ಬುಧವಾರ, ಸೆಪ್ಟೆಂಬರ್ 14, 2016

ಭಾರತ- ನೇಪಾಳ ಸಂಬಂಧ:'ಪ್ರಚಂಡ' ಬದಲಾವಣೆಯ ನಿರೀಕ್ಷೆಯಲ್ಲಿ!

ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದ ರಾಜಕೀಯ ಮತ್ತೊಮ್ಮೆ ರಾಜಕೀಯ ಸಂಧಿಕಾಲದಲ್ಲಿದೆ. ಕೆ ಪಿ ಓಲಿ ಯವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ ಪುಷ್ಪಕಮಲ್ ದಹಾಲ್ ಅಂದರೆ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದಾರೆ. ಬದಲಾವಣೆಯೊಂದಿಗೆ ಕಳೆದೊಂದು ವರ್ಷದಿಂದಹದಗೆಟ್ಟಿದ್ದ ಭಾರತ ನೇಪಾಳ ಸಂಬಂಧಗಳೂ ಮತ್ತೆ ಪುನರ್ಸ್ಥಾಪಿತವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಕಳೆದ ವರ್ಷದಿಂದೀಚೆಗೆ ನಡೆದ ಕೆಲ ಕಹಿಘಟನೆಗಳಿಂದಾಗಿ ಭಾರತ ಮತ್ತು ನೇಪಾಳದ ರಾಜಕೀಯ ಸಂಬಂಧಗಳಲ್ಲಿ ಬಿರುಕು ಮೂಡಿತ್ತಲ್ಲದೆ ನೇಪಾಳ ಚೀನಾ ಕಡೆಗೆ ವಾಲಿಕೊಂಡು ಭಾರತವನ್ನುನೇರವಾಗಿಯೇ ವಿರೋಧಿಸತೊಡಗಿತ್ತು! ಪ್ರಚಂಡ ನೇಪಾಳ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಚೀನಾ ಮತ್ತು ಭಾರತಗಳಿಗೆ ತನ್ನ ವಿಶೇಷಪ್ರತಿನಿಧಿಗಳನ್ನು ಕಳುಹಿಸುವುದರ ಮೂಲಕ ಭಾರತ ನೇಪಾಳ ಬಾಂಧವ್ಯಕೊಂದು ತಿರುವು ನೀಡಿದ್ದಾರೆ. ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ ಭಾರತದ ವಿದೇಶಾಂಗನೀತಿಗೆ ಅಪವಾದವಾಗಿ ನಿಂತಿದ್ದ ನೇಪಾಳ, ಇದೀಗ ಮತ್ತೆ ಭಾರತದತ್ತ ಮುಖ ಮಾಡಿದ್ದು ಸಾಂಪ್ರದಾಯಿಕ ಮಿತೃತ್ವ ಉಳಿಸಿಕೊಳ್ಳಲು ಹೊಸ ಅವಕಾಶ ಸೃಷ್ಟಿಸಿದೆ.

ಭಾರತ ಮತ್ತು ನೇಪಾಳ ನೆರೆ ಹೊರೆಯ ರಾಷ್ಟ್ರಗಳು ಎನ್ನುವುದು ಸತ್ಯವಾದರೂ, ಅದಕ್ಕೂ ಮೀರಿ ಎರಡೂ ದೇಶಗಳಿಗೆ ವಿಶೇಷ ಅನುಬಂಧವಿದೆ ಎಂಬ ವಿಚಾರಐತಿಹಾಸಿಕ ನಿದರ್ಶನಗಳಿಂದ ರುಜುವಾತಾಗಿವೆ. ನೇಪಾಳದ ಭದ್ರತೆಯ ವಿಚಾರದಲ್ಲಿ ಭಾರತದ ತೋರಿದ ಬದ್ಧತೆ ಮತ್ತು ಪ್ರಬುದ್ಧತೆಗಳೂ ರಾಷ್ಟ್ರಗಳ ವಿಶೇಷಬಾಂಧವ್ಯವನ್ನು ಇನ್ನೊಂದು ಮಟ್ಟಕ್ಕೇರಿಸಿದ್ದವು. ನೇಪಾಳ ಅಕ್ಷರಶಃ ಭಾರತದಿಂದ ಆವೃತವಾದ ದೇಶ. ಉತ್ತರದ ಕಡೆ ಚೀನಾ ಇದ್ದರೂ, ಪ್ರಪಂಚದ ಅತೀ ಎತ್ತರದಮೌಂಟ್ ಎವರೆಸ್ಟ್ ಸೇರಿದಂತೆ ಹಿಮಾಲಯದ ಪರ್ವತ ಶ್ರೇಣಿ ನೇಪಾಳವನ್ನು ಚೀನಾದಿಂದ ಬೇರ್ಪಡಿಸಿ, ಭೌಗೋಳಿಕವಾಗಿಯೂ ಭಾರತಕ್ಕೆ ಹತ್ತಿರವಾಗಿಸಿದೆ.1996ರಿಂದ ನಿರಂತರವಾಗಿ ನಡೆದ ಮಾವೊಯಿಸ್ಟ್ ಸಂಘರ್ಷದಿಂದ ಬಳಲಿ ಬೆಂಡಾಗಿದ್ದ ನೇಪಾಳಕ್ಕೆ ಹೊಸ ದಿಕ್ಕು ತೋರಿಸಿದ್ದು ಭಾರತದ ಹಸ್ತಕ್ಷೇಪವೇ! 2004ರಲ್ಲಿಮಾವೊಯಿಸ್ಟ್ ಪಕ್ಷ ಮತ್ತು ಇತರ ರಾಷ್ಟ್ರೀಯ ಪಕ್ಷಗಳನ್ನು ಒಟ್ಟು ಸೇರಿಸಿ ಹನ್ನೆರಡು ಅಂಶಗಳ ಒಪ್ಪಂದಕ್ಕೆ ಮನವೊಪ್ಪಿಸಿ ನೇಪಾಳವನ್ನು ಪಾರು ಮಾಡಿದ್ದು ಭಾರತದಹಿರಿಮೆ. ಭಾರತದ ಕಿರಿಯ ಸಹೋದರನಂತಿದ್ದ ರಾಷ್ಟ್ರ 2015 ಸೆಪ್ಟೆಂವಬರ್ 19ರಲ್ಲಿ ಹೊಸ ಸಂವಿಧಾನ ರೂಪಿಸಿಕೊಳ್ಳುತ್ತದೆ. ನೇಪಾಳದ ಗಡಿ ಬಾಗದಲ್ಲಿವಾಸಿಸುತ್ತಿದ್ದ ಮಾದೇಸಿ, ತಾರು ಮತ್ತಿತರ ಜನಾಂಗಗಳ ವಿರೋಧ, ಪ್ರತಿಭಟನೆಗಳನ್ನು ಲೆಕ್ಕಿಸದೆ, ನೇಪಾಳದ ಹೊಸ ಸರ್ಕಾರ ಸಂವಿಧಾನವನ್ನುಅಳವಡಿಸಿಕೊಳ್ಳುತ್ತದೆ. ಕಾಠ್ಮಂಡುವಿನಲ್ಲಿ ನಡೆದ ಗಲಭೆಗಳೂ ನೇಪಾಳ ಸರಕಾರದ ನಿಲುವನ್ನು ಬದಲಿಸಲು ವಿಫಲವಾದಾಗ, ಭಾರತ ನೇಪಾಳದ ಹೊಸಸಂವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತ ನೀಡಿದ ಗಂಭೀರ ಎಚ್ಚರಿಕೆಗಳ ಹೊರತಾಗಿಯೂ ನೇಪಾಳದ ದಕ್ಷಿಣ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವಮಾದೇಸಿ ಜನಾಂಗದ ಹಕ್ಕುಗಳನ್ನು ಪುರಸ್ಕರಿಸಲು ನೇಪಾಳದ ಹೊಸ ಸಂವಿಧಾನ ವಿಫಲವಾಗಿತ್ತು. ಅತೃಪ್ತ ಮಾದೇಸಿ ಜನಾಂಗ ವಾಸಿಸುತ್ತಿರುವ ಪ್ರದೇಶಭಾರತದೊಂದಿಗೆ ಗಡಿ ಹಂಚಿಕೊಂಡಿರುವುದು ಮತ್ತು ಬಹಳಷ್ಟು ಜನ ಮಾದೇಸಿ ಜನ ಭಾರತೀಯರೊಂದಿಗೆ ಕೌಟುಂಬಿಕ ಸಂಬಂಧಗಳನ್ನು ಹೊಂದಿರುವುದರಿಂದಸಹಜವಾಗಿಯೇ ಭಾರತ ಕಳವಳಗೊಂಡಿತ್ತು.

ಪ್ರತ್ಯೇಕ ಸಾಂಸ್ಕೃತಿಕ ಹಿನ್ನೆಲೆ ಇರುವ ಮಾದೇಸಿ ಜನಾಂಗವನ್ನು ನೇಪಾಳ ಸಮಾಜ ಮುಖ್ಯವಾಹಿನಿಯಿಂದ ಹೊರಗಿಟ್ಟಿದೆ. ಹೊಸ ಸಂವಿಧಾನವಾದರೂ ತಮ್ಮಸಮಸ್ಯೆಗಳಿಗೆ ಕಿವಿಕೊಡಬಹುದು ಅಂದುಕೊಂಡಿದ್ದ ಮಾದೇಸಿಗಳಿಗೆ ನಿರಾಸೆ ಕಾದಿತ್ತು. ಮಾದೇಸಿಗಳು ನೆಲೆಸಿರುವ ಪ್ರಾಂತ್ಯದ ಗಡಿ ಸಮಸ್ಯೆ, ಅವರ ಕುಟುಂಬದಸದಸ್ಯರು ಎದುರಿಸುತ್ತಿರುವ ಪೌರತ್ವದ ಸಮಸ್ಯೆಗಳಿಗೆ ಹೊಸ ಸಂವಿಧಾನ ಕಿವುಡಾಗಿತ್ತು. ನೇಪಾಳದ ಹೊಸ ಸಂವಿಧಾನ ದಶಕಗಳಿಂದ ಮಾದೇಸಿಗಳಮೇಲಾಗುತ್ತಿರುವ ದೌರ್ಜನ್ಯ, ನೇಪಾಳದ ಮುಖ್ಯವಾಹಿನಿ ಮಾದೇಸಿಗಳ ಮೇಲೆ ತೋರಿಸುತ್ತಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಯಜಮಾನಿಕೆಯನ್ನು ಕಂಡೂಕಾಣದಂತೆ ಸುಮ್ಮನಾಯಿತು. ನೇಪಾಳದ ರಾಜಕೀಯ ನಾಯಕರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಮಾದೇಸಿ ಜನಾಂಗಕ್ಕೆ ಯಾವುದೇ ಪ್ರಾತಿನಿಧ್ಯ ಕೊಡದೆಸಂಪೂರ್ಣ ಮೂಲೆಗುಂಪು ಮಾಡಿಬಿಡುತ್ತಾರೆ. ನೇಪಾಳದ ಪ್ರಜೆಗಳೇ ಆದರೂ ಪರಕೀಯರಂತೆ ಬದುಕುವ ದುಃಸ್ಥಿತಿ ಮಾದೇಸಿಗಳಿಗೆ ಬಂದೊದಗುತ್ತದೆ. ಹಲವಾರುವರ್ಷಗಳಿಂದ ನೇಪಾಳದ ಪ್ರತಿ ಸಂಕಟದಲ್ಲೂ ಹಿರಿಯಣ್ಣನಂತೆ ಜೊತೆಗಿದ್ದ ಭಾರತ, ಮಾದೇಸಿಗಳಿಗಾದ ಅನ್ಯಾಯವನ್ನು ಸರಿಪಡಿಸಲು ನೇಪಾಳಕ್ಕೆ ಸಲಹೆನೀಡಿದ್ದು ನೇಪಾಳಕ್ಕೆ ಮಹಾಪರಾಧದಂತೆ ಕಂಡಿತ್ತು! ಭಾರತದೊಂದಿಗಿನ ಸಂಬಂಧ ಮುರಿದುಕೊಳ್ಳಲು ಒಂದು ಕಾರಣ ಸಾಕಾಯ್ತು ನೇಪಾಳಿ ರಾಜಕಾರಣಿಗಳಿಗೆ!ಹೊಸ ಸಂವಿಧಾನದೊಂದಿಗೆ ನೂತನವಾಗಿ ಆಯ್ಕೆಯಾದ ಪ್ರಧಾನಿ ಖಡ್ಗ ಪ್ರಸಾದ್ ಓಲಿ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಚೀನಾವನ್ನು ಆರಿಸಿಕೊಂಡಾಗ, ಓಲಿಉದ್ದೇಶಪೂರ್ವಕವಾಗಿಯೇ ಭಾರತವನ್ನು ಕಡೆಗಣಿಸಿದ್ದು ಸ್ಪಷ್ಟವಾಗಿತ್ತು. ಮುಂದೆ ಇದು ವಿಪರೀತಕ್ಕೆ ಹೋಗಿ, ಭಾರತ ನೇಪಾಳಕ್ಕೆ ದಿಗ್ಬಂಧನ ಹಾಕಿದ್ದು, ನೇಪಾಳಚೀನಾದೊಡನೆ ಹೆಚ್ಚಿನ ಒಡನಾಟ ಬೆಳೆಸಿಕೊಂಡಿದ್ದೂ ಸೇರಿದಂತೆ ಅನೇಕ ಕಹಿ ಘಟನೆಗಳು ನಡೆದುಹೋಯಿತು.

ಭಾರತದ ಪ್ರಧಾನಿ ನರೇಂದ್ರ ಮೋದಿ ನೇಪಾಳ ಸಂವಿಧಾನದ ಬಗ್ಗೆ ಮುಕ್ತವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವೂನೇಪಾಳ ಸಂವಿಧಾನದ ಬಗ್ಗೆ ಇದೇ ನಿಲುವನ್ನು ಪ್ರದರ್ಶಿಸಿತ್ತು. ಎಲ್ಲಾ ಬೆಳವಣಿಗೆಗಳಿಂದ ಭಾರತ ನೇಪಾಳದ ನಡುವೆ ಅನಧಿಕೃತ ದಿಗ್ಬಂಧನದ ಪರಿಸ್ಥಿತಿನಿರ್ಮಾಣವಾಗಿತ್ತು. ಭಾರತ ನೇಪಾಳ ಸಂಬಂಧಗಳು ವಿಷಮ ಪರಿಸ್ಥಿತಿಯಲ್ಲಿದ್ದಾಗಲೇ ಪ್ರಾಕೃತಿಕ ವಿಕೋಪದಿಂದಾಗಿ ನೇಪಾಳದಲ್ಲಿ ಭೂಮಿ ನಡುಗಿತ್ತು.ಭೂಕಂಪದಿಂದಾಗಿ ತತ್ತರಿಸಿದ್ದ ನೇಪಾಳಕ್ಕೆ 'ಆಪರೇಶನ್ ಮೈತ್ರಿ' ಮೂಲಕ ಭಾರತ ಮತ್ತೆ ಸಹಾಯಹಸ್ತ ಚಾಚುತ್ತದೆ. ಪ್ರಾಕೃತಿಕ ವಿಕೋಪದಿಂದ ಜರ್ಜರಿತಗೊಂಡಿದ್ದನೇಪಾಳಕ್ಕೆ ಭಾರತ ಮಾನವೀಯತೆಯ ನೆಲೆಯಲ್ಲಿ ಮಾಡಿದ ಸಹಾಯವೂ ಅನೇಕರ ವಕ್ರದೃಷ್ಠಿಗೆ ತುತ್ತಾಗಿದ್ದು ದುರದೃಷ್ಟ. ನೇಪಾಳ ಕೂಡ ಭಾರತದಸಹಾಯಹಸ್ತವನ್ನು ಯಜಮಾನಿಕೆಯ ಹಸ್ತಕ್ಷೇಪ ಎಂದು ಪರಿಗಣಿಸಿದಾಗ ಭಾರತ ನೇಪಾಳ ಸಂಬಂಧಗಳು ಇನ್ನೆಂದೂ ಸರಿ ಹೋಗುವುದಿಲ್ಲ ಎಂಬ ಭಾವನೆದಟ್ಟವಾಗಿತ್ತು.

ಭಾರತದ ಪಾಲಿಗೆ ದಶಕಗಳಿಂದ ಸಾಂಪ್ರದಾಯಿಕ ಮಿತ್ರನಾಗಿದ್ದ ನೇಪಾಳದಂಥ ರಾಷ್ಟ್ರವೊಂದು ಚೀನಾ ಕಡೆ ವಾಲಿಕೊಂಡಾಗ ಭಾರತದ ರಾಜತಾಂತ್ರಿಕರುತಲೆಕೆಡೆಸಿಕೊಂಡಿದ್ದರು. ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ನೇಪಾಳ ಚೀನಾ ಕಡೆಗೆ ಒಲವು ತೋರಿಸುತ್ತಿರುವುದುಭಾರತದ ಪಾಲಿಗೆ ಆತಂಕಕಾರಿ. ಈಗಾಗಲೇ ಪಾಕಿಸ್ಥಾನವನ್ನು ಬಳಸಿಕೊಂಡು ತಂತ್ರ ರೂಪಿಸುತ್ತಿರುವ ಚೀನಾ ನೇಪಾಳವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕದಕ್ಷಿಣ ಏಷ್ಯಾದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಎರಡು ವರ್ಷಗಳ ಹಿಂದೆ 2014ರಲ್ಲಿ ಸಾರ್ಕ್ ಒಕ್ಕೂಟದ ವೀಕ್ಷಕ ರಾಷ್ಟ್ರವಾಗಿರುವಚೀನಾ ಖಾಯಂ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ನೇಪಾಳವನ್ನು ಬಳಸಿಕೊಂಡಿದ್ದನ್ನು ನಾವಿಲ್ಲಿ ಮರೆಯಲಾಗದು!

ಭಾರತದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದ ಖಡ್ಗ ಪ್ರಸಾದ್ ಓಲಿ ಇತ್ತೀಚೆಗೆ ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದಾಗಿ ಅಧಿಕಾರಕಳೆದುಕೊಂಡಿದ್ದಾರೆ. ಹೊಸ ಪ್ರಧಾನಿ ಪುಷ್ಪ ಕಮಲ್ ದಹಾಲ್ (ಪ್ರಚಂಡ)ರವರು ಆರಂಭದಲ್ಲೇ ನೇಪಾಳದ ಉಪಪ್ರಧಾನಿಯಾಗಿರುವ ಬಿಮಲೇಂದ್ರ ನಿಧಿ ಅವರನ್ನುಭಾರತಕ್ಕೆ ರಾಜತಾಂತ್ರಿಕ ಪ್ರತಿನಿಧಿಯಾಗಿ ಕಳುಹಿಸುವ ಮೂಲಕ ಭಾರತ ಮತ್ತು ನೇಪಾಳ ಸಂಬಂಧಗಳು ಮತ್ತೆ ಸುಧಾರಿಸುವ ಸೂಚನೆಗಳು ಕಾಣಿಸುತ್ತಿವೆ.ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಿಧಿ ಭಾರತದೊಂದಿಗೆ ಸಹಕಾರವಿಲ್ಲದೆ ನೇಪಾಳದ ಅಭಿವೃದ್ಧಿ ಕಷ್ಟಸಾಧ್ಯ ಎಂಬ ಮಾತುಗಳನ್ನಾಡಿರುವುದು, ಅದಕ್ಕೆಪ್ರತಿಯಾಗಿ ಮೋದಿಯವರು ನೇಪಾಳದ ಪ್ರಧಾನಿ ಪ್ರಚಂಡರವರನ್ನು ಭಾರತಕ್ಕೆ ಆಹ್ವಾನಿಸಿ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದಿರುವುದು ಗಮನಾರ್ಹ ವಿಚಾರ.ಮಾದೇಸಿ ಮತ್ತಿತರ ಜನಾಂಗಗಳ ಬಗ್ಗೆ ಭಾರತದ ಕಾಳಜಿಯನ್ನು ನೇಪಾಳದ ಹೊಸ ಸರಕಾರ ಧನಾತ್ಮಕವಾಗಿ ಸ್ವೀಕರಿಸುವ ಲಕ್ಷಣಗಳೂ ಗೋಚರಿಸುತ್ತಿರುವೆ.

2014ರಿಂದ ನೆರೆಹೊರೆಯ ದೇಶಗಳ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಆದ್ಯತೆ ನೀಡಿದ್ದ ಭಾರತದ ವಿದೇಶಾಂಗ ನೀತಿ ಶ್ರೀಲಂಕಾ ಮತ್ತುಬಾಂಗ್ಲಾದೇಶಗಳೊಡನೆ ಗಮನಾರ್ಹ ಯಶಸ್ಸು ಪಡೆಯಿತಾದರೂ ನೇಪಾಳ ಮಾತ್ರ ಕಳೆದೊಂದು ವರ್ಷದಿಂದ  ಸವಾಲಾಗಿತ್ತು. ಇದೀಗ ನೇಪಾಳದೊಂದಿಗಿನಸಂಬಂಧಗಳು ಸಹಜ ಸ್ಥಿತಿಗೆ ಮರಳುತ್ತಿರುವುದು ಸ್ವಾಗತಾರ್ಹ ವಿಷಯವೇ ಸರಿ. ಕೈ ಮೀರಿ ಹೋಗುತ್ತಿದ್ದ ಭಾರತ ನೇಪಾಳ ಸಂಬಂಧಗಳಿಗೆ ಹೊಸ ಬೆಸುಗೆ ಹಾಕಿದಪ್ರಚಂಡ ಇನ್ನೂ ಒಂಬತ್ತು ತಿಂಗಳುಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವಧಿಯ ಬಳಿಕ ಸಮ್ಮಿಶ್ರ ಸರಕಾರದಲ್ಲಿ ಕೈ ಜೋಡಿಸಿದ್ದ ನೇಪಾಳಿಕಾಂಗ್ರೆಸ್ ಪಕ್ಷದ ಶೇರ್ ಬಹಾದ್ದೂರ್ ದೇವುಬಾ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಅದೃಷ್ಟವಶಾತ್ ಶೇರ್ ಬಹಾದ್ದೂರ್ ಕೂಡ ಭಾರತದೊಂದಿಗಿನ ನೇಪಾಳಸಂಬಂಧಗಳ ಪರವಾಗಿ ಹೇಳಿಕೆಗಳನ್ನು ನೀಡಿರುವುದು ಮುಂದಿನ ದಿನಗಳಲ್ಲಿ ನೇಪಾಳ ಭಾರತ ಸಂಬಂಧಗಳು ಸುಧಾರಿಸುವ ಭರವಸೆ ಮೂಡಿಸಿವೆ.




 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 9 September 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ