ವಿದೇಶಾಂಗ ನೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿದೇಶಾಂಗ ನೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 6, 2017

ಅಮೆರಿಕಾ ವಿದೇಶಾಂಗ ನೀತಿಯಲ್ಲಿ ತ್ರಿವಳಿ ಶಕ್ತಿಕೇಂದ್ರಗಳು

ಅಮೆರಿಕಾ ಮೊದಲು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳೆಂಬ ವಿಭಿನ್ನ ಆಲೋಚನಾ ಕ್ರಮಗಳಿಗೆ ಸೇರಿದ ವ್ಯಕ್ತಿಗಳು ಟ್ರಂಪ್ ಆಡಳಿತದ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಲಿದ್ದಾರೆ. ಒಟ್ಟಿನಲ್ಲಿ ಅಮೆರಿಕಾದ ವಿದೇಶಾಂಗ ನೀತಿ ಈ ಮೂರು ಶಕ್ತಿಕೇಂದ್ರಗಳ ಸಮನ್ವಯದ ಆಧಾರದಲ್ಲಿ ನಿರ್ಧರಿತವಾಗಲಿದೆ.
-  ಕೀರ್ತಿರಾಜ್


Image may contain: 4 peopleಪ್ರಪಂಚದ ಪ್ರತಿ ಮೂಲೆಯಲ್ಲೂ ಪರಿಣಾಮ ಬೀರಬಲ್ಲ ಪದವಿಯೊಂದಿದ್ದರೆ ಅದು ಅಮೆರಿಕಾದ ಅಧ್ಯಕ್ಷ ಪಟ್ಟ. ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ತನ್ನ ವಿದೇಶಾಂಗ ನೀತಿಯ ಸಲಹಾಗಾರರ ಹೆಸರನ್ನೂ ಘೋಷಿಸುವ ಮೂಲಕ ಭವಿಷ್ಯದ ಅಮೆರಿಕಾದ ಜಾಗತಿಕ ನಿಲುವು ಸ್ಪಷ್ಟವಾಗುತ್ತಿದೆ. ಟ್ರಂಪ್ ಅತಿಯಾಗಿ ಪುನರುಚ್ಛರಿಸುತ್ತಿರುವ 'ಅಮೆರಿಕಾ ಮೊದಲು' (America First) ಘೋಷವಾಕ್ಯ ಅಮೆರಿಕಾದ ವಿದೇಶಾಂಗ ನೀತಿಯನ್ನು ಬಹುಮಟ್ಟಿಗೆ ನಿರ್ಧರಿಸುತ್ತದೆಯಾದರೂ, ಟ್ರಂಪ್ ತನ್ನ ಆಡಳಿತ ಮತ್ತು ರಾಜನೀತಿಯಲ್ಲಿ ಆಯ್ದುಕೊಂಡ ಸಲಹೆಗಾರರು ಮತ್ತಿನ್ನಿತರ ಮಹತ್ವದ ಸ್ಥಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮೂರು ವಿಭಿನ್ನ ಗುಂಪುಗಳನ್ನು ಗುರುತಿಸಬಹುದು! ಟ್ರಂಪ್ ಆಡಳಿತದ ಮಹತ್ವದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಲಿರುವ ಅಮೆರಿಕಾ ಮೊದಲು ಎನ್ನುವ ಗುಂಪು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳು ಎಂಬ ಮೂರು ಪ್ರಭಾವಶಾಲಿ ಗುಂಪುಗಳನ್ನು ಬ್ರೂಕಿಂಗ್ ಸಂಸ್ಥೆಯ ವಿಶ್ಲೇಷಕ ಥಾಮಸ್ ರೈಟ್ ಗುರುತಿಸುತ್ತಾರೆ. ಪ್ರತಿಯೊಂದು ಗುಂಪು ಇನ್ನೊಂದು ಗುಂಪನ್ನು ಅಪನಂಬಿಕೆಯಿಂದಲೇ ನೋಡುತ್ತವಾದರೂ, ಮೂರನೇ ಗುಂಪಿನ ಪ್ರಭಾವವನ್ನು ತಡೆಯಲು ತಾತ್ಕಾಲಿಕ ಹೊಂದಾಣಿಕೆಗೂ ಸಿದ್ಧವಾಗುತ್ತದೆ.

ಅಮೆರಿಕಾ ಮೊದಲು
ಚುನಾವಣಾ ಪ್ರಚಾರಕ್ಕಿಂತಲೂ ಹಲವು ವರ್ಷಗಳ ಹಿಂದಿನಿಂದಲೇ ಟ್ರಂಪ್ ಅಮೆರಿಕಾವನ್ನು ಶ್ರೇಷ್ಠತೆಯತ್ತ ಕೊಂಡುಯ್ಯುವುದು ಇತರ ಎಲ್ಲಾ ಜಾಗತಿಕ ಜವಾಬ್ದಾರಿಗಳಿಗಿಂತ ಮಹತ್ವದ ವಿಚಾರ ಎನ್ನುವುದನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ. 1987ರಿಂದಲೂ ಅಮೆರಿಕಾದ ರಕ್ಷಣಾ ಮೈತ್ರಿಗಳ ಬಗೆಗಿನ ಕಟು ಟೀಕಾಕಾರರಾಗಿ ಟ್ರಂಪ್ ಗುರುತಿಸಿಕೊಂಡಿದ್ದಾರೆ. ಅಮೆರಿಕಾದ ಮಿತ್ರ ರಾಷ್ಟ್ರಗಳು ಅಮೆರಿಕಾದಿಂದ ಉಚಿತವಾಗಿ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ಇದು ಅಮೆರಿಕಾದ ರಕ್ಷಣಾ ವೆಚ್ಚ ಮತ್ತು ಆರ್ಥಿಕತೆಯ ಮೇಲೆ ಅನಗತ್ಯ ಹೊರೆ ಬೀಳುವಂತೆ ಮಾಡಿದೆ. ಆದ್ದರಿಂದ ಅಮೆರಿಕಾ ನೀಡುವ ರಕ್ಷಣೆಯ ಪ್ರತಿಯಾಗಿ ಮಿತ್ರ ರಾಷ್ಟ್ರಗಳು ದೊಡ್ಡ ಪ್ರಮಾಣದ ಹಣವನ್ನು ರಕ್ಷಣಾವೆಚ್ಚವಾಗಿ ಅಮೆರಿಕಾಗೆ ನೀಡಬೇಕು ಎನ್ನುವುದು ಟ್ರಂಪ್ ವಾದ. ಇನ್ನು ವ್ಯಾಪಾರ  ವಹಿವಾಟಿನ ವಿಚಾರದಲ್ಲೂ ಬಹಳಷ್ಟು ಕಟ್ಟುನಿಟ್ಟಾಗಿರುವ ಟ್ರಂಪ್ ದ್ವಿತೀಯ ಯುದ್ಧದ ನಂತರ ಅಮೆರಿಕಾ ಮಾಡಿಕೊಂಡ ಎಲ್ಲಾ ಸುಂಕರಹಿತ ವ್ಯಾಪಾರ ಒಪ್ಪಂದಗಳನ್ನು ಟೀಕಿಸುತ್ತಲೇ ಬಂದಿದ್ದಾರೆ. ಸುಮಾರು ಮೂರು ದಶಕಗಳಿಂದ ಅಮೆರಿಕಾದ ವಿದೇಶಾಂಗ ನೀತಿಯ ಕಟು ಟೀಕಾಕಾರರಾಗಿರುವ ಟ್ರಂಪ್, ಅಮೆರಿಕಾ ಇತರರಿಗೆ ಕೊಡುವ ರಕ್ಷಣೆಯೇ ಇರಲಿ ಅಥವಾ ವ್ಯಾಪಾರವೇ ಇರಲಿ ಇದರಿಂದ ಅಮೆರಿಕಾಗೆ ಸಿಗುವ ಲಾಭವೇನು ? ಎಂಬ ಪ್ರಶ್ನೆಯ ಆಧಾರದ ಮೇಲೆ ಶತ್ರು ಮತ್ತು ಮಿತ್ರರಿಬ್ಬರನ್ನೂ ನಿರ್ಧರಿಸುತ್ತಾರೆ. ಸಂದರ್ಶನವೊಂದರಲ್ಲಿ ಆರ್ಥಿಕ ಲಾಭವಿಲ್ಲದೇ ಹೋದರೆ ಏಕ ಚೀನಾ ನೀತಿಯನ್ನು ಅನುಸರಿಸಬೇಕೆಂದಿಲ್ಲ ಎಂಬರ್ಥ ಬರುವ ಮಾತುಗಳನ್ನಾಡಿದ್ದು ಇದಕ್ಕೊಂದು ನಿದರ್ಶನ. ಹೀಗಿದ್ದರೂ ಟ್ರಂಪ್ ರ ಅಮೆರಿಕಾ ಮೊದಲು ನೀತಿಯನ್ನು ಜಾರಿಗೊಳಿಸುವುದು ಅಷ್ಟೊಂದು ಸರಳವಲ್ಲ ಮತ್ತು ಸ್ವತಃ ರಿಪಬ್ಲಿಕನ್ ಪಕ್ಷದ ವಿದೇಶಾಂಗ ನೀತಿ, ಟ್ರಂಪ್ ಧೋರಣೆಗಳಿಗೆ ವಿರುದ್ಧವಾಗಿವೆ. ರಿಪಬ್ಲಿಕನ್ ಪಕ್ಷದ ಕಲ್ಪನೆಯಲ್ಲಿರುವ ಅಂತರಾಷ್ಟ್ರೀಯ ವ್ಯವಸ್ಥೆಗೆ ಟ್ರಂಪ್ ವಿಚಾರಗಳು ಮಾರಕವಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. 

ಧಾರ್ಮಿಕ ಯೋಧರು
ರಿಪಬ್ಲಿಕನ್ ಪಕ್ಷದ ಒಂದು ಗುಂಪು ಇವತ್ತಿಗೂ ಅಮೆರಿಕಾ ಇಸ್ಲಾಮಿಕ್ ಉಗ್ರರ ವಿರುದ್ಧದ ಒಂದು ಮಹಾಯುದ್ಧದಲ್ಲಿ ತೊಡಗಿದೆ ಮತ್ತು ಈ ಯುದ್ಧ ದ್ವಿತೀಯ ವಿಶ್ವಸಮರ ಮತ್ತು ಶೀತಲ ಸಮರಗಳಷ್ಟೇ ಮಹತ್ವದ ಯುದ್ಧ ಎಂದು ನಂಬುತ್ತದೆ. ಇಸ್ಲಾಮಿಕ್ ಸ್ಟೇಟ್ ಮತ್ತಿನ್ನಿತರ ಉಗ್ರ ಸಂಘಟನೆಗಳು ತಮ್ಮ ಪ್ರಭಾವ ವೃದ್ಧಿಸಿಕೊಂಡಿದ್ದು ಕೂಡ ಈ ಧಾರ್ಮಿಕ ಯೋಧರ ಗುಂಪು ವಿದೇಶಾಂಗ ನೀತಿಯನ್ನು ಧರ್ಮದ ನೆಲೆಗಟ್ಟಿನಲ್ಲಿ ನೋಡುವಂತೆ ಮಾಡಿದೆ. ಟ್ರಂಪ್ ಭದ್ರತಾ ಸಲಹೆಗಾರರಾಗಿರುವ ಲೆಫ್ಟಿನೆಂಟ್ ಜನರಲ್ ಮೈಕೆಲ್ ಫ್ಲಿನ್. ಹಿಂದೊಮ್ಮೆ ಫ್ಲಿನ್, ಇರಾಕ್ ನಲ್ಲಿ ಅಲ್ ಖೈದಾ ಚಟುವಟಿಕೆಗಳ ಕುರಿತಾಗಿ ಅತ್ಯಂತ ದಕ್ಷವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಿದ್ದಕ್ಕಾಗಿ ಅಮೆರಿಕಾದಾದ್ಯಂತ ಹೊಗಳಿಕೆಗೆ ಪಾತ್ರರಾಗಿದ್ದರು. ಆದರೆ ಮುಂದೆ ಇದೇ ಫ್ಲಿನ್ ರಕ್ಷಣಾ ಗುಪ್ತಚರ ದಳದ ಮುಖ್ಯಸ್ಥನಾಗಿ ನೇಮಿಸಲ್ಪಟ್ಟಾಗ, ತನ್ನ ಕಾರ್ಯವೈಖರಿಯಿಂದಾಗಿ ಖಂಡನೆಗೆ ಒಳಗಾಗಿ ಆ ಸ್ಥಾನದಿಂದ ಕೆಳಗಿಳಿಯಬೇಕಾಯ್ತು. ಈ ಸಂದರ್ಭದಲ್ಲಿ ಒಬಾಮ ಸರಕಾರ ಇಸ್ಲಾಮಿಕ್ ಉಗ್ರವಾದವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಫ್ಲಿನ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಮತ್ತೆ ಮೈಕೆಲ್ ಫ್ಲಿನ್ ಅಮೆರಿಕಾ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ವಾಲಿದ್ ಫಾರೆಸ್ ಎಂಬ ಇಸ್ಲಾಮಿಕ್ ಭಯೋತ್ಪಾದನೆಯ ಕಟುವಿರೋಧಿಯೂ ಟ್ರಂಪ್ ಸಲಹೆಗಾರರ ಗುಂಪಿನಲ್ಲಿದ್ದಾರೆ. ಈ ಧಾರ್ಮಿಕ ಯೋಧರ ಗುಂಪು ಇಸ್ಲಾಮಿ ವಿರೋಧಿ ಭಾವನೆಯನ್ನು ಅಮೆರಿಕನ್ ಮುಖ್ಯವಾಹಿನಿಯಲ್ಲಿ ಬಿಂಬಿಸುವುದರ ಮುಖಾಂತರ, ರಷ್ಯಾ ಜೊತೆಗಿನ ಅಮೆರಿಕಾದ ಸಂಬಂಧಗಳು ಮತ್ತು ನ್ಯಾಟೊ ಕುರಿತಾದ ತನ್ನ ಋಣಾತ್ಮಕ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಯೋಧರ ಗುಂಪು ಟ್ರಂಪ್ ರ ಇಸ್ಲಾಮಿಕ್ ವಿರೋಧಿ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದರೂ, ಟ್ರಂಪ್ ರ ಇತರ ನೀತಿಗಳನ್ನು ನಿಲುವುಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲು ತಯಾರಿಲ್ಲ.

ಸಂಪ್ರದಾಯವಾದಿಗಳು
ದ್ವಿತೀಯ ಮಹಾಯುದ್ಧದ ನಂತರ ಅಮೆರಿಕಾ ರೂಪಿಸಿಕೊಂಡ ವಿದೇಶಾಂಗ ನೀತಿ ಮತ್ತು ಆ ನೀತಿಗೆ ಪೂರಕವಾಗಿ ನಿರ್ಮಿಸಿಕೊಂಡ ಸಂಸ್ಥೆಗಳನ್ನು ಉಳಿಸಿಕೊಂಡು ಹೋಗುವ ಆಶಯವಿರುವ ಒಂದಷ್ಟು ಆಡಳಿತಾಧಿಕಾರಿಗಳ ಗುಂಪನ್ನು ಸಂಪ್ರದಾಯವಾದಿಗಳ ಗುಂಪು ಎಂದು ಗುರುತಿಸಲಾಗಿದೆ. ಮೊದಲೆರಡು ಗುಂಪುಗಳಿಗೆ ಹೋಲಿಸಿದಲ್ಲಿ ಸಂಪ್ರದಾಯವಾದಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಿಟ್ ರೋಮ್ನಿ, ಜೇಮ್ಸ್ ಮ್ಯಾಟ್ಟಿಸ್, ರಿಚರ್ಡ್ ಹಾಸ್, ಮೈಕ್ ರೋಜರ್ಸ್, ಸ್ಟೀಫನ್ ಹಾಡ್ಲಿ ಮುಂತಾದವರು ಜನಪ್ರಿಯ ಸಂಪ್ರದಾಯವಾದಿಗಳು. ರಿಪಬ್ಲಿಕನ್ ಪಕ್ಷದಲ್ಲಿರುವ ಹೆಚ್ಚಿನ ವಿದೇಶಾಂಗ ನೀತಿ ನಿಪುಣರು ಈ ಪಟ್ಟಿಯಲ್ಲಿದ್ದು, ಈ ಗುಂಪು ಟ್ರಂಪ್ ಸರಕಾರದ ವಿದೇಶಾಂಗ ನೀತಿಯ ಆಯಕಟ್ಟಿನ ಪ್ರಭಾವಶಾಲಿ ಸ್ಥಾನಗಳನ್ನು ಅಲಂಕರಿಸುವುದು ಖಚಿತ. ಈ ಪ್ರಭಾವಶಾಲಿ ಗುಂಪು ಯುರೋಪ್ ಮತ್ತು ಏಷ್ಯಾಗಳಲ್ಲಿ ಅಮೆರಿಕಾ ಪ್ರಾಬಲ್ಯವನ್ನು ಉಳಿಸಿಕೊಳ್ಳುವತ್ತ ಗಮನ ನೀಡುವುದಷ್ಟೇ ಅಲ್ಲದೆ, ಅಮೆರಿಕಾ ಫರ್ಸ್ಟ್ ಮತ್ತು ಧಾರ್ಮಿಕ ಯೋಧರ ಗುಂಪುಗಳ ಅತಿಯಾದ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದೆ. ಸಂಪ್ರದಾಯವಾದಿಗಳ ಮೊದಲ ಆದ್ಯತೆ ಅಮೆರಿಕಾದ ಮೈತ್ರಿ ಕೂಟಗಳು ಮತ್ತು ಅಮೆರಿಕಾದ ಜಾಗತಿಕ ಮಟ್ಟದ ಮಿಲಿಟರಿ ಪಾರಮ್ಯವನ್ನು ಉಳಿಸಿಕೊಳ್ಳುವುದೇ ಆಗಿದೆ. ಅಮೆರಿಕಾ ಫರ್ಸ್ಟ್ ಮತ್ತು ಧಾರ್ಮಿಕ ಯೋಧರ ಗುಂಪುಗಳೆರಡರಲ್ಲೀ ಸರಕಾರದ ನಿರ್ಧಾರಗಳನ್ನು ಬದಲಿಸುವಷ್ಟು ಸಂಖ್ಯಾಬಲವಿಲ್ಲ. ಇಷ್ಟೇ ಅಲ್ಲದೇ ಈ ಎರಡೂ ಗುಂಪುಗಳ ಆಶಯಗಳು ವಾಸ್ತವಿಕ ರಾಜಕೀಯದಿಂದ ದೂರ ನಿಲ್ಲುತ್ತವೆ. ವಿಶೇಷವಾಗಿ ಇತ್ತೀಚೆಗೆ ಟ್ರಂಪ್ ಕೂಡ ಸಂಪ್ರದಾಯವಾದಿಗಳ ಕಡೆಗೆ ವಾಲುತ್ತಿರುವುದು ಕಂಡುಬರುತ್ತಿದೆ. ಅಧ್ಯಕ್ಷೀಯ ಚುನಾವಣೆ ನಡೆದ ಎರಡು ದಿನಗಳ ನಂತರ ನವೆಂಬರ್ 10ರಂದು ದಕ್ಷಿಣ ಕೊರಿಯಾ ಅಧ್ಯಕ್ಷರಿಗೆ ಕರೆ ಮಾಡಿದ ಟ್ರಂಪ್, ದಕ್ಷಿಣ ಕೊರಿಯಾ ಜೊತೆಗಿನ ಮೈತ್ರಿಗೆ ತನ್ನ ಬೆಂಬಲವಿದೆ ಎಂದಿದ್ದು, ಇದಕ್ಕೊಂದು ನಿದರ್ಶನ.

ಟ್ರಂಪ್ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಲಿರುವ ರೆಕ್ಸ್ ಟಿಲ್ಲರ್ಸನ್, ರಕ್ಷಣಾ ಸಚಿವರಾಗಲಿರುವ ಜೇಮ್ಸ್ ಮ್ಯಾಟಿಸ್, ಭದ್ರತಾ ಸಲಹೆಗಾರರಾಗಲಿರುವ ಮೈಕೆಲ್ ಫ್ಲಿನ್ ಮತ್ತಿತರ ಪ್ರಮುಖ ವ್ಯಕ್ತಿಗಳ ವಿಚಾರಧಾರೆಗಳಲ್ಲಿ ಸಹಮತವಿಲ್ಲ. ಇದಲ್ಲದೇ ಈ ವಿದೇಶಾಂಗ ನೀತಿಯ ಪ್ರಭಾವಶಾಲಿ ವ್ಯಕ್ತಿತ್ವಗಳು ಟ್ರಂಪ್ ನಿಲುವನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಅಮೆರಿಕಾ ಮೊದಲು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳೆಂಬ ವಿಭಿನ್ನ ಆಲೋಚನಾ ಕ್ರಮಗಳಿಗೆ ಸೇರಿದ ವ್ಯಕ್ತಿಗಳು ಟ್ರಂಪ್ ಆಡಳಿತದ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಲಿದ್ದಾರೆ. ಒಟ್ಟಿನಲ್ಲಿ ಅಮೆರಿಕಾದ ವಿದೇಶಾಂಗ ನೀತಿ ಈ ಮೂರು ಶಕ್ತಿಕೇಂದ್ರಗಳ ಸಮನ್ವಯದ ಆಧಾರದಲ್ಲಿ ನಿರ್ಧರಿತವಾಗಲಿದೆ.


(This article was published in Hosa Digantha Newsapaper on 20 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶನಿವಾರ, ಜುಲೈ 16, 2016

ಅಂತರಾಷ್ಟ್ರೀಯ ಕಾನೂನಿಗೆ ಬೆಲೆ ಕೊಡದ 'ಬಲಿಷ್ಠರು'

ವಿಶ್ವದ ಬಲಿಷ್ಟ ರಾಷ್ಟ್ರಗಳು, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ನ್ಯಾಯಾಲಯ, ಕಾನೂನುಗಳು ಸ್ವಹಿತಾಸಕ್ತಿಯ ಸಾಧನಗಳಷ್ಟೆ. ನ್ಯಾಯಾಧಿಕರಣದ ತೀರ್ಪುಗಳು ಚಿಕ್ಕ ಪುಟ್ಟ ಬಲಹೀನ ರಾಷ್ಟ್ರಗಳನ್ನು ಬೆದರಿಸಲಷ್ಟೇ ಶಕ್ತ. 

- ಕೀರ್ತಿರಾಜ್



ಇತಿಚೆಗೆ ಹೇಗ್ ನ್ಯಾಯಾಧಿಕರಣ ಚೀನಾ ವಿರುದ್ಧ ನೀಡಿದ ತೀರ್ಪು, ಚೀನಾದ ಪ್ರತಿಕ್ರಿಯೆ ಮತ್ತು ವಿಶ್ವಾದ್ಯಂತ ಈ ಬಗ್ಗೆ ನಡೆದ ಚರ್ಚೆ ಕೇವಲ ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸೀಮಿತವಾಗಿಲ್ಲ. ಈ ಪ್ರಕರಣ ವಿಶ್ವ ಮಟ್ಟದಲ್ಲಿ ನ್ಯಾಯದ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆಬ್ಬಿಸಿದೆ. ಹಲವಾರು ವರ್ಷಗಳಿಂದ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಕಾನೂನು ಬಾಹಿರವಾಗಿ ತನ್ನ ಪ್ರಭಾವ ಬೆಳೆಸಿಕೊಂಡಿದೆ. ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈ ದೇಶಗಳಿಗೂ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತಮ್ಮದೇ ರಾಷ್ಟ್ರೀಯ ಹಿತಾಸಕ್ತಿಗಳಿದ್ದರೂ, ಚೀನಾ ದೈತ್ಯ ಶಕ್ತಿಗೆ ಎದುರಾಗಿ ನಿಲ್ಲಲಾರದೆ ಚೀನಾ ಪುಂಡಾಟಿಕೆಯನ್ನು ಸಹಿಸಿಕೊಳ್ಳಬೇಕಾಯ್ತು. ಕೊನೆಗೂ 2013ರಲ್ಲಿ ಪಿಲಿಪ್ಪೈನ್ಸ್  ಚೀನಾದ ಈ ಅತಿಕ್ರಮಣಕಾರಿ ನಿಲುವುಗಳ ಬಗ್ಗೆ ಅಂತರ್ರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ಅಂತರ್ರಾಷ್ಟ್ರೀಯ ನ್ಯಾಯಾಲಯ ವಿಚಾರಣೆಯನ್ನು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣಕ್ಕೆ ಒಪ್ಪಿಸಿತ್ತು. ಜುಲೈ 12ರಂದು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣ ನೀಡಿದ ತೀರ್ಪು ವಿಶ್ವ ರಾಜಕೀಯದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಅಧಿಪತ್ಯ ಸಾಧಿಸಲು ಚೀನಾ ಮುಂದಿಟ್ಟಿರುವ ವಾದಗಳನ್ನು ಹೇಗ್ ನ್ಯಾಯಾಧಿಕರಣ ಸಾರಾಸಗಟಾಗಿ ತಿರಸ್ಕರಿಸಿದೆ. ಚೀನಾ ಸೃಷ್ಟಿಸಿಕೊಂಡಿರುವ 'ನೈನ್ ಡ್ಯಾಶ್ ರೇಖೆ' ಮತ್ತು ಈ ಪ್ರದೇಶದ ಮೇಲಿನ ಐತಿಹಾಸಿಕ ಹಕ್ಕುಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸುವ ಚೀನಾ ಪ್ರಯತ್ನಕ್ಕೆ ನ್ಯಾಯಾಧಿಕರಣದ ತೀರ್ಪು ಬಲವಾದ ಹಿನ್ನಡೆ ಉಂಟು ಮಾಡಿದೆ. ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಈ ತೀರ್ಪನ್ನು ಜಾರಿಗೊಳಿಸುವ ಉತ್ಸಾಹದಲ್ಲಿದ್ದರೆ, ಕಮ್ಯುನಿಸ್ಟ್ ಚೀನಾ ಕಡೆಯಿಂದ ಬಲವಾದ ವಿರೋಧ ವ್ಯಕ್ತವಾಗಿದೆ. ನ್ಯಾಯಾಧಿಕರಣದ ತೀರ್ಪು ಕೇವಲ ಒಂದು ಕಾಗದದ ತುಂಡು ಎಂದು ಪರಿಗಣಿಸುವ ಮೂಲಕ, ಅಂತರ್ರಾಷ್ಟ್ರೀಯ ಕಾನೂನುಗಳು ಪಾಲಿಸುವುದು ಬಲಿಷ್ಟ ರಾಷ್ಟ್ರಗಳಿಗೆ ಕಡ್ಡಾಯವೇನಲ್ಲ ಎಂಬ ಹಳೆಯ ಸತ್ಯವನ್ನು ಚೀನಾ ಮತ್ತೆ ನೆನಪಿಸಿದೆ.

ಹೇಗ್ ನ್ಯಾಯಾಧಿಕರಣದ ತೀರ್ಪಿಗೆ ಚೀನಾ ಬದ್ಧವಾಗಿರಬೇಕು ಎಂಬ ಅಭಿಪ್ರಾಯ ವಿಶ್ವದ ಹಲವು ರಾಷ್ಟ್ರಗಳಿಂದ ವ್ಯಕ್ತವಾದರೂ, ಚೀನಾದ ಪ್ರತಿಕ್ರಿಯೆ ನಕಾರಾತ್ಮಕವಾಗಿಯೇ ಇದೆ. ಅಮೆರಿಕಾ ಮತ್ತಿತರ ರಾಷ್ಟ್ರಗಳೂ ಚೀನಾದ ಮನವೊಪ್ಪಿಸುವಷ್ಟು ನೈತಿಕತೆ ಉಳಿಸಿಕೊಂಡಿಲ್ಲ. ವಿಶ್ವಸಂಸ್ಥೆ ಮತ್ತು ಅಂತರ್ರಾಷ್ಟ್ರೀಯ ಕಾನೂನುಗಳನ್ನು ಜಾರಿ ಮಾಡುವಂಥ ಜವಾಬ್ದಾರಿ ಹೊತ್ತಿರುವ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟಗಳು ಕಾನೂನು ಪಾಲಿಸಿದ ಉದಾಹರಣೆಗಿಂತ ಉಲ್ಲಂಘಿಸಿದ ಪ್ರಕರಣಗಳೇ ಹೆಚಾಗಿವೆ. ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಚೀನಾಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಅಂತರ್ರಾಷ್ಟ್ರೀಯ ಕಾನೂನನ್ನು ಮುಲಾಜಿಲ್ಲದೆ ತಿರಸ್ಕರಿಸಿವೆ. ಹೀಗಿರುವಾಗ ಬಲಿಷ್ಟ ರಾಷ್ಟ್ರಗಳೆಲ್ಲಾ ಕಾನೂನು ಮುರಿಯುವುದನ್ನು ಸಂಪ್ರದಾಯವಾಗಿಸಿಕೊಂಡಿರುವಾಗ, ಚೀನಾ ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪನ್ನು ಧಿಕ್ಕರಿಸಿದ್ದು ಅನಿರೀಕ್ಷಿತ ನಡೆಯಾಗಿರಲಿಲ್ಲ. ಶಕ್ತಿ ರಾಜಕೀಯದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮುಂದೆ ಕಾನೂನು, ನಿಯಮಗಳು ಇದ್ದೂ ಇಲ್ಲದಂತೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ.

ಪಿಲಿಪ್ಪೈನ್ಸ್ 2013ರಲ್ಲಿ ನ್ಯಾಯಕ್ಕಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಾಗಿನಿಂದಲೂ, ಇದು ಚೀನಾದ ಸಾರ್ವಭೌಮತ್ವದ ಪ್ರಶ್ನೆಯಾಗುವುದರಿಂದ ಈ ಪ್ರಕರಣದ ವಿಚಾರಣೆ ನ್ಯಾಯಾಧಿಕರಣಕ್ಕೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕಮ್ಯುನಿಸ್ಟ್ ಚೀನಾ ವಾದಿಸಿತ್ತು. ನ್ಯಾಯಾಧಿಕರಣ ಚೀನಾದ ಈ ವಾದವನ್ನು ತಿರಸ್ಕರಿಸಿ ವಿಚಾರಣೆ ಮುಂದುವರಿಸಿದಾಗ, ನ್ಯಾಯಾಧಿಕರಣದ ಯಾವುದೇ ಪ್ರಕ್ರಿಯೆಗೂ ಹಾಜರಾಗದೆ ತನ್ನ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕಾವೂ ಒಳಗೊಂಡಂತೆ ಭದ್ರತಾ ಮಂಡಳಿಯ ಇತರ ಖಾಯಂ ಸದಸ್ಯ ರಾಷ್ಟ್ರಗಳು ಚೀನಾದ ಈ ನಿಲುವನ್ನು ವಿರೋಧಿಸಿದರೂ, ಇಂಥ ಸಂದರ್ಭಗಳು ಆಯಾ ರಾಷ್ಟ್ರಗಳಿಗೆ ಬಂದಾಗ ಆ ರಾಷ್ಟ್ರಗಳು ಇಂದು ಚೀನಾ ನಡೆದುಕೊಂಡ ರೀತಿಯಲ್ಲೇ ನಡೆದುಕೊಂಡಿದ್ದರು. ಇದು ಚೀನಾಗೆ ತಿಳಿಯದ ಸಂಗತಿಯೇನಲ್ಲ.

2013ರಲ್ಲಿ ರಷ್ಯಾದ ನೌಕಾ ಸೇನೆ ನೆದರ್ಲ್ಯಾಂಡ್ಸ್ ನ ಹಡಗೊಂದನ್ನು ತಮ್ಮದಲ್ಲದ ಜಲಪ್ರದೇಶವೊಂದರಲ್ಲಿ ಕಾನೂನು ಬಾಹಿರವಾಗಿ ವಶಪಡಿಸಿಕೊಂಡು ಹಡಗಿನಲ್ಲಿದ್ದ ಡಚ್ ಸಿಬ್ಬಂದಿಯನ್ನು ಬಂಧಿಸಿತ್ತು. ಈ ವಿಚಾರವಾಗಿ ನೆದರ್ಲ್ಯಾಂಡ್ಸ್ ರಷ್ಯಾದ ವಿರುದ್ಧ ಮೊಕದ್ದಮೆ ಹೂಡಿದಾಗ ಈ ಪ್ರಕರಣ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ಕೊಟ್ಟು ರಷ್ಯಾ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧನಕ್ಕೊಳಗಾಗಿದ್ದ ಡಚ್ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಧಿಕರಣ ಆದೇಶ ನೀಡಿದರೂ ರಷ್ಯಾ ಕಿವಿಗೆ ಹಾಕಿಕೊಳ್ಳಲಿಲ್ಲ! ಕೊನೆಗೆ ವಿಚಾರಣೆಯೆಲ್ಲಾ ಮುಗಿದು ರಷ್ಯಾ ನೆದರ್ಲ್ಯಾಂಡ್ಸ್ ಗೆ ಪರಿಹಾರ ನೀಡಬೇಕೆಂದು ತೀರ್ಪು ನೀಡಿದಾಗಲೂ ಕ್ಯಾರೇ ಎನ್ನಲಿಲ್ಲ!

ಇತ್ತೀಚೆಗೆ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಗ್ ನ್ಯಾಯಾಧಿಕರಣದ ತೀರ್ಪಿನ ಕುರಿತಂತೆ ಒಂದು ನೀಡಿದ್ದ ಹೇಳಿಕೆ ಹೀಗಿತ್ತು, "ಚೀನಾ ವಿಶ್ವ ಸಮುದಾಯದ ನಿಯಮಗಳ ಅನುಸಾರ ನಡೆಯಬೇಕು ಎನ್ನುವುದು ನಮ್ಮ ಆಶಯ. ವಿಶ್ವದ ಎಲ್ಲಾ ರಾಷ್ಟ್ರಗಳು ಅಂತರ್ರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಬೇಕು." ವಿಪರ್ಯಾಸವೆಂದರೆ ಇಂಥ ಆದರ್ಶ ಹೇಳಿಕೆ ನೀಡಿದ್ದ ಬ್ರಿಟನ್, ಕಳೆದ ವರ್ಷ ಸಾಗರದ ಕಾನೂನನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಚಾಗೊಸ್ ದ್ವೀಪಸಮೂಹದ ಮೇಲೆ ಅಧಿಪತ್ಯ ಸಾಧಿಸಿದೆ ಎಂದು ನ್ಯಾಯಾಧಿಕರಣ ನೀಡಿದ ತೀರ್ಪನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಇವತ್ತಿಗೂ ಚಾಗೊಸ್ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಧಿಕರಣದ ತೀರ್ಪು ಒಪ್ಪಿಕೊಳ್ಳಲು ತಯಾರಿಲ್ಲ!

ಇನ್ನು ಅಮೆರಿಕಾಕ್ಕೆ ಸಾಗರದ ಕಾನೂನಿಗೆ ಸಂಬಂಧಿಸಿದಂತೆ ಅಂತರ್ರಾಷ್ಟ್ರೀಯ ಒಪ್ಪಂದವನ್ನು ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಅಮೆರಿಕಾ ಯಾವುದೇ ಸಾಗರ ಸಂಬಂಧಿತ ಅಂತರ್ರಾಷ್ಟ್ರೀಯ ನಿಯಮಗಳಿಗೆ ಒಳಪಡುವುದಿಲ್ಲ. 1980ರಲ್ಲಿ ನಿಕರಾಗುವಾದ ಬಂದರುಗಳಲ್ಲಿ ಅನಧಿಕೃತ ಗಣಿಗಾರಿಕೆ ನಡೆಸಿದಾಗ ಅಮೆರಿಕಾವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನವನ್ನು ನಿಕರಾಗುವಾ ಮಾಡಿತ್ತು. ಈ ಪ್ರಕರಣವೂ ಅಂತರ್ರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದದ್ದಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅಮೆರಿಕಾ ಒಳಗೊಂಡಿರುವ ಯಾವುದೇ ಪ್ರಕರಣ ಅಂತರ್ರಾಷ್ಟ್ರೀಯ ನ್ಯಾಯಾಲದ ವ್ಯಾಪ್ತಿಗೆ ಬರುವುದಿಲ್ಲ ಎಂದುಬಿಟ್ಟಿತು. ಅಮೆರಿಕಾ ತಾನಾಗಿ ನ್ಯಾಯಾಲಯದ ಕದ ತಟ್ಟುವವರೆಗೆ ಅಥವಾ ಅಮೆರಿಕಾದ ಸಮ್ಮತಿಯಿಲ್ಲದೆ ಅಮೆರಿಕಾ ಸಂಬಂಧಿತ ಪ್ರಕರಣಗಳಲ್ಲಿ ತಲೆ ಹಾಕಬೇಡಿ ಎಂಬ ಅಧಿಕಾರಯುತ ಆದೇಶವನ್ನೇ ಹೊರಡಿಸಿತ್ತು! ನ್ಯಾಯಾಲಯ ಅಮೆರಿಕಾಕ್ಕೆ ವಿರುದ್ಧವಾಗಿ ನಿಕರಾಗುವ ಪರವಾಗಿ ನೀಡಿದ ತೀರ್ಪನ್ನು ಜಾರಿಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ಆರು ರೆಸಲ್ಯೂಶನ್ ಗಳನ್ನು ಅಮೆರಿಕಾ ತನ್ನ ವಿಟೊ ಪವರ್ ಮೂಲಕ ತಿರಸ್ಕರಿಸಿಬಿಟ್ಟಿತ್ತು. ದಕ್ಷಿಣ ಚೀನಾ ಸಮುದ್ರದ ವಿವಾದದಿಂದಾಗಿ ಅಂತರ್ರಾಷ್ಟ್ರೀಯ ಒಪ್ಪಂದಕ್ಕೆ ಈಗಾಗಲೇ ಸಹಿ ಮಾಡಿ ಅಂಗೀಕರಿಸಿರುವ ಚೀನಾ ಕೂಡ ಒಪ್ಪಂದದಿಂದ ಹೊರಬಂದು ಅಮೆರಿಕನ್ನರಂತೆ ಅಂತರ್ರಾಷ್ಟ್ರೀಯ ನಿಬಂಧನೆಗಳಿಂದ ಮುಕ್ತವಾಗುವಂತಿದೆ.

ವಿಶ್ವದ ಬಲಿಷ್ಟ ರಾಷ್ಟ್ರಗಳು, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ನ್ಯಾಯಾಲಯ, ಕಾನೂನುಗಳು ಸ್ವಹಿತಾಸಕ್ತಿಯ ಸಾಧನಗಳಷ್ಟೆ. ನ್ಯಾಯಾಧಿಕರಣದ ತೀರ್ಪುಗಳು ಚಿಕ್ಕ ಪುಟ್ಟ ಬಲಹೀನ ರಾಷ್ಟ್ರಗಳನ್ನು ಬೆದರಿಸಲಷ್ಟೇ ಶಕ್ತ. ಅಷ್ಟಕ್ಕೂ ಅಂತರ್ರಾಷ್ಟ್ರೀಯ ನ್ಯಾಯಾಲಯದ ಕಾನೂನುಗಳನ್ನು ಜಾರಿಗೊಳಿಸುವುದಾದರೂ ಹೇಗೆ? ಭದ್ರತಾ ಮಂಡಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಭದ್ರತಾ ಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳಲು ಐದು ಖಾಯಂ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಅತ್ಯಗತ್ಯ. ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾಗಳಲ್ಲಿ ಒಂದು ರಾಷ್ಟ್ರ ಭದ್ರತಾ ಮಂಡಳಿಯ ತೀರ್ಮಾನಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರೂ ಆ ಮತ ವಿಟೊ ಆಗಿ ಆ ತೀರ್ಮಾನವನ್ನು ಶಾಶ್ವತವಾಗಿ ತಡೆಹಿಡಿಯುತ್ತದೆ. ಹೀಗಿರುವಾಗ ಭದ್ರತಾ ಮಂಡಳಿ ದಕ್ಷಿಣ ಚೀನಾ ಸಮುದ್ರ ಪ್ರಕರಣದಲ್ಲಿ ಚೀನಾ ವಿರುದ್ಧ ಕ್ರಮ ಜರುಗಿಸಲು ಪ್ರಯತ್ನಪಟ್ಟಲ್ಲಿ ಸಹಜವಾಗಿಯೇ ಚೀನಾ ತನ್ನ ವಿಟೊ ಅಧಿಕಾರ ಉಪಯೋಗಿಸಿ ಉಳಿದ ರಾಷ್ಟ್ರಗಳನ್ನು ತಣ್ಣಗಾಗಿಸುತ್ತದೆ. ಇಷ್ಟಾದ ಮೇಲೆ ಹೇಗ್ ನ್ಯಾಯಾಧಿಕರಣವಾಗಲೀ, ಅಥವಾ ಪಿಲಿಪ್ಪೈನ್ಸ್ ಆಗಲೀ ಏನು ಮಾಡಲು ಸಾಧ್ಯ?




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 16 July 2016)

ಸೋಮವಾರ, ಫೆಬ್ರವರಿ 29, 2016

ಮತ್ತೆ ಮತ್ತೆ ಕಾಡುವ ಸಿಯಾಚಿನ್

ಸಿಯಾಚಿನ್ ಸಮರ ನೀತಿಯ ದೃಷ್ಠಿಯಿಂದ ಇನ್ನೂ ಪ್ರಾಮುಖ್ಯತೆ ಉಳಿಸಿಕೊಂಡಿದೆ ಎನ್ನಲು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಿಯಾಚಿನ್ ವಶಪಡಿಸಿಕೊಳ್ಳಲು ಪಾಕ್ ನಡೆಸಿದ ಪ್ರಯತ್ನಗಳೇ ಸಾಕ್ಷಿ. ಒಂದು ವೇಳೆ ಭಾರತೀಯ ಸೇನೆ ಈ ಎತ್ತರದ ಯುದ್ಧ ಭೂಮಿಯನ್ನು ಬಿಟ್ಟು ಬಂದಿದ್ದೇ ಆದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಚೈನಾ ಆಕ್ರಮಿತ ಅಕ್ಸಾಯ್ ಚಿನ್ ಗೂ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. 

-  ಕೀರ್ತಿರಾಜ್

ಕರ್ನಾಟಕದ ವೀರ ಯೋಧ ಹನುಮಂತಪ್ಪ ಕೊಪ್ಪದ ಮತ್ತು ಅವರ ೯ ಸೈನಿಕ ಸಹೋದ್ಯೋಗಿಗಗಳು ಇಂದು ನಮ್ಮೊಂದಿಗಿಲ್ಲ ಎಂಬ ಸತ್ಯ ಅರಗಿಸಿಕೊಳ್ಳಲು ಭಾರತ ಹರಸಾಹಸ ಪಡುತ್ತಿದೆ. ಜಾತಿ, ಮತ, ಪ್ರದೇಶಗಳ ವ್ಯತ್ಯಾಸವಿಲ್ಲದೆ ಇಡೀ ಭಾರತೀಯರ ಹೃದಯ ನಮ್ಮ ಹೆಮ್ಮೆಯ ಯೋಧರಿಗಾಗಿ ಮಿಡಿದಿತ್ತು. ಇವೆಲ್ಲವುಗಳ ಮಧ್ಯೆ ಚರ್ಚೆಯಾಗಿದ್ದು ಸಿಯಾಚಿನ್ ಯುದ್ಧಭೂಮಿಯಿಂದ ಭಾರತೀಯ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ. ಸಿಯಾಚಿನ್ ಪ್ರಪಂಚದ ಅತೀ ಎತ್ತರದ ಯುದ್ಧ ಭೂಮಿ ಮಾತ್ರವಲ್ಲ ಅಷ್ಟೇ ಅಪಾಯಕಾರಿ ಕೂಡ! ಸಿಯಾಚಿನ್ ಹಿಮಪಾತ ಯೋಧರನ್ನು ಬಲಿ ತೆಗೆದುಕೊಂಡಿದ್ದು ಇದೇ ಮೊದಲೇನಲ್ಲ. ಅದೇ ರೀತಿ ಸಿಯಾಚಿನ್ ನಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಚರ್ಚೆಗಳೂ ಹೊಸತೇನಲ್ಲ. ಇವತ್ತಿನವರೆಗೆ ಭಾರತೀಯ ಹಾಗೂ ಪಾಕಿಸ್ತಾನಿ ಸೈನಿಕರನ್ನೂ ಸೇರಿಸಿದಂತೆ ಸಿಯಾಚಿನ್ ಹಿಮಪಾತ 2000ಕ್ಕೂ ಹೆಚ್ಚು ಯೋಧರನ್ನು ಜೀವಂತ ಸಮಾಧಿ ಮಾಡಿದೆ. ಹಿಮಗಡಿತದಿಂದ ಶಾಶ್ವತ ಅಂಗವೈಕಲ್ಯಕ್ಕೊಳಗಾದ ಯೋಧರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಷ್ಟೇ ಅಲ್ಲದೇ ಸಿಯಾಚಿನ್ ನಲ್ಲಿ ಕಳೆಯುವ ಒಂದೊಂದು ಕ್ಷಣವೂ ಯೋಧನ ಸರಾಸರಿ ಆಯಸ್ಸನ್ನು ಅಲ್ಲಿನ ಪ್ರತಿಕೂಲ ಪರಿಸರ ಹಂತ ಹಂತವಾಗಿ ಕಡಿಮೆ ಮಾಡಿಬಿಡುತ್ತದೆ.

Image Source: indianexpress.com
೧೯೪೯ರಲ್ಲಿ ವಿಶ್ವಸಂಸ್ಥೆ ಭಾರತ ಪಾಕಿಸ್ತಾನ ಯುದ್ಧಕ್ಕೆ ಯುದ್ಧ ವಿರಾಮ ಘೋಷಿಸಿದಾಗ, ಪಾಕಿಸ್ತಾನ ಕಾಶ್ಮೀರದ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿತ್ತು. ತಾನು ಆಕ್ರಮಿಸಿದ ಭೂಪ್ರದೇಶವನ್ನು ಪಾಕಿಸ್ತಾನ ಆಜಾದ್ ಕಾಶ್ಮೀರ್ (ಸ್ವತಂತ್ರ ಕಾಶ್ಮೀರ) ಎಂದು ಕರೆದುಕೊಂಡರೆ, ಭಾರತ ಇದೇ ಪ್ರದೇಶವನ್ನು ಪಾಕ್ ಆಕ್ರಮಿತ ಕಾಶ್ಮೀರ (POK) ಎಂದು ಪರಿಗಣಿಸಿತು. ಯುದ್ಧ ವಿರಾಮದ ರೇಖೆಯನ್ನು NJ9842 ಎಂದು ನಿರ್ದಿಷ್ಠ ಪಡಿಸಲಾಯ್ತು. ಮುಂದೆ 1972ರ ಸಿಮ್ಲಾ ಒಪ್ಪಂದದ ನಂತರ ಈ ಯುದ್ಧ ವಿರಾಮದ ರೇಖೆಯನ್ನು ಗಡಿ ನಿಯಂತ್ರಣ ರೇಖೆಯಾಗಿ ಬದಲಾಯಿಸಲಾಯಿತು. 1984ರಲ್ಲಿ ಪಾಕಿಸ್ತಾನ ಸಾಲ್ಟೋರೋ ಪರ್ವತಶ್ರೇಣಿಯನ್ನು ವಶಪಡಿಸಿಕೊಳ್ಳಲಿದೆ ಎಂಬ ಗುಪ್ತಚರ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಭಾರತೀಯ ಸೇನೆ ಮುಂಚಿತವಾಗಿ ಸಾಲ್ಟೋರೋ ಪರ್ವತ ಶ್ರೇಣಿಯನ್ನು ವಶಪಡಿಸಿಕೊಂಡಿತ್ತು. ಪಾಕಿಸ್ತಾನದ ಸೈನ್ಯವೂ ಪ್ರತಿರೋಧ ವ್ಯಕ್ತಪಡಿಸಿತ್ತು. ಅಂದಿನಿಂದ ಭಾರತ ಮತ್ತು ಪಾಕ್ ಸೈನ್ಯಗಳೆರಡೂ ಯುದ್ಧಕ್ಕಿಂತ ಹೆಚ್ಚಾಗಿ, ಸಿಯಾಚಿನ್ ಹಿಮಪಾತದಲ್ಲೇ ತನ್ನ ಸೈನಿಕರನ್ನು ಕಳೆದುಕೊಳ್ಳುವಂತಾಗಿದೆ.

ಸಿಯಾಚಿನ್ ಸಮಸ್ಯೆಯಿಂದಾಗಿ, ದಕ್ಷಿಣ ಏಷ್ಯಾ ಪ್ರಾದೇಶಿಕ ಸ್ಥಿರತೆಯ ರೂವಾರಿಗಳಾಗಬೇಕಿದ್ದ, ಭಾರತ ಮತ್ತು ಪಾಕಿಸ್ತಾನಗಳೆರಡೂ ಅನುಭವಿಸುತ್ತಿರುವ ನಷ್ಟ ಅಪರಿಮಿತ. ಹಲವಾರು ಮಿಲಿಟರಿ ತಜ್ಞರ ಪ್ರಕಾರ ಈ ಪ್ರದೇಶ ಎರಡೂ ರಾಷ್ಟ್ರಗಳಿಗೂ ರಣತಾಂತ್ರಿಕವಾಗಿ ಅಷ್ಟೇನೂ ಮಹತ್ವದಲ್ಲ. ಎರಡೂ ರಾಷ್ಟ್ರಗಳೂ ಈ ಪ್ರದೇಶದ ಮೇಲೆ ವ್ಯಯಿಸುತ್ತಿರುವ ಹಣ ಮತ್ತಿತರ ಸಂಪನ್ಮೂಲಗಳು ಬಹುಪಾಲು ವ್ಯರ್ಥ. ಹೀಗಾಗಿ ಈ ಪ್ರದೇಶವನ್ನು ಸೈನ್ಯ ರಹಿತ ಪ್ರದೇಶವಾಗಿಸುವುದು ಭಾರತ ಮತ್ತು ಪಾಕಿಸ್ತನಗಳೆರಡರ ದೃಷ್ಠಿಯಿಂದಲೂ ಅನುಕೂಲಕರ ಮತ್ತು ಲಾಭದಾಯಕ ಎಂಬುದು ಎರಡೂ ಕಡೆಯ ಮಿಲಿಟರಿ ನಿಪುಣರ ಅಭಿಪ್ರಾಯ. ಮೊದಲ ಬಾರಿಗೆ ರಾಜೀವ್ ಗಾಂಧಿ ಆಡಳಿತಾವಧಿಯಲ್ಲಿ ಇಂಥದ್ದೊಂದು ಪ್ರಯತ್ನ ಚರ್ಚೆಯಾಗಿತ್ತು. ೧೯೯೭ರಲ್ಲಿ ಭಾರತೀಯ ಸೇನೆಯ ಜನರಲ್ ಇಂದರ್ ಗಿಲ್ ತಮ್ಮ ಲೇಖನವೊಂದರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಯಾವುದೇ ರಣತಾಂತ್ರಿಕ ಆಸಕ್ತಿಯ ದೃಷ್ಠಿಯಲ್ಲಿ ಈ ಪ್ರದೇಶ ನಿರುಪಯುಕ್ತ ಹಾಗೂ ಈ ಪ್ರದೇಶದಲ್ಲಿ ಸೇನಾ ನಿಯೋಜನೆ ಕೇವಲ ಆರ್ಥಿಕ ಹೊರೆಯಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತ ಪಾಕಿಸ್ತಾನದ ಮುಂದಿನ ನಡೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಕ್ಷಣವೇ ಏಕಪಕ್ಷೀಯವಾಗಿ ಭಾರತೀಯ ಸೇನೆಯನ್ನು ಸಿಯಾಚಿನ್ ಪ್ರದೇಶದಿಂದ ಹಿಂಪಡೆದುಕೊಳ್ಳಬೇಕು ಎಂಬ ಸಲಹೆಯನ್ನೂ ಜ. ಇಂದರ್ ಗಿಲ್ ನೀಡಿದ್ದರು! ೨೦೧೨ರಲ್ಲಿ ೧೩೦ ಪಾಕಿಸ್ತಾನದ ಯೋಧರನ್ನು ಸಿಯಾಚಿನ್ ಬಲಿ ತೆಗೆದುಕೊಂಡಾಗ, ಅವತ್ತಿನ ಪಾಕಿಸ್ತಾನಿ ಜನರಲ್ ಕಯಾನಿ ಸಿಯಾಚಿನ್ ಪ್ರದೇಶವನ್ನು ಸೇನಾ ರಹಿತಗೊಳಿಸುವ ಹೇಳಿಕೆ ಚರ್ಚೆಗೆ ಒಳಗಾಗಿತ್ತು.

ಹೀಗಿದ್ದರೂ ಭಾರತ ಸಿಯಾಚಿನ್ ಪ್ರದೇಶದ ಮೇಲಿನ ಹಿಡಿತ ಬಿಟ್ಟುಕೊಡಲು ತಯಾರಿಲ್ಲ. ಭಾರತದ ಈ ನಿಲುವಿಗೆ ಹಲವರು ಕಾರಣಗಳೂ ಇವೆ. ಭಾರತ ಮತ್ತು ಪಾಕಿಸ್ತಾನಗಳ ಸಾಂಪ್ರದಾಯಿಕ ವೈರತ್ವ ಸಿಯಾಚಿನ್ ಸಮಸ್ಯೆಯ ಮೂಲ ಎಂದರೆ ತಪ್ಪೇನಿಲ್ಲ. ಅಪಾರ ಕಷ್ಟ ನಷ್ಟಗಳ ನಂತರ ಭಾರತೀಯ ಸೇನೆ ಸಿಯಾಚಿನ್ ಮೆಲೆ ಸಾಧಿಸಿದ ಹಿಡಿತವನ್ನು ಕಳೆದುಕೊಳ್ಳಲು ಭಾರತ ಸಿದ್ಧವಿಲ್ಲ. ಸಿಯಾಚಿನ್ ಸಮರ ನೀತಿಯ ದೃಷ್ಠಿಯಿಂದ ಇನ್ನೂ ಪ್ರಾಮುಖ್ಯತೆ ಉಳಿಸಿಕೊಂಡಿದೆ ಎನ್ನಲು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಿಯಾಚಿನ್ ವಶಪಡಿಸಿಕೊಳ್ಳಲು ಪಾಕ್ ನಡೆಸಿದ ಪ್ರಯತ್ನಗಳೇ ಸಾಕ್ಷಿ. ಒಂದು ವೇಳೆ ಭಾರತೀಯ ಸೇನೆ ಈ ಎತ್ತರದ ಯುದ್ಧ ಭೂಮಿಯನ್ನು ಬಿಟ್ಟು ಬಂದಿದ್ದೇ ಆದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಚೈನಾ ಆಕ್ರಮಿತ ಅಕ್ಸಾಯ್ ಚಿನ್ ಗೂ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಸೆಂಟರ್ ಫಾರ್ ಲ್ಯಾಂಡ್ ವಾರ್ ಫೇರ್ ಸ್ಟಡೀಸ್ ನಿರ್ದೇಶಕರಾಗಿರುವ ನಿವೃತ್ತ ಮೇಜರ್ ಜನರಲ್ ಧ್ರುವ್ ಕಟೋಚ್ ಅವರ ಪ್ರಕಾರ ಭಾರತ ಈ ಸಮಸ್ಯೆಯನ್ನು ಭಾರತ-ಪಾಕ್ ನಡುವಿನ ಎಲ್ಲಾ ಸಂಘರ್ಷಗಳ ವಿಸ್ತಾರವದ ನೆಲೆಯಲ್ಲಿ ಪರಾಮರ್ಶಿಸಬೇಕು. ಸೇನಾ ಹಿಂಪಡೆಯುವಿಕೆಗೆ ಪಾಕಿಸ್ತಾನ ಉತ್ಸುಕವಾಗಿದ್ದರೂ, ಭವಿಷ್ಯದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯ ಮೇಲೆ ಇದು ಬೀರುವ ಪರಿಣಾಮ ಊಹೆಗೆ ನಿಲುಕದ್ದು. ಪಾಕಿಸ್ತಾನ ಅದೆಷ್ಟು ವಿಶ್ವಾಸಾರ್ಹ ರಾಷ್ಟ್ರ ಎಂಬ ಬಗ್ಗೆ ಚರಿತ್ರೆಯ ಪುಟಗಳೇ ಸಾರಿ ಹೇಳುತ್ತವೆ. ಒಂದು ವೇಳೆ ಪಾಕಿಸ್ತಾನ ಅಪ್ಪಿ ತಪ್ಪಿ(!) ನುಡಿದಂತೆ ನಡೆದರೂ, ಇತ್ತ ಕಡೆ ಸಿಯಾಚಿನ್ ಮೇಲೆ ಚೈನಾ ಆಕ್ರಮಣದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿಯಲ್ಲಿರುವ ಭಾರತಕ್ಕೆ, ನಮ್ಮ ಯೋಧರ ಬಲಿದಾನ ಮತ್ತು ಆ ಬಲಿದಾನವನ್ನು ದೇಶ ಗೌರವಿಸಿದ ರೀತಿ ಇನ್ನಷ್ಟು ಬಲ ತುಂಬಲಿದೆ.




  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vijayavani newspaper on 29 February 2016)