ಉಗ್ರ ನಿಗ್ರಹ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಗ್ರ ನಿಗ್ರಹ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 6, 2017

ತಾರ್ಕಿಕ ಅಂತ್ಯದ ನಿರೀಕ್ಷೆಯಲ್ಲಿ ಮೊಸುಲ್ ಮಹಾಸಮರ

ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 
-  ಕೀರ್ತಿರಾಜ್

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ, ಬರಾಕ್ ಒಬಾಮ ಆಡಳಿತ  ಮಧ್ಯಪ್ರಾಚ್ಯದಲ್ಲೊಂದು ರಾಜಕೀಯ ಪ್ರಯೋಗಕ್ಕೆ ಮುಂದಾಗಿತ್ತು. ಇರಾಕ್ ಸರಕಾರ ಸುನ್ನಿ ಹೋರಾಟಗಾರರು ಮತ್ತು  ಕರ್ದಿಶ್ ಗುಂಪುಗಳು ಸಂಘಟಿತವಾಗಿ ಮೊಸುಲ್ ನಲ್ಲಿ ನೆಲೆಯೂರಿದ್ದ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಂಘಟಿತ ಹೋರಾಟವೊಂದು ರೂಪಿಸಿದ್ದರು. ಈ ಮೈತ್ರಿ ಸೇನೆ ಉಗ್ರರ ವಿರುದ್ಧ ಮೊಸುಲ್ ನಲ್ಲಿ ಮೊಳಗಿದ ಮರಣ ಮೃದಂಗಕ್ಕೆ ಅಮೆರಿಕಾ ಅಧ್ಯಕ್ಷ ಒಬಾಮ ಕೂಡ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಅತ್ಯುತ್ಸಾಹದಿಂದ ಮೈತ್ರಿಪಡೆಗಳು ಮೊಸುಲ್ ನತ್ತ ನುಗ್ಗಿದರೂ, ಜಾಗತಿಕ ರಜಕೀಯದ ವಿಶ್ಲೇಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊಸುಲ್ ಯುದ್ಧದಲ್ಲಿ ಇರಾಕಿ ಮೈತ್ರಿ ಸೇನೆ ನಿರೀಕ್ಷೆ ಮೀರಿ ಉಗ್ರರನ್ನು ಬಗ್ಗುಬಡಿದು ಮುಂದೆ ಸಾಗುತ್ತಿದೆ. ಇರಾಕಿ ಸೇನೆಯ ಮೂಲಗಳು ತಿಳಿಸಿದ ಪ್ರಕಾರ, ಮೊಸುಲ್ ನ ಹಲವು ಹಳ್ಳಿಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸೋಲಿಸಿ ಇರಾಕಿ ಪಡೆಗಳು ನಿಯಂತ್ರಣ ಸಾಧಿಸಿವೆ. ಒಂದು ರೀತಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಆಶಾದಾಯಕವಾಗಿ ಮುಂದುವರಿಯುತ್ತಿದೆ ಮೊಸುಲ್ ಉಗ್ರ ನಿಗ್ರಹ!
Image may contain: 2 people, text
ಇರಾಕಿನ ಪ್ರಧಾನಿ ಹೈದರ್-ಅಲ್-ಅಬಾದಿ ಡಿಸೆಂಬರ್ ಮೊದಲ ವಾರದಲ್ಲಿ ನೀಡಿರುವ ಹೇಳಿಕೆಯ ಪ್ರಕಾರ ಇರಾಕ್ ಸೇನೆಯ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಅಬಾದಿ ಮಾತುಗಳಲ್ಲೇ ಹೇಳುವುದಾದರೆ, "ಇಸ್ಲಾಮಿಕ್ ಸ್ಟೇಟ್ ಹಂತ ಹಂತವಾಗಿ ಅವನತಿಯತ್ತ ಸಾಗುತ್ತಿದೆ ಮತ್ತು ಧೃಡವಾಗಿ ನಿಂತು ಹೋರಾಡುವ ಸಾಮರ್ಥ್ಯ ಉಗ್ರರಲ್ಲಿಲ್ಲ". ಇರಾಕ್ ಮತ್ತಿತರ ಗುಂಪುಗಳು ಉಗ್ರದಮನಕ್ಕೆ ಹೊರಟಾಗ, ಇಸ್ಲಾಮಿಕ್ ಸ್ಟೇಟ್ ಇರಾಕ್ ಸೇನೆಗೆ ಬಲವಾದ ಪ್ರತ್ಯುತ್ತರ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿಶ್ವಕ್ಕೆ ಇರಾಕ್ ಸೇನೆಯ ಕುರಿತಾಗಿ ಯಾರಿಗೂ ಹೇಳಿಕೊಳ್ಳುವಂಥ ವಿಶ್ವಾಸವಿರಲಿಲ್ಲ. ಆದರೆ ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 

ಯುದ್ಧದ ಆರಂಭದೊಂದಿಗೆ, ಇಸ್ಲಾಮಿಕ್ ಸ್ಟೇಟ್ ಒಂದರ ಮೇಲೊಂದರಂತೆ ಹಿನ್ನಡೆಗಳನ್ನೇ ಅನುಭವಿಸಿತ್ತು. ಎರಡು ಮಿಲಿಯನ್ ಜನಸಂಖ್ಯೆಯಿರುವ ಮೊಸುಲ್ ನಗರವನ್ನು, ಹತ್ತು ಸಾವಿರಕ್ಕೂ ಕಡಿಮೆಯಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಮೈತ್ರಿ ಸೇನೆಯ ಎದುರು ಈ ಸಂಖ್ಯೆ ನಿಜಕ್ಕೂ ಏನೇನೂ ಆಗಿರಲಿಲ್ಲ. ಮೈತ್ರಿಕೂಟ ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲದೇ ತಂತ್ರಜ್ಞಾನದ ವಿಚಾರದಲ್ಲೂ ಉಗ್ರರಿಗಿಂತ ಮುಂದಿತ್ತು. ಮೈತ್ರಿಕೂಟದ ಹೊಡೆತಗಳಿಗೆ ಪ್ರತ್ಯುತ್ತರ ನೀಡಲಾಗದೆ ಉಗ್ರರು ಕಂಗೆಟ್ಟುಹೋಗಿದ್ದರು. ಯುದ್ಧತಂತ್ರದ ದೃಷ್ಟಿಯಿಂದ ಇಸ್ಲಾಮಿಕ್ ಸ್ಟೇಟ್ ಇಟ್ಟ ಒಂದೇ ಒಂದು ಬುದ್ಧಿವಂತಿಕೆಯ ಹೆಜ್ಜೆಯೆಂದರೆ, ಹೆಚ್ಚಿನ ಕಡೆಗಳಲ್ಲಿ ಸೇನೆಯನ್ನು ಹಿಂದೆಗೆದುಕೊಂಡು, ಪೂರ್ವ ಮೊಸುಲ್ ನತ್ತ ಸಾಗಿ ಅಲ್ಲಿ ತಮ್ಮ ಹಿಡಿತ ಬಲಪಡಿಸಿಕೊಂಡಿದ್ದು. ಈ ರೀತಿ ತಾವು ದುರ್ಬಲವಾಗಿದ್ದ ಪ್ರದೇಶಗಳಲ್ಲಿ ಮೈತ್ರಿಸೇನೆಗೆ ಎದುರಾಗಿ ನಿಲ್ಲದೆ, ಪೂರ್ವ ಮೊಸುಲ್ ನಲ್ಲಿ ಸನ್ನದ್ಧರಾಗಿ ವೈರಿಗೆ ಹೊಡೆತ ನೀಡುವ ಯೋಜನೆಯೊಂದು ಇಸ್ಲಾಮಿಕ್ ಸ್ಟೇಟ್ ತಲೆಯಲ್ಲಿ ಮೂಡಿರಬಹುದು. ಈವರೆಗೆ ಇರಾಕ್ ಸೇನೆ ದಾಳಿ ನಡೆಸಿದ ಪ್ರದೇಶಗಳಲ್ಲಿ ಉಗ್ರ ಪ್ರತಿರೋಧ ಕಾಣದೇ ಇದ್ದರೂ, ಪೂರ್ವ ಮೊಸುಲ್ ನತ್ತ ಸಾಗುತ್ತಿದ್ದಂತೆ ಇರಾಕ್ ಸೇನೆಯ ಹಾದಿ ಕಠಿಣವಾಗುವುದು ನಿಶ್ಚಿತ. ಪೂರ್ವ ಮೊಸುಲ್ ನ ಆಯಕಟ್ಟಿನ ಪ್ರದೇಶಗಳೆಲ್ಲವನ್ನೂ ಸುರಂಗ ವ್ಯವಸ್ಥೆಯ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡಲಾಗಿದೆ. ಈ ಮೂಲಕ ದಾಳಿ ಮಾಡುವ ಸೇನೆಗೆ ಸಾಧ್ಯವಾದಷ್ಟು ಹೆಚ್ಚು ಮಟ್ಟದ ಹಾನಿಯುಂಟಾಗುವಂತೆ ಮಾಡಲಾಗಿದೆ. ಸದ್ಯಕ್ಕೆ ಮೊಸುಲ್ ನಗರದ ಪೂರ್ವ ಭಾಗದಲ್ಲಿ ಇಂಥದ್ದೊಂದು ಸಮರತಂತ್ರ ರೂಪಿಸಿದೆ ಇಸ್ಲಾಮಿಕ್ ಸ್ಟೇಟ್!

ಇರಾಕ್ ಸೇನೆ, ಸುನ್ನಿ ಗುಂಪು ಮತ್ತು ಕರ್ದಿಶ್ ಹೋರಾಟಗಾರರು ಮತ್ತು ಅಮೆರಿಕಾದ ಮಿಲಿಟರಿ ನೆರವುಗಳ ಬಲ ಪಡೆದುಕೊಂಡಿರುವ ಮೈತ್ರಿ ಸೇನೆ ಇಸ್ಲಾಮಿಕ್ ಸ್ಟೇಟ್ ಗಿಂಥ ಎಷ್ಟೋ ಪಾಲು ಬಲಿಷ್ಟ. ಈ ಮೈತ್ರಿ ಸೇನೆ ಆಧುನಿಕ ಯುದ್ಧೋಪಕರಣಗಳನ್ನು ಬಳಸುತ್ತಿರುವುದು ಮಾತ್ರವಲ್ಲ ಸೇನೆಗೆ ಅವಶ್ಯವಾದ ವೈದ್ಯಕೀಯ ಸೌಲಭ್ಯ, ಶಸ್ತ್ರಾಸ್ತ್ರಗಳು ಮತ್ತಿನ್ನಿತರ ಯುದ್ಧ ಸಮಯದ ಸಾಗಾಟಗಳನ್ನು ಮಾಡಲು ಸಮರ್ಥ ವ್ಯವಸ್ಥೆ ಮೈತ್ರಿ ಸೇನೆಯ ಬಳಿಯಲ್ಲಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಮೊಸುಲ್ ನ ಭೌಗೋಳಿಕ ವಿನ್ಯಾಸದ ಸ್ಪಷ್ಟ ಪರಿಚಯವಿದ್ದರೂ, ಮೈತ್ರಿ ಪಡೆಯಲ್ಲಿರುವಷ್ಟು ಸನ್ನದ್ಧ ಯುದ್ಧ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉಗ್ರರಲ್ಲಿಲ್ಲ. ಪ್ರಸಕ್ತ ಸ್ಥಿತಿಗತಿಗಳನ್ನು ಗಮನಿಸಿದಾಗ ಮೈತ್ರಿ ಪಡೆಗಳು ಉಗ್ರರಿಗಿಂತ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಸ್ಪಷ್ಟ. ಹೀಗಿದ್ದರೂ, ಮೈತ್ರಿಸೇನೆ ಮೈಮರೆತರೆ ಇಸ್ಲಾಮಿಕ್ ಸ್ಟೇಟ್ ಯಾವುದೇ ಕ್ಷಣದಲ್ಲೂ ತಿರುಗಿಬೀಳಬಹುದು. ಯುದ್ಧವನ್ನು ಸಾಧ್ಯವಾದಷ್ಟು ಶೀಘ್ರವಾಗಿ ಮುಗಿಸುವುದು ಮೈತ್ರಿಸೇನೆಗೆ ಎಲ್ಲಾ ರೀತಿಯಿಂದಲೂ ಅನುಕೂಲಕರ. ಯುದ್ಧ ಇನ್ನಷ್ಟು ತಿಂಗಳುಗಳ ಕಾಲ ಮುಂದುವರಿದಲ್ಲಿ ಉಗ್ರರಿಗೆ ಸಮರತಾಂತ್ರಿಕ ಅನುಕೂಲತೆಯೊಂದು ಸೃಷ್ಟಿಯಾಗಬಹುದು!

ಈಗಾಗಲೆ ಹಲವಾರು ನೆಲೆಗಳನ್ನು ಕಳೆದುಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಜಯಗಳಿಸುವುದು ಕಷ್ಟಸಾಧ್ಯವೇ ಆದರೂ, ಯುದ್ಧದ ಫಲಿತಾಂಶವನ್ನು ಸಾಧ್ಯವಾದಷ್ಟು ಮುಂದೂಡುವ ಮತ್ತು ಅಪಾರ ಪ್ರಮಾಣದ ಪ್ರಾಣಹಾನಿಯಾಗುವಂತೆ ಮಾಡುವ ಎಲ್ಲಾ ಅವಕಾಶಗಳೂ ಉಗ್ರರಿಗಿವೆ. ಇಸ್ಲಾಮಿಕ್ ಸ್ಟೇಟ್ ನ ಉಗ್ರರಿಗೆ ಬೇಕಾಗಿರುವುದೂ ಇದೇ! ಈ ಮೂಲಕ ಇರಾಕ್ ರಕ್ಷಣಾ ದಳದ ತಾಳ್ಮೆ ಪರೀಕ್ಷಿಸುವುದು ಮತ್ತು ಯುದ್ಧ 2017ರಲ್ಲೂ ಮುಂದುವರಿದಾಗ ಕರ್ದಿಶ್, ಸುನ್ನಿ ಮತ್ತು ಇರಾಕಿ ಪಡೆಗಳ ನಡುವಿನ ಮೈತ್ರಿ ಮುರಿದು ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿದೆ ಇಸ್ಲಾಮಿಕ್ ಸ್ಟೇಟ್. ಇದಷ್ಟೇ ಅಲ್ಲದೇ ಯುದ್ಧ ಬಹಳ ಕಾಲದವರೆಗೆ ಮುಂದುವರಿದಲ್ಲಿ ಅಮೆರಿಕಾದ ನಿಲುವುಗಳ ಬದಲಾವಣೆಯೂ ಸಾಧ್ಯವಿದೆ. ಈ ಸಮಯದ ಉಪಯೋಗ ಪಡೆದುಕೊಂಡು ಹೊಸ ಉಗ್ರರ ಸೇರ್ಪಡೆಯನ್ನು ಮಾಡಿಕೊಳ್ಳುವುದಲ್ಲದೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಹುನ್ನಾರ ಇಸ್ಲಾಮಿಕ್ ಸ್ಟೇಟ್ ಉಗ್ರರದ್ದು! ಈ ಎಲ್ಲಾ ರೀತಿಯಿಂದಲೂ ಯುದ್ಧ ಇನ್ನೊಂದಷ್ಟು ಸಮಯ ಮುಂದುವರಿಸಿ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುವುದು ಇಸ್ಲಾಮಿಕ್ ಸ್ಟೇಟ್ ಉಗ್ರರ ಮಾಸ್ಟರ್ ಪ್ಲಾನ್!

ಈ ವರ್ಷದ ಕೊನೆಯಲ್ಲಿ ಬಹುನಿರೀಕ್ಷೆಯೊಂದಿಗೆ ಆರಂಭವಾದ ಮೊಸುಲ್ ಯುದ್ಧ, ಮುಂದಿನ ವರ್ಷದಲ್ಲೂ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಮೊಸುಲ್ ಯುದ್ಧದಲ್ಲಿ ಸಮಯ ಎಲ್ಲರಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವುದು ಮತ್ತು ಸಮಯದ ಆಟ ಫಲಿತಾಂಶವನ್ನು ಬಹುಮಟ್ಟಿಗೆ ನಿರ್ಧರಿಸಲಿದೆ. ಅಮೆರಿಕಾದಲ್ಲಿ ಟ್ರಂಪ್ ಮನೋಭಾವವನ್ನೂ ಗಮನಿಸಿದಲ್ಲಿ, ಅಮೆರಿಕಾ ಬೆಂಬಲ ಇನ್ನೆಷ್ಟು ಸಮಯವೋ ಎಂಬಂತಾಗಿದೆ. ಶತಾಯಗತಾಯ ಅಮೆರಿಕಾ ಬೆಂಬಲವಿರುವ ಈ ಕಾಲಘಟ್ಟದಲ್ಲೇ ಯುದ್ಧಕ್ಕೊಂದು ತಾರ್ಕಿಕ ಅಂತ್ಯ ನೀಡುವುದು ಅನಿವಾರ್ಯ. ಈಗಾಗಲೇ ಪಶ್ಚಿಮ ಮೊಸುಲ್ ನಲ್ಲಿ ಉಗ್ರರನ್ನು ಬಗ್ಗುಬಡಿದು ಉತ್ಸಾಹದಿಂದ ಪೂರ್ವ ಮೊಸುಲ್ ನತ್ತ ಮುನ್ನುಗ್ಗುತ್ತಿರುವ ಮೈತ್ರಿ ಸೇನೆ ಅಲ್ಪಾವಧಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಭಾವಕ್ಕೆ ಅಂತ್ಯ ಹಾಡಿದಲ್ಲಿ ಉಗ್ರನಿಗ್ರಹದ ಇತಿಹಾಸದಲ್ಲಿ ನೆನಪಿಡುವ ಘಟನೆಯಾಗಿ ಮೊಸುಲ್ ಯುದ್ಧ ಚಿರಸ್ಥಾಯಿಯಾಗುತ್ತದೆ.

(This article was published in Vishwavani Newsapaper on 29 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಪಾಕಿಸ್ತಾನದಲ್ಲೊಂದು ಉಗ್ರ ನಿಗ್ರಹ ಪ್ರಹಸನ

ಭಯೋತ್ಪಾದನಾ ನಿಗ್ರಹದ ವಿಷಯಕ್ಕೆ ಬಂದಾಗ ಒಳ್ಳೆಯ ಉಗ್ರರು ಮತ್ತು ಕೆಟ್ಟ ಉಗ್ರರು ಎಂಬ ವಿಚಿತ್ರ ವಿಂಗಡನೆಯೊಂದಿಗೆ, ಒಳ್ಳೆಯ ಉಗ್ರರರನ್ನು ನಾಶಮಾಡಮಾಡಬಾರದು ಎಂಬ ಹಾಸ್ಯಾಸ್ಪದ ತರ್ಕ ಮಂಡಿಸುವ ಪಾಕಿಸ್ತಾನದಿಂದ ಉಗ್ರ ನಿಗ್ರಹವನ್ನು ಅಪೇಕ್ಷಿಸುವುದೂ ಮೂರ್ಖತನ.
-  ಕೀರ್ತಿರಾಜ್

ಭಯೋತ್ಪಾದಕರ ತೊಟ್ಟಿಲು ಪಾಕಿಸ್ತಾನವೂ ಭಯೋತ್ಪಾದಕರ ನಿಗ್ರಹಕ್ಕಾಗಿ ಯೋಜನೆಯೊಂದನ್ನು ಹಾಕಿಕೊಂಡಿತ್ತು! ನನಸಾಗದ ಕನಸು ಅಥವಾ ಪಾಕಿಸ್ತಾನದ ಪರ ಪ್ರಚಾರ ಎಂದು ನೀವಂದುಕೊಳ್ಳಬಹುದು. ಆದರೂ ಇಂಥದ್ದೊಂದು ದ್ವಂದ್ವ ಎರಡು ವರ್ಷಗಳ ಹಿಂದೆ ನಡೆದಿತ್ತು!  2014ರಲ್ಲಿ ತಾಲಿಬಾನಿ ಉಗ್ರರು ಪಾಕಿಸ್ತಾನದ ಸೈನಿಕ ಶಾಲೆಯೊಂದಕ್ಕೆ ದಾಳಿ ನಡೆಸಿ 133 ಮಕ್ಕಳನ್ನು ಕೊಂದುಹಾಕಿದಾಗ, ಮೊದಲ ಬಾರಿಗೆ ಉಗ್ರರ ಮೇಲೆ ಮಮತೆ ತೋರಿ, ಉಗ್ರರಿಗೆ ಸಕಲ ಸೌಲಭ್ಯಗಳನ್ನೂ ನೀಡುತ್ತಿದ್ದ ಪಾಕಿಸ್ತಾನದ ತಲೆಯ ಮೇಲೆ ಭಯೋತ್ಪಾದಕರು ಸರಿಯಾಗಿಯೇ ಮೊಟಕಿದ್ದರು! ರಾಜಕೀಯ ಇಚ್ಚಾಶಕ್ತಿಯ ವಿಷಯ ಒತ್ತಟ್ಟಿಗಿರಿಸಿದರೂ, ಜನಾಕ್ರೋಶ ಶಮನ ಮಾಡುವ ಉದ್ದೇಶದಿಂದ ಪಾಕಿಸ್ತಾನ ಉಗ್ರರ ವಿರುದ್ಧ ಕಠೋರ ನಿಲುವು ವ್ಯಕ್ತಪಡಿಸಿತ್ತು. ಡಿಸೆಂಬರ್ 25, 2014ರದು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹಕ್ಕೆ ಕಾರ್ಯ ಯೋಜನೆಯೊಂದನ್ನು ಹಾಕಿಕೊಂಡಿತ್ತು. ರಾಷ್ಟ್ರೀಯ ಕಾರ್ಯ ಯೋಜನೆ (National Action Plan - NAP) ಎಂಬ ಹೆಸರಿನಲ್ಲಿ ಉಗ್ರದಮನಕ್ಕೆ ಪಾಕ್ ಸರಕಾರ ಯೋಜನೆಯೊಂದನ್ನು ರೂಪಿಸಿತ್ತು. ಈ ಅತ್ಯುತ್ಸಾಹದ ನ್ಯಾಪ್ ಕಾರ್ಯಯೋಜನೆ ಸರಿಯಾಗಿ ಎರಡು ವರ್ಷಗಳ ಬಳಿಕ ಎಲ್ಲಿಯವರೆಗೆ ತಲುಪಿದೆ? ಎಂಬ ಪ್ರಶ್ನೆಗೆ ಸಿಗುವ ಉತ್ತರ ನಿರಾಶಾದಾಯಕ. ಇವತ್ತಿಗೆ ಇದೊಂದು ಅವಾಸ್ತವಿಕ, ಅಪೂರ್ಣ, ಅವಿಶ್ವಸನೀಯ ಯೋಜನೆಯೆಂದು ಪರಿಗಣಿಸದೆ ಬೇರೆ ವಿಧಿಯಿಲ್ಲ.

ನ್ಯಾಪ್ ಇಪ್ಪತ್ತು ಅಂಶಗಳ ಯೋಜನೆಯಾಗಿದ್ದು, ಭಯೋತ್ಪಾದಕರಿಗೆ ಮರಣದಂಡನೆ, ವಿಶೇಷ ಮಿಲಿಟರಿ ನ್ಯಾಯಾಲಯಗಳ ಸ್ಥಾಪನೆ, ದ್ವೇಷ ಬಿತ್ತುವ ಭಾಷಣಗಳ ನಿಷೇಧ, ಭಯೋತ್ಪಾದನೆಯ ಆರ್ಥಿಕ ಮೂಲಗಳ ನಾಶ, ಭಯೋತ್ಪಾದನಾ ನಿಗ್ರಹ ದಳವೊಂದರ ಸ್ಥಾಪನೆ, ಮದರಸಗಳನ್ನು ನೋಂದಾಯಿಸುವುದು ಮತ್ತು ಹಿಡಿತದಲ್ಲಿಟ್ಟುಕೊಳ್ಳುವುದು, ಭಯೋತ್ಪಾದನೆಯನ್ನು ಬೆಂಬಲಿಸುವ ಮಾಧ್ಯಮಗಳ ನಿಷೇಧ ಇನ್ನಿತರ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಯೋಜನೆ.

Image may contain: 1 personಮೊದಲನೆಯದಾಗಿ ನ್ಯಾಪ್ ಯೋಜನೆಯಲ್ಲಿ ಮರಣದಂಡನೆಯ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ವಿಚಾರವೇ ವಿವಾದಕ್ಕೊಳಗಾಗಿತ್ತು. ಯೋಜನೆ ಅನುಷ್ಠಾನಗೊಂಡ 13 ತಿಂಗಳುಗಳೊಳಗೆ 345 ಜನ ಮರಣದಂಡನೆಗೊಳಗಾಗಿ, ಪಾಕಿಸ್ತಾನ ಈ ವಿಚಾರದಲ್ಲಿ ವಿಶ್ವಕ್ಕೆ ದ್ವಿತೀಯ ಸ್ಥಾನವನ್ನಲಂಕರಿಸಿತ್ತು! ಇವತ್ತಿಗೆ ಈ ಸಂಖ್ಯೆ 419ಕ್ಕೆ ತಲುಪಿದೆ. ಈ ನಿರಂತರ ಮರಣದಂಡನೆಗಳು ನಾಗರಿಕ ಸಮಾಜ ಮತ್ತು ಮಾನವ ಹಕ್ಕು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು. ಮರಣ ದಂಡನೆಗೆ ಒಳಪಡಿಸಿದವರಲ್ಲಿ ಕೇವಲ 2 ಪ್ರತಿಶತ ಜನ ಭಯೋತ್ಪಾದಕರಾಗಿದ್ದರು ಎನ್ನುವುದನ್ನು ಈ ಮಧ್ಯೆ ಬೆಳಕಿಗೆ ಬಂದ ವರದಿಯೊಂದು ಬಹಿರಂಗ ಪಡಿಸಿದ್ದು ಪಾಕ್ ಸರಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಹಾಗಾದರೆ ಪಾಕಿಸ್ತಾನ ಇನ್ನಿಲ್ಲದಂತೆ ಮಾಡಿದ ಉಳಿದ 98 ಪ್ರತಿಶತ ಜನ ಯಾರು? ಎಂಬ ಪ್ರಶ್ನೆ ಹೊಸ ರಾಜಕೀಯ ಸಂಕೀರ್ಣತೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದರೊಂದಿಗೆ ಈ ಪ್ರಕರಣಗಳಿಗೋಸ್ಕರವೇ ವಿಶೇಷ ಮಿಲಿಟರಿ ನ್ಯಾಯಾಲಯಗಳ ಸ್ಥಾಪನೆಯಾದರೂ, ಅವುಗಳು ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗುತ್ತವೆ. ಉದಾಹರಣೆಗೆ ಸಿಂಧ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಗಳಲ್ಲೇ 3,360 ಇತ್ಯರ್ಥವಾಗದೆ ಉಳಿದ ಪ್ರಕರಣಗಳು ಒಂದೆಡೆಯಾದರೆ, ವರ್ಷಕ್ಕೆ 40 ಪ್ರಕರಣಗಳ ಇತ್ಯರ್ಥಕ್ಕೆ ಹೆಣಗಾಡುವ ಮಿಲಿಟರಿ ನ್ಯಾಯಾಲಯಗಳು ಇನ್ನೊಂದೆಡೆ! 

ನ್ಯಾಪ್ ಕಾರ್ಯಯೋಜನೆಯಂತೆ, ಉಗ್ರ ಕಾರ್ಯಾಚರಣೆಗಳಿಗೆ ಕಡಿವಾಣ ಹಾಕಲು ಸರಕಾರ ಸುಮಾರು 63 ಉಗ್ರ ಸಂಘಟನೆಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿದ್ದರೂ, ಇದರಿಂದ ಪರಿಣಾಮಕಾರಿ ಬದಲಾವಣೆಗಳೇನೂ ಆಗಿಲ್ಲ. ಈ ನಿಷೇಧಿತ ಪಟ್ಟಿ ಬಹಳಷ್ಟು ಹಿಂದಿನಿಂದಲೇ ಅಸ್ತಿತ್ವದಲ್ಲಿದ್ದು, ನ್ಯಾಪ್ ನಿಷೇಧಿತ ಪಟ್ಟಿಯಲ್ಲಿ ಕೇವಲ ಒಂದು ಸಂಘಟನೆ ಹೆಚ್ಚಿನದಾಗಿ ಸೇರಿಕೊಂಡಿತ್ತು, ಅದೇ ಇಸ್ಲಾಮಿಕ್ ಸ್ಟೇಟ್! ಈ ವರ್ಷ ಮತ್ತೆರಡು ಹೊಸ ಉಗ್ರ ಸಂಘಟನೆಗಳ ಸೇರ್ಪಡೆ ಹೊರತು ಪಡಿಸಿದರೆ, ಈ ಪಟ್ಟಿಯಿಂದ ಭಯೋತ್ಪಾದನಾ ನಿಗ್ರಹದತ್ತ ಗುಲಗಂಜಿಯ ಬೆಳವಣಿಗೆಯೂ ಆಗಿಲ್ಲ. ನ್ಯಾಪ್ ನಿಬಂಧನೆಗಳ ಪ್ರಕಾರ ಈ ಉಗ್ರ ಸಂಘಟನೆಗಳಿಗೆ ಸೇರಿದ ಉಗ್ರರ ಮುಕ್ತ ಚಲನೆ ಮತ್ತು ಸಂಪರ್ಕಗಳನ್ನು ನಿರ್ಬಂಧಿಸುತ್ತದೆ. ಆದರೆ ಇವತ್ತಿಗೂ ಉಗ್ರರೆಲ್ಲಾ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡು ತಮ್ಮ ಚಟುವಟಿಕೆಗಳನ್ನು ನಿರಾತಂಕವಾಗಿ ಮುಂದುವರಿಸಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿರುವ ಲಷ್ಕರ್-ಎ-ತಯ್ಬಾ ಸಂಘಟನೆ, ನಿಷೇಧಕ್ಕೊಳಗಾಗಿದ್ದರೂ, ಇವತ್ತಿಗೂ ಈ ಸಂಘಟನೆ ಜಮಾತ್-ಉದ್-ದಾವಾ ಎಂಬ ಹೆಸರಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಜೈಶ್-ಎ-ಮಹಮ್ಮದ್ ಎಂಬ ಉಗ್ರ ಸಂಘಟನೆ ಖುದಮ್-ಉಲ್-ಇಸ್ಲಾಂ ಹೆಸರಿನಲ್ಲಿ ವಿಜ್ರಂಭಿಸುತ್ತಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯೊಂದರಲ್ಲಿ ಉಗ್ರ ಗುಂಪಿನ ಮುಖಂಡ ಮಸ್ರೂರ್ ನವಾಜ್ ಜಾಂಗವಿ ಜಯಗಳಿಸಿದಾಗ ಪಾಕಿಸ್ತಾನ ಉಗ್ರ ನಿಗ್ರಹದ ಅಸಲೀಯತ್ತು ಜಗಜ್ಜಾಹೀರಾಗಿತ್ತು.

ನ್ಯಾಪ್ ನ ಇಪ್ಪತ್ತು ಅಂಶಗಳಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರವನ್ನು (NACTA) ಬಲಪಡಿಸುವುದೂ ಒಂದಾಗಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಈ ನಿಗ್ರಹ ದಳವನ್ನು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಿಬಿಟ್ಟಿದೆ. ಜೂನ್ 2014ರಲ್ಲಿ ಅಫಘಾನಿಸ್ತಾನ್ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಮತ್ತು ಮುಂದಕ್ಕೆ ಕರಾಚಿಯಲ್ಲೂ ಪಾಕಿಸ್ತಾನಿ ಸೇನೆ ತಳಹಂತದಲ್ಲಿ ಸಮಗ್ರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರ ಪ್ರಭಾವ ಕಡಿಮೆ ಮಾಡಲು ಪ್ರಯತ್ನಿಸಿತ್ತು. ಆಗಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಘೋಷಿಸಿದ ಪ್ರಕಾರ ಇದೊಂದು ಯಶಸ್ವೀ ಕಾರ್ಯಾಚರಣೆಯಾಗಿತ್ತು. ಆದರೆ ವಾಸ್ತವ ಶರೀಫ್ ಹೇಳಿಕೆಗೆ ವ್ಯತಿರಿಕ್ತವಾಗಿತ್ತು. ಭಯೋತ್ಪಾದಕ ದಾಳಿಗಳಲ್ಲಿ ಎಳ್ಳಷ್ಟೂ ತೀವ್ರತೆ ಕಡಿಮೆಯಾಗಿರಲಿಲ್ಲ. ಈ ವರ್ಷ ಜನವರಿಯಲ್ಲಿ ಕಾಲೇಜೊಂದಕ್ಕೆ ನುಗ್ಗಿದ ಉಗ್ರರು 20 ಜನರ ಪ್ರಾಣ ಬಲಿ ಪಡೆದಿದ್ದರು. ಮಾರ್ಚ್ ನಲ್ಲಿ ಕೋರ್ಟ್ ದಾಳಿಯಲ್ಲಿ 16 ಮತ್ತು ಲಾಹೋರ್ ನ ಮಕ್ಕಳ ಉದ್ಯಾನವನವೊಂದರಲ್ಲಿ ನಡೆದ ಬಾಂಬ್ ದಾಳಿ 70 ಜನರ ಹತ್ಯೆ ಮತ್ತು 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಆಗಸ್ಟ್ ನ ಕ್ವೆಟ್ಟಾ ಆತ್ಮಹತ್ಯಾ ದಾಳಿಯಲ್ಲಿ 72, ಒಕ್ಟೋಬರ್ ಪೊಲಿಸ್ ತರಬೇತಿ ಕೇಂದ್ರದ ಮೇಲಿನ ದಾಳಿಯಲ್ಲಿ 61, ನವೆಂಬರ್ ನಲ್ಲಿ ಧಾರ್ಮಿಕ ಕ್ಷೇತ್ರವೊಂದರಲ್ಲಿ 61 ಜೀವಗಳನ್ನು ಭಯೋತ್ಪಾದಕ ದಾಳಿಗಳು ಬಲಿ ತೆಗೆದುಕೊಂಡಿದ್ದವು. 

ಒಂದು ರೀತಿಯಲ್ಲಿ ನ್ಯಾಪ್ ಒಂದು ಉಗ್ರ ನಿಗ್ರಹ ತಂತ್ರವೇ ಅಲ್ಲ. ಏಕೆಂದರೆ ಈ ಯೋಜನೆಯಲ್ಲಿ ಯಾವುದೇ ಸ್ಪಷ್ಟ ನೀತಿಗಳಾಗಲಿ ಮಾರ್ಗದರ್ಶಿ ಸೂತ್ರಗಳಾಗಲಿ ಇಲ್ಲ. ಉದಾಹರಣೆಗೆ ಬ್ರಿಟನ್ ನಲ್ಲಿರುವ ಕಂಟೆಸ್ಟ್ (Counter Terrorism Strategy - CONTEST) ನಲ್ಲಿರುವಂಥ ಯಾವುದೇ ಗುಣಗಳು ಈ ಯೋಜನೆಯಲ್ಲಿಲ್ಲ. ಇವೆಲ್ಲವನ್ನು ಗಮನಿಸಿದಾಗ, ಪಾಕಿಸ್ತಾನಿ ಮಿಲಿಟರಿ ಈ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ವಿರೋಧಿ ದಂಗೆಗಳ ದಮನಕ್ಕೆ ಬಳಸಿಕೊಂಡಿದ್ದು ಸ್ಪಷ್ಟವಾಗುತ್ತದೆ. ನ್ಯಾಪ್ ನೆಪದಲ್ಲಿ ತನ್ನ ವಿರೋಧಿಗಳ  ಹುಟ್ಟಡಗಿಸುವ ಪ್ರಯತ್ನದಲ್ಲಿ ಮಿಲಿಟರಿ ಯಶಸ್ವಿಯಾದರೆ, ಪಾಕಿಸ್ತಾನಿ ರಾಜಕಾರಣಿಗಳೂ ಇದನ್ನೊಂದು ರಾಜಕೀಯ ದಾಳವಾಗಿ ಉಪಯೋಗಿಸಿಕೊಂಡರು. ಭಯೋತ್ಪಾದನಾ ನಿಗ್ರಹದ ವಿಷಯಕ್ಕೆ ಬಂದಾಗ ಒಳ್ಳೆಯ ಉಗ್ರರು ಮತ್ತು ಕೆಟ್ಟ ಉಗ್ರರು ಎಂಬ ವಿಚಿತ್ರ ವಿಂಗಡನೆಯೊಂದಿಗೆ, ಒಳ್ಳೆಯ ಉಗ್ರರರನ್ನು ನಾಶಮಾಡಮಾಡಬಾರದು ಎಂಬ ಹಾಸ್ಯಾಸ್ಪದ ತರ್ಕ ಮಂಡಿಸುವ ಪಾಕಿಸ್ತಾನದಿಂದ ಉಗ್ರ ನಿಗ್ರಹವನ್ನು ಅಪೇಕ್ಷಿಸುವುದೂ ಮೂರ್ಖತನ. ಪಾಕಿಸ್ತಾನ ಬದಲಾದರೆ ಭಯೋತ್ಪಾದನೆಯನ್ನು ಹತ್ತಿಕ್ಕುವುದು ಕಷ್ಟದ ಕೆಲಸವೇನಲ್ಲ ಎಂದುಕೊಂಡಿತ್ತು ಭಾರತ. ದುರಾದೃಷ್ಟವಶಾತ್ ಅಂದುಕೊಂಡದ್ಯಾವುದೂ ನಡೆಯಲಿಲ್ಲ. ಪಾಕಿಸ್ತಾನದ ನಡೆಗಳೆಲ್ಲಾ ಡಂಭಾಚಾರ ಎನ್ನುವುದು ಈ ಎರಡು ವರ್ಷಗಳಲ್ಲಿ ಸಾಬೀತಾಗಿದೆ.



(This article was published in Hosa Digantha Newsapaper on 27 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗುರುವಾರ, ಮೇ 19, 2016

ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್

ವಿಶ್ವದಾದ್ಯಂತ ಇಸ್ಲಾಮಿಕ್ ಸ್ಟೇಟ್ ಗೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಒಳಂಗಿದೊಳಗೆ ಕುಸಿಯುತ್ತಿದೆ. ಭಯೋತ್ಪಾದನಾ ವಿರೋಧಿ ಶಕ್ತಿಗಳೆಲ್ಲವೂ ಈ ಅವಕಾಶವನ್ನು ಉಪಯೋಗಿಸಿಕೊಂಡು ದಂಡ-ಭೇದ ನೀತಿಯನ್ನು ಅನುಸರಿಸಿದರೆ ಇಸ್ಲಾಮಿಕ್ ಸ್ಟೇಟ್ ಅಂತ್ಯ ದೂರವೇನಿಲ್ಲ.
- ಕೀರ್ತಿರಾಜ್



ಖಲೀಫೇಟ್ ಆಡಳಿತವನ್ನು ಪುನರ್ಸ್ಥಾಪಿಸಲು ಹೊರಟಿರುವ ಇಸ್ಲಾಮಿಕ್ ಸ್ಟೇಟ್ ತನ್ನ ಉದ್ಧಟತನದಿಂದ ಜಗತ್ತಿನ ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡಾಗಲೇ ಅದರ ಅವನತಿ ಪ್ರಾರಂಭವಾಗಿತ್ತು. ಇನ್ನಿತರ ಭಯೋತ್ಪಾದನಾ ಸಂಘಟ್ನೆಗಳಿಗಿಂತ ತನ್ನನ್ನು ತಾನು ವಿಭಿನ್ನವಾಗಿ ಬಿಂಬಿಸಿಕೊಂಡು ಬಂದ ಇಸ್ಲಾಮಿಕ್ ಸ್ಟೇಟ್ ಇದೀಗ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ತನ್ನ ಸದಸ್ಯತ್ವ ವೃದ್ಧಿಸಿಕೊಂಡ ಇಸ್ಲಾಮಿಕ್ ಸ್ಟೇಟ್ ಗೆ ಇವತ್ತು ವಿಶ್ವದಾದ್ಯಂತ ಬೆಂಬಲಿಗರಿದ್ದಾರೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ವೇಗವಾಗಿ ಅದರ ಸದಸ್ಯರು ಇಸ್ಲಾಮಿಕ್ ಸ್ಟೇಟ್ ಬಿಟ್ಟು ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ಇಸ್ಲಾಮಿಕ್ ಸ್ಟೇಟ್ ದಟ್ಟ ಪ್ರಭಾವವಿರುವ ಸಿರಿಯಾದಲ್ಲೇ ಐ ಎಸ್ ತೊರೆದು ಹೋಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚ್ಚುತ್ತಿದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟು ಹಾಕಿದವರು ಚಾಣಾಕ್ಷರಾಗಿದ್ದರೂ, ಸ್ವಲ್ಪ ಮಟ್ಟಿಗಿನ ಭಯ ಹುಟ್ಟು ಹಾಕುವಲ್ಲಿ ಯಶಸ್ವಿಯಾದರೂ ಅವರ ಗುರಿ ಸಾಧಿಸುವಷ್ಟು ಆತ್ಮಸ್ಥೈರ್ಯವಾಗಲೀ, ನೈತಿಕತೆಯಾಗಲೀ ಅವರಲ್ಲಿಲ್ಲ. ಇಸ್ಲಾಮಿಕ್ ಸ್ಟೇಟ್ ಸದಸ್ಯರನ್ನು ನಡೆಸಿಕೊಳ್ಳುವ ರೀತಿ, ವಿದೇಶಿ ಮತ್ತು ಸಿರಿಯನ್ ಸದಸ್ಯರಲ್ಲಿ ತೋರುವ ತಾರತಮ್ಯಗಳೆಲ್ಲವೂ ಸೇರಿ ಸಿರಿಯನ್ ಸದಸ್ಯರು ಇಸ್ಲಾಮಿಕ್ ಸ್ತೇಟ್ ಬಿಟ್ಟು ಟರ್ಕಿಗೆ ಪಲಾಯನ ಮಾಡಿದರೆ, ಇನ್ನೂ ಕೆಲವರು ಫ್ರೀ ಸಿರಿಯನ್ ಆರ್ಮಿಗಳಂಥ ಸಂಘಟನೆ ಸೇರಿಕೊಳ್ಳುತ್ತಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಹಂತ ಹಂತವಾಗಿ ಕುಸಿದು ಮಣ್ಣು ಮುಕ್ಕುತ್ತಿರುವ ಹತಾಶೆಯಲ್ಲಿ ತಲೆಬುಡವಿಲ್ಲದ ಬೆದರಿಕೆಗಳನ್ನೊಡ್ಡುತ್ತಿದೆ. ಸದಸ್ಯರಾಗುವ ಪ್ರತಿಯೊಬ್ಬರಿಗೂ ಒಂದೊಂದು ಕಾರಣಗಳಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಬಿಟ್ಟುಹೋಗಲೂ ನಿರ್ದಿಷ್ಟ ಕಾರಣಗಳಿವೆ. ಈ ಉಗ್ರರೆಲ್ಲರೂ ಕೊನೆ ಉಸಿರಿನವರೆಗೂ ತಮ್ಮ ಗುರಿಗೋಸ್ಕರ ಹೋರಾಡುತ್ತಾರೆಂದುಕೊಂಡರೆ ಅದು ತಪ್ಪಾದೀತು. ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗುವ ಉಗ್ರರು ಯಾರು? ಅವರ ಹಿನ್ನೆಲೆಯೇನು? ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಲು ಕಾರಣಗಳೇನು? ಎನ್ನುವುದನ್ನು ತಿಳಿದುಕೊಂಡರೆ ಅದರ ಅಂತ್ಯದ ಬಗೆಗೂ ಸ್ಪಷ್ಟ ಚಿತ್ರಣ ಸಿಗುತ್ತದೆ. ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಬಯಸುವವರಲ್ಲಿ ಸಾಮಾನ್ಯವಾಗಿ ಐದು ವರ್ಗದ ಜನರನ್ನು ಗುರುತಿಸಬಹುದು. 

ಮೊದಲನೆಯದಾಗಿ ಇಸ್ಲಾಮಿಕ್ ಸ್ಟೇಟ್ ತತ್ವ ಸಿದ್ಧಾಂತಗಳಿಂದ ಪ್ರೇರಿತವಾಗಿ, ಖಲೀಫೇಟ್ ಮರುಸ್ಥಾಪಿಸುವ ಗುರಿಯೊಂದಿಗೆ ಇಸ್ಲಾಮಿಕ್ ಸ್ಟೇಟ್ ಸೇರಿಕೊಳ್ಳುವ ಜನರ ಗುಂಪು. ಈ ಗುಂಪಿನಲ್ಲಿರುವ ಜನ ದಶಕಗಳಿಂದ ನಡೆಯುತ್ತಿರುವ ದಂಗೆಗಳೊಂದಿಗೆ, ಅಮೆರಿಕಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರಾಚ್ಯದಲ್ಲಿ ನಡೆಸುವ ಕಣ್ಣಮುಚ್ಚಾಲೆ ಆಟಗಳಿಂದ ಬೇಸತ್ತು, ಭದ್ರತೆ ಮತ್ತು ನ್ಯಾಯದ ನಿರೀಕ್ಷೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರಾಗುತ್ತಾರೆ. ಇಸ್ಲಾಂ ಮತ್ತು ಪಶ್ಚಿಮದ ನಡುವಿನ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಸಮರ್ಥ ನಾಯಕತ್ವ ಒದಗಿಸುತ್ತದೆ ಎಂಬುದು ಈ ಗುಂಪಿನ ಕಲ್ಪನೆಗಳಲ್ಲೊಂದು! ಎರಡನೆಯದಾಗಿ ಸಮಾಜ ವಿರೋಧಿ ಕೃತ್ಯಗಳನ್ನೆಸಗಿ ಜೈಲು ಪಾಲಾದವರಿಗೆ ಇಸ್ಲಾಮಿಕ್ ಸ್ಟೇಟ್ ಕ್ಷಮಾದಾನ ನೀಡಿ ತನ್ನ ಸದಸ್ಯರನ್ನಾಗಿಸುತ್ತಿದೆ. ಕೆಲವೊಂದು ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿ ತನ್ನ ಸದಸ್ಯತ್ವ ವೃದ್ಧಿಸಿಕೊಂಡಿದೆ. ಈ ಜೈಲು ಹಕ್ಕಿಗಳು ತತ್ವ ಸಿದ್ಧಾಂತಗಳಲ್ಲಿ ಯಾವುದೇ ನಂಬಿಕೆ ಇರದಿದ್ದರೂ ಜೈಲಿನಿಂದ ಪಾರಾಗಲು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡವರು!

ಮೂರನೆಯದಾಗಿ, ಆರ್ಥಿಕ ಕಾರಣಗಳು ಇಸ್ಲಾಮಿಕ್ ಸ್ಟೇಟ್ ನೇಮಕಾತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅರಬ್ ರಾಷ್ಟ್ರಗಳೆಲ್ಲಾ ಸದ್ಯಕ್ಕೆ ಸಿರಿಯಾದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಉದ್ಯೋಗಾವಕಾಶಗಳಿಗೋಸ್ಕರ ತಡಕಾಡುತ್ತಿರುವ ಸಿರಿಯನ್ನರನ್ನು ಇಸ್ಲಾಮಿಕ್ ಸ್ಟೇಟ್ ಆಕರ್ಷಕ ವೇತನ ತನ್ನತ್ತ ಸೆಳೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಫ್ರೀ ಸಿರಿಯನ್ ಆರ್ಮಿ ಸೈನಿಕರಿಗೆ 36 ಡಾಲರ್, ಜಬಾತ್ ಉಲ್ ನುಸ್ರಾ 100 ಡಾಲರ್, ಸಿರಿಯಾದ ಸೇನೆಯಲ್ಲಿ 63 ಡಾಲರ್ ವೇತನಕ್ಕೆ ಹೋಲಿಸಿದಲ್ಲಿ ತಿಂಗಳಿಗೆ 400ರಿಂದ 1200 ಡಾಲರ್ ಗಳ ವ್ಯಾಪ್ತಿಯಲ್ಲಿರುವ ಇಸ್ಲಾಮಿಕ್ ಸ್ಟೇಟ್ ವೇತನ ಸಿರಿಯಾದಲ್ಲಿನ ಇನ್ನಿತರ ಉದ್ಯೋಗದ ಆಯ್ಕೆಗಳನ್ನು ಮಬ್ಬಾಗಿಸುತ್ತದೆ. ನಾಲ್ಕನೆಯದಾಗಿ ಸಿರಿಯಾ ಅಧ್ಯಕ್ಷ ಅಸದ್ ಆಡಳಿತದ ಕಟ್ಟಾ ವಿರೋಧಿಗಳಿಗೂ ಇಸ್ಲಾಮಿಕ್ ಸ್ಟೇಟ್ ಒಂದು ಪರ್ಯಾಯ ಆಯ್ಕೆಯಷ್ಟೇ. ಇದಲ್ಲದೆ ಕೊನೆಯದಾಗಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಯ ಲಾಭ ಪಡೆದುಕೊಳ್ಳಲು ಹವಣಿಸುತಿರುವ ಕೆಲ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನೂ ಇಸ್ಲಾಮಿಕ್ ಸ್ಟೇಟ್ ತನ್ನತ್ತ ಸೆಳೆದಿದೆ.


ಈ ರೀತಿಯಾಗಿ ಇಸ್ಲಾಮಿಕ್ ಸ್ಟೇಟ್ ನಲ್ಲಿರುವ ಉಗ್ರರಿಗೆ ಅವರದೇ ಆದ ಉದ್ದೇಶ ಗುರಿಗಳಿವೆ. ಇಲ್ಲಿ ಪ್ರಸ್ತಾಪಿಸಿರುವ ಇಸ್ಲಾಮಿಕ್ ಸ್ಟೇಟ್ ನ ಐದು ಪ್ರತ್ಯೇಕ ಗುಂಪುಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತ ಒಪ್ಪಿಕೊಂಡಿರುವುದು ಮೊದಲನೆಯ ಗುಂಪು ಮಾತ್ರ. ಇನ್ನುಳಿದ ನಾಲ್ಕು ಗುಂಪುಗಳಿಗೆ ಅವರದ್ದೇ ಆದ ವೈಯಕ್ತಿಕ ಗುರಿಸಾಧನೆಗಳು ಮುಖ್ಯವಾಗುತ್ತವೆಯೇ ವಿನಃ ಇಸ್ಲಾಮಿಕ್ ಸ್ಟೇಟ್ ಈ ಸಮಯಕ್ಕೊಂದು ನೆಪವಷ್ಟೇ. ಈ ಗುಂಪುಗಳಿಗೆ ಇಸ್ಲಾಮಿಕ್ ಸ್ಟೇಟ್ ತೊರೆಯಲು ಸಣ್ಣ ಪುಟ್ಟ ಕಾರಣಗಳು ಸಾಕಾಗುತ್ತವೆ. ವಿಶ್ವದಾದ್ಯಂತ ಇಸ್ಲಾಮಿಕ್ ಸ್ಟೇಟ್ ಗೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಒಳಂಗಿದೊಳಗೆ ಕುಸಿಯುತ್ತಿದೆ. ಭಯೋತ್ಪಾದನಾ ವಿರೋಧಿ ಶಕ್ತಿಗಳೆಲ್ಲವೂ ಈ ಅವಕಾಶವನ್ನು ಉಪಯೋಗಿಸಿಕೊಂಡು ದಂಡ-ಭೇದ ನೀತಿಯನ್ನು ಅನುಸರಿಸಿದರೆ ಇಸ್ಲಾಮಿಕ್ ಸ್ಟೇಟ್ ಅಂತ್ಯ ದೂರವೇನಿಲ್ಲ. 





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 19 May 2016)

ಭಾನುವಾರ, ಮೇ 8, 2016

ವಿಶ್ವದ ನೆತ್ತಿ ಮೇಲೆ ಅಣ್ವಸ್ತ್ರದ ತೂಗುಗತ್ತಿ

ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016ರ ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ!1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!
- ಕೀರ್ತಿರಾಜ್


ಇತಿಹಾಸ ಯುದ್ಧಗಳ ಕಥೆಯಾದಂತೆ ರಾಜಕೀಯವೂ ಶಕ್ತಿ ಪ್ರದರ್ಶನದ ಸಂತೆಯೇ ಸರಿ! ಅದರಲ್ಲೂ ಜಾಗತಿಕ ರಾಜಕೀಯದ ಪ್ರತಿ ಕ್ಷಣವೂ ಸಂಘರ್ಷ ಸಂಧಿಗ್ಧತೆಗಳ ಸರಮಾಲೆ. ಇತ್ತಿಚೆಗೆ ಸಣ್ಣಪುಟ್ಟ ಸಂಘರ್ಷಗಳಲ್ಲೂ ಅಣ್ವಸ್ತ್ರದ ಪ್ರಸ್ತಾಪವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ವಿಶ್ವಕ್ಕೆ ಅಣುಭೀತಿ ಹೊಸ ವಿಷಯವೇನಲ್ಲ. 1945ರಲ್ಲಿ 'ಮ್ಯಾನ್ಹಟ್ಟನ್ ಪ್ರಾಜೆಕ್ಟ್'ನ ಹೆಸರಿನಲ್ಲಿ ಅಮೆರಿಕಾ ಅಣು ಶಕ್ತಿಯಾಗಿ ಭಸ್ಮಾಸುರನಂತೆ ಜಪಾನ್ ತಲೆಯ ಮೇಲೆ ಕೈಯಿಟ್ಟಾಗಲೇ ಅಣ್ವಸ್ತ್ರ ಯಮನ ಆತ್ಮೀಯ ಕಿಂಕರನೆಂದು ಸಾಬೀತು ಪಡಿಸಿತ್ತು. 1945ರಿಂದ 2016ರವರೆಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕಾಗಿ ಸಿ.ಟಿ.ಬಿ.ಟಿ (CTBT) ಎನ್.ಪಿ.ಟಿ (NPT)ಗಳಂಥ ಅನೇಕ ಒಪ್ಪಂದ ಕರಾರುಗಳು ಬಂದು ಹೋಗಿವೆ. ಬಹು ನಿರೀಕ್ಷೆ ಮೂಡಿಸಿದ 1968ರ ಎನ್.ಪಿ.ಟಿ ಕೂಡ ಬಲಿಷ್ಟ ರಾಷ್ಟ್ರಗಳ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಟೆಗಳಿಗೆ ಬಲಿಯಾಗಿ ಹೋಯಿತು. ಒಟ್ಟಿನಲ್ಲಿ ನಮ್ಮ ತಲೆಯ ಮೇಲೆ ಕೈಯಿಡಲು ನಾವೇ ಸೃಷ್ಟಿಸಿಕೊಂಡ ಭಸ್ಮಾಸುರ ಈ ಅಣ್ವಸ್ತ್ರ.


ನಾಲ್ಕನೆಯ ಮತ್ತು ಕೊನೆಯ ಅಣ್ವಸ್ತ್ರ ಭದ್ರತಾ ಶೃಂಗಸಭೆ ಇದೇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಾಷಿಂಗ್ಟನ್ ನಲ್ಲಿ ನಡೆಯಿತು. ಕೊನೆಯ ಶೃಂಗ ಸಭೆಯಲ್ಲೂ ವಿಶ್ವ ನಾಯಕರ ಕಳವಳಕ್ಕೆ ಕಾರಣವಾದ ವಿಷಯ ಅಣ್ವಸ್ತ್ರ ಭಯೋತ್ಪಾದನೆ. ಐವತ್ತಕ್ಕೂ ಹೆಚ್ಚು ಅಣ್ವಸ್ತ್ರ ರಾಷ್ಟ್ರಗಳು, ಸಾವಿರಾರು ಅಣ್ವಸ್ತ್ರಗಳು ಭೂಮಂಡಲದ ನಾಶಕ್ಕೆ ಕಾಯುತ್ತಿವೆ. ಯಾವುದೇ ಒಂದು ಸಣ್ಣ ಪ್ರಮಾದ ಸಾಕು ಆ ದೇಶ ಈ ದೇಶ ಎಂಬ ಬೇಧ ಭಾವಗಳಿಲ್ಲದೆ ಇಡೀ ಭೂಮಿಯನ್ನು ಸುಟ್ಟು ಹಾಕಲು! ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016ರ ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ! 1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!



ಎಲ್ಲಾ ರಾಷ್ಟ್ರಗಳಿಗೂ ತಮ್ಮದೇ ರೀತಿಯ ಅಣು ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆಗಳಿವೆ. ಯಾವುದೇ ದೇಶದ ಅಣ್ವಸ್ತ್ರ ರಕ್ಷಣಾ ವ್ಯವಸ್ಥೆಯಲ್ಲಿ ಅಲ್ಪ ವ್ಯತ್ಯಾಸವಾಗಿ, ಅಣ್ವಸ್ತ್ರ ಭಯೋತ್ಪದಕರ ಕೈ ಸೇರುವಂತಾದರೆ ಗಂಡಾಂತರ ಖಂಡಿತ. ಭಯೋತ್ಪಾದಕ ಸಂಘಟನೆಗಳೂ ಅಣ್ವಸ್ತ್ರ ಪ್ರಯೋಗದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದೂ ವಿಶ್ವ ಶಕ್ತಿಗಳ ಪಾಲಿಗೆ ಎಚ್ಚರಿಕೆಯ ಘಂಟೆ. ನಿಧಾನವಾಗಿ ಇರಾಕ್ ಮತ್ತು ಸಿರಿಯಾಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಾಗ್ದಾದಿಯ ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಭಾವವನ್ನು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿದೆ. ಈ ಹತಾಶ ಪ್ರಯತ್ನ ಅಣ್ವಸ್ತ್ರ ಖರೀದಿಯವರೆಗೆ ಮುಂದುವರೆದರೆ ಆಶ್ಚರ್ಯವೇನಿಲ್ಲ. ಇತ್ತಿಚೆಗೆ ಬೆಲ್ಜಿಯಂನ ಅಣು ಸ್ಥಾವರದ ಕೆಲಸಗಾರನ್ನು ಗುಂಡಿಕ್ಕಿ ಕೊಂದು, ಅವನ ಭದ್ರತಾ ಗುರುತು ಚೀಟಿಯನ್ನು ಕಳ್ಳತನ ಮಾಡಲಾಗಿದೆ. ಇನ್ನೊಂದೆಡೆ ಇಬ್ಬರು ಬೆಲ್ಜಿಯನ್ ಅಣು ಸ್ಥಾವರದ ಕೆಲಸಗಾರರು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡಿರುವ ವರದಿಗಳು ಅಣ್ವಸ್ತ್ರ ಭಯೋತ್ಪಾದನೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇತ್ತಿಚೆಗೆ ಇಸ್ಲಾಮಿಕ್ ಸ್ಟೇಟ್ ಪ್ರಕಟಿಸಿದ ಕರಪತ್ರವೊಂದರಲ್ಲಿ ಪಾಕಿಸ್ತಾನದ ಲಂಚಕೋರ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಅಣ್ವಸ್ತ್ರ ಪಡೆದುಕೊಳ್ಳುವ ಯೋಜನೆಯ ಬಗ್ಗೆ ಆಘಾತಕಾರಿ ವಿವರಗಳಿದ್ದವು! ಹಾಗೆಂದ ಮಾತ್ರಕ್ಕೆ ಪಾಕಿಸ್ತಾನ ನೇರವಾಗಿ ಅಣ್ವಸ್ತ್ರಗಳನ್ನು ಭಯೋತ್ಪಾದಕರ ಕೈಗೊಪ್ಪಿಸುತ್ತವೆ ಎಂದಲ್ಲ. ಪಾಕಿಸ್ತಾನದಿಂದ ಅಣ್ವಸ್ತ್ರಗಳು ಭಯೋತ್ಪಾದಕರ ಕೈ ಸೇರಬಹುದೇ ಎಂಬ ಪ್ರಶ್ನೆಗೆ ಹೌದು ಎಂದುತ್ತರಿಸುವ ರಾಜಕೀಯ ವಿಶ್ಲೇಷಕರಿದ್ದಂತೆ ಇಲ್ಲ ಎನ್ನುವವರೂ ಇದ್ದಾರೆ. 


೨೦೦೧ನೇ ಜನವರಿಯಲ್ಲಿ ಪಾಕಿಸ್ತಾನದ ಖುಶಾಬ್ ಪ್ಲುಟೋನಿಯಂ ಅಣುಕೇಂದ್ರದ ಮಾಜಿ ಮುಖ್ಯಸ್ಥ ಬಶೀರುದ್ದೀನ್ ಮಹಮೂದ್ ಯು ಟಿ ಎನ್ ಸಂಸ್ಥೆಯ ಅಧ್ಯಕ್ಷತೆಯಲ್ಲಿ ಒಂದಷ್ಟು ಅಣ್ವಸ್ತ್ರ ವಿಜ್ಞಾನಿಗಳು ಯು ಟಿ ಎನ್ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. ಅದೇ ೨೦೦೧ರ ನವಂಬರ್ ನಲ್ಲಿ ಅಮೆರಿಕಾದ ನಿರ್ದೇಶನದಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಬಶೀರುದ್ದೀನ್  ಸೇರಿದಂತೆ ಅನೇಕ ಯುಟಿಎನ್ ಸದಸ್ಯರನ್ನು ಬಂಧಿಸಿತು. ವಿಚಾರಣೆಯಲ್ಲಿ ಬಶೀರುದ್ದೀನ್ ಒಸಾಮ್ ಬಿನ್ ಲಾಡೆನ್ ಭೇಟಿಯಾಗಿ ಅಣು ಬಾಂಬು ತಯಾರಿಸುವ ವಿಚಾರದಲ್ಲಿ ಮಾತುಕತೆ ನಡೆಸಿದ್ದನ್ನು ಒಪ್ಪಿಕೊಂಡಿದ್ದ! ೨೦೦೪ರಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಂತ್ರಜ್ಞಾನದ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಅಣ್ವಸ್ತ್ರ ತಂತ್ರಜ್ಞಾನವನ್ನು ಲಿಬಿಯಾ, ಉತ್ತರ ಕೊರಿಯಾ ಮತ್ತು ಇರಾನ್ ಗಳಿಗೆ ಮಾರಿಕೊಂಡಿದ್ದು, ಪಾಕಿಸ್ತಾನದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದೆ. ಗುಪ್ತಚರ ವರದಿಗಳ ಪ್ರಕಾರ ಅಲ್-ಖೈದಾ ಕೂಡ  ಅಣ್ವಸ್ತ್ರ ಹೊಂದಲು ಉತ್ಸುಕವಾಗಿದ್ದು  ಅಬ್ದುಲ್ ಖಾದಿರ್ ಖಾನ್ ಅಲ್-ಖೈದಾ ಬೇಡಿಕೆಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ವಿದ್ಯಮಾನಗಳು ಪಾಕಿಸ್ತಾನದ ಕೈಯಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಅನುಮಾನ ಮೂಡುತ್ತದೆ.


ಭಾರತ ಪಾಕಿಸ್ತಾನ ಸೇನಾ ಬಲಾಬಲಗಳನ್ನು ಗಮನಿಸಿದರೆ, ಪಾಕಿಸ್ತಾನ ಯಾವುದೇ ರೀತಿಯಲ್ಲೂ ಭಾರತಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಿಲ್ಲ. ಆದರೆ ಸೋಲುವ ಪರಿಸ್ಥಿತಿ ಬಂದಲ್ಲಿ ಅಣ್ವಸ್ತ್ರ ಪ್ರಯೋಗಕ್ಕೂ ಪಾಕಿಸ್ತಾನ ಸಿದ್ಧವಾಗಿದೆ ಎಂಬುದು ಪಾಕ್ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗಿವೆ. ಭಾರತ ನೈತಿಕ ದೃಷ್ಟಿಯಿಂದ No First Use ಅಣ್ವಸ್ತ್ರ ನೀತಿಯನ್ನು ಪಾಲಿಸುತ್ತಿದೆ. ಆದರೆ ಪಾಕಿಸ್ತಾನಕ್ಕೆ ಇಂಥ ಯಾವುದೇ ಸ್ವಯಂ ಕಡಿವಾಣಗಳು ಇಲ್ಲ. ಒಂದು ವೇಳೆ ಇದ್ದರೂ ಅದರ ಪಾಲನೆ ಪ್ರಶ್ನಾರ್ಹವೇ ಆಗಿರುವುದರಿಂದ ಅಣ್ವಸ್ತ್ರ ಭೀತಿ ತಪ್ಪಿದ್ದಲ್ಲ. ಇಲ್ಲಿಯವರೆಗೂ ಅಣ್ವಸ್ತ್ರ ಭಯೋತ್ಪಾದಕರ ಕೈ ಸೇರದಿರುವುದು, ಯಾವ ದೇಶವೂ ಅಂಥ ಹೊಣೆಗೇಡಿತನ ತೋರಿಲ್ಲ ಎಂಬುದರ ಸಂಕೇತ. ಹೀಗಿದ್ದರೂ ಪ್ರಸಕ್ತ ಜಾಗತಿಕ ಚದುರಂಗದ ಹೊಸ ಆಯಾಮಗಳು ಅನಿರೀಕ್ಷಿತ ತಿರುವುಗಳಿಗೆ ಮುನ್ನುಡಿಯಾಗುವಂತಿದೆ. ಉಗ್ರ ನಿಗ್ರಹದ ಜೊತೆಗೆ ಅಣ್ವಸ್ತ್ರ ಭದ್ರತೆ ವಿಶ್ವ ಶಕ್ತಿಗಳ ಮೂಲ ಮಂತ್ರವಾಗಬೇಕಿದೆ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 3 May 2016)