ಶನಿವಾರ, ಆಗಸ್ಟ್ 20, 2016

ಹಿಲರಿ-ಟ್ರಂಪ್ : ಯಾರು ಹಿತವರು ಇವರಿಬ್ಬರೊಳಗೆ?

ವರೆಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿಂಥ ಭಿನ್ನವಾದ ವ್ಯಕ್ತಿತ್ವಗಳನ್ನು ಹೊಂದಿರುವ  ಇಬ್ಬರೂ  ಅಧ್ಯಕ್ಷೀಯ ಅಭ್ಯರ್ಥಿಗಳು ಹೊಸ ಇತಿಹಾಸ ಸೃಷ್ಟಿಸುವುದಕ್ಕೆ ತುದಿಗಾಲಲ್ಲಿ ನಿಂತಿರುವಾಗಲೇ ವಿಶ್ವದೆಲ್ಲೆಡೆ ಅನೇಕ ದೇಶಗಳು ಯಾರು ಹಿತವರು  ಇಬ್ಬರೊಳಗೆಎಂಬ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.
-ಕೀರ್ತಿರಾಜ್


ಇದೇ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಪ್ರತಿ ದಿನ ಪ್ರತಿ ಕ್ಷಣ ವಿವಿಧ ಬಣ್ಣಗಳೊಂದಿಗೆ ರಂಗೇರುತ್ತಿದೆ. ಅಧ್ಯಕ್ಷೀಯ ಗಾದಿಗಾಗಿ ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್, ಕ್ರಝ್, ಸ್ಯಾಂಡರ್ ಮತ್ತಿತರ ಘಟಾನುಘಟಿಗಳ ಪೈಪೋಟಿ ವಿಶ್ವಾದ್ಯಂತ ಮನೆ ಮಾತಾಗಿತ್ತು. ಇದೀಗ ಆರಂಭಿಕ ಕುತೂಹಲಗಳಿಗೆಲ್ಲಾ ತೆರೆ ಎಳೆದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅಧ್ಯಕ್ಷ ಪದವಿಗಾಗಿ ಅಂತಿಮ ಹಣಾಹಣಿ ನಡೆಸಲಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳೆರಡೂ ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷ ಅಮೆರಿಕಾದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳಾ ಅಭ್ಯರ್ಥಿಯನ್ನು ಅಧ್ಯಕ್ಷೀಯ ಕಣದಲ್ಲಿ ಮುಂದಾಳನ್ನಾಗಿ ಮಾಡಿದ್ದರೆ, ರಿಪಬ್ಲಿಕ್ ಪಕ್ಷದ ಆಯ್ಕೆ ಡೊನಾಲ್ಡ್ ಟ್ರಂಪ್ ಕೂಡ ಅಮೆರಿಕಾ ಅಧ್ಯಕ್ಷೀಯ ಗಾದಿಯಲ್ಲಿ ಹೊಸ ನಡೆಯೇ ಸರಿ.

ಹಿಲರಿ ಕ್ಲಿಂಟನ್ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರವರ ಪತ್ನಿಯಾಗಿ 'ಪ್ರಥಮ ಮಹಿಳೆ' ಪಟ್ಟಕ್ಕೆ ಸೀಮಿತವಾಗಿ ತೃಪ್ತಿಪಟ್ಟುಕೊಳ್ಳುವ ಬದಲಾಗಿ, ರಾಜಕೀಯದಲ್ಲಿ ಹಂತ ಹಂತವಾಗಿ ತಮ್ಮದೇ ಛಾಪು ಮೂಡಿಸಿದ ದಿಟ್ಟ ಮಹಿಳೆ. ಬಿಲ್ ಕ್ಲಿಂಟನ್ ಪತ್ನಿಯೆಂಬ ಕಾರಣಕ್ಕೆ ಬಿಟ್ಟಿಯಾಗಿ ಸಿಕ್ಕಿದ 'ಪ್ರಥಮ ಮಹಿಳೆ' ನೆರಳಿನಿಂದ ಹೊರಬಂದು ಸೆನೆಟರ್ ಆಗಿ ಮುಂದಕ್ಕೆ ಅಮೆರಿಕಾದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಚರಿತ್ರೆ ನಿರ್ಮಿಸಿಕೊಂಡಿದ್ದು ಹಿಲರಿಯವರ ಮಹತ್ವಾಕಾಂಕ್ಷೆಗೆ ನಿದರ್ಶನ. ಅತ್ಯಂತ ಮುಂದುವರಿದ ದೇಶ ಎಂದು ತನ್ನನ್ನು ತಾನೇ ವೈಭವೀಕರಿಸಿಕೊಂಡರೂ, ಅಮೆರಿಕಾದ ಸಾಮಾಜಿಕ ಜನಜೀವನ ಯುರೋಪಿಗಿಂತಲೂ ಸಾಂಪ್ರದಾಯಿಕ ಎನ್ನುವುದೂ ಸತ್ಯ. ಸಾಂಪ್ರದಾಯಿಕ ಅಮೆರಿಕಾದ ಮೊದಲ ಅಧ್ಯಕ್ಷೆ ಎನಿಸಿಕೊಂಡು 'ಓವಲ್ ಹೌಸ್' ಕಡೆಗೆ ಪಯಣ ಬೆಳೆಸಿರುವ ಹಿಲರಿ ಕ್ಲಿಂಟನ್ ಹೊಸ ಚರಿತ್ರೆ ನಿರ್ಮಾಣ ಮಾಡುತ್ತಿದ್ದಾರೆ.

ಇತಿಹಾಸ ನಿರ್ಮಿಸುವಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಹಿಂದೆ ಬಿದ್ದಿಲ್ಲ. ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮುನ್ನವೇ ಅನೇಕ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾದವರು. ಟ್ರಂಪ್ ಅಧ್ಯಕ್ಷ ಗಾದಿಗೋಸ್ಕರ ಸ್ಪರ್ಧಿಸುತಿದ್ದಾನೆ ಎಂಬ ಸುದ್ಧಿ ಹಲವರಿಗೆ ನಗೆಪಾಟಲಿನ, ಹಾಸ್ಯದ ವಿಷಯವಾಗಿತ್ತು. ವರೆಗೆ ಸ್ಪರ್ಧಿಸಿದ ಅಧ್ಯಕ್ಷೀಯ ಅಭ್ಯರ್ಥಿಗಳ ಗುಣ ಗಂಭೀರ ನಡವಳಿಕೆಯನ್ನು ಗಮನಿಸಿದವರಿಗೆ ಟ್ರಂಪ್ ಭಿನ್ನವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಟ್ರಂಪ್, ರಿಪಬ್ಲಿಕನ್ನರ ಅಧಿಕೃತ ಅಭ್ಯರ್ಥಿಯಾಗಿ ಅಂತಿಮ ಸ್ಪರ್ಧೆಯಲ್ಲಿದ್ದಾರೆ. ಟ್ರಂಪ್ ಅಮೆರಿಕಾದ ಅಧ್ಯಕ್ಷನಾಗುವ ಎಲ್ಲಾ ಅವಕಾಶಗಳಿರುವುದರಿಂದ, ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ವಿಶ್ವ ಟ್ರಂಪ್ ಕೈಕುಲುಕಲು ಹಾತೊರೆಯಬೇಕಾಗಬಹುದು. ಅಧ್ಯಕ್ಷೀಯ ಗಾದಿಗೆ ರಿಪಬ್ಲಿಕ್ ಪಕ್ಷದ ಆಯ್ಕೆ ಹಿಲರಿ ಕ್ಲಿಂಟನ್ ಎಂಬ ವಿಷಯ ನಿರೀಕ್ಷಿತವಾಗಿದ್ದರೂ, ಡೆಮಾಕ್ರಾಟ್ ಪಕ್ಷದ ಆಯ್ಕೆ ಟ್ರಂಪ್ ಹಲವರಿಗೆ ಅನಿರೀಕ್ಷಿತ ಹಾಗೂ ಅಚ್ಚರಿಯ ಬೆಳವಣಿಗೆ.

ಟ್ರಂಪ್ ತನ್ನೊಳಗೆ ಹಲವು ವ್ಯಕ್ತಿತ್ವಗಳನ್ನು ತುಂಬಿಕೊಂಡು, ಪ್ರಸಕ್ತ ವಿಶ್ವದ ತೀಕ್ಷ್ಣವಾದ ಒಡಕುಗಳನ್ನು ಪ್ರತಿನಿಧಿಸುವ ವ್ಯಕ್ತಿಯಂತೆ ಭಾಸವಾಗುತ್ತಿದ್ದಾರೆ. ಇಂದಿನ ಜಾಗತಿಕ ರಾಜಕೀಯದ ಗೋಜಲುಗಳು, ಅಮೆರಿಕಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಅವಿವೇಕದ ಗುಂಡಿನ ಕಾಳಗಗಳು, ವಿಶ್ವದೆಲ್ಲೆಡೆ ರಕ್ತದ ಕೆಲೆ ಮೂಡಿಸಿರುವ ಇಸ್ಲಾಮಿಕ್ ಸ್ಟೇಟ್ ಮತ್ತಿತರ ಉಗ್ರ ಸಂಘಟನೆಗಳಿಂದ ಅಸ್ತವ್ಯಸ್ತವಾಗಿರುವ ಪ್ರಪಂಚವನ್ನು ಪ್ರತಿನಿಧಿಸುತ್ತಿದೆ ಟ್ರಂಪ್ ವ್ಯಕ್ತಿತ್ವ. ಪ್ರತಿಷ್ಟಿತ ವಾಣಿಜ್ಯ ಕೇಂದ್ರಗಳಿಂದ ಹಿಡಿದು ಸಣ್ಣ ಮಕ್ಕಳು ಓದುವ ಶಾಲೆಗಳೂ ಸುರಕ್ಷಿತವಲ್ಲ ಎಂಬುದು ಜನಮಾನಸದಲ್ಲಿ ಬೇರೂರಿಬಿಟ್ಟಿದೆ. ಇವೆಲ್ಲವುಗಳಿಂದ ತಬ್ಬಿಬ್ಬುಗೊಂಡಿರುವ ಜನರನ್ನು ಪ್ರತಿನಿಧಿಸುತ್ತಿರುವ ಟ್ರಂಪ್ ಕೂಡ ಕ್ಷಣ ಕ್ಷಣಕ್ಕೂ ಬದಲಾಗುತ್ತಾ, ವಿಕ್ಷಿಪ್ತ ನಡವಳಿಕೆ ತೋರುತ್ತಿರುವುದು ಸಹಜವೇ ಸರಿ.

ಡೆಮಾಕ್ರಾಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ಗಂಡ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬೆಂಬಲದ ಜೊತೆಗೆ ಬರಾಕ್ ಒಬಾಮ ಅವರ ಬೆಂಬಲವನ್ನು ಪಡೆದುಕೊಂಡು ಗೆಲ್ಲುವ ಭರವಸೆಯಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ತಾನೇನೂ ಕಡಿಮೆಯಿಲ್ಲ ಎಂಬಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಪುಟಿನ್ ಕಡೆಗೆ ಟ್ರಂಪ್ ತೋರಿಸುತ್ತಿರುವ ಆಸಕ್ತಿ ಜಗತ್ತಿನಾದ್ಯಂತ ಜನರ ಹುಬ್ಬೇರಿಸುವಂತೆ ಮಾಡಿದೆ. ಅಮೆರಿಕಾದ ಸಂಪ್ರದಾಯಿಕ ಎದುರಾಳಿ ರಷ್ಯಾ ಜೊತೆಗೆ ಸ್ನೇಹ ಹಸ್ತ ಚಾಚುವ ಜರೂರತ್ತು ಟ್ರಂಪ್ ಗೇನಿತ್ತು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮೇಲ್ನೋಟಕ್ಕೆ ನಡೆ ಟ್ರಂಪ್ ಹುಚ್ಚಾಟಗಳಲ್ಲಿ ಒಂದು ಎಂದೆನಿಸಬಹುದಾದರೂ, ಇದಕ್ಕೆ ಪ್ರತಿಯಾಗಿ ಪುಟಿನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ಯೋಚಿಸಬೇಕಾದ ವಿಷಯವೇ ಸರಿ. ತನ್ನ ನೇರ ನಡೆ, ಬಂದೂಕಿನಿಂದ ಹೊರಟ ಗುಂಡಿನಂಥ ಮಾತುಗಳಿಂದ ಟ್ರಂಪ್ ಶತ್ರುಗಳನ್ನು ಸೃಷ್ಟಿಸಿಕೊಂಡಷ್ಟೇ ಮಿತ್ರರನ್ನೂ ಸಂಪಾದಿಸಿಕೊಂಡಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಗಳು, ಉದ್ಯೋಗ, ಭದ್ರತೆ ಮತ್ತು ಸಮೃದ್ಧ ಅಮೆರಿಕಾದ ಪರಿಕಲ್ಪನೆಗಳ ವಿಚಾರಗಳಲ್ಲಿ ಸ್ಪಷ್ಟ ನಿಲುವು ಹೊಂದಿರುವ ಟ್ರಂಪ್ ಅಮೆರಿಕಾದ ಯುವ ಮನಸ್ಸುಗಳನ್ನು ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಟ್ರಂಪ್ ಮತ್ತು ಪುಟಿನ್ ತಳೆದಿರುವ ಕಠಿಣ ಮನೋಭಾವ ಇಬ್ಬರನ್ನೂ ಮತ್ತಷ್ಟು ಹತ್ತಿರವಾಗಿಸಿದೆ. ಒಂದು ವೇಳೆ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಹೊರಹೊಮ್ಮಿದರೆ ಟ್ರಂಪ್ ಮತ್ತು ಪುಟಿನ್ ಜಂಟಿಯಾಗಿ ಇಸ್ಲಾಮಿಕ್ ಸ್ಟೇ ಟ್ ವಿರುದ್ಧ ಕಾರ್ಯಾಚರಣೆಯಲ್ಲಿ ಕೈಜೋಡಿಸುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ಈಗಾಗಲೇ ರಾಜಕೀಯ ಪಂಡಿತರಿಂದ ವ್ಯಕ್ತವಾಗಿದೆ.

ಅಧಿಕಾರದಲ್ಲಿರುವ ಡೆಮಾಕ್ರಾಟ್ ಪಕ್ಷ ಇಸ್ಲಾಮಿಕ್ ಸ್ಟೇಟ್ ನಿಗ್ರಹಿಸುವಲ್ಲ ವಿಫಲವಾಗಿರುವುದು ಮತ್ತು ಟ್ರಂಪ್ ತಾನು ಪುಟಿನ್ ಜೊತೆ ಕೈಜೋಡಿಸಿ ಇಸ್ಲಾಮಿಕ್ ಸ್ಟೇಟ್ ಅನ್ನು ಬುಡ ಸಮೇತ ಉಚ್ಚಾಟನೆಗೊಳಿಸುತ್ತೇನೆ ಎನ್ನುತ್ತಿರುವುದೂ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ . ನ್ಯಾಟೋ ಒಕ್ಕೂಟದ ಬಗ್ಗೆ ಟ್ರಂಪ್ ಗಿರುವ ತಿರಸ್ಕಾರ ಮತ್ತು ನ್ಯಾಟೊ ರಷ್ಯಾ ವಿರೋಧಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂಬ ಟ್ರಂಪ್ ಆಶಯಗಳು ಟ್ರಂಪ್-ಪುಟಿನ್ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಿವೆ. ರಷ್ಯಾದ ಗುಪ್ತಚರ ದಳಗಳು ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗೆ ತಂತ್ರ ರೂಪಿಸುತ್ತಿವೆ ಎಂಬ ವದಂತಿಗಳನ್ನು ಪುಟಿನ್ ತಳ್ಳಿ ಹಾಕಿದ್ದರೂ, ಬಾರಿಯ ಅಮೆರಿಕಾದ ಅಧ್ಯಕ್ಷೀಯ ಮತದಾನ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ.


ಇತ್ತೀಚೆಗೆ ನಡೆದ ಸಮೀಕ್ಷೆಗಳ ಪ್ರಕಾರ ಟ್ರಂಪ್ ಮುಕ್ತವಾಗಿ ವ್ಯಕ್ತಪಡಿಸುತ್ತಿರುವ ಕೆಲ ಸಂಗತಿಗಳು, ಮುಖ್ಯವಾಗಿ ಪುಟಿನ್ ಮತ್ತು ರಷ್ಯಾ ಜೊತೆಗಿನ ಸ್ನೇಹ ನವೆಂಬರ್ ಮತದಾನದಲ್ಲಿ ದುಬಾರಿಯಾಗಿ ಪರಿಣಮಿಸಬಹುದು. ಶೀತಲ ಸಮರದ ಅಂತ್ಯದೊಂದಿಗೆ ಸೊವಿಯೆತ್ ಒಕ್ಕೂಟ ಒಡೆದುಹೋಗಿ ಕಾಲು ಶತಮಾನವೇ ಕಳೆದುಹೋದರೂ, ಸಾಮಾನ್ಯ ಅಮೆರಿಕನ್ ಪ್ರಜೆಗಳಿನ್ನೂ ರಷ್ಯಾ ದ್ವೇಷ ತೊರೆದಿಲ್ಲ. ಅದರಲ್ಲೂ ಉಕ್ರೈನ್ ಬಿಕ್ಕಟ್ಟು, ಕ್ರಿಮಿಯಾದಲ್ಲಿ ರಷ್ಯಾ ತೋರಿದ ಆಕ್ರಮಣಕಾರಿ ನಡೆ, ಇತ್ತೀಚಿನ ಜಾಗತಿಕ ಸಂಘರ್ಷಗಳಲ್ಲಿ ಪುಟಿನ್ ನಡೆದುಕೊಳ್ಳುತ್ತಿರುವ ರೀತಿ ಅಮೆರಿಕನ್ನರನ್ನು ಚಿಂತೆಗೀಡು ಮಾಡಿದೆ. ಇದೇ ಚಿಂತೆ ಮುಂದಿನ ಅಧ್ಯಕ್ಷೀಯ ಮತದಾನದಲ್ಲಿ ಟ್ರಂಪ್ ದ್ವೇಷವಾಗಿ ಮಾರ್ಪಾಡಾದರೆ ಹಿಲರಿ ಕ್ಲಿಂಟನ್ ಸನ್ನಿವೇಶದ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ಕ್ಲಿಂಟನ್ ಅಥವಾ ಟ್ರಂಪ್ ಇಬ್ಬರಲ್ಲಿ ಯಾರೇ ಅಮೆರಿಕಾದ ಅಧ್ಯಕ್ಷರಾದರೂ ಅಮೆರಿಕಾದ ಆಂತರಿಕ ಮತ್ತು ವಿದೇಶಾಂಗ ನೀತಿಯಲ್ಲಿ ಅನೂಹ್ಯ ಬದಲಾವಣೆಗಳನ್ನು ನಿರೀಕ್ಷಿಸಬಹುದು. ವರೆಗೆ  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿಂಥ ಭಿನ್ನವಾದ ವ್ಯಕ್ತಿತ್ವಗಳನ್ನು ಹೊಂದಿರುವ ಇಬ್ಬರೂ  ಅಧ್ಯಕ್ಷೀಯ ಅಭ್ಯರ್ಥಿಗಳು ಹೊಸ ಇತಿಹಾಸ ಸೃಷ್ಟಿಸುವುದಕ್ಕೆ ತುದಿಗಾಲಲ್ಲಿ ನಿಂತಿರುವಾಗಲೇ ವಿಶ್ವದೆಲ್ಲೆಡೆ ಅನೇಕ ದೇಶಗಳು ಯಾರು ಹಿತವರು ಇಬ್ಬರೊಳಗೆ? ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.




 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Hosa Diganta newspaper on 19 August 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ