ಬುಧವಾರ, ಮಾರ್ಚ್ 23, 2016

ಭಗತ್ ಸಿಂಗ್ ಒಳಗೊಬ್ಬ ನವ ಭಾರತದ ಚಿಂತಕ

ಭಗತ್ ಸಿಂಗ್ ಹೋರಾಟ ಕೇವಲ ಬ್ರಿಟಿಷ್ ರಾಜ್ ಗೆ ಸೀಮಿತವಾಗಿರಲಿಲ್ಲ. ಭಾರತವನ್ನು ಕಾಡುತ್ತಿರುವ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮೊಳಗಿದ ರಣಕಹಳೆ ಇಂಕ್ವಿಲಾಬ್ ಜಿಂದಾಬಾದ್!
                                                                                                   

 -   ಕೀರ್ತಿರಾಜ್


23 ಮಾರ್ಚ್ 1931ರಂದು ಭಗತ್ ಸಿಂಗ್ ತನ್ನ ಸಹವರ್ತಿಗಳಾದ ಸುಖದೇವ್ ಮತ್ತು ರಾಜಗುರು ಪ್ರಾಣತ್ಯಾಗ ಮಾಡಿದ ದಿನ. ಪ್ರತಿ ವರ್ಷ ಮಾರ್ಚ್ 23ರನ್ನು ಹುತಾತ್ಮರ ದಿನವನ್ನಾಗಿಸಿ ಮೂರು ಕ್ರಾಂತಿ ರತ್ನಗಳ ಬಲಿದಾನವನ್ನು ಗೌರವಿಸುವ ಪ್ರಯತ್ನವೂ ನಡೆಯುತ್ತದೆ. ಹುತಾತ್ಮರ ದಿನವನ್ನು ಮರೆತಿರುವಾಗ, ಅವರ ಆದರ್ಶಗಳೂ ಹಂತ ಹಂತವಾಗಿ ಮರೆಯಾಗುತ್ತಿರುವಾಗ, ಕ್ರಾಂತಿಯ ಕೆಚ್ಚು ತಣ್ಣಗಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಭಗತ್ ಸಿಂಗ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಕೇವಲ ಕ್ರಾಂತಿಕಾರಿ ಭಗತ್ ಅಷ್ಟೇ. ಆದರೆ ಭಗತ್ ಕೇವಲ ಬಿಸಿ ರಕ್ತದ ಕ್ರಾಂತಿಕಾರಿಯಷ್ಟೇ ಅಲ್ಲ, ಚಿಂತನೆಗಳ ಸಾಗರವನ್ನೇ ತುಂಬಿಕೊಂಡಿದ್ದ ಒಬ್ಬ ಚಿಂತಕ. ಸಮಾಜವಾದ, ಧರ್ಮ, ಜಾತಿ, ಅಸ್ಪ್ರಶ್ಯತೆ, ಮತ್ತಿತರ ಸಾಮಾಜಿಕ ರಾಜಕೀಯ ವಿಷಯಗಳ ಬಗೆಗೆ ಭಗತ್ ಸಿಂಗ್ ತನ್ನ ಲೇಖನಗಳಲ್ಲಿ ಮತ್ತು ಪತ್ರಗಳಲ್ಲಿಅಭಿವ್ಯಕ್ತ ಪಡಿಸಿದ ರೀತಿ ಅದ್ಭುತ! ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿಯಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ಭಗತ್ ಸಿಂಗ್ ಒಳಗಿದ್ದ ಇನ್ನಿತರ ಪ್ರತಿಭೆ, ಸಾಧನೆಗಳು ಕ್ರಾಂತಿಯ ಪ್ರಖರತೆಯಲ್ಲಿ ಮಬ್ಬಾಗಿ ಹೋಗಿವೆ. ಪ್ರಸ್ತುತ ಭಾರತಕ್ಕೆ ಭಗತ್ ಸಿಂಗ್ ಅವಶ್ಯಕತೆ ಬಹಳಷ್ಟು ಇದ್ದಾಗಲೂ, ಅವರ ಆದರ್ಶಗಳನ್ನು ಇತಿಹಾಸದಲ್ಲೇ ಹೂತಿಡುವ ಸರ್ವ ಪ್ರಯತ್ನಗಳು ನಡೆದಿವೆ.

ಪೊಳ್ಳು ಸಮಾಜವಾದಿಗಳು, ಸ್ವಯಂಘೋಷಿತ ಬುದ್ಧಿಜೀವಿಗಳು ಕಪಟ ಕ್ರಾಂತಿಯ ಸಂದೇಶದೊಂದಿಗೆ, ಸಮಾಜ ಮತ್ತು ರಾಷ್ಟ್ರಗಳೆರಡನ್ನೂ ಅಧಃಪತನದತ್ತ ಸಾಗಿಸುತ್ತಿರುವಾಗ ಭಗತ್ ಸಿಂಗ್ ಚಿಂತನೆಗಳ ಅವಶ್ಯಕತೆ ಹಿಂದೆಂದಿಗಿಂತಲೂ ಮಹತ್ವದ್ದೆನಿಸಿದೆ. ಭಗತ್ ಬರಹಗಳನ್ನು ಓದುತ್ತಾ ಓದ ಹಾಗೆ ಕ್ರಾಂತಿಕಾರಿಯ ಒಳಗೊಬ್ಬ ನವ ಭಾರತದ ರಾಜಕೀಯ ಚಿಂತಕನಾಗಿ, ಕ್ರಾಂತಿಗೆ ಗುರುವಾಗಿ, ವ್ಯವಸ್ಥೆಯ ಬಗೆಗೆ ಕಳಕಳಿ ತೋರುವ ಪತ್ರಕರ್ತನಾಗಿ ಭಗತ್ ತನ್ನನ್ನು ತಾನು ತೆರೆದುಕೊಳ್ಳುತ್ತಾ ಹೋಗುತ್ತಾರೆ.ಭಗತ್ ಸಿಂಗ್ ಕೇವಲ ಬ್ರಿಟಿಷರ ವಿರುದ್ಧ ಮಾತ್ರ ಸಮರ ಸಾರಲಿಲ್ಲ, ಅವರ ಗುರಿ ಮಾನವತೆಯನ್ನು ಸಂಕೋಲೆಗಳಿಂದ ಬಿಡಿಸುವುದಾಗಿತ್ತು. ಉದಾಹರಣೆಗೆ 1928 ಜೂನ್ ನಲ್ಲಿ ಅಮೃತಸರದಿಂದ ಪ್ರಕಟಗೊಳ್ಳುತ್ತಿದ್ದಕೀರ್ತಿ ಎಂಬ ಪತ್ರಿಕೆಯಲ್ಲಿ ಭಗತ್ ಸಿಂಗ್ ಬರೆದ ಎರಡು ಲೇಖನಗಳು ಭಗತ್ ಸಿಂಗ್ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತವೆ. ಒಂದು ಲೇಖನ 'ಅಚೂತ್ ಕಾ ಸವಾಲ್ ಅಸ್ಪೃಶ್ಯತೆಗೆ ಸಂಬಂಧಿಸಿದ್ದಾದರೆ, ಇನ್ನೊಂದು ಲೇಖನ 'ಸಂಪ್ರದಾಯಿಕ್ ದಂಗೆ ಔರ್ ಉನ್ಕಾ ಇಲಾಜ್'ನಲ್ಲಿ ಕೋಮು ಗಲಭೆಗಳು ಮತ್ತು ಅವುಗಳ ಪರಿಹಾರಗಳ ಸ್ಪಷ್ಟವಾಗಿ ವಿವರಿಸಲಾಗಿದೆ.


ಭಗತ್ ಸಿಂಗ್ ಅವರ ಬರಹಗಳ ಬಗೆಗಿನ ಇತ್ತೀಚಿನ ಅಧ್ಯಯನಗಳು, ಸಂಶೋಧನೆಗಳು ಭಗತ್ ಸಿಂಗ್ ಪ್ರೌಢ ರಾಜಕೀಯ ಚಿಂತಕ ಎಂದು ಸಾಬೀತು ಪಡಿಸಿವೆ. ಭಗತ್ ಸಿಂಗ್ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಪ್ರೊಫೆಸರ್ ಚಮನ್ ಲಾಲ್ ಭಗತ್ ಸಿಂಗ್ ರಾಜಕೀಯ ಚಿಂತನೆಗಳ ಮಹತ್ವದ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಭಾರತದಲ್ಲಿ ಸಮಾಜವಾದಿ ಕ್ರಾಂತಿಯ ಸಾಧ್ಯತೆಗಳ ಬಗೆಗೂ ಸ್ಪಷ್ಟವಾದ ನಿಲುವು ಭಗತ್ ಸಿಂಗ್ ಬರಹಗಳಲ್ಲಿ ಅಭಿವ್ಯಕ್ತಗೊಂಡಿದೆ. ಸಮಾಜವಾದದ ಸೋಗು ಹಾಕಿಕೊಂಡಿರುವ ಅವಕಾಶವಾದಿಗಳ ಮುಖವಾಡ ಕಳಚಲು ಭಗತ್ ಸಿಂಗ್ ಅವಶ್ಯಕತೆ ಪ್ರಸ್ತುತ ಭಾರತದಲ್ಲಿ ಬಹಳಷ್ಟಿದೆ. ಭಗತ್ ಸಿಂಗ್ ನಂಥ ಒಬ್ಬ ಅಪ್ರತಿಮ ವೀರನ ಒಳಗೊಬ್ಬ ಅದ್ಭುತ ರಾಜಕೀಯ ಚಿಂತಕನನ್ನು ಇಂದಿನ ಸಮಾಜ ಮರೆತು ಬಿಟ್ಟಿದೆ. ಭಗತ್ ಸಿಂಗ್ ಚಿಂತನೆಗಳು ಭಾರತವಷ್ಟೇ ಅಲ್ಲದೇ ಇಂದಿನ ದಕ್ಷಿಣ ಏಷ್ಯಾದ ಅನೇಕ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಉತ್ತರವಾಗಬಲ್ಲುದು. ಭಗತ್ ಸಿಂಗ್ ಬರೆದ ಅನೇಕ ಪತ್ರಗಳು ಮತ್ತು ಲೇಖನಗಳಲ್ಲಿ ಒಂದಷ್ಟು ಕಳೆದು ಹೋಗಿದ್ದರೆ, ಇನ್ನೂ ಕೆಲವನ್ನು ಸಾಮಾನ್ಯ ಜನರ ಕಣ್ಣಿಗೆ ಬೀಳದಂತೆ ತಡೆಯಲಾಗಿತ್ತು! ಭಗತ್ ಸಿಂಗ್ ಕೇವಲ ಹುಚ್ಚು ಆವೇಶದಲ್ಲಿ ಕ್ರಾಂತಿಯ ಬೆನ್ನೇರಿ ಪ್ರಾಣಾರ್ಪಣೆ ಮಾಡಿದ ವ್ಯಕ್ತಿಯಲ್ಲ. ಭಗತ್ ಕ್ರಾಂತಿಗೆ ಒಂದು ಉನ್ನತ ಧ್ಯೇಯ ಇತ್ತು. ಕ್ರಾಂತಿಯ ಬಗ್ಗೆ ಭಗತ್ ಸಿಂಗ್ ನಿಲುವನ್ನು ಅರ್ಥ ಮಾಡಿಕೊಳ್ಳಬೇಕಾದಲ್ಲಿ ಅವರು ಬರೆದ ಪತ್ರಗಳನ್ನು ಓದಲೇಬೇಕು. ಭಗತ್ ಸಿಂಗ್ ಬರೆದ ಕೆಲವೇ ಪತ್ರ ಹಾಗೂ ಲೇಖನಗಳು ಲಭ್ಯವಿದೆ. ಅದರಲ್ಲೂ ಆಯ್ದ ನಾಲ್ಕು ಪತ್ರಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ.

1931 ಜನವರಿ ಮತ್ತು ಫೆಬ್ರವರಿಯಲ್ಲಿ ಭಗತ್ ಬರೆದ ಎರಡು ಪತ್ರಗಳು ಹರಿಕೃಷ್ಣನ್ ಕೇಸ್ ಗೆ ಸಂಬಂಧಿಸಿದ್ದು. ಹರಿಕೃಷ್ಣನ್ ಎಂಬ ಯುವ ಕ್ರಾಂತಿಕಾರಿ ಡಿಸೆಂಬರ್ 23 1930ರಂದು ಪಂಜಾಬ್ ಗವರ್ನರ್ ಕೊಲೆ ಯತ್ನದ ಆರೋಪದ ವಿಚಾರಣೆ ಎದುರಿಸುತ್ತಿದ್ದ. ಹರಿಕೃಷ್ಣನ್ ತಂದೆ ಬಹಳ ಪ್ರಭಾವಶಾಲಿ ಶ್ರೀಮಂತ ವ್ಯಕ್ತಿಯಾಗಿದ್ದು ತನ್ನ ಮಗನನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದ್ದರು. ಹರಿಕೃಷ್ಣನ್ ಪರ ವಕೀಲರು ಮುಂದಿಟ್ಟ ವಾದದ ತಿರುಳು ಹೀಗಿತ್ತು: 'ಆರೋಪಿಗೆ ಗವರ್ನರ್ ಕೊಲೆ ಮಾಡುವ ಉದ್ದೇಶವಿರಲಿಲ್ಲ, ಕೇವಲ ಒಂದು ಎಚ್ಚರಿಕೆಯಾಗಿ ಹಿಂಸೆಯನ್ನು ಉಪಯೋಗಿಸಲಾಗಿದೆ.' ಮೂಲಕ ಹರಿಕೃಷ್ಣನ್ ಪರ ವಕೀಲರು ತನ್ನ ಕಕ್ಷಿದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ವಕೀಲರ ವಾದದ ಬಗ್ಗೆ ಭಗತ್ ಸಿಂಗ್ ತನ್ನ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಗತ್ ಪ್ರಕಾರ ಕ್ರಾಂತಿಕಾರಿಗಳು ರಾಜಕೀಯ ಆರೋಪಿಗಳು ಮತ್ತು ಅವರು ನೀಡುವ ಪ್ರತಿಯೊಂದು ಹೇಳಿಕೆಯೂ ಅವರ ತತ್ವಾದರ್ಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹರಿಕೃಷ್ಣನ್ ಪರ ವಕೀಲರ ವಾದ ಕ್ರಾಂತಿಕಾರಿಗಳ ಸಂಪೂರ್ಣ ಚಟುವಟಿಕೆಗಳ ರಾಜಕೀಯ ಗುರಿಯನ್ನೇ ವಿಫಲಗೊಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಭಗತ್ ಪ್ರಕಾರ ಒಬ್ಬ ಕ್ರಾಂತಿಕಾರಿ ನ್ಯಾಯಾಲಯದ ಮುಂದೆ ನೀಡುವ ಹೇಳಿಕೆ ಹೀಗಿರಬೇಕು," ಕ್ರಾಂತಿಯ ಗುರಿ ಒಬ್ಬ ವ್ಯಕ್ತಿಯ ಹತ್ಯೆ ಅಥವಾ ಹಿಂಸೆಯಲ್ಲ, ಆದರೆ ನಿರಂತರ ಶೋಷಣೆಗೊಳಪಡಿಸುತ್ತಿರುವ ವ್ಯವಸ್ಥೆಯಿಂದ ಹೊರಬರಲು ನಮಗೆ ಬೇರೆ ದಾರಿಯಿಲ್ಲ. ಶೋಷಿತ ಜನರನ್ನು ಬಿಡುಗಡೆಗೊಳಿಸುವ ಹಾದಿಯಲ್ಲಿ ವೈಯಕ್ತಿಕ ಕಷ್ಟ ನಷ್ಟಗಳು ಮತ್ತು ಬಲಿದಾನಗಳು ಅನಿವಾರ್ಯ" ರೀತಿ ಹರಿಕೃಷ್ಣನ್ ಪ್ರಕರಣದಲ್ಲಿ ವೈಯಕ್ತಿಕ ಲಾಭಗಳಿಗಿಂತ ಗುರಿ ಶ್ರೇಷ್ಠ ಮತ್ತು ನ್ಯಾಯಾಧಿಕರಣದ ಮುಂದೆಯೂ, ಕೊನೆಗೆ ತಮ್ಮ ಸಾವಿನಲ್ಲಿಯೂ ಕ್ರಾಂತಿಯ ಉದ್ದೇಶ ಗೆಲ್ಲಬೇಕು ಎಂಬುವುದೇ ಭಗತ್ ಅಭಿಪ್ರಾಯವಾಗಿತ್ತು.

ಕ್ರಾಂತಿಯ ಉತ್ಕಟತೆಗೆ ಇನ್ನೊಂದು ನಿದರ್ಶನ ಭಗತ್ ತನ್ನ ತಂದೆಗೆ ಬರೆದ ಪತ್ರ. ಭಗತ್ ಸಿಂಗ್ ಪ್ರಕರಣ ಅಂತಿಮ ಹಂತದಲ್ಲಿದ್ದಾಗ, ಭಗತ್ ತಂದೆ ಸರ್ದಾರ್ ಕಿಶನ ಸಿಂಗ್, ಮಗನನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ನ್ಯಾಯಾಧಿಕರಣಕ್ಕೊಂದು ಮನವಿ ಸಲ್ಲಿಸುತ್ತಾರೆ. ಮನವಿಯ ಪ್ರಕಾರ ತಮ್ಮ ಮಗ ಮುಗ್ಧ, ಸೌಂಡರ್ಸ್ ಹತ್ಯೆಯಲ್ಲಿ ಅವನ ಪಾತ್ರವಿಲ್ಲ, ಹಾಗಾಗಿ ಅವನು ನಿರಪರಾಧಿ ಎಂದು ಸಾಬೀತುಪಡಿಸಲು ಅವಕಾಶ ನೀಡಬೇಕಾಗಿ ಕೇಳಿಕೊಂಡಿದ್ದರು. ವಿಷಯ ಜೈಲಿನಲ್ಲಿದ್ದ ಭಗತ್ ಗೆ ತಿಳಿದಾಗ ತನ್ನ ತಂದೆಯ ನಡೆಯನ್ನು ತೀವ್ರವಾಗಿ ಪ್ರತಿಭಟಿಸುತ್ತಾರೆ. ಮತ್ತು ತಂದೆ ಕಿಶನ್ ಸಿಂಗ್ ಗೆ ಆಕ್ರೋಶಭರಿತ ಪತ್ರವೊಂದನ್ನು ಬರೆಯುತ್ತಾರೆ. ಭಗತ್ ಗೆ ಸಾವಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವುದೇ ಉದ್ದೇಶವಿರಲಿಲ್ಲ. ತನ್ನ ಸಾವು ಕೂಡ ಕ್ರಾಂತಿಯ ಹಾದಿಯಲ್ಲಿ ರಾಜಕೀಯ ಪ್ರೇರಣೆಯಾಗಬೇಕು ಎಂದು ಭಗತ್ ಬಯಸಿದ್ದರು. ತಂದೆ ಕಿಶನ್ ಸಿಂಗ್ ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಮನವಿಯನ್ನು ತನ್ನ ತತ್ವಾದರ್ಶಗಳಿಗಾದ ದ್ರೋಹ ಎಂದು ಭಗತ್ ಪರಿಗಣಿಸುತ್ತಾರೆ. ತಂದೆ ಕಿಶನ್ ಸಿಂಗ್ ಭಾರತದ ಸ್ವಾತಂತ್ರ್ಯಕ್ಕೆ ಮಾಡಿದ ತ್ಯಾಗಕ್ಕೆ ಗೌರವ ಸೂಚಿಸುವ ಭಗತ್, ತಂದೆಯಾಗಿ ಮಗನ ಮೇಲಿನ ಕಾಳಜಿ ಕಿಶನ್ ಸಿಂಗ್ ರನ್ನು ಒಂದು ಬಗೆಯ ಕೆಟ್ಟ ಬಲಹೀನತೆಗೆ ತಳ್ಳಿತು ಎಂದು ಅಭಿಪ್ರಾಯ ಪಡುತ್ತಾರೆ. ಕೊನೆಗೆ ತಂದೆಯ ಕೃತ್ಯ ಬೆನ್ನಿಗೆ ಚೂರಿ ಹಾಕುವುದಕ್ಕಿಂತಲೂ ಹೀನ ಬಲಹೀನತೆಗೆ ಹೋಲಿಸುವ ಭಗತ್. ಪುತ್ರ ವಾತ್ಸಲ್ಯ, ವೈಯಕ್ತಿಕ ಲಾಭಗಳ ನೆಪದಲ್ಲಿ, ನೇಣು ಕುಣಿಕೆ ತಪ್ಪಿಸಿಕೊಳ್ಳುವ ಅವಕಾಶವಿದ್ದಾಗಲೂ, ತನ್ನ ಕ್ರಾಂತಿಯ ಆದರ್ಶಗಳಿಗೆ ಬೆಲೆ ಕೊಡುವ ಮೇರು ವ್ಯಕ್ತಿತ್ವ ತೋರಿಸುತ್ತಾರೆ.

ಇವೆಲ್ಲದರ ಮಧ್ಯೆ ನನ್ನ ಗಮನ ಸೆಳೆದ ಪತ್ರ ಅದು ಸುಖದೇವ್ ಬರೆದ ಪತ್ರಕ್ಕೆ ಉತ್ತರವಾಗಿ ಭಗತ್ ಬರೆದ ಪ್ರತಿಕ್ರಿಯೆ ಪತ್ರ. ಜೈಲಿನಲ್ಲಿದ್ದ ಸುಖದೇವ್ ತೀರ್ಪಿಗಾಗಿ ಕಾಯುತ್ತಿದ್ದ ಸಮಯ. ಸುಖದೇವ್ ಗೆ ಜೀವಾವಧಿ ಶಿಕ್ಷೆಯಾಗುವ ಸಂಭವವಿತ್ತು. ಕಲ್ಪನೆಯೇ ಸುಖದೇವ್ ನನ್ನು ಕಂಗೆಡಿಸಿತ್ತು. ಮರಣದಂಡಣೆ ಅಥವಾ ಬಿಡುಗಡೆಯ ಹೊರತಾಗಿ ವರ್ಷಗಟ್ಟಲೆ ಜೈಲುವಾಸಕ್ಕೆ ಸುಖದೇವ್ ಮನಸ್ಸು ಒಪ್ಪಿಕೊಂಡಿರಲಿಲ್ಲ. ಇದೇ ವಿಷಯವಾಗಿ ಸುಖ್ ದೇವ್ ಭಗತ್ ಸಿಂಗ್ ಗೆ ಒಂದು ಪತ್ರ ಬರೆದು ಮರಣದಂಡಣೆಯಾದರೂ ಆದೀತು ಆದರೆ ಜೀವನ ಪರ್ಯಂತ ಜೈಲಿನಲ್ಲಿ ಕಳೆಯಬೇಕಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿಯಾದ ದಾರಿ ಎಂದು ಅಭಿಪ್ರಾಯ ಪಟ್ಟಿದ್ದ. ಇದಕ್ಕೆ ಉತ್ತರವಾಗಿ ಭಗತ್ ಬರೆದ ಪತ್ರ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸುವ ಎಲ್ಲರೂ ಓದಲೇಬೇಕಾದ ಪತ್ರ. ಮಿತ್ರ ಸುಖ್ ದೇವನಿಗೆ ಉತ್ತರಿಸುತ್ತಾ ಭಗತ್ ಹೀಗೆ ಬರೆಯುತ್ತಾನೆ, ಪ್ರತಿಯೊಬ್ಬ ಕ್ರಾಂತಿಕಾರಿಯೂ ತನ್ನ ಕಾರ್ಯ ನ್ಯಾಯ ಸಮ್ಮತವಾಗಿದೆ ಎಂದು ತಿಳಿದ ಮೇಲೆ ಕಾರ್ಯೋನ್ಮುಖನಾಗುತ್ತಾನೆ. ಬಾಂಬ್ ಸ್ಫೋಟಿಸುವುದಷ್ಟೇ ಕ್ರಾಂತಿಯಲ್ಲ. ಅದರ ಬಳಿಕ ನಾವು ಅನುಭವಿಸುವ ಶಿಕ್ಷೆಯ  ನೋವಿನಲ್ಲೂ ಕ್ರಾಂತಿ ಅರಳುತ್ತದೆ ಎಂಬ ಉನ್ನತ ಆದರ್ಶ ಭಗತ್ ಪತ್ರದಲ್ಲಿ ಉಲ್ಲೇಖವಾಗಿದೆ.


ಕೇವಲ ಕ್ರಾಂತಿಯ ಬಗೆಗೆ ಅಲ್ಲದೇ ಮಾರ್ಕ್ಸ್ ವಾದ, ಅರಾಜಕತಾವಾದ, ನಾಸ್ತಿಕವಾದ ಇನ್ನಿತರ ವಿಷಯಗಳ ಬಗೆಗೆ ಭಗತ್ ಗಂಭೀರ ವಿಮರ್ಶೆಗಳನ್ನು ಕೊಟ್ಟಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ, ಇಷ್ಟು ದಿನ ಭಗತ್ ಸಿಂಗ್ ರನ್ನು ಕೇವಲ ಒಬ್ಬ ಕ್ರಾಂತಿಕಾರಿಯಾಗಿ ಸೀಮಿತಗೊಳಿಸಿದ ಶಿಕ್ಷಣ ವ್ಯವಸ್ಥೆಯ ಸಂಕುಚಿತತೆಯ ಕುರಿತು ಪ್ರಶ್ನೆಗಳು ಮೂಡುತ್ತವೆ.







  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 23 March 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ