ಸೋಮವಾರ, ಫೆಬ್ರವರಿ 29, 2016

ಮತ್ತೆ ಮತ್ತೆ ಕಾಡುವ ಸಿಯಾಚಿನ್

ಸಿಯಾಚಿನ್ ಸಮರ ನೀತಿಯ ದೃಷ್ಠಿಯಿಂದ ಇನ್ನೂ ಪ್ರಾಮುಖ್ಯತೆ ಉಳಿಸಿಕೊಂಡಿದೆ ಎನ್ನಲು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಿಯಾಚಿನ್ ವಶಪಡಿಸಿಕೊಳ್ಳಲು ಪಾಕ್ ನಡೆಸಿದ ಪ್ರಯತ್ನಗಳೇ ಸಾಕ್ಷಿಒಂದು ವೇಳೆ ಭಾರತೀಯ ಸೇನೆ  ಎತ್ತರದ ಯುದ್ಧ ಭೂಮಿಯನ್ನು ಬಿಟ್ಟು ಬಂದಿದ್ದೇ ಆದಲ್ಲಿಪಾಕ್ ಆಕ್ರಮಿತ ಕಾಶ್ಮೀರಕ್ಕೂ ಚೈನಾ ಆಕ್ರಮಿತ ಅಕ್ಸಾಯ್ ಚಿನ್ ಗೂ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. 

-  ಕೀರ್ತಿರಾಜ್

ಕರ್ನಾಟಕದ ವೀರ ಯೋಧ ಹನುಮಂತಪ್ಪ ಕೊಪ್ಪದ ಮತ್ತು ಅವರ ಸೈನಿಕ ಸಹೋದ್ಯೋಗಿಗಗಳು ಇಂದು ನಮ್ಮೊಂದಿಗಿಲ್ಲ ಎಂಬ ಸತ್ಯ ಅರಗಿಸಿಕೊಳ್ಳಲು ಭಾರತ ಹರಸಾಹಸ ಪಡುತ್ತಿದೆ. ಜಾತಿ, ಮತ, ಪ್ರದೇಶಗಳ ವ್ಯತ್ಯಾಸವಿಲ್ಲದೆ ಇಡೀ ಭಾರತೀಯರ ಹೃದಯ ನಮ್ಮ ಹೆಮ್ಮೆಯ ಯೋಧರಿಗಾಗಿ ಮಿಡಿದಿತ್ತು. ಇವೆಲ್ಲವುಗಳ ಮಧ್ಯೆ ಚರ್ಚೆಯಾಗಿದ್ದು ಸಿಯಾಚಿನ್ ಯುದ್ಧಭೂಮಿಯಿಂದ ಭಾರತೀಯ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ. ಸಿಯಾಚಿನ್ ಪ್ರಪಂಚದ ಅತೀ ಎತ್ತರದ ಯುದ್ಧ ಭೂಮಿ ಮಾತ್ರವಲ್ಲ ಅಷ್ಟೇ ಅಪಾಯಕಾರಿ ಕೂಡ! ಸಿಯಾಚಿನ್ ಹಿಮಪಾತ ಯೋಧರನ್ನು ಬಲಿ ತೆಗೆದುಕೊಂಡಿದ್ದು ಇದೇ ಮೊದಲೇನಲ್ಲ. ಅದೇ ರೀತಿ ಸಿಯಾಚಿನ್ ನಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಚರ್ಚೆಗಳೂ ಹೊಸತೇನಲ್ಲ. ಇವತ್ತಿನವರೆಗೆ ಭಾರತೀಯ ಹಾಗೂ ಪಾಕಿಸ್ತಾನಿ ಸೈನಿಕರನ್ನೂ ಸೇರಿಸಿದಂತೆ ಸಿಯಾಚಿನ್ ಹಿಮಪಾತ 2000ಕ್ಕೂ ಹೆಚ್ಚು ಯೋಧರನ್ನು ಜೀವಂತ ಸಮಾಧಿ ಮಾಡಿದೆ. ಹಿಮಗಡಿತದಿಂದ ಶಾಶ್ವತ ಅಂಗವೈಕಲ್ಯಕ್ಕೊಳಗಾದ ಯೋಧರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಷ್ಟೇ ಅಲ್ಲದೇ ಸಿಯಾಚಿನ್ ನಲ್ಲಿ ಕಳೆಯುವ ಒಂದೊಂದು ಕ್ಷಣವೂ ಯೋಧನ ಸರಾಸರಿ ಆಯಸ್ಸನ್ನು ಅಲ್ಲಿನ ಪ್ರತಿಕೂಲ ಪರಿಸರ ಹಂತ ಹಂತವಾಗಿ ಕಡಿಮೆ ಮಾಡಿಬಿಡುತ್ತದೆ.

Image Source: indianexpress.com
೧೯೪೯ರಲ್ಲಿ ವಿಶ್ವಸಂಸ್ಥೆ ಭಾರತ ಪಾಕಿಸ್ತಾನ ಯುದ್ಧಕ್ಕೆ ಯುದ್ಧ ವಿರಾಮ ಘೋಷಿಸಿದಾಗ, ಪಾಕಿಸ್ತಾನ ಕಾಶ್ಮೀರದ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿತ್ತು. ತಾನು ಆಕ್ರಮಿಸಿದ ಭೂಪ್ರದೇಶವನ್ನು ಪಾಕಿಸ್ತಾನ ಆಜಾದ್ ಕಾಶ್ಮೀರ್ (ಸ್ವತಂತ್ರ ಕಾಶ್ಮೀರ) ಎಂದು ಕರೆದುಕೊಂಡರೆ, ಭಾರತ ಇದೇ ಪ್ರದೇಶವನ್ನು ಪಾಕ್ ಆಕ್ರಮಿತ ಕಾಶ್ಮೀರ (POK) ಎಂದು ಪರಿಗಣಿಸಿತು. ಯುದ್ಧ ವಿರಾಮದ ರೇಖೆಯನ್ನು NJ9842 ಎಂದು ನಿರ್ದಿಷ್ಠ ಪಡಿಸಲಾಯ್ತು. ಮುಂದೆ 1972 ಸಿಮ್ಲಾ ಒಪ್ಪಂದದ ನಂತರ ಯುದ್ಧ ವಿರಾಮದ ರೇಖೆಯನ್ನು ಗಡಿ ನಿಯಂತ್ರಣ ರೇಖೆಯಾಗಿ ಬದಲಾಯಿಸಲಾಯಿತು. 1984ರಲ್ಲಿ ಪಾಕಿಸ್ತಾನ ಸಾಲ್ಟೋರೋ ಪರ್ವತಶ್ರೇಣಿಯನ್ನು ವಶಪಡಿಸಿಕೊಳ್ಳಲಿದೆ ಎಂಬ ಗುಪ್ತಚರ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಭಾರತೀಯ ಸೇನೆ ಮುಂಚಿತವಾಗಿ ಸಾಲ್ಟೋರೋ ಪರ್ವತ ಶ್ರೇಣಿಯನ್ನು ವಶಪಡಿಸಿಕೊಂಡಿತ್ತು. ಪಾಕಿಸ್ತಾನದ ಸೈನ್ಯವೂ ಪ್ರತಿರೋಧ ವ್ಯಕ್ತಪಡಿಸಿತ್ತು. ಅಂದಿನಿಂದ ಭಾರತ ಮತ್ತು ಪಾಕ್ ಸೈನ್ಯಗಳೆರಡೂ ಯುದ್ಧಕ್ಕಿಂತ ಹೆಚ್ಚಾಗಿ, ಸಿಯಾಚಿನ್ ಹಿಮಪಾತದಲ್ಲೇ ತನ್ನ ಸೈನಿಕರನ್ನು ಕಳೆದುಕೊಳ್ಳುವಂತಾಗಿದೆ.

ಸಿಯಾಚಿನ್ ಸಮಸ್ಯೆಯಿಂದಾಗಿ, ದಕ್ಷಿಣ ಏಷ್ಯಾ ಪ್ರಾದೇಶಿಕ ಸ್ಥಿರತೆಯ ರೂವಾರಿಗಳಾಗಬೇಕಿದ್ದ, ಭಾರತ ಮತ್ತು ಪಾಕಿಸ್ತಾನಗಳೆರಡೂ ಅನುಭವಿಸುತ್ತಿರುವ ನಷ್ಟ ಅಪರಿಮಿತ. ಹಲವಾರು ಮಿಲಿಟರಿ ತಜ್ಞರ ಪ್ರಕಾರ ಪ್ರದೇಶ ಎರಡೂ ರಾಷ್ಟ್ರಗಳಿಗೂ ರಣತಾಂತ್ರಿಕವಾಗಿ ಅಷ್ಟೇನೂ ಮಹತ್ವದಲ್ಲ. ಎರಡೂ ರಾಷ್ಟ್ರಗಳೂ ಪ್ರದೇಶದ ಮೇಲೆ ವ್ಯಯಿಸುತ್ತಿರುವ ಹಣ ಮತ್ತಿತರ ಸಂಪನ್ಮೂಲಗಳು ಬಹುಪಾಲು ವ್ಯರ್ಥ. ಹೀಗಾಗಿ ಪ್ರದೇಶವನ್ನು ಸೈನ್ಯ ರಹಿತ ಪ್ರದೇಶವಾಗಿಸುವುದು ಭಾರತ ಮತ್ತು ಪಾಕಿಸ್ತನಗಳೆರಡರ ದೃಷ್ಠಿಯಿಂದಲೂ ಅನುಕೂಲಕರ ಮತ್ತು ಲಾಭದಾಯಕ ಎಂಬುದು ಎರಡೂ ಕಡೆಯ ಮಿಲಿಟರಿ ನಿಪುಣರ ಅಭಿಪ್ರಾಯ. ಮೊದಲ ಬಾರಿಗೆ ರಾಜೀವ್ ಗಾಂಧಿ ಆಡಳಿತಾವಧಿಯಲ್ಲಿ ಇಂಥದ್ದೊಂದು ಪ್ರಯತ್ನ ಚರ್ಚೆಯಾಗಿತ್ತು. ೧೯೯೭ರಲ್ಲಿ ಭಾರತೀಯ ಸೇನೆಯ ಜನರಲ್ ಇಂದರ್ ಗಿಲ್ ತಮ್ಮ ಲೇಖನವೊಂದರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಯಾವುದೇ ರಣತಾಂತ್ರಿಕ ಆಸಕ್ತಿಯ ದೃಷ್ಠಿಯಲ್ಲಿ ಪ್ರದೇಶ ನಿರುಪಯುಕ್ತ ಹಾಗೂ ಪ್ರದೇಶದಲ್ಲಿ ಸೇನಾ ನಿಯೋಜನೆ ಕೇವಲ ಆರ್ಥಿಕ ಹೊರೆಯಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತ ಪಾಕಿಸ್ತಾನದ ಮುಂದಿನ ನಡೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಕ್ಷಣವೇ ಏಕಪಕ್ಷೀಯವಾಗಿ ಭಾರತೀಯ ಸೇನೆಯನ್ನು ಸಿಯಾಚಿನ್ ಪ್ರದೇಶದಿಂದ ಹಿಂಪಡೆದುಕೊಳ್ಳಬೇಕು ಎಂಬ ಸಲಹೆಯನ್ನೂ . ಇಂದರ್ ಗಿಲ್ ನೀಡಿದ್ದರು! ೨೦೧೨ರಲ್ಲಿ ೧೩೦ ಪಾಕಿಸ್ತಾನದ ಯೋಧರನ್ನು ಸಿಯಾಚಿನ್ ಬಲಿ ತೆಗೆದುಕೊಂಡಾಗ, ಅವತ್ತಿನ ಪಾಕಿಸ್ತಾನಿ ಜನರಲ್ ಕಯಾನಿ ಸಿಯಾಚಿನ್ ಪ್ರದೇಶವನ್ನು ಸೇನಾ ರಹಿತಗೊಳಿಸುವ ಹೇಳಿಕೆ ಚರ್ಚೆಗೆ ಒಳಗಾಗಿತ್ತು.

ಹೀಗಿದ್ದರೂ ಭಾರತ ಸಿಯಾಚಿನ್ ಪ್ರದೇಶದ ಮೇಲಿನ ಹಿಡಿತ ಬಿಟ್ಟುಕೊಡಲು ತಯಾರಿಲ್ಲ. ಭಾರತದ ನಿಲುವಿಗೆ ಹಲವರು ಕಾರಣಗಳೂ ಇವೆ. ಭಾರತ ಮತ್ತು ಪಾಕಿಸ್ತಾನಗಳ ಸಾಂಪ್ರದಾಯಿಕ ವೈರತ್ವ ಸಿಯಾಚಿನ್ ಸಮಸ್ಯೆಯ ಮೂಲ ಎಂದರೆ ತಪ್ಪೇನಿಲ್ಲ. ಅಪಾರ ಕಷ್ಟ ನಷ್ಟಗಳ ನಂತರ ಭಾರತೀಯ ಸೇನೆ ಸಿಯಾಚಿನ್ ಮೆಲೆ ಸಾಧಿಸಿದ ಹಿಡಿತವನ್ನು ಕಳೆದುಕೊಳ್ಳಲು ಭಾರತ ಸಿದ್ಧವಿಲ್ಲ. ಸಿಯಾಚಿನ್ ಸಮರ ನೀತಿಯ ದೃಷ್ಠಿಯಿಂದ ಇನ್ನೂ ಪ್ರಾಮುಖ್ಯತೆ ಉಳಿಸಿಕೊಂಡಿದೆ ಎನ್ನಲು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಿಯಾಚಿನ್ ವಶಪಡಿಸಿಕೊಳ್ಳಲು ಪಾಕ್ ನಡೆಸಿದ ಪ್ರಯತ್ನಗಳೇ ಸಾಕ್ಷಿ. ಒಂದು ವೇಳೆ ಭಾರತೀಯ ಸೇನೆ ಎತ್ತರದ ಯುದ್ಧ ಭೂಮಿಯನ್ನು ಬಿಟ್ಟು ಬಂದಿದ್ದೇ ಆದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಚೈನಾ ಆಕ್ರಮಿತ ಅಕ್ಸಾಯ್ ಚಿನ್ ಗೂ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಸೆಂಟರ್ ಫಾರ್ ಲ್ಯಾಂಡ್ ವಾರ್ ಫೇರ್ ಸ್ಟಡೀಸ್ ನಿರ್ದೇಶಕರಾಗಿರುವ ನಿವೃತ್ತ ಮೇಜರ್ ಜನರಲ್ ಧ್ರುವ್ ಕಟೋಚ್ ಅವರ ಪ್ರಕಾರ ಭಾರತ ಸಮಸ್ಯೆಯನ್ನು ಭಾರತ-ಪಾಕ್ ನಡುವಿನ ಎಲ್ಲಾ ಸಂಘರ್ಷಗಳ ವಿಸ್ತಾರವದ ನೆಲೆಯಲ್ಲಿ ಪರಾಮರ್ಶಿಸಬೇಕು. ಸೇನಾ ಹಿಂಪಡೆಯುವಿಕೆಗೆ ಪಾಕಿಸ್ತಾನ ಉತ್ಸುಕವಾಗಿದ್ದರೂ, ಭವಿಷ್ಯದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯ ಮೇಲೆ ಇದು ಬೀರುವ ಪರಿಣಾಮ ಊಹೆಗೆ ನಿಲುಕದ್ದು. ಪಾಕಿಸ್ತಾನ ಅದೆಷ್ಟು ವಿಶ್ವಾಸಾರ್ಹ ರಾಷ್ಟ್ರ ಎಂಬ ಬಗ್ಗೆ ಚರಿತ್ರೆಯ ಪುಟಗಳೇ ಸಾರಿ ಹೇಳುತ್ತವೆ. ಒಂದು ವೇಳೆ ಪಾಕಿಸ್ತಾನ ಅಪ್ಪಿ ತಪ್ಪಿ(!) ನುಡಿದಂತೆ ನಡೆದರೂ, ಇತ್ತ ಕಡೆ ಸಿಯಾಚಿನ್ ಮೇಲೆ ಚೈನಾ ಆಕ್ರಮಣದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿಯಲ್ಲಿರುವ ಭಾರತಕ್ಕೆ, ನಮ್ಮ ಯೋಧರ ಬಲಿದಾನ ಮತ್ತು ಬಲಿದಾನವನ್ನು ದೇಶ ಗೌರವಿಸಿದ ರೀತಿ ಇನ್ನಷ್ಟು ಬಲ ತುಂಬಲಿದೆ.




  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vijayavani newspaper on 29 February 2016)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ