ಟ್ರಂಪ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟ್ರಂಪ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ನವೆಂಬರ್ 19, 2016

ಟ್ರಂಪ್ ಪುಟಿನ್ ಗೆಳೆತನದ ಸುತ್ತ-ಮುತ್ತ

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ಬಲಿಷ್ಠನಾದ ಶತ್ರುವಿಗೆ ಶರಣಾಗತನಾಗುವ ಮೂಲಕ, ಧೀರರನ್ನು ಭೇದ ನೀತಿಯಿಂದಲೂ, ದುರ್ಬಲರನ್ನು ಉಡುಗೊರೆಗಳಿಂದಲೂ, ಸಮಾನರನ್ನೂ ಪ್ರರಾಕ್ರಮದಿಂದಲೂ ಎದುರಿಸಬೇಕು" ವಿದೇಶಾಂಗ ವ್ಯವಹಾರಗಳ ಬಗ್ಗೆ ವಿವರಿಸುತ್ತಾ ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳಿವು. ರಾಜ ತನ್ನ ಶತ್ರುಗಳ ಜೊತೆಯಲ್ಲಿ ಮಾತ್ರವಲ್ಲದೇ ಮಿತ್ರರ ಜೊತೆಯಲ್ಲಿ ವ್ಯವಹರಿಸುವಾಗಲೂ ಈ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ರಾಜಕೀಯ ಚದುರಂಗದಾಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪರಿಸ್ಥಿತಿಯ ಒತ್ತಡಗಳು ಮಿತ್ರರನ್ನು ಶತ್ರುಗಳನ್ನಾಗಿಯೂ ಅಥವಾ ಶತ್ರುಗಳನ್ನು ಮಿತ್ರರನ್ನಾಗಿಯೂ ಕ್ಷಣ ಮಾತ್ರದಲ್ಲಿ ಬದಲಾಯಿಸಿಬಿಡುತ್ತದೆ. ಸಾಂಪ್ರದಾಯಿಕ ಶತ್ರು ರಷ್ಯಾ ಮತ್ತು ಅಮೆರಿಕಾಗಳ ವಿಚಾರದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಇಂಥದ್ದೊಂದು ಬದಲಾವಣೆಗೆ ನಾಂದಿ ಹಾಡುವಂತಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗುವುದರೊಂದಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಜಗತ್ತಿನಾದ್ಯಂತ ಮೂಡಿಸಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಟ್ರಂಪ್ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಅಮೆರಿಕಾ ಸೇರಿದಂತೆ ವಿಶ್ವದಾಂದ್ಯಂಥ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಶೇಷವಾಗಿ ರಷ್ಯಾದ ಸಂಸತ್ತಿನಲ್ಲಿದ್ದ ಸಂಸದರೆಲ್ಲರೂ ಚಪ್ಪಾಳೆಗಳೊಂದಿಗೆ ಅತ್ಯುತ್ಸಾಹದಿಂದ ಟ್ರಂಪ್ ಗೆಲುವಿನ ಸುದ್ಧಿಯನ್ನು ಸಂಭ್ರಮಿಸಿದರು! ಹೌದು, ಈ ಬಾರಿ ರಷ್ಯನ್ನರು ಸಾಂಪ್ರದಾಯಿಕ ಶತ್ರು ಎಂದೇ ಬಿಂಬಿತವಾಗಿದ್ದ ಅಮೆರಿಕಾದ ಚುನಾವಣೆಗಳಲ್ಲಿ ಅತಿಯಾದ ಕುತೂಹಲವನ್ನೂ, ಉತ್ಸಾಹವನ್ನೂ ತೋರಿಸಿದ್ದರು. ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳಲ್ಲೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಚರ್ಚೆಯ ವಿಷಯವಾಗಿತ್ತಷ್ಟೇ ಅಲ್ಲದೇ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಆರೋಪಗಳನ್ನು ರಷ್ಯನ್ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದ್ದು ರಷ್ಯಾದಲ್ಲಿಯೂ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದಂತಿತ್ತು. ಟ್ರಂಪ್ ಗೆಲುವಿಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಟ್ರಂಪ್ ಅಧ್ಯಕ್ಷತೆಯಲ್ಲಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪುಟಿನ್ ಕಠಿಣ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ರಂಪ್, ಒಬಾಮರಿಗಿಂತ ಪುಟಿನ್ ಉತ್ತಮ ನಾಯಕ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಪುಟಿನ್ ಮತ್ತು ಟ್ರಂಪ್ ನಡುವಿನ ಈ ವೈಯಕ್ತಿಕ ಸ್ನೇಹ ಅಮೆರಿಕಾ ಮತ್ತು ರಷ್ಯಾ ಬಾಂಧವ್ಯಗಳಲ್ಲೂ ಗಮನಾರ್ಹ ಬದಲಾವಣೆಗಳಿಗೆ ನಾಂದಿ ಹಾಡಬಲ್ಲುದು. ಪ್ರಮುಖವಾಗಿ ಭಯೋತ್ಪಾದನಾ ನಿಗ್ರಹದಲ್ಲಿ ಈ ಎರಡು ದೈತ್ಯ ರಾಷ್ಟ್ರಗಳ ಸಮನ್ವಯ ಅದ್ಭುತಗಳನ್ನು ಸಾಧಿಸಬಲ್ಲದು.

ಇನ್ನೊಂದೆಡೆ ಟ್ರಂಪ್ ಎದುರಾಗಿ ಚುನಾವಣಾ ಕಣಕ್ಕಿಳಿದಿದ್ದ ಹಿಲರಿ ಕ್ಲಿಂಟನ್, ರಷ್ಯಾದ ದ್ವೇಷಕ್ಕೆ ಪಾತ್ರರಾಗಿದ್ದು ಟ್ರಂಪ್ ರಷ್ಯಾ ಒಲವಿಗೆ ಇನ್ನಷ್ಟು ಬಲ ತುಂಬಿತ್ತು.  ಹಿಲರಿ ಕ್ಲಿಂಟನ್ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ 2009ರಿಂದ 2013ರವರೆಗಿನ ಅವಧಿಯಲ್ಲಿ ರಷ್ಯಾ ಮತ್ತು ಅಮೆರಿಕಾದ  ಸಂಬಂಧಗಳಲ್ಲಿ ಅಗಾಧ ಬಿರುಕು ಮೂಡಿತ್ತು. ತನ್ನ ಪ್ರಚಾರದುದ್ದಕ್ಕೂ ಹಿಲರಿ, ರಷ್ಯಾದ ಅಧ್ಯಕ್ಷ ಪುಟಿನ್ ಅಂತರಾಷ್ಟ್ರೀಯ ವ್ಯವಸ್ಥೆಗೆ ಮಾರಕ ಎಂದು ತೆಗಳಿದ್ದಲ್ಲದೇ ಟ್ರಂಪ್ ರನ್ನು ತನ್ನ ಕೈಗೊಂಬೆಯಾಗಿಟ್ಟುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯನ್ ಮಾಧ್ಯಮಗಳೂ ಕೂಡ, ಹಿಲರಿ ಮೇಲೆ ಭ್ರಷ್ಟಾಚಾರಿ ಮತ್ತು ಜಾಗತಿಕ ಶಾಂತಿಗೆ ಕುತ್ತು ತರಬಲ್ಲ ರಾಜಕಾರಣಿ ಎಂಬಂತೆ ಬಿಂಬಿಸಿತ್ತು. ಇವಿಷ್ಟೇ ಅಲ್ಲದೇ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಸಿರಿಯಾ ಅಧ್ಯಕ್ಷ ಬಶರ್-ಅಲ್-ಅಸದ್ ಗೆ ರಷ್ಯಾ ಬೆಂಬಲ ಮತ್ತು ಉಕ್ರೈನ್ ಸಮಸ್ಯೆಯ ಕಾರಣದಿಂದಾಗಿ ಅಮೆರಿಕಾ- ರಷ್ಯಾ ಸಂಬಂಧಗಳು ಅತಿಯಾಗಿ ಹದಗೆಟ್ಟಿದ್ದವು. ಇದೀಗ ಟ್ರಂಪ್ ಅಮೆರಿಕಾ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಅಮೆರಿಕಾ ತನ್ನ ಸಾಂಪ್ರದಾಯಿಕ ಶತ್ರು ರಷ್ಯಾ ಜೊತೆ ಸ್ನೇಹ ವೃದ್ಧಿಸಿಕೊಳ್ಳುವುದು ಬಹುತೇಕ ಖಚಿತ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಟ್ರಂಪ್ ರಷ್ಯಾ ಜೊತೆಗೆ ಪ್ರಶ್ನಾರ್ಹ ಸಂಬಂಧಗಳನ್ನಿಟ್ಟುಕೊಂಡಿತ್ತು ಎಂಬ ಆರೋಪಗಳ ಆಧಾರದ ಮೇಲೆ ಎಫ್.ಬಿ.ಐ ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿತ್ತಾದರೂ ಪುರಾವೆಗಳ ಕೊರತೆಯಿಂದಾಗಿ ತನಿಖೆಯನ್ನು ಮೊಟಕುಗೊಳಿಸಲಾಗಿತ್ತು. ಈ ಮಧ್ಯೆ ಡೆಮಾಕ್ರಟಿಕ್ ಪಕ್ಷದ ಮೇಲೆ ರಷ್ಯನ್ನರು ಸೈಬರ್ ದಾಳಿ ನಡೆಸಿದೆ ಮತ್ತು ರಷ್ಯಾದ ಗುಪ್ತಚರ ದಳ ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗಾಗಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂಬ ಗುಲ್ಲೆದ್ದಿತ್ತು! ಈ ಊಹೆಗಳ ಸತ್ಯಾಸತ್ಯತೆಗಳೇನೇ ಇದ್ದರೂ ರಷ್ಯಾ ಈ ಬಾರಿ ಅಮೆರಿಕಾದ ಚುನಾವಣಾ ಫಲಿತಾಂಶದಲ್ಲಿ ಅತಿಯಾದ ಉತ್ಸಾಹ ತೋರಿದ್ದು ಮಾತ್ರ ಸುಳ್ಳಲ್ಲ.

ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ಟ್ರಂಪ್ ಅಸಮಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಉಗ್ರರನ್ನು ಮಟ್ಟಹಾಕುವಲ್ಲಿ ರಷ್ಯಾದೊಂದಿಗೆ ಅಮೆರಿಕಾ ಕೈ ಜೋಡಿಸುವುದು ಜಾಣತನ ಎನ್ನುವುದು ಟ್ರಂಪ್ ಅಭಿಪ್ರಾಯ. ಟ್ರಂಪ್ ರಷ್ಯಾ ಬಗ್ಗೆ ಹೊಂದಿರುವ ಮೃದು ಧೋರಣೆ ಮತ್ತು ಭವಿಷ್ಯದಲ್ಲಿ ಅಮೆರಿಕಾ ಮತ್ತು ರಷ್ಯಾಗಳು ಮೈತ್ರಿಕೂಟವನ್ನು ರಚಿಸಿಕೊಳ್ಳುವ ಯೋಚನೆಯೇ ಹಲವರಿಗೆ ದಿಗಿಲು ಹುಟ್ಟಿಸಿದೆ.  ಟ್ರಂಪ್-ಪುಟಿನ್ ಗೆಳೆತನದ ಧನಾತ್ಮಕ ಅಂಶವೆಂದರೆ ಈ ಎರಡು ಬಲಾಡ್ಯ ರಾಷ್ಟ್ರಗಳ ಮೈತ್ರಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಉಗ್ರ ನಿಗ್ರಹದಲ್ಲಿ ಸಮನ್ವಯತೆ ಕಾರ್ಯರೂಪಕ್ಕಿಳಿದರೆ ಭಯೋತ್ಪಾದಕರ ದಮನಕ್ಕೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಭಯೋತ್ಪಾದಕರಿಗಷ್ಟೇ ಅಲ್ಲ ಬ್ರಿಟನ್ ಪಾಲಿಗೂ ಈ ಹೊಸ ಬದಲಾವಣೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿರಿಯಾದಲ್ಲಿ ರಷ್ಯಾ ಬೆಂಬಲದಿಂದ ಆಡಳಿತ ನಡೆಸುತ್ತಿರುವ ಅಸದ್ ವಿರುದ್ದ ಹೋರಾಡುತ್ತಿರುವ ದಂಗೆಕೋರರಿಗೆ ಅಮೆರಿಕಾ ಮತ್ತು ಬ್ರಿಟನ್ ನೆರವು ನೀಡುತ್ತಿರುವ ವಿಷಯ ತಿಳಿದೇ ಇದೆ. ಆದರೆ ಟ್ರಂಪ್ ಹೇಳಿರುವಂತೆ, ಅಮೆರಿಕಾ ದಂಗೆಕೋರರಿಗೆ ನೀಡುತ್ತಿರುವ ಬೆಂಬಲ ಹಿಂದೆಗೆದುಕೊಂಡು, ರಷ್ಯಾ ಜೊತೆ ಮೈತ್ರಿ ಸಾಧಿಸಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮಟ್ಟ ಹಾಕುವ ಆಲೋಚನೆಯಲ್ಲಿರುವುದು ಬ್ರಿಟನ್ ಪಾಲಿಗೆ ದೊಡ್ಡ ಹಿನ್ನಡೆ. ಅಮೆರಿಕಾ ಜೊತೆ ಸೇರಿಕೊಂಡು ಸಿರಿಯಾದಲ್ಲಿರುವ ರಷ್ಯಾ ಪ್ರಭಾವ ಮಟ್ಟಹಾಕಬೇಕು ಎಂದುಕೊಂದಿದ್ದ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಟ್ರಂಪ್ ರವರ ರಷ್ಯಾ ಪ್ರೀತಿಯಿಂದ ಬೆಚ್ಚಿಬೀಳುವಂತಾಗಿದೆ. ಅಮೆರಿಕಾ ನೇತೃತ್ವದ ನ್ಯಾಟೊ ಮಿತ್ರಕೂಟ ರಷ್ಯಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಟ್ಟಿರುವ 3 ಲಕ್ಷಕ್ಕೂ ಹೆಚ್ಚಿನ ಸೈನ್ಯವನ್ನು ಹಿಂಡೆದುಕೊಳ್ಳಬೇಕು ಎಂದು ಟ್ರಂಪ್ ಮುಂದೆ ಬೇಡಿಕೆಯಿಯಿಟ್ಟಿದ್ದು, ಯುರೋಪಿನ ರಾಷ್ಟ್ರಗಳು ಅಭದ್ರತೆ ಮತ್ತು ರಷ್ಯನ್ ಆಕ್ರಮಣದ ಭೀತಿ ಎದುರಿಸುವಂತಾಗಿದೆ.

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು! ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಆದ್ಯ ಕರ್ತವ್ಯವೇ ಆಗಿದ್ದರೂ, ಈವರೆಗೆ ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶ್ರೇಯಸ್ಸು ಅಮೆರಿಕಾಗೆ ಸಲ್ಲುತ್ತದೆ. ಈ ವಿಚಾರದಲ್ಲಿ ಅಮೆರಿಕಾ ಇತರ ರಾಷ್ಟ್ರಗಳಿಗೆ ಮಾದರಿಯೇ ಸರಿ. ಅಧ್ಯಕ್ಷ ಗಾದಿಗೆ ಚುನಾಯಿತರಾಗಿರುವ ಟ್ರಂಪ್ ಕೂಡ ರಷ್ಯಾ ಮೇಲಿನ ದ್ವೇಷವನ್ನು ಬಿಟ್ಟುಕೊಡುತ್ತಿದ್ದಾರೆಯೇ ವಿನಃ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ! ಇಷ್ಟಕ್ಕೂ ಟ್ರಂಪ್ ವಿದೇಶಾಂಗ ನೀತಿಯ ಕುರಿತಾಗಿ ಸ್ಪಷ್ಟ ಚಿತ್ರಣಕ್ಕಾಗಿ, 20 ಜನವರಿ 2017ರ ವರೆಗೆ ಕಾದುನೋಡಲೇಬೇಕು.

(This article was published in Vishwavani newspaper on 16 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಶನಿವಾರ, ಆಗಸ್ಟ್ 20, 2016

ಹಿಲರಿ-ಟ್ರಂಪ್ : ಯಾರು ಹಿತವರು ಇವರಿಬ್ಬರೊಳಗೆ?

ಈವರೆಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿಂಥ ಭಿನ್ನವಾದ ವ್ಯಕ್ತಿತ್ವಗಳನ್ನು ಹೊಂದಿರುವ ಈ ಇಬ್ಬರೂ  ಅಧ್ಯಕ್ಷೀಯ ಅಭ್ಯರ್ಥಿಗಳು ಹೊಸ ಇತಿಹಾಸ ಸೃಷ್ಟಿಸುವುದಕ್ಕೆ ತುದಿಗಾಲಲ್ಲಿ ನಿಂತಿರುವಾಗಲೇ ವಿಶ್ವದೆಲ್ಲೆಡೆ ಅನೇಕ ದೇಶಗಳು ಯಾರು ಹಿತವರು ಈ ಇಬ್ಬರೊಳಗೆ? ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.
-ಕೀರ್ತಿರಾಜ್


ಇದೇ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಪ್ರತಿ ದಿನ ಪ್ರತಿ ಕ್ಷಣ ವಿವಿಧ ಬಣ್ಣಗಳೊಂದಿಗೆ ರಂಗೇರುತ್ತಿದೆ. ಅಧ್ಯಕ್ಷೀಯ ಗಾದಿಗಾಗಿ ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್, ಕ್ರಝ್, ಸ್ಯಾಂಡರ್ ಮತ್ತಿತರ ಘಟಾನುಘಟಿಗಳ ಪೈಪೋಟಿ ವಿಶ್ವಾದ್ಯಂತ ಮನೆ ಮಾತಾಗಿತ್ತು. ಇದೀಗ ಆರಂಭಿಕ ಕುತೂಹಲಗಳಿಗೆಲ್ಲಾ ತೆರೆ ಎಳೆದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅಧ್ಯಕ್ಷ ಪದವಿಗಾಗಿ ಅಂತಿಮ ಹಣಾಹಣಿ ನಡೆಸಲಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳೆರಡೂ ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷ ಅಮೆರಿಕಾದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳಾ ಅಭ್ಯರ್ಥಿಯನ್ನು ಅಧ್ಯಕ್ಷೀಯ ಕಣದಲ್ಲಿ ಮುಂದಾಳನ್ನಾಗಿ ಮಾಡಿದ್ದರೆ, ರಿಪಬ್ಲಿಕ್ ಪಕ್ಷದ ಆಯ್ಕೆ ಡೊನಾಲ್ಡ್ ಟ್ರಂಪ್ ಕೂಡ ಅಮೆರಿಕಾ ಅಧ್ಯಕ್ಷೀಯ ಗಾದಿಯಲ್ಲಿ ಹೊಸ ನಡೆಯೇ ಸರಿ.

ಹಿಲರಿ ಕ್ಲಿಂಟನ್ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರವರ ಪತ್ನಿಯಾಗಿ 'ಪ್ರಥಮ ಮಹಿಳೆ' ಪಟ್ಟಕ್ಕೆ ಸೀಮಿತವಾಗಿ ತೃಪ್ತಿಪಟ್ಟುಕೊಳ್ಳುವ ಬದಲಾಗಿ, ರಾಜಕೀಯದಲ್ಲಿ ಹಂತ ಹಂತವಾಗಿ ತಮ್ಮದೇ ಛಾಪು ಮೂಡಿಸಿದ ದಿಟ್ಟ ಮಹಿಳೆ. ಬಿಲ್ ಕ್ಲಿಂಟನ್ ಪತ್ನಿಯೆಂಬ ಕಾರಣಕ್ಕೆ ಬಿಟ್ಟಿಯಾಗಿ ಸಿಕ್ಕಿದ 'ಪ್ರಥಮ ಮಹಿಳೆ' ನೆರಳಿನಿಂದ ಹೊರಬಂದು ಸೆನೆಟರ್ ಆಗಿ ಮುಂದಕ್ಕೆ ಅಮೆರಿಕಾದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಚರಿತ್ರೆ ನಿರ್ಮಿಸಿಕೊಂಡಿದ್ದು ಹಿಲರಿಯವರ ಮಹತ್ವಾಕಾಂಕ್ಷೆಗೆ ನಿದರ್ಶನ. ಅತ್ಯಂತ ಮುಂದುವರಿದ ದೇಶ ಎಂದು ತನ್ನನ್ನು ತಾನೇ ವೈಭವೀಕರಿಸಿಕೊಂಡರೂ, ಅಮೆರಿಕಾದ ಸಾಮಾಜಿಕ ಜನಜೀವನ ಯುರೋಪಿಗಿಂತಲೂ ಸಾಂಪ್ರದಾಯಿಕ ಎನ್ನುವುದೂ ಸತ್ಯ. ಸಾಂಪ್ರದಾಯಿಕ ಅಮೆರಿಕಾದ ಮೊದಲ ಅಧ್ಯಕ್ಷೆ ಎನಿಸಿಕೊಂಡು 'ಓವಲ್ ಹೌಸ್' ಕಡೆಗೆ ಪಯಣ ಬೆಳೆಸಿರುವ ಹಿಲರಿ ಕ್ಲಿಂಟನ್ ಹೊಸ ಚರಿತ್ರೆ ನಿರ್ಮಾಣ ಮಾಡುತ್ತಿದ್ದಾರೆ.

ಇತಿಹಾಸ ನಿರ್ಮಿಸುವಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಹಿಂದೆ ಬಿದ್ದಿಲ್ಲ. ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮುನ್ನವೇ ಅನೇಕ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾದವರು. ಟ್ರಂಪ್ ಅಧ್ಯಕ್ಷ ಗಾದಿಗೋಸ್ಕರ ಸ್ಪರ್ಧಿಸುತಿದ್ದಾನೆ ಎಂಬ ಸುದ್ಧಿ ಹಲವರಿಗೆ ನಗೆಪಾಟಲಿನ, ಹಾಸ್ಯದ ವಿಷಯವಾಗಿತ್ತು. ಈ ವರೆಗೆ ಸ್ಪರ್ಧಿಸಿದ ಅಧ್ಯಕ್ಷೀಯ ಅಭ್ಯರ್ಥಿಗಳ ಗುಣ ಗಂಭೀರ ನಡವಳಿಕೆಯನ್ನು ಗಮನಿಸಿದವರಿಗೆ ಟ್ರಂಪ್ ಭಿನ್ನವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಟ್ರಂಪ್, ರಿಪಬ್ಲಿಕನ್ನರ ಅಧಿಕೃತ ಅಭ್ಯರ್ಥಿಯಾಗಿ ಅಂತಿಮ ಸ್ಪರ್ಧೆಯಲ್ಲಿದ್ದಾರೆ. ಟ್ರಂಪ್ ಅಮೆರಿಕಾದ ಅಧ್ಯಕ್ಷನಾಗುವ ಎಲ್ಲಾ ಅವಕಾಶಗಳಿರುವುದರಿಂದ, ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ವಿಶ್ವ ಟ್ರಂಪ್ ಕೈಕುಲುಕಲು ಹಾತೊರೆಯಬೇಕಾಗಬಹುದು. ಅಧ್ಯಕ್ಷೀಯ ಗಾದಿಗೆ ರಿಪಬ್ಲಿಕ್ ಪಕ್ಷದ ಆಯ್ಕೆ ಹಿಲರಿ ಕ್ಲಿಂಟನ್ ಎಂಬ ವಿಷಯ ನಿರೀಕ್ಷಿತವಾಗಿದ್ದರೂ, ಡೆಮಾಕ್ರಾಟ್ ಪಕ್ಷದ ಆಯ್ಕೆ ಟ್ರಂಪ್ ಹಲವರಿಗೆ ಅನಿರೀಕ್ಷಿತ ಹಾಗೂ ಅಚ್ಚರಿಯ ಬೆಳವಣಿಗೆ.

ಟ್ರಂಪ್ ತನ್ನೊಳಗೆ ಹಲವು ವ್ಯಕ್ತಿತ್ವಗಳನ್ನು ತುಂಬಿಕೊಂಡು, ಪ್ರಸಕ್ತ ವಿಶ್ವದ ತೀಕ್ಷ್ಣವಾದ ಒಡಕುಗಳನ್ನು ಪ್ರತಿನಿಧಿಸುವ ವ್ಯಕ್ತಿಯಂತೆ ಭಾಸವಾಗುತ್ತಿದ್ದಾರೆ. ಇಂದಿನ ಜಾಗತಿಕ ರಾಜಕೀಯದ ಗೋಜಲುಗಳು, ಅಮೆರಿಕಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಅವಿವೇಕದ ಗುಂಡಿನ ಕಾಳಗಗಳು, ವಿಶ್ವದೆಲ್ಲೆಡೆ ರಕ್ತದ ಕೆಲೆ ಮೂಡಿಸಿರುವ ಇಸ್ಲಾಮಿಕ್ ಸ್ಟೇಟ್ ಮತ್ತಿತರ ಉಗ್ರ ಸಂಘಟನೆಗಳಿಂದ ಅಸ್ತವ್ಯಸ್ತವಾಗಿರುವ ಪ್ರಪಂಚವನ್ನು ಪ್ರತಿನಿಧಿಸುತ್ತಿದೆ ಟ್ರಂಪ್ ವ್ಯಕ್ತಿತ್ವ. ಪ್ರತಿಷ್ಟಿತ ವಾಣಿಜ್ಯ ಕೇಂದ್ರಗಳಿಂದ ಹಿಡಿದು ಸಣ್ಣ ಮಕ್ಕಳು ಓದುವ ಶಾಲೆಗಳೂ ಸುರಕ್ಷಿತವಲ್ಲ ಎಂಬುದು ಜನಮಾನಸದಲ್ಲಿ ಬೇರೂರಿಬಿಟ್ಟಿದೆ. ಇವೆಲ್ಲವುಗಳಿಂದ ತಬ್ಬಿಬ್ಬುಗೊಂಡಿರುವ ಜನರನ್ನು ಪ್ರತಿನಿಧಿಸುತ್ತಿರುವ ಟ್ರಂಪ್ ಕೂಡ ಕ್ಷಣ ಕ್ಷಣಕ್ಕೂ ಬದಲಾಗುತ್ತಾ, ವಿಕ್ಷಿಪ್ತ ನಡವಳಿಕೆ ತೋರುತ್ತಿರುವುದು ಸಹಜವೇ ಸರಿ.

ಡೆಮಾಕ್ರಾಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ಗಂಡ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬೆಂಬಲದ ಜೊತೆಗೆ ಬರಾಕ್ ಒಬಾಮ ಅವರ ಬೆಂಬಲವನ್ನು ಪಡೆದುಕೊಂಡು ಗೆಲ್ಲುವ ಭರವಸೆಯಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ತಾನೇನೂ ಕಡಿಮೆಯಿಲ್ಲ ಎಂಬಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಪುಟಿನ್ ಕಡೆಗೆ ಟ್ರಂಪ್ ತೋರಿಸುತ್ತಿರುವ ಆಸಕ್ತಿ ಜಗತ್ತಿನಾದ್ಯಂತ ಜನರ ಹುಬ್ಬೇರಿಸುವಂತೆ ಮಾಡಿದೆ. ಅಮೆರಿಕಾದ ಸಂಪ್ರದಾಯಿಕ ಎದುರಾಳಿ ರಷ್ಯಾ ಜೊತೆಗೆ ಸ್ನೇಹ ಹಸ್ತ ಚಾಚುವ ಜರೂರತ್ತು ಟ್ರಂಪ್ ಗೇನಿತ್ತು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮೇಲ್ನೋಟಕ್ಕೆ ಈ ನಡೆ ಟ್ರಂಪ್ ಹುಚ್ಚಾಟಗಳಲ್ಲಿ ಒಂದು ಎಂದೆನಿಸಬಹುದಾದರೂ, ಇದಕ್ಕೆ ಪ್ರತಿಯಾಗಿ ಪುಟಿನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ಯೋಚಿಸಬೇಕಾದ ವಿಷಯವೇ ಸರಿ. ತನ್ನ ನೇರ ನಡೆ, ಬಂದೂಕಿನಿಂದ ಹೊರಟ ಗುಂಡಿನಂಥ ಮಾತುಗಳಿಂದ ಟ್ರಂಪ್ ಶತ್ರುಗಳನ್ನು ಸೃಷ್ಟಿಸಿಕೊಂಡಷ್ಟೇ ಮಿತ್ರರನ್ನೂ ಸಂಪಾದಿಸಿಕೊಂಡಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಗಳು, ಉದ್ಯೋಗ, ಭದ್ರತೆ ಮತ್ತು ಸಮೃದ್ಧ ಅಮೆರಿಕಾದ ಪರಿಕಲ್ಪನೆಗಳ ವಿಚಾರಗಳಲ್ಲಿ ಸ್ಪಷ್ಟ ನಿಲುವು ಹೊಂದಿರುವ ಟ್ರಂಪ್ ಅಮೆರಿಕಾದ ಯುವ ಮನಸ್ಸುಗಳನ್ನು ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಟ್ರಂಪ್ ಮತ್ತು ಪುಟಿನ್ ತಳೆದಿರುವ ಕಠಿಣ ಮನೋಭಾವ ಈ ಇಬ್ಬರನ್ನೂ ಮತ್ತಷ್ಟು ಹತ್ತಿರವಾಗಿಸಿದೆ. ಒಂದು ವೇಳೆ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಹೊರಹೊಮ್ಮಿದರೆ ಟ್ರಂಪ್ ಮತ್ತು ಪುಟಿನ್ ಜಂಟಿಯಾಗಿ ಇಸ್ಲಾಮಿಕ್ ಸ್ಟೇ ಟ್ ವಿರುದ್ಧ ದ ಕಾರ್ಯಾಚರಣೆಯಲ್ಲಿ ಕೈಜೋಡಿಸುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ಈಗಾಗಲೇ ರಾಜಕೀಯ ಪಂಡಿತರಿಂದ ವ್ಯಕ್ತವಾಗಿದೆ.

ಅಧಿಕಾರದಲ್ಲಿರುವ ಡೆಮಾಕ್ರಾಟ್ ಪಕ್ಷ ಇಸ್ಲಾಮಿಕ್ ಸ್ಟೇಟ್ ನಿಗ್ರಹಿಸುವಲ್ಲ ವಿಫಲವಾಗಿರುವುದು ಮತ್ತು ಟ್ರಂಪ್ ತಾನು ಪುಟಿನ್ ಜೊತೆ ಕೈಜೋಡಿಸಿ ಇಸ್ಲಾಮಿಕ್ ಸ್ಟೇಟ್ ಅನ್ನು ಬುಡ ಸಮೇತ ಉಚ್ಚಾಟನೆಗೊಳಿಸುತ್ತೇನೆ ಎನ್ನುತ್ತಿರುವುದೂ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ . ನ್ಯಾಟೋ ಒಕ್ಕೂಟದ ಬಗ್ಗೆ ಟ್ರಂಪ್ ಗಿರುವ ತಿರಸ್ಕಾರ ಮತ್ತು ನ್ಯಾಟೊ ರಷ್ಯಾ ವಿರೋಧಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂಬ ಟ್ರಂಪ್ ಆಶಯಗಳು ಟ್ರಂಪ್-ಪುಟಿನ್ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಿವೆ. ರಷ್ಯಾದ ಗುಪ್ತಚರ ದಳಗಳು ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗೆ ತಂತ್ರ ರೂಪಿಸುತ್ತಿವೆ ಎಂಬ ವದಂತಿಗಳನ್ನು ಪುಟಿನ್ ತಳ್ಳಿ ಹಾಕಿದ್ದರೂ, ಈ ಬಾರಿಯ ಅಮೆರಿಕಾದ ಅಧ್ಯಕ್ಷೀಯ ಮತದಾನ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ.


ಇತ್ತೀಚೆಗೆ ನಡೆದ ಸಮೀಕ್ಷೆಗಳ ಪ್ರಕಾರ ಟ್ರಂಪ್ ಮುಕ್ತವಾಗಿ ವ್ಯಕ್ತಪಡಿಸುತ್ತಿರುವ ಕೆಲ ಸಂಗತಿಗಳು, ಮುಖ್ಯವಾಗಿ ಪುಟಿನ್ ಮತ್ತು ರಷ್ಯಾ ಜೊತೆಗಿನ ಸ್ನೇಹ ನವೆಂಬರ್ ನ ಮತದಾನದಲ್ಲಿ ದುಬಾರಿಯಾಗಿ ಪರಿಣಮಿಸಬಹುದು. ಶೀತಲ ಸಮರದ ಅಂತ್ಯದೊಂದಿಗೆ ಸೊವಿಯೆತ್ ಒಕ್ಕೂಟ ಒಡೆದುಹೋಗಿ ಕಾಲು ಶತಮಾನವೇ ಕಳೆದುಹೋದರೂ, ಸಾಮಾನ್ಯ ಅಮೆರಿಕನ್ ಪ್ರಜೆಗಳಿನ್ನೂ ರಷ್ಯಾ ದ್ವೇಷ ತೊರೆದಿಲ್ಲ. ಅದರಲ್ಲೂ ಉಕ್ರೈನ್ ಬಿಕ್ಕಟ್ಟು, ಕ್ರಿಮಿಯಾದಲ್ಲಿ ರಷ್ಯಾ ತೋರಿದ ಆಕ್ರಮಣಕಾರಿ ನಡೆ, ಇತ್ತೀಚಿನ ಜಾಗತಿಕ ಸಂಘರ್ಷಗಳಲ್ಲಿ ಪುಟಿನ್ ನಡೆದುಕೊಳ್ಳುತ್ತಿರುವ ರೀತಿ ಅಮೆರಿಕನ್ನರನ್ನು ಚಿಂತೆಗೀಡು ಮಾಡಿದೆ. ಇದೇ ಚಿಂತೆ ಮುಂದಿನ ಅಧ್ಯಕ್ಷೀಯ ಮತದಾನದಲ್ಲಿ ಟ್ರಂಪ್ ದ್ವೇಷವಾಗಿ ಮಾರ್ಪಾಡಾದರೆ ಹಿಲರಿ ಕ್ಲಿಂಟನ್ ಈ ಸನ್ನಿವೇಶದ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ಕ್ಲಿಂಟನ್ ಅಥವಾ ಟ್ರಂಪ್ ಈ ಇಬ್ಬರಲ್ಲಿ ಯಾರೇ ಅಮೆರಿಕಾದ ಅಧ್ಯಕ್ಷರಾದರೂ ಅಮೆರಿಕಾದ ಆಂತರಿಕ ಮತ್ತು ವಿದೇಶಾಂಗ ನೀತಿಯಲ್ಲಿ ಅನೂಹ್ಯ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಈವರೆಗೆ  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿಂಥ ಭಿನ್ನವಾದ ವ್ಯಕ್ತಿತ್ವಗಳನ್ನು ಹೊಂದಿರುವ ಈ ಇಬ್ಬರೂ  ಅಧ್ಯಕ್ಷೀಯ ಅಭ್ಯರ್ಥಿಗಳು ಹೊಸ ಇತಿಹಾಸ ಸೃಷ್ಟಿಸುವುದಕ್ಕೆ ತುದಿಗಾಲಲ್ಲಿ ನಿಂತಿರುವಾಗಲೇ ವಿಶ್ವದೆಲ್ಲೆಡೆ ಅನೇಕ ದೇಶಗಳು ಯಾರು ಹಿತವರು ಈ ಇಬ್ಬರೊಳಗೆ? ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.




 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Hosa Diganta newspaper on 19 August 2016)