ಶನಿವಾರ, ಅಕ್ಟೋಬರ್ 24, 2015

ನಿಮ್ಮ ಗಾಂಧಿ ಯಾರು?



ಗಾಂಧಿ ದೇವರಲ್ಲ, ಅವರ ಜೀವನ ಸರಿ ತಪ್ಪುಗಳ ಸಂಶೋಧನೆ. ಗಾಂಧಿವಾದ ಎನ್ನುವುದು ಪುಸ್ತಕದ ಮೇಲೆ ಬರೆದಿಟ್ಟ ನಿಯಮಗಳ ಕಂತೆಯಲ್ಲ. ಗಾಂಧಿವಾದ ಒಂದು ನಿರಂತರ ಪ್ರಯೋಗ, ಅರ್ಥಾತ್ ಸತ್ಯ ಶೋಧನೆ!
 -   ಕೀರ್ತಿರಾಜ್

 


ಗಾಂಧಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆಯಾಗಿ ಕಾಣಿಸಿಕೊಂಡ ವ್ಯಕ್ತಿತ್ವ. ಬಹುಶಃ ಆಧುನಿಕ ಪ್ರಪಂಚದಲ್ಲಿ ಅತಿಯಾದ ಹೊಗಳಿಕೆ ಮತ್ತು ತೆಗಳಿಕೆಗಳೆರಡಕ್ಕೂ ಒಳಗಾದ ವ್ಯಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಗಾಂಧಿಯನ್ನು ವ್ಯಕ್ತಿನಿಷ್ಠವಾಗಿ ವ್ಯಾಖ್ಯಾನಿಸಿದಲ್ಲಿ ಕೆಲವೊಮ್ಮೆ ಗಾಂಧಿ ಮಹಾತ್ಮನಾಗಿಯೂ, ಕೆಲವೊಮ್ಮೆ ತುಂಡು ಬಟ್ಟೆಯ ಫಕೀರನಾಗಿಯೂ ಕಾಣಿಸಿಕೊಳ್ಳುತ್ತಾರೆ. ಒಂದೊಮ್ಮೆ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯ ನೇತಾರನಂತೆ ಕಾಣಿಸಿಕೊಳ್ಳುತ್ತಾರೆ, ಮಗದೊಮ್ಮೆ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕಡು ವಿರೋಧಿಯಾಗಿಯೂ ಗಾಂಧಿ ಚರ್ಚೆಗೆ ಒಳಗಾಗುತ್ತಾರೆ. ಇಂಥ ಬಹುರೂಪಿ ಗಾಂಧಿ ಕೆಲವರಿಗೆ ದೇಶಪ್ರೇಮಿಯಾಗಿ, ಮಾನವತಾವಾದಿಯಂತೆಯೂ, ಇನ್ನೂ ಕೆಲವರಿಗೆ ದೇಶ ವಿಭಜನೆ ಮತ್ತು ಮಾರಣ ಹೋಮಕ್ಕೆ ಕಾರಣಿಭೂತರಾಗಿ ಕಾಣಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಮೇಲಿನ ಯಾವುದೇ ದೃಷ್ಟಿಕೋನವನ್ನು ಸಂಪೂರ್ಣ ಸತ್ಯ ಅಥವಾ ಸುಳ್ಳು ಎಂದು ಪರಿಗಣಿಸಲಾಗದು.
ಗಾಂಧೀಜಿಯ ಜನ್ಮ ದಿನ ಆಚರಿಸುತ್ತಿರುವ ನಮಗೆಲ್ಲ ಗಾಂಧಿ ಯಾರು ಎಂಬ ಪ್ರಶ್ನೆಗೆ ಉತ್ತರ ತಿಳಿದಿದೆ ಎನ್ನುವುದು ನನ್ನ ನಂಬಿಕೆ. ಆದರೆ ನಮಗೆ ತಿಳಿದಿರುವ ಗಾಂಧಿ ನಮ್ಮದೇ ಕಲ್ಪನೆ, ಪ್ರತಿಯೊಬ್ಬರ ಗಾಂಧಿಯೂ ವಿಭಿನ್ನ! ಪ್ರತಿಯೊಬ್ಬ ವ್ಯಕ್ತಿಗೂ ಗಾಂಧಿ ಭಿನ್ನವಾಗಿಯೇ ಕಾಣಿಸುತ್ತಾರೆ. ನನ್ನ ಕಲ್ಪನೆಯ ಗಾಂಧಿ ನಿಮಗೆ ಅಪರಿಚಿತನೆನಿಸಬಹುದು. ನಿಮ್ಮ ಕಲ್ಪನೆಯ ಗಾಂಧಿ ನನ್ನ ಊಹೆಗೆ ನಿಲುಕದಿರಬಹುದು. ಪ್ರತಿಯೊಬ್ಬ ಭಾರತೀಯನ ಸ್ಮೃತಿಪಟಲದಲ್ಲಿ ಗಾಂಧಿ ಉಳಿದುಹೋಗುತ್ತಾರೆ. ಆದರೆ ಭಿನ್ನ ಭಿನ್ನ ರೂಪಗಳಲ್ಲಿ!
ಸುಮಾರು ವರ್ಷಗಳ ಹಿಂದೆ ಖ್ಯಾತ ಸಾಮಾಜಿಕ ಮನೋವಿಜ್ಞಾನಿ ಆಶಿಶ್ ನಂದಿ ಅವರ ಲೇಖನವೊಂದರಲ್ಲಿ ಗಾಂಧಿಯ ಮರಣಾನಂತರ ಭಾರತೀಯ ಸಮಾಜದಲ್ಲಿ ನಾಲ್ಕು ವಿಭಿನ್ನ ಗಾಂಧಿಗಳನ್ನು ಗುರುತಿಸುತ್ತಾರೆ. ಅರ್ಥಾತ್ ನಂದಿ ಅವರ ಪ್ರಕಾರ ಗಾಂಧಿ ಭಾರತೀಯ ಸಮಾಜಕ್ಕೆ ನಾಲ್ಕು ವಿಭಿನ್ನ ರೂಪಗಳಲ್ಲಿ ತೆರೆದುಕೊಳ್ಳುತ್ತಾರೆ. ಗಾಂಧಿಯನ್ನು ಹತ್ಯೆ ಮಾಡಿದ ಹಂತಕ ನಾಥೂರಾಮ್ ಗೋಡ್ಸೆ, ಗಾಂಧಿಯ ಬಗೆಗಿನ ಗೌರವದ ಹೊರತಾಗಿಯೂ ಗಾಂಧಿಯನ್ನು ಯಾಕೆ ಹತ್ಯೆ ಮಾಡಿದೆ ಎಂಬ ವಿವರಣೆ ನೀಡುತ್ತಾನೆ. ಹೀಗೆ ಹಂತಕ ಗೋಡ್ಸೆ ಗಾಂಧಿಯನ್ನು ಗೌರವಿಸುತ್ತಾನೆ ಮತ್ತು ಅದೇ ತೀವ್ರತೆಯಲ್ಲಿ ದ್ವೇಷಿಸುತ್ತಾನೆ! ಇದು ಗೋಡ್ಸೆಯ ಮನಸ್ಸಲ್ಲಿದ್ದ ಇಬ್ಬರು ಗಾಂಧಿಗಳ ತಾಕಲಾಟ.
ಗಾಂಧಿಜಿಯ ಆತ್ಮ ಕಥೆ 'ನನ್ನ ಸತ್ಯ ಶೋಧನೆಯ ಕಥೆ' ಓದಿದವರಿಗೆ ಗಾಂಧಿ ಒಂದು ರೀತಿ ಕಾಣಿಸಿಕೊಳ್ಳುತ್ತಾರೆ , ಇದೇ ಗಾಂಧಿ 'ನಾನೇಕೆ ಗಾಂಧಿಯನ್ನು ಕೊಂದೆ' ಎಂಬ ಕೃತಿಯಲ್ಲಿ ಲೇಖಕ ಗಾಂಧಿಯನ್ನು ವಿಭಿನ್ನವಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತಾನೆ. ಕೃತಿಯ ಲೇಖಕ ಗೋಪಾಲ್ ಗೋಡ್ಸೆ, ಕೃತಿಯಲ್ಲಿರುವ ವಿಚಾರ ಲೇಖಕನ ಸೋದರ ನಾಥೂರಾಮ್ ಗೋಡ್ಸೆಯದುಅದೇ ರೀತಿ ಅಟೆನ್ ಬರೋರವರ ಗಾಂಧಿ ಸಿನೆಮಾ ನೋಡಿದವರಿಗೆ ಗಾಂಧಿ ಮಹಾತ್ಮನಾದರೆ, ಅಮೆರಿಕಾದ ಖ್ಯಾತ ಅಂಕಣಕಾರ ರಿಚರ್ಡ್ ಗ್ರೆನಿಯರ್ ಬರವಣಿಗೆಗಳನ್ನು ಓದಿದವರಿಗೆ ಗಾಂಧಿ ತತ್ವಕ್ಕೂ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿರುವ ದ್ವಂದ್ವ ನಿಲುವಿನ ವ್ಯಕ್ತಿ ಕಾಣಸಿಗಬಹುದು! ಇಂದು ಗಾಂಧಿ ಬಗೆಗೆ ನಮಗೆ ದೊರೆತಿರುವ ಮಾಹಿತಿ ಅಥವಾ ಜ್ಞಾನ ವಿವಿಧ ದೃಷ್ಠಿಕೋನಗಳೇ ಹೊರತು ಕರಾರುವಕ್ ಸತ್ಯವೇನಲ್ಲ.
ಜೀವನದುದ್ದಕ್ಕೂ ನಮ್ಮ ಸುತ್ತಾ ಮುತ್ತಾ ಇರುವ ಬಂಧುಗಳು ಸ್ನೇಹಿತರನ್ನೇ ಸಂಪೂರ್ಣ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ ಎಂದಾದಾಗ ಐತಿಹಾಸಿಕ ವ್ಯಕ್ತಿತ್ವ ಗಾಂಧಿ ನಮ್ಮ ಕಣ್ಣಿಗೆ ಮಬ್ಬಾಗಿ ಕಾಣಿಸುವುದು ಸಹಜವೇ. ಗಾಂಧಿಯದು ಸರಳ ವ್ಯಕ್ತಿತ್ವ ಎಂದು ಅನೇಕ ಬಾರಿ ಕೇಳಿದ್ದೇವೆ ಮತ್ತು ಓದಿಕೊಂಡಿದ್ದೇವೆ. ಆದರೆ ಗಾಂಧಿ ನಾವು ಅಂದುಕೊಂಡಷ್ಟು ಸರಳವಲ್ಲ! ಗಾಂಧಿಯನ್ನು ಹತ್ತಿರದಿಂದ ಕಂಡ ಹಲವರು ಗಾಂಧಿಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಸೋತಿದ್ದಾರೆ ಮತ್ತು ಗಾಂಧಿಯ ಒಬ್ಬ ಸಂಕೀರ್ಣ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತಾರೆ. ಮಾತನ್ನು ಗಾಂಧಿ ಬಗೆಗೆ ಅಧ್ಯಯನ ನಡೆಸಿದ ವಿದ್ವಾಂಸರು ಅನುಮೋದಿಸುತ್ತಾರೆ.
ಕುರುಡರು ಆನೆಯ ಕಾಲು, ಬಾಲ, ಸೊಂಡಿಲುಗಳನ್ನು ಸ್ಪರ್ಶಿಸಿ ಆನೆಯನ್ನು ವಿವರಿಸಿದ ಕಥೆ ನಾವೆಲ್ಲರೂ ಕೇಳಿರುತ್ತೇವೆ. ಒಂದು ರೀತಿ ಗಾಂಧಿಯನ್ನು ವಿವರಿಸುವ ಕಾರ್ಯಕ್ಕೂ ಕಥೆ ಅನ್ವಯಿಸುತ್ತದೆ. ಗಾಂಧಿಯಲ್ಲಿರುವ ತಪ್ಪುಗಳನ್ನೇ ಹುಡುಕಿ ಟೀಕಿಸುವ ಗಾಂಧಿ ವಿರೋಧಿಗಳು ಮತ್ತು ಗಾಂಧಿಯನ್ನು ದೈವತ್ವಕ್ಕೇರಿಸುವ ಗಾಂಧಿವಾದಿಗಳೂ ಆನೆಯನ್ನು ತಡಕಾಡಿ ವಿಮರ್ಶಿಸುವ ಕುರುಡರೇ!
ನನ್ನನ್ನು ದೈವತ್ವಕ್ಕೇರಿಸಬೇಡಿ ನಾನು ದೇವರಲ್ಲ ಎಂದು ಗಾಂಧಿಯೇ ಅಭಿಪ್ರಾಯಪಟ್ಟಿದ್ದರು. ಗಾಂಧಿಗೆ  ತನ್ನ ತಪ್ಪುಗಳ ಬಗೆಗೂ ಅರಿವಿತ್ತು. ತಪ್ಪೇ ಮಾಡದವನು ದೇವರಾಗುತ್ತಾನೆ. ಗಾಂಧಿ ದೇವರಲ್ಲ, ಅವರ ಜೀವನ ಸರಿ ತಪ್ಪುಗಳ ಸಂಶೋಧನೆ. ತನ್ನ ಜೀವನವನ್ನೇ ಪ್ರಯೋಗಶಾಲೆ ಮಾಡಿಕೊಂಡ ಗಾಂಧಿ. ಪ್ರತಿಯೊಂದನ್ನೂ ಪ್ರಶ್ನೆ ಮಾಡಿಕೊಳುತ್ತಾ, ಸಂಶೋಧನೆಯ ಒರೆಗೆ ಹಚ್ಚಿ, ನಮಗೊಂದು ಸಂದೇಶ ನೀಡುತ್ತಾರೆ. ಯಾವುದೋ ಒಂದು ಸಂಧರ್ಭದಲ್ಲಿ ಸಮಾಜಕ್ಕೆ ನಿಮ್ಮ ಸಂದೇಶವೇನು? ಎಂಬ ಪ್ರಶ್ನೆಗೆ ಗಾಂಧಿ ಉತ್ತರಿಸಿದ್ದು, "ನನ್ನ ಜೀವನವೇ ನನ್ನ ಸಂದೇಶ". ಇಲ್ಲಿ ಸರಿ ತಪ್ಪುಗಳ ವಿವೇಚನೆ ಅರ್ಥೈಸಿಕೊಳ್ಳುವವನಿಗೆ ಬಿಟ್ಟಿದ್ದು! ಗಾಂಧಿ ಯಾವತ್ತೂ ತಾನು ಮಾಡಿದ್ದೇ ಸರಿ ಎನ್ನಲಿಲ್ಲ, ತಾನು ಹಾಕಿದ ಮಾರ್ಗವನ್ನು ಚಾಚು ತಪ್ಪದೇ ಪಾಲಿಸಿ ಎಂದು ಒತ್ತಾಯಿಸಿಲ್ಲ.
ಗಾಂಧಿವಾದ ಎನ್ನುವುದು ಪುಸ್ತಕದ ಮೇಲೆ ಬರೆದಿಟ್ಟ ನಿಯಮಗಳ ಕಂತೆಯಲ್ಲ. ಗಾಂಧಿವಾದ ಒಂದು ನಿರಂತರ ಪ್ರಯೋಗ, ಅರ್ಥಾತ್ ಸತ್ಯ ಶೋಧನೆ! ಪ್ರತಿಯೊಬ್ಬರ ಒಳಗಿರುವ ಗಾಂಧಿಯೂ, ಅವರದೇ ಮನಸ್ಸಿನ ಪ್ರತಿಬಿಂಬ. ನಮ್ಮ ಯೋಚನೆ ನಮ್ಮೊಳಗಿರುವ ಗಾಂಧಿಯ ಪ್ರತಿಬಿಂಬ. ಗಾಂಧಿಜಯಂತಿಯ ಸಂದರ್ಭದಲ್ಲಿ ಗಾಂಧಿಯನ್ನು ನೆನಪಿಸಿಕೊಳ್ಳುತ್ತಾ, ಒಂದು ಬಾರಿ ಪ್ರಶ್ನಿಸಿಕೊಳ್ಳಿ, ನಿಮ್ಮ ಗಾಂಧಿ ಯಾರು?

 




 
  
 KEERTHIRAJ (keerthiraj886@gmail.com)

·   Currently serving as a Visiting Faculty for International Relations and Political Science at Alliance University, Bangalore. 
      (This article was published in Hosa Digantha newspaper on 2 October 2015)