ಶುಕ್ರವಾರ, ಏಪ್ರಿಲ್ 15, 2016

ಮ್ಯಾನ್ಮಾರ್ ಪ್ರಜಾಪ್ರಭುತ್ವದೆಡೆ: ಭಾರತದ ನೀತಿ ಯಾವ ಕಡೆ?

 ಮ್ಯಾನ್ಮಾರಿನಲ್ಲಿ ಸರ್ವಾಧಿಕಾರವೇ ಇದ್ದರೂಪ್ರಜಾಪ್ರಭುತ್ವವೇ ಇದ್ದರೂ ಮ್ಯಾನ್ಮಾರಿನ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ರಾಜನೀತಿಯ ದೃಷ್ಠಿಯಿಂದ ಭಾರತದ ಪಾಲಿಗೆ ಅನಿವಾರ್ಯ.
- ಕೀರ್ತಿರಾಜ್


ಐದು ದಶಕಗಳ ನಂತರ ಮ್ಯಾನ್ಮಾರ್ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಗರಿಕ ಅಧ್ಯಕ್ಷರನ್ನು ಕಂಡಿದೆ. ಹೀಗಿದ್ದರೂ ಮ್ಯಾನ್ಮಾರ್ ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಯಿತೆಂದು ಹಿಗ್ಗುವ ಹಾಗಿಲ್ಲ. ಮ್ಯಾನ್ಮಾರ್ ಕಾನೂನು ಮತ್ತು ಸಂವಿಧಾನದ ಪ್ರಕಾರ ಆಡಳಿತದ ಪ್ರಮುಖ ಹಾಗೂ ಶಕ್ತಿಶಾಲಿ ಖಾತೆಗಳಾದ ಗೃಹ, ರಕ್ಷಣಾ ಖಾತೆ ಮತ್ತು ಗಡಿ ವ್ಯವಹಾರಗಳು ಇನ್ನೂ ಮಿಲಿಟರಿ ಅಧೀನದಲ್ಲಿವೆ. ಪಾರ್ಲಿಮೆಂಟಿನಲ್ಲೂ ಕಾಲು ಭಾಗಕ್ಕಿಂತಲೂ ಹೆಚ್ಚಿನ ಸೀಟುಗಳಲ್ಲಿ ಮಿಲಿಟರಿ ಪ್ರತಿನಿಧಿಗಳು ತುಂಬಿ ಹೋಗಿದ್ದಾರೆ. ಮ್ಯಾನ್ಮಾರ್ ಕಾನೂನು, ದೇಶದ ಪ್ರಜಾಪ್ರಭುತ್ವದಲ್ಲಿ ಆಂಗ್ ಸಾನ್ ಸೂಕಿಯವರನ್ನೂ ಅಧ್ಯಕ್ಷರಾಗದಂತೆ ತಡೆದಿದ್ದನ್ನೂ ಗಮನಿಸಿದಾಗ, ಮ್ಯಾನ್ಮಾರ್ ಪ್ರಜಾಪ್ರಭುತ್ವದ ಸಂಧಿಗ್ಧತೆಯನ್ನು ಅಂದಾಜಿಸಬಹುದು.

ಅದೇನೇ ಇದ್ದರೂ, ಅರ್ಧ ಶತಮಾನದ ಬಳಿಕ ಪರಿವರ್ತನೆಯ ಹಾದಿಯಲ್ಲಿರುವ ಮ್ಯಾನ್ಮಾರ್, ಉಳಿದೆಲ್ಲಾ ಪ್ರಾದೇಶಿಕ ಶಕ್ತಿಗಳಿಗಿಂತ ಭಾರತದ ಮೇಲೆ ಹಚ್ಚಿನ ಪರಿಣಾಮ ಬೀರಲಿದೆ ಮತ್ತು ಸಹಜವಾಗಿಯೇ ಭಾರತ ಮ್ಯಾನ್ಮಾರ್  ಬೆಳವಣಿಗಗಳನ್ನು ಸೂಕ್ಷ್ಮವಾಗಿ ಗಮನಿಬೇಕಾಗುತ್ತಿದೆ. ಹಿಂದಿನ ಮಿಲಿಟರಿ ಆಡಳಿತ ಹೊಂದಿದ್ದ ಮ್ಯಾನ್ಮಾರ್ ನೊಂದಿಗೆ ಭಾರತ ಸಂಬಂಧ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಮಿಲಿಟರಿ ಆಡಳಿತದೊಂದಿಗೆ ಮೈತ್ರಿ ಪ್ರಜಾಪ್ರಭುತ್ವದ ಕಾಳಜಿಗಳಿಗೆ ವಿರುದ್ಧವಾಗಿತ್ತು. ಇನ್ನೊಂದೆಡೆ ಮ್ಯಾನ್ಮಾರನ್ನು ಸಂಪೂರ್ಣ ನಿರ್ಲಕ್ಷಿಸಿದರೆ, ಮ್ಯಾನ್ಮಾರಿನಲ್ಲಿ ಚೀನಾ ಪ್ರಭಾವಕ್ಕೆ ನೇರ ದಾರಿ ಮಾಡಿಕೊಟ್ಟ ಹಾಗಾಗುತ್ತಿತ್ತು. ಹೀಗೆ ಪ್ರಜಾಪ್ರಭುತ್ವದ ಕಾಳಜಿ ಮತ್ತು ಚೀನಾ ಪ್ರಭಾವಗಳ ಮಧ್ಯೆ ಮ್ಯಾನ್ಮಾರ್ ಕಡೆಗಿನ ಭಾರತದ ವಿದೇಶಾಂಗ ನೀತಿ ಹೊಯ್ದಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್  ಪ್ರಜಾಪ್ರಭುತ್ವದ ಕಡೆಗೆ ಸಾಗುತ್ತಿರುವುದು ಭಾರತದ ವಿದೇಶಾಂಗ ನೀತಿಯ ಧರ್ಮ ಸಂಕಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. ಕೆಲ ತಿಂಗಳ ಹಿಂದೆ ಭಾರತದ ಸಾಂಪ್ರದಾಯಿಕ 'Look East Policy' ಯನ್ನು ಕೊನೆಗೊಳಿಸಿ ಪ್ರಧಾನಿ ಮೋದಿ 'Act East Policy' ಘೋಷಿಸಿದ್ದಾರೆ   ಯೋಜನೆಯ ಯಶಸ್ವಿಗೊಳಿಸಲೂ ಮ್ಯಾನ್ಮಾರ್ ಜೊತೆಗಿನ ಸಂಬಂಧಗಳು ಪ್ರಮುಖ ಪಾತ್ರ ವಹಿಸಲಿವೆ. ಪೂರ್ವ ಏಷಿಯಾದ ರಾಷ್ಟ್ರಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕಾದಲ್ಲಿ ಮ್ಯಾನ್ಮಾರ್ ಭಾರತಕ್ಕೆ ಅತ್ಯವಶ್ಯಕ. ಭಾರತ ಮತ್ತು ಮ್ಯಾನ್ಮಾರ್ ಗಳೆರಡೂ 'ಬಾಂಗ್ಲಾದೇಶ-ಚೀನಾ-ಭಾರತ-ಮ್ಯಾನ್ಮಾರ್ ಕಾರಿಡಾರ್'(BCIM) ಭಾಗವಾಗಿರುವುದು, ಮ್ಯಾನಾರ್ ಸಿಟ್ವೆಯಲ್ಲಿ ಭಾರತ ಬಂದರುಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಪೂರ್ವದತ್ತ ಭಾರತದ ನಿಲುವಿಗೆ ಮ್ಯಾನ್ಮಾರ್ ಹೆಬ್ಬಾಗಿಲು ಎಂಬುದಕ್ಕೆ ನಿದರ್ಶನಗಳಷ್ಟೇ.


ಮ್ಯಾನ್ಮಾರ್ ನಲ್ಲಾಗಿರುವ ರಾಜಕೀಯ ಸಂಚಲನದೊಂದಿಗೆ, ದಶಕಗಳಿಂದ ಕಾಡುತ್ತಿರುವ ರೊಹಿಂಗ್ಯಾ ಜನಾಂಗದ ಸಮಸ್ಯೆಗೂ ಒಂದು ಶಾಶ್ವತ ಪರಿಹಾರದ ನಿರೀಕ್ಷೆಯಿದೆ. ಸುಮಾರು 36000ಕ್ಕೂ ಹೆಚ್ಚು ರೊಹಿಂಗ್ಯಾ ನಿರಾಶ್ರಿತರು ಭಾರತದಲ್ಲಿ ಆಶ್ರಯ ಪಡೆದುಕೊಳ್ಳುವುದರೊಂದಿಗೆ ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆ ಭಾರತದ ಪಾಲಿಗೂ ತಲೆನೋವಾಗಿ ಪರಿಣಮಿಸಿದೆ. ಭಾರತಕ್ಕೆ ನುಸುಳುತ್ತಿರುವ ನಿರಾಶ್ರಿತರ  ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದೂ ಆತಂಕಕ್ಕೆ ಕಾರಣವಾಗಿದೆ. ರೊಹಿಂಗ್ಯಾ ಸಮಸ್ಯೆ ಸದ್ಯದ ಪರಿಸ್ಥಿತಿಯಲ್ಲಿ ಪರಿಹಾರ ಕಾಣುವ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ. ಈವರೆಗೆ ಆಂಗ್ ಸಾನ್ ಸೂಕಿ ರೊಹಿಂಗ್ಯಾ ಸಮಸ್ಯೆಯ ಬಗ್ಗೆ ಯಾವುದೇ ಭರವಸೆಗಳನ್ನೂ ನೀಡಿಲ್ಲ. ಈಗಷ್ಟೇ ಅಧಿಕಾರದಲ್ಲಿ ಹಜ್ಜೆ ಇಡುತ್ತಿರುವ ಸೂಕಿಗೆ ರೊಹಿಂಗ್ಯಾ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡು ಜನಬೆಂಬಲ ಕಳೆದುಕೊಳ್ಳುವ ಭಯವೂ ಇದೆ. ಹೀಗಾಗಿ ಸೂ ಕಿ ಆಡಳಿತ ಪ್ರಬುದ್ಧತೆಗೆ ಬರುವ ವರೆಗೂ ರೊಹಿಂಗ್ಯಾ ಸಮಸ್ಯೆಯ ಕುರಿತು ಭಾರತ ತಾಳ್ಮೆ ವಹಿಸಲೇ ಬೇಕಾದ ಅನಿವಾರ್ಯತೆಯಿದೆ. ರೊಹಿಂಗ್ಯಾ ಸ್ಮಮಸ್ಯೆಯ ಹೊರತಾಗಿ, ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಬಂಡಾಯವನ್ನು ಅಡಗಿಸುವಲ್ಲಿಯೂ ಭಾರತ, ಮ್ಯಾನ್ಮಾರಿನ ಹೊಸ ಸರಕಾರದ ಸಹಕಾರದ ನಿರೀಕ್ಷೆಯಲ್ಲಿದೆ. ಭಾರತದ ಈಶಾನ್ಯದ ರಾಜ್ಯಗಳು ಮ್ಯಾನ್ಮಾರ್ ಜೊತೆಗೆ ದಟ್ಟವಾದ ಕಾಡಿನಿಂದ ಆವೃತ್ತವಾದ ಗಡಿ ಹಂಚಿಕೊಂಡಿದ್ದು, ಪ್ರತ್ಯೇಕತಾವಾದಿ ಉಗ್ರರು ಭಾರತದ ವಿರುದ್ಧದ ಕಾರ್ಯಾಚರಣೆಗೆ ಪ್ರದೇಶವನ್ನು ಅಡಗುದಾಣವನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಭಾರತೀಯ ಸೇನೆ ಅಂತರ್ರಾಷ್ಟ್ರೀಯ ಗಡಿ ಲೆಕ್ಕಿಸದೆ ಮ್ಯಾನ್ಮಾರ್  ಒಳನುಗ್ಗಿ ಉಗ್ರರನ್ನು ಸದೆ ಬಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮಿಲಿಟರಿ ಕಾರ್ಯಾಚಾರಣೆ ಸಂಪೂರ್ಣವಾಗಿ ಯಶಸ್ವಿಯಾದರೂ, ಪ್ರತ್ಯೇಕತಾವಾದಿ ಉಗ್ರರ ಸಮಸ್ಯೆ ಇನ್ನೂ ಎಗ್ಗಿಲ್ಲದೆ ಮುಂದುವರೆದಿದೆ. ಭಾರತದ ಗುಪ್ತಚರ ವರದಿಗಳ ಪ್ರಕಾರ ಭಾರತದ ಪೊಲೀಸ್ ಮತ್ತು ರಕ್ಷಣಾದಳಗಳಿಗೆ ಬೇಕಾಗಿರುವ ಹಲವಾರು ಕುಖ್ಯಾತರು ಆಶ್ರಯ ಪಡೆಯುತ್ತಿರುವುದು ಮ್ಯಾನ್ಮಾರಿನಲ್ಲೇ!

ಭಾರತದ ರಾಜನೀತಿಯಲ್ಲಿ ಮ್ಯಾನ್ಮಾರಿಗೆಷ್ಟು ಪ್ರಾಮುಖ್ಯತೆಯಿದೆಯೋ ಸೂ ಕಿ ಆಡಳಿತಕ್ಕೂ ಭಾರತದ ನೆರವಿನ ಅವಶ್ಯಕತೆ ಅಷ್ಟೇ ಇದೆ. ಮ್ಯಾನ್ಮಾರ್ ನಲ್ಲಿ ನೈಸರ್ಗಿಕ ಅನಿಲ ಸಂಪತ್ತು ಹೇರಳವಾಗಿದ್ದರೂ, ಮ್ಯಾನ್ಮಾರ್  ಆರ್ಥಿಕತೆ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಮ್ಯಾನ್ಮಾರ್ ಭಾರತದಿಂದ ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿದೆ. ಇಷ್ಟೇ ಅಲ್ಲದೇ ಮ್ಯಾನ್ಮಾರ್ ನಲ್ಲಿ ಉದಯಿಸುತ್ತಿರುವ ಹೊಸ ಪ್ರಜಾಪ್ರಭುತ್ವ, ನೆರೆಯಲ್ಲಿರುವ ಅತೀ ದೊಡ್ಡ ಪ್ರಜಾಪ್ರಭುತ್ವ ಬಾರತದ ಬೆಂಬಲದ ಅವಶ್ಯಕತೆಯನ್ನು ಸೂ ಕಿ ಅರಿತುಕೊಂಡಿದ್ದಾರೆ. ಭಾರತ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಯಾವತ್ತೂ ಬೆಲೆ ಕೊಟ್ಟ ದೇಶ. ಆದರೆ ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದ ಕಾಲದಲ್ಲಿ ಮ್ಯಾನ್ಮಾರಿನ ಮಿಲಿಟರಿ ಆಡಳಿತದ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಉತ್ಸುಕರಾಗಿದ್ದು, ಮ್ಯಾನ್ಮಾರಿನ ಪ್ರಜಾಪ್ರಭುತ್ವವಾದಿ ನಾಯಕರಲ್ಲಿ ಅಸಮಾಧಾನ ಮೂಡಿಸಿದ್ದು ಸತ್ಯ. ರಾಜಕೀಯ ಅಥವಾ ಆರ್ಥಿಕ ಪರಿಸ್ಥಿತಿ ಏನೇ ಇರಲಿ, ಭಾರತ ಮ್ಯಾನ್ಮಾರಿನತ್ತ ಅಲ್ಪ ನಿರ್ಲಕ್ಷ್ಯ ವಹಿಸಿದರೂ ಮ್ಯಾನ್ಮಾರ್ ನಿರಾಯಾಸವಾಗಿ ಕಮ್ಯುನಿಸ್ಟ್ ಚೀನಾದ ತೆಕ್ಕೆ ಸೇರುತ್ತದೆ! ಹೀಗಾಗಿ, ಮ್ಯಾನ್ಮಾರಿನಲ್ಲಿ ಸರ್ವಾಧಿಕಾರವೇ ಇದ್ದರೂ, ಪ್ರಜಾಪ್ರಭುತ್ವವೇ ಇದ್ದರೂ ಮ್ಯಾನ್ಮಾರಿನ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ರಾಜನೀತಿಯ ದೃಷ್ಠಿಯಿಂದ ಭಾರತದ ಪಾಲಿಗೆ ಅನಿವಾರ್ಯ.






 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 12 April 2016)