ಪಡುತ್ತದೆ.


ಫೆಬ್ರವರಿ ಕ್ರಾಂತಿಯಿಂದಾಗಿ ರಚಿಸಲ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಕಾಲ ಬಾಳಲಿಲ್ಲ.  ಮುಂದೆ 1917ರ ನವೆಂಬರ್ ನಲ್ಲಿ ನಡೆದ (ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್) ಅಕ್ಟೋಬರ್ ಕ್ರಾಂತಿ ರಷ್ಯಾವನ್ನು ಕಮ್ಯುನಿಸ್ಟ್ ಆಡಳಿತ ತನ್ನ ಹಿಡಿತ ಬಿಗಿಗೊಳಿಸುತ್ತದೆ. ಫೆಬ್ರವರಿ ಕ್ರಾಂತಿಯನ್ನು ಊಹಿಸಲು ವಿಫಲರಾಗಿದ್ದ ಲೆನಿನ್ ಮತ್ತು ಆತನ ಸಂಗಡಿಗರು ಈ ಕ್ರಾಂತಿಯ ನಂತರದ ದಿನಗಳನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ರಷ್ಯಾ, ಕಮ್ಯುನಿಸಂನ ಕಬ್ಬಿಣದ ಪರದೆಯಡಿಯಲ್ಲಿ ಸೊವಿಯೆತ್ ಒಕ್ಕೂಟದ ಹೆಸರಿನಲ್ಲಿ ವಿಶ್ವದ ಎರಡು ಸೂಪರ್ ಪವರ್ ಗಳಲ್ಲಿ ಒಂದಾಗುತ್ತದೆ. ಆದರೆ ಕಮ್ಯುನಿಸ್ಟ್ ಆಡಳಿತದ ಸೊವಿಯೆತ್ ರಷ್ಯಾದಲ್ಲಿ ಫೆಬ್ರವರಿ ಕ್ರಾಂತಿಯನ್ನು ಕಡೆಗಣಿಸಿ, ಅಕ್ಟೋಬರ್ ಕ್ರಾಂತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇವತ್ತಿಗೂ ರಷ್ಯಾ ಮತ್ತು ವಿಶ್ವದ ವಿವಿಧ ಭಾಗಗಳ ವಿದ್ವಾಂಸರು,  ರಷ್ಯಾಗೆ ಮೊದಲ ಬಾರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ ಈ ಫೆಬ್ರವರಿ ಕ್ರಾಂತಿಯನ್ನು, ವಿಶ್ವ ಕಂಡ ಮಹತ್ವದ ರಾಜಕೀಯ ಬದಲಾವಣೆಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಅಕ್ಟೋಬರ್ ಕಮ್ಯುನಿಸ್ಟ್ ಕ್ರಾಂತಿಯ ವೈಭವೀಕರಣದಿಂದಾಗಿ, ಮಾಸಿಹೋಗುತ್ತಿರುವ ಫೆಬ್ರವರಿ ಕ್ರಾಂತಿಗೆ ಈ ಮಾರ್ಚ್ ನಲ್ಲಿ ಶತಕದ ಸಂಭ್ರಮ. ಚರಿತ್ರೆಯ ಪುಟಗಳಲ್ಲಿ ಹುದುಗಿಕೊಂಡ ನೆನಪುಗಳನ್ನು ಹೊರತೆಗೆಯಲು ಇದಕ್ಕಿಂತ ಒಳ್ಳೆಯ ಸಮಯ ಸಿಗಲು ಸಾಧ್ಯವೇ?

(This article was published in Vishwavani Newsapaper on 9 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗುರುವಾರ, ಫೆಬ್ರವರಿ 23, 2017

ರಾಜಕೀಯ ಹಸ್ತಕ್ಷೇಪ: ಅಮೆರಿಕನ್ನರು ಮರೆತ ಚರಿತ್ರೆ!




ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹದ ಹೊರತಾಗಿಯೂ, ಇವತ್ತಿಗೆ ಅಮೆರಿಕಾದ ಪ್ರಭಾವಿ ವಲಯದಲ್ಲಿ ರಷ್ಯಾ ವ್ಯಾಪಕವಾಗಿ ಟೀಕೆಗೊಳಗಾಗುತ್ತಿದೆ.   ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯನ್ನರು ಹಸ್ತಕ್ಷೇಪ ಮಾಡಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲಾಗದೆ, ಅಮೆರಿಕಾದಲ್ಲಿರುವ ರಷ್ಯಾ ದ್ವೇಷಿ ಪ್ರಭಾವಿ ವ್ಯಕ್ತಿತ್ವಗಳು ರಷ್ಯಾಗೆ ಬಲವಾದ ತಿರುಗೇಟು ನೀಡುವಂತೆ ಅಧ್ಯಕ್ಷ ಟ್ರಂಪ್ ರ ಕಿವಿಯೂದುತ್ತಿದ್ದಾರೆ. ಸೆನೆಟರ್ ಜೀನ್ ಶಹೀನ್ , ರಷ್ಯಾ ನಮ್ಮ ಚುನಾವಣೆಗಳಲ್ಲಿ ಮಾಡಿದ ಹಸ್ತಕ್ಷೇಪಕ್ಕೆ ಪ್ರತಿಯಾಗಿ ಅಮೆರಿಕಾ ಉಗ್ರ ಪ್ರತ್ಯುತ್ತರ ನೀಡಬೇಕು ಎಂದಿದ್ದರೆ ಸೆನೆಟರ್ ಜಾನ್ ಮೆಕೈನ್,  ಅಮೆರಿಕಾದ ಪ್ರಜಾಪ್ರಭುತ್ವದ ಮೇಲೆ ರಷ್ಯಾ ಮಾಡಿದ ದಾಳಿ ಪ್ರತಿ ಅಮೆರಿಕನ್ನನೂ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ. ತಮ್ಮ ಪ್ರಜಾಪ್ರಭುತ್ವದ ಮೇಲಿನ ರಷ್ಯನ್ ದಾಳಿಯನ್ನು ವೀರಾವೇಶದಿಂದ ಖಂಡಿಸುತ್ತಿರುವ ಅಮೆರಿಕನ್ನರು, ಅಮೆರಿಕಾವೂ ಹಿಂದೆ ಬಹಳಷ್ಟು ಬಾರಿ ಇಂಥ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಮರೆತಂತಿದೆ. ಅಮೆರಿಕಾದ ರಾಜಕೀಯ ಪಕ್ಷವೊಂದರ ಇಮೇಲ್ ಖಾತೆಗಳನ್ನು ರಷ್ಯಾ ಹ್ಯಾಕ್ ಮಾಡಿ, ಚುನಾವಣೆಯ ಮೇಲೆ ಪ್ರಭಾವ ಬೀರುವಂತೆ ಮಾಡದ್ದು ಅಕ್ಷಮ್ಯ ಅಪರಾಧವೇ ಸರಿ. ಒಂದು ದೇಶದ ಆಂತರಿಕ ವಿಷಯಗಳು ಅದರಲ್ಲೂ ಚುನಾವಣೆಯಂತಾ ಪ್ರಕ್ರಿಯೆಗಳಲ್ಲಿ ಮೂಗು ತೂರಿಸುವುದು ಆ ದೇಶದ ಸಾರ್ವಭೌಮತ್ವವನ್ನೇ ಪ್ರಶ್ನೆ ಮಾಡಿದಂತೆ. ಈ ಬಾರಿ ರಷ್ಯಾ ಮಾಡಿದ್ದೂ ತಪ್ಪು, ಆದರೆ ಇಂತಾ ತಪ್ಪುಗಳನ್ನು ಅಮೆರಿಕಾ ದಶಕಗಳಿಂದ ಮಾಡಿಕೊಂಡು ಬಂದಿದೆ. ರಷ್ಯಾವನ್ನು ಪ್ರಶ್ನಿಸುವ ಅಮೆರಿಕಾದ ನೈತಿಕತೆಗೆ ಮರುಪ್ರಶ್ನೆ ಹಾಕುವಂಥಾ ಕೆಲ ಘಟನೆಗಳು ಚರಿತ್ರೆಯ ಪುಟಗಳಲ್ಲಿವೆ.
Image may contain: 1 person
ಜೆಕೋಬೊ ಅರ್ಬೆನ್ಸ್ ಗ್ವಾಟೆಮಾಲಾದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಧ್ಯಕ್ಷ. ಭೂಮಾಲಿಕರು ಮತ್ತು ರೈತರ ನಡುವಿನ ಆರ್ಥಿಕ ಅಂತರವನ್ನು ಕಡಿಮೆ ಮಾಡಿ ರೈತರ ಕ್ಷೇಮ ಕಾಪಾಡುತ್ತೇನೆ ಎಂಬ ನಿಲುವನ್ನು ಚುನಾವಣಾ ಪ್ರಚಾರದುದ್ದಕ್ಕೂ ಬಳಸಿಕೊಂಡ ಅರ್ಬೆನ್ಸ್ ಜನರಿಂದ ಆಯ್ಕೆಯಾಗಿ ಗ್ವಾಟೆಮಾಲಾದ ಅಧ್ಯಕ್ಷನಾಗುತ್ತಾರೆ. ಆದರೆ ಅಮೆರಿಕಾ ತನ್ನ ಪ್ರಭಾವಕ್ಕೆ ಮತ್ತು ಮುನ್ರೋ ಸಿದ್ಧಾಂತಕ್ಕೆ ಅರ್ಬೆನ್ಸ್ ಸಂಭವನೀಯ ಶತ್ರುವಾಗಿ ಬದಲಾಗಬಲ್ಲ ಎಂಬ ಲೆಕ್ಕಾಚಾರದಲ್ಲಿತ್ತು.  1952-54ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾದ ಹ್ಯಾರಿ ಟ್ರೂಮನ್ ಮತ್ತು ಡ್ವೈಟ್ ಐಸೆನ್ ಹೋವರ್, ತಮ್ಮ ಗುಪ್ತಚರ ಸಂಸ್ಥೆ ಸಿ.ಐ.ಎ ಯನ್ನು ಛೂ ಬಿಟ್ಟು ಅರ್ಬೆನ್ಸ್ ಆಡಳಿತ ಕೊನೆಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರು. ಸಿ.ಐ.ಎ ಗ್ವಾಟೆಮಾಲಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಗಳಿಂದ, ಅರ್ಬೆನ್ಸ್ ವಿರೋಧಿಗಳು ದಿನೇ ದಿನೇ ಪ್ರಭಾವಶಾಲಿಗಳಾಗತೊಡಗಿದರು. ಕೊನೆಗೊಂದು ದಿನ ಅರ್ಬೆನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೇಶ ಬಿಟ್ಟು ಓಡಿಹೋಗುವಂತಾಯ್ತು! ಅರ್ಬೆನ್ಸ್ ಸರಕಾರ ಉರುಳಿಸಿ, ಅಮೆರಿಕಾ ವಿರೋಧಿ ನಾಯಕರನ್ನೆಲ್ಲಾ ಇನ್ನಿಲ್ಲವಾಗಿಸಿದ ಗ್ವಾಟೆಮಾಲದಲ್ಲಿನ ಈ ವಿಶೇಷ ಕಾರ್ಯಾಚರಣೆಗಾಗಿ ಐಸೆನ್ ಹೋವರ್ ಬಿಡುಗಡೆ ಮಾಡಿದ ಬಜೆಟ್ ಸುಮಾರು 2.7 ಮಿಲಿಯನ್ ಅಮೆರಿಕನ್ ಡಾಲರ್ ಗಳು!

ಚಿಲಿ ದೇಶದ ರಾಜಕಾರಣಿ ಸಾಲ್ವಡೊರ್ ಅಲೆಂಡೆ 1970ರ ದಶಕದಲ್ಲಿ ಚಿಲಿ ದೇಶದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ ರಾಜಕಾರಣಿ. ಚಿಲಿಯ ಜನರಿಗೆ ಅಲೆಂಡೆಯನ್ನು ಆರ್ಥಿಕ ಸುಧಾರಣೆಗಳ ಹರಿಕಾರನಂತೆ ಕಂಡರೆ, ಅಮೆರಿಕಾಕ್ಕೆ ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿಕೊಂಡ ಹೊಸ ಶತ್ರುವಿನಂತೆ ಕಂಡಿದ್ದ! ನಿಕ್ಸನ್ ಆಡಳಿತಕ್ಕೆ ಅಲೆಂಡೆ ಸೊವಿಯೆತ್ ಒಕ್ಕೂಟದ ಸ್ನೇಹದೊಂದಿಗೆ ದಕ್ಷಿಣ ಅಮೆರಿಕಾದಲ್ಲಿ ಸೊವಿಯೆತ್ ಪ್ರಭಾವಕ್ಕೆ ಕಾರಣನಾಗುತ್ತಾನೆ ಎಂಬ ಭೀತಿಯಿತ್ತು. 1970ರ ಚುನಾವಣೆಯಲ್ಲಿ ಅಲೆಂಡೆ ಗೆಲ್ಲುವ ಸೂಚನೆಗಳು ಕಂಡುಬಂದಾಗ, ಸಿ.ಐ.ಎ ಅಲೆಂಡೆಯ ವಿರೋಧಿ ಗುಂಪುಗಳಿಗೆ ಶಸ್ತ್ರಾಸ್ತ್ರ ಇನ್ನಿತರ ನೆರವು ನೀಡಿ ಚುನಾವಣೆಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದರು. ಹೀಗಿದ್ದಾಗ್ಯೂ ಅಲೆಂಡೆ ಸಂಪೂರ್ಣ ಬಹುಮತದೊಂದಿಗೆ ಗೆದ್ದುಬರುತ್ತಾರೆ. ಸೊವಿಯೆತ್ ಒಕ್ಕೂಟದ ಈ ಸಂಭವನೀಯ ಮಿತ್ರನನ್ನು ಹೇಗಾದರೂ ಕೊನೆಗೊಳಿಸಬೇಕು ಎನ್ನುತ್ತಿದ್ದ ನಿಕ್ಸನ್ ಸರಕಾರ, ಕೊನೆ ಪಕ್ಷ ಚಿಲಿಯ ಆರ್ಥಿಕತೆಯನ್ನಾದರೂ ಬುಡಮೇಲು ಮಾಡಬೇಕೆಂದು ತಾಕೀತು ಮಾಡಿದ್ದು ಇತ್ತೀಚೆಗೆ ವಿವರ್ಗೀಕರಿತವಾದ ರಹಸ್ಯ ಕಡತಗಳಿಂದ ಬಹಿರಂಗಗೊಂಡ ಸತ್ಯ. ಚಿಲಿಯ ಮಿಲಿಟರಿ ದಂಗೆಗೂ ಪರೋಕ್ಷವಾಗಿ ಬೆಂಬಲ ನೀಡಿತ್ತು ಅಮೆರಿಕಾ. ಅಂತಿಮವಾಗಿ 1973ರಲ್ಲಿ ಚಿಲಿಯ ಮಿಲಿಟರಿ ಪಡೆಗಳು ಸುತ್ತುವರಿದಾಗ, ಅಲೆಂಡೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು.

1951ರಲ್ಲಿ ಇರಾನಿನ ಪ್ರಧಾನಿಯಾಗಿ ಆಯ್ಕೆಯಾದ ಮಹಮ್ಮದ್ ಮೊಸಾಡೆಗ್, ಇರಾನಿನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುತ್ತಾರೆ. ಸುಮಾರು ದಶಕಗಳಿಂದ ಇರಾನಿನ ತೈಲ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಬ್ರಿಟನ್, ಮೊಸಾಡೆಗ್ ವಿರುದ್ಧ ಕಿಡಿಕಾರಿದ್ದಷ್ಟೇ ಅಲ್ಲದೇ, ಮೊಸಾಡೆಗ್ ಸರಕಾರವನ್ನು ಉರುಳಿಸಲು ಅಮೆರಿಕಾ ನೆರವು ಕೇಳಿತ್ತು. ಬ್ರಿಟಿಷರಿಗೆ ಮೊಸಾಡೆಗ್ ಸರಕಾರ ತೈಲದಿಂದ ಬರುವ ಆದಾಯದ ಪ್ರಶ್ನೆಯಾಗಿದ್ದರೆ, ಅಮೆರಿಕಾಗೆ ಮೊಸಾಡೆಗ್ ಯಾವತ್ತಿದ್ದರೂ ಸೊವಿಯೆತ್ ಪರ ವಾಲಿಕೊಂಡು, ಇರಾನ್ ನಲ್ಲಿ ಸೊವಿಯೆತ್ ಪ್ರಭಾವಕ್ಕೆ ಅನುವು ಮಾಡಿಕೊಡುತ್ತಾನೆ ಎಂಬ ಸಂಶಯವಿತ್ತು. ಈ ಎಲ್ಲಾ ಕಾರಣಗಳು ಸೇರಿ ಅಮೆರಿಕಾ ಆಗಿನ ಸಿ.ಐ.ಎ ನಿರ್ದೇಶಕ ಅಲೆನ್ ಡ್ಯೂಲೆಸ್ ನೇತೃತ್ವದಲ್ಲಿ ಮೊಸಾಡೆಗ್ ಸರಕಾರದ ಅಂತ್ಯಕ್ಕೆ ಯೋಜನೆ ರೂಪಿಸಿ, ಅಧಿಕೃತ ಹಣಕಾಸಿನ ನೆರವನ್ನೂ ನೀಡಿತ್ತು. ಇರಾನಿನ ಮಾಧ್ಯಮಗಳಲ್ಲಿ ಮೊಸಾಡೆಗ್ ವಿರುದ್ಧದ ಪ್ರಚಾರ ಸುದ್ಧಿಗಳನ್ನು ವ್ಯಾಪಕವಾಗಿ ಹರಡಲಾಗುತ್ತದೆ. ಈ ವ್ಯವಸ್ಥಿತ ಅಪಪ್ರಚಾರದಿಂದಾಗಿ ಇರಾನ್ ಸೇನೆಯ ಬಹುಪಾಲು ಸೈನಿಕರು ಮೊಸಾಡೆಗ್ ವಿರೋಧಿಗಳಾಗಿ ಬದಲಾಗಿದ್ದರು. ಕೊನೆಗೆ ಮೊಸಾಡೆಗ್ ನನ್ನು ಪದಚ್ಯುತಗೊಳಿಸಿ ಅಮೆರಿಕಾ ಪರವಾಗಿದ್ದ ಮಹಮ್ಮದ್ ರೆಜಾ ಶಾ ತನ್ನ ಅಧಿಕಾರ ಸ್ಥಾಪಿಸುತ್ತಾನೆ. ಆದರೆ ಐಸೆನ್ ಹೋವರ್ ಸರಕಾರದ ಈ ನಡೆ ಮುಂದಕ್ಕೆ ಅಮೆರಿಕಾಗೆ ಬಹಳಷ್ಟು ದುಬಾರಿಯಾಗಿ ಪರಿಣಮಿಸುತ್ತದೆ. ಅಯತೊಲ್ಲಾಹ್ ಆಲಿ ಖೊಮೈನಿ ಇರಾನಿನಾದ್ಯಂತ ತನ್ನ ಭಾಷಣಗಳಲ್ಲಿ ಮೊಸಾಡೆಗ್ ಪದಚ್ಯುತಿಯ ವಿಚಾರದಲ್ಲಿ ಅಮೆರಿಕಾ ಕೈವಾಡವನ್ನು ಟೀಕಿಸುತ್ತಾ, ಮುಂದೊಂದು ದಿನ ಇರಾನಿನ ಪ್ರಶ್ನಾತೀತ ನಾಯಕನಾಗಿ ಬದಲಾಗುತ್ತಾನೆ. ಇರಾನ್ ಮತ್ತು ಅಮೆರಿಕಾಗಳ ಮಧ್ಯೆ ಬಹುದೊಡ್ಡ ಬಿರುಕು ಮೂಡಲು ಮೊಸಾಡೆಗ್ ಪದಚ್ಯುತಿಯೇ ಕಾರಣವಾಗುತ್ತದೆ.

ಅಮೆರಿಕಾ ಬಹಳಷ್ಟು ದೇಶಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದರೂ, ಕ್ಯೂಬಾದಲ್ಲಿ ಅಮೆರಿಕಾ ಪಟ್ಟ ಪಾಡು ಈ ಚರ್ಚೆಯಲ್ಲಿ ಸಿಂಹಪಾಲು ಪಡೆಯುತ್ತದೆ. ದೈತ್ಯ ಅಮೆರಿಕಾದ ಪಕ್ಕದಲ್ಲೇ ಇದ್ದ ಸಣ್ಣ ರಾಷ್ಟ್ರದ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಮೆರಿಕಾವನ್ನು ಕಾಡಿದ ರೀತಿ ಅಸಾಮಾನ್ಯ. ಅಮೆರಿಕಾದ ಗುಲಾಮನಾಗಿದ್ದ ಕ್ಯೂಬಾದ ಸರ್ವಾಧಿಕಾರಿ ಬಾಟಿಸ್ಟಾನನ್ನು ಅಧಿಕಾರದಿಂದ ಕಿತ್ತೊಗೆದು ಮುಂದಕ್ಕೆ ತಾನೇ ಸರ್ವಾಧಿಕಾರಿಯಾಗಿ ಬದಲಾದ ಕ್ಯಾಸ್ಟ್ರೋ ಸುಮಾರು ಆರು ದಶಕಗಳ ಕಾಲ ಅಮೆರಿಕಾವನ್ನು ಬಿಟ್ಟೂ ಬಿಡದೆ ಕಾಡಿದ. ಚರ್ಚ್ ಕಮಿಟಿ ತನಿಖೆಯ ಪ್ರಕಾರ ಸಿ.ಐ.ಎ ಸುಮಾರು ಆರು ಬಾರಿ ಕ್ಯಾಸ್ಟ್ರೋ ಹತ್ಯೆಗೆ ಪ್ರಯತ್ನಿಸಿತ್ತು. ತನಿಖೆಯ ವರದಿಯಲ್ಲಿರುವಂತೆ, ಹತ್ಯೆಗೆ ಬಳಸಿದ ಉಪಕರಣಗಳು, ಅತ್ಯಾಧುನಿಕ ರೈಫಲ್ ಗಳು, ವಿಷದ ಗುಳಿಗೆಗಳು, ವಿಷಯುಕ್ತ ಪೆನ್, ಮಾರಣಾಂತಿಕ ಬ್ಯಾಕ್ಟೀರಿಯಾ ಪೌಡರ್ ಗಳಷ್ಟೇ ಅಲ್ಲದೇ ಕಲ್ಪನೆಯನ್ನೇ ಸುಸ್ತಾಗಿಸುವ ಇನ್ನೂ ಅನೇಕ ಮಾರ್ಗಗಳನ್ನು ಸಿ.ಐ.ಎ ಬಳಸಿತ್ತು. ಸಿ.ಐ.ಎಯಿಂದ ಪ್ರೇರಿತವಾಗಿ, 1961ರಲ್ಲಿ ಬೇ ಆಫ್ ಪಿಗ್ಸ್ ಮತ್ತು 1962ರಲ್ಲಿ ಮಂಗೂಸ್ ಕಾರ್ಯಾಚರಣೆಗಳು ನಡೆದರೂ, ಕ್ಯಾಸ್ಟ್ರೋ ಗುಲಗಂಜಿಯಷ್ಟೂ ಅಲುಗಾಡದೆ ಸುಮಾರು ಅರ್ಧ ಶತಮಾನ ಕ್ಯೂಬಾದಲ್ಲೇ ಇದ್ದು ಅಮೆರಿಕಾಗೆ ಸಡ್ಡುಹೊಡೆದಿದ್ದ. 

ರಷ್ಯಾ ತನ್ನ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದೆ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಅಮೆರಿಕನ್ನರು ತಮ್ಮ ಇತಿಹಾಸವನ್ನು ಬಹಳಷ್ಟು ಜಾಣ್ಮೆಯಿಂದ ಮರೆಯುವ ಪ್ರಯತ್ನದಲ್ಲಿದ್ದಾರೆ. ಗ್ವಾಟೆಮಾಲಾ, ಚಿಲಿ, ಇರಾನ್ ಮತ್ತು ಕ್ಯೂಬಾಗಳಷ್ಟೇ ಅಲ್ಲದೇ, ಅಮೆರಿಕಾ ಇತರ ದೇಶಗಳಲ್ಲಿ ಮಾಡಿದ ಅನೈತಿಕ ಹಸ್ತಕ್ಷೇಪಗಳಿಗೆ ಇನ್ನೂ ಹಲವಾರು ನಿದರ್ಶನಗಳಿವೆ. 2003ರಲ್ಲಿ ಇರಾಕ್ ಮತ್ತು 2011ರಲ್ಲಿ ಲಿಬಿಯಾಗಳ ಚರಿತ್ರೆಯ ಸೂಕ್ಷ್ಮ ಅವಲೋಕನ ಅಮೆರಿಕಾದ ಅಗೋಚರ ಅಜೆಂಡಾಗಳನ್ನು ಸ್ಪಷ್ಟಪಡಿಸುತ್ತವೆ. ಅಮೆರಿಕಾ ಅಥವಾ ರಷ್ಯಾಗಳ ಖಾತೆಗಳಲ್ಲಿ ಇಂಥಾ ಹತ್ತು ಹಲವು ನಿದರ್ಶನಗಳು ಧಾರಾಳವಾಗಿ ಕಾಣಸಿಗುತ್ತವೆ. ಇನ್ನೊಂದು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವುದು ನೈತಿಕವಾಗಿ ಸಾಧುವಲ್ಲ ಎನ್ನುವುದು ನಿಜವೇ ಆದರೂ, ವಾಸ್ತವದ ಶಕ್ತಿ ರಾಜಕೀಯದಲ್ಲಿ ಸರಿ ತಪ್ಪುಗಳಿಗಿಂತಾ ರಾಷ್ಟ್ರೀಯ ಹಿತಾಸಕ್ತಿಗಳು ಪ್ರಮುಖವಾಗುತ್ತವೆ. "ಇತಿಹಾಸ ಮರುಕಳಿಸುವಿಕೆ ಮೊದಲ ಬಾರಿ ದುರಂತವಾಗಿರುತ್ತದೆ ಹಾಗೂ ಎರಡನೇ ಬಾರಿ ಅಪಹಾಸ್ಯದಂತಿರುತ್ತದೆ" ಮಾರ್ಕ್ಸ್ ಹೇಳಿದ ಈ ಮಾತುಗಳು ಸದ್ಯದ ಅಮೆರಿಕನ್ನರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.


(This article was published in Hosa Digantha Newsapaper on 14 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಬುಧವಾರ, ಜನವರಿ 18, 2017

ರಷ್ಯಾ-ಚೀನಾ ಮೈತ್ರಿಗೆ ನಿಕ್ಸನ್-ಕಿಸಿಂಜರ್ ಪ್ರತಿತಂತ್ರ?

ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್

ಬದಲಾವಣೆಯ ಹೊರತಾಗಿ ಶಾಶ್ವತವಾದುದು ಬೇರಾವುದೂ ಇಲ್ಲ. ಪರಿವರ್ತನೆ ಜಗದ ನಿಯಮ ಎಂಬಂತೆ ಪ್ರಪಂಚ ಬದಲಾಗುತ್ತಲೇ ಇರುತ್ತದೆ. ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್, ಹೀಗಾಗಿ ಪ್ರಪಂಚವೆಂದರೆ ನಮ್ಮನ್ನು ಬಿಟ್ಟರೆ ಯಾರಿಲ್ಲ ಎಂಬಂತೆ ಮೆರೆಯುತ್ತಿದ್ದ ಬ್ರಿಟನ್ ಎರಡು ವಿಶ್ವಯುದ್ಧಗಳ ನಂತರ ಮಂಕಾಗಿ ಹೋಗಿತ್ತು. ವಿಶ್ವದ ಶಕ್ತಿಕೇಂದ್ರ ಯುರೋಪಿನ ಬ್ರಿಟನ್ ನಿಂದ, ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಮೆರಿಕಾಕ್ಕೆ ಪ್ರತಿ ಶಕ್ತಿಯಾಗಿ ಸೊವಿಯೆತ್ ಒಕ್ಕೂಟವೆಂಬ ಕಮ್ಯುನಿಸ್ಟ್ ದೈತ್ಯನೂ ಹುಟ್ಟಿಕೊಂಡು ಹಲವು ದಶಕಗಳ ಶೀತಲ ಸಮರಕ್ಕೂ ಸಾಕ್ಷಿಯಾಯ್ತು. ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಗಳು ಕೇವಲ ಆ ಎರಡು ರಾಷ್ಟ್ರಗಳಿಗಷ್ಟೇ ಸಂಬಂಧಿಸದೆ, ಇಡೀ ವಿಶ್ವ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿಶದಪಡಿಸಿತ್ತು ಈ ಛಾಯಾ ಯುದ್ಧ! ಈ ಛಾಯಾ ಯುದ್ಧದ ನಿರ್ವಹಣೆಯಲ್ಲಿ ಅಮೆರಿಕಾ ತೋರಿದ ರಾಜತಾಂತ್ರಿಕ ಚಾಕಚಕ್ಯತೆಯಲ್ಲಿ ಅಗ್ರಸ್ಥಾನ ಅಲಂಕರಿಸುವುದು, ಸೊವಿಯೆತ್ ಮತ್ತು ಚೀನಾಗಳ ಗೆಳೆತನ ಮುರಿದು, ಶಕ್ತಿರಾಜಕೀಯದಲ್ಲಿ ಸಮತೋಲನ ಕಾಯ್ದುಕೊಂಡ ಅಮೆರಿಕಾದ ಜಾಣತನ.

ಶೀತಲ ಸಮರ ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳ ಘರ್ಷನೆಯಾಗಿ ಬಿಂಬಿತವಾದರೂ, ಚೀನಾ ತನ್ನದೇ ಆದ ಪಾತ್ರ ನಿರ್ವಹಿಸಿತ್ತು. ಶೀತಲ ಸಮರದ ಆರಂಭದ ದಿನಗಳಲ್ಲಿ ಚೀನಾ ಕಮ್ಯುನಿಸ್ಟ್ ಎಂಬ ಕಾರಣಕ್ಕಾಗಿ, ಸೊವಿಯೆತ್ ಒಕ್ಕೂಟದ ಬೆಂಬಲಕ್ಕೆ ನಿಂತಿತ್ತು. ವಿಶ್ವದ ಈ ಎರಡು ಕಮ್ಯುನಿಸ್ಟ್ ದೈತ್ಯರನ್ನು ಒಟ್ಟಾಗಿರುವಾಗ ಎದುರಿಸುವುದು ಕಷ್ಟಸಾಧ್ಯ ಎನ್ನುವುದು ಅಮೆರಿಕಾಗೆ ತಿಳಿಯದ ವಿಷಯವೇನಾಗಿರಲಿಲ್ಲ. ಇಬ್ಬರು ಬಲಿಷ್ಟ ಎದುರಾಳಿಗಳು ಒಂದಾದಾಗ ಚಾಣಕ್ಯನ ಭೇದ ನೀತಿಯನ್ನು ಅನುಸರಿಸುವುದು ಅಮೆರಿಕಾಗೆ ಅನಿವಾರ್ಯವಾಗಿತ್ತು. ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕಿಳಿಸಿದ ಕೀರ್ತಿ ನಿಕ್ಸನ್-ಕಿಸಿಂಜರ್ ಜೋಡಿಗೆ ಸಲ್ಲುತ್ತದೆ. ಭೇದ ನೀತಿಯ ಯಶಸ್ಸಿನ ಕುರುಹಾಗಿ ಸೊವಿಯೆತ್ ಒಕ್ಕೂಟದಿಂದ ಚೀನಾ ದೂರವಾಗುತ್ತದೆ ಮತ್ತು ಅಮೆರಿಕಾಗೆ ಹತ್ತಿರವಾಗಿ ಸೊವಿಯೆತ್ ಒಕ್ಕೂಟದ ಬಲ ಕುಗ್ಗುವಂತೆ ಮಾಡುತ್ತದೆ.

1945ರಲ್ಲಿ ಜಪಾನ್ ಶರಣಾಗತಿಯೊಂದಿಗೆ, ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವೊಂದರ ನಿರ್ಮಾಣ ಮಾವೊ ನೇತೃತ್ವದಲ್ಲಿ ಭರದಿಂದ ಸಾಗುತ್ತದೆ. ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಸ್ಥಾಪಿಸಲು ಮಾವೊ ಮತ್ತು ಆತನ ಕಮ್ಯುನಿಸ್ಟ್ ಸಹವರ್ತಿಗಳಿಗೆ ಬೆಂಬಲ ನೀಡಿದ್ದು ಸೊವಿಯೆತ್ ಒಕ್ಕೂಟದ ಜೊಸೆಫ್ ಸ್ಟಾಲಿನ್! ಸ್ಟಾಲಿನ್ ಬೆಂಬಲ ದೊರೆಯದಿದ್ದರೆ ಮಾವೊ ಚೀನಾದಲ್ಲೊಂದು ಕಮ್ಯುನಿಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಲೂ ಇರಲಿಲ್ಲ, ಮಾನವ ಜನಾಂಗದ ಇತಿಹಾಸದಲ್ಲಿ ಬೃಹತ್ ಹತ್ಯಾಕಾಂಡ ನಡೆಸಿದವರ ಸಾಲಿನಲ್ಲಿ ಮಾವೊ ಹೆಸರು ಸೇರಿಕೊಳ್ಳುತಲೂ ಇರಲಿಲ್ಲ. ಅದೇನೆ ಇದ್ದರೂ 1949ರಲ್ಲಿ ಚೀನಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಹೆಸರಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಸೊವಿಯೆತ್ ಒಕ್ಕೂಟ ಮತ್ತು ಚೀನಾಗಳ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಸ್ಟಾಲಿನ್ ನ ನಾಯಕತ್ವವನ್ನು ಮಾವೊ ಒಪ್ಪಿಕೊಂಡಿದ್ದ ಮತ್ತು ಆರಂಭಿಕ ಹಂತದಲ್ಲಿ ಸೊವಿಯೆತ್ ಕಮ್ಯುನಿಸ್ಟ್ ಜಗತ್ತಿನ ನಾಯಕ ಎನ್ನುವುದನ್ನು ಒಲ್ಲದ ಮನಸ್ಸಿನಿಂದಲೇ ಚೀನಾ ಒಪ್ಪಿಕೊಳ್ಳಬೇಕಾಯ್ತು.

Image may contain: 1 person1953ರಲ್ಲಿ ಸ್ಟಾಲಿನ್ ಸಾವಿನೊಂದಿಗೆ ಚೀನಾ ಮತ್ತು ಸೊವಿಯೆತ್ ಗಳ ಸಂಬಂಧಗಳೂ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಲಾರಂಬಿಸುತ್ತವೆ. ಸ್ಟಾಲಿನ್ ನಂತರ ಸೊವಿಯೆತ್ ಅಧಿಕಾರದ ಚುಕ್ಕಾಣಿ ಹಿಡಿದ ನಿಕಿತಾ ಕ್ರುಶ್ಚೆವ್ ಸರಕಾರ, ಮಾರ್ಕ್ಸಿಸ್ಟ್-ಲೆನಿನಿಸಂ ತತ್ವದ ಪರಿಶುದ್ಧ ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸ್ಟಾಲಿನ್ ಜಾರಿಗೆ ತಂದಿದ್ದ ಹಲವು ವಿಚಾರಗಳನ್ನು ಮೂಲೆಗೆ ತಳ್ಳುವ ಪ್ರಕ್ರಿಯೆ (De-Stalinization) ಹೊಸ ಸರಕಾರದಿಂದಾಗುತ್ತದೆ. ಈ ಎಲ್ಲಾ ಬೆಳವಣಿಗಗಳು ಸೊವಿಯೆತ್ ಮತ್ತು ಚೀನಾಗಳ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯಗಳ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸೊವಿಯೆತ್ ನಾಯಕ ಕ್ರುಶ್ಚೆವ್ ಪಶ್ಚಿಮದ ರಾಷ್ಟ್ರಗಳೊಂದಿಗೆ 'ಶಾಂತಿಯುತ ಸಹಬಾಳ್ವೆ'ಯನ್ನು (peaceful coexistence) ಒಪ್ಪಿಕೊಂಡಿದ್ದನ್ನು ಮಾವೊ ಮುಕ್ತವಾಗಿಯೇ ವಿರೋಧಿಸುತ್ತಾರೆ. ಈ ಎರಡು ದೈತ್ಯ ರಾಷ್ಟ್ರಗಳು ಕಮ್ಯುನಿಸ್ಟ್ ಜಗತ್ತಿನ ನಾಯಕತ್ವಕ್ಕಾಗಿ ಸ್ಪರ್ಧಿಸತೊಡಗುತ್ತವೆ. ಕೆಲ ಕಮ್ಯುನಿಸ್ಟ್ ರಾಷ್ಟ್ರಗಳು ಸೊವಿಯೆತ್ ಬಣದಲ್ಲಿ ಗುರುತಿಸಿಕೊಂಡರೆ, ಕೆಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಚೀನಾ ಪ್ರಭಾವ ವಿಸ್ತರಿಸಿಕೊಳ್ಳುತ್ತದೆ. ಈ ಪೈಪೋಟಿಯಲ್ಲಿ ಸೊವಿಯೆತ್ ಒಕ್ಕೂಟ ಭಾರತದ ಸ್ನೇಹ ಸಂಪಾದಿಸಿ, ಚೀನಾ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನೂ ಮಾಡಿತ್ತು! ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸೊವಿಯೆತ್ ರಾಜಿ ಮಾಡಿಕೊಂಡಿದ್ದನ್ನೂ ಚೀನಾ ಕಟುವಾಗಿ ಟೀಕಿಸಿತ್ತು. 1969ರಲ್ಲಿ ಗಡಿವಿವಾದಗಳು ಸೊವಿಯೆತ್ ಮತ್ತು ಚೀನಾ ಮಿಲಿಟರಿ ಹಣಾಹಣಿಯ ಮಟ್ಟಕ್ಕೆ ತಲುಪಿದ್ದು, ಈ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ನಡುವಿನ ವೈಷಮ್ಯಕ್ಕೆ ಸಾಕ್ಷಿ.

ಈ ಎರಡು ಕಮ್ಯುನಿಸ್ಟ್ ದೇಶಗಳ ಪ್ರಭಾವ ವಿಸ್ತರಿಸಿದ ಕಡೆಯೆಲ್ಲಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯ್ತು. ಆಫ್ರಿಕಾ ಖಂಡದಲ್ಲಿ ನಡೆದ ದಂಗೆ, ಘರ್ಷಣೆಗಳಲ್ಲಿ ಚೀನಾ ಒಂದು ಗುಂಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಸೊವಿಯೆತ್ ಇನ್ನೊಂದು ಗುಂಪು ಸೇರಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ವಿಯೆಟ್ನಾಮ್, ಅಫ್ಘಾನಿಸ್ತಾನ್ ಮತ್ತಿತರ ಪ್ರದೇಶಗಳಲ್ಲಿ ಸೊವಿಯೆತ್ ಮತ್ತು  ಚೀನಾಗಳು ಪರಸ್ಪರ ಮುಸುಕಿನ ಗುದ್ದಾಟ ನಡೆಸಿಕೊಂಡವು. ನಂತರದ ವರ್ಷಗಳಲ್ಲಿ ಈ ವೈಷಮ್ಯ ಸ್ವಲ್ಪ ಮಟ್ಟಿಗೆ ತಗ್ಗಿತಾದರೂ, ಮಾವೊ-ಕ್ರುಶ್ಚೇವ್ ಸಮಯದಲ್ಲಿ ಈ ಎರಡು ರಾಷ್ಟ್ರಗಳು ಸೃಷ್ಟಿಸಿಕೊಂಡ ಸಮಸ್ಯೆಗಳು, ಏಕೀಕೃತ ಕಮ್ಯುನಿಸ್ಟ್ ಬಣದ ಕಲ್ಪನೆಯನ್ನು ರಿಪೇರಿ ಮಾಡಲಾಗದಷ್ಟು ಕೆಡಿಸಿಬಿಟ್ಟಿತ್ತು! ಚೀನಾ ಮತ್ತು ಸೋವಿಯೆತ್ ಗಳು ಪರಸ್ಪರ ಮಿಲಿಟರಿ ಸಂಘರ್ಷದ ಹಂತಕ್ಕೆ ಬಂದ ಮೇಲಂತೂ ಮಾವೊ ಆಲೋಚನಾ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ಶತ್ರುಗಳಿಬ್ಬರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ಅಮೆರಿಕಾ ಪಾಲಿಗೆ ಬಯಸದೇ ಬಂದ ಭಾಗ್ಯದಂತಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಆಗಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾ ಜೊತೆ ನಡೆಸಿದ ರಾಜತಾಂತ್ರಿಕ ಮಾತುಕತೆ ಧನಾತ್ಮಕ ಫಲ ನೀಡಿತ್ತು. 1969ರಲ್ಲಿ ಚೀನಾದ ಮೇಲೆ ವಿಧಿಸಿದ್ದ ವ್ಯಾಪಾರ ಮತ್ತು ಪ್ರಯಾಣದ ನಿರ್ಬಂಧಗಳನ್ನು ಅಮೆರಿಕಾ ಸಡಿಲಿಸಿತ್ತು! ಪಾಕಿಸ್ತಾನವನ್ನು ರಾಜತಾಂತ್ರಿಕ ಮಧ್ಯವರ್ತಿಯಾಗಿ ಸಮರ್ಪಕವಾಗಿ ಬಳಸಿಕೊಂಡ ನಿಕ್ಸನ್ ಚಾಣಾಕ್ಷತೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ಸ್ನೇಹವನ್ನು ಮುರಿದುಬಿಡುತ್ತದೆ.

1971ರಲ್ಲಿ ಅಮೆರಿಕಾದ ಟೇಬಲ್ ಟೆನ್ನಿಸ್ ತಂಡವೊಂದು ಚೀನಾಗೆ ಭೇಟಿ ನೀಡುವುದರೊಂದಿಗೆ, ಎರಡು ದೇಶಗಳ ಮಧ್ಯೆ ನಡೆದ ರಾಜತಾಂತ್ರಿಕ ನಡೆಗಳು 'ಪಿಂಗ್-ಪಾಂಗ್ ರಾಜತಾಂತ್ರಿಕತೆ' (ping-pong diplomacy) ಎಂದೇ ಪ್ರಸಿದ್ಧ. ನಿಕ್ಸನ್ ನ ಪರಮಾಪ್ತ ಮತ್ತು ಅಮೆರಿಕಾದ ಸಾರ್ವಕಾಲಿಕ ರಾಜತಾಂತ್ರ ನಿಪುಣ ಹೆನ್ರಿ ಕಿಸಿಂಜರ್ 1971 ಜುಲೈನಲ್ಲಿ ಪಾಕಿಸ್ತಾನ ಪ್ರವಾಸದ ನೆಪದಲ್ಲಿ, ರಹಸ್ಯವಾಗಿ ಬೀಜಿಂಗ್ ಗೂ ಭೇಟಿ ನೀಡುತ್ತಾನೆ. ಅದೇ ವರ್ಷ ಅಕ್ಟೋಬರ್ ನಲ್ಲಿ ಚೀನಾಗೆ ಭೇಟಿ ನೀಡುವ ಕಿಸಿಂಜರ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗೆ ವಿಶ್ವಸಂಸ್ಥೆಯ ಸದಸ್ಯನಾಗಿಸಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿಸುವ ಪ್ರಕ್ರಿಯೆಗೆ ಅಮೆರಿಕಾದ ಬೆಂಬಲವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಫೆಬ್ರವರಿ 1972ರಂದು ನಿಕ್ಸನ್ ಮೊದಲ ಬಾರಿ ಚೀನಾಗೆ ಭೇಟಿ ನೀಡುತ್ತಾರೆ. ಇಷ್ಟಾದರೂ ನಿಕ್ಸನ್ ಕಾಲದಲ್ಲಿ ಅಮೆರಿಕಾ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಲಾಗಲಿಲ್ಲ. ಮುಂದೆ 1979ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್, ರಿಪಬ್ಲಿಕ್ ಆಫ್ ಚೀನಾದೊಂದಿಗೆ(ತೈವಾನ್) ಸಂಬಂಧಗಳನ್ನು ಅಂತ್ಯಗೊಳಿಸಿದಾಗಲೇ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಕಮ್ಯುನಿಸ್ಟ್ ಚೀನಾ) ಅಮೆರಿಕಾ ಜೊತೆಗಿನ ರಾಜತಾಂತ್ರಿಕ ವ್ಯವಹಾರಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು. ಈ ಪ್ರಕ್ರಿಯೆಗಳು ಅಮೆರಿಕಾ ಮತ್ತು ಚೀನಾಗಳನ್ನು ಆಪ್ತ ರಾಷ್ಟ್ರಗಳನ್ನಾಗಿಸದೇ ಹೋದರೂ, ಇಂಥಾ ಸಂದರ್ಭವನ್ನು ನಾಜೂಕಾಗಿ ನಿರ್ವಹಿಸಿ ಅಮೆರಿಕಾ ವಿರುದ್ಧದ ಸೊವಿಯೆತ್-ಚೀನಾ ಸಂಭವನೀಯ ಮೈತ್ರಿಯೊಂದನ್ನು ತಡೆದ ಹೆಗ್ಗಳಿಕೆ ನಿಕ್ಸನ್-ಕಿಸಿಂಜರ್ ರಾಜತಾಂತ್ರಿಕ ಪ್ರಯತ್ನಗಳಿಗೆ ಸಲ್ಲುತ್ತದೆ.

ಆಧುನಿಕ ವಿಶ್ವರಾಜಕೀಯ ಮತ್ತೆ ನವ ಶೀತಲ ಸಮರದತ್ತ ಸಾಗುತ್ತಿದೆ. ಸೊವಿಯೆತ್ ಒಕ್ಕೂಟದ ಆಕ್ರಮಣಶೀಲತೆಯನ್ನು ರಷ್ಯಾ ಮತ್ತೆ ನೆನಪಿಸುತ್ತಿದೆಯಷ್ಟೇ ಅಲ್ಲದೇ, ರಷ್ಯಾ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಚೀನಾ ಕಡೆಗೆ ವಾಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚೀನಾದ ಉದ್ದೇಶಗಳು ಮತ್ತು ಜಾಗತಿಕ ಅಜೆಂಡಾಗಳು ಚೀನಾ ಮತ್ತು ರಷ್ಯಾದ ಮಿಲಿಟರಿ ಮೈತ್ರಿಯೊಂದಕ್ಕೆ ದಾರಿ ಮಾಡಿಕೊಟ್ಟಿರುವುದೂ ಸುಳ್ಳಲ್ಲ. ಒಬಾಮ ಆಡಳಿತದಲ್ಲಿ ಅಮೆರಿಕಾ ಚೀನಾ ಮತ್ತು ರಷ್ಯಾಗಳೆರಡನ್ನೂ ನಿಯಂತ್ರಿಸುವ ಪ್ರಯತ್ನದಲ್ಲಿ ಈ ಎರಡು ದೇಶಗಳ ವಿರೋಧ ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ರಷ್ಯಾ-ಚೀನಾಗಳು ಇನ್ನಷ್ಟು ಹತ್ತಿರವಾಗಲು ಪರೋಕ್ಷವಾಗಿ ಸಹಕರಿಸಿದಂತಾಗಿದೆ. ಇವತ್ತಿಗೆ ಅಮೆರಿಕಾ ಎದುರಿಸಬೇಕಾಗಿರುವ ಸವಾಲುಗಳು ಹಿಂದೆಂದಿಗಿಂತಲೂ ವಿಭಿನ್ನ. ಚೀನಾ, ರಷ್ಯಾ, ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಜುವೆಲಾ, ಇಸ್ಲಾಮಿಕ್ ಸ್ಟೇಟ್ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಏಕಕಾಲಕ್ಕೆ ಎದುರಿಸಬೇಕಾದ ಸವಾಲು ಅಮೆರಿಕಾ ಮುಂದಿದೆ. ಜೈವಿಕ, ರಾಸಾಯನಿಕ ಮತ್ತು ಅಣ್ವಸ್ತ್ರಗಳ ಅಸ್ತಿತ್ವದೊಂದಿಗೆ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಸಣ್ಣ ಘರ್ಷಣೆ ಈಡೀ ವಿಶ್ವದ ಅಳಿವು-ಉಳಿವಿನ ಪ್ರಶ್ನೆಯಾಗುತ್ತದೆ! ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.

(This article was published in Vishwavani Newsapaper on 13 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ವಿಶ್ವ ರಾಜಕೀಯದ ದಿಕ್ಕು ಬದಲಿಸಲಿದೆಯೇ ರಷ್ಯಾ?

ಇತ್ತೀಚಿನ ವರ್ಷಗಳಲ್ಲಿ ಪುಟಿನ್ ಆಕ್ರಮಣಕಾರಿ ಅಧ್ಯಕ್ಷತೆಯಲ್ಲಿ ರಷ್ಯಾ ಕೆಲ ಜಾಗತಿಕ ಆಗುಹೋಗುಗಳಲ್ಲಿ ಸದ್ದು ಮಾಡಿತ್ತಾದರೂ, ಸೊವಿಯೆತ್ ಒಕ್ಕೂಟದ ಪ್ರಭಾವವನ್ನು ಸರಿಗಟ್ಟಲಾರದು ಎಂದೆನಿಸಿತ್ತು. ಆದರೆ ಇದೀಗ ರಷ್ಯಾ ಹೊಸ ವಿದೇಶಾಂಗ ನೀತಿಯ ಮೂಲಕ ತನ್ನ ಆಕ್ರಮಣಶೀಲ ಜಾಗತಿಕ ನಿಲುವಿಗೊಂದು ಅಧಿಕೃತ ಮುದ್ರೆಯೊತ್ತಿದೆ!
-  ಕೀರ್ತಿರಾಜ್


2016ರ ವರ್ಷಾಂತ್ಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಷ್ಯಾದ ಹೊಸ ವಿದೇಶಾಂಗ ನೀತಿಯ ಕರಡನ್ನು ಅಂಗೀಕರಿಸಿದ್ದಾರೆ. ಈ ಬೆಳವಣಿಗೆ ಕಳೆದೊಂದಷ್ಟು ವರ್ಷಗಳ ಕಾಲ ಪರಿಷ್ಕರಣೆಯಾಗದೇ ಇದ್ದ ರಷ್ಯಾ ನೀತಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಈ ಹೊಸ ವಿದೇಶಾಂಗ ನೀತಿ! ರಷ್ಯಾದ ಹೊಸ ವಿದೇಶಾಂಗ ನೀತಿಯ ದಾಖಲೆ ಪತ್ರಗಳು ರಷ್ಯಾವನ್ನು ಮತ್ತೆ ವಿಶ್ವದ ಸೂಪರ್ ಪವರ್ ಸ್ಥಾನಕ್ಕೇರಿಸುವ ಪ್ರಯತ್ನದಲ್ಲಿವೆ. ಆಧುನಿಕ ಜಾಗತಿಕ ರಾಜಕೀಯದಲ್ಲಿ ರಷ್ಯಾ ಘನತೆಯನ್ನು ಸೊವಿಯೆತ್ ಒಕ್ಕೂಟದ ಗತವೈಭವಕ್ಕೆ ಮರಳಿಸುವ ಮಹತ್ವಾಕಾಂಕ್ಷೆ ರಷ್ಯನ್ ರಾಜತಂತ್ರಜ್ಞರ ನಡೆ ನುಡಿಗಳಲ್ಲಿ ವ್ಯಕ್ತವಾಗುತ್ತಿದೆ. ಇದಷ್ಟೇ ಅಲ್ಲದೇ ವಿಶ್ವದ ಯಾವುದೇ ಮೂಲೆಯ ರಾಜಕೀಯ ಸಮಸ್ಯೆಯಾದರೂ, ರಷ್ಯಾ ಹಸ್ತಕ್ಷೇಪ ಅನಿವಾರ್ಯ ಎನ್ನುವ ಸಂದೇಶವೊಂದನ್ನು ರವಾನಿಸಿದೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಲಿಖಿತ ದಾಖಲೆಗಳು!

ವಿಶ್ವದಲ್ಲಿ ನಡೆಯುವ ಪ್ರತಿ ರಾಜಕೀಯ ಬದಲಾವಣೆಯಲ್ಲೂ ತನ್ನ ಛಾಪು ಮೂಡಿಸಲು ಅತ್ಯುತ್ಸಾಹದಿಂದಿರುವ ರಷ್ಯಾ, ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಿಂದ ಹೊರಬರುವ ಪ್ರತಿ ನಿರ್ಧಾರಗಳು, ಅವುಗಳ ಹಿಂದಿನ ಕಾರಣಗಳು, ಸಮಜಾಯಿಷಿಗಳು ಕೇವಲ ರಷ್ಯನ್ನರನ್ನು ಮಾತ್ರವಲ್ಲದೇ ಇಡೀ ಜಾಗತಿಕ ಸಮುದಾಯಕ್ಕೆ ತಲುಪುತ್ತಿವೆ. ಇದಕ್ಕಾಗಿ ದೇಶ ವಿದೇಶಗಳ ಮಾಧ್ಯಮಗಳನ್ನು ದಕ್ಷವಾಗಿ ಬಳಸಿಕೊಳ್ಳುತ್ತಿದೆ ರಷ್ಯಾ. ರಷ್ಯನ್ ಅಜೆಂಡಾಗಳನ್ನು ವಿಶ್ವಾದ್ಯಂತ ತಲುಪಿಸಲು ತನ್ನದೇ ಅದ ರಷ್ಯಾ ಟುಡೆ (Russia Today) ಎಂಬ ಮಾಧ್ಯಮ ಜಾಲವನ್ನೂ ರಷ್ಯನ್ನರು ಸೃಷ್ಟಿಸಿಕೊಂಡಿದ್ದಾರೆ. ಆರ್. ಟಿ ಮಾಧ್ಯಮ ಜಾಲವೆಂದು ಗುರುತಿಸಿಕೊಂಡು, ವಿಭಿನ್ನ ಭಾಷೆಗಳನ್ನು ಬಳಸಿಕೊಂಡು ಇಡೀ ಪ್ರಪಂಚದ ಜನರನ್ನು ರಷ್ಯಾ ಪರವಾಗಿರಲು ಪ್ರಭಾವಿಸುತ್ತಿದೆ. 2017ರ ರಷ್ಯಾದ ಬಜೆಟ್ ಕರಡು, ಆರ್. ಟಿ ಮಾಧ್ಯಮ ಜಾಲಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ನೀಡಲು ಸಿದ್ಧವಾಗಿದೆ. ಯುರೋಪಿನ ಮಾಧ್ಯಮಗಳು ರಷ್ಯಾದ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಪ್ರತ್ಯುತ್ತರವಾಗಿ, ಆರ್. ಟಿ ಯನ್ನು ಇನ್ನಷ್ಟು ಸಶಕ್ತಗೊಳಿಸಿ ರಷ್ಯಾ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ರಷ್ಯಾದ ಉದ್ದೇಶ. ವಿಶೇಷವಾಗಿ ಉಕ್ರೇನ್ ಮತ್ತು ಸಿರಿಯಾಗಳಲ್ಲಿ ರಷ್ಯಾ ನಡೆಗಳ ಬಗ್ಗೆ ಜಾಗತಿಕ ಸಮುದಾಯಕ್ಕೊಂದು ಸಮಜಾಯಿಷಿ ನೀಡುವ ಪ್ರಯತ್ನಗಳನ್ನೂ ರಷ್ಯಾ ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಗೂ ರಷ್ಯಾ ಅಜೆಂಡಾಗಳನ್ನು ತಲುಪಿಸುವತ್ತ ರಷ್ಯಾ ಪರ ಮಾಧ್ಯಮಗಳನ್ನು ಬಳಸಿಕೊಳ್ಳುವತ್ತ ರಷ್ಯಾದ ಹೊಸ ವಿದೇಶಾಂಗ ನೀತಿಯನ್ನು ರೂಪಿಸಿದವರು ಗಂಭೀರ ಸಲಹೆಗಳನ್ನು ನೀಡಿದ್ದಾರೆ.

ಆಧುನಿಕ ಜಾಗತಿಕ ರಾಜಕೀಯದ ಜವಾಬ್ದಾರಿಯನ್ನು ರಷ್ಯಾ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗೆಗೂ ಹೊಸ ವಿದೇಶಾಂಗ ನೀತಿ ತರ್ಕಬದ್ಧ ವಿವರಣೆ ನೀಡುವ ಪ್ರಯತ್ನವೊಂದನ್ನು ಮಾಡಿದೆ. ಪಶ್ಚಿಮದ ರಾಷ್ಟ್ರಗಳು ತಮ್ಮ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಇತರ ನಾಗರಿಕತೆಗಳ ಮೇಲೆ ಬಲವಂತವಾಗಿ ಹೇರುತ್ತಿದೆ ಮತ್ತು ಇದನ್ನು ತಡೆ ಯುವ ಜವಾಬ್ದಾರಿ ರಷ್ಯಾದ ಮೇಲಿದೆ ಎನ್ನುವ ಮನೋಭಾವ ರಷ್ಯಾದ ಹೊಸ ವಿದೇಶಾಂಗ ನೀತಿಯಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ಸುಮಾರು ಕಾಲು ಶತಮಾನದ ಹಿಂದೆ ಸ್ಯಾಮುವೆಲ್ ಹಂಟಿಂಗ್ಟನ್ ನೀಡಿದ್ದ 'ನಾಗರಿಕತೆಗಳ ಸಂಘರ್ಷ' ಪರಿಕಲ್ಪನೆಯನ್ನು ರಷ್ಯನ್ ವಿದೇಶಾಂಗ ನೀತಿ ತಜ್ಞರು ತಮ್ಮ ಪರವಾಗಿ ಬಳಸಿಕೊಂಡಂತಾಯಿತು. ಜಾಗತಿಕ ರಾಜಕೀಯವನ್ನು ನಿಯಂತ್ರಿಸುವಷ್ಟು ರಾಜಕೀಯ ಪ್ರಭಾವ ಮತ್ತು ಆರ್ಥಿಕ ಸಂಪನ್ಮೂಲಗಳು ಇವತ್ತಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿಲ್ಲ ಮತ್ತು ಸಂಪನ್ಮೂಲಗಳಿಗೋಸ್ಕರ ನಡೆಯುವ ಸ್ಪರ್ಧೆ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಅರಾಜಕತೆಗೆ ದೂಡಲಿದೆ ಎನ್ನುವುದು ರಷ್ಯನ್ನರ ವಾದ. ಇವೆಲ್ಲವುಗಳಿಗೆ ಕಾರಣ ಪಾಶ್ಚಾತ್ಯ ನಾಗರಿಕತೆ ಮತ್ತು ಇತರರ ಮೇಲೆ ಆ ಸಂಸ್ಕೃತಿಯ ಬಲವಂತದ ಹೇರಿಕೆ ಎಂದು ಗುರುತಿಸುವ ರಷ್ಯನ್ ರಾಜತಂತ್ರಜ್ಞರು, ಇವೆಲ್ಲವುಗಳಿಗೆ ಉತ್ತರ ನೀಡುವ ಹೊಣೆ ರಷ್ಯಾ ಮೇಲಿದೆ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ರಷ್ಯಾ ಮಹತ್ತರವಾದ ಪಾತ್ರ ವಹಿಸಬೇಕು ಮತ್ತು ವಿಶ್ವಾದ್ಯಂತ ತನ್ನ ಪ್ರಭಾವ ವಿಸ್ತರಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ರಷ್ಯಾದ ಹೊಸ ವಿದೇಶಾಂಗ ನೀತಿಯ ಪ್ರತಿ ಅಕ್ಷರವೂ ಪ್ರತಿಧ್ವನಿಸುವಂತೆ ಭಾಸವಾಗುತ್ತದೆ. ಸೊವಿಯೆತ್ ಒಕ್ಕೂಟದ ಪತನದ ನಂತರ ಇತರರ ಗೊಡವೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದ ರಷ್ಯನ್ ದೈತ್ಯ ಮತ್ತೆ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಂಡಿತ್ತು ಮತ್ತು ಇದೀಗ ತನ್ನ ವಿದೇಶಾಂಗ ನೀತಿ ದಾಖಲೆಗಳಲ್ಲಿ ಇವೆಲ್ಲವುಗಳನ್ನು ಅಧಿಕೃತವಾಗಿ ದಾಖಲಿಸಿಕೊಂಡಿದೆ.

Image may contain: 1 personಶೀತಲ ಸಮರದ ಅಂತ್ಯದ ನಂತರವೂ ಅಮೆರಿಕಾ ಮತ್ತು ನ್ಯಾಟೊ ಮೈತ್ರಿಕೂಟಕ್ಕೆ ರಷ್ಯಾ ಶತ್ರುವಾಗಿಯೇ ಉಳಿದಿದೆ ಎನ್ನುವುದು ರಷ್ಯಾಗೂ ತಿಳಿದಿರುವ ಸತ್ಯ. ಇವತ್ತಿಗೂ ಅಮೆರಿಕಾದ ಆಕಾಂಕ್ಷೆಗಳು ಅಂತರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದ್ದರೆ, ಅದನ್ನು ವಿರೋಧಿಸುವ ಸಾಮರ್ಥ್ಯ ರಷ್ಯಾಗೆ ಮಾತ್ರವಿದೆ ಎನ್ನುವುದು ರಷ್ಯನ್ನರ ನಂಬಿಕೆ. ರೊಮಾನಿಯದಲ್ಲಿ ಅಮೆರಿಕಾ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿದಾಗ, ಪ್ರತ್ಯುತ್ತರವಾಗಿ ರಷ್ಯಾ ತನ್ನ ಖಂಡಾಂತರ ಕ್ಷಿಪಣಿಗಳನ್ನು ಕಲಿನಿನ್ ಗಾರ್ಡ್ ನಲ್ಲಿ ಸ್ಥಾಪಿಸಿ ನ್ಯಾಟೊ ಸದಸ್ಯರನ್ನು ಬೆದರಿಸಿದ್ದು ಇದಕ್ಕೊಂದು ಉದಾಹರಣೆ. ನ್ಯಾಟೊ ತನ್ನ ಪ್ರಭಾವವನ್ನು ಪೂರ್ವದ ಕಡೆ ವಿಸ್ತರಿಸುವುದನ್ನು ಎಲ್ಲಾ ರಿತಿಯಿಂದಲೂ ತಡೆಗಟ್ಟಲು ರಷ್ಯಾ ಸಿದ್ಧವಿದೆ ಎನ್ನುವುದನ್ನು ಈ ಉದಾಹರಣೆ ಸ್ಪಷ್ಟಪಡಿಸುತ್ತದೆ. ಯುರೋಪಿನ ಜೊತೆಗಿನ ತನ್ನ ಸಂಬಂಧಗಳ ಬಗ್ಗೆ ಆರು ಬೃಹತ್ ಅಧ್ಯಾಯಗಳನ್ನು ಮೀಸಲಿಟ್ಟಿರುವ ವಿದೇಶಾಂಗ ನೀತಿಯ ಲಿಖಿತ ದಾಖಲೆ, ಈ ಬಾರಿ ಯುರೋಪಿನ ಹೊಸ ರಾಷ್ಟ್ರಗಳನ್ನು ತಮ್ಮ ವಿದೇಶಾಂಗ ನೀತಿಯ ಆದ್ಯತೆಯನ್ನಾಗಿಸಿದ್ದಾರೆ. ಜರ್ಮನಿ, ಫ್ರಾನ್ಸ್ ಮತ್ತು ಇಟಲಿಗಳನ್ನು ಆಪ್ತ ರಾಷ್ಟ್ರಗಳೆಂದು ಗುರುತಿಸಿರುವ ಕಾನ್ಸೆಪ್ಟ್ ಹಿಂದೆ ಈ ಪಟ್ಟಿಯಲ್ಲಿದ್ದ ನೆದರ್ ಲ್ಯಾಂಡ್ಸ್ ಮತ್ತು ಬ್ರಿಟನ್ ಗಳನ್ನು ಹೊರಗಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ನ್ಯಾಟೊ ಸದಸ್ಯ ರಾಷ್ಟ್ರಗಳಲ್ಲೂ ಕೆಲ ಪ್ರಭಾವಿ ರಾಜಕಾರಣಿಗಳು, ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿ ಪೂರ್ಣ ಪ್ರಮಾಣದ ಬಾಂಧವ್ಯ ಬೆಳೆಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಮಧ್ಯಪ್ರಾಚ್ಯದ ರಾಜಕೀಯ ಪ್ರಕ್ಷುಬ್ಧತೆಗಳ ಬಗೆಗೂ ಗಮನ ಹರಿಸಿರುವ ರಷ್ಯಾದ ಹೊಸ ವಿದೇಶಾಂಗ ನೀತಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳ ರೆಸಲ್ಯೂಶನ್ ಗಳ ಪ್ರಕಾರ ಸಮಸ್ಯೆಗಳ ಪರಿಹಾರಿಸುವತ್ತ ಬೆಂಬಲ ವ್ಯಕ್ತಪಡಿಸಿದೆ. ಅರಬ್ - ಇಸ್ರೇಲಿ ಸಂಘರ್ಷದ ಬಗೆಗೆ ತನ್ನ ನಿಲುವನ್ನು ಬದಲಿಸಿಕೊಂಡಿರುವ ರಷ್ಯಾ, ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣಕ್ಕೆ ನೀಡುತ್ತಿದ್ದ ಬೆಂಬಲವನ್ನು ಮೊದಲ ಬಾರಿಗೆ ಹಿಂತೆಗೆದುಕೊಂಡಿದೆ. ಭಯೋತ್ಪಾದನೆಯ ಬಗೆಗೂ ರಷ್ಯಾದ ಹೊಸ ವಿದೇಶಾಂಗ ನೀತಿ ತನ್ನದೇ ಕಾರ್ಯ ಯೊಜನೆಗಳನ್ನು ರೂಪಿಸಿಕೊಂಡಿದೆ. ಈ ಬಾರಿ ಭಯೋತ್ಪಾದನೆಯ ಕುರಿತಾಗಿ ವಿಭಿನ್ನ ದೃಷ್ಟಿಕೋನ ಹೊಂದಿರುವ ರಷ್ಯಾ, ಜಾಗತೀಕರಣ ಮತ್ತು ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಆಧಾರದಲ್ಲಿ ಉಗ್ರ ನಿಗ್ರಹದತ್ತ ಗಮನಹರಿಸಿದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟಿನೊಂದಿಗೆ ಭಯೋತ್ಪಾದನೆಯಲ್ಲಿ ಹೊಸ ಪ್ರವೃತ್ತಿಗಳ ಬೆಳವಣಿಗೆಯನ್ನೂ ಗಮನದಲ್ಲಿಟ್ಟುಕೊಂಡು ಹೊಸದೊಂದು ಉಗ್ರ ನಿಗ್ರಹ ಮಿಲಿಟರಿ ಮೈತ್ರಿಕೂಟವನ್ನು ರಚಿಸುವ ಯೋಜನೆಗಳು ರಷ್ಯಾಗಿವೆ.

ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದತ್ತ ಗಮನಹರಿಸಿದರೆ ಸದ್ಯದ ರಷ್ಯಾ ಧೋರಣೆಗಳು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಭಾರತ-ರಷ್ಯಾ ಸ್ನೇಹ ಏರುಗತಿಯಲ್ಲೇ ಇತ್ತಾದರೂ, ಇತ್ತೀಚೆಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳ ಮೈತ್ರಿಯೊಂದಿಗೆ ರಷ್ಯಾ ಭಾರತ ಸಂಬಂಧಗಳಲ್ಲಿ ಏರುಪೇರಾಗಿರುವುದು ನಿಜ. ಅಂಕಿ ಅಂಶಗಳ ಪ್ರಕಾರವೂ ಭಾರತ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ರಷ್ಯಾಗಿಂತ ಅಮೆರಿಕಾದತ್ತ ಹೆಚ್ಚಿನ ಒಲವು ತೋರಿಸಿದೆಯಷ್ಟೇ ಅಲ್ಲದೆ ಅಮೆರಿಕಾದ ಜೊತೆ ಭಾರತದ ವ್ಯಾಪಾರ ವಹಿವಾಟುಗಳು ಹದಿನೈದು ಪಟ್ಟು ಹೆಚ್ಚಿದೆ. ಕಳೆದ ಸೆಪ್ಟೆಂಬರ್ ನಲ್ಲಿ ರಷ್ಯಾ ಮತ್ತು ಪಾಕಿಸ್ತಾನಗಳ ಮೊತ್ತ ಮೊದಲ ಜಂಟಿ ಸಮರಾಭ್ಯಾಸವೂ ಭಾರತಕ್ಕೆ ಎಚ್ಚರಿಕೆಯೆ ಘಂಟೆಯೇ ಸರಿ. ಇದೇ ವೇಳೆ ಸಮರತಾಂತ್ರಿಕ ಕಾರಣಗಳಿಂದ ಚೀನಾದ ಜೊತೆಗೂ ರಷ್ಯಾ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ರಷ್ಯಾ ಮತ್ತು ಚೀನಾ ಎಂಬೀ ಎರಡು ದೈತ್ಯ ಶಕ್ತಿಗಳು ವಿಶ್ವ ರಾಜಕೀಯವನ್ನು ಅಂಕೆಯಲ್ಲಿಟ್ಟುಕೊಳ್ಳುವ ಸಾಹಸದಲ್ಲಿ ಪರಸ್ಪರ ಸಹಕಾರ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಭಾರತದ ಮಟ್ಟಿಗೆ ಭವಿಷ್ಯದ ರಾಜಕೀಯ ನಡೆಗಳು ಹಲವಾರು ಸವಾಲುಗಳನ್ನು ಸೃಷ್ಟಿಸಲಿದೆ. ಎದುರಾಗಲಿರುವ ರಾಜಕೀಯ ಬಿಕ್ಕಟ್ಟು ಶೀತಲ ಸಮರಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಭಾರತ ತಟಸ್ಥವಾಗದೆ, ಇವುಗಳನ್ನು ಎದುರಿಸುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. 

ವಿಶ್ವಾದ್ಯಂತ ಚದುರಿ ಹೋಗಿರುವ ರಷ್ಯನ್ನರ ಜೊತೆ ಸಂಪರ್ಕ ಸಾಧಿಸಿ ಹೊಸ ಭಾವನಾತ್ಮಕ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿರುವುದು, ಆರ್ಥಿಕ ನೆರವು ನೀಡಿ ರಷ್ಯನ್ ಪ್ರಭಾವವೊಂದನ್ನು ಸೃಷ್ಟಿ ಮಾಡಿಕೊಳ್ಳುತ್ತಿರುವುದನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದವರಿಗೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಕಾನ್ಸೆಪ್ಟ್ ಸ್ಪಷ್ಟ ಉತ್ತರಗಳನ್ನು ನೀಡಿದೆ. ವಿಶ್ವದ ಮೂಲೆ ಮೂಲೆಗಳಿಗೂ ರಷ್ಯಾ ಕೈಗಳು ತಲುಪುವಂಥಾ ವಿದೇಶಾಂಗ ನೀತಿಯೊಂದು ಸಿದ್ಧವಾಗಿರುವುದರಿಂದ, ಮುಂದಿನ ರಷ್ಯಾ ವಿದೇಶಾಂಗ ನೀತಿ ಇನ್ನಷ್ಟು ಆಕ್ರಮಣಕಾರಿಯಾಗುವುದು ಖಚಿತ.

(This article was published in Hosa Digantha Newsapaper on 10 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶನಿವಾರ, ಅಕ್ಟೋಬರ್ 24, 2015

ಜಾಗತಿಕ ರಾಜಕಾರಣದ ಹೊಸ ತಿರುವು


ವಿಶ್ವ ರಾಜಕೀಯದಲ್ಲಿ ಅಮೆರಿಕಾ ಮತ್ತು ರಷ್ಯಾ ತಮ್ಮ ಸಾಂಪ್ರದಾಯಿಕ ವಿದೇಶಾಂಗ ನೀತಿಯಿಂದ ದೂರ ಸರಿದು, ಹೊಸ ಮಿತ್ರರನ್ನು ಜೊತೆಗೆ ಹೊಸ ಶತ್ರುಗಳನ್ನು ಹುಡುಕುವ ಕಾಯಕದಲ್ಲಿ ತೊಡಗಿವೆ.
-     
ಕೀರ್ತಿರಾಜ್


ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮತ್ತು ಶಸ್ತ್ರಾಗಾರದಲ್ಲಿ ರಷ್ಯಾದ ಪಾತ್ರ ಅಪಾರ. ಆದರೆ ಕಳೆದ ನಾಲ್ಕು ವರ್ಷದ ಭಾರತದ ರಕ್ಷಣಾ ವ್ಯವಸ್ಥೆಯ ತಂತ್ರಗಳನ್ನು ನೋಡಿದರೆ ಭಾರತ ನಿಧಾನವಾಗಿ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವತ್ತ ಆಸಕ್ತಿ ತೋರಿಸುತ್ತಿರುವುದು ಗಮನಾರ್ಹ. ಅದೇ ರೀತಿ ಪಾಕಿಸ್ತಾನ ತನ್ನ ಚಾರಿತ್ರಿಕ ವೈರಿ ರಷ್ಯಾದತ್ತ ವಾಲುತ್ತಿರುವುದೂ ಜಾಗತಿಕ ರಾಜಕಾರಣದಲ್ಲಿ ಗಮನಿಸಬೇಕಾದ ವಿಷಯವೇ. ಶಸ್ತ್ರಾಸ್ತ್ರಗಳ ವಿಷಯಗಳಷ್ಟೇ ಅಲ್ಲದೇ ಆರ್ಥಿಕ ಮತ್ತು ಇನ್ನಿತರ ರಾಜಕೀಯ ರಷ್ಯಾ ಮತ್ತು ಪಾಕ್ ಹತ್ತಿರವಾಗಿರುವುದು ಮತ್ತು ಕಮ್ಯುನಿಷ್ಟ್ ಚೈನಾ ಕೂಡ ಈ ಮೈತ್ರಿ ಕೂಟವನ್ನು ಸೇರಿಕೊಳ್ಳುವಲ್ಲಿ ಉತ್ಸುಕವಾಗಿರುವುದು ದಕ್ಶಿಣಾ ಏಷ್ಯಾ ಅದರಲ್ಲೂ ಪ್ರಮುಖವಾಗಿ ಭಾರತದ ರಾಜನೀತಿಜ್ಞರ ಪಾಲಿಗೆ ಯೋಚಿಸಬೇಕಾದ ವಿಷಯ.
ಅಮೆರಿಕಾ ಮತ್ತು ಸೋವಿಯೆತ್ ಯುನಿಯನ್ (ಇವತ್ತಿನ ರಷ್ಯಾ) ನಡುವಿನ ಶೀತಲ ಸಮರದ ಪ್ರಾರಂಭದಿಂದ ಕೊನೆಯವರೆಗೂ ಪಾಕಿಸ್ತಾನ ಅಮೆರಿಕಾವನ್ನು ಸ್ಪಷ್ಟವಾಗಿ ಬೆಂಬಲಿಸಿತ್ತು. ಅಮೆರಿಕಾ ನೇತೃತ್ವದ ಸೀಟೋ ಮೈತ್ರಿಕೂಟವನ್ನು ಸೇರಿಕೊಂಡ ಪಾಕಿಸ್ತಾನ ಏಷ್ಯಾದಲ್ಲಿ ಅಮೆರಿಕಾದ ಅತ್ಯಂತ ಆಪ್ತ ರಾಷ್ಟ್ರ ಎಂದು ತನ್ನನ್ನು ಬೆನ್ನನ್ನು ತಾನೇ ತಟ್ಟಿಕೊಂಡಿತು. 1965ರ ಯುದ್ಧದ ನಂತರ ತಾಷ್ಕೆಂಟ್ ಒಪ್ಪಂದದ ಸಂದರ್ಭದಲ್ಲಿ, ಸೋವಿಯೆತ್ ರಷ್ಯಾ ಪಾಕಿಸ್ತಾನ ಪರವಾದ ಒಪ್ಪಂದವೊಂದಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಒತ್ತಾಯಿಸಿದಂಥ ಕೆಲವೊಂದು ಉದಾಹರಣೆಗಳಿದ್ದರೂ ಭಾರತ ಮತ್ತು ಸೋವಿಯೆತ್ ರಷ್ಯಾದ ದೀರ್ಘಕಾಲೀನ ಬಾಂಧವ್ಯಕ್ಕೆ ಈ ವಿಷಯಗಳು ಅಡ್ಡಿಯಾಗಲಿಲ್ಲ.
1971 ರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನದ ವಿರುದ್ಧ ದಂಗೆಯೆದ್ದಾಗ ಭಾರತ ಪೂರ್ವ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡಿ ಬಾಂಗ್ಲಾದೇಶದ ಉದಯಕ್ಕೆ ಕಾರಣಿಭೂತವಾಯಿತು. ಬಾಂಗ್ಲಾದೇಶೀ ವಿಮೋಚನೆಯ ಈ ಯುದ್ಧದಲ್ಲಿ ಅಮೆರಿಕಾ ಪಾಕಿಸ್ತಾನಕ್ಕೆ ಸಹಾಯ ಹಸ್ತ ನೀಡಿದ್ದಲ್ಲದೆ, ಬೆಂಬಲದ ಕುರುಹಾಗಿ ಯು .ಎಸ್.ಎಸ್ ಎಂಟರ್ಪ್ರೈಸ್ ಎಂಬ ಬೃಹತ್ ಯುದ್ಧ ನೌಕೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಿಕೊಟ್ಟಿತು. ಆ ಸಂಧಿಗ್ಧ ಪರಿಸ್ಥಿತಿಯಲ್ಲಿ ಸೋವಿಯೆತ್ ರಷ್ಯಾ ತನ್ನ ನೌಕಾಬಲವನ್ನು ಭಾರತದ ನೆರವಿಗೆ ಕಳುಹಿಸಿ, ೧೯೭೧ರ ಯುದ್ಧದಲ್ಲಿ ಅಮೆರಿಕಾವನ್ನು ತಟಸ್ಥಗೊಳಿಸಿದ್ದು ಈಗ ಇತಿಹಾಸ. ಇದಕ್ಕೆ ಕಾರಣ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸೋವಿಯೆತ್ ಜೊತೆ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದ.
ಮುಂದೆ 1979ರಲ್ಲಿ ಅಫ್ಘಾನಿಸ್ತಾನವನ್ನು ಸೋವಿಯೆತ್ ಆಕ್ರಮಿಸಿಕೊಂಡ ಸಮಯದಲ್ಲಿ, ಅಮೆರಿಕಾ ಮುಜಾಹಿದ್ದೀನ್ ಗಳನ್ನು ಸೋವಿಯೆತ್ ಪಡೆಗಳ ವಿರುದ್ಧ ಎತ್ತಿಕಟ್ಟಿತ್ತು. ಶೀತಲ ಸಮರದ ಈ ಅಧ್ಯಾಯದಲ್ಲಿ ಪಾಕಿಸ್ತಾನ ಸೋವಿಯೆತ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸಿತು. ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವುದರಿಂದ ಹಿಡಿದು, ಮುಜಾಹಿದ್ದೀನ್ ಗಳಿಗೆ ಸೋವಿಯೆತ್ ವಿರುದ್ಧ ನೀಡಿದ ಸಹಾಯ ಪಾಕ್ ಮತ್ತು ಸೋವಿಯೆತ್ ರಷ್ಯಾದ ವೈರತ್ವಕ್ಕೆ ನಿದರ್ಶನ. ಶೀತಲ ಸಮರೋತ್ತರದಲ್ಲಿ, ಸೋವಿಯೆತ್ ಒಡೆದು ಹೋಳಾಗಿ ರಷ್ಯಾ ಮಾತ್ರ ಉಳಿದುಕೊಂಡಿದ್ದರೂ, ಭಾರತದೊಂದಿಗಿನ ಸಂಬಂಧಗಳು ಉತ್ತಮ ರೀತಿಯಲ್ಲೇ ಮುಂದುವರಿದಿದ್ದವು. ಅಮೆರಿಕಾ ಪಾಕಿಸ್ತಾನದ ಪರವಾದರೆ, ರಷ್ಯಾ ಭಾರತದ ಪರ ಎಂಬ ಸಾಮಾನ್ಯ ನಂಬಿಕೆ ಬೇರೂರಿಬಿಟ್ಟಿತ್ತು.
ಆದರೆ 2011ರಿಂದೀಚೆಗೆ ಜಾಗತಿಕ ರಾಜಕಾರಣ ತನ್ನ ದೀರ್ಘಕಾಲಿಕ ಏಕತಾನೀಯ ದಿಕ್ಕು ಬದಲಿಸಿ, ಹೊಸ ದಿಕ್ಕಿನತ್ತ ಸಾಗಲಾರಂಭಿಸಿದೆ. 2011ರಲ್ಲಿ ಪಾಕಿಸ್ತಾನದ ಪೂರ್ವಾನುಮತಿ ಇಲ್ಲದೇ ಅಮೆರಿಕನ್ ಯೋಧರು ಅಬಟ್ಟಬಾದ್ ಗೆ ನುಗ್ಗಿ ಲಾದನ್ ಹತ್ಯೆ ಮಾಡಿದರು. ಇದಾದ ನಂತರ ಪ್ರಾರಂಭವಾದ ಮಾಧ್ಯಮ ಸಮರದಲ್ಲಿ, ಅಮೆರಿಕನ್ ಮಾಧ್ಯಮಗಳಾದ ನ್ಯೂಯಾರ್ಕ್ ಟೈಮ್ಸ್, ದ ಅಟ್ಲಾಂಟಿಕ್ ಪಾಕ್ ಮಾನವ ಹಕ್ಕುಗಳ ಉಲ್ಲಂಘನೆ, ಉಗ್ರರಿಗೆ ನೆರವು ನೀಡಿದ ಕೃತ್ಯಗಳ ಬಗೆಗೆ ಬೆಳಕು ಹರಿಸಿದ್ದವು. ಇಂಥ ಘಟನೆಗಳು ಅಮೆರಿಕಾ ಪಾಕ್ ಸಂಬಂಧ ಹದಗೆಡಿಸಿದ್ದು ನಿಜವಾದರೂ ನಂತರ ಪಾಕ್ ಅಮೆರಿಕಾ ಸಂಬಂಧಗಳನ್ನು ಯಥಾಸ್ಥಿತಿಗೆ ತರುವ ಪ್ರಯತ್ನಗಳೂ ನಡೆದವು.
ಇವೆಲ್ಲವುಗಳ ಮಧ್ಯೆ ಪಾಕಿಸ್ತಾನಿ ರಾಜಕಾರಣಿಗಳು, ಅಮೆರಿಕಾದ ಅತಿಯಾದ ಅವಲಂಬನೆಯನ್ನು ತೊರೆದು ಇನ್ನಿತರ ಶಕ್ತಿಶಾಲಿ ಮಿತ್ರರ ಅವಶ್ಯಕತೆಯ ಬಗೆಗೆ ಯೋಚಿಸುವಂತಾಗಿತ್ತು. ಅತ್ತ ರಷ್ಯಾ ಕೂಡ ಇಂಥದ್ದೊಂದು ಅವಕಾಶದ ನಿರೀಕ್ಷೆಯಲ್ಲಿತ್ತು. ರಷ್ಯಾ ಉಕ್ರೇನ್ ಆಕ್ರಮಿಸಿದ ನಂತರ ಅಂತರಾಷ್ಟ್ರೀಯ ದಿಗ್ಬಂಧನಕ್ಕೊಳಗಾದ ಮೇಲಂತೂ ರಷ್ಯಾ ತನ್ನ ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಮಾರುಕಟ್ಟೆಗಳಿಗೆ ಏಷ್ಯಾದತ್ತ ಮುಖ ಮಾಡಿತು. ಭಾರತದ ತೀವ್ರ ವಿರೋಧದ ನಡುವೆಯೂ, ತನ್ನ ಶಸ್ತ್ರಾಸ್ತ್ರಗಳ ಮಾರುಕಟ್ಟೆಯನ್ನು ಪಾಕಿಸ್ತಾನಕ್ಕೂ ವಿಸ್ತರಿಸಿತು. ಮಿ-35 ಹೆಲಿಕಾಪ್ಟರ್ ಗಳಿಂದ ಸುಕೋಯ್ ಸು-35 ಫೈಟರ್ ಜೆಟ್ ಮತ್ತು ಯಾಕ್-130 ಕಾಂಬ್ಯಾಟ್ ಟ್ರೈನರ್ ಏರ್ ಕ್ರಾಫ್ಟ್ ಗಳಂಥ ಶಕ್ತಿಶಾಲಿ ತಂತ್ರಜ್ಞಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಲು ರಷ್ಯಾ ಕಡೆಯಿಂದ ಮಾತುಕತೆಗಳು ನಡೆದಿವೆ ಎಂಬುದು ಭಾರತದ ಪಾಲಿಗೆ ಎಚ್ಚರಿಕೆಯ ಘಂಟೆಯೇ ಸರಿ.
ಈ ಎಲ್ಲಾ ಬೆಳವಣಿಗೆಗಳ ಪರಿಣಾಮವಾಗಿ ಭಾರತದ ರಕ್ಷಣಾವಲಯದಲ್ಲಿ ಇರಿಸು ಮುರಿಸು ಉಂಟಾಗಿದ್ದು ನಿಜವೇ ಆದರೂ, ಇಂಡೋ-ರಷ್ಯಾ ಸಂಬಂಧಗಳು ಉತ್ತಮವಾಗಿಯೇ ಮುಂದುವರಿಯುತ್ತಿದೆ. ಪಾಕಿಸ್ತಾನದೊಂದಿಗಿನ ರಷ್ಯಾದ ಈ ಹೊಸ ನಡೆಯನ್ನು ಭಾರತ ಯಾವ ರೀತಿ ಸ್ವೀಕರಿಸುತ್ತದೆ ಎಂಬುವುದರ ಮೇಲೆ ಮುಂದಿನ ವಿದೇಶಾಂಗ ನೀತಿ ನಿರ್ಧರಿತವಾಗುತ್ತದೆ. ರಷ್ಯಾ-ಚೈನಾ-ಪಾಕ್ ಮೈತ್ರಿಯ ದಟ್ಟ ಸಾಧ್ಯತೆಯ ಬಗೆಗೂ ಚರ್ಚೆಗಳಿವೆ. ಇನ್ನೊಂದು ದಿಕ್ಕಿನಲ್ಲಿ ಭಾರತಕ್ಕೆ ಹತ್ತಿರವಾಗುತ್ತಿರುವ ಅಮೆರಿಕಾ ಮತ್ತಿತರ ರಾಷ್ಟ್ರಗಳು ಹೊಸ ಶಕ್ತಿ ಕೇಂದ್ರಕ್ಕೆ ಅಡಿಪಾಯ ಹಾಕಿದಂತಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಮುಂದಿನ ಡಿಸೆಂಬರ್ ನಲ್ಲಿ ನರೇಂದ್ರ ಮೋದಿಯವರ ರಷ್ಯಾ ಭೇಟಿ ಕುತೂಹಲಭರಿತ ಪ್ರಾಮುಖ್ಯತೆ ಪಡೆದುಕೊಂಡಿದೆ.






 
  
 KEERTHIRAJ  (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 20 October 2015)