ಗುರುವಾರ, ಮೇ 19, 2016

ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್

ವಿಶ್ವದಾದ್ಯಂತ ಇಸ್ಲಾಮಿಕ್ ಸ್ಟೇಟ್ ಗೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಒಳಂಗಿದೊಳಗೆ ಕುಸಿಯುತ್ತಿದೆ. ಭಯೋತ್ಪಾದನಾ ವಿರೋಧಿ ಶಕ್ತಿಗಳೆಲ್ಲವೂ ಈ ಅವಕಾಶವನ್ನು ಉಪಯೋಗಿಸಿಕೊಂಡು ದಂಡ-ಭೇದ ನೀತಿಯನ್ನು ಅನುಸರಿಸಿದರೆ ಇಸ್ಲಾಮಿಕ್ ಸ್ಟೇಟ್ ಅಂತ್ಯ ದೂರವೇನಿಲ್ಲ.
- ಕೀರ್ತಿರಾಜ್



ಖಲೀಫೇಟ್ ಆಡಳಿತವನ್ನು ಪುನರ್ಸ್ಥಾಪಿಸಲು ಹೊರಟಿರುವ ಇಸ್ಲಾಮಿಕ್ ಸ್ಟೇಟ್ ತನ್ನ ಉದ್ಧಟತನದಿಂದ ಜಗತ್ತಿನ ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡಾಗಲೇ ಅದರ ಅವನತಿ ಪ್ರಾರಂಭವಾಗಿತ್ತು. ಇನ್ನಿತರ ಭಯೋತ್ಪಾದನಾ ಸಂಘಟ್ನೆಗಳಿಗಿಂತ ತನ್ನನ್ನು ತಾನು ವಿಭಿನ್ನವಾಗಿ ಬಿಂಬಿಸಿಕೊಂಡು ಬಂದ ಇಸ್ಲಾಮಿಕ್ ಸ್ಟೇಟ್ ಇದೀಗ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ತನ್ನ ಸದಸ್ಯತ್ವ ವೃದ್ಧಿಸಿಕೊಂಡ ಇಸ್ಲಾಮಿಕ್ ಸ್ಟೇಟ್ ಗೆ ಇವತ್ತು ವಿಶ್ವದಾದ್ಯಂತ ಬೆಂಬಲಿಗರಿದ್ದಾರೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ವೇಗವಾಗಿ ಅದರ ಸದಸ್ಯರು ಇಸ್ಲಾಮಿಕ್ ಸ್ಟೇಟ್ ಬಿಟ್ಟು ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ಇಸ್ಲಾಮಿಕ್ ಸ್ಟೇಟ್ ದಟ್ಟ ಪ್ರಭಾವವಿರುವ ಸಿರಿಯಾದಲ್ಲೇ ಐ ಎಸ್ ತೊರೆದು ಹೋಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚ್ಚುತ್ತಿದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟು ಹಾಕಿದವರು ಚಾಣಾಕ್ಷರಾಗಿದ್ದರೂ, ಸ್ವಲ್ಪ ಮಟ್ಟಿಗಿನ ಭಯ ಹುಟ್ಟು ಹಾಕುವಲ್ಲಿ ಯಶಸ್ವಿಯಾದರೂ ಅವರ ಗುರಿ ಸಾಧಿಸುವಷ್ಟು ಆತ್ಮಸ್ಥೈರ್ಯವಾಗಲೀ, ನೈತಿಕತೆಯಾಗಲೀ ಅವರಲ್ಲಿಲ್ಲ. ಇಸ್ಲಾಮಿಕ್ ಸ್ಟೇಟ್ ಸದಸ್ಯರನ್ನು ನಡೆಸಿಕೊಳ್ಳುವ ರೀತಿ, ವಿದೇಶಿ ಮತ್ತು ಸಿರಿಯನ್ ಸದಸ್ಯರಲ್ಲಿ ತೋರುವ ತಾರತಮ್ಯಗಳೆಲ್ಲವೂ ಸೇರಿ ಸಿರಿಯನ್ ಸದಸ್ಯರು ಇಸ್ಲಾಮಿಕ್ ಸ್ತೇಟ್ ಬಿಟ್ಟು ಟರ್ಕಿಗೆ ಪಲಾಯನ ಮಾಡಿದರೆ, ಇನ್ನೂ ಕೆಲವರು ಫ್ರೀ ಸಿರಿಯನ್ ಆರ್ಮಿಗಳಂಥ ಸಂಘಟನೆ ಸೇರಿಕೊಳ್ಳುತ್ತಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಹಂತ ಹಂತವಾಗಿ ಕುಸಿದು ಮಣ್ಣು ಮುಕ್ಕುತ್ತಿರುವ ಹತಾಶೆಯಲ್ಲಿ ತಲೆಬುಡವಿಲ್ಲದ ಬೆದರಿಕೆಗಳನ್ನೊಡ್ಡುತ್ತಿದೆ. ಸದಸ್ಯರಾಗುವ ಪ್ರತಿಯೊಬ್ಬರಿಗೂ ಒಂದೊಂದು ಕಾರಣಗಳಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಬಿಟ್ಟುಹೋಗಲೂ ನಿರ್ದಿಷ್ಟ ಕಾರಣಗಳಿವೆ. ಈ ಉಗ್ರರೆಲ್ಲರೂ ಕೊನೆ ಉಸಿರಿನವರೆಗೂ ತಮ್ಮ ಗುರಿಗೋಸ್ಕರ ಹೋರಾಡುತ್ತಾರೆಂದುಕೊಂಡರೆ ಅದು ತಪ್ಪಾದೀತು. ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗುವ ಉಗ್ರರು ಯಾರು? ಅವರ ಹಿನ್ನೆಲೆಯೇನು? ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಲು ಕಾರಣಗಳೇನು? ಎನ್ನುವುದನ್ನು ತಿಳಿದುಕೊಂಡರೆ ಅದರ ಅಂತ್ಯದ ಬಗೆಗೂ ಸ್ಪಷ್ಟ ಚಿತ್ರಣ ಸಿಗುತ್ತದೆ. ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಬಯಸುವವರಲ್ಲಿ ಸಾಮಾನ್ಯವಾಗಿ ಐದು ವರ್ಗದ ಜನರನ್ನು ಗುರುತಿಸಬಹುದು. 

ಮೊದಲನೆಯದಾಗಿ ಇಸ್ಲಾಮಿಕ್ ಸ್ಟೇಟ್ ತತ್ವ ಸಿದ್ಧಾಂತಗಳಿಂದ ಪ್ರೇರಿತವಾಗಿ, ಖಲೀಫೇಟ್ ಮರುಸ್ಥಾಪಿಸುವ ಗುರಿಯೊಂದಿಗೆ ಇಸ್ಲಾಮಿಕ್ ಸ್ಟೇಟ್ ಸೇರಿಕೊಳ್ಳುವ ಜನರ ಗುಂಪು. ಈ ಗುಂಪಿನಲ್ಲಿರುವ ಜನ ದಶಕಗಳಿಂದ ನಡೆಯುತ್ತಿರುವ ದಂಗೆಗಳೊಂದಿಗೆ, ಅಮೆರಿಕಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರಾಚ್ಯದಲ್ಲಿ ನಡೆಸುವ ಕಣ್ಣಮುಚ್ಚಾಲೆ ಆಟಗಳಿಂದ ಬೇಸತ್ತು, ಭದ್ರತೆ ಮತ್ತು ನ್ಯಾಯದ ನಿರೀಕ್ಷೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರಾಗುತ್ತಾರೆ. ಇಸ್ಲಾಂ ಮತ್ತು ಪಶ್ಚಿಮದ ನಡುವಿನ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಸಮರ್ಥ ನಾಯಕತ್ವ ಒದಗಿಸುತ್ತದೆ ಎಂಬುದು ಈ ಗುಂಪಿನ ಕಲ್ಪನೆಗಳಲ್ಲೊಂದು! ಎರಡನೆಯದಾಗಿ ಸಮಾಜ ವಿರೋಧಿ ಕೃತ್ಯಗಳನ್ನೆಸಗಿ ಜೈಲು ಪಾಲಾದವರಿಗೆ ಇಸ್ಲಾಮಿಕ್ ಸ್ಟೇಟ್ ಕ್ಷಮಾದಾನ ನೀಡಿ ತನ್ನ ಸದಸ್ಯರನ್ನಾಗಿಸುತ್ತಿದೆ. ಕೆಲವೊಂದು ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿ ತನ್ನ ಸದಸ್ಯತ್ವ ವೃದ್ಧಿಸಿಕೊಂಡಿದೆ. ಈ ಜೈಲು ಹಕ್ಕಿಗಳು ತತ್ವ ಸಿದ್ಧಾಂತಗಳಲ್ಲಿ ಯಾವುದೇ ನಂಬಿಕೆ ಇರದಿದ್ದರೂ ಜೈಲಿನಿಂದ ಪಾರಾಗಲು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡವರು!

ಮೂರನೆಯದಾಗಿ, ಆರ್ಥಿಕ ಕಾರಣಗಳು ಇಸ್ಲಾಮಿಕ್ ಸ್ಟೇಟ್ ನೇಮಕಾತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅರಬ್ ರಾಷ್ಟ್ರಗಳೆಲ್ಲಾ ಸದ್ಯಕ್ಕೆ ಸಿರಿಯಾದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಉದ್ಯೋಗಾವಕಾಶಗಳಿಗೋಸ್ಕರ ತಡಕಾಡುತ್ತಿರುವ ಸಿರಿಯನ್ನರನ್ನು ಇಸ್ಲಾಮಿಕ್ ಸ್ಟೇಟ್ ಆಕರ್ಷಕ ವೇತನ ತನ್ನತ್ತ ಸೆಳೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಫ್ರೀ ಸಿರಿಯನ್ ಆರ್ಮಿ ಸೈನಿಕರಿಗೆ 36 ಡಾಲರ್, ಜಬಾತ್ ಉಲ್ ನುಸ್ರಾ 100 ಡಾಲರ್, ಸಿರಿಯಾದ ಸೇನೆಯಲ್ಲಿ 63 ಡಾಲರ್ ವೇತನಕ್ಕೆ ಹೋಲಿಸಿದಲ್ಲಿ ತಿಂಗಳಿಗೆ 400ರಿಂದ 1200 ಡಾಲರ್ ಗಳ ವ್ಯಾಪ್ತಿಯಲ್ಲಿರುವ ಇಸ್ಲಾಮಿಕ್ ಸ್ಟೇಟ್ ವೇತನ ಸಿರಿಯಾದಲ್ಲಿನ ಇನ್ನಿತರ ಉದ್ಯೋಗದ ಆಯ್ಕೆಗಳನ್ನು ಮಬ್ಬಾಗಿಸುತ್ತದೆ. ನಾಲ್ಕನೆಯದಾಗಿ ಸಿರಿಯಾ ಅಧ್ಯಕ್ಷ ಅಸದ್ ಆಡಳಿತದ ಕಟ್ಟಾ ವಿರೋಧಿಗಳಿಗೂ ಇಸ್ಲಾಮಿಕ್ ಸ್ಟೇಟ್ ಒಂದು ಪರ್ಯಾಯ ಆಯ್ಕೆಯಷ್ಟೇ. ಇದಲ್ಲದೆ ಕೊನೆಯದಾಗಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಯ ಲಾಭ ಪಡೆದುಕೊಳ್ಳಲು ಹವಣಿಸುತಿರುವ ಕೆಲ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನೂ ಇಸ್ಲಾಮಿಕ್ ಸ್ಟೇಟ್ ತನ್ನತ್ತ ಸೆಳೆದಿದೆ.


ಈ ರೀತಿಯಾಗಿ ಇಸ್ಲಾಮಿಕ್ ಸ್ಟೇಟ್ ನಲ್ಲಿರುವ ಉಗ್ರರಿಗೆ ಅವರದೇ ಆದ ಉದ್ದೇಶ ಗುರಿಗಳಿವೆ. ಇಲ್ಲಿ ಪ್ರಸ್ತಾಪಿಸಿರುವ ಇಸ್ಲಾಮಿಕ್ ಸ್ಟೇಟ್ ನ ಐದು ಪ್ರತ್ಯೇಕ ಗುಂಪುಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತ ಒಪ್ಪಿಕೊಂಡಿರುವುದು ಮೊದಲನೆಯ ಗುಂಪು ಮಾತ್ರ. ಇನ್ನುಳಿದ ನಾಲ್ಕು ಗುಂಪುಗಳಿಗೆ ಅವರದ್ದೇ ಆದ ವೈಯಕ್ತಿಕ ಗುರಿಸಾಧನೆಗಳು ಮುಖ್ಯವಾಗುತ್ತವೆಯೇ ವಿನಃ ಇಸ್ಲಾಮಿಕ್ ಸ್ಟೇಟ್ ಈ ಸಮಯಕ್ಕೊಂದು ನೆಪವಷ್ಟೇ. ಈ ಗುಂಪುಗಳಿಗೆ ಇಸ್ಲಾಮಿಕ್ ಸ್ಟೇಟ್ ತೊರೆಯಲು ಸಣ್ಣ ಪುಟ್ಟ ಕಾರಣಗಳು ಸಾಕಾಗುತ್ತವೆ. ವಿಶ್ವದಾದ್ಯಂತ ಇಸ್ಲಾಮಿಕ್ ಸ್ಟೇಟ್ ಗೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಇಸ್ಲಾಮಿಕ್ ಸ್ಟೇಟ್ ಒಳಂಗಿದೊಳಗೆ ಕುಸಿಯುತ್ತಿದೆ. ಭಯೋತ್ಪಾದನಾ ವಿರೋಧಿ ಶಕ್ತಿಗಳೆಲ್ಲವೂ ಈ ಅವಕಾಶವನ್ನು ಉಪಯೋಗಿಸಿಕೊಂಡು ದಂಡ-ಭೇದ ನೀತಿಯನ್ನು ಅನುಸರಿಸಿದರೆ ಇಸ್ಲಾಮಿಕ್ ಸ್ಟೇಟ್ ಅಂತ್ಯ ದೂರವೇನಿಲ್ಲ. 





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 19 May 2016)

ಟ್ರಂಪ್ ವರ್ಸಸ್ ಕ್ಲಿಂಟನ್: ಭಾರತಕ್ಕೆ ಯಾರು ಹಿತವರು ಈ ಇಬ್ಬರೊಳಗೆ?

ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.
- ಕೀರ್ತಿರಾಜ್


ಅಮೆರಿಕಾದ ಸ್ಪೀಕರ್ ಪೌಲ್ ರ್‍ಯಾನ್ ಆಹ್ವಾನದ ಮೇರೆಗೆ ಅಮೆರಿಕಾದ ಸಂಸತ್ ಉದ್ದೇಶಿಸಿ ಮಾತನಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾಕ್ಕೆ ಭೇಟಿ ನೀಡಲಿದ್ದಾರೆ. ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮತ್ತು ಮನಮೋಹನ್ ಸಿಂಗ್ ನಂತರ ನರೇಂದ್ರ ಮೋದಿ  ಅಮೆರಿಕಾದ ಸಂಸತ್ ನಲ್ಲಿ ಭಾಷಣ ಮಾಡಿದ ಐದನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಾರಿಯ ಮೋದಿ ಅಮೆರಿಕಾ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದು ಮೋದಿಯವರ ನಾಲ್ಕನೇ ಅಮೆರಿಕಾ ಭೇಟಿಯಾಗಲಿದ್ದು, ಮೋದಿ ಪ್ರಧಾನಿಯಾದ ಬಳಿಕ ಸಾಧಿಸಿದ ವಿದೇಶಾಂಗ ನೀತಿಯ ಯಶಸ್ಸುಗಳಲ್ಲಿ, ಅಮೆರಿಕಾ ಜೊತೆಗಿನ ಸಂಬಂಧಗಳನ್ನು ವಿಸ್ತರಿಸಿ ಭಧ್ರಪಡಿಸಿಕೊಂಡಿರುವುದೂ ಒಂದು. ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧಗಳ ವಿಶ್ವಾಸಾರ್ಹತೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದ ಹೆಗ್ಗಳಿಕೆ ಮೋದಿಯವರಿಗೆ ಸೇರುತ್ತದೆ.  ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರನ್ನು 2015ರ ಗಣರಾಜ್ಯೋತ್ಸ್ವದ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಮೋದಿ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. ಚೀನಾ ಮತ್ತು ಪಾಕಿಸ್ತಾನಗಳು ನೋಡು ನೋಡುತ್ತಿರುವಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಮಾತುಕತೆಗಳು ಅಮೆರಿಕಾ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿತ್ತು. ದಕ್ಷಿಣ ಚೀನಾ ಸಮುದ್ರದ ಸಾಗರ ಸಂಘರ್ಷವಂತೂ ಅಮೆರಿಕಾ ಏಷ್ಯಾದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಭಾರತ ಸಹಕಾರ ಅನಿವಾರ್ಯವೆನ್ನುವ ಮಟ್ಟಿಗೆ ಭಾರತದ ರಾಜತಾಂತ್ರಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಇತ್ತೀಚಿನ ಒಪ್ಪಂದ Logistics support agreement (ಸೈನ್ಯ ಮತ್ತಿತರ ರಕ್ಷಣಾ ಸಾಮಗ್ರಿಗಳ ಸರಬರಾಜು ಮತ್ತು ವ್ಯವಸ್ಥಾಪನೆಯಲ್ಲಿ ಪರಸ್ಪರ ಸಹಕಾರಕ್ಕಾಗಿ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದ) ಭಾರತ ಮತ್ತು ಅಮೆರಿಕಾದ ರಕ್ಷಣಾ ವಲಯದ ಸಹಕಾರವನ್ನು ಇನ್ನಷ್ಟು ಬಲಪಡಿಸಿದೆ.

ಭಾರತದೊಂದಿಗಿನ ಅಮೆರಿಕಾ ಸಂಬಧಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವಂತೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಬಹಳ ಹತ್ತಿರಕ್ಕೆ ಬಂದು ನಿಂತಿದೆ. ಅಧ್ಯಕ್ಷೀಯ ಗಾದಿಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಇವರಿಬ್ಬರಲ್ಲಿ ಭಾರತಕ್ಕೆ ಹಿತವರಾರು ಎಂಬ ಬಗ್ಗೆ ಚರ್ಚೆಗಲಿವೆ. ಭಾರತದ ರಾಜಕೀಯ ವಿಶ್ಲೇಷಕರಲ್ಲಿ ಅನೇಕರು ರಿಪಬ್ಲಿಕ್ ಅಭ್ಯರ್ಥಿಯ ಗೆಲುವು ಭಾರತಕ್ಕೆ ಪೂರಕ ಎಂಬ ನಿರೀಕ್ಷೆಯಿಟ್ಟಿದ್ದಾರೆ. ಹಿಂದೊಮ್ಮೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರತೀಯರು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಬ್ಬರಿಸಿದ್ದನ್ನು ಮರೆಯುವಂತಿಲ್ಲ. ಆದರೂ ಇತ್ತಿಚೆಗೆ ತನ್ನ ನಿಲುವು ಬದಲಿಸಿ ಕೊಂಡಂತಿರುವ ಟ್ರಂಪ್ ಪಾಕಿಸ್ತಾನವನ್ನು ಸ್ಥಿರಗೊಳಿಸುವಲ್ಲಿ ಭಾರತದ ಸಹಾಯ ಪಡೆದುಕೊಳ್ಳುವ ಮಾತಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ತಾಳುತ್ತಾರೆ ಎನ್ನುವುದು ಭಾರತದಲ್ಲಿರುವ ಕ್ಲಿಂಟನ್ ವಿರೋಧಿಗಳ ಕಳವಳ. ಹೀಗೆ ರಾಜಕೀಯ ವಿಶ್ಲೇಷಕರ ವಲಯದಲ್ಲಿ ರಿಪಬ್ಲಿಕ್ ಪಕ್ಷದ ಟ್ರಂಪ್ ಪರ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರೋಧದ ಅಲೆಗಳಿವೆ.

ಭಾರತ- ಅಮೆರಿಕಾ ಸಂಬಂಧಗಳ ಇತಿಹಾಸ ಗಮನಿಸಿದರೆ  ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳೆರಡೂ ಭಾರತದೊಂದಿಗಿನ ಬಾಂಧವ್ಯಕ್ಕೆ ಸಮಾನ ಕೊಡುಗೆ ನೀಡಿವೆ. ರಿಪಬ್ಲಿಕ್ ಪಕ್ಷದ ಜಾರ್ಜ್ ಡಬ್ಲ್ಯು ಬುಶ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಸಂಬಂಧಗಳು ಉಚ್ಚ್ರಾಯ ಸ್ಥಿತಿಗೇರಿದ್ದು ಎಷ್ಟು ಸತ್ಯವೋ, ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಬಾಂಧವ್ಯಕ್ಕೆ ಭಧ್ರ ಅಡಿಪಾಯ ಹಾಕಲಾಗಿತ್ತು ಎಂಬುದು ಅಷ್ಟೇ ಸತ್ಯ. ಪೋಕ್ರಾನ್- II ನಂತರ ಅಮೆರಿಕಾ ಜೊತೆಗಿನ ಭಿನ್ನಾಭಿಪ್ರಯಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ 2000 ಮಾರ್ಚ್ ನಲ್ಲಿ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದರೆ 2000 ಸೆಪ್ಟೆಂಬರ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಮೆರಿಕಾಕ್ಕೆ ಭೇಟಿ ನೀಡಿದರು. ಅದೇ ರೀತಿ ಬರಾಕ್ ಒಬಾಮ ಭಾರತಕ್ಕೆ ಎರಡು ಸಲ ಭೇಟಿ ನೀಡಿದ ಏಕೈಕ ಅಮೆರಿಕಾ ಅಧ್ಯಕ್ಷ. ಭಾರತಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷರೆಲ್ಲಾ ನಂತರ ಪಾಕಿಸ್ತಾನಕ್ಕೂ ಭೇಟಿ ನೀಡಿ ಓಲೈಸುವುದು ಸಂಪ್ರದಾಯವಾಗಿತ್ತು. ಒಬಾಮ ಭಾರತ ಭೇಟಿಯ ಸಂದರ್ಭದಲ್ಲಿ ಈ ಸಂಪ್ರದಾಯ ಕಡೆಗಣಿಸಿದ್ದು, ಅಮೆರಿಕಾ ಭಾರತಕ್ಕೆ ನೀಡುತ್ತಿರುವ ರಾಜತಾಂತ್ರಿಕ ಮಹತ್ವಕ್ಕೊಂದು ನಿದರ್ಶನ. ಕ್ಲಿಂಟನ್ ಮತ್ತು ಒಬಾಮ ಡೆಮಾಕ್ರಟಿಕ್ ಪಕ್ಷದವರು ಎಂಬುದು ಗಮನಿಸಬೇಕಾದ ಅಂಶ.

ಆರ್ಥಿಕ ಸಂಬಂಧಗಳ ದೃಷ್ಟಿಯಲ್ಲೂ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಯೋಜನೆಗಳಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಅಮೆರಿಕಾ ಚೀನಾದ ವ್ಯಾಪಾರ ಸಂಬಂಧಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಡೆಮಾಕ್ರಟಿಕ್ ಒಬಾಮ ಮತ್ತು ರಿಪಬ್ಲಿಕ್ ಟ್ರಂಪ್ ರ ಇತ್ತಿಚಿನ ಭಾಷಣಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಸುಧಾರಣೆಗಳ ಮೇಲೆ ಅವಲಂಬಿತವಾಗಿದೆಯೇ ಹೊರತು ಅಮೆರಿಕಾದ ರಾಜಕೀಯ ಬದಲಾವಣೆಗಳಿಂದಲ್ಲ ಎಂಬುದು ಸ್ಪಷ್ಟ. ಹೀಗಾಗಿ ರಿಪಬ್ಲಿಕ್ ಅಥವಾ ಡೆಮಾಕ್ರಟ್ ಪಕ್ಷಗಳಲ್ಲಿ ಯಾವುದೇ ಪಕ್ಷ ಗೆಲುವು ಸಾಧಿಸಿದರೂ, ಭಾರತದೊಂದಿಗಿನ ರಾಜತಾಂತ್ರಿಕ ಸಬಂಧಗಳು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಅಮೆರಿಕಾ ಭಾರತವನ್ನು ಕಡೆಗಣಿಸಿದಲ್ಲಿ, ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 16 May 2016)

ಶುಕ್ರವಾರ, ಮೇ 13, 2016

ಕಾಶ್ಮೀರ: ಉಗ್ರರಿಗೆ ಜನ ಬೆ೦ಬಲ ಕಡಿಮೆಯಾಗಿಲ್ಲ

ಭಾರತೀಯ ಸೇನೆಯ ಮೇಲಿನ ಹಲವು ದಾಳಿಗಳಿಗೆ ಕಾರಣನಾಗಿದ್ದ ಲಶ್ಕರ್  ತೊಯ್ಬಾ ಉಗ್ರ ಸಂಘಟನೆಯ ಅಬು ಕಾಸಿಮ್ ಕಳೆದ ಅಕ್ಟೋಬರ್ ನಲ್ಲಿ ಹತನಾದಾಗಅವನ ಅಂತ್ಯಕ್ರಿಯೆಯಲ್ಲಿ ಸಾಗರದಂತೆ ಜನ ಒಟ್ಟುಗೂಡಿದ್ದರುಉಗ್ರರ ಅಂತ್ಯಕ್ರಿಯೆಯಲ್ಲಿ ಗನ್ ಸೆಲ್ಯೂಟ್ ಗಳು ಕಾಶ್ಮೀರದಲ್ಲಿ ಸಾಮಾನ್ಯವೆನಿವಷ್ಟು ಹೆಚ್ಚಾಗಿ ಹೋಗಿದೆ.
- ಕೀರ್ತಿರಾಜ್



ಸ್ವಾತಂತ್ರ್ಯದ ಸಂಭ್ರಮದೊಂದಿಗೆ ಬಳುವಳಿಯಾಗಿ ಬಂದ ಅನೇಕ ಸಮಸ್ಯೆಗಳಲ್ಲಿ ಕಾಶ್ಮೀರ ವಿವಾದವೂ ಒಂದು. ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಹಲವಾರು ತಕರಾರುಗಳಿದ್ದರೂ, ದಶಕಗಳಿಂದ ಎರಡೂ ರಾಷ್ಟ್ರಗಳನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿರುವುದು ಕಾಶ್ಮೀರ ಸಮಸ್ಯೆ. 1947ರಲ್ಲಿ ಭಾರತೀಯ ಉಪಖಂಡದ ವಿಭಜನೆಯೊಂದಿಗೆ ಕಾಡತೊಡಗಿದ ಕಾಶ್ಮೀರದಲ್ಲಿನ ಹಿಂಸಾಚಾರ 1980 ಮತ್ತು 90 ದಶಕದಲ್ಲಿ ಮಿತಿಮೀರಿ ಹೋಗಿತ್ತು. ನಂತರ ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತಾವಧಿಯಲ್ಲಿ ಕಾಶ್ಮೀರದ ದಂಗೆ ಮತ್ತು ಹಿಂಸಾಚಾರಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪ್ರಯತ್ನಗಳೂ ನಡೆದಿದ್ದವು. ಆದರೆ ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಕಾಶ್ಮೀರದಲ್ಲಿ ಶಾಂತಿಯುತ ಪರಿಹಾರದ ಸಾಧ್ಯತೆಗಳು ಕ್ಷೀಣಿಸುತ್ತಿವೆ. ಕಾಶ್ಮೀರದ ಸಾಮಾನ್ಯ ಜನತೆ ಕೂಡ ದಂಗೆಕೋರ ಗುಂಪುಗಳಿಗೆ ಸಹಾನುಭೂತಿ ವ್ಯಕ್ತ ಪಡಿಸುತ್ತಿರುವುದು ಭಾರತದ ಪಾಲಿಗೆ ಕಾಶ್ಮೀರ ಕೈ ತಪ್ಪಿ ಹೋಗುತ್ತಿರುವ ಬಗ್ಗೆ ಎಚ್ಚರಿಕೆಯ ಘಂಟೆಯೇ ಸರಿ.

1947 ಭಾರತ ಪಾಕಿಸ್ತಾನ ವಿಭಜನೆಯ ಬೆನ್ನಲ್ಲೇ ಕಾಶ್ಮೀರಕ್ಕೋಸ್ಕರ ನಡೆದ ಸಂಘರ್ಷ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಯುದ್ಧವಿರಾಮದೊಂದಿಗೆ ಬೂದಿ ಮುಚ್ಚಿದ ಕೆಂಡವಾಯಿತು. ಎರಡೂ ಕಡೆಯ ಸೈನ್ಯಗಳೂ ವಿಶ್ವಸಂಸ್ಥೆಯ ಘೋಷಿಸಿದ ಗಡಿ ನಿಯಂತ್ರಣ ರೇಖೆ(LOC)ಯಲ್ಲಿ ತಟಸ್ಥವಾಗಬೇಕಾಯಿತು. ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಭಾಗವನ್ನು ಆಜಾದ್ ಕಾಶ್ಮೀರ್ ಎಂದು ಕರೆದುಕೊಡರೆ, ಭಾರತ ಪಾಕ್ ಆಕ್ರಮಿತ ಕಾಶ್ಮೀರ (POK) ಎಂದು ಗುರುತಿಸಿತು. ಅಂದಿನಿಂದ ಇವತ್ತಿನವರೆಗೂ ಪ್ರತ್ಯೇಕತಾವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾರೆ. 1980 ದಶಕದಲ್ಲಿ ಪಾಕಿಸ್ತಾನದಿಂದ  ಪ್ರತ್ಯೇಕತಾವಾದಿಗಳ ಪ್ರಯತ್ನಗಳು ಸಶಸ್ತ್ರ ಬಂಡಾಯವಾಗಿ ಮಾರ್ಪಟ್ಟಿತು. ಭಾರತೀಯ ಸೇನೆ ನಿರ್ದಯವಾಗಿ ದಂಗೆಯನ್ನು ಹತ್ತಿಕ್ಕಿದ್ದು ಈಗ ಇತಿಹಾಸ. 1980 ಮತ್ತು 90 ದಶಕದ ರಕ್ತಸಿಕ್ತ ದಂಗೆಗಳು ಸಾವಿರಾರು ಪ್ರಾಣಬಲಿ ಪಡೆದುಕೊಂಡರೂ, ನಂತರ ವಾಜಪೇಯಿಯವರ ಆಡಳಿತಾವಧಿಯ ಶಾಂತಿಯುತ ಮಾತುಕತೆಗಳು ಮತ್ತೆ ಕಾಶ್ಮೀರದಲ್ಲಿ ಹೊಸ ಸಂಚಲನ ಮೂಡಿಸಿತ್ತು. ವಾಜಪೇಯಿಯವರ ಸತತ ಪ್ರಯತ್ನಗಳ ಫಲವೇ 1999 ಲಾಹೋರ್ ಸೌಹಾರ್ದದ ಘೋಷಣೆ. ಪ್ರತ್ಯೇಕತಾವಾದಿ ಹರಿಯತ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗುಂಪುಗಳನ್ನೂ ಮಾತುಕತೆಗೆ ಕರೆತಂದಿದ್ದು ವಾಜಪೇಯಿ ನಾಯಕತ್ವದ ಹೆಗ್ಗಳಿಕೆ. ವಾಜಪೇಯಿಯವರ ಶ್ರಮ ಮುಂದಿನ ಕೆಲವು ವರ್ಷಗಳ ಕಾಲ ಕಾಶ್ಮೀರ ಪ್ರಶಾಂತವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರದ ಬೆಳವಣಿಗೆಗೂ ಪೂರಕವಾಯಿತು.

ಅಜಾತಶತ್ರು ವಾಜಪೇಯಿ ಕಾಲದಲ್ಲಿ ಪ್ರಶಾಂತವಾಗಿದ್ದ ಕಾಶ್ಮೀರದಲ್ಲಿ ಮತ್ತೆ ಅಶಾಂತಿಯ ಕಿಡಿ ಹಚ್ಚಿದ್ದು 2010 ದಂಗೆ. ದಂಗೆಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಅನೇಕರು ಉನ್ನತ ವರ್ಗದ ಕುಟುಂಬಗಳ ವಿದ್ಯಾವಂತರ ಸಂಖ್ಯೆ ಹೆಚ್ಚಿತ್ತು ಎಂಬುದು ಗಮನಿಸಲೇ ಬೇಕಾದ ವಿಷಯ. ಹಿಜ್ಬುಲ್ ಮುಜಾಹಿದ್ದೀನ್ ಸಾಮಾನ್ಯ ಜನಮಾನಸದಲ್ಲಿ ಬೆಂಬಲ ಗಳಿಸಿಕೊಂಡದ್ದಕ್ಕೆ, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ 2010 ದಂಗೆಯ ರೂವಾರಿ ಬುರ್ಹಾನ್ ಮುಜಾಪ್ಪರ್ ವಾನಿ ಪಡೆಯುತ್ತಿದ್ದ ಸಹಾನುಭೂತಿ ಮತ್ತು ಬೆಂಬಲವೇ ಸಾಕ್ಷಿ. 2011ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮ ಪ್ರಾಂತ್ಯದಲ್ಲಿ ಭಾರತೀಯ ಸೇನೆ ದಂಗೆಕೋರರೊಂದಿಗೆ ಸೆಣಸಾಡುತ್ತಿದ್ದಾಗ, ಸ್ಥಳೀಯ ನಿವಾಸಿಗಳು ಸೇನೆಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನೆಸೆದು ದಂಗೆಕೋರರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು! ಇದಾದ ನಂತರ ಸೆಕ್ಷನ್ 144 ಪ್ರಕಾರ 'ಎನ್ ಕೌಂಟರ್ ಸೈಟ್' (Encounter site) ಗಳಿಂದ 1.2 ಮೈಲಿಗಳ ವ್ಯಾಪ್ತಿಯಲ್ಲಿ ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿತ್ತು. ಅದರೆ ಸೆಕ್ಷನ್ 144 ಜಾರಿಯಾದ ಕೆಲವೇ ದಿನಗಳಲ್ಲಿ ಸ್ಥಳೀಯರು ಅದನ್ನು ಧಿಕ್ಕರಿಸಿ ಪಂಪೋರ್ ಪಟ್ಟಣದಲ್ಲಿ ಮತ್ತೆ ಭಾರತೀಯ ರಕ್ಷಣಾ ದಳಗಳ ಮೇಲೆ ಕಲ್ಲೆಸೆದಿದ್ದರು. ಇವೆಲ್ಲವುಗಳನ್ನು ಗಮನಿಸಿದಾಗ ಭಾರತದ ಕಾಶ್ಮೀರ ನೀತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಭಾರತೀಯ ಸೇನೆಯ ಮೇಲಿನ ಹಲವು ದಾಳಿಗಳಿಗೆ ಕಾರಣನಾಗಿದ್ದ ಲಶ್ಕರ್ ತೊಯ್ಬಾ ಉಗ್ರ ಸಂಘಟನೆಯ ಅಬು ಕಾಸಿಮ್ ಕಳೆದ ಅಕ್ಟೋಬರ್ ನಲ್ಲಿ ಹತನಾದಾಗ, ಅವನ ಅಂತ್ಯಕ್ರಿಯೆಯಲ್ಲಿ ಸಾಗರದಂತೆ ಜನ ಒಟ್ಟುಗೂಡಿದ್ದರು! ಮುಂದೆ ನವೆಂಬರ್ ನಲ್ಲಿ ಕುಪ್ವಾರದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆದ 27 ದಿನಗಳ ಸಂಘರ್ಷದಲ್ಲಿ ಇಬ್ಬರು ಸೈನಿಕರು ವೀರ ಮರಣ ಹೊಂದಿದರೆ ಆರು ಜನ ಗಾಯಾಳುಗಳಾಗಿದ್ದರು. ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತದ ಸೇನಾಧಿಕಾರಿಯ ಪ್ರಕಾರ ಉಗ್ರರಿಗೆ ಎಲ್ಲಾ ಸೌಲಭ್ಯಗಳನ್ನು ಸರಬರಾಜು ಮಾಡಿದ್ದು ಸ್ಥಳೀಯ ಜನತೆ! ಉಗ್ರರ ಅಂತ್ಯಕ್ರಿಯೆಯಲ್ಲಿ ಗನ್ ಸೆಲ್ಯೂಟ್ ಗಳು ಕಾಶ್ಮೀರದಲ್ಲಿ ಸಾಮಾನ್ಯವೆನಿವಷ್ಟು ಹೆಚ್ಚಾಗಿ ಹೋಗಿದೆ. ಆಘಾತಕಾರಿ ವಿದ್ಯಮಾನಗಳು ಭಾರತದಿಂದ ಕಾಶ್ಮೀರ ನಿಧಾನವಾಗಿ ದೂರವಾಗುತ್ತಿರುವ ಸೂಚನೆ ನೀಡುತ್ತಿದೆ. ದಿನೇ ದಿನೇ ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ. ಕಾಶ್ಮೀರದಲ್ಲಿ ಮತ್ತೆ ಜನಬೆಂಬಲ ಗಳಿಸಿಕೊಳ್ಳಲು ಇನ್ನೂ ಬಹಳದ ದೂರದ ದಾರಿ ಕ್ರಮಿಸಬೇಕಾಗಿದೆ. ಕಾಶ್ಮೀರ ಕಡೆಗಿನ ಭಾರತದ ರಾಜತಾಂತ್ರಿಕತೆಯಲ್ಲಿ ವಾಜಪೇಯಿ ಕಾಶ್ಮೀರ ನೀತಿಯಲ್ಲಿ ತೋರಿದ ಪ್ರಬುದ್ಧತೆಯ ಅವಶ್ಯಕತೆಯಿದೆ. ಮೋದಿ ಕಾಶ್ಮೀರ ಸಮಸ್ಯೆಗೊಂದು ಪರಿಹಾರ ಕಂಡುಕೊಂಡಲ್ಲಿ ವರೆಗೆ ಸಾಧಿಸಿದ ವಿದೇಶಾಂಗ ನೀತಿಯ ಯಶಸ್ಸುಗಳ ಸಾಲಲ್ಲಿ ಕಾಶ್ಮೀರ ಮುಕುಟ ಮಣಿಯಂತೆ ಶೋಭಿಸುವುದರಲ್ಲಿ ಸಂಶಯವಿಲ್ಲ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 12 May 2016)