ಇಸ್ಲಾಮಿಕ್ ಸ್ಟೇಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇಸ್ಲಾಮಿಕ್ ಸ್ಟೇಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 6, 2017

ತಾರ್ಕಿಕ ಅಂತ್ಯದ ನಿರೀಕ್ಷೆಯಲ್ಲಿ ಮೊಸುಲ್ ಮಹಾಸಮರ

ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 
-  ಕೀರ್ತಿರಾಜ್

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ, ಬರಾಕ್ ಒಬಾಮ ಆಡಳಿತ  ಮಧ್ಯಪ್ರಾಚ್ಯದಲ್ಲೊಂದು ರಾಜಕೀಯ ಪ್ರಯೋಗಕ್ಕೆ ಮುಂದಾಗಿತ್ತು. ಇರಾಕ್ ಸರಕಾರ ಸುನ್ನಿ ಹೋರಾಟಗಾರರು ಮತ್ತು  ಕರ್ದಿಶ್ ಗುಂಪುಗಳು ಸಂಘಟಿತವಾಗಿ ಮೊಸುಲ್ ನಲ್ಲಿ ನೆಲೆಯೂರಿದ್ದ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಂಘಟಿತ ಹೋರಾಟವೊಂದು ರೂಪಿಸಿದ್ದರು. ಈ ಮೈತ್ರಿ ಸೇನೆ ಉಗ್ರರ ವಿರುದ್ಧ ಮೊಸುಲ್ ನಲ್ಲಿ ಮೊಳಗಿದ ಮರಣ ಮೃದಂಗಕ್ಕೆ ಅಮೆರಿಕಾ ಅಧ್ಯಕ್ಷ ಒಬಾಮ ಕೂಡ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಅತ್ಯುತ್ಸಾಹದಿಂದ ಮೈತ್ರಿಪಡೆಗಳು ಮೊಸುಲ್ ನತ್ತ ನುಗ್ಗಿದರೂ, ಜಾಗತಿಕ ರಜಕೀಯದ ವಿಶ್ಲೇಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊಸುಲ್ ಯುದ್ಧದಲ್ಲಿ ಇರಾಕಿ ಮೈತ್ರಿ ಸೇನೆ ನಿರೀಕ್ಷೆ ಮೀರಿ ಉಗ್ರರನ್ನು ಬಗ್ಗುಬಡಿದು ಮುಂದೆ ಸಾಗುತ್ತಿದೆ. ಇರಾಕಿ ಸೇನೆಯ ಮೂಲಗಳು ತಿಳಿಸಿದ ಪ್ರಕಾರ, ಮೊಸುಲ್ ನ ಹಲವು ಹಳ್ಳಿಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸೋಲಿಸಿ ಇರಾಕಿ ಪಡೆಗಳು ನಿಯಂತ್ರಣ ಸಾಧಿಸಿವೆ. ಒಂದು ರೀತಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಆಶಾದಾಯಕವಾಗಿ ಮುಂದುವರಿಯುತ್ತಿದೆ ಮೊಸುಲ್ ಉಗ್ರ ನಿಗ್ರಹ!
Image may contain: 2 people, text
ಇರಾಕಿನ ಪ್ರಧಾನಿ ಹೈದರ್-ಅಲ್-ಅಬಾದಿ ಡಿಸೆಂಬರ್ ಮೊದಲ ವಾರದಲ್ಲಿ ನೀಡಿರುವ ಹೇಳಿಕೆಯ ಪ್ರಕಾರ ಇರಾಕ್ ಸೇನೆಯ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಅಬಾದಿ ಮಾತುಗಳಲ್ಲೇ ಹೇಳುವುದಾದರೆ, "ಇಸ್ಲಾಮಿಕ್ ಸ್ಟೇಟ್ ಹಂತ ಹಂತವಾಗಿ ಅವನತಿಯತ್ತ ಸಾಗುತ್ತಿದೆ ಮತ್ತು ಧೃಡವಾಗಿ ನಿಂತು ಹೋರಾಡುವ ಸಾಮರ್ಥ್ಯ ಉಗ್ರರಲ್ಲಿಲ್ಲ". ಇರಾಕ್ ಮತ್ತಿತರ ಗುಂಪುಗಳು ಉಗ್ರದಮನಕ್ಕೆ ಹೊರಟಾಗ, ಇಸ್ಲಾಮಿಕ್ ಸ್ಟೇಟ್ ಇರಾಕ್ ಸೇನೆಗೆ ಬಲವಾದ ಪ್ರತ್ಯುತ್ತರ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿಶ್ವಕ್ಕೆ ಇರಾಕ್ ಸೇನೆಯ ಕುರಿತಾಗಿ ಯಾರಿಗೂ ಹೇಳಿಕೊಳ್ಳುವಂಥ ವಿಶ್ವಾಸವಿರಲಿಲ್ಲ. ಆದರೆ ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 

ಯುದ್ಧದ ಆರಂಭದೊಂದಿಗೆ, ಇಸ್ಲಾಮಿಕ್ ಸ್ಟೇಟ್ ಒಂದರ ಮೇಲೊಂದರಂತೆ ಹಿನ್ನಡೆಗಳನ್ನೇ ಅನುಭವಿಸಿತ್ತು. ಎರಡು ಮಿಲಿಯನ್ ಜನಸಂಖ್ಯೆಯಿರುವ ಮೊಸುಲ್ ನಗರವನ್ನು, ಹತ್ತು ಸಾವಿರಕ್ಕೂ ಕಡಿಮೆಯಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಮೈತ್ರಿ ಸೇನೆಯ ಎದುರು ಈ ಸಂಖ್ಯೆ ನಿಜಕ್ಕೂ ಏನೇನೂ ಆಗಿರಲಿಲ್ಲ. ಮೈತ್ರಿಕೂಟ ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲದೇ ತಂತ್ರಜ್ಞಾನದ ವಿಚಾರದಲ್ಲೂ ಉಗ್ರರಿಗಿಂತ ಮುಂದಿತ್ತು. ಮೈತ್ರಿಕೂಟದ ಹೊಡೆತಗಳಿಗೆ ಪ್ರತ್ಯುತ್ತರ ನೀಡಲಾಗದೆ ಉಗ್ರರು ಕಂಗೆಟ್ಟುಹೋಗಿದ್ದರು. ಯುದ್ಧತಂತ್ರದ ದೃಷ್ಟಿಯಿಂದ ಇಸ್ಲಾಮಿಕ್ ಸ್ಟೇಟ್ ಇಟ್ಟ ಒಂದೇ ಒಂದು ಬುದ್ಧಿವಂತಿಕೆಯ ಹೆಜ್ಜೆಯೆಂದರೆ, ಹೆಚ್ಚಿನ ಕಡೆಗಳಲ್ಲಿ ಸೇನೆಯನ್ನು ಹಿಂದೆಗೆದುಕೊಂಡು, ಪೂರ್ವ ಮೊಸುಲ್ ನತ್ತ ಸಾಗಿ ಅಲ್ಲಿ ತಮ್ಮ ಹಿಡಿತ ಬಲಪಡಿಸಿಕೊಂಡಿದ್ದು. ಈ ರೀತಿ ತಾವು ದುರ್ಬಲವಾಗಿದ್ದ ಪ್ರದೇಶಗಳಲ್ಲಿ ಮೈತ್ರಿಸೇನೆಗೆ ಎದುರಾಗಿ ನಿಲ್ಲದೆ, ಪೂರ್ವ ಮೊಸುಲ್ ನಲ್ಲಿ ಸನ್ನದ್ಧರಾಗಿ ವೈರಿಗೆ ಹೊಡೆತ ನೀಡುವ ಯೋಜನೆಯೊಂದು ಇಸ್ಲಾಮಿಕ್ ಸ್ಟೇಟ್ ತಲೆಯಲ್ಲಿ ಮೂಡಿರಬಹುದು. ಈವರೆಗೆ ಇರಾಕ್ ಸೇನೆ ದಾಳಿ ನಡೆಸಿದ ಪ್ರದೇಶಗಳಲ್ಲಿ ಉಗ್ರ ಪ್ರತಿರೋಧ ಕಾಣದೇ ಇದ್ದರೂ, ಪೂರ್ವ ಮೊಸುಲ್ ನತ್ತ ಸಾಗುತ್ತಿದ್ದಂತೆ ಇರಾಕ್ ಸೇನೆಯ ಹಾದಿ ಕಠಿಣವಾಗುವುದು ನಿಶ್ಚಿತ. ಪೂರ್ವ ಮೊಸುಲ್ ನ ಆಯಕಟ್ಟಿನ ಪ್ರದೇಶಗಳೆಲ್ಲವನ್ನೂ ಸುರಂಗ ವ್ಯವಸ್ಥೆಯ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡಲಾಗಿದೆ. ಈ ಮೂಲಕ ದಾಳಿ ಮಾಡುವ ಸೇನೆಗೆ ಸಾಧ್ಯವಾದಷ್ಟು ಹೆಚ್ಚು ಮಟ್ಟದ ಹಾನಿಯುಂಟಾಗುವಂತೆ ಮಾಡಲಾಗಿದೆ. ಸದ್ಯಕ್ಕೆ ಮೊಸುಲ್ ನಗರದ ಪೂರ್ವ ಭಾಗದಲ್ಲಿ ಇಂಥದ್ದೊಂದು ಸಮರತಂತ್ರ ರೂಪಿಸಿದೆ ಇಸ್ಲಾಮಿಕ್ ಸ್ಟೇಟ್!

ಇರಾಕ್ ಸೇನೆ, ಸುನ್ನಿ ಗುಂಪು ಮತ್ತು ಕರ್ದಿಶ್ ಹೋರಾಟಗಾರರು ಮತ್ತು ಅಮೆರಿಕಾದ ಮಿಲಿಟರಿ ನೆರವುಗಳ ಬಲ ಪಡೆದುಕೊಂಡಿರುವ ಮೈತ್ರಿ ಸೇನೆ ಇಸ್ಲಾಮಿಕ್ ಸ್ಟೇಟ್ ಗಿಂಥ ಎಷ್ಟೋ ಪಾಲು ಬಲಿಷ್ಟ. ಈ ಮೈತ್ರಿ ಸೇನೆ ಆಧುನಿಕ ಯುದ್ಧೋಪಕರಣಗಳನ್ನು ಬಳಸುತ್ತಿರುವುದು ಮಾತ್ರವಲ್ಲ ಸೇನೆಗೆ ಅವಶ್ಯವಾದ ವೈದ್ಯಕೀಯ ಸೌಲಭ್ಯ, ಶಸ್ತ್ರಾಸ್ತ್ರಗಳು ಮತ್ತಿನ್ನಿತರ ಯುದ್ಧ ಸಮಯದ ಸಾಗಾಟಗಳನ್ನು ಮಾಡಲು ಸಮರ್ಥ ವ್ಯವಸ್ಥೆ ಮೈತ್ರಿ ಸೇನೆಯ ಬಳಿಯಲ್ಲಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಮೊಸುಲ್ ನ ಭೌಗೋಳಿಕ ವಿನ್ಯಾಸದ ಸ್ಪಷ್ಟ ಪರಿಚಯವಿದ್ದರೂ, ಮೈತ್ರಿ ಪಡೆಯಲ್ಲಿರುವಷ್ಟು ಸನ್ನದ್ಧ ಯುದ್ಧ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉಗ್ರರಲ್ಲಿಲ್ಲ. ಪ್ರಸಕ್ತ ಸ್ಥಿತಿಗತಿಗಳನ್ನು ಗಮನಿಸಿದಾಗ ಮೈತ್ರಿ ಪಡೆಗಳು ಉಗ್ರರಿಗಿಂತ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಸ್ಪಷ್ಟ. ಹೀಗಿದ್ದರೂ, ಮೈತ್ರಿಸೇನೆ ಮೈಮರೆತರೆ ಇಸ್ಲಾಮಿಕ್ ಸ್ಟೇಟ್ ಯಾವುದೇ ಕ್ಷಣದಲ್ಲೂ ತಿರುಗಿಬೀಳಬಹುದು. ಯುದ್ಧವನ್ನು ಸಾಧ್ಯವಾದಷ್ಟು ಶೀಘ್ರವಾಗಿ ಮುಗಿಸುವುದು ಮೈತ್ರಿಸೇನೆಗೆ ಎಲ್ಲಾ ರೀತಿಯಿಂದಲೂ ಅನುಕೂಲಕರ. ಯುದ್ಧ ಇನ್ನಷ್ಟು ತಿಂಗಳುಗಳ ಕಾಲ ಮುಂದುವರಿದಲ್ಲಿ ಉಗ್ರರಿಗೆ ಸಮರತಾಂತ್ರಿಕ ಅನುಕೂಲತೆಯೊಂದು ಸೃಷ್ಟಿಯಾಗಬಹುದು!

ಈಗಾಗಲೆ ಹಲವಾರು ನೆಲೆಗಳನ್ನು ಕಳೆದುಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಜಯಗಳಿಸುವುದು ಕಷ್ಟಸಾಧ್ಯವೇ ಆದರೂ, ಯುದ್ಧದ ಫಲಿತಾಂಶವನ್ನು ಸಾಧ್ಯವಾದಷ್ಟು ಮುಂದೂಡುವ ಮತ್ತು ಅಪಾರ ಪ್ರಮಾಣದ ಪ್ರಾಣಹಾನಿಯಾಗುವಂತೆ ಮಾಡುವ ಎಲ್ಲಾ ಅವಕಾಶಗಳೂ ಉಗ್ರರಿಗಿವೆ. ಇಸ್ಲಾಮಿಕ್ ಸ್ಟೇಟ್ ನ ಉಗ್ರರಿಗೆ ಬೇಕಾಗಿರುವುದೂ ಇದೇ! ಈ ಮೂಲಕ ಇರಾಕ್ ರಕ್ಷಣಾ ದಳದ ತಾಳ್ಮೆ ಪರೀಕ್ಷಿಸುವುದು ಮತ್ತು ಯುದ್ಧ 2017ರಲ್ಲೂ ಮುಂದುವರಿದಾಗ ಕರ್ದಿಶ್, ಸುನ್ನಿ ಮತ್ತು ಇರಾಕಿ ಪಡೆಗಳ ನಡುವಿನ ಮೈತ್ರಿ ಮುರಿದು ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿದೆ ಇಸ್ಲಾಮಿಕ್ ಸ್ಟೇಟ್. ಇದಷ್ಟೇ ಅಲ್ಲದೇ ಯುದ್ಧ ಬಹಳ ಕಾಲದವರೆಗೆ ಮುಂದುವರಿದಲ್ಲಿ ಅಮೆರಿಕಾದ ನಿಲುವುಗಳ ಬದಲಾವಣೆಯೂ ಸಾಧ್ಯವಿದೆ. ಈ ಸಮಯದ ಉಪಯೋಗ ಪಡೆದುಕೊಂಡು ಹೊಸ ಉಗ್ರರ ಸೇರ್ಪಡೆಯನ್ನು ಮಾಡಿಕೊಳ್ಳುವುದಲ್ಲದೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಹುನ್ನಾರ ಇಸ್ಲಾಮಿಕ್ ಸ್ಟೇಟ್ ಉಗ್ರರದ್ದು! ಈ ಎಲ್ಲಾ ರೀತಿಯಿಂದಲೂ ಯುದ್ಧ ಇನ್ನೊಂದಷ್ಟು ಸಮಯ ಮುಂದುವರಿಸಿ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುವುದು ಇಸ್ಲಾಮಿಕ್ ಸ್ಟೇಟ್ ಉಗ್ರರ ಮಾಸ್ಟರ್ ಪ್ಲಾನ್!

ಈ ವರ್ಷದ ಕೊನೆಯಲ್ಲಿ ಬಹುನಿರೀಕ್ಷೆಯೊಂದಿಗೆ ಆರಂಭವಾದ ಮೊಸುಲ್ ಯುದ್ಧ, ಮುಂದಿನ ವರ್ಷದಲ್ಲೂ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಮೊಸುಲ್ ಯುದ್ಧದಲ್ಲಿ ಸಮಯ ಎಲ್ಲರಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವುದು ಮತ್ತು ಸಮಯದ ಆಟ ಫಲಿತಾಂಶವನ್ನು ಬಹುಮಟ್ಟಿಗೆ ನಿರ್ಧರಿಸಲಿದೆ. ಅಮೆರಿಕಾದಲ್ಲಿ ಟ್ರಂಪ್ ಮನೋಭಾವವನ್ನೂ ಗಮನಿಸಿದಲ್ಲಿ, ಅಮೆರಿಕಾ ಬೆಂಬಲ ಇನ್ನೆಷ್ಟು ಸಮಯವೋ ಎಂಬಂತಾಗಿದೆ. ಶತಾಯಗತಾಯ ಅಮೆರಿಕಾ ಬೆಂಬಲವಿರುವ ಈ ಕಾಲಘಟ್ಟದಲ್ಲೇ ಯುದ್ಧಕ್ಕೊಂದು ತಾರ್ಕಿಕ ಅಂತ್ಯ ನೀಡುವುದು ಅನಿವಾರ್ಯ. ಈಗಾಗಲೇ ಪಶ್ಚಿಮ ಮೊಸುಲ್ ನಲ್ಲಿ ಉಗ್ರರನ್ನು ಬಗ್ಗುಬಡಿದು ಉತ್ಸಾಹದಿಂದ ಪೂರ್ವ ಮೊಸುಲ್ ನತ್ತ ಮುನ್ನುಗ್ಗುತ್ತಿರುವ ಮೈತ್ರಿ ಸೇನೆ ಅಲ್ಪಾವಧಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಭಾವಕ್ಕೆ ಅಂತ್ಯ ಹಾಡಿದಲ್ಲಿ ಉಗ್ರನಿಗ್ರಹದ ಇತಿಹಾಸದಲ್ಲಿ ನೆನಪಿಡುವ ಘಟನೆಯಾಗಿ ಮೊಸುಲ್ ಯುದ್ಧ ಚಿರಸ್ಥಾಯಿಯಾಗುತ್ತದೆ.

(This article was published in Vishwavani Newsapaper on 29 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶನಿವಾರ, ನವೆಂಬರ್ 19, 2016

ಮೊಸುಲ್ ನಲ್ಲಿ ಮೊಳಗಿದೆ ಮರಣ ಮೃದಂಗ

ಅಮೆರಿಕಾ, ಇರಾಕ್, ಟರ್ಕಿ, ಕರ್ದಿಶ್, ಶಿಯಾ ಪಡೆಗಳು, ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಇನ್ನಿತರ ಹಲವು ಶಕ್ತಿಗಳ ಬಲಪ್ರದರ್ಶನಕ್ಕಿರುವ ಕುಸ್ತಿಯ ಕಣದಂತಾಗಿದೆ ಸದ್ಯದ ಮೊಸುಲ್ ಪರಿಸ್ಥಿತಿ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಕೊನೆಗೂ ಇರಾಕ್ ಸರಕಾರ ಮತ್ತು ಕರ್ದಿಶ್ ಗುಂಪುಗಳು ಮೊಸುಲ್ ಅನ್ನು ಇಸ್ಲಾಮಿಕ್ ಸ್ಟೇಟ್ ಕಪಿಮುಷ್ಟಿಯಿಂದ ಬಿಡಿಸುವತ್ತ ದಿಟ್ಟ ಹೆಜ್ಜೆಯಿಟ್ಟಿವೆ.  ಅಮೆರಿಕಾ ಕೂಡ ಈ ಪ್ರಯತ್ನಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದರಿಂದ ಈ ಬಾರಿ ಮೊಸುಲ್ ನಲ್ಲಿ ಭಾರಿ ಪ್ರಮಾಣದ ಸಂಘರ್ಷ ನಿಶ್ಚಿತ. ಈಗಾಗಲೇ ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಮೊಸುಲ್ ರಣರಂಗದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳಿಲ್ಲದೇ ಹೋದರೂ, ಯುದ್ಧದ ಫಲಿತಾಂಶವನ್ನು ಆದಷ್ಟು ಮುಂದೂಡುವ ಮತ್ತು ಅಪಾರ ಪ್ರಮಾಣದ ರಕ್ತಪಾತವಾಗುವಂತೆ ಮಾಡುವ ಎಲ್ಲಾ ಅವಕಾಶಗಳೂ ಇವೆ.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಇಸ್ಲಾಮಿಕ್ ಸ್ಟೇಟ್ ಇರಾಕ್ ನಲ್ಲಿ ಉಳಿಸಿಕೊಂಡಿರುವ ಕೊನೆಯ ನೆಲೆ ಮೊಸುಲ್. ಅಮೆರಿಕಾ ಬೆಂಬಲಿತ ಇರಾಕಿ ಮತ್ತು ಕರ್ದಿಶ್ ಪಡೆಗಳು ಮೊಸುಲ್ ವಶಪಡಿಸಿಕೊಳ್ಳಲು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಇಸ್ಲಾಮಿಕ್ ಸ್ಟೇಟ್ ಗೆ ಮೊಸುಲ್ ನಲ್ಲಿ ಯುದ್ಧಾನುಕೂಲಗಳು  ಕಡಿಮೆ ಇರುವುದರಿಂದ ಹತ್ತಿರದ ಸಿರಿಯಾ ಅಥವಾ ಜಝೀರಾ ಮರುಭೂಮಿ ಪ್ರದೇಶಕ್ಕೆ ಹಿಂದೆ ಸರಿದು, ಸಮಯ ನೋಡಿಕೊಂಡು ಪ್ರತಿ ದಾಳಿ ನಡೆಸುವ ಅವಕಾಶಗಳು ಇಸ್ಲಾಮಿಕ್ ಸ್ಟೇಟ್ ಗೆ ಮುಕ್ತವಾಗಿವೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಜಝೀರಾ ಮರುಭೂಮಿ ಮತ್ತಿತರ ಪ್ರದೇಶಗಳಲ್ಲಿ ತಕ್ಕಮಟ್ಟಿಗೆ ಸಮರತಾಂತ್ರಿಕ ಅನುಕೂಲಗಳಿರುವುದರಿಂದ ಈ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನೊಂದೆಡೆ ಮೊಸುಲ್ ನ ನಾಗರಿಕರನ್ನೇ ತನ್ನ ಗುರಾಣಿಗಳನ್ನಾಗಿ ಬಳಸಿಕೊಂಡು ಇರಾಕಿ ಮತ್ತು ಕರ್ದಿಶ್ ಪಡೆಗಳನ್ನು ಎದುರಿಸುವ ಪ್ರಯತ್ನಗಳನ್ನೂ ಮಾಡಬಹುದು. ಸದ್ಯದ ಮಾಹಿತಿಗಳ ಪ್ರಕಾರ ಈಗಾಗಲೇ ಉಗ್ರರು ಈ ತಂತ್ರವನ್ನು ಮೊಸುಲ್ ನ ವಿವಿಧ ಭಾಗಗಳಲ್ಲಿ ಕಾರ್ಯರೂಪಕ್ಕಿಳಿಸಿದ್ದಾರೆ!

ಇರಾಕಿನ ಪ್ರಧಾನ ಮಂತ್ರಿ ಹೈದರ್ ಅಲ್ ಅಬಾದಿ ಮೊಸುಲ್ ಕಾರ್ಯಾಚರಣೆಯಲ್ಲಿ ಇರಾಕ್ ಸೈನ್ಯ ಮತ್ತು ರಾಷ್ಟ್ರೀಯ ಪೊಲೀಸ್ ಪಡೆಗಳು ಮಾತ್ರ ಭಾಗವಹಿಸುತ್ತವೆ ಎಂದಿದ್ದಾರಾದರೂ, ಕರ್ದಿಶ್ ಪಡೆಗಳು ಈಗಾಗಲೇ ಮೊಸುಲ್ ನ ಕರ್ದಿಶ್ ಪ್ರದೇಶಗಳ ಮೇಲೇ ದಾಳಿ ನಡೆಸುವುದು ಖಚಿತ. ಇದಷ್ಟೇ ಅಲ್ಲದೇ ಇರಾನ್ ಬೆಂಬಲಿನ ಶಿಯಾ ಹೋರಾಟಗಾರರು ಕೂಡ ಮೊಸುಲ್ ರಣರಂಗಕ್ಕೆ ಧುಮುಕಿದ್ದಾರೆ. ಈ ಮೂಲಕ ಶಿಯಾ-ಸುನ್ನಿ ಸಂಘರ್ಷಗಳೂ ಮಿತಿಮೀರುವ ಎಲ್ಲ ಸಾಧ್ಯತೆಗಳನ್ನು ಮೊಸುಲ್ ತೆರೆದಿಟ್ಟಿದೆ. ಈ ಮಧ್ಯೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಮೊಸುಲ್ ನಲ್ಲಿ ಹಸ್ತಕ್ಷೇಪ ಮಾಡಲು ಉತ್ಸುಕರಾಗಿರುವುದು ಟರ್ಕಿ ಮತ್ತು ಇರಾಕ್ ಮಧ್ಯೆ ಛಾಯಾಸಮಾರಕ್ಕೆ ಎಡೆ ಮಾಡಿಕೊಟ್ಟಿದೆ. ಎರ್ಡೊಗನ್ ಮೊಸುಲ್ ನಲ್ಲಿರುವ ಸುನ್ನಿ ಟರ್ಕರಿಗೆ ನೆರವು ನೀಡುವ ನೆಪದಲ್ಲಿ ಯಾವ ಕ್ಷಣದಲ್ಲಾದರೂ ಮೊಸುಲ್ ನಲ್ಲಿ ಪೂರ್ಣಪ್ರಮಾಣದ ಕಾರ್ಯಾಚರಣೆ ಆರಂಭಿಸಬಹುದು. ಈಗಾಗಲೇ ಮೊಸುಲ್ ಸನಿಹದಲ್ಲಿ ಬೀಡು ಬಿಟ್ಟಿರುವ ಟರ್ಕಿ ಸೇನೆ ಇರಾಕ್ ಮತ್ತು ಟರ್ಕಿ ಸೇನೆಗಳ ನೇರ ಸಂಘರ್ಷಕ್ಕೂ ದಾರಿ ಕೊಡಬಹುದು. ಅಮೆರಿಕಾ, ಇರಾಕ್, ಟರ್ಕಿ, ಕರ್ದಿಶ್, ಶಿಯಾ ಪಡೆಗಳು, ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಇನ್ನಿತರ ಹಲವು ಶಕ್ತಿಗಳ ಬಲಪ್ರದರ್ಶನಕ್ಕಿರುವ ಕುಸ್ತಿಯ ಕಣದಂತಾಗಿದೆ ಸದ್ಯದ ಮೊಸುಲ್ ಪರಿಸ್ಥಿತಿ.

ಕರ್ದಿಶ್ ಹೋರಾಟಗಾರರು ಮತ್ತು ಇರಾಕಿನ ಸರಕಾರಗಳೆರಡೂ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕರಿಸುತ್ತಿದ್ದರೂ ತೆರೆಮರೆಯಲ್ಲಿ ಅವರದ್ದೇ ಆದ ಪ್ರತ್ಯೇಕ ಉದ್ದೇಶಗಳಿವೆ. ಕರ್ದಿಶ್ ಸ್ವಾಧೀನದಲ್ಲಿರುವ ಕಿರ್ಕುಕ್ ಮತ್ತಿತರ ಪ್ರದೇಶಗಳ ವಿಚಾರದಲ್ಲಿ ಇರಾಕ್ ಜೊತೆ ಕರ್ದಿಶ್ ನಾಯಕ ಮಸೂದ್ ಬರ್ಝಾನಿಗೆ ಬಲವಾದ ಭಿನ್ನಾಭಿಪ್ರಾಯಗಳಿವೆ. ಮೊಸುಲ್ ಯುದ್ಧ ಅಂತ್ಯದೊಂದಿಗೆ ಕರ್ದಿಶ್ ಸಮುದಾಯ ಇರಾಕ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. ಕರ್ದಿಶ್ ಪ್ರಾಬಲ್ಯದ ನೈನಿವಾದಂಥ ಪ್ರದೇಶಗಳನ್ನು ಕರ್ದಿಸ್ತಾನದೊಂದಿಗೆ ವಿಲೀನಗೊಳಿಸುವುದೋ ಅಥವಾ ಇರಾಕ್ ಸಂಯುಕ್ತ ಪದ್ಧತಿಯಲ್ಲಿ ಸ್ವಾಯತ್ತ ಪ್ರದೇಶವನ್ನಾಗಿಸುವುದೋ ಎಂಬ ಗೊಂದಲಗಳು ಇನ್ನಷ್ಟು ಸಂಕೀರ್ಣವಾಗಿವೆ.

ಯುದ್ಧ ನಂತರದಲ್ಲಿ ಮೊಸುಲ್ ನ ಪುನರ್ನಿರ್ಮಾಣದ ಕುರಿತಾಗಿಯೂ ಯುದ್ಧದ ಪ್ರೇರಕ ಶಕ್ತಿ ಅಮೆರಿಕಾ ಯಾವುದೇ ಸ್ಪಷ್ಟ ನಿಲುವು ಹೊಂದಿಲ್ಲ. ಯುದ್ಧ ಸಂಧರ್ಭದಲ್ಲಿ ಮೊಸುಲ್ ನಾಗರಿಕರಿಗೆ ಆಶ್ರಯ ಒದಗಿಸಲು ಬರಾಕ್ ಒಬಾಮ ಕೆಲವೊಂದು ಕ್ರಮ ಕೈಗೊಂಡಿದ್ದರೂ, ದೀರ್ಘಕಾಲೀನ ಸಮಸ್ಯೆಗಳನ್ನೆದುರಿಸುವ ಯಾವುದೇ ಕಾರ್ಯಕ್ರಮ ಅಮೆರಿಕಾ ಬತ್ತಳಿಕೆಯಲ್ಲಿಲ್ಲ. ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಸದ್ಯದ ತುರ್ತು ಪರಿಸ್ಥಿತಿಯಿಂದಾಗಿ ಇರಾಕ್ ಕೂಡ ಆರ್ಥಿಕವಾಗಿ ದುರ್ಬಲವಾಗಿದೆ. ಇವೆಲ್ಲವನ್ನು ಅವಲೋಕಿಸಿದಾಗ ಯುದ್ಧದ ನಂತರ ಮೊಸುಲ್ ಕೂಡ ಫಲ್ಲುಜಾಹ್ ಮತ್ತು ರಾಮದಿ ಹಾದಿಯಲ್ಲಿಯೇ ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ ಎಲ್ಲವೂ ಸರಿಹೋಗುವುದಿಲ್ಲ ಎನ್ನುವುದಂತೂ ಸತ್ಯ. ಹಿಂದಿನ ಇರಾಕಿ ಸರಕಾರಗಳ ಆಡಳಿತ ನೀತಿಯೇ ಇರಾಕಿನ ಕೆಲ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಗೆ ಅವಕಾಶ ಸೃಷ್ಟಿಸಿತ್ತು. 2006-09ರಲ್ಲಿ ಅಲ್ ಖೈದಾ ಸೋಲಿನೊಂದಿಗೇ ಇರಾಕಿನಲ್ಲಿ ಹುಟ್ಟಿಕೊಂಡ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್. ಇರಾಕ್ ಆಡಳಿತ ನೀತಿಯಲ್ಲಿ ಸುಧಾರಣೆಗಳಾಗದೇ ಹೋದಲ್ಲಿ ಮೊಸುಲ್ ಯುದ್ಧದಲ್ಲೂ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ ಇನ್ನಿತರ ಉಗ್ರ ಗುಂಪುಗಳು ರಕ್ತ ಬೀಜಾಸುರರಂತೆ ಹುಟ್ಟಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.

ಕೆಲ ಅಂತರ್ರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರ ಪ್ರಕಾರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಒಬಾಮ ಆಡಳಿತ ಮಧ್ಯ ಪ್ರಾಚ್ಯದಲ್ಲಿ ಒಂದು ಪ್ರಯೋಗ ನಡೆಸುವ ತರಾತುರಿಯಲ್ಲಿದೆ. ಹಾಗಾಗಿಯೇ ಮೊಸುಲ್ ಯುದ್ಧದ ಸಮಯದಲ್ಲಾಗುವ ಅನಾಹುತಗಳು, ಯುದ್ದದ ನಂತರದಲ್ಲಿ ಮೊಸುಲ್ ಭವಿಷ್ಯದ ಕುರಿತಾಗಿ ಅಮೆರಿಕಾಕ್ಕೆ ಅಷ್ಟೊಂದು ಗಂಭೀರ ಯೋಚನೆಗಳಿಲ್ಲ. 'ಗೆದ್ದರೆ ಆಡೊದಿಕ್ಕೆ ಬಂದೆ, ಸೋತರೆ ನೋಡೊದಿಕ್ಕೆ ಬಂದೆ' ಎಂಬ ಗಾದೆಯಂತಾಗಿದೆ ಅಮೆರಿಕಾದ ಸದ್ಯದ ಮನಸ್ಥಿತಿ! ಮೊಸುಲ್ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ, ಅಮೆರಿಕಾ ಮತ್ತು ಇರಾಕ್ ಈ ಪ್ರದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಯೋಜನೆಗಳೊಂದಿಗೆ ಹೊರಬಂದಲ್ಲಿ, ಈ ಯುದ್ಧ ಚರಿತ್ರೆಯಲ್ಲಿ ಘಟಿಸಿಹೋದ ಬೆರಳೆಣಿಕೆಯ ನಿರ್ಣಾಯಕ ಯುದ್ಧಗಳ ಪಟ್ಟಿ ಸೇರುತ್ತದೆ. ಹಾಗಾಗದೇ ಹೋದಲ್ಲಿ ಈಗಾಗಲೇ ವಿಶ್ವ ಕಂಡಿರುವ ಹಲವು ವ್ಯರ್ಥ ಯುದ್ಧಗಳಲ್ಲಿ ಒಂದಾಗಿ ರಕ್ತಪಾತ ಮತ್ತು ವಿಧ್ವಂಸಕ್ಕಷ್ಟೇ ಸೀಮಿತವೆನಿಸಿಕೊಳ್ಳುತ್ತದೆ.

(This article was published in Hosa Digantha newspaper on 25 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ಶುಕ್ರವಾರ, ಅಕ್ಟೋಬರ್ 14, 2016

ಬಲಿಯುವ ಮೊದಲೇ ಬಲಿಗೆ ನಿಂತವರು!

ಖಲಿಫೇಟ್ ಸ್ಥಾಪನೆಗೆ ಪಣ ತೊಟ್ಟು ಬೇರೆ ಬೇರೆ ರಾಷ್ಟ್ರಗಳಿಂದ ವಲಸೆ ಬಂದಿರುವವರ ಮಕ್ಕಳು, ಸ್ಥಳಿಯ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಸೇರಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಕಟ್ಟಿಕೊಂಡಿರುವ ಸೇನೆಯ ಹೆಸರು 'ಕಬ್ಸ್ ಆಫ್ ದ ಖಲಿಫೇಟ್'!

-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು

ಅಲಯನ್ಸ್ ವಿಶ್ವವಿದ್ಯಾಲಯ)

ಮಧ್ಯ ಪ್ರಾಚ್ಯದ ರಣರಂಗದಲ್ಲಾದ ಹಿನ್ನಡೆಗಳಿಂದಾಗಿ ಇಸ್ಲಾಮಿಕ್ ಸ್ಟೇಟ್ ಇದೀಗ ಹೊಸ ತಂತ್ರಗಳನ್ನು ಹೆಣೆಯುವ ತರಾತುರಿಯಲ್ಲಿದೆ. ಕುರ್ದಿಶ್ ಹೋರಾಟಗಾರರು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಸಮರ ಸಾರಿದ ಮೇಲಂತೂ ಉಗ್ರರ ಯೋಜನೆಗಳೆಲ್ಲ ತಲೆಕೆಳಗಾಗಿವೆ. ಯುದ್ಧನೀತಿಯ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶಗಳಾದ ಇರಾಕ್ ನ ಫಲ್ಲುಜಾಹ್, ಉತ್ತರ ಸಿರಿಯಾದಲ್ಲಿರುವ ಮನ್ಬಿಜ್ ಮತ್ತು ಜರಬುಲಸ್ ಗಳಲ್ಲೂ ಸಾಲು ಸಾಲು ಸೋಲುಗಳಿಂದ ಇಸ್ಲಾಮಿಕ್ ಸ್ಟೇಟ್ ತನ್ನ ನಿಯಂತ್ರಣ ಕಳೆದುಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ತನ್ನ ಅಧೀನದಲ್ಲಿದ್ದ 47  ಪ್ರತಿಶತ ನೆಲದ ಮೇಲಿನ ಹಿಡಿತ ಕಳೆದುಕೊಂಡಿದ್ದು, 30 ಪ್ರತಿಶತ ಉಗ್ರರು ಇಸ್ಲಾಮಿಕ್ ಸ್ಟೇಟ್ ಸದಸ್ಯತ್ವ ತೊರೆದು ತಮ್ಮ ಮೂಲ ದೇಶಗಳಿಗೆ ಹಿಂದಿರುಗಿದ್ದಾರೆ.  ಹತಾಶೆಯ ಮಡುವಿನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ತಮ್ಮ ಅಧಿಕಾರವನ್ನು ಪುನರ್ಸ್ಥಾಪಿಸಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಾಗಿದ್ದಾರೆ. ಅಲ್ ಹಯಾತ್ ಮೀಡಿಯಾ ಸೆಂಟರ್ ಮಾಧ್ಯಮದ ಮೂಲಕ  ಮತ್ತೆ ಬಿರುಸಿನಿಂದ ಪ್ರಚಾರ ಆರಂಭಿಸಿರುವ ಈ ಉಗ್ರ ಸಂಘಟನೆಯ ಹೊಸ ನಡೆಗಳು ಜಾಗತಿಕ ಸಮುದಾಯದ ನೈತಿಕತೆಗೆ ಗಂಭೀರ ಪ್ರಶ್ನೆಗಳನ್ನು ಒಡ್ಡಲಿದೆ

ಕೆಲ ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಭಯಾನಕ ದೃಶ್ಯವಿರುವ 'Nations United Against You' ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಮಿಲಿಟರಿ ಸಮವಸ್ತ್ರದಲ್ಲಿರುವ ಹತ್ತರಿಂದ ಹನ್ನೆರಡು ವರ್ಷದೊಳಗಿನ ಐದು ಹುಡುಗರ ಕೈಯಲ್ಲೂ ಗನ್ ಗಳಿವೆ. ಬಂಧಿಸಲ್ಪಟ್ಟ ಕುರ್ದಿಶ್ ಹೋರಾಟಗಾರರ ಹಿಂದೆ ನಿಂತಿರುವ ಈ ಹುಡುಗರ ಕೈಯಲ್ಲಿರುವ ಗನ್ ಗಳು ಬಂಧಿಗಳ ಹಿಂದಲೆಗೆ ಗುರಿಯಿರಿಸಿದ್ದಾರೆ. ಆ ಹುಡುಗರಲ್ಲೊಬ್ಬನಾದ ಅಬು ಅಲ್-ಬಾರಾ ಅಲ್-ಟುನಿಸಿ ಎಂಬ ಹುಡುಗ ಅರೇಬಿಕ್ ನಲ್ಲಿ ಮಾತನಾಡಿ, ಇದು ಅಂತ್ಯವಲ್ಲ ಆರಂಭ ಎನ್ನುತ್ತಾನಷ್ಟೇ ಅಲ್ಲ, ಕುರ್ದಿಶ್ ಹೋರಾಟಗಾರರ ಮಾರಣಹೋಮ ನಡೆಸುತ್ತೇವೆ ಎಂಬ ಧಮಕಿ ಹಾಕುತ್ತಾನೆ. ಅಮೆರಿಕಾ, ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿಗಳನ್ನು ಮಾನವರಷ್ಟೇ ಅಲ್ಲ ಜೀನಿಗಳಿಂದಲೂ ಕಾಪಾಡಲು ಸಾಧ್ಯವಿಲ್ಲ ಎಂದ ಈ ಪೋರ, ಪಾಶ್ಚಾತ್ಯ ದೇಶಗಳು ತಮ್ಮ ಸಮಾಧಿಗೆ ಗುಂಡಿ ತೋಡಿಕೊಂಡು, ಶವಪೆಟ್ಟಿಗೆಯನ್ನು ಸಿದ್ಧಪಡಿಸಿಕೊಳ್ಳಬೇಕು ಗುಟುರು ಹಾಕಿದ್ದಾನೆ. ಕೆಲವೇ ನಿಮಿಷಗಳಲ್ಲಿ ಈ ಸಣ್ಣ ವಯಸ್ಸಿನ ಹುಡುಗರು ತಮ್ಮ ಮುಂದೆ ಬಂಧಿಸಲ್ಪಟ್ಟಿರುವ ಕುರ್ದಿಶ್ ಹೋರಾಟಗಾರರ ತಲೆಯನ್ನು ಛಿದ್ರಗೊಳಿಸುತ್ತಾರೆ! ದೇಹ ಮತ್ತು ಬುದ್ಧಿಗಳೆರಡೂ ಬಲಿತಿರದ ಹತ್ತು ವರ್ಷದ ಹುಡುಗರು ಈ ಕೃತ್ಯದಲ್ಲಿ ಪಾಲ್ಗೊಂಡಿರುವುದು ಆಘಾತಕಾರಿಯಾದರೂ ನಂಬಲೇಬೇಕಾದ ವಿಚಾರ!

ಇಸ್ಲಾಮಿಕ್ ಸ್ಟೇಟ್ ಮುಖಂಡ ಮಹಮ್ಮದ್ ಅಲ್ ಅಡ್ನಾನಿ ಈ ವಿಡಿಯೋವನ್ನು ರಚಿಸಿರುವುದಕ್ಕೆ ಕಾರಣಗಳು ಹಲವಾರಿವೆ. ಈ ವಿಡಿಯೋ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೇಳಿಕೆ ನೀಡುತ್ತಿರುವ ಅಥವಾ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಶ್ವನಾಯಕರಿಗೂ ಎಚ್ಚರಿಕೆಯ ಸಂದೇಶ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಸ್ಲಾಮಿಕ್ ಸ್ಟೇಟ್ ಇರಾಕ್ ಮತ್ತು ಸಿರಿಯಾಗಳಲ್ಲಿ ಬಹಳಷ್ಟು ಆಯಕಟ್ಟಿನ ನೆಲೆಗಳನ್ನು ಕಳೆದುಕೊಂಡಿದ್ದರೂ ಖಲಿಫೇಟ್ ಹೋರಾಟಕ್ಕೇನೂ ಧಕ್ಕೆಯಾಗಿಲ್ಲ ಎಂಬ ಪೊಳ್ಳು ಆತ್ಮವಿಶ್ವಾಸ ತೋರಿಸಿಕೊಳ್ಳುವ ಪ್ರಯತ್ನವೂ ಇಲ್ಲಿದೆ. ಈ ಹುಂಬತನದ ಪ್ರಯತ್ನಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲವಾದರೂ, ಇನ್ನೂ ಹತ್ತು ವರ್ಷದ ದಾಟದ ಹುಡುಗರು ಇಸ್ಲಾಮಿಕ್ ಸ್ಟೇಟ್ ನ ಪಕ್ಕಾ ಉಗ್ರರಂತೆ ಕಾಣಿಸಿಕೊಂಡಿರುವುದು ತಲೆಕೆಡಿಸಿಕೊಳ್ಳಬೇಕಾದ ವಿಚಾರವೇ ಸರಿ. ಇದರೊಂದಿಗೆ ಭವಿಷ್ಯದ ವಿಶ್ವಶಾಂತಿಗೆ ಕೊಳ್ಳಿಯಿಡಬಲ್ಲ ಉಗ್ರರ ತಯಾರಿ ಜೋರಾಗಿಯೇ ನಡೆದಿದೆ ಎಂದಾಯ್ತು.


ಉಗ್ರ ಸಂಘಟನೆಗಳು ಮಕ್ಕಳನ್ನು ವಿಡಿಯೋಗಳಲ್ಲಿ ಬಳಸಿಕೊಂಡು ಪ್ರಚಾರ ಪಡೆದುಕೊಳ್ಳುವ ವಿಕೃತಿ ಪ್ರದರ್ಶಿಸಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಇಸ್ಲಾಮಿಕ್ ಸ್ಟೇಟ್, ಜಬಾತ್ ಅಲ್ ನುಸ್ರಾ, ತಾಲಿಬಾನ್, ಇಮಾಮ್ ಬುಕಾರಿ ಜಮಾತ್ ಮತ್ತಿತರ ಸಂಘಟನೆಗಳು ಉಗ್ರ ಚಟುವಟಿಕೆಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಉಪಯೋಗಿಸಿಕೊಂಡ ಉದಾಹರಣೆಗಳಿವೆ. ಈ ಹಿಂದಿನ ವಿಡಿಯೋಗಳಲ್ಲೂ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುವ ಅಥವಾ ಆತ್ಮಹತ್ಯಾ ಬಾಂಬರ್ ಗಳನ್ನಾಗಿ ಬಳಸುವ ದೃಶ್ಯಗಳಿವೆ. ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ ಇನ್ನೊಂದು ವಿಡಿಯೋದಲ್ಲಿ ಬಾಬುರ್ ಇಸ್ರೇಲವ್ ಆತ್ಮಹತ್ಯಾ ಬಾಂಬರ್ ಆಗಲು ತಯಾರಿಲ್ಲದಿದ್ದರೂ ದೇವರು, ಧರ್ಮದ ಹೆಸರಿನಲ್ಲಿ ಭಾವನಾತ್ಮಕ ಒತ್ತಡಗಳನ್ನು ಹಾಕಲಾಗುತ್ತದೆ. ಬಾಬುರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ವ್ಯಂಗ್ಯ ವಿರೋಧಾಭಾಸಗಳಿಗೆ ಸಾಕ್ಷಿಯಾಗುವಂತೆ ಹಿನ್ನೆಲೆಯಲ್ಲಿ ಭಾವನಾತ್ಮಕ ಅರೇಬಿಕ್ ಸಂಗೀತ ಕೇಳಿಬರುತ್ತದೆ! 2015ರ ಜನವರಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ ವಿಡಿಯೋವೊಂದರಲ್ಲಿ ರಷ್ಯಾದ ಗೂಡಚಾರರು ಎನ್ನಲಾದ ಇಬ್ಬರು ವ್ಯಕ್ತಿಗಳನ್ನು ಕಝಕಿಸ್ತಾನದ ಸಣ್ಣ ಹುಡುಗನೊಬ್ಬ ಗುಂಡಿಕ್ಕಿ ಕೊಲ್ಲುತ್ತಾನೆ.

2015ರ ಡಿಸೆಂಬರ್ ಅಂತ್ಯದಲ್ಲಿ ಇಮಾಮ್ ಬುಖಾರಿ ಜಮಾತ್ ತೇಲಿಬಿಟ್ಟ ಹದಿನೆಂಟು ನಿಮಿಷ ಅವಧಿಯ ವಿಡಿಯೋ ತುಣುಕಿನಲ್ಲಿ ಆರೇಳು ವರ್ಷದ ಹುಡುಗರಿಂದ ಹದಿಹರೆಯದ ಹುಡುಗರು ಸಿರಿಯಾದ ತರಬೇತಿ ಶಿಬಿರವೊಂದರಲ್ಲಿ ಎಲ್ಲಾ ರೀತಿಯ ಉಗ್ರ ಚಟುವಟಿಕೆಗಳಲ್ಲಿ ಪರಿಣತಿ ಪಡೆಯುತ್ತಿರುವುದನ್ನು ತೋರಿಸಲಾಗಿತ್ತು. ಅರೇಬಿಕ್, ಷರಿಯಾ ಕಾನೂನು ಮತ್ತು ಪ್ರಾಯೋಗಿಕ ಗಣಿತಶಾಸ್ತ್ರದೊಂದಿಗೆ ದೈಹಿಕ ವ್ಯಾಯಾಮಕ್ಕಾಗಿ ಓಟ, ಮಲ್ಲಯುದ್ಧಗಳಲ್ಲೂ ತರಬೇತಿ ನೀಡಲಾಗುತ್ತಿತ್ತು. ಇವೆಲ್ಲವುಗಳ ಜೊತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ನೀಡುವ ದೃಶ್ಯಗಳು ಮಧ್ಯ ಏಷ್ಯಾದಲ್ಲಿ ಭಯಮಿಶ್ರಿತ ಸಂಚಲನ ಮೂಡಿಸಿತ್ತು. ಇದೇ ರೀತಿಯ ಚಟುವಟಿಕೆಗಳನ್ನೊಳಗೊಂಡ, ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಟರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿ ಎಂಬ ಉಗ್ರ ಸಂಘಟನೆ ಚಿತ್ರೀಕರಿಸಿದ ವಿಡಿಯೋದಲ್ಲಿ 'ಲಿಟಲ್ ಮುಜಾಹಿದೀನ್' ಎಂದು ಕರೆಯಲ್ಪಡುವ ಆರಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಎ.ಕೆ 47 ಮತ್ತು ಪಿ.ಕೆ.ಎಮ್ ಮೆಶಿನ್ ಗನ್ ಗಳನ್ನು ವಿವಿಧ ಭಂಗಿಗಳಲ್ಲಿ ಉಪಯೋಗಿಸುತ್ತಿರುವ ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು!
ಕಿರ್ಗಿಸ್ತಾನದ ವಿಶೇಷ ಗುಪ್ತಚರ ಮಾಹಿತಿಯ ಪ್ರಕಾರ 140ಕ್ಕೂ ಹೆಚ್ಚು ಕಿರ್ಗಿಸ್ತಾನದ ಅಪ್ರಾಪ್ತವಯಸ್ಕರು ಇರಾಕ್ ಮತ್ತು ಸಿರಿಯಾದ ಉಗ್ರ ತರಬೇತಿ ಶಿಬಿರಗಳಲ್ಲಿದ್ದಾರೆ. ಇದರಲ್ಲಿ 85 ಪ್ರತಿಶತಕ್ಕೂ ಹೆಚ್ಚು ಮಕ್ಕಳು ಹತ್ತು ವರ್ಷ ವಯಸ್ಸನ್ನೂ ದಾಟಿಲ್ಲ! ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ ಮಧ್ಯ ಏಷ್ಯಾದ 600ಕ್ಕೂ ಹೆಚ್ಚಿನ ಮಕ್ಕಳು ಉಗ್ರರ ಪಾಳಯದಲ್ಲಿ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಕ್ವಿಲಿಯಂ ಫೌಂಡೇಶನ್ ವರದಿಯ ಪ್ರಕಾರ 50 ಕ್ಕೂ ಹೆಚ್ಚು ಬ್ರಿಟಿಷ್ ಮೂಲದ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣದಲ್ಲಿದ್ದಾರೆ. ಮಕ್ಕಳು ಉಗ್ರ ಸಂಘದಲ್ಲಿದುವ ಪೋರರ ಸಂಖ್ಯೆಯ ಬಗ್ಗೆ ವಿವಿಧ ವರದಿಗಳು ವಿಭಿನ್ನ ಚಿತ್ರಣ ನೀಡುತ್ತವೆ. ಇಸ್ಲಾಮಿಕ್ ಸ್ಟೇಟ್ ಜೊತೆಗೂಡಿ ಖಲಿಫೇಟ್ ಸ್ಥಾಪನೆಗೆ ಪಣ ತೊಟ್ಟು ಬೇರೆ ಬೇರೆ ರಾಷ್ಟ್ರಗಳಿಂದ ವಲಸೆ ಬಂದಿರುವವರ ಮಕ್ಕಳು, ಸ್ಥಳಿಯ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಸೇರಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಕಟ್ಟಿಕೊಂಡಿರುವ ಸೇನೆಗೆ ಅವರಿಟ್ಟಿರುವ ಹೆಸರು 'ಕಬ್ಸ್ ಆಫ್ ದ ಖಲಿಫೇಟ್'!

ಮಧ್ಯ ಪ್ರಾಚ್ಯದಲ್ಲಿರುವ ದುರ್ಬಲ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಅಪ್ರಾಪ್ತರು ಉಗ್ರ ಪ್ರಭಾವಕ್ಕೆ ಒಳಗಾಗುವುದನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ. ಮುಂದುವರಿದಿರುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಈ ಸಮಸ್ಯೆಗೆ ಸಂಬಂಧಿಸಿದಂತೆ ಕಾನೂನುಗಳು ಸಂಪೂರ್ಣ ಯಶಸ್ಸು ಕಾಣುತ್ತಿಲ್ಲ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಉಗ್ರ ಸಂಘ ತೊರೆದು ಮೂಲ ರಾಷ್ಟ್ರಗಳನ್ನು ಸೇರಿಕೊಂಡ ಅಪ್ರಾಪ್ತ ವಯಸ್ಕರನ್ನು ಪುನರ್ವಸತಿ ಒದಗಿಸುವ ಅಥವಾ ಇನ್ನಿತರ ಕ್ರಮಗಳ ಕುರಿತಾಗಿ ವಿಶ್ವ ನಾಯಕರಲ್ಲಿ ಸ್ಪಷ್ಟ ನಿಲುವುಗಳ ಕೊರತೆ ಕಾಣುತ್ತಿದೆ. ಈ ಮಕ್ಕಳ ಉಗ್ರ ಸೈನ್ಯದ ವಿಕೃತಿ ಮುಂದಿನ ದಿನಗಳಲ್ಲಿ ವಿಶ್ವದ ಮಾನವ ಹಕ್ಕು ಘೋಷಣೆಗಳು, ಮಾನವ ಹಕ್ಕು ಸಂಘಟನೆಗಳನ್ನು ಗೊಂದಲ ಸಹಿತ ದ್ವಂದ್ವಗಳಿಗೆ ತಳ್ಳುತ್ತದೆ. ಮುಖ್ಯವಾಗಿ ಜಾಗತಿಕ ಸಮುದಾಯದ ನೈತಿಕತೆಗೆ ಈವರೆಗೆ ಕಂಡರಿಯದ ಮಾರಣಾಂತಿಕ ಹೊಡೆತ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ.


(This article was published in Vishwavani newspaper on 27 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore.