ಶನಿವಾರ, ಸೆಪ್ಟೆಂಬರ್ 3, 2016

ನೋವು ಮಾಯಿಸಬಲ್ಲುದೆ ಲಂಕಾದ ನೂತನ ಸಂವಿಧಾನ

ಸ್ವಾತಂತ್ರ್ಯಾನಂತರ ಲಂಕಾದಲ್ಲಿ ನಡೆದ ಕೆಲ ರಾಜಕೀಯ ಪ್ರಹಸನಗಳೂ, ಸಿಂಹಳೀಯರನ್ನು "ಅಲ್ಪಸಂಖ್ಯಾತ ಮನಸ್ಥಿತಿಯಲ್ಲಿರುವ ಬಹುಸಂಖ್ಯಾತ"ರನ್ನಾಗಿಸಿತ್ತು(Majority with a minority complex). ಸಿಂಹಳೀ ಅಸ್ಮಿತೆಯನ್ನೇ ಶ್ರೀಲಂಕಾದ ರಾಷ್ಟ್ರೀಯ ಅಸ್ಮಿತೆಯ ಆಧಾರವಾಗಿ ಉಪಯೋಗಿಸಿಕೊಂಡ ಸಿಂಹಳೀಯರಿಗೆ, ಶ್ರೀಲಂಕಾದಲ್ಲಿ ನೆಲೆಸಿರುವ ಇತರ ಭಾಷೆ ಮತ್ತು ಧರ್ಮಗಳ ಅನುಯಾಯಿಗಳು ದುಃಸ್ವಪ್ನವಾಗಿ ಕಾಡತೊಡಗಿದರು
- ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಹಿಂದೂ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಸುಂದರ ಪ್ರವಾಸಿ ತಾಣಗಳು, ಅದ್ಭುತ ಸಾಗರ ತೀರಗಳನ್ನು ತನ್ನೊಡಳೊಳಗೆ ಬಚ್ಚಿಟ್ಟುಕೊಂಡಿದ್ದರೂ, 1,50,00ಕ್ಕೂ ಹೆಚ್ಚು ಜನರ ಮಾರಣಹೋಮ ನಡೆಸಿದ ನಾಗರಿಕ ಸಮರದಿಂದಾಗಿ ರಾಷ್ಟ್ರ ಜಗತ್ತಿನಾದ್ಯಂತ ಪರಿಚಿತವಾಗಿರುವುದು ದುರದೃಷ್ಟವೇ ಸರಿ. ವರೆಗೆ ಶ್ರೀಲಂಕಾ ಎರಡು ಅಂತರ್-ಜನಾಂಗೀಯ ದಂಗೆಗಳು ಮತ್ತು ಇನ್ನೆರಡು ಮಾರ್ಕ್ಸಿಸ್ಟ್ ಪ್ರೇರಿತ ದಂಗೆಗಳನ್ನು ಎದುರಿಸಿದೆ. ಎಲ್ಲಾ ದಂಗೆಗಳನ್ನು ಅಮಾನುಷ ಹಿಂಸೆಯಿಂದಲೇ ಹತ್ತಿಕ್ಕಿರುವ ಶ್ರೀಲಂಕಾದಲ್ಲಿ ಜನಾಂಗೀಯ ವಿಕೃತಿ, ನ್ಯಾಯಾಲಯದ ವ್ಯಾಪ್ತಿಗೆ ಮೀರಿದ ಕೊಲೆಗಳು, ಅಸಹಜ ನಾಪತ್ತೆ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಅಸಹಜ ನಾಪತ್ತೆ ಮತ್ತು ಕಣ್ಮರೆ ಪ್ರಕರಣಗಳಲ್ಲಿ ವಿಶ್ವದಲ್ಲೇ ಇರಾಕ್ ಹೊರತುಪಡಿಸಿದರೆ, ಶ್ರೀಲಂಕಾ ದ್ವಿತೀಯ ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಬಹುತೇಕ ಒಪ್ಪಂದಗಳಿಗೆ ಸಹಿ ಹಾಕಿರುವ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲೂ ಕ್ರಿಯಾಶೀಲವಾಗಿರುವ ಶ್ರೀಲಂಕಾದ ಆಂತರಿಕ ಪರಿಸ್ಥಿತಿ ವಿರೋಧಾಭಾಸಕ್ಕೆ ಹೇಳಿ ಮಾಡಿಸಿದ ಮಾದರಿಯಂತಿದೆ.

1948ರವರೆಗೆ ಬ್ರಿಟಿಷರ ವಸಾಹತುವಾಗಿದ್ದ ಶ್ರೀಲಂಕಾ ಸ್ವತಂತ್ರ ರಾಷ್ಟ್ರವಾದಾಗಿಂದಲೂ ಬೌದ್ಧಮತದ ಅನುಯಾಯಿಗಳಾದ ಸಿಂಹಳೀಯರು ಮತ್ತು ಬೌದ್ಧೇತರ ಅದರಲ್ಲೂ ಹಿಂದೂ ಧರ್ಮಾನುಯಾಯಿಗಳಾದ ತಮಿಳರ ನಡುವಿನ  ಜನಾಂಗೀಯ ಸಂಘರ್ಷಗಳು, ಶ್ರೀಲಂಕಾದ ಸರ್ವಧರ್ಮ, ಸರ್ವಜನಾಂಗದ ಶಾಂತಿಯನ್ನು ಕಡೆಗಣಿಸಿವೆ. ವಸಾಹತೊತ್ತರ ಶ್ರೀಲಂಕಾದ ರಾಜಕಾರಣಿಗಳೂ ಜನಾಂಗೀಯ ಸಂಘರ್ಷದ ಲಾಭ ಪಡೆದು ಸಿಂಹಳ ಮತಬ್ಯಾಂಕನ್ನು ಭದ್ರಪಡಿಸಿಕೊಳ್ಳುವತ್ತ ಗಮನಹರಿಸಿದರೇ ವಿನಃ ಏಕೀಕೃತ ಶ್ರೀಲಂಕಾದ ಕಲ್ಪನೆ ಮತ್ತು ಅವಶ್ಯಕತೆ ಯಾವ ರಾಜಕಾರಣಿಗೂ ಇರದೇ ಹೋದದ್ದು ಶ್ರೀಲಂಕಾದ ದುರಂತ. ಶ್ರೀಲಂಕಾದ ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ, ಬಹುಸಂಖ್ಯಾತರಾದ ಬೌದ್ಧಮತ ಅನುಯಾಯಿಗಳಾದ ಸಿಂಹಳೀಯರ ಸಂಖ್ಯಾ ಬಲದ ಮೇಲೆ ರೂಪಿಸಲ್ಪಟ್ಟಿರುವುದರಿಂದ, ದೇಶದ ಕಾನೂನು ರಚನಾ ಪ್ರಕ್ರಿಯೆ ಮತ್ತು ಶಾಸನಗಳಲ್ಲೂ ಇದು ಪ್ರತಿಬಿಂಬಿಸುತ್ತದೆ. ಶ್ರೀಲಂಕಾದ ಸೊಲ್ಬರಿ (Soulbury) ಸಂವಿಧಾನ, ಸ್ವತಂತ್ರ ಶ್ರೀಲಂಕಾ ರೂಪಿಸಿಕೊಂಡ ಮೊದಲ ಸಂವಿಧಾನಗಳಿಂದ ಹಿಡಿದು ಇವತ್ತು ಶ್ರೀಲಂಕಾ ಅನುಸರಿಸುತ್ತಿರುವ ದ್ವಿತೀಯ ಗಣತಾಂತ್ರಿಕ ಸಂವಿಧಾನವೂ ಬಹುಸಂಖ್ಯಾತ ಸಿಂಹಳೀ ಬೌದ್ಧರ ಅಧಿಕಾರದ ಅಭಿವ್ಯಕ್ತಿಯಲ್ಲದೇ ಇನ್ನೇನೂ ಅಲ್ಲ. ಬ್ರಿಟಿಷರ ಕಪಿಮುಷ್ಠಿಯಿಂದ ಬಳಿಕವೂ ಜನಾಂಗೀಯ ಹಿಂಸೆ ಹೆಚ್ಚುತ್ತಲೇ ಹೋಗಿ, ತಮಿಳು ಹಿಂದೂಗಳ ಸಿಟ್ಟು ಹತಾಶೆಗಳು ಕೊನೆಗೆ ಶ್ರೀಲಂಕಾದ ಇತಿಹಾಸದ ರಕ್ತಸಿಕ್ತ ಆಂತರಿಕ ಯುದ್ಧಕ್ಕೇ ದಾರಿ ಮಾಡಿ ಕೊಟ್ಟವು.

ಶ್ರೀಲಂಕಾದ ಇತಿಹಾಸಕಾರ ಕೆ. ಎಮ್. ಡಿ ಸಿಲ್ವಾರವರ ಪ್ರಕಾರ ಸಿಂಹಳ ಬೌದ್ಧರಿಗೆ ಬಹುಸಂಸ್ಕೃತಿ ಮತ್ತು ಬಹುಜನಾಂಗಗಳು ಒಟ್ಟಾಗಿ ಬಾಳುವ ಪರಿಕಲ್ಪನೆಯ ಬಗ್ಗೆ ಯೋಚಿಸುವಷ್ಟು ಸಮಯ ಮತ್ತು ಅವಕಾಶ ಎರಡೂ ಇರಲಿಲ್ಲ. ಡಿ ಸಿಲ್ವಾರವರು ಗಮನಿಸಿದಂತೆ ಸಿಂಹಳ ಭಾಷೆಯಲ್ಲಿ ದೇಶ, ಜನಾಂಗ ಮತ್ತು ಪ್ರಜೆಗಳು ಎಲ್ಲಾ ಪದಗಳನ್ನು ಸಮಾನಾರ್ಥ ಬರುವಂತೆ ಬಳಸುವುದರಿಂದ, ಶ್ರೀಲಂಕಾ ಸಿಂಹಳ ಬೌದ್ಧರ ನೆಲವಾಗಿಯೇ ಉಳಿಯಬೇಕೆಂಬ ಪ್ರಬಲ ಭಾವನೆ ಸಿಂಹಳ ಜನಮಾನಸದಲ್ಲಿ ಅಚ್ಚೊತ್ತಿ ಹೋಗಿತ್ತು. ಹೀಗೆ ಒಂದು ರೀತಿಯಲ್ಲಿ ಸಿಂಹಳೀ ಭಾಷೆ ಕೂಡ ಸರ್ವಜನಾಂಗಗಳು ಸೌಹಾರ್ದತೆಯನ್ನು ಬಯಸುವ ಬಹುಸಂಸ್ಕೃತಿಯ ಶ್ರೀಲಂಕಾದ ಬದಲಿಗೆ, ಬೌದ್ಧೇತರ ಧರ್ಮಗಳನ್ನು ದೂರ ತಳ್ಳಿ, ಸಿಂಹಳೀ ಬೌದ್ಧರ ಅಧಿಪತ್ಯದ ಶ್ರೀಲಂಕಾದ ಪರಿಕಲ್ಪನೆಗೆ ಭಾವನಾತ್ಮಕ ನೆಲೆಗಟ್ಟು ರೂಪಿಸಿತು. ಡಿ ಸಿಲ್ವಾರವರೇ ಹೇಳುವಂತೆ ಶ್ರೀಲಂಕಾದ ಭೂಮಿ, ಜನಾಂಗ ಮತ್ತು ಬೌದ್ಧ ಮತಗಳನ್ನು ಜನ ಪರಿಭಾವಿಸಿದ ರೀತಿ ಶ್ರೀಲಂಕನ್ನರ ಧಾರ್ಮಿಕ, ಜನಾಂಗೀಯ ಮತ್ತು ರಾಷ್ಟ್ರೀಯ ಅಸ್ಮಿತೆ(identity)ಗಳನ್ನು ಒಂದಕ್ಕೊಂದು ತಳುಕು ಹಾಕಿ ಅವುಗಳ ನಡುವಿನ ವ್ಯತ್ಯಾಸವನ್ನೇ ಅಳಿಸಿ ಹಾಕಿತ್ತು. ಧಾರ್ಮಿಕ ಮತ್ತು ಜನಾಂಗೀಯ ಅಸ್ಮಿತೆಗಳೇ ರಾಷ್ಟ್ರೀಯತೆಯ ಅಸ್ಮಿತೆಗಳಾದಾಗ ಸಹಜವಾಗಿಯೇ, ಸಿಂಹಳರು ಶ್ರೀಲಂಕಾದ ಆಡಳಿತ ಪ್ರಕ್ರಿಯೆಗಳು ಬೌದ್ಧ ಸಂಪ್ರದಾಯಗಳು ಮತ್ತು ಆಚರಣೆಗಳ ಆಧಾರಿತವಾಗಿರಬೇಕು ಎಂದು ವಾದಿಸತೊಡಗಿದರು. ಎಲ್ಲಾ ಹಿನ್ನೆಲೆಗಳ ಜೊತೆ ಸ್ವಾತಂತ್ರ್ಯಾನಂತರ ಲಂಕಾದಲ್ಲಿ ನಡೆದ ಕೆಲ ರಾಜಕೀಯ ಪ್ರಹಸನಗಳೂ, ಸಿಂಹಳೀಯರನ್ನು "ಅಲ್ಪಸಂಖ್ಯಾತ ಮನಸ್ಥಿತಿಯಲ್ಲಿರುವ ಬಹುಸಂಖ್ಯಾತ"ರನ್ನಾಗಿಸಿತ್ತು(Majority with a minority complex). ಸಿಂಹಳೀ ಅಸ್ಮಿತೆಯನ್ನೇ ಶ್ರೀಲಂಕಾದ ರಾಷ್ಟ್ರೀಯ ಅಸ್ಮಿತೆಯ ಆಧಾರವಾಗಿ ಉಪಯೋಗಿಸಿಕೊಂಡ ಸಿಂಹಳೀಯರಿಗೆ, ಶ್ರೀಲಂಕಾದಲ್ಲಿ ನೆಲೆಸಿರುವ ಇತರ ಭಾಷೆ ಮತ್ತು ಧರ್ಮಗಳ ಅನುಯಾಯಿಗಳು ದುಃಸ್ವಪ್ನವಾಗಿ ಕಾಡತೊಡಗಿದರು. ಇಂಥ ಅಲ್ಪಸಂಖ್ಯಾತ ಮನಸ್ಥಿತಿಯಲ್ಲಿರುವ ಬಹುಸಂಖ್ಯಾತ ಸಿಂಹಳೀ ಬೌದ್ಧರ ಕೈಗಳಿಗೆ ಅಧಿಕಾರ ಸಿಕ್ಕಿಬಿಟ್ಟರೆ ಬೌದ್ಧೇತರ ಜನಾಂಗಗಳ ಪಾಡನ್ನು ಊಹಿಸಿಕೊಳ್ಳುವುದು ಕಷ್ಟದ ವಿಷಯವೇನಲ್ಲ.

1948ರಲ್ಲಿ ಬ್ರಿಟಿಷ್ ವಸಾಹತುಶಾಹಿಯ ಸಂಕೋಲೆಗಳಿಂದ ಹೊರಬಂದ ಶ್ರೀಲಂಕಾದ ನೂತನ ರಾಜಕೀಯ ವ್ಯವಸ್ಥೆಯಲ್ಲಿ ಬಹುಸಂಖ್ಯಾತ ಸೀಂಹಳೀಯರು ಅಧಿಕಾರದ ಗದ್ದುಗೆಯೇರಿದರು. ಬಹಳ ಹಿಂದಿನಿಂದಲೇ ಮುಂದುವರಿದಿದ್ದ ಸಿಂಹಳ ಮತ್ತು ಮತ್ತು ತಮಿಳು ಜನಾಂಗದ ದ್ವೇಷಕ್ಕೆ ತುಪ್ಪ ಸುರಿದಿದ್ದು 1956ರಲ್ಲಿ ಸಿಂಹಳೀ ಸರಕಾರ ಜಾರಿಗೊಳಿಸಿದ ಅಧಿಕೃತ ಭಾಷೆಯ ಮಸೂದೆ. ಆರಂಭದಲ್ಲಿ ಸಿಂಹಳೀ ಭಾಷೆಯ ಹೇರುವಿಕೆಯ ವಿರುದ್ಧ ತಮಿಳರು ನಡೆಸಿದ ಶಾಂತಿಯುತ ಪ್ರತಿಭಟನೆಗಳು ಮುಂದಕ್ಕೆ ಹಿಂಸೆಯ ದಾರಿ ಹಿಡಿದವು. 1960 ಮತ್ತು 1970 ದಶಕದಲ್ಲಿ ಹಲವಾರು ಸಶಸ್ತ್ರ ತಮಿಳು ಗುಂಪುಗಳು ಸಿಂಹಳೀ ಆಡಳಿತದ ವಿರುದ್ಧ ಸಮರ ಸಾರಿದವು. ಶಸ್ತ್ರಸಜ್ಜಿತ ಗುಂಪುಗಳಲ್ಲಿ ವಿಶ್ವಾದ್ಯಂತ ಮನೆಮಾತಾದ ಒಂದು ಗುಂಪೇ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ ಅಂದರೆ ಎಲ್ ಟಿ ಟಿ ! 1976ರಲ್ಲಿ ವೇಲಿಪಿಳ್ಳೈ ಪ್ರಭಾಕರನ್ ನೇತೃತ್ವದಲ್ಲಿ ಶ್ರೀಲಂಕಾದ ಜನಾಂಗೀಯ ರಾಜಕೀಯಕ್ಕೆ ಕಾಲಿಟ್ಟ ಎಲ್ ಟಿ ಟಿ ಮುಂದಿನ ಸುಮಾರು ಮೂರು ದಶಕಗಳ ಕಾಲ ಸಿಂಹಳೀ ಆಡಳಿತದ ಶ್ರೀಲಂಕಾ ಸರಕಾರಕ್ಕೆ ಸವಾಲಾಗಿ ಕಾಡಿತ್ತು. 1983ರಲ್ಲಿ ಎಲ್ ಟಿ ಟಿ 13 ಲಂಕನ್ ಸೈನಿಕರನ್ನು ಕೊಂದಾಗ, ಇದಕ್ಕೆ ಪ್ರತೀಕಾರವಾಗಿ ಸಿಂಹಳೀಯರ ಗುಂಪುಗಳು ಶ್ರೀಲಂಕದಾದ್ಯಂತ 3000 ತಮಿಳರನ್ನು ಹತ್ಯೆ ಮಾಡಿದರು. 1983 ಜುಲೈನಲ್ಲಿ ನಡೆದ ಘಟನೆಗಳು ಇಂದು 'ಕರಾಳ ಜುಲೈ' ಎಂದೇ ಕುಖ್ಯಾತ! ಇದೇ ಘಟನೆ ಶ್ರೀಲಂಕಾದಲ್ಲಿ ಮುಂದೆ ನಡೆದ ಆಂತರಿಕ ನಾಗರಿಕ ಸಮರಕ್ಕೂ ಕಾರಣವಾಯಿತು.

ಎಲ್ ಟಿ ಟಿ ಮತ್ತು ಶ್ರೀಲಂಕಾ ಸೇನೆಯ ಮಧ್ಯೆ 1983ರಿಂದ 2009ರವರೆಗೆ ನಿರಂತರವಾಗಿ ಜನಾಂಗೀಯ ಸಂಘರ್ಷ ಮುಂದುವರಿಯುತ್ತದೆ. ಮಧ್ಯೆ 1987 ಜುಲೈನಲ್ಲಿ ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಭಾರತದ ಶಾಂತಿ ಪಾಲನಾ ಪಡೆಯನ್ನು ಶ್ರೀಲಂಕಾಕ್ಕೆ ಕಳುಹಿಸುವುದರೊಂದಿಗೆ ಭಾರತವೂ ಶ್ರೀಲಂಕಾದ ಆಂತರಿಕ ಸಮರದಲ್ಲಿ ಪಾಲು ಪಡೆದುಕೊಂಡಿತ್ತು. ಮುಂದೆ 1989ರಲ್ಲಿ ಪ್ರಧಾನಿ ವಿ ಪಿ ಸಿಂಗ್ ಭಾರತದ ಶಾಂತಿಪಾಲನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡರೂ, ಹಸ್ತಕ್ಷೇಪ ಮುಂದೆ ರಾಜೀವ್ ಗಾಂಧಿ ತಲೆ ದಂಡ ಪಡೆದುಕೊಂಡಿದ್ದು ಈಗ ಚರಿತ್ರೆಯ ಪುಟ ಸೇರಿದೆ. 1983ರಿಂದ ಎಲ್ ಟಿ ಟಿ ಜೊತೆ ನಿರಂತರ ಯುದ್ಧಗಳಿಂದ ಬೇಸತ್ತಿದ್ದ ಶ್ರೀಲಂಕಾ 2008ರಲ್ಲಿ ಅಧ್ಯಕ್ಷ ರಾಜಪಕ್ಷ ನಿರ್ಧಾರದಂತೆ ಕದನ ವಿರಾಮದಿಂದ ಅಧಿಕೃತವಾಗಿ ಹೊರಬಂದು  ಎಲ್ ಟಿ ಟಿ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಘೋಷಿಸುತ್ತದೆ. 2009ರಲ್ಲಿ ಪ್ರಭಾಕರನ್ ಸೇರಿದಂತೆ ಹಲವಾರು ಎಲ್ ಟಿ ಟಿ ನಾಯಕರ ಹತ್ಯೆಯೊಂದಿಗೆ ಶ್ರೀಲಂಕಾ ಆಂತರಿಕ ಜನಾಂಗೀಯ ಯುದ್ಧದ ಒಂದು ಅಧ್ಯಾಯ ಸಮಾಪ್ತಿಯಾಗುತ್ತದೆ. ಎಲ್ ಟಿ ಟಿ ವಶಪಡಿಸಿಕೊಂಡಿದ್ದ ಹಲವಾರು ಪ್ರದೆಶಗಳನ್ನು ಶ್ರೀಲಂಕಾ ಸೈನ್ಯ ಮರುವಶಪಡಿಸಿಕೊಳ್ಳುತ್ತದೆ. ಯುದ್ದ ಸಮಯದಲ್ಲಿ ಎಲ್ ಟಿ ಟಿ ಮತ್ತು ಶ್ರೀಲಂಕನ್ ಪಡೆಗಳು ಅಸಂಖ್ಯಾತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತಿತರ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಶ್ರೀಲಂಕಾವನ್ನು ವಿಚಾರಣೆಗೊಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕು ಎನ್ನುತ್ತಿದ್ದರೂ, ಶ್ರೀಲಂಕಾ ಸರಕಾರ ಮಾತ್ರ ಇವೆಲ್ಲವುಗಳಿಗೆ ಕಿವುಡಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ನವಿ ಪಿಳ್ಳೈ ಎರಡೂ ಪಕ್ಷಗಳೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದರೂ ಶ್ರೀಲಂಕಾ ಸರಕಾರ ಆರೋಪಗಳನ್ನು ಅಲ್ಲಗೆಳೆದಿದೆ.

ಶ್ರೀಲಂಕಾದ ಆಂತರಿಕ ಸಮರ 2009ಕ್ಕೇ ಮುಗಿದುಹೋಗಿದೆಯಾದರೂ ಶ್ರೀಲಂಕಾದ ರಾಜಕೀಯ ಪ್ರಕ್ಷುಬ್ಧತೆಗಿನ್ನೂ ಪೂರ್ಣವಿರಾಮ ಬಿದ್ದಿಲ್ಲ.. ವಿಶ್ವಸಂಸ್ಥೆ ಮಾನವ ಹಕ್ಕುಗಳ ಸೋಗಿನಲ್ಲಿ ನವವಸಾಹತುಶಾಹಿ ಧೋರಣೆಯನ್ನು ಬಡ ರಾಷ್ಟ್ರಗಳ ಮೇಲೆ ಹೇರುತ್ತದೆ ಎಂಬ ಭಾವನೆ ಶ್ರೀಲಂಕಾದ ರಾಜಕೀಯ ನಾಯಕರಲ್ಲಿದೆಮಾನವ ಹಕ್ಕುಗಳು ಮತ್ತು ಮೌಲ್ಯಗಳು ವಿಶ್ವಸಂಸ್ಥೆಯ ಸ್ಥಾಪನೆಗಿಂತಲೂ ಬಹಳ ಮುಂಚಿನಿಂದಲೇ ತಮ್ಮ ಅಸ್ತಿತ್ವ ಕಾಪಾಡಿಕೊಂಡು ಬಂದಿವೆ. ಕಾನೂನಾತ್ಮಕ ಮತ್ತು ನ್ಯಾಯಾಧಿಕರಣದ ಮೂಲಕ ಬಗೆಹರಿಸಲಾಗದ ಮಾನವ ಹಕ್ಕುಗಳ ಸಮಸ್ಯೆಗಳಿಗೆ ಸಾಂವಿಧಾನಿಕ ಪ್ರಜಾಪ್ರಭುತ್ವ ಪರಿಹಾರ ಕಂಡುಕೊಳ್ಳಬಲ್ಲುದು. ಇದೀಗ ಶ್ರೀಲಂಕಾ ತೃತೀಯ ಗಣತಾಂತ್ರಿಕ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಬಾರಿಯ ಸಂವಿಧಾನ ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವಂತಾದರೆ, ಶ್ರೀಲಂಕಾದ ಆಂತರಿಕ ಯುದ್ಧದ ರಕ್ತಸಿಕ್ತ ಕಲೆಗಳು ಲಂಕಾ ರಾಜಕೀಯದಲ್ಲಿ ಮಾಸಲಿದೆ. ದೇಶದ ಆಂತರಿಕ ಮತ್ತು ಅಂತರಾಷ್ಟ್ರೀಯ ನಿಲುವುಗಳಲ್ಲಿರುವ ದ್ವಂದ್ವಗಳಿಗೂ ಹೊಸ ಸಂವಿಧಾನ ಉತ್ತರ ನೀಡಬಲ್ಲುದು ಎಂದಾದರೆ, ಆಂತರಿಕ ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ನೀಡಿ ಶ್ರೀಲಂಕಾ ವಿಶ್ವ ಕುಟುಂಬದ ಜವಾಬ್ದಾರಿಯುತ ಸದಸ್ಯನಾಗಬಹುದು.




 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Hosa Diganta newspaper on 3 September 2016)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ