ರಷ್ಯಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಷ್ಯಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ನವೆಂಬರ್ 19, 2016

ಟ್ರಂಪ್ ಪುಟಿನ್ ಗೆಳೆತನದ ಸುತ್ತ-ಮುತ್ತ

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

"ಬಲಿಷ್ಠನಾದ ಶತ್ರುವಿಗೆ ಶರಣಾಗತನಾಗುವ ಮೂಲಕ, ಧೀರರನ್ನು ಭೇದ ನೀತಿಯಿಂದಲೂ, ದುರ್ಬಲರನ್ನು ಉಡುಗೊರೆಗಳಿಂದಲೂ, ಸಮಾನರನ್ನೂ ಪ್ರರಾಕ್ರಮದಿಂದಲೂ ಎದುರಿಸಬೇಕು" ವಿದೇಶಾಂಗ ವ್ಯವಹಾರಗಳ ಬಗ್ಗೆ ವಿವರಿಸುತ್ತಾ ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳಿವು. ರಾಜ ತನ್ನ ಶತ್ರುಗಳ ಜೊತೆಯಲ್ಲಿ ಮಾತ್ರವಲ್ಲದೇ ಮಿತ್ರರ ಜೊತೆಯಲ್ಲಿ ವ್ಯವಹರಿಸುವಾಗಲೂ ಈ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ರಾಜಕೀಯ ಚದುರಂಗದಾಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪರಿಸ್ಥಿತಿಯ ಒತ್ತಡಗಳು ಮಿತ್ರರನ್ನು ಶತ್ರುಗಳನ್ನಾಗಿಯೂ ಅಥವಾ ಶತ್ರುಗಳನ್ನು ಮಿತ್ರರನ್ನಾಗಿಯೂ ಕ್ಷಣ ಮಾತ್ರದಲ್ಲಿ ಬದಲಾಯಿಸಿಬಿಡುತ್ತದೆ. ಸಾಂಪ್ರದಾಯಿಕ ಶತ್ರು ರಷ್ಯಾ ಮತ್ತು ಅಮೆರಿಕಾಗಳ ವಿಚಾರದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಇಂಥದ್ದೊಂದು ಬದಲಾವಣೆಗೆ ನಾಂದಿ ಹಾಡುವಂತಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗುವುದರೊಂದಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಜಗತ್ತಿನಾದ್ಯಂತ ಮೂಡಿಸಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಟ್ರಂಪ್ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಅಮೆರಿಕಾ ಸೇರಿದಂತೆ ವಿಶ್ವದಾಂದ್ಯಂಥ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಶೇಷವಾಗಿ ರಷ್ಯಾದ ಸಂಸತ್ತಿನಲ್ಲಿದ್ದ ಸಂಸದರೆಲ್ಲರೂ ಚಪ್ಪಾಳೆಗಳೊಂದಿಗೆ ಅತ್ಯುತ್ಸಾಹದಿಂದ ಟ್ರಂಪ್ ಗೆಲುವಿನ ಸುದ್ಧಿಯನ್ನು ಸಂಭ್ರಮಿಸಿದರು! ಹೌದು, ಈ ಬಾರಿ ರಷ್ಯನ್ನರು ಸಾಂಪ್ರದಾಯಿಕ ಶತ್ರು ಎಂದೇ ಬಿಂಬಿತವಾಗಿದ್ದ ಅಮೆರಿಕಾದ ಚುನಾವಣೆಗಳಲ್ಲಿ ಅತಿಯಾದ ಕುತೂಹಲವನ್ನೂ, ಉತ್ಸಾಹವನ್ನೂ ತೋರಿಸಿದ್ದರು. ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳಲ್ಲೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಚರ್ಚೆಯ ವಿಷಯವಾಗಿತ್ತಷ್ಟೇ ಅಲ್ಲದೇ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಆರೋಪಗಳನ್ನು ರಷ್ಯನ್ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದ್ದು ರಷ್ಯಾದಲ್ಲಿಯೂ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದಂತಿತ್ತು. ಟ್ರಂಪ್ ಗೆಲುವಿಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಟ್ರಂಪ್ ಅಧ್ಯಕ್ಷತೆಯಲ್ಲಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪುಟಿನ್ ಕಠಿಣ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ರಂಪ್, ಒಬಾಮರಿಗಿಂತ ಪುಟಿನ್ ಉತ್ತಮ ನಾಯಕ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಪುಟಿನ್ ಮತ್ತು ಟ್ರಂಪ್ ನಡುವಿನ ಈ ವೈಯಕ್ತಿಕ ಸ್ನೇಹ ಅಮೆರಿಕಾ ಮತ್ತು ರಷ್ಯಾ ಬಾಂಧವ್ಯಗಳಲ್ಲೂ ಗಮನಾರ್ಹ ಬದಲಾವಣೆಗಳಿಗೆ ನಾಂದಿ ಹಾಡಬಲ್ಲುದು. ಪ್ರಮುಖವಾಗಿ ಭಯೋತ್ಪಾದನಾ ನಿಗ್ರಹದಲ್ಲಿ ಈ ಎರಡು ದೈತ್ಯ ರಾಷ್ಟ್ರಗಳ ಸಮನ್ವಯ ಅದ್ಭುತಗಳನ್ನು ಸಾಧಿಸಬಲ್ಲದು.

ಇನ್ನೊಂದೆಡೆ ಟ್ರಂಪ್ ಎದುರಾಗಿ ಚುನಾವಣಾ ಕಣಕ್ಕಿಳಿದಿದ್ದ ಹಿಲರಿ ಕ್ಲಿಂಟನ್, ರಷ್ಯಾದ ದ್ವೇಷಕ್ಕೆ ಪಾತ್ರರಾಗಿದ್ದು ಟ್ರಂಪ್ ರಷ್ಯಾ ಒಲವಿಗೆ ಇನ್ನಷ್ಟು ಬಲ ತುಂಬಿತ್ತು.  ಹಿಲರಿ ಕ್ಲಿಂಟನ್ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ 2009ರಿಂದ 2013ರವರೆಗಿನ ಅವಧಿಯಲ್ಲಿ ರಷ್ಯಾ ಮತ್ತು ಅಮೆರಿಕಾದ  ಸಂಬಂಧಗಳಲ್ಲಿ ಅಗಾಧ ಬಿರುಕು ಮೂಡಿತ್ತು. ತನ್ನ ಪ್ರಚಾರದುದ್ದಕ್ಕೂ ಹಿಲರಿ, ರಷ್ಯಾದ ಅಧ್ಯಕ್ಷ ಪುಟಿನ್ ಅಂತರಾಷ್ಟ್ರೀಯ ವ್ಯವಸ್ಥೆಗೆ ಮಾರಕ ಎಂದು ತೆಗಳಿದ್ದಲ್ಲದೇ ಟ್ರಂಪ್ ರನ್ನು ತನ್ನ ಕೈಗೊಂಬೆಯಾಗಿಟ್ಟುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯನ್ ಮಾಧ್ಯಮಗಳೂ ಕೂಡ, ಹಿಲರಿ ಮೇಲೆ ಭ್ರಷ್ಟಾಚಾರಿ ಮತ್ತು ಜಾಗತಿಕ ಶಾಂತಿಗೆ ಕುತ್ತು ತರಬಲ್ಲ ರಾಜಕಾರಣಿ ಎಂಬಂತೆ ಬಿಂಬಿಸಿತ್ತು. ಇವಿಷ್ಟೇ ಅಲ್ಲದೇ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಸಿರಿಯಾ ಅಧ್ಯಕ್ಷ ಬಶರ್-ಅಲ್-ಅಸದ್ ಗೆ ರಷ್ಯಾ ಬೆಂಬಲ ಮತ್ತು ಉಕ್ರೈನ್ ಸಮಸ್ಯೆಯ ಕಾರಣದಿಂದಾಗಿ ಅಮೆರಿಕಾ- ರಷ್ಯಾ ಸಂಬಂಧಗಳು ಅತಿಯಾಗಿ ಹದಗೆಟ್ಟಿದ್ದವು. ಇದೀಗ ಟ್ರಂಪ್ ಅಮೆರಿಕಾ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಅಮೆರಿಕಾ ತನ್ನ ಸಾಂಪ್ರದಾಯಿಕ ಶತ್ರು ರಷ್ಯಾ ಜೊತೆ ಸ್ನೇಹ ವೃದ್ಧಿಸಿಕೊಳ್ಳುವುದು ಬಹುತೇಕ ಖಚಿತ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಟ್ರಂಪ್ ರಷ್ಯಾ ಜೊತೆಗೆ ಪ್ರಶ್ನಾರ್ಹ ಸಂಬಂಧಗಳನ್ನಿಟ್ಟುಕೊಂಡಿತ್ತು ಎಂಬ ಆರೋಪಗಳ ಆಧಾರದ ಮೇಲೆ ಎಫ್.ಬಿ.ಐ ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿತ್ತಾದರೂ ಪುರಾವೆಗಳ ಕೊರತೆಯಿಂದಾಗಿ ತನಿಖೆಯನ್ನು ಮೊಟಕುಗೊಳಿಸಲಾಗಿತ್ತು. ಈ ಮಧ್ಯೆ ಡೆಮಾಕ್ರಟಿಕ್ ಪಕ್ಷದ ಮೇಲೆ ರಷ್ಯನ್ನರು ಸೈಬರ್ ದಾಳಿ ನಡೆಸಿದೆ ಮತ್ತು ರಷ್ಯಾದ ಗುಪ್ತಚರ ದಳ ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗಾಗಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂಬ ಗುಲ್ಲೆದ್ದಿತ್ತು! ಈ ಊಹೆಗಳ ಸತ್ಯಾಸತ್ಯತೆಗಳೇನೇ ಇದ್ದರೂ ರಷ್ಯಾ ಈ ಬಾರಿ ಅಮೆರಿಕಾದ ಚುನಾವಣಾ ಫಲಿತಾಂಶದಲ್ಲಿ ಅತಿಯಾದ ಉತ್ಸಾಹ ತೋರಿದ್ದು ಮಾತ್ರ ಸುಳ್ಳಲ್ಲ.

ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ಟ್ರಂಪ್ ಅಸಮಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಉಗ್ರರನ್ನು ಮಟ್ಟಹಾಕುವಲ್ಲಿ ರಷ್ಯಾದೊಂದಿಗೆ ಅಮೆರಿಕಾ ಕೈ ಜೋಡಿಸುವುದು ಜಾಣತನ ಎನ್ನುವುದು ಟ್ರಂಪ್ ಅಭಿಪ್ರಾಯ. ಟ್ರಂಪ್ ರಷ್ಯಾ ಬಗ್ಗೆ ಹೊಂದಿರುವ ಮೃದು ಧೋರಣೆ ಮತ್ತು ಭವಿಷ್ಯದಲ್ಲಿ ಅಮೆರಿಕಾ ಮತ್ತು ರಷ್ಯಾಗಳು ಮೈತ್ರಿಕೂಟವನ್ನು ರಚಿಸಿಕೊಳ್ಳುವ ಯೋಚನೆಯೇ ಹಲವರಿಗೆ ದಿಗಿಲು ಹುಟ್ಟಿಸಿದೆ.  ಟ್ರಂಪ್-ಪುಟಿನ್ ಗೆಳೆತನದ ಧನಾತ್ಮಕ ಅಂಶವೆಂದರೆ ಈ ಎರಡು ಬಲಾಡ್ಯ ರಾಷ್ಟ್ರಗಳ ಮೈತ್ರಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಉಗ್ರ ನಿಗ್ರಹದಲ್ಲಿ ಸಮನ್ವಯತೆ ಕಾರ್ಯರೂಪಕ್ಕಿಳಿದರೆ ಭಯೋತ್ಪಾದಕರ ದಮನಕ್ಕೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಭಯೋತ್ಪಾದಕರಿಗಷ್ಟೇ ಅಲ್ಲ ಬ್ರಿಟನ್ ಪಾಲಿಗೂ ಈ ಹೊಸ ಬದಲಾವಣೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿರಿಯಾದಲ್ಲಿ ರಷ್ಯಾ ಬೆಂಬಲದಿಂದ ಆಡಳಿತ ನಡೆಸುತ್ತಿರುವ ಅಸದ್ ವಿರುದ್ದ ಹೋರಾಡುತ್ತಿರುವ ದಂಗೆಕೋರರಿಗೆ ಅಮೆರಿಕಾ ಮತ್ತು ಬ್ರಿಟನ್ ನೆರವು ನೀಡುತ್ತಿರುವ ವಿಷಯ ತಿಳಿದೇ ಇದೆ. ಆದರೆ ಟ್ರಂಪ್ ಹೇಳಿರುವಂತೆ, ಅಮೆರಿಕಾ ದಂಗೆಕೋರರಿಗೆ ನೀಡುತ್ತಿರುವ ಬೆಂಬಲ ಹಿಂದೆಗೆದುಕೊಂಡು, ರಷ್ಯಾ ಜೊತೆ ಮೈತ್ರಿ ಸಾಧಿಸಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮಟ್ಟ ಹಾಕುವ ಆಲೋಚನೆಯಲ್ಲಿರುವುದು ಬ್ರಿಟನ್ ಪಾಲಿಗೆ ದೊಡ್ಡ ಹಿನ್ನಡೆ. ಅಮೆರಿಕಾ ಜೊತೆ ಸೇರಿಕೊಂಡು ಸಿರಿಯಾದಲ್ಲಿರುವ ರಷ್ಯಾ ಪ್ರಭಾವ ಮಟ್ಟಹಾಕಬೇಕು ಎಂದುಕೊಂದಿದ್ದ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಟ್ರಂಪ್ ರವರ ರಷ್ಯಾ ಪ್ರೀತಿಯಿಂದ ಬೆಚ್ಚಿಬೀಳುವಂತಾಗಿದೆ. ಅಮೆರಿಕಾ ನೇತೃತ್ವದ ನ್ಯಾಟೊ ಮಿತ್ರಕೂಟ ರಷ್ಯಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಟ್ಟಿರುವ 3 ಲಕ್ಷಕ್ಕೂ ಹೆಚ್ಚಿನ ಸೈನ್ಯವನ್ನು ಹಿಂಡೆದುಕೊಳ್ಳಬೇಕು ಎಂದು ಟ್ರಂಪ್ ಮುಂದೆ ಬೇಡಿಕೆಯಿಯಿಟ್ಟಿದ್ದು, ಯುರೋಪಿನ ರಾಷ್ಟ್ರಗಳು ಅಭದ್ರತೆ ಮತ್ತು ರಷ್ಯನ್ ಆಕ್ರಮಣದ ಭೀತಿ ಎದುರಿಸುವಂತಾಗಿದೆ.

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು! ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಆದ್ಯ ಕರ್ತವ್ಯವೇ ಆಗಿದ್ದರೂ, ಈವರೆಗೆ ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶ್ರೇಯಸ್ಸು ಅಮೆರಿಕಾಗೆ ಸಲ್ಲುತ್ತದೆ. ಈ ವಿಚಾರದಲ್ಲಿ ಅಮೆರಿಕಾ ಇತರ ರಾಷ್ಟ್ರಗಳಿಗೆ ಮಾದರಿಯೇ ಸರಿ. ಅಧ್ಯಕ್ಷ ಗಾದಿಗೆ ಚುನಾಯಿತರಾಗಿರುವ ಟ್ರಂಪ್ ಕೂಡ ರಷ್ಯಾ ಮೇಲಿನ ದ್ವೇಷವನ್ನು ಬಿಟ್ಟುಕೊಡುತ್ತಿದ್ದಾರೆಯೇ ವಿನಃ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ! ಇಷ್ಟಕ್ಕೂ ಟ್ರಂಪ್ ವಿದೇಶಾಂಗ ನೀತಿಯ ಕುರಿತಾಗಿ ಸ್ಪಷ್ಟ ಚಿತ್ರಣಕ್ಕಾಗಿ, 20 ಜನವರಿ 2017ರ ವರೆಗೆ ಕಾದುನೋಡಲೇಬೇಕು.

(This article was published in Vishwavani newspaper on 16 November 2016)

      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ನವ ಶೀತಲ ಸಮರಕ್ಕೆ ಹೊಸ ಭಾಷ್ಯ ಬರೆಯಲಿದೆ ರಷ್ಯಾ!

ಯುರೋಪಿನೊಂದಿಗೆ ರಷ್ಯಾಗಿರುವ ತಗಾದೆಗಳ ಪರಿಹಾರಕ್ಕೆ ಅಣ್ವಸ್ತ್ರಗಳನ್ನೂ ಉಪಯೋಗಿಸಲು ಹಿಂಜರಿಯುವುದಿಲ್ಲ ಎಂಬಂಥ ಆಕ್ರಮಣಕಾರಿ ನಿಲುವನ್ನು ತಳೆದಿರುವ ರಷ್ಯಾ ಅಧ್ಯಕ್ಷ ಪುಟಿನ್ ಯುರೋಪ್ ಮತ್ತು ಅಮೆರಿಕಾ ನಾಯಕರನ್ನು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದಾರೆ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಸರಿಸುಮಾರು ಎರಡೂವರೆ ದಶಕಗಳ ಹಿಂದಷ್ಟೇ ಅಂತ್ಯವಾದ ಶೀತಲ ಸಮರದ ಹೆಸರಿನಲ್ಲಿ  ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳೆರಡು ಶಕ್ತಿ ರಾಜಕೀಯದ ಜಂಗೀ ಕುಸ್ತಿ ನಡೆಸಿದ್ದವು. ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳ ಜೊತೆ ಸೇರಿಕೊಂಡು ನ್ಯಾಟೋ ಮಿಲಿಟರಿ ಒಕ್ಕೂಟ ರಚಿಸಿಕೊಂಡರೆ ಸೊವಿಯೆತ್ ಬಣ ವಾರ್ಸೋ ಹೆಸರಿನ ಮಿಲಿಟರಿ ಪ್ಯಾಕ್ಟ್ ನೊಂದಿಗೆ ಎದುರುತ್ತರ ನೀಡಿತ್ತು. 1990ರ ಅಂಚಿನಲ್ಲಿ ಸೊವಿಯೆತ್ ಒಕ್ಕೂಟ ಛಿದ್ರವಾಗಿ ಕೊನೆಗೆ ಉತ್ತರಾಧಿಕಾರಿಯಾಗಿ ಉಳಿದುಕೊಂಡ ರಷ್ಯಾ ಕೂಡ ತನ್ನ ಹಿಂದಿನ ಪ್ರಭಾವ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತದೆ. ತದನಂತರ ತನಗೆ ಇನ್ನಾರೂ ಸಾಟಿಯಿಲ್ಲ ಎಂಬಂತೆ ಅಮೆರಿಕಾ ವಿಶ್ವ ರಾಜಕೀಯದ ದೊಡ್ಡಣ್ಣ ಎನಿಸಿಕೊಂಡಿದ್ದು ಈಗ ಇತಿಹಾಸ. ಶೀತಲ ಸಮರದ ಅಂತ್ಯದೊಂದಿಗೆ ರಷ್ಯಾ ಬಹಳಷ್ಟು ಸಂದರ್ಭಗಳಲ್ಲಿ ಅವಮಾನಕ್ಕೂ ಒಳಗಾಗಬೇಕಾಯ್ತು. ನ್ಯಾಟೊ ಮತ್ತು ತನ್ನ ಪ್ರಭಾವ ವೃದ್ಧಿಸಿಕೊಂಡ ರೀತಿ ಮತ್ತು ಯುರೋಪಿಯನ್ ಒಕ್ಕೂಟದ ವಿಸ್ತರಣೆ ರಷ್ಯಾದಲ್ಲಿ ಅಭದ್ರತೆಯ ಭಾವನೆಯನ್ನೂ ಮೂಡಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಪೂರ್ಣ ಸಹಮತವಿಲ್ಲದೇ ಹೋದರೂ ಸರ್ಬಿಯಾ, ಇರಾಕ್ ಮತ್ತಿತರ ಪ್ರದೇಶಗಳಲ್ಲಿ ಅಮೆರಿಕಾ ನಡೆಸಿದ ಮಿಲಿಟರಿ ಕಾರ್ಯಾಚಾರಣೆಗಳು ರಷ್ಯಾದ ಹತಾಶೆ ಮತ್ತು ಆಕ್ರೋಶಗಳನ್ನು ಇಮ್ಮಡಿಗೊಳಿಸಿತ್ತು. ಆದರೆ ರಷ್ಯಾದ ಇತ್ತೀಚಿನ ನಡೆಗಳು ಮತ್ತೆ ಅಮೆರಿಕಾ ಮತ್ತು ಕೆಲ ಯುರೋಪಿನ ರಾಷ್ಟ್ರಗಳ ನಿದ್ದೆಗೆಡುವಂತೆ ಮಾಡಿದೆ.

ಯುರೋಪಿನೊಂದಿಗೆ ರಷ್ಯಾಗಿರುವ ತಗಾದೆಗಳ ಪರಿಹಾರಕ್ಕೆ ಅಣ್ವಸ್ತ್ರಗಳನ್ನೂ ಉಪಯೋಗಿಸಲು ಹಿಂಜರಿಯುವುದಿಲ್ಲ ಎಂಬಂಥ ಆಕ್ರಮಣಕಾರಿ ನಿಲುವನ್ನು ತಳೆದಿರುವ ರಷ್ಯಾ ಅಧ್ಯಕ್ಷ ಪುಟಿನ್ ಯುರೋಪ್ ಮತ್ತು ಅಮೆರಿಕಾ ನಾಯಕರನ್ನು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದಾರೆ. ರಷ್ಯಾ ವಿಶ್ವ ನಾಯಕರ ವಿರೋಧಕ್ಕೆ ಕ್ಯಾರೇ ಎನ್ನದೆ ಕ್ರಿಮಿಯಾವನ್ನು ರಷ್ಯಾದೊಂದಿಗೆ ವಿಲೀನಗೊಳಿಸಿದಾಗ, ಸಿರಿಯಾ ಯುದ್ಧರಂಗಕ್ಕೆ ಧುಮುಕಿ, ಅಮೆರಿಕಾದ ಸಲಹೆ ಮತ್ತು ಎಚ್ಚರಿಕೆಗಳನ್ನು ಗಾಳಿಗೆ ತೂರಿ ತನ್ನದೇ ಯುದ್ಧ ನೀತಿ ಪ್ರದರ್ಶಿಸಿದಾಗ ಹಾಗೂ ತೀರ ಇತ್ತೀಚೆಗೆ ರಷ್ಯಾ ತನ್ನ ರಹಸ್ಯ ಕಾರ್ಯಾಚರಣೆಗಳ ಮೂಲಕ ಅಮೆರಿಕಾ ಚುನಾವಣೆಗಳಲ್ಲೂ ಹಸ್ತಕ್ಷೇಪ ಮಾಡಿದೆ ಎಂಬ ಸಂಶಯ ವ್ಯಕ್ತವಾದ ಮೇಲಂತೂ ಅಧ್ಯಕ್ಷ ಪುಟಿನ್ ರಷ್ಯಾದ  ವೈರಿಗಳ ಜಂಘಾಬಲ ಉಡುಗಿಸುವ ಯಾವ ಪ್ರಯತ್ನವನ್ನೂ ಕೈಬಿಡುವವರಲ್ಲ ಎಂಬುದು ಸ್ಪಷ್ಟವಾಗಿದೆ. ಅಮೆರಿಕಾದಲ್ಲಿ ಸದ್ಯದಲ್ಲೇ ಅಧ್ಯಕ್ಷೀಯ ಚುನಾವಣೆಯಿದೆ. ಮುಂದಿನ ಅಧ್ಯಕ್ಷ ಯಾರೇ ಆದರೂ ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ರಷ್ಯಾಗೆ ಸಿಂಹಪಾಲು ದಕ್ಕಲಿದೆ. ಕಾಲು ಶತಮಾನದ ಹಿಂದೆ ಅಮೆರಿಕಾ ತನ್ನ ವಿದೇಶಾಂಗ ನೀತಿಯಲ್ಲಿ ಸೊವಿಯೆತ್ ಗೆ ನೀಡುತ್ತಿದ್ದ ಪ್ರಾಮುಖ್ಯತೆ ಇದೀಗ ಮತ್ತೆ ರಷ್ಯಾ ವಿಷಯದಲ್ಲಿ ಮರುಕಳಿಸಲಿದೆ!

2015ರಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ನನ್ನು ಅಧಿಕಾರದಲ್ಲಿ ಉಳಿಸಲು ಸಿರಿಯಾದಲ್ಲಿ ರಷ್ಯಾ ನಿಯೋಜಿಸಿದ ಯುದ್ಧ ವಿಮಾನಗಳು ಮತ್ತು ಫಿರಂಗಿಗಳು ಒಬಾಮ ಉದ್ದೇಶಗಳನ್ನು ತಲೆಕೆಳಗು ಮಾಡಿತ್ತು! ಯುದ್ಧ ಅಸದ್ ಪರವಾಗಿ ಬದಲಾಗಿತ್ತು! ಈ ಮೂಲಕ ಸಿರಿಯಾದಲ್ಲಿ ರಷ್ಯಾ ತನ್ನ ಹಿಡಿತ ಬಲಪಡಿಸಿಕೊಂಡದ್ದಷ್ಟೇ ಅಲ್ಲದೇ ಈ ಪ್ರದೇಶದಲ್ಲಿ ಅಮೆರಿಕಾ ಪ್ರಭಾವವವನ್ನು ಕಡಿಮೆ ಮಾಡಿತ್ತು. ಇತ್ತಿಚೆಗೆ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ'(No Fly Zone)ಗಳನ್ನು ರಚಿಸುವ ಉತ್ಸಾಹದಲ್ಲಿದ್ದ ಅಮೆರಿಕನ್ ಸಂಸದರು ಈ ಕುರಿತಾಗಿ ಜನರಲ್ ಜೋಸೆಫ್ ಡನ್ಫೋರ್ಡ್ ರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, "ಹಾರಾಟ ನಿಷೇಧಿತ ವಲಯಗಳನ್ನು ಸ್ಥಾಪಿಸಲೇಬೇಕು ಎಂದಿದ್ದಲ್ಲಿ ಸಿರಿಯಾ ಮತ್ತು ರಷ್ಯಾಗಳೆರಡರ ಜೊತೆಗೂ ಅಮೆರಿಕಾ ಯುದ್ಧಕ್ಕೆ ಸಿದ್ಧವಾಗಬೇಕು!"ಈ ಮಧ್ಯೆ ಹಿಲರಿ ಕ್ಲಿಂಟನ್ ತನ್ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರದುದ್ದಕ್ಕೂ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ' ಮತ್ತು 'ಸುರಕ್ಷಿತ ವಲಯ'ಗಳನ್ನು ರಚಿಸಬೇಕು ಎನ್ನುತ್ತಿದ್ದಾರೆ. ಈ ಮೂಲಕ ರಷ್ಯಾಗೆ ಸರಿಯಾದ ಹೊಡೆತ ನೀಡುವ ಯೋಚನೆಯಲ್ಲಿರುವ ಕ್ಲಿಂಟನ್, ರಷ್ಯಾದ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಮರೆತಿರುವಂತಿದೆ. ಯುದ್ಧ ತಂತ್ರ ನಿಪುಣರ ಪ್ರಕಾರ ರಷ್ಯಾದ ಎಸ್-400 ರಕ್ಷಣಾ ವ್ಯವಸ್ಥೆಗೆ ಅಮೆರಿಕಾದ ಯುದ್ಧವಿಮಾನಗಳನ್ನು ಮತ್ತು 'ಹಾರಾಟ ನಿಷೇಧಿತ ವಲಯ'ವನ್ನೂ ಪುಡಿಗಟ್ಟಬಲ್ಲ ಸಾಮರ್ಥ್ಯವಿದೆ!

2011ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಲಿಬಿಯಾದಲ್ಲಿ 'ಹಾರಾಟ ನಿಷೇಧಿತ ವಲಯ'ವನ್ನು ರಚಿಸುವುದನ್ನು ಆಗಿನ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ತಡೆದಿದ್ದರು. ಇವತ್ತಿನ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಮತ್ತು ಅವತ್ತಿನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ರಷ್ಯಾವನ್ನು ಒಪ್ಪಿಸುವಲ್ಲಿ ಹರಸಾಹಸ ಪಟ್ಟಿದ್ದರು. ಲಿಬಿಯಾದಲ್ಲಿ ಗದ್ದಾಫಿಯನ್ನು ಬದಲಿಸುವ ಅಥವಾ ಆಳ್ವಿಕೆಯನ್ನು ಬದಲಿಸುವ ಯಾವುದೇ ಪ್ರಯತ್ನವನ್ನೂ ಅಮೆರಿಕಾ ಮಾಡುವುದಿಲ್ಲ ಎಂಬ ಆಶ್ವಾಸನೆಯನ್ನೂ ಕ್ಲಿಂಟನ್ ರಷ್ಯಾಕ್ಕೆ ನೀಡಿದ್ದರು. ಕೊನೆಗೆ ಗದ್ದಾಫಿಯನ್ನು ದಂಗೆಕೋರರು ಹತ್ಯೆ ಮಾಡುವಲ್ಲಿ ಅಮೆರಿಕಾ ನೇತೃತ್ವದ ನ್ಯಾಟೊ ಪಡೆಗಳು ಮುಖ್ಯ ಪಾತ್ರವಹಿಸುತ್ತವೆ. ಗದ್ದಾಫಿ ಹತ್ಯೆಯ ಕುರಿತಾದ ವಿಡಿಯೊವೊಂದರಲ್ಲಿ ಕ್ಲಿಂಟನ್ ವ್ಯಂಗ್ಯವಾಗಿ "ನಾವು ಬಂದೆವು, ನಾವು ನೋಡಿದೆವು ಅವನು ಸತ್ತ"ಎಂದಿದ್ದನ್ನು ರಷ್ಯನ್ನರು ತಮಗೇ ಮಾಡಿದ ಲೇವಡಿ ಎಂದುಕೊಂಡರು. ಕ್ಲಿಂಟನ್ ರಷ್ಯಾಗೆ ನೀಡಿದ್ದ ಆಶ್ವಾಸನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರಿವಾದಾಗ ಸಹಜವಾಗಿಯೇ ರಷ್ಯಾ ಕೆಣಕಿದ ಹಾವಾಗಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ 'ಹಾರಾಟ ನಿಷೇಧಿತ ವಲಯ' ಸ್ಥಾಪಿಸುವ ಅಮೆರಿಕಾದ ಹಾದಿಯಲ್ಲಿ ರಷ್ಯಾ ಅಡ್ಡಗಾಲು ಹಾಕುವುದು ಖಂಡಿತ.

ರಷ್ಯಾ ಸಿರಿಯಾದಲ್ಲಿ ಅನೇಕ ಯುದ್ಧಾಪರಾಧ ಮತ್ತು ದುಷ್ಕೃತ್ಯಗಳನ್ನು ಮಾಡಿದೆ ಎಂದು ಅಮೆರಿಕಾ ಆಪಾದಿಸುತ್ತಿದ್ದರೆ ರಷ್ಯಾ ಮಾತ್ರ ಸಿರಿಯಾ ಯುದ್ಧಭೂಮಿಗೆ ಇನ್ನಷ್ಟು ಶಸ್ತ್ರಾಸ್ತ್ರ ಮತ್ತು ಸೇನಾಪಡೆಗಳನ್ನು ನಿಯೋಜಿಸುವ ತರಾತುರಿಯಲ್ಲಿದೆ. ರಷ್ಯಾದ ಈ ಆಕ್ರಮಣಕಾರಿ ನೀತಿ ಇಸ್ಲಾಮಿಕ್ ಸ್ಟೇಟ್ ಮತ್ತು ಕರ್ದಿಶ್ ಹೋರಾಟಗಾರರ ನಿದ್ದೆಗೆಡಿಸಿದೆ. ಅಮೆರಿಕಾದ ಪಾಲಿಗೂ ಸಿರಿಯಾದಲ್ಲಿ ರಷ್ಯನ್ ಪಡೆಗಳ ಉಪಸ್ಥಿತಿ ನುಂಗಲಾಗದ ಬಿಸಿ ತುಪ್ಪದಂತಾಗಿದೆ. ಇವೆಲ್ಲದರ ಮಧ್ಯೆ ರಷ್ಯಾ ವಿದೇಶಗಳಲ್ಲಿರುವ ತನ್ನ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳುತ್ತಿರುವ ಬಗ್ಗೆ, ತೃತೀಯ ಮಹಾಯುದ್ಧದ ಆರಂಭದ ಕುರಿತಾಗಿಯೂ ಊಹಾಪೋಹಗಳೆದ್ದಿದ್ದವು. ತೃತೀಯ ಸತ್ಯಾಸತ್ಯತೆಗಳೇನಿದ್ದರೂ ಅಮೆರಿಕಾ ಮತ್ತು ರಷ್ಯಾಗಳ ಮಧ್ಯೆ ಹೆಚ್ಚುತ್ತಿರುವ ಛಾಯಾಯುದ್ಧಗಳು ಶೀತಲ ಸಮರವನ್ನು ಮತ್ತೆ ಮರುಕಳಿಸುವಂತಿದೆ. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಈ ನವಶೀತಲ ಸಮರ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಮತ್ತು ತದನಂತರದ ಅಮೆರಿಕಾ ಮತ್ತು ರಷ್ಯಾಗಳ ಕ್ರಿಯೆ- ಪ್ರತಿಕ್ರಿಯೆಗಳನ್ನು ಕುತೂಹಲದಿಂದ ಎದುರು ನೋಡುವಂತೆ ಮಾಡಿದೆ.

(This article was published in Vishwavani newspaper on 25 October 2016)

      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ಬುಧವಾರ, ಆಗಸ್ಟ್ 10, 2016

ಅಮೆರಿಕನ್ನರ ರಷ್ಯಾ ದ್ವೇಷ ಮತ್ತು ಟ್ರಂಪ್ ಭವಿಷ್ಯ

ಯುದ್ಧ ಬಹುಪಾಲು ಯುರೋಪಿನಲ್ಲೇ ನಡೆದಿದ್ದರಿಂದ ಯುರೋಪ್ ಯುದ್ಧದ ಗಂಭೀರ ಪರಿಣಾಮಗಳಿಂದ ಹೊರಬರಲು ಒದ್ದಾಡುವಂತಾಯಿತು.  ದ್ವಿತೀಯ ಯುದ್ಧದ ಅಂತ್ಯದೊಂದಿಗೆ ಬಂಡವಾಳಶಾಹಿ ಅಮೆರಿಕಾ ಮತ್ತು ಕಮ್ಯುನಿಸ್ಟ್ ಸೊವಿಯೆತ್ ಯೂನಿಯನ್ ಗಳು ವಿಶ್ವದ ಎರಡು ಸೂಪರ್ ಪವರ್ ಗಳಾಗಿ ಮೂಡಿಬರುವುದರೊಂದಿಗೆ ವಿಶ್ವ ಮತ್ತೊಮ್ಮೆ ಮಹಾಯುದ್ಧದ ಸಾಧ್ಯತೆಗಳನ್ನು ತೆರೆದಿಟ್ಟಿತು.

-      ಕೀರ್ತಿರಾಜ್

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ಕೊನೆಯ ಹಂತಕ್ಕೆ ಬಂದು ನಿಂತಿವೆ. ಘಟಾನುಘಟಿಗಳ ನಿರಂತರ ಪೈಪೋಟಿಯ ನಂತರ ರಿಪಬ್ಲಿಕ್ ಪಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಾಟ್ ಪಕ್ಷ ಹಿಲರಿ ಕ್ಲಿಂಟನ್ ಅವರನ್ನು ಮುಂದಿಟ್ಟುಕೊಂಡು ಅಂತಿಮ ಹಣಾಹಣಿಯ ಸಿದ್ಧತೆಯಲ್ಲಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ಅಮೆರಿಕಾಕ್ಕಷ್ಟ್ಟೇ ಸೀಮಿತವಾಗದೆ ವಿಶ್ವಾದ್ಯಂತ ಚರ್ಚೆಯಾಗಲು ಕಾರಣಗಳು ಇಲ್ಲದ್ದಿಲ್ಲ. ವಿಶ್ವ ರಾಜಕೀಯದ ಅನಭಿಷಿಕ್ತ ದೊರೆ ಅಮೆರಿಕಾದ ಭಾವಿ ಅಧ್ಯಕ್ಷರ ಸ್ವಾಗತಕ್ಕಾಗಿ ವಿಶ್ವದ ಹಲವಾರು ದೇಶಗಳು ಈಗಾಗಲೇ ರತ್ನಗಂಬಳಿ ಸಿದ್ಧಪಡಿಸಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಾಗಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಅಂತರ್ರಾಷ್ಟ್ರೀಯ ಮಹತ್ವದ ಬಗ್ಗೆ ಯಾವುದೇ ಸಂಶಯಗಳಿಗೆ ಆಸ್ಪದವಿಲ್ಲ. ಅಧ್ಯಕ್ಷ ಪದವಿಗೆ ತೀರಾ ಹತ್ತಿರ ಬಂದು ನಿಂತಿರುವ ಹಿಲರಿ ಕ್ಲಿಂಟನ್ ಮತ್ತು ಟ್ರಂಪ್ ಬಗ್ಗೆ ವಿಶ್ವಾದ್ಯಂತ ತರಹೇವಾರಿ ಚರ್ಚೆಗಳಿವೆ. ಈಗಾಗಲೇ ಅಧಿಕಾರದಲ್ಲಿರುವ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಎಂಬ ಕಾರಣಕ್ಕಷ್ಟೇ ಅಲ್ಲದೇ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ ಹಿಲರಿ ಕ್ಲಿಂಟನ್ ಸಹಜವಾಗಿಯೇ ಸುದ್ದಿಯಲ್ಲಿದ್ದಾರೆ. ಇನ್ನೊಂದೆಡೆ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ವಿಶೇಷ ಕಾರಣಗಳು, ವಿಭಿನ್ನ ನಡವಳಿಕೆ ಮತ್ತು ಹೇಳಿಕೆಗಳಿಂದಲೇ ಚರ್ಚೆಗೆ ಆಹಾರವಾದವರು.

ಇತ್ತೀಚೆಗೆ ಟ್ರಂಪ್ ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಅತಿಯಾದ ಆಸಕ್ತಿ ತೋರಿಸುತ್ತಿರುವುದು ಅಮೆರಿಕಾದ ಇತಿಹಾಸದಲ್ಲಿ ಬದಲಾವಣೆಯ ಅಲೆ ಎಬ್ಬಿಸಿದೆ. ಟ್ರಂಪ್ ಪುಟಿನ್ ಕಡೆಗೆ ಸ್ನೇಹ ಹಸ್ತ ಚಾಚಿರುವುದು ಮತ್ತು ಪುಟಿನ್ ಕೂಡ ಟ್ರಂಪ್ ಗೆಲುವನ್ನು ಆಶಿಸುತ್ತಿರುವುದು ಚರಿತ್ರೆಯ ಪುಟಗಳು ಹೊಸ ಮಗ್ಗುಲಿನತ್ತ ಹೊರಳಿಕೊಳ್ಳುತ್ತಿರುವುದರ ಸೂಚನೆ. ಅಮೆರಿಕಾದ ಸಾಂಪ್ರದಾಯಿಕ ವೈರಿ ರಷ್ಯಾವನ್ನು ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿರುವ ವ್ಯಕ್ತಿಯೊಬ್ಬ ಹೊಗಳುವುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವೇ ಅದರೂ, ಟ್ರಂಪ್ ನೇರವಾಗಿ ತನ್ನ ರಷ್ಯಾ ಪ್ರೀತಿಯನ್ನು ಹೊರ ಹಾಕುವುದರ ಮೂಲಕ ಅಚ್ಚರಿ ಮೂದಿಸಿದ್ದಾರೆ. ಡೆಮಾಕ್ರಾಟ್ ಪಕ್ಷ ಇಸ್ಲಾಮಿಕ್ ಸ್ಟೇಟ್ ನಿಗ್ರಹಿಸಲು ವಿಫಲವಾಗಿರುವುದರಿಂದ ತಾನು ಪುಟಿನ್ ಜೊತೆಗೂಡಿ ಉಗ್ರ ನಿಗ್ರಹ ಮಾಡುತ್ತೇನೆ ಎಂಬ ಟ್ರಂಪ್ ಹೇಳಿಕೆ ಅಮೆರಿಕಾ ರಾಜಕಾರಣದಲ್ಲಿ ಬೃಹತ್ ಸಂಚಲನ ಮೂಡಿಸಿದೆ. ಆದರೆ ಟ್ರಂಪ್ ರವರ ರಷ್ಯಾ ಪ್ರೀತಿ ಮುಂದಿನ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿನ್ನಡೆಗೂ ಕಾರಣವಾದೀತು. ಅಕ್ಟೋಬರ್ ೧೯೭೬ರ ಅಧ್ಯಕ್ಷೀಯ ಚುನಾವಣೆಯ ಚರ್ಚೆಯ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಗೆರಾಲ್ಡ್ ಫೋರ್ಡ್  "ಪಶ್ಚಿಮ ಯುರೋಪಿನಲ್ಲಿ ಸೊವಿಯೆತ್ ಅಧಿಪತ್ಯ ಇಲ್ಲ" ಎಂಬ ಉದ್ದೇಶಪೂರ್ವಕವಲ್ಲದ ಹೇಳಿಕೆಯೊಂದೇ ಫೋರ್ಡ್ ಸೋಲಿಗೆ ಕಾರಣವಾಗಿ, ಡೆಮಾಕ್ರಟಿಕ್ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಅಮೆರಿಕಾದ ಅಧ್ಯಕ್ಷ ಪದವಿಗೇರುವಂತಾಯಿತು ಎಂಬ ಅಭಿಪ್ರಾಯ ಜಾಗತಿಕ ರಾಜಕೀಯ ವಲಯದಲ್ಲಿ ಇಂದಿಗೂ ಮಾಸಿಲ್ಲ.

ಎರಡನೇ ಮಹಾಯುದ್ಧದಲ್ಲಿ ಅಮೆರಿಕಾ ನೇತೃತ್ವದ ಮಿತ್ರ ಪಡೆಗಳು ಜರ್ಮನಿಯನ್ನು ಸಂಪೂರ್ಣವಾಗಿ ಸೋಲಿಸಿ, ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ವಿಶ್ವ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಿತ್ತು. ಎರಡನೇ ಮಹಾಯುದ್ಧದ ಅಂತ್ಯದವರೆಗೂ ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್ ಎಂದುಕೊಂಡು ಪಶ್ಚಿಮ ಯುರೋಪ್ ವಿಶ್ವದ ಶಕ್ತಿ ಕೇಂದ್ರ ಎಂದು ಬೀಗುತ್ತಿದ್ದವರಿಗೆ ಭ್ರಮನಿರಸನವಾಗಿತ್ತು. ಯುದ್ಧ ಬಹುಪಾಲು ಯುರೋಪಿನಲ್ಲೇ ನಡೆದಿದ್ದರಿಂದ ಯುರೋಪ್ ಯುದ್ಧದ ಗಂಭೀರ ಪರಿಣಾಮಗಳಿಂದ ಹೊರಬರಲು ಒದ್ದಾಡುವಂತಾಯಿತು.  ದ್ವಿತೀಯ ಯುದ್ಧದ ಅಂತ್ಯದೊಂದಿಗೆ ಬಂಡವಾಳಶಾಹಿ ಅಮೆರಿಕಾ ಮತ್ತು ಕಮ್ಯುನಿಸ್ಟ್ ಸೊವಿಯೆತ್ ಯೂನಿಯನ್ ಗಳು ವಿಶ್ವದ ಎರಡು ಸೂಪರ್ ಪವರ್ ಗಳಾಗಿ ಮೂಡಿಬರುವುದರೊಂದಿಗೆ ವಿಶ್ವ ಮತ್ತೊಮ್ಮೆ ಮಹಾಯುದ್ಧದ ಸಾಧ್ಯತೆಗಳನ್ನು ತೆರೆದಿಟ್ಟಿತು. ಅಮೆರಿಕಾ ಮತ್ತು ಸೊವಿಯೆತ್ ಗಳ ನಡುವಿನ ಮುಸುಕಿನ ಗುದ್ದಾಟಗಳು, ಎಲ್ಲಾ ಕ್ಷೇತ್ರಗಳಲ್ಲೂ ಅನಾರೋಗ್ಯಕರ ಪ್ರತಿಸ್ಪರ್ಧೆ, ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳ ತಿಕ್ಕಾಟ, ಹೊಸ ಹೊಸ ರಾಷ್ಟ್ರಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ತವಕ ಮತ್ತು ವಿರೋಧಿ ರಾಷ್ಟ್ರಗಳನ್ನು ಹೊಸಕಿಹಾಕುವ ಕ್ರೌರ್ಯಗಳು ಈ ಎರಡು ಸೂಪರ್ ಪವರ್ ರಾಷ್ಟ್ರಗಳ ಪ್ರಮುಖ ವಿದೇಶಾಂಗ ನೀತಿಗಳಾಗಿ ಮಾರ್ಪಾಡು ಹೊಂದಿದವು. ಈ ಎರಡೂ ಸೂಪರ್ ಪವರ್ ದೈತ್ಯರು ನೇರವಾಗಿ ಮುಖಾಮುಖಿಯಾಗದೇ ಇದ್ದರೂ ಇತರ ರಾಷ್ಟ್ರಗಳನ್ನು ಅಥವಾ ಅಂತರ್ರಾಷ್ಟ್ರೀಯ ಸಂಸ್ಥೆಗಳನ್ನೂ ದಾಳವಾಗಿ ಬಳಸಿಕೊಂಡು ಒಂದು ರೀತಿಯ ಪರೋಕ್ಷ ಶೀತಲಸಮರವನ್ನು ಸೃಷ್ಟಿಸಿಬಿಟ್ಟವು. ವಿಶ್ವದ ಯಾವುದೇ ಮೂಲೆಯ ಸಣ್ಣ ಪುಟ್ಟ ಕಲಹಗಳೂ ಈ ಸೂಪರ್ ಪವರ್ ಗಳ ಪ್ರತಿಷ್ಟೆಯ ವಿಷಯಗಳಾಗಿ ಬದಲಾದವು. ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಮೆರಿಕಾ ಸಹಾಯ ಹಸ್ತ ಚಾಚಿದ್ದರೆ, ಸೊವಿಯೆತ್ ಭಾರತದ ಬೆನ್ನ ಹಿಂದೆ ನಿಂತದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಆಮೆರಿಕಾ ಮತ್ತು ಸೊವಿಯೆತ್ ಗಳ ಈ ವೈಷಮ್ಯ ಹಲವು ದಶಕಗಳವರೆಗೆ ವಿಶ್ವ ರಾಜಕೀಯವನ್ನು 'ಶೀತಲ ಸಮರ' ಎಂಬ ಹೆಸರಿನಲ್ಲಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಇದೇ ಶೀತಲ ಸಮರ ೧೯೬೨ರ ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟಿಗೂ ಎಡೆಮಾಡಿಕೊಟ್ಟು ಎರಡೂ ದೈತ್ಯ ಶಕ್ತಿಗಳು ಎದುರು ಬದುರಾಗಿ ನಿಂತು ಅಣ್ವಸ್ತ್ರ ಪ್ರಯೋಗಕ್ಕೂ ಸಿದ್ಧವಾಗಿದ್ದವು! ಅಣ್ವಸ್ತ್ರ ಬಾಂಬುಗಳೇನಾದರೂ ಉಪಯೋಗಿಸಲ್ಪಟ್ಟಿದ್ದಲ್ಲಿ ಇಡೀ ಪ್ರಪಂಚವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದ್ದವು. ಅದೃಷ್ಟವಶಾತ್ ಕೊನೆಕ್ಷಣದ ಮಾತುಕತೆಗಳ ಫಲವಾಗಿ ಅಮೆರಿಕಾ ಮತ್ತು ಸೊವಿಯೆತ್ ಗಳೆರಡೂ ತಮ್ಮ ಬಿಗಿ ಪಟ್ಟು ಸಡಿಸಿಲಿಸಿದ್ದರಿಂದ ಆಗಬೇಕಿದ್ದ ಅನಾಹುತ ತಪ್ಪಿ ಹೋಯಿತು. ವಿಶ್ವದ ತಲೆ ಮೇಲಿದ್ದ ಶೀತಲ ಸಮರದ ಭಾರ ಕೆಳಗಿಳಿದಿದ್ದು ೧೯೯೦ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾಗಿ ಒಕ್ಕೂಟದಲ್ಲಿದ್ದ ಸದಸ್ಯರೆಲ್ಲರೂ ತಮ್ಮದೇ ಆದ ಸ್ವತಂತ್ರ ದೇಶಗಳನ್ನು ಸೃಷ್ಟಿಸಿಕೊಂಡಾಗಲೇ. ಸೊವಿಯೆತ್ ಒಕ್ಕೂಟದ ಉತ್ತರಾಧಿಕಾರಿಯಾಗಿ ಕೊನೆಗೆ ಉಳಿದುಕೊಂಡಿದ್ದು ಈಗಿನ ರಷ್ಯಾ. ಸೊವಿಯೆತ್ ಒಕ್ಕೂಟ ಒಡೆದು ಹೋದರೂ, ಉಳಿದುಕೊಂಡಿರುವ ರಷ್ಯಾ ಸೊವಿಯೆತ್ ಒಕ್ಕೂಟದಷ್ಟೂ ಪ್ರಭಾವ ಉಳಿಸಿಕೊಳ್ಳದಿದ್ದರೂ ಅಮೆರಿಕಾ ಮತ್ತು ರಷ್ಯಾ ಸಂಬಂಧಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣಿಸದೆ ಹಳೇ ದ್ವೇಷವೇ ಮುಂದುವರಿದಿದೆ. ಶೀತಲ ಸಮರದ ಅಂತ್ಯದ ನಂತರ ಅಮೆರಿಕಾ ಮತ್ತು ರಷ್ಯಾಗಳ ನಡುವಿನ ಅಂತರ ಕಡಿಮೆಯಾಗುವ ಸೂಚನೆಗಳಿದ್ದರೂ, ಇತ್ತೀಚಿನ ದಿನಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಆಕ್ರಮಣಕಾರಿ ನಿಲುವಿನಿಂದಾಗಿ ಮಗದೊಮ್ಮೆ ಅಮೆರಿಕಾ ಮತ್ತು ರಷ್ಯಾಗಳ ನಡುವೆ 'ನವ ಶೀತಲ ಸಮರ'ಕ್ಕೆ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಅಮೆರಿಕಾ ಮತ್ತು ರಷ್ಯಾಗಳ ನಡುವಿನ ಈ ಛಾಯಾ ಸಮರ ಅಮೆರಿಕಾದ ವಿದೇಶಾಂಗ ನೀತಿಗಷ್ಟೇ ಮೀಸಲಾಗದೆ, ಅಮೆರಿಕಾದ ಸಾಮಾನ್ಯ ಜನಮಾನಸದಲ್ಲೂ ಆಳವಾದ ಪ್ರಭಾವ ಬೀರಿದೆ. ಶೀತಲ ಸಮರದ ಸಮಯದಲ್ಲಿ ಅಮೆರಿಕಾ ಪ್ರಜೆಗಳ ಮನಸ್ಸಿನಲ್ಲಿ ಹಾಸುಹೊಕ್ಕಾಗಿದ್ದ ರಷ್ಯಾ ದ್ವೇಷ, ಶೀತಲ ಸಮರದ ನಂತರವೂ ಅದೇ ರೀತಿ ಮುಂದುವರಿದಿದ್ದು ಹಲವಾರು ಸಮೀಕ್ಷೆಗಳಿಂದ ರುಜುವಾತಾಗಿದೆ. ೨೦೧೩ರಲ್ಲಿ ನಡೆದ ಸಮೀಕ್ಷೆಯಲ್ಲಿ ೪೦% ಅಮೆರಿಕನ್ನರು "ರಷ್ಯಾದಿಂದ ಯಾವುದೇ ಸಮಸ್ಯೆಯಿಲ್ಲ" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ೨೦೧೪ರಲ್ಲಿ ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಂಡ ಕೆಲವೇ ದಿನಗಳ ನಂತರ ಮಾರ್ಚ್ ೨೦೧೪ರ ಸಮೀಕ್ಷೆಯ ಪ್ರಕಾರ ಅಮೆರಿಕನ್ನರ ಈ ಅಭಿಪ್ರಾಯ ೪೦% ನಿಂದ ೨೨% ಗೆ ಇಳಿದಿತ್ತು! ಕೊನೆಗೆ ರಷ್ಯಾ ಎಮ್ ಎಚ್ ೧೭ ಎಂಬ ಮಲೇಷಿಯನ್ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಕೇವಲ ೧೫% ಅಮೆರಿಕನ್ನರು "ರಷ್ಯಾದಿಂದ ಯಾವುದೇ ಸಮಸ್ಯೆಯಿಲ್ಲ" ಎಂಬ ಅಭಿಪ್ರಾಯ ಉಳಿಸಿಕೊಂಡಿದ್ದರು! ಉಕ್ರೇನ್ ಬಿಕ್ಕಟಿಗೆ ಮೊದಲು ೩೬% ಅಮೆರಿಕನ್ನರು "ರಷ್ಯಾದಿಂದ ಸಮಸ್ಯೆಯಿರುವುದು ನಿಜವೇ ಆದರೂ ಅದನ್ನು ಅಮೆರಿಕಾದ ಶತ್ರುವಾಗಿ ಪರಿಗಣಿಸುವಂತಿಲ್ಲ"ಎಂದು ಅಭಿಪ್ರಾಯ ಪಟ್ಟಿದ್ದರೆ, ೨೦೧೪ರಲ್ಲಿ ಈ ಸಂಖ್ಯೆ ೪೯% ಗೆ ಏರಿತ್ತು. ೨೦೧೩ರಲ್ಲಿ ಕೇವಲ ೧೮% ಅಮೆರಿಕನ್ನರು "ರಷ್ಯಾ ಅಮೆರಿಕಾದ ನೇರ ಶತ್ರು" ಎಂದಿದ್ದರೆ, ೨೦೧೪ರಲ್ಲಿ ಈ ಸಂಖ್ಯೆ ೨೬%ಗೆ ಏರಿದ್ದು ಗಮನಾರ್ಹ. ಅಮೆರಿಕನ್ನರ ರಷ್ಯಾ ದ್ವೇಷ ಈ ಅಂಕಿ ಅಂಶಗಳಿಂದ ಸ್ಪಷ್ಟವಾಗಿ ರುಜುವಾತಾಗುತ್ತದೆ. ಈ ಬೆಳವಣಿಗೆ ಮಾತು ಮಾತಿಗೂ ರಷ್ಯಾ ಮತ್ತು ಪುಟಿನ್ ಸಮರ್ಥಿಸಿಕೊಳ್ಳುತ್ತಿರುವ ಟ್ರಂಪ್ ಪಾಲಿಗೆ ಭಾರಿ ಹಿನ್ನಡೆಯೇ ಸರಿ.

 ಅಮೆರಿಕನ್ನರ ರಷ್ಯಾ ದ್ವೇಷ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲೂ ಪ್ರಮುಖ ಪಾತ್ರವಹಿಸುವುದರಲ್ಲಿ ಎರಡು ಮಾತಿಲ್ಲ. ಅಮೆರಿಕನ್ ಮತದಾರನ ರಷ್ಯಾ ದ್ವೇಷದ ಬಗ್ಗೆ ತಿಳಿದಿದ್ದೂ ಟ್ರಂಪ್ ತನ್ನ ಪ್ರಚಾರ ಭಾಷಣಗಳಲ್ಲಿ ರಷ್ಯಾ ಪರವಹಿಸಿಕೊಳ್ಳುತ್ತಿರುವುದು ರಾಜಕೀಯ ವಿಶ್ಲೇಷಕರ ತಲೆ ಕೆಡಿಸಿದೆ. ಅದರಲ್ಲೂ ಇತ್ತೀಚೆಗೆ ರಷ್ಯನ್ ಗುಪ್ತಚರ ದಳಗಳು ಟ್ರಂಪ್ ಗೆಲುವಿಗೋಸ್ಕರ ಅಮೆರಿಕಾದಲ್ಲಿ ಕಾರ್ಯನಿರತವಾಗಿದೆ ಎಂಬ ಸುದ್ಧಿ ಅಮೆರಿಕನ್ ಮತದಾರನ ಮನಸ್ಸು ಕೆಡಿಸಿದೆ. ಈ ಗಂಭೀರ ಆರೋಪವನ್ನು ಪುಟಿನ್ ಸುಳ್ಳು ಸುದ್ಧಿ ಎಂದು ನಿರಾಕರಿಸಿದ್ದರೂ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಈ ಸಮಯದಲ್ಲಿ ಇಂಥ ಸುಳ್ಳು ಸುದ್ಧಿಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಮರೆಯಲಾಗದು. ೧೯೭೬ರಲ್ಲಿ ಗೆರಾಲ್ಡ್ ಫೋರ್ಡ್ ಬಾಯಿ ತಪ್ಪಿ ಆಡಿದ  ಮಾತನ್ನೇ ರಷ್ಯಾ ಪರವಾದ ಹೇಳಿಕೆ ಎಂದು ಪರಿಗಣಿಸಿ ಫೋರ್ಡ್ ಸೋಲೊಪ್ಪಿಕೊಳ್ಳುವಂತಾಗಿತ್ತು. ಇಂದು ಟ್ರಂಪ್ ನೇರ ಹೇಳಿಕೆಗಳ ಮೂಲಕ ರಷ್ಯಾವನ್ನು ಸಮರ್ಥಿಸಿಕೊಂಡು, ತಮ್ಮ ಸೋಲನ್ನು ತಾವೇ ಆಹ್ವಾನಿಸುತ್ತಿದ್ದಾರೋ ಅಥವಾ ಫೋರ್ಡ್ ಪ್ರಕರಣಕ್ಕೆ ವಿರುದ್ಧವಾಗಿ ಅಚ್ಚರಿಯ ಗೆಲುವ ಸಾಧಿಸಿ ಇತಿಹಾಸ ಸೃಷ್ಟಿಸುತ್ತಾರೋ ಎಂಬುದನ್ನು ನವೆಂಬರ್  ಚುನಾವಣೆ ನಿರ್ಧರಿಸಲಿದೆ.

 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 10 August 2016)