ಶನಿವಾರ, ಡಿಸೆಂಬರ್ 17, 2016

ನಾಗರಿಕತೆಗಳ ಸಂಘರ್ಷದತ್ತ ಸಾಗುತ್ತಿದೆಯೇ ಜಾಗತಿಕ ರಾಜಕಾರಣ?

ಮಾರ್ಕ್ಸ್ ಹೇಳಿದ ಉಳ್ಳವರು ಮತ್ತು ಶೋಷಿತರ ಯುದ್ಧಕ್ಕೂ ಕೊನೆಯಿದೆ, ಇಸಂಗಳ ನಡುವಿನ ಯುದ್ಧಕ್ಕೂ ಕೊನೆಯಿದೆ. ಆದರೆ ಸಂಸ್ಕೃತಿಯ ಸಂಘರ್ಷಕ್ಕೆ ಕೊನೆ ಹುಡುಕುವುದು ಕಷ್ಟಸಾಧ್ಯವೇ ಸರಿ. ಟ್ರಂಪ್ ಹೊರತಾಗಿಯೂ 21ನೇ ಶತಮಾನದ ಜಾಗತಿಕ ರಾಜಕೀಯ ವ್ಯವಸ್ಥೆ ರಹಸ್ಯ ತಿರುವೊಂದಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಟ್ರಂಪ್ ಮತ್ತಿತರು ನೆಪ ಮಾತ್ರ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಕೆಲವೇ ದಿನಗಳಲ್ಲಿ ಟ್ರಂಪ್ ಅಧಿಕೃತವಾಗಿ ಅಮೆರಿಕಾದ ಅಧ್ಯಕ್ಷರಾಗಲಿದ್ದಾರೆ. ಟ್ರಂಪ್ ವಿದೇಶಾಂಗ ನೀತಿಯಲ್ಲಿ ವ್ಯಕ್ತಪಡಿಸುತ್ತಿರುವ ಮನೋಭಾವಗಳು, ಟ್ರಂಪ್ ಗೆ ಸಲಹೆ ನೀಡುತ್ತಿರುವ ವಿದೇಶಾಂಗ ವ್ಯವಹಾರಗಳ ನಿಪುಣರು, ಭಯೋತ್ಪಾದನೆಯ ಬಗೆಗಿನ ನಿಲುವು ಮತ್ತು ವಲಸಿಗರ ಕುರಿತಾಗಿಯೂ ಅಮೆರಿಕಾದ ಬದಲಾಗುತ್ತಿರುವ ಧೋರಣೆಯನ್ನು ಗಮನಿಸಿದಲ್ಲಿ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಟ್ರಂಪ್ ಅಧ್ಯಕ್ಷತೆಯ ಅಮೆರಿಕಾದ ಭವಿಷ್ಯಕ್ಕೂ ಸುಮಾರು ಕಾಲು ಶತಮಾನಗಳ ಹಿಂದೆ ಸ್ಯಾಮುಯೆಲ್ ಪಿ ಹಂಟಿಂಗ್ಟನ್ ನೀಡಿದ್ದ 'ನಾಗರಿಕತೆಗಳ ಸಂಘರ್ಷ'ಕ್ಕೂ ಅಚ್ಚರಿ ಮೂಡಿಸುವಷ್ಟು ಸಾಮ್ಯತೆಗಳಿವೆ.  ಚುನಾವಣಾ ಪ್ರಚಾರದುದ್ದಕ್ಕೂ ಟ್ರಂಪ್ ಮತ್ತವರ ಬೆಂಬಲಿಗರ ಮಾತುಗಳಲ್ಲಿ ಕೆಲವೊಮ್ಮೆ ಪ್ರತ್ಯಕ್ಷವಾಗಿ ಹಾಗೂ ಹಲವು ಬಾರಿ ಪರೋಕ್ಷವಾಗಿ 'ನಾಗರಿಕತೆಗಳ ಸಂಘರ್ಷ'ದ ಛಾಯೆ ದಟ್ಟವಾಗಿತ್ತು!

ಏನಿದು ನಾಗರಿಕತೆಗಳ ಸಂಘರ್ಷ? ಸೊವಿಯೆತ್ ಒಕ್ಕೂಟದ ಪತನದೊಂದಿಗೆ ವಿಶ್ವ ಇತಿಹಾಸದಲ್ಲಿ ಶೀತಲ ಸಮರವೂ ಕೊನೆಗೊಂಡಾಗ, ಜಾಗತಿಕ ವ್ಯವಸ್ಥೆಯ ಭವಿಷ್ಯದ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿದ್ದವು. ಶೀತಲ ಸಮರೋತ್ತರದಲ್ಲಿ ಅಮೆರಿಕಾಗೆ ಪ್ರತಿಸ್ಪರ್ಧಿಗಳಿರುವುದಿಲ್ಲವೇ? ಜಾಗತಿಕ ಸಂಘರ್ಷಗಳಿಗೆ ಕಾರಣವಾಗುವಂಥ ಅಂಶಗಳಾದರೂ ಯಾವುವು? ಮುಂದಿನ ಜಾಗತಿಕ ವ್ಯವಸ್ಥೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ? ಮುಂತಾದ ಹತ್ತು ಹಲವು ಪ್ರಶ್ನೆಗಳು ವಿಶ್ವದ ರಾಜಕೀಯ ಚಿಂತಕರು ಮತ್ತು ರಾಜತಂತ್ರಜ್ಞರ ಪಾಲಿಗೆ ಸವಾಲಾಗಿ ನಿಂತಿದ್ದವು. 1990ರ ದಶಕದ ಆರಂಭದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂಥ ಪ್ರಯತ್ನವೊಂದರಲ್ಲಿ ಫ್ರಾನ್ಸಿಸ್ ಫುಕುಯಾಮ 'ಇತಿಹಾಸದ ಅಂತ್ಯ' (End of History) ಎಂಬ ಪರಿಕಲ್ಪನೆಯೊಂದನ್ನು ಪ್ರತಿಪಾದಿಸುತ್ತಾರೆ. ಫುಕುಯಾಮರವರ ಪ್ರಕಾರ ಭವಿಷ್ಯದ ವಿಶ್ವ ರಾಜಕೀಯದಲ್ಲಿ ಗಂಭೀರ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲ. ಯಾಕೆಂದರೆ ಕಮ್ಯೂನಿಸಂನ ಅಂತ್ಯದೊಂದಿಗೆ ಪಾಶ್ಚಿಮಾತ್ಯ ಜಗತ್ತಿನ ಉದಾರವಾದಿ ವಿಚಾರಧಾರೆಗಳು ಅಂತಿಮ ಜಯಗಳಿಸಿವೆ ಮತ್ತು ವಿಶ್ವ ಇತಿಹಾಸದಲ್ಲಿ ಹೊಸ ವಿಚಾರಧಾರೆಗೆ ಅವಕಾಶವಾಗಲಿ ಅಥವಾ ಅದರ ಅವಶ್ಯಕತೆಯಾಗಲಿ ಇರುವುದಿಲ್ಲ! ಫುಕುಯಾಮರವರ ಈ ಚಿಂತನೆ ವಿಶ್ವಾದ್ಯಂತ ಚರ್ಚಿತವಾಗಿ ಬಹಳಷ್ಟು ಪರ ವಿರೋಧಗಳನ್ನು ಎದುರಿಸುತ್ತದೆ. ಇದೇ ರೀತಿಯಲ್ಲಿ ಆದರೆ ಫುಕುಯಾಮ ವಿಶ್ಲೇಷಣೆಗೆ ವಿರುದ್ಧ ದಿಕ್ಕಿನಲ್ಲಿ ಮೂಡಿಬಂದ ಪರಿಕಲ್ಪನೆಯೇ 'ನಾಗರಿಕತೆಗಳ ಸಂಘರ್ಷ'!

1993ರಲ್ಲಿ ಸ್ಯಾಮುಯೆಲ್ ಪಿ ಹಂಟಿಂಗ್ಟನ್ 'ಫಾರಿನ್ ಅಫೇರ್ಸ್'ನಲ್ಲಿ ಲೇಖನವೊಂದನ್ನು ಪ್ರಕಟಿಸುತ್ತಾರೆ. ಆ ಲೇಖನದ ಶೀರ್ಷಿಕೆಯೇ 'ನಾಗರಿಕತೆಗಳ ಸಂಘರ್ಷ?'(Clash of Civilisations?) ಈ ಮೂಲಕ ಹಂಟಿಗ್ಟನ್ ಶೀತಲ ಸಮರೋತ್ತರದ ವಿಶ್ವ ರಾಜಕೀಯದ ಕುರಿತಾಗಿ ವಿಭಿನ್ನವಾದ ನಿಲುವೊಂದನ್ನು ಪ್ರಪಂಚದ ಮುಂದಿಡುತ್ತಾರೆ. ಫುಕುಯಾಮ ಚಿಂತನೆಯನ್ನು ವಿರೋಧಿಸುತ್ತಾ, ಕಮ್ಯುನಿಸಂ ಅಂತ್ಯವಾದರೂ ವಿಶ್ವ ರಾಜಕೀಯದಲ್ಲಿ ಸಂಘರ್ಷಗಳು ಮುಂದುವರಿಯುತ್ತವೆ ಮತ್ತು ಜಗತ್ತಿನ ವಿಭಿನ್ನ ನಾಗರಿಕತೆಗಳು ಈ ಸಂಘರ್ಷಕ್ಕೆ ಕಾರಣವಾಗಲಿವೆ ಎಂಬ ಪರಿಕಲ್ಪನೆಯನ್ನು 'ನಾಗರಿಕತೆಗಳ ಸಂಘರ್ಷ' ಪುರಾವೆಗಳ ಸಮೇತ ಚರ್ಚಿಸುತ್ತದೆ. ಪಾಶ್ಚಿಮಾತ್ಯ, ಇಸ್ಲಾಮಿಕ್, ಕನ್ಫ್ಯೂಷಿಯಸ್ (ಚೈನೀಸ್), ಸ್ಲಾವಿಕ್-ಅರ್ತೋಡಾಕ್ಸ್, ಜಪಾನೀಸ್, ಹಿಂದು, ಲ್ಯಾಟಿನ್ ಅಮೆರಿಕನ್, ಆಫ್ರಿಕನ್ ನಾಗರಿಕತೆಗಳ ಈ ಸಂಘರ್ಷದಲ್ಲಿ ಸಂಸ್ಕೃತಿಯ ಅಸ್ಮಿತೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಸಂಸ್ಕೃತಿಗಳ ಘರ್ಷಣೆ ಹಿಂದಿನ ಎಲ್ಲಾ ಸಂಘರ್ಷಗಳಿಗಿಂತಲೂ ಭೀಕರವಾಗಿರಲಿದೆ ಎಂದು ಹಂಟಿಗ್ಟನ್ ಅಭಿಪ್ರಾಯಪಡುತ್ತಾರೆ. ತನ್ನ ದೀರ್ಘ ಲೇಖನದಲ್ಲಿ ಪಶ್ಚಿಮ ಮತ್ತು ಇತರ ನಾಗರಿಕತೆಗಳ ( The West versus the Rest) ಮಧ್ಯೆ ಏರ್ಪಡುವ ತಿಕ್ಕಾಟವನ್ನು ನಿರೂಪಿಸುತ್ತಾ ಹೋಗುವ ಹಂಟಿಂಗ್ಟನ್ ಕೊನೆಯದಾಗಿ ಎರಡು ನಾಗರಿಕತೆಗಳ ಘರ್ಷಣೆಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಾರೆ. ಅದೇ ಪಶ್ಚಿಮ ಮತ್ತು ಮುಸ್ಲಿಂ ನಾಗರಿಕತೆಗಳ ಮಧ್ಯೆ ನಡೆಯುವ ಸಂಘರ್ಷ! ಕ್ರುಸೇಡ್ ಗಳು ಮತ್ತು ಜಿಹಾದ್ ಗಳ ಐತಿಹಾಸಿಕ ಉದಾಹರಣೆಗಳಿಂದ ಹಿಡಿದು ತನ್ನ ವಾದಕ್ಕೆ ಪೂರಕವಾಗುವ ಎಲ್ಲಾ ಅಂಶಗಳನ್ನು ಬಳಸಿಕೊಳ್ಳುವ ಹಂಟಿಗ್ಟನ್ ಪಶ್ಚಿಮ ಮತ್ತು ಇಸ್ಲಾಮಿಕ್ ನಾಗರಿಕತೆಗಳ ಸಂಘರ್ಷ ಅನಿವಾರ್ಯ ಎಂದು ವಾದಿಸುತ್ತಾರೆ. ಈ ಸಂಘರ್ಷದಲ್ಲಿ ಚೀನಾ ಇಸ್ಲಾಮಿಕ್ ನಾಗರಿಕತೆಗೆ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಹಂಟಿಗ್ಟನ್ ಈ ವಿಚಾರವನ್ನು 'ಕನ್ಫ್ಯೂಷಿಯಸ್-ಇಸ್ಲಾಮಿಕ್ ಮೈತ್ರಿ' ಎಂದು ಗುರುತಿಸುತ್ತಾರೆ. ಈ ಸಂಕಟವನ್ನು ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಅಮೆರಿಕಾದ ನೇತೃತ್ವದಲ್ಲಿ ಪ್ರತಿತಂತ್ರ ನಡೆಸುವ ಸಲಹೆ ಸೂಚನೆಗಳನ್ನೂ ಹಂಟಿಗ್ಟನ್ ತನ್ನ 'ನಾಗರಿಕತೆಗಳ ಸಂಘರ್ಷದಲ್ಲಿ'ವಿವರಿಸಿದ್ದಾನೆ. ಈ ರೀತಿಯಾಗಿ ಶೀತಲ ಸಮರೋತ್ತರದಲ್ಲೂ ಪಾಶ್ಚಿಮಾತ್ಯ ಜಗತ್ತಿಗೆ ಸವಾಲೊಡ್ಡುವ ಸಾಂಸ್ಕೃತಿಕ ಶಕ್ತಿಯಾಗಿ ಇಸ್ಲಾಂ ನ್ನು ಹಂಟಿಗ್ಟನ್ ಬಿಂಬಿಸುತ್ತಾರೆ.

ಟ್ರಂಪ್ ರ ಹೊಸ ರಾಜತಾಂತ್ರಿಕ ಸಲಹೆಗಾರ ಸ್ಟೀವ್ ಬ್ಯಾನನ್, "ಜಿಹಾದಿ ಇಸ್ಲಾಮಿಕ್ ಫ್ಯಾಸಿಸಂನ ವಿರುದ್ಧದ ಹೋರಾಟದಲ್ಲಿ ಪಾಶ್ಚಿಮಾತ್ಯ ಜಗತ್ತು ಆರಂಭಿಕ ಹೆಜ್ಜೆಗಳನ್ನಿಡುತ್ತಿದೆ ಎಂಬರ್ಥದಲ್ಲಿ ವಾದ ಮಂಡಿಸಿದ್ದರು. ಅಮೆರಿಕಾದ ಹೊಸ ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಕೆ. ಟಿ. ಮೆಕ್ ಫರ್ಲಾಂಡ್ ನಾವು ಇಸ್ಲಾಂ ವಿರುದ್ಧ ದೀರ್ಘ ಯುದ್ಧದಲ್ಲಿ ತೊಡಗಿದ್ದೇವೆ ಎಂದಿದ್ದಾರೆ. ಅಮೆರಿಕಾದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವ ಪ್ರಮುಖ ವ್ಯಕ್ತಿಗಳ ಹೇಳಿಕೆಗಳು ಮತ್ತು ಮನೋಭಾವ ನಾಗರಿಕತೆಯ ಸಂಘರ್ಷದಲ್ಲಿ ಹಂಟಿಗ್ಟನ್ ಹೇಳಿದ್ದನ್ನು ನೆನಪಿಸುವಂತಿದೆ. ಹಂಟಿಗ್ಟನ್ ನಾಗರಿಕತೆಗಳ ನಡುವಿನ ಸಂಘರ್ಷವನ್ನಷ್ಟೇ ಅಲ್ಲದೇ ಶೀತಲ ಸಮರದ ನಂತರದಲ್ಲಿ ಅಮೆರಿಕಾ ನಾಯಕತ್ವದಲ್ಲಿ ಪಾಶ್ಚಿಮಾತ್ಯ ಜಗತ್ತು ಸಾರ್ವಭೌಮತ್ವ ಸಾಧಿಸುವ ಹಾದಿಯಲ್ಲಿ ಎದುರಾಗುವ ಪಶ್ಚಿಮ ಮತ್ತು ಇತರ ನಾಗರಿಕತೆಗಳ ಮಧ್ಯೆ ಏರ್ಪಡುವ ತಿಕ್ಕಾಟವನ್ನು ವಿವರಿಸುತ್ತಾನೆ. ಈ ವಿಚಾರವನ್ನು ಬೆಂಬಲಿಸುತ್ತಿರುವ ಮೈಕೆಲ್ ಫಿನ್ ಮುಂಬರುವ ಟ್ರಂಪ್ ಅಧ್ಯಕ್ಷತೆಯ ಸಂಭಾವ್ಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಎನ್ನುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇತ್ತಿಚೆಗೆ ಪ್ರಕಟವಾದ ತನ್ನ ಪುಸ್ತಕವೊಂದರಲ್ಲಿ, ಫಿನ್ ಪಾಶ್ಚಿಮಾತ್ಯ ವಿರೋಧಿ ಮೈತ್ರಿಯೊಂದನ್ನು ಗುರುತಿಸುತ್ತಾರೆ. ಈ ಮೈತ್ರಿ, ಅಲ್ ಖೈದಾ, ಹೆಜ್ಬೊಲ್ಲಾಹ್, ಇಸ್ಲಾಮಿಕ್ ಸ್ಟೇಟ್ ನಂಥ ಉಗ್ರ ಗುಂಪುಗಳ ಜೊತೆ ರಾಷ್ಟ್ರಗಳಾದ ಚೀನಾ, ರಷ್ಯಾ, ಸಿರಿಯಾ, ಇರಾನ್ ಮತ್ತು ವೆನೆಜುವೆಲಾಗಳನ್ನು ಒಳಗೊಂಡಿರುತ್ತದೆ!


ಇತ್ತೀಚೆಗೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದಕರ ಚಟುವಟಿಕೆಗಳು, ಟ್ರಂಪ್ ಮನೋಭಾವ ಮತ್ತು ವಿದೇಶಾಂಗ ನೀತಿಯೆಡೆಗಿನ ಟ್ರಂಪ್ ಸಲಹೆಗಾರರ ದೃಷ್ಟಿಕೊನ 'ನಾಗರಿಕತೆಗಳ ಸಂಘರ್ಷ'ವನ್ನು ಕಾರ್ಯಾಚರಣೆಗಿಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಾಗರಿಕತೆಗಳ ಸಂಘರ್ಷ ದ ಸತ್ಯಾಸತ್ಯತೆಗಳನ್ನು ಬದಿಗಿರಿಸಿದರೂ, ಈ ಪರಿಕಲ್ಪನೆ ಅಮೆರಿಕಾದ ಶತ್ರುಗಳ ವಿರುದ್ಧ ರಣನೀತಿಯೊಂದನ್ನು ರೂಪಿಸಿಕೊಳ್ಳಲು ಕಾರಣವನ್ನಂತೂ ನೀಡುತ್ತದೆ. ಬುಶ್ ಮತ್ತು ಒಬಾಮ ಅಧ್ಯಕ್ಷತೆಯಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟ ನಡೆದಿದ್ದರೂ ಈ ಸಂಘರ್ಷ ಪಶ್ಚಿಮ ಮತ್ತು ಮುಸ್ಲಿಂ ಜಗತ್ತುಗಳ ಹೋರಾಟವಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಪ್ರಯತ್ನಗಳು ನಡೆದಿದ್ದವು ಮತ್ತು ಈ ಪ್ರಯತ್ನದಲ್ಲಿ ಈ ಹಿಂದಿನ ಅಧ್ಯಕ್ಷರು ಯಸಸ್ವಿಯೂ ಆಗಿದ್ದರು. ಇದೀಗ ಅಮೆರಿಕಾದ ನಡೆ ಹಂಟಿಗ್ಟನ್ ಮಾತುಗಳನ್ನು ನಿಜ ಮಾಡಲು ಹೊರಟಂತಿದೆ. ನಾಗರಿಕತೆಗಳ ಸಂಘರ್ಷ ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗಳ ಪ್ರಕಟನೆಗಳಲ್ಲೂ ಮುಖ್ಯ ಸ್ಥಾನ ಪಡೆದುಕೊಂಡಿದೆ. ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷತೆಯನ್ನೇ ಇಸ್ಲಾಮಿಕ್ ಉಗ್ರ ಗುಂಪುಗಳೂ ಬಯಸಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಒಬ್ಬನ ಹೇಳಿಕೆ ಹೀಗಿತ್ತು, "ಟ್ರಂಪ್ ನ ಅತಿಯಾದ ಇಸ್ಲಾಂ ದ್ವೇಷ ನಮ್ಮ ಕೆಲಸವನ್ನು ಇನ್ನಷ್ಟು ಸರಳಗೊಳಿಸುತ್ತವೆ ಏಕೆಂದರೆ ನಾವಿನ್ನೂ ಸುಲಭವಾಗಿ ಸಾವಿರಾರು ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಗೆ ಸೇರ್ಪಡೆಗೊಳಿಸಿಕೊಳ್ಳಬಹುದು"

ಗೊತ್ತಿದ್ದೋ ಗೊತ್ತಿಲ್ಲದೆಯೋ ಟ್ರಂಪ್ ಸರಕಾರ ಹಂಟಿಗ್ಟನ್ ನಾಗರಿಕತೆಗಳ ಸಂಘರ್ಷವನ್ನು ತನ್ನ ವಿದೇಶಾಂಗ ನೀತಿಯಲ್ಲಿ ವಿಲೀನಗೊಳಿಸುವಂತಿದೆ. ಫ್ಲಿನ್ ತನ್ನ ಪುಸ್ತಕದಲ್ಲಿ ವಾದಿಸಿರುವಂತೆ, "ನಾವು ವಿಶ್ವಯುದ್ಧವೊಂದರಲ್ಲಿ ಪಾಲ್ಗೊಂಡಿದ್ದೇವೆ. ಕೆಲ ಅಮೆರಿಕನ್ನರಷ್ಟೇ ಈ ಯುದ್ಧವನ್ನು ಗುರುತಿಸಿದ್ದಾರೆ". ಫ್ಲಿನ್ ಗುರುತಿಸಿದ ವಿಶ್ವಯುದ್ಧದ ಕಲ್ಪನೆಗೂ ಹಂಟಿಗ್ಟನ್ ನ ಸಾಂಸ್ಕೃತಿಕ ಸಮರಕ್ಕೂ ಬಹಳಷ್ಟು ಸಾಮ್ಯತೆಗಳಿವೆ. ಒಂದು ಬಾರಿ ವಿಶ್ವ ಸಾಂಸ್ಕೃತಿಕ ಸಮರದಲ್ಲಿ ತೊಡಗಿಕೊಂಡ ಮೇಲೆ, ಹಿಂದೆಗೆಯುವುದು ಅಸಾಧ್ಯವೇ ಸರಿ. ಮಾರ್ಕ್ಸ್ ಹೇಳಿದ ಉಳ್ಳವರು ಮತ್ತು ಶೋಷಿತರ ಯುದ್ಧಕ್ಕೂ ಕೊನೆಯಿದೆ, ಇಸಂಗಳ ನಡುವಿನ ಯುದ್ಧಕ್ಕೂ ಕೊನೆಯಿದೆ. ಆದರೆ ಸಂಸ್ಕೃತಿಯ ಸಂಘರ್ಷಕ್ಕೆ ಕೊನೆ ಹುಡುಕುವುದು ಕಷ್ಟಸಾಧ್ಯವೇ ಸರಿ. ಟ್ರಂಪ್ ಹೊರತಾಗಿಯೂ 21ನೇ ಶತಮಾನದ ಜಾಗತಿಕ ರಾಜಕೀಯ ವ್ಯವಸ್ಥೆ ರಹಸ್ಯ ತಿರುವೊಂದಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಟ್ರಂಪ್ ಮತ್ತಿತರು ನೆಪ ಮಾತ್ರ.

(This article was published in Vishwavani newspaper on 14 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ