ಬುಧವಾರ, ನವೆಂಬರ್ 25, 2015

ಗಂಗಾ ವಿಮಾನ ಅಪಹರಣ ಮತ್ತು1971ರ ಇಂಡೋ-ಪಾಕ್ ಯುದ್ಧ

ಭಾರತ ಕೇವಲ ನೈತಿಕ ಶಕ್ತಿ ಮಾತ್ರವಲ್ಲ, ರಣ ನೀತಿಯಲ್ಲಿ ತಂತ್ರ ಮತ್ತು ರಣರಂಗದಲ್ಲಿ ಕ್ಷಾತ್ರ ತೇಜ ತೋರುವ ತಂತ್ರ-ಕ್ಷಾತ್ರಗಳ ಸಮ್ಮಿಲನ ಎಂದು ನಿರೂಪಿಸಿದ್ದು ನಮ್ಮ ಹೆಮ್ಮೆಯ ಗುಪ್ತಚರ ವಿಭಾಗ ‘ರಾ’.
- ಕೀರ್ತಿರಾಜ್ 

1971 ರ ಭಾರತ ಪಾಕಿಸ್ತಾನ ಯುದ್ಧ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳಿಗೆ ಹಿಡಿದಕನ್ನಡಿಯೆಂದರೆ ತಪ್ಪಾಗಲಾರದು. ಪಾಕಿಸ್ತಾನಕ್ಕೆ ಭಾರತ ಸೇನಾ ಪ್ರಾಬಲ್ಯವನ್ನು ಸ್ಪಷ್ಟವಾಗಿ ಪರಿಚಯಿಸಿದ ಯುದ್ಧ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು ಮುಕ್ತಗೊಳಿಸಿ, ವಿಶ್ವ ಭೂಪಟದಲ್ಲಿ ಬಾಂಗ್ಲಾದೇಶವೆಂಬ ಒಂದು ಹೊಸ ದೇಶವನ್ನೇ ಸೃಷ್ಟಿಸಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸೇನಾ ಮುಖ್ಯಸ್ಥ  ಫ್ರೀಲ್ಡ್ ಮಾರ್ಷಲ್ ಮಾನೆಕ್ ಷಾ ತೋರಿದ ದಿಟ್ಟತನ, ಭಾರತೀಯ ಸೇನೆಯ ಅಸೀಮ ಶೌರ್ಯ ಇಂದಿಗೂ ವಿಶ್ವದ ರಾಜಕೀಯದಲ್ಲಿ ಮಾಸದ ನೆನಪು. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾರತ ತನ್ನ ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಒಂದು ಸ್ಪಷ್ಟವಾದ ಸಂದೇಶ ರವಾನಿಸಿತ್ತು. ಈ ಚಾರಿತ್ರಿಕ ವಿಜಯದ ಹಿಂದೆ ಹಲವಾರು ರೋಚಕ ಅಧ್ಯಾಯಗಳಿವೆ. ‘ಗಂಗಾ ವಿಮಾನ ಅಪಹರಣ ಪ್ರಕರಣ’ ಇವುಗಳಲ್ಲೊಂದು.ಯುದ್ಧ ಪ್ರಾರಂಭವಾಗುವ ಕೆಲ ತಿಂಗಳುಗಳ ಹಿಂದೆ, ಅಂದರೆ ಜನವರಿ 1971ರಲ್ಲಿ ಕಾಶ್ಮೀರದ ನ್ಯಾಷನಲ್ ಲಿಬರೇಶನ್ ಫ್ರಂಟ್ ಸಂಘಟನೆಗೆ ಸೇರಿದ ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ಎಂಬ ಇಬ್ಬರು ಯುವಕರು ಗಂಗಾ ಎಂಬ ಹೆಸರಿನ ವಿಮಾನವನ್ನು ಅಪಹರಿಸಿ ಪಾಕಿಸ್ತಾನದ ನೆರವಿನಿಂದ ಅದನ್ನು ಲಾಹೋರ್‌ನಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಪಾಕಿಸ್ತಾನ ಕೂಡ ಈ ವಿಮಾನ ಅಪಹರಣವನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಉತ್ಸುಕವಾಗಿತ್ತು.
ಪಾಕಿಸ್ತಾನ ಇದೇ ಅವಕಾಶಕ್ಕೋಸ್ಕರ ಕಾಯುತ್ತಿತ್ತೇನೋ ಎಂಬಂತೆ, ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಜುಲಿಕರ್ ಆಲಿ ಭುಟ್ಟೋ ಸ್ವತಃ ಅಪಹರಣಕಾರರನ್ನು ಭೇಟಿಯಾದರು. ಈ ವಿಮಾನ ಅಪಹರಣವನ್ನು ಬಳಸಿಕೊಂಡು ಪಾಕಿಸ್ತಾನದ ನಾಯಕರು ಭಾರತವನ್ನು ಬೆದರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಅತೀ ಉತ್ಸಾಹದಲ್ಲಿದ್ದರು.‘ಗಂಗಾ ವಿಮಾನ ಅಪಹರಣ ಪ್ರಕರಣ’ ನಂತರದಲ್ಲಿ ಹೊಸ ತಿರುವನ್ನು ಪಡೆದುಕೊಂಡಿತು. ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಅತಿಯಾದ ಒತ್ತಡ ತರುವಲ್ಲಿ ಯಶಸ್ವಿಯಾಯಿತು. ಒತ್ತೆಯಾಳುಗಳಾಗಿದ್ದ ಎಲ್ಲಾ ಪ್ರಯಾಣಿಕರನ್ನು ಭಾರತಕ್ಕೆ ಹಿಂದಿರುಗಿಸಬೇಕಾಯ್ತು. ಆದರೆ ವಿಮಾನವನ್ನು ಅಪಹರಣಕಾರರು ನಾಶಪಡಿಸಿದ್ದರು.ಇದೇ ಕಾರಣವನ್ನು ಮುಂದಿಟ್ಟುಕೊಂಡು ಭಾರತವು ತನ್ನ ಭೂಪ್ರದೇಶದಲ್ಲಿ ಎಲ್ಲಾ ಪಾಕಿಸ್ತಾನಿ ವಿಮಾನಗಳ ಹಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತು. ಈ ನಿಷೇಧಾಜ್ಞೆ ಮುಂದೆ ನಡೆದ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಕಿಸ್ತಾನ ತನ್ನ ಸೇನೆಯನ್ನು ಪೂರ್ವ ಪಾಕಿಸ್ತಾನಕ್ಕೆ ಕಳುಹಿಸಲು ಪರದಾಡುವಂತೆ ಮಾಡಿತು ಈ ನಿಷೇಧಾಜ್ಞೆ! ಪಾಕಿಸ್ತಾನಿ ಸೇನೆ ಯಾವುದೋ ದೂರದ ದಾರಿಯಿಂದ ಇಡೀ ಭಾರತಕ್ಕೆ ಪ್ರದಕ್ಷಿಣೆ ಹಾಕಿಕೊಂಡು ಯುದ್ಧ ರಂಗ ಸೇರುವಂತಾಯಿತು.
‘ಗಂಗಾ ವಿಮಾನ ಅಪಹರಣ ಪ್ರಕರಣ’ವನ್ನು ಪಾಕಿಸ್ತಾನ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೆ, ಕೊನೆಗೆ ಇದೇ ಪ್ರಕರಣ ಭಾರತದ ಪರವಾಗಿ, ಪಾಕಿಸ್ತಾನದ ಹೀನಾಯ ಸೋಲಿಗೆ ಕಾರಣವಾಯಿತು! ತಮಾಷೆಯ ವಿಷಯವೆಂದರೆ ಆದಿಯಿಂದ ಅಂತ್ಯದವರೆಗೆ, ‘ಗಂಗಾ ವಿಮಾನ
ಅಪಹರಣ ಪ್ರಕರಣ’ವನ್ನು ನಿಯಂತ್ರಿಸಿದ್ದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ ! ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಸದಸ್ಯರಾಗಿರಲಿಲ್ಲ, ಅಪಹರಣಕಾರರ ಸೋಗು ಹಾಕಿದ್ದ ಭಾರತದ ‘ರಾ’ ಏಜೆಂಟ್‌ಗಳಾಗಿದ್ದರು. ಅಪಹರಿಸಲ್ಪಟ್ಟ ‘ಗಂಗಾ’ ಭಾರತದ ಹಳೆಯ, ಉಪಯೋಗಿಸಲ್ಪಡದ ವಿಮಾನವಾಗಿತ್ತು. ಕೆಲವೇ ವಾರಗಳ ಹಿಂದೆ ಭಾರತವು ಅಪಹರಣದ ನಾಟಕಕ್ಕೋಸ್ಕರವೇ ಈ ವಿಮಾನವನ್ನು ಮರುಬಳಕೆಗೆ ತಂದಿತ್ತು!ಯುದ್ಧದ ಪ್ರಾರಂಭಕ್ಕೆ ಮೊದಲೇ ಭಾರತವು ಪಾಕಿಸ್ತಾನಿ ವಿಮಾನಗಳು ನೇರವಾಗಿ ಪೂರ್ವ ಪಾಕಿಸ್ತಾನ ತಲುಪುವುದನ್ನು ನಿಷೇಧಿಸಲು ಯೋಚಿಸಿತ್ತು. ಈ ಜವಾಬ್ದಾರಿ ಭಾರತದ ಗುಪ್ತಚರ ವಿಭಾಗ ‘ರಾ’ ಹೆಗಲಿಗೆ ಬಿತ್ತು. ಅಂದಿನ ‘ರಾ’ ಮುಖ್ಯಸ್ಥರಾಗಿದ್ದ ಆರ್. ಎನ್. ಕಾವ್ ಈ ಜವಾಬ್ದಾರಿಯನ್ನು ದಕ್ಷವಾಗಿ ನಿಭಾಯಿಸಿದರು. ‘ಗಂಗಾ ವಿಮಾನ ಅಪಹರಣ’ದ ಪ್ರತಿ ಹಂತವೂ ಪೂರ್ವನಿಯೋಜಿತವಾಗಿತ್ತು. 1968ರಲ್ಲಿ ಸ್ಥಾಪನೆಯಾಗಿ, ಆಗಷ್ಟೇ ಅಂಬೆಗಾಲಿಡುತ್ತಿದ್ದ ‘ರಾ’ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತ!
ವಿಶ್ವದ ಬಲಾಢ್ಯ ಗುಪ್ತಚರ ಸಂಸ್ಥೆಗಳು, ಭಾರತದ ಈ ಗುಪ್ತಚರ ಚಾಣಾಕ್ಷತೆಯನ್ನು ತಿರುಗಿ ನೋಡುವಂತೆ ಮಾಡಿತ್ತು ‘ಗಂಗಾ ವಿಮಾನ ಅಪಹರಣ ಪ್ರಕರಣ’.ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ, ಪಾಕಿಸ್ತಾನ ಭಾರತಕ್ಕೆ ಕೇಡು ಬಯಸುವ ಅವಸರದಲ್ಲಿ ‘ರಾ’ ಖೆಡ್ಡಾದಲ್ಲಿ ಬಿತ್ತು. 1948ರಲ್ಲೇ ಸ್ಥಾಪನೆಗೊಂಡು, ಭಾರತವನ್ನು ನಿರಂತರ ಕೆಣಕುತ್ತಿದ್ದ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಅವಮಾನದಿಂದ ಕೈಲಾಗದೆ ಮೈ ಪರಚಿಕೊಂಡಿತ್ತು. ಹೀಗೆ ಇಂದಿಗೂ ವಿಶ್ವ ಗುಪ್ತಚರ ವಿಭಾಗದ ರೋಚಕ ಕಥನಗಳಲ್ಲಿ ಅಚ್ಚಳಿಯದೆ, ಭಾರತದ ಗುಪ್ತಚರ ವಿಭಾಗದ ಮುಕುಟಪ್ರಾಯವಾಗಿ ನಿಲ್ಲುವ ಉದಾಹರಣೆ ‘ಗಂಗಾ ವಿಮಾನ ಅಪಹರಣ ಪ್ರಕರಣ’. ಮುಂದೆ ಕೆಲವೇ ತಿಂಗಳಲ್ಲಿ ನಡೆದ 1971ರ ಇಂಡೋ-ಪಾಕ್ ಯುದ್ಧ, ಮತ್ತದರ ಫಲಿತಾಂಶ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸತ್ಯ. ‘ರಾ’ ಸ್ಥಾಪನೆಯೊಂದಿಗೆ ಭಾರತ ಅಧಿಕೃತವಾಗಿ ರವಾನಿಸಿದ ಸಂದೇಶ ಸ್ಪಷ್ಟ, ಶತ್ರು ಸಂಹಾರದಲ್ಲಿ ಭಾರತ ಚಾಣಕ್ಯನೇ, ಅಂದಿಗೂ ಇಂದಿಗೂ ಎಂದೆಂದಿಗೂ!



 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 24 November 2015)

ಶುಕ್ರವಾರ, ನವೆಂಬರ್ 13, 2015

'ರೆಡ್ ಸೆಲ್’: ಶತ್ರುವಿನಂತೆ ಯೋಚಿಸಿ!


ರಾಷ್ಟ್ರೀಯ ಭಧ್ರತೆಗೆ ತೊಡಕಾಗುವ ಶತ್ರುಗಳನ್ನು ನಿವಾರಿಸಲು, ಶತ್ರುವಿನಂತೆ ಯೋಚಿಸಿ, ಅವರಿಗಿಂತ ಮೊದಲೇ ಕಾರ್ಯ ಪ್ರವೃತ್ತವಾಗುವ ಮಿಂಚಿನ ವೇಗದ ಸೈನ್ಯದ ಅವಶ್ಯಕತೆ ಬಹಳಷ್ಟಿದೆ.


-      ಕೀರ್ತಿರಾಜ್



ಒಂದು ರಾಷ್ಟ್ರ ಅಥವಾ ರಾಜ್ಯದ ಪ್ರಮುಖ ಉದ್ದೇಶ ಮತ್ತು ನಿರ್ವಹಿಸಬೇಕಾದ ಕರ್ತವ್ಯಗಳು ಹಲವಾರಿದ್ದರೂ, ತನ್ನ ರಾಷ್ಟ್ರೀಯ ಭದ್ರತೆ ಅಗ್ರಗಣ್ಯ ಆದ್ಯತೆಯ ವಲಯ. ಪ್ರತಿ ರಾಷ್ಟ್ರವೂ ಕೂಡ ತನ್ನ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಣೆ ಮಾಡಲು ಯಾವುದೇ ಕಾರ್ಯಾಚರಣೆಗೂ ಮುಂದಾಗುತ್ತದೆ. ಚರಿತ್ರೆ ನೆನಪಿಟ್ಟುಕೊಂಡಿರುವ ಸಾಲು ಸಾಲು ಸಮರಗಳೇ ಇದಕ್ಕೆ ಸಾಕ್ಷಿ. ಒಂದು ರೀತಿಯಲ್ಲಿ ಇತಿಹಾಸವೆಂದರೆ ಯುದ್ಧಗಳ ಕಥೆಯೇ !
ಕಣ್ಣಿಗೆ ಕಾಣುವ ಯುದ್ಧ, ರಾಷ್ಟ್ರೀಯ ಹಿತಾಸಕ್ತಿಯನ್ನು ಮತ್ತು ವಿದೇಶಾಂಗ ನೀತಿಯ ಕೊನೆಯ ಪ್ರಯತ್ನ. ಆದರೆ ಯುದ್ಧ ಮಾತ್ರ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಸಾಧನವಲ್ಲ. ಜನಸಾಮಾನ್ಯರ ಕಣ್ಣಿಗೆ ಕಾಣದ, ಕೆಲವೊಮ್ಮೆ ಅವರ ಊಹೆಗೂ ನಿಲುಕದ ರೀತಿಯಲ್ಲಿ ಕೆಲವೊಂದು ಸಂಸ್ಥೆಗಳು ರಾಷ್ಟ್ರದ ಹಿತಾಸಕ್ತಿಯಲ್ಲಿ ಎಳ್ಳಷ್ಟೂ ಕುಂದುಂಟಾಗದಂತೆ ಕಾರ್ಯವೆಸಗುತ್ತವೆ. ಒಂದು ರಾಷ್ಟ್ರದ ಬಲಾಬಲಗಳನ್ನು ಅದರ ಸೇನಾ ಶಕ್ತಿ ಮತ್ತು ಶಸ್ತ್ರಾಗಾರದಿಂದ ಅಳೆಯುವಂತಿಲ್ಲ. ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ದೇಶದ ಗುಪ್ತಚರ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳ ಕಾರ್ಯವೈಕರಿಯ ಬಗೆಗೆ ಸಾಮಾನ್ಯ ಕುತೂಹಲ ಇದ್ದಿದ್ದೇ. ಪ್ರತಿಯೊಂದು ರಾಷ್ಟ್ರ ತನ್ನದೇ ಆದ ಗುಪ್ತಚರ ವಿಭಾಗ ಹೊಂದಿರುತ್ತದೆ. ಉದಾಹರಣೆಗೆ ಭಾರತದ ರಾ, ಅಮೆರಿಕಾದ ಸಿಐಎ, ಇಸ್ರೇಲ್ ಮೊಸ್ಸಾದ್, ಪಾಕಿಸ್ತಾನದ .ಎಸ್. ಹೀಗೆ ಗುಪ್ತಚರ ವಿಭಾಗಗಳು ಆಯಾ ದೇಶದ ಕಣ್ಣು ಮತ್ತು ಕಿವಿಗಳಾಗಿ ಕೆಲಸ ಮಾಡುತ್ತವೆ.
ಗುಪ್ತಚರ ವಿಭಾಗ ಇತ್ತೀಚಿನ ಬೆಳವಣಿಗೆಯೇನಲ್ಲ, ಚಾಣಕ್ಯ ಬಹಳ ಹಿಂದೆಯೇ ಗುಪ್ತಚಾರ ವಿಭಾಗದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಗುಪ್ತಚಾರ ವಿಭಾಗದ ಒಂದು ಸಣ್ಣ ಲೋಪವೂ ದೇಶಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಬಲ್ಲದು. ಪ್ರಪಂಚದ ಯಾವುದೇ ದಿಕ್ಕಿನಿಂದ ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆಗೆ ಸವಾಲಾಗುವ ಪ್ರತಿ ಶತ್ರುವಿನ ಮೇಲೂ ಹದ್ದಿನ ಕಣ್ಣಿಟ್ಟು, ಇಡೀ ರಾಷ್ಟ್ರಕ್ಕೆ ಉಕ್ಕಿನ ಕವಚವಾಗಿ ರಕ್ಶಿಸುವ ಮಹತ್ತರ ಜವಾಬ್ದಾರಿ ಹೊತ್ತ ಅತ್ಯಂತ ಚುರುಕು ಸೈನ್ಯವೇ ಗುಪ್ತಚರ ವಿಭಾಗ. ಎಲ್ಲಾ ಸಾಂಪ್ರದಾಯಿಕ ಯೋಚನಾ ವಿಧಾನಗಳಿಂದ ಹೊರಬಂದು, ಪ್ರತಿ ಕ್ಷಣ ಹೊಸ ಅಪಾಯದ ಬಗೆಗೆ ಹೊಸ ರೀತಿಯಲ್ಲಿ ಯೋಚಿಸುವುದೇ ಗುಪ್ತಚರ ವಿಭಾಗದ ವಿಶೇಷತೆ.
11 ಸೆಪ್ಟೆಂಬರ್ 2001, ಉಗ್ರರ ದಾಳಿಯಿಂದ ಅಮೇರಿಕಾ ತತ್ತರಿಸಿದ ದಿನ. ದುರ್ಘಟನೆಯ ಬಳಿಕ ಅಮೆರಿಕಾದ ವಿದೇಶಾಂಗ ನೀತಿ ಮತ್ತು ವಿಶ್ವ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾದವು. ಆದರೆ ಘಟನೆ ಅಮೆರಿಕಾ ಗುಪ್ತಚರ ಸಂಸ್ಥೆ ಸಿ.. ಮಹತ್ತರ ಬದಲಾವಣೆಯೊಂದಕ್ಕೆ ಸಾಕ್ಷಿಯಾಯಿತು. 9/11 ಕುಖ್ಯಾತ ಉಗ್ರ ದಾಳಿಯ ನಂತರ ಅಮೆರಿಕಾ ನೆಲದಲ್ಲಿ ಇನ್ನಷ್ಟು ಉಗ್ರ ಚಟುವಟಿಕೆಗಳ ನಡೆಯುವ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಸಿಕ್ಕಿತ್ತು. ಮುಂದೆ ನಡೆಯುವ ಎಲ್ಲಾ ಉಗ್ರ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕುವ ಜವಾಬ್ದಾರಿ ಸಿ.. ಗಿತ್ತು. ಆಗಿನ ಸಿ.. ನಿರ್ದೇಶಕರಾಗಿದ್ದ ಜಾರ್ಜ್ ಟಿನೆಟ್ ಉನ್ನತ ಅಧಿಕಾರಿಗಳ ರಹಸ್ಯ ಸಭೆಯೊಂದರಲ್ಲಿ ಒಂದು ವಿಶೇಷ ತಂಡದ ರಚನೆಗೆ ಮುಂದಾಗುತ್ತಾರೆ.
ಟಿನೆಟ್ ಪ್ರಸ್ತಾಪಿಸಿದ ವಿಶೇಷ ತಂಡ, ಉಗ್ರರ ಎಲ್ಲಾ ಅನಿರೀಕ್ಷಿತ ದಾಳಿಯ ಸಾಧ್ಯತೆಗಳನ್ನು ಶತ್ರುವಿನಂತೆ ಯೋಚಿಸಿ, ಶತ್ರುವಿಗಿಂತ ಮೊದಲೇ ಕಾರ್ಯೋನ್ಮುಖವಾಗಬೇಕಿತ್ತು. ತಂಡ ಸಾಂಪ್ರದಾಯಿಕ ಗುಪ್ತಚರ ಮಾಹಿತಿ ಮತ್ತು ವಿಶ್ಲೇಷಣೆಗಿಂತ ವಿಭಿನ್ನವಾಗಿದ್ದು, ದೇಶದ ರಕ್ಷಣಾ ವ್ಯವಸ್ಥೆಯ ಹಳೆಯ ಚಿಂತನೆಗೆ ಪರ್ಯಾಯವಾದ ಹೊಸ ವಿಚಾರಗಳನ್ನು ನೀಡಬೇಕಾಗಿತ್ತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ಭಯವಿಲ್ಲದೇ, ನಿರ್ಭಿಡೆಯಿಂದ ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸುವ ಕೆಲವರನ್ನು ಆಯ್ದುಕೊಳ್ಳಲಾಯಿತು. ವಿಶೇಷ ತಂಡಕ್ಕೆ ಟಿನೆಟ್ ನೀಡಿದ ಹೆಸರು 'ರೆಡ್ ಸೆಲ್'!
ಹೀಗೆ ಸೃಷ್ಠಿಯಾದ 'ರೆಡ್ ಸೆಲ್' ಮುಂದೆ ಅಮೆರಿಕಾದ ಗುಪ್ತಚರ ಸಂಸ್ಥೆಯ ಅವಿಭಾಜ್ಯ ಅಂಗವಾಗಿ, ಇಂದಿಗೂ ತನ್ನ ಕಾರ್ಯ ನಿರ್ವಹಿಸುತ್ತಿದೆ. 'ರೆಡ್ ಸೆಲ್' ಪ್ರಮುಖ ಉದ್ದೇಶವೇ ಶತ್ರುವಿನಂತೆ ಯೋಚಿಸುವುದು. ಶತ್ರುಗಳ ದೃಷ್ಠಿಯಲ್ಲಿ ತನ್ನ ರಕ್ಷಣಾ ವ್ಯವಸ್ಥೆಯ ಲೋಪ ಕಂಡುಕೊಳ್ಳುವುದು ಮತ್ತು ಶತ್ರುವಿನ ನಿರೀಕ್ಷಿತ ದಾಳಿಗೆ ಸನ್ನದ್ಧರಾಗಿರುವುದು. ವಿಶೇಷ ತಂಡದ ವಿಶ್ಲೇಷಣೆಗಳು, ಮಖ್ಯವಾಹಿನಿ ರಕ್ಷಣಾ ವಿಶ್ಲೇಷಣೆಗಳಿಗಿಂತ ಅಂದರೆ ಹಿರಿಯ ವಿಶ್ಲೇಷಕರಿಗಿಂತ ವಿಭಿನ್ನವಾಗಿತ್ತು. ಹಾಗಾಗಿ ರೆಡ್ ಸೆಲ್ ಹಿರಿಯ ಮುಖ್ಯವಾಹಿನಿ ರಕ್ಷಣಾ ವಿಶ್ಲೇಷಕರ ಕೆಂಗಣ್ಣಿಗೂ ಗುರಿಯಾಯಿತು.
ರೆಡ್ ಸೆಲ್ ತಂಡಕ್ಕೆ ಸದಸ್ಯರನ್ನು ನೇರವಾಗಿ ಸಿ.. ನಿರ್ದೇಶಕರೇ ಮಾಡುತ್ತಾರೆ. ಅತ್ಯಂತ ಅರ್ಹ ಮತ್ತು ಪ್ರತಿಭಾವಂತರ ಮಧ್ಯೆ, ನಿರ್ಭೀತ ವಿಶ್ಲೇಷಣೆ, ಶ್ರೇಷ್ಠ ಬರವಣಿಗೆ, ಮತ್ತು ಜಾಗತಿಕ ರಾಜಕೀಯದ ಬಗೆಗಿನ ಆಳವಾದ ಅಧ್ಯಯನ ಆಯ್ಕೆಗೆ ಮಾನದಂಡಗಳಾಗುತ್ತವೆ. ವಿಶ್ಲೇಷಕರು ರೆಡ್ ಸೆಲ್ ನಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುವಂತಿಲ್ಲ. ಹೀಗೆ ರೆಡ್ ಸೆಲ್ ಶತ್ರುಗಳಿಗೆ ಸಿಂಹಸ್ವಪ್ನವಾಗಿ, ನಿರಂತರ ಹೊಸ ಆಲೋಚನೆಗಳೊಂದಿಗೆ ಗುಪ್ತಚರ ವಿಭಾಗದಲ್ಲೇ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಪ್ರಸ್ತುತ ಇತರ ದೇಶಗಳು ಕೂಡ ಮಾದರಿಯತ್ತ ಒಲವು ತೋರಿಸುತ್ತಿರುವುದು ಗಮನಾರ್ಹ.
ಗುಪ್ತಚರ ವಿಭಾಗ ತನ್ನದೇ ಶೈಲಿಯ ಕಾರ್ಯಾಚರಣೆ, ಯಾರ ಪ್ರಭಾವಕ್ಕೂ ಒಳಪಡದೆ ಕೈಗೊಳ್ಳುವ ಸ್ವತಂತ್ರ ನಿರ್ಧಾರಗಳು ಕೆಲವೊಂದು ಟೀಕೆಗಳಿಗೆ ಒಳಗಾದರೂ, ಗುಪ್ತಚರ ದಳದ ಅನುಪಸ್ಥಿತಿಯಲ್ಲಿ ದೇಶದ ರಕ್ಷಣೆಯನ್ನು ಊಹಿಸಲೂ ಅಸಾಧ್ಯ. ಭಾರತದ ದೃಷ್ಠಿಯಿಂದಲೂ ಮಾದರಿ ಹೊಸತೇನಲ್ಲ. ಬಹಳ ಹಿಂದೆಯೇ ಚಾಣಕ್ಯ ಒಬ್ಬ ರಾಜನಿಗಿರಬೇಕಾದ ಗುಣಗಳ ಬಗ್ಗೆ ವಿವರಿಸುತ್ತಾ, ರಾಜ ಕುತಂತ್ರದಲ್ಲಿ ನರಿಯಂತೆ,ಬುದ್ಧಿವಂತಿಕೆಯಲ್ಲಿ ಕಾಗೆ ಹಾಗೂ ಧೈರ್ಯದಲ್ಲಿ ಸಿಂಹದಂತಿರಬೇಕು ಎಂದಿದ್ದಾನೆ. ಇಂದಿನ ರಾಜನೀತಿಗೂ ಇದು ಸ್ಪಷ್ಟವಾಗಿ ಅನ್ವಯಿಸುತ್ತದೆ.
ಸಾಮಾನ್ಯರ ಊಹೆಗೆ ನಿಲುಕದ ರೀತಿಯಲ್ಲಿ ದೇಶ ಪ್ರತಿ ಕ್ಷಣವೂ ನೂರಾರು ಗಂಡಾಂತರಗಳನ್ನು ಎದುರಿಸುತ್ತಿದೆ. ಗಡಿ ಕಾಯುವ ಯೋಧರಿಂದ ಹಿಡಿದು ಶತ್ರುಗಳನ್ನೇ ಕಾಯುವ ಗುಪ್ತಚರ ವಿಭಾಗದವರೆಗೆ ಯಾರೇ ಒಂದು ಕ್ಷಣ ಮೈಮರೆತರೂ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗಳಿಗೆ ಮಾರಣಾಂತಿಕ ಹೊಡೆತ ಖಂಡಿತ.


 
  
 KEERTHIRAJ (keerthiraj886@gmail.com)

·   Currently serving as a Visiting Faculty for International Relations and Political Science at Alliance University, Bangalore. 
      (This article was published in Hosa Digantha newspaper on 10 November 2015)