ಸೋಮವಾರ, ಫೆಬ್ರವರಿ 29, 2016

ಇಂಡೋ-ಚೈನಾ ಸಾಗರ ಸಂಘರ್ಷ

ಶತ್ರುವಿನ ಶತ್ರು ನಮಗೆ ಮಿತ್ರ ಎಂಬ ಚಾಣಕ್ಯನ 'ಮಂಡಲ ಸಿದ್ದಾಂತ'ವನ್ನು ಭಾರತ ಕಾರ್ಯಗತಗೊಳಿಸುತ್ತಿದೆ. ಸಮಾನಮನಸ್ಕ ಹಾಗೂ ಚೈನಾ ವಿರೋಧಿ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ವಿಯೆಟ್ನಾಮ್ ಇನ್ನಿತರ ರಾಷ್ಟ್ರಗಳ ಜೊತೆ ಭಾರತ ಸಮರಾಭ್ಯಾಸ ಹಾಗೂ ವಿಶ್ವಾಸ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. 
-  ಕೀರ್ತಿರಾಜ್

ಏಷ್ಯಾದ ಎರಡು ದೈತ್ಯ ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಚೈನಾಗಳ ಇತ್ತೀಚಿನ ರಾಜತಾಂತ್ರಿಕ ಸಂಬಂಧಗಳನ್ನು ಗಮನಿಸಿದರೆ, ಎರಡೂ ಶಕ್ತಿಗಳು ಶಾಂತಿ ಮಂತ್ರ ಜಪಿಸುತ್ತಲೇ ತಮ್ಮ ಆರ್ಥಿಕ ಮತ್ತು ವ್ಯಾಪಾರ ನೀತಿಗಳನ್ನು ಮುಂದುವರಿಸಿವೆ. ಎಚ್ಚರಿಕೆಯ ರಾಜಕಾರಣ ಎಲ್ಲವೂ ಸರಿಯಿದೆ ಎಂಬ ಭಾವ ಮೂಡಿಸಿರುವುದರಲ್ಲಿ ತಪ್ಪೇನಿಲ್ಲ. ಆದರೆ ನೈಜ ಪರಿಸ್ಥಿತಿ ಮೇಲ್ನೋಟದ ತೋರಿಕೆಯ ರಾಜಕಾರಣಕ್ಕಿತ ಬಹಳಷ್ಟು ವಿಭಿನ್ನವಾಗಿದೆ ಎನ್ನುವುದನ್ನು ಭಾರತವಷ್ಟೇ ಅಲ್ಲದೇ ಚೈನಾದ ವಿಶ್ಲೇಷಕರೂ ಒಪ್ಪಿಕೊಳ್ಳುತ್ತಾರೆ. 1962 ಇಂಡೋ-ಚೈನಾ ಯುದ್ಧ ಇವತ್ತಿಗೂ ಎರಡು ರಾಷ್ಟ್ರಗಳನ್ನು ಬೂದಿ ಮುಚ್ಚಿದ ಕೆಂಡದಂತೆ ಕಾಡುತ್ತಿದೆ. ಇದಲ್ಲದೇ, ಪ್ರಸ್ತುತ ವಿಶ್ವ ರಾಜಕೀಯದಲ್ಲಿ ಎರಡು ಏಷ್ಯಾ ದೈತ್ಯ ರಾಷ್ಟ್ರಗಳ ಬೆಳೆಯುತ್ತಿರುವ ಪ್ರಭಾವ, ಏಷ್ಯಾದಲ್ಲೊಂದು ಶಕ್ತಿ ಸಂಘರ್ಷಕ್ಕೆ ವೇದಿಕೆ ಕಲ್ಪಿಸುವಂತಿದೆ. ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಪರಸ್ಪರ ಹಿತಾಸಕ್ತಿಗಳ ಸಂಘರ್ಷದಲ್ಲಿರುವ ಭಾರತ ಮತ್ತು ಚೈನಾಗಳ ತೆರೆ ಮರೆಯ ಮುಸುಕಿನ ಗುದ್ದಾಟ, ಇನ್ನೊಂದು ನೇರ ಯುದ್ಧಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇಲ್ಲದ್ದಿಲ್ಲ!
ಭಾರತ- ಚೈನಾಗಳ ಮಧ್ಯೆ ಈಗಾಗಲೇ ಹಲವಾರು ಗಡಿ ಸಮಸ್ಯೆ ತಕರಾರುಗಳು ಇದ್ದೇ ಇದೆ. ಅರುಣಾಚಲ್ ಪ್ರದೇಶದಿಂದ ಹಿಡಿದು ಅಕ್ಸಾಯ್ ಚಿನ್ ವರೆಗೂ ಚೈನಾದೊಂದಿಗೆ ಭಾರತದ ಹಗ್ಗ ಜಗ್ಗಾಟ ನಡೆದೇ ಇದೆ. ಸಾಂಪ್ರದಾಯಿಕ ಸಮಸ್ಯೆಗಳ ಜೊತೆಗೆ, ಇತ್ತೀಚಿನ ಬೆಳವಣಿಗೆಗಳಿಂದ ಸಾಗರ ಸಂಬಂಧಿತ ರಾಜಕೀಯ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ದಕ್ಷಿಣ ಚೈನಾ ಸಮುದ್ರದ ವಿವಾದ ಮಾತ್ರವಲ್ಲದೇ, ಹಿಂದೂ ಮಹಾಸಾಗರದ ಭದ್ರತೆಯ ವಿಷಯದಲ್ಲೂ ಭಾರತ ಹಾಗೂ ಚೈನಾಗಳನ್ನು ಸಂಭಾವ್ಯ ಪ್ರತಿಸ್ಪರ್ಧಿಗಳಾಗಿ ಬಿಂಬಿಸಲಾಗುತ್ತಿದೆ. 1940 ದಶಕದ ಹಳೆಯ ನಕ್ಷೆಯ ಆಧಾರದ ಮೇಲೆ ಚೈನಾ ದಕ್ಷಿಣ ಚೈನಾ ಸಮುದ್ರ ತನ್ಗೆ ಸೇರಿದ್ದು ಎಂಬ ವಾದ ಮುಂದಿಡುತ್ತಿದೆ! ಸದ್ಯಕ್ಕೆ ಚೈನಾ ವಿವಾದಿತ ವೂಡಿ ದ್ವೀಪದಲ್ಲಿ ಅತ್ಯಾಧುನಿಕ ಕ್ಷಿಪನಿಗಳನ್ನು ನಿಯೋಜಿಸುತ್ತಿದೆ. ವಿವಾದಿತ ದ್ವೀಪಗಳನ್ನು ಚೈನಾ 1974ರಲ್ಲಿ ದಕ್ಷಿಣ ವಿಯೆಟ್ನಾಮ್ ನಿಂದ ವಶಪಡಿಸಿಕೊಂಡಿತ್ತು. ಪ್ರದೇಶದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳುವ ಸಂಕೇತವಾಗಿ 1988ರಲ್ಲಿ ಮೂರು ವಿಯೆಟ್ನಾಮಿ ನೌಕೆಗಳನ್ನು ಮುಳುಗಿಸಿದ್ದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇವೆಲ್ಲವೂ ದಕ್ಷಿಣ ಚೈನಾ ಸಮುದ್ರದ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸಿಕೊಳ್ಳುವ ಚೈನಾದ ಆತುರ, ಆಸಕ್ತಿಗಳಿಗೆ ಕನ್ನಡಿ ಹಿಡಿದಂತಿದೆ.
ದಕ್ಷಿಣ ಚೈನಾ ಸಮುದ್ರದಲ್ಲಿ ಚೈನಾ ಜೊತೆಗೆ ನೇರ ಸ್ಪರ್ಧೆಯಲ್ಲಿರುವುದು ವಿಯೆಟ್ನಾಮ್ ಮತ್ತಿತರ ಪೂರ್ವ ಏಷ್ಯಾದ ಸಣ್ಣ ರಾಷ್ಟ್ರಗಳು. ಚೀನಿ ದೈತ್ಯನೊಂದಿಗಿನ ಹೋರಾಟದಲ್ಲಿ ವಿಯೆಟ್ನಾಮ್ ಒಂಟಿಯೇನಲ್ಲ. ಅಮೆರಿಕಾ ಮತ್ತದರ ಪ್ರಾದೇಶಿಕ ಮಿತ್ರರಾದ ಆಸ್ಟ್ರೇಲಿಯಾ, ಜಪಾನ್, ಪಿಲಿಪ್ಪೈನ್ಸ್ ಮತ್ತು ದಕ್ಶಿಣ ಕೊರಿಯಾಗಳು ವಿಯೆಟ್ನಾಮ್ ಬೆನ್ನಿಗಿವೆ. ಪ್ರದೇಶದಲ್ಲಿ ಅಮೆರಿಕಾದ ಸಾಮರಿಕ ಹಿತಾಸಕ್ತಿಗಳು ಮತ್ತು ಮುಕ್ತ ಸಾಗರ ಸಂಚಾರದಂಥ ಅಂತರ್ರಾಷ್ಟ್ರೀಯ ಉದಾರ ಮೌಲ್ಯಗಳೂ ಬಹುಮುಖ್ಯ ಪಾತ್ರವಹಿಸುತ್ತವೆ. ಭಾರತದ ದಕ್ಷಿಣ ಚೈನಾ ವಿದೇಶಾಂಗ ನೀತಿ ಮುಕ್ತ ಸಾಗರ ಸಂಚಾರದ ಪರವಾಗಿದೆ ಹಾಗೂ ಅಮೆರಿಕಾದ ವಿದೇಶಾಂಗ ನೀತಿಗೆ ಪೂರಕವಾಗುವಂತಿದೆ. ಭಾರತದ ನಿಲುವು ಚೈನಾಕ್ಕೆ ಇರಿಸು ಮುರಿಸುಂಟಾಗಿದ್ದಷ್ಟೇ ಅಲ್ಲದೇ, ಭಾರತವನ್ನು ಚೈನಾ ಹಿತಾಸಕ್ತಿಗಳ ಸಂಭಾವ್ಯ ಶತ್ರುವನ್ನಾಗಿ ಪರಿಗಣಿಸುವಂತೆ ಮಾಡಿದೆ. ಇನ್ನೊಂದೆಡೆ ವಿಯೆಟ್ನಾಮ್ ಸಾಗರ ತೀರಗಳ ತೈಲ ನಿಕ್ಷೇಪಗಳಲ್ಲಿ ಭಾರತದ ಬಂಡವಾಳ ಹೂಡಿಕೆ, ಹಾಗೂ ಪ್ರಾದೇಶಿಕ ಹಿತಾಸಕ್ತಿ ಕಾಪಾಡುವಲ್ಲಿ ಅಮೆರಿಕಾ, ಜಪಾನ್ ಮತ್ತು ವಿಯೆಟ್ನಾಮ್ ಗಳ ನೌಕಾದಳಗಳ ಜೊತೆ ಬಲಿಷ್ಠ ಭಾರತದ ನೌಕಾದಳವೂ ಕೈಜೋಡಿಸಿರುವುದು ಚೈನಾದ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದಷ್ಟೇ ಅಲ್ಲದೇ ಭಾರತ ದಕ್ಷಿಣ ಚೈನಾ ಸಮುದ್ರದಲ್ಲಿ ಸಾಂಪ್ರದಾಯಿಕ ನೈತಿಕ ಪ್ರಭಾವ ಹೊಂದಿದ್ದು, ಇತ್ತಿಚೆಗೆ ಪೂರ್ವ ಏಷ್ಯಾದ ಸಣ್ಣ ಪುಟ್ಟ ರಾಷ್ಟ್ರಗಳು ಭಾರತವನ್ನು ದೊಡ್ಡಣ್ಣನ ಸ್ಥಾನದಲ್ಲಿಟ್ಟು, ಮೂಲಕ ಚೈನಾ ಪ್ರಭಾವ ತಗ್ಗಿಸಲು ಪ್ರಯತ್ನಿಸುತ್ತಿವೆ.
1962 ಯುದ್ಧದ ಸಂದರ್ಭದಲ್ಲಿ ಚೈನಾದ ಪಿ ಎಲ್ ಸೈನ್ಯ ನಿರ್ಣಾಯಕ ಜಯ ಸಾಧಿಸಿದ್ದು ಚಾರಿತ್ರಿಕ ಸತ್ಯ, ಅದೇ ರೀತಿ ಅವತ್ತಿನ ಪರಿಸ್ಥಿತಿಯಲ್ಲಿ ಚೈನಾದ ನೌಕಾಶಕ್ತಿ ಅತ್ಯಂತ ಕಳಪೆಯಾಗಿತ್ತು ಎಂಬ ವಿಷಯವೂ ಅಷ್ಟೇ ಸತ್ಯ! ಇದೇ ಕಾರಣಕ್ಕಾಗಿಯೇ ಚೈನಾ 1962 ಯುದ್ಧದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದರೂ ಯುದ್ಧ ಮುಂದುವರಿಸಲು ಅವಕಾಶವಿದ್ದಾಗಲೂ ಭಾರತದೊಳಗೆ ಮುನ್ನುಗ್ಗಿ ಬರಲು ಅತಿಯಾದ ಆಸಕ್ತಿ ತೋರಿಸಲಿಲ್ಲ ಎಂಬ ವಾದವೂ ಇದೆ. ಇವತ್ತಿಗೂ ಭಾರತದ ನೌಕಾ ಪಡೆ ವಿಶ್ವದ ಅಗ್ರಗಣ್ಯ ನೌಕಾಶಕ್ತಿಗಳ ಸಾಲಿನಲ್ಲಿ ವಿರಾಜಮಾನವಾಗಿರುವುದು ಹಾಗೂ ಹಿಂದೂ ಮಹಾಸಾಗರದ ಅನಭಿಷಿಕ್ತ ದೊರೆಯಾಗಿರುವುದೇ ಇದಕ್ಕೆ ಸಾಕ್ಷಿ. ಆದರೆ ಇವತ್ತಿನ ಪರಿಸ್ಥಿತಿಯಲ್ಲೇನಾದರೂ ಇಂಡೋ-ಚೈನಾ ಯುದ್ಧ ನಡೆದರೆ ಅದು 1962 ಪರಿಸ್ಥಿತಿಗಿಂತ ಬಹಳಷ್ಟು ವಿಭಿನ್ನವಾಗಿರುತ್ತದೆ. 1962ರಲ್ಲಿ ಯುದ್ಧ ಕೇವಲ ಉತ್ತರದ ಇಂಡೋ ಚೈನಾ ಗಡಿಗಳಿಗಷ್ಟೇ ಸೀಮಿತವಾಗಿತ್ತು ಹಾಗೂ ಭಾರತವನ್ನು ಸುತ್ತುವರಿದು ದಾಳಿ ನಡೆಸುವ ನೌಕಾ ಸಾಮರ್ಥ್ಯ ಚೈನಾದಲ್ಲಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ ಚೈನಾ ಭಾರತದ ಸುತ್ತಾ ನೌಕಾ ನೆಲೆಗಳನ್ನು ಸ್ಥಾಪಿಸಿಕೊಂಡಿದೆ. ಪಾಕಿಸ್ತಾನದ ಸಹಕಾರದೊಂದಿಗೆ ಗ್ವಾದಾರ್ ನಲ್ಲಿ ನೌಕಾನೆಲೆ ನಿರ್ಮಿಸಿ ಚೀನಿ ನೌಕಾದಳ ಅರಬ್ಬೀ ಸಮುದ್ರಕ್ಕೆ ನೇರ ಲಗ್ಗೆ ಇಡುತ್ತಿದೆ. ಬಾಂಗ್ಲಾದೇಶದ ಚಿತ್ತಗಾಂಗ್, ಶ್ರೀಲಂಕಾದ ಹಂಬನ್ ಟೋಟಾಗಳಲ್ಲಷ್ಟೇ ಅಲ್ಲದೇ ಇನ್ನೂ ಹಲವೆಡೆ ಬಂದರುಗಳನ್ನು, ನೌಕಾನೆಲೆಗಳನ್ನು ನಿರ್ಮಿಸಿ ಭಾರತದ ಸುತ್ತಾ ನೌಕಾನೆಲೆಗಳ ಹಾರವನ್ನೇ ಸೃಷ್ಟಿಸಿದೆ. ಯುದ್ಧ ನೀತಿಯ ವಿಶ್ಲೇಷಕರು ಇದನ್ನು "ಚೈನಾದ ಮುತ್ತಿನ ಹಾರದ ನೀತಿ" (String of Pearls) ಎಂದು ಹೆಸರಿಸುತ್ತಾರೆ! ಯುದ್ಧವೇನಾದರೂ ನಡೆದಲ್ಲಿ, ನೌಕಾ ನೆಲೆಗಳ ಮೂಲಕ ಚೈನಾ ಭಾರತವನ್ನು ವಿಭಿನ್ನ ದಿಕ್ಕುಗಳಿಂದ ಕಾಡಬಹುದು. ರಾಜಕೀಯ ವಿಶ್ಲೇಷಕ ಪ್ರೇಮ ಶೇಖರರವರು ತಮ್ಮ ಲೇಖನವೊಂದರಲ್ಲಿ ಮುತ್ತಿನ ಹಾರವನ್ನು ಸೂಕ್ತವಾಗಿಯೇ "ಕುಟುಕು ಕೊಂಡಿಗಳ ಹಾರ" ಎಂದಿದ್ದಾರೆ!
ಭಾರತ ಕೂಡ ಚೈನಾದ ಮುತ್ತಿನ ಹಾರದ ನೀತಿಗೆ ಪ್ರತಿಯಾಗಿ ಸಮರ ನೀತಿ ರೂಪಿಸಿದೆ. ಶತ್ರುವಿನ ಶತ್ರು ನಮಗೆ ಮಿತ್ರ ಎಂಬ ಚಾಣಕ್ಯನ 'ಮಂಡಲ ಸಿದ್ದಾಂತ'ವನ್ನು ಭಾರತ ಕಾರ್ಯಗತಗೊಳಿಸುತ್ತಿದೆ. ಸಮಾನಮನಸ್ಕ ಹಾಗೂ ಚೈನಾ ವಿರೋಧಿ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ವಿಯೆಟ್ನಾಮ್ ಇನ್ನಿತರ ರಾಷ್ಟ್ರಗಳ ಜೊತೆ ಭಾರತ ಸಮರಾಭ್ಯಾಸ ಹಾಗೂ ವಿಶ್ವಾಸ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಅಮೆರಿಕಾದ ನೇರ ಸಹಾಯ ನಿರೀಕ್ಷಿಸಲಾಗದಿದ್ದರೂ, ಚೈನಾ ಪ್ರಭಾವ ಹತ್ತಿಕ್ಕುವಲ್ಲಿ ಅಮೆರಿಕಾದ ಹಿತಾಸಕ್ತಿಗಳೂ ಅಡಗಿವೆ ಎಂಬುವುದನ್ನು ಮರೆಯುವಂತಿಲ್ಲ! ಇವೆಲ್ಲವುಗಳ ಜೊತೆಗೆ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಹಿತ ಜಲಾಂತರ್ಗಾಮಿ '.ಎನ್.ಎಸ್ ಅರಿಹಂತ್' ಭಾರತದ ನೌಕಾಪಡೆ ಸದಸ್ಯನಾಗುವುದರೊಂದಿಗೆ ಭಾರತ ವಿರೋಧಿ ನೌಕಾಪಡೆಗಳಿಗೆ ದಿಗಿಲು ಹುಟ್ಟಿಸಿದೆ! ಒಂದೇ ಬಾರಿಗೆ 4.35 ಮೈಲುಗಳ ವ್ಯಾಪ್ತಿಯುಳ್ಳ 12 ಸ್ವದೇಶಿ K15 ಸಾಗರಿಕಾ ಕ್ಷಿಪಣಿಗಳನ್ನು ಅಥವಾ 2,200 ಮೈಲುಗಳ ವ್ಯಾಪ್ತಿಯುಳ್ಳ ನಾಲ್ಕು  K4 ಖಂಡಾಂತರ ಅಣ್ವಸ್ತ್ರ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ '.ಎನ್.ಎಸ್ ಅರಿಹಂತ್' ಅರಿ(ಶತ್ರು)ಗಳ ಪಾಲಿಗೆ ನಿಜವಾದ ಅಂತಕನಾಗುವ ಮೂಲಕ ಭಾರತದ ಆತಂಕ ಕಡಿಮೆಯಾಗಿದೆ.





  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 29 February 2016)