ಗುರುವಾರ, ಜನವರಿ 28, 2016

ಗಣರಾಜ್ಯೋತ್ಸವ ಮತ್ತು ಹೊಲಾಂಡೆ ಭಾರತ ಭೇಟಿ

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂಥ ಸಂದರ್ಭಗಳನ್ನು ರಾಷ್ಟ್ರೀಯ ಆಚರಣೆಗಳಾಗಿ ಮಾತ್ರ ಸೀಮಿತಗೊಳಿಸದೆ, ಅವುಗಳನ್ನು ವಿದೇಶಾಂಗ ನೀತಿಯ ದಾಳಗಳಾಗಿ ಬಳಸಿಕೊಂಡು ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವಂಥ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
- ಕೀರ್ತಿರಾಜ್
ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳ ಬಗೆಗೂ ಗಂಭೀರ ಪ್ರಯತ್ನಗಳ ಕೊರತೆ ಸ್ಪಷ್ಟವಾಗಿ ಕಾಣಸಿಗುತ್ತದೆ. ಶೀತಲ ಸಮರದ ಸೋವಿಯೆತ್- ಅಮೆರಿಕಗಳ ಗೊಂದಲದ ಮಧ್ಯೆ ಯುರೋಪ್ನ ರಾಜಕೀಯ ಪ್ರಾಮುಖ್ಯತೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು ಸಹಜವೇ. ಆದರೆ ಈ ಬಾರಿ ನರೇಂದ್ರ ಮೋದಿ ಯವರು ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಆಹ್ವಾನಿಸಿ ಫ್ರಾನ್ಸ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಭಾಷ್ಯ ಬರೆಯುವ ಪ್ರಯತ್ನ ಮಾಡಿದ್ದಾರೆ.
ಭಾರತ ಯುರೋಪಿನ ಫ್ರಾನ್ಸ್ ಅಧ್ಯಕ್ಷರನ್ನೇ ಆಹ್ವಾನಿಸಲು ಕಾರಣಗಳೂ ಇಲ್ಲದಿಲ್ಲ. ಐತಿಹಾಸಿಕ ದೃಷ್ಟಿಯಿಂದಲೂ ಫ್ರಾನ್ಸ್ ಭಾರತದ ಪಾಲಿಗೆ ಮಿಕ್ಕ ಐರೋಪ್ಯ ಭಾಗಗಳಿಗಿಂತ ಹೆಚ್ಚು ಆಪ್ತ ಎಂದೆನಿಸುತ್ತದೆ. ಶೀತಲ ಸಮರದ ಉತ್ತುಂಗದಲ್ಲಿ ನ್ಯಾಟೋ ಜೊತೆಗಿನ ಭಾರತದ ಸಂಬಂಧ ಕದಡಿದ್ದರೂ ಫ್ರಾನ್ಸ್ ಜೊತೆಗಿನ ಬಾಂಧವ್ಯ ಉತ್ತಮವಾಗಿ ಮುಂದುವರೆದಿತ್ತು. 1965ರ ಭಾರತ-ಪಾಕ್ ಯುದ್ಧದ ನಂತರ ವಿಸಲಾಗಿದ್ದ ಶಸ್ತ್ರಾಸ್ತ್ರಗಳ ಮಾರಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸುವ ಬಗೆಗೆ ಮೊದಲ ಬಾರಿ ಯೋಚಿಸಿದ್ದು ಇದೇ ಫ್ರಾನ್ಸ್. 1971ರ ಯುದ್ಧದಲ್ಲೂ ಭಾರತದ ನಿರ್ಧಾರಗಳನ್ನು ನ್ಯಾಯ ಸಮ್ಮತ ಎಂದು ಒಪ್ಪಿಕೊಂಡ ಏಕೈಕ ಯುರೋಪಿಯನ್ ರಾಷ್ಟ್ರ ಫ್ರಾನ್ಸ್. ಇವೆಲ್ಲವುಗಳಿಗಿಂತ ಮುಖ್ಯವಾಗಿ ಅಟಲ್ ಬಿಹಾರಿ ವಾಜಪೇಯಿಯವರ ಅಕಾರ ಸಮಯದಲ್ಲಿ ಭಾರತ ಅಕತವಾಗಿ ತನ್ನನ್ನು ತಾನು ಪರಮಾಣು ಶಕ್ತಿಯೆಂದು ವಿಶ್ವಕ್ಕೆ ಸಾರಿದಾಗ, ಅಮೆರಿಕಾ ನೇತೃತ್ವದಲ್ಲಿ ಬಹುತೇಕ ರಾಷ್ಟ್ರಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪಾಲಿಗೆ ಆಪ್ತ ಮಿತ್ರನಾಗಿ, ವಿಶ್ವದ ದೊಡ್ಡಣ್ಣ ಅಮೆರಿಕದ ನಿರ್ಧಾರವನ್ನೇ ಪ್ರಶ್ನಿಸುವ ದಿಟ್ಟತನ ತೋರಿದ್ದು ಫ್ರೆಂಚರು ಮಾತ್ರ! ಹೀಗೆ ಹತ್ತು ಹಲವು ವಿಧಗಳಲ್ಲಿ ಭಾರತದ ದೃಷ್ಟಿಯಲ್ಲಿ ಫ್ರಾನ್ಸ್ ಯುರೋಪಿನ ಇತರ ರಾಷ್ಟಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.
1998ರ ನಂತರ ಭಾರತ- ಫ್ರಾನ್ಸ್ ಸಂಬಂಧಗಳು ಜಂಟಿ ಸೇನಾ ಸಮರಾಭ್ಯಾಸಗಳ ಮೂಲಕ ಇನ್ನಷ್ಟು ದೃಢೀಕರೀಸಲ್ಪಟ್ಟವು. ನೈರುತ್ಯ ಹಿಂದೂ ಮಹಾಸಾಗರದಲ್ಲಿ ಸಾಕಷ್ಟು ಆರ್ಥಿಕ ಮತ್ತು ಸಾಮರಿಕ ಆಸಕ್ತಿಗಳಲ್ಲಿ ಭಾರತ ಮತ್ತು ಫ್ರಾನ್ಸ್ ಪಾಲುದಾರರು. ಹಿಂದೂ ಮಹಾಸಾಗರದಲ್ಲಿ ಭಾರತ ಮತ್ತು ಫ್ರೆಂಚ್ ನೌಕಾದಳಗಳು ನಡೆಸುವ ಜಂಟಿ ಸಮರಾಭ್ಯಾಸ, ಮಾನವೀಯ ನೆಲೆಯಲ್ಲಿ ಪ್ರಾದೇಶಿಕ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿಯೂ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲ್ಪಡುತ್ತದೆ. ಭಾರತ ಪ್ರಶ್ನಾತೀತ ಪ್ರಬಲ ನೌಕಾಶಕ್ತಿಯಾಗಿ ಮೂಡಿಬಂದಾಗ ಹಿಂದೂ ಮಹಾಸಾಗರದ ಸ್ಥಿರತೆ ಸಾಧ್ಯ ಎಂಬ ಫ್ರಾನ್ಸ್‌ನ ಹೇಳಿಕೆಯಲ್ಲಿ ನಂಬಲರ್ಹ ಪ್ರಾಮಾಣಿಕತೆಯಿದೆ.
ಈ ಬಾರಿಯ ಹೊಲಾಂಡೆ ಭಾರತ ಭೇಟಿ ಫ್ರಾನ್ಸ್ ಜೊತೆಗಿನ ಸಂಬಂಧಗಳಲ್ಲಿ ಇನ್ನಷ್ಟು ಹೊಸ ಆಯಾಮಗಳನ್ನು ತೆರೆಯಲಿದೆ. ಭಯೋತ್ಪಾದನೆಯ ನಿಗ್ರಹದಲ್ಲೂ ಭಾರತ ಹಾಗೂ ಫ್ರಾನ್ಸ್ ಒಂದುಗೂಡಬೇಕಾದ ಅನಿವಾರ್ಯತೆ ಯಿದೆ. ಇತ್ತೀಚೆಗೆ ನಡೆದ ಪ್ಯಾರಿಸ್ ಮೇಲಿನ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ ಇದಕ್ಕೆ ಸ್ಪಷ್ಟ ನಿದರ್ಶನ. ಭಯೋತ್ಪಾದನೆ ವಿರುದ್ಧದ ಈ ಎರಡು ಶಕ್ತಿಗಳ ಒಗ್ಗೂಡುವಿಕೆ ಭಯೋತ್ಪಾದಕರ ಎದೆಯಲ್ಲಿ ಭೀತಿ ಹುಟ್ಟಿಸಿದೆ. ಇತ್ತೀಚೆಗೆ ಹೊಲಾಂಡೆ ಭಾರತ ಭೇಟಿ ತಪ್ಪಿಸಲು ಇಸ್ಲಾಮಿಕ್ ಸ್ಟೇಟ್ ಬೆದರಿಕೆ ಪತ್ರ ಸಹಿತ ಹಲವಾರು ಕಸರತ್ತುಗಳನ್ನು ಮಾಡಿರುವುದನ್ನು ನೋಡಿದರೆ ಭಯೋತ್ಪಾದನಾ ನಿಗ್ರಹ ದೃಷ್ಟಿಯಿಂದ ಈ ಭೇಟಿ ಅದೆಷ್ಟು ಪ್ರಮುಖ ಎಂದು ತಿಳಿಯುತ್ತದೆ.
2016ರ ಗಣರಾಜ್ಯೋತ್ಸವ ಮತ್ತು ರಾಜ್‌ಪಥ್‌ನಲ್ಲಿ ನಡೆಯಲಿರುವ ಪಥ ಸಂಚಲನ ಭಾರತದ ವಿದೇಶಾಂಗ ನೀತಿಯಲ್ಲಿನ ಸಂಚಲನಕ್ಕೆ ಸಾಕ್ಷಿಯಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಫ್ರಾನ್ಸ್ ಸೈನ್ಯದ ತುಕಡಿಯೊಂದು ರಾಜ್‌ಪಥ್‌ನಲ್ಲಿ ಪಥಸಂಚಲನ ನಡೆಸಲಿದೆ. ಇದು ಭಾರತ ಫ್ರಾನ್ಸ್ ಹಾಗೂ ಫ್ರೆಂಚ್ ಸೈನ್ಯಕ್ಕೆ ನೀಡಿದ ಅತ್ಯುನ್ನತ ಗೌರವವೇ ಸರಿ. 2009 ಜುಲೈ 14ರಂದು ಫ್ರಾನ್ಸ್ ಕೂಡ ಭಾರತೀಯ ಸೈನ್ಯಕ್ಕೆ ಇಂಥದ್ದೇ ಒಂದು ಅವಕಾಶವನ್ನು ಕೊಟ್ಟಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ಫ್ರೆಂಚ್ ಸರಕಾರ ನಮ್ಮ ಸೈನ್ಯಕ್ಕೆ ನೀಡಿದ ಆ ಗೌರವಕ್ಕೆ ಪ್ರತಿಯಾಗಿ, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಮೋದಿಯವರು ಫ್ರಾನ್ಸ್ ಜೊತೆಗಿನ ಸ್ನೇಹ-ಸಂಬಂಧಗಳನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತದ ಈ ನಡೆ ಹಾಗೂ ಫ್ರಾನ್ಸ್‌ಗೆ ನೀಡಿದ ಇಂಥ ವಿಶೇಷ ಆತಿಥ್ಯ ಇತರ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳಿಗೆ ಹಾನಿಯುಂಟು ಮಾಡಬಹುದು ಎಂಬ ಸಣ್ಣ ಪುಟ್ಟ ಟೀಕೆಗಳಿಗೂ ದಾರಿ ಮಾಡಿಕೊಟ್ಟಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪ್ರಯತ್ನ ಕೈಬಿಟ್ಟು, ನೆಹರೂ ಕಾಲದ ಆಲಿಪ್ತ ನೀತಿಯಿಂದ ಭಾರತ ಸ್ಪಷ್ಟವಾಗಿ ಹೊರಬಂದು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ವಿನೂತನ ಅವಕಾಶಗಳಿಗೆ ಮತ್ತು ವಿಶ್ವ ರಾಜಕಾರಣದ ಹೊಸ ಬದಲಾವಣೆಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಫ್ರಾನ್ಸ್ ನಿರ್ಮಿತ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬಗೆಗೂ ಮಹತ್ವದ ನಿರ್ಧಾರಗಳಿಗೆ ಈ ಬಾರಿಯ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ. ‘ಮೇಕ್ ಇನ್ ಇಂಡಿಯಾ’ ಹಾದಿಯಲ್ಲಿರುವ ಭಾರತ ರಕ್ಷಣಾ ವಲಯದ ಆಮದುಗಳನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ರಾಫೆಲ್ ಯುದ್ಧ ವಿಮಾನಗಳ ಖರೀದಿ ಒಂದು ಮೈಲಿಗಲ್ಲಾಗಲಿದೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಗಳಂಥ ಸಂದರ್ಭಗಳನ್ನು ರಾಷ್ಟ್ರೀಯ ಆಚರಣೆ ಗಳಾಗಿ ಮಾತ್ರ ಸೀಮಿತಗೊಳಿಸದೆ, ಅವುಗಳನ್ನು ವಿದೇಶಾಂಗ ನೀತಿಯ ದಾಳಗಳಾಗಿ ಬಳಸಿಕೊಂಡು ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವಂಥ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬಾರಿಯ ಭಾರತದ ಗಣರಾಜ್ಯೋತ್ಸವ ಮತ್ತು ಹೊಲಾಂಡೆ ಭಾರತ ಭೇಟಿ ವಿಶ್ವದ ಎರಡು ಪ್ರಮುಖ ಗಣರಾಜ್ಯಗಳಾದ ಫ್ರಾನ್ಸ್ ಮತ್ತು ಭಾರತ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿ, ಭಯೋತ್ಪಾದನಾ ನಿಗ್ರಹಕ್ಕೆ ಹಾಗೂ ವಿಶ್ವ ಸೋದರತ್ವಕ್ಕೆ ಇನ್ನಷ್ಟು ಕೊಡುಗೆ ಸಲ್ಲಿಸಲಿ.




  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 26 January 2016)

ಶುಕ್ರವಾರ, ಜನವರಿ 1, 2016

ಭಾರತದ ವಿದೇಶಾಂಗ ನೀತಿ: ಯಶಸ್ವೀ ವರ್ಷ

ವಿಶ್ವ ರಾಜಕೀಯದ ಚದುರಂಗದಾಟದಲ್ಲಿ ಭಾರತದ ಈ ವರ್ಷದಲ್ಲಿ ಭಾರತ ಕೈಗೊಂಡ ನಿರ್ಧಾರಗಳು ಭಾರತದ ಭವಿಷ್ಯದ ಅಸ್ಮಿತೆ ಹಾಗೂ ಅಸ್ತಿತ್ವಗಳೆರಡರಲ್ಲೂ ಮಹತ್ವದ ಪರಿಣಾಮ ಬೀರಲಿವೆ.
- ಕೀರ್ತಿರಾಜ್


2015ರಲ್ಲಿ ಜಾಗತಿಕ ರಾಜಕೀಯ ಹಲವಾರು ನಿರೀಕ್ಷಿತ ಹಾಗೂ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಯ್ತು. ಅಮೆರಿಕಾ, ರಷ್ಯಾ ಮತ್ತು ಯುರೋಪಿನ ಕೆಲವೊಂದು ರಾಷ್ಟ್ರಗಳಿಗೆ ತಮ್ಮ ಆಧುನಿಕ ಶಸ್ತ್ರಾಸ್ತ್ರಗಳ ಪರೀಕ್ಷೆಗೆ  ಇಸ್ಲಾಮಿಕ್ ಸ್ಟೇಟ್ ವೇದಿಕೆ ಕಲ್ಪಿಸುವುದರಿಂದ ಹಿಡಿದು ನಿರಾಶ್ರಿತರ ಸಮಸ್ಯೆಯವರೆಗೆ ಇಡೀ ಪ್ರಪಂಚವೇ ಗೊಂದಲದ ಗೂಡಾಗಿ ಮಾರ್ಪಾಡಾಯ್ತು. ಇದೇ ಗೊಂದಲದ ವರ್ಷದಲ್ಲಿ ಭಾರತದ ವಿದೇಶಾಂಗ ನೀತಿಯಲ್ಲೂ ಅನೇಕ ಮಹತ್ವದ ಬದಲಾವಣೆಗಳಾಗಿವೆ. ಕಳೆದ ಒಂದು ವರ್ಷದ ಭಾರತದ ವಿದೇಶಾಂಗ ನೀತಿ ಹಲವಾರು ಹೊಸ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿದೆ. ನೆರೆಹೊರೆಯ ರಾಷ್ಟ್ರಗಳಿಂದ, ವಿಶ್ವದ ಪ್ರಮುಖ ಶಕ್ತಿಗಳ ಜೊತೆಗಿನ ಸಂಬಂಧದಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ಭಾರತದ ಯಶಸ್ಸು ಹಿಂದಿನ ಕೆಲವು ದಶಕಗಳಿಗಿಂತ ವಿಭಿನ್ನವಾಗಿದೆ. ಅಮೆರಿಕಾದಿಂದ ರಷ್ಯಾದವರೆಗೆ, ಯುರೋಪಿಯನ್ ಯುನಿಯನ್ ನಿಂದ ಆಸಿಯಾನ್ ವರೆಗೆ ಭಾರತದ ವಿಶ್ವಾಸ ವೃದ್ಧಿಸಿಕೊಳ್ಳುವ ಮೂಲಕ ಮೋದಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಈ ವರ್ಷಾಂತ್ಯದಲ್ಲಿ ಭಾರತದ ವಿದೇಶಾಂಗ ನೀತಿಯ ಮಹತ್ವದ ಯಶಸ್ಸು ವಿಶ್ವ ಶಕ್ತಿಗಳ ಮಧ್ಯೆ ಸಮತೋಲನ ಕಾಯ್ದುಕೊಂಡಿರುವುದು. ಮುಂಬರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತು ರಿಪಬ್ಲಿಕ್ ಪಕ್ಷಗಳೆರಡರಲ್ಲೂ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯ ಬಗ್ಗೆ ಸ್ಪಷ್ಟ ನಿಲುವುಗಳಿಲ್ಲ. ಅಮೆರಿಕಾದ ಈ ರಾಜಕೀಯ ನಾಯಕತ್ವದ ಗೊಂದಲವನ್ನು ರಷ್ಯಾ ಮತ್ತು ಚೈನಾ ತಮ್ಮ ಹಿತಾಸಕ್ತಿಗಳ ಪರವಾಗಿ ಉಪಯೋಗಿಸುತ್ತಿದ್ದಾರೆ. ಈ ಸಂದಿಗ್ಧ ಸಮಯದಲ್ಲಿ ಭಾರತ ಅಮೆರಿಕಾದೊಂದಿಗೆ ತನ್ನ ಸಂಬಂಧವನ್ನು ಇನ್ನೊಂದು ಮಟ್ಟಕ್ಕೆ ಸುಧಾರಿಸಿಕೊಂಡು, ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಚೈನಾಗಳ ಜೊತೆಗೂ ಅಷ್ಟೇ ತೀಕ್ಷ್ಣತೆಯ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಿದೆ.  ಅಮೆರಿಕಾ, ರಷ್ಯಾ ಹಾಗೂ ಚೈನಾ ಈ ಮೂರು ಬಲಾಡ್ಯ ದೇಶಗಳೊಡನೆ ವ್ಯವಹರಿಸುವಾಗ ಮೋದಿ ಈ ವರ್ಷ ತೋರಿದ ದಿಟ್ಟತನ ಗುಣಾತ್ಮಕ ಫಲಿತಾಂಶ ನೀಡುತ್ತಿದೆ. ಕಳೆದ ಕೆಲವು ದಶಕಗಳಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಮರೆಯಾಗಿದ್ದ ಆತ್ಮವಿಶ್ವಾಸ 2015ರಲ್ಲಿ ಮರುಕಳಿಸಿದ್ದು ಈ ವರ್ಷದ ವಿದೇಶಾಂಗ ನೀತಿಯ ಮುಖ್ಯ ಅಂಶಗಳಲ್ಲೊಂದು. 

ಏಷ್ಯಾದ ಸಣ್ಣ ಪುಟ್ಟ ರಾಷ್ಟ್ರಗಳ ರಾಜಕೀಯ ಆಯಾಮಗಳನ್ನು ಪ್ರಶ್ನಾತೀತವಾಗಿ ನಿಯಂತ್ರಿಸುತ್ತಿದ್ದ ಏಷ್ಯಾದ ದೈತ್ಯ ಚೈನಾ ಪಾಲಿಗೆ ಅದರ ಇತಿಮಿತಿಗಳನ್ನು ತಿಳಿಸಿಕೊಡುವ ಸಣ್ಣ ಪ್ರಯತ್ನ ಈ ವರ್ಷ ನಡೆದಿದೆ. ಭಾರತದ ಈ ವರ್ಷದ ರಾಜತಾಂತ್ರಿಕ ನಡೆಗಳು ಏಷ್ಯಾದ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಬದಲಿಸಿವೆ. ಏಷ್ಯಾದ ಸಮಾನಮನಸ್ಕ ರಾಷ್ಟ್ರಗಳಾದ ಜಪಾನ್, ವಿಯೆಟ್ನಾಮ್, ಆಸ್ಟ್ರೇಲಿಯಾ, ಸಿಂಗಾಪುರ್, ಫಿಲಿಪ್ಪೈನ್ಸ್ ಮತ್ತು ಮಲೇಷಿಯಾಗಳ ಜೊತೆಗೆ ಭಾರತದ ರಾಜತಾಂತ್ರಿಕ ಸಂಬಂಧಗಳು ಈ ವರ್ಷ ಇನ್ನಷ್ಟು ಗಟ್ಟಿಯಾಗಿವೆ. ಏಷ್ಯಾದ ಅನೇಕ ರಾಷ್ಟ್ರಗಳು ಚೈನಾ ಪ್ರಭಾವದ ತಡೆಯಾಗಿ ನಿಲ್ಲುವ ಒಂದು ಪ್ರಾದೇಶಿಕ ಶಕ್ತಿಯ ನಿರೀಕ್ಷೆಯಲ್ಲಿದ್ದು, ಈ ವರ್ಷದ ಭಾರತದ ವಿದೇಶಾಂಗ ನೀತಿ ಭಾರತ ಏಷ್ಯಾ ರಾಜಕೀಯ ಚದುರಂಗದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತೆ ಮಾಡಿದೆ.  ಈ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಿ ಪ್ರಭಾವ ತಗ್ಗಿಸುವಲ್ಲಿ ಭಾರತ ಗಮನಾರ್ಹ ಯಶಸ್ಸು ಕಂಡಿದೆ. ಮಧ್ಯ ಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲೂ ಭಾರತದ ವಾಣಿಜ್ಯ ನೀತಿ ಇನ್ನಷ್ಟು ಸ್ಪಷ್ಟವಾಗಿ, ಈ ಪ್ರದೇಶಗಳಲ್ಲೂ ಚೈನಾದ ಏಕಸ್ವಾಮ್ಯ ವ್ಯಾಪಾರೀಕರಣಕ್ಕೆ ಸಡ್ಡು ಹೊಡೆದಿದೆ.
ಕಳೆದ ಎರಡು ದಶಕಗಳಿಗೆ ಹೋಲಿಸಿದಾಗ ಭಾರತ- ಬಾಂಗ್ಲಾದೇಶ ಸಂಬಂಧಗಳು ಅತ್ಯುತ್ತಮವಾಗಿವೆ. ಸಿರಿಸೇನಾ ಅಧಿಕಾರಕ್ಕೆ ಬಂದಾಗಿನಿಂದ ಶ್ರೀಲಂಕಾ ಜೊತೆಗಿನ ಸಂಬಂಧಗಳು ಸುಧಾರಿಸಿವೆ. ಅಫಘಾನಿಸ್ತಾನದ ಜೊತೆಗೂ ಭಾರತ ರಚನಾತ್ಮಕ ಸಂಬಂಧಗಳನ್ನು ಬೆಲೆಸಿಕೊಂಡಿದೆ.ಇಷ್ಟೆಲ್ಲಾ ರಾಜತಾಂತ್ರಿಕ ಯಶಸ್ಸುಗಳ ನಂತರವೂ, ಭಾರತದ ನೆರೆಹೊರೆಯ ವಿದೇಶಾಂಗ ನೀತಿ ಅಂದರೆ ದಕ್ಷಿಣ ಏಷ್ಯಾದ ನೀತಿಯ ಬಗ್ಗೆ ಹಲವಾರು ಅಪಸ್ವರಗಳೆದ್ದಿದ್ದವು. ಮುಖ್ಯವಾಗಿ ನೆರೆಯ ಪಾಕಿಸ್ತಾನ ಮತ್ತು ನೇಪಾಳಗಳೊಂದಿಗೆ ಕದಡಿದ ಸಂಬಂಧಗಳು ಮೋದಿ ವಿದೇಶಾಂಗ ನೀತಿಯ ವೈಫಲ್ಯ ಎಂದೇ ಪರಿಗಣಿಸಲ್ಪಟ್ಟಿತ್ತು. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚಿನ ಸಮಯದಲ್ಲಿ ಊಹಿಸಲೂ ಸಾಧ್ಯವಿಲ್ಲದ ರಾಜತಾಂತ್ರಿಕ ನಡೆಗೆ ಡಿಸೆಂಬರ್ 25 ಸಾಕ್ಷಿಯಾಯ್ತು. 2015ರ ಎಲ್ಲಾ ರಾಜತಾಂತ್ರಿಕ ವಿಜಯಗಳಿಗೆ ಮುಕುಟಪ್ರಾಯದಂತೆ ಮೋದಿ ಪಾಕಿಸ್ತಾನ ಭೇಟಿ ವಿಶ್ವ ರಾಜಕೀಯದ ಗಮನವನ್ನು ಮತ್ತೊಮ್ಮೆ ಭಾರತದ ಕಡೆಗೆ ತಿರುಗಿಸಿದೆ. ಅಫಘಾನಿಸ್ತಾನದಿಂದ ಹಿಂದಿರುಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಪೂರ್ವ ಸೂಚನೆ, ತಯಾರಿಯಲ್ಲದೆ ಹಠಾತ್ತನೆ ಲಾಹೋರ್ ಗೆ ಭೇಟಿ ನೀಡಿ ಪಾಕ್ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. ಮೋದಿ ಪಾಕ್ ಭೇಟಿಯ ಟ್ವೀಟ್ ಬಂದ ಕೂಡಲೇ, ವಿಶ್ವ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾದದ್ದಷ್ಟೇ ಅಲ್ಲ, ಕೆಲವೊಂದು ಟೀಕೆ ಟಿಪ್ಪಣಿಗಳಿಗೂ ಅವಕಾಶ ಮಾಡಿಕೊಟ್ಟಿತು. ನವಾಜ್ ಶರೀಫ್ ಭೇಟಿಯಿಂದ ಅಂಥ ಲಾಭವೇನಿಲ್ಲ, ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ನಿರ್ಧರಿಸುವುದು ಪಾಕ್ ಸೈನ್ಯ ಎಂಬ ತಕ್ಷಣದ ನಕಾರಾತ್ಮಕ ವಾದಗಳೂ ಕೇಳಿ ಬಂದಿವೆ. ಆದರೂ ಮೋದಿ ಪಾಕ್ ಭೇಟಿಯನ್ನು ವಿಮರ್ಶಾತ್ಮಕ ದೃಷ್ಠಿಯಿಂದ ನೋಡಿದಾಗ ಭಾರತ- ಪಾಕ್ ಮುಂದಿನ ಮಾತುಕತೆಗೆ ಮೋದಿ ಲಾಹೋರ್ ಭೇಟಿ ಇನ್ನಷ್ಟು ಬಲ ತುಂಬಲಿದೆ. ಮೋದಿ ಭೇಟಿಯ ಸಂದರ್ಭದಲ್ಲಿ ಪಾಕ್ ಸೈನ್ಯ ಸ್ವತಃ ಲಾಹೋರ್ ರಸ್ತೆಗಳಲ್ಲಿ ಮೋದಿ ಸ್ವಾಗತದ ಸಲುವಾಗಿ ಕಾರ್ಯ ನಿರ್ವಹಿಸಿದ್ದು ಮತ್ತೊಂದು ಅಚ್ಚರಿ!
ಈ ವರ್ಷದ ಕೊನೆಯಲ್ಲೂ ಭಾರತದ ವಿದೇಶಾಂಗ ನೀತಿಯ ಸಾಲು ಸಾಲು ಯಶಸ್ಸುಗಳಿಗೆ ನೇಪಾಳ ಮಾತ್ರ ಅಪವಾದವಾಗಿ ನಿಲ್ಲುತ್ತದೆ. ನೇಪಾಳ ನಾಯಕತ್ವ ದಿನೇ ದಿನೇ ಚೈನಾದತ್ತ ವಾಲುತ್ತಿದೆ. ಪ್ರತಿ ಬಾರಿ ನೇಪಾಳದಲ್ಲಿ ಆಯ್ಕೆಯದ ಹೊಸ ಪ್ರಧಾನಿ ಭಾರತಕ್ಕೆ ಭೇಟಿ ನೀಡುವುದು ಸಾಮಾನ್ಯ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ನೇಪಾಳದ ಪ್ರಧಾನಿ ಖಡ್ಗ ಪ್ರಸಾದ್ ಓಲಿ ತಮ್ಮ ಚೊಚ್ಚಲ ವಿದೇಶ ಪ್ರವಾಸಕ್ಕೆ ಚೈನಾವನ್ನು ಆಯ್ದುಕೊಂಡಿರುವುದು ಭಾರತದ ಪಾಲಿಗೊಂದು ಎಚ್ಚರಿಕೆಯ ಘಂಟೆ.  ಹೀಗೆ ಈ ವರ್ಷದ ವಿದೇಶಾಂಗ ನೀತಿಯ ಏಳು ಬೀಳುಗಳನ್ನು ಗಮನಿಸಿದಾಗ, ವಿಶ್ವ ರಾಜಕೀಯದಲ್ಲಿ ಭಾರತಕ್ಕೆ 2015 ಬಹಳ ಮಹತ್ವದ ಕಾಲಘಟ್ಟವಾಗಿ ಪರಿಣಮಿಸುತ್ತದೆ. ಈ ವರ್ಷದಲ್ಲಿ ಭಾರತ ಕೈಗೊಂಡ ನಿರ್ಧಾರಗಳು ಭಾರತದ ಭವಿಷ್ಯದ ಅಸ್ಮಿತೆ ಹಾಗೂ ಅಸ್ತಿತ್ವಗಳೆರಡರಲ್ಲೂ ಮಹತ್ವದ ಪರಿಣಾಮ ಬೀರಲಿದೆ.






 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 31 December 2015)