ಅಮೇರಿಕಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಮೇರಿಕಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ನವೆಂಬರ್ 19, 2016

ಅಮೆರಿಕಾದ ಅಸ್ಮಿತೆ, ಐಕ್ಯತೆ ಮತ್ತು ಶತ್ರುಗಳು

1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)



ರಾಷ್ಟ್ರ ಮತ್ತು ರಾಷ್ಟ್ರೀಯ ಅಸ್ಮಿತೆಗಳನ್ನು ರೂಪಿಸುವಲ್ಲಿ ಹಲವಾರು ಅಂಶಗಳು ಮುಖ್ಯ ಪಾತ್ರ ವಹಿಸುತ್ತವೆ. ಇತಿಹಾಸ, ಸಂಸ್ಕೃತಿ, ಭೌಗೋಳಿಕ ಅಂಶಗಳು, ಭಾಷೆ ಇನ್ನಿತರ ಅನೇಕ ಅಂಶಗಳು ಸೇರಿ ವಿಭಿನ್ನ ಸಮುದಾಯಗಳನ್ನೆಲ್ಲಾ ಒಂದೆಡೆ ಸೇರಿಸಿ ರಾಷ್ಟ್ರೀಯ ಅಸ್ಮಿತೆಯೊಂದು ಜೀವ ತಲೆಯುತ್ತದೆ. ವಿಪರ್ಯಾಸವೆಂಬಂತೆ ಶತ್ರು ಭಯ ಮತ್ತು ಯುದ್ಧಗಳೂ ರಾಷ್ಟ್ರವೊಂದರ ಅಸ್ಮಿತೆಯನ್ನು ರೂಪಿಸಬಲ್ಲವು. ರಾಷ್ಟ್ರದೊಳಗಿನ ಆಂತರಿಕ ವೈಮನಸ್ಸು ಪ್ರತ್ಯೇಕತಾವಾದಗಳನ್ನು ನಿವಾರಿಸಿಬಿಡುವಲ್ಲೂ ನಿರಂತರ ಶತ್ರು ಕಾಟ ಮತ್ತು ಯುದ್ಧಗಳು ಮಹತ್ತರ ಪಾತ್ರವಹಿಸುತ್ತವೆ! ಎಲ್ಲಾ ರಾಷ್ಟ್ರಗಳ ವಿಚಾರದಲ್ಲೂ ಇದು ನಿಜ. ಆದರೆ ಕೆಲ ದೇಶಗಳಿಗಂತೂ ತಮ್ಮ ಅಸ್ಮಿತೆ ಮತ್ತು ಏಕತೆಯನ್ನೂ ಉಳಿಸಿಕೊಳ್ಳಲು ಪ್ರತಿ ಕಾಲಘಟ್ಟದಲ್ಲೂ ಕೆಲ ವೈರಿಗಳು ಮತ್ತು ಯುದ್ಧಗಳು ಅನಿವಾರ್ಯ. ಸ್ವತಂತ್ರಗೊಂಡ ನಂತರ ಹಲವು ವರ್ಷಗಳನ್ನು 'ದಿವ್ಯ ನಿರ್ಲಿಪ್ತತೆ'ಯನ್ನೇ ವಿದೇಶಾಂಗ ನೀತಿಯನ್ನಾಗಿಸಿಕೊಂಡಿದ್ದ ಅಮೆರಿಕಾದ ಸಂಯುಕ್ತ ಸಂಸ್ಥಾನ ಈ ಮಾತಿಗೆ ಜ್ವಲಂತ ಉದಾಹರಣೆ.

ಅಮೆರಿಕಾ ಚರಿತ್ರೆಯುದ್ದಕ್ಕೂ 'ಸುರಕ್ಷಿತ ಯುಗ' ಮತ್ತು 'ಭಯದ ಯುಗ'ಗಳೆಂಬ ಎರಡು ಪರ್ಯಾಯ ಯುಗಗಳ ಪ್ರಭಾವ ಕಾಣಬಹುದು. ಈ ಎರಡು ಯುಗಗಳು ರಾತ್ರಿ- ಹಗಲುಗಳಂತೆ ಒಂದಾದ ಮೇಲೆ ಇನ್ನೊಂದರಂತೆ ಕಾಲ ಕಾಲಕ್ಕೆ ಅಮೆರಿಕಾದ ಜನರ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಸುರಕ್ಷಿತ ಯುಗದಲ್ಲಿ ಬಾಹ್ಯ ಶತ್ರುಗಳ ಭಯವಿಲ್ಲದೇ ಇರುವುದರಿಂದ ಅಮೆರಿಕನ್ನರು ಆಂತರಿಕ ವಿಷಯಗಳೆಡೆ ಹೆಚ್ಚು ಗಮನ ನೀಡುತ್ತಾರೆ. ಬಾಹ್ಯ ಶತ್ರುಗಳ ಕೊರತೆ ಪ್ರತ್ಯೇಕತಾ ಭಾವನೆಗಳನ್ನು ಬೆಳೆಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಪ್ರಜೆಗಳಿಗೆ ಅಧ್ಯಕ್ಷನಷ್ಟೇ ಅಲ್ಲದೇ ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲೆ ಅವಿಶ್ವಾಸ ಮೂಡುತ್ತದೆ. ಮಿಲಿಟರಿ ಹಸ್ತಕ್ಷೇಪಗಳೂ ಜನಾನುರಾಗ ಕಳೆದುಕೊಳ್ಳುತ್ತವೆ. ಇನ್ನೊಂದೆಡೆ ಭಯದ ಯುಗ ಅಮೆರಿಕಾ ಜನತೆಯಲ್ಲಿ ಬಾಹ್ಯ ಶತ್ರುವಿನ ಭಯವನ್ನು ಹುಟ್ಟುಹಾಕುತ್ತದೆಯಷ್ಟೇ ಅಲ್ಲಾ ಇದೇ ಅಭದ್ರತೆಯ ಕಾರಣದಿಂದಾಗಿಯೇ ಜನ ರಾಷ್ಟ್ರೀಯ ಐಕ್ಯತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅಧ್ಯಕ್ಷ ಮತ್ತು ರಾಷ್ಟ್ರೀಯ ಸಂಸ್ಥೆಗಳ ಮೇಲೆ ಪೂರ್ಣ ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಯುದ್ಧ ಸಂದರ್ಭಗಳಲ್ಲಿ ಅಮೆರಿಕಾದ ಜನತೆ ತಮ್ಮ ಸರಕಾರಗಳಿಗೆ ನೀಡಿದ ಬೆಂಬಲವೇ ಇದಕ್ಕೆ ಸಾಕ್ಷಿ.

ಹದಿನೆಂಟನೇ ಶತಮಾನದ ಕೊನೆಯ ದಶಕಗಳಲ್ಲಿ ಬ್ರಿಟಿಷ್ ನಿಯಂತ್ರಣದಲ್ಲಿದ್ದ ಅಮೆರಿಕನ್ ವಸಾಹತುಗಳು ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನೆದುರಿಸುತ್ತಿದ್ದವು. ತಮ್ಮದೇ ಆದ ಪ್ರತ್ಯೇಕ ಅಸ್ಮಿತೆ ಮತ್ತು ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಿದ್ದ ಎಲ್ಲಾ ವಸಾಹತುಗಳು ಒಗ್ಗಟ್ಟಾಗಿದ್ದು ಬ್ರಿಟನ್ ಎಂಬ ಬಾಹ್ಯ ಶಕ್ತಿಯನ್ನು ಒದ್ದೋಡಿಸಲು! 1776ರ ಅಮೆರಿಕಾದ ಸ್ವಾತಂತ್ರ್ಯದ ಘೋಷಣೆ ಮತ್ತು ಅಮೆರಿಕಾದ ಕ್ರಾಂತಿಗೆ ಅದರದ್ದೇ ಆದ ಇತಿಮಿತಿಗಳಿದ್ದವು. ಬ್ರಿಟನ್ ಸೋಲಿಸಲು ಒಟ್ಟುಗೂಡಿದ್ದ ವಸಾಹತುಗಳು ಒಂದು ಪೂರ್ಣ ಪ್ರಮಾಣದ ಒಕ್ಕೂಟವಾಗಿರಲಿಲ್ಲ ಮತ್ತು ಯುದ್ಧಕ್ಕೆ ಅವಶ್ಯಕವಾದ ಸಂಪತ್ತು ಹಾಗೂ ಸೈನಿಕ ಶಕ್ತಿಯನ್ನು ಒದಗಿಸುವುದರ ಕುರಿತಾಗಿಯೂ ವಸಾಹತುಗಳ ಮಧ್ಯೆ ವಾಗ್ಯುದ್ಧವೇ ನಡೆದಿತ್ತು. ಆದರೆ ಇವೆಲ್ಲವನ್ನೂ ಮೀರಿಸಿ ಅಮೆರಿಕನ್ನರನ್ನು ಒಂದಾಗಿ ಹೋರಾಡುವಂತೆ ಮಾಡಿದ್ದು ಅವರೆದುರಿಗಿದ್ದ ಬಾಹ್ಯ ಶತ್ರು ಬ್ರಿಟನ್! ಹೀಗೆ ಬ್ರಿಟನ್ ಭಯ ಅಮೆರಿಕಾದ ವಸಾಹತುಗಳಲ್ಲಿ ರಾಷ್ಟ್ರೀಯ ಅಸ್ಮಿತೆಯೊಂದರ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಸ್ವಾತಂತ್ರ್ಯಾನಂತರದಲ್ಲೂ ಬ್ರಿಟನ್ 1783ರ ಶಾಂತಿ ಒಪ್ಪಂದವನ್ನು ಕಾಲ ಕಸ ಮಾಡಿಕೊಂಡು ಅನಧಿಕೃತವಾಗಿ ತನ್ನ ಮಿಲಿಟರಿ ಪೋಸ್ಟ್ ಗಳನ್ನು ಸ್ಥಾಪಿಸಿತ್ತು. ಮಿಸ್ಸಿಸ್ಸಿಪ್ಪಿಯನ್ನು ಮುಚ್ಚಿದ ಸ್ಪೈನ್ ಅಮೆರಿಕಾದ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದ್ದಷ್ಟೇ ಅಲ್ಲ ಕಡಲ್ಗಳ್ಳರೂ ಕೂಡ ಅಮೆರಿಕಾ ಪಾಲಿನ ಶತ್ರುಗಳಾಗಿ ಹೊರಹೊಮ್ಮಿದರು. ಈ ಶತ್ರುಗಳನ್ನೆಲ್ಲಾ ನಿಭಾಯಿಸಲು ಬಲಿಷ್ಠ ಕೇಂದ್ರ ಸರಕಾರದ ಅಗತ್ಯತೆಯನ್ನು ಮನಗಂಡ ಅಮೆರಿಕನ್ನರ ಆಶಯ 1787ರಲ್ಲಿ ರಚಿಸಿದ ಅಮೆರಿಕಾದ ಸಂವಿಧಾನದಲ್ಲಿ ಪ್ರತಿಬಿಂಬಿತವಾಯ್ತು. ಭಯದ ಯುಗ ಅಮೆರಿಕನ್ನರನ್ನು ಸಾಧ್ಯವಾದ ಮಟ್ಟಿಗೆ ಅಧಿಕಾರದ ಕೇಂದ್ರೀಕರಣದತ್ತ ಕೊಂಡೊಯ್ದಿತ್ತು!

ಹತ್ತೊಂಬತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ ಭಯದ ವಾತಾವರಣ ಮುಗಿದು ಅಮೆರಿಕಾದಲ್ಲಿ ಸುರಕ್ಷಿತ ಯುಗಕ್ಕೆ ದಾರಿ ಮಾಡಿಕೊಟ್ಟಿತ್ತು. ಅಟ್ಲಾಂಟಿಕ್ ಸಾಗರ, ಶಾಂತಸಾಗರಗಳಿಂದ ರಕ್ಷಿಸಲ್ಪಟ್ಟ ಅಮೆರಿಕಾದ ಜನಸಂಖ್ಯೆ ಮತ್ತು ಆರ್ಥಿಕತೆಯೂ ಸದೃಢವಾಗಿ ಬೆಳೆದುದರಿಂದ ವಿಶ್ವದ ಯಾವ ಶಕ್ತಿಯೂ ಅಮೆರಿಕಾವನ್ನು ಮುಟ್ಟಲಾಗದು ಎಂಬ ಅಭಿಪ್ರಾಯ ಸರ್ವೇ ಸಾಮಾನ್ಯವಾಯಿತು. ಇದೇ ಕಾರಣಕ್ಕಾಗಿಯೇ ಅಬ್ರಹಾಂ ಲಿಂಕನ್ 1838ರಲ್ಲಿ ತನ್ನ ಲೀಸಿಯಂ ಭಾಷಣದಲ್ಲಿ ಈ ರೀತಿ ಹೇಳಿದ್ದರು, "ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಎಲ್ಲಾ ಸೈನ್ಯಗಳು ಒಟ್ಟಾಗಿ, ಪ್ರಪಂಚದ ಎಲ್ಲಾ ಸಂಪತ್ತು ಮಿಲಿಟರಿಗೋಸ್ಕರ ವ್ಯಯವಾದರೂ, ನೆಪೋಲಿಯನ್ ಬೊನಾಪಾರ್ಟ್ ನಂಥ ದಕ್ಷ ಸೇನಾಧಿಪತಿಯಾಗಿ ಬಂದು ಸಾವಿರಾರು ವರ್ಷಗಳು ಕಾದಾಡಿದರೂ ಅಮೆರಿಕಾವನ್ನು ಸೋಲಿಸಲಾಗದು.." ಈ ಮಾತುಗಳು ಲಿಂಕನ್ ವಿರಾವೇಶವೋ ಅಥವಾ ಹುಂಬತನವೋ ಎನ್ನುವುದು ಪ್ರತ್ಯೇಕ ಚರ್ಚೆಯೇ ಸರಿ. ಅದರೆ ಇದೇ ಭಾಷಣದಲ್ಲಿ ಲಿಂಕನ್ ಹೇಳಿದ ಇನ್ನೊಂದು ಸಾಲು ಚಿಂತನೆಗೆ ಎಡೆ ಮಾಡಿಕೊಡುತ್ತದೆ ಅದೇನೆಂದರೆ, "ಒಂದು ವೇಳೆ ಅಮೆರಿಕಾ ಸೋತುಹೋಗುತ್ತದೆ ಎಂದಾದಲ್ಲಿ, ಆ ಸೋಲಿನ ಕಾರಣ ಅಮೆರಿಕನ್ನರೇ ಆಗಿರುತ್ತಾರೆ!" ಲಿಂಕನ್ ನುಡಿದ ಈ ಭವಿಷ್ಯ ಮುಂದೆ ಬಾಗಶಃ ನಿಜವಾಗುತ್ತದೆ. ವಿದೇಶಿ ಆಕ್ರಮಣಕಾರರ ಭಯವಿಲ್ಲದೇ ಹೋದುದರಿಂದ ಅಮೆರಿಕಾ ಆಂತರಿಕ ವಿಷಯಗಳಿಗೆ, ಅದರಲ್ಲೂ ಗುಲಾಮಿತನದ ನಿವಾರಣೆಯ ಬಗ್ಗೆ ಎದ್ದ ಹೊಸ ಪ್ರಶ್ನೆಗಳು 1961ರಲ್ಲಿ ಅಮೆರಿಕಾದೊಳಗೊಂದು ಆಂತರಿಕ ನಾಗರಿಕ ಯುದ್ಧಕ್ಕೆ ಕಾರಣವಾದವು. ಈ ಆಂತರಿಕ ಯುದ್ಧ ಪ್ರತ್ಯೇಕತೆಯ ಕೂಗಿಗೂ ಅವಕಾಶ ಮಾಡಿಕೊಟ್ಟಿತ್ತು. ಅಮೆರಿಕಾಕ್ಕೆ ಯಾವುದೇ ಬಾಹ್ಯ ಶತ್ರುಗಳ ಭಯವಿಲ್ಲದ ಕಾರಣಕ್ಕೇ ಈ ಆಂತರಿಕ ಬಿಕ್ಕಟ್ಟು ಉದ್ಭವಿಸಿತ್ತು ಎಂಬುದನ್ನು ಇವತ್ತಿಗೂ ಅಮೆರಿಕಾದ ರಾಜತಂತ್ರ ನಿಪುಣರು ಒಪ್ಪಿಕೊಳ್ಳುತ್ತಾರೆ. ಈ ಆಂತರಿಕ ಯುದ್ಧವನ್ನು ಕೊನೆಗಾಣಿಸಲು ಮತ್ತು ಅಮೆರಿಕನ್ನರ ಒಗ್ಗಟ್ಟನ್ನು ಪುನರ್ಸ್ಥಾಪಿಸಲು ಹೊರಗಿನ ಯಾವುದಾದರೊಂದು ಆಕ್ರಮಣದ ಭಯವನ್ನು ಮೂಡಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಆಗಿನ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಫ್ರಾನ್ಸ್ ಮತ್ತು ಸ್ಪೈನ್ ಗಳ ಮೇಲೆ ಯುದ್ಧ ಘೋಷಿಸಲು ಸಲಹೆ ನೀಡಿದ್ದರು!
1917ರಲ್ಲಿ ಅಮೆರಿಕಾ ಪ್ರಥಮ ಮಹಾಯುದ್ಧದ ರಣರಂಗ ಪ್ರವೇಶಿಸಿದಾಗ ದಶಕಗಳ ನಂತರ ಮತ್ತೆ ಅಮೆರಿಕಾಕ್ಕೆ ಹೊಸ ಶತ್ರುಗಳು ಸಿಕ್ಕಿದ್ದರು. ಸುರಕ್ಷಿತ ಯುಗದಿಂದ ಭಯದ ಯುಗಕ್ಕೆ ಅಮೆರಿಕಾ ಕಾಲಿಟ್ಟಾಗಿತ್ತು. ಭಯ, ಸಿಟ್ಟು, ಆದರ್ಶಗಳು ಮತ್ತು ಸರಕಾರೀ ಪ್ರಾಯೋಜಿತ ಪ್ರಚಾರದಿಂದಾಗಿ ಇಡೀ ಅಮೆರಿಕಾ ಒಂದಾಗಿತ್ತು! ಇವೆಲ್ಲವನ್ನು ಗಮನಿಸಿಯೇ 'ದ ನೇಶನ್' ಪತ್ರಿಕೆ ಈ ಬದಲಾವಣೆಯನ್ನು 'ಅಮೆರಿಕಾದಲ್ಲಿ ದೇಶಪ್ರೇಮದ ಪುನರ್ಜನ್ಮ' ಎಂದು ವ್ಯಾಖ್ಯಾನಿಸಿತ್ತು. ದ್ವಿತೀಯ ಮಹಾಯುದ್ಧದ ಸಂಧರ್ಭದಲ್ಲೂ ಜರ್ಮನಿ ಮತ್ತು ಜಪಾನ್ ಗಳಂಥ ಶತ್ರುಗಳ ಕೃಪೆಯಿಂದಾಗಿ ಅಮೆರಿಕನ್ನರು ತಮ್ಮ ದೇಶಪ್ರೇಮದ ತೀವೃತೆಯನ್ನು ಕಾಪಾಡಿಕೊಳ್ಳುವಂತಾಯ್ತು. ಅಮೆರಿಕನ್ನರಲ್ಲಿ ಈ ಐಕ್ಯತೆಯ ಭಾವನೆ ಶೀತಲ ಸಮರದ ಕಾಲದಲ್ಲಿಯೂ ಮುಂದುವರಿಯುತ್ತದೆ. ಕಾರಣ ಸೊವಿಯೆತ್ ಒಕ್ಕೂಟದ ಆಕ್ರಮಣದ ಭಯ! ವಿಭಿನ್ನ ವಿಶ್ವಶಕ್ತಿಗಳು ವಿಬಿನ್ನ ಕಾಲಘಟ್ಟದಲ್ಲಿ ಅಮೆರಿಕಾದ ಶತ್ರುಗಳಾಗಿ ಅಮೆರಿಕನ್ನರ ಒಗ್ಗಟ್ಟು ಮತ್ತು ಸಮಗ್ರತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗುತ್ತವೆ. 1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!

ಶೀತಲ ಸಮರದ ನಂತರದ ದಿನಗಳು ಅಮೆರಿಕಾ ಪಾಲಿಗೆ ಸುರಕ್ಷಿತ ಯುಗವಾಗಿ ಮಾರ್ಪಟ್ಟಿವೆ. ಕೆಲವೆಡೆ ಭಯೋತ್ಪಾದಕರ ಕಾಟ ಇದ್ದರೂ, ಅವರನ್ನು ಬಲಿಷ್ಠ ಶತ್ರುಗಳಾಗಿದ್ದ ನಾಝಿ ಜರ್ಮನಿ ಅಥವಾ ಸೊವಿಯೆತ್ ಒಕ್ಕೂಟಗಳ ಜೊತೆ ಹೋಲಿಸಲಾಗದು. ಅಫ್ಘಾನಿಸ್ತಾನ ಮತ್ತು ಇರಾಕ್ ಗಳ ಮೇಲೆ ಅಮೆರಿಕಾ ದಾಳಿ ನಡೆಸಿದಾಗಲೂ ಇದರಿಂದಾಗಿ ಅಮೆರಿಕಾದ ಜನರಲ್ಲಿ ಮೂಡಿದ ಐಕ್ಯತಾ ಭಾವ ಅಲ್ಪಸಮಯಕ್ಕಷ್ಟೇ ಸೀಮಿತವಾಯ್ತು. ಹಿಂದೆ ನಡೆದ ಯುದ್ಧಗಳ ಸಂದರ್ಭಗಳಲ್ಲಿ ಅಮೆರಿಕಾಗೆ ದೊರಕಿದ ಸಾರ್ವಜನಿಕ ಬೆಂಬಲ ಇತ್ತೀಚಿನ ಅಮೆರಿಕಾದ ಕಾರ್ಯಾಚರಣೆಗಳಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು. ಸುರಕ್ಷಿತ ಯುಗದಲ್ಲಿರುವ ಅಮೆರಿಕನ್ನರಿಗೆ ಅಧ್ಯಕ್ಷ ಮತ್ತು ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲಿನ ನಿಷ್ಟೆ ಕಡಿಮೆಯಾಗುವುದಷ್ಟೇ ಅಲ್ಲದೇ ದೇಶಪ್ರೇಮದ ತೀವೃತೆಯಲ್ಲೂ ಕಡಿಮೆಯಾಗುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಅಮೆರಿಕನ್ನರ ಒಗ್ಗಟ್ಟಿಗೆ ಆಂತರಿಕ ಸಮಸ್ಯೆಗಳಿಗಿಂತಲೂ ಬಾಹ್ಯ ಶತ್ರುಗಳೇ ಹೆಚ್ಚಿನ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕಾಗಿಯೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲೂ ಆಂತರಿಕ ಸಮಸ್ಯೆಗಳಿಗಿಂತಲೂ ಅಂತರಾಷ್ಟ್ರೀಯ ಸಮಸ್ಯೆಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತವೆ. ಯಾರೇ ಅಧ್ಯಕ್ಷರಾದರೂ ಅವರ ಮೊದಲ ಆದ್ಯತೆ ಅಮೆರಿಕಾಕ್ಕೆ ಬಲಿಷ್ಠ ಶತ್ರುವೊಬ್ಬನ ಹುಡುಕಾಟ!

(This article was published in Vishwavani newspaper on 31 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಗುರುವಾರ, ಮೇ 19, 2016

ಟ್ರಂಪ್ ವರ್ಸಸ್ ಕ್ಲಿಂಟನ್: ಭಾರತಕ್ಕೆ ಯಾರು ಹಿತವರು ಈ ಇಬ್ಬರೊಳಗೆ?

ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.
- ಕೀರ್ತಿರಾಜ್


ಅಮೆರಿಕಾದ ಸ್ಪೀಕರ್ ಪೌಲ್ ರ್‍ಯಾನ್ ಆಹ್ವಾನದ ಮೇರೆಗೆ ಅಮೆರಿಕಾದ ಸಂಸತ್ ಉದ್ದೇಶಿಸಿ ಮಾತನಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾಕ್ಕೆ ಭೇಟಿ ನೀಡಲಿದ್ದಾರೆ. ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮತ್ತು ಮನಮೋಹನ್ ಸಿಂಗ್ ನಂತರ ನರೇಂದ್ರ ಮೋದಿ  ಅಮೆರಿಕಾದ ಸಂಸತ್ ನಲ್ಲಿ ಭಾಷಣ ಮಾಡಿದ ಐದನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಾರಿಯ ಮೋದಿ ಅಮೆರಿಕಾ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದು ಮೋದಿಯವರ ನಾಲ್ಕನೇ ಅಮೆರಿಕಾ ಭೇಟಿಯಾಗಲಿದ್ದು, ಮೋದಿ ಪ್ರಧಾನಿಯಾದ ಬಳಿಕ ಸಾಧಿಸಿದ ವಿದೇಶಾಂಗ ನೀತಿಯ ಯಶಸ್ಸುಗಳಲ್ಲಿ, ಅಮೆರಿಕಾ ಜೊತೆಗಿನ ಸಂಬಂಧಗಳನ್ನು ವಿಸ್ತರಿಸಿ ಭಧ್ರಪಡಿಸಿಕೊಂಡಿರುವುದೂ ಒಂದು. ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧಗಳ ವಿಶ್ವಾಸಾರ್ಹತೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದ ಹೆಗ್ಗಳಿಕೆ ಮೋದಿಯವರಿಗೆ ಸೇರುತ್ತದೆ.  ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರನ್ನು 2015ರ ಗಣರಾಜ್ಯೋತ್ಸ್ವದ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಮೋದಿ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. ಚೀನಾ ಮತ್ತು ಪಾಕಿಸ್ತಾನಗಳು ನೋಡು ನೋಡುತ್ತಿರುವಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಮಾತುಕತೆಗಳು ಅಮೆರಿಕಾ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿತ್ತು. ದಕ್ಷಿಣ ಚೀನಾ ಸಮುದ್ರದ ಸಾಗರ ಸಂಘರ್ಷವಂತೂ ಅಮೆರಿಕಾ ಏಷ್ಯಾದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಭಾರತ ಸಹಕಾರ ಅನಿವಾರ್ಯವೆನ್ನುವ ಮಟ್ಟಿಗೆ ಭಾರತದ ರಾಜತಾಂತ್ರಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಇತ್ತೀಚಿನ ಒಪ್ಪಂದ Logistics support agreement (ಸೈನ್ಯ ಮತ್ತಿತರ ರಕ್ಷಣಾ ಸಾಮಗ್ರಿಗಳ ಸರಬರಾಜು ಮತ್ತು ವ್ಯವಸ್ಥಾಪನೆಯಲ್ಲಿ ಪರಸ್ಪರ ಸಹಕಾರಕ್ಕಾಗಿ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದ) ಭಾರತ ಮತ್ತು ಅಮೆರಿಕಾದ ರಕ್ಷಣಾ ವಲಯದ ಸಹಕಾರವನ್ನು ಇನ್ನಷ್ಟು ಬಲಪಡಿಸಿದೆ.

ಭಾರತದೊಂದಿಗಿನ ಅಮೆರಿಕಾ ಸಂಬಧಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವಂತೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಬಹಳ ಹತ್ತಿರಕ್ಕೆ ಬಂದು ನಿಂತಿದೆ. ಅಧ್ಯಕ್ಷೀಯ ಗಾದಿಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಇವರಿಬ್ಬರಲ್ಲಿ ಭಾರತಕ್ಕೆ ಹಿತವರಾರು ಎಂಬ ಬಗ್ಗೆ ಚರ್ಚೆಗಲಿವೆ. ಭಾರತದ ರಾಜಕೀಯ ವಿಶ್ಲೇಷಕರಲ್ಲಿ ಅನೇಕರು ರಿಪಬ್ಲಿಕ್ ಅಭ್ಯರ್ಥಿಯ ಗೆಲುವು ಭಾರತಕ್ಕೆ ಪೂರಕ ಎಂಬ ನಿರೀಕ್ಷೆಯಿಟ್ಟಿದ್ದಾರೆ. ಹಿಂದೊಮ್ಮೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರತೀಯರು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಬ್ಬರಿಸಿದ್ದನ್ನು ಮರೆಯುವಂತಿಲ್ಲ. ಆದರೂ ಇತ್ತಿಚೆಗೆ ತನ್ನ ನಿಲುವು ಬದಲಿಸಿ ಕೊಂಡಂತಿರುವ ಟ್ರಂಪ್ ಪಾಕಿಸ್ತಾನವನ್ನು ಸ್ಥಿರಗೊಳಿಸುವಲ್ಲಿ ಭಾರತದ ಸಹಾಯ ಪಡೆದುಕೊಳ್ಳುವ ಮಾತಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ತಾಳುತ್ತಾರೆ ಎನ್ನುವುದು ಭಾರತದಲ್ಲಿರುವ ಕ್ಲಿಂಟನ್ ವಿರೋಧಿಗಳ ಕಳವಳ. ಹೀಗೆ ರಾಜಕೀಯ ವಿಶ್ಲೇಷಕರ ವಲಯದಲ್ಲಿ ರಿಪಬ್ಲಿಕ್ ಪಕ್ಷದ ಟ್ರಂಪ್ ಪರ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರೋಧದ ಅಲೆಗಳಿವೆ.

ಭಾರತ- ಅಮೆರಿಕಾ ಸಂಬಂಧಗಳ ಇತಿಹಾಸ ಗಮನಿಸಿದರೆ  ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳೆರಡೂ ಭಾರತದೊಂದಿಗಿನ ಬಾಂಧವ್ಯಕ್ಕೆ ಸಮಾನ ಕೊಡುಗೆ ನೀಡಿವೆ. ರಿಪಬ್ಲಿಕ್ ಪಕ್ಷದ ಜಾರ್ಜ್ ಡಬ್ಲ್ಯು ಬುಶ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಸಂಬಂಧಗಳು ಉಚ್ಚ್ರಾಯ ಸ್ಥಿತಿಗೇರಿದ್ದು ಎಷ್ಟು ಸತ್ಯವೋ, ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಬಾಂಧವ್ಯಕ್ಕೆ ಭಧ್ರ ಅಡಿಪಾಯ ಹಾಕಲಾಗಿತ್ತು ಎಂಬುದು ಅಷ್ಟೇ ಸತ್ಯ. ಪೋಕ್ರಾನ್- II ನಂತರ ಅಮೆರಿಕಾ ಜೊತೆಗಿನ ಭಿನ್ನಾಭಿಪ್ರಯಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ 2000 ಮಾರ್ಚ್ ನಲ್ಲಿ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದರೆ 2000 ಸೆಪ್ಟೆಂಬರ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಮೆರಿಕಾಕ್ಕೆ ಭೇಟಿ ನೀಡಿದರು. ಅದೇ ರೀತಿ ಬರಾಕ್ ಒಬಾಮ ಭಾರತಕ್ಕೆ ಎರಡು ಸಲ ಭೇಟಿ ನೀಡಿದ ಏಕೈಕ ಅಮೆರಿಕಾ ಅಧ್ಯಕ್ಷ. ಭಾರತಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷರೆಲ್ಲಾ ನಂತರ ಪಾಕಿಸ್ತಾನಕ್ಕೂ ಭೇಟಿ ನೀಡಿ ಓಲೈಸುವುದು ಸಂಪ್ರದಾಯವಾಗಿತ್ತು. ಒಬಾಮ ಭಾರತ ಭೇಟಿಯ ಸಂದರ್ಭದಲ್ಲಿ ಈ ಸಂಪ್ರದಾಯ ಕಡೆಗಣಿಸಿದ್ದು, ಅಮೆರಿಕಾ ಭಾರತಕ್ಕೆ ನೀಡುತ್ತಿರುವ ರಾಜತಾಂತ್ರಿಕ ಮಹತ್ವಕ್ಕೊಂದು ನಿದರ್ಶನ. ಕ್ಲಿಂಟನ್ ಮತ್ತು ಒಬಾಮ ಡೆಮಾಕ್ರಟಿಕ್ ಪಕ್ಷದವರು ಎಂಬುದು ಗಮನಿಸಬೇಕಾದ ಅಂಶ.

ಆರ್ಥಿಕ ಸಂಬಂಧಗಳ ದೃಷ್ಟಿಯಲ್ಲೂ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಯೋಜನೆಗಳಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಅಮೆರಿಕಾ ಚೀನಾದ ವ್ಯಾಪಾರ ಸಂಬಂಧಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಡೆಮಾಕ್ರಟಿಕ್ ಒಬಾಮ ಮತ್ತು ರಿಪಬ್ಲಿಕ್ ಟ್ರಂಪ್ ರ ಇತ್ತಿಚಿನ ಭಾಷಣಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಸುಧಾರಣೆಗಳ ಮೇಲೆ ಅವಲಂಬಿತವಾಗಿದೆಯೇ ಹೊರತು ಅಮೆರಿಕಾದ ರಾಜಕೀಯ ಬದಲಾವಣೆಗಳಿಂದಲ್ಲ ಎಂಬುದು ಸ್ಪಷ್ಟ. ಹೀಗಾಗಿ ರಿಪಬ್ಲಿಕ್ ಅಥವಾ ಡೆಮಾಕ್ರಟ್ ಪಕ್ಷಗಳಲ್ಲಿ ಯಾವುದೇ ಪಕ್ಷ ಗೆಲುವು ಸಾಧಿಸಿದರೂ, ಭಾರತದೊಂದಿಗಿನ ರಾಜತಾಂತ್ರಿಕ ಸಬಂಧಗಳು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಅಮೆರಿಕಾ ಭಾರತವನ್ನು ಕಡೆಗಣಿಸಿದಲ್ಲಿ, ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 16 May 2016)

ಗುರುವಾರ, ಏಪ್ರಿಲ್ 7, 2016

ಅರವತ್ತೇಳು ವಷ೯ದ ನ್ಯಾಟೋ ಯಾವ ದೇಶಕ್ಕೆ ಉಪಕಾರಿ?

    ನ್ಯಾಟೋ ಸೃಷ್ಟಿಯ ಜೊತೆಗೆ, ಅದರ ನಾಯಕತ್ವ ವಹಿಸಿಕೊಂಡ ಅಮೆರಿಕಾ, ಹಿಂದೆದೂ ಕಾಣದ ಹೊಸ ಉತ್ಸಾಹದೊಂದಿಗೆ ವಿಶ್ವ ರಾಜಕೀಯದ ಪ್ರತಿ ಮೂಲೆಯಲ್ಲೂ ತನ್ನ ಇರುವಿಕೆಯನ್ನು, ಪ್ರಭಾವವನ್ನು ತೋರಿಸಿತ್ತು. ಇದರೊಂದಿಗೆ ಪಶ್ಚಿಮ ಯುರೋಪಿನ ಸೋವಿಯೆತ್ ಭೀತಿಯನ್ನೂ ದೂರ ಮಾಡಿದ್ದಷ್ಟೇ ಅಲ್ಲದೇ ನ್ಯಾಟೋ ನಾಯಕತ್ವ ಅಮೆರಿಕಾವೇ ವಿಶ್ವದ ದೊಡ್ದಣ್ಣ ಎಂಬ ಮಾತಿಗೆ ಅಧಿಕೃತ ಮುದ್ರೆಯೊತ್ತಿತ್ತು!
- ಕೀರ್ತಿರಾಜ್
    ಅಮೆರಿಕ ನೇತೃತ್ವದ ಮಿಲಿಟರಿ ಮ್ಯೆತ್ರಿ ಕೂಟ ನ್ಯಾಟೊ ಈ ಏಪ್ರಿಲ್‍ನಲ್ಲಿ ತನ್ನ ಅರವತ್ತೇಳನೇ ವಾಷಿ೯ಕೋತ್ಸವವನ್ನು ಆಚರಿಸುತ್ತಿದೆ. ಕಳೆದ ಅರವತ್ತೇಳು ವಷ೯ಗಳಲ್ಲಿ ಅಮೆರಿಕದ ಭದ್ರತೆಯಿ೦ದ ಜಾಗತಿಕ ಶಾ೦ತಿಯ ಇತಿಹಾಸದ ಪ್ರತಿ ಪುಟದಲ್ಲೂ ತನ್ನ ಛಾಪು ಮೂಡಿಸಿದ ಹೆಗ್ಗಳಿಕೆ ನ್ಯಾಟೋ ಮಿಲಿಟರಿ ಮ್ಯೆತ್ರಿಕೂಟಕ್ಕೆ ಸೇರುತ್ತದೆ. ಈ ವಾಷಿ೯ಕೋತ್ಸವದೊ೦ದಿಗೆ ಇಪ್ಪತ್ತೊ೦ದನೆ ಶತಮಾನದಲ್ಲಿ ನ್ಯಾಟೋ ಅವಶ್ಯಕತೆ ಮತ್ತು ಪ್ರಸ್ತುತತೆಯ ಕುರಿತು ಚಚೆ೯ಗಳು ಆರ೦ಭವಾಗಿದೆ. ನ್ಯಾಟೋ ಮ್ಯೆತ್ರಿ ಕೂಟ ಅಮೆರಿಕದ ಪ್ರತಿಷೆಯನ್ನು ವಿಶ್ವಮಟ್ಟದಲ್ಲಿ ರಾರಾಜಿಸುವ೦ತೆ ಮಾಡಿದ ಪ್ರಶ೦ಸೆಯ ಜತೆಗೆ, ಅನಗತ್ಯ ವಿಷಯಗಳಲ್ಲಿ ಅಮೆರಿಕದ ಸ೦ಪತ್ತಿನ ವ್ಯಥ೯ ಸೋರಿಕೆಗೆ ಕಾರಣವಾಗುತ್ತಿದೆ ಎ೦ಬ ಅಪವಾದವೂ ಇದೆ. 
     1949ರ ನ್ಯಾಟೊ(North Atlantic Treaty Organization)) ಸೃಷ್ಟಿ ಅಮೆರಿಕದ ವಿದೇಶಾ೦ಗ ನೀತಿಯಲ್ಲಿ ಹೊಸ ಮನ್ವ೦ತರವನ್ನೇ ಪ್ರಾರ೦ಭೀಸಿತ್ತು. ಅಮೆರಿಕ ಸ್ವತ೦ತ್ರ ರಾಷ್ಟ್ರವಾಗಿ, ಮು೦ದೆ ಬಲಾಢ್ಯ ಶಕ್ತಿಯಾಗಿ ರೂಪುಗೊ೦ಡರೂ, ಪ್ರಾರ೦ಭದ ದಿನಗಳಲ್ಲಿ ಯಾವೊ೦ದು ಸೈನಿಕ ಮ್ಯೆತ್ರಿಕೂಟಗಳಲ್ಲೂ ಆಸಕ್ತಿ ವಹಿಸದೆ, ತಟಸ್ಥ ಅಥವಾ ಹಸ್ತಕ್ಷೇಪರಹಿತ (noninterventionist) ವಿದೇಶಾ೦ಗ ನೀತಿಯನ್ನು ಅನುಸರಿಸಿತ್ತು. ಪ್ರಥಮ ವಿಶ್ವ ಮಹಾಯುದ್ಧದಲ್ಲಿ ಭಾಗವಹಿಸಿದರೂ, ಯುದ್ಧದ ಕೊನೆಯೊ೦ದಿಗೆ ಮತ್ತೆ ಹಳೆಯ ತಟಸ್ಥ ನೀತಿಗೆ ಮರಳಿದ್ದು ಆಗಿನ ಅಮೆರಿಕಾದ ವಿದೇಶಾ೦ಗ ನೀತಿಯ ವೈರಾಗ್ಯಕ್ಕೆ ಸಾಕ್ಷಿ. ಆದರೆ ಎರಡು ವಿಶ್ವಯುದ್ಧಗಳು ಮತ್ತು ವಿಶೇಷವಾಗಿ ಪಲ್‍೯ ಹಾಬ೯ರ್ ಮೇಲಿನ ದಾಳಿ ಅಮೆರಿಕಾದ ಸಾ೦ಪ್ರದಾಯಿಕ ಹಸ್ತಕ್ಷೇಪ ರಹಿತ ವಿದೇಶಾ೦ಗ ನೀತಿಗೆ ಮಾರಣಾ೦ತಿಕ ಹೊಡೆತ ನೀಡಿತ್ತು. ಹೊರ ಜಗತ್ತಿನತ್ತ ಅಮೆರಿಕನ್ನರ ಮನೋಭಾವ ಸ೦ಪೂಣ೯ವಾಗಿ ಬದಲಾಗಿಬಿಟ್ಟಿತ್ತು. ಅಮೆರಿಕದ ತಟಸ್ಥ ವಿದೇಶಾ೦ಗ ನೀತಿಯ ಪ್ರಮುಖ ಪ್ರತಿಪಾದಕರಾದ ಸೆನ್ ಆಥ೯ರ್ ವ್ಯಾ೦ಡೆನ್ಬಗ್‍೯ ಅ೦ಥವರೇ ಬದಲಾದ ವಿಶ್ವದಲ್ಲಿ ಅಮೆರಿಕ ಹೆಚ್ಚು ಕ್ರಿಯಾಶೀಲ ವಿದೇಶಾ೦ಗ ನೀತಿಯ ಅವಶ್ಯಕತೆಯನ್ನು ಬೊಟ್ಟು ಮಾಡಿದ್ದರು! 

     ದ್ವಿತೀಯ ವಿಶ್ವ ಮಹಾಯುದ್ಧದ ಅ೦ತ್ಯದೊ೦ದಿಗೆ, ಯುರೋಪಿನಲ್ಲಿ ರಾಜಕೀಯ ಬಿಕ್ಕಟ್ಟು ಪ್ರಾರ೦ಭವಾಗಿತ್ತು. ಮಧ್ಯ ಮತ್ತು ಪೂವ೯ ಯುರೋಪಿನ ರಾಷ್ಟ್ರಗಳು ಸೋವಿಯೆತ್ ಒಕ್ಕೂಟದ ಕಮ್ಯುನಿಸ೦ ಕಡೆಗೆ ವಾಲುತ್ತಿದ್ದರೆ, ಪಶ್ಚಿಮ ಯುರೋಪಿನಲ್ಲಿ ಪ್ರಜಾಪ್ರಭುತ್ವ ಸೋವಿಯೆತ್ ಕರಿನೆರಳಲ್ಲಿ ನಲುಗುತ್ತಿತ್ತು. ದ್ವಿತೀಯ ವಿಶ್ವಯುದ್ಧದ ದುರ೦ತ ಪರಿಣಾಮಗಳು ಮತ್ತು ಸೋವಿಯೆತ್ ಆಕ್ರಮಣದ ಭೀತಿ ಪಶ್ಚಿಮ ಯುರೋಪಿನ ಪ್ರಜಾಪ್ರಭುತ್ವವನ್ನು ನೈತಿಕವಾಗಿ ಕುಗ್ಗಿಸಿತ್ತು. 1940 ಮತ್ತು 1950ರ ದಶಕದಲ್ಲಿ ಯುರೋಪಿನ ಪ್ರಜಾಪ್ರಭುತ್ವದ ಪರಿಸ್ಥಿತಿ ಹೀನಾಯವಾಗಿತ್ತು. ಇ೦ಥ ಸ೦ದಭ೯ದಲ್ಲಿ, ತನ್ನ ತಟಸ್ಥ ನೀತಿಗೆ ಕೊನೆಯ ಮೊಳೆ ಹೊಡೆದು, ಪಶ್ಚಿಮ ಯುರೋಪಿನ ರಾಷ್ಟ್ರಗಳೊ೦ದಿಗೆ ಮಾಡಿಕೊ೦ಡ ಮಿಲಿಟರಿ ಮ್ಯೆತ್ರಿಯೇ ನ್ಯಾಟೋ! ನ್ಯಾಟೋ ಸೃಷ್ಟಿಯ ಜತೆಗೆ, ಅದರ ನಾಯಕತ್ವ ವಹಿಸಿಕೊ೦ಡ ಅಮೆರಿಕ, ಹಿ೦ದೆ೦ದೂ ಕಾಣದ ಹೊಸ ಉತ್ಸಾಹದೊ೦ದಿಗೆ ವಿಶ್ವ ರಾಜಕೀಯದ ಪ್ರತಿ ಮೂಲೆಯಲ್ಲೂ ತನ್ನ ಇರುವಿಕೆಯನ್ನು, ಪ್ರಭಾವವನ್ನು ತೋರಿಸಿತ್ತು. ಇದರೊ೦ದಿಗೆ ಪಶ್ಚಿಮ ಯುರೋಪಿನ ಸೋವಿಯೆತ್ ಭೀತಿಯನ್ನೂ ದೂರ ಮಾಡಿದ್ದಷ್ಟೇ ಅಲ್ಲದೇ ನ್ಯಾಟೋ ನಾಯಕತ್ವ ಅಮೆರಿಕವೇ ವಿಶ್ವದ ದೊಡ್ಡಣ್ಣ ಎ೦ಬ ಮಾತಿಗೆ ಅಧಿಕೃತ  ಮುದ್ರೆಯೊತ್ತಿತ್ತು! 
    ಅಮೆರಿಕದ ವಿದೇಶಾ೦ಗ ನೀತಿಯ ನರನಾಡಿಗಳಲ್ಲಿ ಸೇರಿಹೋದ ನ್ಯಾಟೋ ಮ್ಯೆತ್ರಿ ಕೂಟದ ಪ್ರಸ್ತುತತೆಯ ಬಗ್ಗೆ ಅಮೆರಿಕ ವಿದೇಶಾ೦ಗ ನೀತಿಯ ತಜ್ಞರಿ೦ದಲೇ ಅಪಸ್ವರಗಳೆದ್ದಿವೆ. ತನ್ನಲ್ಲದ ಸಮಸ್ಯೆಗಳಿಗೆ ಅನಗತ್ಯವಾಗಿ ಅಮೆರಿಕ ತಲೆಕೆಡಿಸಿಕೊಳ್ಳದೆ, ತಟಸ್ಥ ವಿದೇಶಾ೦ಗ ನೀತಿಗೆ ಮರಳುವ ಕುರಿತು ಅಮೆರಿಕ ಭದ್ರತಾ ವಲಯದಲ್ಲೇ ಚಚೆ೯ಗಳಿವೆ. ಪ್ರಸಕ್ತ ಯುರೋಪಿನ ಪರಿಸ್ಥಿತಿ 1949ಕ್ಕಿ೦ತ ಭೀನ್ನ. 1949ರಲ್ಲಿದ್ದ ನ್ಯಾಟೋ ಅವಶ್ಯಕತೆ ಈಗಿನ ಪರಿಸ್ಥಿತಿಯಲ್ಲಿ ಯುರೋಪಿಗಿಲ್ಲ. ಯುರೋಪಿನ ಒಕ್ಕೂಟ ಸದಸ್ಯ ರಾಷ್ಟ್ರಗಳಲ್ಲಿ ತಕ್ಕ ಮಟ್ಟಿಗಿನ ವಿಶ್ವಾಸ ಮೂಡಿಸಿದೆ. ಮಧ್ಯ ಏಷ್ಯಾದ ಸಮಸ್ಯೆಗಳು ಮತ್ತು ಪುಟಿನ್ ನಾಯಕತ್ವದ ರಷ್ಯಾ ಯುರೋಪನ್ನು ಸ್ವಲ್ಪ ಮಟ್ಟಿಗೆ ಕಾಡುತ್ತಿರುವುದು ನಿಜವೇ ಆದರೂ ಈ ಎರಡೂ ಸಮಸ್ಯೆಗಳನ್ನು ನಿಭಾಯಿಸುವ ಸಾಮಥ್ಯ೯ ಯುರೋಪಿಗಿದೆ. ಅಮೆರಿಕನ್ ರಾಜನೀತಿಜ್ಞರ ಪ್ರಕಾರ ಅಮೆರಿಕದ ನಾಯಕತ್ವ ಮತ್ತು ನ್ಯಾಟೋ ಹೆಸರಿನಲ್ಲಿ ಅಮೆರಿಕ ಭರಿಸುತ್ತಿರುವ ದೊಡ್ಡ ಮೊತ್ತದ ರಕ್ಷಣಾ ವೆಚ್ಚಗಳಿ೦ದಾಗಿ, ಯುರೋಪಿನ ಒಕ್ಕೂಟ ಸ್ವಯ೦ ಸಾಮಥ್ಯ೯ದ ಹೊರತಾಗಿಯೂ ಭದ್ರತೆಯ ವಿಷಯದಲ್ಲಿ ನಿರಾಸಕ್ತಿ ತೋರಿಸುತ್ತಿದೆ! 
     ನ್ಯಾಟೋ ಪ್ರಾರ೦ಭದ ದಿನಗಳಲ್ಲಿ ಒಕ್ಕೂಟದ ಮೊದಲ ಆದ್ಯತೆ ಪಶ್ಚಿಮ ಜಮ೯ನಿ, ಇಟಲಿ, ಫಾನ್ಸ್  ಹಾಗೂ ಬ್ರಿಟನ್‍ಗಳನ್ನು ಸೋವಿಯೆತ್ ಆಕ್ರಮಣದಿ೦ದ ರಕ್ಷಿಸುವುದಾಗಿತ್ತು. ಅದರೆ ಸೋವಿಯೆತ್ ಒಕ್ಕೂಟದ ಪತನದ ನ೦ತರ ಮಧ್ಯ ಮತ್ತು ಪೂವ೯ ಯುರೋಪಿನ ರಾಷ್ಟ್ರಗಳನ್ನೂ ನ್ಯಾಟೋ ಪಡೆ ಸೇರಿಸಿಕೊಳ್ಳುವಲ್ಲಿ ಅಮೆರಿಕ ಉತ್ಸುಕತೆ ತೋರಿತು. ನ್ಯಾಟೋಗೆ ಸದಸ್ಯರನ್ನು ಸೇರಿಸಿಕೊಳ್ಳುವುದು ಸರಳ ಪ್ರಕ್ರಿಯೆಯೇ ಆದರೂ, ಅದರ ಪರಿಣಾಮ ಮಾತ್ರ ಸ೦ಕೀಣ೯. ನ್ಯಾಟೋ ನಿಯಮಾವಳಿಗಳು, ಮುಖ್ಯವಾಗಿ 5ನೇ ವಿಧಿಯ ಪ್ರಕಾರ ಯಾವುದೇ ಒ೦ದು ಸದಸ್ಯ ರಾಷ್ಟ್ರದ ಮೇಲಿನ ದಾಳಿ ಎಲ್ಲ ನ್ಯಾಟೋ ಸದಸ್ಯರ ಮೆಲಿನ ದಾಳಿ ಎ೦ದು ಪರಿಗಣಿಸಲಾಗುವುದು. ಹೀಗೆ ಯಾವುದೇ ಒ೦ದು ಸಣ್ಣ ರಾಷ್ಟ್ರದ ಚಿಕ್ಕ ಪುಟ್ಟ ಸಮಸ್ಯೆಗಳನ್ನೂ ಜಾಗತಿಕ ಮಟ್ಟದ ಸಮಸ್ಯೆಯನ್ನಾಗಿ ಮಾಡಿಬಿಡುತ್ತದೆ ನ್ಯಾಟೋ! ಅರವತ್ತೇಳು ವಷ೯ಗಳಿ೦ದ ಜಾಗತಿಕ ಕಲಹ ಮತ್ತು ಶಾ೦ತಿಗಳೆರಡಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದ ಮಿಲಿಟರಿ ಮ್ಯೆತ್ರಿ ಕೂಟ ಇ೦ದು ತುತು೯ ಬದಲಾವಣೆ ಮತ್ತು ಸುಧಾರಣೆಯ ನಿರೀಕ್ಷೆಯಲ್ಲಿದೆ. 




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 4 April 2016)