ಬುಧವಾರ, ಆಗಸ್ಟ್ 10, 2016

ಅಮೆರಿಕನ್ನರ ರಷ್ಯಾ ದ್ವೇಷ ಮತ್ತು ಟ್ರಂಪ್ ಭವಿಷ್ಯ

ಯುದ್ಧ ಬಹುಪಾಲು ಯುರೋಪಿನಲ್ಲೇ ನಡೆದಿದ್ದರಿಂದ ಯುರೋಪ್ ಯುದ್ಧದ ಗಂಭೀರ ಪರಿಣಾಮಗಳಿಂದ ಹೊರಬರಲು ಒದ್ದಾಡುವಂತಾಯಿತು.  ದ್ವಿತೀಯ ಯುದ್ಧದ ಅಂತ್ಯದೊಂದಿಗೆ ಬಂಡವಾಳಶಾಹಿ ಅಮೆರಿಕಾ ಮತ್ತು ಕಮ್ಯುನಿಸ್ಟ್ ಸೊವಿಯೆತ್ ಯೂನಿಯನ್ ಗಳು ವಿಶ್ವದ ಎರಡು ಸೂಪರ್ ಪವರ್ ಗಳಾಗಿ ಮೂಡಿಬರುವುದರೊಂದಿಗೆ ವಿಶ್ವ ಮತ್ತೊಮ್ಮೆ ಮಹಾಯುದ್ಧದ ಸಾಧ್ಯತೆಗಳನ್ನು ತೆರೆದಿಟ್ಟಿತು.

-      ಕೀರ್ತಿರಾಜ್



ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ಕೊನೆಯ ಹಂತಕ್ಕೆ ಬಂದು ನಿಂತಿವೆ. ಘಟಾನುಘಟಿಗಳ ನಿರಂತರ ಪೈಪೋಟಿಯ ನಂತರ ರಿಪಬ್ಲಿಕ್ ಪಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಾಟ್ ಪಕ್ಷ ಹಿಲರಿ ಕ್ಲಿಂಟನ್ ಅವರನ್ನು ಮುಂದಿಟ್ಟುಕೊಂಡು ಅಂತಿಮ ಹಣಾಹಣಿಯ ಸಿದ್ಧತೆಯಲ್ಲಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ಅಮೆರಿಕಾಕ್ಕಷ್ಟ್ಟೇ ಸೀಮಿತವಾಗದೆ ವಿಶ್ವಾದ್ಯಂತ ಚರ್ಚೆಯಾಗಲು ಕಾರಣಗಳು ಇಲ್ಲದ್ದಿಲ್ಲ. ವಿಶ್ವ ರಾಜಕೀಯದ ಅನಭಿಷಿಕ್ತ ದೊರೆ ಅಮೆರಿಕಾದ ಭಾವಿ ಅಧ್ಯಕ್ಷರ ಸ್ವಾಗತಕ್ಕಾಗಿ ವಿಶ್ವದ ಹಲವಾರು ದೇಶಗಳು ಈಗಾಗಲೇ ರತ್ನಗಂಬಳಿ ಸಿದ್ಧಪಡಿಸಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಾಗಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಅಂತರ್ರಾಷ್ಟ್ರೀಯ ಮಹತ್ವದ ಬಗ್ಗೆ ಯಾವುದೇ ಸಂಶಯಗಳಿಗೆ ಆಸ್ಪದವಿಲ್ಲ. ಅಧ್ಯಕ್ಷ ಪದವಿಗೆ ತೀರಾ ಹತ್ತಿರ ಬಂದು ನಿಂತಿರುವ ಹಿಲರಿ ಕ್ಲಿಂಟನ್ ಮತ್ತು ಟ್ರಂಪ್ ಬಗ್ಗೆ ವಿಶ್ವಾದ್ಯಂತ ತರಹೇವಾರಿ ಚರ್ಚೆಗಳಿವೆ. ಈಗಾಗಲೇ ಅಧಿಕಾರದಲ್ಲಿರುವ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಎಂಬ ಕಾರಣಕ್ಕಷ್ಟೇ ಅಲ್ಲದೇ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ ಹಿಲರಿ ಕ್ಲಿಂಟನ್ ಸಹಜವಾಗಿಯೇ ಸುದ್ದಿಯಲ್ಲಿದ್ದಾರೆ. ಇನ್ನೊಂದೆಡೆ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ವಿಶೇಷ ಕಾರಣಗಳು, ವಿಭಿನ್ನ ನಡವಳಿಕೆ ಮತ್ತು ಹೇಳಿಕೆಗಳಿಂದಲೇ ಚರ್ಚೆಗೆ ಆಹಾರವಾದವರು.

ಇತ್ತೀಚೆಗೆ ಟ್ರಂಪ್ ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಅತಿಯಾದ ಆಸಕ್ತಿ ತೋರಿಸುತ್ತಿರುವುದು ಅಮೆರಿಕಾದ ಇತಿಹಾಸದಲ್ಲಿ ಬದಲಾವಣೆಯ ಅಲೆ ಎಬ್ಬಿಸಿದೆ. ಟ್ರಂಪ್ ಪುಟಿನ್ ಕಡೆಗೆ ಸ್ನೇಹ ಹಸ್ತ ಚಾಚಿರುವುದು ಮತ್ತು ಪುಟಿನ್ ಕೂಡ ಟ್ರಂಪ್ ಗೆಲುವನ್ನು ಆಶಿಸುತ್ತಿರುವುದು ಚರಿತ್ರೆಯ ಪುಟಗಳು ಹೊಸ ಮಗ್ಗುಲಿನತ್ತ ಹೊರಳಿಕೊಳ್ಳುತ್ತಿರುವುದರ ಸೂಚನೆ. ಅಮೆರಿಕಾದ ಸಾಂಪ್ರದಾಯಿಕ ವೈರಿ ರಷ್ಯಾವನ್ನು ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿರುವ ವ್ಯಕ್ತಿಯೊಬ್ಬ ಹೊಗಳುವುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವೇ ಅದರೂ, ಟ್ರಂಪ್ ನೇರವಾಗಿ ತನ್ನ ರಷ್ಯಾ ಪ್ರೀತಿಯನ್ನು ಹೊರ ಹಾಕುವುದರ ಮೂಲಕ ಅಚ್ಚರಿ ಮೂದಿಸಿದ್ದಾರೆ. ಡೆಮಾಕ್ರಾಟ್ ಪಕ್ಷ ಇಸ್ಲಾಮಿಕ್ ಸ್ಟೇಟ್ ನಿಗ್ರಹಿಸಲು ವಿಫಲವಾಗಿರುವುದರಿಂದ ತಾನು ಪುಟಿನ್ ಜೊತೆಗೂಡಿ ಉಗ್ರ ನಿಗ್ರಹ ಮಾಡುತ್ತೇನೆ ಎಂಬ ಟ್ರಂಪ್ ಹೇಳಿಕೆ ಅಮೆರಿಕಾ ರಾಜಕಾರಣದಲ್ಲಿ ಬೃಹತ್ ಸಂಚಲನ ಮೂಡಿಸಿದೆ. ಆದರೆ ಟ್ರಂಪ್ ರವರ ರಷ್ಯಾ ಪ್ರೀತಿ ಮುಂದಿನ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿನ್ನಡೆಗೂ ಕಾರಣವಾದೀತು. ಅಕ್ಟೋಬರ್ ೧೯೭೬ರ ಅಧ್ಯಕ್ಷೀಯ ಚುನಾವಣೆಯ ಚರ್ಚೆಯ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಗೆರಾಲ್ಡ್ ಫೋರ್ಡ್  "ಪಶ್ಚಿಮ ಯುರೋಪಿನಲ್ಲಿ ಸೊವಿಯೆತ್ ಅಧಿಪತ್ಯ ಇಲ್ಲ" ಎಂಬ ಉದ್ದೇಶಪೂರ್ವಕವಲ್ಲದ ಹೇಳಿಕೆಯೊಂದೇ ಫೋರ್ಡ್ ಸೋಲಿಗೆ ಕಾರಣವಾಗಿ, ಡೆಮಾಕ್ರಟಿಕ್ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಅಮೆರಿಕಾದ ಅಧ್ಯಕ್ಷ ಪದವಿಗೇರುವಂತಾಯಿತು ಎಂಬ ಅಭಿಪ್ರಾಯ ಜಾಗತಿಕ ರಾಜಕೀಯ ವಲಯದಲ್ಲಿ ಇಂದಿಗೂ ಮಾಸಿಲ್ಲ.

ಎರಡನೇ ಮಹಾಯುದ್ಧದಲ್ಲಿ ಅಮೆರಿಕಾ ನೇತೃತ್ವದ ಮಿತ್ರ ಪಡೆಗಳು ಜರ್ಮನಿಯನ್ನು ಸಂಪೂರ್ಣವಾಗಿ ಸೋಲಿಸಿ, ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ವಿಶ್ವ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಿತ್ತು. ಎರಡನೇ ಮಹಾಯುದ್ಧದ ಅಂತ್ಯದವರೆಗೂ ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್ ಎಂದುಕೊಂಡು ಪಶ್ಚಿಮ ಯುರೋಪ್ ವಿಶ್ವದ ಶಕ್ತಿ ಕೇಂದ್ರ ಎಂದು ಬೀಗುತ್ತಿದ್ದವರಿಗೆ ಭ್ರಮನಿರಸನವಾಗಿತ್ತು. ಯುದ್ಧ ಬಹುಪಾಲು ಯುರೋಪಿನಲ್ಲೇ ನಡೆದಿದ್ದರಿಂದ ಯುರೋಪ್ ಯುದ್ಧದ ಗಂಭೀರ ಪರಿಣಾಮಗಳಿಂದ ಹೊರಬರಲು ಒದ್ದಾಡುವಂತಾಯಿತುದ್ವಿತೀಯ ಯುದ್ಧದ ಅಂತ್ಯದೊಂದಿಗೆ ಬಂಡವಾಳಶಾಹಿ ಅಮೆರಿಕಾ ಮತ್ತು ಕಮ್ಯುನಿಸ್ಟ್ ಸೊವಿಯೆತ್ ಯೂನಿಯನ್ ಗಳು ವಿಶ್ವದ ಎರಡು ಸೂಪರ್ ಪವರ್ ಗಳಾಗಿ ಮೂಡಿಬರುವುದರೊಂದಿಗೆ ವಿಶ್ವ ಮತ್ತೊಮ್ಮೆ ಮಹಾಯುದ್ಧದ ಸಾಧ್ಯತೆಗಳನ್ನು ತೆರೆದಿಟ್ಟಿತು. ಅಮೆರಿಕಾ ಮತ್ತು ಸೊವಿಯೆತ್ ಗಳ ನಡುವಿನ ಮುಸುಕಿನ ಗುದ್ದಾಟಗಳು, ಎಲ್ಲಾ ಕ್ಷೇತ್ರಗಳಲ್ಲೂ ಅನಾರೋಗ್ಯಕರ ಪ್ರತಿಸ್ಪರ್ಧೆ, ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳ ತಿಕ್ಕಾಟ, ಹೊಸ ಹೊಸ ರಾಷ್ಟ್ರಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ತವಕ ಮತ್ತು ವಿರೋಧಿ ರಾಷ್ಟ್ರಗಳನ್ನು ಹೊಸಕಿಹಾಕುವ ಕ್ರೌರ್ಯಗಳು ಎರಡು ಸೂಪರ್ ಪವರ್ ರಾಷ್ಟ್ರಗಳ ಪ್ರಮುಖ ವಿದೇಶಾಂಗ ನೀತಿಗಳಾಗಿ ಮಾರ್ಪಾಡು ಹೊಂದಿದವು. ಎರಡೂ ಸೂಪರ್ ಪವರ್ ದೈತ್ಯರು ನೇರವಾಗಿ ಮುಖಾಮುಖಿಯಾಗದೇ ಇದ್ದರೂ ಇತರ ರಾಷ್ಟ್ರಗಳನ್ನು ಅಥವಾ ಅಂತರ್ರಾಷ್ಟ್ರೀಯ ಸಂಸ್ಥೆಗಳನ್ನೂ ದಾಳವಾಗಿ ಬಳಸಿಕೊಂಡು ಒಂದು ರೀತಿಯ ಪರೋಕ್ಷ ಶೀತಲಸಮರವನ್ನು ಸೃಷ್ಟಿಸಿಬಿಟ್ಟವು. ವಿಶ್ವದ ಯಾವುದೇ ಮೂಲೆಯ ಸಣ್ಣ ಪುಟ್ಟ ಕಲಹಗಳೂ ಸೂಪರ್ ಪವರ್ ಗಳ ಪ್ರತಿಷ್ಟೆಯ ವಿಷಯಗಳಾಗಿ ಬದಲಾದವು. ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಮೆರಿಕಾ ಸಹಾಯ ಹಸ್ತ ಚಾಚಿದ್ದರೆ, ಸೊವಿಯೆತ್ ಭಾರತದ ಬೆನ್ನ ಹಿಂದೆ ನಿಂತದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಆಮೆರಿಕಾ ಮತ್ತು ಸೊವಿಯೆತ್ ಗಳ ವೈಷಮ್ಯ ಹಲವು ದಶಕಗಳವರೆಗೆ ವಿಶ್ವ ರಾಜಕೀಯವನ್ನು 'ಶೀತಲ ಸಮರ' ಎಂಬ ಹೆಸರಿನಲ್ಲಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಇದೇ ಶೀತಲ ಸಮರ ೧೯೬೨ರ ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟಿಗೂ ಎಡೆಮಾಡಿಕೊಟ್ಟು ಎರಡೂ ದೈತ್ಯ ಶಕ್ತಿಗಳು ಎದುರು ಬದುರಾಗಿ ನಿಂತು ಅಣ್ವಸ್ತ್ರ ಪ್ರಯೋಗಕ್ಕೂ ಸಿದ್ಧವಾಗಿದ್ದವು! ಅಣ್ವಸ್ತ್ರ ಬಾಂಬುಗಳೇನಾದರೂ ಉಪಯೋಗಿಸಲ್ಪಟ್ಟಿದ್ದಲ್ಲಿ ಇಡೀ ಪ್ರಪಂಚವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದ್ದವು. ಅದೃಷ್ಟವಶಾತ್ ಕೊನೆಕ್ಷಣದ ಮಾತುಕತೆಗಳ ಫಲವಾಗಿ ಅಮೆರಿಕಾ ಮತ್ತು ಸೊವಿಯೆತ್ ಗಳೆರಡೂ ತಮ್ಮ ಬಿಗಿ ಪಟ್ಟು ಸಡಿಸಿಲಿಸಿದ್ದರಿಂದ ಆಗಬೇಕಿದ್ದ ಅನಾಹುತ ತಪ್ಪಿ ಹೋಯಿತು. ವಿಶ್ವದ ತಲೆ ಮೇಲಿದ್ದ ಶೀತಲ ಸಮರದ ಭಾರ ಕೆಳಗಿಳಿದಿದ್ದು ೧೯೯೦ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾಗಿ ಒಕ್ಕೂಟದಲ್ಲಿದ್ದ ಸದಸ್ಯರೆಲ್ಲರೂ ತಮ್ಮದೇ ಆದ ಸ್ವತಂತ್ರ ದೇಶಗಳನ್ನು ಸೃಷ್ಟಿಸಿಕೊಂಡಾಗಲೇ. ಸೊವಿಯೆತ್ ಒಕ್ಕೂಟದ ಉತ್ತರಾಧಿಕಾರಿಯಾಗಿ ಕೊನೆಗೆ ಉಳಿದುಕೊಂಡಿದ್ದು ಈಗಿನ ರಷ್ಯಾ. ಸೊವಿಯೆತ್ ಒಕ್ಕೂಟ ಒಡೆದು ಹೋದರೂ, ಉಳಿದುಕೊಂಡಿರುವ ರಷ್ಯಾ ಸೊವಿಯೆತ್ ಒಕ್ಕೂಟದಷ್ಟೂ ಪ್ರಭಾವ ಉಳಿಸಿಕೊಳ್ಳದಿದ್ದರೂ ಅಮೆರಿಕಾ ಮತ್ತು ರಷ್ಯಾ ಸಂಬಂಧಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣಿಸದೆ ಹಳೇ ದ್ವೇಷವೇ ಮುಂದುವರಿದಿದೆ. ಶೀತಲ ಸಮರದ ಅಂತ್ಯದ ನಂತರ ಅಮೆರಿಕಾ ಮತ್ತು ರಷ್ಯಾಗಳ ನಡುವಿನ ಅಂತರ ಕಡಿಮೆಯಾಗುವ ಸೂಚನೆಗಳಿದ್ದರೂ, ಇತ್ತೀಚಿನ ದಿನಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಆಕ್ರಮಣಕಾರಿ ನಿಲುವಿನಿಂದಾಗಿ ಮಗದೊಮ್ಮೆ ಅಮೆರಿಕಾ ಮತ್ತು ರಷ್ಯಾಗಳ ನಡುವೆ 'ನವ ಶೀತಲ ಸಮರ'ಕ್ಕೆ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಅಮೆರಿಕಾ ಮತ್ತು ರಷ್ಯಾಗಳ ನಡುವಿನ ಛಾಯಾ ಸಮರ ಅಮೆರಿಕಾದ ವಿದೇಶಾಂಗ ನೀತಿಗಷ್ಟೇ ಮೀಸಲಾಗದೆ, ಅಮೆರಿಕಾದ ಸಾಮಾನ್ಯ ಜನಮಾನಸದಲ್ಲೂ ಆಳವಾದ ಪ್ರಭಾವ ಬೀರಿದೆ. ಶೀತಲ ಸಮರದ ಸಮಯದಲ್ಲಿ ಅಮೆರಿಕಾ ಪ್ರಜೆಗಳ ಮನಸ್ಸಿನಲ್ಲಿ ಹಾಸುಹೊಕ್ಕಾಗಿದ್ದ ರಷ್ಯಾ ದ್ವೇಷ, ಶೀತಲ ಸಮರದ ನಂತರವೂ ಅದೇ ರೀತಿ ಮುಂದುವರಿದಿದ್ದು ಹಲವಾರು ಸಮೀಕ್ಷೆಗಳಿಂದ ರುಜುವಾತಾಗಿದೆ. ೨೦೧೩ರಲ್ಲಿ ನಡೆದ ಸಮೀಕ್ಷೆಯಲ್ಲಿ ೪೦% ಅಮೆರಿಕನ್ನರು "ರಷ್ಯಾದಿಂದ ಯಾವುದೇ ಸಮಸ್ಯೆಯಿಲ್ಲ" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ೨೦೧೪ರಲ್ಲಿ ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಂಡ ಕೆಲವೇ ದಿನಗಳ ನಂತರ ಮಾರ್ಚ್ ೨೦೧೪ರ ಸಮೀಕ್ಷೆಯ ಪ್ರಕಾರ ಅಮೆರಿಕನ್ನರ ಅಭಿಪ್ರಾಯ ೪೦% ನಿಂದ ೨೨% ಗೆ ಇಳಿದಿತ್ತು! ಕೊನೆಗೆ ರಷ್ಯಾ ಎಮ್ ಎಚ್ ೧೭ ಎಂಬ ಮಲೇಷಿಯನ್ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಕೇವಲ ೧೫% ಅಮೆರಿಕನ್ನರು "ರಷ್ಯಾದಿಂದ ಯಾವುದೇ ಸಮಸ್ಯೆಯಿಲ್ಲ" ಎಂಬ ಅಭಿಪ್ರಾಯ ಉಳಿಸಿಕೊಂಡಿದ್ದರು! ಉಕ್ರೇನ್ ಬಿಕ್ಕಟಿಗೆ ಮೊದಲು ೩೬% ಅಮೆರಿಕನ್ನರು "ರಷ್ಯಾದಿಂದ ಸಮಸ್ಯೆಯಿರುವುದು ನಿಜವೇ ಆದರೂ ಅದನ್ನು ಅಮೆರಿಕಾದ ಶತ್ರುವಾಗಿ ಪರಿಗಣಿಸುವಂತಿಲ್ಲ"ಎಂದು ಅಭಿಪ್ರಾಯ ಪಟ್ಟಿದ್ದರೆ, ೨೦೧೪ರಲ್ಲಿ ಸಂಖ್ಯೆ ೪೯% ಗೆ ಏರಿತ್ತು. ೨೦೧೩ರಲ್ಲಿ ಕೇವಲ ೧೮% ಅಮೆರಿಕನ್ನರು "ರಷ್ಯಾ ಅಮೆರಿಕಾದ ನೇರ ಶತ್ರು" ಎಂದಿದ್ದರೆ, ೨೦೧೪ರಲ್ಲಿ ಸಂಖ್ಯೆ ೨೬%ಗೆ ಏರಿದ್ದು ಗಮನಾರ್ಹ. ಅಮೆರಿಕನ್ನರ ರಷ್ಯಾ ದ್ವೇಷ ಅಂಕಿ ಅಂಶಗಳಿಂದ ಸ್ಪಷ್ಟವಾಗಿ ರುಜುವಾತಾಗುತ್ತದೆ. ಬೆಳವಣಿಗೆ ಮಾತು ಮಾತಿಗೂ ರಷ್ಯಾ ಮತ್ತು ಪುಟಿನ್ ಸಮರ್ಥಿಸಿಕೊಳ್ಳುತ್ತಿರುವ ಟ್ರಂಪ್ ಪಾಲಿಗೆ ಭಾರಿ ಹಿನ್ನಡೆಯೇ ಸರಿ.

 ಅಮೆರಿಕನ್ನರ ರಷ್ಯಾ ದ್ವೇಷ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲೂ ಪ್ರಮುಖ ಪಾತ್ರವಹಿಸುವುದರಲ್ಲಿ ಎರಡು ಮಾತಿಲ್ಲ. ಅಮೆರಿಕನ್ ಮತದಾರನ ರಷ್ಯಾ ದ್ವೇಷದ ಬಗ್ಗೆ ತಿಳಿದಿದ್ದೂ ಟ್ರಂಪ್ ತನ್ನ ಪ್ರಚಾರ ಭಾಷಣಗಳಲ್ಲಿ ರಷ್ಯಾ ಪರವಹಿಸಿಕೊಳ್ಳುತ್ತಿರುವುದು ರಾಜಕೀಯ ವಿಶ್ಲೇಷಕರ ತಲೆ ಕೆಡಿಸಿದೆ. ಅದರಲ್ಲೂ ಇತ್ತೀಚೆಗೆ ರಷ್ಯನ್ ಗುಪ್ತಚರ ದಳಗಳು ಟ್ರಂಪ್ ಗೆಲುವಿಗೋಸ್ಕರ ಅಮೆರಿಕಾದಲ್ಲಿ ಕಾರ್ಯನಿರತವಾಗಿದೆ ಎಂಬ ಸುದ್ಧಿ ಅಮೆರಿಕನ್ ಮತದಾರನ ಮನಸ್ಸು ಕೆಡಿಸಿದೆ. ಗಂಭೀರ ಆರೋಪವನ್ನು ಪುಟಿನ್ ಸುಳ್ಳು ಸುದ್ಧಿ ಎಂದು ನಿರಾಕರಿಸಿದ್ದರೂ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಇಂಥ ಸುಳ್ಳು ಸುದ್ಧಿಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಮರೆಯಲಾಗದು. ೧೯೭೬ರಲ್ಲಿ ಗೆರಾಲ್ಡ್ ಫೋರ್ಡ್ ಬಾಯಿ ತಪ್ಪಿ ಆಡಿದ  ಮಾತನ್ನೇ ರಷ್ಯಾ ಪರವಾದ ಹೇಳಿಕೆ ಎಂದು ಪರಿಗಣಿಸಿ ಫೋರ್ಡ್ ಸೋಲೊಪ್ಪಿಕೊಳ್ಳುವಂತಾಗಿತ್ತು. ಇಂದು ಟ್ರಂಪ್ ನೇರ ಹೇಳಿಕೆಗಳ ಮೂಲಕ ರಷ್ಯಾವನ್ನು ಸಮರ್ಥಿಸಿಕೊಂಡು, ತಮ್ಮ ಸೋಲನ್ನು ತಾವೇ ಆಹ್ವಾನಿಸುತ್ತಿದ್ದಾರೋ ಅಥವಾ ಫೋರ್ಡ್ ಪ್ರಕರಣಕ್ಕೆ ವಿರುದ್ಧವಾಗಿ ಅಚ್ಚರಿಯ ಗೆಲುವ ಸಾಧಿಸಿ ಇತಿಹಾಸ ಸೃಷ್ಟಿಸುತ್ತಾರೋ ಎಂಬುದನ್ನು ನವೆಂಬರ್  ಚುನಾವಣೆ ನಿರ್ಧರಿಸಲಿದೆ.





 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 10 August 2016)







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ