ಸೋಮವಾರ, ಮಾರ್ಚ್ 21, 2016

ಉತ್ತರ ಕೊರಿಯ ಅಣು ಪರೀಕ್ಷೆ: ಉತ್ತರವಿಲ್ಲದ ಪ್ರಶ್ನೆ!

ದೊಡ್ಡಣ್ಣನ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕಾ, ಮತ್ತೊಂದೆಡೆ ಜಗತ್ತಿನ ಮೇಲೆ ಯಜಮಾನಿಕೆ ಪ್ರಭಾವ ಹರಡಲು ಒಂದು ಸಣ್ಣ ಅವಕಾಶದ ನಿರೀಕ್ಷೆಯಲ್ಲಿರುವ ಚೀನಿ ದೈತ್ಯರ ಮುಸುಕಿನ ಗುದ್ದಾಟ ಯಾರೂ ತಿಳಿಯದ ಗುಟ್ಟೇನಲ್ಲಕೊರಿಯದ ಪರ್ಯಾಯ ದ್ವೀಪ ಪ್ರಸ್ತುತ ಎರಡು ವಿಶ್ವ ಶಕ್ತಿಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

- ಕೀರ್ತಿರಾಜ್ 


ವಿಶ್ವ ಶಕ್ತಿಗಳು ನೋಡು ನೋಡುತ್ತಿರುವಂತೆಯೇ ಉತ್ತರ ಕೊರಿಯಾ ಅಣ್ವಸ್ತ್ರ ಶಕ್ತಿಯಾಗಿ ಬದಲಾಗಿಬಿಟ್ಟಿದೆ. ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜಾಂಗ್-ಉನ್ ಅಣ್ವಸ್ತ್ರ ಕ್ಷಿಪಣಿಗಳು ಯಾವುದೇ ಕ್ಷಣದಲ್ಲಾದರೂ ದಾಳಿಗೆ ಸಿದ್ಧವಾಗಿರಬೇಕೆಂದು ಆದೇಶಿಸುವುದರೊಂದಿಗೆ, ಇಪ್ಪತ್ತೊಂದನೆ ಶತಮಾನದ ಯಮದೂತನಾಗುವ ಎಲ್ಲಾ ಲಕ್ಷಣಗಳನ್ನೂ ತೋರ್ಪಡಿಸಿದ್ದಾನೆ. ಜಾಗತಿಕ ಮಟ್ಟದಲ್ಲಿ ಏಕಾಂಗಿತನ, ಆಂತರಿಕ ಬಡತನಗಳೊಂದಿಗೆ ಉಸಿರುಗಟ್ಟಿಸುವಂಥ ಅಂತರ್ರಾಷ್ಟ್ರೀಯ ನಿಷೇಧಗಳ ಮಧ್ಯದಲ್ಲೂ ಕಿಮ್ ಆಡಳಿತದ ಕಠಿಣ ನಿಲುವು ಪ್ರಪಂಚದ ಮೇಲೆ ವಿಧ್ವಂಸದ ಕರಾಳ ಛಾಯೆ ಬೀರಿದೆ. ಅಧ್ಯಕ್ಷ ಕಿಮ್ ಉದ್ದಟತನಕ್ಕೆ ಚೀನಾ ಹಿಂಬಾಗಿಲಿನ ಸಹಕಾರ ಇದ್ದೇ ಇದೆ! ಜನವರಿ 6 ಹಾಗೂ ಫೆಬ್ರವರಿ 7 ರಂದು ನಿಷೇಧಿತ ಅಣ್ವಸ್ತ್ರ ಕ್ಷಿಪಣಿಗಳನ್ನು ಪರಿಕ್ಷಿಸುವುದರೊಂದಿಗೆ, ಉತ್ತರ ಕೊರಿಯದ ಶತ್ರು ರಾಷ್ಟ್ರಗಳಾದ ದಕ್ಷಿಣ ಕೊರಿಯ ಮತ್ತು ಜಪಾನ್ ಗಳ ನೆತ್ತಿಯ ಮೇಲೆ ಕತ್ತಿ ತೂಗಾಡುವಂತಾಗಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳ ರಕ್ಷಣೆಯ ಹೊಣೆ ಹೊತ್ತಿರುವ ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೂ ಕಿಮ್ ಅನೇಕ ಬಾರಿ ಎಚ್ಚರಿಕೆ ನೀಡುವುದರೊಂದಿಗೆ ಪೂರ್ವ ಏಷ್ಯಾದಲ್ಲೊಂದು ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಂತಿದೆ.


1945ರಲ್ಲಿ ಅಮೆರಿಕಾ ಮಾತ್ರ ಹೊಂದಿದ್ದ ಅಣ್ವಸ್ತ್ರ ಸಾರ್ವಭೌಮತೆಗೆ  ಮೊದಲ ಬಾರಿ ಸವಾಲೊಡ್ಡಿದ್ದು ಆಗಿನ ಸೋವಿಯೆತ್ ರಷ್ಯಾ 1949ರಲ್ಲಿ ನಡೆಸಿದ ಯಶಸ್ವಿ ಅಣ್ವಸ್ತ್ರ ಪರೀಕ್ಷೆ! ನಂತರ ಸಾಲು ಸಾಲಾಗಿ ಬ್ರಿಟನ್, ಫ್ರಾನ್ಸ್ ಮತ್ತು ಚೈನಾಗಳು ಅಣ್ವಸ್ತ್ರ ರಾಷ್ಟ್ರಗಳಾಗಿ ಹೊರಹೊಮ್ಮಿದವು. 1962 ಕ್ಯೂಬಾ ಅಣು ಬಿಕ್ಕಟ್ಟು ಹಾಗೂ ಹೆಚ್ಚುತ್ತಿರುವ ಅಣು ಭೀತಿಯಿಂದ ಎಚ್ಚೆತ್ತುಕೊಂಡ ವಿಶ್ವ ಶಕ್ತಿಗಳು 1968 ಎನ್ ಪಿ ಟಿ (NPT) ಸೇರಿದಂತೆ ಹಲವಾರು ಒಪ್ಪಂದ ಕರಾರುಗಳನ್ನು ಮಾಡಿಕೊಂಡವು. ಅಣ್ವಸ್ತ್ರ ತಂತ್ರಜಾನ ಮೂಲ ಐದು ಅಣ್ವಸ್ತ್ರ ಶಕ್ತಿಗಳನ್ನು ಹೊರತು ಪಡಿಸಿ ಬೇರಿನ್ಯಾವುದೇ ರಾಷ್ಟ್ರದ ಕೈ ಸೇರಬಾರದು ಎಂಬ ಆಶಯವೇ ಎಲ್ಲಾ ಪ್ರಯತ್ನಗಳ ಉದ್ದೇಶ. ಎಲ್ಲಾ ಪ್ರಯತ್ನಗಳು ವಿಫಲವಾಗಿರುವುದಕ್ಕೆ, ವಿಶ್ವದಲ್ಲಿರುವ ಹಾಗೂ ಇನ್ನೂ ಹುಟ್ಟಿಕೊಳ್ಳುತ್ತಿರುವ ಹೊಸ ಅಣ್ವಸ್ತ್ರ ರಾಷ್ಟ್ರಗಳೇ ಸಾಕ್ಷಿ. ಆರಂಭದಲ್ಲಿ ಉತ್ತರ ಕೊರಿಯ ಎನ್ ಪಿ ಟಿ ಸದಸ್ಯ ರಾಷ್ಟ್ರವಾಗಿದ್ದರೂ 2003ರಲ್ಲಿ ಒಪ್ಪಂದದಿಂದ ಹೊರಬಂದು ಅಣ್ವಸ್ತ್ರ ತಯಾರಿಗೆ ಅಧಿಕೃತ ಮುದ್ರೆಯೊತ್ತಿತ್ತು.

ಉತ್ತರ ಕೊರಿಯ ಅಣ್ವಸ್ತ್ರ ಯೋಜನೆಯ ಸಂಭಾವ್ಯ ಬಲಿಪಶು ದಕ್ಷಿಣ ಕೊರಿಯಾ ಇದುವರೆಗೂ 'ನಂಬಿಕೆಯ ರಾಜಕಾರಣ ನೀತಿ' (Trustpolitik) ಪ್ರಕಾರ ತನ್ನ ರಕ್ಷಣೆಗೆ ಅಮೆರಿಕಾವನ್ನು ಅವಲಂಬಿಸಿತ್ತು. ಆದರೀಗ ಉತ್ತರ ಕೊರಿಯಾದ ಆಕ್ರಮಣಕಾರಿ ನಡೆಯಿಂದಾಗಿ ದಕ್ಶಿಣ ಕೊರಿಯದ ಆಡಳಿತ ಪಕ್ಷದ ನಾಯಕರೂ ಕೂಡ ಅಣ್ವಸ್ತ್ರ ತಂತ್ರಜಾನದತ್ತ ಯೋಚಿಸುವಂತಾಗಿದೆ. ಅಷ್ಟೇ ಅಲ್ಲದೆ ಅಸಾನ್ ಸಂಸ್ಥೆ ನಡೆಸಿದ ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ 54 ಪ್ರತಿಶತ ದಕ್ಷಿಣ ಕೊರಿಯನ್ನರು ದಕ್ಷಿಣ ಕೊರಿಯಾ ಅಣ್ವಸ್ತ್ರ ರಾಷ್ಟ್ರವಾಗುವತ್ತ ಒಲವು ತೋರಿಸಿದ್ದಾರೆ. ಸಹಜವಾಗಿಯೇ ದಕ್ಷಿಣ ಕೊರಿಯ 'ಟಾಡ್' (TAAD) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅಮೆರಿಕಾದ ಜೊತೆ ಮಾತುಕತೆಗಿಳಿದಿದೆ. ಕೊರಿಯದ ಪರ್ಯಾಯ ದ್ವೀಪದಲ್ಲಿ ಅಮೆರಿಕಾದ ಹಸ್ತಕ್ಷೇಪವನ್ನು ಚೀನಾ ವಿರೋಧಿಸಿದ್ದೂ ಆಗಿ ಹೋಗಿದೆ. ಉತ್ತರ ಕೊರಿಯಕ್ಕೆ ತೆರೆಮರೆಯ ನೆರವು ನೀಡುತ್ತಿರುವ ಚೀನಾ ಅಮೆರಿಕಾದ  'ಟಾಡ್' ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಕಾರಣವನ್ನೇ ಮುಂದಿಟ್ಟುಕೊಂಡು, ಭವಿಷ್ಯದಲ್ಲಿ ಉತ್ತರ ಕೊರಿಯದ ನೇರ ಬೆಂಬಲಕ್ಕೆ ನಿಂತರೂ ಅಚ್ಚರಿಯೇನಿಲ್ಲ! ಪೂರ್ವ ಏಷ್ಯಾದ ಮೂಲೆಯಲ್ಲಿರುವ ಉತ್ತರ ಹಾಗೂ ದಕ್ಷಿಣ ಕೊರಿಯಗಳ ತಿಕ್ಕಾಟ ಪ್ರಾದೇಶಿಕ ರಾಜಕೀಯಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಕೊರಿಯದ ಪರ್ಯಾಯ ದ್ವೀಪ ಪ್ರಸ್ತುತ ಎರಡು ವಿಶ್ವ ಶಕ್ತಿಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜಾಗತಿಕ ರಾಜಕಾರಣದಲ್ಲಿ ದೊಡ್ಡಣ್ಣನ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕಾ, ಮತ್ತೊಂದೆಡೆ ಜಗತ್ತಿನ ಮೇಲೆ ಯಜಮಾನಿಕೆ ಪ್ರಭಾವ ಹರಡಲು ಒಂದು ಸಣ್ಣ ಅವಕಾಶದ ನಿರೀಕ್ಷೆಯಲ್ಲಿರುವ ಚೀನಿ ದೈತ್ಯರ ಮುಸುಕಿನ ಗುದ್ದಾಟ ಯಾರೂ ತಿಳಿಯದ ಗುಟ್ಟೇನಲ್ಲ! ಮಧ್ಯೆ ಕೊರಿಯ ಸಮಸ್ಯೆ ನಿಮಿತ್ತ ಮಾತ್ರ ಎಂಬಂತಾಗಿದೆ.


ಉತ್ತರ ಕೊರಿಯದ ಅಣು ಪರೀಕ್ಷೆಯ ಉತ್ಸಾಹಕ್ಕೆ ಕಾರಣವೂ ಇಲ್ಲದ್ದಿಲ್ಲ. ಮುಖ್ಯವಾಗಿ ಉತ್ತರ ಕೊರಿಯ ನಾಯಕ ಕಿಮ್ ಬಡಾಯಿ ಕೊಚ್ಚಿಕೊಳ್ಳುವಷ್ಟು ಬಲಿಷ್ಠ ರಾಷ್ಟ್ರವೇನಲ್ಲ. ಇವತ್ತಿಗೂ 1970 ಕಾಲದ ಸಾಂಪ್ರದಾಯಿಕತೆಯನ್ನೇ ನೆಚ್ಚಿಕೊಂಡಿರುವ ಸೇನೆಯನ್ನು ಆಧುನೀಕರಣಗೊಳಿಸುವುದಕ್ಕಿಂತ ಒಂದೇ ಬಾರಿಗೆ ಅಣ್ವಸ್ತ್ರ ಶಕ್ತಿಯಾಗುವುದು ಕಡಿಮೆ ತ್ರಾಸದಯಕ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಅಣ್ವಸ್ತ್ರ ಬೆದರಿಕೆಯ ಮೂಲಕ ಅಮೆರಿಕಾವನ್ನು ಕೊರಿಯ ಪರ್ಯಾಯ ದ್ವೀಪದಿಂದ ಹೊರಗಿಡಲು ಸುಲಭ ಸಾಧ್ಯ ಎಂಬುದು ಕಿಮ್ ನಂಬಿಕೆ. ಇಷ್ಟಲ್ಲದೇ ಇರಾಕ್ ಮತ್ತು ಲಿಬಿಯಾಗಳ ಮೇಲೆ ಅಮೆರಿಕಾ ಹಸ್ತಕ್ಷೇಪ ಮಾಡಿದಂತೆ, ಮುಂದೊಂದು ದಿನ ಪರಿಸ್ಥಿತಿ ತನಗೂ ಬರಬಹುದೆಂಬ ಭಯ ಉತ್ತರ ಕೊರಿಯ ಅಣ್ವಸ್ತ್ರ ಶಕ್ತಿಯಾಗಲು ಪ್ರೇರೆಪಿಸಿದೆ. ಇದೇ ಮಾರ್ಚ್ 2ರಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಅವಿರೋಧವಾಗಿ 'ರೆಸಲ್ಯೂಷನ್ 2270' ವನ್ನು ಅಂಗೀಕರಿಸುವುದರೊಂದಿಗೆ ಉತ್ತರ ಕೊರಿಯ ಮೇಲೆ ವ್ಯಾಪಾರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ನಿರ್ಬಂಧ ಹಾಗೂ ನಿಷೇಧಗಳನ್ನು ಹೇರಿದೆ. ಇದಷ್ಟೇ ಅಲ್ಲದೇ 2006ರಲ್ಲೇ ವಿಧಿಸಲಾಗಿದ್ದ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸಲಾಗಿದೆ. ಅಂತರ್ರಾಷ್ಟ್ರೀಯ ಬಹಿಷ್ಕಾರದ ಹೊರತಾಗಿಯೂ ಉತ್ತರ ಕೊರಿಯದ ಪ್ರಚೋದನಕಾರಿ ನಿಲುವನ್ನು ಗಮನಿಸಿದರೆ ವಿಶ್ವಸಂಸ್ಥೆಯ ಸಂಕಲ್ಪವನ್ನು ಚೀನಾ ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಅನುಮಾನ ಮೂಡುತ್ತದೆ. ಏಕೆಂದರೆ ಉತ್ತರ ಕೊರಿಯದ ಶೇಕಡಾ 90ರಷ್ಟು ವ್ಯಾಪಾರ ನಡೆಯುತ್ತಿರುವುದು ಚೀನಾದ ಜೊತೆ. ಹೀಗಾಗಿ ಚೀನಾ  'ರೆಸಲ್ಯೂಷನ್ 2270' ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದಲ್ಲಿ ಮಾತ್ರ ವಿಶ್ವ ಸಂಸ್ಥೆಯ ಆಶಯ ನೆರವೇರಲು ಸಾಧ್ಯ.





  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 14 March 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ