ಭಾನುವಾರ, ಮೇ 8, 2016

ವಿಶ್ವದ ನೆತ್ತಿ ಮೇಲೆ ಅಣ್ವಸ್ತ್ರದ ತೂಗುಗತ್ತಿ

ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016 ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ!1962 ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!
- ಕೀರ್ತಿರಾಜ್


ಇತಿಹಾಸ ಯುದ್ಧಗಳ ಕಥೆಯಾದಂತೆ ರಾಜಕೀಯವೂ ಶಕ್ತಿ ಪ್ರದರ್ಶನದ ಸಂತೆಯೇ ಸರಿ! ಅದರಲ್ಲೂ ಜಾಗತಿಕ ರಾಜಕೀಯದ ಪ್ರತಿ ಕ್ಷಣವೂ ಸಂಘರ್ಷ ಸಂಧಿಗ್ಧತೆಗಳ ಸರಮಾಲೆ. ಇತ್ತಿಚೆಗೆ ಸಣ್ಣಪುಟ್ಟ ಸಂಘರ್ಷಗಳಲ್ಲೂ ಅಣ್ವಸ್ತ್ರದ ಪ್ರಸ್ತಾಪವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ವಿಶ್ವಕ್ಕೆ ಅಣುಭೀತಿ ಹೊಸ ವಿಷಯವೇನಲ್ಲ. 1945ರಲ್ಲಿ 'ಮ್ಯಾನ್ಹಟ್ಟನ್ ಪ್ರಾಜೆಕ್ಟ್' ಹೆಸರಿನಲ್ಲಿ ಅಮೆರಿಕಾ ಅಣು ಶಕ್ತಿಯಾಗಿ ಭಸ್ಮಾಸುರನಂತೆ ಜಪಾನ್ ತಲೆಯ ಮೇಲೆ ಕೈಯಿಟ್ಟಾಗಲೇ ಅಣ್ವಸ್ತ್ರ ಯಮನ ಆತ್ಮೀಯ ಕಿಂಕರನೆಂದು ಸಾಬೀತು ಪಡಿಸಿತ್ತು. 1945ರಿಂದ 2016ರವರೆಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕಾಗಿ ಸಿ.ಟಿ.ಬಿ.ಟಿ (CTBT) ಎನ್.ಪಿ.ಟಿ (NPT)ಗಳಂಥ ಅನೇಕ ಒಪ್ಪಂದ ಕರಾರುಗಳು ಬಂದು ಹೋಗಿವೆ. ಬಹು ನಿರೀಕ್ಷೆ ಮೂಡಿಸಿದ 1968 ಎನ್.ಪಿ.ಟಿ ಕೂಡ ಬಲಿಷ್ಟ ರಾಷ್ಟ್ರಗಳ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಟೆಗಳಿಗೆ ಬಲಿಯಾಗಿ ಹೋಯಿತು. ಒಟ್ಟಿನಲ್ಲಿ ನಮ್ಮ ತಲೆಯ ಮೇಲೆ ಕೈಯಿಡಲು ನಾವೇ ಸೃಷ್ಟಿಸಿಕೊಂಡ ಭಸ್ಮಾಸುರ ಅಣ್ವಸ್ತ್ರ.


ನಾಲ್ಕನೆಯ ಮತ್ತು ಕೊನೆಯ ಅಣ್ವಸ್ತ್ರ ಭದ್ರತಾ ಶೃಂಗಸಭೆ ಇದೇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಾಷಿಂಗ್ಟನ್ ನಲ್ಲಿ ನಡೆಯಿತು. ಕೊನೆಯ ಶೃಂಗ ಸಭೆಯಲ್ಲೂ ವಿಶ್ವ ನಾಯಕರ ಕಳವಳಕ್ಕೆ ಕಾರಣವಾದ ವಿಷಯ ಅಣ್ವಸ್ತ್ರ ಭಯೋತ್ಪಾದನೆ. ಐವತ್ತಕ್ಕೂ ಹೆಚ್ಚು ಅಣ್ವಸ್ತ್ರ ರಾಷ್ಟ್ರಗಳು, ಸಾವಿರಾರು ಅಣ್ವಸ್ತ್ರಗಳು ಭೂಮಂಡಲದ ನಾಶಕ್ಕೆ ಕಾಯುತ್ತಿವೆ. ಯಾವುದೇ ಒಂದು ಸಣ್ಣ ಪ್ರಮಾದ ಸಾಕು ದೇಶ ದೇಶ ಎಂಬ ಬೇಧ ಭಾವಗಳಿಲ್ಲದೆ ಇಡೀ ಭೂಮಿಯನ್ನು ಸುಟ್ಟು ಹಾಕಲು! ದಶಕಗಳ ಹಿಂದೆ ಹಿರೋಶಿಮಾ ಮತ್ತು ನಾಗಸಾಕಿಗಳನ್ನು ಧ್ವಂಸ ಮಾಡಿದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ 2016 ಅಣ್ವಸ್ತ್ರಗಳ ಸಾಮರ್ಥ್ಯದ ಮುಂದೆ ಏನೇನೂ ಅಲ್ಲ! 1962 ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ವಿಶ್ವವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿತ್ತು ಎಂದಾದಲ್ಲಿ ಇವತ್ತಿನ ಅಣ್ವಸ್ತ್ರಗಳ ಭೀಕರತೆಯನ್ನು ಊಹಿಸಬಹುದಷ್ಟೇ!



ಎಲ್ಲಾ ರಾಷ್ಟ್ರಗಳಿಗೂ ತಮ್ಮದೇ ರೀತಿಯ ಅಣು ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆಗಳಿವೆ. ಯಾವುದೇ ದೇಶದ ಅಣ್ವಸ್ತ್ರ ರಕ್ಷಣಾ ವ್ಯವಸ್ಥೆಯಲ್ಲಿ ಅಲ್ಪ ವ್ಯತ್ಯಾಸವಾಗಿ, ಅಣ್ವಸ್ತ್ರ ಭಯೋತ್ಪದಕರ ಕೈ ಸೇರುವಂತಾದರೆ ಗಂಡಾಂತರ ಖಂಡಿತ. ಭಯೋತ್ಪಾದಕ ಸಂಘಟನೆಗಳೂ ಅಣ್ವಸ್ತ್ರ ಪ್ರಯೋಗದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದೂ ವಿಶ್ವ ಶಕ್ತಿಗಳ ಪಾಲಿಗೆ ಎಚ್ಚರಿಕೆಯ ಘಂಟೆ. ನಿಧಾನವಾಗಿ ಇರಾಕ್ ಮತ್ತು ಸಿರಿಯಾಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಾಗ್ದಾದಿಯ ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಭಾವವನ್ನು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿದೆ. ಹತಾಶ ಪ್ರಯತ್ನ ಅಣ್ವಸ್ತ್ರ ಖರೀದಿಯವರೆಗೆ ಮುಂದುವರೆದರೆ ಆಶ್ಚರ್ಯವೇನಿಲ್ಲ. ಇತ್ತಿಚೆಗೆ ಬೆಲ್ಜಿಯಂನ ಅಣು ಸ್ಥಾವರದ ಕೆಲಸಗಾರನ್ನು ಗುಂಡಿಕ್ಕಿ ಕೊಂದು, ಅವನ ಭದ್ರತಾ ಗುರುತು ಚೀಟಿಯನ್ನು ಕಳ್ಳತನ ಮಾಡಲಾಗಿದೆ. ಇನ್ನೊಂದೆಡೆ ಇಬ್ಬರು ಬೆಲ್ಜಿಯನ್ ಅಣು ಸ್ಥಾವರದ ಕೆಲಸಗಾರರು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡಿರುವ ವರದಿಗಳು ಅಣ್ವಸ್ತ್ರ ಭಯೋತ್ಪಾದನೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇತ್ತಿಚೆಗೆ ಇಸ್ಲಾಮಿಕ್ ಸ್ಟೇಟ್ ಪ್ರಕಟಿಸಿದ ಕರಪತ್ರವೊಂದರಲ್ಲಿ ಪಾಕಿಸ್ತಾನದ ಲಂಚಕೋರ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಅಣ್ವಸ್ತ್ರ ಪಡೆದುಕೊಳ್ಳುವ ಯೋಜನೆಯ ಬಗ್ಗೆ ಆಘಾತಕಾರಿ ವಿವರಗಳಿದ್ದವು! ಹಾಗೆಂದ ಮಾತ್ರಕ್ಕೆ ಪಾಕಿಸ್ತಾನ ನೇರವಾಗಿ ಅಣ್ವಸ್ತ್ರಗಳನ್ನು ಭಯೋತ್ಪಾದಕರ ಕೈಗೊಪ್ಪಿಸುತ್ತವೆ ಎಂದಲ್ಲ. ಪಾಕಿಸ್ತಾನದಿಂದ ಅಣ್ವಸ್ತ್ರಗಳು ಭಯೋತ್ಪಾದಕರ ಕೈ ಸೇರಬಹುದೇ ಎಂಬ ಪ್ರಶ್ನೆಗೆ ಹೌದು ಎಂದುತ್ತರಿಸುವ ರಾಜಕೀಯ ವಿಶ್ಲೇಷಕರಿದ್ದಂತೆ ಇಲ್ಲ ಎನ್ನುವವರೂ ಇದ್ದಾರೆ


೨೦೦೧ನೇ ಜನವರಿಯಲ್ಲಿ ಪಾಕಿಸ್ತಾನದ ಖುಶಾಬ್ ಪ್ಲುಟೋನಿಯಂ ಅಣುಕೇಂದ್ರದ ಮಾಜಿ ಮುಖ್ಯಸ್ಥ ಬಶೀರುದ್ದೀನ್ ಮಹಮೂದ್ ಯು ಟಿ ಎನ್ ಸಂಸ್ಥೆಯ ಅಧ್ಯಕ್ಷತೆಯಲ್ಲಿ ಒಂದಷ್ಟು ಅಣ್ವಸ್ತ್ರ ವಿಜ್ಞಾನಿಗಳು ಯು ಟಿ ಎನ್ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. ಅದೇ ೨೦೦೧ರ ನವಂಬರ್ ನಲ್ಲಿ ಅಮೆರಿಕಾದ ನಿರ್ದೇಶನದಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಬಶೀರುದ್ದೀನ್  ಸೇರಿದಂತೆ ಅನೇಕ ಯುಟಿಎನ್ ಸದಸ್ಯರನ್ನು ಬಂಧಿಸಿತು. ವಿಚಾರಣೆಯಲ್ಲಿ ಬಶೀರುದ್ದೀನ್ ಒಸಾಮ್ ಬಿನ್ ಲಾಡೆನ್ ಭೇಟಿಯಾಗಿ ಅಣು ಬಾಂಬು ತಯಾರಿಸುವ ವಿಚಾರದಲ್ಲಿ ಮಾತುಕತೆ ನಡೆಸಿದ್ದನ್ನು ಒಪ್ಪಿಕೊಂಡಿದ್ದ! ೨೦೦೪ರಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಂತ್ರಜ್ಞಾನದ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಅಣ್ವಸ್ತ್ರ ತಂತ್ರಜ್ಞಾನವನ್ನು ಲಿಬಿಯಾ, ಉತ್ತರ ಕೊರಿಯಾ ಮತ್ತು ಇರಾನ್ ಗಳಿಗೆ ಮಾರಿಕೊಂಡಿದ್ದು, ಪಾಕಿಸ್ತಾನದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದೆ. ಗುಪ್ತಚರ ವರದಿಗಳ ಪ್ರಕಾರ ಅಲ್-ಖೈದಾ ಕೂಡ  ಅಣ್ವಸ್ತ್ರ ಹೊಂದಲು ಉತ್ಸುಕವಾಗಿದ್ದು  ಅಬ್ದುಲ್ ಖಾದಿರ್ ಖಾನ್ ಅಲ್-ಖೈದಾ ಬೇಡಿಕೆಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಎಲ್ಲಾ ವಿದ್ಯಮಾನಗಳು ಪಾಕಿಸ್ತಾನದ ಕೈಯಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಅನುಮಾನ ಮೂಡುತ್ತದೆ.


ಭಾರತ ಪಾಕಿಸ್ತಾನ ಸೇನಾ ಬಲಾಬಲಗಳನ್ನು ಗಮನಿಸಿದರೆ, ಪಾಕಿಸ್ತಾನ ಯಾವುದೇ ರೀತಿಯಲ್ಲೂ ಭಾರತಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಿಲ್ಲ. ಆದರೆ ಸೋಲುವ ಪರಿಸ್ಥಿತಿ ಬಂದಲ್ಲಿ ಅಣ್ವಸ್ತ್ರ ಪ್ರಯೋಗಕ್ಕೂ ಪಾಕಿಸ್ತಾನ ಸಿದ್ಧವಾಗಿದೆ ಎಂಬುದು ಪಾಕ್ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗಿವೆ. ಭಾರತ ನೈತಿಕ ದೃಷ್ಟಿಯಿಂದ No First Use ಅಣ್ವಸ್ತ್ರ ನೀತಿಯನ್ನು ಪಾಲಿಸುತ್ತಿದೆ. ಆದರೆ ಪಾಕಿಸ್ತಾನಕ್ಕೆ ಇಂಥ ಯಾವುದೇ ಸ್ವಯಂ ಕಡಿವಾಣಗಳು ಇಲ್ಲ. ಒಂದು ವೇಳೆ ಇದ್ದರೂ ಅದರ ಪಾಲನೆ ಪ್ರಶ್ನಾರ್ಹವೇ ಆಗಿರುವುದರಿಂದ ಅಣ್ವಸ್ತ್ರ ಭೀತಿ ತಪ್ಪಿದ್ದಲ್ಲ. ಇಲ್ಲಿಯವರೆಗೂ ಅಣ್ವಸ್ತ್ರ ಭಯೋತ್ಪಾದಕರ ಕೈ ಸೇರದಿರುವುದು, ಯಾವ ದೇಶವೂ ಅಂಥ ಹೊಣೆಗೇಡಿತನ ತೋರಿಲ್ಲ ಎಂಬುದರ ಸಂಕೇತ. ಹೀಗಿದ್ದರೂ ಪ್ರಸಕ್ತ ಜಾಗತಿಕ ಚದುರಂಗದ ಹೊಸ ಆಯಾಮಗಳು ಅನಿರೀಕ್ಷಿತ ತಿರುವುಗಳಿಗೆ ಮುನ್ನುಡಿಯಾಗುವಂತಿದೆ. ಉಗ್ರ ನಿಗ್ರಹದ ಜೊತೆಗೆ ಅಣ್ವಸ್ತ್ರ ಭದ್ರತೆ ವಿಶ್ವ ಶಕ್ತಿಗಳ ಮೂಲ ಮಂತ್ರವಾಗಬೇಕಿದೆ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 3 May 2016)









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ