ಮಂಗಳವಾರ, ಜೂನ್ 28, 2016

ವುಕಾನ್ ಸೆನ್ಸಾರ್ ಮತ್ತು ಚೀನಿ ಪ್ರಜಾಪ್ರಭುತ್ವ!

ಒಂದೊಮ್ಮೆ ಚೀನಾ ಪ್ರಜಾಪ್ರಭುತ್ವದ ಪ್ರತೀಕವಾಗಿದ್ದ 'ವುಕಾಂಗ್' ಇಂದು ಚೀನೀ ಸರ್ವಾಧಿಕಾರದ ಪ್ರಜಾದಮನ ನೀತಿಯನ್ನು ಪ್ರತಿನಿಧಿಸಿದರೂ ಅಚ್ಚರಿ ಪಡಬೇಕಿಲ್ಲ. 
- ಕೀರ್ತಿರಾಜ್


ಚೀನಾದ ಕಮ್ಯುನಿಸ್ಟ್ ನಾಯಕರು ಚೀನಾವನ್ನು ಪ್ರಜಾಪ್ರಭುತ್ವ ಎಂದು ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಕೈಬಿಟ್ಟವರಲ್ಲ. ವಾಸ್ತವಿಕವಾಗಿ ಕಮ್ಯುನಿಸ್ಟರ ಪ್ರತಿಯೊಂದು ಹೆಜ್ಜೆಯೂ ಪ್ರಜಾಪ್ರಭುತ್ವದೊಂದಿಗೆ ಅಂತರ ಕಾಯ್ದುಕೊಂಡರೂ ಹೊರಜಗತ್ತಿಗೆ ಪ್ರಜಾರಾಜ್ಯವೆಂದು ತೋರಿಸಿಕೊಳ್ಳುವ ಆಸೆ ಯಾವ ಚೀನಿ ನಾಯಕರನ್ನೂ ಬಿಟ್ಟಿಲ್ಲ. ಕೆಲವೇ ವರ್ಷಗಳ ಹಿಂದೆ ಚೀನಾದ ಪ್ರಜಾಪ್ರಭುತ್ವದ ಸಂಕೇತದಂತಿದ್ದ 'ವುಕಾನ್' (Wukan) ಎಂಬ ಪದವನ್ನು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಹೆಚ್ಚು ಸೆನ್ಸಾರ್ ಮಾಡಲಾಗಿದೆ. ಇದರೊಂದಿಗೆ ಚೀನಾದ ಪ್ರಜಾಪ್ರಭುತ್ವ(?)ದ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. 

ಐದು ವರ್ಷಗಳ ಹಿಂದೆ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ವುಕಾನ್ ಎಂಬ ಹಳ್ಳಿಯ ಜನ ಚೀನಿ ಸರಕಾರವನ್ನು ಪ್ರತಿಭಟಿಸಿ ಹಳ್ಳಿಯನ್ನು ಸಂಪರ್ಕಿಸುವ ರಸ್ತೆಗಳಿಗೆ ದಿಗ್ಬಂಧನ ಹಾಕಿದ್ದಷ್ಟೇ ಅಲ್ಲದೇ ಹಳ್ಳಿಯಲ್ಲಿದ್ದ ಸರಕಾರಿ ಅಧಿಕಾರಿಗಳನ್ನು ಹೊರಗಟ್ಟಿ, ಹಳ್ಳಿಯೊಳಗೆ ಪ್ರವೇಶವನ್ನೂ ನಿರಾಕರಿಸಿದ್ದರು. ವುಕಾನ್ ಹಳ್ಳಿಗರ ಪ್ರತಿಭಟನೆಗ ಕಾರಣ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಅಧಿಕಾರಿಗಳು ಕೃಷಿ ಮತ್ತು ಇನ್ನಿತರ ಭೂಮಿಯನ್ನು ಹೆಚ್ಚು ಲಾಭಕ್ಕೋಸ್ಕರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದು. ಇಂಥದ್ದೊಂದು ಘಟನೆ ಭಾರತದಲ್ಲಾಗಿದ್ದರೆ ಹತ್ತರಲ್ಲಿ ಹನ್ನೊಂದು ಎಂಬಂತಾಗುತ್ತಿತ್ತು. ಆದರೆ ಚೀನಾದಲ್ಲಿ ಜನ ಪ್ರತಿಭಟಿಸಿ ರಸ್ತೆಗಿಳಿಯುವ ಮೊದಲು ನೂರು ಬಾರಿ ಯೋಚಿಸಿ, ಪ್ರಾಣದ ಮೇಲಿನ ಆಸೆ ಬಿಟ್ಟ ನಂತರವಷ್ಟೇ ಎನ್ನುವುದಕ್ಕೆ 1989ರಲ್ಲಿ ಟಿಯಾನ್ಮೆನ್ ವೃತ್ತದಲ್ಲಿ ಚೀನಿ ಕಮ್ಯುನಿಸ್ಟ್ ಸರಕಾರ ನಡೆಸಿದ ಹತ್ಯಾಕಾಂಡಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ! ಪ್ರತಿಭಟನಾಕಾರರನ್ನು ಚೀನಿ ಸರಕಾರ ನಡೆಸಿಕೊಳ್ಳುವ ರೀತಿ ಪ್ರತಿಭಟನೆಯ ಅವಶ್ಯಕತೆ ಮತ್ತು ಅವಕಾಶಗಳೆರಡನ್ನೂ ಮಬ್ಬಾಗಿಸುತ್ತವೆ. ಹೀಗಿದ್ದಾಗಲೂ 2011ರಲ್ಲಿ ವುಕಾಂಗ್ ಹಳ್ಳಿಯ ಜನ ಸ್ಥಳೀಯ ಅಧಿಕಾರಿಗಳ ಭೂಕಬಳಿಕೆಯನ್ನು ವಿರೋಧಿಸಿ ಚೀನೀ ಸರಕಾರವನ್ನು ಎದುರು ಹಾಕಿಕೊಂಡಿದ್ದು ಗಮನಾರ್ಹ ಬೆಳವಣಿಗೆಯೇ ಸರಿ.

ವುಕಾಂಗ್ ಹಳ್ಳಿಗರ ಈ ದಿಟ್ಟತನಕ್ಕೆ ಪ್ರತಿಯಾಗಿ ಚೀನಿ ಸರಕಾರದ ಪ್ರತ್ಯುತ್ತರ ಏನಿದ್ದೀತು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಚೀನಿ ಸರಕಾರ ಈ ಹಿಂದೆ ಪ್ರಜೆಗಳ ಪ್ರತಿರೋಧವನ್ನು ದಮನಿಸಿದ ರೀತಿಯಲ್ಲೇ ವುಕಾನ್ ಹಳ್ಳಿಗರನ್ನೂ ನಿರ್ನಾಮ ಮಾಡಿಬಿಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಊಹಿಸಲಾಗದ ಅಚ್ಚರಿಯಂತೆ ಚೀನಿ ಕಮ್ಯುನಿಸ್ಟ್ ಸರಕಾರ ಸಾಧು ಪ್ರಜಾಪ್ರಭುತ್ವದಂತೆ ವರ್ತಿಸಿತ್ತು! ಗುವಾಂಗ್ಡಾಂಗ್ ಪ್ರಾಂತ್ಯದ ಕಮ್ಯುನಿಸ್ಟ್ ಪಕ್ಷದ ಪ್ರಾಂತೀಯ ಮುಖ್ಯಸ್ಥ ವಾಂಗ್ ಯಾಂಗ್, ವುಕಾನ್ ಪ್ರತಿಭಟನಾಕಾರರನ್ನು ಭೇಟಿಯಾಗಿ, ಸ್ಥಳೀಯ ಸರಕಾರದ ಆಯ್ಕೆಗಾಗಿ ಮುಕ್ತ ಚುನಾವಣೆ ಮತ್ತು ಭೂಕಬಳಿಕೆಯ ವಿಚಾರವಾಗಿ ವಿಚಾರಣೆ ನಡೆಸುವ ವಾಗ್ದಾನ ನೀಡಿದ್ದ. ಈ ರೀತಿಯಾಗಿ 2011ರಲ್ಲಿ ಚೀನಾದ ದಿನಪತ್ರಿಕೆಗಳ ಮುಖ್ಯ ಸುದ್ಧಿಯಾದ 'ವುಕಾನ್ ಘಟನೆ' ಅಪರೂಪಕ್ಕೆಂಬಂತೆ ಚೀನಾ ಕೂಡ ಪ್ರಜಾಪ್ರಭುತ್ವ ಮೌಲ್ಯಗಳ ಅನುಸಾರ ಕಾರ್ಯನಿರ್ವಹಿಸುತ್ತದೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತು. ಅಂದಿನಿಂದ 'ವುಕಾನ್' ಎಂಬ ಪದ ಚೀನಾದೊಳಗೂ ಪ್ರಜಾಪ್ರಭುತ್ವದ ಜೀವಂತಿಕೆಗೆ ಪರ್ಯಾಯವಾಗಿ ಉಪಯೋಗಿಸಲ್ಪಡುತ್ತಿತ್ತು. 2011ರ ಈ ದಂಗೆ 'ವುಕಾಂಗ್' ಪದವನ್ನು ಚೀನಾದ ಕಮ್ಯುನಿಸ್ಟರ ಪಾಲಿಗೆ  ಪ್ರತಿಷ್ಠೆಯ ವಿಷಯವಾಗಿಸಿತ್ತು.

ಆದರೀಗ 'ವುಕಾನ್' ಪದ ಚೀನಾದಲ್ಲಿ ಕಟ್ಟುನಿಟ್ಟಾಗಿ ಸೆನ್ಸಾರ್ ಮಾಡಲ್ಪಟ್ಟಿದೆ. ವುಕಾನ್ ಹಳ್ಳಿಯಲ್ಲಿ ಮತ್ತೆ ಹೋರಾಟದ ಕಿಚ್ಚು ಹತ್ತಿಕೊಂಡಿದೆ. ಇದೇ ಜೂನ್ 17ರಂದು ವುಕಾನ್ ಹಳ್ಳಿಯ ಜನಪ್ರಿಯ ನಾಯಕ ಲಿನ್  ಜುಲ್ವಾನ್ ಬಂಧನಕ್ಕೊಳಗಾಗಿದ್ದನ್ನು ವಿರೋಧಿಸಿ ವುಕಾನ್ ಹಳ್ಳಿಗರು ಐದು ವರ್ಷಗಳ ನಂತರ ಮತ್ತೆ ಬೀದಿಗಿಳಿದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಬಂಧನಕ್ಕೊಳಗಾದ ಲಿನ್ 2011ರ ವುಕಾನ್ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ! ದಂಗೆಯ ನಂತರ ವಾಂಗ್ ಯಾಂಗ್ ಆಶ್ವಾಸನೆಯಂತೆ ನಡೆದ ಚುನಾವಣೆಯಲ್ಲಿ ಜನಬೆಂಬಲದೊಂದಿಗೆ ಜಯಗಳಿಸಿದ್ದ ಲಿನ್ ಬಂಧನ ವುಕಾಂಗ್ ನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಜೂನ್ 19ರಂದು ಸಾವಿರಾರು ಪ್ರತಿಭಟನಾನಿರತರು, ತಮ್ಮ ಬಂಧನಕ್ಕೊಳಗಾದ ನಾಯಕನನ್ನು ಹಿಂದಿರುಗಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪ್ರತಿಭಟನಾಕಾರರು ಅಂತರ್ಜಾಲವನ್ನು ಬಳಸಿಕೊಂಡು, ಹಳ್ಳಿಯ ಮೇಲಿನ ಪೊಲೀಸ್ ದಾಳಿ ಮತ್ತು ಲಿನ್ ಬಂಧನದ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಚೀನಾ ಸರಕಾರ 'ವುಕಾನ್' ಎಂಬ ಪದವನ್ನೇ ಸೆನ್ಸಾರ್ ಮಾಡಿ ಅಂತರ್ಜಾಲದ ಮೇಲಿನ ತನ್ನ ನಿಯಂತ್ರಣದಿಂದ ಈ ಸುದ್ಧಿ ಹರಡದಂತೆ ನೋಡಿಕೊಂಡಿದೆ. ವೈಬೋ (Weibo- ಚೀನಾದಲ್ಲಿ ಟ್ವಿಟರ್ ನಂತೆ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣ)ದಿಂದ ಲಿನ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಷ್ಟೇ ಅಲ್ಲದೇ, ವುಕಾನ್ ಸಂಬಂಧಿತ ಎಲ್ಲಾ ಪೋಸ್ಟ್, ವಿಡಿಯೋ ಮತ್ತು ಚಿತ್ರಗಳನ್ನು ತೆಗೆದುಹಾಕಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ 2011ರ ದಂಗೆಯ ನಾಯಕತ್ವ ವಹಿಸಿದ್ದ ಲಿನ್ ಮೇಲೆ ಐದು ವರ್ಷಗಳ ನಂತರ ಚೀನೀ ಕಮ್ಯುನಿಸ್ಟರು ವ್ಯವಸ್ಥಿತವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಇನ್ನಿತರ ಆಂತರಿಕ ದಂಗೆ ಮತ್ತು ಪ್ರಜಾಪ್ರಭುತ್ವದ ಪರ ಧ್ವನಿ ಎತ್ತುವವರಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಲಾಗಿದೆ.

2011ರಲ್ಲಿ ವುಕಾನ್ ದಂಗೆ ಮತ್ತು ಚೀನಿ ಸರಕಾರ ನಡೆಸಿಕೊಂಡ ರೀತಿಗೂ ಇವತ್ತಿನ 2016ರ ವುಕಾನ್ ದಂಗೆಗೂ ಅಜಗಜಾಂತರ ವ್ಯತ್ಯಾಸವಿದೆ. 2011ರ ದಂಗೆಯ ಸಂದರ್ಭದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥನಾಗಿದ್ದ ಹು ಜಿಂಟಾವೋ ಉದಾರವಾದಿ ನಿಲುವಿನಿಂದಾಗಿ, ವಾಂಗ್ ಯಾಂಗ್ ವುಕಾಂಗ್ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಲು ಪ್ರಯತ್ನಪಟ್ಟಿದ್ದರು. ಆದರೆ ಇವತ್ತಿನ ಕ್ಸಿ ಜಿನ್ ಪಿಂಗ್ ನಾಯಕತ್ವ ವುಕಾಂಗ್ ಸಮಸ್ಯೆಯನ್ನು ಯಾವ ರೀತಿ ಕೊನೆಗೊಳಿಸುತ್ತಾರೆ ಎಂಬುದರ ಮೇಲೆ ಚೀನಾದ ಪ್ರಜಾಪ್ರಭುತ್ವದ ಗಟ್ಟಿತನ ನಿರ್ಧಾರವಾಗಲಿದೆ. ಒಂದೊಮ್ಮೆ ಚೀನಾ ಪ್ರಜಾಪ್ರಭುತ್ವದ ಪ್ರತೀಕವಾಗಿದ್ದ 'ವುಕಾಂಗ್' ಇಂದು ಚೀನೀ ಸರ್ವಾಧಿಕಾರದ ಪ್ರಜಾದಮನ ನೀತಿಯನ್ನು ಪ್ರತಿನಿಧಿಸಿದರೂ ಅಚ್ಚರಿ ಪಡಬೇಕಿಲ್ಲ. ಪದೇ ಪದೇ ಕಾರ್ಲ್ ಮಾರ್ಕ್ಸ್ ಮತ್ತು ಕಾರ್ಮಿಕರ ಸಮಾಜವಾದಿ ರಾಜ್ಯದ ತತ್ವ ಹೇಳುವ ಕಮ್ಯುನಿಸ್ಟರ ಪರಿಸ್ಥಿತಿ ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎಂಬಂತಾಗಿದೆ.




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 24 June 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ