ನೇಪಾಳ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೇಪಾಳ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 14, 2016

ನಿರ್ಲಕ್ಷ್ಯವೊಂದೇ ಸಾಕು ಹಿಮಾಲಯದ ತಪ್ಪಲು ಭಾರತದ ಕೈ ತಪ್ಪಲು!



ಅಂತರ್ರಾಷ್ಟ್ರೀಯ ಶಕ್ತಿ ರಾಜಕೀಯದ ಚದುರಂಗದಾಟದಲ್ಲಿ ನೆರೆಹೊರೆಯ ಸಣ್ಣ ಪುಟ್ಟ ರಾಷ್ಟ್ರಗಳ ನಿರ್ಲಕ್ಷ್ಯ ವಿಶ್ವಶಕ್ತಿಗಳಿಗೂ ದುಬಾರಿಯಾಗಿಬಿಡುತ್ತದೆ.  ರಾಜಕೀಯ ವಿಷಮಸ್ಥಿತಿಯಲ್ಲಿರುವ ನೇಪಾಳಕ್ಕೆ ಚೀನಾ ಈಗಾಗಲೇ ಗಾಳ ಹಾಕಿರುವುದು ಭಾರತದ ಪಾಲಿಗೆ   ಅಂತಕನ ಆಹ್ವಾನವೇಸರಿ!
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು,
ಅಲಯನ್ಸ್ ವಿಶ್ವವಿದ್ಯಾಲಯ)

-      ಪ್ರಶಾಂತ್ ಎಸ್. ಪಿ.
(ಅತಿಥಿ ಉಪನ್ಯಾಸಕರು,
ಗೋಪಾಲ್ ರಾಜು ಸರಕಾರಿ ಪ್ರಥಮ ದರ್ಜೆ ಕಾಲೇಜ್)


ಸಾಮಾಜಿಕ, ಸಾಂಸ್ಕ್ರತಿಕ, ಭೌಗೋಳಿಕ ಅಂಶಗಳು ಭಾರತ ಮತ್ತು ನೇಪಾಳದ ಸಂಬಂಧಗಳನ್ನು ಬಹಳ ಪ್ರಾಚೀನ ಕಾಲದಿಂದಲೂ ಪೋಷಿಸಿಕೊಂಡು ಬಂದಿದೆ. ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ಭಾರತದ ಪಾಲಿಗೆ ಬರಿ ನೆರೆಯರಾಷ್ಟ್ರವಾಗಿ ಉಳಿಯದೆ, ಕಾಲಾಂತರದಲ್ಲಿ ಭಾರತದ ವಿದೇಶಾಂಗ ನೀತಿಯ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಈ ಎಲ್ಲ ಸಂಬಂಧಗಳಿಗೆ ಕಲಶಪ್ರಾಯವೆಂಬಂತೆ 1950 ರಲ್ಲಿ ನಡೆದ ಶಾಂತಿ ಮತ್ತು ಮಿತೃತ್ವ ಒಪ್ಪಂದ ಭಾರತ ನೇಪಾಳದಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನೇ ತೆರೆದಿಟ್ಟಿತು. ಈ ಒಪ್ಪಂದ ವ್ಯಾಪಾರ, ವ್ಯವಹಾರ ಹಾಗೂ ಇತರ ಆರ್ಥಿಕ ಚಟುವಟಿಕೆಗಳಲ್ಲಿ ಪರಸ್ಪರ ರಾಷ್ಟ್ರದ ಜನರು ಮುಕ್ತವಾಗಿ ಪಾಲ್ಗೊಳ್ಳುವಂಥ ಅವಕಾಶ ಕಲ್ಪಿಸಿತು. ಈ ಒಪ್ಪಂದದಮತ್ತೊಂದು ವಿಶೇಷತೆ ಎಂದರೆ ಪಾಸ್ ಪೊರ್ಟ್ ಅಥವಾ ವೀಸಾ ಇಲ್ಲದೆಯೆ ಪರಸ್ಪರ ರಾಷ್ಟ್ರಗಳಿಗೆ ತೆರಳಲು ಮತ್ತು ವಾಸಿಸಲು ಅನುವು ಮಾಡಿಕೊಟ್ಟಿತು. ಇದಲ್ಲದೆ ಈ ರಾಷ್ಟ್ರಗಳ ನಡುವೆ ನಡೆದ ಭದ್ರತಾ ಒಪ್ಪಂದ ಸಂಭಂದವನ್ನುಮತ್ತಷ್ಟು ಗಟ್ಟಿಗೊಳಿಸಿ ನೇಪಾಳ ಭಾರತದ ಭದ್ರತಾ ವಲಯದ ಭಾಗವೆಂದೇ ಪರಿಗಣಿಸಲಾಯಿತು. ಇದ್ದರೆ ಹೀಗಿರಬೇಕು ಎಂಬಂತಿದ್ದ ನೆರೆಹೊರೆಯ ರಾಷ್ಟ್ರಗಳ ಮಧ್ಯೆ 1970 ರ ನಂತರದ ಬೆಳವಣಿಗೆಗಳು ಪರಸ್ಪರ ಅವಿಶ್ವಾಸಅಪನಂಬಿಕೆಗಳನ್ನು ಹುಟ್ಟುಹಾಕಿದವು. ಸಿಕ್ಕಿಂನ್ನು ತನ್ನ ಸ್ವಾಧೀನಕ್ಕೆ ಪಡೆದ ಭಾರತದ ನೀತಿಯನ್ನು ನೇಪಾಳ ಬಹಿರಂಗವಾಗಿಯೇ ಟೀಕಿಸಿದ ನೇಪಾಳ ಮುಂದಕ್ಕೂ ಭಾರತದಿಂದ ಒದಗಬಹುದಾದ ಸಂಭಾವ್ಯ ಅಪಾಯವನ್ನು ಊಹಿಸಿತ್ತು.ಮುಂದೆ ಈ ರಾಷ್ಟ್ರಗಳು ತಮ್ಮ ಮೂಗಿನ ನೇರಕ್ಕೆ ನಡೆದುಕೊಂಡು ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಜಟಿಲಗೊಳಿಸಿಬಿಟ್ಟವು.

ಒಡೆದುಹೋದ ಭಾರತ -ನೇಪಾಳ ಸಂಬಂಧ ಹಾಗೂ ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವ, ಭಾರತ-ನೇಪಾಳ ಭಾಂಧವ್ಯವನ್ನು ಮತ್ತಷ್ಟು ಒಡೆಯುತ್ತಿದೆ. ಹಾಗಂತ ಈ ಸಂಬಂಧವನ್ನು ಗಟ್ಟಿಗೊಳಿಸಲಾಗದಷ್ಟು ಜಟಿಲತೆ ಇದೆಎಂದಲ್ಲ. ಭಾರತ-ನೇಪಾಳಗಳ ಮಧ್ಯೆ ಇರುವ ಅವಿಶ್ವಾಸ, ಅಪನಂಬಿಕೆಗಳ ಜೊತೆ ಜೊತೆಗೆ ರಾಜಕೀಯ ಅಸ್ಥಿರತೆ. ಆಗಾಗೆ ಬದಲಾಗುತ್ತಿರುವ ಸರಕಾರಗಳ ಮಧ್ಯೆ ಹೊಯ್ದಾಡುತ್ತಿರುವ ವಿದೇಶಾಂಗ ನೀತಿಗಳೂ ಎರಡೂ ರಾಷ್ಟ್ರಗಳನಡುವಿನ ಕಂದಕ ಹೆಚ್ಚಿಸಿವೆ. ಇದಲ್ಲದೆ ಸರಕಾರಗಳ ಬದಲಾವಣೆಯ ಹಿಂದೆ ಭಾರತದ ಕೈವಾಡವಿದೆ ಎಂದು ನೇಪಾಳ ಅನುಮಾನಿಸುತ್ತಿರುವುದು, ಶರ್ಮಾ ಓಲಿ ಬದಲಾವಣೆಯಲ್ಲಿಯೂ ಭಾರತದ ಪಾತ್ರವಿರುವ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿರುವುದು, ಭಾರತ ತನ್ನ ನೆರೆಯ ರಾಷ್ಟ್ರಗಳಲ್ಲಿ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫ಼ಲವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ದಶಕಗಳಿಂದ ನೇಪಾಳದ ಪ್ರಥಮ ಆಯ್ಕೆಯಾಗಿದ್ದ ಭಾರತ, ಇವತ್ತಿಗೆ ನೇಪಾಳದ ಆದ್ಯತೆಯ ಪಟ್ಟಿಯಲ್ಲಿಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ. ಈ ಮಧ್ಯೆ ಚೀನಾ ನೇಪಾಳದಲ್ಲಿ ತೋರಿಸುತ್ತಿರುವ ಆಸಕ್ತಿಯಿಂದ ನೇಪಾಳ ಕೆರುಂಗ್ ನಿಂದ ಕಠ್ಮಂಡುವಿಗೆ ರೈಲ್ವೆ ಸಂಪರ್ಕ ವಿಸ್ತರಣೆಗೆ ಅವಕಾಶ ನೀಡುವುದರೊಂದಿಗೆಪೊಕಾರ ಮತ್ತು ಲುಂಬಿನಿವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತ ನೇಪಾಳ ಗಡಿಗೆ ಬಹಳ ಹತ್ತಿರದಲ್ಲಿಯೇ ನಡೆಯುತ್ತಿರುವುದು ಭಾರತದ ಪಾಲಿಗೆ ಆತಂಕಕಾರಿ.

ಚೀನಾ ಮತ್ತು ನೇಪಾಳಗಳು ಸ್ವತಂತ್ರ ರಾಷ್ಟ್ರಗಳಾಗಿದ್ದು ಪರಸ್ಪರ ವ್ಯವಹಾರ ನಡೆಸಲು ಸ್ವತಂತ್ರವಾಗಿವೆ ಆದರೆ ಈ ಬೆಳವಣಿಗೆಗಳ ಹಿಂದೆ ದುರುದ್ದೇಶವಿದ್ದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತ ತನ್ನ ನೆರೆ ರಾಷ್ಟ್ರಗಳಲ್ಲಿವಿಶ್ವಾಸಗಳಿಸಲು ವಿಫ಼ಲವಾದಲ್ಲಿ ಚೀನಾಕ್ಕೆ ಭಾರತದ ವಿರೋಧಿ ಚಟುವಟಿಕೆಗಳಿಗೆ ನೆರೆರಾಷ್ಟ್ರಗಳು ಮುಕ್ತ ವೇದಿಕೆಯಾಗಿ ಮಾರ್ಪಡಬಹುದು. ಬಾಂಗ್ಲಾವನ್ನು ಆರಂಭದಲ್ಲಿ ರಾಷ್ಟ್ರವಾಗಿ ಅಂಗೀಕರಿಸಲು ನಿರಾಕರಿಸಿದ ಚೀನಾತದನಂತರದಲ್ಲಿ ತನ್ನ ಮಿಲಿಟರಿ ಉತ್ಪನ್ನಗಳಿಗೆ ಬಾಂಗ್ಲಾವನ್ನು ಮಾರುಕಟ್ಟೆಯಗಿ ಮಾಡಿಕೊಂಡಿತ್ತು! ಇದಲ್ಲದೆ ಬಾಂಗ್ಲಾದಲ್ಲಿ ಆರು ರೈಲ್ವೆ ಯೊಜನೆಗಳಿಗೆ ಒಂಬತ್ತು ಬಿಲಿಯನ್ ಡಾಲರ್ ಹಣವನ್ನು ಕಡಿಮೆ ಬಡ್ಡಿದರದಲ್ಲಿ ನಿಡುವ ಯೊಜನೆಹಾಕಿಕೊಂಡಿದೆ ಮತ್ತು ಇದು ಢಾಕಾಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕೈಗಾರಿಕ ವಲಯ ಹಾಗೂ ಭಾರತದ ಗಡಿಯವರೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಶ್ರೀಲಂಕಾವನ್ನು ಚೀನಾದ ಕಡೆಗೆ ಮುಖ ಮಾಡುವಂತೆ ಮಾಡಿತ್ತು. ಇಲ್ಲಿ ಸ್ವಾಭಾವಿಕವಾಗಿ ಏಳುವ ಪ್ರಶ್ನೆಯೆಂದರೆ ಚೀನಾಗೆ ಇರುವ ಲಾಭವೇನು? ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪ್ರತಿ ಸ್ವತಂತ್ರ ರಾಷ್ಟ್ರಕ್ಕೂ ಇನ್ನೊಂದುರಾಷ್ತ್ರದೊಡನೆ ವ್ಯವಹರಿಸುವ ಸ್ವಾತಂತ್ರ್ಯವಿದೆ. ನೇಪಾಳದೊಂದಿನ ಸಂಭಂಧದಲ್ಲಿ ಅರ್ಥಿಕ ಲಾಭವಾಗದಿದ್ದರೂ ರಾಜಕೀಯ ಲಾಭ ಇದ್ದೇ ಇದೆ!

ಇತ್ತೀಚೆಗೆ ಅಂದರೆ ಜನವರಿ 2016 ರಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಹಿಂದುಳಿದ ಸಮುದಾಯವಾದ ಮಾಧೇಸಿ ಹಾಗೂ ಇತರ ಸಮುದಾಯಗಳನ್ನು ಕಡೆಗಣಿಸಿರುವುದು, ಸಂವಿಧಾನ ವಿರೋಧಿ ಹೋರಾಟಕ್ಕೆ ಎಡೆ ಮಾಡಿಕೊಟ್ಟಿದೆ.ಮಾದೇಸಿ ಹೋರಾಟಕ್ಕೆ ಭಾರತ ಬೆಂಬಲ ನೀಡಿರುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ಕಠಿಣ ನಿಲುವು ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಆದರೆ ಇದರಿಂದ ಭಾರತ ನೇಪಾಳದ ಜನರಿಗೆಹತ್ತಿರವಾಗುವುದರಲ್ಲಿ ಸಂಶಯವಿಲ್ಲ. ಹಾಗೆಂದ ಮಾತ್ರಕ್ಕೆ ನೇಪಾಳದಲ್ಲಿ ಸಂಪೂರ್ಣ ಭಾರತ ಪರ ಅಭಿಪ್ರಾಯವಿದೆಯೆಂದಲ್ಲ, ಅಂದರೆ ಸಂವಿಧಾನವನ್ನು ಒಪ್ಪಿಕೊಂಡವರು ಸಾಮಾನ್ಯವಾಗಿಯೇ ಭಾರತದ ನೀತಿಯನ್ನು ವಿರೋಧಿಸುತ್ತಾರೆ.ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನೇಪಾಳದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡುತ್ತ ಹತ್ತು ಸಾವಿರ ಕೋಟಿ ರೂ. ಅಭಿವೃದ್ಧಿಗಾಗಿ ನೀಡುವುದಾಗಿ ಘೋಷಿಸಿದರು. ಇದು ಮುರಿದಿದ್ದ ಸಂಬಂಧವನ್ನು ಬೆಸೆಯುವ ನಿರೀಕ್ಷೆಮೂಡಿಸಿತ್ತು. ಈ ಮೂಲಕ ಭಾರತ ನೇಪಾಳದ ಅಭಿವೃದ್ಧಿಗೆ ಬದ್ದವಾಗಿದೆ ಎಂಬ ಸಂದೇಶವನ್ನು ರವಾನಿಸಿತ್ತು. ಪ್ರಧಾನಿಯಾದ ಬಳಿಕ ಶರ್ಮಾ ಓಲಿ ಭಾರತ ಭೇಟಿಯೂ ಸಹ ಹೊಸ ಭರವಸೆಯನ್ನು ಮೂಡಿಸಿತ್ತು. ಅದರೆ ಈ ನಿರೀಕ್ಷೆಗಳುಮತ್ತು ಆಶಾವಾದ ಸ್ವಲ್ಪ ಸಮಯಕ್ಕಷ್ಟೇ ಸೀಮಿತವಾಗಿದ್ದು, ತದನಂತರದ ಬೆಳವಣಿಗೆಯಲ್ಲಿ ಅಪನಂಬಿಕೆ ಹೆಡೆಯೆತ್ತಿದೆ. ಗಡಿಯಲ್ಲಿ ಸರಕುಗಳ ಸಾಗಾಣಿಕೆಗೆ ಮಾಧೇಸಿ ಹೋರಾಟಗಾರರು ತಡೆಯನ್ನು ಒಡ್ದಿದ್ದಾರೆ. ಇದು ಭಾರತ ಒಡ್ಡಿರುವತಡೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಭಾರತ ತಿರಸ್ಕರಿಸಿದ್ದರೂ ನೇಪಾಳ ಒಪ್ಪುತ್ತಿಲ್ಲ. ಭಾರತ ನೇಪಾಳದ ಮೇಲೆ ದಿಗ್ಬಂಧನ ಹೇರಿದೆಯೋ? ಅಥವಾ ಮಾದೇಸಿ ಹೋರಾಟಗಾರರು ಸಾಗಾಣಿಕೆಯನ್ನು ತಡೆದಿದ್ದಾರೋಎಂಬ ಪ್ರಶ್ನೆ ಭಾರತ ನೇಪಾಳ ಸಂಬಂಧಗಳನ್ನು ಅವಿಶ್ವಾಸದ ಕೂಪದೊಳಕ್ಕೆ ತಳ್ಳಿತ್ತು!

ಭಾರತ ನೇಪಾಳ ಸಂಬಂಧಗಳಲ್ಲಿ  ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯ ಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳಪಾತ್ರವನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ನೇಪಾಳ ಚೀನಾ ಕಡೆಗೆ ಒಲವು ತೋರಿಸುತ್ತಿರುವುದು ತಿಳಿದ ಮೇಲೂ ಭಾರತ ನಿರ್ಲಕ್ಷ್ಯ ತಾಳಿದಲ್ಲಿ ಹಿಮಾಲಯದ ತಪ್ಪಲಿನ ಈ ಪುಟ್ಟ ರಾಜ್ಯ ಭಾರತದ ವಿದೇಶಾಂಗ ನೀತಿಯ ದುರಂತವಾಗಿಮಾರ್ಪಡುತ್ತದೆ . ಈಗಾಗಲೇ ಪಾಕಿಸ್ಥಾನವನ್ನು ಬಳಸಿಕೊಂಡು ತಂತ್ರ ರೂಪಿಸುತ್ತಿರುವ ಚೀನಾ ನೇಪಾಳವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ದಕ್ಷಿಣ ಏಷ್ಯಾದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.ಎರಡು ವರ್ಷಗಳ ಹಿಂದೆ 2014ರಲ್ಲಿ ಸಾರ್ಕ್ ಒಕ್ಕೂಟದ ವೀಕ್ಷಕ ರಾಷ್ಟ್ರವಾಗಿರುವ ಚೀನಾ ಖಾಯಂ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ನೇಪಾಳವನ್ನು ಬಳಸಿಕೊಂಡಿದ್ದನ್ನು ನಾವಿಲ್ಲಿ ಮರೆಯಲಾಗದು!

ಭಾರತದಿಂದ ದೂರಾಗಿ ಚೀನಾದತ್ತ ಮುಖ ಮಾಡಿದ್ದ ಖಡ್ಗ ಪ್ರಸಾದ್ ಓಲಿ ಇತ್ತೀಚೆಗೆ ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನೇಪಾಳರಾಜಕೀಯದ ಮತ್ತೊಂದು ಅನೂಹ್ಯ ತಿರುವಿನೊಂದಿಗೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಂದರೆ ಪ್ರಚಂಡರವರು ನೇಪಾಳದ ಪ್ರಧಾನಿಯಾಗಿದ್ದಾರೆ. ಪ್ರಚಂಡರವರು ಭಾರತ ಹಾಗೂ ಚೀನಾಕ್ಕೆ ನಿಯೋಗವನ್ನು ಕಳಿಸುವ ಮೂಲಕ ಎರಡೂರಾಷ್ಟ್ರಗಳ ವಿಶ್ವಾಸಗಳಿಸುವ ಪ್ರಯತ್ನ ಮಾಡಿದ್ದು ಪ್ರಶಂಸನೀಯ. ಉಪ ಪ್ರಧಾನಿ ಬಿಮಲೇಂದ್ರ ನಿಧಿಯವರನ್ನೇ ಭಾರತಕ್ಕೆ ಪ್ರತಿನಿಧಿಯನ್ನಾಗಿ ಕಳುಹಿಸಿಕೊಟ್ಟಿದ್ದು ಮತ್ತು ನಿಧಿಯವರ ಭಾರತ ಭೇಟಿ ಯಶಸ್ವಿಯಾಗಿ ಭಾರತ ನೇಪಾಳಗಳುಹಳೆಯ ಬಾಂಧವ್ಯಕ್ಕೆ ಹಿಂದಿರಿಗುವ ಎಲ್ಲಾ ಲಕ್ಷಣಗಳನ್ನೂ ತೋರ್ಪಡಿಸಿದೆ. ಪ್ರಧಾನಿ ಮೋದಿ ಕೂಡ ಈ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಪ್ರಚಂಡ ಅಧಿಕಾರಾವಧಿಯಲ್ಲಿ ಭಾರತ ನೇಪಾಳ ಸಂಬಂಧಗಳು ಹೊಸ ಹುಮ್ಮಸ್ಸುಪಡೆದುಕೊಳ್ಳುವ ಸಾಧ್ಯತೆಗಳಿವೆ. ಒಂಬತ್ತು ತಿಂಗಳ ಬಳಿಕ ಪ್ರಚಂಡ, ಸಮ್ಮಿಶ್ರ ಸರಕಾರದ ಪಾಲುದಾರರಾದ ಶೇರ್ ಬಹದ್ದೂರ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದು, ಶೇರ್ ಬಹದ್ದೂರ್ ಕೂಡ ಭಾರತದ ಪರ ನಿಲುವನ್ನುಹೊಂದಿರುವುದು ಗಮನಾರ್ಹ ವಿಚಾರ. ಶೇರ್ ಬಹದ್ದೂರ್  ಹಿಂದುಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಎರಡೂ ರಾಷ್ಟ್ರಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ಸಂವಿಧಾನದ ಬಗೆಗಿನ ಭಾರತದಕಾಳಜಿಗಳನ್ನೂ ನೇಪಾಳ ಸರಕಾರ ಸಕಾರಾತ್ಮಕ ರೀತಿಯಲ್ಲಿ ಪರಿಗಣಿಸುವ ಭರವಸೆ ವ್ಯಕ್ತಪಡಿಸಿದೆ. ಈ ಎರಡೂ ರಾಷ್ಟ್ರಗಳ ರಾಜಕೀಯ ನಾಯಕರ ಇಚ್ಚಾಶಕ್ತಿ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಬದ್ಧತೆಯಆಧಾರದ ಮೇಲೆ ನೇಪಾಳ-ಭಾರತದ ಭವಿಷ್ಯದ ಬಾಂಧವ್ಯ ನಿರ್ಧರಿತವಾಗಲಿದೆ.


      (This article was published in Vijaya Karnataka newspaper on 13 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore. 













PRASHANTH S. P. (prashsp92@gmail.com)
Guest Lecturer,
Political Science
Dr. S. Gopalaraju Govt. First Grade College,
Anekal








ಭಾರತ- ನೇಪಾಳ ಸಂಬಂಧ:'ಪ್ರಚಂಡ' ಬದಲಾವಣೆಯ ನಿರೀಕ್ಷೆಯಲ್ಲಿ!

ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದ ರಾಜಕೀಯ ಮತ್ತೊಮ್ಮೆ ರಾಜಕೀಯ ಸಂಧಿಕಾಲದಲ್ಲಿದೆ. ಕೆ ಪಿ ಓಲಿ ಯವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ ಪುಷ್ಪಕಮಲ್ ದಹಾಲ್ ಅಂದರೆ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಬದಲಾವಣೆಯೊಂದಿಗೆ ಕಳೆದೊಂದು ವರ್ಷದಿಂದಹದಗೆಟ್ಟಿದ್ದ ಭಾರತ ನೇಪಾಳ ಸಂಬಂಧಗಳೂ ಮತ್ತೆ ಪುನರ್ಸ್ಥಾಪಿತವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಕಳೆದ ವರ್ಷದಿಂದೀಚೆಗೆ ನಡೆದ ಕೆಲ ಕಹಿಘಟನೆಗಳಿಂದಾಗಿ ಭಾರತ ಮತ್ತು ನೇಪಾಳದ ರಾಜಕೀಯ ಸಂಬಂಧಗಳಲ್ಲಿ ಬಿರುಕು ಮೂಡಿತ್ತಲ್ಲದೆ ನೇಪಾಳ ಚೀನಾ ಕಡೆಗೆ ವಾಲಿಕೊಂಡು ಭಾರತವನ್ನುನೇರವಾಗಿಯೇ ವಿರೋಧಿಸತೊಡಗಿತ್ತು! ಪ್ರಚಂಡ ನೇಪಾಳ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಚೀನಾ ಮತ್ತು ಭಾರತಗಳಿಗೆ ತನ್ನ ವಿಶೇಷಪ್ರತಿನಿಧಿಗಳನ್ನು ಕಳುಹಿಸುವುದರ ಮೂಲಕ ಭಾರತ ನೇಪಾಳ ಬಾಂಧವ್ಯಕೊಂದು ತಿರುವು ನೀಡಿದ್ದಾರೆ. ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ ಭಾರತದ ವಿದೇಶಾಂಗನೀತಿಗೆ ಅಪವಾದವಾಗಿ ನಿಂತಿದ್ದ ನೇಪಾಳ, ಇದೀಗ ಮತ್ತೆ ಭಾರತದತ್ತ ಮುಖ ಮಾಡಿದ್ದು ಈ ಸಾಂಪ್ರದಾಯಿಕ ಮಿತೃತ್ವ ಉಳಿಸಿಕೊಳ್ಳಲು ಹೊಸ ಅವಕಾಶ ಸೃಷ್ಟಿಸಿದೆ.

ಭಾರತ ಮತ್ತು ನೇಪಾಳ ನೆರೆ ಹೊರೆಯ ರಾಷ್ಟ್ರಗಳು ಎನ್ನುವುದು ಸತ್ಯವಾದರೂ, ಅದಕ್ಕೂ ಮೀರಿ ಈ ಎರಡೂ ದೇಶಗಳಿಗೆ ವಿಶೇಷ ಅನುಬಂಧವಿದೆ ಎಂಬ ವಿಚಾರಐತಿಹಾಸಿಕ ನಿದರ್ಶನಗಳಿಂದ ರುಜುವಾತಾಗಿವೆ. ನೇಪಾಳದ ಭದ್ರತೆಯ ವಿಚಾರದಲ್ಲಿ ಭಾರತದ ತೋರಿದ ಬದ್ಧತೆ ಮತ್ತು ಪ್ರಬುದ್ಧತೆಗಳೂ ಈ ರಾಷ್ಟ್ರಗಳ ವಿಶೇಷಬಾಂಧವ್ಯವನ್ನು ಇನ್ನೊಂದು ಮಟ್ಟಕ್ಕೇರಿಸಿದ್ದವು. ನೇಪಾಳ ಅಕ್ಷರಶಃ ಭಾರತದಿಂದ ಆವೃತವಾದ ದೇಶ. ಉತ್ತರದ ಕಡೆ ಚೀನಾ ಇದ್ದರೂ, ಪ್ರಪಂಚದ ಅತೀ ಎತ್ತರದಮೌಂಟ್ ಎವರೆಸ್ಟ್ ಸೇರಿದಂತೆ ಹಿಮಾಲಯದ ಪರ್ವತ ಶ್ರೇಣಿ ನೇಪಾಳವನ್ನು ಚೀನಾದಿಂದ ಬೇರ್ಪಡಿಸಿ, ಭೌಗೋಳಿಕವಾಗಿಯೂ ಭಾರತಕ್ಕೆ ಹತ್ತಿರವಾಗಿಸಿದೆ.1996ರಿಂದ ನಿರಂತರವಾಗಿ ನಡೆದ ಮಾವೊಯಿಸ್ಟ್ ಸಂಘರ್ಷದಿಂದ ಬಳಲಿ ಬೆಂಡಾಗಿದ್ದ ನೇಪಾಳಕ್ಕೆ ಹೊಸ ದಿಕ್ಕು ತೋರಿಸಿದ್ದು ಭಾರತದ ಹಸ್ತಕ್ಷೇಪವೇ! 2004ರಲ್ಲಿಮಾವೊಯಿಸ್ಟ್ ಪಕ್ಷ ಮತ್ತು ಇತರ ರಾಷ್ಟ್ರೀಯ ಪಕ್ಷಗಳನ್ನು ಒಟ್ಟು ಸೇರಿಸಿ ಹನ್ನೆರಡು ಅಂಶಗಳ ಒಪ್ಪಂದಕ್ಕೆ ಮನವೊಪ್ಪಿಸಿ ನೇಪಾಳವನ್ನು ಪಾರು ಮಾಡಿದ್ದು ಭಾರತದಹಿರಿಮೆ. ಭಾರತದ ಕಿರಿಯ ಸಹೋದರನಂತಿದ್ದ ಈ ರಾಷ್ಟ್ರ 2015 ಸೆಪ್ಟೆಂವಬರ್ 19ರಲ್ಲಿ ಹೊಸ ಸಂವಿಧಾನ ರೂಪಿಸಿಕೊಳ್ಳುತ್ತದೆ. ನೇಪಾಳದ ಗಡಿ ಬಾಗದಲ್ಲಿವಾಸಿಸುತ್ತಿದ್ದ ಮಾದೇಸಿ, ತಾರು ಮತ್ತಿತರ ಜನಾಂಗಗಳ ವಿರೋಧ, ಪ್ರತಿಭಟನೆಗಳನ್ನು ಲೆಕ್ಕಿಸದೆ, ನೇಪಾಳದ ಹೊಸ ಸರ್ಕಾರ ಸಂವಿಧಾನವನ್ನುಅಳವಡಿಸಿಕೊಳ್ಳುತ್ತದೆ. ಕಾಠ್ಮಂಡುವಿನಲ್ಲಿ ನಡೆದ ಗಲಭೆಗಳೂ ನೇಪಾಳ ಸರಕಾರದ ನಿಲುವನ್ನು ಬದಲಿಸಲು ವಿಫಲವಾದಾಗ, ಭಾರತ ನೇಪಾಳದ ಹೊಸಸಂವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತ ನೀಡಿದ ಗಂಭೀರ ಎಚ್ಚರಿಕೆಗಳ ಹೊರತಾಗಿಯೂ ನೇಪಾಳದ ದಕ್ಷಿಣ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವಮಾದೇಸಿ ಜನಾಂಗದ ಹಕ್ಕುಗಳನ್ನು ಪುರಸ್ಕರಿಸಲು ನೇಪಾಳದ ಹೊಸ ಸಂವಿಧಾನ ವಿಫಲವಾಗಿತ್ತು. ಈ ಅತೃಪ್ತ ಮಾದೇಸಿ ಜನಾಂಗ ವಾಸಿಸುತ್ತಿರುವ ಪ್ರದೇಶಭಾರತದೊಂದಿಗೆ ಗಡಿ ಹಂಚಿಕೊಂಡಿರುವುದು ಮತ್ತು ಬಹಳಷ್ಟು ಜನ ಮಾದೇಸಿ ಜನ ಭಾರತೀಯರೊಂದಿಗೆ ಕೌಟುಂಬಿಕ ಸಂಬಂಧಗಳನ್ನು ಹೊಂದಿರುವುದರಿಂದಸಹಜವಾಗಿಯೇ ಭಾರತ ಕಳವಳಗೊಂಡಿತ್ತು.

ಪ್ರತ್ಯೇಕ ಸಾಂಸ್ಕೃತಿಕ ಹಿನ್ನೆಲೆ ಇರುವ ಮಾದೇಸಿ ಜನಾಂಗವನ್ನು ನೇಪಾಳ ಸಮಾಜ ಮುಖ್ಯವಾಹಿನಿಯಿಂದ ಹೊರಗಿಟ್ಟಿದೆ. ಹೊಸ ಸಂವಿಧಾನವಾದರೂ ತಮ್ಮಸಮಸ್ಯೆಗಳಿಗೆ ಕಿವಿಕೊಡಬಹುದು ಅಂದುಕೊಂಡಿದ್ದ ಮಾದೇಸಿಗಳಿಗೆ ನಿರಾಸೆ ಕಾದಿತ್ತು. ಮಾದೇಸಿಗಳು ನೆಲೆಸಿರುವ ಪ್ರಾಂತ್ಯದ ಗಡಿ ಸಮಸ್ಯೆ, ಅವರ ಕುಟುಂಬದಸದಸ್ಯರು ಎದುರಿಸುತ್ತಿರುವ ಪೌರತ್ವದ ಸಮಸ್ಯೆಗಳಿಗೆ ಹೊಸ ಸಂವಿಧಾನ ಕಿವುಡಾಗಿತ್ತು. ನೇಪಾಳದ ಹೊಸ ಸಂವಿಧಾನ ದಶಕಗಳಿಂದ ಮಾದೇಸಿಗಳಮೇಲಾಗುತ್ತಿರುವ ದೌರ್ಜನ್ಯ, ನೇಪಾಳದ ಮುಖ್ಯವಾಹಿನಿ ಮಾದೇಸಿಗಳ ಮೇಲೆ ತೋರಿಸುತ್ತಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಯಜಮಾನಿಕೆಯನ್ನು ಕಂಡೂಕಾಣದಂತೆ ಸುಮ್ಮನಾಯಿತು. ನೇಪಾಳದ ರಾಜಕೀಯ ನಾಯಕರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಮಾದೇಸಿ ಜನಾಂಗಕ್ಕೆ ಯಾವುದೇ ಪ್ರಾತಿನಿಧ್ಯ ಕೊಡದೆಸಂಪೂರ್ಣ ಮೂಲೆಗುಂಪು ಮಾಡಿಬಿಡುತ್ತಾರೆ. ನೇಪಾಳದ ಪ್ರಜೆಗಳೇ ಆದರೂ ಪರಕೀಯರಂತೆ ಬದುಕುವ ದುಃಸ್ಥಿತಿ ಮಾದೇಸಿಗಳಿಗೆ ಬಂದೊದಗುತ್ತದೆ. ಹಲವಾರುವರ್ಷಗಳಿಂದ ನೇಪಾಳದ ಪ್ರತಿ ಸಂಕಟದಲ್ಲೂ ಹಿರಿಯಣ್ಣನಂತೆ ಜೊತೆಗಿದ್ದ ಭಾರತ, ಮಾದೇಸಿಗಳಿಗಾದ ಈ ಅನ್ಯಾಯವನ್ನು ಸರಿಪಡಿಸಲು ನೇಪಾಳಕ್ಕೆ ಸಲಹೆನೀಡಿದ್ದು ನೇಪಾಳಕ್ಕೆ ಮಹಾಪರಾಧದಂತೆ ಕಂಡಿತ್ತು! ಭಾರತದೊಂದಿಗಿನ ಸಂಬಂಧ ಮುರಿದುಕೊಳ್ಳಲು ಈ ಒಂದು ಕಾರಣ ಸಾಕಾಯ್ತು ನೇಪಾಳಿ ರಾಜಕಾರಣಿಗಳಿಗೆ!ಹೊಸ ಸಂವಿಧಾನದೊಂದಿಗೆ ನೂತನವಾಗಿ ಆಯ್ಕೆಯಾದ ಪ್ರಧಾನಿ ಖಡ್ಗ ಪ್ರಸಾದ್ ಓಲಿ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಚೀನಾವನ್ನು ಆರಿಸಿಕೊಂಡಾಗ, ಓಲಿಉದ್ದೇಶಪೂರ್ವಕವಾಗಿಯೇ ಭಾರತವನ್ನು ಕಡೆಗಣಿಸಿದ್ದು ಸ್ಪಷ್ಟವಾಗಿತ್ತು. ಮುಂದೆ ಇದು ವಿಪರೀತಕ್ಕೆ ಹೋಗಿ, ಭಾರತ ನೇಪಾಳಕ್ಕೆ ದಿಗ್ಬಂಧನ ಹಾಕಿದ್ದು, ನೇಪಾಳಚೀನಾದೊಡನೆ ಹೆಚ್ಚಿನ ಒಡನಾಟ ಬೆಳೆಸಿಕೊಂಡಿದ್ದೂ ಸೇರಿದಂತೆ ಅನೇಕ ಕಹಿ ಘಟನೆಗಳು ನಡೆದುಹೋಯಿತು.

ಭಾರತದ ಪ್ರಧಾನಿ ನರೇಂದ್ರ ಮೋದಿ ನೇಪಾಳ ಸಂವಿಧಾನದ ಬಗ್ಗೆ ಮುಕ್ತವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವೂನೇಪಾಳ ಸಂವಿಧಾನದ ಬಗ್ಗೆ ಇದೇ ನಿಲುವನ್ನು ಪ್ರದರ್ಶಿಸಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಭಾರತ ನೇಪಾಳದ ನಡುವೆ ಅನಧಿಕೃತ ದಿಗ್ಬಂಧನದ ಪರಿಸ್ಥಿತಿನಿರ್ಮಾಣವಾಗಿತ್ತು. ಭಾರತ ನೇಪಾಳ ಸಂಬಂಧಗಳು ವಿಷಮ ಪರಿಸ್ಥಿತಿಯಲ್ಲಿದ್ದಾಗಲೇ ಪ್ರಾಕೃತಿಕ ವಿಕೋಪದಿಂದಾಗಿ ನೇಪಾಳದಲ್ಲಿ ಭೂಮಿ ನಡುಗಿತ್ತು.ಭೂಕಂಪದಿಂದಾಗಿ ತತ್ತರಿಸಿದ್ದ ನೇಪಾಳಕ್ಕೆ 'ಆಪರೇಶನ್ ಮೈತ್ರಿ' ಮೂಲಕ ಭಾರತ ಮತ್ತೆ ಸಹಾಯಹಸ್ತ ಚಾಚುತ್ತದೆ. ಪ್ರಾಕೃತಿಕ ವಿಕೋಪದಿಂದ ಜರ್ಜರಿತಗೊಂಡಿದ್ದನೇಪಾಳಕ್ಕೆ ಭಾರತ ಮಾನವೀಯತೆಯ ನೆಲೆಯಲ್ಲಿ ಮಾಡಿದ ಸಹಾಯವೂ ಅನೇಕರ ವಕ್ರದೃಷ್ಠಿಗೆ ತುತ್ತಾಗಿದ್ದು ದುರದೃಷ್ಟ. ನೇಪಾಳ ಕೂಡ ಭಾರತದಸಹಾಯಹಸ್ತವನ್ನು ಯಜಮಾನಿಕೆಯ ಹಸ್ತಕ್ಷೇಪ ಎಂದು ಪರಿಗಣಿಸಿದಾಗ ಭಾರತ ನೇಪಾಳ ಸಂಬಂಧಗಳು ಇನ್ನೆಂದೂ ಸರಿ ಹೋಗುವುದಿಲ್ಲ ಎಂಬ ಭಾವನೆದಟ್ಟವಾಗಿತ್ತು.

ಭಾರತದ ಪಾಲಿಗೆ ದಶಕಗಳಿಂದ ಸಾಂಪ್ರದಾಯಿಕ ಮಿತ್ರನಾಗಿದ್ದ ನೇಪಾಳದಂಥ ರಾಷ್ಟ್ರವೊಂದು ಚೀನಾ ಕಡೆ ವಾಲಿಕೊಂಡಾಗ ಭಾರತದ ರಾಜತಾಂತ್ರಿಕರುತಲೆಕೆಡೆಸಿಕೊಂಡಿದ್ದರು. ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ನೇಪಾಳ ಚೀನಾ ಕಡೆಗೆ ಒಲವು ತೋರಿಸುತ್ತಿರುವುದುಭಾರತದ ಪಾಲಿಗೆ ಆತಂಕಕಾರಿ. ಈಗಾಗಲೇ ಪಾಕಿಸ್ಥಾನವನ್ನು ಬಳಸಿಕೊಂಡು ತಂತ್ರ ರೂಪಿಸುತ್ತಿರುವ ಚೀನಾ ನೇಪಾಳವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕದಕ್ಷಿಣ ಏಷ್ಯಾದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಎರಡು ವರ್ಷಗಳ ಹಿಂದೆ 2014ರಲ್ಲಿ ಸಾರ್ಕ್ ಒಕ್ಕೂಟದ ವೀಕ್ಷಕ ರಾಷ್ಟ್ರವಾಗಿರುವಚೀನಾ ಖಾಯಂ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ನೇಪಾಳವನ್ನು ಬಳಸಿಕೊಂಡಿದ್ದನ್ನು ನಾವಿಲ್ಲಿ ಮರೆಯಲಾಗದು!

ಭಾರತದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದ ಖಡ್ಗ ಪ್ರಸಾದ್ ಓಲಿ ಇತ್ತೀಚೆಗೆ ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದಾಗಿ ಅಧಿಕಾರಕಳೆದುಕೊಂಡಿದ್ದಾರೆ. ಹೊಸ ಪ್ರಧಾನಿ ಪುಷ್ಪ ಕಮಲ್ ದಹಾಲ್ (ಪ್ರಚಂಡ)ರವರು ಆರಂಭದಲ್ಲೇ ನೇಪಾಳದ ಉಪಪ್ರಧಾನಿಯಾಗಿರುವ ಬಿಮಲೇಂದ್ರ ನಿಧಿ ಅವರನ್ನುಭಾರತಕ್ಕೆ ರಾಜತಾಂತ್ರಿಕ ಪ್ರತಿನಿಧಿಯಾಗಿ ಕಳುಹಿಸುವ ಮೂಲಕ ಭಾರತ ಮತ್ತು ನೇಪಾಳ ಸಂಬಂಧಗಳು ಮತ್ತೆ ಸುಧಾರಿಸುವ ಸೂಚನೆಗಳು ಕಾಣಿಸುತ್ತಿವೆ.ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಿಧಿ ಭಾರತದೊಂದಿಗೆ ಸಹಕಾರವಿಲ್ಲದೆ ನೇಪಾಳದ ಅಭಿವೃದ್ಧಿ ಕಷ್ಟಸಾಧ್ಯ ಎಂಬ ಮಾತುಗಳನ್ನಾಡಿರುವುದು, ಅದಕ್ಕೆಪ್ರತಿಯಾಗಿ ಮೋದಿಯವರು ನೇಪಾಳದ ಪ್ರಧಾನಿ ಪ್ರಚಂಡರವರನ್ನು ಭಾರತಕ್ಕೆ ಆಹ್ವಾನಿಸಿ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದಿರುವುದು ಗಮನಾರ್ಹ ವಿಚಾರ.ಮಾದೇಸಿ ಮತ್ತಿತರ ಜನಾಂಗಗಳ ಬಗ್ಗೆ ಭಾರತದ ಕಾಳಜಿಯನ್ನು ನೇಪಾಳದ ಹೊಸ ಸರಕಾರ ಧನಾತ್ಮಕವಾಗಿ ಸ್ವೀಕರಿಸುವ ಲಕ್ಷಣಗಳೂ ಗೋಚರಿಸುತ್ತಿರುವೆ.

2014ರಿಂದ ನೆರೆಹೊರೆಯ ದೇಶಗಳ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಆದ್ಯತೆ ನೀಡಿದ್ದ ಭಾರತದ ವಿದೇಶಾಂಗ ನೀತಿ ಶ್ರೀಲಂಕಾ ಮತ್ತುಬಾಂಗ್ಲಾದೇಶಗಳೊಡನೆ ಗಮನಾರ್ಹ ಯಶಸ್ಸು ಪಡೆಯಿತಾದರೂ ನೇಪಾಳ ಮಾತ್ರ ಕಳೆದೊಂದು ವರ್ಷದಿಂದ  ಸವಾಲಾಗಿತ್ತು. ಇದೀಗ ನೇಪಾಳದೊಂದಿಗಿನಸಂಬಂಧಗಳು ಸಹಜ ಸ್ಥಿತಿಗೆ ಮರಳುತ್ತಿರುವುದು ಸ್ವಾಗತಾರ್ಹ ವಿಷಯವೇ ಸರಿ. ಕೈ ಮೀರಿ ಹೋಗುತ್ತಿದ್ದ ಭಾರತ ನೇಪಾಳ ಸಂಬಂಧಗಳಿಗೆ ಹೊಸ ಬೆಸುಗೆ ಹಾಕಿದಪ್ರಚಂಡ ಇನ್ನೂ ಒಂಬತ್ತು ತಿಂಗಳುಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಅವಧಿಯ ಬಳಿಕ ಸಮ್ಮಿಶ್ರ ಸರಕಾರದಲ್ಲಿ ಕೈ ಜೋಡಿಸಿದ್ದ ನೇಪಾಳಿಕಾಂಗ್ರೆಸ್ ಪಕ್ಷದ ಶೇರ್ ಬಹಾದ್ದೂರ್ ದೇವುಬಾ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಅದೃಷ್ಟವಶಾತ್ ಶೇರ್ ಬಹಾದ್ದೂರ್ ಕೂಡ ಭಾರತದೊಂದಿಗಿನ ನೇಪಾಳಸಂಬಂಧಗಳ ಪರವಾಗಿ ಹೇಳಿಕೆಗಳನ್ನು ನೀಡಿರುವುದು ಮುಂದಿನ ದಿನಗಳಲ್ಲಿ ನೇಪಾಳ ಭಾರತ ಸಂಬಂಧಗಳು ಸುಧಾರಿಸುವ ಭರವಸೆ ಮೂಡಿಸಿವೆ.




 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 9 September 2016)