ಗುರುವಾರ, ಅಕ್ಟೋಬರ್ 22, 2015

ಸರ್ವಾಧಿಕಾರ, ಸಮಾಜವಾದ, ಪ್ರಜಾಪ್ರಭುತ್ವ: ವ್ಯತ್ಯಾಸವೇನು?



ಸರ್ವಾಧಿಕಾರಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಅಧಿಕಾರ ಪೂರ್ವದ ಹಾದಿಯೂ,
ಅಧಿಕಾರ ನಂತರದ ಆಳ್ವಿಕೆಯೂ ಒಂದೇ ಆಗಿರುತ್ತದೆ.


-      ಕೀರ್ತಿರಾಜ್
 



ಇದ್ಯಾಕೋ ಅಸಂಬದ್ಧ ಶೀರ್ಷಿಕೆಯಂತಿದೆ ಎಂದು ನಿಮಗನ್ನಿಸಬಹುದು. ಪರಸ್ಪರ ವಿರೋಧಾಭಾಸಗಳಿರುವ ಪ್ರಜಾಪ್ರಭುತ್ವ, ಸರ್ವಾಧಿಕಾರ, ಸಮಾಜವಾದಗಳನ್ನು ಒಂದೇ ಕಡೆ ಸೇರಿಸಿಬಿಟ್ಟಿರುವ ರಹಸ್ಯ ಏನು ಎಂದು ನೀವು ಯೋಚಿಸುತ್ತಿರಬಹುದು. ಅಧಿಕಾರ ಪೂರ್ವದ ಆದರ್ಶ ಮತ್ತು ಅಧಿಕಾರ ಸಿಕ್ಕಿದ ನಂತರದ ಆಳ್ವಿಕೆಗಳ ನಡುವೆ ಒಂದು ಸಣ್ಣ ಗೆರೆ ಇದೆ. ಮೇಲ್ನೋಟಕ್ಕೆ ಇದು ಸಣ್ಣ ಗೆರೆಯಾದರೂ, ಅಧಿಕಾರ ಪೂರ್ವಕ್ಕೂ ಆಳ್ವಿಕೆಗೂ ನಡುವೆ ಅಜಗಜಾಂತರ ಕಂದಕವನ್ನೇ ಸೃಷ್ಟಿಸಿಬಿಡುತ್ತದೆ.
ಜನಬೆಂಬಲ ಪ್ರಜಾನುರಾಗದಿಂದಲೇ ಅಧಿಕಾರ ಪಡೆದುಕೊಂಡಿದ್ದರೂ, ಅಧಿಕಾರಕ್ಕೇರಿದ ಬಳಿಕ ಜನರಿಗೆ ತಮ್ಮದೇ ಆಯ್ಕೆಯ ಬಗೆಗೆ ಜಿಗುಪ್ಸೆ ಮೂಡಲು ಕಾರಣವೇನು? ನಮ್ಮಿಂದ, ನಮಗಾಗಿ, ನಮಗೋಸ್ಕರವೇ ರಚಿಸಲ್ಪಟ್ಟ ಸರಕಾರದ ಆಡಳಿತ ಅಪಥ್ಯವಾಗಲು ಕಾರಣವೇನು? ಭಾರತೀಯರಿಗೆ ಪ್ರಜಾಪ್ರಭುತ್ವ ಸೂಕ್ತವಲ್ಲ, ಬ್ರಿಟಿಷ್ ಆಡಳಿತವೇ ಹೇಳಿ ಮಾಡಿಸಿದ್ದು   ಎಂಬ 'ಓರಿಯೆಂಟಲಿಸಂ' (ಪೌರಾತ್ಯವಾದ) ಸಾಲುಗಳು ಭಾರತೀಯರ ಬಾಯಿಯಿಂದಲೇ ಬರಲಾರಂಭಿಸಿದೆಯೆಂದರೆ, ನಮ್ಮ ಪ್ರಜಾಪ್ರಭುತ್ವ ಏನಾಗಬೇಕೆಂದು ಸ್ವಾತಂತ್ರ್ಯ ಪೂರ್ವದ ಭಾರತ ಬಯಸಿತ್ತೋ ಅದು ಇನ್ನೂ ಈಡೇರಿಸಲಾಗದ ಕನಸಾಗಿಯೇ ಉಳಿದಿದೆ ಎಂದರ್ಥ. ಇದೇ ಪ್ರಜಾಪ್ರಭುತ್ವಕ್ಕೋಸ್ಕರವೇ ತಾನೆ ಲಕ್ಷಾಂತರ ಜನ ತಮ್ಮದೆಲ್ಲವನ್ನೂ ತೊರೆದು, ತ್ಯಾಗ ಬಲಿದಾನಗಳನ್ನು ಮಾಡಿ ಹುತಾತ್ಮರಾಗಿದ್ದು?
ಇಲ್ಲಿ ಚರ್ಚೆಯಾಗುತ್ತಿರುವ ವಿಷಯ, ಇದರ ಉದ್ದೇಶ ಹೊಸತೇನಲ್ಲ. ದಶಕಗಳಿಂದ ಚರ್ಚೆಯಾಗಿದ್ದರೂ ಇಂದಿಗೂ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳದ, ಒಂದು ರೀತಿಯಲ್ಲಿ ನಿತ್ಯವಿನೂತನ ವಿಷಯವೆಂದರೂ ತಪ್ಪಾಗಲಾರದು. ಸಹಜವಾಗಿ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯೊಬ್ಬ ವಿವಿಧ ರೀತಿಯ ಸರಕಾರಗಳನ್ನು ಅಥವಾ ಆಳ್ವಿಕೆಯನ್ನು ಗುರುತಿಸುವಾಗ ಪ್ರಜಾಪ್ರಭುತ್ವ, ಸರ್ವಾಧಿಕಾರ ಮತ್ತು ಸಮಾಜವಾದಿ ಸರಕಾರಗಳೆಂಬ ಮೂರು ಹಣೆಪಟ್ಟಿಗಳಲ್ಲಿ ಗುರುತಿಸುವುದು ಸಾಮಾನ್ಯ. ಮೂರು ರೂಪಗಳು ಪ್ರತ್ಯೇಕ ಆದರ್ಶ ಗುಣಗಳಿಂದ ಒಂದಕ್ಕೊಂದು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ವಿದ್ವಾಂಸರ ಪ್ರಕಾರ ಕಮ್ಯುನಿಸಂ ಅಥವಾ ಸಮಾಜವಾದ ಒಂದು ರಾಜಕೀಯ ರೂಪವಲ್ಲ ಬದಲಿಗೆ ಕೇವಲ ಆರ್ಥಿಕ ಸಿದ್ಧಾಂತವಾಗಿ ಪರಿಗಣಿಸುತ್ತಾರೆ. ಅದೇನೇ ಇರಲಿ ಎಲ್ಲಾ ಪ್ರಕಾರಗಳಲ್ಲೂ  ಬಹಳ ಪ್ರಮುಖ್ಯವಾದ  ಕೆಲವು ಸಾಮ್ಯತೆಗಳಿವೆ.
ಪ್ರಜಾಪ್ರಭುತ್ವ, ಸರ್ವಾಧಿಕಾರ ಮತ್ತು ಸಮಾಜವಾದ ಮೂಲಭೂತವಾಗಿ ವಿಭಿನ್ನ ಎಂದು ನಾವು ಪರಿಗಣಿಸಿದ್ದರೂ, ಎಲ್ಲಾ ಪ್ರಕಾರಗಳೂ ಕೆಲವೊಂದು ಸಾಮಾನ್ಯ ಅಂಶಗಳನ್ನು ಪರಸ್ಪರ ಹಂಚಿಕೊಂಡಿವೆ. ಸಾಮ್ಯತೆಗಳನ್ನು ಸರಳವಾಗಿ ಎರಡು ವಿಭಾಗಗಳಲ್ಲಿ ಚರ್ಚಿಸಲು ಇಚ್ಛಿಸುತ್ತೇನೆ. ಅಧಿಕಾರಪೂರ್ವದಲ್ಲಿ ಸರ್ವಾಧಿಕಾರವೂ ಕೂಡ ಪ್ರಜಾಪ್ರಭುತ್ವದಂತೆ ಗೋಚರಿಸುತ್ತದೆ, ಅಧಿಕಾರ ನಂತರದಲ್ಲಿ ಪ್ರಜಾಪ್ರಭುತ್ವವೂ ಸರ್ವಾಧಿಕರದಂತೆ ಕಾರ್ಯನಿರ್ವಹಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹೆಗಲ್ ಒಂದು ಕಡೆ ಹೇಳುತ್ತಾನೆ " ಪ್ರತಿಯೊಂದು ಐತಿಹಾಸಿಕ ಸನ್ನಿವೇಶಗಳು ಮತ್ತು ಪಾತ್ರಗಳು ಎರಡು ಬಾರಿ ಸಂಭವಿಸುತ್ತವೆ." ಮಾರ್ಕ್ಸ್ ಇದೇ ಮಾತನ್ನು ರೀತಿ ಮುಂದುವರಿಸುತ್ತಾನೆ, "ಇತಿಹಾಸದ ಮರುಕಳಿಸುವಿಕೆ ಮೊದಲನೇ ಬಾರಿ ದುರಂತವಾಗಿರುತ್ತದೆ, ಹಾಗೂ ಎರಡನೇ ಬಾರಿ ಅಪಹಾಸ್ಯ / ವ್ಯಂಗ್ಯದಂತಿರುತ್ತದೆ." ("History repeats itself, first as tragedy, second as farce.")
ಮಾತು ಸರ್ವಾಧಿಕಾರ, ಸಮಾಜವಾದ, ಪ್ರಜಾಪ್ರಭುತ್ವ ಅಥವಾ ಇನ್ಯಾವುದೇ ಪ್ರಕಾರದ ಸರಕಾರಕ್ಕೂ ಸಾರ್ವಕಾಲಿಕವಾಗಿ ಸಲ್ಲುತ್ತದೆ. ಪ್ರತಿಯೊಂದು ಪ್ರಕಾರವೂ ದುರಂತದ ಧೂಳಿನಿಂದಲೇ ಎದ್ದು ಅಧಿಕಾರದ ಗದ್ದುಗೆಯೇರುತ್ತದೆ. ಆಳ್ವಿಕೆ ಮತ್ತೆ ದುರಂತವನ್ನು ನೆನಪಿಸುತ್ತದೆ. ಆದರೆ ಮಾರ್ಕ್ಸ್ ಸ್ವತಃ ಹೇಳುವಂತೆ, ದುರಂತ ವ್ಯಂಗ್ಯದ ರೂಪದಲ್ಲಿರುತ್ತದೆ!


ಸರ್ವಾಧಿಕಾರ, ಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಅಧಿಕಾರ ಪೂರ್ವದ ಹಾದಿ ಒಂದೇ ಆಗಿರುತ್ತದೆ
ಯಾವುದೇ ವಿಧದ ಸಿದ್ಧಾಂತವೇ ಆಗಿರಲಿ ಅಧಿಕಾರದ ಹಾದಿ ಸುಲಭವಲ್ಲ. ಸರ್ವಾಧಿಕಾರ, ಸಮಾಜವಾದ ಮತ್ತು ಪ್ರಜಾಪ್ರಭುತ್ವಗಳ ವಿಷಯದಲ್ಲೂ ಇದು ಸಾರ್ವತ್ರಿಕ ಸತ್ಯ. ಯಾವುದೇ ವಿಧದ ಸರಕಾರವೇ ಆದರೂ ಹಲವಾರು ಪ್ರಯತ್ನ, ತ್ಯಾಗ ಮತ್ತು ಬಲಿದಾನಗಳ ಮೂಲಕವೇ ಅಧಿಕಾರದ ಗದ್ದುಗೆಯೇರುತ್ತದೆ. ಮೇಲ್ನೋಟಕ್ಕೆ ಪ್ರಜಾಪ್ರಭುತ್ವ ಮಾತ್ರವೇ ಪ್ರಜೆಗಳ ಆಡಳಿತದ ಪ್ರತಿರೂಪದಂತೆ ಕಂಡರೂ, ಉಳಿದ ಎರಡು ಪ್ರಕಾರಗಳಾದ ಸಮಾಜವಾದ ಮತ್ತು ಸರ್ವಾಧಿಕಾರಗಳೂ ಕೂಡ ಅಧಿಕಾರ ಪೂರ್ವದಲ್ಲಿ ಜನಬೆಂಬಲ ಗಳಿಸಲು ಪ್ರಯತ್ನ ಪಟ್ಟಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಪ್ರತಿಯೊಬ್ಬ ಸರ್ವಾಧಿಕಾರಿಯೂ ಒಂದು ಆದರ್ಶವಿಟ್ಟುಕೊಂಡೇ ಅಧಿಕಾರ ಪಡೆದುಕೊಂಡುತ್ತಿರುತ್ತಾನೆ. ಹಿಟ್ಲರ್ ನಿಂದ ಸದ್ದಾಂ ಹುಸೇನ್ ವರೆಗೂ ಪ್ರಕ್ರಿಯೆ ನಡೆದಿತ್ತು. ಸರ್ವಾಧಿಕಾರಿಗಳು ಆದರ್ಶ ಪಾಲಿಸುತ್ತಾರೆಂದರೆ ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವೇ. ಅಜೆಂಡಾ ಎನ್ನುವುದು ಸೂಕ್ತವೇನೋ! ಆದರೆ ಎರಡನೆ ಜಾಗತಿಕ ಯುದ್ಧದಲ್ಲಿ ಜನಾಂಗೀಯ ಅಜೆಂಡಾವನ್ನು, ಆದರ್ಶವಾಗಿ ಪರಿವರ್ತಿಸಿ ಜರ್ಮನ್ನರ ಬೆಂಬಲ ಪಡೆಯುವಲ್ಲಿ ಹಿಟ್ಲರ್ ಯಶಸ್ವಿಯಾಗಿದ್ದ. ಗಲ್ಫ್ ಯುದ್ಧದ ಸಂದರ್ಭದಲ್ಲಿ ತನ್ನ ಅಜೆಂಡಾವನ್ನು ಇಸ್ಲಾಂ ನೊಂದಿಗೆ ವಿಲೀನಗೊಳಿಸಿ ಹೊಸ ಆದರ್ಶ ಸೃಷ್ಟಿಸಿದ್ದ ಸದ್ದಾಂ ಹುಸೇನ್. ಹಿಟ್ಲರ್ಗೆ ರಾಷ್ಟ್ರೀಯವಾದ, ಜನಾಂಗಗಳು ಜನ ಬೆಂಬಲ ದೊರಕಿಸಿಕೊಟ್ಟರೆ, ಕೆಲವು ಸರ್ವಾಧಿಕಾರಿಗಳು ಧರ್ಮದ ಹೆಸರಿನಲ್ಲೋ ಅಥವಾ ಇನ್ಯಾವುದೋ ತಂತ್ರದ ಮೂಲಕ ಜನಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.
ಕಮ್ಯುನಿಸಂ ಆರ್ಥಿಕ ನೀತಿಗಳು ಅಸಮಾನತೆಯ ವಿರುದ್ಧದ ಹೋರಾಟಗಳಿಂದಲೇ ಜನಬೆಂಬಲ ಗಳಿಸಿಕೊಳ್ಳುತ್ತಾರೆ. ಕಮ್ಯುನಿಸಂಗೆ ಕಾರ್ಲ್ ಮಾರ್ಕ್ಸ್ ನಂಥ ಮೇಧಾವಿ ಹಾಕಿಕೊಟ್ಟ ಆದರ್ಶಗಳಿವೆ. ಆದರ್ಶಗಳನ್ನು ಅರ್ಥೈಸಿಕೊಂಡ ರೀತಿ, ಅನುಷ್ಠಾನಗೊಳಿಸಿದ ರೀತಿ ಪ್ರಶ್ನಾರ್ಹವೇ ಆದರೂ ಕಮ್ಯುನಿಸಂ ಜನವಿರೋಧಿ ನೀತಿಯಾಗಿ ಅಧಿಕಾರ ಪಡೆದುಕೊಂಡಿಲ್ಲ , ಹಲವಾರು ಆದರ್ಶಗಳ ಮೂಲಕ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ನಂತರವೇ ಅಧಿಕಾರದ ಗದ್ದುಗೆ ಏರಿದೆ ಎನ್ನುವುದು ಗಮನಿಸಬೇಕಾದ ಅಂಶ.
ಪ್ರಜಾಪ್ರಭುತ್ವದ ಬಗೆಗೆ ವಿಶ್ಲೇಷಿಸುವುದು ಸ್ವಲ್ಪ ಕಷ್ಟವೇ, ನಿಮಗೆ ಗೊತ್ತಿಲ್ಲದ್ದೇನಿಲ್ಲ. ಕನಿಷ್ಟ ಪಕ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳ ಹಿಂದಿನ ದಿವಸವಾದರೂ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ದೇಶಕ್ಕೋಸ್ಕರ ಪ್ರಜಾಪ್ರಭುತ್ವಕ್ಕೋಸ್ಕರ ನಮ್ಮ ಪೂರ್ವಿಕರು ಪಟ್ಟ ಪಾಡು ಬಲಿದಾನಗಳು ಮಿಂಚುತ್ತವೆ. ಗಾಂಧೀಜಿ, ನೇತಾಜಿ, ಭಗತ್ ಸಿಂಗ್ ಇತರೆಲ್ಲಾ ಹುತಾತ್ಮರು ಮುಖಪುಟದಲ್ಲಿ, ಮುಖ ತೋರಿಸಿ ಹೋಗುತ್ತಾರೆ. , ಅಷ್ಟೊಂದು ತ್ಯಾಗ ಬಲಿದಾನಗಳು ನಾವೀಗ ಕಾಣುತ್ತಿರುವ ಪ್ರಜಾಪ್ರಭುತ್ವಕ್ಕೋಸ್ಕರವೇ? ಎಂಬ ಪ್ರಶ್ನೆಯೊಂದು ಕೊನೆಯವರೆಗೂ ಮನಸ್ಸಿನಲ್ಲಿ ಹಾಗೇ ಉಳಿದುಹೋಗುತ್ತದೆ
ಇದನ್ನೆಲ್ಲಾ ಸರಿಯಾಗಿ ಗಮನಿಸಿದರೆ, ಯಾವುದೇ ಪ್ರಕಾರದ ಆಡಳಿತವಿರಲಿ ಅಧಿಕಾರ ಪೂರ್ವದಲ್ಲಿ ತನ್ನನ್ನು ಜನಪರ ಮತ್ತು ಪ್ರಜಾಪೋಷಕ ಎಂದೇ ತೋರಿಸಿಕೊಳ್ಳುತ್ತದೆ. ಮಾತು ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಸರ್ವಾಧಿಕಾರಗಳೆಲ್ಲಕ್ಕೂ ಸರ್ವಸಮಾನವಾಗಿ ಅನ್ವಯಿಸುತ್ತದೆ.

ಸರ್ವಾಧಿಕಾರ, ಸಮಾಜವಾದ ಮತ್ತು  ಪ್ರಜಾಪ್ರಭುತ್ವಗಳ  ಆಳ್ವಿಕೆಯ ಪರಿಣಾಮವೂ ಒಂದೇ ಆಗಿರುತ್ತದೆ
ಬಹಳಷ್ಟು ಸರ್ವಾಧಿಕಾರಿಗಳು ಜನರ ಹೆಸರಿನಲ್ಲೇ ಅಧಿಕಾರಕ್ಕೆ ಬಂದು ದಶಕಗಳವರೆಗೆ ದೇಶವನ್ನೇ ಕಪಿ ಮುಷ್ಟಿಯಲ್ಲಿಟ್ಟುಕೊಂಡಿದ್ದು ಕೊನೆಗೆ ದಾರುಣ ಅಂತ್ಯ ಕಂಡಿದ್ದು ಈಗ ಇತಿಹಾಸ. ಒಂದು ರೀತಿಯಲ್ಲಿ ಸರ್ವಾದಿಕಾರಿಗಳ ಆಡಳಿತದ ಬಗೆಗೆ ವಿವರಿಸುವ ಅವಶ್ಯಕತೆಯೇನಿಲ್ಲ. ಕಣ್ಣಿಗೆ ಕಾಣುವ ಕ್ರೌರ್ಯ, ಶೋಷಣೆಗಳು. ಸರ್ವಾಧಿಕಾರಿಯ ಜೀವನ ಶೈಲಿಯೇ ಕೆಲಸ ಮಾಡಿಬಿಡುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಶೋಷಣೆ ಅವಿತಿಟ್ಟುಕೊಂಡಿರುತ್ತದೆ. ಅಭಿವೃದ್ಧಿಯ ಹೆಸರಿನಲ್ಲೇ ಶೋಷಣೆಯನ್ನು ಅಡಗಿಸಿಕೊಳ್ಳುವುದು ಪ್ರಜಾಪ್ರಭುತ್ವದ ಸಾಮರ್ಥ್ಯವೂ ಹೌದು, ವಿಪರ್ಯಾಸವೂ ಹೌದು!
ಉದಾಹರಣೆಗೆ ನಮ್ಮ ಭಾರತದ ರಾಜಕೀಯ ಪರಿಸ್ಥಿತಿಯನ್ನೇ ಗಮನಿಸಿ. ಎಲ್ಲಾ ಪಕ್ಷ, ನಾಯಕರ ಆಡಳಿತ ನೋಡಿ ರೋಸಿ ಹೋಗಿದ್ದ ಆಮ್ ಆದ್ಮಿಗಳು, ಪ್ರಜಾಪ್ರಭುತ್ವದ ಹೊಸ ಪ್ರಯತ್ನ ಆಮ್ ಆದ್ಮಿ (ಆಪ್) ಪಕ್ಷದ ಮೇಲೆ ಹಿಮಾಲಯದಷ್ಟು ನಿರೀಕ್ಷೆ, ಕನಸು ಕಟ್ಟಿಕೊಂಡಿದ್ದರು. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ, ಆಮ್ ಆದ್ಮಿ ಎಂಬ ಹೊಸ ಪ್ರಯತ್ನ , 'ಭಾರತದ ಪ್ರಜಾಪ್ರಭುತ್ವದಲ್ಲಿ ಯಾವುದೇ ಹೊಸ ಅವಿಷ್ಕಾರವೇ ಆದರೂ ಕಿಂಚಿತ್ತೂ ನಂಬಿಕೆ ಇಡಬೇಡಿ' ಎಂಬ ಸ್ಪಷ್ಟ ಸಂದೇಶ ರವಾನಿಸಿದಂತಿದೆ.
ಕಮ್ಯುನಿಸಂ ಮತ್ತು ಸಮಾಜವಾದ ಕೂಡ ಅಧಿಕಾರ ಪೂರ್ವದಲ್ಲಿ ಅಸಂಖ್ಯಾತ ಜನರ ಕಣ್ಣಲ್ಲಿ ಹೊಳಪು ಮೂಡಿಸಿದ ಸಿದ್ಧಾಂತ. ಬಂಡವಾಳಶಾಹಿಗಳ ಶೋಷಣೆಯಲ್ಲಿ ನಲುಗಿ ಇಂಗಿ ಹೋಗಿದ್ದ ಕಣ್ಣುಗುಡ್ಡೆಗಳಲ್ಲೂ ಹೊಸ ಹೊಳಪು ಮೂಡಿಸಿದ, ಬಳಲಿದ್ದ ದೇಹಕ್ಕೆ ಕ್ರಾಂತಿಯ ಚೈತನ್ಯ ತುಂಬಿಸಿ, ಬಂಡವಾಳಶಾಹಿಗಳ ಅಸ್ತಿತ್ವವನ್ನೇ ಅಲುಗಾಡಿಸಿದ ಮೇಧಾವಿ ಕಾರ್ಲ್ ಮಾರ್ಕ್ಸ್. ಅದರೆ ಕಾರ್ಲ್ ಮಾರ್ಕ್ಸ್ ಹೇಳಿದ್ದೆಲ್ಲವನ್ನೂ ಚಾಚು ತಪ್ಪದೆ ಅನುಷ್ಠಾನಕ್ಕೆ ತರಲು ಇದು ರಾಮಾಯಣದ ರಾಮ, ಲಕ್ಷ್ಮಣ, ಭರತರ ಕಥೆಯಲ್ಲವಲ್ಲ! 1917ರಲ್ಲಿ ರಷ್ಯನ್ನರು ಅದೇನೋ ಅಸೆ ಆಕಾಂಕ್ಷೆಗಳನ್ನಿಟ್ಟುಕೊಂಡು ಕಮ್ಯುನಿಸಂ ಸ್ಥಾಪಿಸಿದ ಬಳಿಕವೂ ಸಮಸ್ಯೆಗಳು ಹೆಚ್ಚಾಗಲು ಕಾರಣವೇನು? ಜಾರ್ಜ್ ಆರ್ವೆಲ್ ತನ್ನ ಕೃತಿ 'ಅನಿಮಲ್ ಫಾರ್ಮ್'ನಲ್ಲಿ ಕಮ್ಯುನಿಷ್ಟ್ ಕ್ರಾಂತಿಯ ನಂತರದ ರಷ್ಯಾದ ಪರಿಸ್ಥಿತಿ, ಕ್ರಾಂತಿಕಾರಿ ನಾಯಕರೇ ಕೊನೆಗೆ ಶೋಷಣೆ ಮಾಡುವ ಬಂಡವಾಳಶಾಹಿಗಳಾಗಿ ರೂಪುಗೊಂಡ ವಾಸ್ತವವನ್ನು ತನ್ನದೇ ವ್ಯಂಗ್ಯಭರಿತ ಶೈಲಿಯಲ್ಲಿ ಮಾರ್ಮಿಕವಾಗಿ ಬಿಚ್ಚಿಡುತ್ತಾನೆ.
ಮಾರ್ಕ್ಸ್ ಕೊಟ್ಟ ತತ್ವಾದರ್ಶಗಳು, ಸಿದ್ಧಾಂತಗಳು 'ಪ್ರಾಕ್ಟಿಕಲ್' ಎಂಬ ಹೆಸರಿನಲ್ಲಿ ತಿರುಚಲ್ಪಟ್ಟವು. ತನ್ನ ಅಂತಿಮ ದಿನಗಳಲ್ಲಿ ಮಾರ್ಕ್ಸ್ "ನಾನು ಮಾರ್ಕ್ಸಿಸ್ಟ್ ಅಲ್ಲ" ಎಂದು ಹೇಳುವಷ್ಟರ ಮಟ್ಟಿಗೆ ಹತಾಶನಾಗಲು ಕಾರಣವು ಇಲ್ಲದ್ದಿಲ್ಲ. ಮಾರ್ಕ್ಸ್ ವಾದದ ಅನುಷ್ಠಾನ ಅರ್ಥಾತ್ 'ರೆಜಿಮೆಂಟೆಡ್ ಕಮ್ಯುನಿಸಂ', ಅಣು ಅಣುವಾಗಿ ಮಾರ್ಕ್ಸ್ ನನ್ನು ಮಾರ್ಕ್ಸ್ ವಾದದಿಂದ ದೂರ ಮಾಡಿಬಿಟ್ಟಿತು. ಅಣ್ಣಾ ಹಜಾರೆ ಕೂಡ ಸದ್ಯದಲ್ಲೇ "ನಾನು ಪ್ರಜಾಪ್ರಭುತ್ವವಾದಿಯಲ್ಲ" ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದಕ್ಕೆ ಕಾರಣ ಯಾವುದೋ ಕಾಣದ ಬಾಹ್ಯ ಶಕ್ತಿಯಲ್ಲ, ನಮ್ಮ ನಿಮ್ಮ ಕಣ್ಣೆದುರಿಗೇ ಇರುವ 'ರೆಜಿಮೆಂಟೆಡ್ ಡೆಮಾಕ್ರಸಿ' ಅಂದರೆ ಪ್ರಜಾಪ್ರಭುತ್ವ ಅನುಷ್ಠಾನಗೊಳ್ಳುತ್ತಿರುವ ರೀತಿ!
ಇದೆಲ್ಲವನ್ನೂ ಗಮನಿಸಿದ ಮೇಲೆ ಸರ್ವಾಧಿಕಾರ, ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವಗಳ ಮಧ್ಯೆ ಇರುವ ಅಂಥ ದೊಡ್ಡ ವ್ಯತ್ಯಾಸವಾದ್ರೂ ಏನು? ಎಂಬ ಪ್ರಶ್ನೆ ನಿಮ್ಮನ್ನು ಕಾಡದೇ ಇರದು.





 
  
 KEERTHIRAJ 

·   Currently serving as a Visiting Faculty for International Relations and Political Science at Alliance University, Bangalore. 
      (This article was published in Hosa Digantha newspaper on 15 September 2015)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ