ಗುರುವಾರ, ಡಿಸೆಂಬರ್ 1, 2016

ಮೈತ್ರಿಯಿಂದ ಮರೆಯಾದ 'ರಾಜತಾಂತ್ರಿಕ ಸಂಕೋಚ'!

ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! 
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಸ್ವತಂತ್ರ ಭಾರತದ ಇಷ್ಟು ವರ್ಷಗಳ ವಿದೇಶಾಂಗ ನೀತಿಯಲ್ಲಿ ಭಾರತವನ್ನು ಬಿಟ್ಟೂ ಬಿಡದಂತೆ ಕಾಡಿದ್ದು ಎರಡು ಪ್ರಮುಖ ಅಂಶಗಳು. ಮೊದಲನೆಯದಾಗಿ ಪಾಕಿಸ್ತಾನ, ಚೀನಾ ಮಾತ್ರವಲ್ಲದೇ, ಉಳಿದ ಎಲ್ಲಾ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಭಾರತಕ್ಕಿರುವ ಮನಸ್ತಾಪಗಳು. ಎರಡನೆಯದಾಗಿ ಮತ್ತು ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುವ ಅಂಶ ಭಯೋತ್ಪಾದಕರ ಹುಚ್ಚಾಟಗಳು. ಭಾರತ ಪದೇ ಪದೇ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿದಾಗ, ವಿಶ್ವ ಶಕ್ತಿಗಳಿಗೆ ಭಾರತದ ವಾದ ತಮಾಷೆಯ ವಿಷಯವಾಗಿತ್ತು.  2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ತನ್ನ ವಕ್ರದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು! ತದನಂತರ ಭಯೋತ್ಪಾದಕರನ್ನು ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಅಮೆರಿಕಾ ಅಬ್ಬರಿಸಿದರೂ, ಭಾರತದ ಸಮಸ್ಯೆಗಳ ಪರಿಹಾರಕ್ಕೇನೂ ದೊಡ್ಡ ಮಟ್ಟಿನ ಅನುಕೂಲವಾಗಿರಲಿಲ್ಲ. ಇದಕ್ಕೆಲ್ಲಾ ಕಾರಣ ಭಾರತದಲ್ಲಾಗುತ್ತಿರುವ ಭಯೋತ್ಪಾನೆಯ ಅನುಭವಗಳಿಗೂ ಅಮೆರಿಕಾ ಮತ್ತಿತರ ಯುರೋಪಿಯನ್ ರಾಷ್ಟ್ರಗಳು ಭಯೋತ್ಪಾದನೆಯನ್ನು ಪರಿಭಾವಿಸುತ್ತಿರುವ ರೀತಿಗೂ ಇರುವ ಅಜಗಜಾಂತರ ವ್ಯತ್ಯಾಸಗಳು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತ- ಇಸ್ರೇಲ್ ರಾಜತಾಂತ್ರಿಕ ಸಂಬಂಧಗಳಲ್ಲಿ ಇತ್ತೀಚಿನ ವಿದ್ಯಮಾನಗಳು ಹೊಸ ಹುರುಪು ತುಂಬುತ್ತಿರುವುದೂ ಧನಾತ್ಮಕ ಬೆಳವಣಿಗೆಯೇ ಸರಿ. 

ಇಸ್ರೇಲಿನ ಅಧ್ಯಕ್ಷ ರೂವೆನ್ ರಿವಿನ್ ಭಾರತಕ್ಕೆ ಆರು ದಿನಗಳ ಭೇಟಿ ನೀಡಿದ್ದರು. ಈ ಬಾರಿ ರೂವೆನ್ ರಿವಿನ್ ಭಾರತ ಮತ್ತು ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಮೆರುಗು ನೀಡುವ ಮಾತುಗಳನ್ನಾಡಿದ್ದು, ಭಾರತ ಮತ್ತು ಇಸ್ರೇಲ್ ಗಳ ನಡುವೆ ಬೆಳೆಯುತ್ತಿರುವ ಸ್ನೇಹ, ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರಗಳು ಭವಿಷ್ಯದಲ್ಲಿ ಧನಾತ್ಮಕ ಫಲ ನೀಡಲಿದೆ ಎಂದಿದ್ದಾರೆ. ಈ ಎರಡೂ ರಾಷ್ಟ್ರಗಳಿಗೂ ಸಮಾನ ಶತ್ರುವಾಗಿರುವ ಭಯೋತ್ಪಾದನೆ ನಿರ್ಮೂಲನೆಯಲ್ಲೂ ಇಸ್ರೇಲ್ - ಭಾರತಗಳು ಕಾರ್ಯನಿರ್ವಹಿಸುತ್ತಿರುವ ನೀತಿಯ ಬಗೆಗೂ ಪ್ರಸ್ತಾವಿಸಿದ ರಿವಿನ್, ಭಾರತದ ಕೃಷಿ, ರಕ್ಷಣಾ ಮತ್ತು ಸೈಬರ್ ಯುದ್ಧಗಳ ವಿಚಾರದಲ್ಲೂ ನೆರವು ನೀಡಲು ಇಸ್ರೇಲ್ ಸಿದ್ಧವಾಗಿದೆ ಎನ್ನುವ ಮೂಲಕ ಇಸ್ರೇಲ್ ಭಾರತ ಸಂಬಂಧಗಳನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳೂ ಕಂಡು ಬಂದಿವೆ. ಇಸ್ರೇಲೀ ಅಧ್ಯಕ್ಷರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ, ಭಾರತ- ಇಸ್ರೇಲ್ ನ ಭವಿಷ್ಯದ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಬೆಳಕೊಂದು ಕಂಡಿದ್ದರಲ್ಲಿ ತಪ್ಪೇನೂ ಇಲ್ಲ. ಈ ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಇದೇ ವೇಗ ಉಳಿಸಿಕೊಂಡು ಇನ್ನಷ್ಟು ಬಲ ತುಂಬಲು ಪ್ರಧಾನಿ ನರೇಂದ್ರ  ಮೋದಿಯವರು ಜನವರಿ 2017ರಲ್ಲಿ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2006ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಇಸ್ರೇಲ್ ಭೇಟಿ ಮಾಡಿದ್ದ ನರೇಂದ್ರ ಮೋದಿ, ಈ ಬಾರಿ ಪ್ರಧಾನಿಯಾಗಿ ನೀಡುವ ಭೇಟಿ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಈ ಭೇಟಿಯ ಮೂಲಕ ಇಸ್ರೇಲ್ ಗೆ ಭೇಟಿ ನೀಡಿದ ಪ್ರಪ್ರಥಮ ಭಾರತದ ಪ್ರಧಾನಿಯೆನಿಸಿಕೊಳ್ಳಲಿದ್ದಾರೆ ಮೋದಿ.

1992ರಲ್ಲಿ ಇಸ್ರೇಲ್-ಭಾರತಗಳ ಬಾಂಧವ್ಯಕ್ಕೆ ನೆಲೆಗಟ್ಟನ್ನು ಹಾಕಿಕೊಟ್ಟ ಕೀರ್ತಿ ಆಗಿನ ಪ್ರಧಾನಿ ನರಸಿಂಹ ರಾವ್ ಅವರಿಗೆ ಸಲ್ಲುತ್ತದೆ. ಕೃಷಿ, ರಕ್ಷಣೆ, ಭಯೋತ್ಪಾದನಾ ನಿಗ್ರಹ ಇನ್ನಿತರ ವಿಚಾರಗಳಲ್ಲಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ಜೊತೆಗೆ ಭಾರತದ ಬಾಂಧವ್ಯ ಉತ್ತಮವಾಗಿಯೇ ಮುಂದುವರಿದಿತ್ತಾದರೂ, ವಿಶ್ವಮಟ್ಟದಲ್ಲಿ ಇಸ್ರೇಲ್ ಜೊತೆಗೆ ಮುಕ್ತವಾಗಿ ಗುರುತಿಸಿಕೊಳ್ಳಲು ಭಾರತ ಹಿಂಜರಿಯುತ್ತಿತ್ತು! ಈ ಹಿಂಜರಿಕೆ ಮತ್ತು ಸಂಕೋಚಗಳಿಗೆ ಕಾರಣಗಳೂ ಇಲ್ಲದಿಲ್ಲ. ಇಸ್ರೇಲ್ ಜೊತೆಗಿನ ಅತಿಯಾದ ನಂಟು, ಅರಬ್ ರಾಷ್ಟ್ರಗಳ ವಿರೋಧಕ್ಕೆ ಕಾರಣವಾಗಬಹುದು ಎಂಬ ಭೀತಿ ಭಾರತೀಯ ನಾಯಕರನ್ನು ಈ ಇಬ್ಬಂದಿ ನೀತಿಯತ್ತ ವಾಲುವಂತೆ ಮಾಡಿತ್ತು. ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಆಕಾಂಕ್ಷೆ ಮತ್ತಿನ್ನಿತರ ಜಾಗತಿಕ ವಿಚಾರಗಳಲ್ಲಿ ಅರಬ್ ರಾಷ್ಟ್ರಗಳ ಉಪಸ್ಥಿತಿ ಮತ್ತು ಪ್ರಭಾವವನ್ನು ಕಡೆಗಣಿಸುವಂತಿಲ್ಲ. ಪಾಕಿಸ್ತಾನದ ವಿಚಾರದಲ್ಲೂ ಅರಬ್ ರಾಷ್ಟ್ರಗಳು ಭಾರತದ ಪರ ನಿಲ್ಲುವ ದೂರದ ಆಸೆ ಇಟ್ಟುಕೊಂಡ ಭಾರತದ ವಿದೇಶಾಂಗ ನೀತಿ ಅರಬ್ ರಾಷ್ಟ್ರಗಳ ವಿಶ್ವಾಸ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವಾಗ ಅರಬ್ಬರ ಬದ್ಧವೈರಿಯಾದ ಇಸ್ರೇಲ್ ಜೊತೆಗೆ ಭಾರತ ಹೇಗೆ ತಾನೆ ಗುರುತಿಸಿಕೊಂಡೀತು? ಪ್ಯಾಲೆಸ್ಟೀನ್ ವಿವಾದ ಯಾವುದೇ ರಾಷ್ಟ್ರದ ಮಧ್ಯಪ್ರಾಚ್ಯದ ವಿದೇಶಾಂಗ ನೀತಿಯ ಅಳತೆಗೋಲು ಎಂದರೆ ಅತಿಶಯೋಕ್ತಿಯೇನಿಲ್ಲ. ಭಾರತ ತನ್ನ ಪ್ಯಾಲೆಸ್ಟೀನ್ ನೀತಿಯುದ್ದಕ್ಕೂ ಅರಬ್ ರಾಷ್ಟ್ರಗಳನ್ನು ಓಲೈಸುವ ಪ್ರಯತ್ನದಲ್ಲಿ ಪ್ಯಾಲೆಸ್ಟೀನಿಯರ ಪರವಹಿಸಿಕೊಂಡು, ಇಸ್ರೇಲನ್ನು ದೂರ ಮಾಡಿಕೊಂಡಿದ್ದು ಸ್ಪಷ್ಟವಾಗಿತ್ತು. ಭಾರತದ ವಿದೇಶಾಂಗ ನೀತಿಯ ಈ 'ರಾಜತಾಂತ್ರಿಕ ಸಂಕೋಚ' ಭಾರತದ ಜೊತೆಗೆ ವಿಶ್ವಾಸಾರ್ಹ ಸಂಬಂಧಗಳನ್ನು ಹೊಂದಿದ್ದ ಇಸ್ರೇಲನ್ನು ಉದ್ದೇಶಪೂರ್ವಕವಾಗಿಯೇ ದೂರವಿಡುವಂತೆ ಮಾಡಿತ್ತು. ಈ ಇಬ್ಬಂದಿತನದಿಂದಾಗಿ ಇಸ್ರೇಲ್ ಕೂಡ ಭಾರತದ ಜೊತೆಗೆ ಹೆಚ್ಚಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು ಆಸಕ್ತಿ ವಹಿಸದಂತೆ ಮಾಡಿಬಿಟ್ಟಿತ್ತು

ಇಸ್ರೇಲ್ ವಿರೋಧವನ್ನೂ ಕಟ್ಟಿಕೊಂಡು, ಅರಬ್ ನಾಯಕರನ್ನು ಒಲೈಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದ ಭಾರತಕ್ಕೆ ವಾಸ್ತವ ಅರಿವಾದಾಗ ದಿಗ್ಭ್ರಮೆಯಾಗಿತ್ತು. ಭಾರತದ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಅರಬ್ ರಾಷ್ಟ್ರಗಳು ಮಾತ್ರ, "ಕೊಟ್ಟವ ಕೋಡಂಗಿ, ಈಸ್ಕೊಂಡವ ವೀರಭದ್ರ" ಎಂಬಂತೆ ಭಾರತದ ಬೆಂಬಲ ಸಹಕಾರಗಳನ್ನೆಲ್ಲಾ ಪಡೆದುಕೊಂಡು ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವು ನೀಡುವ ಚಾಳಿ ಮುಂದುವರಿಸಿದ್ದವು! ಎಲ್ಲೋ ದೂರದ ಸಮಸ್ಯೆಗೆ ಅರಬ್ಬರಿಗೆ ಸಹಾಯ ಮಾಡಲು ಹೋದ ಭಾರತಕ್ಕೆ, ತನ್ನ ನೆರೆಹೊರೆಯ ಸಮಸ್ಯೆಗೂ ಅರಬ್ಬರ ಸಹಾಯ ದೊರೆಯಲಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೊಂಬರಾಟಗಳು, ಭಯೋತ್ಪಾದಕರಿಗೆ ನೀಡುತ್ತಿರುವ ಕುಮ್ಮಕ್ಕು ಇನ್ನಿತರ ಪಾಕಿಸ್ತಾನದ ಹುಚ್ಚಾಟಗಳಿಗೆ ಅರಬ್ ರಾಷ್ಟ್ರಗಳು ಬೆಂಬಲ ನೀಡಿವೆಯೇ ಹೊರತು ಬುದ್ಧಿ ಹೇಳುವ ಪ್ರಯತ್ನ ಮಾಡಿಲ್ಲ. ಅರಬ್ ರಾಷ್ಟ್ರಗಳೆಲ್ಲಾ ಸೇರಿಕೊಂಡು Organization of Islamic Conference (OIC) ಎಂಬ ಹೆಸರಿನಲ್ಲಿ ನೇರವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದಾಗ, ಭಾರತದ ವಿದೇಶಾಂಗ ನೀತಿ ತಪ್ಪು ಹಾದಿಯಲ್ಲಿ ನಡೆದಿದ್ದು ಸ್ಪಷ್ಟವಾಗಿತ್ತು. ಇಷ್ಟೆಲ್ಲಾ ನಡೆದ ಮೇಲೆ ಮತ್ತೆ ಇಸ್ರೇಲ್ ಜೊತೆಗಿನ ವಿಶ್ವಾಸ ವೃದ್ಧಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ಹೀಗಿದ್ದಾಗ್ಯೂ ಮೋದಿ ಸರಕಾರ ಭಾರತದ ಸ್ನೇಹದಲ್ಲಿ ಇಸ್ರೇಲ್ ಗೆ ವಿಶ್ವಾಸ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೋದಿ ದೇಶ ಮತ್ತು ವಿದೇಶಗಳಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಯಾವುದೇ ಸಂಕೋಚ ಮತ್ತು ಗೊಂದಲಗಳಿಲ್ಲದೇ ಬಹಳ ಸ್ಪಷ್ಟವಾಗಿ ಪ್ರಸ್ತುತ ಪಡಿಸುತ್ತಿರುವುದು ಭಾರತದ ವಿದೇಶಾಂಗ ನೀತಿಯ ಟ್ರಂಪ್ ಕಾರ್ಡ್ ಆಗಿ ಬದಲಾಗುತ್ತಿದೆ.

ಭಾರತ ತನ್ನ ಹಿಂದಿನ 'ರಾಜತಾಂತ್ರಿಕ ಸಂಕೋಚ'ದ ನೀತಿಯನ್ನು ಕೈಬಿಟ್ಟುಇಸ್ರೇಲ್ ಗೆಳೆತನವನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಅವಶ್ಯಕತೆ ಇಂದೆಂದಿಗಿಂತಲೂ ಹೆಚ್ಚಿದೆ. 1990ರಿಂದೀಚೆಗೆ ಭಾರತ ಹಂತ ಹಂತವಾಗಿ ಪ್ಯಾಲೆಸ್ಟೀನ್ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಇಸ್ರೇಲ್ ನತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಭಾರತ ಇಸ್ರೇಲ್ ಜೊತೆಗೆ ವ್ಯವಹರಿಸುವಲ್ಲಿ ರಾಜತಾಂತ್ರಿಕ ಸಂಕೋಚ ಗೊಂದಲಗಳನ್ನು ವ್ಯಕ್ತಪಡಿಸಿದ್ದರೂ ಇಸ್ರೇಲ್ ಮಾತ್ರ ಭಾರತಕ್ಕೆ ಅವಶ್ಯಕತೆ ಬಿದ್ದಾಗಲೆಲ್ಲಾ ಷರತ್ತುರಹಿತ ಬೆಂಬಲ ನೀಡಿದೆ. ಉದಾಹರಣೆಗೆ ಮೇ 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲೂ ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಇಚ್ಚೆ ವ್ಯಕ್ತಪಡಿಸಿತ್ತು! 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ತನ್ನ ಮಾನವರಹಿತ ವಿಮಾನಗಳನ್ನು (UAV) ಉಪಯೋಗಿಸಿಕೊಂಡು ಪಾಕಿಸ್ತಾನದ ಮಿಲಿಟರಿ ನೆಲೆಗಳು ಮತ್ತಿತರ ಸಮರತಾಂತ್ರಿಕ ಮಹತ್ವದ ಮಾಹಿತಿಗಳನ್ನು ದೃಶ್ಯಾವಳಿಗಳ ಸಮೇತ ಭಾರತೀಯ ಸೇನೆಗೆ ಒದಗಿಸಿತ್ತು! ಇಸ್ರೇಲ್ ನೀಡಿದ ಈ ವಿಶೇಷ ನೆರವು ಕಾರ್ಗಿಲ್ ನಲ್ಲಿ ವೈರಿಗಳ ಸದ್ದಡಗಿಸಿ ವಿಜಯ್ ದಿವಸ್ ಆಚರಿಸುವಲ್ಲಿ ಬೃಹತ್ ಪಾತ್ರ ವಹಿಸಿತ್ತು. 2002ರಲ್ಲಿ ಪಾಕಿಸ್ತಾನದ ನಿರಂತರ ಕೆಣಕುವಿಕೆಗೆ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಭಾರತೀಯ ಸೇನೆ ನೀಡಿದ ಉತ್ತರ 'ಆಪರೇಶನ್ ಪರಾಕ್ರಮ್'! ಈ ಕಾರ್ಯಾಚರಣೆಯಲ್ಲೂ ಭಾರತದ ಸೇನೆಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಕ್ಷಿಪ್ರಗತಿಯಲ್ಲಿ ತನ್ನ ವಿಶೇಷ ವಿಮಾನಗಳ ಮೂಲಕ ಒದಗಿಸಿದ್ದು ಇದೇ ಇಸ್ರೇಲ್! ಹೀಗಿರುವಾಗ ಇಸ್ರೇಲ್ ಜೊತೆಗಿನ ಭಾರತದ ರಾಜತಾಂತ್ರಿಕ ನಂಟನ್ನು ನೇರವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ಸಂಶಯವೂ ಬೇಕಾಗಿಲ್ಲ. ಈ ಧೀಮಂತ ನಡೆ ಇಸ್ರೇಲ್ ಭಾರತಕ್ಕೆ ನೀಡಿದ ಷರತ್ತುರಹಿತ ಬೆಂಬಲಗಳಿಗೆ ಸ್ನೇಹಪೂರ್ವಕ ಗೌರವ ಸೂಚಿಸಿದಂತೆಯೂ ಆಗುತ್ತದೆ.

(This article was published in Vishwavani newspaper on 1 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ