ಶನಿವಾರ, ಮಾರ್ಚ್ 26, 2016

ಜೆ. ಎನ್. ಯು ಪ್ರಕರಣ: ದ್ರೋಹ ರಾಷ್ಟ್ರಕ್ಕೆ ಮಾತ್ರವಲ್ಲ, ಸಮಾಜಕ್ಕೂ ಕೂಡ!


ಜೆ.ಎನ್.ಯು ಸೇರಿದಂತೆ ಇತರ ವಿಶ್ವವಿದ್ಯಾಲಯಗಳ ಪ್ರಕರಣಗಳನ್ನು ತಿಳಿಯದೇ ಆದ ತಪ್ಪು ಅಥವಾ ಕ್ಷುಲ್ಲಕ ವಿಚಾರಗಳೆಂದು ಹೀಗಳೆದರೆ ತಪ್ಪಾದೀತು. ಈ ರೀತಿಯ ದಿಕ್ಕು ತಪ್ಪಿದ ಪ್ರತಿಭಟನೆಗಳು ನೈಜ ಶೋಷಿತ ಜನಾಂಗಗಳ ಹೋರಾಟಗಳಿಗೂ ಕೆಟ್ಟ ಹೆಸರು ತಂದು, ಕ್ರಾಂತಿಯ ಘನತೆಯನ್ನೇ ಮುಕ್ಕಾಗಿಸುತ್ತಿವೆ.
-  ಕೀರ್ತಿರಾಜ್


“ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.” ಕುವೆಂಪುರವರ ಈ ವಿಶ್ವಮಾನವ ಸಂದೇಶ ಪ್ರಸ್ತುತ ಭಾರತವಷ್ಟೇ ಅಲ್ಲದೆ, ವಿಶ್ವದ ಎಲ್ಲಾ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕ್ರೃತಿಕ ವಲಯಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸಂಸ್ಠೆ ಅಥವಾ ವ್ಯಕ್ತಿಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಶೈಕ್ಷಣಿಕ ಕ್ಷೇತ್ರ ಕೂಡ ಇದಕ್ಕೆ ಹೊರತೇನಲ್ಲ. ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆ.ಎನ್.ಯು)ದಲ್ಲಿ ನಡೆದ ವಿವಾದವೂ ಮತ್ತು ಅದರಾಚೆಗೆ ನಡೆದ ಚರ್ಚೆಗಳೂ ವಿಶ್ವಮಾನವನನ್ನು ಅಲ್ಪನಾಗಿಸುವ ಪ್ರಯತ್ನಕ್ಕೊಂದು ಸ್ಪಷ್ಟ ನಿದರ್ಶನವಷ್ಟೇ. ಇತ್ತೀಚೆಗಿನ ವಾದ ವಿವಾದಗಳು ನೈಜ ವಸ್ತುವಿಷಯವನ್ನು ಕಡೆಗಣಿಸಿ, ಸಮಸ್ಯೆಯ ಪರಿಹಾರಕ್ಕಿಂತ ಹೆಚ್ಚಾಗಿ ತುಪ್ಪ ಸುರಿಯುವ ಕಡೆಗೆ ಗಮನ ಹರಿಸುತ್ತಿರುವುದು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗಳೆರಡಕ್ಕೂ ಕಂಟಕಪ್ರಾಯ ಎಂಬುದನ್ನು ದೇಶದ ಸ್ವಯಂ ಘೋಷಿತ ಸರ್ವಜ್ಞರು ಮರೆತಂತಿದೆ.

ಜೆ.ಎನ್.ಯು ಅಂಗಳದಲ್ಲಿ ದೇಶ ವಿರೋಧಿ ಘೋಷಣೆಗಳಿಂದ ಪ್ರೇರೆಪಿಸಲ್ಪಟ್ಟ ಈ ಸಮಸ್ಯೆ ಬಲಪಂಥೀಯ ಮತ್ತು ಎಡಪಂಥೀಯರ ನಡುವಿನ ಸಂಘರ್ಷವಾಗಿ ಬದಲಾಗಿದೆ. ಭಾರತ ವಿರೋಧಿ ಘೋಷಣೆ ಮಾಡಿದವರಿಗೆ ಭಾರತ ಮಾಡಿದ ಅನ್ಯಾಯವಾದರೂ ಏನು? ನೆಲ ಜಲಗಳನ್ನು ಕರುಣಿಸಿದ್ದಲ್ಲದೇ, ಹಸಿವಿಲ್ಲದಿದ್ದರೂ ತಿನ್ನಿಸುವ ತಾಯಿಯಂತೆ, ಅವಶ್ಯಕತೆಗೂ ಮೀರಿ ಸಾಂವಿಧಾನಿಕವಾಗಿ ಎಲ್ಲಾ ಹಕ್ಕುಗಳನ್ನೂ, ಜೆ.ಎನ್.ಯು ನಂಥ ವಿಶ್ವವಿದ್ಯಾಲಯಗಳನ್ನಷ್ಟೇ ಅಲ್ಲದೇ ಪ್ರತಿಭಟನೆಯ ಅವಕಾಶವನ್ನು ನೀಡಿದ್ದೂ ಇದೇ ಭಾರತ! ಹೀಗಿದ್ದೂ ಭಾರತ ವಿರೋಧಿ ಘೋಷಣೆಯ ಅವಶ್ಯಕತೆಯಾದರೂ ಏನಿತ್ತು? ಇನ್ನೊಂದೆಡೆ ದೇಶ ವಿದ್ರೋಹಿ ಘೋಷಣೆಗಳು ಸುಳ್ಳು ಆರೋಪವಷ್ಟೇ ಎಂಬ ವಾದವೂ ಕೇಳಿಬರುತ್ತಿದೆ. ಕೋರ್ಟ್ ಆವರಣದಲ್ಲಿ ಜೆ.ಎನ್.ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ ಸರಕಾರ ಈ ಸಮಸ್ಯೆಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಆರೋಪದ ಮೇಲೆ ಕೆಲ ಎಬಿವಿಪಿ ವಿದ್ಯಾರ್ಥಿ ನಾಯಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿರುವುದು ಹೊಸ ಬೆಳವಣಿಗೆಗಳಿಗೆ ಅನುವು ಮಾಡಿಕೊಟ್ಟಂತಾಗಿದೆ. ಅದೇನೇ ಇರಲಿ, ದೇಶ ವಿರೋಧಿ ಘೋಷಣೆಗಳು ಮತ್ತು ಭಾವನೆಗಳು ಹೊರಗಿನ ಶತ್ರುಗಳಿಗಿಂತಲೂ ಅಪಾಯಕಾರಿ ಮತ್ತು ಇಂಥ ದೇಶ ವಿದ್ರೋಹಿ ಕೃತ್ಯಗಳು ಅಕ್ಷಮ್ಯ ಮತ್ತು ಖಂಡಿಸಲೇಬೇಕಾದ ವಿಷಯ.

ಚರ್ಚೆಯ ಭರಾಟೆಯಲ್ಲಿ ಕೆಲವರು ವಿಶ್ವವಿದ್ಯಾಲಯಗಳನ್ನು ನಿಂದಿಸಿದರೆ, ಇನ್ನೂ ಕೆಲವರು ಹಿಂದುತ್ವ, ಕೇಸರಿಕರಣವೆಂದು ವಾದ ಮಂಡಿಸಿದ್ದೂ ಆಗಿ ಹೋಗಿದೆ. ಸರಿ-ತಪ್ಪುಗಳ  ಮಧ್ಯೆ ಇಂಥ ವಿವಾದಗಳಿಗೆ ವಿಶ್ವವಿದ್ಯಾಲಯಗಳೇ ಕೇಂದ್ರ ಬಿಂದುಗಳಾಗುತ್ತಿರುವುದೇಕೆ ಎಂಬ ಪ್ರಶ್ನೆ ಯಾರನ್ನೂ ಕಾಡಲೇ ಇಲ್ಲ. ಸಾಮಾನ್ಯ ಅನಕ್ಷರಸ್ಥ ಜನತೆ ಇಂಥ ವಿವಾದಗಳ ಬಲಿಪಶುವಾದ ಉದಾಹರಣೆಗಳಿವೆಯೇ ಹೊರತು, ವಿವಾದ ಸೃಷ್ಟಿಸಿದ ನಿದರ್ಶನಗಳಿಲ್ಲ. ಹಾಗಿದ್ದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕಾರ್ಲ್ ಮಾರ್ಕ್ಸ್ ನಿಂದ ಅಮರ್ತ್ಯ ಸೆನ್, ಅಂಬೆಡ್ಕರ್ ರಿಂದ ವಿವೇಕಾನಂದರವರೆಗೆ, ಮಹಾತ್ಮ ಗಾಂಧಿಯಿಂದ ನೇತಾಜಿಯವರೆಗೂ ಎಲ್ಲರನ್ನೂ ಓದಿಕೊಂಡವರಿಗೆ ಸಮಾಜದ ಸೂಕ್ಷ್ಮಗಳೇಕೆ ತಿಳಿಯುತ್ತಿಲ್ಲ? ಜೆ.ಎನ್.ಯು ಪ್ರಕರಣ ಇದೇ ಮೊದಲ ಬಾರಿಯೇನಲ್ಲ, ಕೊನೆಯದೂ ಅಲ್ಲ. ಈ ರೀತಿಯ ವಿವಾದಗಳಿಂದ ಈ ವರೆಗೆ ಏನಾದರೂ ಸಾಧಿಸಿದ್ದರೆ, ಅದು ಸಾಮಾಜಿಕ ಹಿನ್ನಡೆ ಮತ್ತು ಕಂದಕಗಳಷ್ಟೇ ಅಲ್ಲದೇ ಬೇರೇನೂ ಅಲ್ಲ. ಇತಿಹಾಸದಿಂದ ಪಾಠ ಕಲಿಯದವನು ಭವ್ಯ ಭವಿಷ್ಯ ನಿರ್ಮಿಸಲಾರ ಎಂಬ ಮಾತಿದೆ. ತಪ್ಪುಗಳನ್ನು ಮರುಕಳಿಸುವ ಧಾವಂತದಲ್ಲಿರುವ ನಾವು ಇತಿಹಾಸವನ್ನೂ ಹಿಂದಿರುಗಿ ನೋಡವಷ್ಟು ಬಿಡುವು ನಮಗಿಲ್ಲ. ಹೌದು, ನಮ್ಮೆಲ್ಲ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳು ಎಡಪಂಥೀಯ ಮಾರ್ಕ್ಸ್ ವಾದಿ ಪ್ರಭಾವಳಿಯಲ್ಲಿದ್ದಾರೆ ಎಂದೇ ಊಹಿಸಿಕೊಂಡರೂ ಈ ರೀತಿಯ ವಿಚಾರಹೀನ ವಿವಾದಗಳನ್ನು ಸಮರ್ಥಿಸಿಕೊಳ್ಳುವಂತಿಲ್ಲ.

ಈ ಎಲ್ಲಾ ಪ್ರಹಸನಗಳಿಗೆ ಕಾರಣರಾದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಸಂಖ್ಯೆ ಶೇಕಡಾ ಒಂದರಷ್ಟೂ ಇಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಹಾಗಿದ್ದಲ್ಲಿ ಈ ಒಂದು ಸಣ್ಣ ಗುಂಪು, ಇಡೀ ವಿದ್ಯಾರ್ಥಿ ಸಮುದಾಯ ಹಾಗೂ ವಿಶ್ವವಿದ್ಯಾಲಯದ ಅಘೋಷಿತ ಪ್ರತಿನಿಧಿಗಳಾಗಿದ್ದೂ ಅನುಮನಕ್ಕೆಡೆ ಮಾಡಿಕೊಡುವಂತಿದೆ. ಈ ರೀತಿಯ ದಿಕ್ಕು ತಪ್ಪಿದ ಪ್ರತಿಭಟನೆಗಳು ನೈಜ ಶೋಷಿತ ಜನಾಂಗಗಳ ಹೋರಾಟಗಳಿಗೂ ಕೆಟ್ಟ ಹೆಸರು ತಂದು, ಕ್ರಾಂತಿಯ ಘನತೆಯನ್ನೇ ಮುಕ್ಕಾಗಿಸುತ್ತಿವೆ. ಹೀಗಾಗಿ ಗುರುತಿಸಿಕೊಳ್ಳುವಿಕೆಯ ನೆಪದಲ್ಲಿ ನಡೆಸುವ ಪೊಳ್ಳು ಹೋರಾಟಗಳು ಸಮಾಜಕ್ಕೂ ದ್ರೋಹ ಬಗೆದಂತೆಯೇ ಸರಿ. ತಮಗಾಗುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಹಾಗೂ ಪ್ರತಿಭಟಿಸುವ ಹಕ್ಕು ವಿದ್ಯಾರ್ಥಿಗಳಿಗೆ ಇದ್ದೇ ಇದೆ. ಭಾರತದ ಪ್ರಜಾಪ್ರಭುತ್ವ ಎಲ್ಲಾ ವರ್ಗ, ಜನಾಂಗ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಭಟನೆಯ ಅವಕಾಶ ಒದಗಿಸಿಕೊಟ್ಟಿದೆ. ಆದರೆ ಇದೇ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಮಾಡುವ ರಾಷ್ಟ್ರ ಹಾಗೂ ಸಮಾಜ ವಿರೋಧಿ ಕೃತ್ಯಗಳು, ತಾನು ಕುಳಿತಿರುವ ರೆಂಬೆಯನ್ನೇ ಕಡಿಯುತ್ತಿರುವ ಮೂರ್ಖನನ್ನು ಪ್ರತಿನಿಧಿಸುವಂತಿರುತ್ತದೆ!






  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Kannda Prabha newspaper on 4 March 2016)


1 ಕಾಮೆಂಟ್‌: