ಚೀನಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚೀನಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 24, 2016

ಸನ್ ತ್ಸು ಯುದ್ಧ ಕಲೆ ನೆನಪಿಸಿದ ಚೀನಾ ಸಮರ ತಂತ್ರ

"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ. ಯುದ್ಧ ತಂತ್ರಗಳಿಗೆ ಸಂಬಂಧಿಸಿದಂತೆ ಸನ್ ತ್ಸು ಬರೆದ ಅತ್ಯಂತ ಪ್ರಭಾವಶಾಲಿ ಪುಸ್ತಕವೇ 'ದ ಆರ್ಟ್ ಆಫ್ ವಾರ್'! ಪೂರ್ವ ಏಷ್ಯಾಕ್ಕೆ ಸೀಮಿತವಾಗಿದ್ದ ಈ ಪುಸ್ತಕದ ಪ್ರಭಾವ ಇಪ್ಪತ್ತನೇ ಶತಮಾನದಲ್ಲಿ ವಿಶ್ವದಾದ್ಯಂತ ಹರಡಿ ಶ್ರೇಷ್ಠ ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಕ್ರೀಡಾಪಟುಗಳ ಯಶಸ್ಸಿನ ಹಿಂದೆ ಮಹತ್ತರ ಪಾತ್ರ ವಹಿಸಿತ್ತು. ಇದೀಗ ವಿಶ್ವದ ದೊಡ್ಡಣ್ಣನಾಗಲು ಹೊರಟಿರುವ ಚೀನಾ ತನ್ನ ಶತ್ರುಗಳನ್ನು ಬಗ್ಗು ಬಡಿಯಲು ತನ್ನದೇ ನೆಲದ ಈ ಮಿಲಿಟರಿ ತಂತ್ರಜ್ಞನ ತಂತ್ರಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದೆ.

ದೇಶದ ಅವಿಭಾಜ್ಯ ಅಂಗವೊಂದರ ಮೇಲೆ ವಿದೇಶಿ ದಾಳಿಯಾದಾಗ ಅದನ್ನು ಖಂಡಿಸಿ ಅದರ ವಿರುದ್ಧ ಸರಕಾರದ ಜೊತೆ ಕೈ ಜೋಡಿಸುವುದು ದೇಶದ ನಾಗರಿಕನೊಬ್ಬನ ನೈತಿಕ ಜವಾಬ್ದಾರಿ. 'ದ ಆರ್ಟ್ ಆಫ್ ವಾರ್' ಪುಸ್ತಕದ ಮೊದಲ ಅಧ್ಯಾಯದಲ್ಲಿ ಸನ್ ತ್ಸು ನೈತಿಕತೆಯ ಪ್ರಭಾವವನ್ನು ಈ ರೀತಿ ವಿವರಿಸಿದ್ದಾನೆ, " ನೈತಿಕ ಪ್ರಭಾವದಿಂದಾಗಿ ಜನರು ತಮ್ಮ ನಾಯಕರೊಂದಿಗೆ ಸಾಮರಸ್ಯದಿಂದಿರುತ್ತಾರೆ. ಮತ್ತು ಸಾವಿನ ಭಯವೂ ಇಲ್ಲದೆ  ತಮ್ಮ ಜೀವನ ಪರ್ಯಂತ ನಾಯಕರಿಗೆ ಬೆಂಬಲವಾಗಿ ನಿಲ್ಲುತ್ತಾರೆ." ಹೀಗಾಗಿ ಚೀನಿ ನಾಯಕರು ತಮ್ಮ ಪ್ರಜೆಗಳನ್ನು ನೈತಿಕ ಪ್ರಭಾವದಲ್ಲಿಟ್ಟುಕೊಳ್ಳುವ ಪ್ರಯತ್ನಗಳು ಜಾರಿಯಲ್ಲಿಟ್ಟಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿಯೇ ಚೀನಾ ವಿದ್ಯಾರ್ಥಿಗಳಿಗೆ ಚೀನಾದ ಭೂಪ್ರದೇಶದ ಬಗ್ಗೆ ತಪ್ಪು ಮಾಹಿತಿಯನ್ನು ತುಂಬಲಾಗುತ್ತದೆ. ಚೀನಾಗೆ ಇತರ ರಾಷ್ಟ್ರಗಳ ಜೊತೆಗಿರುವ ಗಡಿ ತಗಾದೆಗಳ ವಿಚಾರವನ್ನು ಅತೀ ಬುದ್ಧಿವಂತಿಕೆಯಿಂದ ಮುಚ್ಚಿಡಲಾಗುತ್ತಿದೆ. ಈ ರೀತಿ ಚೀನಾ ಹಕ್ಕು ಸಾಧಿಸಿದ ಭೂಪ್ರದೇಶಗಳೆಲ್ಲವೂ ಅಧಿಕೃತವಾಗಿ ಚೀನಾ ಭೂಭಾಗಗಳೇ ಎಂದು ಬಿಂಬಿಸುವ ಪ್ರಯತ್ನ ಚೀನಾದ ಶಾಲಾ ತರಗತಿಗಳಲ್ಲಿ ನಿರ್ವಿಘ್ನವಾಗಿ ಸಾಗುತ್ತಿದೆ. ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಿತ ಈ ತಪ್ಪು ಪಾಠಗಳು, ವಯಸ್ಕರಾದಾಗ ಇನ್ನೂ ಗಟ್ಟಿಯಾಗುತ್ತವೆ. 2014ರಲ್ಲಿ ಸಂಸ್ಥೆಯೊಂದು ನಡೆಸಿದ ಸರ್ವೆಯೊಂದರಲ್ಲಿ ತಿಳಿದು ಬಂದ ಅಚ್ಚರಿಯ ವಿಷಯವೇನೆಂದರೆ ಸರ್ವೇಗೆ ಒಳಗಾದ ಪ್ರತಿಯೊಬ್ಬ ಚೀನೀ ವ್ಯಕ್ತಿಯೂ ' ನೈನ್ ಡ್ಯಾಶ್ ರೇಖೆ'ಯ ಒಳಗಿನ ಎಲ್ಲಾ ಭೂಭಾಗಗಳು ಚೀನಾದ ಅಧಿಕೃತ ಭೂಪ್ರದೇಶ ಎಂದು ನಂಬಿದ್ದಾರೆ! ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಬೇರೆ ಯಾವುದೇ ದೇಶ ಹಿಡಿತ ಬಲಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಚೀನಾ ಜನತೆ ತಮ್ಮ ನಾಯಕರ ಯಾವುದೇ ವಿಧ್ವಂಸಕ ನಿರ್ಧಾರವನ್ನು ಕಣ್ಣು ಮುಚ್ಚಿಕೊಂಡು ಒಪ್ಪಿ ಬಿಡುತ್ತಾರೆ. ಇದು ಚೀನಾದ ಕಮ್ಯುನಿಸ್ಟ್ ನಾಯಕರು ಜನತೆಯ ಮೇಲೆ ಹೇರಿರುವ ನೈತಿಕ ಪ್ರಭಾವ!

2016 ಜುಲೈನಲ್ಲಿ ಹೇಗ್ ನ್ಯಾಯಾಧಿಕರಣ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾದ ಆಕ್ರಮಣಕಾರಿ ನಿಲುವಿಗೆ ಛೀಮಾರಿ ಹಾಕಿ, ಈ ಪ್ರದೇಶದಲ್ಲಿ ಚೀನಾ ಹಕ್ಕು ಸಾಧಿಸುವುದು ಕಾನೂನು ಬಾಹಿರ ಎಂಬ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಅನುಷ್ಠಾನಗೊಳ್ಳುವ ಮುನ್ನವೇ ಸೆಪ್ಟೆಂಬರ್ ನಲ್ಲಿ ಚೀನಾ ಮತ್ತು ರಷ್ಯಾಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ವಿಶ್ವಕ್ಕೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಈ ಎರಡು ದೇಶಗಳ ನಡುವಿನ ಶೀತಲ ಸಮರದ ಕಾಲದ ವೈರತ್ವ ಹಂತ ಹಂತವಾಗಿ ಮರೆಯಾಗಿ, ಇದೀಗ ರಷ್ಯಾ ಮತ್ತು ಚೀನಾಗಳು ಪರಸ್ಪರರ ಹಿತಾಸಕ್ತಿಗಳಿಗೆ ಹೆಗಲು ಕೊಡುವ ಕೆಲಸ ಮಾಡುತ್ತಿವೆ. ತನ್ನ ಪುಸ್ತಕದ ಹನ್ನೊಂದನೆ ಅಧ್ಯಾಯದಲ್ಲಿ ಸನ್ ತ್ಸು ಮೈತ್ರಿ ಕೂಟಗಳ ಬಗ್ಗೆ ಈ ರೀತಿ ಬರೆಯುತ್ತಾನೆ, "ನೆರೆಹೊರೆಯ ರಾಜ್ಯಗಳ ಯೋಜನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಾವು ಯಾವುದೇ ಮತ್ರಿಕೂಟ ರಚಿಸಬಾರದು" ಚರಿತ್ರೆಯನ್ನು ಗಮನಿಸಿದರೆ ರಷ್ಯಾ ಒಂದು ಸಾರಿ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಗುರುತಿಸಿಕೊಂಡರೆ ಇನ್ನೊಂದು ಬಾರಿ ಪೂರ್ವದೆಡೆ ವಾಲುತ್ತದೆ. ರಷ್ಯಾದ ಭೂಭಾಗವೂ ಕೂಡ ಅತ್ತ ಪಶ್ಚಿಮವೂ ಅಲ್ಲದ, ಇತ್ತ ಪೂರ್ವಕ್ಕೂ ಸೇರದ ತ್ರಿಶಂಕು ಸ್ವರ್ಗ! ೧೯೯೦ರಲ್ಲಿ ಸೊವಿಯೆತ್ ಪತನದೊಂದಿಗೆ ರಷ್ಯಾ ಪಶ್ಚಿಮದ ರಾಷ್ಟ್ರಗಳ ಬಳಗ ಸೇರಿಕೊಂಡು ಬಿಟ್ಟಿತ್ತು. ಆದರೆ ವ್ಲಾದಿಮಿರ್ ಪುಟಿನ್ ಅಧಿಕಾರಕ್ಕೇರಿದ ಮೇಲೆ ರಷ್ಯಾದ ಪ್ರತಿ ಹೆಜ್ಜೆಯೂ ಪಾಶ್ಚಾತ್ಯ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದೆ. ರಷ್ಯಾದ ಈ ಆಕ್ರಮಣಕಾರಿ ಮನೋಭಾವದ ಹಿಂದೆ ಅಮೆರಿಕಾ ನಿಯಂತ್ರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಬದಲಿಸುವ ಮಹತ್ವಾಕಾಂಕ್ಷೆಯಿದೆ. ಹೀಗಾಗಿ ಅಮೆರಿಕಾ ನಿರ್ಮಿಸಿ, ನಿಯಂತ್ರಿಸುತ್ತಿರುವ ಈ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಧ್ವಂಸ ಮಾಡಲು ಸಮಾನಮನಸ್ಕ ದೈತ್ಯ ರಾಷ್ಟ್ರವೊಂದರ ಹುಡುಕಾಟದಲ್ಲಿರುವ ರಷ್ಯಾಗೆ ಸರಿಯಾದ ಸಮಯದಲ್ಲೇ ಕಣ್ಣಿಗೆ ಬಿದ್ದಿದ್ದು ಚೀನೀ ಡ್ರ್ಯಾಗನ್! ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಚೀನಾಗೆ ಸನ್ ತ್ಸು ಪುಸ್ತಕದಲ್ಲಿದ್ದ ಮಾದರಿ ಗೆಳೆಯ ರಷ್ಯಾ ರೂಪದಲ್ಲಿ ದೊರೆತಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕಾ ಹಸ್ತಕ್ಷೇಪ ಮಾಡಿದ ಕೂಡಲೇ ಅತ್ತ ರಷ್ಯಾ ಬಾಲ್ಟಿಕ್ ರಾಜ್ಯಗಳಿಗೆ ಬೆದರಿಕೆ ಒಡ್ಡುವ ಅಥವಾ ನೇರ ಮಿಲಿಟರಿ ಕಾರ್ಯಾಚರಣೆಗಿಳಿಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈಗಾಗಲೇ ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹಗಳನ್ನು ವಶಪಡಿಸಿಕೊಂಡಿದ್ದಷ್ಟೇ ಅಲ್ಲದೇ ಈ ದ್ವೀಪಗಳನ್ನು ತಮ್ಮ ಮಿಲಿಟರಿ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಬಂದರುಗಳನ್ನು ಆಧುನೀಕರಿಸಲಾಗಿದೆ. ದ್ವೀಪಗಳನ್ನು ಕೃತಕವಾಗಿ ವಿಸ್ತರಿಸುವುದರ ಮೂಲಕ ಹೆಚ್ಚಿನ ಸೈನ್ಯ, ಯುದ್ಧ ವಿಮಾನಗಳು, ಯುದ್ಧ ನೌಕೆಗಳ ಜೊತೆ ಸದೃಢ ರಕ್ಷಣಾ ವಲಯಗಳನ್ನು ರಚಿಸಲಾಗಿದೆ. 'ದ ಆರ್ಟ್ ಆಫ್ ವಾರ್' ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ಬರೆದಿರುವಂತೆ, " ನಿಪುಣ ಯೋಧರು ಮೊದಲಿಗೆ ತಮ್ಮನ್ನು ತಾವು ಅಭೇಧ್ಯರನ್ನಾಗಿಸಿಕೊಳ್ಳುತ್ತಾರೆ ಮತ್ತು ಶತ್ರುಗಳು ದಾಳಿಗೆ ಸುಲಭ ತುತ್ತಾಗುವ ಕ್ಷಣಕ್ಕೋಸ್ಕರ ಕಾಯುತ್ತಾರೆ" ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿಕೊಂಡಷ್ಟು ಮಿಲಿಟರಿ ನೆಲೆಗಳನ್ನು ಅಮೆರಿಕಾ ನಿರ್ಮಿಸಿಲ್ಲ. ಅಮೆರಿಕಾ ಪಿಲಿಪ್ಪೈನ್ಸ್ ಉಪಯೋಗಿಸಿಕೊಂಡು ದಾಳಿ ನಡೆಸಬಹುದಾದ ಸಾಧ್ಯತೆಗಳಿದ್ದರೂ, ಯುದ್ಧ ಸಂದರ್ಭದಲ್ಲಿ ಪಿಲಿಪ್ಪೈನ್ಸ್ ಒಪ್ಪಿಗೆ ಪಡೆದುಕೊಳ್ಳಲೇ ಬೇಕು. ಚೀನಾ ಮಾತ್ರ ಯಾರ ಹಂಗಿಲ್ಲದೇ ತನ್ನ ಮಿಲಿಟರಿ ನೆಲೆಗಳನ್ನು ಈಗಾಗಲೇ ಭದ್ರಪಡಿಸಿಕೊಡಿದೆ. 

ಏಷ್ಯಾ ಖಂಡದಲ್ಲಿ ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಹೊಸ ಗೆಳೆಯರನ್ನು ಸಂಪಾದಿಸಲು ಹಾತೊರೆಯುತ್ತಿದೆ. ಆದರೆ ಅಮೆರಿಕಾದ ಮಿತ್ರ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಮಧ್ಯೆ ಒಳಜಗಳಗಳಿರುವುದು ಚೀನಾಗೆ ಅನುಕೂಲಕರವಾಗಿದೆ. ಸನ್ ತ್ಸು ಪುಸ್ತಕದ ಮೂರನೇ ಅಧ್ಯಾಯದ ಪ್ರಕಾರ, " ಶತ್ರುವಿನ ಸಮರತಂತ್ರದ ಮೇಲೆ ದಾಳಿ ಮಾಡುವುದು ಯುದ್ಧದಲ್ಲಿ ಪ್ರಪ್ರಥಮ ಆದ್ಯತೆ ಪಡೆಯುತ್ತದೆ. ಎರಡನೇ ಆದ್ಯತೆ ಶತ್ರುವಿನ ಮೈತ್ರಿಕೂಟವನ್ನು ಛಿದ್ರಗೊಳಿಸುವುದು." ಚೀನಾಗೆ ಸವಾಲೊಡುವ ಉದ್ದೇಶದಿಂದಲೇ ಅಮೆರಿಕಾ ಪ್ರಾರಂಭಿಸಿದ ಟಿ.ಪಿ.ಪಿ ( Trans-Pacific Partnership) ಯಶಸ್ವಿಯಾಗದಿರಲು ಚೀನಾ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಪೂರ್ವ ಏಷ್ಯಾದ ರಾಷ್ಟ್ರಗಳಿಗೆ ಲಾಭದಾಯಕ ವ್ಯಾಪಾರ, ರಕ್ಷಣಾ ಸಂಬಂಧ ಮತ್ತು ರಾಜಕೀಯ ನೆರವು ನೀಡುವ ಮೂಲಕ ಚೀನಾ ಆ ದೇಶಗಳನ್ನು ಅಮೆರಿಕಾದ ಪ್ರಭಾವಕ್ಕೆ ಒಳಗಾಗದಂತೆ ತಡೆಯುತ್ತಿದೆ. ಅಮೆರಿಕಾದ ಟಿ.ಪಿ.ಪಿ ಗೆ ಪ್ರತಿಸ್ಪರ್ಧಿಯಾಗಿ ಚೀನಾ ಆರ್.ಸಿ.ಇ.ಪಿ (Regional Comprehensive Economic Partnership) ರಚನೆ ಮಾಡಿ ಈ ಪ್ರದೇಶದಿಂದ ಅಮೆರಿಕಾವನ್ನು ಹೊರಗಿಡುವ ವ್ಯವಸ್ಥಿತ ಪ್ರಯತ್ನವೊಂದು ಈಗಾಗಲೇ ಜಾರಿಯಲ್ಲಿದೆ. ಹೇಗ್ ನ್ಯಾಯಾಧಿಕರಣದಲ್ಲಿ ಪಿಲಿಪ್ಪೈನ್ಸ್ ಕೈ ಮೇಲಾದ ನಂತರ ಪಿಲಿಪ್ಪೈನ್ಸ್ ಜೊತೆಗೂ ಸೌಹಾರ್ದಯುತ ಸಂಬಂಧಕ್ಕೆ ಚೀನಾ ಮುಂದಾಗಿರುವುದೇ ಇದಕ್ಕೆ ಸಾಕ್ಷಿ.

"ನೀವು ನಿಜಕ್ಕೂ ಬಲಶಾಲಿಯಾಗಿದ್ದಾಗ, ದುರ್ಬಲನಂತೆ ಕಾಣಿಸಿಕೊಳ್ಳಬೇಕು ಮತ್ತು ನಿಜಕ್ಕೂ ದುರ್ಬಲರಾಗಿದ್ದಾಗ ಬಲಶಾಲಿಯಂತೆ ತೋರ್ಪಡಿಸಿಕೊಳ್ಳಬೇಕು!" ಎಂದಿದ್ದ ಸನ್ ತ್ಸು ವಿಚಾರಗಳು ಇವತ್ತಿಗೆ ಚೀನಾ ರಾಜತಂತ್ರದಲ್ಲಿ ಮತ್ತೆ ಪ್ರಸ್ತುತ ಎನಿಸುತ್ತಿದೆ. ಸೇನಾಧಿಪತಿಯಾಗಿ ರಣರಂಗದ ವ್ಯಾವಹಾರಿಕ ಅನುಭವವಿದ್ದ ಸನ್ ತ್ಸು ಪುಸ್ತಕವೂ ಯುದ್ಧ ತಂತ್ರಗಳ ಕುರಿತಾಗಿಯೇ ಇದೆಯೆಂದ ಮಾತ್ರಕ್ಕೆ ಸನ್ ತ್ಸು ಒಬ್ಬ ಯುದ್ಧ ಪಿಪಾಸು ಎಂದುಕೊಳ್ಳುವಂತಿಲ್ಲ. ಯುದ್ಧ ಮಾಡಿ ಪಡೆಯುವ ನೂರು ವಿಜಯಗಳಿಗಿಂತ ಯುದ್ಧವಿಲ್ಲದೇ ಸಾಧಿಸುವ ಒಂದು ಜಯ ಅತ್ಯಂತ ಶ್ರೇಷ್ಠ ಎನ್ನುವ ಸನ್ ತ್ಸು "ಯುದ್ಧವನ್ನೇ ಮಾಡದೇ ಶತ್ರುವನ್ನು ನಿಗ್ರಹಿಸುವುದು ಅತ್ಯಂತ ಶ್ರೇಷ್ಠ ಸಮರ ಕಲೆ" ಎಂದು ಅಭಿಪ್ರಾಯ ಪಡುತ್ತಾನೆ. ಚೀನೀ ನಾಯಕರು ತಮ್ಮ ಆಕ್ರಮಣಕಾರಿ ನೀತಿಯಲ್ಲಿ ಸನ್ ತ್ಸು ವಿಚಾರಗಳನ್ನು ಯಾವ ರೀತಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಈಗಾಗಲೇ ಸ್ಪಷ್ಟ. ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಚೀನಾ ಆಯ್ದುಕೊಂಡ ಆಯ್ಕೆಗಳಿಗೂ 'ದ ಆರ್ಟ್ ಆಫ್ ವಾರ್' ಪುಸ್ತಕದಲ್ಲಿರುವ ತಂತ್ರಗಳಿಗೂ ಬಹಳಷ್ಟು ಸಾಮ್ಯತೆಗಳಿವೆ. ಸನ್ ತ್ಸು ಸಮರತಂತ್ರಗಳನ್ನು ಗಮನಿಸಿದಾಗ ಭಾರತದ ಶ್ರೇಷ್ಠ ಸಮರತಂತ್ರಜ್ಞ ಮತ್ತು ರಾಜತಾಂತ್ರಿಕ ನಿಪುಣ ಆಚಾರ್ಯ ಚಾಣಕ್ಯರ ನೆನಪಾಗದೇ ಇರಲಾರದು. ಚೀನಾ ಜೊತೆಗೆ ಗಡಿ ಮತ್ತಿನ್ನಿತರ ತಕರಾರುಗಳನ್ನು ನಿಭಾಯಿಸಬೇಕಾದ ಭಾರತವೂ ಚೀನಾದ ಈ ಹೊಸ ನಡೆಗಳಿಗೆ ಪ್ರತಿತಂತ್ರ ಹುಡುಕುವ ಅನಿವಾರ್ಯತೆಯಿದೆ.

(This article was published in Hosa Digantha newspaper on 22 November 2016)






      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bengaluru



      

ಶನಿವಾರ, ನವೆಂಬರ್ 19, 2016

ಚೀನಾ ಡ್ರ್ಯಾಗನ್ ಗೆ ಜಪಾನ್ ಸಮುರಾಯಿ ಸವಾಲು

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಶೀತಲ ಸಮರದ ಅನೂಹ್ಯ ತಿರುವೊಂದರಲ್ಲಿ ಅಮೆರಿಕಾ ಏಷ್ಯಾದಲ್ಲಿ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ದೈತ್ಯ ಶಕ್ತಿ ಚೀನಾ ಜೊತೆಗೆ ಬಾಂಧವ್ಯ ಬೆಳೆಸಿಕೊಂಡಿತ್ತು. ಆವತ್ತಿನ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟವನ್ನು ನಿಯಂತ್ರಿಸಲು ಅಮೆರಿಕಾಕ್ಕೆ ಚೀನಾದ ಅವಶ್ಯಕತೆಯೂ ಬಹಳಷ್ಟಿತ್ತು. ಆದರೆ ಕಳೆದೊಂದು ದಶಕದಿಂದ ಜಾಗತಿಕ ರಾಜಕಾರಣದಲ್ಲಾದ ಬದಲಾವಣೆಗಳೊಂದಿಗೆ ಚೀನಾ ಮೇಲಿನ ಅಮೆರಿಕಾ  ಧೋರಣೆಗಳೂ ಬದಲಾಗಿವೆ. ಚೀನಾ ಜೊತೆ ವಿಬಿನ್ನ ಸ್ತರಗಳಲ್ಲಿ ಆರ್ಥಿಕ ಸಂಬಂಧಗಳಿವೆಯಾದರೂ ಅಮೆರಿಕಾ ಇತ್ತೀಚೆಗೆ ಚೀನಾ ಪ್ರಭಾವವನ್ನು ನಿಯಂತ್ರಿಸುವತ್ತ ತನ್ನ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕಾ ಏಷ್ಯಾದ ಕೆಲ ಪ್ರಮುಖ ಶಕ್ತಿಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಒಲವು ಪ್ರದರ್ಶಿಸುತ್ತಿದೆ. ಪಾಕಿಸ್ತಾನದ ವಿಚಾರದಲ್ಲಿ ಪದೇ ಪದೇ ಪರ ವಹಿಸಿಕೊಳ್ಳುತ್ತಿದ್ದ ಅಮೆರಿಕಾ ಇತ್ತಿಚೆಗೆ ಭಾರತದ ಸ್ನೇಹ ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಮೂಲಕ ಭಾರತವನ್ನು ಉಪಯೋಗಿಸಿಕೊಂಡು ಚೀನಾವನ್ನು ಬಗ್ಗುಬಡಿಯುವುದು ಅಮೆರಿಕಾದ ರಣತಂತ್ರ. ಒಂದು ಕಾಲದ ಪರಮ ವೈರಿ ವಿಯೆಟ್ನಾಮ್ ಜೊತೆಗೂ ಅಮೆರಿಕಾ ಸಮರತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳ ಚೀನಾ ವೈರತ್ವವನ್ನೂ ತನ್ನ ಪರವಾಗಿ ಉಪಯೋಗಿಸಿಕೊಳ್ಳುವ ಅವಕಾಶವನ್ನು ಅಮೆರಿಕಾ ಕೈಬಿಟ್ಟಿಲ್ಲ. ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರವಾಗಿ ಭಾರತ, ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ವಿಶೇಷ ಮೈತ್ರಿಕೂಟದ ರಚನೆಗೂ ವೇದಿಕೆ ಸಿದ್ಧವಾಗಿದೆ.

ಚೀನಾ ಆಕ್ರಮಣಕಾರಿ ನೀತಿಗೆ ತಿರುಗೇಟು ನೀಡಲು ಇಷ್ಟೆಲ್ಲಾ ಪ್ರಯತ್ನಗಳ ಮಧ್ಯೆ ಜಪಾನ್ ಮಾತ್ರ ಅಮೆರಿಕಾವನ್ನು ಸಂಪೂರ್ಣ ಅವಲಂಬಿಸದೆ ಚೀನಾವನ್ನು ಅಂಕೆಯಲ್ಲಿಡುವುದಕ್ಕೆ ತನ್ನದೇ ಆದ ಸಮರತಂತ್ರ ರೂಪಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದ ವಿವಾದದ ಕುರಿತಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಚೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದಾಗ ಜಪಾನ್ ಮುಕ್ತವಾಗಿಯೇ ಆಗ್ನೇಯ ಏಷ್ಯಾ ರಾಷ್ಟ್ರಗಳ ಬೆಂಬಲಕ್ಕೆ ನಿಂತಿತ್ತು. 2013ರಲ್ಲೇ ಜಪಾನ್ ಈ ವಿಚಾರವಾಗಿ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಜೊತೆ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಆನಂತರದ ವರ್ಷಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಧೋರಣೆಯನ್ನು ಖಡಾಖಂಡಿತವಾಗಿ ವಿರೋದಿಸುತ್ತಲೇ ಬಂದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡಲು ಜಪಾನ್ ನೌಕಾಬಲವೂ ಸಾಗರಕ್ಕಿಳಿದಿರುವುದು ಚೀನಾವನ್ನು ಬೆಚ್ಚಿಬೀಳುವಂತೆ ಮಾಡಿದೆ. ವಿಯೆಟ್ನಾಮ್ ಮತ್ತು ಮಲೇಷಿಯಾಗಳಿಗೆ ಗಸ್ತು ಹಡಗುಗಳನ್ನು ಒದಗಿಸಲು ಜಪಾನ್ ಒಪ್ಪಿಕೊಂಡಿದೆಯಷ್ಟೇ ಅಲ್ಲದೇ ಪಿಲಿಪ್ಪೈನ್ಸ್ ಗೆ ಸಾಗರ ಸಂಬಂಧಿತ ಮಿಲಿಟರಿ ರಕ್ಷಣೆ ಮತ್ತು ಇಂಡೊನೇಷಿಯಾ ಜೊತೆ ರಕ್ಷಣಾ ಒಪ್ಪಂದಗಳಿಗೂ ಸಹಿ ಹಾಕಿದೆ. ಈ ಮೂಲಕ ಚೀನಾವನ್ನು ಮಣ್ಣುಮುಕ್ಕಿಸಲು ಯಾವ ದೇಶದ ಜೊತೆಗೂ ಸಮರತಾಂತ್ರಿಕ ಸಂಧಾನಕ್ಕೂ ಸೈ ಎನ್ನುವ ಮನೋಭಾವ ಪ್ರದರ್ಶಿಸುತ್ತಿದೆ!

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದೊಂದಿಗೆ 1.65 ಬಿಲಿಯನ್ ಡಾಲರ್ ಗಳ ಮಿಲಿಟರಿ ಯುದ್ಧ ವಿಮಾನಗಳ ಒಪ್ಪಂದವೊಂದಕ್ಕಾಗಿ ಜಪಾನ್ ನಲ್ಲಿ ಈಗಾಗಲೇ ಪ್ರಯತ್ನಗಳು ಜಾರಿಯಲ್ಲಿವೆ. ಸಾಗರ ಸಂಬಂಧಿತ ರಕ್ಷಣೆಯ ವಿಚಾರವಾಗಿಯೂ ಹಲವಾರು ಒಪ್ಪಂದಗಳ ಸಾಧ್ಯತೆ ದಟ್ಟವಾಗಿದೆ. ಈ ವಿಷಯಗಳನ್ನು ಗಮನಿಸಿದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ರಾಜನ್ ಮೆನನ್ ತಮ್ಮ ಸಂಶೋಧನೆಯಲ್ಲಿ ಜಪಾನ್ ಮತ್ತು ಭಾರತದ ಮಧ್ಯೆ ಮಿಲಿಟರಿ ಒಕ್ಕೂಟವೊಂದು ಏರ್ಪಡುವ ಎಲ್ಲಾ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಏಷ್ಯಾದಲ್ಲಿ ಚೀನಾ ನಡೆಗಳನ್ನು ಗಂಭೀರವಾಗಿ ಪ್ರತಿರೋಧಿಸಲು ಜಪಾನ್ ಗೆ ಬಲವಾದ ಕಾರಣಗಳೂ ಇವೆ. ಡಯಾಯು/ಸೆಂಕಾಕು ದ್ವೀಪಗಳ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಚೀನಾ ಪ್ರಯತ್ನ ಜಪಾನ್ ರಾಜತಾಂತ್ರಿಕ ವಲಯದಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಈ ಬಾರಿ ಚೀನೀಯರನ್ನು ರಾಜತಾಂತ್ರಿಕವಾಗಿ ಮತ್ತು ಸಮರತಾಂತ್ರಿಕ ರೀತಿಯಲ್ಲೂ ಕಟ್ಟಿಹಾಕುವ ಉತ್ಸಾಹದಲ್ಲಿರುವ ಜಪಾನ್ ಸಹಜವಾಗಿಯೇ ಏಷ್ಯಾದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವ ಭಾರತದೊಂದಿಗೆ ಗೆಳೆತನ ಬಯಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ನವೆಂಬರ್ ನಲ್ಲಿ ಜಪಾನ್ ಭೇಟಿ ಮಾಡಲಿದ್ದಾರೆ. ತಮ್ಮ ಎರಡು ದಿನಗಳ ಜಪಾನ್ ಭೇಟಿಯಲ್ಲಿ ಜಪಾನಿನ ರಾಜ ಅಕಿಟೊ ಮತ್ತು ಪ್ರಧಾನಿ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಿ ಹಲವಾರು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿಶೇಷವಾಗಿ ಭಾರತ ಮತ್ತು ಜಪಾನ್ ಗಳು ನಾಗರಿಕ ಅಣು ಒಪ್ಪಂದಕ್ಕೂ ಸಹಿ ಮಾಡಲಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪದಕ್ಕೆ ಭಾರತ ಸಹಿ ಹಾಕದ ಕಾರಣ ಹಿಂದೊಮ್ಮೆ ಭಾರತದೊಂದಿಗೆ ನಾಗರಿಕ ಅಣು ಒಪ್ಪಂದಕ್ಕೆ ಹಿಂದೇಟು ಹಾಕಿದ್ದ ಜಪಾನ್ ಇದೀಗ ಭಾರತದ ಬಗ್ಗೆ ತನ್ನ ಮೃದು ನಿಲುವನ್ನು ತಳೆದಿದೆ. ಒಂದು ರೀತಿಯಲ್ಲಿ ಚೀನಾ ಜೊತೆ ಗಡಿವಿವಾದ ಹಂಚಿಕೊಂಡಿರುವ ಮತ್ತು ಚೀನಾದಿಂದ ಸಮಾನ ಬೆದರಿಕೆ ಎದುರಿಸುತ್ತಿರುವ ಎರಡು ರಾಷ್ಟ್ರಗಳೆಂದರೆ ಭಾರತ ಮತ್ತು ಜಪಾನ್. ಶತ್ರುವಿನ ಶತ್ರು ಮಿತ್ರ ಎಂಬ ಚಾಣಕ್ಯವಾಣಿಯಂತೆ ಭಾರತಕ್ಕೆ ಜಪಾನ್ ಅದೇ ರೀತಿ ಜಪಾನ್ ಗೆ ಭಾರತದ ಅವಶ್ಯಕತೆ ಬಹಳಷ್ಟಿದೆ. ತೆರೆಮರೆಯಲ್ಲಿ ಪಾಕಿಸ್ತಾನದ ಎಲ್ಲಾ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ, ಯುದ್ಧ ಸಂದರ್ಭದಲ್ಲೂ ಪಾಕ್ ಬೆನ್ನಿಗೆ ನಿಲ್ಲುವ ಈ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಬಂದಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ. ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯಲು ಹೊಸದಾಗಿ ರೂಪ ಪಡೆಯುತ್ತಿರುವ 'ಕ್ವಾಡ್' ಮಿಲಿಟರಿ ಒಕ್ಕೂಟದಲ್ಲೂ ಭಾರತ ಮತ್ತು ಜಪಾನ್ ಪ್ರಮುಖ ಪಾತ್ರವಹಿಸಲಿವೆ.

ಹಿಂದೊಮ್ಮೆ ಜಪಾನ್ ಆಕ್ರಮಣಗಳು ಮತ್ತು ಮಿಲಿಟರಿ ಸಾಧನೆಗಳು ಚೀನಾದ ನಿದ್ದೆಗೆಡಿಸಿದ್ದವು. ಆದರೆ ದ್ವಿತೀಯ ಮಹಾಯುದ್ಧದ ಅಂತ್ಯ ಜಪಾನ್ ಪಾಲಿಗೆ ದಾರುಣವಾಗಿತ್ತು. 1945ರ ಆಗಸ್ಟ್ 6ರಂದು ಲಿಟಲ್ ಬಾಯ್ ಹಿರೊಶಿಮಾವನ್ನು, ಆಗಸ್ಟ್ 9ಕ್ಕೆ ಫ್ಯಾಟ್ ಮ್ಯಾನ್ ನಾಗಸಾಕಿಯನ್ನು ಧ್ವಂಸ ಮಾಡುವುದರೊಂದಿಗೆ ಏಷ್ಯಾದ ಸಿಡಿಲಮರಿಯಂತಿದ್ದ ಜಪಾನ್ ಗೆ ಮಂಕು ಬಡಿದಂತಾಗಿತ್ತು. ಈ ಘಟನೆಯ ಬಳಿಕ ಇತಿಹಾಸದ ಸಂಕೋಲೆಗಳಲ್ಲಿ ಬಂಧಿಯಾಗಿದ್ಧ ಜಪಾನಿನ ವಿದೇಶಾಂಗ ನೀತಿ ಇದೀಗ ಮತ್ತೆ ತನ್ನ ಗತವೈಭವವನ್ನು ನೆನಪಿಸಿಕೊಳ್ಳುತ್ತಿದೆ. ಭಾರತದ ಪ್ರಧಾನಿ ಮೋದಿ ಮತ್ತು ಜಪಾನಿನ ಅಬೆಯವರ ವಿಚಾರಧಾರೆಗಳಲ್ಲಿರುವ ಸಾಮ್ಯತೆಗಳು ಮತ್ತು ಈ ಇಬ್ಬರೂ ನಾಯಕರೂ ಆಕ್ರಮಣಕಾರಿ ಚೀನಾ ಬಗ್ಗೆ ಹೊಂದಿರುವ ಪ್ರಾಮಾಣಿಕ ಕಾಳಜಿಗಳು ಭವಿಷ್ಯದ ಏಷ್ಯಾ ಶಕ್ತಿ ರಾಜಕೀಯದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ ಮೂಡಿಸಿವೆ. 

(This article was published in Hosa Digantha newspaper on 2 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ಬುಧವಾರ, ಆಗಸ್ಟ್ 3, 2016

ದಕ್ಷಿಣ ಚೀನಾ ಸಮುದ್ರ: ಚೀನಿ ಡ್ರ್ಯಾಗನ್‌ಗೆ ಫ್ರೆಂಚ್ ಸವಾಲು


"ಫ್ರೆಂಚ್ ನೌಕಾಪಡೆ ದಕ್ಷಿಣ ಚೀನಾ ಸಮುದ್ರದೆಡೆ ಗಮನ ಹರಿಸುವ ಮೂಲಕ ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯುವ ಪ್ರಯತ್ನಗಳು ಉತ್ಸಾಹದಿಂದಲೇ ನಡೆಯುತ್ತಿವೆ. ದಿನೇ ದಿನೇ ಹೆಚ್ಚಾಗುತ್ತಿರುವ ಚೀನೀ ಆಟಗಳಿಗೆ ಕಡಿವಾಣ ಹಾಕಲು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಭಾರತದ ಸಮರನೀತಿಯ ತಜ್ಞರಿಗೆ ಫ್ರೆಂಚರ ಈ ಹೊಸ ನಡೆ ಅನೇಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ."
- ಕೀರ್ತಿರಾಜ್



ವಿಶ್ವದ ಅತ್ಯಂತ ಹೆಚ್ಚು ವ್ಯಾಪಾರ ಚಟುವಟಿಕೆಯ ಸಮುದ್ರ ಮಾರ್ಗವಾಗಿದ್ದ ದಕ್ಷಿಣ ಚೀನಾ ಸಮುದ್ರ, ಚೀನಾದ ಆಕ್ರಮಣಕಾರಿ ನಿಲುವಿನಿಂದಾಗಿ ವಿಶ್ವದ ಅತೀ ವಿವಾದಾತ್ಮಕ ಪ್ರದೇಶವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಹೊರಬಿದ್ದ ಹೇಗ್ ನ್ಯಾಯಾಧಿಕರಣದ ತೀರ್ಪಿಗೂ ಸಡ್ಡು ಹೊಡೆದು, ಚೀನಾ ಈ ಪ್ರದೇಶದ ಮೇಲಿನ ತನ್ನ ಅಕ್ರಮ ಪ್ರಭಾವವನ್ನು ಇನ್ನಷ್ಟು ಬಿಗಿಯಾಗಿಸಿದೆ. ಆಗ್ನೇಯ ಏಷ್ಯಾದ ಸಣ್ಣಪುಟ್ಟ ರಾಷ್ಟ್ರಗಳಾದ ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈಗಳು ವಿವಾದಿತ ದಕ್ಷಿಣ ಚೀನಾ ಪ್ರದೇಶದಲ್ಲಿ ತಮ್ಮದೇ ಆದ ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿವೆಯಾದರೂ, ಚೀನೀ ದೈತ್ಯನನ್ನು ನೇರವಾಗಿ ಎದುರಿಸಲಾಗದೆ ಹೇಗ್ ನ್ಯಾಯಾಧಿಕರಣದ ಅನುಷ್ಠಾನಕ್ಕಾಗಿ ಕಾಯುತ್ತಿವೆ. 2013ರಲ್ಲಿ ಪಿಲಿಪ್ಪೈನ್ಸ್ ಚೀನಾದ ಈ ಪುಂಡಾಟಿಕೆಯ ವಿರುದ್ಧ ಅಂತರ್ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಚಾರಣೆಯನ್ನು ಅಂತರ್ರಾಷ್ಟ್ರೀಯ ನ್ಯಾಯಾಲಯ ಹೇಗ್ ನ್ಯಾಯಾಧಿಕರಣಕ್ಕೆ ಒಪ್ಪಿಸಿ, ಕೊನೆಗೆ ಇದೇ ಜುಲೈ 12ರಂದು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣ ಚೀನಾದ ವಾದಗಳನ್ನು ತಿರಸ್ಕರಿಸಿ ಮಹತ್ವದ ತೀರ್ಪು ನೀಡಿತ್ತು. ದಶಕಗಳಿಂದ 'ನೈನ್ ಡ್ಯಾಶ್ ರೇಖೆ' ಮತ್ತು ಐತಿಹಾಸಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸ್ಥಾಪಿಸಿದ್ದ ಅಧಿಪತ್ಯವನ್ನು ಹೇಗ್ ನ್ಯಾಯಾಧಿಕರಣ ಕಾನೂನುಸಮ್ಮತವಲ್ಲದ, ಅನಧಿಕೃತ ನಡೆ ಎಂದು ತೀರ್ಮಾನಿಸಿಬಿಟ್ಟಿತು.

ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು ಎಂಬಂತೆ ಹೇಗ್ ನ್ಯಾಯಾಧಿಕರಣ ಚೀನಾದ ವಿರುದ್ಧ ತೀರ್ಪು ಕೊಟ್ಟು ಸುಮ್ಮನಾಗಿದ್ದರೆ, ಇತ್ತ ಕಡೆ ಈ ತೀರ್ಪನ್ನು ಅನುಷ್ಠಾನ ಮಾಡುವವರು ಯಾರು ಎಂಬ ಪ್ರಶ್ನೆ ಮೂಡಿದೆ. ನ್ಯಾಯಾಧಿಕರಣದ ತೀರ್ಪು ಹೊರಬೀಳುವುದಕ್ಕೆ ಮೊದಲೇ, ಚೀನೀ ನಾಯಕರು ದಕ್ಷಿಣ ಚೀನಾ ಸಮುದ್ರದ ವಿವಾದ ನ್ಯಾಯಾಧಿಕರಣದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದ್ದರು. ತೀರ್ಪು ಹೊರಬಿದ್ದ ಬಳಿಕವೂ, ಈ ವಿಚಾರ ಚೀನಾದ ಸಾರ್ವಭೌಮತ್ವಕ್ಕೆ ಅಡ್ಡಿ ತರುವುದರಿಂದ ಚೀನಾ ಯಾವುದೇ ತೀರ್ಪಿಗೆ ಬದ್ಧವಾಗಿರುವುದಿಲ್ಲ ಮತ್ತು ಒಟ್ಟಾರೆ ತೀರ್ಪು ಅನೂರ್ಜಿತ ಮತ್ತು ಅಕ್ರಮ ಎಂದಿದೆ ಚೀನಿ ಡ್ರ್ಯಾಗನ್! ಅಮೆರಿಕಾ ನಾಯಕತ್ವದಲ್ಲಿ ಮಿತ್ರ ರಾಷ್ಟ್ರಗಳು ಹೇಗ್ ತೀರ್ಪನ್ನು ಜಾರಿಗೊಳಿಸುವಲ್ಲಿ ಉತ್ಸುಕವಾಗಿದ್ದರೂ, ಚೀನಾವನ್ನು ಪ್ರಶ್ನಿಸುವಷ್ಟು ನೈತಿಕತೆಯನ್ನು ಅಮೆರಿಕಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಉಳಿಸಿಕೊಂಡಿಲ್ಲ ಎಂಬುದು ಕಹಿಸತ್ಯ. ನೆದರ್ಲ್ಯಾಂಡ್ಸ್ ಪ್ರಕರಣದಲ್ಲಿ ರಷ್ಯಾ ನ್ಯಾಯಾಧಿಕರಣದ ಮಾತನ್ನು ಧಿಕ್ಕರಿಸಿದ್ದರೆ, ಚಾಗೊಸ್ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಧಿಕರಣದ ತೀರ್ಪಿಗೆ ಕಿವುಡಾಗಿತ್ತು. ಅಮೆರಿಕಾವಂತೂ ಇನ್ನು ಸಾಗರದ ಕಾನೂನಿಗೆ ಸಂಬಂಧಿಸಿದ ಅಂತರ್ರಾಷ್ಟ್ರೀಯ ಒಪ್ಪಂದವನ್ನು ಅಂಗೀಕರಿಸದೇ, ಕಾನೂನು ಇತರಿರಾಗಿ ಮಾತ್ರ ತನಗಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದೆ. ಇಷ್ಟಾದ ಮೇಲೂ ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈಗಳು ಸೇರಿದಂತೆ ವಿಶ್ವದ ಯಾವ ರಾಷ್ಟ್ರ ತಾನೆ ಚೀನಿ ಡ್ರ್ಯಾಗನ್ ಎದುರುಹಾಕಿಕೊಂಡೀತು?

ಆಶ್ಚರ್ಯಕರ ರೀತಿಯಲ್ಲಿ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಯಾವುದೇ ನೇರ ಸಂಬಂಧವಿಲ್ಲದ ಯುರೋಪಿನ ದೇಶ ಫ್ರಾನ್ಸ್ ಈ ಪ್ರದೇಶದ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ ಆಸಕ್ತಿ ತೋರಿಸುತ್ತಿದೆ. ಇತ್ತೀಚೆಗೆ ಸಿಂಗಪೂರ್ ನಲ್ಲಿ ನಡೆದ ಶ್ಯಾಂಗ್ರಿ ಲಾ ಸಮಾವೇಶದಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಜೀನ್ ಡ್ರಿಯಾನ್, ಯುರೋಪಿಯನ್ ಒಕ್ಕೂಟದ ನೌಕಾಬಲಗಳನ್ನು ಸಮನ್ವಯಗೊಳಿಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಅಡೆತಡೆಗಳನ್ನು ನಿವಾರಿಸುವ ಮಾತುಗಳನ್ನಾಡಿದ್ದಾರೆ. ಜೀನ್ ಡ್ರಿಯಾನ್ ಅವರ ಭಾಷಣದಲ್ಲೆಲ್ಲೂ ಚೀನಾ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲದೇ ಹೋದರೂ, ಆಕ್ರಮಣಕಾರಿ ಚೀನಾ ಪಾಲಿಗೆ ಫ್ರೆಂಚರ ಈ ನಡೆ ಎಚ್ಚರಿಕೆಯೇ ಸರಿ. ಆಧುನಿಕ ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿರುವ ಫ್ರಾನ್ಸ್, ಅಂತರ್ರಾಷ್ಟ್ರೀಯ ನ್ಯಾಯಕ್ಕೆ ಬೆನ್ನೆಲುಬಾಗಿ ನಿಂತ ಉದಾಹರಣೆಗಳೂ ಬಹಳಷ್ಟಿವೆ. ಸಮಕಾಲೀನ ವಿಶ್ವದ ಬಲಾಡ್ಯರಿಗೆ ಹೋಲಿಸಿದಲ್ಲಿ ಅಂತರ್ರಾಷ್ಟ್ರೀಯ ಕಾನೂನಿನ ಜಾರಿಗೆ ಫ್ರಾನ್ಸ್ ಕೊಡುಗೆ ಪ್ರಶಂಸನೀಯವೇ ಸರಿ. ಅಮೆರಿಕಾ ನೇತೃತ್ವದ ನ್ಯಾಟೋ ಮಿಲಿಟರಿ ಒಕ್ಕೂಟದ ಭಾಗವಾಗಿದ್ದರೂ ಅಮೆರಿಕಾದ ಇಬ್ಬಂದಿ ನೀತಿಗಳಿಗೆ ಮತ್ತು ದೊಡ್ಡಣ್ಣನೆಂಬ ಅಹಂಕಾರಕ್ಕೆ ಪದೇ ಪದೇ ಹೊಡೆತ ನೀಡಿದ್ದು ಇದೇ ಫ್ರಾನ್ಸ್. ನ್ಯಾಟೋ ಸದಸ್ಯನಾಗಿದ್ದರೂ ಅಮೆರಿಕಾದ ಎಲ್ಲಾ ಮಾತುಗಳಿಗೆ ಸಲಾಮ್ ಹೊಡೆಯದೆ ರೆಬೆಲ್ ಆಗಿ ಗುರುತಿಸಿಕೊಂಡಿದ್ದು ಫ್ರಾನ್ಸ್ ವಿಶೇಷತೆ. ಬ್ರಿಟನ್ ಸೇರಿದಂತೆ ಯುರೋಪಿನ ದೇಶಗಳೆಲ್ಲಾ ದ್ವಿತೀಯ ಸಮರದ ನಂತರ ಅಮೆರಿಕಾದ ಅಡಿಯಾಳುಗಳಂತೆ ವರ್ತಿಸತೊಡಗಿದಾಗ, ಜರ್ಮನಿ ಮನವೊಲಿಸಿ ಯುರೋಪಿಯನ್ ಒಕ್ಕೂಟಕ್ಕೆ ಬುನಾದಿ ಹಾಕಿ ಪರ್ಯಾಯ ನಾಯಕತ್ವ ಸೃಷ್ಟಿಸಿದ ಕೀರ್ತಿಯೂ ಫ್ರಾನ್ಸ್ ಪಾಲಿಗೆ ಸಲ್ಲುತ್ತದೆ. ಈ ಎಲ್ಲಾ ಹಿನ್ನೆಲೆಗಳಿಂದ ದಕ್ಷಿಣ ಚೀನಾ ಸಮುದ್ರದತ್ತ ಫ್ರೆಂಚರ ಆಗಮನ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಾಮಾನ್ಯ ದೃಷ್ಟಿಯಲ್ಲಿ ಯುರೋಪಿನ ಮೂಲೆಯಲ್ಲಿರುವ ಫ್ರೆಂಚರಿಗೂ, ದಕ್ಷಿಣ ಚೀನಾ ಸಮುದ್ರಕ್ಕೂ ಎತ್ತಣಿಂದೆತ್ತಣ ಸಂಬಂಧ ಎಂದೆನಿಸಬಹುದು. ವಾಸ್ತವವಾಗಿ ಈ ಪ್ರದೇಶಕ್ಕೆ ಫ್ರೆಂಚರು ಹೊಸಬರೇನಲ್ಲ. ಹಿಂದೂ ಮಹಾಸಾಗರದಲ್ಲಿ ಲಾ ರೀಯೂನಿಯನ್, ಮಯೊಟ್ಟೆಗಳೂ ಸೇರಿದಂತೆ ದಕ್ಷಿಣ ಪೆಸಿಫಿಕ್ ನಲ್ಲಿ ಫ್ರೆಂಚ್ ಪಾಲಿನೆಸಿಯ, ನ್ಯೂ ಕ್ಯಾಲೆಡೋನಿಯಾ, ವಾಲ್ಲೀಸ್ ಮತ್ತು ಫುಟುನಾ ದ್ವೀಪಗಳಂಥ ಭೂಪ್ರದೇಶಗಳನ್ನು ಹೊಂದಿರುವ ಫ್ರಾನ್ಸ್ ಕೂಡ ಒಂದು ಏಷ್ಯಾ-ಪೆಸಿಫಿಕ್ ರಾಷ್ಟ್ರ ಎಂಬ ವಿಚಾರ ಮರೆಯಲಾಗದು. ಇಷ್ಟಲ್ಲದೇ ವಿವಿಧ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಲ್ಲಿ 130,000 ಫ್ರೆಂಚರಿದ್ದು, ಸುಮಾರು 1,500,000 ಫ್ರೆಂಚ್ ಪ್ರಜೆಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಫ್ರೆಂಚ್ ಮಿಲಿಟರಿ ಪಡೆಗಳು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಿಡಿತ ಬಲಪಡಿಸುತ್ತಿರುವುದು ಅಸಹಜವೇನಲ್ಲ. ಇವಿಷ್ಟೇ ಅಲ್ಲದೆ ಫ್ರಾನ್ಸ್ ಹಲವಾರು ಒಪ್ಪಂದಗಳ ಮೂಲಕ ಭಾರತವೂ ಸೇರಿದಂತೆ ಹಲವು ಏಷ್ಯಾದ ದೇಶಗಳೊಡನೆ ರಕ್ಷಣಾ ಕಾರ್ಯತಂತ್ರದ ಭಾಗವಾಗಿರುವುದು ಕೂಡ ಗಮನಿಸತಕ್ಕದ್ದು.

ಒಂದೆಡೆ ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರಾನ್ಸ್ ಹಸ್ತಕ್ಷೇಪ ಧನಾತ್ಮಕವಾಗಿ, ಅಂತರ್ರಾಷ್ಟ್ರೀಯ ಕಾನೂನಿನ ಆಪತ್ಪಾಂಧವನಂತೆ ಕಂಡರೂ, ಇನ್ನೊಂದೆಡೆ ಫ್ರೆಂಚರ ಈ ನಡೆಯ ಬಗ್ಗೆ ಕೆಲ ಅಂತರ್ರಾಷ್ಟ್ರೀಯ ವಿಶ್ಲೇಷಕರು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ತಯಾರಿಸುತ್ತಿರುವ ಶಸ್ತ್ರಾಸ್ತ್ರಗಳಿಗೆ ಏಷ್ಯಾದ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಈ ಪ್ರದೇಶದಲ್ಲಿ ಕಲಹಗಳಿಗೆ ಕುಮ್ಮಕ್ಕು ಕೊಟ್ಟು ತನ್ನ ಮಾರುಕಟ್ಟೆಯನ್ನೂ ವಿಸ್ತರಿಸುವ ಮಹತ್ವಾಕಾಂಕ್ಷೆ ಫ್ರೆಂಚರ ಈ ನಡೆಯ ಹಿಂದಿನ ಅಗೋಚರ ಉದ್ದೇಶ ಎನ್ನುವುದು ಕೆಲ ಚಿಂತಕರ ಅಭಿಪ್ರಾಯ. ಕೇವಲ ತನ್ನ ಮಾರುಕಟ್ಟೆಯ ಸುರಕ್ಷತೆಗಷ್ಟೇ ಫ್ರಾನ್ಸ್ ದಕ್ಷಿಣ ಚೀನಾ ಸಮುದ್ರದತ್ತ ಅತಿಯಾದ ಆಸಕ್ತಿ ತೋರಿಸುತ್ತಿದೆ ಎನ್ನುವುದನ್ನು ಸಂಪೂರ್ಣ ಅಲ್ಲಗೆಳೆಯಲಾಗದಿದ್ದರೂ, ಫ್ರಾನ್ಸ್ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಸ್ವಹಿತಾಸಕ್ತಿಗಿಂತ ಅಂತರ್ರಾಷ್ಟ್ರೀಯ ನ್ಯಾಯಕ್ಕೆ ಆದ್ಯತೆ ನೀಡಿದ್ದು ದಾಖಲಾಗಿದೆ. ಉದಾಹರಣೆಗಾಗಿ 2008ರಲ್ಲಿ ಚೀನಾ ಟಿಬೆಟ್ ನಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ, ಫ್ರಾನ್ಸ್ ಚೀನಾವನ್ನು ಕಟುವಾಗಿ ವಿರೋಧಿಸಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ವ್ಯಾಪಾರನೀತಿಯ ಮೂಲಕ ಪ್ರತೀಕಾರ ತೀರಿಸಿಕೊಂಡು, ಫ್ರಾನ್ಸ್ ಆರ್ಥಿಕತೆಗೆ ಬಲವಾದ ಪೆಟ್ಟು ಕೊಟ್ಟಿತ್ತು. ಇದೆಲ್ಲಾ ನಡೆದ ಮೇಲೂ ಆರ್ಥಿಕ ಲಾಭಕ್ಕಾಗಿ ಫ್ರೆಂಚರು ಚೀನಾವನ್ನು ಓಲೈಸಲು ಪ್ರಯತ್ನಿಸದೆ, ಮಾನವ ಹಕ್ಕುಗಳ ಪರವಾಗಿ ಧೃಡವಾಗಿ ನಿಂತಿದ್ದು ಭಾರತದ 'ಮುಕ್ತ ಟಿಬೆಟ್' ವಿದೇಶಾಂಗ ನೀತಿಗೂ ಇನ್ನಷ್ಟು ಬಲ ತುಂಬಿತ್ತು. ಫ್ರಾನ್ಸ್ ವಿಶ್ವ ರಾಜಕೀಯದಲ್ಲಿ ಲಾಭ ನಷ್ಟಗಳ ಮುಲಾಜಿಲ್ಲದೆ, ಆದರ್ಶಗಳ ಜೊತೆ ರಾಜಿ ಮಾಡಿಕೊಳ್ಳದೆ ಅಂತರ್ರಾಷ್ಟ್ರೀಯ ಕಾನೂನಿನ ಬೆನ್ನೆಲುಬಾಗಿ ನಿಂತ ಅನೇಕ ಐತಿಹಾಸಿಕ ನಿದರ್ಶನಗಳು ಕಣ್ಣ ಮುಂದಿರುವಾಗ ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರಾನ್ಸ್ ಹಸ್ತಕ್ಷೇಪವನ್ನು ಧನಾತ್ಮಕ ರೀತಿಯಲ್ಲಿ ಸ್ವೀಕರಿಸುವುದರಲ್ಲಿ ತಪ್ಪೇನಿಲ್ಲ.

ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರೆಂಚ್ ಪಡೆಗಳ ಆಗಮನದೊಂದಿಗೆ ಚೀನಾದ ಪ್ರಭಾವ ಕಡಿಮೆಯಾದಲ್ಲಿ ಭಾರತದ ಪಾಲಿಗೂ ಅದು ಸಿಹಿ ಸುದ್ದಿಯೇ ಸರಿ. ಈ ವಿವಾದಿತ ಪ್ರದೇಶದಲ್ಲಿ ಭಾರತ ಯಾವುದೇ ನೇರ ಸಂಬಂಧ ಹೊಂದಿಲ್ಲವಾದರೂ, ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತವನ್ನು ಪಾಲುದಾರ ಎಂದು ಪರಿಗಣಿಸುವಂತೆ ಮಾಡಿದೆ. ಐತಿಹಾಸಿಕ ದೃಷ್ಟಿಯಿಂದಲೂ ಫ್ರಾನ್ಸ್ ಭಾರತದ ಪಾಲಿಗೆ ಮಿಕ್ಕ ಯುರೋಪಿನ ಭಾಗಗಳಿಗಿಂತ ಹೆಚ್ಚು ಆಪ್ತ ಎಂದೆನಿಸುತ್ತದೆ. ಶೀತಲ ಸಮರದ ಉತ್ತುಂಗದಲ್ಲಿ, ನ್ಯಾಟೋ ಜೊತೆಗಿನ ಭಾರತದ ಸಂಬಂಧಗಳಲ್ಲಿ ಕದಡಿದ್ದರೂ, ತುಲನಾತ್ಮಕವಾಗಿ ಫ್ರಾನ್ಸ್ ಜೊತೆಗಿನ ಬಾಂಧವ್ಯ ಉತ್ತಮವಾಗಿ ಮುಂದುವರೆದಿತ್ತು. 1965ರ ಭಾರತ-ಪಾಕ್ ಯುದ್ಧದ ನಂತರ ವಿಧಿಸಲಾಗಿದ್ದ ಶಸ್ತ್ರಾಸ್ತ್ರಗಳ ಮಾರಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸುವ ಬಗೆಗೆ ಮೊದಲ ಬಾರಿ ಯೋಚಿಸಿದ್ದು ಇದೇ ಫ್ರಾನ್ಸ್. 1971ರ ಯುದ್ಧದಲ್ಲೂ ಭಾರತದ ನಿರ್ಧಾರಗಳನ್ನು ನ್ಯಾಯ ಸಮ್ಮತ ಎಂದು ಒಪ್ಪಿಕೊಂಡ ಏಕೈಕ ಯುರೋಪಿಯನ್ ರಾಷ್ಟ್ರ ಫ್ರಾನ್ಸ್. ಇವೆಲ್ಲವುಗಳಿಗಿಂತ ಮುಖ್ಯವಾಗಿ ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರ ಸಮಯದಲ್ಲಿ ಭಾರತ ಅಧಿತೃತವಾಗಿ ತನ್ನನ್ನು ತಾನು ಪರಮಾಣು ಶಕ್ತಿಯೆಂಂದು ವಿಶ್ವಕ್ಕೆ ಸಾರಿದಾಗ, ಅಮೆರಿಕಾ ನೇತೃತ್ವದಲ್ಲಿ ಬಹುತೇಕ ರಾಷ್ಟ್ರಗಳೂ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪಾಲಿಗೆ ಆಪ್ತ ಮಿತ್ರನಾಗಿ, ವಿಶ್ವದ ದೊಡ್ಡಣ್ಣ ಅಮೆರಿಕಾದ ನಿರ್ಧಾರವನ್ನೇ ಪ್ರಶ್ನಿಸುವ ದಿಟ್ಟತನ ತೋರಿದ್ದು ಫ್ರೆಂಚರು ಮಾತ್ರ! ಹೀಗೆ ಹತ್ತು ಹಲವು ವಿಧಗಳಲ್ಲಿ ಭಾರತದ ದೃಷ್ಟಿಯಲ್ಲಿ ಫ್ರಾನ್ಸ್ ಯುರೋಪಿನ ಇತರ ರಾಷ್ಟಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.

2016ರ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಆಹ್ವಾನಿಸಿ ಫ್ರಾನ್ಸ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಫ್ರಾನ್ಸ್ ಸೈನ್ಯ ದ ತುಕಡಿಯೊಂದು ರಾಜ್ ಪಥ್ ನಲ್ಲಿ ಪಥಸಂಚಲನ ನಡೆಸಿ ಭಾರತ ವಿರೋಧಿ ಪಾಳೆಯದಲ್ಲಿ ಸಣ್ಣ ನಡುಕ ಮೂಡಿಸಿಬಿಟ್ಟಿದೆ. ಫ್ರಾನ್ಸ್ ಜೊತೆಗೆ ಭಾರತದ ಸಂಬಂಧಗಳು ಗಟ್ಟಿಯಾಗುತ್ತಿರುವಾಗಲೇ, ಫ್ರೆಂಚ್ ನೌಕಾಪಡೆ ದಕ್ಷಿಣ ಚೀನಾ ಸಮುದ್ರದೆಡೆ ಗಮನ ಹರಿಸುವ ಮೂಲಕ ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯುವ ಪ್ರಯತ್ನಗಳು ಉತ್ಸಾಹದಿಂದಲೇ ನಡೆಯುತ್ತಿವೆ. ದಿನೇ ದಿನೇ ಹೆಚ್ಚಾಗುತ್ತಿರುವ ಚೀನೀ ಆಟಗಳಿಗೆ ಕಡಿವಾಣ ಹಾಕಲು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಭಾರತದ ಸಮರನೀತಿಯ ತಜ್ಞರಿಗೆ ಫ್ರೆಂಚರ ಈ ಹೊಸ ನಡೆ ಅನೇಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.





 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 3 August 2016)