ಶುಕ್ರವಾರ, ಅಕ್ಟೋಬರ್ 14, 2016

ಪಾಕಿಸ್ತಾನವನ್ನು ನಿಜಕ್ಕೂ ಆಳುತ್ತಿರುವವರ್ಯಾರು?

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಪಾಕಿಸ್ತಾನದ ರಾಜಕೀಯ ನಾಯಕರು ಕಮಂಗಿಗಳಾದರೆ ಪಾಕ್ ಮಿಲಿಟರಿ ಅಧಿಕಾರಿಗಳು ಎಡಬಿಡಂಗಿಗಳೆಂತೆ ವರ್ತಿಸುತ್ತಿದ್ದಾರೆ.

-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಕಳೆದ ಎಪ್ಪತ್ತು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದಲ್ಲಿ ಪ್ರಭಾವ ಸ್ಥಾಪಿಸುವುದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿವೆ. 3 ಇಂಡೋ-ಪಾಕ್ ಯುದ್ಧಗಳೂ ನಡೆದುಹೋಗಿವೆ. ಉರಿ ದಾಳಿ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕುತಂತ್ರಗಳಲ್ಲಿ ಮೊದಲನೆಯೆದೇನೂ ಅಲ್ಲ. ಇಂಥ ಹಲವಾರು ಘಟನೆಗಳನ್ನು ಭಾರತ ದಶಕಗಳಿಂದ ಸಹಿಸಿಕೊಂಡಿದೆ. ಅಂತರ್ರಾಷ್ಟ್ರೀಯ ಕಾನೂನುಗಳು ಮತ್ತು ನಡಾವಳಿಗಳನ್ನು ಮುರಿಯಲಿಚ್ಚಿಸದ ಭಾರತ ಪಾಕಿಸ್ತಾನದ ವಿಷಯದಲ್ಲಿ ಸಂಯಮದಿಂದಲೇ ನಡೆದುಕೊಂಡಿದೆ. ಬಹುಕಾಲದಿಂದ ಪಾಕಿಸ್ತಾನದ ಉದ್ಧಟತನಕ್ಕೆ ನಿರ್ಲಿಪ್ತ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ನೀತಿಯೇ Strategic Restraint! ಆದರೆ ಪ್ರಸಕ್ತ ಭಾರತ ಬದಲಾಗಿದೆ. ಭಾರತದ ತಾಳ್ಮೆಯ ಕಟ್ಟೆಯೊಡೆದಿದೆ. ಪ್ರತಿ ಬಾರಿಯೂ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ತಟಸ್ಥಗೊಳಿಸಾಲಾಗದು ಎಂಬ ಸತ್ಯ ಪಾಕಿಸ್ತಾನಕ್ಕೂ ಅರಿವಾಗುವ ಕಾಲ ಬಂದಿದೆ.

ಕಳೆದ ಎಪ್ಪತ್ತು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದಲ್ಲಿ ಪ್ರಭಾವ ಸ್ಥಾಪಿಸುವುದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿವೆ. 3 ಇಂಡೋ-ಪಾಕ್ ಯುದ್ಧಗಳೂ ನಡೆದುಹೋಗಿವೆ. ಉರಿ ದಾಳಿ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕುತಂತ್ರಗಳಲ್ಲಿ ಮೊದಲನೆಯೆದೇನೂ ಅಲ್ಲ. ಇಂಥ ಹಲವಾರು ಘಟನೆಗಳನ್ನು ಭಾರತ ದಶಕಗಳಿಂದ ಸಹಿಸಿಕೊಂಡಿದೆ. ಅಂತರ್ರಾಷ್ಟ್ರೀಯ ಕಾನೂನುಗಳು ಮತ್ತು ನಡಾವಳಿಗಳನ್ನು ಮುರಿಯಲಿಚ್ಚಿಸದ ಭಾರತ ಪಾಕಿಸ್ತಾನದ ವಿಷಯದಲ್ಲಿ ಸಂಯಮದಿಂದಲೇ ನಡೆದುಕೊಂಡಿದೆ. ಬಹುಕಾಲದಿಂದ ಪಾಕಿಸ್ತಾನದ ಉದ್ಧಟತನಕ್ಕೆ ನಿರ್ಲಿಪ್ತ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ನೀತಿಯೇ Strategic Restraint! ಆದರೆ ಪ್ರಸಕ್ತ ಭಾರತ ಬದಲಾಗಿದೆ. ಭಾರತದ ತಾಳ್ಮೆಯ ಕಟ್ಟೆಯೊಡೆದಿದೆ. ಪ್ರತಿ ಬಾರಿಯೂ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ತಟಸ್ಥಗೊಳಿಸಾಲಾಗದು ಎಂಬ ಸತ್ಯ ಪಾಕಿಸ್ತಾನಕ್ಕೂ ಅರಿವಾಗುವ ಕಾಲ ಬಂದಿದೆ.

28 ಸೆಪ್ಟೆಂಬರ್ 2016ರಂದು ಭಾರತದ ವಿಶೇಷ ಪಡೆಗಳು ಗಡಿ ನಿಯಂತ್ರಣ ರೇಖೆ ಮೀರಿ ಪಾಕ್ ಆಕ್ರಮಿತ ಕಾಶ್ಮೀರದ ಒಳ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯೊಂದರಲ್ಲಿ ಭಯೋತ್ಪಾದಕಾರ ಶಿಬಿರಗಳನ್ನು ದ್ವಂಸಗೊಳಿಸಿದ್ದಾರೆ. ಪಾಕಿಸ್ತಾನದ ಕೃಪಾಕಟಾಕ್ಷದಲ್ಲಿ ಬೆಚ್ಚಗೆ ಮಲಗಿದ್ದ ಉಗ್ರರಿಗೆ ಭಾರತೀಯ ಸೇನೆಯ ರುದ್ರ ದರ್ಶನವಾಗಿದೆ! ಇಷ್ಟಕ್ಕೆ ಎಲ್ಲಾ ಮುಗಿಯಿತು ಎಂದುಕೊಳ್ಳುವಂತಿಲ್ಲ. ಹಾಗೆ ನೋಡಿದಲ್ಲಿ ಭಾರತ ಸರ್ಜಿಕಲ್ ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಹಿಂದೆಯೂ ಭಾರತದ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ ಉದಾಹರಣೆಗಳಿವೆ. ಆದರೆ ಬಾರಿಯ ಸರ್ಜಿಕಲ್ ಸ್ಟ್ರೈಕ್ಸ್ ಹಿಂದೆ ನಡೆದ ಕಾರ್ಯಾಚರಣೆಗಳಿಗಿಂತ ವಿಭಿನ್ನ. ಹಿಂದಿನ ಕಾರ್ಯಾಚರಣೆಗಳ ಬಗ್ಗೆ ಭಾರತ ಯಾವತ್ತೂ ಮುಕ್ತವಾಗಿ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಆದರೆ ಬಾರಿಯ ಕಾರ್ಯಾಚರಣೆಯ ಬಗ್ಗೆ ಸ್ವತಃ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್(DGMO), ಲೆಫ್ಟಿನೆಂಟ್ ಜನರಲ್ ರಣಬಿರ್ ಸಿಂಗ್ ಸೆಪ್ಟೆಂಬರ್ 28ರಂದು ನಡೆದ ಸರ್ಜಿಕಲ್ ಸ್ಟ್ರೈಕ್ಸ್ ಬಗ್ಗೆ ಅಧಿಕೃತವಾಗಿ ಸಾರ್ವಜನಿಕ ಹೇಳಿಕೆ ಕೊಟ್ಟಿದ್ದಾರೆ. ಪ್ರಧಾನಿ ನರೆಂದ್ರ ಮೋದಿಯವರು ಕೂಡ ಭಾರತ ಪಾಕಿಸ್ತಾನಗಳ ನಡುವಿನ ಆಟದ ನಿಯಮಗಳು ಬದಲಾಗುತ್ತಿವೆ ಎಂದಿದ್ದು ಭಾರತ ತನ್ನ ಸಂಯಮ ಮತ್ತು ಸಂಕೋಚಗಳ ಸಂಕೋಲೆಗಳನ್ನು ಬಿಡಿಸಿಕೊಳ್ಳುತ್ತಿರುವ ಸೂಚನೆ. ಎಲ್ಲಾ ಬೆಳವಣಿಗೆಗಳು ಭಾರತ ತನ್ನ ದಶಕಗಳ ಸಂಯಮದ ನೀತಿಯಾದ Strategic Restraint ನಿಂದ ಹೊರಬರುತ್ತಿರುವುದನ್ನು ಚಾತಮ್ ಹೌಸ್ ವಿಶ್ಲೇಷಣಾ ಸಂಸ್ಥೆಯ ಚಾರು ಲತ ಹಾಗ್ ಸರಿಯಾಗಿಯೇ ಗುರುತಿಸಿದ್ದಾರೆ.

ಸ್ವಾತಂತ್ರ್ಯಾನಂತರದಲ್ಲಿ ಕಾಶ್ಮೀರದ ಅಧಿಕಾರ ಯಾರ ಪಾಲಿಗೆ ದಕ್ಕಬೇಕು ಎನ್ನುವುದರ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಕಿತ್ತಾಡಿಕೊಂಡಿರುವುದು ಎಷ್ಟು ಸತ್ಯವೋ, ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದೊಳಗೆ ಚುನಾಯಿತ ಸರಕಾರ ಮತ್ತು ಪಾಕ್ ಸೇನೆ ಕಚ್ಚಾಡಿಕೊಳ್ಳುತ್ತಿರುವುದೂ ಅಷ್ಟೇ ಸತ್ಯ! ಬುರ್ಹಾನ್ ವಾನಿ ಹತ್ಯಾನಂತರದಲ್ಲಿ ನಡೆದ ಘಟನೆಗಳನ್ನು ಉತ್ಪ್ರೇಕ್ಷಿಸಿ ಭಾರತೀಯ ಸೈನ್ಯ ಮತ್ತು ಒಟ್ಟಿನಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವೊಂದನ್ನು ಷರೀಫ್ ಮಾಡಿದ್ದರು. ಮೂಲಕ ಭಾರತವನ್ನು ಉಗ್ರ ರಾಷ್ಟ್ರ ಎಂದು ಬಿಂಬಿಸಿ ಮೂಲೆಗುಂಪು ಮಾಡಿ, ಕಾಶ್ಮೀರದ ವಿಷಯದಲ್ಲಿ ತನ್ನ ಪರವಾಗಿ ವಿಶ್ವ ಶಕ್ತಿಗಳ ಬೆಂಬಲವನ್ನು ಪಡೆದುಕೊಳ್ಳುವ ರಾಜತಾಂತ್ರಿಕ ಹುನ್ನಾರ ಪಾಕಿಸ್ತಾನದ ಪ್ರಧಾನಿಯ ತಲೆಯಲ್ಲಿ ರೂಪುಗೊಂಡಿತ್ತು. ಅಷ್ಟರಲ್ಲಾಗಲೇ ಪಾಕಿಸ್ತಾನದ ಸೇನೆ ಭಯೋತ್ಪಾದಕರ ಜೊತೆ ಸೇರಿಕೊಂಡು ಉರಿ ದಾಳಿಗೆ ಕಾರಣವಾಗುತ್ತದೆ. ಪಾಕ್ ಸೇನೆಯ ಎಡವಟ್ಟಿನ ಕೆಲಸದಿಂದಾಗಿ, ಷರೀಫ್ ಕುತಂತ್ರಗಳೆಲ್ಲವೂ ತಲೆಕೆಳಗಾಗಿ ಇಂದು ವಿಶ್ವಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಮತ್ತೆ ದೃಡಪಡಿಸಿಕೊಂಡಿದೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಪಾಕಿಸ್ತಾನದ ರಾಜಕೀಯ ನಾಯಕರು ಕಮಂಗಿಗಳಾದರೆ ಪಾಕ್ ಮಿಲಿಟರಿ ಅಧಿಕಾರಿಗಳು ಎಡಬಿಡಂಗಿಗಳೆಂತೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಮುಖ್ಯಸ್ಥರಿಬ್ಬರೂ ಭಾರತ ವಿರೋಧಿಗಳೇ ಆದರೂ, ಅವರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಪಾಕಿಸ್ತಾನದ ಆಡಳಿತ ಚುನಾಯಿತ ಸರಕಾರದ ಕೈಯಲ್ಲಿದೆಯೋ ಅಥವಾ ಮಿಲಿಟರಿ ಕಪಿಮುಷ್ಟಿಯಲ್ಲಿದೆಯೋ ಎನ್ನುವುದು ಯಕ್ಷಪ್ರಶ್ನೆಯಲ್ಲದೇ ಹೋದರೂ ಗೊಂದಲದ ಪ್ರಶ್ನೆಯೇ ಸರಿ. 1947-48 ಯುದ್ದದ ಸಮಯದಿಂದಲೇ ಪಾಕಿಸ್ತಾನದ ರಾಜಕೀಯ ನಾಯಕತ್ವ ಕಾಶ್ಮೀರದ ವಿಷಯದಲ್ಲಿ ರಾಜತಾಂತ್ರಿಕ ನಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮಿಲಿಟರಿ ನಾಯಕತ್ವ ಯುದ್ಧದ ಮೂಲಕವೇ ಕಾಶ್ಮೀರವನ್ನು ಪಡೆದುಕೊಳ್ಳುವ ಭ್ರಮೆಯಲ್ಲಿದೆ. ಅಕಿಲ್ ಶಾ ತಮ್ಮ The Army and Democracy: Military Politics in Pakistan ಎಂಬ ಪುಸ್ತಕದಲ್ಲಿ 1947-48 ಯುದ್ಧದಲ್ಲಿ ಪಾಕಿಸ್ತಾನದ ರಾಜಕೀಯ ನಾಯಕರು ಯುದ್ಧವಿರಾಮಕ್ಕೆ ಒಪ್ಪಿಕೊಂಡಿದ್ದು ಪಾಕ್ ಮಿಲಿಟರಿಯ ಅಸಮಧಾನಕ್ಕೆ ಕಾರಣವಾಗಿತ್ತು ಎಂದು ಬರೆದಿದ್ದಾರೆ. ಇದೇ ಅಸಮಾಧಾನ ಮುಂದೆ 1951ರಲ್ಲಿ ಪಾಕಿಸ್ತಾನದಲ್ಲಿ 'ರಾವಲ್ಪಿಂಡಿ ಪಿತೂರಿ' ಎಂಬ ಹೆಸರಿನ ಮೊದಲ ಮಿಲಿಟರಿ ದಂಗೆಗೂ ಕಾರಣವಾಯಿತು ಎಂಬ ಬಗ್ಗೆ ಬರೆಯುತ್ತಾರೆ. ಪಾಕಿಸ್ತಾನದ ಮೇಜರ್ ಜನರಲ್ ಅಕ್ಬರ್ ಖಾನ್ ಮತ್ತವನ ಮಿಲಿಟರಿ ಸಹಚರರ ರಾವಲ್ಪಿಂಡಿ ಪಿತೂರಿ ಯಶಸ್ವಿಯಾಗಲಿಲ್ಲ ಎನ್ನುವುದು ಬೇರೆ ಕಥೆಯಾದರೂ ಪಾಕ್ ಸೃಷ್ಟಿಯ ಆರಂಭದಲ್ಲೇ ರಾಜಕೀಯ-ಮಿಲಿಟರಿ ಮುಖ್ಯಸ್ಥರ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಯಶಸ್ವೀ ದಂಗೆಗಾಗಿ ಪಾಕ್ ಸೈನ್ಯ ಮತ್ತೆ ಏಳು ವರ್ಷಗಳು ಕಾಯಬೇಕಾಯ್ತು. 1958ರಲ್ಲಿ ಜನರಲ್ ಆಯೂಬ್ ಖಾನ್ ಚುನಾಯಿತ ಸರಕಾರವನ್ನು ಕಿತ್ತೊಗೆದು ಮಿಲಿಟರಿ ಸರ್ವಾಧಿಕಾರಿಯಾಗುತ್ತಾನೆ.

1958ರಿಂದ 1971ರವರೆಗಿನ ಸುದೀರ್ಘ ಸರ್ವಾಧಿಕಾರದ ನಂತರ1971ರಲ್ಲಿ ಮತ್ತೆ ಜುಲ್ಫೀಕರ್ ಆಲಿ ಭುಟ್ಟೋ ಪ್ರಧಾನಿಯಾಗುತ್ತಾರೆ. ಭುಟ್ಟೋ ಅಧಿಕಾರಾವಧಿಯಲ್ಲಿ ಸಿಮ್ಲಾ ಒಪ್ಪಂದಕ್ಕೆ ಭಾರತ ಪಾಕಿಸ್ತಾನಗಳೆರಡೂ ಸಹಿ ಹಾಕುತ್ತವೆ. ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ದ್ವಿಪಕ್ಷೀಯ ಮಾತುಕತೆಗಳಿಂದ ಬಗೆಹರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಎರಡೂ ದೇಶಗಳ ಸಂಸತ್ತುಗಳು ನಿರ್ಣಯವನ್ನು ಒಪ್ಪಿಕೊಂಡಾಗ ಕಾಶ್ಮೀರ ರಾಜತಾಂತ್ರಿಕ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡಿತ್ತು. ಆದರೆ ಪ್ರಯತ್ನಗಳು ಯಶ ಕಾಣುವ ಮುನ್ನವೇ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರೆಯಾಗಿ ಜನರಲ್ ಜಿಯಾ ಉಲ್ ಹಕ್ ನೇತೃತ್ವದಲ್ಲಿ ಹಿಂದಿರುಗಿದ್ದ ಮಿಲಿಟರಿ ಸರ್ವಾಧಿಕಾರ ಕೊನೆಯಾಗಿದ್ದು 1988 ವಿಮಾನ ಅಪಘಾತದಲ್ಲಿ ಜಿಯಾ ಮಡಿದಾಗಲೇ. ನಂತರ ಬೆನಜೀರ್ ಭುಟ್ಟೋ ನೇತೃತ್ವದಲ್ಲಿ ಬಂದ ಸರಕಾರ ಭಾರತದೊಂದಿಗಿನ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿತ್ತು. 1989ರಲ್ಲಿ ಪಾಕ್ ಪ್ರಧಾನಿ ಭುಟ್ಟೋ, ಭಾರತದ ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿಯಾಗುತ್ತಾರೆ. ಹೊತ್ತಿಗಾಗಲೇ ಭೇಟಿಯನ್ನು ವಿರೋಧಿಸಿ ಪಾಕ್ ಸೇನೆ ಜರ್ಬ್--ಅಮಿನ್ ಎನ್ನುವ ಬೃಹತ್ ಸಮರಾಭ್ಯಾಸ ನಡೆಸುವ ಮೂಲಕ ಪ್ರಧಾನಿ ಭುಟ್ಟೋಗೆ ನೇರ ಸಂದೇಶ ರವಾನಿಸಿತ್ತು. 1990ರಲ್ಲಿ ಬೆನಜಿರ್ ಭುಟ್ಟೊರವರ ಸರಕಾರವನ್ನು ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ವಜಾಗೊಳಿಸುತ್ತಾರೆ Pakistan: Between Mosque and Military ಪುಸ್ತಕದ ಲೇಖಕ ಹುಸೈನ್ ಹಕ್ಕಾನಿಯವರು, ಅಧ್ಯಕ್ಷ ಇಶಾಕ್ ಖಾನ್ ರವರನ್ನು ಸಂದರ್ಶಿಸಿದಾಗ, ಮಿಲಿಟರಿಯಿಂದ ಭುಟ್ಟೋ ಪದಚ್ಯುತಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರಕಾರವನ್ನು ವಜಾಗೊಳಿಸಲಾಯಿತು ಎಂದು ಒಪ್ಪಿಕೊಂಡಿದ್ದಾರೆ. 1999 ಫೆಬ್ರವರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಷರೀಫ್ ಐತಿಹಾಸಿಕ ಲಾಹೋರ್ ಘೋಷಣೆಗೆ ಸಹಿ ಹಾಕಿದಾಗ, ಪಾಕ್ ಸೇನಾ ಮುಖ್ಯಸ್ಥ ಜನರಲ್ ಮುಶರಫ್ ಕಾರ್ಗಿಲ್ ಕಾರ್ಯಾಚರಣೆಗೆ ಸಿದ್ಧನಾಗಿದ್ದ! "ಕಾರ್ಗಿಲ್ ಕಾರ್ಯಾಚರಣೆ ವಾಜಪೇಯಿ ಬೆನ್ನಿಗೆ ಹಾಕಿದ ಚೂರಿ" ಎನ್ನುವುದನ್ನು ಷರೀಫ್ ಅವರೇ ಒಪ್ಪಿಕೊಂಡಿದ್ದಾರೆ!

ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳ ತಾಕಲಾಟ ಇಂದು ನಿನ್ನೆಯದಲ್ಲ. ಎರಡೂ ಶಕ್ತಿಗಳೂ ಭಾರತ ವಿರೋಧಿ ನೀತಿಯನ್ನೇ ಅನುಸರಿಸಿದರೂ, ಇವರ ಮಧ್ಯೆ ಸಾವಿರ ಭಿನ್ನಾಭಿಪ್ರಾಯಗಳಿವೆ. ಎರಡೂ ಶಕ್ತಿಗಳಲ್ಲಿ ಯಾರೂ ಭಾರತಕ್ಕೆ ಹಿತವರಲ್ಲ ಎನ್ನುವುದು ನೆನಪಿಟ್ಟುಕೊಳ್ಳಬೇಕಾದ ವಿಚಾರ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟೈಕ್ ಗಳು, ನಿಗೂಡ ಕಾರ್ಯಾಚರಣೆಗಳು ಅಥವಾ ನೇರ ಯುದ್ಧವೇ ಇರಲಿ ಪಾಕಿಸ್ತಾನದ ದ್ವಂದ್ವಗಳನ್ನು ಅರಿತುಕೊಳ್ಳುವುದು ಭಾರತದ ಸಮರತಾಂತ್ರಿಕ ದೃಷ್ಟಿಯಿಂದ ಅತ್ಯವಶ್ಯಕ. ಆಂತರಿಕವಾಗಿ ಮತ್ತು ಅಂತರಾಷ್ಟ್ರೀಯವಾಗಿಯೂ ಪಾಕಿಸ್ತಾನ ಈಗಾಗಲೇ ಸೋತುಹೋಗಿದೆ. ಸಾರ್ವಕಾಲಿಕ ಸಮರ ತಂತ್ರ ನಿಪುಣ ಮತ್ತು ತತ್ವಶಾಸ್ತ್ರಜ್ಞ ಸನ್ ತ್ಸು ಹೇಳುತ್ತಾನೆ, “ಯಶಸ್ವೀ ಸೈನ್ಯ ಮೊದಲು ಗೆಲ್ಲುತ್ತದೆ, ನಂತರವಷ್ಟೇ ರಣರಂಗ ಪ್ರವೇಶಿಸುತ್ತದೆ. ಆದರೆ ಸೋಲುವ ಸೈನ್ಯ ರಣರಂಗ ಪ್ರವೇಶಿಸಿದ ಬಳಿಕ ಗೆಲ್ಲಲು ಪ್ರಯತ್ನಿಸುತ್ತದೆ." ನಿಟ್ಟಿನಲ್ಲಿ ಭಾರತ ಈಗಾಗಲೇ ಯುದ್ಧ ಗೆಲ್ಲುವ ಎಲ್ಲಾ ಮಾನಸಿಕ ಮತ್ತು ರಾಜತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಾಗಿದೆ. ಇನ್ನೇನಿದ್ದರೂ ಭಾರತ ತನ್ನ ಗೆಲುವನ್ನು ದೃಡಪಡಿಸಿಕೊಳ್ಳುವುದಷ್ಟೇ ಬಾಕಿ ಉಳಿದಿರುವ ಕೆಲಸ.

(This article was published in Vishwavani newspaper on 05 October 2016)







      KEERTHIRAJ (keerthiraj092@gmail.com)
      Assistant Professor
International Relations and Political Science
Alliance University, Bangalore.