ಶುಕ್ರವಾರ, ಡಿಸೆಂಬರ್ 25, 2015

ಪ್ರಸಕ್ತ ಭಾರತದಲ್ಲೊಮ್ಮೆ ಮಹಾಭಾರತದ ನೆನಪು


ಅರ್ಜುನ ಗಾಂಢೀವ ಕೆಳಗಿಟ್ಟು ಬಂಧು ಬಾಂಧವರ ಎದುರು ಯುದ್ಧ ಮಾಡಲಾರೆ ಎಂದಾಗ ಕುರುಕ್ಷೇತ್ರ ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಪ್ರತಿನಿಧಿಸುತ್ತಿತ್ತೇನೋ? 
- ಕೀರ್ತಿರಾಜ್


     1.8 ಮಿಲಿಯನ್ ಪದಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡ ಮಹಾಭಾರತ ವಿಶ್ವದ ಅತೀ ದೊಡ್ಡ ಮಹಾಕಾವ್ಯ. ಮಹಾಭಾರತದ ಗಾತ್ರ ಸರಿಗಟ್ಟಲು, ಹತ್ತು ಇಲಿಯಡ್ ಮತ್ತು ಒಡಿಸ್ಸಿಗಳು ಅಥವಾ ಮೂರು ಬೈಬಲ್ ಗಳು ಬೇಕಾಗುತ್ತವೆ ಎಂಬ ಮಾತು ಅತಿಶಯೋಕ್ತಿಯೇನಲ್ಲ. ಈ ಮಹಾಕಾವ್ಯದ ಹಿರಿಮೆ ಬರಿಯ ಗಾತ್ರಕ್ಕಷ್ಟೇ ಸೀಮಿತವಲ್ಲ,  ಅಂದಿನ ಭಾರತದ ಪುರಾಣ, ಇತಿಹಾಸ, ರಾಜಕೀಯ ಸಿದ್ಧಾಂತ ಹಾಗೂ ತತ್ವಶಾಸ್ತ್ರಗಳ ಸಮ್ಮಿಲನ. ಇಂದು ವಿಶ್ವದಾದ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ 'ಭಗವದ್ಗೀತೆ' ಕೂಡ ಮಹಾಭಾರತದ ಕೊಡುಗೆಯೇ. ಹೀಗೆ ಭಾರತದ ಮತ್ತು ಭಾರತೀಯರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿರುವ ಮಹಾಭಾರತದ ಉಪಕಥೆಗಳು ಹಾಗೂ ಧೀಮಂತ ಪಾತ್ರಗಳು ಇಂದಿಗೂ ತನ್ನ ಪ್ರಖರತೆ ಕಳೆದುಕೊಂಡಿಲ್ಲ. ಇತಿಹಾಸಕಾರರ ಪ್ರಕಾರ ಮಹಾಭಾರತ ಕ್ರಿಸ್ತಪೂರ್ವ ಹತ್ತನೇ ಶತಮಾನದಿಂದ ಎಂಟನೇ ಶತಮಾನದಲ್ಲಿ ನಡೆದ ಕೆಲವು ಘಟನೆಗಳ ಆಧರಿತವಾಗಿದ್ದು, ಕಾಲಕ್ರಮೇಣ ವಿಕಸಿತವಾದ ಮಹಾಕಾವ್ಯ. ಮಹಾಭಾರತವನ್ನು ಬರೆದ ವ್ಯಾಸರಿಂದ ಹಿಡಿದು ಇತರ ವಾದ-ವಿವಾದಗಳೇನೇ ಇದ್ದರೂ ಮಹಾಭಾರತ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಅಂಶಗಳನ್ನು ಪ್ರತಿನಿಧಿಸುತ್ತಿರುವುದು ಸೂರ್ಯನಷ್ಟೇ ಸತ್ಯ.
     ಅಸಂಖ್ಯಾತ ಉಪಕಥೆಗಳು, ನಿಗೂಢ ಪಾತ್ರಗಳು ಹಾಗೂ ಪ್ರತಿ ಸನ್ನಿವೇಶದಲ್ಲೂ ಕಾಣಬಹುದಾದ ರಹಸ್ಯ ತಿರುವುಗಳಿಂದಾಗಿ ಮಹಾಭಾರತದ ಆದಿ ಅಂತ್ಯವನ್ನು ನಿರ್ಧರಿಸುವುದು ಕಷ್ಟಸಾಧ್ಯವೇ ಆದರೂ  ಹಸ್ತಿನಾಪುರದ ಸಿಂಹಾಸನ ಮತ್ತು ಅಧಿಕಾರಕ್ಕಾಗಿ ಸ್ಪರ್ಧಿಸುವ ಕುರುವಂಶದ ಎರಡು ಕವಲುಗಳಾದ ಕೌರವರು ಮತ್ತು ಪಾಂಡವರ ಜಗ್ಗಾಟ ಕಾವ್ಯದ ಕೇಂದ್ರ ಭಾಗವೆನಿಸಿಕೊಳ್ಳುತ್ತದೆ. ಕೌರವರ ತಂದೆ ದೃತರಾಷ್ಟ್ರ ಕುರುಡನಾಗಿದ್ದ ಕಾರಣಕ್ಕೆ ಕಿರಿಯ ಸಹೋದರ ಪಾಂಡು ಅಂದರೆ ಪಾಂಡವರ ತಂದೆಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ಕಾಲ ಸರಿದಂತೆ ಕೌರವರಲ್ಲಿ ಹಿರಿಯನಾಗಿದ್ದ ದುರ್ಯೋಧನ, ಕುರುವಂಶದ ಹಿರಿಮಗ ದೃತರಾಷ್ಟ್ರನ ಹಿರಿಯ ಮಗ ಎಂಬ ಕಾರಣಕ್ಕೆ ಕುರು ಸಿಂಹಾಸನದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಾನೆ. ಇನ್ನೊಂದೆಡೆ, ಯುಧಿಷ್ಠಿರ, ದುರ್ಯೋಧನನಗಿಂತ ಹಿರಿಯ ಎಂಬ ಕಾರಣಕ್ಕೆ ಸಿಂಹಾಸನದ ನ್ಯಾಯಬದ್ಧ ಒಡೆಯ ಎಂಬ ವಾದ ಕೇಳಿಬರುತ್ತದೆ. ಈ ಕೌಟುಂಬಿಕ ಭಿನ್ನಾಭಿಪ್ರಾಯಗಳು ಮುಂದೆ ಅನೂಹ್ಯ ತಿರುವುಗಳನ್ನು ಪಡೆದುಕೊಂದು ಕೊನೆಗೆ ಕುರುಕ್ಷೇತ್ರದ ರಣಾಂಗಣದಲ್ಲಿ ಕೊನೆಗೊಳ್ಳುತ್ತವೆ. ಈ ಯುದ್ಧದಲ್ಲಿ ಪಾಂಡವರು ವಿಜಯಶಾಲಿಗಳಾಗಿ ಹೊರಹೊಮ್ಮುತ್ತಾರೆ. ಇಂಥ ಸನ್ನಿವೇಶದಲ್ಲಿ ಸಾಮಾನ್ಯ ದೃಷ್ಟಿಗೆ ಕೌರವ-ಪಾಂಡವರಿಬ್ಬರ ವಾದವೂ ಸರಿಯೆಂದೆನಿಸಿದರೂ, ಮಹಾಭಾರತ ಧರ್ಮಿಷ್ಠರಾದ  ಪಾಂಡವರನ್ನು ಸಮರ್ಥಿಸಿಕೊಂಡು, ಕೌರವರನ್ನು ಖಳನಾಯಕರನ್ನಾಗಿ ಬಿಂಬಿಸುತ್ತದೆ. ಇಲ್ಲಿ ಧರ್ಮವನ್ನು ಆಧುನಿಕ ಪರಿಕಲ್ಪನೆಗಳಾದ ಮತ ಅಥವಾ ನ್ಯಾಯದ ದೃಷ್ಠಿಕೋನದಲ್ಲಿ ನೋಡಿದರೆ ಮಹಾಭಾರತ ಮತ್ತಷ್ಟು ಸಂಕೀರ್ಣವಾಗಿ ಕಾಣಿಸಿಕೊಳ್ಳಬಹುದು.
     ಮಹಾಭಾರತವನ್ನು ಇಂದು ಮತ್ತೆ ನೆನಪಿಸಿಕೊಳ್ಳಲು ಕಾರಣ ಖಂಡಿತ ಇದೆ. ರಾಜಕೀಯ ತಂತ್ರಗಳು ಅಥವಾ ಯುದ್ಧ ನೀತಿಯ ವಿಷಯಕ್ಕೆ ಬಂದಾಗ ಭಾರತೀಯರೂ ಸೇರಿದಂತೆ ಪ್ರಪಂಚದಾದ್ಯಂತ ಜನ ನೆನಪಿಸಿಕೊಳ್ಳುವುದು ವಾಸ್ತವವಾದಿಗಳಾದ ಸನ್ ತ್ಸು ಅಥವಾ ಮೆಕ್ಯಾವೆಲ್ಲಿಯನ್ನು ಮಾತ್ರ.  'ಆ ನೋ ಭದ್ರಾ ಕೃತವೋ ಯಂತು ವಿಶ್ವತಃ' ಎಂಬಂತೆ ಉಪಯುಕ್ತ ವಿಚಾರಗಳನ್ನು ಎಲ್ಲಾ ಕಡೆಗಳಿಂದ ಸ್ವೀಕರಿಸುವುದರಲ್ಲಿ ತಪ್ಪೇನಿಲ್ಲ. ಆದರೆ ವಿಶ್ವ ಮಟ್ಟದಲ್ಲಿ ಭಾರತದ ಗುರುತಿಸಿಕೊಳ್ಳುವಿಕೆ ನೆಹರೂರವರ ಆದರ್ಶವಾದ ಮತ್ತು ಗಾಂಧಿ ಬೋಧಿಸಿದ ಅಹಿಂಸಾವಾದಗಳಿಗಷ್ಟೇ ಸೀಮಿತವಾಗಿಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು.  ಆದರ್ಶವಾದದ ಜೊತೆಗೆ ವಾಸ್ತವಿಕ ಶಕ್ತಿ ರಾಜಕೀಯದ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಮೂರು ವಿಭಿನ್ನ ವ್ಯಕ್ತಿತ್ವಗಳನ್ನು ಮಹಾಭಾರತ ಒದಗಿಸುತ್ತದೆ. ಕೌರವರ ಮಾವ ಶಕುನಿ, ಪಾಂಡವರ ಭಾವ ಅವತಾರ ಪುರುಷ ಕೃಷ್ಣ ಮತ್ತು ಕೌರವ- ಪಾಂಡವರಿಬ್ಬರೂ ಸೇರಿದಂತೆ ಇಡೀ ಕುರುವಂಶಕ್ಕೆ ಪಿತಾಮಹರಾಗಿದ್ದ ಭೀಷ್ಮಾಚಾರ್ಯರು. ಹೀಗೆ ಮಹಾಭಾರತ ಪ್ರಸ್ತುತ ಭಾರತಕ್ಕೆ ಹೇಳುವುದು ಬಹಳಷ್ಟಿದೆ.

     ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಭಾರತದ ರಾಜಕೀಯ ನಾಯಕರು ನೈತಿಕತೆಯನ್ನು ಉಳಿಸಿಕೊಳ್ಳುವ ಆದರ್ಶವಾದದ ಭರದಲ್ಲಿ ವಾಸ್ತವಿಕತೆಯನ್ನು ಮರೆತು ಶತ್ರುವಿನ ಕಪಟ ತಂತ್ರಗಳಿಗೆ ಭಾರತದ ರಾಷ್ಟ್ರೀಯ ಹಿತವನ್ನು ಬಲಿ ಕೊಟ್ಟರೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಇಂಡೋ-ಪಾಕ್ ಯುದ್ಧಗಳು, 1962ರ ಚೈನಾ ಜೊತೆಗಿನ ಯುದ್ಧಗಳಲ್ಲಿ, ಭಾರತದ ಆದರ್ಶವಾದ ದುಃಸ್ವಪ್ನವಾಗಿ ಕಾಡುತ್ತವೆ. ಇನ್ನೂ ಹಿಂದಕ್ಕೆ ಹೋದಲ್ಲಿ 1191ರಲ್ಲಿ ನಡೆದ ಮೊದಲನೇ ತರೈನ್ ಯುದ್ಧದಲ್ಲಿ ಅಫ್ಘನ್ ದಾಳಿಕೋರ ಮಹಮ್ಮದ್ ಘೋರಿಯನ್ನು, ಪ್ರಥ್ವಿರಾಜ್ ಚೌಹಾನ್ ಸೋಲಿಸಿ, ಘೋರಿಗೆ ಜೀವದಾನ ನೀಡುತ್ತಾನೆ. ಈ ಜೀವದಾನ ನೈತಿಕ ದೃಷ್ಠಿಯಿಂದ ಪ್ರಥ್ವಿರಾಜನಿಗೆ ಸರಿ ಎಂದೆನಿಸಿತ್ತದರೂ ಮರುವರ್ಷ 1192ರಲ್ಲಿ ನಡೆದ ಎರಡನೇ ತರೈನ್ ಯುದ್ಧದಲ್ಲಿ ಘೋರಿ ಮರುದಾಳಿ ನಡೆಸಿ ಪ್ರಥ್ವಿರಾಜನನ್ನು ಸೋಲಿಸಿದ್ದಷ್ಟೇ ಅಲ್ಲದೇ ಹತ್ಯೆಗೈದು ತನ್ನ ಪ್ರಭಾವವನ್ನು ಭಾರತದಲ್ಲಿ ಸ್ಥಾಪಿಸುತ್ತಾನೆ. ಘೋರಿಗೆ ಕ್ಷಮಾದಾನ ನೀಡುವ ಪ್ರಥ್ವಿರಾಜ್ ಚೌಹಾನ್ ನೈತಿಕತೆಯ ಆಧಾರದಲ್ಲಿ ಆದರ್ಶ ವ್ಯಕ್ತಿಯಾದರೂ, ರಾಜಕೀಯ ಮುತ್ಸದ್ಧಿತನ ತೋರುವಲ್ಲಿ ವಿಫಲನಾಗಿ ತನಗಷ್ಟೇ ಅಲ್ಲದೇ, ತನ್ನ ರಾಷ್ಟ್ರದ ಭದ್ರತೆಗೂ ಸಂಚಕಾರ ತರುತ್ತಾನೆ. ಮಹಾಭಾರತದಲ್ಲಿ ಕೃಷ್ಣ ಹಲವಾರು ಬಾರಿ ಕಪಟ ಹಾಗೂ ಸಂಚಿನ ಮೊರೆಹೊಕ್ಕಿದ್ದು ಅಂತಿಮವಾಗಿ ನೈತಿಕತೆಯ ಉಳಿವಿಗಾಗಿಯೇ! ಆದರ್ಶವಾದದ ಗುಂಗಿನಲ್ಲಿದ್ದ ಯುಧಿಷ್ಠಿರನಿಗೆ, ಭಿಷ್ಮಾಚಾರ್ಯ, ದ್ರೋಣಾಚಾರ್ಯರ ಸಾವನ್ನು ಊಹಿಸುವುದು ಸಾಧ್ಯವಿರಲಿಲ್ಲ, ಎಂದಾಗ  ಕುರುಕ್ಷೇತ್ರದ ಯುದ್ಧ ಗೆಲ್ಲುವುದು ಕನಸಿನ ಮಾತಾಗಿತ್ತು. ಯುದ್ಧದ ಗುರಿ ಸಾಧನೆಯ ಬಗೆಗೆ ಸ್ಪಷ್ಟ ಅರಿವಿದ್ದದ್ದು ಶ್ರೇಷ್ಠ ರಾಜಕೀಯ ಮುತ್ಸದ್ಧಿ ಕೃಷ್ಣನಿಗೆ ಮಾತ್ರ. ರಣರಂಗದಲ್ಲಿ ಯುದ್ಧ ಧರ್ಮವನ್ನು ಮಾತ್ರ ಪಾಲಿಸುವಂತೆ ಪಾಂಡವರನ್ನು ಪ್ರಚೋದಿಸಿದ್ದು ಇದೇ ಕೃಷ್ಣ. ದ್ರೋಣರ ಪುತ್ರ ವಾತ್ಸಲ್ಯವನ್ನು, ಕರ್ಣನ ಮಾತೃ ಪ್ರೇಮವನ್ನೂ ಯುದ್ಧನೀತಿಯಲ್ಲಿ ಉಪಯೋಗಿಸಿದ್ದೋ ಅಥವಾ ದುರುಪಯೋಗ ಮಾಡಿಕೊಂಡಿದ್ದೋ ಎಂಬ ಪ್ರಶ್ನೆಗೆ ಉತ್ತರ ನೀವು ಮಹಾಭಾರತವನ್ನು ನೋಡುವ ದೃಷ್ಠಿಕೋನವನ್ನು ಅವಲಂಬಿಸಿರುತ್ತದೆ.
       ಭಾರತ ಹಲವಾರು ಯುದ್ಧಗಳನ್ನೆದುರಿಸಿದ್ದರೂ, ತನ್ನ ನೈತಿಕ ಶಕ್ತಿ ಎನ್ನುವ ಪಟ್ಟಕ್ಕೆ ಚ್ಯುತಿ ಬಾರದಂತೆ ಬಹುತೇಕ ಎಲ್ಲಾ ಯುದ್ಧಗಳಲ್ಲೂ ನಿರುತ್ಸಾಹವನ್ನೇ ತನ್ನ ಕಾರ್ಯ ನೀತಿಯನ್ನಾಗಿ ಮಾಡಿಕೊಂಡಿದೆ. ಪಾಕಿಸ್ತಾನವನ್ನು ಹಲವಾರು ಯುದ್ಧಗಳಲ್ಲಿ ಹಿಮ್ಮೆಟ್ಟಿಸಿದ್ದರೂ ಗಡಿ ವಿವಾದಗಳಲ್ಲಿ ನಿರ್ಣಾಯಕ ಫಲಿತಾಂಶ ಹೊರಬಂದಿಲ್ಲ. ಅಹಿಂಸಾತ್ಮಕ ಮಾರ್ಗಗಳ ಮೂಲಕವೇ ಎಲ್ಲಾ ರಾಜತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಭಾರತದ ನಡೆ ಪ್ರಶಂಸನೀಯವೇ ಆದರೂ ಶಕ್ತಿ ರಾಜಕೀಯದಲ್ಲಿ ನೈತಿಕತೆಗೆ ಬೆಲೆ ಬರಬೇಕಾದರೆ ಅಹಿಂಸೆಯ ಹಿಂದೆ ಬಲವಾದ ಮುತ್ಸದ್ಧಿತನ ಇರಲೇಬೇಕು. ಅರ್ಜುನ ಗಾಂಢೀವ ಕೆಳಗಿಟ್ಟು ಬಂಧು ಬಾಂಧವರ ಎದುರು ಯುದ್ಧ ಮಾಡಲಾರೆ ಎಂದಾಗ ಕುರುಕ್ಷೇತ್ರ ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಪ್ರತಿನಿಧಿಸುತ್ತಿತ್ತೇನೋ? ಇಂಥ ಸಂದರ್ಭದಲ್ಲಿ ಕೃಷ್ಣ ಬೋಧಿಸಿದ 'ಗೀತೆ' ಅರ್ಜುನನಿಗೆ ಮಾತ್ರವಲ್ಲ ಇವತ್ತಿನ ರಾಜಕೀಯ ಪರಿಸ್ಥಿತಿಗೂ ದಾರಿದೀಪ.
     ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬ ಮಾತು ಇತ್ತೀಚಿನದಲ್ಲ, ಶತಮಾನಗಳ ಹಿಂದೆಯೂ ಈ ತತ್ವ ಪರಿಚಿತವಾಗಿತ್ತು ಎಂಬುದಕ್ಕೆ ಮಹಾಭಾರತವೇ ಸಾಕ್ಷಿ. ಮುಂದಾಗುವ ಅನರ್ಥಗಳ ಅರಿವಿದ್ದರೂ, ಕ್ಷತ್ರಿಯರ ಘನತೆ ಗೌರವಗಳಿಗೆ ಕಟ್ಟು ಬಿದ್ದು ಯುಧಿಷ್ಠಿರ ಜೂಜಾಟವನ್ನು ಕೊನೆಯವರೆಗೆ ಮುಂದುವರಿಸಿದ್ದು, ರಾಜ್ಯ, ಕೋಶ ಕೊನೆಗೆ ತಮ್ಮವರನ್ನೆಲ್ಲಾ ಪಣವಾಗಿಟ್ಟು ಸೋತಿದ್ದು, ಪ್ರಸ್ತುತ ಭಾರತದ ಅನಿಷ್ಟಗಳಿಗೆ ಕನ್ನಡಿ ಹಿಡಿದಂತಿದೆ. ನೈತಿಕತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೊರಟು ಅದರ ಫಲ ಸಾಮಾಜಿಕ ಅಡ್ಡ ಪರಿಣಾಮಗಳಾಗಿ ಮಾರ್ಪಡುವುದು ದುರಂತವೇ ಸರಿ. ಇದೇ ಕಾರಣಕ್ಕಾಗಿ ಮಹಾತ್ಮ ಎನಿಸಿಕೊಂಡಿದ್ದ ಗಾಂಧೀಜಿಯವರು ಕೂಡ ಠೀಕಾಕಾರರಿಗೆ ಆಹಾರವಾಗಿದ್ದು. "I must be cruel only to be kind" ಇದು ಶೇಕ್ಸ್ ಪಿಯರ್ ಕೃತಿಯೊಂದರಲ್ಲಿ ಕಾಣಸಿಗುವ ಪ್ರಖ್ಯಾತ ಸಾಲು. ಆದರೆ ಶತಮಾನಗಳ ಹಿಂದೆಯೇ ಧರ್ಮವನ್ನು ಕಾಪಾಡಲು ವಾಮಮಾರ್ಗ ಬಳಸಿಕೊಂಡರೂ ತಪ್ಪಿಲ್ಲ ಎಂಬ ವಾಸ್ತವಿಕವಾದದ ತಿರುಳನ್ನು ಜಗತ್ತಿಗೆ ಸಾರಿತ್ತು ನಮ್ಮ ಮಹಾಭಾರತ. ಇಲ್ಲಿ ನೀಡಿರುವ ನಿದರ್ಶನಗಳು ಸಣ್ಣ ಪುಟ್ಟ ಉದಾಹರಣೆಗಳಷ್ಟೇ, ಮುಂದೆ ಕಲಿಯಬೇಕಾದದ್ದು, ವಿಶ್ವಗುರುವಾಗಿ ಕಲಿಸಬೇಕಾದದ್ದು ಸಾಗರದಷ್ಟಿದೆ.




 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 24 December 2015)

ಸೋಮವಾರ, ಡಿಸೆಂಬರ್ 14, 2015

ಟೂರ್ಸ್ ಯುದ್ಧ ನೆನಪಿಸಿದ ಪ್ಯಾರಿಸ್ ದಾಳಿ










ಪ್ಯಾರಿಸ್ ಮೇಲಿನ ಇತ್ತೀಚಿನ ಉಗ್ರ ದಾಳಿ ಇತಿಹಾಸದ ನಿರ್ಣಾಯಕ ಯುದ್ಧವೊಂದನ್ನುನೆನಪಿಸಿಕೊಳ್ಳುವಂತೆ ಮಾಡಿದೆ. ಅಂದೂ ಟೂರ್ಸ್ ಎಂಬಲ್ಲಿ ಫ್ರೆಂಚ್ ಮತ್ತು ಇಸ್ಲಾಮಿಕ್ ಶಕ್ತಿಗಳ ಬಲ ಪ್ರದರ್ಶನ ನಡೆದಿತ್ತು.
- ಕೀರ್ತಿರಾಜ್

ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಮುಖ ಹಾಗೂ ಅಂತಿಮ ಉದ್ದೇಶ ವಿಶ್ವ ರಾಜಕೀಯದಲ್ಲಿ ಮರೆಯಾಗಿರುವ ಖಲೀಫಾ ಆಡಳಿತವನ್ನು ಮತ್ತೆ ಸ್ಥಾಪಿಸುವುದು ಮತ್ತು ಖಲೀಫಾ ಆಡಳಿತವನ್ನು ಇಡೀ ವಿಶ್ವ ಸಮುದಾಯದ ಮೇಲೆ ಹೇರುವುದು. ಈ ಗುರಿ ಸಾಧಿಸುವ ಹುಚ್ಚು ಸಾಹಸದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಲ್ಲಲ್ಲಿ ನಡೆಸುವ ಹಿಂಸಾಚಾರ, ನರಮೇಧಗಳು ವಿಶ್ವದ ಗಮನ ಸೆಳೆಯುವ ಪ್ರಯತ್ನಗಳಷ್ಟೇ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಇಸ್ಲಾಮಿಕ್ ಸ್ಟೇಟ್‌ನ ಯೋಜನೆಗಳು, ಹೇಳಿಕೆಗಳು ಉಗ್ರರೊಳಗಿನ ಭೀತಿ, ಆತಂಕಗಳ ಪ್ರತೀಕ. ಉಗ್ರರು ನಡೆಸುತ್ತಿರುವ ಹತ್ಯಾಕಾಂಡ ಮತ್ತು ಇಸ್ಲಾಮಿಕ್ ಉಗ್ರರ ವಿರುದ್ಧ ಅಮೆರಿಕಾ, ರಷ್ಯಾ ಮತ್ತಿತರ ವಿಶ್ವ ಶಕ್ತಿಗಳ ಕಾರ್ಯಾಚರಣೆಯ ಮಧ್ಯೆಯೆ ಇಸ್ಲಾಮಿಕ್ ಸ್ಟೇಟ್ ಪ್ಯಾರಿಸ್‌ನಲ್ಲಿ ದಾಳಿ ನಡೆಸಿ ವಿಶ್ವದ ಗಮನ ಸೆಳೆಯಿತು. ಉಗ್ರರು ನೂರಕ್ಕೂ ಹೆಚ್ಚು ಜನರ ಪ್ರಾಣ ಬಲಿ ತೆಗೆದುಕೊಂಡರು. ಇದು ವಿಶ್ವ ಮಟ್ಟದಲ್ಲಿ ಫ್ರಾನ್ಸ್ ಪರ ಅನುಕಂಪ ಮತ್ತು ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಅಲೆ ಹರಡಿಕೊಳ್ಳುವಂತೆ ಮಾಡಿತು. ಫ್ರಾನ್ಸ್ ಮೇಲೆ ಉಗ್ರರ ಆಕ್ರಮಣ ಇದೇ ಮೊದಲೇನಲ್ಲ, ಈ ಹಿಂದೆ ಚಾರ್ಲಿ ಹೆಬ್ಡೊ ದಾಳಿಯೂ ಗಮನ ಸೆಳೆದಿತ್ತು. ಪ್ಯಾರಿಸ್ ಮೇಲಿನ ಇಸ್ಲಾಮಿಕ್ ಸ್ಟೇಟ್ ದಾಳಿ ಇತಿಹಾಸವನ್ನು ಮಗದೊಮ್ಮೆ ಮೆಲುಕು ಹಾಕುವಂತೆ ಮಾಡಿದೆ. ಫ್ರೆಂಚರು ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವಿನ ಹಳೆಯ ಸಮರವನ್ನು ನೆನಪಿಸಿದೆ.
ಸರಿ ಸುಮಾರು 1300 ವರ್ಷಗಳ ಹಿಂದೆ, ಕ್ರಿಸ್ತಶಕ 732ನೇ ಇಸವಿಯಲ್ಲಿ ನಡೆದ ‘ಟೂರ್ಸ್ ಯುದ್ಧ’ ವಿಶ್ವ ರಾಜಕೀಯದ ನಿರ್ಣಾಯಕ ಯುದ್ಧಗಳಲ್ಲೊಂದು. ಖ್ಯಾತ ಇತಿಹಾಸಕಾರ ಪೌಲ್ ಡೇವಿಸ್ ಅವರ 100 Decisive Battles: From Ancient Times to the Present ಎಂಬ ಕೃತಿಯಲ್ಲೂ ಈ ಯುದ್ಧದ ಬಗೆಗೆ ಕುತೂಹಲಕಾರಿ ವಿವರಗಳಿವೆ.ಕ್ರಿಸ್ತ ಶಕ 732ರಲ್ಲಿ ರೋಮ್ ಸಾಮ್ರಾಜ್ಯ ಪತನವಾಗಿ ಇಸ್ಲಾಮಿಕ್ ಶಕ್ತಿಗಳ ಪ್ರಭಾವ ದಟ್ಟವಾಗಿತ್ತು. ಇಸ್ಲಾಮನ್ನು ಪ್ರಪಂಚದಾದ್ಯಂತ ವಿಸ್ತರಿಸಲು ಪಣ ತೊಟ್ಟು ಉತ್ತರ ಆಫಿಕಾ, ಸ್ಪೈನ್, ಕಾಕಸಸ್ ಮತ್ತಿತರ ಮಧ್ಯ ಪ್ರಾಚ್ಯದ ಪ್ರದೇಶಗಳನ್ನು ಮಿಂಚಿನ ವೇಗದಲ್ಲಿ ವಶಪಡಿಸಿಕೊಂಡು ಉಮಯ್ಯಾದ್ ಖಲೀಫಾನ ಸೈನ್ಯ ಯುರೋಪ್‌ನತ್ತ ತನ್ನ ಚಿತ್ತ ನೆಟ್ಟಿತ್ತು. ಹೆಣಗಳ ರಾಶಿಯ ಮೇಲೆ ಖಲೀಫಾ ಅಧಿಕಾರದ ಪತಾಕೆ ನೆಟ್ಟು, ರೆಹಮಾನ್-ಅಲ್-ಗಫಿಕಿಯ ನೇತೃತ್ವದಲ್ಲಿ ಸುಮಾರು 80,000 ಸೈನಿಕರ ಸೈನ್ಯ ಯುರೋಪನ್ನು ವಶಪಡಿಸಿಕೊಳ್ಳಲು, ದಕ್ಷಿಣ ಫ್ರಾನ್ಸ್ ಪ್ರಾಂತ್ಯದ ಆಕ್ರಮಣಕ್ಕೆ ಮುಂದಾಗಿತ್ತು. ಇಂಥ ಸಂದಿಗ್ಧ ಸಮಯದಲ್ಲಿ ಉಮಯ್ಯಾದ್ಖಲೀಫಾನ ಆಕ್ರಮಣದಿಂದ ಯುರೋಪ್ ಮತ್ತು ಪಾಶ್ಚಾತ್ಯರ ಘನತೆಯನ್ನು ರಕ್ಷಿಸಿದ್ದು ಫ್ರೆಂಚ್ ಜನಾಂಗ ಎಂಬುದನ್ನು ಸ್ಮರಿಸಿಕೊಳ್ಳಬೇಕು.
ಕ್ರಿಸ್ತಶಕ 732ರಲ್ಲಿ ರೆಹಮಾನ್-ಅಲ್-ಗಫಿಕಿಯ ಸೈನ್ಯ ಯುರೋಪ್ ಬಾಗಿಲಿಗೆ ಬಂದು ನಿಂತಾಗ, ಚಾರ್ಲ್ಸ್ ಮಾರ್ಟೆಲ್ ನೇತೃತ್ವದ ಫ್ರಾಂಕ್ ಸೈನ್ಯ ಟೂರ್ಸ್ ಎಂಬ ಪ್ರದೇಶದಲ್ಲಿ ತಡೆಯಿತು. ಇಲ್ಲಿ ನಡೆದ ಯುದ್ಧವೇ ಚರಿತ್ರೆಯ ನಿರ್ಣಾಯಕ ಯುದ್ಧಗಳಲ್ಲೊಂದಾದ ಟೂರ್ಸ್ ಯುದ್ಧ. ಈ ಯುದ್ಧದ ಫಲಿತಾಂಶ ವಿಶ್ವ ರಾಜಕೀಯದ ಮುಂದಿನ ಆಗು ಹೋಗುಗಳನ್ನು ನಿರ್ಧರಿಸಿತು. ಒಂದು ವೇಳೆ ಉಮಯ್ಯಾದ್ ಖಲೀಫಾನ ಸೈನ್ಯದ ಕೈ ಮೇಲಾಗಿ ಅದು ಯುರೋಪಿನ ಭಾಗಗಳ ಮೇಲೆ ಅಧಿಪತ್ಯ ಸ್ಥಾಪಿಸಿದ್ದಲ್ಲಿ, ಪ್ರಸ್ತುತ ಶಕ್ತಿ ರಾಜಕೀಯದಲ್ಲಿ ಅಮೆರಿಕಾಕ್ಕೆ ಸರಿಸಮನಾಗಿ ಅಥವಾ ಅಮೆರಿಕಾವನ್ನೂ ಮೀರಿಸುವಂಥ ದೈತ್ಯ ‘ಸೂಪರ್ ಪವರ್’ ಆಗಿ ಖಲೀಫಾ ಛಾಪು ಮೂಡಿಸುತ್ತಿತ್ತು ಎಂದುಪೌಲ್ ಡೇವಿಸ್ ಅಭಿಪ್ರಾಯಪಡುತ್ತಾರೆ.
ಹೀಗೆ ಖಲೀಫಾನ ಆಕ್ರಮಣದ ಸಂದರ್ಭದಲ್ಲಿ ಗಂಡಾಂತರಕ್ಕೆ ತಲೆಕೊಟ್ಟು ಯುರೋಪಿನ ಗೋಡೆಯಾಗಿ ನಿಂತ ಶ್ರೇಯಸ್ಸು ಫ್ರಾನ್ಸ್‌ಗೆ ಸಲ್ಲುತ್ತದೆ. ಪ್ರಸ್ತುತ ಇಸ್ಲಾಮಿಕ್ ಸ್ಟೇಟ್‌ನ ಪ್ಯಾರಿಸ್ ದಾಳಿ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ಪಡೆದು ಒಬಾಮ, ಪುಟಿನ್, ಮೋದಿಯಿಂದ ಹಿಡಿದು ಪ್ರಪಂಚದ ಬಹುತೇಕ ರಾಷ್ಟ್ರಗಳ ನಾಯಕರು ಪ್ಯಾರಿಸ್ ದಾಳಿಯನ್ನು ಉಗ್ರವಾಗಿ ಖಂಡಿಸಿರುವುದು ಖಲೀಫಾ ಮರು ಸ್ಥಾಪಿಸಲು ಹೊರಟವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ ಮತ್ತು ಪ್ಯಾರಿಸ್ ದಾಳಿಯ ನಂತರದ ಶೀಘ್ರ ಬೆಳವಣಿಗೆಗಳನ್ನು ಗಮನಿಸಿದಾಗ ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆ ಮೂಡುವುದರಲ್ಲಿ ತಪ್ಪೇನಿಲ್ಲ.ಈ ಲೇಖನ ಟೂರ್ಸ್ ಯುದ್ಧ ಮತ್ತು ಫ್ರೆಂಚರ ಧೈರ್ಯ ಸಾಹಸಗಳ ವೈಭವೀಕರಿಸುವ ಪ್ರಯತ್ನವಲ್ಲ. ಮುಂದೆ 400 ವರ್ಷಗಳ ನಂತರ ಯುರೋಪಿನ ಸೇನೆ ಕ್ರುಸೇಡ್ ಹೆಸರಿನಲ್ಲಿ ನಡೆಸಿದ ರಕ್ತದೋಕುಳಿಯನ್ನು ಪ್ರಪಂಚ ಇನ್ನೂ ಮರೆತಿಲ್ಲ. ಪರಸ್ಪರ ಘರ್ಷಣೆ, ಸಂಘರ್ಷ ಚರಿತ್ರೆಯ ಪುಟಗಳಲ್ಲಿ ಸಹಜವೆಂಬಂತೆ ಬೆರೆತಿರುವಾಗ, ಯಾರನ್ನೂ ವೈಭವೀಕರಿಸುವ, ಓಲೈಸುವ ಪ್ರಶ್ನೆಯೇ ಇಲ್ಲಿಲ್ಲ.ಅಂದು ಖಲೀಫಾ ಸೈನ್ಯವನ್ನು ಫ್ರೆಂಚರು ಸಮರ್ಥವಾಗಿ ತಡೆಹಿಡಿದಿದ್ದು, ಮುಂದಿನ ದಿನಗಳಲ್ಲಿ ಖಲೀಫಾ ಪ್ರಭಾವ ನಿಧಾನವಾಗಿ ಮರೆಯಾಗಿ ಹೋಗಿದ್ದು ಚರಿತ್ರೆ ಹೇಳುವ ಕಥೆ.
 ಹೀಗೆ ಚರಿತ್ರೆಯಲ್ಲಿ ಕಾಣೆಯಾದ ಖಲೀಫಾ ಮರುಸ್ಥಾಪನೆಗಾಗಿ ಹರಸಾಹಸ ಮಾಡುತ್ತಿರುವ ಇಸ್ಲಾಮಿಕ್ ಸ್ಟೇಟ್ ಮತ್ತದರ ಪ್ರಯತ್ನಗಳನ್ನು ಗಮನಿಸಿದರೆ ಪ್ಯಾರಿಸ್ ದಾಳಿಯೊಂದಿಗೆ ವಿಶ್ವ ರಾಜಕೀಯ ಹೊಸ ಆಯಾಮಗಳತ್ತ ಮುಖ ಮಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಟೂರ್ಸ್ ಯುದ್ಧ ಚರಿತ್ರೆಯ ಪುಟವಷ್ಟೇ ಅಲ್ಲ, ಭವಿಷ್ಯದ ತಂತ್ರಗಳಿಗೆ ನೀಲ ನಕ್ಷೆಯೂ ಹೌದು.





 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 13 December 2015)