ಶುಕ್ರವಾರ, ಅಕ್ಟೋಬರ್ 14, 2016

ಬಲಿಯುವ ಮೊದಲೇ ಬಲಿಗೆ ನಿಂತವರು!

ಖಲಿಫೇಟ್ ಸ್ಥಾಪನೆಗೆ ಪಣ ತೊಟ್ಟು ಬೇರೆ ಬೇರೆ ರಾಷ್ಟ್ರಗಳಿಂದ ವಲಸೆ ಬಂದಿರುವವರ ಮಕ್ಕಳು, ಸ್ಥಳಿಯ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಸೇರಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಕಟ್ಟಿಕೊಂಡಿರುವ ಸೇನೆ ಹೆಸರು 'ಕಬ್ಸ್ ಆಫ್ ಖಲಿಫೇಟ್'!

-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು

ಅಲಯನ್ಸ್ ವಿಶ್ವವಿದ್ಯಾಲಯ)

ಮಧ್ಯ ಪ್ರಾಚ್ಯದ ರಣರಂಗದಲ್ಲಾದ ಹಿನ್ನಡೆಗಳಿಂದಾಗಿ ಇಸ್ಲಾಮಿಕ್ ಸ್ಟೇಟ್ ಇದೀಗ ಹೊಸ ತಂತ್ರಗಳನ್ನು ಹೆಣೆಯುವ ತರಾತುರಿಯಲ್ಲಿದೆ. ಕುರ್ದಿಶ್ ಹೋರಾಟಗಾರರು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಸಮರ ಸಾರಿದ ಮೇಲಂತೂ ಉಗ್ರರ ಯೋಜನೆಗಳೆಲ್ಲ ತಲೆಕೆಳಗಾಗಿವೆ. ಯುದ್ಧನೀತಿಯ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶಗಳಾದ ಇರಾಕ್ ಫಲ್ಲುಜಾಹ್, ಉತ್ತರ ಸಿರಿಯಾದಲ್ಲಿರುವ ಮನ್ಬಿಜ್ ಮತ್ತು ಜರಬುಲಸ್ ಗಳಲ್ಲೂ ಸಾಲು ಸಾಲು ಸೋಲುಗಳಿಂದ ಇಸ್ಲಾಮಿಕ್ ಸ್ಟೇಟ್ ತನ್ನ ನಿಯಂತ್ರಣ ಕಳೆದುಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ತನ್ನ ಅಧೀನದಲ್ಲಿದ್ದ 47  ಪ್ರತಿಶತ ನೆಲದ ಮೇಲಿನ ಹಿಡಿತ ಕಳೆದುಕೊಂಡಿದ್ದು, 30 ಪ್ರತಿಶತ ಉಗ್ರರು ಇಸ್ಲಾಮಿಕ್ ಸ್ಟೇಟ್ ಸದಸ್ಯತ್ವ ತೊರೆದು ತಮ್ಮ ಮೂಲ ದೇಶಗಳಿಗೆ ಹಿಂದಿರುಗಿದ್ದಾರೆಹತಾಶೆಯ ಮಡುವಿನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ತಮ್ಮ ಅಧಿಕಾರವನ್ನು ಪುನರ್ಸ್ಥಾಪಿಸಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಾಗಿದ್ದಾರೆ. ಅಲ್ ಹಯಾತ್ ಮೀಡಿಯಾ ಸೆಂಟರ್ ಮಾಧ್ಯಮದ ಮೂಲಕ  ಮತ್ತೆ ಬಿರುಸಿನಿಂದ ಪ್ರಚಾರ ಆರಂಭಿಸಿರುವ ಉಗ್ರ ಸಂಘಟನೆಯ ಹೊಸ ನಡೆಗಳು ಜಾಗತಿಕ ಸಮುದಾಯದ ನೈತಿಕತೆಗೆ ಗಂಭೀರ ಪ್ರಶ್ನೆಗಳನ್ನು ಒಡ್ಡಲಿದೆ

ಕೆಲ ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಭಯಾನಕ ದೃಶ್ಯವಿರುವ 'Nations United Against You' ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿರುವ ಮಿಲಿಟರಿ ಸಮವಸ್ತ್ರದಲ್ಲಿರುವ ಹತ್ತರಿಂದ ಹನ್ನೆರಡು ವರ್ಷದೊಳಗಿನ ಐದು ಹುಡುಗರ ಕೈಯಲ್ಲೂ ಗನ್ ಗಳಿವೆ. ಬಂಧಿಸಲ್ಪಟ್ಟ ಕುರ್ದಿಶ್ ಹೋರಾಟಗಾರರ ಹಿಂದೆ ನಿಂತಿರುವ ಹುಡುಗರ ಕೈಯಲ್ಲಿರುವ ಗನ್ ಗಳು ಬಂಧಿಗಳ ಹಿಂದಲೆಗೆ ಗುರಿಯಿರಿಸಿದ್ದಾರೆ. ಹುಡುಗರಲ್ಲೊಬ್ಬನಾದ ಅಬು ಅಲ್-ಬಾರಾ ಅಲ್-ಟುನಿಸಿ ಎಂಬ ಹುಡುಗ ಅರೇಬಿಕ್ ನಲ್ಲಿ ಮಾತನಾಡಿ, ಇದು ಅಂತ್ಯವಲ್ಲ ಆರಂಭ ಎನ್ನುತ್ತಾನಷ್ಟೇ ಅಲ್ಲ, ಕುರ್ದಿಶ್ ಹೋರಾಟಗಾರರ ಮಾರಣಹೋಮ ನಡೆಸುತ್ತೇವೆ ಎಂಬ ಧಮಕಿ ಹಾಕುತ್ತಾನೆ. ಅಮೆರಿಕಾ, ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿಗಳನ್ನು ಮಾನವರಷ್ಟೇ ಅಲ್ಲ ಜೀನಿಗಳಿಂದಲೂ ಕಾಪಾಡಲು ಸಾಧ್ಯವಿಲ್ಲ ಎಂದ ಪೋರ, ಪಾಶ್ಚಾತ್ಯ ದೇಶಗಳು ತಮ್ಮ ಸಮಾಧಿಗೆ ಗುಂಡಿ ತೋಡಿಕೊಂಡು, ಶವಪೆಟ್ಟಿಗೆಯನ್ನು ಸಿದ್ಧಪಡಿಸಿಕೊಳ್ಳಬೇಕು ಗುಟುರು ಹಾಕಿದ್ದಾನೆ. ಕೆಲವೇ ನಿಮಿಷಗಳಲ್ಲಿ ಸಣ್ಣ ವಯಸ್ಸಿನ ಹುಡುಗರು ತಮ್ಮ ಮುಂದೆ ಬಂಧಿಸಲ್ಪಟ್ಟಿರುವ ಕುರ್ದಿಶ್ ಹೋರಾಟಗಾರರ ತಲೆಯನ್ನು ಛಿದ್ರಗೊಳಿಸುತ್ತಾರೆ! ದೇಹ ಮತ್ತು ಬುದ್ಧಿಗಳೆರಡೂ ಬಲಿತಿರದ ಹತ್ತು ವರ್ಷದ ಹುಡುಗರು ಕೃತ್ಯದಲ್ಲಿ ಪಾಲ್ಗೊಂಡಿರುವುದು ಆಘಾತಕಾರಿಯಾದರೂ ನಂಬಲೇಬೇಕಾದ ವಿಚಾರ!

ಇಸ್ಲಾಮಿಕ್ ಸ್ಟೇಟ್ ಮುಖಂಡ ಮಹಮ್ಮದ್ ಅಲ್ ಅಡ್ನಾನಿ ವಿಡಿಯೋವನ್ನು ರಚಿಸಿರುವುದಕ್ಕೆ ಕಾರಣಗಳು ಹಲವಾರಿವೆ. ವಿಡಿಯೋ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೇಳಿಕೆ ನೀಡುತ್ತಿರುವ ಅಥವಾ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಶ್ವನಾಯಕರಿಗೂ ಎಚ್ಚರಿಕೆಯ ಸಂದೇಶ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಸ್ಲಾಮಿಕ್ ಸ್ಟೇಟ್ ಇರಾಕ್ ಮತ್ತು ಸಿರಿಯಾಗಳಲ್ಲಿ ಬಹಳಷ್ಟು ಆಯಕಟ್ಟಿನ ನೆಲೆಗಳನ್ನು ಕಳೆದುಕೊಂಡಿದ್ದರೂ ಖಲಿಫೇಟ್ ಹೋರಾಟಕ್ಕೇನೂ ಧಕ್ಕೆಯಾಗಿಲ್ಲ ಎಂಬ ಪೊಳ್ಳು ಆತ್ಮವಿಶ್ವಾಸ ತೋರಿಸಿಕೊಳ್ಳುವ ಪ್ರಯತ್ನವೂ ಇಲ್ಲಿದೆ. ಹುಂಬತನದ ಪ್ರಯತ್ನಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲವಾದರೂ, ಇನ್ನೂ ಹತ್ತು ವರ್ಷದ ದಾಟದ ಹುಡುಗರು ಇಸ್ಲಾಮಿಕ್ ಸ್ಟೇಟ್ ಪಕ್ಕಾ ಉಗ್ರರಂತೆ ಕಾಣಿಸಿಕೊಂಡಿರುವುದು ತಲೆಕೆಡಿಸಿಕೊಳ್ಳಬೇಕಾದ ವಿಚಾರವೇ ಸರಿ. ಇದರೊಂದಿಗೆ ಭವಿಷ್ಯದ ವಿಶ್ವಶಾಂತಿಗೆ ಕೊಳ್ಳಿಯಿಡಬಲ್ಲ ಉಗ್ರರ ತಯಾರಿ ಜೋರಾಗಿಯೇ ನಡೆದಿದೆ ಎಂದಾಯ್ತು.


ಉಗ್ರ ಸಂಘಟನೆಗಳು ಮಕ್ಕಳನ್ನು ವಿಡಿಯೋಗಳಲ್ಲಿ ಬಳಸಿಕೊಂಡು ಪ್ರಚಾರ ಪಡೆದುಕೊಳ್ಳುವ ವಿಕೃತಿ ಪ್ರದರ್ಶಿಸಿರುವುದು ಇದೇ ಮೊದಲ ಬಾರಿಯೇನಲ್ಲ. ಹಿಂದೆಯೂ ಇಸ್ಲಾಮಿಕ್ ಸ್ಟೇಟ್, ಜಬಾತ್ ಅಲ್ ನುಸ್ರಾ, ತಾಲಿಬಾನ್, ಇಮಾಮ್ ಬುಕಾರಿ ಜಮಾತ್ ಮತ್ತಿತರ ಸಂಘಟನೆಗಳು ಉಗ್ರ ಚಟುವಟಿಕೆಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಉಪಯೋಗಿಸಿಕೊಂಡ ಉದಾಹರಣೆಗಳಿವೆ. ಹಿಂದಿನ ವಿಡಿಯೋಗಳಲ್ಲೂ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುವ ಅಥವಾ ಆತ್ಮಹತ್ಯಾ ಬಾಂಬರ್ ಗಳನ್ನಾಗಿ ಬಳಸುವ ದೃಶ್ಯಗಳಿವೆ. ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ ಇನ್ನೊಂದು ವಿಡಿಯೋದಲ್ಲಿ ಬಾಬುರ್ ಇಸ್ರೇಲವ್ ಆತ್ಮಹತ್ಯಾ ಬಾಂಬರ್ ಆಗಲು ತಯಾರಿಲ್ಲದಿದ್ದರೂ ದೇವರು, ಧರ್ಮದ ಹೆಸರಿನಲ್ಲಿ ಭಾವನಾತ್ಮಕ ಒತ್ತಡಗಳನ್ನು ಹಾಕಲಾಗುತ್ತದೆ. ಬಾಬುರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ವ್ಯಂಗ್ಯ ವಿರೋಧಾಭಾಸಗಳಿಗೆ ಸಾಕ್ಷಿಯಾಗುವಂತೆ ಹಿನ್ನೆಲೆಯಲ್ಲಿ ಭಾವನಾತ್ಮಕ ಅರೇಬಿಕ್ ಸಂಗೀತ ಕೇಳಿಬರುತ್ತದೆ! 2015 ಜನವರಿಯಲ್ಲಿ ಇಸ್ಲಾಮಿಕ್ ಸ್ಟೇಟ್ ವಿಡಿಯೋವೊಂದರಲ್ಲಿ ರಷ್ಯಾದ ಗೂಡಚಾರರು ಎನ್ನಲಾದ ಇಬ್ಬರು ವ್ಯಕ್ತಿಗಳನ್ನು ಕಝಕಿಸ್ತಾನದ ಸಣ್ಣ ಹುಡುಗನೊಬ್ಬ ಗುಂಡಿಕ್ಕಿ ಕೊಲ್ಲುತ್ತಾನೆ.

2015 ಡಿಸೆಂಬರ್ ಅಂತ್ಯದಲ್ಲಿ ಇಮಾಮ್ ಬುಖಾರಿ ಜಮಾತ್ ತೇಲಿಬಿಟ್ಟ ಹದಿನೆಂಟು ನಿಮಿಷ ಅವಧಿಯ ವಿಡಿಯೋ ತುಣುಕಿನಲ್ಲಿ ಆರೇಳು ವರ್ಷದ ಹುಡುಗರಿಂದ ಹದಿಹರೆಯದ ಹುಡುಗರು ಸಿರಿಯಾದ ತರಬೇತಿ ಶಿಬಿರವೊಂದರಲ್ಲಿ ಎಲ್ಲಾ ರೀತಿಯ ಉಗ್ರ ಚಟುವಟಿಕೆಗಳಲ್ಲಿ ಪರಿಣತಿ ಪಡೆಯುತ್ತಿರುವುದನ್ನು ತೋರಿಸಲಾಗಿತ್ತು. ಅರೇಬಿಕ್, ಷರಿಯಾ ಕಾನೂನು ಮತ್ತು ಪ್ರಾಯೋಗಿಕ ಗಣಿತಶಾಸ್ತ್ರದೊಂದಿಗೆ ದೈಹಿಕ ವ್ಯಾಯಾಮಕ್ಕಾಗಿ ಓಟ, ಮಲ್ಲಯುದ್ಧಗಳಲ್ಲೂ ತರಬೇತಿ ನೀಡಲಾಗುತ್ತಿತ್ತು. ಇವೆಲ್ಲವುಗಳ ಜೊತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ನೀಡುವ ದೃಶ್ಯಗಳು ಮಧ್ಯ ಏಷ್ಯಾದಲ್ಲಿ ಭಯಮಿಶ್ರಿತ ಸಂಚಲನ ಮೂಡಿಸಿತ್ತು. ಇದೇ ರೀತಿಯ ಚಟುವಟಿಕೆಗಳನ್ನೊಳಗೊಂಡ, ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಟರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿ ಎಂಬ ಉಗ್ರ ಸಂಘಟನೆ ಚಿತ್ರೀಕರಿಸಿದ ವಿಡಿಯೋದಲ್ಲಿ 'ಲಿಟಲ್ ಮುಜಾಹಿದೀನ್' ಎಂದು ಕರೆಯಲ್ಪಡುವ ಆರಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು .ಕೆ 47 ಮತ್ತು ಪಿ.ಕೆ.ಎಮ್ ಮೆಶಿನ್ ಗನ್ ಗಳನ್ನು ವಿವಿಧ ಭಂಗಿಗಳಲ್ಲಿ ಉಪಯೋಗಿಸುತ್ತಿರುವ ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು!
ಕಿರ್ಗಿಸ್ತಾನದ ವಿಶೇಷ ಗುಪ್ತಚರ ಮಾಹಿತಿಯ ಪ್ರಕಾರ 140ಕ್ಕೂ ಹೆಚ್ಚು ಕಿರ್ಗಿಸ್ತಾನದ ಅಪ್ರಾಪ್ತವಯಸ್ಕರು ಇರಾಕ್ ಮತ್ತು ಸಿರಿಯಾದ ಉಗ್ರ ತರಬೇತಿ ಶಿಬಿರಗಳಲ್ಲಿದ್ದಾರೆ. ಇದರಲ್ಲಿ 85 ಪ್ರತಿಶತಕ್ಕೂ ಹೆಚ್ಚು ಮಕ್ಕಳು ಹತ್ತು ವರ್ಷ ವಯಸ್ಸನ್ನೂ ದಾಟಿಲ್ಲ! ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ ಮಧ್ಯ ಏಷ್ಯಾದ 600ಕ್ಕೂ ಹೆಚ್ಚಿನ ಮಕ್ಕಳು ಉಗ್ರರ ಪಾಳಯದಲ್ಲಿ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಕ್ವಿಲಿಯಂ ಫೌಂಡೇಶನ್ ವರದಿಯ ಪ್ರಕಾರ 50 ಕ್ಕೂ ಹೆಚ್ಚು ಬ್ರಿಟಿಷ್ ಮೂಲದ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣದಲ್ಲಿದ್ದಾರೆ. ಮಕ್ಕಳು ಉಗ್ರ ಸಂಘದಲ್ಲಿದುವ ಪೋರರ ಸಂಖ್ಯೆಯ ಬಗ್ಗೆ ವಿವಿಧ ವರದಿಗಳು ವಿಭಿನ್ನ ಚಿತ್ರಣ ನೀಡುತ್ತವೆ. ಇಸ್ಲಾಮಿಕ್ ಸ್ಟೇಟ್ ಜೊತೆಗೂಡಿ ಖಲಿಫೇಟ್ ಸ್ಥಾಪನೆಗೆ ಪಣ ತೊಟ್ಟು ಬೇರೆ ಬೇರೆ ರಾಷ್ಟ್ರಗಳಿಂದ ವಲಸೆ ಬಂದಿರುವವರ ಮಕ್ಕಳು, ಸ್ಥಳಿಯ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಸೇರಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಕಟ್ಟಿಕೊಂಡಿರುವ ಸೇನೆಗೆ ಅವರಿಟ್ಟಿರುವ ಹೆಸರು 'ಕಬ್ಸ್ ಆಫ್ ಖಲಿಫೇಟ್'!

ಮಧ್ಯ ಪ್ರಾಚ್ಯದಲ್ಲಿರುವ ದುರ್ಬಲ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಅಪ್ರಾಪ್ತರು ಉಗ್ರ ಪ್ರಭಾವಕ್ಕೆ ಒಳಗಾಗುವುದನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ. ಮುಂದುವರಿದಿರುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಮಸ್ಯೆಗೆ ಸಂಬಂಧಿಸಿದಂತೆ ಕಾನೂನುಗಳು ಸಂಪೂರ್ಣ ಯಶಸ್ಸು ಕಾಣುತ್ತಿಲ್ಲ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಉಗ್ರ ಸಂಘ ತೊರೆದು ಮೂಲ ರಾಷ್ಟ್ರಗಳನ್ನು ಸೇರಿಕೊಂಡ ಅಪ್ರಾಪ್ತ ವಯಸ್ಕರನ್ನು ಪುನರ್ವಸತಿ ಒದಗಿಸುವ ಅಥವಾ ಇನ್ನಿತರ ಕ್ರಮಗಳ ಕುರಿತಾಗಿ ವಿಶ್ವ ನಾಯಕರಲ್ಲಿ ಸ್ಪಷ್ಟ ನಿಲುವುಗಳ ಕೊರತೆ ಕಾಣುತ್ತಿದೆ. ಮಕ್ಕಳ ಉಗ್ರ ಸೈನ್ಯದ ವಿಕೃತಿ ಮುಂದಿನ ದಿನಗಳಲ್ಲಿ ವಿಶ್ವದ ಮಾನವ ಹಕ್ಕು ಘೋಷಣೆಗಳು, ಮಾನವ ಹಕ್ಕು ಸಂಘಟನೆಗಳನ್ನು ಗೊಂದಲ ಸಹಿತ ದ್ವಂದ್ವಗಳಿಗೆ ತಳ್ಳುತ್ತದೆ. ಮುಖ್ಯವಾಗಿ ಜಾಗತಿಕ ಸಮುದಾಯದ ನೈತಿಕತೆಗೆ ಈವರೆಗೆ ಕಂಡರಿಯದ ಮಾರಣಾಂತಿಕ ಹೊಡೆತ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ.


(This article was published in Vishwavani newspaper on 27 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ