ಅಣ್ವಸ್ತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಣ್ವಸ್ತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ನವೆಂಬರ್ 19, 2016

ನವ ಶೀತಲ ಸಮರಕ್ಕೆ ಹೊಸ ಭಾಷ್ಯ ಬರೆಯಲಿದೆ ರಷ್ಯಾ!

ಯುರೋಪಿನೊಂದಿಗೆ ರಷ್ಯಾಗಿರುವ ತಗಾದೆಗಳ ಪರಿಹಾರಕ್ಕೆ ಅಣ್ವಸ್ತ್ರಗಳನ್ನೂ ಉಪಯೋಗಿಸಲು ಹಿಂಜರಿಯುವುದಿಲ್ಲ ಎಂಬಂಥ ಆಕ್ರಮಣಕಾರಿ ನಿಲುವನ್ನು ತಳೆದಿರುವ ರಷ್ಯಾ ಅಧ್ಯಕ್ಷ ಪುಟಿನ್ ಯುರೋಪ್ ಮತ್ತು ಅಮೆರಿಕಾ ನಾಯಕರನ್ನು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದಾರೆ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಸರಿಸುಮಾರು ಎರಡೂವರೆ ದಶಕಗಳ ಹಿಂದಷ್ಟೇ ಅಂತ್ಯವಾದ ಶೀತಲ ಸಮರದ ಹೆಸರಿನಲ್ಲಿ  ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳೆರಡು ಶಕ್ತಿ ರಾಜಕೀಯದ ಜಂಗೀ ಕುಸ್ತಿ ನಡೆಸಿದ್ದವು. ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳ ಜೊತೆ ಸೇರಿಕೊಂಡು ನ್ಯಾಟೋ ಮಿಲಿಟರಿ ಒಕ್ಕೂಟ ರಚಿಸಿಕೊಂಡರೆ ಸೊವಿಯೆತ್ ಬಣ ವಾರ್ಸೋ ಹೆಸರಿನ ಮಿಲಿಟರಿ ಪ್ಯಾಕ್ಟ್ ನೊಂದಿಗೆ ಎದುರುತ್ತರ ನೀಡಿತ್ತು. 1990ರ ಅಂಚಿನಲ್ಲಿ ಸೊವಿಯೆತ್ ಒಕ್ಕೂಟ ಛಿದ್ರವಾಗಿ ಕೊನೆಗೆ ಉತ್ತರಾಧಿಕಾರಿಯಾಗಿ ಉಳಿದುಕೊಂಡ ರಷ್ಯಾ ಕೂಡ ತನ್ನ ಹಿಂದಿನ ಪ್ರಭಾವ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತದೆ. ತದನಂತರ ತನಗೆ ಇನ್ನಾರೂ ಸಾಟಿಯಿಲ್ಲ ಎಂಬಂತೆ ಅಮೆರಿಕಾ ವಿಶ್ವ ರಾಜಕೀಯದ ದೊಡ್ಡಣ್ಣ ಎನಿಸಿಕೊಂಡಿದ್ದು ಈಗ ಇತಿಹಾಸ. ಶೀತಲ ಸಮರದ ಅಂತ್ಯದೊಂದಿಗೆ ರಷ್ಯಾ ಬಹಳಷ್ಟು ಸಂದರ್ಭಗಳಲ್ಲಿ ಅವಮಾನಕ್ಕೂ ಒಳಗಾಗಬೇಕಾಯ್ತು. ನ್ಯಾಟೊ ಮತ್ತು ತನ್ನ ಪ್ರಭಾವ ವೃದ್ಧಿಸಿಕೊಂಡ ರೀತಿ ಮತ್ತು ಯುರೋಪಿಯನ್ ಒಕ್ಕೂಟದ ವಿಸ್ತರಣೆ ರಷ್ಯಾದಲ್ಲಿ ಅಭದ್ರತೆಯ ಭಾವನೆಯನ್ನೂ ಮೂಡಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಪೂರ್ಣ ಸಹಮತವಿಲ್ಲದೇ ಹೋದರೂ ಸರ್ಬಿಯಾ, ಇರಾಕ್ ಮತ್ತಿತರ ಪ್ರದೇಶಗಳಲ್ಲಿ ಅಮೆರಿಕಾ ನಡೆಸಿದ ಮಿಲಿಟರಿ ಕಾರ್ಯಾಚಾರಣೆಗಳು ರಷ್ಯಾದ ಹತಾಶೆ ಮತ್ತು ಆಕ್ರೋಶಗಳನ್ನು ಇಮ್ಮಡಿಗೊಳಿಸಿತ್ತು. ಆದರೆ ರಷ್ಯಾದ ಇತ್ತೀಚಿನ ನಡೆಗಳು ಮತ್ತೆ ಅಮೆರಿಕಾ ಮತ್ತು ಕೆಲ ಯುರೋಪಿನ ರಾಷ್ಟ್ರಗಳ ನಿದ್ದೆಗೆಡುವಂತೆ ಮಾಡಿದೆ.

ಯುರೋಪಿನೊಂದಿಗೆ ರಷ್ಯಾಗಿರುವ ತಗಾದೆಗಳ ಪರಿಹಾರಕ್ಕೆ ಅಣ್ವಸ್ತ್ರಗಳನ್ನೂ ಉಪಯೋಗಿಸಲು ಹಿಂಜರಿಯುವುದಿಲ್ಲ ಎಂಬಂಥ ಆಕ್ರಮಣಕಾರಿ ನಿಲುವನ್ನು ತಳೆದಿರುವ ರಷ್ಯಾ ಅಧ್ಯಕ್ಷ ಪುಟಿನ್ ಯುರೋಪ್ ಮತ್ತು ಅಮೆರಿಕಾ ನಾಯಕರನ್ನು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದಾರೆ. ರಷ್ಯಾ ವಿಶ್ವ ನಾಯಕರ ವಿರೋಧಕ್ಕೆ ಕ್ಯಾರೇ ಎನ್ನದೆ ಕ್ರಿಮಿಯಾವನ್ನು ರಷ್ಯಾದೊಂದಿಗೆ ವಿಲೀನಗೊಳಿಸಿದಾಗ, ಸಿರಿಯಾ ಯುದ್ಧರಂಗಕ್ಕೆ ಧುಮುಕಿ, ಅಮೆರಿಕಾದ ಸಲಹೆ ಮತ್ತು ಎಚ್ಚರಿಕೆಗಳನ್ನು ಗಾಳಿಗೆ ತೂರಿ ತನ್ನದೇ ಯುದ್ಧ ನೀತಿ ಪ್ರದರ್ಶಿಸಿದಾಗ ಹಾಗೂ ತೀರ ಇತ್ತೀಚೆಗೆ ರಷ್ಯಾ ತನ್ನ ರಹಸ್ಯ ಕಾರ್ಯಾಚರಣೆಗಳ ಮೂಲಕ ಅಮೆರಿಕಾ ಚುನಾವಣೆಗಳಲ್ಲೂ ಹಸ್ತಕ್ಷೇಪ ಮಾಡಿದೆ ಎಂಬ ಸಂಶಯ ವ್ಯಕ್ತವಾದ ಮೇಲಂತೂ ಅಧ್ಯಕ್ಷ ಪುಟಿನ್ ರಷ್ಯಾದ  ವೈರಿಗಳ ಜಂಘಾಬಲ ಉಡುಗಿಸುವ ಯಾವ ಪ್ರಯತ್ನವನ್ನೂ ಕೈಬಿಡುವವರಲ್ಲ ಎಂಬುದು ಸ್ಪಷ್ಟವಾಗಿದೆ. ಅಮೆರಿಕಾದಲ್ಲಿ ಸದ್ಯದಲ್ಲೇ ಅಧ್ಯಕ್ಷೀಯ ಚುನಾವಣೆಯಿದೆ. ಮುಂದಿನ ಅಧ್ಯಕ್ಷ ಯಾರೇ ಆದರೂ ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ರಷ್ಯಾಗೆ ಸಿಂಹಪಾಲು ದಕ್ಕಲಿದೆ. ಕಾಲು ಶತಮಾನದ ಹಿಂದೆ ಅಮೆರಿಕಾ ತನ್ನ ವಿದೇಶಾಂಗ ನೀತಿಯಲ್ಲಿ ಸೊವಿಯೆತ್ ಗೆ ನೀಡುತ್ತಿದ್ದ ಪ್ರಾಮುಖ್ಯತೆ ಇದೀಗ ಮತ್ತೆ ರಷ್ಯಾ ವಿಷಯದಲ್ಲಿ ಮರುಕಳಿಸಲಿದೆ!

2015ರಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ನನ್ನು ಅಧಿಕಾರದಲ್ಲಿ ಉಳಿಸಲು ಸಿರಿಯಾದಲ್ಲಿ ರಷ್ಯಾ ನಿಯೋಜಿಸಿದ ಯುದ್ಧ ವಿಮಾನಗಳು ಮತ್ತು ಫಿರಂಗಿಗಳು ಒಬಾಮ ಉದ್ದೇಶಗಳನ್ನು ತಲೆಕೆಳಗು ಮಾಡಿತ್ತು! ಯುದ್ಧ ಅಸದ್ ಪರವಾಗಿ ಬದಲಾಗಿತ್ತು! ಈ ಮೂಲಕ ಸಿರಿಯಾದಲ್ಲಿ ರಷ್ಯಾ ತನ್ನ ಹಿಡಿತ ಬಲಪಡಿಸಿಕೊಂಡದ್ದಷ್ಟೇ ಅಲ್ಲದೇ ಈ ಪ್ರದೇಶದಲ್ಲಿ ಅಮೆರಿಕಾ ಪ್ರಭಾವವವನ್ನು ಕಡಿಮೆ ಮಾಡಿತ್ತು. ಇತ್ತಿಚೆಗೆ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ'(No Fly Zone)ಗಳನ್ನು ರಚಿಸುವ ಉತ್ಸಾಹದಲ್ಲಿದ್ದ ಅಮೆರಿಕನ್ ಸಂಸದರು ಈ ಕುರಿತಾಗಿ ಜನರಲ್ ಜೋಸೆಫ್ ಡನ್ಫೋರ್ಡ್ ರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, "ಹಾರಾಟ ನಿಷೇಧಿತ ವಲಯಗಳನ್ನು ಸ್ಥಾಪಿಸಲೇಬೇಕು ಎಂದಿದ್ದಲ್ಲಿ ಸಿರಿಯಾ ಮತ್ತು ರಷ್ಯಾಗಳೆರಡರ ಜೊತೆಗೂ ಅಮೆರಿಕಾ ಯುದ್ಧಕ್ಕೆ ಸಿದ್ಧವಾಗಬೇಕು!"ಈ ಮಧ್ಯೆ ಹಿಲರಿ ಕ್ಲಿಂಟನ್ ತನ್ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರದುದ್ದಕ್ಕೂ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ' ಮತ್ತು 'ಸುರಕ್ಷಿತ ವಲಯ'ಗಳನ್ನು ರಚಿಸಬೇಕು ಎನ್ನುತ್ತಿದ್ದಾರೆ. ಈ ಮೂಲಕ ರಷ್ಯಾಗೆ ಸರಿಯಾದ ಹೊಡೆತ ನೀಡುವ ಯೋಚನೆಯಲ್ಲಿರುವ ಕ್ಲಿಂಟನ್, ರಷ್ಯಾದ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಮರೆತಿರುವಂತಿದೆ. ಯುದ್ಧ ತಂತ್ರ ನಿಪುಣರ ಪ್ರಕಾರ ರಷ್ಯಾದ ಎಸ್-400 ರಕ್ಷಣಾ ವ್ಯವಸ್ಥೆಗೆ ಅಮೆರಿಕಾದ ಯುದ್ಧವಿಮಾನಗಳನ್ನು ಮತ್ತು 'ಹಾರಾಟ ನಿಷೇಧಿತ ವಲಯ'ವನ್ನೂ ಪುಡಿಗಟ್ಟಬಲ್ಲ ಸಾಮರ್ಥ್ಯವಿದೆ!

2011ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಲಿಬಿಯಾದಲ್ಲಿ 'ಹಾರಾಟ ನಿಷೇಧಿತ ವಲಯ'ವನ್ನು ರಚಿಸುವುದನ್ನು ಆಗಿನ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ತಡೆದಿದ್ದರು. ಇವತ್ತಿನ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಮತ್ತು ಅವತ್ತಿನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ರಷ್ಯಾವನ್ನು ಒಪ್ಪಿಸುವಲ್ಲಿ ಹರಸಾಹಸ ಪಟ್ಟಿದ್ದರು. ಲಿಬಿಯಾದಲ್ಲಿ ಗದ್ದಾಫಿಯನ್ನು ಬದಲಿಸುವ ಅಥವಾ ಆಳ್ವಿಕೆಯನ್ನು ಬದಲಿಸುವ ಯಾವುದೇ ಪ್ರಯತ್ನವನ್ನೂ ಅಮೆರಿಕಾ ಮಾಡುವುದಿಲ್ಲ ಎಂಬ ಆಶ್ವಾಸನೆಯನ್ನೂ ಕ್ಲಿಂಟನ್ ರಷ್ಯಾಕ್ಕೆ ನೀಡಿದ್ದರು. ಕೊನೆಗೆ ಗದ್ದಾಫಿಯನ್ನು ದಂಗೆಕೋರರು ಹತ್ಯೆ ಮಾಡುವಲ್ಲಿ ಅಮೆರಿಕಾ ನೇತೃತ್ವದ ನ್ಯಾಟೊ ಪಡೆಗಳು ಮುಖ್ಯ ಪಾತ್ರವಹಿಸುತ್ತವೆ. ಗದ್ದಾಫಿ ಹತ್ಯೆಯ ಕುರಿತಾದ ವಿಡಿಯೊವೊಂದರಲ್ಲಿ ಕ್ಲಿಂಟನ್ ವ್ಯಂಗ್ಯವಾಗಿ "ನಾವು ಬಂದೆವು, ನಾವು ನೋಡಿದೆವು ಅವನು ಸತ್ತ"ಎಂದಿದ್ದನ್ನು ರಷ್ಯನ್ನರು ತಮಗೇ ಮಾಡಿದ ಲೇವಡಿ ಎಂದುಕೊಂಡರು. ಕ್ಲಿಂಟನ್ ರಷ್ಯಾಗೆ ನೀಡಿದ್ದ ಆಶ್ವಾಸನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರಿವಾದಾಗ ಸಹಜವಾಗಿಯೇ ರಷ್ಯಾ ಕೆಣಕಿದ ಹಾವಾಗಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ' ಸ್ಥಾಪಿಸುವ ಅಮೆರಿಕಾದ ಹಾದಿಯಲ್ಲಿ ರಷ್ಯಾ ಅಡ್ಡಗಾಲು ಹಾಕುವುದು ಖಂಡಿತ.

ರಷ್ಯಾ ಸಿರಿಯಾದಲ್ಲಿ ಅನೇಕ ಯುದ್ಧಾಪರಾಧ ಮತ್ತು ದುಷ್ಕೃತ್ಯಗಳನ್ನು ಮಾಡಿದೆ ಎಂದು ಅಮೆರಿಕಾ ಆಪಾದಿಸುತ್ತಿದ್ದರೆ ರಷ್ಯಾ ಮಾತ್ರ ಸಿರಿಯಾ ಯುದ್ಧಭೂಮಿಗೆ ಇನ್ನಷ್ಟು ಶಸ್ತ್ರಾಸ್ತ್ರ ಮತ್ತು ಸೇನಾಪಡೆಗಳನ್ನು ನಿಯೋಜಿಸುವ ತರಾತುರಿಯಲ್ಲಿದೆ. ರಷ್ಯಾದ ಈ ಆಕ್ರಮಣಕಾರಿ ನೀತಿ ಇಸ್ಲಾಮಿಕ್ ಸ್ಟೇಟ್ ಮತ್ತು ಕರ್ದಿಶ್ ಹೋರಾಟಗಾರರ ನಿದ್ದೆಗೆಡಿಸಿದೆ. ಅಮೆರಿಕಾದ ಪಾಲಿಗೂ ಸಿರಿಯಾದಲ್ಲಿ ರಷ್ಯನ್ ಪಡೆಗಳ ಉಪಸ್ಥಿತಿ ನುಂಗಲಾಗದ ಬಿಸಿ ತುಪ್ಪದಂತಾಗಿದೆ. ಇವೆಲ್ಲದರ ಮಧ್ಯೆ ರಷ್ಯಾ ವಿದೇಶಗಳಲ್ಲಿರುವ ತನ್ನ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳುತ್ತಿರುವ ಬಗ್ಗೆ, ತೃತೀಯ ಮಹಾಯುದ್ಧದ ಆರಂಭದ ಕುರಿತಾಗಿಯೂ ಊಹಾಪೋಹಗಳೆದ್ದಿದ್ದವು. ತೃತೀಯ ಸತ್ಯಾಸತ್ಯತೆಗಳೇನಿದ್ದರೂ ಅಮೆರಿಕಾ ಮತ್ತು ರಷ್ಯಾಗಳ ಮಧ್ಯೆ ಹೆಚ್ಚುತ್ತಿರುವ ಛಾಯಾಯುದ್ಧಗಳು ಶೀತಲ ಸಮರವನ್ನು ಮತ್ತೆ ಮರುಕಳಿಸುವಂತಿದೆ. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಈ ನವಶೀತಲ ಸಮರ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಮತ್ತು ತದನಂತರದ ಅಮೆರಿಕಾ ಮತ್ತು ರಷ್ಯಾಗಳ ಕ್ರಿಯೆ- ಪ್ರತಿಕ್ರಿಯೆಗಳನ್ನು ಕುತೂಹಲದಿಂದ ಎದುರು ನೋಡುವಂತೆ ಮಾಡಿದೆ.

(This article was published in Vishwavani newspaper on 25 October 2016)

      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ವಿರೋಧದ ನಡುವೆಯೂ ಅಣ್ವಸ್ತ್ರ ಶಕ್ತಿಯಾಗುವುದೇ ಜಪಾನ್?

ಒಂದೆಡೆ ಜಪಾನಿನ ಸಾರ್ವಜನಿಕ ಅಭಿಪ್ರಾಯ ಇನ್ನೊಂದೆಡೆ ಅಮೆರಿಕಾದ ವಿರೋಧದಿಂದಾಗಿ ಜಪಾನ್ ಅಣ್ವಸ್ತ್ರ  ತಂತ್ರಜ್ಞಾನದ ಬಗೆಗಿನ ಮುಕ್ತ ಚರ್ಚೆ ನಿಶಿದ್ಧ ಎಂಬಂತಾಗಿದೆ. ಇವೆಲ್ಲವುಗಳ ಮಧ್ಯೆ ಜಪಾನಿನ ಸರಣಿ ರಾಜತಾಂತ್ರಿಕ ಹೆಜ್ಜೆಗಳನ್ನು ಗಮನಿಸಿದಾಗ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಆಕಾಂಕ್ಷೆಗೆ ಸ್ಪಷ್ಟ ನಕಾಶೆಯೊಂದು ಸಿದ್ಧವಾದಂತಿದೆ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಅತಿಯಾಗುತ್ತಿರುವ ಚೀನಾ ಮತ್ತು ಉತ್ತರ ಕೊರಿಯಾದ ಉದ್ಧಟತನದಿಂದಲೋ ಅಥವಾ ತನ್ನ ವಿವಾದಾತ್ಮಕ ಹೇಳಿಕೆಗಳಿಗೊಂದು ಗರಿ ಸಿಕ್ಕಿಸಿಕೊಳ್ಳುವ ತವಕದಿಂದಲೋ ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಅಣ್ವಸ್ತ್ರ ರಾಷ್ಟ್ರಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆ ಮೂಲಕ ಜಪಾನ್ ನಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಬಗ್ಗೆ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ವಿಧ್ವಂಸಕ ಅಣ್ವಸ್ತ್ರ ಮೊತ್ತ ಮೊದಲಬಾರಿಗೆ ತನ್ನ ಶಸ್ತ್ರಾಗಾರಕ್ಕೆ ಸೇರಿಸಿಕೊಂಡಿದ್ದು ಅಮೆರಿಕಾ. ಪ್ರಪ್ರಥಮ ಅಣ್ವಸ್ತ್ರಕ್ಕೆ ಜನ್ಮ ನೀಡಿದ್ದು ಅಮೆರಿಕಾದ ರಹಸ್ಯ 'ಮ್ಯಾನ್ ಹಟ್ಟನ್ ಪ್ರಾಜೆಕ್ಟ್'! ಅಮೆರಿಕಾ ಈ ದೈತ್ಯ ಅಸ್ತ್ರವನ್ನು ಮೊದಲ ಬಾರಿ ಉಪಯೋಗಿಸಿದ್ದು ದ್ವಿತೀಯ ಮಹಾಯುದ್ಧದ ಅಂತ್ಯದಲ್ಲಿ. 1945ರ ಆಗಸ್ಟ್ 6ರಂದು ಲಿಟಲ್ ಬಾಯ್ ಹಿರೊಶಿಮಾವನ್ನು, ಆಗಸ್ಟ್ 9 ಕ್ಕೆ ಫ್ಯಾಟ್ ಮ್ಯಾನ್ ನಾಗಸಾಕಿಯನ್ನು ಧ್ವಂಸ ಮಾಡುವುದರೊಂದಿಗೆ ಅಣ್ವಸ್ತ್ರಗಳ ಸಾಮರ್ಥ್ಯದ ಪರೀಕ್ಷೆಯೂ ನಡೆದು ಹೋಗಿತ್ತು! ಈ ದುರಂತಕ್ಕೆ ಮೊದಲ ಹಾಗೂ ಈವರೆಗಿನ ಏಕೈಕ ಆಹುತಿ ಜಪಾನ್! 1945ರವರೆಗೆ ವಿಶ್ವರಾಜಕೀಯದಲ್ಲಿ ಪಾದರಸದಂತಿದ್ದ ಜಪಾನ್, ಯುರೋಪಿನ ರಾಷ್ಟ್ರಗಳಿಗಿಂತ ನಾನೇನೂ ಕಡಿಮೆಯಿಲ್ಲ ಎಂಬಂತೆ ಸಾಮ್ರಾಜ್ಯಶಾಹಿಯೂ ಆಗಿದ್ದ ಜಪಾನ್ ಗೆ ಮಂಕು ಬಡಿದಂತಾಗಿತ್ತು. ಹೊಡೆತ ತಿಂದಿದ್ದು ಜಪಾನ್ ಆಗಿದ್ದರೂ, ನಾಗಸಾಕಿ ಮತ್ತು ಹಿರೊಶಿಮಾ ದುರ್ಘಟನೆಗೆ ವಿಶ್ವವೇ ಬೆಚ್ಚಿಬಿದ್ದಿತ್ತು. ನಂತರದ ದಿನಗಳಲ್ಲಿ ಫೀನಿಕ್ಸ್ ನಂತೆ ಮರುಹುಟ್ಟು ಜಪಾನ್, ಹಳೆಯ ನೋವುಗಳನ್ನೆಲ್ಲಾ ಮರೆಸುವಂತೆ ಎದ್ದು ನಿಂತಿದ್ದು ಈಗ ಇತಿಹಾಸ. ಅಣ್ವಸ್ತ್ರ ದುರಂತದ ಬಳಿಕ ಜಪಾನ್ ಆರ್ಥಿಕವಾಗಿ, ತಾಂತ್ರಿಕವಾಗಿ ಬಹಳಷ್ಟು ಯಶ ಕಂಡಿದ್ದರೂ, ಮಿಲಿಟರಿ ವಿಚಾರದಲ್ಲಿ ಬಹಳ ಎಚ್ಚರಿಕೆಯ ನೀತಿಯನ್ನು ಅನುಸರಿಸಿತ್ತು. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಶಿಂಜೋ ಅಬೆ ಪರಿಚಯಿಸಿದ ಕೆಲ ಸುಧಾರಣೆಗಳನ್ನು ಹೊರತು ಪಡಿಸಿದರೆ ಜಪಾನ್ ದಶಕಗಳಿಂದ ತನ್ನ ವಿದೇಶಾಂಗ ನೀತಿಯಲ್ಲಿ ತಾನೇ ಹೇರಿಕೊಂಡ ಇತಿ ಮಿತಿಗಳನ್ನು ಮೀರುವ ಪ್ರಯತ್ನ ಮಾಡಿರಲಿಲ್ಲ.

ಅಣ್ವಸ್ತ್ರ ದಾಳಿಯ ಭಯಾನಕ ಅನುಭವದ ಬಳಿಕ ಜಪಾನ್ ಇಂಥ ಒಂದು ದುರಂತ ಮರುಕಳಿಸದಂತೆ ಪಣ ತೊಟ್ಟಿದೆ. ಜಪಾನ್ ನಲ್ಲಿ ಪ್ರತಿ ವರ್ಷ ಆಗಸ್ಟ್ ೬ರಂದು ಅಣ್ವಸ್ತ್ರ ದಾಳಿಗೆ ಬಲಿಯಾದವರ ಸ್ಮರಣೆ ಮಾಡುತ್ತಾರೆ. ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರವರೆಗೆ "ಇಂಥ ದುರ್ಘಟನೆ ಮರುಕಳಿಸದಿರಲಿ"ಎಂಬ ಕೂಗು ಕೇಳಿಸುತ್ತದೆ. ಇದೇ ದಿನ ಜಪಾನಿನ ನಾಯಕರು ವಿಶ್ವದಾದ್ಯಂತ ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಳಿಸುವ ತಮ್ಮ ಪ್ರತಿಜ್ಞೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ. ಕಳೆದ ಕೆಲ ವರ್ಷಗಳಿಂದ ಜಪಾನ್ ವಿವಿಧ ದೇಶಗಳ, ಅದರಲ್ಲೂ ಪ್ರಮುಖವಾಗಿ ಅಣ್ವಸ್ತ್ರ ರಾಷ್ಟ್ರಗಳ ನಾಯಕರನ್ನು ನಾಗಸಾಕಿ ಮತ್ತು ಹಿರೊಶಿಮಾಗಳ ಅಣ್ವಸ್ತ್ರ ದಾಳಿಯ ಅವಶೇಷಗಳನ್ನು ವೀಕ್ಷಿಸಲು ಆಮ್ರಂತಿಸುತ್ತಿದ್ದಾರೆ. ಕಳೆದ ಜೂನ್ ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹಿರೊಶಿಮಾಗೆ ಭೇಟಿ ನೀಡಿದ್ದು ಜಪಾನಿನ ರಾಜತಾಂತ್ರಿಕ ಯಶಸ್ಸು. ಅಣ್ವಸ್ತ್ರದ ಭೀಕರತೆಯ ಬಗ್ಗೆ ಇಷ್ಟೊಂದು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು, ಆ ನೋವನ್ನು ಸ್ವತಃ ಅನುಭವಿಸಿದ ಏಕೈಕ ರಾಷ್ಟ್ರ ಜಪಾನ್ ಗೆ ಮಾತ್ರ ಸಾಧ್ಯವೇನೋ?

ಸುಮಾರು ಏಳು ದಶಕಗಳಿಂದ ಜಪಾನಿನ ನಾಗರಿಕ ಸಮುದಾಯ ಅಣ್ವಸ್ತ್ರಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಬಗ್ಗೆ ಎದ್ದಿರುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಮಾರ್ಚ್ 2011ರಲ್ಲಿ ನಡೆದ ಫುಕುಶಿಮ ಅಣುಕೇಂದ್ರ ದುರಂತ ಜಪಾನೀಯರ ಅಣ್ವಸ್ತ್ರ ಅಲರ್ಜಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅಣ್ವಸ್ತ್ರದ ಕುರಿತಾದ ಜಪಾನೀಯರ ಈ ಸಾರ್ವಜನಿಕ ಅಭಿಪ್ರಾಯ ಚುನಾವಣೆಗಳಲ್ಲೂ ಪ್ರತಿಫಲಿತವಾಗುತ್ತಿರುವುದು ಆಶ್ಚರ್ಯವೇನಲ್ಲ. ದ್ವಿತೀಯ ಯುದ್ಧದ ಅಂತ್ಯದಿಂದ ಇವತ್ತಿನವರೆಗೆ ಜಪಾನ್ ಅಮೆರಿಕಾದ ಅಣ್ವಸ್ತ್ರ ರಕ್ಷಣೆಯಲ್ಲಿದೆ ಮಾತ್ರವಲ್ಲ ತನ್ನದೇ ಅದ ಅಣ್ವಸ್ತ್ರ ಶಕ್ತಿ ಬೆಳೆಸಿಕೊಳ್ಳಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡಿಲ್ಲ. ಜಪಾನಿನ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ ಅಮೆರಿಕಾದ ಅಣ್ವಸ್ತ್ರ ರಕ್ಷಣೆಯ ಮೇಲೆ ಜಪಾನ್ ಭದ್ರತೆ ನಿಂತಿರುವುದು ವಿಪರ್ಯಾಸವೇ ಸರಿ! 

ಅಣ್ವಸ್ತ್ರದ ಕುರಿತಾಗಿ ಜಪಾನೀಯರ ತಿರಸ್ಕಾರದ ಹೊರತಾಗಿಯೂ, ಕೆಲ ಜಪಾನೀ ರಾಜಕೀಯ ನಾಯಕರು ಗುಟ್ಟಾಗಿ ಅಣ್ವಸ್ತ್ರ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿಸಿದ್ದರು. 1964ರಲ್ಲಿ ಚೀನಾ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಅಣ್ವಸ್ತ್ರ ಶಕ್ತಿಯೆನಿಸಿಕೊಂಡಾಗ ಜಪಾನ್ ನಾಯಕರಿಗೆ ಅಣ್ವಸ್ತ್ರ ಹೊಂದುವ ಈ ಅಪೇಕ್ಷೆ ಇನ್ನೂ ಹೆಚ್ಚಾಗಿತ್ತು. 1969ರಲ್ಲಂತೂ ಅಣ್ವಸ್ತ್ರ ನಿರೋಧಕ ಸಾಮರ್ಥ್ಯ ಗಳಿಸಿಕೊಳ್ಳುವ ಕುರಿತಾಗಿ ಜಪಾನ್ ರಹಸ್ಯವಾಗಿ ಪಶ್ಚಿಮ ಜರ್ಮನಿಯ ಜೊತೆ ಮಾತುಕತೆ ನಡೆಸಿತ್ತು! ಆದರೆ ಈ ಮಾತುಕತೆ ಹೆಚ್ಚು ಕಾಲ ಬಾಳದೆ ವಿಫಲವಾಗಿತ್ತು. ಇಂದಿಗೆ ಜಪಾನ್ ಅಣ್ವಸ್ತ್ರ ಶಕ್ತಿಯಾಗಲು ಎಷ್ಟೇ ಹರಸಾಹಸಪಟ್ಟರೂ, ಅಮೆರಿಕಾಗೆ ಜಪಾನ್ ಅಣ್ವಸ್ತ್ರ ಶಕ್ತಿಯಾಗುವುದು ಬೇಕಿಲ್ಲ. ಕಾನ್ ಇಟೊ ಎಂಬ ಸಂಶೋಧಕನ ಪ್ರಕಾರ 1972ರಲ್ಲಿ ಅಮೆರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್, ಜಪಾನ್ ಎಂದಿಗೂ ಅಣ್ವಸ್ತ್ರ ನಿರೋಧಕ ಶಕ್ತಿಯಾಗಲು ಅವಕಾಶ ನೀಡುವುದಿಲ್ಲ ಎಂಬ ವಾಗ್ದಾನದೊಂದಿಗೆ ಚೀನಾದ ಬೆಂಬಲ ಗಳಿಸಿಕೊಂಡಿದ್ದರು!

ಒಂದೆಡೆ ಜಪಾನಿನ ಸಾರ್ವಜನಿಕ ಅಭಿಪ್ರಾಯ ಇನ್ನೊಂದೆಡೆ ಅಮೆರಿಕಾದ ವಿರೋಧದಿಂದಾಗಿ ಜಪಾನ್ ಅಣ್ವಸ್ತ್ರ  ತಂತ್ರಜ್ಞಾನದ ಬಗೆಗಿನ ಮುಕ್ತ ಚರ್ಚೆ ನಿಶಿದ್ಧ ಎಂಬಂತಾಗಿದೆ. ಇವೆಲ್ಲವುಗಳ ಮಧ್ಯೆ ಜಪಾನಿನ ಸರಣಿ ರಾಜತಾಂತ್ರಿಕ ಹೆಜ್ಜೆಗಳನ್ನು ಗಮನಿಸಿದಾಗ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಆಕಾಂಕ್ಷೆಗೆ ಸ್ಪಷ್ಟ ನಕಾಶೆಯೊಂದು ಸಿದ್ಧವಾದಂತಿದೆ. ಜಪಾನ್ ಅಣ್ವಸ್ತ್ರ ಶಕ್ತಿಯ ಮುಖ್ಯ ಪ್ರತಿಪಾದಕಿ ಟೊಮೊಮಿ ಇನಾಡರವರನ್ನು ಇದೇ ಆಗಸ್ಟ್ ನಲ್ಲಿ ರಕ್ಷಣಾ ಸಚಿವೆಯನ್ನಾಗಿ ನೇಮಿಸಲಾಗಿದೆ. ಜಪಾನ್ ಪ್ರಧಾನಿಯಾಗುವ ಮುನ್ನವೇ ಶಿಂಜೋ ಅಬೆ ಕೂಡ ಕನಿಷ್ಠ ಅವಶ್ಯಕತೆಯ ಅಣ್ವಸ್ತ್ರಗಳನ್ನು ಹೊಂದಲು ಜಪಾನ್ ಸಂವಿಧಾನದಲ್ಲಿ ಅವಕಾಶಗಳಿವೆ ಎಂದಿದ್ದಾರೆ! ಇದೇ ಹೇಳಿಕೆಯನ್ನು ಅಬೆ ಸರಕಾರ ಅಧಿಕೃತವಾಗಿ ಮತ್ತು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ದೃಢೀಕರಿಸಿಕೊಂಡಿದೆ! ಇವೆಲ್ಲವುಗಳಿಗಿಂತ ಮಿಗಿಲಾಗಿ ಜಪಾನ್ 48 ಟನ್ ಗಳಷ್ಟು ಪ್ಲುಟೋನಿಯಂ ಸಂಗ್ರಹಿಸಿಟ್ಟುಕೊಂಡಿದೆ. ತಾಂತ್ರಿಕವಾಗಿ ಈಗಾಗಲೇ ಮುಂದುವರಿದಿರುವ ಜಪಾನ್ ಈ ಬೃಹತ್ ಸಂಗ್ರಹವನ್ನು ಉಪಯೋಗಿಸಿಕೊಂಡು ಸಾವಿರಾರು ಅಣ್ವಸ್ತ್ರಗಳನ್ನು ಕೆಲವೇ ತಿಂಗಳುಗಳಲ್ಲಿ ಉತ್ಪಾದಿಬಲ್ಲುದು! ಜಪಾನ್ ಕೂಡಿಟ್ಟುಕೊಂಡಿರುವ ಪ್ಲುಟೋನಿಯಂ ರಾಶಿ ಚೀನಾದ ತಲೆ ಕೆಡಿಸಿದ್ದಷ್ಟೇ ಅಲ್ಲದೇ ಅಮೆರಿಕಾದ ಕಣ್ಣನ್ನೂ ಕೆಂಪಾಗಿಸಿದೆ.

ವಾಸ್ತವಿಕ ಸಿದ್ಧಾಂತದ ಪ್ರಕಾರ ನೋಡುವುದಾದರೆ ಅಣ್ವಸ್ತ್ರ ತಯಾರಿಸುವುದಕ್ಕೂ ಮೊದಲು ಜಪಾನ್ ಅಣ್ವಸ್ತ್ರ ಪ್ರಸರಣ ತಡೆ  ಒಪ್ಪಂದದಿಂದ(ಎನ್ ಪಿ ಟಿ)  ಹೊರಬರಬೇಕಾಗುತ್ತದೆ. ತದನಂತರ ವಿಶ್ವಸಮುದಾಯದಿಂದ ದೂರಾಗಿ ಉತ್ತರ ಕೊರಿಯಾ ಸಾಗಿದ ದಾರಿಯನ್ನೇ ಹಿಡಿಯಬೇಕಾಗುತ್ತದೆ. ಇವಿಷ್ಟೇ ಅಲ್ಲದೆ ಜಪಾನ್ ಅಣ್ವಸ್ತ್ರ ಶಕ್ತಿಯಾಗುವುದರೊಂದಿಗೆ ಪೂರ್ವ ಏಷ್ಯಾದಲ್ಲಿ ಅಣ್ವಸ್ತ್ರ ಪೈಪೋಟಿಯ ಸುನಾಮಿಯೆಬ್ಬಿಸಲಿದೆ. ಜಪಾನ್ ಎದುರಿಸುತ್ತಿರುವ ರೀತಿಯ ಸಾಮಾನ್ಯ ಕಳವಳಗಳನ್ನೇ ಎದುರಿಸುತ್ತಿರುವ ದಕ್ಷಿಣ ಕೊರಿಯಾ ತನ್ನ ರಕ್ಷಣೆಗಾಗಿ ಅಣು ಶಕ್ತಿಯ ಹಿಂದೆ ಬೀಳುವುದರಲ್ಲಿ ಸಂಶಯವಿಲ್ಲ. ಇನ್ನೊಂದೆಡೆ ಚೀನಾ ಮತ್ತು ಉತ್ತರ ಕೊರಿಯಾಗಳು ಜಪಾನ್ ಗೆ ಪ್ರತಿರೋಧವಾಗಿ ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಪಾಯವಂತೂ ಇದ್ದೇ ಇದೆ. ಹೀಗಾಗಿ ಪೂರ್ವ ಏಷ್ಯಾ ಅಣ್ವಸ್ತ್ರ ಶಕ್ತಿಗಳ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಿ ವಿಶ್ವದ ಉಳಿವಿಗೆ ಸಂಚಕಾರವನ್ನೂ ತರಬಹುದು.

ವಿಶ್ವಸಂಸ್ಥೆ ಮತ್ತು ಅಮೆರಿಕಾಗಳು ಜಪಾನೀಯರ ಅಣ್ವಸ್ತ್ರ ಹೊಂದುವ ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸಲು ಸರ್ವಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅಮೆರಿಕಾವಂತೂ ಜಪಾನ್ ಗೆ ಈಗಾಗಲೇ ಅಣ್ವಸ್ತ್ರ ರಕ್ಷಣೆ ನೀಡುತ್ತಿದೆಯಾದ್ದರಿಂದ ಸ್ವಂತ ಅಣು ಶಕ್ತಿಯ ಜರೂರತ್ತು ಜಪಾನ್ ಗೇನಿದೆ? ಎನ್ನುವುದು ಅಮೆರಿಕಾದ ವಾದ. ಜಪಾನ್ ಅಣ್ವಸ್ತ್ರ ಹೊಂದಲು ಮೂಲ ಕಾರಣ ಉತ್ತರ ಕೊರಿಯಾ ಬೆದರಿಕೆ. ಚೀನಾ ಮತ್ತು ಉತ್ತರ ಕೊರಿಯಾಗಳ ಆಕ್ರಮಣಕಾರಿ ನೀತಿಗಳು ಜಪಾನೀಯರನ್ನು ತಮ್ಮದೇ ಆದ ಅಣ್ವಸ್ತ್ರ ಶಕ್ತಿ ಹೊಂದಲು ಪ್ರೇರೆಪಿಸುತ್ತಿವೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಪ್ಲುಟೋನಿಯಂ ಸಂಗ್ರಹಿಸಿಟ್ಟುಕೊಂಡಿರುವ ಜಪಾನ್ ಯಾವುದೇ ಕ್ಷಣದಲ್ಲೂ ಅಣ್ವಸ್ತ್ರ ತಯಾರಿಗೆ ತೊಡಗಬಹುದು. ಒಂದು ರೀತಿಯಲ್ಲಿ ಅಣ್ವಸ್ತ್ರ ಸಂಬಂಧಿತವಾಗಿ ಉತ್ತರ ಕೊರಿಯಾಕ್ಕೆ ಚೀನಾ ನೀಡುತ್ತಿರುವ ಬೆಂಬಲವನ್ನು ಹಿಂಪಡೆದುಕೊಳ್ಳದೇ ಇದ್ದಲ್ಲಿ, ಜಪಾನ್ ಅಣ್ವಸ್ತ್ರ ಯೋಜನೆಗೆ ಇತರೆ ವಿಶ್ವಶಕ್ತಿಗಳು ಬೆಂಬಲ ನೀಡುವ ಮತ್ತು ಈ ಮೂಲಕ ಚೀನಾವನ್ನು ಹಿಮ್ಮೆಟ್ಟಿಸುವ ಸಮರತಂತ್ರವನ್ನು ಅನುಸರಿಸಲೂ ಇದು ಸಕಾಲ.

(This article was published in Vishwavani newspaper on 19 October 2016)

      KEERTHIRAJ (prof.keerthiraj@gmail.com)
      Assistant Professor
International Relations and Political Science
Alliance University, Bangalore. 

ಭಾನುವಾರ, ಮೇ 8, 2016

ವಿಶ್ವದ ನೆತ್ತಿ ಮೇಲೆ ಅಣ್ವಸ್ತ್ರದ ತೂಗುಗತ್ತಿ

ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016ರ ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ!1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!
- ಕೀರ್ತಿರಾಜ್

ಇತಿಹಾಸ ಯುದ್ಧಗಳ ಕಥೆಯಾದಂತೆ ರಾಜಕೀಯವೂ ಶಕ್ತಿ ಪ್ರದರ್ಶನದ ಸಂತೆಯೇ ಸರಿ! ಅದರಲ್ಲೂ ಜಾಗತಿಕ ರಾಜಕೀಯದ ಪ್ರತಿ ಕ್ಷಣವೂ ಸಂಘರ್ಷ ಸಂಧಿಗ್ಧತೆಗಳ ಸರಮಾಲೆ. ಇತ್ತಿಚೆಗೆ ಸಣ್ಣಪುಟ್ಟ ಸಂಘರ್ಷಗಳಲ್ಲೂ ಅಣ್ವಸ್ತ್ರದ ಪ್ರಸ್ತಾಪವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ವಿಶ್ವಕ್ಕೆ ಅಣುಭೀತಿ ಹೊಸ ವಿಷಯವೇನಲ್ಲ. 1945ರಲ್ಲಿ 'ಮ್ಯಾನ್ಹಟ್ಟನ್ ಪ್ರಾಜೆಕ್ಟ್'ನ ಹೆಸರಿನಲ್ಲಿ ಅಮೆರಿಕಾ ಅಣು ಶಕ್ತಿಯಾಗಿ ಭಸ್ಮಾಸುರನಂತೆ ಜಪಾನ್ ತಲೆಯ ಮೇಲೆ ಕೈಯಿಟ್ಟಾಗಲೇ ಅಣ್ವಸ್ತ್ರ ಯಮನ ಆತ್ಮೀಯ ಕಿಂಕರನೆಂದು ಸಾಬೀತು ಪಡಿಸಿತ್ತು. 1945ರಿಂದ 2016ರವರೆಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕಾಗಿ ಸಿ.ಟಿ.ಬಿ.ಟಿ (CTBT) ಎನ್.ಪಿ.ಟಿ (NPT)ಗಳಂಥ ಅನೇಕ ಒಪ್ಪಂದ ಕರಾರುಗಳು ಬಂದು ಹೋಗಿವೆ. ಬಹು ನಿರೀಕ್ಷೆ ಮೂಡಿಸಿದ 1968ರ ಎನ್.ಪಿ.ಟಿ ಕೂಡ ಬಲಿಷ್ಟ ರಾಷ್ಟ್ರಗಳ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಟೆಗಳಿಗೆ ಬಲಿಯಾಗಿ ಹೋಯಿತು. ಒಟ್ಟಿನಲ್ಲಿ ನಮ್ಮ ತಲೆಯ ಮೇಲೆ ಕೈಯಿಡಲು ನಾವೇ ಸೃಷ್ಟಿಸಿಕೊಂಡ ಭಸ್ಮಾಸುರ ಈ ಅಣ್ವಸ್ತ್ರ.

ನಾಲ್ಕನೆಯ ಮತ್ತು ಕೊನೆಯ ಅಣ್ವಸ್ತ್ರ ಭದ್ರತಾ ಶೃಂಗಸಭೆ ಇದೇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಾಷಿಂಗ್ಟನ್ ನಲ್ಲಿ ನಡೆಯಿತು. ಕೊನೆಯ ಶೃಂಗ ಸಭೆಯಲ್ಲೂ ವಿಶ್ವ ನಾಯಕರ ಕಳವಳಕ್ಕೆ ಕಾರಣವಾದ ವಿಷಯ ಅಣ್ವಸ್ತ್ರ ಭಯೋತ್ಪಾದನೆ. ಐವತ್ತಕ್ಕೂ ಹೆಚ್ಚು ಅಣ್ವಸ್ತ್ರ ರಾಷ್ಟ್ರಗಳು, ಸಾವಿರಾರು ಅಣ್ವಸ್ತ್ರಗಳು ಭೂಮಂಡಲದ ನಾಶಕ್ಕೆ ಕಾಯುತ್ತಿವೆ. ಯಾವುದೇ ಒಂದು ಸಣ್ಣ ಪ್ರಮಾದ ಸಾಕು ಆ ದೇಶ ಈ ದೇಶ ಎಂಬ ಬೇಧ ಭಾವಗಳಿಲ್ಲದೆ ಇಡೀ ಭೂಮಿಯನ್ನು ಸುಟ್ಟು ಹಾಕಲು! ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016ರ ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ! 1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!

ಎಲ್ಲಾ ರಾಷ್ಟ್ರಗಳಿಗೂ ತಮ್ಮದೇ ರೀತಿಯ ಅಣು ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆಗಳಿವೆ. ಯಾವುದೇ ದೇಶದ ಅಣ್ವಸ್ತ್ರ ರಕ್ಷಣಾ ವ್ಯವಸ್ಥೆಯಲ್ಲಿ ಅಲ್ಪ ವ್ಯತ್ಯಾಸವಾಗಿ, ಅಣ್ವಸ್ತ್ರ ಭಯೋತ್ಪದಕರ ಕೈ ಸೇರುವಂತಾದರೆ ಗಂಡಾಂತರ ಖಂಡಿತ. ಭಯೋತ್ಪಾದಕ ಸಂಘಟನೆಗಳೂ ಅಣ್ವಸ್ತ್ರ ಪ್ರಯೋಗದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದೂ ವಿಶ್ವ ಶಕ್ತಿಗಳ ಪಾಲಿಗೆ ಎಚ್ಚರಿಕೆಯ ಘಂಟೆ. ನಿಧಾನವಾಗಿ ಇರಾಕ್ ಮತ್ತು ಸಿರಿಯಾಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಾಗ್ದಾದಿಯ ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಭಾವವನ್ನು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿದೆ. ಈ ಹತಾಶ ಪ್ರಯತ್ನ ಅಣ್ವಸ್ತ್ರ ಖರೀದಿಯವರೆಗೆ ಮುಂದುವರೆದರೆ ಆಶ್ಚರ್ಯವೇನಿಲ್ಲ. ಇತ್ತಿಚೆಗೆ ಬೆಲ್ಜಿಯಂನ ಅಣು ಸ್ಥಾವರದ ಕೆಲಸಗಾರನ್ನು ಗುಂಡಿಕ್ಕಿ ಕೊಂದು, ಅವನ ಭದ್ರತಾ ಗುರುತು ಚೀಟಿಯನ್ನು ಕಳ್ಳತನ ಮಾಡಲಾಗಿದೆ. ಇನ್ನೊಂದೆಡೆ ಇಬ್ಬರು ಬೆಲ್ಜಿಯನ್ ಅಣು ಸ್ಥಾವರದ ಕೆಲಸಗಾರರು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡಿರುವ ವರದಿಗಳು ಅಣ್ವಸ್ತ್ರ ಭಯೋತ್ಪಾದನೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇತ್ತಿಚೆಗೆ ಇಸ್ಲಾಮಿಕ್ ಸ್ಟೇಟ್ ಪ್ರಕಟಿಸಿದ ಕರಪತ್ರವೊಂದರಲ್ಲಿ ಪಾಕಿಸ್ತಾನದ ಲಂಚಕೋರ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಅಣ್ವಸ್ತ್ರ ಪಡೆದುಕೊಳ್ಳುವ ಯೋಜನೆಯ ಬಗ್ಗೆ ಆಘಾತಕಾರಿ ವಿವರಗಳಿದ್ದವು! ಹಾಗೆಂದ ಮಾತ್ರಕ್ಕೆ ಪಾಕಿಸ್ತಾನ ನೇರವಾಗಿ ಅಣ್ವಸ್ತ್ರಗಳನ್ನು ಭಯೋತ್ಪಾದಕರ ಕೈಗೊಪ್ಪಿಸುತ್ತವೆ ಎಂದಲ್ಲ. ಪಾಕಿಸ್ತಾನದಿಂದ ಅಣ್ವಸ್ತ್ರಗಳು ಭಯೋತ್ಪಾದಕರ ಕೈ ಸೇರಬಹುದೇ ಎಂಬ ಪ್ರಶ್ನೆಗೆ ಹೌದು ಎಂದುತ್ತರಿಸುವ ರಾಜಕೀಯ ವಿಶ್ಲೇಷಕರಿದ್ದಂತೆ ಇಲ್ಲ ಎನ್ನುವವರೂ ಇದ್ದಾರೆ. 

೨೦೦೧ನೇ ಜನವರಿಯಲ್ಲಿ ಪಾಕಿಸ್ತಾನದ ಖುಶಾಬ್ ಪ್ಲುಟೋನಿಯಂ ಅಣುಕೇಂದ್ರದ ಮಾಜಿ ಮುಖ್ಯಸ್ಥ ಬಶೀರುದ್ದೀನ್ ಮಹಮೂದ್ ಯು ಟಿ ಎನ್ ಸಂಸ್ಥೆಯ ಅಧ್ಯಕ್ಷತೆಯಲ್ಲಿ ಒಂದಷ್ಟು ಅಣ್ವಸ್ತ್ರ ವಿಜ್ಞಾನಿಗಳು ಯು ಟಿ ಎನ್ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. ಅದೇ ೨೦೦೧ರ ನವಂಬರ್ ನಲ್ಲಿ ಅಮೆರಿಕಾದ ನಿರ್ದೇಶನದಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಬಶೀರುದ್ದೀನ್  ಸೇರಿದಂತೆ ಅನೇಕ ಯುಟಿಎನ್ ಸದಸ್ಯರನ್ನು ಬಂಧಿಸಿತು. ವಿಚಾರಣೆಯಲ್ಲಿ ಬಶೀರುದ್ದೀನ್ ಒಸಾಮ್ ಬಿನ್ ಲಾಡೆನ್ ಭೇಟಿಯಾಗಿ ಅಣು ಬಾಂಬು ತಯಾರಿಸುವ ವಿಚಾರದಲ್ಲಿ ಮಾತುಕತೆ ನಡೆಸಿದ್ದನ್ನು ಒಪ್ಪಿಕೊಂಡಿದ್ದ! ೨೦೦೪ರಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಂತ್ರಜ್ಞಾನದ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಅಣ್ವಸ್ತ್ರ ತಂತ್ರಜ್ಞಾನವನ್ನು ಲಿಬಿಯಾ, ಉತ್ತರ ಕೊರಿಯಾ ಮತ್ತು ಇರಾನ್ ಗಳಿಗೆ ಮಾರಿಕೊಂಡಿದ್ದು, ಪಾಕಿಸ್ತಾನದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದೆ. ಗುಪ್ತಚರ ವರದಿಗಳ ಪ್ರಕಾರ ಅಲ್-ಖೈದಾ ಕೂಡ  ಅಣ್ವಸ್ತ್ರ ಹೊಂದಲು ಉತ್ಸುಕವಾಗಿದ್ದು  ಅಬ್ದುಲ್ ಖಾದಿರ್ ಖಾನ್ ಅಲ್-ಖೈದಾ ಬೇಡಿಕೆಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ವಿದ್ಯಮಾನಗಳು ಪಾಕಿಸ್ತಾನದ ಕೈಯಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಅನುಮಾನ ಮೂಡುತ್ತದೆ.

ಭಾರತ ಪಾಕಿಸ್ತಾನ ಸೇನಾ ಬಲಾಬಲಗಳನ್ನು ಗಮನಿಸಿದರೆ, ಪಾಕಿಸ್ತಾನ ಯಾವುದೇ ರೀತಿಯಲ್ಲೂ ಭಾರತಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಿಲ್ಲ. ಆದರೆ ಸೋಲುವ ಪರಿಸ್ಥಿತಿ ಬಂದಲ್ಲಿ ಅಣ್ವಸ್ತ್ರ ಪ್ರಯೋಗಕ್ಕೂ ಪಾಕಿಸ್ತಾನ ಸಿದ್ಧವಾಗಿದೆ ಎಂಬುದು ಪಾಕ್ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗಿವೆ. ಭಾರತ ನೈತಿಕ ದೃಷ್ಟಿಯಿಂದ No First Use ಅಣ್ವಸ್ತ್ರ ನೀತಿಯನ್ನು ಪಾಲಿಸುತ್ತಿದೆ. ಆದರೆ ಪಾಕಿಸ್ತಾನಕ್ಕೆ ಇಂಥ ಯಾವುದೇ ಸ್ವಯಂ ಕಡಿವಾಣಗಳು ಇಲ್ಲ. ಒಂದು ವೇಳೆ ಇದ್ದರೂ ಅದರ ಪಾಲನೆ ಪ್ರಶ್ನಾರ್ಹವೇ ಆಗಿರುವುದರಿಂದ ಅಣ್ವಸ್ತ್ರ ಭೀತಿ ತಪ್ಪಿದ್ದಲ್ಲ. ಇಲ್ಲಿಯವರೆಗೂ ಅಣ್ವಸ್ತ್ರ ಭಯೋತ್ಪಾದಕರ ಕೈ ಸೇರದಿರುವುದು, ಯಾವ ದೇಶವೂ ಅಂಥ ಹೊಣೆಗೇಡಿತನ ತೋರಿಲ್ಲ ಎಂಬುದರ ಸಂಕೇತ. ಹೀಗಿದ್ದರೂ ಪ್ರಸಕ್ತ ಜಾಗತಿಕ ಚದುರಂಗದ ಹೊಸ ಆಯಾಮಗಳು ಅನಿರೀಕ್ಷಿತ ತಿರುವುಗಳಿಗೆ ಮುನ್ನುಡಿಯಾಗುವಂತಿದೆ. ಉಗ್ರ ನಿಗ್ರಹದ ಜೊತೆಗೆ ಅಣ್ವಸ್ತ್ರ ಭದ್ರತೆ ವಿಶ್ವ ಶಕ್ತಿಗಳ ಮೂಲ ಮಂತ್ರವಾಗಬೇಕಿದೆ.

 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 3 May 2016)