ಶುಕ್ರವಾರ, ಮಾರ್ಚ್ 31, 2017

ಲಂಡನ್ ದಾಳಿ ಮತ್ತು ಒಂಟಿ ತೋಳದ ಕಟ್ಟುಕತೆ

ಉಗ್ರ ದಾಳಿ ಪ್ರಕರಣಗಳಲ್ಲಿ ಸರಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳು 'ಒಂಟಿ ತೋಳದ ಕಟ್ಟುಕತೆ'ಯನ್ನು ಬಳಸಿ ಜವಾಬ್ದಾರಿ ಕಳೆದುಕೊಳ್ಳಬಹುದು. ಆದರೆ ದೀರ್ಘಕಾಲೀನ ಉಗ್ರ ನಿಗ್ರಹ ಪ್ರಯತ್ನಗಳಿಗೆ ಈ ಪರಿಕಲ್ಪನೆ ಶಾಪವಾಗಿ ಕಾಡುವ ಸಾಧ್ಯತೆಗಳಿವೆ
-      ಕೀರ್ತಿರಾಜ್


22 ಮಾರ್ಚ್ ಬ್ರಿಟಿಷ್ ಸಂಸತ್ತಿನ ಸನಿಹದಲ್ಲಿ ಉಗ್ರ ದಾಳಿಯೊಂದಕ್ಕೆ ಸಾಕ್ಷಿಯಾಗುತ್ತದೆ. ಲಂಡನ್ನಿನ ವೆಸ್ಟ್ ಮಿನಸ್ಟರ್ ಸೇತುವೆಯ ಬಳಿ ಜನರ ಮೇಲೆಯೇ ಕಾರೊಂದನ್ನು ಚಲಾಯಿಸಿಕೊಂಡು ಖಾಲಿದ್ ಮಸೂದ್ ಎಂಬ ಬ್ರಿಟಿಷ್ ಪ್ರಜೆಯೊಬ್ಬ ಸಂಸತ್ತಿನ ರಕ್ಷಣೆಯ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಚೂರಿಯಿಂದ ತಿವಿದು ಕೊಲ್ಲುತ್ತಾನೆ. ಒಟ್ಟಾರೆ ಈ ಪ್ರಕರಣ ಮಸೂದ್ ನನ್ನೂ ಒಳಗೊಂಡಂತೆ ನಾಲ್ಕು ಜನರ ಸಾವು ಮತ್ತು ಐವತ್ತಕ್ಕೂ ಹೆಚ್ಚು ಜನರನ್ನು ಗಾಯಾಳುಗಳನ್ನಾಗಿಸುತ್ತದೆ. ಈ ಹಿಂದೆಯೂ ವಾಹನಗಳನ್ನು ಬಳಸಿ ಲಂಡನ್ ದಾಳಿಯನ್ನೇ ಹೋಲುವಂಥಾ ಉಗ್ರ ದಾಳಿಗಳಾಗಿವೆ. ಕಳೆದ ವರ್ಷ 2016ರಲ್ಲಿ ಬರ್ಲಿನ್ ಮತ್ತು ನೀಸ್ ಗಳಲ್ಲಿ ಜನರ ಗುಂಪನ್ನು ಗುರಿಯಾಗಿರಿಸಿಕೊಂಡು ದೊಡ್ಡ ವಾಹನಗಳನ್ನು ಬಳಸಿ ಮಾರಣಹೋಮ ನಡೆಸಲಾಗಿತ್ತು. ಇಂಥಾ ದಾಳಿಗಳನ್ನು ಭಯೋತ್ಪಾದನಾ ನಿಗ್ರಹ ಪರಿಣತರು ಮತ್ತು ಮಿಲಿಟರಿ ಗುರುತಿಸುವುದು 'ಒಂಟಿ ತೋಳದ ದಾಳಿ' ( Lone Wolf Attack). ಯಾವುದೇ ಬಾಹ್ಯ ಗುಂಪಿನ ನೆರವು ಅಥವಾ ಆದೇಶಗಳಿಲ್ಲದೇ, ತನ್ನಿಂದ ತಾನೇ ಪ್ರೇರೇಪಿತನಾಗಿ ಉಗ್ರ ಕೃತ್ಯಗಳನ್ನು ಎಸಗುವ ಏಕಾಂಗಿ ವ್ಯಕ್ತಿಯನ್ನು 'ಒಂಟಿ ತೋಳ' ಎಂದೂ, ಹೆಚ್ಚಿನ ಯೋಜನೆಗಳಿಲ್ಲದೆ ಹಠಾತ್ತನೆ ನಡೆಯುವ ಈ ಪ್ರಕರಣಗಳನ್ನು 'ಒಂಟಿ ತೋಳದ ದಾಳಿ' ಎಂದೂ ಗುರುತಿಸಲಾಗುತ್ತದೆ. ಲಂಡನ್ ದಾಳಿಯೂ ಕೂಡ ಇದೇ ಹಣೆಪಟ್ಟಿ ಹಚ್ಚಿಕೊಳ್ಳಲು ಸಿದ್ಧವಾಗಿರುವಂತೆ, ಈ ಒಂಟಿ ತೋಳದ ಪರಿಕಲ್ಪನೆಗೆ ವಿರೋಧಗಳೂ ವ್ಯಕ್ತವಾಗಿವೆ. ಉಗ್ರರನ್ನು ಒಂಟಿ ತೋಳವೆಂದು ಪರಿಗಣಿಸುವ ತತ್ವದಿಂದಾಗಿ ಭಯೋತ್ಪಾದನಾ ನಿಗ್ರಹ ಇನ್ನಷ್ಟು ಹದಗೆಡಲಿದೆ ಮತ್ತು ಈ ಎಲ್ಲಾ ದಾಳಿಗಳ ಹಿಂದೆ ಬಹುಕಾಲದ ಕರಾರುವಕ್ ಯೋಜನೆ ಮತ್ತು ದೊಡ್ಡದೊಂದು ಉಗ್ರ ಜಾಲ ಕಾರ್ಯನಿರ್ವಹಿಸುತ್ತದೆ ಮತ್ತು 'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಈ ಎಲ್ಲಾ ಪುರಾವೆಗಳನ್ನು ಕಡೆಗಣಿಸುವುದರ ಮೂಲಕ ಭದ್ರತಾ ವೈಫಲ್ಯಗಳಿಗೆ ದಾರಿಮಾಡಿಕೊಡುವ ಸಾಧ್ಯತೆಗಳೂ ಇಲ್ಲದ್ದಿಲ್ಲ.

ಇತ್ತೀಚೆಗೆ ಬರ್ಮಿಂಗ್ ಹ್ಯಾಮ್ ನಲ್ಲಿ ವಾಸಿಸುತ್ತಿದ್ದ ಲಂಡನ್ ದಾಳಿಯ ದುಷ್ಕರ್ಮಿ  52 ವರ್ಷದ ಖಾಲಿದ್ ಮಸೂದ್ ನ ಮೂಲ ಹೆಸರು ಆಡ್ರಿಯಾನ್ ರಸೆಲ್ ಎಲ್ಮ್ಸ್. ನಂತರ ಇಸ್ಲಾಮಿಗೆ ಮತಾಂತರವಾಗಿದ್ದ ಈತನಿಗೆ ಮದುವೆಯಾಗಿ ಮಕ್ಕಳೂ ಇದ್ದರು. ಈ ಹಿಂದೆಯೂ ಒಂದು ಬಾರಿ ಈತ ಪೊಲೀಸ್ ವಿಚಾರಣೆಗೆ ಒಳಗಾಗಿದ್ದನಾದರೂ, ಈತನಿಂದ ಯಾವುದೇ ತೊಂದರೆಯಿಲ್ಲ ಎಂದು ಪೊಲೀಸರಿಗೆ ನಂಬಿಸುವಲ್ಲಿ ಯಶಸ್ವಿಯಾಗಿದ್ದ! ಲಂಡನ್ ದಾಳಿಯಾದ ತಕ್ಷಣ ಕಾರ್ಯಪ್ರವೃತ್ತರಾದ ಲಂಡನ್ ಪೊಲೀಸರು ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ನಲ್ಲಿ ಮೂರು ಮಹಿಳೆಯರನ್ನೂ ಒಳಗೊಂಡಂತೆ ಹನ್ನೊಂದು ಜನರನ್ನು ಬಂಧಿಸುತ್ತಾರೆ. ಇದರೊಂದಿಗೆ ಸ್ಪಷ್ಟವಾದ ವಿಚಾರವೇನೆಂದರೆ ಲಂಡನ್ ದಾಳಿಯಲ್ಲಿ ಖಾಲಿದ್ ಮಸೂದ್ ಏಕಾಂಗಿಯಾಗಿರಲಿಲ್ಲ. ಬರ್ಮಿಂಗ್ ಹ್ಯಾಮ್, ಇಸ್ಲಾಮಿಕ್ ಸ್ಟೇಟ್ ಉಗ್ರರ ನೇಮಕಾತಿ ಪ್ರದೇಶವೆಂದು ಕುಖ್ಯಾತಿ ಪಡೆದಿದೆ. ಖಾಲಿದ್ ಮಸೂದ್ ಈ ಹಿಂದೆ ವಾಸವಾಗಿದ್ದ ಲಂಡನ್ನಿನ ಉತ್ತರದಲ್ಲಿರುವ ಲ್ಯುಟನ್ ಪಟ್ಟಣದಲ್ಲೂ ಉಗ್ರರ ಪ್ರಭಾವ ಹೇರಳವಾಗಿದೆ. ಲಂಡನ್ ದಾಳಿಯಾದ ಕೆಲವೇ ಗಂಟೆಗಳ ಬಳಿಕ ಅನ್ಸಾರ್ ಅಲ್ ಮುಜಾಹಿದ್ದೀನ್ ಗುಂಪು ತನ್ನ ಆನ್ ಲೈನ್ ಫೋರಮ್ ನಲ್ಲಿ ಈ ಕೃತ್ಯದ ಹೊಣೆ ಹೊತ್ತುಕೊಳ್ಳುತ್ತದೆ. ಈ ಗುಂಪು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಗುರುತಿಸಿಕೊಂಡಿದೆಯಷ್ಟೇ ಅಲ್ಲದೇ ದಾಳಿಯಾದ ಮರುದಿನ ಇಸ್ಲಾಮಿಕ್ ಸ್ಟೇಟ್ ನ ವಾರ್ತಾ ವಿಭಾಗ 'ಅಮಾಕ್' ಖಾಲಿದ್ ಮಸೂದ್ ನನ್ನು "ಇಸ್ಲಾಮಿಕ್ ಸ್ಟೇಟ್ ನ ಯೋಧ" ಎಂದು ಗುರುತಿಸಿತ್ತು. ಹೀಗೆ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಪರಿಭಾವಿಸಿದ ಕ್ಷಣದಲ್ಲೇ ಆ ಪ್ರಕರಣ ಹಳ್ಳ ಹಿಡಿಯುತ್ತವೆ. ಇದೇ ಮಾದರಿಯಲ್ಲಿ ಇತ್ತೀಚಗೆ ನಡೆದ ಬರ್ಲಿನ್ ಮತ್ತು ನೀಸ್ ದಾಳಿಗಳನ್ನು ಗಮನಿಸಿದಲ್ಲಿ ಈ ಪ್ರಕರಣದ ರಹಸ್ಯ ಚುಕ್ಕೆಗಳನ್ನು ಜೋಡಿಸುವುದು ಕಷ್ಟಸಾಧ್ಯವೇನಲ್ಲ.
Image may contain: 1 person19 ಡಿಸೆಂಬರ್ 2016ರಂದು ಅನಿಸ್ ಅಮ್ರಿ ಎಂಬ ಟ್ಯುನಿಸಿಯನ್ ಉಗ್ರನೊಬ್ಬ ಟ್ರಕ್ ಒಂದನ್ನು ಬರ್ಲಿನ್ ನ ಮಾರುಕಟ್ಟೆಯೊಂದಕ್ಕೆ ನುಗ್ಗಿಸಿ ಹನ್ನೆರಡು ಜನರ ಸಾವಿಗೆ ಕಾರಣನಾಗಿದ್ದ. ಮೇಲ್ನೋಟಕ್ಕೆ ಇದು ಏಕಾಂಗಿಯಾಗಿ ಮಾಡಿದ ಕೃತ್ಯ ಅಥವಾ ಒಂಟಿ ತೋಳದ ದಾಳಿಯಂತಿದ್ದರೂ, ವಾಸ್ತವವಾಗಿ ಆ ದಾಳಿಯ ಹಿಂದೆ ಇಟಲಿ ಮೂಲದ ಇಸ್ಲಾಮಿಕ್ ಸ್ಟೇಟ್ ಮತ್ತು ಸ್ಥಳೀಯ ಉಗ್ರ ಜಾಲಗಳ ವ್ಯವಸ್ಥಿತ ಸಂಚಿತ್ತು! ದಾಳಿಯ ನಂತರದಲ್ಲಿ ಸಿಸಿಟಿವಿ ಕ್ಯಾಮರದಲ್ಲಿ ಅಮ್ರಿ ತನ್ನ ತೋರುಬೆರಳನ್ನು ತೋರಿಸಿ, ಇಸ್ಲಾಮಿಕ್ ಸ್ಟೇಟ್ ನ ವಿಶಿಷ್ಟ ಸಂಕೇತವನ್ನು ಪ್ರದರ್ಶಿಸಿದ್ದು ಸ್ಪಷ್ಟವಾಗಿತ್ತು. ದಾಳಿಯಾಗಿ ನಾಲ್ಕು ದಿನಗಳ ನಂತರ ಡಿಸೆಂಬರ್ 23ರಂದು ಮಿಲಾನ್ ನಗರದಲ್ಲಿ ಅಮ್ರಿ ಪೊಲೀಸ್ ಗುಂಡಿಗೆ ಬಲಿಯಾಗುತ್ತಾನೆ. ಇದಾದ ಬಳಿಕ ಬರ್ಲಿನ್ ದಾಳಿ ಒಂಟಿ ತೋಳದ ದಾಳಿಯಲ್ಲ ಎನ್ನುವುದು ರುಜುವಾತಾಗುತ್ತಾ ಸಾಗುತ್ತದೆ. ಅನಿಸ್ ಅಮ್ರಿಯ ಸಾವಿನ ನಂತರ ಇಸ್ಲಾಮಿಕ್ ಸ್ಟೇಟ್, ಆತ ತಮ್ಮ ಖಲೀಫ ಅಲ್ ಬಗ್ದಾದಿಗೆ ವಿಧೇಯನಾಗಿದ್ದ ಎಂಬ ಪುರಾವೆ ಒದಗಿಸುವಂಥ ವಿಡಿಯೋ ಬಿಡುಗಡೆ ಮಾಡುತ್ತದೆ. ಮತ್ತು ಅನಿಸ್ ಅಮ್ರಿ 'ಉಮ್ಮಾ'ಗೋಸ್ಕರ ಹುತಾತ್ಮನಾದ ವ್ಯಕ್ತಿ ಎಂದು ಬಿಂಬಿಸುತ್ತದೆ(ಜಿಹಾದಿಗಳು ಮತ್ತು ಇಸ್ಲಾಮಿಸ್ಟ್ ಗಳು 'ಮುಸ್ಲಿಂ ರಾಷ್ಟ್ರ'ಕ್ಕೆ ಸಮಾನಾರ್ಥಕವಾಗಿ 'ಉಮ್ಮಾ' ಎಂಬ ಪದ ಬಳಸುತ್ತಾರೆ). ಬರ್ಲಿನ್ ನಲ್ಲಿದ್ದ ಮಸೀದಿಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ನೇಮಕಾತಿ ನಡೆಯುತ್ತದೆ ಎಂಬ ಸಂದೇಹದ ಮೇಲೆ ಜರ್ಮನ್ ಅಧಿಕಾರಿಗಳು ಆ ಮಸೀದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಬರ್ಲಿನ್ ನಲ್ಲಿ ರಕ್ತದೋಕುಳಿ ನಡೆಸಿದ ಅಮ್ರಿ ದಾಳಿಗೆ ಮೊದಲು ಈ ಮಸೀದಿಗೆ ಭೇಟಿ ನೀಡಿದ್ದ. ಇಟಲಿಯಲ್ಲೂ ಕೂಡ ಅನೇಕ ಟ್ಯೂನಿಶಿಯನ್ ಪ್ರಜೆಗಳನ್ನು ಗಡಿಪಾರು ಮಾಡಲಾಗುತ್ತದೆ. ಈ ರೀತಿಯಾಗಿ ಬರ್ಲಿನ್ ದಾಳಿ ಒಂದು ವ್ಯವಸ್ಥಿತ ದಾಳಿಯಾಗಿತ್ತು ಎಂಬ ಸತ್ಯ ಬೆಳಕಿಗೆ ಬರುತ್ತದೆ.

14 ಜೂನ್ , 2016ರಂದು ಫ್ರಾನ್ಸಿನ ನೀಸ್ ನಗರ ಫ್ರೆಂಚರ ರಾಷ್ಟ್ರೀಯ ಸಂಭ್ರಮಾಚರಣೆ ಕಾರಾಗ್ರಹ ದಿನಾಚರಣೆಯ ( Bastille Day) ಸಂಭ್ರಮದಲ್ಲಿದ್ದಾಗ, ಮಹಮ್ಮದ್ ಲಾಹೊಜ್ ಬೌಹ್ಲೆಲ್ ಎಂಬ ಉಗ್ರನೊಬ್ಬ ಜನರ ಮೇಲೆ ಟ್ರಕ್ ಅನ್ನು ಅಡ್ಡಾದಿಡ್ಡಿ ಚಲಾಯಿಸುತ್ತಾನೆ. 84 ಜನ ಸಾವನ್ನಪ್ಪಿದರೆ 400 ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರುತ್ತಾರೆ. ಫ್ರೆಂಚ್ ಪೊಲೀಸರು ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸುತ್ತಾರೆ. ಅದರೆ ಐದು ವಾರಗಳ ನಂತರ ಫ್ರಾಂಕಾಯ್ಸ್ ಮಾಲಿನ್ಸ್, ನೀಸ್ ದಾಳಿಯ ಹಿಂದೆ ಜಿಹಾದಿಸ್ಟ್ ಗುಂಪುಗಳು ಹಲವು ತಿಂಗಳುಗಳು ವ್ಯವಸ್ಥಿತವಾಗಿ ಕಾರ್ಯವೆಸಗಿದ್ದನ್ನು ಸಾಕ್ಷಿ ಸಮೇತ ರುಜುವಾತುಪಡಿಸಿದ್ದರು. ಇದಾದ ನಂತರ ಈ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್, ದಾಳಿಗೆ ಕಾರಣನಾದ ದುಷ್ಕರ್ಮಿ ತನ್ನ ತೋರುಬೆರಳನ್ನು ಮೇಲೆತ್ತಿ ಇಸ್ಲಾಮಿಕ್ ಸ್ಟೇಟ್ ಸಂಕೇತ ಪ್ರದರ್ಶಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಫ್ರೆಂಚ್ ಸರಕಾರ ಮತ್ತು ಪೊಲೀಸರು ಆತುರದಿಂದ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸಿದ್ದರಾದರೂ ಈ ಮಾರಣಹೋಮ ಒಬ್ಬ ವ್ಯಕ್ತಿಯ ಕೆಲಸವಾಗಿರಲಿಲ್ಲ ಎನ್ನುವುದು ತಡವಾಗಿಯಾದರೂ ಅರಿವಾಗುತ್ತದೆ.

ಇಷ್ಟಕ್ಕೂ ಆಯಾ ದೇಶದ ಸರಕಾರ, ಪೊಲೀಸ್, ಗುಪ್ತಚರ ಅಥವಾ ಇನ್ನಿತರ ಭದ್ರತಾ ಪಡೆಗಳು, ಇಂಥ ದಾಳಿಗಳು ನಡೆದ ಕೂಡಲೇ  'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಕಟ್ಟಲು ಕಾರಣಗಳೂ ಇವೆ. ಇಂಥ ದಾಳಿಗಳಾದ ಕೂಡಲೇ, ಭದ್ರತಾ ವಿಫಲತೆ, ಗುಪ್ತಚರ ವೈಫಲ್ಯ ಮೊದಲಾದ ಪ್ರಶ್ನೆಗಳ ಸುರಿಮಳೆಯಿಂದಾಗಿ ಪೇಚಿಗೆ ಸಿಲುಕುವ ಸರಕಾರಕ್ಕೆ ಹುಲ್ಲುಕಡ್ಡಿಯಂತೆ ಆಸರೆಯಾಗುವುದು ಇದೇ 'ಒಂಟಿ ತೋಳದ ದಾಳಿ ತತ್ವ'! ಉದಾಹರಣೆಗೆ ಲಂಡನ್ ದಾಳಿಯಾದ ನಂತರ ಬ್ರಿಟಿಷ್ ರಕ್ಷಣಾ ಮಂತ್ರಿ ಮೈಕೆಲ್ ಫಾಲನ್ ಬಿಬಿಸಿಗೆ ಉತ್ತರಿಸಿದ ರೀತಿ, "ಈ ದಾಳಿ ಒಂಟಿ ತೋಳದ ದಾಳಿ, ವಾಹನ, ಚೂರಿ ಅಥವಾ ಇನ್ನಿತರ ದಿನನಿತ್ಯ ಸಾಮಾನ್ಯವಾಗಿ ಬಳಸುವ ವಸ್ತುಗಳನ್ನು ಬಳಸಿಕೊಂಡು ಮಾಡುವ ದಾಳಿಗಳನ್ನು ಊಹಿಸುವುದು ಕಷ್ಟಸಾಧ್ಯ..." ಒಂಟಿ ತೋಳದ ದಾಳಿ ಪ್ರಕರಣಗಳು ಹೆಚ್ಚಿನ ಯೋಜನೆಯಿಲ್ಲದೆ, ಹಠಾತ್ತನೆ ಸಂಭವಿಸುವುದರಿಂದ, ಇದನ್ನು ತಡೆಯಲು ಗುಪ್ತಚರ ಮಾಹಿತಿ ಮತ್ತಿನ್ನಿತರ ಭದ್ರತಾ ವ್ಯವಸ್ಥೆಗಳನ್ನು ಯೋಜಿಸುವುದು ಸಾಧ್ಯವಿಲ್ಲ ಎಂಬ ತರ್ಕದ ಆಧಾರದಲ್ಲಿ ಸರಕಾರ ಹೆಚ್ಚಿನ ಶ್ರಮವಿಲ್ಲದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು. ಈ ವಾದದಲ್ಲಿ ಸತ್ಯಾಂಶವಿರುವುದು ನಿಜವೇ ಆದರೂ, ಇತ್ತೀಚಿನ ಉಗ್ರ ಪ್ರಕರಣಗಳಲ್ಲಿ ಆಯಾ ದೇಶಗಳ ಸರಕಾರಗಳು ತಮ್ಮ ಭದ್ರತಾ ವೈಫಲ್ಯದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ 'ಒಂಟಿ ತೋಳದ ದಾಳಿ'ಯ ಕಟ್ಟುಕತೆ ಅಪ್ಯಾಯಮಾನವಾಗುತ್ತಿರುವುದು ಸುಳ್ಳಲ್ಲ.

ಸರಕಾರಗಳು ಮಾತ್ರವಲ್ಲದೇ ಭಯೋತ್ಪಾದಕ ಸಂಘಟನೆಗಳೂ ಈ 'ಒಂಟಿ ತೋಳ'ದ ಪರಿಕಲ್ಪನೆಯ ಪರವಾಗಿದ್ದಾರೆ. ಉಗ್ರರ ಲೆಕ್ಕಾಚಾರದ ಪ್ರಕಾರ, ಒಂಟಿ ತೋಳದ ದಾಳಿಯ ಪರಿಕಲ್ಪನೆಯನ್ನು ಜಗತ್ತು ನಂಬಿರುವ ತನಕ, ಪ್ರತಿ ಮುಸ್ಲಿಂ ವ್ಯಕ್ತಿಯನ್ನು ಅನುಮಾನದಿಂದ ನೋಡಲಾಗುತ್ತದೆ. ಈ ಮೂಲಕ ಉಗ್ರರಲ್ಲದ ಮುಸ್ಲಿಮರೂ ಕೂಡ ಮುಖ್ಯವಾಹಿನಿ ಸಮಾಜದೊಂದಿಗೆ ಬೆರೆಯಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಮೂಲಕ ಇಸ್ಲಾಮಿಕ್ ಸ್ಟೇಟ್ ನಂಥಾ ಸಂಘಟನೆಗಳು ನಿರಾತಂಕವಾಗಿ ತಮ್ಮ ದುರುದ್ದೇಶಗಳನ್ನು ಸಾಧಿಸಿಕೊಳ್ಳಬಹುದು! ಮಾಧ್ಯಮಗಳು ಅಥವಾ ಇನ್ಯಾವುದೋ ಒತ್ತಡಕ್ಕೆ ಮಣಿದು ಒಂಟಿ ತೋಳದ ಕಟ್ಟುಕತೆಯನ್ನು ಮುಂದಿಡುವ ಅನಿವಾರ್ಯತೆ ಸರಕಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಿಗಿವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಈ ಪ್ರವೃತ್ತಿ ಮುಂದುವರಿದರೆ ತೋಳ ಬಂತು ತೋಳ ಕಥೆಯಂತೆಯೇ, ಇವತ್ತು ವಿಶ್ವದಾದ್ಯಂಥ ಭದ್ರತಾ ವಲಯದಲ್ಲಿ ಪ್ರಚಲಿತದಲ್ಲಿರುವ ಒಂಟಿ ತೋಳದ ಕಟ್ಟುಕತೆ ಮುಂದೊಂದು ದಿನ ದುಬಾರಿಯಾಗಿ ಪರಿಗಣಿಸಬಹುದು.




(This article was published in Hosadigantha Newsapaper on 29 March 2017)

Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಭಾನುವಾರ, ಮಾರ್ಚ್ 26, 2017

ಪಾಕಿಸ್ತಾನದೊಳಗೆ ಪಶ್ತೂನ್ ಪ್ರತ್ಯೇಕತೆಯ ಕೂಗು

ಯುದ್ಧ, ಭಯೋತ್ಪಾದಕರಿಗೆ ಕುಮ್ಮಕ್ಕು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವಿರೋಧಿ ನಿಲುವುಗಳು, ಭಾರತ ವಿರೋಧಿ ರಹಸ್ಯ ಮೈತ್ರಿಗಳು, ಬುಡಮೇಲು ಕೃತ್ಯಗಳು (Subversion), ಹೀಗೆ ಪಾಕಿಸ್ತಾನ ಏನೆಲ್ಲಾ ಮಾಡುತ್ತದೆಯೋ ಅದರಲ್ಲೆಲ್ಲಾ, ಪಾಕಿಸ್ತಾನಕ್ಕೆ ಲಾಭವಿರದಿದ್ದರೂ ಭಾರತಕ್ಕೆ ನಷ್ಟವಾದರೆ ಸಾಕು ಎನ್ನುವಂಥಾ ವಿಚಿತ್ರ ವಿಕೃತ ಮನೋಭಾವವೊಂದು ಪಾಕಿಸ್ತಾನದಲ್ಲಿ ಬೇರೂರಿಬಿಟ್ಟಿದೆ. ತನ್ನ ತಟ್ಟೆಯಲ್ಲಿ ರಾಶಿ ಹೆಗ್ಗಣಗಳು ಬಿದ್ದಿದ್ದರೂ ಭಾರತದ ತಟ್ಟೆಯ ಮೇಲೆ ನೊಣವೊಂದನ್ನು ಹಾಕಿ ಸಂಭ್ರಮಿಸುವಂಥ ದಟ್ಟದರಿದ್ರ ಸ್ಥಿತಿಯಲ್ಲಿದೆ ಪಾಕಿಸ್ತಾನ! ಭಾರತದಿಂದ ಕಾಶ್ಮೀರವನ್ನು ಕಿತ್ತುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಈಗಿರುವ ಪ್ರದೇಶಗಳನ್ನೇ ಗಟ್ಟಿಮಾಡಿಕೊಳ್ಳಲಾಗದಂಥ ಪರಿಸ್ಥಿತಿಯೊಂದು ನಿರ್ಮಾಣವಾಗಿದೆ. ಪಾಕಿಸ್ತಾನದೊಳಗೆ ಜನಾಂಗೀಯ ರಾಷ್ಟ್ರೀಯತೆ ಮತ್ತು ಅಫಘಾನಿಸ್ತಾನದ ಅಫ್ಘನ್ ರಾಷ್ಟ್ರೀಯತೆಗಳು ಪ್ರತ್ಯೇಕ ಸಾರ್ವಭೌಮ ರಾಷ್ಟ್ರಗಳಾಗಲು ಹಾತೊರೆಯುತ್ತಿವೆ. ಪಾಕಿಸ್ತಾನದ ಹುಟ್ಟಿನಿಂದಲೇ ಈ ಎರಡು ರಾಷ್ಟ್ರೀಯತೆಗಳು ದೇಶದ ಭೌಗೋಳಿಕ ಸಮಗ್ರತೆಗೆಯನ್ನು ಅಲ್ಲಾಡಿಸುವ ಕೆಲಸದಲ್ಲಿ ನಿರತವಾಗಿರುವುದು, ಪಾಕಿಸ್ತಾನಕ್ಕೆ ನುಂಗಲೂ ಆಗದೇ ಇತ್ತ ಉಗುಳಲೂ ಮನಸ್ಸು ಬಾರದಂಥ ಬಿಸಿ ತುಪ್ಪ. ಪೂರ್ವ ಪಾಕಿಸ್ತಾನದಲ್ಲಿದ್ದ ಅಸಮಧಾನಗಳು ಮೂರ್ತ ರೂಪ ಪಡೆದುಕೊಂಡು ಬಾಂಗ್ಲಾದೇಶದ ನಿರ್ಮಾಣವಾದಾಗಿನಿಂದ, ಪ್ರತ್ಯೇಕತೆಯ ಧ್ವನಿ ಕೇಳಿ ಪಾಕಿಸ್ತಾನ ನಡುವಂತಾಗಿತ್ತು. ಪಾಕಿಸ್ತಾನದೊಳಗಿನ ಸಮಾಜವಾದಿಗಳು, ಬಲೂಚಿಗಳು, ಪಶ್ತೂನ್ ರಾಷ್ಟ್ರೀಯವಾದಿಗಳು  ಮತ್ತು ಅಫ್ಘನ್ ರಾಷ್ಟ್ರೀಯತೆಗಳ ಪಾಕಿಸ್ತಾನವನ್ನು ಪ್ರತ್ಯೇಕಿಸುವ ತವಕದಲ್ಲಿದ್ದಾರೆ. ಪ್ರತ್ಯೇಕತಾವಾದವನ್ನು ನಿವಾರಿಸಲು ಪಾಕಿಸ್ತಾನ ಮಾಡಿದಂಥ ದೊಂಬರಾಟಗಳು ಇನ್ನೊಂದಷ್ಟು ಅವ್ಯವಸ್ಥೆಗೆ ಕಾರಣವಾಯಿತಲ್ಲದೇ ಬೇರೇನನ್ನೂ ಸಾಧಿಸಲಿಲ್ಲ.

ಶೀತಲ ಸಮರದ ಸಮಯದಲ್ಲಿ, ಪ್ರತ್ಯೇಕತೆಯ ಕೂಗು ಬಲಿಷ್ಟಗೊಂಡಿತ್ತು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿದ್ದ ಎಲ್ಲಾ ಜನಾಂಗೀಯ ರಾಜಕೀಯ ಪಕ್ಷಗಳ ಪ್ರಭಾವವನ್ನು ಹತ್ತಿಕಲು ಪಾಕಿಸ್ತಾನೀ ಸರಕಾರ ಪ್ರಯತ್ನಿಸಿತ್ತಲ್ಲದೇ, ಈ ಜನಾಂಗೀಯ ಪಕ್ಷಗಳ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಿದ್ದು ಮಾತ್ರವಲ್ಲದೇ ಅವರ ವಿರುದ್ಧದ ವ್ಯವಸ್ಥಿತ ಪ್ರಚಾರವನ್ನೂ ಮಾಡಿತ್ತು. ಉದಾಹರಣೆಗೆ ಪಶ್ತೂನ್ ರಾಷ್ಟ್ರೀಯವಾದಿ ಪಕ್ಷಗಳಿಗೆ ದೇಶದ್ರೋಹಿ ಪಕ್ಷಗಳು ಎಂಬ ಹಣೆಪಟ್ಟಿ ಕಟ್ಟಿದ್ದಲ್ಲದೇ ಪಾಕಿಸ್ತಾನದ ಸ್ವಾತಂತ್ರ್ಯದ ವಿರೋಧಿಗಳು ಎಂಬಂತೆ ಬಿಂಬಿಸಲಾಯಿತು. ಇವಿಷ್ಟು ಸಾಲದೆಂಬಂತೆ ಪಾಕಿಸ್ತಾನೀ ಸರಕಾರಿ ಪ್ರಾಯೋಜಿತ ಅಪಪ್ರಚಾರಗಳು ಈ ಪಕ್ಷಗಳನ್ನು 'ರೆಡ್ ಕಾಂಗ್ರೆಸ್ಸಿ' ಎಂದು ಮೂದಲಿಸಿದ್ದವು. ಹೇಗಾದರೂ ಮಾಡಿ ಪಶ್ತೂನ್ ಪಕ್ಷಗಳ ಪ್ರಭಾವಕ್ಕೆ ಮಸಿ ಬಳಿಯಲೇಬೇಕು ಎಂದು ತೀರ್ಮಾನಿಸಿದ್ದ ಪಾಕಿಸ್ತಾನದ ಸರಕಾರ ಇತಿಹಾಸವನ್ನು ಕೆದಕಿ ತನಗೆ ಬೇಕಾದಂತೆ ಉಪಯೋಗಿಸಿಕೊಂಡಿತ್ತು. ಮೊದಲನೆಯದಾಗಿ ಸ್ವಾತಂತ್ರ್ಯಪೂರ್ವದಲ್ಲಿ ಪಶ್ತೂನ್ ಪಕ್ಷಗಳು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಜೊತೆ ಕೈಗೂಡಿಸಿದ್ದು ಮುಸ್ಲಿಂ ಲೀಗನ್ನು ಶತ್ರುವಂತೆ ನೋಡಿತ್ತು ಎಂಬ ಆರೋಪ ಮಾಡಲಾಯಿತು. ಎರಡನೆಯದಾಗಿ 1947ರಲ್ಲಿ ಪಾಕಿಸ್ತಾನದ ವಾಯುವ್ಯ ಗಡಿನಾಡು ಪ್ರದೇಶ (ಈಗಿನ ಖೈಬರ್ ಪಖ್ತುನ್ಖುವಾ) ಭಾರತಕ್ಕೆ ಅಥವಾ ಪಾಕಿಸ್ತಾನ ಸೇರುವ ವಿಚಾರವಾಗಿ ಜನಮತಗಣನೆಗೆ (Referendum) ಪಶ್ತೂನ್ ರಾಷ್ಟ್ರೀಯವಾದಿಗಳು ವಿರೋಧ ವ್ಯಕ್ತಪಡಿಸಿದ್ದರು ಎಂಬ ವಾದ. ಈ ಆಧಾರಗಳನ್ನಿಟ್ಟುಕೊಂಡು ಪಶ್ತೂನ್ ರಾಷ್ಟ್ರೀಯವಾದಿಗಳು ಭಾರತಕ್ಕೆ ಬೆಂಬಲ ನೀಡುತ್ತಿರುವವರು ಮತ್ತು ಪಾಕಿಸ್ತಾನಕ್ಕೆ ದ್ರೋಹ ಬಗೆಯುತ್ತಿರುವವರು ಎನ್ನುವ ರೀತಿಯಲ್ಲಿ ಪಶ್ತೂನ್ ಪಕ್ಷಗಳನ್ನು ಸಾರ್ವಜನಿಕವಾಗಿ ವರ್ಚಸ್ಸು ಕಳೆದುಕೊಳ್ಳುವಂತೆ ಮಾಡಲಾಯಿತು. ವಾಸ್ತವವಾಗಿ ಪಶ್ತೂನ್ ಗಳೇನೂ ಭಾರತದ ಪರವಾಗಿರಲಿಲ್ಲ. ಜನಮತಗಣನೆಯನ್ನು ಪಶ್ತೂನ್ ಗಳು ವಿರೋಧಿಸುವುದಕ್ಕೆ ಕಾರಣ ಅವರು ಪಾಕಿಸ್ತಾನ ಮತ್ತು ಭಾರತಗಳೆರಡಕ್ಕೂ ಸೇರಬಯಸದೆ ಪ್ರತ್ಯೇಕ 'ಪಶ್ತೂನಿಸ್ತಾನ್' ನಿರ್ಮಿಸುವ ಆಲೋಚನೆಯಲ್ಲಿದ್ದರು! ಮುಂದೆ ಪಾಕಿಸ್ತಾನದ ಪ್ರತ್ಯೇಕವಾಗಿ ಪಶ್ತೂನಿಸ್ತಾನ್ ಸ್ಥಾಪನೆ ಸಾಧ್ಯವಾಗದೇ, 1973ರಲ್ಲಿ ಪಾಕಿಸ್ತಾನ ಸರಕಾರ ಪಶ್ತೂನಿ ಪ್ರಾಂತ್ಯಗಳಿಗೆ ದೇಶದೊಳಗಡೆ ಸ್ವಾಯತ್ತ ಪ್ರದೇಶಗಳಾಗಿರುವ ಅವಕಾಶ ಕಲ್ಪಿಸಿಕೊಟ್ಟಿತು. ಆದರೆ ಇವತ್ತಿಗೂ ಪಶ್ತೂನ್ ರಾಷ್ಟ್ರೀಯವಾದಿಗಳು ಪಾಕಿಸ್ತಾನ ಕೊಟ್ಟಿರುವ ಸ್ವಾಯತ್ತತೆ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗಿದೆಯೇ ವಿನಃ ಆಚರಣೆಯಲ್ಲಿಲ್ಲ ಎಂಬ ಅಸಮಧಾನ ವ್ಯಕ್ತಪಡಿಸುತ್ತಾರೆ.
Image may contain: 1 person
ಅಫ್ಘನಿಸ್ತಾನವೂ ಕೂಡ ಪಶ್ತೂನಿಗಳ ಪರವಾದ ನೀತಿ ಅನುಸರಿಸತೊಡಗಿತ್ತಷ್ಟೇ ಅಲ್ಲದೇ ಡ್ಯೂರಾಂಡ್ ರೇಖೆಯನ್ನು ಗುರುತಿಸಲು ಸಾಧ್ಯವಿಲ್ಲ ಎಂದಿದ್ದು ಪಾಕಿಸ್ತಾನದ ಗಾಯಕ್ಕೆ ಉಪ್ಪು ಸವರಿದಂತಾಗಿತ್ತು. ಅಫಘಾನಿಸ್ತಾನ ಇನ್ನೂ ಸ್ವಲ್ಪ ಮುಂದುವರಿದು ಪಾಕಿಸ್ತಾನದ ಜನಾಂಗೀಯ ರಾಷ್ಟ್ರೀಯವಾದಿ ಪಕ್ಷಗಳಾದ ರಾಷ್ಟ್ರೀಯ ಅವಾಮಿ ಪಕ್ಷ ಮತ್ತಿತರ ಗುಂಪುಗಳಿಗೆ ಆಶ್ರಯ ನೀಡಲಾರಂಭಿಸಿತ್ತು. ಇತ್ತ ಕಡೆ ಪಾಕಿಸ್ತಾನವೂ ಇಂಥ ಅವಕಾಶವೊಂದಕ್ಕಾಗಿ ಕಾಯುತ್ತಿತ್ತೆನ್ನಿ. ಪಾಕಿಸ್ತಾನಕ್ಕೆ ಈ ಅವಕಾಶ 1970 ದಶಕಲ್ಲಿ ಅಫ್ಘನ್ ಇಸ್ಲಾಮಿಸ್ಟ್ ಗಳ ರೂಪದಲ್ಲಿ ಬಂದಿತ್ತು. ಸರ್ದಾರ್ ಮಹಮ್ಮದ್ ದಾವುದ್ ಖಾನ್ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದಾಗ ಕೆಲ ಅಫ್ಘನ್ ಇಸ್ಲಾಮಿಸ್ಟ್ ಗಳು ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಾರೆ. ಈ ಸಮಯದಲ್ಲೇ ಈ ಗುಂಪಿನ ಪ್ರಭಾವಶಾಲಿ ನಾಯಕರಲ್ಲೊಬ್ಬರಾದ ಮೌಲ್ವಿ ಹಬಿಬುರ್ ರೆಹಮಾನ್ (ಈತ ಅಫ್ಘಾನಿಸ್ತಾನದ ಇಸ್ಲಾಮಿಕ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದವನು ಮಾತ್ರವಲ್ಲದೇ ನುಝಾತ್-ಇ-ಇಸ್ಲಾಮಿ-ಅಫ್ಘಾನಿಸ್ತಾನ್ ಎಂಬ ಸಂಘಟನೆಯ ಸ್ಥಾಪಕರಲ್ಲೊಬ್ಬ), ಪಾಕಿಸ್ತಾನದಿಂದ ಮಿಲಿಟರಿ ಸಹಾಯವನ್ನು ಬೇಡುತ್ತಾರೆ. ಆಗಿನ ಪಾಕ್ ಪ್ರಧಾನಿ ಝುಲ್ಫೀಕರ್ ಆಲಿ ಭುಟ್ಟೋ ಈ ಅವಕಾಶವನ್ನು ಬಳಸಿಕೊಂಡು ಈ ಅಫ್ಘಾನಿ ಇಸ್ಲಾಮಿಸ್ಟ್ ಗಳನ್ನು ಅಫ್ಘಾನಿ ರಾಷ್ಟ್ರೀಯವಾದಿಗಳ ವಿರುದ್ಧ ಬಳಸಿಕೊಳ್ಳುತ್ತಾರೆ. ಸುಮಾರು 700 ಅಫ್ಘನ್ ಇಸ್ಲಾಮಿಸ್ಟ್ ಗಳಿಗೆ ಪಾಕಿಸ್ತಾನದ ವಿಶೇಷ ಎಸ್.ಎಸ್.ಜಿ ಪಡೆಯ ಮೂಲಕ ತರಬೇತಿ ನೀಡಿ ಅಫ್ಘಾನಿಸ್ತಾನದೊಳಗಡೆ ಕಳುಹಿಸಲಾಗುತ್ತದೆ. ಇದೇ 1354 ಅಮಲ್ಯಾಟ್ (1354 ಕಾರ್ಯಾಚರಣೆ). ಆದರೆ ಈ ಕಾರ್ಯಾಚರಣೆ ದಾರುಣವಾಗಿ ವಿಫಲವಾಗುತ್ತದೆಯಷ್ಟೇ ಅಲ್ಲದೇ ಹಬಿಬುರ್ ರೆಹಮಾನ್ ಸೇರಿದಂತೆ ಅನೇಕ ಅಫ್ಘನ್ ಇಸ್ಲಾಮಿಸ್ಟ್ ನಾಯಕರನ್ನು ಬಂಧಿಸಿ ನೇಣಿಗೇರಿಸಲಾಗುತ್ತದೆ.

ಅಫ್ಘಾನಿಸ್ತಾನ ಪಾಕಿಸ್ತಾನದ ಜನಾಂಗೀಯ ರಾಷ್ಟ್ರೀಯವಾದಿಗಳಿಗೆ ಮತ್ತು ಪ್ರತ್ಯೇಕತವಾದಿಗಳಿಗೆ ನೀಡುವ ಬೆಂಬಲಕ್ಕೆ ಎದುರೇಟು ನೀಡುವ ಯತ್ನದಲ್ಲಿ ಪಾಕಿಸ್ತಾನ ಅಫ್ಘನ್ ಇಸ್ಲಾಮಿಸ್ಟ್ ಗಳಿಗೆ ಬೆಂಬಲ ನೀಡುತ್ತಾ ವಿಚಿತ್ರವಾದ ಅಫ್ಘನ್ ನೀತಿಯೊಂದನ್ನು ಜಾರಿಯಲ್ಲಿಡುತ್ತದೆ. ಈ ಮೂಲಕ ಅಫ್ಘಾನಿಸ್ತಾನದ ವಿಸ್ತಾರವಾದಿ ನೀತಿ ಮತ್ತು ಡ್ಯೂರಾಂಡ್ ರೇಖೆಯ ಬಗೆಗಿನ ಅಫ್ಘನ್ ನಿಲುವುಗಳ ಮೇಲೂ ಪಾಕಿಸ್ತಾನ ಒತ್ತಡ ಹೇರುವಂತಾಯಿತು. ಮುಂದೆ ಅಫ್ಘನ್ ಜಿಹಾದ್ ನ ಸಂದರ್ಭದಲ್ಲಿ ಮಗದೊಮ್ಮೆ ಅಫ್ಘಾನಿ ಇಸ್ಲಾಮಿಸ್ಟ್ ಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತದೆ ಮತ್ತು1973-1975ರಲ್ಲಿ ಸುಮಾರು 700 ಜನರಿಗೆ ಆಶ್ರಯ ನೀಡಿದ್ದ ಪಾಕಿಸ್ತಾನ, ಈ ಬಾರಿ ಲಕ್ಷಗಟ್ಟಲೆ ಅಫ್ಘಾನಿ ಇಸ್ಲಾಮಿಸ್ಟ್ ಗಳಿಗೆ ಆಶ್ರಯ , ಮಿಲಿಟರಿ ತರಬೇತಿ ನೀಡುತ್ತದೆ. ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿ ಈ ಮುಜಾಹಿದ್ದೀನ್ ಗುಂಪನ್ನು ಪಾಕಿಸ್ತಾನ ತನ್ನ ಸ್ವಾರ್ಥ ಸಾಧನೆಗಳಿಗಾಗಿ ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯವಾದಿಗಳ ವಿರುದ್ಧ ಛೂ ಬಿಡುತ್ತದೆ. ಈ ರೀತಿಯಾಗಿ ಪಾಕಿಸ್ತಾನ ಉಗ್ರ ಪಾನ್-ಇಸ್ಲಾಮಿಕ್ ಶಕ್ತಿಯೊಂದರ ಬೆಳವಣಿಗೆಗೆ ಕಾರಣವಾಗುತ್ತದೆ. ಸೈದ್ಧಾಂತಿಕವಾಗಿ ಮುಸ್ಲಿಂ ಬ್ರದರ್ ಹುಡ್ ಮತ್ತು ಜಮಾತ್-ಇ-ಇಸ್ಲಾಮಿಯಂಥ ಪ್ರಭಾವದಿಂದ ಅಫ್ಘಾನಿಸ್ತಾನದಲ್ಲಿ ಹುಟ್ಟಿಕೊಂಡ ಈ ಇಸ್ಲಾಮಿಕ್ ಉಗ್ರರನ್ನು ಪಾಕಿಸ್ತಾನ ಸೃಷ್ಟಿಸಲಿಲ್ಲ ಎಂಬ ವಾದವಿದೆ. ಆದರೆ ತನ್ನ ಸ್ವಾರ್ಥಕ್ಕೋಸ್ಕರ ಈ ಉಗ್ರರನ್ನು ದೈತ್ಯ ಶಕ್ತಿಯಾಗುವಂತೆ ಬೆಂಬಲ ನೀಡಿ, ವಿಶ್ವ ಶಾಂತಿಯನ್ನೇ ಕಾಡುವ ಆಧುನಿಕ ಭಸ್ಮಾಸುರರನ್ನಾಗಿ ಬೆಳೆಸಿದ ಕುಖ್ಯಾತಿ ನಿಸ್ಸಂಶಯವಾಗಿ ಪಾಕಿಸ್ತಾನಕ್ಕೆ ಸೇರುತ್ತದೆ.

ಸ್ವತಃ ಮುಜಾಹಿದ್ ಆಗಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಪ್ರಕಾರ ಅಫ್ಘನ್ ಜಿಹಾದ್ ನ ಸಂಧರ್ಭದಲ್ಲಿ ಪಾಕಿಸ್ತಾನ ಇಸ್ಲಾಮಿಸ್ಟ್ ಗಳನ್ನು ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯವಾದಿಗಳ ವಿರುದ್ಧ ಹೋರಾಡುವಂತೆ ಮಾಡಿತ್ತು.  ಇದೇ ಕರ್ಜಾಯಿ 2003ರಲ್ಲಿ ಅಮೆರಿಕಾದ ರಾಯಭಾರಿ ಡಾನಾ ರೊಹ್ರಾಬ್ಯಾಚರ್ ಗೆ ಹೇಳಿದ ವಿಷಯಗಳು ಮುಂದೆ ವಿಕಿಲೀಕ್ಸ್ ಬಿಡುಗಡೆ ಮಾಡುತ್ತದೆ. ಆ ಸಾರಾಂಶ ಹೀಗಿದೆ. "ಪಶ್ತೂನ್ ರಾಷ್ಟ್ರೀಯವಾದಿಗಳು ಜಾತ್ಯಾತೀತರು. ಪಶ್ತೂನ್ ರಾಷ್ಟ್ರೀಯತೆಯ ವಿರುದ್ಧ ಹೋರಾಡಲು ಪಾಕಿಸ್ತಾನವೇ ತಾಲಿಬಾನನ್ನು ಹುಟ್ಟುಹಾಕುತ್ತದೆ. ಪಶ್ತೂನ್ ಜನಾಂಗ ಹೆಚ್ಚಿರುವ ಪಶ್ತೂನಿಸ್ತಾನ್ ಮುಂದೆ ಪ್ರತ್ಯೇಕ ರಾಷ್ಟ್ರವಾಗಬಹುದು ಎಂಬ ಭಯದಿಂದಾಗಿ ಪಾಕಿಸ್ತಾನ ವ್ಯವಸ್ಥಿತವಾಗಿ ಪಶ್ತೂನ್ ರಾಷ್ಟ್ರೀಯವಾದವನ್ನು ನಾಶಮಾಡಲಾರಂಭಿಸುತ್ತದೆ. ಪಾಕಿಸ್ತಾನಿ ಪಶ್ತೂನ್ ಗಳನ್ನು ಇಸ್ಲಾಮಿಕರಣಗೊಳಿಸಿ, ಅಫ್ಘನ್ ಪಶ್ತೂನ್ ಗಳನ್ನು ಕೊಂದು ಪಶ್ತೂನ್ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯನ್ನೇ ತೊಡೆದುಹಾಕಲು ನಿರ್ಧರಿಸಿತ್ತು ಪಾಕ್! ಮೂಲಭೂತವಾದಿ ಇಸ್ಲಾಂ ಅಫ್ಘಾನಿಸ್ತಾನವನ್ನು ಆಳಬೇಕು ಎನ್ನುವುದು ಪಾಕಿಸ್ತಾನದ ಗುರಿ." ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ನಲ್ಲಿ ಹಮೀದ್ ಕರ್ಜಾಯಿ ಭಾಷಣದಲ್ಲಿ ಈ ಮಾತುಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಾ, ಪಾಕಿಸ್ತಾನ, ಅಫ್ಘನ್ನರ 'ಅಫ್ಘಾನೀಯತೆ'ಯನ್ನೇ (Afghanness) ನಾಶಮಾಡಿ 'ಪಾನ್-ಇಸ್ಲಾಮಿಕ್' ಅಸ್ಮಿತೆಯನ್ನು ಬಲವಂತವಾಗಿ ತುಂಬುವ ಪ್ರಯತ್ನ ಮಾಡಿತ್ತು ಎಂದಿದ್ದರು. ಶೀತಲ ಸಮರೋತ್ತರದಲ್ಲಿ ಪಾಕಿಸ್ತಾನ, ಪಶ್ತೂನ್ ಗಳ ಸ್ಥಿತಿಗತಿಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾ ವಿಶ್ವಸಮುದಾಯದ ಕಣ್ಣಿಗೆ ಮಣ್ಣೆರಚುವ ಪ್ರಯತ್ನವೊಂದನ್ನು ಜಾರಿಯಲ್ಲಿಟ್ಟಿದೆ. ಆದರೆ ಪಾಕಿಸ್ತಾನದ ಕಾಳಜಿ ಪಾಕ್ ಪರವಾಗಿರುವ ಮುಜಾಹಿದ್ ಪಶ್ತೂನ್ ಮತ್ತು ತಾಲಿಬಾನಿ ಪಶ್ತೂನ್ ಗಳಿಗೆ ಮಾತ್ರ ಸೀಮಿತಗೊಂಡಿದೆ ಎನ್ನುವುದು ಇವತ್ತಿಗೆ ಬ್ರಹ್ಮರಹಸ್ಯವೇನಲ್ಲ. ಇವತ್ತಿಗೂ ನಿಜವಾದ ರಾಷ್ಟ್ರೀಯವಾದಿ ಪಶ್ತೂನ್ ಗಳ ಹೆಸರು ಕೇಳಿದರೂ ಪಾಕಿಸ್ತಾನ ಬೆಚ್ಚಿಬೀಳುತ್ತದೆ!

ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯತೆಯನ್ನು ಹತ್ತಿಕ್ಕಲು ಪಾಕಿಸ್ತಾನ ಪಡಬಾರದ ಪಾಡುಪಟ್ಟಿದೆ. ತನ್ನದೇ ವಿಕೃತ ಕಲ್ಪನೆಗಳಿಂದ ಏಷ್ಯಾ ಮಾತ್ರವಲ್ಲದೇ ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲೂ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇಷ್ಟೆಲ್ಲಾ ಮಾಡಿದ ಬಳಿಕವೂ ಪಾಕಿಸ್ತಾನಕ್ಕೆ ಇದರಿಂದ ಒಳಿತೇನಾಗಿಲ್ಲ. ಪಾಕಿಸ್ತಾನ ಆಶ್ರಯ ಮತ್ತು ತರಬೇತಿ ನೀಡಿ ಸಿದ್ಧಗೊಳಿಸಿದ ಇಸ್ಲಾಮಿಸ್ಟ್ ಗುಂಪುಗಳು, ಇದೀಗ ಅಫ್ಘಾನಿಸ್ತಾನ ಸೇರಿಕೊಂಡು ಪಾಕಿಸ್ತಾನಕ್ಕೆ ಉಲ್ಟಾ ಹೊಡೆದಿವೆ. ಪಾಕಿಸ್ತಾನ ತನ್ನ ಪರವಾಗಿದ್ದಾರೆ ಎಂದು ನಂಬಿದ್ದ ತಾಲಿಬಾನಿಗಳು ಈಗ ತಿರುಮಂತ್ರ ಹೇಳುತ್ತಿದ್ದಾರೆ. ಪಾಕ್ ವಿರೋಧಿ ಅಫ್ಘನ್ ಸರಕಾರಗಳಂತೆಯೇ ತಾಲಿಬಾನ್ ಕೂಡ ಡ್ಯೂರಾಂಡ್ ರೇಖೆಯಿದೆ ಎನ್ನುವುದನ್ನೇ ಮರೆತಿದ್ದಾರೆ! ಉಗ್ರರನ್ನು ಬಳಸಿಕೊಂಡು ತನಗೆ ಬೇಕಾದದ್ದನ್ನು ಪಡೆಯಬಹುದು ಎಂದುಕೊಂಡಿದ್ದ ಪಾಕಿಸ್ತಾನದ ಹುಲಿ ಸವಾರಿ ಅಂತ್ಯವಾದಾಗ ಇಳಿಯಲೂ ಆಗದೆ, ಮುಂದೆ ಸಾಗಲೂ ಆಗದಿರುವ ಪರಿಸ್ಥಿತಿಯಲ್ಲಿದೆ! ಪಾಕಿಸ್ತಾನ ಭಾರತ ಮತ್ತು ಕಾಶ್ಮೀರದ ಚಿಂತೆ ಕೈಬಿಟ್ಟು ತನ್ನ ಸಮಗ್ರತೆಯತ್ತ ಗಮನಹರಿಸದೇ ಹೋದಲ್ಲಿ ಪಾಕಿಸ್ತಾನ ಹೋಳುಗಳಾಗುವ ದಿನ ದೂರವಿಲ್ಲ.

(This article was published in Hosadigantha Newsapaper on 22 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಏನಿದು ಯಜಿಡಿ ಯಾತನೆ.?

ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತವರ 'ಖಲಿಫೇಟ್' ಹುಚ್ಚು ಕನಸು ವಿಶ್ವದಾದ್ಯಂತ ಹಲವೆಡೆ ಪ್ರಕ್ಷುಬ್ಧ ಪರಿಸ್ಥಿತಿಗಳ ನಿರ್ಮಾಣಕ್ಕೆ ಕಾರಣವಾಗಿದೆ. ಒಂದೆಡೆ ಕರ್ದಿಶ್ ನ ಪೆಶ್ಮರ್ಗಾ, ಇರಾಕ್ ಸೇನೆಗಳು ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಸಮರ ಸಾರಿದ್ದರೆ, ಇನ್ನೊಂದೆಡೆ ವಿಶ್ವದ ಎಲ್ಲಾ ಪ್ರಮುಖ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಉದ್ಧಟತನವನ್ನು ಖಂಡಿಸಿವೆ. ಹಿಂಸೆ, ಸಿದ್ಧಾಂತ ಮತ್ತು ಶಕ್ತಿ ರಾಜಕೀಯದ ಲೆಕ್ಕಾಚಾರಗಳ ಮೇಲಾಟದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅತಿಯಾಗಿ ಶೋಷಣೆಗೊಳಗಾಗಿರುವ ಜನಾಂಗವೊಂದು ಯಾರ ಕಣ್ಣಿಗೂ ಬಿದ್ದಿಲ್ಲ. ತನ್ನ ಅಸ್ತಿತ್ವದೊಂದಿಗೆ ಅಭದ್ರತೆಯ ಭಾವನೆಯನ್ನು ಹೊತ್ತು ತಂದ, ಈ ವರೆಗೂ ಎಪ್ಪತ್ತಕ್ಕಿಂತಲೂ ಹೆಚ್ಚಿನ ಮಾರಣಹೋಮಗಳಿಗೆ ಬಲಿಯಾದ, ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತದಾಹಕ್ಕೆ ಬಲಿಯಾಗುತ್ತಿರುವ ಯಜಿಡಿ ಎನ್ನುವ ಜನಾಂಗ ಯಾವ ಮುಖ್ಯವಾಹಿನಿ ಚರ್ಚೆಯಲ್ಲೂ ಸ್ಥಾನ ಪಡೆದುಕೊಳ್ಳುತ್ತಿಲ್ಲ. ಯಜಿಡಿಗಳು ಮಧ್ಯಪ್ರಾಚ್ಯದ ಅಲ್ಪಸಂಖ್ಯಾತ ಜನಾಂಗಗಗಳಲ್ಲೊಂದು. ಈ ಜನಾಂಗದ ಜನಸಂಖ್ಯೆಯ ಕುರಿತಾಗಿ ಅಸ್ಪಷ್ಟ ಮಾಹಿತಿಗಳಿವೆ. ವಿಭಿನ್ನ ಆಧಾರಗಳು ನೀಡುವ ಮಾಹಿತಿಯಂತೆ ಜಗತ್ತಿನಾದ್ಯಂತ  70,000 ದಿಂದ 500,000 ಯಜಿಡಿಗಳಿದ್ದಾರೆ. ಇದೊಂದು ಅಲ್ಪಸಂಖ್ಯಾತ ಮತವಾಗಿದ್ದು ಕಾಲಕ್ರಮೇಣ ಅಳಿವಿನತ್ತ ಸಾಗುತ್ತಿರುವುದು ರುಜುವಾತಾಗಿದೆ. ಯಜಿಡಿಗಳ ಇನ್ನೊಂದು ವಿಶೇಷತೆಯೆಂದರೆ ಯಾರೊಬ್ಬರೂ ಯಜಿಡಿಯಿಸಂಗೆ ಮತಾಂತರವಾಗುವಂತಿಲ್ಲ, ಹುಟ್ಟಿನಿಂದಲೇ ಯಜಿಡಿಯಾಗಿರಬೇಕೆ ವಿನಃ ಮತಾಂತರದಿಂದ ಯಜಿಡಿಯಾಗಲು ಅಸಾಧ್ಯ!

ಮೆಸೊಪೊಟಾಮಿಯಾ ನಾಗರಿಕತೆಯ ಜೊತೆಗೆ ತಳುಕು ಹಾಕಿಕೊಂಡಿರುವ ಯಜಿಡಿಗಳ ಇತಿಹಾಸ, ಒಂದು ವಿಚಿತ್ರ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ಝೊರಾಸ್ಟ್ರಿಯನಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದಿಗಳ ಆಚಾರ ವಿಚಾರಗಳ ಪ್ರಭಾವವನ್ನು ಈ ಜನಾಂಗದಲ್ಲಿ ಕಾಣಬಹುದಾದರೂ, ಯಜಿಡಿಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯವೇನೆಂದರೆ, ಯಜಿಡಿಗಳ ಅನೇಕ ಸಂಪ್ರದಾಯಗಳು, ಲಾಂಛನಗಳು ಇನ್ನಿತರ ವಿಚಾರಗಳು ಹಿಂದೂ ಧರ್ಮವನ್ನು ಹೋಲುತ್ತವೆ. ಕೆಲ ವಿಶ್ಲೇಷಕರು ಯಜಿಡಿಗಳ ಚರಿತ್ರೆಗೆ ಹಿಂದೂ ಧರ್ಮದ ಕೊಂಡಿಗಳಿರುವುದು ಮತ್ತು ಮುಖ್ಯವಾಗಿ ತಮಿಳು ಸಂಸ್ಕೃತಿಯೊಂದಿಗೆ ಯಜಿಡಿ ಸಂಸ್ಕೃತಿ ಬೆಸೆದುಕೊಂಡಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ನೀಡುತ್ತಾರೆ. ತಮಿಳು ಸಂಸ್ಕೃತಿಯಲ್ಲಿ ಯಜ್ ಎನ್ನುವ ಸಂಗೀತ ಉಪಕರಣವೊಂದು ಬಳಕೆಯಲ್ಲಿದ್ದು, ತಿರುವಳ್ಳುವರ್ ಬರೆದ ಪ್ರಖ್ಯಾತ ಕೃತಿ 'ತಿರುಕ್ಕುರಲ್'ನಲ್ಲಿಯೂ ಈ ಬಗ್ಗೆ ಉಲ್ಲೇಖಗಳಿವೆ. ಪದದ ನಿಷ್ಪತ್ತಿಯ (Etymology) ಆಧಾರದಲ್ಲೂ ಯಜಿಡಿ ಮತ್ತು ಯಜ್ ಗಳಿಗೆ ಸಂಬಂಧವಿದೆ. ಯಜಿಡಿಗಳು ನವಿಲು ದೇವತೆಯನ್ನು ಪೂಜಿಸುತ್ತಿದ್ದು, ತಮಿಳರು ಪೂಜಿಸುವ ಮುರುಗನ ವಾಹನವೂ ನವಿಲು! ತಮಿಳಿನಲ್ಲಿ ನವಿಲಿಗೆ "ಮೈಲ್" ಎಂದರೆ ಯಜಿಡಿಗಳು ತಮ್ಮ ನವಿಲು ದೇವತೆಯನ್ನು "ಮೆಲೆಕ್ ಟವಾಸ್" ಎನ್ನುತ್ತಾರೆ! ತಮಿಳು ಅಸ್ಮಿತೆ ಮಾತ್ರವಲ್ಲದೇ ವಿಶಾಲ ಹಿಂದೂಧರ್ಮದ ಆಚಾರ ವಿಚಾರಗಳ ಜೊತೆಗೆ ಯಜಿಡಿ ಸಂಪ್ರದಾಯಗಳಿಗೆ ಸಾಮ್ಯತೆಯಿರುವ ನಿದರ್ಶನಗಳು ಸಾಕಷ್ಟಿವೆ. ಬಹಳ ವರ್ಷಗಳ ಹಿಂದೆ ಯಜಿಡಿಗಳು ಹಿಂದೂ ಧರ್ಮದಿಂದ ಬೇರ್ಪಟ್ಟ ಒಂದು ಗುಂಪಾಗಿರಬಹುದು ಎಂಬ ವಾದಗಳೂ ಇವೆಯಾದರೂ ಯಜಿಡಿಗಳಲ್ಲಿ ಇತರ ಆಚರಣೆಗಳೂ ಗಮನಾರ್ಹ ಪ್ರಮಾಣದಲ್ಲಿರುವುದೂ ಅಷ್ಟೇ ಸತ್ಯ.
Image may contain: 1 personಯಜಿಡಿಗಳೆಂದರೆ "ದೇವರ ಆರಾಧಕರು" ಎಂದರ್ಥ. ಆದರೆ ಐತಿಹಾಸಿಕವಾಗಿ ಯಜಿಡಿ ಜನಾಂಗವನ್ನು ದೆವ್ವ/ದುಷ್ಟಶಕ್ತಿಯ ಆರಾಧಕರು ಎಂದು ಸುತ್ತಲಿದ್ದ ಅರಬ್ಬರು ಮತ್ತು ಟರ್ಕರು ತಪ್ಪಾಗಿ ಪರಿಭಾವಿಸಿದ್ದರು. ಈ ತಪ್ಪು ಪರಿಕಲ್ಪನೆಯಿಂದಾಗಿ ಯಜಿಡಿಯಿಸಂ ನಿರಂತರವಾಗಿ ಅರಬ್ ಮತ್ತು ಟರ್ಕ್ ದಾಳಿಗಳಿಗೆ ಒಳಗಾಯಿತು. ಮೂಲತಃ ಅತ್ಯಂತ ಶಾಂತಿಯುತ ಜನಾಂಗವಾಗಿದ್ದ ಯಜಿಡಿಯಿಸಂ ತಪ್ಪು ಕಲ್ಪನೆಗಳಿಂದಾಗಿ ಕ್ರಿಶ್ಚಿಯನ್ನರ ಅವಗಣನೆಗೂ ಒಳಗಾಗಬೇಕಾಯ್ತು! ಯಜಿಡಿಗಳು, ಇಸ್ಲಾಂ ಸಂಪ್ರದಾಯದಂತೆ ಒಬ್ಬನೇ ದೇವರಲ್ಲಿ ನಂಬಿಕೆಯಿರುವವರು. ಯಜಿಡಿ ಪುರಾಣಗಳು ಹೇಳುವಂತೆ ಯಜಿಡಿಗಳ ದೇವರು ಖುಡೆ, ಏಳು ದೇವತೆಗಳನ್ನು ಸೃಷ್ಟಿಸಿ ಅವರಿಗೊಬ್ಬ ಮೆಲೆಕ್ ಟಾವಸ್ (ನವಿಲು ದೇವತೆ) ಎಂಬ ನಾಯಕನನ್ನೂ ಸೃಷ್ಟಿಸುತ್ತಾನೆ. ಹೀಗೆ ದೇವರಿಂದ ನಿಯೋಜಿಸಲ್ಪಟ್ಟ ಮೆಲೆಕ್ ಟಾವಸ್ ಭೂಮಿಯ ಅವ್ಯವಸ್ಥೆಯನ್ನು ಸರಿಪಡಿಸಿ ಮನುಷ್ಯ ಮತ್ತು ದೇವರ ನಡುವಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ವಿಪರ್ಯಾಸವೆಂದರೆ, ಈ ಪುರಾಣದ ಕಥೆಯೇ ಯಜಿಡಿ ಜನಾಂಗದ ಮೇಲೆ ಪದೇ ಪದೇ ಮಾರಣಹೋಮಗಳಿಗೂ ಕಾರಣವಾಗುತ್ತದೆ. ದುರದೃಷ್ಟವಶಾತ್ ಯಜಿಡಿ ಪುರಾಣದಲ್ಲಿ ಬರುವ ನವಿಲು ದೇವತೆ ಮೆಲೆಕ್ ಟಾವಸ್ ಮತ್ತು ಇಸ್ಲಾಂ ನಲ್ಲಿ ಬರುವ ಸೈತಾನನ ಕಥೆಗೂ ಅಚ್ಚರಿ ಎನಿಸುವಷ್ಟು ಸಾಮ್ಯತೆಗಳಿವೆ! ಯಜಿಡಿಗಳು ಪೂಜಿಸುವ ಮೆಲೆಕ್ ಟವಾಸ್ ನನ್ನೇ, ತಮ್ಮ ಅಲ್ಲಾನ ವಿರೋಧಿ ಸೈತಾನ ಎಂದುಕೊಂಡ ಟರ್ಕರು ಮತ್ತು ಅರಬ್ಬರು ಹದಿನೈದನೇ ಶತಮಾನದಿಂದಲೂ ನಿರಂತರವಾಗಿ ಯಜಿಡಿಗಳ ರಕ್ತ ಹರಿಸುತ್ತಿದ್ದಾರೆ. ಇದುವರೆಗೂ ಎಪ್ಪತ್ತಕ್ಕಿಂತಲೂ ಹೆಚ್ಚಿನ ಮಾರಣಹೋಮಗಳಿಗೆ ಬಲಿಯಾದ ದುರಂತ ಕಥೆ ಯಜಿಡಿಗಳದ್ದು! ಕತ್ತಿಯೇಟಿನಿಂದ ತಪ್ಪಿಸಿಕೊಂಡ ಯಜಿಡಿಗಳು ಉತ್ತರ ಇರಾಕಿನ ಪರ್ವತಶ್ರೇಣಿಗಳಲ್ಲಿ ಕರ್ದಿಶ್ ಜನರೊಂದಿಗೆ ಆಶ್ರಯ ಪಡೆದರು. ಬಹಳಷ್ಟು ತಲೆಮಾರುಗಳ ಹಿಂದೆ ತಾವು ಕೂಡ ಪುರಾತನ ಯಜಿಡಿಯಿಸಂಗೆ ಸೇರಿದ್ದವರು ಎಂಬ ನಂಬಿಕೆ ಅನೇಕ ಕರ್ದಿಶ್ ಜನರಲ್ಲಿದೆ. ಹೀಗಾಗಿ ಆಶ್ರಯಕ್ಕಾಗಿ ಬಂದ ಯಜಿಡಿಗಳನ್ನು, ತಮ್ಮ ಹಳೆಯ ಸಂಪ್ರದಾಯ ಸಂಸ್ಕೃತಿಗಳ ದ್ಯೋತಕವಾಗಿ ಕರ್ದಿಶ್ ಜನರು ಪರಿಗಣಿಸುತ್ತಾರೆ. ಆದರೆ ಇತ್ತೀಚಿನ ಬೆಳವಣಿಗೆಗಳ ಜೊತೆ ಕರ್ದಿಶ್ ಪೆಶ್ಮರ್ಗಾ ಸೇನೆ ಮತ್ತು ಯಜಿಡಿಗಳ ಮಧ್ಯೆ ಭಿನಾಭಿಪ್ರಾಯಗಳು ಬಗೆಹರಿಸಲಾರದಷ್ಟು ವಿಕೋಪಕ್ಕೆ ಹೋಗಿವೆ.

ಸತತವಾಗಿ ಭಯ ಭೀತಿಯಿಂದಲೇ ಕಾಲ ಸವೆಸಿದ ಯಜಿಡಿಗಳ ನಿದ್ದೆಗೆಡಿಸಲು ಇದೀಗ ಇಸ್ಲಾಮಿಕ್ ಸ್ಟೇಟ್ ಅಬ್ಬರಿಸುತ್ತಿದೆ. ಇಸ್ಲಾಮಿಕ್ ಸ್ಟೇಟ್ ತನ್ನ ಹುಟ್ಟಿನೊಂದಿಗೇ ಯಜಿಡಿಗಳ ನರಮೇಧದತ್ತ ತನ್ನ ಚಿತ್ತ ನೆಟ್ಟಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ವೈರಿ ಎಂದು ಪರಿಗಣಿಸಿರುವ ಉಮಯ್ಯಾದ್ ಸಂತತಿಯ ಎರಡನೇ ಖಲೀಫ ಯಜಿಡ್ ಇಬಿನ್ ಮುಅವಿಯಾ ಮತ್ತು ಯಜಿಡಿ ಜನಾಂಗದ ಹೆಸರುಗಳಲ್ಲಿ ಸಾಮ್ಯತೆಯಿರುವುದರಿಂದ ಇಸ್ಲಾಮಿಕ್ ಸ್ಟೇಟ್ ಯಜಿಡಿಗಳ ಮೇಲೆ ತನ್ನ ವಕ್ರದೃಷ್ಟಿ ಬೀರಿದೆ. ಆದರೆ ಆಧುನಿಕ ಸಂಶೋಧನೆಗಳ ಪ್ರಕಾರ ಯಜಿಡ್ ಇಬಿನ್ ಮುಅವಿಯಾ ಗೂ ಯಜಿಡಿ ಜನಾಂಗಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ರುಜುವಾತಾಗಿದೆ. ಹೀಗೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ತಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೂ, ಯಜಿಡಿಗಳು ಕುರಾನ್ ಮತ್ತು ಬೈಬಲ್ ಗಳೆರಡನ್ನೂ ಪೂಜ್ಯ ದೃಷ್ಟಿಯಿಂದ ಕಾಣುತ್ತಾರೆ. ಈಗಾಗಲೇ 74 ನರಮೇಧಗಳಿಂದ ನಲುಗಿಹೋಗಿರುವ ಯಜಿಡಿಗಳು, ೨೦೦೪ರಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತಪಿಪಾಸುತನಕ್ಕೆ ಬಲಿಯಾಗುತ್ತಿದ್ದಾರೆ. ಕರ್ದಿಶ್ ಪೆಶ್ಮರ್ಗಾ ಸೇನೆಯೂ ಇದೀಗ ಯಜಿಡಿಗಳ ಬೆಂಬಲಕಿಲ್ಲ, ಪಾಶ್ಚಾತ್ಯ ರಾಷ್ಟ್ರಗಳಿಗೂ ಯಜಿಡಿಗಳ ಗೋಳು ಕೇಳಲು ಸಮಯವಿಲ್ಲ. ಮಧ್ಯಪ್ರಾಚ್ಯದ ಅತ್ಯಂತ ಪ್ರಾಚೀನ ಜನಾಂಗ/ಮತವಾಗಿರುವ ಯಜಿಡಿಗಳು ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಗೆ ಮತಾಂತರವಾಗಲು ಒಪ್ಪದಿರುವುದೇ ಇದಕ್ಕೆಲ್ಲಾ ಕಾರಣ. ಇಸ್ಲಾಮಿಕ್ ಸ್ಟೇಟ್ ಕಪಿಮುಷ್ಟಿಯಲ್ಲಿ ಸಿಲುಕುವ ಯಜಿಡಿಗಳಿಗೆ ಎರಡು ಅವಕಾಶಗಳಿರುತ್ತವೆ. ಒಂದೋ ಮತಾಂತರ ಇಲ್ಲವೇ ಸಾವು! ಹೆಣ್ಣಾಗಿದ್ದರೆ ಮೂರನೇ ಅವಕಾಶವೊಂದಿದೆ ಅದೇ ಗುಲಾಮಗಿರಿ!

ಇಸ್ಲಾಮಿಕ್ ಸ್ಟೇಟ್ ದುರಾಕ್ರಮಣವನ್ನು ನೋಡಿಕೊಂಡು ಯಜಿಡಿಗಳು ಕೈಕಟ್ಟಿ ಕುಳಿತಿಲ್ಲ. ಯಜಿಡಿಗಳ ಸ್ವತಂತ್ರ ಹೋರಾಟಗಾರರ ಗುಂಪೊಂದಿದೆ. ಮಟ್ಟಿಗೆ ತಮ್ಮ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಯಜಿಡಿಗಳು ಹೋರಾಡುತ್ತಿದ್ದಾರೆ. ಕರ್ದಿಶ್ ಸೇನೆಯೂ ಇಸ್ಲಾಮಿಕ್ ಸೇನೆಯ ವಿರುದ್ಧ ಹೋರಾಡುತ್ತಿದೆಯಾದರೂ ಇವರುಗಳ ಮಧ್ಯೆ ಸಮನ್ವಯತೆ ಇಲ್ಲ. 2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಯಾದಾಗ ಕರ್ದಿಶ್ ಪೆಶ್ಮರ್ಗಾ ಸೇನೆ ಯಜಿಡಿಗಳನ್ನು ಶತ್ರುವಿನ ಬಾಯಿಗೆ ತಳ್ಳಿ ತಾವು ತಪ್ಪಿಸಿಕೊಂಡಿದ್ದರು. ಹೀಗೆ ಪರಾರಿಯಾಗುವಾಗ ಆಯುಧಗಳ ಸಮೇತ ಪರಾರಿಯಾಗಿ ಅವರನ್ನೇ ನಂಬಿದ್ದ ಯಜಿಡಿಗಳಿಗೆ ನಂಬಿಕೆ ದ್ರೋಹವೆಸಗಿದ್ದನ್ನು ಇವತ್ತಿಗೂ ಯಜಿಡಿಗಳು ನೆನಪಿಸಿಕೊಳ್ಳುತ್ತಾರೆ. ಮಧ್ಯಪ್ರಾಚ್ಯದ ಬೃಹತ್ ಮೊಸುಲ್ ರಣರಂಗದಲ್ಲಿ ಯಜಿಡಿಗಳು ಅಲ್ಪಪ್ರಮಾಣದಲ್ಲಿದ್ದರೂ, ಕರ್ದಿಶ್ ಸೇನೆಯ ನಂಬಿಕೆ ದ್ರೋಹದ ನಂತರ ನಮ್ಮದೇ ಯುದ್ಧ, ನಾವೇ ಯೋಧರು ಎಂಬಂತೆ ಹೋರಾಟ ಮುಂದುವರಿಸಿರುವ ಯಜಿಡಿಗಳು ಸಿಂಜಾರ್ ನಗರವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

(This article was published in Hosadigantha Newsapaper on 16 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ನೂರು ವರ್ಷಗಳ ಹಿಂದೆ ನಡೆದ ಕ್ರಾಂತಿಯೊಂದರ ನೆನಪು

1917ರಲ್ಲಿ ರಷ್ಯಾ ಬೃಹತ್ ರಾಜಕೀಯ ಬದಲಾವಣೆಯೊಂದಕ್ಕೆ ಸಾಕ್ಷಿಯಾಗುತ್ತದೆ. ಸರಿಯಾಗಿ ನೂರು ವರ್ಷಗಳ ಹಿಂದೆ ವಿಶ್ವ ರಾಜಕೀಯದ ಪಥ ಬದಲಾಯಿಸುವಂಥಾ ಕ್ರಾಂತಿಯೊಂದು 1917ರ ಮಾರ್ಚ್ ನಲ್ಲಿ ನಡೆಯುತ್ತದೆ. ಕ್ರಾಂತಿ ನಡೆದಿದ್ದು ಮಾರ್ಚ್ ನಲ್ಲೇ ಆದರೂ ಅವತ್ತಿಗೆ ರಷ್ಯನ್ನರು ಪಾಲಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆ ಕ್ರಾಂತಿ ಫೆಬ್ರವರಿ ಕ್ರಾಂತಿ ಎಂದೇ ಪ್ರಸಿದ್ಧಿಯಾಗುತ್ತದೆ. ರಷ್ಯಾದ ಸರ್ವಾಧಿಕಾರಿ ದೊರೆಯಾಗಿದ್ದ ಝಾರ್ ದ್ವಿತೀಯ ನಿಕೊಲಾಸ್, ರಷ್ಯನ್ನರ ಆಕ್ರೋಶಕ್ಕೆ ಮಣಿದು ತನ್ನ ಪದತ್ಯಾಗ ಮಾಡಬೇಕಾಯ್ತು. ಇದೇ ಕ್ರಾಂತಿ ಮುಂದೆ ವಿಭಿನ್ನ ಸ್ವರೂಪ ಪಡೆದುಕೊಂಡು, ಅಕ್ಟೋಬರ್ ಕ್ರಾಂತಿಗೂ ದಾರಿ ಮಾಡಿಕೊಡುತ್ತದೆ. ವಿಶ್ವ ಭೂಪಟದಲ್ಲಿ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟದ ನಿರ್ಮಾಣಕ್ಕೂ ವೇದಿಕೆ ಸಿದ್ಧಗೊಳಿಸಿದ ಕ್ರಾಂತಿಯಿದು. ಆದರೆ ಗಮನಿಸಬೇಕಾದ ಅಂಶವೇನೆಂದರೆ ರಷ್ಯಾದಲ್ಲಿ ಕಮ್ಯುನಿಸಂ ನೆಲೆಗೊಳಿಸಿದ ಈ ಫೆಬ್ರವರಿ ಕ್ರಾಂತಿ, ಸೈದ್ಧಾಂತಿಕ ಕ್ರಾಂತಿಯಾಗಿರಲಿಲ್ಲ! ಯಾವ ಕಮ್ಯುನಿಸ್ಟ್ ನಾಯಕರೂ ಈ ಕ್ರಾಂತಿಯನ್ನು ಯೋಜಿಸಿರಲಿಲ್ಲ! ಮತ್ತು ಈ ಕ್ರಾಂತಿಯ ಹಾದಿಯನ್ನು ಯಾರೂ ಸಂಘಟಿಸಿರಲಿಲ್ಲ! ಅದೆಲ್ಲಕ್ಕಿಂತ ಮಿಗಿಲಾಗಿ, ಇಂಥ ಕ್ರಾಂತಿಯೊಂದರ ಕನಸಿನಲ್ಲೇ ವರ್ಷಗಳನ್ನು ಕಳೆದ ಲೆನಿನ್ ನೇತೃತ್ವದ ಬೊಲ್ಶೆವಿಕ್ ಗುಂಪು ಕೂಡ ಫೆಬ್ರವರಿ ಕ್ರಾಂತಿಯನ್ನು ಊಹಿಸಿರಲಿಲ್ಲ.!

ವ್ಲಾದಿಮಿರ್ ಲೆನಿನ್ ಪ್ರಕಾರ ಕ್ರಾಂತಿಯೊಂದು ಸಂಭವಿಸಬೇಕಾದಲ್ಲಿ ಮೂರು ಅಂಶಗಳ ಅವಶ್ಯಕತೆಯಿರುತ್ತದೆ. ಮೇಲ್ವರ್ಗಗಳ ಬಿಕ್ಕಟ್ಟು, ಶೋಷಿತ ವರ್ಗಗಳ ನೋವು ಮತ್ತು ಜನಸಾಮಾನ್ಯರು ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಕ್ರಾಂತಿಗೆ ಅವಶ್ಯಕ ಎಂದು ಲೆನಿನ್ ಹೇಳಿದ ಮೂರು ಅಂಶಗಳೂ 1917ರ ಮಾರ್ಚ್ ಗಿಂತ ಮೊದಲೇ ರಷ್ಯಾ ಪರಿಸ್ಥಿತಿಗೆ ಸರಿಹೊಂದುವಂತಿತ್ತು. ಲೆನಿನ್ ಹೇಳಿದ ಮೂರು ಅಂಶಗಳು ರಷ್ಯಾ ಸಮಾಜದಲ್ಲಿದ್ದಾಗ್ಯೂ ಹತ್ತಿಕೊಳ್ಳದ ಕ್ರಾಂತಿ ಕಿಡಿ, 1917ರ ಮಾರ್ಚ್ ನಲ್ಲಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ರಷ್ಯಾದಲ್ಲಿ ತಲೆಮಾರುಗಳಿಂದ ಬೇರೂರಿದ್ದ ಝಾರ್ ಸರ್ವಾಧಿಕಾರವನ್ನು ಬುಡಸಮೇತ ಕಿತ್ತುಹಾಕಿತ್ತು. ಸಿದ್ಧಾಂತದ ಗೊಡವೆಯಿಲ್ಲದೇ, ಯೋಜನೆಗಳ ನೀಲನಕ್ಷೆಯಿಲ್ಲದೇ, ಅಧಿಕೃತವಾಗಿ ಒಬ್ಬ ನಾಯಕನೂ ಇಲ್ಲದ ಈ ಕ್ರಾಂತಿ ರಷ್ಯಾದಲ್ಲಿ ಹೊಸ ಯುಗವೊಂದನ್ನು ತೆರೆದಿಟ್ಟಿತ್ತು.

Image may contain: 1 personರಷ್ಯನ್ ಚರಿತ್ರೆಯ ಬಗೆಗೆ ನಡೆದ ಅಧ್ಯಯನಗಳ ಪ್ರಕಾರ ಫೆಬ್ರವರಿ ಕ್ರಾಂತಿಗೆ ಮೂಲ ಕಾರಣ ಆ ಸಮಯದಲ್ಲಿ ರಷ್ಯಾವನ್ನು ಆವರಿಸಿದ ತೀವ್ರ ಚಳಿಯ ವಾತಾವರಣ. ತೀವ್ರ ಹಿಮಗಾಳಿ ಮತ್ತು ಹಿಮಪಾತದಿಂದಾಗಿ ರಷ್ಯಾದ ಜನಜೀವನ ಅಸ್ತವ್ಯಸ್ತವಾಗಿತ್ತಲ್ಲದೇ ರೈಲ್ವೆ ವ್ಯವಸ್ಥೆಯೂ ದಿಕ್ಕೆಟ್ಟು ನಿಂತಿತ್ತು. ಕಾರ್ಖಾನೆಗಳಿಗೂ ಬೀಗ ಜಡಿಯಲಾಗಿ, ಸಾವಿರಾರು ಹತಾಶ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಸಮಯಕ್ಕಾಗಿ ಕಾಯುತ್ತಿದ್ದರು. ಅನಿರೀಕ್ಷಿತವಾಗಿ ರಷ್ಯಾದ ವಾತಾವರಣ ಶೀತಲತೆಯಿಂದ ಬದಲಾಗಿ ಬಿಸಿಯೇರುತ್ತಿದ್ದಂತೆ, ರಷ್ಯನ್ ಕಾರ್ಮಿಕರು ಬೀದಿಗಿಳಿದುಬಿಟ್ಟಿದ್ದರು! ರಷ್ಯಾ ರಾಜಧಾನಿಯಲ್ಲಿ ಯಾವತ್ತೂ ಬರಿದಾಗದೇ ಇದ್ದ ಆಹಾರ ದಾಸ್ತಾನುಗಳ ಬಗೆಗೂ ವದಂತಿಗಳೂ ಹಬ್ಬಲಾರಂಬಿಸಿದವು. ರೈಲ್ವೇ ಸಂಪರ್ಕದಲ್ಲಾದ ತೊಡಕುಗಳಿಂದಾಗಿ ರಷ್ಯಾ ರಾಜಧಾನಿಯ ಕೆಲ ಅಂಗಡಿಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಸುಳ್ಳು ವದಂತಿಗಳನ್ನು ಇನ್ನಷ್ಟು ಬಲಪಡಿಸಿದ್ದವು. ಅನಾನುಕೂಲಕರ ವಾತಾವರಣ ಮತ್ತು ಆಹಾರದ ಕೊರತೆಯ ಕುರಿತಾಗಿ ಹಬ್ಬಿದ ಸುಳ್ಳು ಸುದ್ಧಿಗಳು ರಷ್ಯನ್ನರು ಯೋಚಿಸುವ ಧಾಟಿಯನ್ನು ಬದಲಾಯಿಸಿಬಿಟ್ಟಿದ್ದವು. ಆದರೆ ಕೇವಲ ಈ ಕಾರಣಗಳಿಂದಾಗಿಯೇ ಕ್ರಾಂತಿ ನಡೆಯುತ್ತದೆ ಎಂದುಕೊಂಡರೆ ಅದು ಖಂಡಿತ ಅತಿಶಯೋಕ್ತಿಯೇ ಸರಿ. ಯಾಕೆಂದರೆ ಈ ಹಿಂದೆಯೂ ಶೀತಲ ವಾತಾವರಣ ಮತ್ತು ಆಹಾರ ಸಮಸ್ಯೆ ರಷ್ಯಾ ರಾಜಧಾನಿಯನ್ನು ಕಾಡಿತ್ತಾದರೂ ಮತ್ತೆ ಆಹಾರ ಪೂರೈಕೆಯಾದಾಗ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇವಿಷ್ಟೇ ಅಲ್ಲದೇ ರಷ್ಯಾದ ಆಂತರಿಕ ಭದ್ರತೆಯ ಮುಖ್ಯಸ್ಥನಾಗಿದ್ದ ಅಲೆಕ್ಸಾಂಡರ್ ಪ್ರೊಟೊಪೊಪೊವ್, ಅನೇಕ ಸಮಾಜವಾದಿ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧನದಿಂದ ತಪ್ಪಿಸಿಕೊಂಡ ವ್ಲಾದಿಮಿರ್ ಲೆನಿನ್ ಮತ್ತು ಲಿಯೊನ್ ಟ್ರಾಟ್ ಸ್ಕಿ ಮುಂತಾದವರಿಗೆ ಕ್ರಾಂತಿಯೊಂದು ಸಂಭವಿಸಲಿದೆ ಎಂಬ ಕಲ್ಪನೆಯೂ ಇರಲಿಲ್ಲ!

ವಾತಾವರಣ ಮತ್ತು ಆಹಾರದ ಕೊರತೆಯಷ್ಟೇ ಕ್ರಾಂತಿಯ ಕಾರಣಗಳಾಗಿದ್ದರೆ ಝಾರ್ ರಾಜಪ್ರಭುತ್ವ ಯಾವತ್ತೋ ಅಧಿಕಾರ ಕಳೆದುಕೊಳ್ಳುತ್ತಿತ್ತು. ಆದರೆ ಈ ಕಾರಣಗಳ ಜೊತೆ ಜೊತೆಗೆ ಕೊನೆಯ ಝಾರ್ ರಾಜನಾಗಿದ್ದ ಎರಡನೇ ನಿಕೊಲಾಸ್ ವಿವೇಚನಾರಹಿತನಾಗಿ ಕೈಗೊಂಡ ಕೆಲ ತಪ್ಪು ರಾಜಕೀಯ ನಿರ್ಧಾರಗಳು ಕ್ರಾಂತಿಯ ಜ್ವಾಲೆಗೆ ತುಪ್ಪ ಸುರಿದಿದ್ದವು. 1905ರಲ್ಲೇ ರಷ್ಯಾದಲ್ಲಿ ನಡೆದ  ಶಾಂತಿಯುತ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗುಂಡಿಕ್ಕಲು ಆದೇಶ ನೀಡಿದ್ದ ಝಾರ್ ನಿಕೊಲಾಸ್, 1905ರ ಮೊದಲನೇ ರಷ್ಯಾ ಕ್ರಾಂತಿಗೆ ಕಾರಣನಾಗಿದ್ದ. ಹನ್ನೆರಡು ವರ್ಷಗಳ ಬಳಿಕ 1917ರಲ್ಲಿ ಝಾರ್ ನಿಕೊಲಾಸ್ ಮತ್ತದೇ ತಪ್ಪನ್ನು ಪುನರಾವರ್ತಿಸಿದ್ದ! ಝಾರ್ ರಷ್ಯಾದ ರಾಜಧಾನಿ ಪೆಟ್ರೊಗ್ರಾಡ್ (ಈಗಿನ ಸೈಂಟ್ ಪೀಟರ್ಸ್ ಬರ್ಗ್) ನಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರನ್ನು ಹೇಗಾದರೂ ಹಿಮ್ಮೆಟ್ಟಿಸುವಂತೆ, ಜನರಲ್ ಸೆರ್ಗೆಯ್ ಕಬಲೊವ್ ನಿಗೆ ಟೆಲಿಗ್ರಾಫ್ ಮೂಲಕ ಆದೇಶ ನೀಡಿದ್ದ ಝಾರ್ ನಿಕೊಲಾಸ್! ಪ್ರತಿಭಟನೆಯನ್ನು ತಡೆಯುವ ಆತುರದಲ್ಲಿ ರಷ್ಯನ್ ಸೇನೆ ಸುಮಾರು 200 ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತದೆ. ಆದರೆ ಆ ಹೊತ್ತಿಗಾಗಲೇ ಕ್ರಾಂತಿಯ ಪ್ರಭಾವ ರಷ್ಯನ್ ಸೇನೆಯೊಳಗೂ ನುಸುಳಿಕೊಂಡಿತ್ತು. ಸೈನಿಕರು ರಾಜನ ವಿರುದ್ಧ ದಂಗೆಯೆದ್ದು ಕ್ರಾಂತಿಗೆ ಬೆಂಬಲ ನೀಡುತ್ತಾರೆ. ಪ್ರಥಮ ವಿಶ್ವಯುದ್ಧದ ಬಳಿಕ, ರಷ್ಯನ ಜನಸಾಮಾನ್ಯರಲ್ಲಷ್ಟೇ ಅಲ್ಲದೇ ರಷ್ಯನ್ ಯೋಧರಲ್ಲೂ ಝಾರ್ ಆಳ್ವಿಕೆಯ ಮೇಲೆ ವಿಶ್ವಾಸ ಕಡಿಮೆಯಾಗಿತ್ತು. ಝಾರ್ ಗೆ ನಿಷ್ಠರಾಗಿ ಕ್ರಾಂತಿಯನ್ನು ತಡೆಯೆಲೆತ್ನಿಸಿದ ಪೊಲೀಸರನ್ನು ಮತ್ತು ಸೈನಿಕರನ್ನು ಕೊಂದು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತದೆಯಷ್ಟೇ ಅಲ್ಲದೇ ಝಾರ್ ಅಧಿಕಾರ ವ್ಯವಸ್ಥೆ ಶೀಘ್ರವಾಗಿ ಪತನದತ್ತ ಸಾಗುತ್ತದೆ. ಮೂರು ದಿನಗಳ ನಂತರ ಝಾರ್ ನಿಕೊಲಾಸ್, ಪದತ್ಯಾಗ ಮಾಡುತ್ತಾನೆ ಮತ್ತು ತಾತ್ಕಾಲಿಕವಾಗಿ ಪ್ರಜಾಪ್ರಭುತ್ವ ತತ್ವಗಳ ಆಧಾರದಲ್ಲಿ ಸರಕಾರವೊಂದು ರಚಿಸಲ್ಪಡುತ್ತದೆ.


ಫೆಬ್ರವರಿ ಕ್ರಾಂತಿಯಿಂದಾಗಿ ರಚಿಸಲ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಕಾಲ ಬಾಳಲಿಲ್ಲ.  ಮುಂದೆ 1917ರ ನವೆಂಬರ್ ನಲ್ಲಿ ನಡೆದ (ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್) ಅಕ್ಟೋಬರ್ ಕ್ರಾಂತಿ ರಷ್ಯಾವನ್ನು ಕಮ್ಯುನಿಸ್ಟ್ ಆಡಳಿತ ತನ್ನ ಹಿಡಿತ ಬಿಗಿಗೊಳಿಸುತ್ತದೆ. ಫೆಬ್ರವರಿ ಕ್ರಾಂತಿಯನ್ನು ಊಹಿಸಲು ವಿಫಲರಾಗಿದ್ದ ಲೆನಿನ್ ಮತ್ತು ಆತನ ಸಂಗಡಿಗರು ಈ ಕ್ರಾಂತಿಯ ನಂತರದ ದಿನಗಳನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ರಷ್ಯಾ, ಕಮ್ಯುನಿಸಂನ ಕಬ್ಬಿಣದ ಪರದೆಯಡಿಯಲ್ಲಿ ಸೊವಿಯೆತ್ ಒಕ್ಕೂಟದ ಹೆಸರಿನಲ್ಲಿ ವಿಶ್ವದ ಎರಡು ಸೂಪರ್ ಪವರ್ ಗಳಲ್ಲಿ ಒಂದಾಗುತ್ತದೆ. ಆದರೆ ಕಮ್ಯುನಿಸ್ಟ್ ಆಡಳಿತದ ಸೊವಿಯೆತ್ ರಷ್ಯಾದಲ್ಲಿ ಫೆಬ್ರವರಿ ಕ್ರಾಂತಿಯನ್ನು ಕಡೆಗಣಿಸಿ, ಅಕ್ಟೋಬರ್ ಕ್ರಾಂತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇವತ್ತಿಗೂ ರಷ್ಯಾ ಮತ್ತು ವಿಶ್ವದ ವಿವಿಧ ಭಾಗಗಳ ವಿದ್ವಾಂಸರು,  ರಷ್ಯಾಗೆ ಮೊದಲ ಬಾರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ ಈ ಫೆಬ್ರವರಿ ಕ್ರಾಂತಿಯನ್ನು, ವಿಶ್ವ ಕಂಡ ಮಹತ್ವದ ರಾಜಕೀಯ ಬದಲಾವಣೆಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಅಕ್ಟೋಬರ್ ಕಮ್ಯುನಿಸ್ಟ್ ಕ್ರಾಂತಿಯ ವೈಭವೀಕರಣದಿಂದಾಗಿ, ಮಾಸಿಹೋಗುತ್ತಿರುವ ಫೆಬ್ರವರಿ ಕ್ರಾಂತಿಗೆ ಈ ಮಾರ್ಚ್ ನಲ್ಲಿ ಶತಕದ ಸಂಭ್ರಮ. ಚರಿತ್ರೆಯ ಪುಟಗಳಲ್ಲಿ ಹುದುಗಿಕೊಂಡ ನೆನಪುಗಳನ್ನು ಹೊರತೆಗೆಯಲು ಇದಕ್ಕಿಂತ ಒಳ್ಳೆಯ ಸಮಯ ಸಿಗಲು ಸಾಧ್ಯವೇ?

(This article was published in Vishwavani Newsapaper on 9 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಹೊಸ ತಿರುವಿನತ್ತ ಮಧ್ಯಪ್ರಾಚ್ಯ: ಭಾರತದ ನಿಲುವುಗಳು

ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಮೊಸುಲ್ ಮಹಾಸಮರ ಧನಾತ್ಮಕ ಫಲಿತಾಂಶಗಳನ್ನು ಕಾಣುತ್ತಿದೆಯುದ್ಧಾರಂಭದಲ್ಲಿ ಜಾಗತಿಕ ವಿಶ್ಲೇಷಕರಲ್ಲಿದ್ದ ಋಣಾತ್ಮಕ ನಿಲುವುಗಳನ್ನು ಅಣಕಿಸುವಂತೆ ಇರಾಕೀ ಸೇನೆಸುನ್ನಿ ದಂಗೆಕೋರಗುಂಪುಗಳು ಮತ್ತು ಕರ್ದಿಶ್ ಜನಾಂಗದ ಪೆಶ್ಮರ್ಗಾ ಸೈನ್ಯಗಳು ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿಯುತ್ತಿದ್ದಾರೆಯುದ್ಧ ನಿರ್ಣಾಯಕ ಹಂತದತ್ತ ಸಾಗುತ್ತಿರುವಂತೆಸಮರೋತ್ತರ ಪರಿಣಾಮಗಳ ಕುರಿತಾಗಿಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ ಪ್ರಶ್ನೆಗಳಲ್ಲಿ ಸ್ವತಂತ್ರ ಕರ್ದಿಸ್ತಾನದ ಕೂಗು ಸಮರೋತ್ತರ ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಹೊಸ ಸವಾಲೊಡ್ಡಲಿದೆ.

ಇಸ್ಲಾಮಿಕ್ ಸ್ಟೇಟ್ ಮೊಸುಲ್ ನಿಂದ ಹಿಮ್ಮೆಟ್ಟುತ್ತಿದ್ದಂತೆ ಕರ್ದಿಶ್ ಪೆಶ್ಮರ್ಗಾ ಸೈನಿಕರು ಮೊಸುಲ್ ನಗರದ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ರಚಿಸಿದ್ದ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕುತ್ತಿದ್ದಾರೆ.ಉತ್ತರ ಇರಾಕಿನಲ್ಲಿರುವ  ಪ್ರದೇಶದಲ್ಲಿ ಈಗಾಗಲೇ ಕರ್ದ್ ಜನಾಂಗದ ಅಧಿಕೃತ ಸೇನೆ ' ಪೆಶ್ಮರ್ಗಾಗಣನೀಯ ಪ್ರಮಾಣದಲ್ಲಿ ಪ್ರಭಾವ ವೃದ್ಧಿಸಿಕೊಂಡಿದೆಮಿಲಿಟರಿ ಕಾರ್ಯಾಚರಣೆಗಳ ಯಶಸ್ಸಿನೊಂದಿಗೆ ಕರ್ದಿಶ್ ಜನಾಂಗದಬಹುಕಾಲದ ಕನಸು ಸ್ವತಂತ್ರ ಕರ್ದಿಸ್ತಾನದ ಬೇಡಿಕೆಯೂ ಮೂರ್ತರೂಪಕ್ಕೆ ಬರುವ ಸಾಧ್ಯತೆಗಳಿವೆಕರ್ದಿಶ್ ಗುಂಪುಸ್ವತಂತ್ರ ರಾಷ್ಟ್ರವಿಲ್ಲದೇ ಇರುವ ಪ್ರಪಂಚದ ಬೃಹತ್ ಜನಾಂಗಸದ್ಯಕ್ಕೆ ಇರಾಕ್ ದೇಶದೊಳಗೆ ಸ್ಥಳೀಯ ಸ್ವಾಯತ್ತಆಡಳಿತ ಪ್ರದೇಶವಾಗಿರುವ ಕರ್ದಿಸ್ತಾನ್ತನ್ನ ರಾಜಧಾನಿ ಎರ್ಬಿಲ್ ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆಹೀಗಾಗಿ ಕರ್ದಿಶ್ ಜನಾಂಗ ತಮ್ಮದೇ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದರೂ ಪ್ರತ್ಯೇಕವಾದ ಸ್ವತಂತ್ರರಾಷ್ಟ್ರವಾಗಿಲ್ಲ ಮತ್ತು ತನ್ನ ಭೂಭಾಗವನ್ನು ವಿಸ್ತರಿಸಿಕೊಂಡು ಸ್ವತಂತ್ರ ರಾಷ್ಟ್ರ ಕರ್ದಿಸ್ತಾನ್ ರಚಿಸಲು ದೀರ್ಘಕಾಲದಿಂದ ಕಾಯುತ್ತಿದ್ದಾರೆಇದೇ ಉದ್ದೇಶದಿಂದ ಕರ್ದಿಶ್ ಹೋರಾಟಗಾರರು ತಮ್ಮ ಅಧಿಕೃತ ಭೂಭಾಗದಿಂದ ಮುಂದೊತ್ತಿಬಂದು ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ವಶಪಡಿಸಿಕೊಂಡ ಉತ್ತರ ಇರಾಕಿನ ಪ್ರದೇಶಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆಇಸ್ಲಾಮಿಕ್ ಸ್ಟೇಟ್ ಸೋಲಿನ ನಂತರ ಯುದ್ಧದಲ್ಲಿ ಕರ್ದಿಶ್ ಜನಾಂಗದ ತ್ಯಾಗ ಬಲಿದಾನಗಳಿಗೆ ಬದಲಾಗಿಸ್ವತಂತ್ರ ಕರ್ದಿಸ್ತಾನವನ್ನು ಪಡೆದೇ ತೀರುತ್ತೇವೆ ಎನ್ನುತ್ತಿದೆ ಎರ್ಬಿಲ್ ನಲ್ಲಿರುವ ಸ್ಥಳೀಯ ಸ್ವಾಯತ್ತ ಕರ್ದಿಶ್ ಸರಕಾರ!

ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಿಂದಾಗಿ ಕರ್ದಿಶ್ ಜನಾಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನೂ ಪಡೆದುಕೊಳ್ಳುತ್ತಿದೆಕರ್ದಿಶ್ ಸೇನೆಯಲ್ಲಿರುವ ವಿಶಿಷ್ಟ ಶಾಖೆಜನ ರಕ್ಷಣಾ ಘಟಕ (People’s Protection Unit)ತನ್ನ ಕಮಾಂಡರ್ ಗಳ ನೇಮಕಕ್ಕೂ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಪರ ರಾಷ್ಟ್ರಗಳ ಮೆಚ್ಚುಗೆ ಗಳಿಸಿದೆಇವಿಷ್ಟೇ ಅಲ್ಲದೇ ಕರ್ದಿಶ್ ಜನರ ಹಿತಾಸಕ್ತಿಗಾಗಿ ಪ್ರೇಗ್ಸ್ಟಾಕ್ ಹೋಮ್ಬರ್ಲಿನ್ ಮತ್ತು ಮಾಸ್ಕೊಗಳಲ್ಲಿರಾಜತಾಂತ್ರಿಕ ಸಂಬಂಧಗಳನ್ನೂ ತೆರೆಯುವ ಮೂಲಕ ತನ್ನ ಭವಿಷದ ಕನಸಿಗೆ ಭರ್ಜರಿ ತಯಾರಿಯನ್ನೇ ನಡೆಸಿದೆ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಪ್ರಭಾವಕ್ಕಾಗಿ ಸ್ಪರ್ಧಿಸುತ್ತಿರುವ ಏಷ್ಯಾದ ಶಕ್ತಿಗಳಾದ ಭಾರತ ಮತ್ತು ಚೀನಾಗಳು ಕರ್ದಿಶ್ರಾಜಧಾನಿ ಎರ್ಬಿಲ್ ನಲ್ಲಿ ದೂತಾವಾಸಗಳನ್ನು ತೆರೆದಿವೆಕಳೆದ ವರ್ಷ ಆಗಸ್ಟ್ ನಲ್ಲಿ ಕರ್ದಿಶ್ ನಗರದೊಂದಿಗೆ ಪೂರ್ಣಪ್ರಮಾಣದ ರಾಜತಾಂತ್ರಿಕ ಅವಕಾಶಗಳಿಗೆ ತೆರೆದುಕೊಂಡ ಭಾರತದೀಪಕ್ ಮಿಗ್ಲಾನಿಯವರನ್ನು ಎರ್ಬಿಲ್ ನಲ್ಲಿರಾಯಭಾರಿಯನ್ನಾಗಿ ನೇಮಿಸಿದೆ ಮೂಲಕ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಎಂಟು ಮಿಲಿಯನ್ ಗೂ ಹೆಚ್ಚು ಭಾರತೀಯ ವಲಸಿಗರ ರಕ್ಷಣೆ ಮಾತ್ರವಲ್ಲದೇ ಇಲ್ಲಿನ ರಾಜಕೀಯದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಕರ್ದಿಶ್ ಜನಾಂಗನಿರೀಕ್ಷಿಸುವಂತಾಗಿದೆ.

ಎರ್ಬಿಲ್ ನಲ್ಲಿರುವ ಕರ್ದಿಶ್ ಸ್ವಾಯತ್ತ ಸರಕಾರಬಹಳಷ್ಟು ಸಮಯದಿಂದ ಭಾರತ  ಪ್ರದೇಶದಲ್ಲಿ ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಬೇಡಿಕೆಯಿಡುತ್ತಿದೆಆದರೆ ಭಾರತ  ಪ್ರದೇಶದಲ್ಲಿ ನೇರವಾಗಿ ಪಾಲ್ಗೊಂಡರೆ ಇರಾಕಿಸರಕಾರದ ಗೆಳೆತನ ಕಳೆದುಕೊಳ್ಳಬೇಕಾಗುತ್ತದೆತೈಲ ಉತ್ಪಾದನೆ ಮತ್ತು ಇನ್ನಿತರ ವಲಯಗಳಲ್ಲಿ ಹೆಚ್ಚು ಸ್ವಾಯತ್ತತೆಯನ್ನು ಬಯಸುತ್ತಿರುವ ಕರ್ದಿಶ್ ಜನಾಂಗವನ್ನು ಇರಾಕಿ ಸರಕಾರ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕ ಎಂದುಪರಿಗಣಿಸುತ್ತಿರುವುದರಿಂದಕರ್ದಿಶ್ ಜನಾಂಗಕ್ಕೆ ಬೆಂಬಲ ನೀಡುವ ಯಾರೇ ಆದರೂ ಇರಾಕ್ ನೊಂದಿಗೆ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆಹಿಂದೊಮ್ಮೆ ಭಾರತ ಟರ್ಕಿ ಕಂಪೆನಿಗಳ ಮೂಲಕ ಕರ್ದಿಸ್ತಾನದಿಂದ ತೈಲ ಖರೀದಿಮಾಡುತ್ತಿತ್ತಾದರೂ ಇದು ಅಲ್ಪಕಾಲಕ್ಕೆ ಸೀಮಿತವಾಯ್ತು. 2007ರಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಕುರ್ದಿಸ್ತಾನದ ರೊವಾ ಮತ್ತು ಸರ್ಟಾ ಗಳ ತೈಲೋತ್ಪಾದನೆಯಲ್ಲಿ ಬಂಡವಾಳವನ್ನೂ ಹೂಡಿತ್ತುಆದರೆ ಇರಾಕಿನಿಂದಅತಿಯಾದ ಒತ್ತಡ ಬಂದ ಹಿನ್ನೆಲೆಯಲ್ಲಿ ಭಾರತ ಕರ್ದಿಸ್ತಾನದೊಂದಿಗೆ ಯಾವುದೇ ದೀರ್ಘಕಾಲದ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಾಗಲಿಲ್ಲ.

Image may contain: 1 personಎರ್ಬಿಲ್ ನಲ್ಲಿದ್ದ ಕರ್ದಿಶ್ ಸರಕಾರವೂಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಭಾರತೀಯ ವಲಸಿಗರ ಸುರಕ್ಷತೆಯಲ್ಲಿ ಗಮನಾರ್ಹ ಪಾತ್ರವಹಿಸಿತ್ತುಮಧ್ಯಪ್ರಾಚ್ಯದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಯ ವಿಚಾರದಲ್ಲಿ ಭಾರತ ಸರಕಾರ,ಬಾಗ್ದಾದ್ ಮಾತ್ರವಲ್ಲದೇ ಎರ್ಬಿಲ್ ಸಹಾಯವನ್ನೂ ಪಡೆದುಕೊಂಡಿತ್ತು.2014ರಲ್ಲಿ ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಅಬ್ಬರಿಸುತ್ತಿದ್ದಾಗಕರ್ದಿಶ್ ಡೆಮಾಕ್ರಟಿಕ್ ಪಕ್ಷದ ಅಂತರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥಹೆಮನ್ ಹರ್ವಾನಿ , ಭಾರತದ ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿಹಳೆಯ ಇರಾಕ್ ಸತ್ತು ಹೋಗಿದೆಭವಿಷ್ಯದಲ್ಲಿ ಶಿಯಾಸುನ್ನಿ ಮತ್ತು ಕರ್ದಿಶ್ ರಾಷ್ಟ್ರಗಳ ಒಕ್ಕೂಟ ಅಥವಾ ಸಂಪೂರ್ಣ ಸ್ವತಂತ್ರ ದೇಶಗಳು ಅಸ್ತಿತ್ವಕ್ಕೆಬರಲಿವೆಮುಂದೆ ಬರಲಿರುವ ಹಾದಿಯಲ್ಲಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರನನ್ನಾಗಿ ನೋಡಲು ಬಯಸುತ್ತೇವೆ ಎಂದಿದ್ದರು. 2016 ರಲ್ಲಿ ಇರಾಕಿನಲ್ಲಿದ್ದ ಭಾರತದ ರಾಯಭಾರಿ ಎರ್ಬಿಲ್ ಗೆ ಭೇಟಿ ನೀಡಿದ್ದು ಭಾರತ ಮತ್ತುಕರ್ದಿಸ್ತಾನ್ ಗಳ ರಾಜತಾಂತ್ರಿಕ ಸಂಬಂಧ ಹೊಸ ಧೃಡತೆಯತ್ತ ಸಾಕ್ಷಿಯಾಯಿತು ಭೇಟಿಯ ನಂತರ ಕರ್ದಿಶ್ ಸ್ಥಳೀಯ ಸ್ವಾಯತ್ತ ಸರಕಾರಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಭಾರತದ ನೆರವನ್ನು ಯಾಚಿಸಿತ್ತುಕರ್ದಿಶ್ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಫತಾ ಮುಸ್ತಫಾ ಪ್ರದೇಶದಲ್ಲಿ ಭಾರತದಿಂದ ಮಾನವೀಯ ನೆರವು ಮತ್ತು ಮುಖ್ಯವಾಗಿ ಮಿಲಿಟರಿ ಸಹಾಯವನ್ನು ನಿರೀಕ್ಷಿಸುತ್ತೇವೆ ಎಂದಿದ್ದರು.

ಭಾರತ ಮಾನವೀಯ ನೆಲೆಯಲ್ಲಿ ಕರ್ದಿಸ್ತಾನ್ ಗೆ ಕೆಲ ನೆರವುಗಳನ್ನು ನೀಡಬಹುದಾದರೂಕರ್ದಿಶ್ ಜನರ ಸ್ವತಂತ್ರ ರಾಷ್ಟ್ರದ ಬೇಡಿಕೆಯಲ್ಲಿ ಹಸ್ತಕ್ಷೇಪ ಮಾಡಲಾಗದುಹಾಗೇನಾದರೂ ಭಾರತಸ್ವತಂತ್ರ ಕರ್ದಿಶ್ ನೆಲಕ್ಕೆ ತನ್ನಬೆಂಬಲವನ್ನು ಸೂಚಿಸಿದ್ದೇ ಆದಲ್ಲಿ ಇರಾಕ್ ಜೊತೆಗಿನ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆಮಧ್ಯ ಪ್ರಾಚ್ಯದ ಇನ್ನೊಂದು ಪ್ರಭಾವಿ ಶಕ್ತಿ ಟರ್ಕಿ ಕೂಡ ಭಾರತದ ನಿಲುವಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿರುವುದರಿಂದ,ಭಾರತ ಇಂಥದ್ದೊಂದು ತಪ್ಪು ರಾಜತಾಂತ್ರಿಕತೆಯ ಸಾಹಸಕ್ಕೆ ಕೈ ಹಾಕುವಂತಿಲ್ಲ.  ಟರ್ಕಿಯಂತೂ ಇಸ್ಲಾಮಿಕ್ ಸ್ಟೇಟ್ ಉಗ್ರರಿಗಿಂತ ಕರ್ದಿಶ್ ಹೋರಾಟಗಾರರೇ ತನ್ನ ದೀರ್ಘಕಾಲೀನ ಹಿತಾಸಕ್ತಿಗಳಿಗೆ ಮಾರಕ ಎಂದುಪರಿಭಾವಿಸಿರುವುದರಿಂದ ಕರ್ದಿಶ್ ಸ್ವತಂತ್ರ ರಾಷ್ಟ್ರಕ್ಕೆ ಬೆಂಬಲ ನೀಡುವ ಯಾವುದೇ ಶಕ್ತಿ ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲಸಂಘರ್ಷಗಳ ಮಧ್ಯದಲ್ಲೂ ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ಸಮತೋಲಿತವಿದೇಶಾಂಗ ನೀತಿ ಅನುಸರಿಸಿದ ಹೆಗ್ಗಳಿಕೆ ಭಾರತಕ್ಕಿದೆಮಧ್ಯಪ್ರಾಚ್ಯದ ರಾಜಕೀಯ ವ್ಯವಸ್ಥೆಆಗೊಮ್ಮೆ ಈಗೊಮ್ಮೆ ಬದಲಾಗುವ ನಾಯಕರು ಮತ್ತು ಸರಕಾರಗಳು ಭಾರತ ಪಾಲಿಗೆ ರಾಜತಾಂತ್ರಿಕ ಸಮಸ್ಯೆಯಾಗಿಲ್ಲ ಎನ್ನುವುದುಗಮನಾರ್ಹಅದ್ಯಾವ ಬದಲಾವಣೆಗಳಾದರೂ ಜಗ್ಗದ ಭಾರತ  ಪ್ರದೇಶದಲ್ಲಿ ಎಲ್ಲರ ಜೊತೆಗೂ ಸಮತೋಲಿತ ನೀತಿ ಅನುಸರಿಸಿದೆಇರಾಕಿನ ಸದ್ದಾಮ್ ಹುಸೇನ್ಸಿರಿಯಾದ ಬಶರ್ ಅಲ್ ಅಸದ್ ರಿಂದ ಇರಾನಿನ ಅಯತೊಲ್ಲಾಖೊಮೈನಿ ವರೆಗೂ ಭಾರತ ತನಗೆ ಬೇಕಾದ ಗೌರವ ಸಲ್ಲುವಂತೆ ನೋಡಿಕೊಂಡಿದೆ ಹಾಗೂ  ಪ್ರದೇಶದಲ್ಲಿ ಅಗಾಧವಾಗಿರುವ ಭಾರತೀಯ ವಲಸಿಗರ ಹಿತರಕ್ಷಣೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆಕ್ಷಣ ಕ್ಷಣಕ್ಕೂ ಬದಲಾಗುತ್ತಿರುವಮಧ್ಯಪ್ರಾಚ್ಯದಲ್ಲಿ ಯಾವುದೇ ದೀರ್ಘಕಾಲಿನ ಯೋಜನೆಗಳನ್ನು ಹಾಕಿಕೊಳ್ಳದೇ ಇರುವುದೇ ಭಾರತದ ಚಾಣಾಕ್ಷತನ!

ಸದ್ಯದ ಜಾಗತಿಕ ವ್ಯವಹಾರಗಳನ್ನು ಗಮನಿಸಿದರೆಇಸ್ಲಾಮಿಕ್ ಸ್ಟೇಟ್ ವಿರುದ್ದದ ಹೋರಾಟದಲ್ಲಿ ಕರ್ದಿಶ್ ಹೋರಾಟಗಾರರಿಗೆ ಭಾರತ ಮಿಲಿಟರಿ ನೆರವು ನೀಡುವುದು ದೂರದ ಮಾತುಆದರೆ ಔಷದಿಗಳುಪೋರ್ಟೆಬಲ್ ಮನೆಗಳು,ಆಹಾರ ಮತ್ತಿನ್ನಿತರ ಮಾನವೀಯ ನೆರವುಗಳನ್ನು ನೀಡುವ ಸಾಧ್ಯತೆಯಿದೆವಿಶೇಷವಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಎರ್ಬಿಲ್ ನಲ್ಲಿ ಕಾರ್ಯಪ್ರವೃತ್ತವಾಗುವ ಯೋಜನೆಯೂ ಭಾರತದ ಮುಂದಿದೆನೇಪಾಳದಿಂದಫಿಜಿಯವರೆಗೂ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಕಾರ್ಯನಿರ್ವಹಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಶಕ್ತಿಗಳ ಜೊತೆಗೆ ನೈತಿಕ ಶಕ್ತಿ ಎಂಬ ಛಾಪನ್ನೂ ಬೆಳೆಸಿಕೊಂಡಿರುವಭಾರತಸಂಕಷ್ಟದಲ್ಲಿರುವ ಬಡರಾಷ್ಟ್ರಗಳ ಆಪದ್ಭಾಂಧವನಾಗಿಯೂ ಗುರುತಿಸಿಕೊಂಡಿದೆಹೀಗಾಗಿ ಭಾರತದ ಕರ್ದಿಶ್ ವಿದೇಶಾಂಗ ನೀತಿ ಅಲ್ಪಮಟ್ಟಿಗೆ ಭಾರತದ ಅಫಘಾನಿಸ್ತಾನ ನೀತಿಯನ್ನು ಪ್ರತಿನಿಧಿಸುವ ಸಾಧ್ಯತೆಯಿದೆಸದ್ಯಕ್ಕೆರಾಜಕೀಯ ಮತ್ತು ಮಿಲಿಟರಿ ಸಂಘರ್ಷಗಳಿಂದ ದೂರವಿದ್ದುಮಾನವೀಯ ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿದೆ.

(This article was published in Hosadigantha Newsapaper on 7 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru