ಶುಕ್ರವಾರ, ಅಕ್ಟೋಬರ್ 14, 2016

ಅಜೇಯ ಭಾರತ : ಹತಾಶ ಪಾಕಿಸ್ತಾನ

ಪಾಕಿಸ್ತಾನ, ಭಯೋತ್ಪಾದಕರು ಅಥವಾ ಪ್ರಪಂಚದ ಇನ್ನಾವುದೇ ಶಕ್ತಿ ಭಾರತವನ್ನು ಸೋಲಿಸಿ ಅಪಮಾನಿಸಲಾಗದು. ಹಾಗೊಂದು ವೇಳೆ ಭಾರತ ಸೋತು ಅವಮಾನ ಎದುರಿಸಲೇಬೇಕಾಗಿ ಬಂದಲ್ಲಿ ಅದು ಭಾರತೀಯರಿಂದಲೇ ಹೊರತು ಇನ್ನಾವುದೇ ಬಾಹ್ಯ ಶಕ್ತಿಯಿಂದಲ್ಲ!

-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ಸುಮಾರು ಐದು ತಿಂಗಳ ಹಿಂದೆ ಹೊಸದಿಗಂತದಲ್ಲಿ "ಕಾಶ್ಮೀರ: ಉಗ್ರರಿಗೆ ಜನ ಬೆ೦ಬಲ ಕಡಿಮೆಯಾಗಿಲ್ಲ" ಎಂಬ ಲೇಖನದಲ್ಲಿ ಕಾಶ್ಮೀರ ಭಾರತದ ಕೈತಪ್ಪಿ ಹೋಗುವ ಆತಂಕಗಳ ಬಗ್ಗೆ ಬರೆದಿದ್ದೆ. ಭಾರತೀಯ ರಕ್ಷಣಾ ಪಡೆಗಳ ಮೇಲೆ ಕಲ್ಲೆಸೆಯುತ್ತಾ ಭಯೋತ್ಪಾದಕರ ಪರ ಸಹಾನುಭೂತಿ ವ್ಯಕ್ತಪಡಿಸುವ ಕಾಶ್ಮೀರದ ಜನತೆ, ಭಯೋತ್ಪಾದಕರ ಮರಣವಾದಾಗ ಗನ್ ಸೆಲ್ಯೂಟ್ ಗೌರವ ನೀಡುವ ವಿಲಕ್ಷಣ ಸಂಸ್ಕೃತಿಯ ಬಗೆಗೂ ಉಲ್ಲೇಖಿಸಿದ್ದೆ. ತದನಂತರ ಕಾಶ್ಮೀರ ಇದೇ ಹಾದಿಯಲ್ಲಿ ಬಹಳಷ್ಟು ಮುಂದುವರಿದಿತ್ತು. ಬುರ್ಹಾನ್ ವಾನಿಯ ಹತ್ಯೆಯ ಸಂದರ್ಭ ಹಾಗೂ ಹತ್ಯಾನಂತರದ ಪ್ರತಿಭಟನೆಗಳಲ್ಲಿ ಭಾರತೀಯ ರಕ್ಷಣಾ ಪಡೆಗಳನ್ನು ಪ್ರಚೋದಿಸಿ, ಸೈನಿಕರ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನವೂ ನಡೆಯಿತು. ಇವೆಲ್ಲದರ ಹಿಂದೆ ಪಾಕಿಸ್ತಾನ ಮತ್ತು ಅದರ ಗುಪ್ತಚರ ಇಲಾಖೆ .ಎಸ್. ಕುಮ್ಮಕ್ಕು ಇತ್ತೆನ್ನುವುದರಲ್ಲಿ ಅನುಮಾನವಿಲ್ಲ. ಇಂಥ ಕ್ಷುದ್ರ ಆಲೋಚನೆಯನ್ನಿಟ್ಟುಕೊಂಡೇ ಪಾಕಿಸ್ತಾನ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತಕ್ಕೊಂದು ರಾಜತಾಂತ್ರಿಕ ಹೊಡೆತ ನೀಡುವುದಕ್ಕೆ ಸಿದ್ಧವಾಗಿತ್ತು. ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸುವ ಕೋತಿಯಂತೆ, ವಿಶ್ವಮಟ್ಟದಲ್ಲಿ ತನಗಂಟಿದ್ದ ಕುಖ್ಯಾತಿಯ ಮಸಿಯನ್ನು ಭಾರತಕ್ಕೂ ಬಳಿಯಹೊರಟಿತ್ತು ಪಾಕಿಸ್ತಾನ!

ಜಾಗತಿಕ ವೇದಿಕೆಯಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಲು ಇಷ್ಟೆಲ್ಲಾ ವ್ಯವಸ್ಥೆ ಮಾಡಿದ ಬಳಿಕವೂ ಪಾಕಿಸ್ತಾನಕ್ಕೆ ತನ್ನ ಯೋಜನೆಯಲ್ಲಿ ಕೊರತೆ ಕಂಡಿತ್ತು. ಏನೆಲ್ಲಾ ದೊಂಬರಾಟ ಮಾಡಿದರೂ ಭಾರತ ಬಗ್ಗುವುದಿಲ್ಲ ಎಂದಾದಾಗ ಹತಾಶ ಪಾಕಿಸ್ತಾನ ತಾನು ದಶಕಗಳಿಂದ ಅನ್ನ, ನೀರು, ಜಾಗ ಕೊಟ್ಟು ಸಾಕಿದ್ದ ಉಗ್ರರನ್ನು ತನ್ನ ನಾಚಿಕೆಗೇಡಿನ ಕಾರ್ಯ ಯೋಜನೆಗೆ ಪ್ರಚೋದಿಸಿತ್ತು. ಇದರ ಪರಿಣಾಮವೇ ಉರಿ ದಾಳಿ! ಭಾರತ ವೀರಪುತ್ರರನ್ನು ಕಳೆದುಕೊಂಡು ಶೋಕದಲ್ಲಿರುವಾಗಲೇ ರಾಜಕೀಯ ನಾಯಕರು ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಳೆದಿದ್ದು, ಇನ್ನೊಂದು ಇಂಡೋ-ಪಾಕ್ ಯುದ್ಧ ನಡೆಯುವ ಬಗ್ಗೆ ಚರ್ಚೆಗಳೂ ನಡೆದುಹೋಗಿವೆ. ಇವೆಲ್ಲದರ ಮಧ್ಯೆ ಮೋದಿ ವಿರೋಧಿಗಳು, ಮೋದಿಯವರ ಹಳೆಯ ಹೇಳಿಕೆಗಳನ್ನು ಕೆದಕಿ ಯುದ್ಧಕ್ಕೆ ಪ್ರಚೋದಿಸಿದರೆ, ಇನ್ನೂ ಹಲವರು ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲೇ ಪಾಕಿಸ್ತಾನದ ವಿರುದ್ಧ ಸಮರ ಸಾರಿ ಮೋದಿ ಸರಕಾರ ಬಾರಿ ಪಾಕಿಸ್ತಾನೀಯರನ್ನು ಸದೆಯಬಡಿಯಬೇಕು ಎಂಬ ಆದೇಶವನ್ನೇ ಹೊರಡಿಸಿದ್ದರು! ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಭಾವನಾತ್ಮಕ ಅಂಶಗಳು ಮುಖ್ಯ ಪಾತ್ರ ವಹಿಸುತ್ತದೆಯಾದರೂ, ರಾಜತಾಂತ್ರಿಕ ನಿರ್ಧಾರಗಳಲ್ಲಿ ಭಾವನಾತ್ಮಕವಾಗಿ ವರ್ತಿಸುವಂತಿಲ್ಲ. ಇಂಥ ಮಹತ್ವದ ನಿರ್ಧಾರ ಸ್ವಾರ್ಥ, ಸ್ವಹಿತಾಸಕ್ತಿಗಳನ್ನು ಮೀರಿ ದೇಶದ ಆತ್ಮಸಾಕ್ಷಿಯನ್ನು ಪ್ರತಿನಿಧಿಸುವಂತಿರಬೇಕಷ್ಟೇ. ಯುದ್ಧದ ಯಾವುದೇ ವಿಭಾಗದಲ್ಲೂ ಪಾಕ್ ಭಾರತವನ್ನು ಮೀರಿ ನಿಲ್ಲಲಾಗದು ಎನ್ನುವುದು ಸರ್ವವಿದಿತಆಧುನಿಕ ಯುದ್ಧ ರಣರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಅಧಿಕೃತವಾಗಿ ಯುದ್ಧ ಘೋಷಿಸಿ ಕಾಳಗ ನಡೆಸುವ ಕಾಲ ಕಳೆದುಹೋಗಿದೆ. ಯುದ್ಧ ಘೋಷಿಸದೆ ಶತ್ರುವನ್ನು ನಿಗ್ರಹಿಸುವ ಕಲೆ ಭಾರತಕ್ಕೂ ಅಪರಿಚಿತವೇನಲ್ಲ. ವಿಚಾರವಾಗಿ ಪ್ರಧಾನಿ ಮೋದಿಯವರು ಪ್ರಬುದ್ಧವಾಗಿಯೇ ನಡೆದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳ ಭಾವನಾತ್ಮಕ ಒತ್ತಾಯಕ್ಕಾಗಲೀ, ವಿರೋಧಿಗಳ ವಿಕೃತ ಪ್ರಚೋದನೆಗಾಗಲಿ ಒಳಪಡದೆ ಪ್ರಧಾನಿ ಮೋದಿ ರಾಜನೀತಿಯಲ್ಲಿ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಹಾಗೊಂದು ವೇಳೆ ಯುದ್ಧ ಅನಿವಾರ್ಯವಾದಲ್ಲಿ, ಈಗಾಗಲೇ ಮೂರು ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿರುವ ಭಾರತ ನಾಲ್ಕನೆಯ ಯುದ್ಧದಲ್ಲೂ ಪಾಕ್ ಸೈನ್ಯವನ್ನು ಸದೆಬಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾಶ್ಮೀರ ಇವತ್ತಿಗೆ ವಿವಾದಿತ ಪ್ರದೇಶವಾಗಿರುವುದಕ್ಕೆ ಸ್ವಾತಂತ್ರ್ಯಾನಂತರದಲ್ಲಿ ಭಾರತವನ್ನಾಳಿದ ನಾಯಕರ ಕೊಡುಗೆಯೂ ಬಹಳಷ್ಟಿದೆಯೆನ್ನೋಣ. ಕಾಶ್ಮೀರ ಸಮಸ್ಯೆಯನ್ನು ದಕ್ಷವಾಗಿ ನಿಭಾಯಿಸುವಲ್ಲಿ ಅಸಮರ್ಥತೆ ಮತ್ತು ಇನ್ನಿತರ ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಕಾಶ್ಮೀರ ದಿನ ಕಳೆದಂತೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿವಾದವಾಗಿ ಗುರುತಿಸಿಕೊಂಡಿತ್ತು. ಇವತ್ತು ಭಾರತೀಯರೂ ಕೂಡ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪಕ್ಕಕ್ಕಿಟ್ಟು 'ವಿವಾದಿತ ಪ್ರದೇಶ' ಎಂದೇ ಗುರುತಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಏಕೆಂದರೆ 1947ರ ಭಾರತದ ಸ್ವಾತಂತ್ರ್ಯ ಕಾಯ್ದೆ ಮತ್ತು ರಾಡ್ ಕ್ಲಿಫ್ ಗಡಿರೇಖೆ ಆಯೋಗದ ಒಪ್ಪಂದದ ಪ್ರಕಾರವೂ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ಎಳ್ಳಷ್ಟೂ ಅಧಿಕಾರವಿಲ್ಲ! 1947ರ ಭಾರತದ ಸ್ವಾತಂತ್ರ್ಯ ಕಾಯ್ದೆಯ ಪ್ರಕಾರ ರಾಜಾಡಳಿತವಿದ್ದ ಸ್ಥಳೀಯ ರಾಜ್ಯಗಳು ಅವರ ಇಚ್ಚೆಯಂತೆ ಭಾರತ ಅಥವಾ ಪಾಕಿಸ್ತಾನಗಳಿಗೆ ಸೇರಿಕೊಳ್ಳುವ ಅವಕಾಶವಿತ್ತು. ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದಾಗ, ಕಾಶ್ಮೀರದ ಮಹಾರಾಜ ಹರಿಸಿಂಗ್ ಭಾರತದೊಂದಿಗೆ ಸೇರಿಕೊಂಡಿದ್ದು ಈಗ ಚರಿತ್ರೆ. ಹೀಗಾಗಿ ಕಾಶ್ಮೀರ ಭಾರತದದಲ್ಲಿ ಸ್ಪಷ್ಟವಾಗಿ ವಿಲೀನಗೊಂಡಿದೆಯೇ ಹೊರತು ಕಾನೂನಾತ್ಮಕ ನೆಲೆಯಲ್ಲಿ ವಿವಾದಕ್ಕೆ ಆಸ್ಪದವೇ ಇಲ್ಲ.ಹಾಗಾಗಿ ಇದೊಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿವಾದವಷ್ಟೇ!

ಪಾಕಿಸ್ತಾನಕ್ಕೆ ಕಾಶ್ಮೀರದ  ಮೇಲೆ ಕಾನೂನಾತ್ಮಕವಾಗಿ ಅಥವಾ ನೈತಿಕ ಆಧಾರದ ಮೇಲಾಗಲಿ ಯಾವುದೇ ಹಕ್ಕಿಲ್ಲದೇ ಇದ್ದರೂ 1947ರಿಂದಲೂ ತನ್ನ ವಿತಂಡವಾದದ ಜೊತೆಗೆ ಭಾರತದ ಕಾಶ್ಮೀರ ನೀತಿಯನ್ನು ಕೆಣಕುತ್ತಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ, ಮಲೀಹಾ ಲೋಧಿ ಅವಕಾಶ ಸಿಕ್ಕಿದಾಗಲೆಲ್ಲಾ ಕಾಶ್ಮೀರ ಸಂಬಂಧಿಸಿದ ನಿರ್ಣಯಗಳನ್ನು ಭದ್ರತಾ ಮಂಡಳಿ ಕಾರ್ಯರೂಪಕ್ಕಿಳಿಸಬೇಕು ಎಂದು ಬಾಯಿಬಡಿದುಕೊಳ್ಳುತ್ತಿದ್ದಾನೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ನವಾಝ್ ಷರೀಫ್ , ಕಾಶ್ಮೀರದಲ್ಲಿ ಜನಮತಗಣನೆ ನಡೆಸುವಲ್ಲಿ ಭಾರತವನ್ನು ಒತ್ತಾಯಪೂರ್ವಕವಾಗಿಯಾದರೂ ಒಪ್ಪಿಸುವಂತೆ ಭದ್ರತಾ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದರುಲೋಧಿ, ಷರೀಫ್ ಮತ್ತು ಇನ್ನಿತರ ಪಾಕಿಸ್ತಾನಿಗಳು ಮಾಡುತ್ತಿರುವ ತಲೆಬುಡವಿಲ್ಲದ ಇಬ್ಬಂದಿತನವನ್ನು ಮತ್ತು ಎಡವಟ್ಟುಗಳಿಗೆ ಭಾರತ ಪ್ರತ್ಯುತ್ತರ ನೀಡಬೇಕಾದ ಸಮಯ ಬಂದಿದೆಜನಮತಗಣನೆಗೆ ಸಂಬಂಧಿಸಿದ ನಿರ್ಣಯ ಬಹಳ ಸ್ಪಷ್ಟವಾಗಿದೆ ಮತ್ತು ಭಾರತ ಅದರಂತೆಯೇ ನಡೆದುಕೊಳ್ಳುತ್ತಿದೆ. ನಿರ್ಣಯದ ಪ್ರಕಾರ ಪಾಕಿಸ್ತಾನ ತನ್ನ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಸೈನ್ಯ ಹಾಗೂ ಕಾಶ್ಮೀರೇತರ ಜನರನ್ನು ಕಾಶ್ಮೀರದಿಂದ ಹಿಂಪಡೆದುಕೊಳ್ಳಬೇಕು. ಇದಾದ ನಂತರವಷ್ಟೇ ಭಾರತ ತನ್ನ ಸೈನ್ಯವನ್ನು ಕಾಶ್ಮೀರದಿಂದ ಹಿಂಪಡೆದುಕೊಳ್ಳಬೇಕು. ತದನಂತರ ವಿಶ್ವಸಂಸ್ಥೆ ನಿಯೋಜಿಸಿದ ಆಯೋಗವೊಂದು ಕಾಶ್ಮೀರದಲ್ಲಿ ಜನಮತಗಣನೆ ನಡೆಸುತ್ತದೆ. (ಆದರೆ ನಿರ್ಣಯಗಳನ್ನು 1972ರ ಸಿಮ್ಲಾ ಒಪ್ಪಂದದಲ್ಲಿ ಕಡೆಗಣಿಸಿ, ಭವಿಷ್ಯದ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಗುತ್ತದೆ). ಯಾವುದೇ ರೀತಿಯಾಗಿ ನೋಡಿದರೂ ನಿರ್ಣಯಗಳು ಭಾರತದ ಪರವಾಗಿವೆಯೇ ಹೊರತು ಪಾಕಿಸ್ತಾನಕ್ಕಲ್ಲ. ನಿರ್ಣಯಗಳನ್ನು ನ್ಯಾಯಬದ್ಧವಾಗಿ ಜಾರಿ ಮಾಡುವುದೇ ಆದಲ್ಲಿ ಪಾಕಿಸ್ತಾನ ಕಾಶ್ಮೀರದಲ್ಲಿ ನಿಯೋಜಿಸಿರುವ ಸೇನೆ, ಅಕ್ರಮ ಉಗ್ರ ಗುಂಪುಗಳು ಮತ್ತಿತರ ಕಾಶ್ಮೀರೇತರ ಜನರನ್ನು ವಾಪಾಸು ಕರೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಪಾಕ್ ಒಪ್ಪಿಕೊಂಡ ಮೇಲಷ್ಟೇ ಭಾರತ ಮುಂದಿನ ಹೆಜ್ಜೆ ಇಡಬಹುದು ಎನ್ನುವುದನ್ನು ಪಾಕಿಸ್ತಾನಿಗಳು ಮತ್ತು ಭಾರತದ ಸ್ವಯಂ ಘೋಷಿತ ಬುದ್ಧಿಜೀವಿಗಳು ಗಮನದಲ್ಲಿಡಬೇಕು.

ಭಾರತೀಯರಿಗೆ ಕಾಶ್ಮೀರದ ಬಗೆಗೊಂದು ಪೂರ್ವಾಗ್ರಹಪೀಡಿತ ಮನಸ್ಥಿತಿಯಿದೆ. ಮನಸ್ಥಿತಿ ಭಾರತದ ಅವಿಭಾಜ್ಯ ಅಂಗ ಕಾಶ್ಮೀರವನ್ನು  'ವಿವಾದಿತ ಪ್ರದೇಶ' ಎಂದಷ್ಟೇ ಕಲ್ಪಿಸಿಕೊಳ್ಳುತ್ತದೆ. ಭಾರತೀಯ ಸಮಾಜ ಮನಸ್ಥಿತಿಯಿಂದ ಹೊರಬರಬೇಕು. ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ಭಾರತದ ನಾಯಕರು ಇಟ್ಟ ಒಂದು ಸಣ್ಣ ತಪ್ಪು ಹೆಜ್ಜೆ ಇಂದು ದಕ್ಷಿಣ ಏಷ್ಯಾದ ಬೃಹತ್ ಸಮಸ್ಯೆಯಾಗಿ ನಮ್ಮ ಮುಂದಿದೆ. ಹಾಗೆಂದುಕೊಂಡು ಈಗಾಗಲೇ ಆಗಿರುವ ತಪ್ಪಿಗಾಗಿ ಕೊರಗುವುದರಲ್ಲಿ ಅಥವಾ ಒಬ್ಬರನ್ನೊಬ್ಬರು ದೂಷಿಸುವುದರಲ್ಲಿ ಅರ್ಥವಿಲ್ಲಯಶಸ್ಸಿನ ದಾರಿಯಲ್ಲಿರುವ ಭಾರತದ ಏಕಾಗ್ರತೆ ಕೆಡಿಸಲು, ಚೀನಾ, ಪಾಕಿಸ್ತಾನ ಮತ್ತಿತರ ಶತ್ರುಗಳು ಅಗ್ಗದ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಒಂದು ಮಾತಂತೂ ಸತ್ಯ, ಪಾಕಿಸ್ತಾನ, ಭಯೋತ್ಪಾದಕರು ಅಥವಾ ಪ್ರಪಂಚದ ಇನ್ನಾವುದೇ ಶಕ್ತಿ ಭಾರತವನ್ನು ಸೋಲಿಸಿ ಅಪಮಾನಿಸಲಾಗದು. ಹಾಗೊಂದು ವೇಳೆ ಭಾರತ ಸೋತು ಅವಮಾನ ಎದುರಿಸಲೇಬೇಕಾಗಿ ಬಂದಲ್ಲಿ ಅದು ಭಾರತೀಯರಿಂದಲೇ ಹೊರತು ಇನ್ನಾವುದೇ ಬಾಹ್ಯ ಶಕ್ತಿಯಿಂದಲ್ಲ! ಇತಿಹಾಸವನ್ನು ವಸ್ತುನಿಷ್ಟವಾಗಿ ಅವಲೋಕಿಸಿದಲ್ಲಿ ಬೆರಳೆಣಿಕೆಯ ವಿಶ್ವಾಸಘಾತುಕ ಭಾರತೀಯರ(?) ದೇಶದ್ರೋಹವನ್ನು ಹೊರತುಪಡಿಸಿದರೆ  ಭಾರತ ಅಜೇಯವೇ ಸರಿ. ಇವತ್ತಿನ ಪರಿಸ್ಥಿತಿಯಲ್ಲಿ ಆಲೋಚಿಸಲೇಬೇಕಾದ ವಿಚಾರ ಇದು!


(This article was published in Hosa Diganta newspaper on 27 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ