ಬುಧವಾರ, ಜನವರಿ 18, 2017

ಚೀನಾ ಆಕ್ರಮಣಕ್ಕೆ ಅಮೆರಿಕಾ-ಭಾರತ ಪ್ರತಿಬಾಣ

ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.
-  ಕೀರ್ತಿರಾಜ್

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನೀ ಮಿಲಿಟರಿ ಪ್ರಭಾವ ಮತ್ತು ಚೀನಾದ ಯುದ್ಧ ದಾಹಗಳಿಗೆ ಇದುವರೆಗೆ ಪರಿಣಾಮಕಾರಿ ಎದುರೇಟು ನೀಡಲು ಸಾಧ್ಯವಾಗಿಲ್ಲ. ತನ್ನ ನೆರೆಹೊರೆಯ ಎಲ್ಲಾ ದೇಶಗಳೊಂದಿಗೆ ವೈರತ್ವ ಸಾಧಿಸಿದಾಗಲೂ, ಅಮೆರಿಕಾವನ್ನೇ ಕೆಣಕುವ ಸಾಹಸ ಮಾಡಿದ್ದರೂ, ಚೀನಾಗೆ ಯಾರೂ ಏನೂ ಮಾಡಲಾರರು ಎಂಬ ವಿಷಯ ಮತ್ತೆ ಸಮರ್ಥಿಸಲ್ಪಟ್ಟಿತ್ತು. ಇತ್ತೀಚೆಗೆ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ತನ್ನ ತಂಟೆಗೆ ಬಂದರೆ ಅಮೆರಿಕಾ ಮೇಲೆ ಯುದ್ಧ ಸಾರುವುದಕ್ಕೂ ಸಿದ್ಧ ಎಂದಿರುವ ಚೀನಾ ವಿಶ್ವ ರಾಜಕೀಯದಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಚೀನಾವನ್ನು ಕಟ್ಟಿಹಾಕುವಂಥಾ ಸಮರ್ಥ ರಾಷ್ಟ್ರವೊಂದರ ಕೊರತೆ ಎದ್ದು ಕಾಣುತ್ತಿದೆ. ಚೀನಾ ಆಕ್ರಮಣಕಾರಿ ವರ್ತನೆ ಅಮೆರಿಕಾಗೆ ವಿಶ್ವ ನಾಯಕತ್ವದ ಪ್ರಶ್ನೆಯಾದರೆ, ಭಾರತಕ್ಕದು ಮೂಲ ರಾಷ್ಟ್ರೀಯ ಹಿತಾಸಕ್ತಿಗಳ ಪ್ರಶ್ನೆಯಾಗಿ ಕಾಡುತ್ತಿದೆ. ಚೀನಾ ವಿಶ್ವಶಕ್ತಿಯಾಗಿ ಅಮೆರಿಕಾವನ್ನು ಸರಿಗಟ್ಟಬೇಕಾದಲ್ಲಿ, ಕ್ರಮಿಸಬೇಕಾದ ದೂರ ಬಹಳಷ್ಟಿದೆಯಾದರೂ, ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರ ನೀಡುವಲ್ಲಿ ಅಮೆರಿಕಾ ಸೋಲುತ್ತಿದೆ ಎನ್ನುವುದೂ ಅಷ್ಟೇ ಸತ್ಯ!

ಚೀನಾವನ್ನು ನಿಯಂತ್ರಿಸಲು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಮಿತ್ರ ರಾಷ್ಟ್ರಗಳಾದ ಪಿಲಿಪ್ಪೈನ್ಸ್, ಜಪಾನ್, ಆಸ್ಟ್ರೇಲಿಯಾ ಸಿಂಗಾಪೂರ ಮತ್ತಿತರ ರಾಷ್ಟ್ರಗಳ ಕಡೆಗೆ ಅತಿಯಾಗಿ ಗಮನಹರಿಸುತ್ತಿರುವ ಅಮೆರಿಕಾದ ವಿದೇಶಾಂಗ ನೀತಿ ಧನಾತ್ಮಕ ಫಲಿತಾಂಶ ನೀಡಿಲ್ಲ. ಈ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಸದೃಡವಾಗಿದ್ದರೂ, ದೈತ್ಯ ಚೀನಾ ಆರ್ಭಟ ಮತ್ತು ಬೆದರಿಕೆಗೆ ಒಳಗಾಗಿವೆಯೇ ವಿನಹ ಚೀನಾಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಸವಾಲು ಒಡ್ಡುವುದು ದೂರದ ಮಾತು.  ಈ ಎಲ್ಲಾ ಕಾರಣಗಳಿಂದ,  ಅಮೆರಿಕಾ ವಿದೇಶಾಂಗ ನೀತಿ ತಜ್ಞರ ಗಮನ ಭಾರತದತ್ತ ತಿರುಗಿದೆ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ದಿನೇ ದಿನೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ಭಾರತ ಈ ನಿಟ್ಟಿನಲ್ಲಿ ಅಮೆರಿಕಾದ ಏಕೈಕ ಆಯ್ಕೆ ಎನ್ನುವುದನ್ನು ಅಮೆರಿಕಾದ ರಾಜತಾಂತ್ರಿಕ ನಿಪುಣರು ಮನಗಂಡಿದ್ದಾರೆ. ಟ್ರಂಪ್ ಅಥವಾ ಇನ್ಯಾರೇ ಅಧ್ಯಕ್ಷರಾಗಿದ್ದರೂ, ಏಷ್ಯಾ ಪೆಸಿಫಿಕ್ ನಲ್ಲಿ ಅಮೆರಿಕಾ ಮರುಸಮತೋಲನ ಸಾಧಿಸಲು ಭಾರತದ ಜೊತೆಗಿನ ಮಿತ್ರತ್ವ ಅಮೆರಿಕಾದ ಪಾಲಿಗೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಎರಡು ಬೃಹತ್ ಪ್ರಜಾಪ್ರಭುತ್ವಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಸಹಕಾರಗಳನ್ನು ವೃದ್ಧಿಸಿಕೊಳ್ಳಲಿವೆ. ಭಾರತ ಮತ್ತು ಅಮೆರಿಕಾಗಳ ಸದ್ಯದ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆಲಿಪ್ತ ನೀತಿಯಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತ  ಜಾಗತಿಕ ಮಟ್ಟದಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಿರುವ ರೀತಿಯಲ್ಲಿ ಬದಲಾವಣೆಗಳಾಗಿವೆ. ಅಮೆರಿಕಾವನ್ನು ಸಂಪೂರ್ಣವಾಗಿ ಭಾರತ ಒಪ್ಪಿಕೊಂಡಿಲ್ಲವಾದರೂ, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಾಷಿಂಗ್ಟನ್-ದೆಹಲಿ ರಕ್ಷಣಾ ಒಪ್ಪಂದಗಳು ಬಹುಮುಖ್ಯ ಪಾತ್ರವಹಿಸಲಿದೆ.

Image may contain: 1 personಹಿಂದೆಲ್ಲಾ ಪಾಕಿಸ್ತಾನದ ಪರವಹಿಸಿಕೊಂಡು ಭಾರತವನ್ನು ಟೀಕಿಸುತ್ತಿದ್ದ ಅಮೆರಿಕಾದ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನದ ಕಿಡಿಗೇಡಿ ಚಟುವಟಿಕೆಗಳಿಗೆ ಉತ್ತರವಾಗಿ ಭಾರತೀಯ ಸೇನೆ ಗಡಿನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸ ಮಾಡಿದಾಗ, ಈ ಕೃತ್ಯಕ್ಕಾಗಿ ಅಮೆರಿಕಾ ಭಾರತವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭ್ರಮನಿರಸನವಾಗಿತ್ತು. ತನ್ನ ಎಂದಿನ ವರಸೆ ಬದಲಿಸಿದ ಅಮೆರಿಕಾ, ಭಾರತವನ್ನು ಟೀಕಿಸದೆ ಎರಡೂ ದೇಶಗಳು ಈ ವಿವಾದಗಳನ್ನು ಕೊನೆಗೊಳಿಸಲು ಶ್ರಮಪಡಬೇಕು ಎಂದು ಕೈತೊಳೆದುಕೊಂಡಿತ್ತು. ಭಾರತದ ಸ್ನೇಹ ಕಳೆದುಕೊಳ್ಳಲು ಇಷ್ಟವಿಲ್ಲದೇ ಅಮೆರಿಕಾ ರಾಜಕೀಯ ಸಂದರ್ಭಕ್ಕೆ ಸರಿಯಾದ (Politically Correct) ಹೇಳಿಕೆ ಕೊಟ್ಟು ಜಾಣತನ ತೋರಿಸಿತ್ತು! ಈ ನಡೆ ಭಾರತದ ರಾಜಕಾರಣಿಗಳಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲೂ ಅಮೆರಿಕಾ ಭಾರತದ ಪರವಾಗಿದೆ ಎಂಬ ಭಾವನೆ ಮೂಡಿಸಿದ್ದಷ್ಟೇ ಅಲ್ಲದೇ ಅಮೆರಿಕಾ ತನ್ನ ವಿದೇಶಾಂಗ ನೀತಿಯ ಆದ್ಯತೆಯಾಗಿ ಪಾಕಿಸ್ತಾನದ ಬದಲು ಭಾರತವನ್ನು ಆಯ್ದುಕೊಂಡಿದ್ದು ಸ್ಪಷ್ಟ. ದಶಕಗಳಿಂದ ಪಾಕಿಸ್ತಾನ ಅಮೆರಿಕಾದ ನೆರವು ಪಡೆದುಕೊಂಡು ಅಮೆರಿಕಾದ ಬೆನ್ನಿಗೆ ಚೂರಿ ಹಾಕುತ್ತದೆ ಎಂಬ ವಿಚಾರ ತಡವಾಗಿಯಾದರೂ ಅಮೆರಿಕಾಗೆ ಅರಿವಾಗಿದೆ. ದೀರ್ಘಕಾಲದ ರಾಜತಾಂತ್ರಿಕ ಗೆಳೆತನಕ್ಕೆ ಸಮಯಸಾಧಕತೆಗಿಂತ, ಆಯಾ ರಾಷ್ಟ್ರಗಳ ಐತಿಹಾಸಿಕ ಮೌಲ್ಯಗಳು ಮುಖ್ಯವಾಗುತ್ತವೆ. ಈ ವಿಚಾರ ಅಮೆರಿಕಾ ಮತ್ತು ಭಾರತಗಳಿಗೂ ಅನ್ವಯವಾಗುತ್ತದೆ.

1962ರ ಯುದ್ಧದ ಸಂದರ್ಭದಲ್ಲಿ ಚೀನಾದಿಂದ ಭಾರತಕ್ಕಿದ್ದ ಸವಾಲುಗಳು ಇವತ್ತಿನ ಸವಾಲುಗಳಿಗಿಂತ ಭಿನ್ನ. 1962ರಲ್ಲಿ ಭಾರತವನ್ನು ಉತ್ತರದ ಗಡಿಗಳಲ್ಲಿ ಕಾಡಿದ್ದ ಚೀನಾ ನೌಕಾಶಕ್ತಿ ಅಷ್ಟಕ್ಕಷ್ಟೇ ಎಂಬತ್ತಿತ್ತು. ಆದರೆ ಇವತ್ತಿಗೆ ಚೀನಾ ತನ್ನ ನೌಕಾಬಲವನ್ನು ವ್ಯವಸ್ಥಿತ ರೀತಿಯಲ್ಲಿ ಬಲಿಷ್ಟವನ್ನಾಗಿಸಿದೆ. ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬನ್ತೋಟಾ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತಿತರ ಕಡೆಗಳಲ್ಲಿ ನೌಕಾನೆಲೆ ಸ್ಥಾಪಿಸಿಕೊಂಡು ಭಾರತವನ್ನು ಸುತ್ತುವರಿದಿರುವ ಚೀನಾ ಸಮರತಂತ್ರ  ರಾಜತಂತ್ರಜ್ಞರ ವಲಯದಲ್ಲಿ ಮುತ್ತಿನ ಹಾರದ ನೀತಿ (String of Pearls) ಎಂದೇ ಚಿರಪರಿಚಿತ! ಇತ್ತೀಚೆಗೆ ಚೀನಾ ಹಿಂದೂಮಹಾಸಾಗರವನ್ನು ನಿಯಂತ್ರಿಸಲು, ಕನಿಷ್ಟ ಪಕ್ಷ ಈ ಪ್ರದೇಶದಲ್ಲಿ ಪ್ರಭಾವ ವಿಸ್ತರಿಸಲು ಪ್ರಯತ್ನಿಸುತ್ತಿರುವುದು, ಭಾರತ ಈ ಪ್ರದೇಶದಲ್ಲಿ ದಶಕಗಳಿಂದ ಕಾಪಾಡಿಕೊಂಡಿದ್ದ ಪ್ರಭಾವಕ್ಕೆ ಸವಾಲೊಡ್ಡುತ್ತಿದೆ. ಹೀಗಾಗಿ ಇವತ್ತಿಗೆ ಭಾರತ ಎಲ್ಲಾ ದಿಕ್ಕುಗಳಿಂದಲೂ ಚೀನಾದ ಪ್ರಭಾವದ ವಿರುದ್ಧ ಹೋರಾಡಬೇಕಾದ ಸಂದಿಗ್ಧತೆ ಮತ್ತು ಅನಿವಾರ್ಯತೆಗಳಿವೆ. ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.

ಭಾರತ ವಿಶ್ವಮಟ್ಟದಲ್ಲಿ ಪ್ರಭಾವಿ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತದ ಏಕಾಗ್ರತೆ ಕೆಡಿಸಲು ಪಾಕಿಸ್ತಾನವನ್ನು ಬಳಸಿಕೊಂಡು, ಭಾರತದ ಗಡಿಗಳಲ್ಲಿ ಒತ್ತಡ ಸಂಘರ್ಷಗಳನ್ನು ಸೃಷ್ಟಿಸುತ್ತಿದೆ ಚೀನಾ! ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿರುವ ಚೀನಾ ನಿಲುವುಗಳಿಗೂ, ತಕ್ಕ ಉತ್ತರ ನೀಡುತ್ತಿರುವ ಭಾರತಕ್ಕೆ ಅಮೆರಿಕಾ ಬೆಂಬಲ ಆನೆ ಬಲ ತುಂಬಿದಂತಾಗಿದೆ. ಚೀನಾದ ವೈರತ್ವಕ್ಕೆ ಒಳಗಾದ ದಲಾಯಿ ಲಾಮರವರಿಗೆ ಆಶ್ರಯ ನೀಡಲು ಏಷ್ಯಾದ ಬೇರೆ ಯಾವುದೇ ದೇಶವೂ ಒಪ್ಪಿಕೊಳ್ಳುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಚೀನಾಗೆ ಸಡ್ಡು ಹೊಡೆದು ಭಾರತ ದಲಾಯಿ ಲಾಮರವರಿಗೆ ಆಶ್ರಯ ನೀಡಿರುವುದು ರಾಜತಾಂತ್ರಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಇವತ್ತು ಜಾಗತಿಕ ರಾಜಕೀಯದಲ್ಲಿ ಭಾರತದ ರಾಜತಾಂತ್ರಿಕತೆಯಲ್ಲಿ ಕಾಣಿಸುತ್ತಿರುವ ಆತ್ಮವಿಶ್ವಾಸ ಚೀನಾದ ನಿದ್ದೆಗೆಡಿಸುತ್ತಿರುವುದು ಸುಳ್ಳಲ್ಲ. ರಾಜತಾಂತ್ರಿಕ ಸಂಕೋಚಗಳಿಂದ ನಿಧಾನವಾಗಿ ಹೊರಬರುತ್ತಿರುವ ಭಾರತ ಅಮೆರಿಕಾದೊಂದಿಗೆ ಸೇರಿಕೊಂಡು ಚೀನಾವನ್ನು ಕಟ್ಟಿಹಾಕುವಂಥಾ ಸಮರತಂತ್ರವೊಂದನ್ನು ರೂಪಿಸಿದರೂ ಆಶ್ಚರ್ಯವೇನಿಲ್ಲ.

ಅಮೆರಿಕಾ ಮತ್ತು ಭಾರತದ ಸಂಪೂರ್ಣವಾಗಿ ರಾಜತಾಂತ್ರಿಕ ಕೊಡುಕೊಳ್ಳುವಿಕೆಗಳಿಗೆ ಕೆಲ ಅಡೆತಡೆಗಳಿವೆ. ಈ ಹಿಂದೆ ಅಮೆರಿಕಾ ಮತ್ತು ಭಾರತಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹಾಗೂ ಅಂತರಾಷ್ಟ್ರೀಯ ವ್ಯವಸ್ಥೆ ಮತ್ತು ಒಪ್ಪಂದಗಳಲ್ಲಿ ಭಾರತದ ನಿಲುವುಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕಾ ಭಾರತದ ಮೇಲೆ ಕೆಲ ನಿರ್ಬಂಧಗಳನ್ನು ಹೇರಿತ್ತು. ಈ ನಿರ್ಬಂಧಗಳು ಇವತ್ತು ಅಮೆರಿಕಾದಿಂದ ತಂತ್ರಜ್ಞಾನ ವರ್ಗಾವಣೆ ಮತ್ತು ರಕ್ಷಣಾ ಸಹಕಾರಗಳಿಗೆ ತಡೆಯಾಗಿವೆ. ಈ ಎಲ್ಲಾ ಅಡೆ ತಡೆಗಳು ಸಣ್ಣಪ್ರಮಾಣದಲ್ಲಿದ್ದು, ಇವುಗಳನ್ನು ಬದಲಾಯಿಸಿಕೊಂಡು, ಭಾರತದ ಜೊತೆ ಸಹಕಾರ ಬೆಳೆಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.  ಚೀನಾದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಭಾರತ ಮತ್ತು ಅಮೆರಿಕಾಗಳ ಹಿತಾಸಕ್ತಿಗಳಿಗೆ ಮಾರಕ ಎನ್ನುವುದನ್ನು ಎರಡೂ ದೇಶಗಳು ಒಪ್ಪಿಕೊಂಡಿರುವುದರಿಂದ, ಈ ಎರಡು ದೇಶಗಳ ಮಧ್ಯೆ ದೊಡ್ಡ ಮಟ್ಟದ ಸಹಕಾರ ಈ ಹೊತ್ತಿನ ರಾಜತಾಂತ್ರಿಕ ಅವಶ್ಯಕತೆಯಾಗಿ ಬದಲಾಗಿದೆ. ಅಮೆರಿಕಾದ ವಿದೇಶಾಂಗ ನೀತಿ ನಿಪುಣರು ಭಾರತದ ಜೊತೆಗೆ ರಾಜತಾಂತ್ರಿಕ ಸಹಕಾರಕ್ಕಿರುವ ತಡೆಗಳನ್ನು ನಿವಾರಿಸುವಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದರೊಂದಿಗೆ, ಚೀನೀ ಡ್ರ್ಯಾಗನ್ ಆಟಾಟೋಪಗಳಿಗೆ ಕಡಿವಾಣ ಹಾಕಿ ಪಾಕಿಸ್ತಾನದ ತಲೆಯ ಮೇಲೂ ಮೊಟಕುವುದಕ್ಕೂ ಸುವರ್ಣಾವಕಾಶವೊಂದನ್ನು ಕಲ್ಪಿಸಿದಂತಾಗಿದೆ.

(This article was published in Hosa Digantha Newsapaper on 17 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ರಷ್ಯಾ-ಚೀನಾ ಮೈತ್ರಿಗೆ ನಿಕ್ಸನ್-ಕಿಸಿಂಜರ್ ಪ್ರತಿತಂತ್ರ?

ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್

ಬದಲಾವಣೆಯ ಹೊರತಾಗಿ ಶಾಶ್ವತವಾದುದು ಬೇರಾವುದೂ ಇಲ್ಲ. ಪರಿವರ್ತನೆ ಜಗದ ನಿಯಮ ಎಂಬಂತೆ ಪ್ರಪಂಚ ಬದಲಾಗುತ್ತಲೇ ಇರುತ್ತದೆ. ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್, ಹೀಗಾಗಿ ಪ್ರಪಂಚವೆಂದರೆ ನಮ್ಮನ್ನು ಬಿಟ್ಟರೆ ಯಾರಿಲ್ಲ ಎಂಬಂತೆ ಮೆರೆಯುತ್ತಿದ್ದ ಬ್ರಿಟನ್ ಎರಡು ವಿಶ್ವಯುದ್ಧಗಳ ನಂತರ ಮಂಕಾಗಿ ಹೋಗಿತ್ತು. ವಿಶ್ವದ ಶಕ್ತಿಕೇಂದ್ರ ಯುರೋಪಿನ ಬ್ರಿಟನ್ ನಿಂದ, ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಮೆರಿಕಾಕ್ಕೆ ಪ್ರತಿ ಶಕ್ತಿಯಾಗಿ ಸೊವಿಯೆತ್ ಒಕ್ಕೂಟವೆಂಬ ಕಮ್ಯುನಿಸ್ಟ್ ದೈತ್ಯನೂ ಹುಟ್ಟಿಕೊಂಡು ಹಲವು ದಶಕಗಳ ಶೀತಲ ಸಮರಕ್ಕೂ ಸಾಕ್ಷಿಯಾಯ್ತು. ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಗಳು ಕೇವಲ ಆ ಎರಡು ರಾಷ್ಟ್ರಗಳಿಗಷ್ಟೇ ಸಂಬಂಧಿಸದೆ, ಇಡೀ ವಿಶ್ವ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿಶದಪಡಿಸಿತ್ತು ಈ ಛಾಯಾ ಯುದ್ಧ! ಈ ಛಾಯಾ ಯುದ್ಧದ ನಿರ್ವಹಣೆಯಲ್ಲಿ ಅಮೆರಿಕಾ ತೋರಿದ ರಾಜತಾಂತ್ರಿಕ ಚಾಕಚಕ್ಯತೆಯಲ್ಲಿ ಅಗ್ರಸ್ಥಾನ ಅಲಂಕರಿಸುವುದು, ಸೊವಿಯೆತ್ ಮತ್ತು ಚೀನಾಗಳ ಗೆಳೆತನ ಮುರಿದು, ಶಕ್ತಿರಾಜಕೀಯದಲ್ಲಿ ಸಮತೋಲನ ಕಾಯ್ದುಕೊಂಡ ಅಮೆರಿಕಾದ ಜಾಣತನ.

ಶೀತಲ ಸಮರ ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳ ಘರ್ಷನೆಯಾಗಿ ಬಿಂಬಿತವಾದರೂ, ಚೀನಾ ತನ್ನದೇ ಆದ ಪಾತ್ರ ನಿರ್ವಹಿಸಿತ್ತು. ಶೀತಲ ಸಮರದ ಆರಂಭದ ದಿನಗಳಲ್ಲಿ ಚೀನಾ ಕಮ್ಯುನಿಸ್ಟ್ ಎಂಬ ಕಾರಣಕ್ಕಾಗಿ, ಸೊವಿಯೆತ್ ಒಕ್ಕೂಟದ ಬೆಂಬಲಕ್ಕೆ ನಿಂತಿತ್ತು. ವಿಶ್ವದ ಈ ಎರಡು ಕಮ್ಯುನಿಸ್ಟ್ ದೈತ್ಯರನ್ನು ಒಟ್ಟಾಗಿರುವಾಗ ಎದುರಿಸುವುದು ಕಷ್ಟಸಾಧ್ಯ ಎನ್ನುವುದು ಅಮೆರಿಕಾಗೆ ತಿಳಿಯದ ವಿಷಯವೇನಾಗಿರಲಿಲ್ಲ. ಇಬ್ಬರು ಬಲಿಷ್ಟ ಎದುರಾಳಿಗಳು ಒಂದಾದಾಗ ಚಾಣಕ್ಯನ ಭೇದ ನೀತಿಯನ್ನು ಅನುಸರಿಸುವುದು ಅಮೆರಿಕಾಗೆ ಅನಿವಾರ್ಯವಾಗಿತ್ತು. ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕಿಳಿಸಿದ ಕೀರ್ತಿ ನಿಕ್ಸನ್-ಕಿಸಿಂಜರ್ ಜೋಡಿಗೆ ಸಲ್ಲುತ್ತದೆ. ಭೇದ ನೀತಿಯ ಯಶಸ್ಸಿನ ಕುರುಹಾಗಿ ಸೊವಿಯೆತ್ ಒಕ್ಕೂಟದಿಂದ ಚೀನಾ ದೂರವಾಗುತ್ತದೆ ಮತ್ತು ಅಮೆರಿಕಾಗೆ ಹತ್ತಿರವಾಗಿ ಸೊವಿಯೆತ್ ಒಕ್ಕೂಟದ ಬಲ ಕುಗ್ಗುವಂತೆ ಮಾಡುತ್ತದೆ.

1945ರಲ್ಲಿ ಜಪಾನ್ ಶರಣಾಗತಿಯೊಂದಿಗೆ, ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವೊಂದರ ನಿರ್ಮಾಣ ಮಾವೊ ನೇತೃತ್ವದಲ್ಲಿ ಭರದಿಂದ ಸಾಗುತ್ತದೆ. ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಸ್ಥಾಪಿಸಲು ಮಾವೊ ಮತ್ತು ಆತನ ಕಮ್ಯುನಿಸ್ಟ್ ಸಹವರ್ತಿಗಳಿಗೆ ಬೆಂಬಲ ನೀಡಿದ್ದು ಸೊವಿಯೆತ್ ಒಕ್ಕೂಟದ ಜೊಸೆಫ್ ಸ್ಟಾಲಿನ್! ಸ್ಟಾಲಿನ್ ಬೆಂಬಲ ದೊರೆಯದಿದ್ದರೆ ಮಾವೊ ಚೀನಾದಲ್ಲೊಂದು ಕಮ್ಯುನಿಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಲೂ ಇರಲಿಲ್ಲ, ಮಾನವ ಜನಾಂಗದ ಇತಿಹಾಸದಲ್ಲಿ ಬೃಹತ್ ಹತ್ಯಾಕಾಂಡ ನಡೆಸಿದವರ ಸಾಲಿನಲ್ಲಿ ಮಾವೊ ಹೆಸರು ಸೇರಿಕೊಳ್ಳುತಲೂ ಇರಲಿಲ್ಲ. ಅದೇನೆ ಇದ್ದರೂ 1949ರಲ್ಲಿ ಚೀನಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಹೆಸರಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಸೊವಿಯೆತ್ ಒಕ್ಕೂಟ ಮತ್ತು ಚೀನಾಗಳ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಸ್ಟಾಲಿನ್ ನ ನಾಯಕತ್ವವನ್ನು ಮಾವೊ ಒಪ್ಪಿಕೊಂಡಿದ್ದ ಮತ್ತು ಆರಂಭಿಕ ಹಂತದಲ್ಲಿ ಸೊವಿಯೆತ್ ಕಮ್ಯುನಿಸ್ಟ್ ಜಗತ್ತಿನ ನಾಯಕ ಎನ್ನುವುದನ್ನು ಒಲ್ಲದ ಮನಸ್ಸಿನಿಂದಲೇ ಚೀನಾ ಒಪ್ಪಿಕೊಳ್ಳಬೇಕಾಯ್ತು.

Image may contain: 1 person1953ರಲ್ಲಿ ಸ್ಟಾಲಿನ್ ಸಾವಿನೊಂದಿಗೆ ಚೀನಾ ಮತ್ತು ಸೊವಿಯೆತ್ ಗಳ ಸಂಬಂಧಗಳೂ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಲಾರಂಬಿಸುತ್ತವೆ. ಸ್ಟಾಲಿನ್ ನಂತರ ಸೊವಿಯೆತ್ ಅಧಿಕಾರದ ಚುಕ್ಕಾಣಿ ಹಿಡಿದ ನಿಕಿತಾ ಕ್ರುಶ್ಚೆವ್ ಸರಕಾರ, ಮಾರ್ಕ್ಸಿಸ್ಟ್-ಲೆನಿನಿಸಂ ತತ್ವದ ಪರಿಶುದ್ಧ ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸ್ಟಾಲಿನ್ ಜಾರಿಗೆ ತಂದಿದ್ದ ಹಲವು ವಿಚಾರಗಳನ್ನು ಮೂಲೆಗೆ ತಳ್ಳುವ ಪ್ರಕ್ರಿಯೆ (De-Stalinization) ಹೊಸ ಸರಕಾರದಿಂದಾಗುತ್ತದೆ. ಈ ಎಲ್ಲಾ ಬೆಳವಣಿಗಗಳು ಸೊವಿಯೆತ್ ಮತ್ತು ಚೀನಾಗಳ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯಗಳ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸೊವಿಯೆತ್ ನಾಯಕ ಕ್ರುಶ್ಚೆವ್ ಪಶ್ಚಿಮದ ರಾಷ್ಟ್ರಗಳೊಂದಿಗೆ 'ಶಾಂತಿಯುತ ಸಹಬಾಳ್ವೆ'ಯನ್ನು (peaceful coexistence) ಒಪ್ಪಿಕೊಂಡಿದ್ದನ್ನು ಮಾವೊ ಮುಕ್ತವಾಗಿಯೇ ವಿರೋಧಿಸುತ್ತಾರೆ. ಈ ಎರಡು ದೈತ್ಯ ರಾಷ್ಟ್ರಗಳು ಕಮ್ಯುನಿಸ್ಟ್ ಜಗತ್ತಿನ ನಾಯಕತ್ವಕ್ಕಾಗಿ ಸ್ಪರ್ಧಿಸತೊಡಗುತ್ತವೆ. ಕೆಲ ಕಮ್ಯುನಿಸ್ಟ್ ರಾಷ್ಟ್ರಗಳು ಸೊವಿಯೆತ್ ಬಣದಲ್ಲಿ ಗುರುತಿಸಿಕೊಂಡರೆ, ಕೆಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಚೀನಾ ಪ್ರಭಾವ ವಿಸ್ತರಿಸಿಕೊಳ್ಳುತ್ತದೆ. ಈ ಪೈಪೋಟಿಯಲ್ಲಿ ಸೊವಿಯೆತ್ ಒಕ್ಕೂಟ ಭಾರತದ ಸ್ನೇಹ ಸಂಪಾದಿಸಿ, ಚೀನಾ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನೂ ಮಾಡಿತ್ತು! ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸೊವಿಯೆತ್ ರಾಜಿ ಮಾಡಿಕೊಂಡಿದ್ದನ್ನೂ ಚೀನಾ ಕಟುವಾಗಿ ಟೀಕಿಸಿತ್ತು. 1969ರಲ್ಲಿ ಗಡಿವಿವಾದಗಳು ಸೊವಿಯೆತ್ ಮತ್ತು ಚೀನಾ ಮಿಲಿಟರಿ ಹಣಾಹಣಿಯ ಮಟ್ಟಕ್ಕೆ ತಲುಪಿದ್ದು, ಈ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ನಡುವಿನ ವೈಷಮ್ಯಕ್ಕೆ ಸಾಕ್ಷಿ.

ಈ ಎರಡು ಕಮ್ಯುನಿಸ್ಟ್ ದೇಶಗಳ ಪ್ರಭಾವ ವಿಸ್ತರಿಸಿದ ಕಡೆಯೆಲ್ಲಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯ್ತು. ಆಫ್ರಿಕಾ ಖಂಡದಲ್ಲಿ ನಡೆದ ದಂಗೆ, ಘರ್ಷಣೆಗಳಲ್ಲಿ ಚೀನಾ ಒಂದು ಗುಂಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಸೊವಿಯೆತ್ ಇನ್ನೊಂದು ಗುಂಪು ಸೇರಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ವಿಯೆಟ್ನಾಮ್, ಅಫ್ಘಾನಿಸ್ತಾನ್ ಮತ್ತಿತರ ಪ್ರದೇಶಗಳಲ್ಲಿ ಸೊವಿಯೆತ್ ಮತ್ತು  ಚೀನಾಗಳು ಪರಸ್ಪರ ಮುಸುಕಿನ ಗುದ್ದಾಟ ನಡೆಸಿಕೊಂಡವು. ನಂತರದ ವರ್ಷಗಳಲ್ಲಿ ಈ ವೈಷಮ್ಯ ಸ್ವಲ್ಪ ಮಟ್ಟಿಗೆ ತಗ್ಗಿತಾದರೂ, ಮಾವೊ-ಕ್ರುಶ್ಚೇವ್ ಸಮಯದಲ್ಲಿ ಈ ಎರಡು ರಾಷ್ಟ್ರಗಳು ಸೃಷ್ಟಿಸಿಕೊಂಡ ಸಮಸ್ಯೆಗಳು, ಏಕೀಕೃತ ಕಮ್ಯುನಿಸ್ಟ್ ಬಣದ ಕಲ್ಪನೆಯನ್ನು ರಿಪೇರಿ ಮಾಡಲಾಗದಷ್ಟು ಕೆಡಿಸಿಬಿಟ್ಟಿತ್ತು! ಚೀನಾ ಮತ್ತು ಸೋವಿಯೆತ್ ಗಳು ಪರಸ್ಪರ ಮಿಲಿಟರಿ ಸಂಘರ್ಷದ ಹಂತಕ್ಕೆ ಬಂದ ಮೇಲಂತೂ ಮಾವೊ ಆಲೋಚನಾ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ಶತ್ರುಗಳಿಬ್ಬರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ಅಮೆರಿಕಾ ಪಾಲಿಗೆ ಬಯಸದೇ ಬಂದ ಭಾಗ್ಯದಂತಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಆಗಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾ ಜೊತೆ ನಡೆಸಿದ ರಾಜತಾಂತ್ರಿಕ ಮಾತುಕತೆ ಧನಾತ್ಮಕ ಫಲ ನೀಡಿತ್ತು. 1969ರಲ್ಲಿ ಚೀನಾದ ಮೇಲೆ ವಿಧಿಸಿದ್ದ ವ್ಯಾಪಾರ ಮತ್ತು ಪ್ರಯಾಣದ ನಿರ್ಬಂಧಗಳನ್ನು ಅಮೆರಿಕಾ ಸಡಿಲಿಸಿತ್ತು! ಪಾಕಿಸ್ತಾನವನ್ನು ರಾಜತಾಂತ್ರಿಕ ಮಧ್ಯವರ್ತಿಯಾಗಿ ಸಮರ್ಪಕವಾಗಿ ಬಳಸಿಕೊಂಡ ನಿಕ್ಸನ್ ಚಾಣಾಕ್ಷತೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ಸ್ನೇಹವನ್ನು ಮುರಿದುಬಿಡುತ್ತದೆ.

1971ರಲ್ಲಿ ಅಮೆರಿಕಾದ ಟೇಬಲ್ ಟೆನ್ನಿಸ್ ತಂಡವೊಂದು ಚೀನಾಗೆ ಭೇಟಿ ನೀಡುವುದರೊಂದಿಗೆ, ಎರಡು ದೇಶಗಳ ಮಧ್ಯೆ ನಡೆದ ರಾಜತಾಂತ್ರಿಕ ನಡೆಗಳು 'ಪಿಂಗ್-ಪಾಂಗ್ ರಾಜತಾಂತ್ರಿಕತೆ' (ping-pong diplomacy) ಎಂದೇ ಪ್ರಸಿದ್ಧ. ನಿಕ್ಸನ್ ನ ಪರಮಾಪ್ತ ಮತ್ತು ಅಮೆರಿಕಾದ ಸಾರ್ವಕಾಲಿಕ ರಾಜತಾಂತ್ರ ನಿಪುಣ ಹೆನ್ರಿ ಕಿಸಿಂಜರ್ 1971 ಜುಲೈನಲ್ಲಿ ಪಾಕಿಸ್ತಾನ ಪ್ರವಾಸದ ನೆಪದಲ್ಲಿ, ರಹಸ್ಯವಾಗಿ ಬೀಜಿಂಗ್ ಗೂ ಭೇಟಿ ನೀಡುತ್ತಾನೆ. ಅದೇ ವರ್ಷ ಅಕ್ಟೋಬರ್ ನಲ್ಲಿ ಚೀನಾಗೆ ಭೇಟಿ ನೀಡುವ ಕಿಸಿಂಜರ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗೆ ವಿಶ್ವಸಂಸ್ಥೆಯ ಸದಸ್ಯನಾಗಿಸಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿಸುವ ಪ್ರಕ್ರಿಯೆಗೆ ಅಮೆರಿಕಾದ ಬೆಂಬಲವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಫೆಬ್ರವರಿ 1972ರಂದು ನಿಕ್ಸನ್ ಮೊದಲ ಬಾರಿ ಚೀನಾಗೆ ಭೇಟಿ ನೀಡುತ್ತಾರೆ. ಇಷ್ಟಾದರೂ ನಿಕ್ಸನ್ ಕಾಲದಲ್ಲಿ ಅಮೆರಿಕಾ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಲಾಗಲಿಲ್ಲ. ಮುಂದೆ 1979ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್, ರಿಪಬ್ಲಿಕ್ ಆಫ್ ಚೀನಾದೊಂದಿಗೆ(ತೈವಾನ್) ಸಂಬಂಧಗಳನ್ನು ಅಂತ್ಯಗೊಳಿಸಿದಾಗಲೇ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಕಮ್ಯುನಿಸ್ಟ್ ಚೀನಾ) ಅಮೆರಿಕಾ ಜೊತೆಗಿನ ರಾಜತಾಂತ್ರಿಕ ವ್ಯವಹಾರಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು. ಈ ಪ್ರಕ್ರಿಯೆಗಳು ಅಮೆರಿಕಾ ಮತ್ತು ಚೀನಾಗಳನ್ನು ಆಪ್ತ ರಾಷ್ಟ್ರಗಳನ್ನಾಗಿಸದೇ ಹೋದರೂ, ಇಂಥಾ ಸಂದರ್ಭವನ್ನು ನಾಜೂಕಾಗಿ ನಿರ್ವಹಿಸಿ ಅಮೆರಿಕಾ ವಿರುದ್ಧದ ಸೊವಿಯೆತ್-ಚೀನಾ ಸಂಭವನೀಯ ಮೈತ್ರಿಯೊಂದನ್ನು ತಡೆದ ಹೆಗ್ಗಳಿಕೆ ನಿಕ್ಸನ್-ಕಿಸಿಂಜರ್ ರಾಜತಾಂತ್ರಿಕ ಪ್ರಯತ್ನಗಳಿಗೆ ಸಲ್ಲುತ್ತದೆ.

ಆಧುನಿಕ ವಿಶ್ವರಾಜಕೀಯ ಮತ್ತೆ ನವ ಶೀತಲ ಸಮರದತ್ತ ಸಾಗುತ್ತಿದೆ. ಸೊವಿಯೆತ್ ಒಕ್ಕೂಟದ ಆಕ್ರಮಣಶೀಲತೆಯನ್ನು ರಷ್ಯಾ ಮತ್ತೆ ನೆನಪಿಸುತ್ತಿದೆಯಷ್ಟೇ ಅಲ್ಲದೇ, ರಷ್ಯಾ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಚೀನಾ ಕಡೆಗೆ ವಾಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚೀನಾದ ಉದ್ದೇಶಗಳು ಮತ್ತು ಜಾಗತಿಕ ಅಜೆಂಡಾಗಳು ಚೀನಾ ಮತ್ತು ರಷ್ಯಾದ ಮಿಲಿಟರಿ ಮೈತ್ರಿಯೊಂದಕ್ಕೆ ದಾರಿ ಮಾಡಿಕೊಟ್ಟಿರುವುದೂ ಸುಳ್ಳಲ್ಲ. ಒಬಾಮ ಆಡಳಿತದಲ್ಲಿ ಅಮೆರಿಕಾ ಚೀನಾ ಮತ್ತು ರಷ್ಯಾಗಳೆರಡನ್ನೂ ನಿಯಂತ್ರಿಸುವ ಪ್ರಯತ್ನದಲ್ಲಿ ಈ ಎರಡು ದೇಶಗಳ ವಿರೋಧ ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ರಷ್ಯಾ-ಚೀನಾಗಳು ಇನ್ನಷ್ಟು ಹತ್ತಿರವಾಗಲು ಪರೋಕ್ಷವಾಗಿ ಸಹಕರಿಸಿದಂತಾಗಿದೆ. ಇವತ್ತಿಗೆ ಅಮೆರಿಕಾ ಎದುರಿಸಬೇಕಾಗಿರುವ ಸವಾಲುಗಳು ಹಿಂದೆಂದಿಗಿಂತಲೂ ವಿಭಿನ್ನ. ಚೀನಾ, ರಷ್ಯಾ, ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಜುವೆಲಾ, ಇಸ್ಲಾಮಿಕ್ ಸ್ಟೇಟ್ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಏಕಕಾಲಕ್ಕೆ ಎದುರಿಸಬೇಕಾದ ಸವಾಲು ಅಮೆರಿಕಾ ಮುಂದಿದೆ. ಜೈವಿಕ, ರಾಸಾಯನಿಕ ಮತ್ತು ಅಣ್ವಸ್ತ್ರಗಳ ಅಸ್ತಿತ್ವದೊಂದಿಗೆ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಸಣ್ಣ ಘರ್ಷಣೆ ಈಡೀ ವಿಶ್ವದ ಅಳಿವು-ಉಳಿವಿನ ಪ್ರಶ್ನೆಯಾಗುತ್ತದೆ! ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.

(This article was published in Vishwavani Newsapaper on 13 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ವಿಶ್ವ ರಾಜಕೀಯದ ದಿಕ್ಕು ಬದಲಿಸಲಿದೆಯೇ ರಷ್ಯಾ?

ಇತ್ತೀಚಿನ ವರ್ಷಗಳಲ್ಲಿ ಪುಟಿನ್ ಆಕ್ರಮಣಕಾರಿ ಅಧ್ಯಕ್ಷತೆಯಲ್ಲಿ ರಷ್ಯಾ ಕೆಲ ಜಾಗತಿಕ ಆಗುಹೋಗುಗಳಲ್ಲಿ ಸದ್ದು ಮಾಡಿತ್ತಾದರೂ, ಸೊವಿಯೆತ್ ಒಕ್ಕೂಟದ ಪ್ರಭಾವವನ್ನು ಸರಿಗಟ್ಟಲಾರದು ಎಂದೆನಿಸಿತ್ತು. ಆದರೆ ಇದೀಗ ರಷ್ಯಾ ಹೊಸ ವಿದೇಶಾಂಗ ನೀತಿಯ ಮೂಲಕ ತನ್ನ ಆಕ್ರಮಣಶೀಲ ಜಾಗತಿಕ ನಿಲುವಿಗೊಂದು ಅಧಿಕೃತ ಮುದ್ರೆಯೊತ್ತಿದೆ!
-  ಕೀರ್ತಿರಾಜ್


2016ರ ವರ್ಷಾಂತ್ಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಷ್ಯಾದ ಹೊಸ ವಿದೇಶಾಂಗ ನೀತಿಯ ಕರಡನ್ನು ಅಂಗೀಕರಿಸಿದ್ದಾರೆ. ಈ ಬೆಳವಣಿಗೆ ಕಳೆದೊಂದಷ್ಟು ವರ್ಷಗಳ ಕಾಲ ಪರಿಷ್ಕರಣೆಯಾಗದೇ ಇದ್ದ ರಷ್ಯಾ ನೀತಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಈ ಹೊಸ ವಿದೇಶಾಂಗ ನೀತಿ! ರಷ್ಯಾದ ಹೊಸ ವಿದೇಶಾಂಗ ನೀತಿಯ ದಾಖಲೆ ಪತ್ರಗಳು ರಷ್ಯಾವನ್ನು ಮತ್ತೆ ವಿಶ್ವದ ಸೂಪರ್ ಪವರ್ ಸ್ಥಾನಕ್ಕೇರಿಸುವ ಪ್ರಯತ್ನದಲ್ಲಿವೆ. ಆಧುನಿಕ ಜಾಗತಿಕ ರಾಜಕೀಯದಲ್ಲಿ ರಷ್ಯಾ ಘನತೆಯನ್ನು ಸೊವಿಯೆತ್ ಒಕ್ಕೂಟದ ಗತವೈಭವಕ್ಕೆ ಮರಳಿಸುವ ಮಹತ್ವಾಕಾಂಕ್ಷೆ ರಷ್ಯನ್ ರಾಜತಂತ್ರಜ್ಞರ ನಡೆ ನುಡಿಗಳಲ್ಲಿ ವ್ಯಕ್ತವಾಗುತ್ತಿದೆ. ಇದಷ್ಟೇ ಅಲ್ಲದೇ ವಿಶ್ವದ ಯಾವುದೇ ಮೂಲೆಯ ರಾಜಕೀಯ ಸಮಸ್ಯೆಯಾದರೂ, ರಷ್ಯಾ ಹಸ್ತಕ್ಷೇಪ ಅನಿವಾರ್ಯ ಎನ್ನುವ ಸಂದೇಶವೊಂದನ್ನು ರವಾನಿಸಿದೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಲಿಖಿತ ದಾಖಲೆಗಳು!

ವಿಶ್ವದಲ್ಲಿ ನಡೆಯುವ ಪ್ರತಿ ರಾಜಕೀಯ ಬದಲಾವಣೆಯಲ್ಲೂ ತನ್ನ ಛಾಪು ಮೂಡಿಸಲು ಅತ್ಯುತ್ಸಾಹದಿಂದಿರುವ ರಷ್ಯಾ, ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಿಂದ ಹೊರಬರುವ ಪ್ರತಿ ನಿರ್ಧಾರಗಳು, ಅವುಗಳ ಹಿಂದಿನ ಕಾರಣಗಳು, ಸಮಜಾಯಿಷಿಗಳು ಕೇವಲ ರಷ್ಯನ್ನರನ್ನು ಮಾತ್ರವಲ್ಲದೇ ಇಡೀ ಜಾಗತಿಕ ಸಮುದಾಯಕ್ಕೆ ತಲುಪುತ್ತಿವೆ. ಇದಕ್ಕಾಗಿ ದೇಶ ವಿದೇಶಗಳ ಮಾಧ್ಯಮಗಳನ್ನು ದಕ್ಷವಾಗಿ ಬಳಸಿಕೊಳ್ಳುತ್ತಿದೆ ರಷ್ಯಾ. ರಷ್ಯನ್ ಅಜೆಂಡಾಗಳನ್ನು ವಿಶ್ವಾದ್ಯಂತ ತಲುಪಿಸಲು ತನ್ನದೇ ಅದ ರಷ್ಯಾ ಟುಡೆ (Russia Today) ಎಂಬ ಮಾಧ್ಯಮ ಜಾಲವನ್ನೂ ರಷ್ಯನ್ನರು ಸೃಷ್ಟಿಸಿಕೊಂಡಿದ್ದಾರೆ. ಆರ್. ಟಿ ಮಾಧ್ಯಮ ಜಾಲವೆಂದು ಗುರುತಿಸಿಕೊಂಡು, ವಿಭಿನ್ನ ಭಾಷೆಗಳನ್ನು ಬಳಸಿಕೊಂಡು ಇಡೀ ಪ್ರಪಂಚದ ಜನರನ್ನು ರಷ್ಯಾ ಪರವಾಗಿರಲು ಪ್ರಭಾವಿಸುತ್ತಿದೆ. 2017ರ ರಷ್ಯಾದ ಬಜೆಟ್ ಕರಡು, ಆರ್. ಟಿ ಮಾಧ್ಯಮ ಜಾಲಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ನೀಡಲು ಸಿದ್ಧವಾಗಿದೆ. ಯುರೋಪಿನ ಮಾಧ್ಯಮಗಳು ರಷ್ಯಾದ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಪ್ರತ್ಯುತ್ತರವಾಗಿ, ಆರ್. ಟಿ ಯನ್ನು ಇನ್ನಷ್ಟು ಸಶಕ್ತಗೊಳಿಸಿ ರಷ್ಯಾ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ರಷ್ಯಾದ ಉದ್ದೇಶ. ವಿಶೇಷವಾಗಿ ಉಕ್ರೇನ್ ಮತ್ತು ಸಿರಿಯಾಗಳಲ್ಲಿ ರಷ್ಯಾ ನಡೆಗಳ ಬಗ್ಗೆ ಜಾಗತಿಕ ಸಮುದಾಯಕ್ಕೊಂದು ಸಮಜಾಯಿಷಿ ನೀಡುವ ಪ್ರಯತ್ನಗಳನ್ನೂ ರಷ್ಯಾ ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಗೂ ರಷ್ಯಾ ಅಜೆಂಡಾಗಳನ್ನು ತಲುಪಿಸುವತ್ತ ರಷ್ಯಾ ಪರ ಮಾಧ್ಯಮಗಳನ್ನು ಬಳಸಿಕೊಳ್ಳುವತ್ತ ರಷ್ಯಾದ ಹೊಸ ವಿದೇಶಾಂಗ ನೀತಿಯನ್ನು ರೂಪಿಸಿದವರು ಗಂಭೀರ ಸಲಹೆಗಳನ್ನು ನೀಡಿದ್ದಾರೆ.

ಆಧುನಿಕ ಜಾಗತಿಕ ರಾಜಕೀಯದ ಜವಾಬ್ದಾರಿಯನ್ನು ರಷ್ಯಾ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗೆಗೂ ಹೊಸ ವಿದೇಶಾಂಗ ನೀತಿ ತರ್ಕಬದ್ಧ ವಿವರಣೆ ನೀಡುವ ಪ್ರಯತ್ನವೊಂದನ್ನು ಮಾಡಿದೆ. ಪಶ್ಚಿಮದ ರಾಷ್ಟ್ರಗಳು ತಮ್ಮ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಇತರ ನಾಗರಿಕತೆಗಳ ಮೇಲೆ ಬಲವಂತವಾಗಿ ಹೇರುತ್ತಿದೆ ಮತ್ತು ಇದನ್ನು ತಡೆ ಯುವ ಜವಾಬ್ದಾರಿ ರಷ್ಯಾದ ಮೇಲಿದೆ ಎನ್ನುವ ಮನೋಭಾವ ರಷ್ಯಾದ ಹೊಸ ವಿದೇಶಾಂಗ ನೀತಿಯಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ಸುಮಾರು ಕಾಲು ಶತಮಾನದ ಹಿಂದೆ ಸ್ಯಾಮುವೆಲ್ ಹಂಟಿಂಗ್ಟನ್ ನೀಡಿದ್ದ 'ನಾಗರಿಕತೆಗಳ ಸಂಘರ್ಷ' ಪರಿಕಲ್ಪನೆಯನ್ನು ರಷ್ಯನ್ ವಿದೇಶಾಂಗ ನೀತಿ ತಜ್ಞರು ತಮ್ಮ ಪರವಾಗಿ ಬಳಸಿಕೊಂಡಂತಾಯಿತು. ಜಾಗತಿಕ ರಾಜಕೀಯವನ್ನು ನಿಯಂತ್ರಿಸುವಷ್ಟು ರಾಜಕೀಯ ಪ್ರಭಾವ ಮತ್ತು ಆರ್ಥಿಕ ಸಂಪನ್ಮೂಲಗಳು ಇವತ್ತಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿಲ್ಲ ಮತ್ತು ಸಂಪನ್ಮೂಲಗಳಿಗೋಸ್ಕರ ನಡೆಯುವ ಸ್ಪರ್ಧೆ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಅರಾಜಕತೆಗೆ ದೂಡಲಿದೆ ಎನ್ನುವುದು ರಷ್ಯನ್ನರ ವಾದ. ಇವೆಲ್ಲವುಗಳಿಗೆ ಕಾರಣ ಪಾಶ್ಚಾತ್ಯ ನಾಗರಿಕತೆ ಮತ್ತು ಇತರರ ಮೇಲೆ ಆ ಸಂಸ್ಕೃತಿಯ ಬಲವಂತದ ಹೇರಿಕೆ ಎಂದು ಗುರುತಿಸುವ ರಷ್ಯನ್ ರಾಜತಂತ್ರಜ್ಞರು, ಇವೆಲ್ಲವುಗಳಿಗೆ ಉತ್ತರ ನೀಡುವ ಹೊಣೆ ರಷ್ಯಾ ಮೇಲಿದೆ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ರಷ್ಯಾ ಮಹತ್ತರವಾದ ಪಾತ್ರ ವಹಿಸಬೇಕು ಮತ್ತು ವಿಶ್ವಾದ್ಯಂತ ತನ್ನ ಪ್ರಭಾವ ವಿಸ್ತರಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ರಷ್ಯಾದ ಹೊಸ ವಿದೇಶಾಂಗ ನೀತಿಯ ಪ್ರತಿ ಅಕ್ಷರವೂ ಪ್ರತಿಧ್ವನಿಸುವಂತೆ ಭಾಸವಾಗುತ್ತದೆ. ಸೊವಿಯೆತ್ ಒಕ್ಕೂಟದ ಪತನದ ನಂತರ ಇತರರ ಗೊಡವೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದ ರಷ್ಯನ್ ದೈತ್ಯ ಮತ್ತೆ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಂಡಿತ್ತು ಮತ್ತು ಇದೀಗ ತನ್ನ ವಿದೇಶಾಂಗ ನೀತಿ ದಾಖಲೆಗಳಲ್ಲಿ ಇವೆಲ್ಲವುಗಳನ್ನು ಅಧಿಕೃತವಾಗಿ ದಾಖಲಿಸಿಕೊಂಡಿದೆ.

Image may contain: 1 personಶೀತಲ ಸಮರದ ಅಂತ್ಯದ ನಂತರವೂ ಅಮೆರಿಕಾ ಮತ್ತು ನ್ಯಾಟೊ ಮೈತ್ರಿಕೂಟಕ್ಕೆ ರಷ್ಯಾ ಶತ್ರುವಾಗಿಯೇ ಉಳಿದಿದೆ ಎನ್ನುವುದು ರಷ್ಯಾಗೂ ತಿಳಿದಿರುವ ಸತ್ಯ. ಇವತ್ತಿಗೂ ಅಮೆರಿಕಾದ ಆಕಾಂಕ್ಷೆಗಳು ಅಂತರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದ್ದರೆ, ಅದನ್ನು ವಿರೋಧಿಸುವ ಸಾಮರ್ಥ್ಯ ರಷ್ಯಾಗೆ ಮಾತ್ರವಿದೆ ಎನ್ನುವುದು ರಷ್ಯನ್ನರ ನಂಬಿಕೆ. ರೊಮಾನಿಯದಲ್ಲಿ ಅಮೆರಿಕಾ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿದಾಗ, ಪ್ರತ್ಯುತ್ತರವಾಗಿ ರಷ್ಯಾ ತನ್ನ ಖಂಡಾಂತರ ಕ್ಷಿಪಣಿಗಳನ್ನು ಕಲಿನಿನ್ ಗಾರ್ಡ್ ನಲ್ಲಿ ಸ್ಥಾಪಿಸಿ ನ್ಯಾಟೊ ಸದಸ್ಯರನ್ನು ಬೆದರಿಸಿದ್ದು ಇದಕ್ಕೊಂದು ಉದಾಹರಣೆ. ನ್ಯಾಟೊ ತನ್ನ ಪ್ರಭಾವವನ್ನು ಪೂರ್ವದ ಕಡೆ ವಿಸ್ತರಿಸುವುದನ್ನು ಎಲ್ಲಾ ರಿತಿಯಿಂದಲೂ ತಡೆಗಟ್ಟಲು ರಷ್ಯಾ ಸಿದ್ಧವಿದೆ ಎನ್ನುವುದನ್ನು ಈ ಉದಾಹರಣೆ ಸ್ಪಷ್ಟಪಡಿಸುತ್ತದೆ. ಯುರೋಪಿನ ಜೊತೆಗಿನ ತನ್ನ ಸಂಬಂಧಗಳ ಬಗ್ಗೆ ಆರು ಬೃಹತ್ ಅಧ್ಯಾಯಗಳನ್ನು ಮೀಸಲಿಟ್ಟಿರುವ ವಿದೇಶಾಂಗ ನೀತಿಯ ಲಿಖಿತ ದಾಖಲೆ, ಈ ಬಾರಿ ಯುರೋಪಿನ ಹೊಸ ರಾಷ್ಟ್ರಗಳನ್ನು ತಮ್ಮ ವಿದೇಶಾಂಗ ನೀತಿಯ ಆದ್ಯತೆಯನ್ನಾಗಿಸಿದ್ದಾರೆ. ಜರ್ಮನಿ, ಫ್ರಾನ್ಸ್ ಮತ್ತು ಇಟಲಿಗಳನ್ನು ಆಪ್ತ ರಾಷ್ಟ್ರಗಳೆಂದು ಗುರುತಿಸಿರುವ ಕಾನ್ಸೆಪ್ಟ್ ಹಿಂದೆ ಈ ಪಟ್ಟಿಯಲ್ಲಿದ್ದ ನೆದರ್ ಲ್ಯಾಂಡ್ಸ್ ಮತ್ತು ಬ್ರಿಟನ್ ಗಳನ್ನು ಹೊರಗಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ನ್ಯಾಟೊ ಸದಸ್ಯ ರಾಷ್ಟ್ರಗಳಲ್ಲೂ ಕೆಲ ಪ್ರಭಾವಿ ರಾಜಕಾರಣಿಗಳು, ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿ ಪೂರ್ಣ ಪ್ರಮಾಣದ ಬಾಂಧವ್ಯ ಬೆಳೆಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಮಧ್ಯಪ್ರಾಚ್ಯದ ರಾಜಕೀಯ ಪ್ರಕ್ಷುಬ್ಧತೆಗಳ ಬಗೆಗೂ ಗಮನ ಹರಿಸಿರುವ ರಷ್ಯಾದ ಹೊಸ ವಿದೇಶಾಂಗ ನೀತಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳ ರೆಸಲ್ಯೂಶನ್ ಗಳ ಪ್ರಕಾರ ಸಮಸ್ಯೆಗಳ ಪರಿಹಾರಿಸುವತ್ತ ಬೆಂಬಲ ವ್ಯಕ್ತಪಡಿಸಿದೆ. ಅರಬ್ - ಇಸ್ರೇಲಿ ಸಂಘರ್ಷದ ಬಗೆಗೆ ತನ್ನ ನಿಲುವನ್ನು ಬದಲಿಸಿಕೊಂಡಿರುವ ರಷ್ಯಾ, ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣಕ್ಕೆ ನೀಡುತ್ತಿದ್ದ ಬೆಂಬಲವನ್ನು ಮೊದಲ ಬಾರಿಗೆ ಹಿಂತೆಗೆದುಕೊಂಡಿದೆ. ಭಯೋತ್ಪಾದನೆಯ ಬಗೆಗೂ ರಷ್ಯಾದ ಹೊಸ ವಿದೇಶಾಂಗ ನೀತಿ ತನ್ನದೇ ಕಾರ್ಯ ಯೊಜನೆಗಳನ್ನು ರೂಪಿಸಿಕೊಂಡಿದೆ. ಈ ಬಾರಿ ಭಯೋತ್ಪಾದನೆಯ ಕುರಿತಾಗಿ ವಿಭಿನ್ನ ದೃಷ್ಟಿಕೋನ ಹೊಂದಿರುವ ರಷ್ಯಾ, ಜಾಗತೀಕರಣ ಮತ್ತು ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಆಧಾರದಲ್ಲಿ ಉಗ್ರ ನಿಗ್ರಹದತ್ತ ಗಮನಹರಿಸಿದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟಿನೊಂದಿಗೆ ಭಯೋತ್ಪಾದನೆಯಲ್ಲಿ ಹೊಸ ಪ್ರವೃತ್ತಿಗಳ ಬೆಳವಣಿಗೆಯನ್ನೂ ಗಮನದಲ್ಲಿಟ್ಟುಕೊಂಡು ಹೊಸದೊಂದು ಉಗ್ರ ನಿಗ್ರಹ ಮಿಲಿಟರಿ ಮೈತ್ರಿಕೂಟವನ್ನು ರಚಿಸುವ ಯೋಜನೆಗಳು ರಷ್ಯಾಗಿವೆ.

ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದತ್ತ ಗಮನಹರಿಸಿದರೆ ಸದ್ಯದ ರಷ್ಯಾ ಧೋರಣೆಗಳು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಭಾರತ-ರಷ್ಯಾ ಸ್ನೇಹ ಏರುಗತಿಯಲ್ಲೇ ಇತ್ತಾದರೂ, ಇತ್ತೀಚೆಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳ ಮೈತ್ರಿಯೊಂದಿಗೆ ರಷ್ಯಾ ಭಾರತ ಸಂಬಂಧಗಳಲ್ಲಿ ಏರುಪೇರಾಗಿರುವುದು ನಿಜ. ಅಂಕಿ ಅಂಶಗಳ ಪ್ರಕಾರವೂ ಭಾರತ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ರಷ್ಯಾಗಿಂತ ಅಮೆರಿಕಾದತ್ತ ಹೆಚ್ಚಿನ ಒಲವು ತೋರಿಸಿದೆಯಷ್ಟೇ ಅಲ್ಲದೆ ಅಮೆರಿಕಾದ ಜೊತೆ ಭಾರತದ ವ್ಯಾಪಾರ ವಹಿವಾಟುಗಳು ಹದಿನೈದು ಪಟ್ಟು ಹೆಚ್ಚಿದೆ. ಕಳೆದ ಸೆಪ್ಟೆಂಬರ್ ನಲ್ಲಿ ರಷ್ಯಾ ಮತ್ತು ಪಾಕಿಸ್ತಾನಗಳ ಮೊತ್ತ ಮೊದಲ ಜಂಟಿ ಸಮರಾಭ್ಯಾಸವೂ ಭಾರತಕ್ಕೆ ಎಚ್ಚರಿಕೆಯೆ ಘಂಟೆಯೇ ಸರಿ. ಇದೇ ವೇಳೆ ಸಮರತಾಂತ್ರಿಕ ಕಾರಣಗಳಿಂದ ಚೀನಾದ ಜೊತೆಗೂ ರಷ್ಯಾ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ರಷ್ಯಾ ಮತ್ತು ಚೀನಾ ಎಂಬೀ ಎರಡು ದೈತ್ಯ ಶಕ್ತಿಗಳು ವಿಶ್ವ ರಾಜಕೀಯವನ್ನು ಅಂಕೆಯಲ್ಲಿಟ್ಟುಕೊಳ್ಳುವ ಸಾಹಸದಲ್ಲಿ ಪರಸ್ಪರ ಸಹಕಾರ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಭಾರತದ ಮಟ್ಟಿಗೆ ಭವಿಷ್ಯದ ರಾಜಕೀಯ ನಡೆಗಳು ಹಲವಾರು ಸವಾಲುಗಳನ್ನು ಸೃಷ್ಟಿಸಲಿದೆ. ಎದುರಾಗಲಿರುವ ರಾಜಕೀಯ ಬಿಕ್ಕಟ್ಟು ಶೀತಲ ಸಮರಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಭಾರತ ತಟಸ್ಥವಾಗದೆ, ಇವುಗಳನ್ನು ಎದುರಿಸುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. 

ವಿಶ್ವಾದ್ಯಂತ ಚದುರಿ ಹೋಗಿರುವ ರಷ್ಯನ್ನರ ಜೊತೆ ಸಂಪರ್ಕ ಸಾಧಿಸಿ ಹೊಸ ಭಾವನಾತ್ಮಕ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿರುವುದು, ಆರ್ಥಿಕ ನೆರವು ನೀಡಿ ರಷ್ಯನ್ ಪ್ರಭಾವವೊಂದನ್ನು ಸೃಷ್ಟಿ ಮಾಡಿಕೊಳ್ಳುತ್ತಿರುವುದನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದವರಿಗೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಕಾನ್ಸೆಪ್ಟ್ ಸ್ಪಷ್ಟ ಉತ್ತರಗಳನ್ನು ನೀಡಿದೆ. ವಿಶ್ವದ ಮೂಲೆ ಮೂಲೆಗಳಿಗೂ ರಷ್ಯಾ ಕೈಗಳು ತಲುಪುವಂಥಾ ವಿದೇಶಾಂಗ ನೀತಿಯೊಂದು ಸಿದ್ಧವಾಗಿರುವುದರಿಂದ, ಮುಂದಿನ ರಷ್ಯಾ ವಿದೇಶಾಂಗ ನೀತಿ ಇನ್ನಷ್ಟು ಆಕ್ರಮಣಕಾರಿಯಾಗುವುದು ಖಚಿತ.

(This article was published in Hosa Digantha Newsapaper on 10 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಪ್ರಜಾಪ್ರಭುತ್ವದ ಶಕ್ತಿಯಲ್ಲೂ ರೊಹಿಂಗ್ಯಾಗಳಿಗಿಲ್ಲ ಮುಕ್ತಿ

ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಅಧಿಕಾರದ ಚುಕ್ಕಾಣಿ ಹಿಡಿದ ಸೂಕಿ ನೇತೃತ್ವದ ಪ್ರಜಾಪ್ರಭುತ್ವದ ಮೇಲಿದ್ದ ಆಶಾಗೋಪುರ ಕುಸಿದುಬಿದ್ದಿದೆ. ರೊಹಿಂಗ್ಯಾ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಿಶ್ವ ಸಮುದಾಯವನ್ನು ಅಣಕಿಸುವಂತೆ ಆಡಳಿತ ನಡೆಸುತ್ತಿದೆ ಸೂಕಿ ಸರಕಾರ.

Image may contain: 5 people
-  ಕೀರ್ತಿರಾಜ್

ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದವು. ಹಲವು ದಶಕಗಳ ನಿರಂಕುಶ ಆಡಳಿತಕ್ಕೆ ಕಳೆದ ವರ್ಷ ತೆರೆ ಎಳೆಯುವ ಪ್ರಯತ್ನವೊಂದರಲ್ಲಿ, ಚುನಾವಣೆಗಳು ನಡೆದು ಆಂಗ್ ಸಾನ್ ಸೂಕಿಯವರ ನೇತೃತ್ವದಲ್ಲಿ ಮ್ಯಾನ್ಮಾರ್ ಅರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿತ್ತು! ಹೌದು, ಮ್ಯಾನ್ಮಾರ್ ಸಂಪೂರ್ಣ ಪ್ರಜಾಪ್ರಭುತ್ವವಾಗಿ ಬದಲಾಗಲಿಲ್ಲ. ಸಾಂವಿಧಾನಿಕವಾಗಿ ಗೃಹ, ರಕ್ಷಣಾ ಮತ್ತು ಗಡಿ ವ್ಯವಹಾರಗಳ ಖಾತೆಗಳು ಮಿಲಿಟರಿ ಅಧೀನದಲ್ಲಿತ್ತು. ಪಾರ್ಲಿಮೆಂಟಿನಲ್ಲೂ ಮಿಲಿಟರಿ ಅಧಿಕಾರಿಗಳು ಗಮನಾರ್ಹ ಪ್ರಮಾಣದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ. ಮ್ಯಾನ್ಮಾರ್ ಗಳಿಸಿದ್ದು ಅರೆ ಪ್ರಜಾಪ್ರಭುತ್ವವೇ ಆದರೂ, ತನ್ನ ಇತಿಹಾಸದಿಂದ ಬಿಡುಗಡೆಯಾಗಿ ವಿಬಿನ್ನವಾಗಿ ದೇಶವನ್ನು ಹೊಸ ಮನ್ವಂತರದ ಕಡೆಗೊಯ್ಯಲಿದೆ ಎಂದು ವಿಶ್ವ ನಂಬಿತ್ತು. ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿದ್ದ, ಮಹಾನ್ ಪ್ರಜಾಪ್ರಭುತ್ವವಾದಿ ಮಾನವೀಯತಾವಾದಿ ಎಂಬಿತ್ಯಾದಿ ವಿಶೇಷಣಗಳಿಂದ ಗುರುತಿಸಿಕೊಂಡಿದ್ದ  ಆಂಗ್ ಸಾನ್ ಸೂಕಿ ಈ ಎಲ್ಲಾ ಭರವಸೆಗಳಿಗೆ ಮೂಲ ಕಾರಣರಾಗಿದ್ದರು. ಸೂಕಿ ಸರಕಾರ ಆಡಳಿತದಲ್ಲಿ ದಿನ ಸವೆಸುತ್ತಿದ್ದಂತೆ ಈ ಭರವಸೆಯೂ ಸವೆಯತೊಡಗಿತ್ತು. ಮ್ಯಾನ್ಮಾರ್ ತಳಮಟ್ಟದ ಸಮಸ್ಯೆಗಳಲ್ಲಿ ಕಿಂಚಿತ್ತೂ ಬದಲಾವಣೆ ಬರಲಿಲ್ಲ. ಕೆಲ ಸಮಸ್ಯೆಗಳಂತೂ ವಿಪರೀತಕ್ಕೆ ತಿರುಗಿಕೊಂಡಿದ್ದವು. ಇದರಲ್ಲಿ ಪ್ರಮುಖವಾದುದು ರೊಹಿಂಗ್ಯಾ ಜನಾಂಗದ ಸಮಸ್ಯೆ.

ಪಶ್ಚಿಮ ಮ್ಯಾನ್ಮಾರ್ ನ ರಾಖೈನ್ ಪ್ರಾಂತ್ಯದಲ್ಲಿ ಮ್ಯಾನ್ಮಾರ್ ಸರಕಾರ ಮತ್ತು ಮುಖ್ಯವಾಹಿನಿ ಸಮಾಜದಿಂದ ತಿರಸ್ಕೃತವಾಗಿ ವಾಸಿಸುತ್ತಿರುವ ಒಂದು ಅಲ್ಪಸಂಖ್ಯಾತ ಮುಸ್ಲಿಂ ಜನಾಂಗವೇ ರೊಹಿಂಗ್ಯಾ. ಸುಮಾರು ಒಂದು ಮಿಲಿಯನ್ ನಷ್ಟು ಜನಸಂಖ್ಯೆಯಿರುವ ರೊಹಿಂಗ್ಯಾ ಜನಾಂಗ ರಾಷ್ಟ್ರದೊಳಗಡೆ ಇದ್ದರೂ ಇವರಿಗೊಂದು ರಾಷ್ಟ್ರೀಯ ಅಸ್ಮಿತೆಯಿಲ್ಲ. ರೊಹಿಂಗ್ಯಾಗಳು ಆರೋಗ್ಯ, ಶಿಕ್ಷಣ ಮತ್ತಿತರ ಹಕ್ಕುಗಳನ್ನು ಅನುಭವಿಸುವಂತಿಲ್ಲ, ಇವೆಲ್ಲವುಗಳ ವಿರುದ್ಧ ಪ್ರತಿಭಟಿಸುವ ಹಕ್ಕು ಕೂಡ ಈ ಜನಾಂಗಕ್ಕಿಲ್ಲ! ಅಕ್ಟೊಬರ್ ನಲ್ಲಿ ಈ ಅಲ್ಪಸಂಖ್ಯಾತ ಗುಂಪಿನಿಂದ ನಡೆದ ಸಶಸ್ತ್ರ ದಂಗೆಯೊಂದಿಗೆ, ಸರಕಾರ ರಾಖೈನ್ ಪ್ರದೇಶವನ್ನು 'ಮಿಲಿಟರಿ ಕಾರ್ಯಾಚರಣೆಯ ವಲಯ' ಎಂದು ಘೋಷಿಸಿದೆ. ರಾಖೈನ್ ಪ್ರಾಂತ್ಯದಲ್ಲಿ ಅತ್ಯಾಚಾರ, ಸುಲಿಗೆ, ಕೊಲೆ ಇನ್ನಿತರ ಸರಕಾರಿ ಪ್ರಾಯೋಜಿತ ಅಮಾನವೀಯ ಕೃತ್ಯಗಳು ನಿರ್ಭಯವಾಗಿ ನಡೆಯುತ್ತದೆ. ಸ್ವತಂತ್ರ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವುದಿರಲಿ ಈ ಪ್ರದೇಶದೊಳಗಡೆ ಕಾಲಿಡುವಂತೆಯೂ ಇಲ್ಲ.

ವಿಶ್ವಸಂಸ್ಥೆ ದೃಢಪಡಿಸಿದ ವರದಿಗಳ ಪ್ರಕಾರ ಉತ್ತರ ರಾಖೈನ್ ಪ್ರದೇಶದ ಸುಮಾರು 3000 ಮಕ್ಕಳು ತೀವ್ರವಾದ ಅಪೌಷ್ಟಿಕತೆಯ ಖಾಯಿಲೆಯಿಂದ (Severe Acute Malnutrician - SAM) ನರಳುತ್ತಿದ್ದಾರೆ. ಸರಕಾರ ರಾಖೈನ್ ಪ್ರದೇಶವನ್ನು 'ಮಿಲಿಟರಿ ಕಾರ್ಯಾಚರಣೆಯ ವಲಯ' ಎಂದು ಘೋಷಿಸಿರುವುದರಿಂದ ಈ ಖಾಯಿಲೆಯಿಂದ ನರಳುತ್ತಿರುವ ಮಕ್ಕಳು ಚಿಕಿತ್ಸೆಯನ್ನೂ ಪಡೆಯಲಾಗುತ್ತಿಲ್ಲ. ಮಾನವ ಹಕ್ಕುಗಳನ್ನು ಗುತ್ತಿಗೆ ತೆಗೆದುಕೊಂಡಂತೆ ಭಾಷಣ ಮಾಡುತ್ತಿದ್ದ ಆಂಗ್ ಸಾನ್ ಸೂಕಿ ಈ ವಿಷಯಗಳ ಕುರಿತಾಗಿ ಬಾಯಿ ಬಿಡುತ್ತಿಲ್ಲ. ಸೂಕಿ ಸರಕಾರವಂತೂ ಸೇನೆಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ. ಮ್ಯಾನ್ಮಾರ್ ಪಾರ್ಲಿಮೆಂಟ್ ನ ಸದಸ್ಯ ಆಂಗ್ ವಿನ್ ಬಿ.ಬಿ.ಸಿ ವಾಹಿನಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಿಲಿಟರಿ ರೊಹಿಂಗ್ಯಾ ಮಹಿಳೆಯರ ಮೇಲೆಸಗುತ್ತಿದ್ದ ಅತ್ಯಾಚಾರಗಳನ್ನು ಅಲ್ಲಗೆಳೆಯುತ್ತಾ, ರೊಹಿಂಗ್ಯಾ ಮಹಿಳೆಯರನ್ನು ಯಾವ ಸೈನಿಕನೂ ಮುಟ್ಟಲಾರ ಏಕೆಂದರೆ ಅವರು ಅಷ್ಟೊಂದು ಗಲೀಜಾಗಿದ್ದಾರೆ ಎಂದು ಬಿಟ್ಟಿದ್ದ! ಓರ್ವ ಸಂಸದ ನೀಡಿದ ಈ ವಿಕೃತಿಯೇ ಮೈವೆತ್ತಂತಿರುವ ಹೇಳಿಕೆ ರೊಹಿಂಗ್ಯಾಗಳ ಕುರಿತಾಗಿ ಮ್ಯಾನ್ಮಾರ್ ನ ಮುಖ್ಯವಾಹಿನಿ ಸಮಾಜದ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. 

ವಿಶ್ವದಲ್ಲಿ ನಡೆಯುವ ಸಂಚು ಪಿತೂರಿಗಳಲ್ಲಿ ರೊಹಿಂಗ್ಯಾಗಳ ಪಾತ್ರವಿರುತ್ತದೆ ಎಂಬ ಪೂರ್ವಾಗ್ರಹ ಮ್ಯಾನ್ಮಾರ್ ಜನತೆಯಲ್ಲಿ ಬೇರೂರುವಂತೆ ಮಾಡಲಾಗಿದೆ. ಮ್ಯಾನ್ಮಾರ್ ಉಳಿವಿಗಾಗಿ ರೊಹಿಂಗ್ಯಾಗಳ ನಾಶ ಅನಿವಾರ್ಯ ಎಂಬಂತೆ ಮಹಾಮಾನವೀಯತಾವಾದಿ ಸೂಕಿ ಸರಕಾರವೇ ವರ್ತಿಸುತ್ತಿರುವಾಗ, ರೊಹಿಂಗ್ಯಾಗಳನ್ನು ರಕ್ಷಿಸುವವರಾರು? ಸೂಕಿ ಸರಕಾರೀ ಪ್ರಾಯೋಜಿತ ಪತ್ರಿಕೆ The Global Light of Myanmar ರಾಖೈನ್ ನಲ್ಲಿ ನಡೆಯುತ್ತಿರುವ ಮಿಲಿಟರಿ ಅತ್ಯಾಚಾರ ಹಿಂಸೆಗಳನ್ನು ಸಮರ್ಥಿಸಿಕೊಳ್ಳುತ್ತಾ 'The thorn needs removing if it pierces' ಎಂಬ ಶೀರ್ಷಿಕೆಯೊಂದಿಗೆ ರೊಹಿಂಗ್ಯಾಗಳನ್ನು ಬೇರು ಸಮೇತ ಕಿತ್ತುಹಾಕುವುದು ಮ್ಯಾನ್ಮಾರ್ ಸರಕಾರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬರ್ಥದ ಲೇಖನವೊಂದು ಪ್ರಕಟವಾಗಿತ್ತು. ವಿಶ್ವಸಂಸ್ಥೆಗೆ ರಾಖೈನ್ ಪ್ರಾಂತ್ಯದ ಬಗ್ಗೆ ವರದಿ ಒಪ್ಪಿಸುತ್ತಿರುವ ಅರಕನ್ ಪ್ರಾಜೆಕ್ಟ್ ನ ನಿರ್ದೇಶಕ ಕ್ರಿಸ್ ಲೆವಾ ಹೇಳುವಂತೆ, "ನೂರಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ, ನೂರಾರು ಜನರನ್ನು ಜೈಲಿಗಟ್ಟಲಾಗಿದೆ, ಕಣ್ಣಿಗೆ ಕಂಡವರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ ಮತ್ತು ರೊಹಿಂಗ್ಯಾಗಳನ್ನು ಅವರದ್ದೇ ಮನೆಗಳಲ್ಲಿ ಸುಟ್ಟು ಕೊಲ್ಲಲಾಗುತ್ತಿದೆ." ಹೀಗೆ ಸೂಕಿ ಆಡಳಿತದಲ್ಲೂ ನಿರಾತಂಕವಾಗಿ ಮುಂದುವರಿದಿದೆ ಜನಾಂಗೀಯ ವಿನಾಶ! (Ethnic Cleansing)

ರೊಹಿಂಗ್ಯಾ ಹಿಂಸೆಯಲ್ಲಿ ಸ್ವತಃ ಮ್ಯಾನ್ಮಾರ್ ಸರಕಾರವೇ ಒಳಗೊಂಡಿರುವುದರಿಂದಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇಲ್ಲಿಯವೆರೆಗೆ ಸೂಕಿ ಸರಕಾರ ಈ ಕುರಿತಾಗಿ ಯಾವುದೇ ಅಂತರಾಷ್ಟ್ರಿಯ ತನಿಖೆಯನ್ನು ವಿರೋಧಿಸುತ್ತಲೇ ಬಂದಿದೆ. ಮ್ಯಾನ್ಮಾರ್ ಸರಕಾರ ರಚಿಸಿದ್ದ ಹೊಸ ತನಿಖಾ ತಂಡದ ನೇತೃತ್ವ ವಹಿಸಿದ್ದು ವಿಶ್ವಸಂಸ್ಥೆಯಿಂದ ಕಪ್ಪು ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದ ಮ್ಯಾನ್ಮಾರ್ ಮಾಜಿ ಸೇನಾಧಿಕಾರಿ. ಇದೇ ವ್ಯಕ್ತಿಗೆ 2007ರಲ್ಲಿ ನಡೆದ ದಂಗೆಗಳನ್ನು ಅಮಾನವೀಯವಾಗಿ ದಮನಿಸಿದ ಕುಖ್ಯಾತಿಯೂ ಇದೆ. ಇಂಥ ಪೂರ್ವನಿಯೋಜಿತ ಉದ್ದೇಶಗಳಿರುವ ಆಂತರಿಕ ತನಿಖೆಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವೇ ಸರಿ. ಅಂತರಾಷ್ಟ್ರೀಯ ಮಾಧ್ಯಮಗಳ ಜೊತೆಗಿನ ಸಂದರ್ಶನದಲ್ಲಿ ಸೂಕಿ, "ಜಾಗತಿಕ ಸಮುದಾಯ ಮ್ಯಾನ್ಮಾರ್ ನ ಋಣಾತ್ಮಕ ಅಂಶಗಳ ಕಡೆಗೆ ಮಾತ್ರ ಗಮನ ನೀಡುತ್ತಿದೆ" ಎಂದಿದ್ದ ಸೂಕಿ ವಿಶ್ವಸಂಸ್ಥೆ ರೊಹಿಂಗ್ಯಾ ಕುರಿತಾಗಿ ಕಾಳಜಿ ವ್ಯಕ್ತಪಡಿಸಿದಾಗ, "ಮಾನವ ಹಕ್ಕುಗಳು ಉಲ್ಲಂಘನೆಯಾಗದ ಯಾವುದಾದರೊಂದು ದೇಶವನ್ನು ನನಗೆ ತೋರಿಸಿ" ಎಂದು ಜವಾಬ್ದಾರಿಯಿಂದ ನಾಜೂಕಾಗಿ ಜಾರಿಕೊಂಡುಬಿಟ್ಟರು.

ಮಿಲಿಟರಿ ಆಡಳಿತಕ್ಕೆ ಸಡ್ಡು ಹೊಡೆದು ಆಂಗ್ ಸಾನ್ ಸೂಕಿ ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಅಧಿಕಾರದ ಚುಕ್ಕಾಣಿ ಹಿಡಿದಾಗ, ಮ್ಯಾನ್ಮಾರ್ ಮಾತ್ರವಲ್ಲದೇ ವಿಶ್ವಾದ್ಯಂತ ಜನರ ಕಣ್ಣಲ್ಲಿ ಭರವಸೆಯ ಆಶಾಕಿರಣ ಕಂಡಿತ್ತು. ಸೂಕಿ ಆಡಳಿತದ ವೈಖರಿ ಬದಲಾಯಿಸುತ್ತಾರೆ ಎಂದು ಯೋಚಿಸಿದ್ದವರಿಗೆ ಆಡಳಿತವೇ ಸೂಕಿಯವರನ್ನು ಬದಲಾಯಿಸುತ್ತದೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ನೊಬೆಲ್ ಶಾಂತಿ ಪಾರಿತೋಷಕ ಪುರಸ್ಕೃತ ಸೂಕಿ ಆಡಳಿತದ ನೆರಳಲ್ಲೇ ರೊಹಿಂಗ್ಯಾಗಳ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆಗಳು ವಿಶ್ವರಾಜಕೀಯದ ವಿರೋಧಾಭಾಸಗಳಲ್ಲೊಂದು.  ವಿಶ್ವ ಕಂಡ ಮಹಾನ್ ದಾರ್ಶನಿಕರಲ್ಲೊಬ್ಬರಾದ ಪ್ಲೇಟೊ ಹೇಳುತ್ತಾರೆ, "ತತ್ವಜ್ಞಾನಿಗಳು ರಾಜರಾಗುವವರೆಗೆ ಅಥವಾ ಆಳುವವರು ನಿಜಕ್ಕೂ ತತ್ವಜ್ಞಾನಿಗಳಾಗುವವರೆಗೆ ರಾಜ್ಯ ಮತ್ತು ಮಾನವಕುಲದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಇದಕ್ಕಾಗಿ ತತ್ವಜ್ಞಾನ ಮತ್ತು ರಾಜಕೀಯ ಶಕ್ತಿ ಒಂದೇ ಕೈ ಸೇರುವಂತಾಗಬೇಕು" ಆದರ್ಶವಾದಿ ಪ್ಲೇಟೊ ಮಾತುಗಳು ವಾಸ್ತವಿಕ ರಾಜಕೀಯದಲ್ಲಿ ಕಾರ್ಯಾಚರಣೆಗಿಳಿಸಲಾಗದೇ ಹೋದರೂ ಮುಂದಿನ ದಿನಗಳಲ್ಲಾದರೂ ಮ್ಯಾನ್ಮಾರ್ ನಾಗರಿಕ ಸರಕಾರ ಈ ಬಗೆಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಕೈಗೊಳ್ಳುವಂತಾಗಲಿ.

(This article was published in Varthabharathi Newsapaper on 10 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶುಕ್ರವಾರ, ಜನವರಿ 6, 2017

ಪ್ರಾದೇಶಿಕ ಸ್ಥಿರತೆಯ ನಿರೀಕ್ಷೆಯಲ್ಲಿ ಭಾರತ-ಜಪಾನ್ ಮೈತ್ರಿ

ಭಾರತ ಮತ್ತು ಜಪಾನ್ ಮೈತ್ರಿ ಈ ಎರಡು ದೇಶಗಳ ಭದ್ರತೆಯ ಪ್ರಶ್ನೆ ಮಾತ್ರವಲ್ಲ, ಏಷ್ಯಾದ ಸ್ಥಿರತೆ ಮತ್ತು ಭವಿಷ್ಯ ರೂಪಿಸುವಲ್ಲೂ ಈ ಮೈತ್ರಿ ಮುಖ್ಯಪಾತ್ರ ವಹಿಸಲಿದೆ. ಚದುರಂಗದಾಟದಲ್ಲಿ ತಾನು ನಡೆದಿದ್ದೇ ದಾರಿ ಎಂದುಕೊಂಡಿರುವ ಚೀನಾಗೆ ಚೆಕ್ ಮೇಟ್ ಇಡುವ ಪ್ರಯತ್ನವೊಂದು ಜಾರಿಯಲ್ಲಿದೆ.
-  ಕೀರ್ತಿರಾಜ್


ಮಿತ್ರ ರಾಷ್ಟ್ರಗಳಿಗೆ ಅಮೆರಿಕಾ ನೀಡುತ್ತಿದ್ದ ರಕ್ಷಣಾ ನೆರವಿನ ವಿರುದ್ಧ ಅಸಡ್ಡೆ ವ್ಯಕ್ತಪಡಿಸುತ್ತಿರುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗಳಲ್ಲಿ  ಜಯಗಳಿಸುತ್ತಿದ್ದಂತೆ, ಅಮೆರಿಕಾದ ಮಿತ್ರ ರಾಷ್ಟ್ರಗಳು ತಮ್ಮ ತಮ್ಮ ಭದ್ರತೆಯನ್ನು ಬಲ ಪಡಿಸಿಕೊಳ್ಳಲು ಅನ್ಯದಾರಿ ಹುಡುಕಿಕೊಳ್ಳುವಲ್ಲಿ ನಿರತವಾಗಿವೆ. ದಶಕಗಳಿಂದ ಅಮೆರಿಕಾದ ರಕ್ಷಣೆಯಲ್ಲಿದ್ದ ಜಪಾನ್ ಕೂಡ, ಸದ್ಯದ ವಿದ್ಯಮಾನಗಳಿಂದ ಎಚ್ಚೆತ್ತುಕೊಂಡು ತನ್ನ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚೀನಾ ಆಕ್ರಮಣಕಾರಿ ನಡೆಗಳಿಗೆ ತಕ್ಕ ಉತ್ತರ ನೀಡಿ ಪ್ರಾದೇಶಿಕ ಸ್ಥಿರತೆ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಜಪಾನ್, ಸಮಾನಮನಸ್ಕ ಮಿತೃರಿಗಾಗಿ ಹುಡುಕಾಟ ನಡೆಸಿದೆ. ಇವೆಲ್ಲವುಗಳ ಫಲಿತಾಂಶವೇ ಬೆಳೆಯುತ್ತಿರುವ ಭಾರತ- ಜಪಾನ್ ಬಾಂಧವ್ಯ. ನವೆಬರ್ 11ರಂದು ಪ್ರಧಾನಿ ಮೋದಿಯವರು ಜಪಾನ್ ಗೆ ನೀಡಿದ ಭೇಟಿ ಹಾಗೂ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಈ ಎರಡು ದೇಶಗಳ ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ತಿರುವು ನೀಡಿದ್ದಲ್ಲದೇ, ಅಣು ಸಹಕಾರ, ಭಯೋತ್ಪಾದನಾ ನಿಗ್ರಹ, ಪ್ರಾದೇಶಿಕ ಸ್ಥಿರತೆಯಲ್ಲಿ ಸಮನ್ವಯ ಮತ್ತು ರಕ್ಷಣಾ ವಲಯದ ಸಹಕಾರಗಳಲ್ಲಿ ಮಾರ್ಮಿಕ ಬದಲಾವಣೆಗಳನ್ನು ತರಲಿದೆ.

ಆರು ವರ್ಷಗಳ ಸುದೀರ್ಘ ಮಾತುಕತೆಗಳು ಮತ್ತು ಏರಿಳಿತಗಳ ನಂತರ ಭಾರತ ಮತ್ತು ಜಪಾನ್ ನಾಗರಿಕ ಅಣು ಒಪ್ಪಂದ ಒಂದು ಹಂತಕ್ಕೆ ತಲುಪಿದೆ. ಭಾರತದ ಹೊರತಾಗಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ಯಾವುದೇ ದೇಶದ ಜೊತೆಗೂ ಜಪಾನ್ ಈ ಮಟ್ಟದ ವಿಶ್ವಾಸ ತೋರಿಸಿಲ್ಲ ಎನ್ನುವುದು ಈ ಒಪ್ಪಂದದ ವಿಶೇಷತೆ. ಪ್ರಧಾನಿ ಮೋದಿಯವರ ಜಪಾನ್ ಭೇಟಿ ನಾಗರಿಕ ಅಣು ಒಪ್ಪಂದವಷ್ಟೇ ಅಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.  ನವೆಬರ್ 11ರಂದು 'ಅಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರದ ಒಪ್ಪಂದ' ಕೆಲವೊಂದು ಅಡೆತಡೆಗಳ ಹೊರತಾಗಿಯೂ ಅಂತರಾಷ್ಟ್ರೀಯ ರಾಜಕೀಯದಲ್ಲಿ ದಿಟ್ಟ ಹೆಜ್ಜೆಯೇ ಸರಿ. ಭಾರತದ ಎನ್.ಎಸ್.ಜಿ ಸದಸ್ಯತ್ವವನ್ನು ಚೀನಾ ಬಲವಾಗಿ ವಿರೋಧಿಸುತ್ತಿರಲು ಬೆಳೆಯುತ್ತಿರುವ ಭಾರತ ಜಪಾನ್ ಗಳ ಮಿತೃತ್ವವೂ ಕಾರಣ ಎಂಬುದನ್ನು ತಳ್ಳಿಹಾಕುವಂತಿಲ್ಲ. ಉರಿ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ ಹಲವಾರು ದಿಟ್ಟ ಕ್ರಮ ಕೈಗೊಂಡಿರುವ ಭಾರತ, ಭಯೋತ್ಪಾದನೆಯ ಬಗೆಗೂ ಸ್ಪಷ್ಟ ವಿದೇಶಾಂಗ ನೀತಿ ರೂಪಿಸಿ ವಿಶ್ವ ಶಕ್ತಿಗಳ ಬೆಂಬಲ ಗಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿದೆ. ಈವರೆಗೆ ಭಾರತ ಮತ್ತು ಪಾಕಿಸ್ತಾನಗಳ ವಿಚಾರದಲ್ಲಿ ಸಮತೋಲನ ಕಾಯ್ದುಕೊಂಡಿದ್ದ ಜಪಾನ್ ಇದೀಗ ಸ್ಪಷ್ಟವಾಗಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದು ಭಾರತದ ಪಾಲಿಗೆ ಭಾರೀ ರಾಜತಾಂತ್ರಿಕ ಯಶಸ್ಸೇ ಸರಿ. ಜಂಟಿ ಹೇಳಿಕೆಯೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನ ಮತ್ತು ಪಾಕ್ ಪ್ರಾಯೋಜಿತ ಭಯೋತ್ಪಾದಕರ ವಿರುದ್ದ ನೇರವಾಗಿ ಕಿಡಿ ಕಾರಿರುವ ಜಪಾನ್, ಭಯೋತ್ಪಾದನಾ ನಿಗ್ರಹದಲ್ಲಿ ಭಾರತದ ಪ್ರಯತ್ನಕ್ಕೆ ಹೆಗಲು ನೀಡುವ ಆಶಯ ವ್ಯಕ್ತಪಡಿಸಿದೆ.

Image may contain: 3 peopleಪ್ರಾದೇಶಿಕ ಮಟ್ಟದ ಭದ್ರತೆಯಲ್ಲೂ ಭಾರತ ಮತ್ತು ಜಪಾನ್ ಗಳೂ ಮುಖ್ಯ ಪಾತ್ರವಹಿಸುವಲ್ಲಿ ಎರಡೂ ದೇಶಗಳ ನಾಯಕರು ಉತ್ಸುಕರಾಗಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಭಾವಕ್ಕೆ ಪ್ರತ್ಯುತ್ತರ ನೀಡಿ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಜಪಾನ್ ಗಳು ಒಂದುಗೂಡಲಿವೆ. ದಕ್ಷಿಣ ಚೀನಾ ಸಮುದ್ರ ವಿವಾದಕ್ಕೂ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಏಷ್ಯಾದ ಈ ಎರಡು ರಾಷ್ಟ್ರಗಳ ಉಪಸ್ಥಿತಿ ಮತ್ತು ಪಾಲುದಾರಿಕೆ ಅವಶ್ಯಕ ಮತ್ತು ಇಂಥದ್ದೊಂದು ಪ್ರಕ್ರಿಯೆ ಜಾರಿಯಲ್ಲಿರುವುದು ಚೀನಾ ಬೆಚ್ಚಿ ಬೀಳುವಂತೆ ಮಾಡಿದೆ. ಜಪಾನ್ ಮತ್ತು ಭಾರತಗಳೆರಡೂ ಜಂಟಿಯಾಗಿ ನಿರ್ಮಿಸುತ್ತಿರುವ ಇರಾನ್ ನ ಚಬಾರ್ ಬಂದರು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗಳನ್ನು ಸಂಪರ್ಕಿಸಲು ಮಹತ್ವದ ಹೆಜ್ಜೆಯಾಗಲಿದೆ. ಚಬಾರ್ ಬಂದರು ಪ್ರಮುಖ ತೈಲ ಸಾಗಾಟದ ಮಾರ್ಗಗಳಿಗೆ ಹತ್ತಿರವಾಗಿದ್ದು ಆರ್ಥಿಕವಾಗಿಯೂ ಅನುಕೂಲಕರ ಸ್ಥಿತಿಯಲ್ಲಿದೆ. ಈಗಾಗಲೇ ಮಧ್ಯ ಏಷ್ಯಾದಲ್ಲಿ ಹಿಡಿತ ಬಿಗಿಗೊಳಿಸುತ್ತಿರುವ ಪಾಕ್-ಚೀನಾ ಜೋಡಿಗೆ ಪ್ರತ್ಯುತ್ತರ ನೀಡುವ ಜರೂರತ್ತಿನಲ್ಲಿದ್ದ ಭಾರತಕ್ಕೆ ಸಮರ್ಥ ಜೊತೆ ನೀಡಲು ಜಪಾನ್ ಮುಂದೆ ಬಂದಿರುವುದು ಈ ಪ್ರಾದೇಶಿಕ ಪೈಪೋಟಿಯನ್ನು ಮತ್ತಷ್ಟು ರೋಚಕವನ್ನಾಗಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಭಾರತದ ನೌಕಾದಳ ಮತ್ತು ಅಲ್ಲಿರುವ ವಾಯುನೆಲೆಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಜಪಾನ್ ಆರ್ಥಿಕ ಮತ್ತು ತಂತ್ರಜಾನದ ನೆರವು ನೀಡಲು ಸಿದ್ಧವಾಗಿದೆ. ಈ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚೀನಾ ಜಲಾಂತರ್ಗಾಮಿ ನೌಕೆಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿಯೂ ಜಪಾನ್ ಮತ್ತು ಭಾರತಗಳ ಸಮರತಾಂತ್ರಿಕ ಜಾಲ ಕಾರ್ಯನಿರ್ವಹಿಸಲಿದೆಯಷ್ಟೇ ಅಲ್ಲದೇ ಈ ಸರಪಳಿ ಮುಂದುವರಿದು ಜಪಾನ್-ಅಮೆರಿಕಾಗಳ 'ಫಿಶ್ ಹಿಕ್' ಕಣ್ಗಾವಲು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲಿದೆ! ಈ ಮೂಲಕ ಭಾರತ-ಅಮೆರಿಕಾ-ಜಪಾನ್ ಗಳನ್ನೊಳಗೊಂಡ ಬಲಿಷ್ಟ ಸಾಗರ ಸಮರ ಮೈತ್ರಿಯೊಂದು ಚೀನಾ ಆಕ್ರಮಣಕ್ಕೆ ತಡೆಯಾಗಿ ನಿಲ್ಲಬಲ್ಲುದು.

ವರ್ಷದ ಕೊನೆಯಲ್ಲಿ ಭಾರತ ಜಪಾನ್ ಮತ್ತು ಅಮೆರಿಕಾಗಳ ನೌಕಾಶಕ್ತಿಗಳು ಸೇರಿಕೊಂಡು ಮಲಬಾರ್ ಸಾಗರ ಸಮರಾಭ್ಯಾಸವೊಂದನ್ನು ನಡೆಸಿದ್ದು ಸ್ಪಷ್ಟವಾಗಿ ಚೀನಾದ ಆಕ್ರಮಣಕ್ಕೊಂದು ಎಚ್ಚರಿಕೆಯೇ ಸರಿ. ಈ ಬೃಹತ್ ಸಮರಾಭ್ಯಾಸದಲ್ಲಿ ಪಾಲ್ಗೊಂಡ ನೌಕಾಶಕ್ತಿಗಳು ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನೀ ಜಲಾಂತರ್ಗಾಮಿಗಳ ಆಟಾಟೋಪಗಳನ್ನು ನಿಯಂತ್ರಿಸಲಿದೆ. 1992ರಲ್ಲೇ ಭಾರತ ಮತ್ತು ಅಮೆರಿಕಾಗಳ ಜಂಟಿ ಸಮರಾಭ್ಯಾಸದ ರೂಪದಲ್ಲಿ ಮಲಬಾರ್ ಸಮರಾಭ್ಯಾಸ ಅಸ್ತಿತ್ವದಲ್ಲಿತ್ತು. 2007ರಲ್ಲಿ ಜಪಾನ್ ನೌಕಾದಳ ಸೇರಿಕೊಳ್ಳುವುದರೊಂದಿಗೆ ಇದೊಂದು ತ್ರಿವಳಿ ಶಕ್ತಿಗಳ ಸಂಗಮವಲ್ಲದೆ, ಹೆಚ್ಚಿನ ವ್ಯಾಪ್ತಿಯ ಸಾಗರ ಪ್ರದೇಶಗಳವರೆಗೆ ತನ್ನ ಪ್ರಭಾವ ವೃದ್ಧಿಸಿಕೊಂಡಿತ್ತು. ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಚಾಣಕ್ಯನೀತಿಯಂತೆ, ಅಮೆರಿಕಾ ಮತ್ತು ಜಪಾನ್ ಗಳ ಸ್ವಹಿತಾಸಕ್ತಿಗಳು ಏನೇ ಇದ್ದರೂ ಸಮರತಾಂತ್ರಿಕ ದೃಷ್ಟಿಯಿಂದ ಈ ಬೆಳವಣಿಗೆ ಭಾರತದ ಪರವಾಗಿಯೇ ಇದೆ. 

ರಕ್ಷಣಾ ವಲಯದಲ್ಲೂ ಭಾರತ ಮತ್ತು ಜಪಾನ್ ಗಳು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಪ್ರವೃತ್ತವಾಗಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ತಂತ್ರಜಾನದ ಬೆಳವಣಿಗೆಯಲ್ಲಿ ಈ ಎರಡೂ ದೇಶಗಳ ಸಹಕಾರ ಮತ್ತು ಸಮನ್ವಯದ ಅವಶ್ಯಕತೆಯನ್ನೂ ಪುನರ್ ಪ್ರಸ್ತಾವಿಸಿದ್ದು ಇದರ ಮಹತ್ವಕ್ಕೆ ಸಾಕ್ಷಿ. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ರಕ್ಷಣೆ ಮತ್ತು ಅಂತರಿಕ್ಷಯಾನ ಜಪಾನ್ ತನ್ನನ್ನು ತಾನು ಧನಾತ್ಮಕವಾಗಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಈಗಾಗಲೇ US-2 ಯುದ್ಧವಿಮಾನಗಳ ವಿಚಾರದಲ್ಲಿ ಭಾರತ ಮತ್ತು ಜಪಾನ್ ಗಳ ಮಧ್ಯೆ ವಿಚಾರ ವಿನಿಮಯ ಧನಾತ್ಮಕ ಪರಿಣಾಮಗಳತ್ತ ಹೊರಳಿಕೊಳ್ಳುತ್ತಿದೆ. 2016ರ ವಾರ್ಷಿಕ ಶೃಂಗಸಭೆಯೂ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಜಪಾನ್ ಗಳು ಮಹತ್ತರ ಪಾತ್ರ ವಹಿಸಲಿದೆ ಎನ್ನುವುದನ್ನು ಮರುದೃಡಿಕರಿಸಿದೆ. ಪ್ರಾದೇಶಿಕ ಹಿತಾಸಕ್ತಿಗಳ ವಿಚಾರದಲ್ಲೂ ಈ ಎರಡೂ ದೇಶಗಳ ಆಶಯ ಆಸಕ್ತಿಗಳಲ್ಲಿ ಸಾಮ್ಯತೆಗಳಿದ್ದು, ಭಾರತ ಮತ್ತು ಜಪಾನ್ ಗಳ ಸಮರತಾಂತ್ರಿಕ ಹಾಗೂ ರಾಜತಾಂತ್ರಿಕ ಬಾಂಧವ್ಯ ಇನ್ನಷ್ಟು ವಿಸ್ತಾರಗೊಳ್ಳುವುದರಲ್ಲಿ ಅನುಮಾನವಿಲ್ಲ. ಎರಡು ರಾಷ್ಟ್ರಗಳ ವೈಯಕ್ತಿಕ ಭದ್ರತೆಗಳಷ್ಟೇ ಅಲ್ಲದೇ, ಏಷ್ಯಾ ಪ್ರಾದೇಶಿಕ ರಾಜಕೀಯಕ್ಕೊಂದು ನೈತಿಕ ಸ್ಥೈರ್ಯ ತುಂಬುವಲ್ಲೂ ಇಂಥದ್ದೊಂದು ಮೈತ್ರಿಯ ಅವಶ್ಯಕತೆಯಿದೆ. 


(This article was published in Hosa Digantha Newsapaper on 06 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗಣತಂತ್ರದತ್ತ ಸಾಗುತ್ತಿದೆ ಆಸ್ಟ್ರೇಲಿಯಾ ರಾಜಕೀಯ ವ್ಯವಸ್ಥೆ

ಎಲ್ಲೋ ಇರುವ ರಾಷ್ಟ್ರವೊಂದರ ರಾಣಿ ತಮ್ಮ ರಾಜಕೀಯ ವ್ಯವಸ್ಥೆಯ ಮುಖ್ಯಸ್ಥರಾಗಿರುವುದು ಆಸ್ಟ್ರೇಲಿಯನ್ನರಿಗೆ ಅಹಿತ ಎನಿಸುತ್ತಿದೆ. ದಿನೇ ದಿನೇ ಆಸ್ಟ್ರೇಲಿಯಾ ಬ್ರಿಟನ್ ರಾಜಪ್ರಭುತ್ವವನ್ನು ಮೂಲೆಗೆಸೆದು ಗಣರಾಜ್ಯವಾಗುತ್ತ ಹೆಚ್ಚು ಒಲವು ತೋರಿಸುತ್ತಿದೆ.
-  ಕೀರ್ತಿರಾಜ್


ಶತಮಾನಗಳವರೆಗೆ ತನ್ನ ಪ್ರಪಂಚದ ಮೂಲೆ ಮೂಲೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ರಾಷ್ಟ್ರ ಬ್ರಿಟನ್. ಸೂರ್ಯ ಮುಳುಗದ ಸಾಮ್ರಾಜ್ಯವೂ ಕೊನೆಗೊಂದು ಬಾರಿ ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ಕೈಬಿಟ್ಟು, ವಸಾಹತುಗಳಿಗೆಲ್ಲಾ ಮುಕ್ತಿ ನೀಡಬೇಕಾಗುತ್ತದೆ. ಬಹಳಷ್ಟು ವರ್ಷಗಳ ಕಾಲ ಬ್ರಿಟನ್ ರಾಜ/ರಾಣಿಯ ಹೆಸರಿನಲ್ಲಿ ಆಳಲ್ಪಟ್ಟ ಬೇರೆ ಬೇರೆ ವಸಾಹತುಗಳು ಸ್ವತಂತ್ರ ದೇಶಗಳಾಗಿ ಉದ್ಭವಿಸಿದಾಗ, ಬ್ರಿಟನ್ ನ ಹಳೆಯ ವಸಾಹತುಗಳಿಗಾಗಿ ಒಂದು ಸಂಘದ ಅವಶ್ಯಕತೆಯ ಬಗೆಗೆ ಚರ್ಚೆಗಳಾಗುತ್ತವೆ. 1884ರಲ್ಲಿ ಲಾರ್ಡ್ ರೋಸ್ಬೆರಿ ಎಂಬ ಬ್ರಿಟಿಷ್ ರಾಜಕಾರಣಿ ಬದಲಾಗುತ್ತಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು "ಕಾಮನ್ ವೆಲ್ತ್ ರಾಷ್ಟ್ರಗಳು" (Commonwealth of Nations) ಎಂಬ ಹೆಸರಿನಿಂದ ಗುರುತಿಸುತ್ತಾರೆ. ಮುಂದೆ 1931ರ ವೆಸ್ಟ್ ಮಿನಿಸ್ಟರ್ ಕಾಯಿದೆಯ ಅಡಿಯಲ್ಲಿ 'ಬ್ರಿಟಿಷ್ ಕಾಮನ್ ವೆಲ್ತ್ ರಾಷ್ಟ್ರಗಳು' ಎಂಬ ಅಧಿಕೃತ ಸಂಸ್ಥೆಯೊಂದು ಸ್ಥಾಪಿಸಲ್ಪಟ್ಟಿತ್ತು. 1946ರಲ್ಲಿ ಸಂಸ್ಥೆಯ ಹೆಸರಲ್ಲಿ 'ಬ್ರಿಟಿಷ್' ಎಂಬ ಪದವನ್ನು ಕೈ ಬಿಟ್ಟು, 'ಕಾಮನ್ ವೆಲ್ತ್ ರಾಷ್ಟ್ರಗಳು' ಎಂದಾಗುತ್ತದೆ. ಬ್ರಿಟನ್, ಕೆನಡ, ಐರ್ಲ್ಯಾಂಡ್, ನ್ಯೂಫೌಂಡ್ ಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದ ಒಕ್ಕೂಟಗಳು ಈ ಸಂಘದ ಆರಂಭಿಕ ಸದಸ್ಯತ್ವ ಪಡೆದುಕೊಂಡವು. ಇವುಗಳಲ್ಲಿ ಐರ್ಲ್ಯಾಂಡ್ 1949ರಲ್ಲಿ ಕಾಮನ್ ವೆಲ್ತ್ ಬಿಟ್ಟುಹೋದರೆ, ನ್ಯೂಫೌಂಡ್ ಲ್ಯಾಂಡ್ ಕೆನಡದ ಭಾಗವಾಯ್ತು. ದಕ್ಷಿಣ ಆಫ್ರಿಕಾ 1961ರಲ್ಲಿ ಕಾಮನ್ ವೆಲ್ತ್ ನಿಂದ ಹೊರಬಿದ್ದು, 1994 ರಲ್ಲಿ ಮತ್ತೆ ಕಾಮನ್ ವೆಲ್ತ್ ನ ಸದಸ್ಯತ್ವ ಪಡೆದುಕೊಂಡಿತ್ತು.

ಆಸ್ಟ್ರೇಲಿಯಾ 1942ರಲ್ಲಿ ಮತ್ತು ನ್ಯೂಜಿಲೆಂಡ್ 1942ರಲ್ಲಿ ಸದಸ್ಯರಾದರೆ, ಭಾರತದ ಸ್ವಾತಂತ್ರ್ಯದೊಂದಿಗೆ ಭಾರತವೂ ಕಾಮನ್ ವೆಲ್ತ್ ನ ಭಾಗವಾಗಿರಲು ಬಯಸಿತ್ತು. ಕಾಮನ್ ವೆಲ್ತ್ ಸದಸ್ಯರೆಲ್ಲರೂ ಬ್ರಿಟನ್ ನ ರಾಜ ಅಥವಾ ರಾಣಿಯನ್ನು ತಮ್ಮ ರಾಷ್ಟ್ರದ ಮುಖ್ಯಸ್ಥ ಎಂದು ಒಪ್ಪಿಕೊಳ್ಳಬೇಕಾಗಿತ್ತು. ಆದರೆ ಭಾರತ ಬ್ರಿಟನ್ ನ ರಾಜ/ರಾಣಿಯನ್ನು ರಾಷ್ಟ್ರದ ಮುಖ್ಯಸ್ಥರನ್ನಾಗಿ ಒಪ್ಪಿಕೊಳ್ಳದೆ, ಕಾಮನ್ ವೆಲ್ತ್ ಸದಸ್ಯತ್ವ ಪಡೆದುಕೊಂಡಿತ್ತು. ಹೀಗೆ ಕಾಮನ್ ವೆಲ್ತ್ ಸದಸ್ಯನಾದರೂ ಗಣರಾಜ್ಯವಾಗಿಯೇ ಉಳಿದುಕೊಂಡಿದ್ದು ಭಾರತದ ವಿಶೇಷತೆ. ಇದೇ ವಿಷಯವಾಗಿ 1949ರ ಲಂಡನ್ ಘೋಷಣೆಯೊಂದಿಗೆ, ಬ್ರಿಟನ್ ರಾಜನನ್ನು ತಮ್ಮ ರಾಷ್ಟ್ರದ ನಾಯಕನನ್ನಾಗಿ ಒಪ್ಪಿಕೊಳ್ಳಲೇ ಬೇಕು ಎಂಬ ಷರತ್ತನ್ನು ಸಡಿಲಿಸಿ ಇದನ್ನು ಆಯಾ ರಾಷ್ಟ್ರಗಳ ನಿರ್ಧಾರಕ್ಕೆ ಬಿಡಲಾಯಿತು, ಬ್ರಿಟನ್ ರಾಜ/ರಾಣಿ ಕಾಮನ್ ವೆಲ್ತ್ ನಾಯಕರು ಎಂದಷ್ಟೇ ಗುರುತಿಸಲಾಯಿತು. ಈ ಹೊಸ ಬದಲಾವಣೆಯೊಂದಿಗೆ ಕಾಮನ್ ವೆಲ್ತ್ ಸದಸ್ಯತ್ವದಲ್ಲಿ ಧನಾತ್ಮಕ ಬದಲಾವಣೆಗಳಾಯ್ತು. ಇವತ್ತಿಗೆ ಕಾಮನ್ ವೆಲ್ತ್ ನಲ್ಲಿ 54 ಸದಸ್ಯ ರಾಷ್ಟ್ರಗಳಿದ್ದು, ಇದರಲ್ಲಿ 33 ಗಣರಾಜ್ಯಗಳು, ಐದು ದೇಶೀಯ ರಾಜಪ್ರಭುತ್ವಗಳಾದರೆ, ಇನ್ನುಳಿದ 16 ರಾಷ್ಟ್ರಗಳು ಬ್ರಿಟನ್ ರಾಜಪ್ರಭುತ್ವವನ್ನು ಒಪ್ಪಿಕೊಂಡು ಸಾಂವಿಧಾನಿಕ ರಾಜಪ್ರಭುತ್ವಗಳಾಗಿವೆ. (constitutional monarchy)

Image may contain: 1 person, textಆಸ್ಟ್ರೇಲಿಯಾ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರ ಮಾತ್ರವಲ್ಲದೆ, ಬ್ರಿಟನ್ ರಾಜ/ ರಾಣಿಯನ್ನು ತಮ್ಮ ರಾಷ್ಟ್ರದ ಮುಖ್ಯಸ್ಥರೆಂದು ಒಪ್ಪಿಕೊಂಡ ಸಾಂವಿಧಾನಿಕ ರಾಜಪ್ರಭುತ್ವ ರಾಜಕೀಯ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆಸ್ಟೇಲಿಯಾದಲ್ಲಿ ಭಾರತದಂತೆ ಚುನಾಯಿತ ರಾಷ್ಟ್ರಾಧ್ಯಕ್ಷರಿಲ್ಲ, ಬ್ರುನೈ ದೇಶದಂತೆ ತಮ್ಮದೇ ಆದ ರಾಜವಂಶವೂ ರಾಷ್ಟ್ರದ ಮುಖ್ಯಸ್ಥರಲ್ಲ, ಈ ಗೌರವದ ಹುದ್ದೆಯನ್ನು ಬ್ರಿಟನ್ ರಾಜಪ್ರಭುತ್ವಕ್ಕೆ ಮೀಸಲಿಟ್ಟಿದ್ದಾರೆ ಆಸ್ಟ್ರೇಲಿಯಾ ಕೆನಡ ಮತ್ತಿತರ ರಾಷ್ಟ್ರಗಳು. ಆದರೆ ಆಸ್ಟ್ರೇಲಿಯಾ ಈ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಿ ಗಣರಾಜ್ಯವಾಗುವತ್ತ ಸ್ಪಷ್ಟ ಹೆಜ್ಜೆಗಳನ್ನಿಡುತ್ತಿದೆ. ಕಾಮನ್ ವೆಲ್ತ್ ನ ಹಳೆಯ ಮತ್ತು ಬ್ರಿಟನ್ ರಾಜಪ್ರಭುತ್ವದ ವಿಶ್ವಾಸಿ ಸದಸ್ಯರಾಷ್ಟ್ರವೊಂದು ತನ್ನ ಭವಿಷ್ಯತ್ತನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಳ್ಳುವತ್ತ ಉತ್ಸುಕವಾಗಿದೆ. ಬ್ರಿಟನ್ ನ ರಾಣಿಯಾಗಿರುವ ಎರಡನೇ ಎಲಿಜಬೆತ್ ರನ್ನು ಬ್ರಿಟನ್ ನಲ್ಲಿ ಮಾತ್ರವಲ್ಲದೆ, ಕೆನಡ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಿಗೂ ರಾಣಿಯೆಂದು ಪರಿಗಣಿಸಲಾಗುತ್ತದೆ. ಆದರೆ ಆಸ್ಟ್ರೇಲಿಯಾ ಮಾತ್ರ ಈ ರಾಜಕೀಯ ಸ್ಥಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಲೇ ಇದೆ. ಎಲ್ಲೋ ಇರುವ ರಾಷ್ಟ್ರವೊಂದರ ರಾಣಿ ತಮ್ಮ ರಾಜಕೀಯ ವ್ಯವಸ್ಥೆಯ ಮುಖ್ಯಸ್ಥರಾಗಿರುವುದು ಆಸ್ಟ್ರೇಲಿಯನ್ನರಿಗೆ ಅಹಿತ ಎನಿಸುತ್ತಿದೆ. ದಿನೇ ದಿನೇ ಆಸ್ಟ್ರೇಲಿಯಾ ಬ್ರಿಟನ್ ರಾಜಪ್ರಭುತ್ವವನ್ನು ಮೂಲೆಗೆಸೆದು ಗಣರಾಜ್ಯವಾಗುತ್ತ ಹೆಚ್ಚು ಒಲವು ತೋರಿಸುತ್ತಿದೆ. ಇತ್ತೀಚೆಗೆ ಬಿಬಿಸಿಯಲ್ಲಿ ಪ್ರಸಾರವಾದ ಸುದ್ಧಿಯೊಂದರಲ್ಲಿ ಆಸ್ಟ್ರೇಲಿಯಾದ ರಿಪಬ್ಲಿಕನ್ ಪರ ಚಳುವಳಿ ಪ್ರಖರವಾಗಿದ್ದು, 150ರಲ್ಲಿ 81 ಸಂಸದರು ಮತ್ತು 76ರಲ್ಲಿ 40 ಸೆನೆಟರ್ ಗಳು ಆಸ್ಟ್ರೇಲಿಯಾ ಗಣರಾಜ್ಯವಾಗುವತ್ತ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ ಬುಲ್ ರ ಎಲ್.ಪಿ.ಎ ಪಕ್ಷ ಸತತವಾಗಿ ರಾಜಪ್ರಭುತ್ವವನ್ನು ಬೆಂಬಲಿಸಿಕೊಂಡು ಪಕ್ಷವೇ ಆದರೂ ಟರ್ನ್ ಬುಲ್ ಸ್ವತಃ ಓರ್ವ ಕಟ್ಟಾ ಗಣರಾಜ್ಯದ ಬೆಂಬಲಿಗ! ಇಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಹಲವು ಸಾಂಪ್ರದಾಯಿಕ ರಾಜಕಾರಣಿಗಳು ಇದೀಗ ಗಣರಾಜ್ಯದತ್ತ ಒಲವು ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಪ್ರಮುಖ ರಾಜಕೀಯ ಪಕ್ಷಗಳಾದ ಲೇಬರ್ ಮತ್ತು ಗ್ರೀನ್ ಪಕ್ಷಗಳೂ ಗಣರಾಜ್ಯದ ಪರವಾಗಿಯೇ ಇವೆ.

ಈಗಿನ ಪ್ರಧಾನಿ ಟರ್ನ್ ಬುಲ್ ಹಿಂದೊಂದು ಬಾರಿ 1999ರಲ್ಲಿ ಗಣರಾಜ್ಯದ ಪರವಾಗಿ ಜನಮತಗಣನೆಯೊಂದನ್ನು ನಡೆಸಲು ಪ್ರಯತ್ನಿಸಿದ್ದರೂ, ಆ ಪ್ರಯತ್ನ ವಿಫಲವಾಗಿತ್ತು. ತೀರಾ ಇತ್ತೀಚೆಗೆ ತನ್ನ ಭಾಷಣವೊಂದರಲ್ಲಿ ಟರ್ನ್ ಬುಲ್ ಅವರೇ ಹೇಳಿಕೊಂಡಿರುವಂತೆ, ಗಣರಾಜ್ಯದಲ್ಲಿ ತನಗಿರುವ ಆಸಕ್ತಿಗೆ ಸ್ವದೇಶ ಪ್ರೇಮದ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ ಈಗಿನ ರಾಣಿ ಎರಡನೇ ಎಲಿಜಬೆತ್ ಅಧಿಕಾರಾವಧಿ ಮುಗಿದ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದೆಂಬ ಭರವಸೆಯನ್ನೂ ಟರ್ನ್ ಬುಲ್ ನೀಡಿದ್ದಾರೆ. ಗಣರಾಜ್ಯದ ಪರವಾಗಿರುವವರ ಧ್ವನಿಗೆ ಬಲ ನೀಡುವಂತೆ ಆಸ್ಟ್ರೇಲಿಯಾ ಮತ್ತು ಬ್ರಿಟನ್ ರಾಜತಾಂತ್ರಿಕ ಸಂಬಂಧಗಳಲ್ಲೂ ಕಾಲಾಂತರದಲ್ಲಿ ಬಿರುಕುಗಳು ಮೂಡಿವೆ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಏಷಿಯಾ-ಪೆಸಿಫಿಕ್ ಪ್ರದೇಶದಲ್ಲಿ ಜಪಾನ್ ಆಕ್ರಮಣ ತಡೆಯಲಾಗದೆ ಬ್ರಿಟನ್ ತತ್ತರಿಸಿದಾಗ, ಆಸ್ಟ್ರೇಲಿಯಾ ತನ್ನ ಭದ್ರತೆಗಾಗಿ ಬ್ರಿಟನ್ ಆಶ್ರಯಿಸುವಂತಿಲ್ಲ ಎನ್ನುವ ಸತ್ಯ ಅರಿಯತೊಡಗಿತ್ತು. ದ್ವಿತೀಯ ಮಹಾಯುದ್ಧದ ಬಳಿಕ ಸೃಷ್ಟಿಯಾದ ಹೊಸ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಅಮೆರಿಕಾ ಮತ್ತು ಸೊವಿಯೆತ್ ಗಳು ಶಕ್ತಿ ಕೇಂದ್ರಗಳಾದಾಗ ಬ್ರಿಟನ್ ಮೂಲೆಗುಂಪಾಗಿತ್ತು. ವಾಸ್ತವ ರಾಜಕಾರಣದಲ್ಲಿ ಬ್ರಿಟನ್ ಹೆಸರಿನಲ್ಲಿ ಬದುಕುವುದು ಕಷ್ಟ ಸಾಧ್ಯ ಎಂಬ ವಿಚಾರ ಆಸ್ಟ್ರೇಲಿಯಾ ಅನುಭವಕ್ಕೂ ಬಂದಿತ್ತು! ಇವೆಲ್ಲದರ ಜೊತೆಗೆ, ಚೀನಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ಬೆಳೆದ ವ್ಯಾಪಾರ ಸಂಬಂಧಗಳು ನಿಧಾನವಾಗಿ ಬ್ರಿಟನ್ ಜೊತೆಗಿನ ಬಾಂಧವ್ಯವನ್ನು ಮಸುಕುಗೊಳಿಸಿಬಿಟ್ಟವು. ಹೀಗಾಗಿ 2020ರೊಳಗೆ ಆಸ್ಟ್ರೇಲಿಯಾವನ್ನು ಗಣರಾಜ್ಯವನ್ನಾಗಿಸಲು, ಜನಮತಗಣನೆಯೊಂದರ ನಿರೀಕ್ಷೆಯಲ್ಲಿದ್ದಾರೆ ಆಸ್ಟ್ರೇಲಿಯಾದ ರಿಪಬ್ಲಿಕನ್ನರು!

ಬ್ರಿಟನ್ನಿನ ರಾಜಪ್ರಭುತ್ವವೇ ಹಿತವಾಗಿದೆ ಎನ್ನುವ ಒಂದು ಸಣ್ಣ ಗುಂಪೂ ಆಸ್ಟ್ರೇಲಿಯಾದಲ್ಲಿದೆ. ರಾಜಪ್ರಭುತ್ವವನ್ನು ಕಿತ್ತುಹಾಕಿ ಆಸ್ಟ್ರೇಲಿಯಾ ಸಾಧಿಸುವುದಾದರೂ ಏನು? ಎನ್ನುವುದು ಇವರ ಪ್ರಶ್ನೆ. ಈ ಗುಂಪಿನ ವಾದದ ಪ್ರಕಾರ, ಭಾರತಕ್ಕಾದರೂ ಬ್ರಿಟಿಷರ ದಬ್ಬಾಳಿಕೆಯನ್ನು ಸಂಪೂರ್ಣ ಮಾಸುವಂತೆ ಮಾಡಲು ಗಣರಾಜ್ಯವೊಂದರ ಅವಶ್ಯಕತೆಯಿತ್ತು. ಆದರೆ ಆಸ್ಟ್ರೇಲಿಯಾಗೆ ಬ್ರಿಟನ್ ಜೊತೆಗೆ ಈ ರೀತಿಯ ಯಾವುದೇ ಕಹಿ ಅನುಭವಗಳಿಲ್ಲ ಮತ್ತು ರಾಜಪ್ರಭುತ್ವದ ಜೊತೆಗೂ ತಕರಾರುಗಳಿಲ್ಲದೇ ಇರುವುದರಿಂದ ಗಣರಾಜ್ಯದ ಅವಶ್ಯಕತೆ ಇಲ್ಲ. ರಾಜಪ್ರಭುತ್ವವನ್ನು ಬೆಂಬಲಿಸುವ ಗುಂಪಿನ ಮುಖ್ಯಸ್ಥ ಫಿಲಿಪ್ ಬೆನ್ವೆಲ್ ಹೇಳುವಂತೆ,  "ಆಸ್ಟ್ರೇಲಿಯಾದ ಯುವಜನತೆಗೆ ಗಣರಾಜ್ಯ ಬೇಕಾಗಿಲ್ಲ. 20ರಿಂದ 30 ವರ್ಷದೊಳಗಿನ ಯುವಕರಿಗೆ ರಾಜಕಾರಣಿಗಳ ಬಗ್ಗೆ ವಿಶ್ವಾಸವಿಲ್ಲ. ರಾಜಕಾರಣಿಗಳಿಂದ ಸ್ಥಾಪಿಸಲ್ಪಡುವ ಗಣರಾಜ್ಯದ ಬಗೆಗೂ ಅವರಿಗೆ ವಿಶ್ವಾಸವಿಲ್ಲ." ಈ ರೀತಿಯಾಗಿ ಬ್ರಿಟನ್ ರಾಜಪ್ರಭುತ್ವದ ಪರಂಪರೆಯನ್ನು ಉಳಿಸುವತ್ತ ಒಂದು ಸಣ್ಣ ಪ್ರಯತ್ನ ಮಾಡುತ್ತಿದೆ ಈ ಗುಂಪು. ಪರ ವಿರೋಧ ಚರ್ಚೆಗಳೇನೇ ಇದ್ದರೂ ಆಸ್ಟ್ರೇಲಿಯಾದ ಸದ್ಯದ ರಾಜಕೀಯ ಪರಿಸ್ಥಿತಿ ರಾಜಪ್ರಭುತ್ವವನ್ನು ಬದಿಗೊತ್ತಿ, ಗಣರಾಜ್ಯವೊಂದನ್ನು ಸ್ಥಾಪಿಸುವತ್ತ ಉತ್ಸುಕವಾಗಿದೆ. ಪ್ರಧಾನಿ ಟರ್ನ್ ಬುಲ್ ಭರವಸೆಯಂತೆ, ಎರಡನೇ ಎಲಿಜಬೆತ್ ಆಳ್ವಿಕೆಯ ಅಂತ್ಯದೊಂದಿಗೆ ಆಸ್ಟ್ರೇಲಿಯಾದಲ್ಲಿ ಸಾಂವಿಧಾನಿಕ ರಾಜಪ್ರಭುತ್ವವೂ ಕೊನೆಗೊಂಡು ವಿಶ್ವ ಸಮುದಾಯದಲ್ಲೊಂದು ಹೊಸ ಗಣತಂತ್ರದ ಸೇರ್ಪಡೆಯಾಗಲಿದೆ.

(This article was published in Vishwavani Newsapaper on 4 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ತಾರ್ಕಿಕ ಅಂತ್ಯದ ನಿರೀಕ್ಷೆಯಲ್ಲಿ ಮೊಸುಲ್ ಮಹಾಸಮರ

ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 
-  ಕೀರ್ತಿರಾಜ್

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ, ಬರಾಕ್ ಒಬಾಮ ಆಡಳಿತ  ಮಧ್ಯಪ್ರಾಚ್ಯದಲ್ಲೊಂದು ರಾಜಕೀಯ ಪ್ರಯೋಗಕ್ಕೆ ಮುಂದಾಗಿತ್ತು. ಇರಾಕ್ ಸರಕಾರ ಸುನ್ನಿ ಹೋರಾಟಗಾರರು ಮತ್ತು  ಕರ್ದಿಶ್ ಗುಂಪುಗಳು ಸಂಘಟಿತವಾಗಿ ಮೊಸುಲ್ ನಲ್ಲಿ ನೆಲೆಯೂರಿದ್ದ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಂಘಟಿತ ಹೋರಾಟವೊಂದು ರೂಪಿಸಿದ್ದರು. ಈ ಮೈತ್ರಿ ಸೇನೆ ಉಗ್ರರ ವಿರುದ್ಧ ಮೊಸುಲ್ ನಲ್ಲಿ ಮೊಳಗಿದ ಮರಣ ಮೃದಂಗಕ್ಕೆ ಅಮೆರಿಕಾ ಅಧ್ಯಕ್ಷ ಒಬಾಮ ಕೂಡ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಅತ್ಯುತ್ಸಾಹದಿಂದ ಮೈತ್ರಿಪಡೆಗಳು ಮೊಸುಲ್ ನತ್ತ ನುಗ್ಗಿದರೂ, ಜಾಗತಿಕ ರಜಕೀಯದ ವಿಶ್ಲೇಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊಸುಲ್ ಯುದ್ಧದಲ್ಲಿ ಇರಾಕಿ ಮೈತ್ರಿ ಸೇನೆ ನಿರೀಕ್ಷೆ ಮೀರಿ ಉಗ್ರರನ್ನು ಬಗ್ಗುಬಡಿದು ಮುಂದೆ ಸಾಗುತ್ತಿದೆ. ಇರಾಕಿ ಸೇನೆಯ ಮೂಲಗಳು ತಿಳಿಸಿದ ಪ್ರಕಾರ, ಮೊಸುಲ್ ನ ಹಲವು ಹಳ್ಳಿಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸೋಲಿಸಿ ಇರಾಕಿ ಪಡೆಗಳು ನಿಯಂತ್ರಣ ಸಾಧಿಸಿವೆ. ಒಂದು ರೀತಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಆಶಾದಾಯಕವಾಗಿ ಮುಂದುವರಿಯುತ್ತಿದೆ ಮೊಸುಲ್ ಉಗ್ರ ನಿಗ್ರಹ!
Image may contain: 2 people, text
ಇರಾಕಿನ ಪ್ರಧಾನಿ ಹೈದರ್-ಅಲ್-ಅಬಾದಿ ಡಿಸೆಂಬರ್ ಮೊದಲ ವಾರದಲ್ಲಿ ನೀಡಿರುವ ಹೇಳಿಕೆಯ ಪ್ರಕಾರ ಇರಾಕ್ ಸೇನೆಯ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಅಬಾದಿ ಮಾತುಗಳಲ್ಲೇ ಹೇಳುವುದಾದರೆ, "ಇಸ್ಲಾಮಿಕ್ ಸ್ಟೇಟ್ ಹಂತ ಹಂತವಾಗಿ ಅವನತಿಯತ್ತ ಸಾಗುತ್ತಿದೆ ಮತ್ತು ಧೃಡವಾಗಿ ನಿಂತು ಹೋರಾಡುವ ಸಾಮರ್ಥ್ಯ ಉಗ್ರರಲ್ಲಿಲ್ಲ". ಇರಾಕ್ ಮತ್ತಿತರ ಗುಂಪುಗಳು ಉಗ್ರದಮನಕ್ಕೆ ಹೊರಟಾಗ, ಇಸ್ಲಾಮಿಕ್ ಸ್ಟೇಟ್ ಇರಾಕ್ ಸೇನೆಗೆ ಬಲವಾದ ಪ್ರತ್ಯುತ್ತರ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿಶ್ವಕ್ಕೆ ಇರಾಕ್ ಸೇನೆಯ ಕುರಿತಾಗಿ ಯಾರಿಗೂ ಹೇಳಿಕೊಳ್ಳುವಂಥ ವಿಶ್ವಾಸವಿರಲಿಲ್ಲ. ಆದರೆ ಮೊಸುಲ್  ನಲ್ಲಿ ಯುದ್ಧ ಪ್ರಾರಂಭವಾದ ಕೆಲವೇ ವಾರಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೆಲೆ ನಿಂತು ಸೆಣಸಾಡುವ ಸಾಮರ್ಥ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಎಲ್ಲೋ ಒಂದು ಕಡೆ ಬಾಂಬ್ ದಾಳಿ, ಯಾವುದೇ ಮೂಲೆಯಲ್ಲಿ ಶಿರಚ್ಚೇಧನ ಮತ್ತು ಕಳ್ಳತನದಲ್ಲಿ ನಡೆಸುವ ಹಿಂಸಾಚಾರಗಳನ್ನು ಬಿಟ್ಟರೆ ನಿಜವಾದ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಏನೇನು ಅಲ್ಲ ಎನ್ನುವುದನ್ನು ಮೈತ್ರಿ ಸೇನೆ ಅಲ್ಪ ಸಮಯದಲ್ಲೇ ನಿರೂಪಿಸಿತ್ತು. 

ಯುದ್ಧದ ಆರಂಭದೊಂದಿಗೆ, ಇಸ್ಲಾಮಿಕ್ ಸ್ಟೇಟ್ ಒಂದರ ಮೇಲೊಂದರಂತೆ ಹಿನ್ನಡೆಗಳನ್ನೇ ಅನುಭವಿಸಿತ್ತು. ಎರಡು ಮಿಲಿಯನ್ ಜನಸಂಖ್ಯೆಯಿರುವ ಮೊಸುಲ್ ನಗರವನ್ನು, ಹತ್ತು ಸಾವಿರಕ್ಕೂ ಕಡಿಮೆಯಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಮೈತ್ರಿ ಸೇನೆಯ ಎದುರು ಈ ಸಂಖ್ಯೆ ನಿಜಕ್ಕೂ ಏನೇನೂ ಆಗಿರಲಿಲ್ಲ. ಮೈತ್ರಿಕೂಟ ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲದೇ ತಂತ್ರಜ್ಞಾನದ ವಿಚಾರದಲ್ಲೂ ಉಗ್ರರಿಗಿಂತ ಮುಂದಿತ್ತು. ಮೈತ್ರಿಕೂಟದ ಹೊಡೆತಗಳಿಗೆ ಪ್ರತ್ಯುತ್ತರ ನೀಡಲಾಗದೆ ಉಗ್ರರು ಕಂಗೆಟ್ಟುಹೋಗಿದ್ದರು. ಯುದ್ಧತಂತ್ರದ ದೃಷ್ಟಿಯಿಂದ ಇಸ್ಲಾಮಿಕ್ ಸ್ಟೇಟ್ ಇಟ್ಟ ಒಂದೇ ಒಂದು ಬುದ್ಧಿವಂತಿಕೆಯ ಹೆಜ್ಜೆಯೆಂದರೆ, ಹೆಚ್ಚಿನ ಕಡೆಗಳಲ್ಲಿ ಸೇನೆಯನ್ನು ಹಿಂದೆಗೆದುಕೊಂಡು, ಪೂರ್ವ ಮೊಸುಲ್ ನತ್ತ ಸಾಗಿ ಅಲ್ಲಿ ತಮ್ಮ ಹಿಡಿತ ಬಲಪಡಿಸಿಕೊಂಡಿದ್ದು. ಈ ರೀತಿ ತಾವು ದುರ್ಬಲವಾಗಿದ್ದ ಪ್ರದೇಶಗಳಲ್ಲಿ ಮೈತ್ರಿಸೇನೆಗೆ ಎದುರಾಗಿ ನಿಲ್ಲದೆ, ಪೂರ್ವ ಮೊಸುಲ್ ನಲ್ಲಿ ಸನ್ನದ್ಧರಾಗಿ ವೈರಿಗೆ ಹೊಡೆತ ನೀಡುವ ಯೋಜನೆಯೊಂದು ಇಸ್ಲಾಮಿಕ್ ಸ್ಟೇಟ್ ತಲೆಯಲ್ಲಿ ಮೂಡಿರಬಹುದು. ಈವರೆಗೆ ಇರಾಕ್ ಸೇನೆ ದಾಳಿ ನಡೆಸಿದ ಪ್ರದೇಶಗಳಲ್ಲಿ ಉಗ್ರ ಪ್ರತಿರೋಧ ಕಾಣದೇ ಇದ್ದರೂ, ಪೂರ್ವ ಮೊಸುಲ್ ನತ್ತ ಸಾಗುತ್ತಿದ್ದಂತೆ ಇರಾಕ್ ಸೇನೆಯ ಹಾದಿ ಕಠಿಣವಾಗುವುದು ನಿಶ್ಚಿತ. ಪೂರ್ವ ಮೊಸುಲ್ ನ ಆಯಕಟ್ಟಿನ ಪ್ರದೇಶಗಳೆಲ್ಲವನ್ನೂ ಸುರಂಗ ವ್ಯವಸ್ಥೆಯ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡಲಾಗಿದೆ. ಈ ಮೂಲಕ ದಾಳಿ ಮಾಡುವ ಸೇನೆಗೆ ಸಾಧ್ಯವಾದಷ್ಟು ಹೆಚ್ಚು ಮಟ್ಟದ ಹಾನಿಯುಂಟಾಗುವಂತೆ ಮಾಡಲಾಗಿದೆ. ಸದ್ಯಕ್ಕೆ ಮೊಸುಲ್ ನಗರದ ಪೂರ್ವ ಭಾಗದಲ್ಲಿ ಇಂಥದ್ದೊಂದು ಸಮರತಂತ್ರ ರೂಪಿಸಿದೆ ಇಸ್ಲಾಮಿಕ್ ಸ್ಟೇಟ್!

ಇರಾಕ್ ಸೇನೆ, ಸುನ್ನಿ ಗುಂಪು ಮತ್ತು ಕರ್ದಿಶ್ ಹೋರಾಟಗಾರರು ಮತ್ತು ಅಮೆರಿಕಾದ ಮಿಲಿಟರಿ ನೆರವುಗಳ ಬಲ ಪಡೆದುಕೊಂಡಿರುವ ಮೈತ್ರಿ ಸೇನೆ ಇಸ್ಲಾಮಿಕ್ ಸ್ಟೇಟ್ ಗಿಂಥ ಎಷ್ಟೋ ಪಾಲು ಬಲಿಷ್ಟ. ಈ ಮೈತ್ರಿ ಸೇನೆ ಆಧುನಿಕ ಯುದ್ಧೋಪಕರಣಗಳನ್ನು ಬಳಸುತ್ತಿರುವುದು ಮಾತ್ರವಲ್ಲ ಸೇನೆಗೆ ಅವಶ್ಯವಾದ ವೈದ್ಯಕೀಯ ಸೌಲಭ್ಯ, ಶಸ್ತ್ರಾಸ್ತ್ರಗಳು ಮತ್ತಿನ್ನಿತರ ಯುದ್ಧ ಸಮಯದ ಸಾಗಾಟಗಳನ್ನು ಮಾಡಲು ಸಮರ್ಥ ವ್ಯವಸ್ಥೆ ಮೈತ್ರಿ ಸೇನೆಯ ಬಳಿಯಲ್ಲಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಮೊಸುಲ್ ನ ಭೌಗೋಳಿಕ ವಿನ್ಯಾಸದ ಸ್ಪಷ್ಟ ಪರಿಚಯವಿದ್ದರೂ, ಮೈತ್ರಿ ಪಡೆಯಲ್ಲಿರುವಷ್ಟು ಸನ್ನದ್ಧ ಯುದ್ಧ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉಗ್ರರಲ್ಲಿಲ್ಲ. ಪ್ರಸಕ್ತ ಸ್ಥಿತಿಗತಿಗಳನ್ನು ಗಮನಿಸಿದಾಗ ಮೈತ್ರಿ ಪಡೆಗಳು ಉಗ್ರರಿಗಿಂತ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಸ್ಪಷ್ಟ. ಹೀಗಿದ್ದರೂ, ಮೈತ್ರಿಸೇನೆ ಮೈಮರೆತರೆ ಇಸ್ಲಾಮಿಕ್ ಸ್ಟೇಟ್ ಯಾವುದೇ ಕ್ಷಣದಲ್ಲೂ ತಿರುಗಿಬೀಳಬಹುದು. ಯುದ್ಧವನ್ನು ಸಾಧ್ಯವಾದಷ್ಟು ಶೀಘ್ರವಾಗಿ ಮುಗಿಸುವುದು ಮೈತ್ರಿಸೇನೆಗೆ ಎಲ್ಲಾ ರೀತಿಯಿಂದಲೂ ಅನುಕೂಲಕರ. ಯುದ್ಧ ಇನ್ನಷ್ಟು ತಿಂಗಳುಗಳ ಕಾಲ ಮುಂದುವರಿದಲ್ಲಿ ಉಗ್ರರಿಗೆ ಸಮರತಾಂತ್ರಿಕ ಅನುಕೂಲತೆಯೊಂದು ಸೃಷ್ಟಿಯಾಗಬಹುದು!

ಈಗಾಗಲೆ ಹಲವಾರು ನೆಲೆಗಳನ್ನು ಕಳೆದುಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಜಯಗಳಿಸುವುದು ಕಷ್ಟಸಾಧ್ಯವೇ ಆದರೂ, ಯುದ್ಧದ ಫಲಿತಾಂಶವನ್ನು ಸಾಧ್ಯವಾದಷ್ಟು ಮುಂದೂಡುವ ಮತ್ತು ಅಪಾರ ಪ್ರಮಾಣದ ಪ್ರಾಣಹಾನಿಯಾಗುವಂತೆ ಮಾಡುವ ಎಲ್ಲಾ ಅವಕಾಶಗಳೂ ಉಗ್ರರಿಗಿವೆ. ಇಸ್ಲಾಮಿಕ್ ಸ್ಟೇಟ್ ನ ಉಗ್ರರಿಗೆ ಬೇಕಾಗಿರುವುದೂ ಇದೇ! ಈ ಮೂಲಕ ಇರಾಕ್ ರಕ್ಷಣಾ ದಳದ ತಾಳ್ಮೆ ಪರೀಕ್ಷಿಸುವುದು ಮತ್ತು ಯುದ್ಧ 2017ರಲ್ಲೂ ಮುಂದುವರಿದಾಗ ಕರ್ದಿಶ್, ಸುನ್ನಿ ಮತ್ತು ಇರಾಕಿ ಪಡೆಗಳ ನಡುವಿನ ಮೈತ್ರಿ ಮುರಿದು ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿದೆ ಇಸ್ಲಾಮಿಕ್ ಸ್ಟೇಟ್. ಇದಷ್ಟೇ ಅಲ್ಲದೇ ಯುದ್ಧ ಬಹಳ ಕಾಲದವರೆಗೆ ಮುಂದುವರಿದಲ್ಲಿ ಅಮೆರಿಕಾದ ನಿಲುವುಗಳ ಬದಲಾವಣೆಯೂ ಸಾಧ್ಯವಿದೆ. ಈ ಸಮಯದ ಉಪಯೋಗ ಪಡೆದುಕೊಂಡು ಹೊಸ ಉಗ್ರರ ಸೇರ್ಪಡೆಯನ್ನು ಮಾಡಿಕೊಳ್ಳುವುದಲ್ಲದೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಹುನ್ನಾರ ಇಸ್ಲಾಮಿಕ್ ಸ್ಟೇಟ್ ಉಗ್ರರದ್ದು! ಈ ಎಲ್ಲಾ ರೀತಿಯಿಂದಲೂ ಯುದ್ಧ ಇನ್ನೊಂದಷ್ಟು ಸಮಯ ಮುಂದುವರಿಸಿ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುವುದು ಇಸ್ಲಾಮಿಕ್ ಸ್ಟೇಟ್ ಉಗ್ರರ ಮಾಸ್ಟರ್ ಪ್ಲಾನ್!

ಈ ವರ್ಷದ ಕೊನೆಯಲ್ಲಿ ಬಹುನಿರೀಕ್ಷೆಯೊಂದಿಗೆ ಆರಂಭವಾದ ಮೊಸುಲ್ ಯುದ್ಧ, ಮುಂದಿನ ವರ್ಷದಲ್ಲೂ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಮೊಸುಲ್ ಯುದ್ಧದಲ್ಲಿ ಸಮಯ ಎಲ್ಲರಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವುದು ಮತ್ತು ಸಮಯದ ಆಟ ಫಲಿತಾಂಶವನ್ನು ಬಹುಮಟ್ಟಿಗೆ ನಿರ್ಧರಿಸಲಿದೆ. ಅಮೆರಿಕಾದಲ್ಲಿ ಟ್ರಂಪ್ ಮನೋಭಾವವನ್ನೂ ಗಮನಿಸಿದಲ್ಲಿ, ಅಮೆರಿಕಾ ಬೆಂಬಲ ಇನ್ನೆಷ್ಟು ಸಮಯವೋ ಎಂಬಂತಾಗಿದೆ. ಶತಾಯಗತಾಯ ಅಮೆರಿಕಾ ಬೆಂಬಲವಿರುವ ಈ ಕಾಲಘಟ್ಟದಲ್ಲೇ ಯುದ್ಧಕ್ಕೊಂದು ತಾರ್ಕಿಕ ಅಂತ್ಯ ನೀಡುವುದು ಅನಿವಾರ್ಯ. ಈಗಾಗಲೇ ಪಶ್ಚಿಮ ಮೊಸುಲ್ ನಲ್ಲಿ ಉಗ್ರರನ್ನು ಬಗ್ಗುಬಡಿದು ಉತ್ಸಾಹದಿಂದ ಪೂರ್ವ ಮೊಸುಲ್ ನತ್ತ ಮುನ್ನುಗ್ಗುತ್ತಿರುವ ಮೈತ್ರಿ ಸೇನೆ ಅಲ್ಪಾವಧಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಭಾವಕ್ಕೆ ಅಂತ್ಯ ಹಾಡಿದಲ್ಲಿ ಉಗ್ರನಿಗ್ರಹದ ಇತಿಹಾಸದಲ್ಲಿ ನೆನಪಿಡುವ ಘಟನೆಯಾಗಿ ಮೊಸುಲ್ ಯುದ್ಧ ಚಿರಸ್ಥಾಯಿಯಾಗುತ್ತದೆ.

(This article was published in Vishwavani Newsapaper on 29 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru