ಗುರುವಾರ, ಫೆಬ್ರವರಿ 23, 2017

ಭಾರತ-ಇಂಡೊನೇಷ್ಯಾ ಬಾಂಧವ್ಯ: ಪ್ರಾದೇಶಿಕ ಸ್ಥಿರತೆಯತ್ತ ಏಷ್ಯಾ


1962ರ ಇಂಡೋ-ಚೀನಾ ಯುದ್ಧದ ಬಳಿಕ ಭಾರತ ಮತ್ತು ಚೀನಾಗಳು ವಿಭಿನ್ನ ರೀತಿಯಲ್ಲಿ ಪ್ರಾದೇಶಿಕ ತಮ್ಮ ಪ್ರಾದೇಶಿಕ ಪ್ರಭಾವ ವಿಸ್ತರಿಸಿಕೊಳ್ಳುವತ್ತ ಗಮನ ಹರಿಸುತ್ತವೆ.  ಚೀನಾ ಹೊಸ ರಾಜಕೀಯ ಮತ್ತು ಆರ್ಥಿಕ ಅವಕಾಶಗಳನ್ನು ಬಳಸಿಕೊಂಡು ಪೂರ್ವ ಏಷ್ಯಾದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಂಡಿದ್ದಷ್ಟೇ ಅಲ್ಲದೇ ಬರ್ಮಾದ (ಈಗಿನ ಮ್ಯಾನ್ಮಾರ್)  ಮಿಲಿಟರಿ ಆಡಳಿತದ ಜೊತೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಭಾರತದ ಪ್ರಭಾವಕ್ಕೆ ತಡೆಯೊಡ್ಡಿತ್ತು. ಇತ್ತ ಭಾರತ ಪೂರ್ವ ಏಷ್ಯಾ ರಾಷ್ಟ್ರಗಳ ಜೊತೆ ತೊಡಗಿಕೊಂಡರೆ, ಸೊವಿಯೆತ್ ಒಕ್ಕೂಟ ಮುನಿಸಿಕೊಳ್ಳುತ್ತದೋ ಎಂಬ ಶೀತಲ ಸಮರದ ಲೆಕ್ಕಾಚಾರಗಳಿಂದಾಗಿ ಪೂರ್ವ ಏಷ್ಯಾದಿಂದ ದೂರ ಉಳಿದಿತ್ತು. ಆದರೆ ಪಿ. ವಿ ನರಸಿಂಹ ರಾವ್ ಪ್ರಧಾನಿಯಾದ ಬಳಿಕ ಭಾರತದ ನಿಲುವುಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ನರಸಿಂಹ ರಾವ್ ನೇತೃತ್ವದಲ್ಲಿ 'ಪೂರ್ವದತ್ತ ನೋಡು'ವ (Look East) ವಿದೇಶಾಂಗ ನೀತಿಯೊಂದು ರೂಪುಗೊಂಡು ಪೂರ್ವ ಏಷ್ಯಾದ ರಾಷ್ಟ್ರಗಳ ಜೊತೆ ಸಾಕಷ್ಟು ರಾಜತಾಂತ್ರಿಕ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಪೂರ್ವದ ರಾಷ್ಟ್ರಗಳತ್ತ ಭಾರತದ ಈ ಯೋಜನೆ ವಿಸ್ತೃತ ಯೋಜನೆಯಾಗಿದ್ದು ಆಸಿಯಾನ್ ಜೊತೆಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಆಗ್ನೇಯ ರಾಷ್ಟ್ರಗಳ ಕಡೆಗೂ ಗಮನ ಹರಿಸಿತ್ತು. ಮುಂದೆ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದಾಗಲೂ ಈ ಕುರಿತಾಗಿ ಧನಾತ್ಮಕ ಬೆಳವಣಿಗೆಗಳಾದವು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ 'ಪೂರ್ವದತ್ತ ನೋಡು'ವ ಭಾರತದ ನೀತಿಯನ್ನು ಮೇಲ್ದರ್ಜೆಗೇರಿಸಿ 'ಪೂರ್ವದೊಂದಿಗೆ ಕಾರ್ಯಪ್ರವೃತ್ತ'ವಾಗುವ (Act East) ಮೂಲಕ ಪೂರ್ವ ಏಷ್ಯಾ ದೇಶಗಳ ಜೊತೆಗಿನ ಹೊಸ ಬಾಂಧವ್ಯಕ್ಕೆ ನಾಂದಿ ಹಾಡಿದರು.

Image may contain: 1 person'ಪೂರ್ವದೊಂದಿಗೆ ಕಾರ್ಯಪ್ರವೃತ್ತ'ವಾಗುವ ಮಹತ್ತರ ಯೋಜನೆಯನ್ನು ಅರ್ಥಪೂರ್ಣವಾಗಿ ಜಾರಿಗೆ ತರುವಲ್ಲಿ ಅನೇಕ ಪ್ರಯತ್ನಗಳಾಗುತ್ತಿವೆ. ಮುಖ್ಯವಾಗಿ ಭಾರತ ಇದೇ ಪ್ರಪ್ರಥಮ ಬಾರಿಗೆ ಇಂಡೋನೇಷ್ಯಾದ ಜೊತೆ ಜಂಟಿ ವಾಯುಸೇನಾ ಸಮರಭ್ಯಾಸ ನಡೆಸಲು ನಿರ್ಧರಿಸಿದ್ದು, ಪೂರ್ವ ಏಷ್ಯಾಗಳ ಜೊತೆಗಿನ ಭಾರತದ ರಾಜತಾಂತ್ರಿಕ ಬದ್ಧತೆಯನ್ನು ನಿರೂಪಿಸಿದೆ. ಜಂಟಿ ಸಮರಾಭ್ಯಾಸ ಮಾತ್ರವಲ್ಲದೇ, ಸಾಗರ ಸಂಬಂಧಿ ಭದ್ರತಾ ಸಹಕಾರವನ್ನು ಸಾಕಾರಗೊಳಿಸಲು, ಭಾರತ ಇಂಡೋನೇಷ್ಯಾದ ನಾವಿಕರಿಗೆ ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆಯ ತರಬೇತಿ ನೀಡಲು ಒಪ್ಪಿಕೊಂಡಿದೆ. ಈ ಎರಡು ದೇಶಗಳು ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ಇನ್ನಿತರ ಮಿಲಿಟರಿ ಸಂಬಂಧಿತ ವಲಯಗಳಲ್ಲಿ ಪರಸ್ಪರ ಸಹಕಾರ ನೀಡಲು ಉತ್ಸುಕವಾಗಿವೆ. ಇಂಡೋನೇಷ್ಯಾದ ಅಧ್ಯಕ್ಷ ಜೊಕೊವಿ ವಿಡೊಡೊ 2016ರ ಡಿಸೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಲಭೂತ ದ್ವಿಪಕ್ಷೀಯ ರಕ್ಷಣಾ ಸಹಕಾರ ಒಪ್ಪಂದವೊಂದರ ರೂಪುರೇಷೆ ಸಿದ್ಧವಾಗಿದೆ. ಪ್ರಾದೇಶಿಕ ರಾಜಕೀಯದಲ್ಲಿ ಬದಲಾಗುತ್ತಿರುವ ಶಕ್ತಿ ಸಮತೋಲನಗಳು, ಭಾರತ ಮತ್ತು ಇಂಡೋನೇಷ್ಯಾಗಳ ನಡುವಿನ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಿದೆ.

ಜೊಕೊವಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತ ಮತ್ತು ಇಂಡೋನೇಷ್ಯಾಗಳೆರಡೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನಡೆಯ ಕುರಿತಾಗಿ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದು, ಈ ವಿವಾದವನ್ನು ಶಾಂತಿಯುತವಾಗಿ, ಜಾಗತಿಕ ಮೌಲ್ಯಗಳಿಗೆ ಅನುಗುಣವಾಗಿ ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಟಾಟೋಪಗಳ ಕುರಿತಾಗಿ ಹಲವಾರು ರಾಷ್ಟ್ರಗಳು ಅಸಮಧಾನ ವ್ಯಕ್ತಪಡಿಸಿವೆಯಾದರೂ ಭಾರತ ಮತ್ತು ಇಂಡೊನೇಷ್ಯಾಗಳ ವಿಚಾರ ಭಿನ್ನ. ಏಕೆಂದರೆ ಈ ಎರಡೂ ರಾಷ್ಟ್ರಗಳಿಗೂ ದಕ್ಷಿಣ ಚೀನಾ ಸಮುದ್ರ ವಿವಾದಕ್ಕೂ ಯಾವುದೇ ನೇರ ಸಂಬಂಧ ಇಲ್ಲ! ದಕ್ಷಿಣ ಚೀನಾ ಸಮುದ್ರದಲ್ಲಿ ಚೀನೀಯರು ಎಷ್ಟೇ ಪ್ರಭಾವ ವೃದ್ಧಿಸಿಕೊಂಡರೂ ಭಾರತ ಮತ್ತು ಇಂಡೋನೇಷ್ಯಾಗಳಿಗೆ ಯಾವುದೇ ನೇರ ನಷ್ಟ ಇಲ್ಲದೇ ಹೋದರೂ ಈ ಎರಡು ರಾಷ್ಟ್ರಗಳು ಚೀನಾ ಆಕ್ರಮಣಕ್ಕೆ ಸವಾಲು ಹಾಕುವ ಸಾಹಸ ಮಾಡಿದ್ದು ವಿಶೇಷವೇ ಸರಿ. ಚೀನಾದ ಆಕ್ರಮಣಕಾರಿ ನಡೆ ಮತ್ತು ಜಾಗತಿಕ ಮೌಲ್ಯಗಳಿಗೆ ಚೀನಾ ತೋರುತ್ತಿರುವ ಅಸಡ್ಡೆಯ ಜೊತೆ ಜೊತೆಗೆ ಪ್ರಾದೇಶಿಕ ಭದ್ರತೆಯಲ್ಲಿ ಅಮೆರಿಕಾದ ನಿರ್ಲಕ್ಷ್ಯ ಮೋದಿ ಮತ್ತು ಜೊಕೊವಿ ಮಾತ್ರವಲ್ಲದೇ ಇತರ ಏಷ್ಯಾದ ನಾಯಕರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಭಾರತಕ್ಕೆ ಇಂಡೋ-ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ ಚೀನಾ ತಲೆನೋವಾಗಿದ್ದರೆ, ಇಂಡೋನೇಷ್ಯಾದ ನಟುನಾ ದ್ವೀಪಗಳಲ್ಲಿ ಚೀನೀ ನೌಕಾಪಡೆಗಳ ಪ್ರಭಾವ ಹೆಚ್ಚಾಗಿರುವುದು ಜೊಕೊವಿ ಕಳವಳಕ್ಕೆ ಕಾರಣವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ, ಭಾರತ ಮತ್ತು ಇಂಡೋನೇಷ್ಯಾಗಳು ತಮ್ಮ ಭದ್ರತಾ ಮತ್ತು ರಾಜಕೀಯ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವತ್ತ ಗಮನಹರಿಸಿವೆ. 2005ರಲ್ಲಿ ಸಮರತಾಂತ್ರಿಕ ಪಾಲುದಾರಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿ ವರ್ಷಕ್ಕೊಂದು ಬಾರಿ ಎರಡೂ ದೇಶಗಳು ಒಟ್ಟು ಸೇರಿ ಸಮರತಾಂತ್ರಿಕ ವಿಷಯ ವಿನಿಮಯಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. 2001ರಲ್ಲಿ ಸಿದ್ಧವಾಗಿದ್ದ ರಕ್ಷಣಾ ಸಹಕಾರ ಒಪ್ಪಂದವನ್ನು 2006ರಲ್ಲಿ ಅಂಗೀಕರಿಸಲಾಗುತ್ತದೆ. ಪರಸ್ಪರ ಕಾನೂನು ನೆರವಿನ ಒಪ್ಪಂದವೊಂದು ಏರ್ಪಟ್ಟಿದ್ದು ಎರಡೂ ರಾಷ್ಟ್ರಗಳೂ ಪರಸ್ಪರರಿಗೆ ಅವಶ್ಯವಿರುವ ಮಾಹಿತಿಯನ್ನು ಕಲೆಹಾಕಿ ವಿನಿಮಯ ಮಾಡಿಕೊಳ್ಳುವ ಮೂಲಕ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ನೆರವು ಪಡೆದುಕೊಳ್ಳುತ್ತವೆ. ಇವಿಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಜಂಟಿ ನೌಕಾ ಸಮರಾಭ್ಯಾಸಗಳು, ಗಸ್ತು ತಿರುಗುವಿಕೆ ಇನ್ನಿತರ ನೌಕಾಪಡೆಯ ಜಂಟಿ ಚಟುವಟಿಕೆಗಳು ಭಾರತ ಇಂಡೋನೇಷ್ಯಾ ಸಂಬಂಧಗಳ ತಳಹದಿಯನ್ನು ಭದ್ರಗೊಳಿಸುತ್ತಿವೆ. ಇಂಡೊನೇಷ್ಯಾ ಪಾಲಿಗೆ ಮಿಲಿಟರಿ ಸರಕುಗಳ ಪೂರೈಕೆಯಲ್ಲೂ ಭಾರತ ಸೈ ಎನಿಸಿಕೊಂಡಿದೆ. ಭೌಗೋಳಿಕವಾಗಿಯೂ ಈ ಬಾಂಧವ್ಯ ಸದ್ಯದ ಭೂರಾಜಕೀಯದ ಅವಶ್ಯಕತೆಗಳಿಗೆ ಪೂರಕ ಎನಿಸುವಂತಿದೆ. ಯುರೋಪ್, ಮಧ್ಯಪ್ರಾಚ್ಯ, ಮತ್ತು ಆಗ್ನೇಯ ಏಷ್ಯಾಗಳ ಸಾಗರ ಸಂಪರ್ಕ ನಿರಾತಂಕವಾಗಿ ಸಾಗುವಲ್ಲಿ ಭಾರತ ಮತ್ತು ಇಂಡೋನೇಷ್ಯಾಗಳ ನೌಕಾಪಡೆಗಳ ಹೊಂದಾಣಿಕೆ ಅಗತ್ಯ. ಹಿಂದೂ ಮಹಾಸಾಗರದಿಂದ ಬಂಗಾಳ ಕೊಳ್ಳಿ ಮತ್ತು ಮಲಕ್ಕಾದ ಜಲಸಂಧಿಯವರೆಗಿನ ಸಾಗರ ಸಾಮ್ರಜ್ಯದ ನಿಯಂತ್ರಣ ಈ ಜಂಟಿ ನೌಕಾಪಡೆಯಿಂದ ಸಾಧ್ಯ. ಈ ಪ್ರದೇಶದಲ್ಲಿ ಭಾರತ ಉಳಿಸಿ ಬೆಳೆಸಿಕೊಂಡು ಬಂದ ನೈತಿಕ ಪ್ರಭಾವದಿಂದಾಗಿ ಇವತ್ತಿಗೆ ಭಾರತೀಯ ನೌಕಾಸೇನೆ, ಚೀನಾ ಪ್ರಭಾವಕ್ಕೆ ಸವಾಲಾಗಬಲ್ಲ ಏಕೈಕ ಶಕ್ತಿ ಎನ್ನುವ ಭರವಸೆ ಇಂಡೋನೇಷ್ಯಾ ಮಾತ್ರವಲ್ಲದೇ ಆಗ್ನೇಯ ಏಷ್ಯಾದ ಅನೇಕ ಸಣ್ಣಪುಟ್ಟ ರಾಷ್ಟ್ರಗಳಲ್ಲಿದೆ. 

ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಭಾರತ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕಿಳಿಸುತ್ತಿದೆ. ಈ ಪ್ರದೇಶದ ಸಣ್ಣ ಪುಟ್ಟ ರಾಷ್ಟ್ರಗಳು ಚೀನಾ ಆಕ್ರಮಣಕ್ಕೆ ತಡೆ ಹಾಕಲು ಭಾರತದತ್ತ ನೋಡುವಂತಾಗಿದ್ದರೆ, ದೊಡ್ಡ ರಾಷ್ಟ್ರಗಳು ಭಾರತವನ್ನು ಪ್ರಾದೇಶಿಕ ಸ್ಥಿರತೆ ಮತ್ತು ಬೆಳವಣಿಗೆ ಪೂರಕ ಶಕ್ತಿ ಎಂಬ ನಿಲುವು ತಳೆದಿರುವುದು ಭಾರತದ ಪ್ರಾದೇಶಿಕ ಪ್ರಭಾವ ವೃದ್ಧಿಸಿರುವುದಕ್ಕೆ ಸಾಕ್ಷಿ. ಭಾರತ ನಿಧಾನವಾಗಿ ಆಲಿಪ್ತ ನೀತಿಯಿಂದ ಹೊರಬರುತ್ತಿದ್ದು, ಇನ್ನಷ್ಟು ರಾಜತಾಂತ್ರಿಕ ಗೆಲುವುಗಳನ್ನು ಕಾಣುವ ಕಾತುರದಲ್ಲಿದೆ. ಭಾರತ-ಇಂಡೋನೇಷ್ಯಾಗಳ ಮಧ್ಯೆ ನಡೆದ ದ್ವಿಪಕ್ಷೀಯ ಮಾತುಕತೆಗಳು ನಿಸ್ಸಂಶಯವಾಗಿ ಭಾರತದ ವರ್ಚಸ್ಸು ಹೆಚ್ಚಿಸುವುದಲ್ಲದೇ ಪ್ರಾದೇಶಿಕ ಶಕ್ತಿ ಸಮತೋಲನದಲ್ಲಿ ಮಹತ್ತರ ಪಾತ್ರ ವಹಿಸಲಿದೆ.

(This article was published in Vishwavani Newsapaper on 16 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ