ಗುರುವಾರ, ಫೆಬ್ರವರಿ 23, 2017

ಶ್ರೇಷ್ಟತೆಯ ಹುಡುಕಾಟದಲ್ಲಿ ಗೋಡೆಗಳ ಜಂಜಾಟ!


ಚುನಾವಣಾ ಪೂರ್ವದಲ್ಲಿ ಡೊನಾಲ್ಡ್ ಟ್ರಂಪ್ ಆಡಿದ ಮಾತುಗಳೆಲ್ಲವೂ ಅನುಷ್ಟಾನಕ್ಕಿಳಿಯುವುದಿಲ್ಲ ಎಂದು ನಂಬಿಕೆ ನಿಧಾನವಾಗಿ ಕರಗುತ್ತಿದೆ. ಟ್ರಂಪ್ ತಾನಾಡಿದ ಪ್ರತಿ ಮಾತನ್ನೂ ಅನುಷ್ಟಾನಕ್ಕಿಳಿಸುವ ಉತ್ಸಾಹದಲ್ಲಿರುವುದು, ಅಧಿಕಾರಾವಧಿಯ ಪ್ರಾರಂಭಿಕ ವಾರಗಳಲ್ಲೇ ಸ್ಪಷ್ಟವಾಗಿದೆ. 'ಅಮೆರಿಕಾ ಮೊದಲು' ಎಂಬ ಪರಿಕಲ್ಪನೆಯಿಂದ ಪ್ರಭಾವಿತರಾಗಿ ಟ್ರಂಪ್ ಇತರ ದೇಶಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸುತ್ತಿರುವುದೂ ರಹಸ್ಯವಾಗಿ ಉಳಿದಿಲ್ಲ. ವಿಭಿನ್ನ ಕಾರಣಗಳಿಗೋಸ್ಕರ ಅಮೆರಿಕಾ ಪ್ರವೇಶಿಸುವ ಇತರ ದೇಶಗಳ ವಲಸಿಗರಿಗೆ ಬಾಗಿಲು ಮುಚ್ಚುವ ಪ್ರಕ್ರಿಯೆ ಈಗಾಗಲೇ ತುಂಬಾ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಇತ್ತೀಚೆಗೆ ಎಬಿಸಿ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ರವರೇ ತಮ್ಮ ಗುರಿ, ಅಮೆರಿಕಾದೊಳಗೆ ಬರಲು ಬಯಸುವವರನ್ನು ತಡೆದು ಭೌತಿಕ ಮತ್ತು ಮಾನಸಿಕ ಗೋಡೆಗಳನ್ನು ನಿರ್ಮಿಸುವುದು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿಯವರೆಗೆ ಅಮೆರಿಕಾದೊಳಗೆ ಪ್ರವೇಶ ಪಡೆದುಕೊಳ್ಳುವುದು ಅತ್ಯಂತ ಸುಲಭದ ಕೆಲಸವಾಗಿತ್ತು ಎಂದಿರುವ ಟ್ರಂಪ್, ಮುಂದಕ್ಕೆ ಅಮೆರಿಕಾ ಪ್ರವೇಶ ಅತ್ಯಂತ ಕಷ್ಟಕರ ಪ್ರಕ್ರಿಯೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ವ್ಯಕ್ತಿ, ಸಮುದಾಯ ಅಥವಾ ರಾಷ್ಟ್ರ ಶ್ರೇಷ್ಟತೆಯತ್ತ ಸಾಗಬೇಕಾದಲ್ಲಿ ಎಲ್ಲರನ್ನೂ ಒಪ್ಪಿಕೊಂಡು ಮಾನವ ಕುಲದ ಸಹೋದರತೆಯನ್ನು ಪ್ರತಿಪಾದಿಸಬೇಕೇ ವಿನಃ ದೃಷ್ಟಿಕೋನಗಳನ್ನು ಸಂಕುಚಿತಗೊಳಿಸುವ ಗೋಡೆಗಳ ನಿರ್ಮಾಣದಲ್ಲಿ ಸಮಯ ವ್ಯರ್ಥ ಮಾಡುವುದು ಸರ್ವಥಾ ಸರಿಯಲ್ಲ. ಇವತ್ತಿಗೆ ಮೆಕ್ಸಿಕೊ ಗಡಿಯಲ್ಲಿ ಟ್ರಂಪ್ ಕಟ್ಟ ಹೊರಟಿರುವ ಭೌತಿಕ ಗಡಿ ಗೋಡೆ, ಕೆಲ ದೇಶಗಳ ನಾಗರಿಕರು ಅಮೆರಿಕಾ ಪ್ರವೇಶಿಸದಂತೆ ಹೊರಡಿಸಿರುವ ಸುಗ್ರೀವಾಜ್ಞೆ ನಮ್ಮೆಲ್ಲರಿಗೂ ಗೋಚರವಾಗಿರುವ ಮತ್ತು ಚರ್ಚೆಗೊಳಗಾಗಿರುವ ವಿಷಯ. ಕಣ್ಣಿಗೆ ಕಾಣುವ ಭೌತಿಕ ಗೋಡೆಗಳನ್ನು ಮುಂದೊಂದು ದಿನ ಕೆಡವಬಹುದಾದರೂ, ಟ್ರಂಪ್ ನಿರ್ಮಿಸುತ್ತಿರುವ ಮಾನಸಿಕ ಗೋಡೆಗಳು ಅಂತರಾಷ್ಟ್ರೀಯ ವ್ಯವಸ್ಥೆಯ ಮೇಲೆ ಅನಾರೋಗ್ಯಕರ ಪರಿಣಾಮ ಬೀರುವುದು ಖಂಡಿತ. ಪ್ರಥಮ ಮಹಾಯುದ್ಧಕ್ಕೂ ಮೊದಲು ಅಮೆರಿಕಾ ದಶಕಗಳ ಕಾಲ ಹೊರಜಗತ್ತಿನಿಂದ ದೂರವಾಗಿ 'ಭವ್ಯ ಏಕಾಂತದ ತತ್ವ' (Splendid Isolationaism) ಪಾಲಿಸಿತ್ತಾದರೂ, ಏಕಾಂತದ ಗಾಂಭೀರ್ಯತೆಯನ್ನು ಆಗಿನ ಅಮೆರಿಕನ್ ವ್ಯವಸ್ಥೆ ಕಾಪಾಡಿಕೊಂಡಿತ್ತು ಬಂದಿತ್ತು ಎನ್ನುವುದು ಗಮನಾರ್ಹ. ಇವಿಷ್ಟೇ ಅಲ್ಲದೇ ಅಮೆರಿಕಾವನ್ನು ದಿಗ್ಬಂಧನಕ್ಕೊಳಪಡಿಸಿ ಪ್ರವೇಶ ನಿಷೇಧಿಸುವ ಟ್ರಂಪ್ ಯೋಜನೆಗಳಲ್ಲಿ ಆ ಗಾಂಭೀರ್ಯತೆಗಳಿಲ್ಲ ಎಂಬ ವಿಚಾರವನ್ನು ಅಮೆರಿಕಾದ ಪ್ರಖ್ಯಾತ ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ

Image may contain: one or more peopleಮೆಕ್ಸಿಕೊದಿಂದ ಅಮೆರಿಕಾಗೆ ಬರುವ ವಲಸಿಗರನ್ನು ತಡೆಯಲು ಮೆಕ್ಸಿಕೊ ಮತ್ತು ಅಮೆರಿಕಾದ ಸಂಯುಕ್ತ ಸಂಸ್ಥಾನದ ಗಡಿಯಲ್ಲಿ ಗೋಡೆಯೊಂದನ್ನು ನಿರ್ಮಿಸಬೇಕು ಮತ್ತು ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮೆಕ್ಸಿಕೊ ಭರಿಸಬೇಕು ಎಂದು ಚುನಾವಣಾ ಪ್ರಚಾರದಲ್ಲೇ ಟ್ರಂಪ್ ಎಚ್ಚರಿಕೆ ನೀಡಿದ್ದರು. ಅಧ್ಯಕ್ಷನಾದ ಬಳಿಕವೂ ತನ್ನ ನಿಲುವಲ್ಲಿ ಕಿಂಚಿತ್ತೂ ಬದಲಾವಣೆ ಮಾಡಿಕೊಳ್ಳದ ಟ್ರಂಪ್ ಗಡಿಯಲ್ಲಿ ಗೋಡೆ ಕಟ್ಟುವಂತೆ ಮೆಕ್ಸಿಕೊಗೆ ತಾಕೀತು ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಸಿರಿಯಾ, ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ಗಳ ಜನ ಅಮೆರಿಕಾದತ್ತ ವಲಸೆ ಬರುವುದನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ ಟ್ರಂಪ್ ನಡೆ ವ್ಯಾಪಕ ಟೀಕೆಗೆ ಗ್ರಾಸವಾಗಿ ಕೊನೆಗೆ ಟ್ರಂಪ್ ಮುಖಭಂಗ ಅನುಭವಿಸಬೇಕಾಯ್ತು. ಇಷ್ಟಕ್ಕೂ ದೇಶದ ಸುತ್ತ ಗೋಡೆ ಕಟ್ಟಿಕೊಂಡು ಅಮೆರಿಕಾ ಸಾಧಿಸಬೇಕಾಗಿರುವುದಾದರೂ ಏನು? ಈ ಭೌತಿಕ ಮತ್ತು ಮಾನಸಿಕ ಗೋಡೆಗಳ ನಿರ್ಮಾಣದಿಂದ ಟ್ರಂಪ್ ಗಳಿಸುವುವ ಪರಮಾರ್ಥವಾದರೂ ಏನು? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತದೆ. ಅಂಕಿ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ನೋಡುವುದಾದರೆ, 1975ರಿಂದ ಅಮೆರಿಕಾದ ಮಣ್ಣಿನಲ್ಲಿ ಸಂಭವಿಸಿದ ಉಗ್ರ ದಾಳಿಗಳಲ್ಲಿ ನಿಷೇಧಕ್ಕೊಳಗಾದ ಏಳು ರಾಷ್ಟ್ರಗಳ ಪಾತ್ರ ಲವಲೇಶವೂ ಇಲ್ಲ ಮತ್ತು ಈ ದೇಶಗಳ ವಲಸಿಗರು ಒಬ್ಬ ಅಮೆರಿಕನ್ನನ ಸಾವಿಗೂ ಕಾರಣರಾಗಿಲ್ಲ! ಅಚ್ಚರಿಯ ವಿಷಯವೇನೆಂದರೆ ಉಗ್ರ ಚಟುವಟಿಕೆಗಳಿಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಕಾರಣಕರ್ತರಾದ ಸೌದಿ ಅರೇಬಿಯಾ, ಈಜಿಪ್ಟ್, ಪಾಕಿಸ್ತಾನ ಮತ್ತು ಯುಎಇ ನ ವಲಸಿಗರನ್ನು ಟ್ರಂಪ್ ನಿಷೇಧಿಸಿಲ್ಲ!

ಅಮೆರಿಕಾಗೆ ಹೊರಗಿನಿಂದ ಬರುವ ಜನರನ್ನು ತಡೆಯುವ  ನಿರ್ಧಾರದಿಂದ ನಾನು ಸಾವಿರಾರು ಅಮೆರಿಕನ್ನರ ಪ್ರಾಣ ಉಳಿಸುತ್ತಿದ್ದೇನೆ ಎನ್ನುತ್ತಿರುವ ಟ್ರಂಪ್ ಮಾತಿನಲ್ಲಿ ಸತ್ಯಕ್ಕಿಂತ ಜೊಳ್ಳೇ ಎದ್ದು ಕಾಣುತ್ತಿದೆ. ವಿದೇಶೀಯರು ಅಮೆರಿಕಾ ಭದ್ರತೆ ಮತ್ತು ಸುರಕ್ಷತೆಗೆ ಮಾರಕವಾಗುತ್ತಾರೆ ಎಂಬ ಮಾತಿಗೆ ಧೃಡವಾದ ಸಾಕ್ಷಿ ಆಧಾರಗಳಿಲ್ಲ. ಕ್ಯಾಟೊಸ್ ನೌರಾಸ್ಟೆಹ್ ಸರ್ವೇಯ ಪ್ರಕಾರ ಪ್ರತಿ ವರ್ಷ ಸಾವನ್ನಪ್ಪುವ 3.64 ಬಿಲಿಯನ್ ಅಮೆರಿಕನ್ನರಲ್ಲಿ ಒಬ್ಬ ಮಾತ್ರ ವಲಸಿಗರಿಂದ ಕೊಲ್ಲಲ್ಪಡುವ ಅವಕಾಶವಿರುತ್ತದೆ. ಅಮೆರಿಕಾದಲ್ಲಿ ವಲಸಿಗರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಕಡಿಮೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ದಾಖಲೆಗಳು. ಅಮೆರಿಕಾದ ಮಾಧ್ಯಮಗಳು ಕೂಡ ಅಮೆರಿಕಾದಲ್ಲೇ ಹುಟ್ಟಿ ಬೆಳೆದ ಪ್ರಜೆಗಳು ಮಾಡುವ ಹಿಂಸಾತ್ಮಕ ಅಪರಾಧಗಳಿಗೆ ಹೋಲಿಸಿದಲ್ಲಿ ವಲಸಿಗರು ಸಾವಿರ ಪಾಲು ವಾಸಿ ಎಂದು ಅಭಿಪ್ರಾಯ ಪಡುತ್ತವೆ. ವಲಸಿಗರು ಅಪಾಯಕಾರಿಗಳಲ್ಲ ಪುರಾವೆಗಳಿಗೆಲ್ಲಾ ಟ್ರಂಪ್ ಕೊಡುವ ಸಮರ್ಥನೆಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿವೆ.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಯಹೂದಿಗಳು ಅಮೆರಿಕಾದೊಳಗೆ ಪ್ರವೇಶ ಪಡೆದುಕೊಂಡಾಗ ಇಲ್ಲದ ಸಮಸ್ಯೆ ಇದೀಗ ಎದುರಾಗಿದೆ. ಅಮೆರಿಕಾ ಪ್ರಪ್ರಥಮ ಅಣ್ವಸ್ತ್ರ ಬಾಂಬ್ ನ ಸಂಶೋಧನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ವಿದೇಶೀ ವಿಜ್ಞಾನಿಗಳೇ! ಅಮೆರಿಕಾ ಇವತ್ತು ಎದೆ ತಟ್ಟಿ ಹೇಳಿಕೊಳ್ಳುವ ಹಲವಾರು ಶ್ರೇಷ್ಟ ಅನ್ವೇಷಣೆಗಳ ಹಿಂದಿನ ರೂವಾರಿಗಳು, ಬೃಹತ್ ಕಂಪೆನಿಗಳ ಸೂತ್ರ ಹಿಡಿದು ಮುನ್ನಡೆಸಿದವರೆಲ್ಲರೂ ಎಲ್ಲಿದಲೋ ಅಮೆರಿಕಾಗೆ ಬಂದ ಪರದೇಶಿಗಳೇ ಎನ್ನುವುದನ್ನು ಟ್ರಂಪ್ ಮರೆತಂತಿದೆ. ಅಮೆರಿಕಾ ಸೇನೆಯಲ್ಲಿ ಕಾರ್ಯನಿರ್ವಹಿಸಿ ಪ್ರಾಣತ್ಯಾಗ ಮಾಡಿದ ಹಲವಾರು ಸೈನಿಕರು ಬೇರೆ ದೇಶದಿಂದ ವಲಸೆ ಬಂದವರು. ಆದರೆ ವಲಸಿಗರು ಅಮೆರಿಕಾಗೋಸ್ಕರ ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು, ವಲಸಿಗರೆಂಬ ಏಕೈಕ ಕಾರಣಕ್ಕೆ ಟ್ರಂಪ್ ಕಡೆಗಣಿಸಿದ್ದು ಕೃತಘ್ನತೆಯ ಪರಮಾವಧಿ.

ಶೀತಲ ಸಮರದುದ್ದಕ್ಕೂ ದ್ವೇಷ ಮತ್ತು ವೈರತ್ವಗಳಿಗೆ ಸಾಕ್ಷಿಯಂತಿದ್ದ ಬರ್ಲಿನ್ ಗೋಡೆಯನ್ನು ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಒಂದಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೇಳುತ್ತಾರೆ, " ಶ್ರೇಷ್ಟ ಮತ್ತು ಶಕ್ತಿಶಾಲಿ ರಾಷ್ಟ್ರಗಳು ಗೋಡೆಗಳನ್ನು ಕಟ್ಟುವುದಿಲ್ಲ ಬದಲಿಗೆ ಗೋಡೆಗಳನ್ನು ನಾಶ ಮಾಡುತ್ತವೆ". ಹೌದು, ಗೋಡೆ ಕಟ್ಟಿಕೊಳ್ಳುವುದು ದುರ್ಬಲರು ಮತ್ತು ಕೀಳರಿಮೆಯುಳ್ಳವರ ಮನಸ್ಥಿತಿಯೇ ಹೊರತು ಬಲಿಷ್ಟರ ಸಾಧನವಲ್ಲ. ಇವೆಲ್ಲದರ ಮಧ್ಯೆ ಟ್ರಂಪ್ ಗಮನಿಸಬೇಕಾದ ಇನ್ನೊಂದು ವಿಷಯವಿದೆ, ಮುಂದೊಂದು ದಿನ ಟ್ರಂಪ್ ಕಟ್ಟಿಕೊಂಡ ಗೋಡೆಗಳನ್ನು ಕೆಡವಲು ಮನಸ್ಸು ಮಾಡಿದರೂ ಗೋಡೆಯಾಚೆಗಿನ ಮನಸ್ಸುಗಳು ಅಮೆರಿಕಾವನ್ನು ಒಪ್ಪಿಕೊಳ್ಳದೇ ಇರುವ ಸಾಧ್ಯತೆಯಿದೆ. ಗೋಡೆಗಳು ಯಾವುದೇ ದೇಶವನ್ನು ಶ್ರೇಷ್ಟತೆಯತ್ತ ಕೊಂಡೊಯ್ಯಲಾರವು ರೇಗನ್ ಮಾತುಗಳನ್ನು ಟ್ರಂಪ್ ಅರ್ಥೈಸಿಕೊಳ್ಳಬೇಕಿದೆ.


(This article was published in Varthabharathi Newsapaper on 22 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru


ಭಾರತ ಮ್ಯಾನ್ಮಾರ್ ಗಡಿಯಲ್ಲೊಂದು ತ್ರಿಶಂಕು ಸ್ವರ್ಗ!


1935ರಲ್ಲಿ ಮ್ಯಾನ್ಮಾರ್ ಪ್ರತ್ಯೇಕ ರಾಷ್ಟ್ರ ಮತ್ತು 1947ರಲ್ಲಿ ಭಾರತ ವಸಾಹತುಶಾಹಿ ಆಡಳಿತದಿಂದ ಮುಕ್ತವಾಗುವುದರ ಜೊತೆಗೆ ಈ ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸವಾಗಿದ್ದ ಜನರು ಹರಿಹಂಚಾಗಿ ಹೋದರು. ಕೊನ್ಯಾಕ್, ಖೈಯಮ್ನಿಯುಂಗನ್ ಮತ್ತು ಯಿಮ್ಚುಂಗರ್ ನಾಗಾ ಬುಡಕಟ್ಟುಗಳ ಜನರಲ್ಲಿ ಒಂದು ಭಾಗ ಭಾರತದ ಪೂರ್ವ ನಾಗಾಲ್ಯಾಂಡ್ ನಲ್ಲೂ, ಇನ್ನುಳಿದ ಭಾಗ ಮ್ಯಾನ್ಮಾರಿನ ನಾಗಾ ಸ್ವ ಆಡಳಿತ ವಲಯದಲ್ಲೂ  (Naga Self Administered Zone - SAZ) ವಾಸಿಸುವ ಅನಿವಾರ್ಯತೆ ಬಂದೊದಗಿತು. ಹೊಸ ರಾಜಕೀಯ ವ್ಯವಸ್ಥೆ ಒಂದಾಗಿದ್ದ ಸಮುದಾಯವನ್ನು ಪ್ರತ್ಯೇಕಿಸಿ ಎರಡು ವಿಭಿನ್ನ ರಾಷ್ಟ್ರಗಳಲ್ಲಿ ವಿಭಜಿಸಲ್ಪಟ್ಟಿದ್ದು,  ಈ ಸಮುದಾಯಗಳಲ್ಲಿ ವಿಶೇಷವಾಗಿ ನಾಗಾ ಜನರಲ್ಲಿ ತೀವ್ರ ಅಸಮಧಾನ ಸೃಷ್ಟಿಸಿತ್ತು. ಈ ಸಮುದಾಯಗಳು ಭಾರತ ಮತ್ತು ಮ್ಯಾನ್ಮಾರ್ ಗಳಲ್ಲಿ ಜನಾಂಗೀಯ ಅಲ್ಪಸಂಖ್ಯಾತರಾಗಿಬಿಟ್ಟ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳಲ್ಲಿ ಅಸುರಕ್ಷತಾ ಭಾವನೆಯನ್ನು ಬೆಳೆಸಿಕೊಂಡಿದ್ದು ಸಹಜವೇ ಆಗಿತ್ತು. ಜನರ ಕಳವಳಗಳಿಗೆ ಸ್ಪಂದಿಸುವ ಸಲುವಾಗಿ ಎರಡೂ ರಾಷ್ಟ್ರಗಳ ಸರಕಾರಗಳು ಮುಕ್ತ ಚಲನೆಯ ಆಡಳಿತ  Free Movement Regime (FMR) ಯೊಂದನ್ನು ಜಾರಿಗೊಳಿಸಿ, ನಾಗಾಗಳು ಎರಡೂ ಕಡೆಯ ರಾಷ್ಟ್ರಗಳ ಗಡಿ ದಾಟಿ 16 ಕಿಲೋಮೀಟರ್ ಗಳ ವರೆಗೆ ಯಾವುದೇ ವೀಸಾ ನಿರ್ಬಂಧಗಳಿಲ್ಲದೇ ಮುಕ್ತ ಸಂಚಾರ ಮಾಡುವ ಅವಕಾಶ ಕಲ್ಪಿಸಲಾಯಿತು.

ಪೂರ್ವ ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರಿನ NSAZ ಪ್ರದೇಶದಲ್ಲಿ ವಾಸಿಸುತ್ತಿರುವ ಎರಡೂ ಕಡೆಯ ಗಡಿಭಾಗದ ಜನರಲ್ಲಿ ಪರಸ್ಪರ ಕೌಟುಂಬಿಕ, ಸಾಂಸ್ಕೃತಿಕ ಸಂಬಂಧಗಳಿರುವುದಷ್ಟೇ ಅಲ್ಲದೇ ಆರ್ಥಿಕ ಕಾರಣಗಳಿಗಾಗಿಯೂ ಗಡಿಭಾಗದ ಎರಡೂ ಕಡೆಯ ಜನ ಒಬ್ಬರನ್ನೊಬ್ಬರು ಅತಿಯಾಗಿ ಅವಲಂಬಿಸಬೇಕಾಗುತ್ತದೆ. ಗಡಿಭಾಗದ ಜನರು, ಅದರಲ್ಲೂ ಮುಖ್ಯವಾಗಿ ಭಾರತದ ಗಡಿಯೊಳಗಿರುವ ಜನರ ಆಸ್ತಿ, ಹೊಲ ಮತ್ತು ಅರಣ್ಯಗಳು ಗಡಿ ರೇಖೆಯಿಂದಾಗಿ ಎರಡೂ ದೇಶಗಳ ಮಧ್ಯೆ ಹರಿಹಂಚಾಗಿ ಹೋಗಿದೆ. ಕೆಲವರ ಮನೆ, ಭೂಮಿ ಮತ್ತಿತರ ಸ್ಥಿರ ಆಸ್ತಿಗಳು ಅರ್ಧ ಭಾರತಲ್ಲೂ ಇನ್ನರ್ಧ ಗಡಿಯಾಚೆಗಿನ ಮ್ಯಾನ್ಮಾರಿನಲ್ಲಿರುವ ಪರಿಸ್ಥಿತಿ ನಿರ್ಮಾಣವಾಯ್ತು! ಒಂದು ರೀತಿಯಲ್ಲಿ ಎರಡೂ ಕಡೆ ಸಲ್ಲುವ ಇನ್ನೊಂದು ರೀತಿಯಲ್ಲಿ ಎಲ್ಲೂ ಸಲ್ಲದ ತ್ರಿಶಂಕು ಸ್ವರ್ಗವಾಗಿ ಮಾರ್ಪಾಡಾಯ್ತು ಭಾರತ-ಮ್ಯಾನ್ಮಾರ್ ಗಡಿ.  ಮ್ಯಾನ್ಮಾರ್ ಗಡಿಯೊಳಗಿರುವ ಗ್ರಾಮಗಳ ಜನ ತಮ್ಮ ದಿನನಿತ್ಯದ ಸಾಮಗ್ರಿಗಳನ್ನು ಖರೀದಿಸಲು ಭಾರತದ ಗಡಿ ದಾಟಲೇ ಬೇಕು. FMR ಲಾಭ ಪಡೆದುಕೊಂಡು ಮ್ಯಾನ್ಮಾರಿನ NSAZ ವಲಯದ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸವನ್ನೂ ಪಡೆಯುತ್ತಿದ್ದಾರೆ. 

Image may contain: 1 personದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುವ ಹಾಗೆ ಗಡಿಭಾಗದಲ್ಲಿ ವಾಸಿಸುವ ಕಲ್ಪನೆ ಸೊಗಸಾಗಿ ಕಂಡರೂ ಗಡಿಭಾಗದ ಜನರು ಪಡುವ ವ್ಯಥೆ ಅನುಭವಿಸಿದವರಿಗೇ ಗೊತ್ತು. ಒಂದೇ ಸಂಸ್ಕೃತಿ, ಭಾಷೆ, ಸಂಪ್ರದಾಯಗಳಷ್ಟೇ ಏಕೆ ತೀರಾ ಹತ್ತಿರದ ಸಂಬಂಧಿಕರಾಗಿದ್ದರೂ ಕೂಡ ಎರಡು ರಾಷ್ಟ್ರೀಯ ಗಡಿಗಳು ಇವರನ್ನೆಲ್ಲಾ ಪ್ರತ್ಯೇಕಿಸಿಬಿಟ್ಟಿದೆ. ಪೂರ್ವ ನಾಗಾಲ್ಯಾಂಡಿನ ಭೂ ಲಕ್ಷಣ ಮತ್ತು ಜನಸಾಂದ್ರತೆ ಹಂಚಿಹೋಗಿರುವ ರೀತಿ ತಿಳಿದ ಮೇಲಷ್ಟೇ ಈ ವಿಚಿತ್ರ ಗಡಿ ಸಮಸ್ಯೆಯ ಕುರಿತಾಗಿ ಕನಿಷ್ಟಪಕ್ಷ ಅಲ್ಪ ಸ್ವಲ್ಪವಾದರೂ ಅರ್ಥೈಸಿಕೊಳ್ಳಲು ಸಾಧ್ಯ. ಪೂರ್ವ ನಾಗಾಲ್ಯಾಂಡ್ ಗಡಿಭಾಗದಲ್ಲಿರುವ ನಾಲ್ಕು ಜಿಲ್ಲೆಗಳು: ಮಾನ್, ಟ್ಯೂಯೆನ್ಸಾಂಗ್, ಕಿಫಿರೆ ಮತ್ತು ಲಾಂಗ್ಲೆಂಗ್ ಗಳು ಮುಖ್ಯವಾಹಿನಿಯಿಂದ ಬಹಳಷ್ಟು ದೂರ ಮತ್ತು ವಿಪರೀತ ಹಿಂದುಳಿದಿರುವ ಜಿಲ್ಲೆಗಳು. ರಾಜ್ಯ ಸರಕಾರಗಳ ಅವಗಣನೆ ಮತ್ತು ಪ್ರಗತಿಯ ನೆರಳು ಕಾಣದ ಪ್ರದೇಶಗಳಿವು. ಮಾನ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊನ್ಯಾಕ್ ಬುಡಕಟ್ಟು ಜನರ ವಾಸಸ್ಥಾನವಾಗಿದ್ದು, ಈ ಕೊನ್ಯಾಕ್ ಜನಾಂಗ ನಾಗಾಲ್ಯಾಂಡ್ ಮತ್ತು NSAZ ಪ್ರದೇಶದಲ್ಲೂ ಗಣನೀಯ ಪ್ರಮಾಣದಲ್ಲಿದ್ದಾರೆ. ಮೂರನೇ ನಾಲ್ಕು ಭಾಗದಷ್ಟು ಖೈಯಮ್ನಿಯುಂಗನ್ ಬುಡಕಟ್ಟು ಜನರು NSAZ ಪ್ರದೇಶದಲ್ಲಿದ್ದು, ಮಿಕ್ಕವರು ನಾಗಾಲ್ಯಾಂಡಿನ ಟ್ಯೂಯೆನ್ಸಾಂಗ್ ಜಿಲ್ಲೆಯಲ್ಲಿದ್ದಾರೆ. ಯಿಮ್ಚುಂಗರ್ ಜನಾಂಗ ಟ್ಯೂಯೆನ್ಸಾಂಗ್ ಮತ್ತು ಕಿಫಿರೆ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. 

ಗಡಿಯುದ್ದಕ್ಕೂ  ಬೇಲಿ ಹಾಕಿಸುವ ಮ್ಯಾನ್ಮಾರ್ ಸರಕಾರದ ನಿರ್ಧಾರಕ್ಕೆ ಭಾರತದ ಬೆಂಬಲವೂ ಇದೆ ಎಂದುಕೊಂಡಿರುವ ಭಾರತ-ಮ್ಯಾನ್ಮಾರ್ ಗಡಿಭಾಗದ ಜನರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹೊಸದಾಗಿ ಮ್ಯಾನ್ಮಾರ್ ಸರಕಾರ ನಿರ್ಮಿಸುತ್ತಿರುವ ಗಡಿ ಬೇಲಿ ಕಾಡು ಮತ್ತು ಭೂಸಂಪನ್ಮೂಲಗಳಿಂದ ಗಡಿ ಭಾಗದ ಜನರನ್ನು ವಂಚಿತರನ್ನಾಗಿಸುತ್ತಾರೆ ಎಂಬ ಭಯ ಎರಡೂ ಕಡೆಯ ಜನರನ್ನು ಕಾಡುತ್ತಿದೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಸಮಾಜದ್ರೋಹಿ ಶಕ್ತಿಗಳು ಸ್ಥಳೀಯ ನಾಗಾ ಬುಡಕಟ್ಟುಗಳನ್ನು ರೊಚ್ಚಿಗೆಬ್ಬಿಸಿ ಸರಕಾರದ ವಿರುದ್ಧ ಎತ್ತಿಕಟ್ಟುವ ಸಾಧ್ಯತೆಗಳಿದ್ದೇ ಇವೆ. ತಣ್ಣಗಾಗುತ್ತಿರುವ ನಾಗಾ ಬಂಡಾಯಕ್ಕೆ ಬೆಂಕಿ ಹಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದರೂ ಅಚ್ಚರಿಯೇನಿಲ್ಲ. ನಾಗಾ ಬಂಡುಕೋರ ಗುಂಪುಗಳೊಂದಿಗೆ ಭಾರತ ಸರಕಾರ ಶಾಂತಿ ಮಾತುಕತೆಯಲ್ಲಿರುವ ಈ ಸಂದರ್ಭದಲ್ಲಿ ನಾಗಾ ಬುಡಕಟ್ಟು ಜನರ ವಿಶ್ವಾಸ ಕಳೆದುಕೊಳ್ಳಲು ಭಾರತ ಸಿದ್ಧವಿಲ್ಲ. ಈ ಪ್ರದೇಶ ಸೂಕ್ಷ್ಮತೆಯಿಂದಾಗಿ, ಯಾವುದೇ ಸಂದರ್ಭದಲ್ಲೂ ವಿಶ್ವಾಸ ಕಳೆದುಕೊಂಡ ಜನ ದಂಗೆಕೋರರು ಮತ್ತು ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಬಹುದು. ಹಾಗೆಂದ ಮಾತ್ರಕ್ಕೆ ಭದ್ರತಾ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎನ್ನುವುದು ಸದ್ಯದ ವಿರೋಧಾಭಾಸ

ಈ ಪ್ರದೇಶದಲ್ಲಿ ಭಾರತ ಪ್ರಮುಖ ಮತ್ತು ಗಂಭೀರ ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ಗಡಿಭಾಗದ ಜನರ ಹಿತದೃಷ್ಟಿಯ ಉದ್ದೇಶದಿಂದ ಜಾರಿಗೊಳಿಸಲಾದ ಮುಕ್ತ ಗಡಿ ಸಂಚಾರದ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಸ್ಥಳೀಯರು ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ದುರದೃಷ್ಟಕರ. ಆಯುಧಗಳು ಮತ್ತಿತರ ವಸ್ತುಗಳನ್ನು ಸಾಗಿಸಲು ದಂಗೆಕೋರ ಗುಂಪುಗಳು ಮುಕ್ತ ಗಡಿ ಸಂಚಾರವನ್ನು ಬಳಸಿಕೊಳ್ಳುವುದು ಮಾಮೂಲಾಗಿದೆ. ಎನ್.ಎಸ್.ಸಿ.ಎನ್ ಕಪ್ಲಾಂಗ್ ಎಂಬ ದಂಗೆಕೋರ ಗುಂಪು ಮ್ಯಾನ್ಮಾರಿನ NSAZ ಪ್ರದೇಶದಲ್ಲಿ ತನ್ನ ತರಬೇತಿ ಶಿಬಿರಗಳನ್ನು ಸ್ಥಾಪಿಸಿಕೊಂಡು ಭಾರತವನ್ನು ಕಾಡುತ್ತಿದೆ. ಇಂಥ ಹತ್ತು ಹಲವು ಗುಂಪುಗಳು ಮುಕ್ತ ಗಡಿ ಸಂಚಾರದ ಲಾಭ ಪಡೆದುಕೊಂಡು ಭಾರತೀಯ ಭದ್ರತಾ ಪಡೆಗಳ ಮೇಲೆ ಕ್ಷಿಪ್ರ ಕಳ್ಳದಾಳಿ ನಡೆಸಿ ಮ್ಯಾನ್ಮಾರಿನೊಳಗೆ ಪರಾರಿಯಾಗಿಬಿಡುತ್ತಾರೆ! ಈ ಕಿಡಿಗೇಡಿಗಳ ಭಾರತ ವಿರೋಧಿ ಕೃತ್ಯಗಳಿಗೆ ಚೀನಾ ಸಂಪೂರ್ಣ ಬೆಂಬಲ ನೀಡುತ್ತಿರುವುದು ಇವತ್ತಿಗೆ ರಹಸ್ಯವಾಗಿ ಉಳಿದಿಲ್ಲ. ಭಾರತ ಮತ್ತು ಮ್ಯಾನ್ಮಾರ್ ಎರಡೂ ಕಡೆಯ ದಂಗೆಕೋರ ಗುಂಪುಗಳು ತಮ್ಮ ದೇಶದ್ರೋಹಿ ಕಾರ್ಯದಲ್ಲಿ ಪರಸ್ಪರ ಸಹಕರಿಸಿಕೊಳ್ಳುತ್ತವೆ. ದಟ್ಟ ಕಾಡಿನಿಂದ ಆವೃತವಾದ ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರೆಣೆಗಳೂ ಕಷ್ಟಸಾಧ್ಯವಾಗಿರುವುದು ದಂಗೆಕೋರರ ಅಟ್ಟಹಾಸ ಹೆಚ್ಚಿಸಿದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಿಕೊಳ್ಳುವ ಪ್ರಯತ್ನಗಳಿಗೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ. ಉದಾಹರಣೆಗೆ ಮಾರ್ಚ್ 2003 ರಲ್ಲಿ ಭಾರತ ಸರಕಾರ ಮಣಿಪುರದಲ್ಲಿ ಭಾರತ- ಮ್ಯಾನ್ಮಾರ್ ಗಳ ಮಧ್ಯೆ ಬೇಲಿಯೊಂದನ್ನು ರಚಿಸಲು ಮುಂದಾಗಿತ್ತಾದರೂ ತೀವ್ರ ಸಾರ್ವಜನಿಕ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಬೇಕಾಗಿತ್ತು.

ಭಾರತ ಮತ್ತು ಮ್ಯಾನ್ಮಾರ್ ದೇಶಗಳ ಗಡಿಭಾಗದ ಜನರ ಸಾಂಸ್ಕೃತಿಕ, ಕೌಟುಂಬಿಕ ಮತ್ತು ಭಾವನಾತ್ಮಕ ಬಂಧಗಳಿಗೆ ಬೆಲೆಕೊಟ್ಟು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪ್ರಜಾಸತ್ತಾತ್ಮಕವಾಗಿ ಮೆಚ್ಚತಕ್ಕಂತಾ ನಡೆಯೇ ಆದರೂ ರಾಜತಾಂತ್ರಿಕವಾಗಿ ಹಲವಾರು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಭದ್ರತಾ ಅವಶ್ಯಕತೆಗನುಸಾರವಾಗಿ ಗಡಿಯಲ್ಲಿ ಬೇಲಿಯೊಂದನ್ನು ನಿರ್ಮಿಸುವ ಹಠಾತ್ ನಿರ್ಧಾರ ನಾಗಾ ಬುಡಕಟ್ಟಿನ ತೀವ್ರ ವಿರೋಧಕ್ಕೆ ಕಾರಣವಾಗಬಹುದು. ಗಡಿಭಾಗದ ಜನರಿಗಷ್ಟೇ ಅಲ್ಲದೇ ಭಾರತ-ಮ್ಯಾನ್ಮಾರ್ ಸರಕಾರಗಳಿಗೂ ಈ ಗಡಿಪ್ರದೇಶ ತ್ರಿಶಂಕು ಸ್ವರ್ಗವೇ ಸರಿ. ಗಡಿಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಿತ ಗಡಿಗಳನ್ನು ರಚಿಸುವ ಅವಕಾಶವೂ ಸರಕಾರದ ಮುಂದಿದೆ. ಮುಕ್ತ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸದೆ ನಿಯಂತ್ರಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವುದರಿಂದ ಈ ತ್ರಿಶಂಕು ಸ್ವರ್ಗದ ನಿರ್ವಹಣೆಯೊಂದಿಗೆ, ರಾಜತಾಂತ್ರಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಏಕಕಾಲಕ್ಕೆ ಪಾಲಿಸಿದಂತಾಗುತ್ತದೆ.


(This article was published in Hosa Digantha Newsapaper on 21 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಭಾರತ-ಇಂಡೊನೇಷ್ಯಾ ಬಾಂಧವ್ಯ: ಪ್ರಾದೇಶಿಕ ಸ್ಥಿರತೆಯತ್ತ ಏಷ್ಯಾ


1962ರ ಇಂಡೋ-ಚೀನಾ ಯುದ್ಧದ ಬಳಿಕ ಭಾರತ ಮತ್ತು ಚೀನಾಗಳು ವಿಭಿನ್ನ ರೀತಿಯಲ್ಲಿ ಪ್ರಾದೇಶಿಕ ತಮ್ಮ ಪ್ರಾದೇಶಿಕ ಪ್ರಭಾವ ವಿಸ್ತರಿಸಿಕೊಳ್ಳುವತ್ತ ಗಮನ ಹರಿಸುತ್ತವೆ.  ಚೀನಾ ಹೊಸ ರಾಜಕೀಯ ಮತ್ತು ಆರ್ಥಿಕ ಅವಕಾಶಗಳನ್ನು ಬಳಸಿಕೊಂಡು ಪೂರ್ವ ಏಷ್ಯಾದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಂಡಿದ್ದಷ್ಟೇ ಅಲ್ಲದೇ ಬರ್ಮಾದ (ಈಗಿನ ಮ್ಯಾನ್ಮಾರ್)  ಮಿಲಿಟರಿ ಆಡಳಿತದ ಜೊತೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಭಾರತದ ಪ್ರಭಾವಕ್ಕೆ ತಡೆಯೊಡ್ಡಿತ್ತು. ಇತ್ತ ಭಾರತ ಪೂರ್ವ ಏಷ್ಯಾ ರಾಷ್ಟ್ರಗಳ ಜೊತೆ ತೊಡಗಿಕೊಂಡರೆ, ಸೊವಿಯೆತ್ ಒಕ್ಕೂಟ ಮುನಿಸಿಕೊಳ್ಳುತ್ತದೋ ಎಂಬ ಶೀತಲ ಸಮರದ ಲೆಕ್ಕಾಚಾರಗಳಿಂದಾಗಿ ಪೂರ್ವ ಏಷ್ಯಾದಿಂದ ದೂರ ಉಳಿದಿತ್ತು. ಆದರೆ ಪಿ. ವಿ ನರಸಿಂಹ ರಾವ್ ಪ್ರಧಾನಿಯಾದ ಬಳಿಕ ಭಾರತದ ನಿಲುವುಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ನರಸಿಂಹ ರಾವ್ ನೇತೃತ್ವದಲ್ಲಿ 'ಪೂರ್ವದತ್ತ ನೋಡು'ವ (Look East) ವಿದೇಶಾಂಗ ನೀತಿಯೊಂದು ರೂಪುಗೊಂಡು ಪೂರ್ವ ಏಷ್ಯಾದ ರಾಷ್ಟ್ರಗಳ ಜೊತೆ ಸಾಕಷ್ಟು ರಾಜತಾಂತ್ರಿಕ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಪೂರ್ವದ ರಾಷ್ಟ್ರಗಳತ್ತ ಭಾರತದ ಈ ಯೋಜನೆ ವಿಸ್ತೃತ ಯೋಜನೆಯಾಗಿದ್ದು ಆಸಿಯಾನ್ ಜೊತೆಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಆಗ್ನೇಯ ರಾಷ್ಟ್ರಗಳ ಕಡೆಗೂ ಗಮನ ಹರಿಸಿತ್ತು. ಮುಂದೆ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದಾಗಲೂ ಈ ಕುರಿತಾಗಿ ಧನಾತ್ಮಕ ಬೆಳವಣಿಗೆಗಳಾದವು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ 'ಪೂರ್ವದತ್ತ ನೋಡು'ವ ಭಾರತದ ನೀತಿಯನ್ನು ಮೇಲ್ದರ್ಜೆಗೇರಿಸಿ 'ಪೂರ್ವದೊಂದಿಗೆ ಕಾರ್ಯಪ್ರವೃತ್ತ'ವಾಗುವ (Act East) ಮೂಲಕ ಪೂರ್ವ ಏಷ್ಯಾ ದೇಶಗಳ ಜೊತೆಗಿನ ಹೊಸ ಬಾಂಧವ್ಯಕ್ಕೆ ನಾಂದಿ ಹಾಡಿದರು.

Image may contain: 1 person'ಪೂರ್ವದೊಂದಿಗೆ ಕಾರ್ಯಪ್ರವೃತ್ತ'ವಾಗುವ ಮಹತ್ತರ ಯೋಜನೆಯನ್ನು ಅರ್ಥಪೂರ್ಣವಾಗಿ ಜಾರಿಗೆ ತರುವಲ್ಲಿ ಅನೇಕ ಪ್ರಯತ್ನಗಳಾಗುತ್ತಿವೆ. ಮುಖ್ಯವಾಗಿ ಭಾರತ ಇದೇ ಪ್ರಪ್ರಥಮ ಬಾರಿಗೆ ಇಂಡೋನೇಷ್ಯಾದ ಜೊತೆ ಜಂಟಿ ವಾಯುಸೇನಾ ಸಮರಭ್ಯಾಸ ನಡೆಸಲು ನಿರ್ಧರಿಸಿದ್ದು, ಪೂರ್ವ ಏಷ್ಯಾಗಳ ಜೊತೆಗಿನ ಭಾರತದ ರಾಜತಾಂತ್ರಿಕ ಬದ್ಧತೆಯನ್ನು ನಿರೂಪಿಸಿದೆ. ಜಂಟಿ ಸಮರಾಭ್ಯಾಸ ಮಾತ್ರವಲ್ಲದೇ, ಸಾಗರ ಸಂಬಂಧಿ ಭದ್ರತಾ ಸಹಕಾರವನ್ನು ಸಾಕಾರಗೊಳಿಸಲು, ಭಾರತ ಇಂಡೋನೇಷ್ಯಾದ ನಾವಿಕರಿಗೆ ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆಯ ತರಬೇತಿ ನೀಡಲು ಒಪ್ಪಿಕೊಂಡಿದೆ. ಈ ಎರಡು ದೇಶಗಳು ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ಇನ್ನಿತರ ಮಿಲಿಟರಿ ಸಂಬಂಧಿತ ವಲಯಗಳಲ್ಲಿ ಪರಸ್ಪರ ಸಹಕಾರ ನೀಡಲು ಉತ್ಸುಕವಾಗಿವೆ. ಇಂಡೋನೇಷ್ಯಾದ ಅಧ್ಯಕ್ಷ ಜೊಕೊವಿ ವಿಡೊಡೊ 2016ರ ಡಿಸೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಲಭೂತ ದ್ವಿಪಕ್ಷೀಯ ರಕ್ಷಣಾ ಸಹಕಾರ ಒಪ್ಪಂದವೊಂದರ ರೂಪುರೇಷೆ ಸಿದ್ಧವಾಗಿದೆ. ಪ್ರಾದೇಶಿಕ ರಾಜಕೀಯದಲ್ಲಿ ಬದಲಾಗುತ್ತಿರುವ ಶಕ್ತಿ ಸಮತೋಲನಗಳು, ಭಾರತ ಮತ್ತು ಇಂಡೋನೇಷ್ಯಾಗಳ ನಡುವಿನ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಿದೆ.

ಜೊಕೊವಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತ ಮತ್ತು ಇಂಡೋನೇಷ್ಯಾಗಳೆರಡೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನಡೆಯ ಕುರಿತಾಗಿ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದು, ಈ ವಿವಾದವನ್ನು ಶಾಂತಿಯುತವಾಗಿ, ಜಾಗತಿಕ ಮೌಲ್ಯಗಳಿಗೆ ಅನುಗುಣವಾಗಿ ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಟಾಟೋಪಗಳ ಕುರಿತಾಗಿ ಹಲವಾರು ರಾಷ್ಟ್ರಗಳು ಅಸಮಧಾನ ವ್ಯಕ್ತಪಡಿಸಿವೆಯಾದರೂ ಭಾರತ ಮತ್ತು ಇಂಡೊನೇಷ್ಯಾಗಳ ವಿಚಾರ ಭಿನ್ನ. ಏಕೆಂದರೆ ಈ ಎರಡೂ ರಾಷ್ಟ್ರಗಳಿಗೂ ದಕ್ಷಿಣ ಚೀನಾ ಸಮುದ್ರ ವಿವಾದಕ್ಕೂ ಯಾವುದೇ ನೇರ ಸಂಬಂಧ ಇಲ್ಲ! ದಕ್ಷಿಣ ಚೀನಾ ಸಮುದ್ರದಲ್ಲಿ ಚೀನೀಯರು ಎಷ್ಟೇ ಪ್ರಭಾವ ವೃದ್ಧಿಸಿಕೊಂಡರೂ ಭಾರತ ಮತ್ತು ಇಂಡೋನೇಷ್ಯಾಗಳಿಗೆ ಯಾವುದೇ ನೇರ ನಷ್ಟ ಇಲ್ಲದೇ ಹೋದರೂ ಈ ಎರಡು ರಾಷ್ಟ್ರಗಳು ಚೀನಾ ಆಕ್ರಮಣಕ್ಕೆ ಸವಾಲು ಹಾಕುವ ಸಾಹಸ ಮಾಡಿದ್ದು ವಿಶೇಷವೇ ಸರಿ. ಚೀನಾದ ಆಕ್ರಮಣಕಾರಿ ನಡೆ ಮತ್ತು ಜಾಗತಿಕ ಮೌಲ್ಯಗಳಿಗೆ ಚೀನಾ ತೋರುತ್ತಿರುವ ಅಸಡ್ಡೆಯ ಜೊತೆ ಜೊತೆಗೆ ಪ್ರಾದೇಶಿಕ ಭದ್ರತೆಯಲ್ಲಿ ಅಮೆರಿಕಾದ ನಿರ್ಲಕ್ಷ್ಯ ಮೋದಿ ಮತ್ತು ಜೊಕೊವಿ ಮಾತ್ರವಲ್ಲದೇ ಇತರ ಏಷ್ಯಾದ ನಾಯಕರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಭಾರತಕ್ಕೆ ಇಂಡೋ-ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ ಚೀನಾ ತಲೆನೋವಾಗಿದ್ದರೆ, ಇಂಡೋನೇಷ್ಯಾದ ನಟುನಾ ದ್ವೀಪಗಳಲ್ಲಿ ಚೀನೀ ನೌಕಾಪಡೆಗಳ ಪ್ರಭಾವ ಹೆಚ್ಚಾಗಿರುವುದು ಜೊಕೊವಿ ಕಳವಳಕ್ಕೆ ಕಾರಣವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ, ಭಾರತ ಮತ್ತು ಇಂಡೋನೇಷ್ಯಾಗಳು ತಮ್ಮ ಭದ್ರತಾ ಮತ್ತು ರಾಜಕೀಯ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವತ್ತ ಗಮನಹರಿಸಿವೆ. 2005ರಲ್ಲಿ ಸಮರತಾಂತ್ರಿಕ ಪಾಲುದಾರಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿ ವರ್ಷಕ್ಕೊಂದು ಬಾರಿ ಎರಡೂ ದೇಶಗಳು ಒಟ್ಟು ಸೇರಿ ಸಮರತಾಂತ್ರಿಕ ವಿಷಯ ವಿನಿಮಯಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. 2001ರಲ್ಲಿ ಸಿದ್ಧವಾಗಿದ್ದ ರಕ್ಷಣಾ ಸಹಕಾರ ಒಪ್ಪಂದವನ್ನು 2006ರಲ್ಲಿ ಅಂಗೀಕರಿಸಲಾಗುತ್ತದೆ. ಪರಸ್ಪರ ಕಾನೂನು ನೆರವಿನ ಒಪ್ಪಂದವೊಂದು ಏರ್ಪಟ್ಟಿದ್ದು ಎರಡೂ ರಾಷ್ಟ್ರಗಳೂ ಪರಸ್ಪರರಿಗೆ ಅವಶ್ಯವಿರುವ ಮಾಹಿತಿಯನ್ನು ಕಲೆಹಾಕಿ ವಿನಿಮಯ ಮಾಡಿಕೊಳ್ಳುವ ಮೂಲಕ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ನೆರವು ಪಡೆದುಕೊಳ್ಳುತ್ತವೆ. ಇವಿಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಜಂಟಿ ನೌಕಾ ಸಮರಾಭ್ಯಾಸಗಳು, ಗಸ್ತು ತಿರುಗುವಿಕೆ ಇನ್ನಿತರ ನೌಕಾಪಡೆಯ ಜಂಟಿ ಚಟುವಟಿಕೆಗಳು ಭಾರತ ಇಂಡೋನೇಷ್ಯಾ ಸಂಬಂಧಗಳ ತಳಹದಿಯನ್ನು ಭದ್ರಗೊಳಿಸುತ್ತಿವೆ. ಇಂಡೊನೇಷ್ಯಾ ಪಾಲಿಗೆ ಮಿಲಿಟರಿ ಸರಕುಗಳ ಪೂರೈಕೆಯಲ್ಲೂ ಭಾರತ ಸೈ ಎನಿಸಿಕೊಂಡಿದೆ. ಭೌಗೋಳಿಕವಾಗಿಯೂ ಈ ಬಾಂಧವ್ಯ ಸದ್ಯದ ಭೂರಾಜಕೀಯದ ಅವಶ್ಯಕತೆಗಳಿಗೆ ಪೂರಕ ಎನಿಸುವಂತಿದೆ. ಯುರೋಪ್, ಮಧ್ಯಪ್ರಾಚ್ಯ, ಮತ್ತು ಆಗ್ನೇಯ ಏಷ್ಯಾಗಳ ಸಾಗರ ಸಂಪರ್ಕ ನಿರಾತಂಕವಾಗಿ ಸಾಗುವಲ್ಲಿ ಭಾರತ ಮತ್ತು ಇಂಡೋನೇಷ್ಯಾಗಳ ನೌಕಾಪಡೆಗಳ ಹೊಂದಾಣಿಕೆ ಅಗತ್ಯ. ಹಿಂದೂ ಮಹಾಸಾಗರದಿಂದ ಬಂಗಾಳ ಕೊಳ್ಳಿ ಮತ್ತು ಮಲಕ್ಕಾದ ಜಲಸಂಧಿಯವರೆಗಿನ ಸಾಗರ ಸಾಮ್ರಜ್ಯದ ನಿಯಂತ್ರಣ ಈ ಜಂಟಿ ನೌಕಾಪಡೆಯಿಂದ ಸಾಧ್ಯ. ಈ ಪ್ರದೇಶದಲ್ಲಿ ಭಾರತ ಉಳಿಸಿ ಬೆಳೆಸಿಕೊಂಡು ಬಂದ ನೈತಿಕ ಪ್ರಭಾವದಿಂದಾಗಿ ಇವತ್ತಿಗೆ ಭಾರತೀಯ ನೌಕಾಸೇನೆ, ಚೀನಾ ಪ್ರಭಾವಕ್ಕೆ ಸವಾಲಾಗಬಲ್ಲ ಏಕೈಕ ಶಕ್ತಿ ಎನ್ನುವ ಭರವಸೆ ಇಂಡೋನೇಷ್ಯಾ ಮಾತ್ರವಲ್ಲದೇ ಆಗ್ನೇಯ ಏಷ್ಯಾದ ಅನೇಕ ಸಣ್ಣಪುಟ್ಟ ರಾಷ್ಟ್ರಗಳಲ್ಲಿದೆ. 

ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಭಾರತ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕಿಳಿಸುತ್ತಿದೆ. ಈ ಪ್ರದೇಶದ ಸಣ್ಣ ಪುಟ್ಟ ರಾಷ್ಟ್ರಗಳು ಚೀನಾ ಆಕ್ರಮಣಕ್ಕೆ ತಡೆ ಹಾಕಲು ಭಾರತದತ್ತ ನೋಡುವಂತಾಗಿದ್ದರೆ, ದೊಡ್ಡ ರಾಷ್ಟ್ರಗಳು ಭಾರತವನ್ನು ಪ್ರಾದೇಶಿಕ ಸ್ಥಿರತೆ ಮತ್ತು ಬೆಳವಣಿಗೆ ಪೂರಕ ಶಕ್ತಿ ಎಂಬ ನಿಲುವು ತಳೆದಿರುವುದು ಭಾರತದ ಪ್ರಾದೇಶಿಕ ಪ್ರಭಾವ ವೃದ್ಧಿಸಿರುವುದಕ್ಕೆ ಸಾಕ್ಷಿ. ಭಾರತ ನಿಧಾನವಾಗಿ ಆಲಿಪ್ತ ನೀತಿಯಿಂದ ಹೊರಬರುತ್ತಿದ್ದು, ಇನ್ನಷ್ಟು ರಾಜತಾಂತ್ರಿಕ ಗೆಲುವುಗಳನ್ನು ಕಾಣುವ ಕಾತುರದಲ್ಲಿದೆ. ಭಾರತ-ಇಂಡೋನೇಷ್ಯಾಗಳ ಮಧ್ಯೆ ನಡೆದ ದ್ವಿಪಕ್ಷೀಯ ಮಾತುಕತೆಗಳು ನಿಸ್ಸಂಶಯವಾಗಿ ಭಾರತದ ವರ್ಚಸ್ಸು ಹೆಚ್ಚಿಸುವುದಲ್ಲದೇ ಪ್ರಾದೇಶಿಕ ಶಕ್ತಿ ಸಮತೋಲನದಲ್ಲಿ ಮಹತ್ತರ ಪಾತ್ರ ವಹಿಸಲಿದೆ.

(This article was published in Vishwavani Newsapaper on 16 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ರಾಜಕೀಯ ಹಸ್ತಕ್ಷೇಪ: ಅಮೆರಿಕನ್ನರು ಮರೆತ ಚರಿತ್ರೆ!




ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹದ ಹೊರತಾಗಿಯೂ, ಇವತ್ತಿಗೆ ಅಮೆರಿಕಾದ ಪ್ರಭಾವಿ ವಲಯದಲ್ಲಿ ರಷ್ಯಾ ವ್ಯಾಪಕವಾಗಿ ಟೀಕೆಗೊಳಗಾಗುತ್ತಿದೆ.   ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯನ್ನರು ಹಸ್ತಕ್ಷೇಪ ಮಾಡಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲಾಗದೆ, ಅಮೆರಿಕಾದಲ್ಲಿರುವ ರಷ್ಯಾ ದ್ವೇಷಿ ಪ್ರಭಾವಿ ವ್ಯಕ್ತಿತ್ವಗಳು ರಷ್ಯಾಗೆ ಬಲವಾದ ತಿರುಗೇಟು ನೀಡುವಂತೆ ಅಧ್ಯಕ್ಷ ಟ್ರಂಪ್ ರ ಕಿವಿಯೂದುತ್ತಿದ್ದಾರೆ. ಸೆನೆಟರ್ ಜೀನ್ ಶಹೀನ್ , ರಷ್ಯಾ ನಮ್ಮ ಚುನಾವಣೆಗಳಲ್ಲಿ ಮಾಡಿದ ಹಸ್ತಕ್ಷೇಪಕ್ಕೆ ಪ್ರತಿಯಾಗಿ ಅಮೆರಿಕಾ ಉಗ್ರ ಪ್ರತ್ಯುತ್ತರ ನೀಡಬೇಕು ಎಂದಿದ್ದರೆ ಸೆನೆಟರ್ ಜಾನ್ ಮೆಕೈನ್,  ಅಮೆರಿಕಾದ ಪ್ರಜಾಪ್ರಭುತ್ವದ ಮೇಲೆ ರಷ್ಯಾ ಮಾಡಿದ ದಾಳಿ ಪ್ರತಿ ಅಮೆರಿಕನ್ನನೂ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ. ತಮ್ಮ ಪ್ರಜಾಪ್ರಭುತ್ವದ ಮೇಲಿನ ರಷ್ಯನ್ ದಾಳಿಯನ್ನು ವೀರಾವೇಶದಿಂದ ಖಂಡಿಸುತ್ತಿರುವ ಅಮೆರಿಕನ್ನರು, ಅಮೆರಿಕಾವೂ ಹಿಂದೆ ಬಹಳಷ್ಟು ಬಾರಿ ಇಂಥ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಮರೆತಂತಿದೆ. ಅಮೆರಿಕಾದ ರಾಜಕೀಯ ಪಕ್ಷವೊಂದರ ಇಮೇಲ್ ಖಾತೆಗಳನ್ನು ರಷ್ಯಾ ಹ್ಯಾಕ್ ಮಾಡಿ, ಚುನಾವಣೆಯ ಮೇಲೆ ಪ್ರಭಾವ ಬೀರುವಂತೆ ಮಾಡದ್ದು ಅಕ್ಷಮ್ಯ ಅಪರಾಧವೇ ಸರಿ. ಒಂದು ದೇಶದ ಆಂತರಿಕ ವಿಷಯಗಳು ಅದರಲ್ಲೂ ಚುನಾವಣೆಯಂತಾ ಪ್ರಕ್ರಿಯೆಗಳಲ್ಲಿ ಮೂಗು ತೂರಿಸುವುದು ಆ ದೇಶದ ಸಾರ್ವಭೌಮತ್ವವನ್ನೇ ಪ್ರಶ್ನೆ ಮಾಡಿದಂತೆ. ಈ ಬಾರಿ ರಷ್ಯಾ ಮಾಡಿದ್ದೂ ತಪ್ಪು, ಆದರೆ ಇಂತಾ ತಪ್ಪುಗಳನ್ನು ಅಮೆರಿಕಾ ದಶಕಗಳಿಂದ ಮಾಡಿಕೊಂಡು ಬಂದಿದೆ. ರಷ್ಯಾವನ್ನು ಪ್ರಶ್ನಿಸುವ ಅಮೆರಿಕಾದ ನೈತಿಕತೆಗೆ ಮರುಪ್ರಶ್ನೆ ಹಾಕುವಂಥಾ ಕೆಲ ಘಟನೆಗಳು ಚರಿತ್ರೆಯ ಪುಟಗಳಲ್ಲಿವೆ.
Image may contain: 1 person
ಜೆಕೋಬೊ ಅರ್ಬೆನ್ಸ್ ಗ್ವಾಟೆಮಾಲಾದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಧ್ಯಕ್ಷ. ಭೂಮಾಲಿಕರು ಮತ್ತು ರೈತರ ನಡುವಿನ ಆರ್ಥಿಕ ಅಂತರವನ್ನು ಕಡಿಮೆ ಮಾಡಿ ರೈತರ ಕ್ಷೇಮ ಕಾಪಾಡುತ್ತೇನೆ ಎಂಬ ನಿಲುವನ್ನು ಚುನಾವಣಾ ಪ್ರಚಾರದುದ್ದಕ್ಕೂ ಬಳಸಿಕೊಂಡ ಅರ್ಬೆನ್ಸ್ ಜನರಿಂದ ಆಯ್ಕೆಯಾಗಿ ಗ್ವಾಟೆಮಾಲಾದ ಅಧ್ಯಕ್ಷನಾಗುತ್ತಾರೆ. ಆದರೆ ಅಮೆರಿಕಾ ತನ್ನ ಪ್ರಭಾವಕ್ಕೆ ಮತ್ತು ಮುನ್ರೋ ಸಿದ್ಧಾಂತಕ್ಕೆ ಅರ್ಬೆನ್ಸ್ ಸಂಭವನೀಯ ಶತ್ರುವಾಗಿ ಬದಲಾಗಬಲ್ಲ ಎಂಬ ಲೆಕ್ಕಾಚಾರದಲ್ಲಿತ್ತು.  1952-54ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾದ ಹ್ಯಾರಿ ಟ್ರೂಮನ್ ಮತ್ತು ಡ್ವೈಟ್ ಐಸೆನ್ ಹೋವರ್, ತಮ್ಮ ಗುಪ್ತಚರ ಸಂಸ್ಥೆ ಸಿ.ಐ.ಎ ಯನ್ನು ಛೂ ಬಿಟ್ಟು ಅರ್ಬೆನ್ಸ್ ಆಡಳಿತ ಕೊನೆಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರು. ಸಿ.ಐ.ಎ ಗ್ವಾಟೆಮಾಲಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಗಳಿಂದ, ಅರ್ಬೆನ್ಸ್ ವಿರೋಧಿಗಳು ದಿನೇ ದಿನೇ ಪ್ರಭಾವಶಾಲಿಗಳಾಗತೊಡಗಿದರು. ಕೊನೆಗೊಂದು ದಿನ ಅರ್ಬೆನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೇಶ ಬಿಟ್ಟು ಓಡಿಹೋಗುವಂತಾಯ್ತು! ಅರ್ಬೆನ್ಸ್ ಸರಕಾರ ಉರುಳಿಸಿ, ಅಮೆರಿಕಾ ವಿರೋಧಿ ನಾಯಕರನ್ನೆಲ್ಲಾ ಇನ್ನಿಲ್ಲವಾಗಿಸಿದ ಗ್ವಾಟೆಮಾಲದಲ್ಲಿನ ಈ ವಿಶೇಷ ಕಾರ್ಯಾಚರಣೆಗಾಗಿ ಐಸೆನ್ ಹೋವರ್ ಬಿಡುಗಡೆ ಮಾಡಿದ ಬಜೆಟ್ ಸುಮಾರು 2.7 ಮಿಲಿಯನ್ ಅಮೆರಿಕನ್ ಡಾಲರ್ ಗಳು!

ಚಿಲಿ ದೇಶದ ರಾಜಕಾರಣಿ ಸಾಲ್ವಡೊರ್ ಅಲೆಂಡೆ 1970ರ ದಶಕದಲ್ಲಿ ಚಿಲಿ ದೇಶದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ ರಾಜಕಾರಣಿ. ಚಿಲಿಯ ಜನರಿಗೆ ಅಲೆಂಡೆಯನ್ನು ಆರ್ಥಿಕ ಸುಧಾರಣೆಗಳ ಹರಿಕಾರನಂತೆ ಕಂಡರೆ, ಅಮೆರಿಕಾಕ್ಕೆ ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿಕೊಂಡ ಹೊಸ ಶತ್ರುವಿನಂತೆ ಕಂಡಿದ್ದ! ನಿಕ್ಸನ್ ಆಡಳಿತಕ್ಕೆ ಅಲೆಂಡೆ ಸೊವಿಯೆತ್ ಒಕ್ಕೂಟದ ಸ್ನೇಹದೊಂದಿಗೆ ದಕ್ಷಿಣ ಅಮೆರಿಕಾದಲ್ಲಿ ಸೊವಿಯೆತ್ ಪ್ರಭಾವಕ್ಕೆ ಕಾರಣನಾಗುತ್ತಾನೆ ಎಂಬ ಭೀತಿಯಿತ್ತು. 1970ರ ಚುನಾವಣೆಯಲ್ಲಿ ಅಲೆಂಡೆ ಗೆಲ್ಲುವ ಸೂಚನೆಗಳು ಕಂಡುಬಂದಾಗ, ಸಿ.ಐ.ಎ ಅಲೆಂಡೆಯ ವಿರೋಧಿ ಗುಂಪುಗಳಿಗೆ ಶಸ್ತ್ರಾಸ್ತ್ರ ಇನ್ನಿತರ ನೆರವು ನೀಡಿ ಚುನಾವಣೆಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದರು. ಹೀಗಿದ್ದಾಗ್ಯೂ ಅಲೆಂಡೆ ಸಂಪೂರ್ಣ ಬಹುಮತದೊಂದಿಗೆ ಗೆದ್ದುಬರುತ್ತಾರೆ. ಸೊವಿಯೆತ್ ಒಕ್ಕೂಟದ ಈ ಸಂಭವನೀಯ ಮಿತ್ರನನ್ನು ಹೇಗಾದರೂ ಕೊನೆಗೊಳಿಸಬೇಕು ಎನ್ನುತ್ತಿದ್ದ ನಿಕ್ಸನ್ ಸರಕಾರ, ಕೊನೆ ಪಕ್ಷ ಚಿಲಿಯ ಆರ್ಥಿಕತೆಯನ್ನಾದರೂ ಬುಡಮೇಲು ಮಾಡಬೇಕೆಂದು ತಾಕೀತು ಮಾಡಿದ್ದು ಇತ್ತೀಚೆಗೆ ವಿವರ್ಗೀಕರಿತವಾದ ರಹಸ್ಯ ಕಡತಗಳಿಂದ ಬಹಿರಂಗಗೊಂಡ ಸತ್ಯ. ಚಿಲಿಯ ಮಿಲಿಟರಿ ದಂಗೆಗೂ ಪರೋಕ್ಷವಾಗಿ ಬೆಂಬಲ ನೀಡಿತ್ತು ಅಮೆರಿಕಾ. ಅಂತಿಮವಾಗಿ 1973ರಲ್ಲಿ ಚಿಲಿಯ ಮಿಲಿಟರಿ ಪಡೆಗಳು ಸುತ್ತುವರಿದಾಗ, ಅಲೆಂಡೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು.

1951ರಲ್ಲಿ ಇರಾನಿನ ಪ್ರಧಾನಿಯಾಗಿ ಆಯ್ಕೆಯಾದ ಮಹಮ್ಮದ್ ಮೊಸಾಡೆಗ್, ಇರಾನಿನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುತ್ತಾರೆ. ಸುಮಾರು ದಶಕಗಳಿಂದ ಇರಾನಿನ ತೈಲ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಬ್ರಿಟನ್, ಮೊಸಾಡೆಗ್ ವಿರುದ್ಧ ಕಿಡಿಕಾರಿದ್ದಷ್ಟೇ ಅಲ್ಲದೇ, ಮೊಸಾಡೆಗ್ ಸರಕಾರವನ್ನು ಉರುಳಿಸಲು ಅಮೆರಿಕಾ ನೆರವು ಕೇಳಿತ್ತು. ಬ್ರಿಟಿಷರಿಗೆ ಮೊಸಾಡೆಗ್ ಸರಕಾರ ತೈಲದಿಂದ ಬರುವ ಆದಾಯದ ಪ್ರಶ್ನೆಯಾಗಿದ್ದರೆ, ಅಮೆರಿಕಾಗೆ ಮೊಸಾಡೆಗ್ ಯಾವತ್ತಿದ್ದರೂ ಸೊವಿಯೆತ್ ಪರ ವಾಲಿಕೊಂಡು, ಇರಾನ್ ನಲ್ಲಿ ಸೊವಿಯೆತ್ ಪ್ರಭಾವಕ್ಕೆ ಅನುವು ಮಾಡಿಕೊಡುತ್ತಾನೆ ಎಂಬ ಸಂಶಯವಿತ್ತು. ಈ ಎಲ್ಲಾ ಕಾರಣಗಳು ಸೇರಿ ಅಮೆರಿಕಾ ಆಗಿನ ಸಿ.ಐ.ಎ ನಿರ್ದೇಶಕ ಅಲೆನ್ ಡ್ಯೂಲೆಸ್ ನೇತೃತ್ವದಲ್ಲಿ ಮೊಸಾಡೆಗ್ ಸರಕಾರದ ಅಂತ್ಯಕ್ಕೆ ಯೋಜನೆ ರೂಪಿಸಿ, ಅಧಿಕೃತ ಹಣಕಾಸಿನ ನೆರವನ್ನೂ ನೀಡಿತ್ತು. ಇರಾನಿನ ಮಾಧ್ಯಮಗಳಲ್ಲಿ ಮೊಸಾಡೆಗ್ ವಿರುದ್ಧದ ಪ್ರಚಾರ ಸುದ್ಧಿಗಳನ್ನು ವ್ಯಾಪಕವಾಗಿ ಹರಡಲಾಗುತ್ತದೆ. ಈ ವ್ಯವಸ್ಥಿತ ಅಪಪ್ರಚಾರದಿಂದಾಗಿ ಇರಾನ್ ಸೇನೆಯ ಬಹುಪಾಲು ಸೈನಿಕರು ಮೊಸಾಡೆಗ್ ವಿರೋಧಿಗಳಾಗಿ ಬದಲಾಗಿದ್ದರು. ಕೊನೆಗೆ ಮೊಸಾಡೆಗ್ ನನ್ನು ಪದಚ್ಯುತಗೊಳಿಸಿ ಅಮೆರಿಕಾ ಪರವಾಗಿದ್ದ ಮಹಮ್ಮದ್ ರೆಜಾ ಶಾ ತನ್ನ ಅಧಿಕಾರ ಸ್ಥಾಪಿಸುತ್ತಾನೆ. ಆದರೆ ಐಸೆನ್ ಹೋವರ್ ಸರಕಾರದ ಈ ನಡೆ ಮುಂದಕ್ಕೆ ಅಮೆರಿಕಾಗೆ ಬಹಳಷ್ಟು ದುಬಾರಿಯಾಗಿ ಪರಿಣಮಿಸುತ್ತದೆ. ಅಯತೊಲ್ಲಾಹ್ ಆಲಿ ಖೊಮೈನಿ ಇರಾನಿನಾದ್ಯಂತ ತನ್ನ ಭಾಷಣಗಳಲ್ಲಿ ಮೊಸಾಡೆಗ್ ಪದಚ್ಯುತಿಯ ವಿಚಾರದಲ್ಲಿ ಅಮೆರಿಕಾ ಕೈವಾಡವನ್ನು ಟೀಕಿಸುತ್ತಾ, ಮುಂದೊಂದು ದಿನ ಇರಾನಿನ ಪ್ರಶ್ನಾತೀತ ನಾಯಕನಾಗಿ ಬದಲಾಗುತ್ತಾನೆ. ಇರಾನ್ ಮತ್ತು ಅಮೆರಿಕಾಗಳ ಮಧ್ಯೆ ಬಹುದೊಡ್ಡ ಬಿರುಕು ಮೂಡಲು ಮೊಸಾಡೆಗ್ ಪದಚ್ಯುತಿಯೇ ಕಾರಣವಾಗುತ್ತದೆ.

ಅಮೆರಿಕಾ ಬಹಳಷ್ಟು ದೇಶಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದರೂ, ಕ್ಯೂಬಾದಲ್ಲಿ ಅಮೆರಿಕಾ ಪಟ್ಟ ಪಾಡು ಈ ಚರ್ಚೆಯಲ್ಲಿ ಸಿಂಹಪಾಲು ಪಡೆಯುತ್ತದೆ. ದೈತ್ಯ ಅಮೆರಿಕಾದ ಪಕ್ಕದಲ್ಲೇ ಇದ್ದ ಸಣ್ಣ ರಾಷ್ಟ್ರದ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಮೆರಿಕಾವನ್ನು ಕಾಡಿದ ರೀತಿ ಅಸಾಮಾನ್ಯ. ಅಮೆರಿಕಾದ ಗುಲಾಮನಾಗಿದ್ದ ಕ್ಯೂಬಾದ ಸರ್ವಾಧಿಕಾರಿ ಬಾಟಿಸ್ಟಾನನ್ನು ಅಧಿಕಾರದಿಂದ ಕಿತ್ತೊಗೆದು ಮುಂದಕ್ಕೆ ತಾನೇ ಸರ್ವಾಧಿಕಾರಿಯಾಗಿ ಬದಲಾದ ಕ್ಯಾಸ್ಟ್ರೋ ಸುಮಾರು ಆರು ದಶಕಗಳ ಕಾಲ ಅಮೆರಿಕಾವನ್ನು ಬಿಟ್ಟೂ ಬಿಡದೆ ಕಾಡಿದ. ಚರ್ಚ್ ಕಮಿಟಿ ತನಿಖೆಯ ಪ್ರಕಾರ ಸಿ.ಐ.ಎ ಸುಮಾರು ಆರು ಬಾರಿ ಕ್ಯಾಸ್ಟ್ರೋ ಹತ್ಯೆಗೆ ಪ್ರಯತ್ನಿಸಿತ್ತು. ತನಿಖೆಯ ವರದಿಯಲ್ಲಿರುವಂತೆ, ಹತ್ಯೆಗೆ ಬಳಸಿದ ಉಪಕರಣಗಳು, ಅತ್ಯಾಧುನಿಕ ರೈಫಲ್ ಗಳು, ವಿಷದ ಗುಳಿಗೆಗಳು, ವಿಷಯುಕ್ತ ಪೆನ್, ಮಾರಣಾಂತಿಕ ಬ್ಯಾಕ್ಟೀರಿಯಾ ಪೌಡರ್ ಗಳಷ್ಟೇ ಅಲ್ಲದೇ ಕಲ್ಪನೆಯನ್ನೇ ಸುಸ್ತಾಗಿಸುವ ಇನ್ನೂ ಅನೇಕ ಮಾರ್ಗಗಳನ್ನು ಸಿ.ಐ.ಎ ಬಳಸಿತ್ತು. ಸಿ.ಐ.ಎಯಿಂದ ಪ್ರೇರಿತವಾಗಿ, 1961ರಲ್ಲಿ ಬೇ ಆಫ್ ಪಿಗ್ಸ್ ಮತ್ತು 1962ರಲ್ಲಿ ಮಂಗೂಸ್ ಕಾರ್ಯಾಚರಣೆಗಳು ನಡೆದರೂ, ಕ್ಯಾಸ್ಟ್ರೋ ಗುಲಗಂಜಿಯಷ್ಟೂ ಅಲುಗಾಡದೆ ಸುಮಾರು ಅರ್ಧ ಶತಮಾನ ಕ್ಯೂಬಾದಲ್ಲೇ ಇದ್ದು ಅಮೆರಿಕಾಗೆ ಸಡ್ಡುಹೊಡೆದಿದ್ದ. 

ರಷ್ಯಾ ತನ್ನ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದೆ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಅಮೆರಿಕನ್ನರು ತಮ್ಮ ಇತಿಹಾಸವನ್ನು ಬಹಳಷ್ಟು ಜಾಣ್ಮೆಯಿಂದ ಮರೆಯುವ ಪ್ರಯತ್ನದಲ್ಲಿದ್ದಾರೆ. ಗ್ವಾಟೆಮಾಲಾ, ಚಿಲಿ, ಇರಾನ್ ಮತ್ತು ಕ್ಯೂಬಾಗಳಷ್ಟೇ ಅಲ್ಲದೇ, ಅಮೆರಿಕಾ ಇತರ ದೇಶಗಳಲ್ಲಿ ಮಾಡಿದ ಅನೈತಿಕ ಹಸ್ತಕ್ಷೇಪಗಳಿಗೆ ಇನ್ನೂ ಹಲವಾರು ನಿದರ್ಶನಗಳಿವೆ. 2003ರಲ್ಲಿ ಇರಾಕ್ ಮತ್ತು 2011ರಲ್ಲಿ ಲಿಬಿಯಾಗಳ ಚರಿತ್ರೆಯ ಸೂಕ್ಷ್ಮ ಅವಲೋಕನ ಅಮೆರಿಕಾದ ಅಗೋಚರ ಅಜೆಂಡಾಗಳನ್ನು ಸ್ಪಷ್ಟಪಡಿಸುತ್ತವೆ. ಅಮೆರಿಕಾ ಅಥವಾ ರಷ್ಯಾಗಳ ಖಾತೆಗಳಲ್ಲಿ ಇಂಥಾ ಹತ್ತು ಹಲವು ನಿದರ್ಶನಗಳು ಧಾರಾಳವಾಗಿ ಕಾಣಸಿಗುತ್ತವೆ. ಇನ್ನೊಂದು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವುದು ನೈತಿಕವಾಗಿ ಸಾಧುವಲ್ಲ ಎನ್ನುವುದು ನಿಜವೇ ಆದರೂ, ವಾಸ್ತವದ ಶಕ್ತಿ ರಾಜಕೀಯದಲ್ಲಿ ಸರಿ ತಪ್ಪುಗಳಿಗಿಂತಾ ರಾಷ್ಟ್ರೀಯ ಹಿತಾಸಕ್ತಿಗಳು ಪ್ರಮುಖವಾಗುತ್ತವೆ. "ಇತಿಹಾಸ ಮರುಕಳಿಸುವಿಕೆ ಮೊದಲ ಬಾರಿ ದುರಂತವಾಗಿರುತ್ತದೆ ಹಾಗೂ ಎರಡನೇ ಬಾರಿ ಅಪಹಾಸ್ಯದಂತಿರುತ್ತದೆ" ಮಾರ್ಕ್ಸ್ ಹೇಳಿದ ಈ ಮಾತುಗಳು ಸದ್ಯದ ಅಮೆರಿಕನ್ನರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.


(This article was published in Hosa Digantha Newsapaper on 14 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಶುಕ್ರವಾರ, ಫೆಬ್ರವರಿ 10, 2017

ಸ್ಟೀವ್ ಬ್ಯಾನನ್ ಬಾಯಲ್ಲಿ ಭಗವದ್ಗೀತೆ!

ಹಿಂದೂ ಪುರಾಣಗಳು, ಮಹಾಕಾವ್ಯಗಳು ಇನ್ನಿತರ ಧರ್ಮ ಗ್ರಂಥಗಳು ಜಗತ್ತಿನಾದ್ಯಂಥ ಕುತೂಹಲ ಮೂಡಿಸಿವೆ. ಇತ್ತೀಚೆಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಮುಖ್ಯ ಸಮರತಾಂತ್ರಿಕ ಸಲಹೆಗಾರರಾಗಿರುವ ಸ್ಟೀವ್ ಬ್ಯಾನನ್ ಭಗವದ್ಗೀತೆಯೆ ಕಡೆಗೆ ತಮ್ಮ ಒಲವು ವ್ಯಕ್ತಪಡಿಸಿದ್ದು, ವಿಶ್ವ ರಾಜಕೀಯದೆಡೆಗಿನ ಅವರ ದೃಷ್ಟಿಕೋನವೂ ಗೀತೆಯ ಧರ್ಮಯುದ್ಧವನ್ನು ಪ್ರತಿನಿಧಿಸುತ್ತಿದೆ. ಹಾಗೆ ನೋಡಿದಲ್ಲಿ ಹಿಂದೂ ಧರ್ಮಗ್ರಂಥಗಳು ವಿದೇಶೀಯರನ್ನು ಆಕರ್ಷಿಸಿದ್ದು ಇದೇ ಮೊದಲ ಬಾರಿಯೇನಲ್ಲ. ಕಳೆದೆರಡು ಶತಮಾನಗಳಿಂದ ಪಾಶ್ಚಾತ್ಯ ವಿಜ್ಞಾನಿಗಳು ಮತ್ತು ಚಿಂತಕರನ್ನು  ಆಕರ್ಷಿಸಿದ ಹೆಗ್ಗಳಿಕೆ ಈ ವಿಶಿಷ್ಟ ಗ್ರಂಥಗಳಿಗಿವೆ. ಬ್ರಿಟನ್ನಿನ ಖ್ಯಾತ ತತ್ವಶಾಸ್ತ್ರಜ್ಞ  ಆಲ್ಡಸ್ ಹಕ್ಸ್‌ಲಿ ತನ್ನ ಕೃತಿ Brave New World ಬರೆಯುವಾಗ ಆತನ ತಲೆ ತುಂಬಾ ಭಗವದ್ಗೀತೆಯೇ ತುಂಬಿತ್ತು. ನಾಝಿ ಜರ್ಮನಿಯ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದ ಹೆನ್ರಿಚ್ ಹಿಮ್ಲರ್ ಕೂಡ ತಾನು ಗೀತೆಯೆ ಉಪದೇಶಗಳಿಂದ ಪ್ರಭಾವಿತನಾಗಿದ್ದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಇವಿಷ್ಟೇ ಅಲ್ಲದೇ 'ಲಾಸ್ ಅಲಮೊಸ್'ನ ಪ್ರಯೋಗಾಲಯದಲ್ಲಿ ವಿಶ್ವದ ಪ್ರಪ್ರಥಮ ಅಣ್ವಸ್ತ್ರವನ್ನು ಪರೀಕ್ಷಿಸಿದ ನಂತರ ರಾಬರ್ಟ್ ಒಪೆನ್ಹೈಮರ್ ಉದ್ಗರಿಸಿದ್ದು, " “Now I am become Death, the destroyer of worlds." ಈ ಮಾತುಗಳ ಹಿಂದಿನ ಪ್ರೇರಣೆ ಕೃಷ್ಣನ ವಿಶ್ವರೂಪ ದರ್ಶನ, "ನಾನೇ ಕಾಲ. ಎಲ್ಲಾ ಲೋಕಗಳ ಮಹಾನ್ ಕ್ಷಯಕಾರಿ..." (ಭಗವದ್ಗೀತೆ 11.32)

ಮಹಾಕಾವ್ಯ ಮಹಾಭಾರತದ ಒಂದು ಭಾಗವಾಗಿದ್ದರೂ ಭಗವದ್ಗೀತೆ ಇವತ್ತಿಗೆ ತನ್ನದೇ ಆದ ಪ್ರತ್ಯೇಕ ಅಸ್ಮಿತೆಯನ್ನೂ ಜನಮಾನಸದಲ್ಲಿ ಸೃಷ್ಟಿಸಿದೆ. ಮಹಾಭಾರತದ ಹೃದಯಭಾಗವಾದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಶತ್ರುಪಾಳಯದಲ್ಲಿ ತಮ್ಮವರನ್ನೇ ಕಂಡು ಕರಗಿ ನೀರಾಗಿ ಯುದ್ಧ ಬೇಡ ಎಂದಾಗ ಸಾರಥಿಯಾಗಿದ್ದ ಕೃಷ್ಣ ಅರ್ಜುನನಿಗೆ ಯುದ್ಧಧರ್ಮ ಮಾತ್ರವಲ್ಲದೇ ಜೀವನ ಧರ್ಮ ಸಾರವನ್ನೇ ತಿಳಿಸಿಕೊಡುತ್ತಾನೆ. ಪ್ರಪಂಚದಲ್ಲಿ ಧರ್ಮವನ್ನು ನೆಲೆಗೊಳಿಸಲು ಶ್ರೀಕೃಷ್ಣ ಅರ್ಜುನನ ಕಣ್ತೆರಿಸಿದ ರೀತಿ, ಇವತ್ತಿಗೆ ಜಗತ್ತಿಗೆ ದಾರಿ ದೀಪವಾಗುವ ಭಗವದ್ಗೀತೆಯ ರೂಪದಲ್ಲಿ ನಮ್ಮ ಮುಂದಿದೆ. ಎಲ್ಲಾ ಬಂಧಗಳಿಗಿಂತ ಧರ್ಮ ಸಂಸ್ಥಾಪನೆ ಮುಖ್ಯ ಎಂದ ಗೀತೆ ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮದಲ್ಲೂ ಅನೇಕ ಪ್ರಭಾವಿ ವ್ಯಕ್ತಿತ್ವಗಳನ್ನು ಪ್ರಭಾವಿಸಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮುಖ್ಯ ಸಮರತಾಂತ್ರಿಕ ಸಲಹೆಗಾರ ಸ್ಟೀಫನ್ ಕೆವಿನ್ ಸ್ಟೀವ್ ಬ್ಯಾನನ್!

Image may contain: 1 personಬ್ಯಾನನ್ ಬಹಳಷ್ಟು ಹಿಂದಿನಿಂದಲೂ 'ಧರ್ಮ' ಎಂಬ ಪರಿಕಲ್ಪನೆಯ ಕುರಿತಾಗಿ ತಮ್ಮ ಆಪ್ತವಲಯದಲ್ಲಿ ಬಹಳಷ್ಟು ಚರ್ಚಿಸುತ್ತಿದ್ದರು. ಧರ್ಮ ಎಂಬ ಸಂಸ್ಕೃತ ಪದಕ್ಕೆ ಆಂಗ್ಲ ಭಾಷೆಯಲ್ಲಿ ಪರಿಪೂರ್ಣವಾಗಿ ಹೊಂದುವಂತಾ ಪರ್ಯಾಯ ಪದವಿಲ್ಲ. ಧರ್ಮಕ್ಕೊಂದು ಪರ್ಯಾಯ ಪದ ಹುಡುಕುವುದು ಕಷ್ಟ ಸಾಧ್ಯವೇ ಸರಿ. ಧರ್ಮ ಕೆಲವೊಮ್ಮೆ ಸರಿಯಾದದ್ದನ್ನೇ ಮಾಡುವುದು ಎಂಬರ್ಥ ನೀಡಿದರೆ, ಕೆಲವೊಂದು ಸಂದರ್ಭದಲ್ಲಿ ಅದೊಂದು ಕರ್ತವ್ಯ, ಇನ್ನೊಮ್ಮೆ ನಾವು ಮಾಡುವ ಕೆಲಸಕ್ಕೆ ಒದಗಿಸುವ ನ್ಯಾಯದಂತೆ ಕಾಣುತ್ತದೆ. ಆದರೆ ಇದ್ಯಾವುದೂ ಧರ್ಮ ಎಂಬ ಪದದ ಮೂಲ ಅರ್ಥಕ್ಕೆ ಸರಿಸಾಟಿಯಾಗಲಾರದು ಎನ್ನುವುದೂ ಅಷ್ಟೇ ಸತ್ಯ. ಈ ಮೇಲೆ ವಿವರಿಸಿದ ಸಾಲುಗಳೆಲ್ಲವನ್ನು ಒಳಗೊಂಡು, ಇವೆಲ್ಲವುಗಳಿಗೂ ಮೀರಿದ ಪರಿಕಲ್ಪನೆಯೇ ಧರ್ಮ. ಪ್ರತಿಯೊಬ್ಬ ವ್ಯಕ್ತಿಗೂ ಆತನ ಸ್ವಭಾವ ಮತ್ತು ಸಾಮಾಜಿಕ ಬದ್ಧತೆಗಳಿಗೆ ಅನುಗುಣವಾಗುವಂತೆ ಆತನದ್ದೇ ಆದ ಧರ್ಮವೊಂದಿದ್ದು ಅದನ್ನು ಪಾಲಿಸಬೇಕಾಗುತ್ತದೆ. ಗೀತೆಯ ಹದಿನೆಂಟನೇ ಅಧ್ಯಾಯದ 47ನೇ ಶ್ಲೋಕ ಪರಧರ್ಮವನ್ನು ಸ್ವೀಕರಿಸಿ ಅದನ್ನು ಪರಿಪೂರ್ಣವಾಗಿ ನಿಭಾಯಿಸುವುದಕ್ಕಿಂತ, ಸ್ವಧರ್ಮವನ್ನು ಅಪರಿಪೂರ್ಣವಾಗಿ ಮಾಡುವುದೇ ಶ್ರೇಯಸ್ಕರ. ತನ್ನ ಸ್ವಭಾವಕ್ಕನುಗುಣವಾಗಿ ವಿಧಿಸಿದ ಕರ್ತವ್ಯಗಳನ್ನು ಮಾಡುವುದು ಉತ್ತಮ ಎನ್ನುತ್ತದೆ. ಈ ತರ್ಕ ಬ್ಯಾನನ್ ಜೀವನದಲ್ಲಿ ಬಹಳಷ್ಟು ಪ್ರಭಾವಿಸಿತ್ತು. ನೀವು ಯಾವುದೇ ಹಿಂದೂ       ಧರ್ಮ ಗ್ರಂಥವನ್ನು ಗಮನಿಸಿದರೂ ಅಲ್ಲೊಂದು ಸಾಮಾನ್ಯ ಅಂಶವಿದೆ. ಅದೇನೆಂದರೆ, ಎಲ್ಲಾ ಗ್ರಂಥಗಳಲ್ಲೂ ಎಲ್ಲಾ ವ್ಯಕ್ತಿಗಳೂ ಒಂದೋ ಧರ್ಮವನ್ನು ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುತ್ತಿರುತ್ತಾರೆ. ಈ ಹೋರಾಟ ಸಾಮಾಜಿಕ ನ್ಯಾಯ, ರಾಜಕೀಯ ಹಿತಾಸಕ್ತಿ ಅಥವಾ ಮಿಲಿಟರಿ ಸಂಘರ್ಷದ ರೂಪದಲ್ಲೂ ಇರಬಹುದು. ಈ ಎಲ್ಲಾ ವಿಚಾರಗಳು ಬ್ಯಾನನ್ ವೈಚಾರಿಕತೆಯ ಪ್ರತಿ ಮಗ್ಗುಲಲ್ಲೂ ಕಾಣಸಿಗುತ್ತದೆ.

ಸ್ಟೀವನ್ ಬ್ಯಾನನ್ ಪ್ರಕಾರ ವಿಶ್ವ ಅದರಲ್ಲೂ ಮುಖ್ಯವಾಗಿ ಪಾಶ್ಚಾತ್ಯ ಸಮಾಜ ನೈತಿಕ ಮತ್ತು ಆರ್ಥಿಕ ಅಧಃಪತನದತ್ತ ಸಾಗುತ್ತಿದೆ. ಬ್ಯಾನನ್ ಗಮನಿಸಿದ ಪ್ರಕಾರ ಸಾಂಪ್ರದಾಯಿಕ ಮೌಲ್ಯಗಳ ಕೊರೆತೆಯಿಂದ ಪಾಶ್ಚಾತ್ಯರು ಎಲ್ಲವನ್ನು ಕಳೆದುಕೊಂಡು ಅಧೋಗತಿಯತ್ತ ಸಾಗುತ್ತಿದ್ದಾರೆ ಎಂದು ವಾದಿಸುತ್ತಿದ್ದ ಬ್ಯಾನನ್, 'ಧರ್ಮ'ದ ಪರಿಕಲ್ಪನೆಯನ್ನು ತಮ್ಮ ವಾದಗಳಲ್ಲಿ ಬಳಸಿಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಧರ್ಮದ ಕೊರತೆಯೇ ಪಶ್ಚಿಮಾತ್ಯರು ಇವತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಮತ್ತು ಸಮಾಜದಲ್ಲಿ ಮತ್ತು ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಜನರ ಪ್ರತಿಕ್ರಿಯೆಗಳ ಬಗೆಗೂ ಬ್ಯಾನನ್ ಕಳವಳ ವ್ಯಕ್ತಪಡಿಸುತ್ತಾರೆ. ಮಹಾಭಾರತದ ಅತ್ಯಂತ ಮುಖ್ಯ ಭಾಗ ಕುರುಕ್ಷೇತ್ರ ಯುದ್ಧ ಬರಿಯ ಪಾಂಡವ-ಕೌರವರ ನಡುವಿನ ತಿಕ್ಕಾಟಕ್ಕಷ್ಟೇ ಸೀಮಿತವಾಗದೆ ಶತ ಶತಮಾನಗಳ ಆಧ್ಯಾತ್ಮಿಕ ಆದರ್ಶಗಳಿಗೂ ಸಾಕ್ಷಿಯಾಗಿ ನಿಲ್ಲುತ್ತದೆ. ಧರ್ಮದ ಬಗೆಗಿನ ಸ್ಪಷ್ಟ ನಿದರ್ಶನಗಳು, ಜನಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸುವ ಹೆಗ್ಗಳಿಕೆ ಮಹಾಭಾರತಕ್ಕೆ ಸಲ್ಲುತ್ತದೆ.

ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಂತೆ "ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ನಾನು ಸ್ವಯಂ ಅವತಾರ ಮಾಡುತ್ತೇನೆ. ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶ ಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ." ಭಗವದ್ಗೀತೆಯಲ್ಲಿರುವ ಈ ಕಾಲಜ್ಞಾನದ ಜಗದ್ವಿಖ್ಯಾತ ಸಾಲುಗಳ ಪ್ರತಿಫಲನ ಬ್ಯಾನನ್ ಚಿಂತನೆಗಳಲ್ಲಿ ಮೇಲಿಂದ ಮೇಲೆ ಕಾಣಸಿಗುತ್ತವೆ.  ಬ್ಯಾನನ್ ಹೇಳಿರುವಂತೆ, " ನಾವು ಕ್ರೂರ ಮತ್ತು ರಕ್ತಸಿಕ್ತ ಯುದ್ಧವೊಂದರ ಪ್ರಾರಂಭಿಕ ಹಂತದಲ್ಲಿದ್ದೇವೆ. ನಮ್ಮ ನಂಬಿಕೆಗಳಿಗೋಸ್ಕರ ಈ ಹೋರಾಟ. ನಾವು 2,500 ವರ್ಷಗಳಿಂದ ಕಟ್ಟಿಕೊಂಡದ್ದೆಲ್ಲವನ್ನು ನಾಶಮಾಡಬಲ್ಲ ಹೊಸ ಕ್ರೌರ್ಯವೊಂದರ ವಿರುದ್ಧ ನಾವು ಹೋರಾಡಬೇಕಾಗಿದೆ"ಓರ್ವ ವ್ಯಕ್ತಿ ತನ್ನನ್ನು ತಾನು ಒಂದು ಮಹತ್ತರ ಉದ್ದೇಶದ ಸಾಧನೆಯ ಆಯುಧವಾಗಿ ಪರಿಗಣಿಸಿಕೊಳ್ಳುವ ಈ ಮನಸ್ಥಿತಿ ಭಗವದ್ಗೀತೆಯ ಮೂಲ ವಿಷಯವನ್ನು ನೆನಪಿಸುವಂತಿದೆ. ಸಂಬಂಧಿಕರ ಹತ್ಯೆಯ ಬಗೆಗೆ ಅರ್ಜುನನ ಅನುಮಾನಕ್ಕೆ ಉತ್ತರಿಸುವ ಕೃಷ್ಣ, ನಿನ್ನ ಶತ್ರುಗಳು ಈಗಾಗಲೇ ನನ್ನಿಂದ ನಾಶವಾಗಿದ್ದಾರೆ, ನೀನು ಈ ಯುದ್ಧದಲ್ಲಿ ಒಂದು ನಿಮಿತ್ತ ಮಾತ್ರ ಎನ್ನುವಾಗ, ನಿನ್ನ ಕರ್ಮವನ್ನು ಮಾಡು ಫಲಾಫಲಗಳನ್ನು ನನಗೆ ಬಿಡು ಎಂದಾಗಲೂ ಒಬ್ಬ ವ್ಯಕ್ತಿಯನ್ನು ವಿಶ್ವವ್ಯಾಪಿ ಮಹಾನ್ ಉದ್ದೇಶವೊಂದರ ಭಾಗವನ್ನಾಗಿಸುವ ಪ್ರಯತ್ನವನ್ನು ಗಮನಿಸಬಹುದು.

ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿರುವ ವಿಶ್ವವ್ಯಾಪಿ ರಣರಂಗದ ಪರಿಕಲ್ಪನೆ ಬ್ಯಾನನ್ ಚಿಂತನೆಗಳಲ್ಲಿ ಪುನರಾವರ್ತಿತವಾಗುತ್ತಿದೆ. ಬ್ಯಾನನ್ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಪದೇ ಪದೇ ವಿಶ್ವರಣರಂಗದಲ್ಲಿ ತನ್ನನ್ನು ತಾನು ಧರ್ಮವನ್ನು ರಕ್ಷಿಸುವ ಯೋಧನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಧರ್ಮದ ಜೊತೆ ಜೊತೆಗೆ ಹಂಟಿಗ್ಟನ್ ರ  ನಾಗರಿಕತೆಗಳ ಸಂಘರ್ಷವೂ ಬ್ಯಾನನ್ ಯೋಜನೆಗಳ ತಳಹದಿ ರೂಪಿಸುತ್ತಿವೆ. ಸ್ಟೀವ್ ಬ್ಯಾನನ್ ಭಗವದ್ಗೀತೆಯಿಂದ ಪ್ರಭಾವಿತನಾಗಿರುವ ಪರಿ, ಜಾಗತಿಕ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಹೊಸ ದೃಷ್ಟಿಕೋನದೊಂದಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಹುಟ್ಟಿಸಿದೆ.

(This article was published in Hosa Digantha Newsapaper on 9 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

'ರಾ' ಹದ್ದಿನ ಕಣ್ಣಲ್ಲಿ ಪಾಕ್ ಅಣ್ವಸ್ತ್ರ ಯೋಜನೆ


ರಾಷ್ಟ್ರಗಳ ನಡುವಿನ ಶಕ್ತಿ ರಾಜಕೀಯದಲ್ಲಿ ಸ್ವಂತ ಶಕ್ತಿ ಎಷ್ಟು ಪ್ರಮುಖವೋ, ಶತ್ರುವಿನ ಬಲಾಬಲಗಳ ಪರಿಚಯ ಅಷ್ಟೇ ಮುಖ್ಯ. ಇದೇ ಕಾರಣಕ್ಕಾಗಿ, ಪ್ರತೀ ದೇಶದಲ್ಲೂ ಅವರದ್ದೇ ಆದ ಆದ ಗುಪ್ತಚರ ದಳಗಳಿವೆ. ಒಂದು ರೀತಿಯಲ್ಲಿ ಎಲ್ಲಾ ರಾಷ್ಟ್ರಗಳೂ ತಮ್ಮ ವೈರಿಗಳು ಮಾತ್ರವಲ್ಲದೇ ಮಿತ್ರರ ಮೇಲೂ ಒಂದು ರೀತಿಯ ಛಾಯಾ ಯುದ್ಧದಲ್ಲಿ ತೊಡಗಿರುತ್ತವೆ. ಇತರ ದೇಶಗಳ ಸಣ್ಣ ಪುಟ್ಟ ರಹಸ್ಯಗಳನ್ನೂ ತಮ್ಮ ದೇಶದ ಪರವಾಗಿ ಬಳಸಿಕೊಳ್ಳುವ ಗುಪ್ತಚರ ಸಂಸ್ಥೆಗಳ ಉದಾಹರಣೆಗಳಿದ್ದಂತೆ, ಈ ಸಂಸ್ಥೆಗಳ ಒಂದು ಕ್ಷಣದ ಮೈಮರೆವು ದೇಶಕ್ಕೆ ಗಂಡಾಂತರ ತಂದ ನಿದರ್ಶನಗಳೂ ಇವೆ. ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಕುರಿತಾಗಿಯೂ ಭಾರತದ ಗುಪ್ತಚರ ದಳ 'ರಾ' ಹದ್ದಿನ ಕಣ್ಣಿಟ್ಟಿತ್ತು. ಈ ಬಗ್ಗೆ ದಶಕಗಳಿಂದ ರಹಸ್ಯವಾಗಿದ್ದ ಕಡತಗಳು ಮತ್ತು ದಾಖಲೆಗಳು ವಿವರ್ಗೀಕರಿಸಲ್ಪಟ್ಟು, ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ 'ರಾ' ಸಂಗ್ರಹಿಸಿದ್ದ ಮಾಹಿತಿಗಳು ಹೊರಬಿದ್ದಿವೆ. 1970ಕ್ಕೂ ಹಿಂದಿನಿಂದಲೇ 'ರಾ' ಅಧಿಕಾರಿಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ ಹಂತ ಹಂತವಾಗಿ ಮಾಹಿತಿ ಕಲೆ ಹಾಕಿದ್ದರು!

1970ರ ದಶಕದಲ್ಲಿ ಪಾಕಿಸ್ತಾನದ ಸಂಸ್ಕರಣ ಸಾಮರ್ಥ್ಯ ಮತ್ತು 1980ರ ದಶಕದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸುವ ಸಾಮರ್ಥ್ಯದ ಕುರಿತಾಗಿ ವಿಶೇಷ ಮಾಹಿತಿಗಳನ್ನು ಭಾರತ ಸಂಗ್ರಹಿಸಿತ್ತು. 1990ರ ದಶಕದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಕ್ಷಿಪಣಿ ಕಾರ್ಯಕ್ರಮಕ್ಕೆ ಚೀನಾದ ಬೆಂಬಲ ಮತ್ತು ಈ ಕ್ಷಿಪಣಿ ಯೋಜನೆಯನ್ನು ಉತ್ತರ ಕೊರಿಯಾಗೆ ಹೊರಗುತ್ತಿಗೆ ನೀಡುವ ಚೀನಾ ಷಡ್ಯಂತ್ರಗಳೆಲ್ಲವನ್ನೂ ಭಾರತೀಯ ಗುಪ್ತಚರ ಸಂಸ್ಥೆ ತಿಳಿದುಕೊಂಡಿತ್ತು. 2004ರಲ್ಲಿ ಪಾಕಿಸ್ತಾನ ಪರೀಕ್ಷಿಸಿದ ಶಹೀನ್-II ಖಂಡಾಂತರ ಕ್ಷಿಪಣಿಯ ಕುರಿತಾಗಿ ನಾಲ್ಕು ವರ್ಷಗಳ ಹಿಂದೆಯೇ 'ರಾ' ಮಾಹಿತಿ ಕಲೆಹಾಕಿತ್ತು. ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕಿದ್ದರೂ, ಈ ಮಾಹಿತಿಗಳೆಲ್ಲವನ್ನೂ ರಹಸ್ಯವಾಗಿಡಲಾಗಿತ್ತು. ಇತ್ತೀಚೆಗೆ ಬಹಿರಂಗಗೊಳಿಸಲಾದ ಕಡತಗಳಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ್ದ ಕೆಲವೊಂದು ಮಾಹಿತಿಗಳು ಹೀಗಿವೆ.

ಅಣ್ವಸ್ತ್ರಗಳನ್ನು ಉತ್ಪಾದಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ವಿಶ್ಲೇಷಿಸಿ 1975ರ ಮಾರ್ಚ್ ನಲ್ಲಿ ಭಾರತದ ಜಂಟಿ ಗುಪ್ತಚರ ಮಂಡಳಿ (JIC - Joint Intelligence Committee Report) ದಾಖಲೆ ಪತ್ರವೊಂದನ್ನು ಸಿದ್ಧಪಡಿಸಿತ್ತು ಮತ್ತು ಫೆಬ್ರವರಿ 1976ರಲ್ಲಿ ಕೆಲ ಬದಲಾವಣೆಗಳೊಂದಿಗೆ ಈ ದಾಖಲೆ ಪತ್ರವನ್ನು ಪುನರ್ ವಿಮರ್ಶಿಸಲಾಗಿತ್ತು. ಈ ದಾಖಲೆಗಳ ಪ್ರಕಾರ, ಆ ಸಮಯದಲ್ಲೇ ಭಾರತದ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಶಕ್ತಿಯ ಸಂಭವನೀಯತೆಗಳನ್ನು ಮನಗಂಡಿದ್ದರು. ಪ್ಲುಟೋನಿಯಂ-239 ಅಥವಾ ಯುರೇನಿಯಂ-235ಗಳ ಕೊರೆತೆಯಿರುವ ಕಾರಣ ಮುಂದಿನ ನಾಲ್ಕು ವರ್ಷಗಳವರೆಗೆ ಅಣ್ವಸ್ತ್ರ ಉತ್ಪಾದಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದನ್ನು 1975ರ ದಾಖಲೆ ಪತ್ರಗಳು ಸ್ಪಷ್ಟಪಡಿಸುತ್ತವೆ. ಜಂಟಿ ಗುಪ್ತಚರ ಮಂಡಳಿಯ ವರದಿಯ ಪ್ರಕಾರ, ಪಾಕಿಸ್ತಾನ ಮಹತ್ವಾಕಾಂಕ್ಷೆಯೊಂದಿಗೆ ಕರಾಚಿಯಲ್ಲಿ ಸ್ಥಾಪಿಸಿದ್ದ ಅಣ್ವಸ್ತ್ರ ಸ್ಥಾವರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು. ಬಾಯ್ಲರ್ ಗಳಲ್ಲಿ ಸೋರಿಕೆಯಿಂದಾಗಿ ರಿಯಾಕ್ಟರ್ ಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು. 1975ರಲ್ಲೇ ಈ ಅಣುಕೇಂದ್ರವನ್ನು ಆರು ಬಾರಿ ಮುಚ್ಚಬೇಕಾಗಿ ಬಂತು. ಒಂದು ಬಾರಿ ಈ ಸಮಸ್ಯೆ ವಿಕೋಪಕ್ಕೆ ತಿರುಗಿಕೊಂಡು, ಕೆನಡಾ ತಂತ್ರಜ್ಞರು ಬಂದು ಸರಿ ಪಡಿಸಬೇಕಾಯ್ತು ಎಂಬ ರಹಸ್ಯ ಮಾಹಿತಿಗಳು ಭಾರತಕ್ಕೂ ತಿಳಿದಿತ್ತು!
Image may contain: 1 person
1976ರಲ್ಲಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿದ್ದ ಭಾರತೀಯ ದೂತಾವಾಸದಿಂದ ಭಾರತಕ್ಕೆ ಕಳುಹಿಸಿದ ರಹಸ್ಯ ರಾಜತಾಂತ್ರಿಕ ಸಂದೇಶಗಳನ್ನು ಗಮನಿಸಿದಾಗ, ಬಹಳಷ್ಟು ಹಿಂದೆಯೇ, ಪಾಕಿಸ್ತಾನದಲ್ಲಿ ಚೀನೀ ವಿಜ್ಞಾನಿಗಳು ಕಾರ್ಯನಿರತವಾಗಿರುವ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಕರಾಚಿಯಲ್ಲಿದ್ದ ಅಣ್ವಸ್ತ್ರ ಸ್ಥಾವರ, ಅಂತರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (IAEA) ಅಧೀನದಲ್ಲಿದ್ದರೂ, ಕೆನಡಾದ ಅಣ್ವಸ್ತ್ರ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಬಳಸಲು ಚೀನೀ ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿತ್ತು ಪಾಕಿಸ್ತಾನ! ಈ ರಹಸ್ಯವನ್ನು ಹಂಗೇರಿಯ ರಾಜತಂತ್ರಜ್ಞನೊಬ್ಬ ಒಟ್ಟಾವದಲ್ಲಿದ್ದ ಭಾರತದ ರಾಯಭಾರಿಗೆ ತಿಳಿಸಿದ್ದ. ಚೀನಾದ ಮಿಲಿಟರಿ ಪೂರೈಕೆಗಳಿಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ಬಳಿಯಿದ್ದ ಕೆನಡಾದ ತಂತ್ರಜ್ಞಾನವನ್ನು ಚೀನಾದೊಂದಿಗೆ ಹಂಚಿಕೊಂಡಿತ್ತು. 1981ರಲ್ಲಿ ಇಸ್ಲಾಮಾಬಾದ್ ನಲ್ಲಿದ್ದ ಭಾರತೀಯ ದೂತಾವಾಸ ಕಳುಹಿಸಿದ 'ತಿಂಗಳ ವರದಿ'ಯಲ್ಲಿ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಯಶಸ್ವಿಯಾಗಲಿದೆ ಮತ್ತು ಪಾಕಿಸ್ತಾನ ಜಿಯಾ ಇದೇ ವರ್ಷ ಅಣ್ವಸ್ತ್ರ ಪರೀಕ್ಷಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂದಿತ್ತು. ಇದೇ ವರ್ಷ ಜೆ. ಎನ್ ದೀಕ್ಷಿತ್ ರವರ ( ಮುಂದೆ 2004-2005ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು)  ಅಧ್ಯಯನ ವರದಿ, ಪಾಕಿಸ್ತಾನದ ಕಹುಟಾ, ಇಸ್ಲಾಮಾಬಾದ್ ಮತ್ತು ಸಿಹಾಲಗಳಲ್ಲಿ ತ್ರಿಕೋನ ಅಣ್ವಸ್ತ್ರ ಯೋಜನೆಗಳು ಮತ್ತು ಯುರೇನಿಯಂ ಹೆಕ್ಸಾಫ್ಲುರೈಡ್ ತಯಾರಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಎಚ್ಚರಿಸಿದ್ದರು.

ಪಾಕಿಸ್ತಾನ ಸಿಂಧ್, ಬಲೂಚಿಸ್ತಾನ್ ಅಥವಾ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (ಖೈಬರ್ ಪಕ್ತೂನ್ಕಾವ) ಭೂಮಿಯ ಅಡಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮಾಹಿತಿ ಭಾರತಕ್ಕೆ ತಿಳಿದಿತ್ತು. ಇದೇ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟದ ಉಪಗ್ರಹಗಳು ರಾಸ್ ಕೊಹ್ ಪ್ರದೇಶದಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ಸುರಂಗಗಳನ್ನು ಪತ್ತೆಹಚ್ಚಿತ್ತು. ಪಾಕ್ ಅಣ್ವಸ್ತ್ರ ಯೋಜನೆಗೆ ಲಿಬಿಯಾ ಜೊತೆಯಲ್ಲೂ ಕೊಂಡಿಗಳಿವೆ ಎಂವ ವಿಚಾರವೂ ಭಾರತದ ಗಮನಕ್ಕೆ ಬಂದಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕಾ ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧಗಳನ್ನು ಉನ್ನತ ಮಟ್ಟಕ್ಕೇರಿಸಿ, 3 ಬಿಲಿಯನ್ ಅಮೆರಿಕನ್ ಡಾಲರ್ಗಳ ನೆರವು ನೀಡಿದ್ದಷ್ಟೇ ಅಲ್ಲದೇ  F-16 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಿದಾಗ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ರೇಗನ್ ಮತ್ತಿತರ ಅಧಿಕಾರಿಗಳು ಭಾರತವನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದರು. ಈ ಹೊತ್ತಿನಲ್ಲಿಯೇ ಜಿಯಾ, ಭಾರತ ಮತ್ತು ಪಾಕಿಸ್ತಾನಗಳ ಅಣ್ವಸ್ತ್ರ ಕೇಂದ್ರಗಳ ಪರಸ್ಪರ ತಪಾಸಣೆಗೊಳಪಡಿಸುವ ತನ್ನ ಇಚ್ಛೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು. ಆದರೆ ಈ ಪ್ರಯತ್ನಗಳು ಭಾರತವನ್ನು ಓಲೈಸುವಲ್ಲಿ ವಿಫಲವಾಗುತ್ತವೆ.

ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಕುರಿತಾಗಿ ಅಗಾಧ ಮಾಹಿತಿ ಸಂಗ್ರಹಿಸಿದ್ದರೂ, ಅದನ್ನು ತಡೆಗಟ್ಟಲು ಭಾರತ ಯಾವುದೇ ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಲಿಲ್ಲ. ಆದರೆ ಪಾಕಿಸ್ತಾನದ ರಿಯಾಕ್ಟರ್ ಗಳನ್ನು ನಾಶಪಡಿಸಲು ಇಸ್ರೇಲ್ ಮುಂದೆ ಬಂದಿತ್ತು. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಭಾರತದ ಸಹಕಾರವನ್ನು ನಿರೀಕ್ಷಿಸಿತ್ತಾದರೂ, ಕಾರಣಾಂತರಗಳಿಂದ ಭಾರತ ಇಸ್ರೇಲ್ ಪ್ರಸ್ತಾವನೆಯನ್ನು ನಿರಾಕರಿಸುತ್ತದೆ. ಕೊನೆಗೂ  ಭಾರತ ಮತ್ತು ಪಾಕಿಸ್ತಾನಗಳೆರಡೂ ಅಣ್ವಸ್ತ್ರ ಶಕ್ತಿಗಳಾಗಿ ಬದಲಾಗಿವೆಯಷ್ಟೇ ಅಲ್ಲದೆ ಜಾಗತಿಕ ಅಣ್ವಸ್ತ್ರ ಸಂಘರ್ಷಗಳ ಬಗೆಗಿನ ಯಾವುದೇ ಚರ್ಚೆ ದಕ್ಷಿಣ ಏಷ್ಯಾದ ಅಣ್ವಸ್ತ್ರ ತಿಕ್ಕಾಟವನ್ನು ಪ್ರಸ್ತಾಪಿಸದೆ ಕೊನೆಗೊಳ್ಳುವುದಿಲ್ಲ. ಇತ್ತೀಚಿನ ಗುಪ್ತಚರ ಕಡತಗಳು ಮತ್ತು ದಾಖಲೆ ಪತ್ರಗಳ ವಿವರ್ಗೀಕರಣ ಇವೆಲ್ಲವುಗಳನ್ನು ನೆನಪಿಸುವಂತಿತ್ತು.

(This article was published in Vishwavani Newsapaper on 8 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗಣರಾಜ್ಯೋತ್ಸವದ ಜೊತೆಗೊಂದು ರಾಜತಾಂತ್ರಿಕ ನಡೆ

ಭಾರತದ 68ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅಬುಧಾಬಿಯ ರಾಜಕುಮಾರ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರವರು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ತಮ್ಮ ರಾಜತಾಂತ್ರಿಕ ಚತುರತೆ ಮೆರೆದಿದ್ದಾರೆ. 2016ರಲ್ಲಿ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಮುಖ್ಯ ಅತಿಥಿಯ ಗೌರವ ನೀಡಿ ಫ್ರಾನ್ಸ್ ಮತ್ತು ಭಾರತಗಳ ಬಾಂಧವ್ಯದಲ್ಲಿ ಹೊಸ ಅವಕಾಶಗಳನ್ನು ತೆರೆದಿದ್ದ ಮೋದಿ, ಈ ಬಾರಿ ಅರಬ್ ಸಂಯುಕ್ತ ರಾಷ್ಟ್ರಗಳ (UAE) ಜೊತೆಗಿನ ಸ್ನೇಹಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಈ ಬಾರಿ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಅಬುಧಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಅರಬ್ ಸಂಯುಕ್ತ ರಾಷ್ಟ್ರಗಳ ಸಶಸ್ತ್ರ ಪಡೆಗಳ  ಉಪ ಮಹಾ ದಂಡನಾಯಕನೂ ಆಗಿದ್ದು, ಇದೇ ಮೊದಲಬಾರಿಗೆ ಜನವರಿ 26ರಂದು ಅರಬ್ ಸೈನಿಕರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದ್ದಾರೆ. ಶೇಕ್ ಮೊಹಮ್ಮದ್ ವರ ಈ ಭೇಟಿ ಯುಎಇ ಜೊತೆಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು 'ಪ್ರಮುಖ ಪಾಲುದಾರ' ಮಟ್ಟಕ್ಕೆ ಏರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ.

ಆಗಸ್ಟ್ 2015ರಲ್ಲಿ ಮೋದಿಯವರು ಅಬುಧಾಬಿಗೆ ಭೇಟಿ ನೀಡಿದ ಬಳಿಕ, ಭಾರತ-ಯುಎಇ ಗಳ ದ್ವಿಪಕ್ಷೀಯ ಸಂಬಂಧಗಳು ನವೋತ್ಸಾಹ ಪಡೆದುಕೊಂಡಿತ್ತು. 34 ವರ್ಷಗಳ ಹಿಂದಿನ ಇಂದಿರಾ ಗಾಂಧಿ ಭೇಟಿಯ ನಂತರದ ಸುದೀರ್ಘ ಕಾಲಾವಧಿಯಲ್ಲಿ ಜಡ್ಡುಗಟ್ಟಿದ್ದ ಸ್ನೇಹಕ್ಕೆ ಹೊಸ ಶಕ್ತಿ ತುಂಬಿತ್ತು ಈ ಭೇಟಿ. ವಿದೇಶೀ ಬಂಡವಾಳ ಹೂಡಿಕೆಗೆ ಭಾರತ ತೆರೆದುಕೊಂಡ ರೀತಿ ಮತ್ತು ಯುಎಇನಲ್ಲಿ ಹೊಸ ಆರ್ಥಿಕ ಮೂಲಗಳ ಹಿನ್ನೆಲೆಯಲ್ಲಿ ಉಧ್ಬವಿಸಿದ 'ನವ ತೈಲ ರಾಜತಂತ್ರ' ಈ ಎರಡು ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿತ್ತು. ತ್ವರಿತಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಇನ್ನಿತರ ಸನ್ನಿವೇಶಗಳು, ಭಾರತ ಮತ್ತು ಯುಎಇ ಗಳ ನಡುವೆ ಆಯಕಟ್ಟಿನ ದ್ವಿಪಕ್ಷೀಯ ಸಹಕಾರ ಒಪ್ಪಂದವೊಂದರ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತವೆ.

ಜಾಗತಿಕ ತೈಲ ಬೆಲೆಗಳ ಕುಸಿತದ ಹಿನ್ನೆಲೆಯಲ್ಲಿ ಅಬು ಧಾಬಿ ತೈಲೇತರ ವಲಯಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ತೈಲದಿಂದ ದೊರೆಯುತ್ತಿರುವ ಆದಾಯ ಕಡಿಮೆಯಾಗುತ್ತಿರುವುದಷ್ಟೇ ಅಲ್ಲದೇ ಭವಿಷ್ಯದ ದೃಷ್ಟಿಯಿಂದ ತೈಲದಿಂದ ಸಿಗುವ ಆದಾಯದ ಅನಿಶ್ಚಿತತೆ ಅರಬ್ ನಾಯಕರನ್ನು ಇನ್ನಿತರ ಆದಾಯದ ಮೂಲಗಳನ್ನು ಹುಡುಕುವಂತೆ ಮಾಡಿದೆ. ಹೊಸ ಆದಾಯ ಮೂಲಗಳು ಮತ್ತು ಆರ್ಥಿಕ ವಲಯಗಳ ಹುಡುಕಾಟದಲ್ಲಿರುವ ಯುಎಇ ಗೆ ಭಾರತದ ನೆರವಿನ ಅವಶ್ಯಕತೆಯಿದೆ. ಆರ್ಥಿಕ ಕಾರಣಗಳನ್ನು ಒತ್ತಟ್ಟಿಗಿರಿಸಿದರೂ, ರಾಜಕೀಯ ಪರಿಸ್ಥಿತಿಗಳು, ಯುಎಇ ತನ್ನ ಹಳೆಯ ಸಂಬಂಧಗಳನ್ನು ಪುನರ್ ವಿಮರ್ಶಿಸುವ ಸಮಯ ಬಂದಿದೆ. ಬ್ರೆಕ್ಸಿಟ್, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆ, ಜರ್ಮನಿಯಲ್ಲಿ ಮುಂಬರಲಿರುವ ಚುನಾವಣೆಗಳು, ಇದೇ ಮೇ ತಿಂಗಳಲ್ಲಿ ನಡೆಯಲಿರುವ ಇರಾನಿನ ಅಧ್ಯಕ್ಷೀಯ ಚುನಾವಣೆ ಮತ್ತಿನ್ನಿತರ ಜಾಗತಿಕ ರಾಜಕೀಯ ತಿರುವುಗಳು ಯುಎಇ ವಿದೇಶಾಂಗ ನೀತಿಯ ನಿರ್ಧಾರಗಳಿಗೆ ಸವಾಲಾಗಲಿವೆ.
Image may contain: 4 people
ಯುಎಇ  ತನ್ನ ಆರ್ಥಿಕತೆಯನ್ನು ಅರಬ್ ಜಗತ್ತಿನೊಂದಿಗೆ ವಿಲೀನಗೊಳಿಸಿಕೊಂಡಿರುವುದು ಇವತ್ತಿಗೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಪ್ರತಿನಿತ್ಯ ಯಾವುದಾದರೊಂದು ಸಂಘರ್ಷ ಅಥವಾ ಗದ್ದಲಗಳಲ್ಲಿ ಕಾಲ ನೂಕುತ್ತಿರುವ ಸಿರಿಯಾ, ಇರಾಕ್, ಲಿಬಿಯಾ ಮತ್ತು ಯೆಮೆನ್ ನಂಥಾ ಅರಬ್ ರಾಷ್ಟ್ರಗಳ ದೆಸೆಯಿಂದಾಗಿ, ಏಕೀಕೃತ ಅರಬ್ ಆರ್ಥಿಕ ಪ್ರಗತಿಯ ಕನಸು ನನಸಾಗುವ ಯಾವುದೇ ಲಕ್ಷಣಗಳಿಲ್ಲ. ಇಂಥ ಒಂದು ರೋಗಗ್ರಸ್ತ ಆರ್ಥಿಕ ವ್ಯವಸ್ಥೆಯ ಜೊತೆ ತನ್ನ ಆರ್ಥಿಕತೆಯನ್ನು ತಳುಕುಹಾಕಿ ಕೊಂಡ ಅವಿವೇಕಕ್ಕೆ ಯುಎಇ ತನ್ನನ್ನು ತಾನೇ ಶಪಿಸಿಕೊಳ್ಳುವಂತಾಗಿದೆ. ನಿರುದ್ಯೋಗಿ ಯುವಕರು ಹಿಂಡು ಹಿಂಡಾಗಿ ಭಯೋತ್ಪಾದನೆಯತ್ತ ಮುಖ ಮಾಡಿರುವುದೂ ಇನ್ನಷ್ಟು ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ. ಯುರೋಪಿಯನ್ ಒಕ್ಕೂಟದ ಮಾದರಿಯಲ್ಲಿ ಗಲ್ಫ್ ರಾಷ್ಟ್ರಗಳು ಜಿ.ಸಿ.ಸಿ (Gulf Cooperation Council) ಸ್ವಲ್ಪ ಮಟ್ಟಿಗೆ ಭರವಸೆ ತುಂಬಿದ್ದರೂ, ಅದರ ಧ್ಯೇಯೋದ್ದೇಶಗಳು ಪೂರ್ಣ ಫಲ ಕಾಣಲು ವರ್ಷಗಳೇ ಬೇಕಾಗಬಹುದು. ಈ ಎಲ್ಲಾ ಸಂದಿಗ್ಧತೆಗಳಿಂದ ಹೊರ ಬೀಳುವ ತವಕದಲ್ಲಿರುವ ಯುಎಇ ಭಾರತದತ್ತ ಸ್ನೇಹ ಹಸ್ತ ಚಾಚಿದ್ದು ಅಸಹಜವೇನಲ್ಲ.
ಭಾರತದ ಅವಶ್ಯಕತೆಗಳಿಗೂ, ಯುಎಇ ಸ್ನೇಹ ಪೂರಕವಾಗಿಯೇ ಕೆಲಸ ಮಾಡಬಲ್ಲುದು. ತೈಲ ಮತ್ತಿನ್ನಿತರ ಶಕ್ತಿಮೂಲಗಳ ಪೂರೈಕೆ ಹಾಗೂ ದೇಶದೊಳಗಡೆ ಹೊಸ ಬಂಡವಾಳ ಹೂಡಿಕೆಗೆ ಈ ದ್ವಿಪಕ್ಷೀಯ ಮಾತುಕತೆಗಳು ಸದೃಢ ಅಡಿಪಾಯ ಹಾಕುತ್ತದೆ. ಈಗಾಗಲೇ ಭಾರತ ಮತ್ತು ಯುಎಇಗಳ ನಡುವೆ ಉತ್ತಮ ಆರ್ಥಿಕ ಸಂಬಂಧಗಳಿವೆ. 2015ರಲ್ಲಿ ಭಾರತ-ಯುಎಇಗಳ ವ್ಯಾಪಾರ ವಹಿವಾಟು ಸುಮಾರು 60 ಬಿಲಿಯನ್ ಡಾಲರ್ ಗಳಷ್ತಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಇದನ್ನು 60 ಪ್ರತಿಶತ ಹೆಚ್ಚಿಸುವ ತವಕದಲ್ಲಿರುವ ಎರಡೂ ರಾಷ್ಟ್ರಗಳು 2020ರಲ್ಲಿ 100 ಬಿಲಿಯನ್ ಡಾಲರ್ ಗಳಷ್ಟು ವ್ಯಾಪಾರ ವಹಿವಾಟು ನಡೆಸುವ ಗುರಿ ಇಟ್ಟುಕೊಂಡಿವೆ. ಭಾರತದ ಮೂಲಸೌಕರ್ಯಗಳನ್ನು ಸುಧಾರಿಸಲು 75 ಬಿಲಿಯನ್ ಡಾಲರ್ ಗಳ ಅನುದಾನ ನಿಗದಿಯಾಗಿದ್ದು, ಬಂಡವಾಳ ಆಕರ್ಷಣೆಗೆ ಹೊಸ ತಂಡವೊಂದನ್ನು ರಚಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆಗಳ ಅನಿಶ್ಚಿತತೆಯಿಂದಾಗಿ, ಯುಎಇ ನ ಎಮಿರೇಟ್ ಗಳಾದ ದುಬೈ ಮತ್ತು ಅಬು ದಾಬಿಗಳು ತಮ್ಮ ಆದಾಯ ಮೂಲಗಳಲ್ಲಿ ವೈವಿಧ್ಯತೆ ಹುಡುಕಲಾರಂಬಿಸಿವೆ. ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿವೆ. 2008ರ Abu Dhabi Economic Vision 2030 ಯೋಜನೆ ತೈಲೇತರ ವಲಯಗಳ ಸುಧಾರಣೆ ಮತ್ತು ಪ್ರಚಾರಕ್ಕೆ ಒತ್ತು ನೀಡುತ್ತಿದೆ. ಯುಇನ ಅತ್ಯಂತ ಶ್ರೀಮಂತ ಎಮಿರೇಟ್ ಆಗಿರುವ ಅಬು ದಾಬಿಯೂ ಇತ್ತೀಚೆಗೆ ತನ್ನ ಆರ್ಥಿಕ ವಲಯಗಳನ್ನು ತೈಲ ಪೂರೈಕೆಗೆ ಮಾತ್ರ ಸೀಮಿತಗೊಳಿಸದೆ, ಅದರಾಚೆಗೂ ಬೇರೆ ವಲಯಗಳಿಗೆ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ಪ್ರಯತ್ನಪಡುತ್ತಿರುವುದು ಗಮನಾರ್ಹ. ಯುಎಇ ತನ್ನ ಯುವಜನಾಂಗಕ್ಕೆ ಪುನಶ್ಚೇತನ ನೀಡುಲು, 'UAE Vision 2021'ನಂತಾ ಅಲ್ಪಾವಧಿ ಯೋಜನೆಗಳನ್ನೂ ಜಾರಿಗೊಳಿಸಿದೆ. ಇತ್ತೀಚೆಗೆ ಸಂತೋಷ, ಸಹಿಷ್ಣುತೆ ಮತ್ತು ಭವಿಷ್ಯಕ್ಕೋಸ್ಕರ ಹೊಸ ಸಚಿವಾಲಯವನ್ನು (Ministry of Happiness, Tolerance, and the Future) ತೆರೆದಿರುವ ಯುಎಇ, ಯುವಕರು ಮತಾಂಧರಾಗುವುದನ್ನು ತಡೆದು ಅವರಲ್ಲಿನ ಪ್ರತಿಭೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗಿದೆ. ಯುಎಇನ ಈ ಧನಾತ್ಮಕ ಬೆಳವಣಿಗೆಗಳಲ್ಲಿ ಪಾಲುದಾರನಾಗುವ ಅವಕಾಶವೊಂದು ಭಾರತಕ್ಕಿದೆ.

ಯುಎಇನಲ್ಲಿ ನೆಲೆಯಾಗಿರುವ ವಿದೇಶೀಯರಲ್ಲಿ ಅತೀ ಹೆಚ್ಚಿನ ವಲಸಿಗರು ಭಾರತೀಯರು ಎನ್ನುವ ಅಂಶವೂ ಗಮನಾರ್ಹ. ಯುಎಇನಲ್ಲಿ ಸುಮಾರು 2.6 ಮಿಲಿಯನ್ ನಷ್ಟು ಭಾರತೀಯರಿದ್ದು, ಇದು ಯುಎಇನ ಜನಸಂಖ್ಯೆಯ 30 ಪ್ರತಿಶತ! ಶಿಕ್ಷಣ, ತಂತ್ರಜ್ಞಾನ ಮತ್ತು ಇನ್ನಿತರ ವಲಯಗಳಲ್ಲಿ ಸವಾಲುಗಳನ್ನು ಎದುರಿಸಿ ಯಶಸ್ವಿಯಾದ ಭಾರತದ ಅನುಭವವನ್ನು ಬಳಸಿಕೊಳ್ಳಲು ಯುಎಇ ಎದುರುನೋಡುತ್ತಿದ್ದರೆ, ಮಧ್ಯಪ್ರಾಚ್ಯದಲ್ಲಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಂಡು ತೈಲ ಇನ್ನಿತರ ಶಕ್ತಿಮೂಲಗಳ ಕೊರತೆ ನೀಗಿಸಿಕೊಳ್ಳುವತ್ತ ಗಮನಹರಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಾರತ ತೈಲ ವ್ಯಾಪಾರಕ್ಕೆ ಸೀಮಿತವಾಗದೆ ಪ್ರಾದೇಶಿಕ ಸ್ಥಿರತೆ ಮತ್ತು ಚೀನಾ ಪ್ರಭಾವಕ್ಕೆ ಕಡಿವಾಣ ಹಾಕುವತ್ತಲೂ ಕಾರ್ಯಪ್ರವೃತ್ತವಾಗಲಿದೆ.  ಅಬು ದಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಬಾರಿಯ ಭಾರತ ಭೇಟಿ, ಯುಎಇ ಮತ್ತು ಭಾರತಗಳೆರ ಪರಸ್ಪರ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ, ಮಧ್ಯಪ್ರಾಚ್ಯ ಕುರಿತಾದ ಭಾರತದ ವಿದೇಶಾಂಗ ನೀತಿಯ ಹೆಬ್ಬಾಗಿಲಾಗಿ ಪರಿಣಮಿಸಲಿದೆ.


(This article was published in Hosa Digantha Newsapaper on 24 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಚೀನಾ-ಪಾಕ್ ಸರ್ವಋತು ಸ್ನೇಹದಲ್ಲೊಂದು ಅಪಸ್ವರ!

" ಪಾಕಿಸ್ತಾನ-ಚೀನಾಗಳ ಸ್ನೇಹ ಪರ್ವತಗಳಿಗಿಂತ ಎತ್ತರ, ಸಮುದ್ರಗಳಿಗಿಂತ ಆಳ, ಜೇನಿಗಿಂತ ಸಿಹಿ ಮತ್ತು ಉಕ್ಕಿಗಿಂತಲೂ ಶಕ್ತಿಶಾಲಿ" ಈ ಮಾತುಗಳನ್ನು ಪಾಕಿಸ್ತಾನದ ನಾಯಕರು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ.  ಕಮ್ಯುನಿಸ್ಟ್ ಚೀನಾ ಕೂಡ ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರದ ಸ್ಥಾನ ನೀಡಿ ಪೋಷಿಸಿಕೊಂಡು ಬಂದಿದೆ. ಇಂಥದ್ದೊಂದು ಸ್ನೇಹಕ್ಕೆ ಈ ಎರಡೂ ರಾಷ್ಟ್ರಗಳ ಭಾರತ ದ್ವೇಷೀ ಮನೋಭಾವವೂ ಒಂದಷ್ಟು ಕೊಡುಗೆ ನೀಡಿದೆ. ಭಾರತ ಜಾಗತಿಕ ರಾಜಕೀಯದಲ್ಲಿಡುತ್ತಿರುವ ಆತ್ಮವಿಶ್ವಾಸದ ಹೆಜ್ಜೆಗಳಿಂದಾಗಿ ಪಾಕಿಸ್ತಾನ ಮೈಪರಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚೀನಾ ಆಕ್ರಮಣಶೀಲತೆಗೆ ತಡೆಯಾಗಿ ನಿಲ್ಲುವ ಪ್ರಭಾವಿ ಶಕ್ತಿಯೊಂದು ತನ್ನ ಮಗ್ಗುಲಲ್ಲೇ ಬೆಳೆಯುತ್ತಿರುವುದು ಚೀನಿ ಕಮ್ಯುನಿಸ್ಟ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಚೀನಾ ತನ್ನ ಕೀಳರಿಮೆಯನ್ನು ಕಡಿಮೆ ಮಾಡಿಕೊಳ್ಳಲು ಭಾರತದ ವಿರುದ್ಧ ಪಾಕಿಸ್ತಾನವನ್ನು ಛೂ ಬಿಡುತ್ತಿರುವುದು ಇವತ್ತಿಗೆ ಗುಟ್ಟಾಗಿ ಉಳಿದಿಲ್ಲ. ಪಾಕಿಸ್ತಾನ ಭಾರತದ ವಿರುದ್ಧ ಮಾಡಿದ ಎಲ್ಲಾ ಮಸಲತ್ತುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚೀನಾ ಕೈವಾಡ ಇದ್ದೇ ಇತ್ತು. ಕಾರಣಗಳೇನೆ ಇರಲಿ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ವಿಚಿತ್ರ ಎನಿಸಿದರೂ ಸರ್ವಋತು ಸ್ನೇಹ ಬೆಳೆದಿರುವುದಂತೂ ನಿಜ!

ಈ ಎರಡು ರಾಷ್ಟ್ರಗಳ ಸ್ನೇಹದ ಕುರುಹಾಗಿ ಚೀನಾ ನೇತೃತ್ವದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ'ಯೊಂದು ( China­Pakistan Economic Corridor-CPEC) ಜಾರಿಯಲ್ಲಿದೆ. ಈ ಯೋಜನೆಯೊಂದಿಗೆ ಪಾಕಿಸ್ತಾನ ಮತ್ತು ಚೀನಾಗಳ ತಮ್ಮ ಸರ್ವಋತು ಗೆಳೆತನದ ಇತಿಮಿತಿಗಳು ಎರಡೂ ದೇಶಗಳಿಗೆ ಅರಿವಾಗತೊಡಗಿದೆ. ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ರಾಜತಾಂತ್ರಿಕ ಮತ್ತು ಮಿಲಿಟರಿ ವಲಯದಲ್ಲಿ ಯಶಸ್ಸು ಕಂಡಿತ್ತಾದರೂ, ಸಾರ್ವಜನಿಕ ವಲಯದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಪಾಕಿಸ್ತಾನದೊಳಗಡೆ ಅನೇಕ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. ಪಾಕಿಸ್ತಾನದಲ್ಲಿ ಚೀನಾಗಿಂತ ಭಿನ್ನ ರಾಜಕೀಯ ವ್ಯವಸ್ಥೆ, ವಿಭಿನ್ನ ಸಾಂಸ್ಕೃತಿಕ ಅಸ್ಮಿತೆಗಳಿರುವುದು ಮತ್ತು ಮುಖ್ಯವಾಗಿ ಈ ಎರಡು ರಾಷ್ಟ್ರಗಳ ಸಂಬಂಧಗಳ ಮೇಲೆ ಇದು ಬೀರುವ ಪರಿಣಾಮಗಳು ಚೀನಾಗೆ ಅರಿವಾಗಿದ್ದು ಈ ಹೊಸ ಯೋಜನೆ ಕಾರ್ಯರೂಪಕ್ಕಿಳಿದಾಗಲೇ! ಎರಡು ದೇಶಗಳ ರಾಜತಂತ್ರಜ್ಞರು ಮತ್ತು ಮಿಲಿಟರಿಗಳ ನಡುವಿನ ಬಾಂಧವ್ಯ ಮಾತ್ರವಲ್ಲದೇ ಇಂಥಾ ಯೋಜನೆಗಳ ಅನುಷ್ಠಾನಗಳಿಗೆ ಆ ದೇಶಗಳ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯಗಳ ಪರಿಚಯವೂ ಅತ್ಯವಶ್ಯಕ. ಈಗಾಗಲೇ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್  ಗೆ ಪಾಕಿಸ್ತಾನದೊಳಗಡೆ ಚೀನಾಗೆ ಭದ್ರತೆಯ ಕುರಿತಾಗಿ ಅನುಮಾನಗಳಿವೆ. ಇದರ ಮೇಲೆ ಪಾಕಿಸ್ತಾನದ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಈ ಮಲ್ಟಿ-ಬಿಲಿಯನ್ ಯೋಜನೆಯನ್ನು ನಿರ್ವಹಿಸಿದ ರೀತಿಯಲ್ಲಿ ಚೀನಾಗೆ ಅಸಮಧಾನವಿರುವುದು ಈ ಎರಡು ದೇಶಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿದೆ. ಈ ಬಿನ್ನಾಭಿಪ್ರಾಯದಿಂದ ಭಾರತವೂ ಸೇರಿದಂತೆ ವಿಶ್ವದ ಹಲವು ಶಕ್ತಿಗಳಿಗೆ ಪರೋಕ್ಷವಾಗಿ ಲಾಭವೇ ಆಗಲಿದೆ ಎನ್ನುವುದು ವಿಶೇಷ!

ಚೀನಾದಲ್ಲಿ ಏಕ ಪಕ್ಷ ವ್ಯವಸ್ಥೆಯಿದ್ದು, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಕೇಂದ್ರೀಕೃತವಾಗಿದೆ. ಚೀನಾದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೆಳಹಂತದ ಪ್ರಾಂತೀಯ ಸರಕಾರಗಳಿಗೆ, ಕೇಂದ್ರದ ನಿರ್ಧಾರಗಳನ್ನು ತಮ್ಮ ವಿವೇಚನೆಗೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ನಿರ್ವಹಿಸುವ ಅಧಿಕಾರವಿದ್ದರೂ, ರಾಷ್ಟ್ರೀಯ ಹಿತಾಸಕ್ತಿ ಅಥವಾ ವಿದೇಶಾಂಗ ನೀತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರಗಳು ಅಂತಿಮವಾಗಿದ್ದು, ಚೀನಾದ ಕೇಂದ್ರ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಪ್ರಾಂತೀಯ ಸರಕಾರಗಳ ಸಂಕೀರ್ಣ ವ್ಯವಸ್ಥೆಯಿಂದ ಮಾಧ್ಯಮ ಕ್ಷೇತ್ರದವರೆಗೆ ಚೀನಾದ ಎಲ್ಲಾ ಸಂಸ್ಥೆಗಳು ಕೇಂದ್ರ ಸರಕಾರದ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತವೆ ಮತ್ತು ಚಾಚೂ ತಪ್ಪದೆ ಪಾಲಿಸುತ್ತವೆ. Belt and Road Initiative (BRI)ನಂಥಾ ಹಿಂದಿನ ಕೆಲ ಯೋಜನೆಗಳಲ್ಲಿ ಚೀನಾದ ತಳಹಂತದ ರಾಜಕೀಯ ವ್ಯವಸ್ಥೆ ಮತ್ತು ಮಾಧ್ಯಮಗಳು ಕಾರ್ಯನಿರ್ವಹಿಸಿದ ರೀತಿ, ಚೀನಾದ ಕೇಂದ್ರೀಕೃತ ನಿರ್ಧಾರಗಳ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಒಟ್ಟಿನಲ್ಲಿ ಚೀನಾದ ಕೇಂದ್ರ ಕಮ್ಯುನಿಸ್ಟ್ ಪಕ್ಷದ ನಿರ್ಧಾರಗಳು ಚೀನಾದ ಮೂಲೆ ಮೂಲೆಯಲ್ಲೂ ಪ್ರಶ್ನಾತೀತವಾಗಿ ಪಾಲಿಸಲ್ಪಡುತ್ತವೆ.

Image may contain: 2 peopleಚೀನಾ ವ್ಯವಸ್ಥೆಗೆ ತದ್ವಿರುದ್ಧವಾಗಿ, ಪಾಕಿಸ್ತಾನ ಕಳೆದ ಹತ್ತು ವರ್ಷಗಳ ಪ್ರಜಾಪ್ರಭುತ್ವ, ವಿಕೇಂದ್ರೀಕರಣಕ್ಕೆ ಪ್ರಾಮುಖ್ಯತೆ ನೀಡಿದೆ. ಪಾಕಿಸ್ತಾನದ ಸಂವಿಧಾನಕ್ಕೆ ಹದಿನೆಂಟನೇ ತಿದ್ದುಪಡಿಯಾದ ಮೇಲಂತೂ ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆ ಇನ್ನಷ್ಟು ಗಟ್ಟಿಯಾಗಿದೆ. ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳೆರಡೂ ಜನರಿಂದಲೇ ಆಯ್ಕೆಯಾಗಿದ್ದು ಕೇಂದ್ರ ಏಕಪಕ್ಷೀಯವಾಗಿ ವರ್ತಿಸುವಂತಿಲ್ಲ. ಪ್ರಾಂತೀಯ ಸರಕಾರಗಳಿಗೆ ಸಂವಿಧಾನಬದ್ಧವಾದ ಅಧಿಕಾರಗಳಿರುವುದರ ಜೊತೆ, ಆಳ್ವಿಕೆಗೆ ಒಳಪಡುವ ವಿಷಯಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಇದಷ್ಟೇ ಅಲ್ಲದೆ, ಭಿನ್ನಾಭಿಪ್ರಾಯಗಳು ಉದ್ಭವವಾದಾಗ ಕೇಂದ್ರ ಸರಕಾರದ ನೀತಿಗಳನ್ನು ಸಾರಾಸಗಟಾಗಿ ವಿರೋಧಿಸುವ ಅಧಿಕಾರ ಪ್ರಾಂತೀಯ ಸರಕಾರಗಳಿಗಿದೆ. ಪಾಕಿಸ್ತಾನದ ಪ್ರಾಂತ್ಯಗಳ ನಡುವೆ ಇರುವ ಜನಾಂಗೀಯ ವ್ಯತ್ಯಾಸಗಳು ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇನ್ನು ಪಾಕಿಸ್ತಾನದ ಮಾಧ್ಯಮಗಳು, ಚೀನಾ ಮಾಧ್ಯಮ ವ್ಯವಸ್ಥೆಯಂತಿಲ್ಲದೆ, ತಮ್ಮ ಸರಕಾರವನ್ನು ಮತ್ತದರ ನಿರ್ಧಾರಗಳನ್ನು ಖಂಡಿಸುವಷ್ಟು ಮುಕ್ತವಾಗಿವೆ. ಮುಖ್ಯವಾದ ಮತ್ತು ಅತ್ಯಂತ ಸೂಕ್ಷ್ಮ ವಿಚಾರಗಳಲ್ಲೂ ಪಾಕಿಸ್ತಾನ ಕೇಂದ್ರ ಸರಕಾರದ ವಿರುದ್ಧ ಅಸಮ್ಮತಿಯ ಧ್ವನಿಗಳು ಕೇಳಿಬರುವುದರಿಂದ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಗೂ ಈಗಾಗಲೇ ಅಪಸ್ವರಗಳೆದ್ದಿವೆ. ಇತ್ತೀಚೆಗಂತೂ ಪಾಕಿಸ್ತಾನದ ಪ್ರಾಂತ್ಯಗಳಲ್ಲಿ ಪ್ರಾದೇಶಿಕತೆಯ ಕೂಗು ಹೆಚ್ಚಾಗುತ್ತಿರುವುದು, ಪಾಕಿಸ್ತಾನದ ಕೇಂದ್ರ ಸರಕಾರಕ್ಕೆ ಪರ್ಯಾಯ ಶಕ್ತಿ ಕೇಂದ್ರಗಳು ಪ್ರಾಂತ್ಯಗಳಲ್ಲೂ ಹುಟ್ಟಿಕೊಳ್ಳುತ್ತಿವೆ. ಈ ಎಲ್ಲಾ ಗಡಿಬಿಡಿಗಳ ಮಧ್ಯೆ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ' ಚೀನಾಗೆ ಅತ್ತ ನುಂಗಲೂ ಆಗದೆ, ಇತ್ತ ಉಗುಳಲೂ ಮನಸ್ಸಿಲ್ಲದ ಬಿಸಿತುಪ್ಪದಂತಾಗಿದೆ.

ಪಾಕಿಸ್ತಾನದ ರಾಜಕಾರಣಿಗಳು ಈ ವಿಷಯವಾಗಿ ವಿಭಿನ್ನ ನಿಲುವುಗಳನ್ನು ತಳೆದಿದ್ದು, ಅವರದ್ದೇ ಆದ ಲೆಕ್ಕಾಚಾರದೊಂದಿಗೆ ಚೀನಾದ ಹೊಸ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮಾಧ್ಯಮಗಳು, ಈ ಯೋಜನೆಯ ಅಪಾರದರ್ಶಕತೆಯ ಕುರಿತು ಅಸಮಧಾನ ವ್ಯಕ್ತಪಡಿಸಿ, ಆರ್ಥಿಕ ಮತ್ತು ಪರಿಸರದ ಮೇಲಿನ ಪ್ರಭಾವಗಳ ಬಗ್ಗೆ ಪ್ರಶ್ನೆ ಮಾಡುತ್ತಿವೆ. 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್', ಪಾಕಿಸ್ತಾನಕ್ಕೆ ಇನ್ನೊಂದು ' ಈಸ್ಟ್ ಇಂಡಿಯಾ ಕಂಪೆನಿ' ಯಾಗಿ, ಪಾಕಿಸ್ತಾನದ ಸಾರ್ವಭೌಮತ್ವ ಕಸಿದುಕೊಂಡು ಚೀನಾದ ಪರೋಕ್ಷ ವಸಾಹತುವನ್ನಾಗಿ ಪರಿವರ್ತಿಸಲಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಯೋಜನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಇತರ ಪ್ರಾಂತ್ಯಗಳಿಗೆ ಮೋಸ ಮಾಡಲಿದೆ ಎಂಬ ಪ್ರಾದೇಶಿಕತೆಯ ಧ್ವನಿಯೂ ಚೀನಾ ಯೋಜನೆಗೆ ದೊಡ್ಡ ತಲೆನೋವು. ಪ್ರಜಾಪ್ರಭುತ್ವ ಮತ್ತು ಸಂಯುಕ್ತ ವ್ಯವಸ್ಥೆಯ ಸಂಕೀರ್ಣತೆಗಳು ಚೀನಾದ ಏಕಿಕೃತ ವ್ಯವಸ್ಥೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಸತ್ಯ ಚೀನಾದ ಯೋಜನೆಯನ್ನು ದಿಕ್ಕೆಡಿಸಿದೆ. ಚೀನಾ ನಾಯಕರು ಪಾಕಿಸ್ತಾನಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನಗಳು ಜಾರಿಯಲ್ಲಿದ್ದರೂ, ಫಲಿತಾಂಶ ಅಷ್ಟಕಷ್ಟೇ ಎನ್ನುವಂತಿದೆ.

ರಾಜತಾಂತ್ರಿಕತೆಯ ವಿಷಯಕ್ಕೆ ಬಂದಾಗ ಚೀನಾ ಎಂಥಾ ಬಿಕ್ಕಟ್ಟಿನ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿರುವುದು ದಶಕಗಳಿಂದ ನಡೆದುಬಂದ ರೀತಿ.  ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಪಾಕಿಸ್ತಾನದ ವಿಚಾರದಲ್ಲಿ ಚೀನಾ ತಾಳ್ಮೆ ಕಳೆದುಕೊಳ್ಳುತ್ತಿದೆ ಮತ್ತು ಚೀನಾ ತನ್ನ ಹತಾಶೆಯನ್ನು ಗುಟ್ಟಾಗಿಡುವ ಪ್ರಯತ್ನವನ್ನೂ ಮಾಡಿಲ್ಲ. ಪಾಕಿಸ್ತಾನದಲ್ಲಿ ತಮ್ಮ ಯೋಜನೆಯ ವಿರುದ್ಧ ಧ್ವನಿ ಎತ್ತಿದವರನ್ನು ' ಪಾಕಿಸ್ತಾನದ ಶತ್ರುಗಳು', 'ಅಪಪ್ರಚಾರಕರು' ಎಂದು ಜರೆಯುವ ಮೂಲಕ ವಿರೋಧಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಚೀನಾ ಕಮ್ಯುನಿಸ್ಟ್ ವ್ಯವಸ್ಥೆ! ಇವಿಷ್ಟು ಸಮಸ್ಯೆಗಳ ಮಧ್ಯೆ ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಹುಚ್ಚು ಆಲೋಚನೆಗಳು ತಮ್ಮ ಯೋಜನೆಗೆ ಕೊಡಲಿ ಪೆಟ್ಟಾಗಬಹುದು ಎಂಬ ಅಭದ್ರತೆಯ ಭಾವನೆ ಚೀನೀಯರಲ್ಲಿದೆ. ಪಾಕಿಸ್ಥಾನದ ರಾಜಕೀಯ ವ್ಯವಸ್ಥೆಯ ಅಸ್ಥಿರತೆ ಮತ್ತು ಯಾವ ಕ್ಷಣದಲ್ಲಾದರೂ ಬದಲಾಗಬಲ್ಲ ವಿಚಿತ್ರ ಲಕ್ಷಣ, ಇನ್ನಿತರ ಹತ್ತು ಹಲವು ಅವ್ಯವಸ್ಥೆಗಳ ನೆರಳಲ್ಲಿವೆ ಚೀನಾ ಪ್ರಯತ್ನಗಳು. ಈ ಎರಡು ರಾಷ್ಟ್ರಗಳ ಸ್ನೇಹದ ಉದ್ದೇಶ ವಿಶ್ವ ಶಾಂತಿಗೆ ಧಕ್ಕೆ ತರುವುದೇ ಆಗಿರುವುದರಿಂದ, 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಕಾರಣಕ್ಕಾಗಿ ಈ ದುಷ್ಟ ಕೂಟದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿ, ಈ ದೇಶಗಳು ದೂರವಾದರೂ ಸಂಕಟಪಡುವವರ್ಯಾರೂ ಇಲ್ಲ ಎನ್ನುವುದು ಖಂಡಿತ.


(This article was published in Vishwavani Newsapaper on 19 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru