ಶುಕ್ರವಾರ, ಅಕ್ಟೋಬರ್ 14, 2016

ಬಾಂಗ್ಲಾದಲ್ಲಿ ಅಸ್ಮಿತೆಗಳ ಸಂಘರ್ಷ

ಬಾಂಗ್ಲಾದೇಶಿ ಸಮಾಜ ಬಂಗಾಳಿ ಅಸ್ಮಿತೆ ಮತ್ತು ಇಸ್ಲಾಮಿಕ್ ಅಸ್ಮಿತೆಗಳ ಮಧ್ಯದ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದೆ. ಅಸ್ಮಿತೆಗಳ ಬಿಕ್ಕಟ್ಟು ಬಾಂಗ್ಲಾದಲ್ಲಿರುವ ಸಮುದಾಯಗಳಲ್ಲಿ ವಿಲಕ್ಷಣ ಭೀತಿ ಅಪನಂಬಿಕೆಗಳನ್ನು ಹುಟ್ಟುಹಾಕಿದೆ. ಬಾಂಗ್ಲಾದಲ್ಲಾಗುತ್ತಿರುವ ಸರಣಿ ಹತ್ಯೆಗಳು ಮತ್ತು ವಿಕೃತಿಗಳು ಅಸ್ಮಿತೆಗಳ ಸಂಘರ್ಷದ ಪ್ರತಿಫಲನವಷ್ಟೇ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು,
ಅಲಯನ್ಸ್ ವಿಶ್ವವಿದ್ಯಾಲಯ)

-      ಪ್ರಶಾಂತ್ ಎಸ್. ಪಿ.
(ಅತಿಥಿ ಉಪನ್ಯಾಸಕರು,
ಗೋಪಾಲ್ ರಾಜು ಸರಕಾರಿ ಪ್ರಥಮ ದರ್ಜೆ ಕಾಲೇಜ್)


ಇದೇ ಸೆಪ್ಟೆಂಬರ್ ೩ರಂದು ಬಾಂಗ್ಲಾದ ಇಸ್ಲಾಮಿಕ್ ಪರ ಸಂಘಟನೆ ಜಮಾತ್ - ಇ - ಇಸ್ಲಾಮಿಯ ನಾಯಕ ಮೀರ್ ಕಾಸಿಮ್ ಆಲಿಯನ್ನು ನೇಣು ಹಾಕಲಾಯಿತು. 1971ರ ಬಾಂಗ್ಲಾ ವಿಮೋಮೋಚನಾ ಯದ್ಧಾಪರಾಧಗಳಿಗೆ ಸಂಬಂಧಿಸಿದಂತೆ ೨೦೧೦ರಲ್ಲೇ ಬಂಧನಕ್ಕೊಳಗಾಗಿದ್ದ ಆಲಿಯ ಮೇಲಿನ ಆರೋಪಗಳು 2014ರಲ್ಲಿ ರುಜುವಾತಾಗಿ ಮರಣದಂಡನೆ ವಿಧಿಸಲಾಗಿತ್ತು. ನ್ಯಾಯಾಧಿಕರಣದ ಈ ತೀರ್ಪಿನ ವಿರುದ್ಧ ಆಲಿ ಬಾಂಗ್ಲಾ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರೂ ಸುಪ್ರೀಮ್ ಕೋರ್ಟ್ ಕೂಡ ನ್ಯಾಯಾಧಿಕರಣದ ತೀರ್ಪನ್ನೇ ಎತ್ತಿ ಹಿಡಿದಿತ್ತು. ಸೆಪ್ಟೆಂಬರ್ ೩ರಂದು ಕಾಸಿಮ್ ಆಲಿಯನ್ನು ನೇಣಿಗೇರಿಸುವ ಸಂದರ್ಭದಲ್ಲಿ ರಕ್ಷಣಾ ಪಡೆಗಳು ಬಾಂಗ್ಲಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರಿಕೆ ವಹಿಸಿದ್ದರು. ಮೀರ್ ಕಾಸಿಮ್ ಗೆ ವಿಧಿಸಿದ ಮರಣದಂಡನೆ ಬಾಂಗ್ಲಾದಲ್ಲಿ ಮತ್ತೊಂದು ರಾಜಕೀಯ ಕ್ಷೋಭೆಗೆ ವೇದಿಕೆ ಸಜ್ಜುಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ೨೦೧೦ರಲ್ಲಿ ಸ್ಥಾಪಿಸಿದ ಯುದ್ಧಾಪರಾಧಗಳ ನ್ಯಾಯಾಧಿಕರಣ ಮೀರ್ ಕಾಸಿಮ್ ಒಳಗೊಂಡಂತೆ ಹಲವಾರು ಪ್ರಭಾವಿ ವ್ಯಕ್ತಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದರೆ ಇನ್ನೂ ಕೆಲವರನ್ನು ಗಲ್ಲಿಗೇರಿಸಿದೆ. ಮೀರ್ ಕಾಸಿಮ್ ಗಲ್ಲಿಗೇರುವುದರೊಂದಿಗೆ ಬಾಂಗ್ಲಾ ರಾಜಕೀಯದ ಮೂಲ ಪ್ರಶ್ನೆಯಾದ ಅಸ್ಮಿತೆಯ ಬಿಕ್ಕಟ್ಟು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮೇಲ್ನೋಟಕ್ಕೆ ಈ ಸಮಸ್ಯೆ ನ್ಯಾಯಾಧಿಕರಣಗಳನ್ನು ಶೇಕ್ ಹಸೀನಾ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾರೆಯೇ? ಎಂಬ ಪ್ರಶ್ನೆಯಿಂದ ಇಸ್ಲಾಮಿಕ್ ಮೂಲಭೂತವಾದದವರೆಗೂ ವ್ಯಾಪಿಸಿದಂತೆ ಕಾಣುತ್ತದೆ. ಆದರೆ ಬಂಗಾಳಿ ಮತ್ತು ಇಸ್ಲಾಮಿಕ್ ಅಸ್ಮಿತೆಗಳ ಅಳಿವು ಉಳಿವಿನ ಪ್ರಶ್ನೆ ಬಾಂಗ್ಲಾ ರಾಜಕೀಯದ ಬಹುತೇಕ ತಿರುವುಗಳನ್ನು ನಿರ್ಧರಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ!

ಇಂದು ಬಾಂಗ್ಲಾ ಎದುರಿಸುತ್ತಿರುವ ಇಸ್ಲಾಮಿಕ್ ಮೂಲಭೂತವಾದವೂ ಬಂಗಾಳಿ ಮತ್ತು ಇಸ್ಲಾಮಿಕ್ ಅಸ್ಮಿತೆಗಳ ಇನ್ನೊಂದು ಮಗ್ಗುಲು. ಬಾಂಗ್ಲಾದಲ್ಲಿ ಇಸ್ಲಾಂ ಮೂಲಭೂತವಾದ ಇತ್ತೀಚೆಗೆ ಹುಟ್ಟಿಕೊಂಡಿರುವಂಥದ್ದಲ್ಲ. 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧ ಪೂರ್ವದಲ್ಲೇ ಇದು ರೂಪುಗೂಂಡಿತ್ತು. ಆದರೆ ಇಂದು ಅದು ಮತ್ತಷ್ಟು ಬೆಳೆದಿದೆ, ಬೆಳೆಯುತ್ತಿದೆ ಮತ್ತು ಹೆಚ್ಚು ಸುದ್ದಿಯಲ್ಲಿದೆ. ಬಾಂಗ್ಲಾವನ್ನು ಕೇವಲ ಇಸ್ಲಾಂ ರಾಷ್ಟ್ರವಾಗಿ ಪರಿವರ್ತಿಸುವುದು ಮಾತ್ರವಲ್ಲ ಅದರ ಜೊತೆಗೆ ಇತರ ಸಮುದಾಯಗಳ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ. ಅನ್ಯ ಸಮುದಾಯಗಳ ಬಗ್ಗೆ ಇರುವ ವೈರತ್ವ ಮನೋಭಾವ ಅವರನ್ನು ಭಾರತ ವಿರೊಧಿಗಳನ್ನಾಗಿಯೂ ಪರಿವರ್ತಿಸಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ, ಜಾತ್ಯಾತೀತವಾದಿಗಳ ಮೇಲೆ ಹಲ್ಲೆ ಹಾಗೂ ಅವರ ಹತ್ಯೆ ಸಾಮಾನ್ಯವೆಂಬಂತೆ ನಡೆಯುತ್ತಿದೆ. ಇವುಗಳನ್ನು ದಿಟ್ಟತೆಯಿಂದ ಪ್ರಶ್ನಿಸುವ ಧೈರ್ಯ ಸರಕಾರಕಿಲ್ಲ. ಸರಕಾರದ ಅಸಹಾಯಕತೆ, ಅಸಮರ್ಥತೆಗಳು   ಬಾಂಗ್ಲಾವನ್ನು ಉಗ್ರ ಮೂಲಭೂತವಾದವೆಂಬ ಅನಧಿಕೃತ ಮೃತ್ಯುಕೂಪದಲ್ಲಿ ನಲುಗುವಂತೆ ಮಾಡಿದೆ.

1971ರಲ್ಲಿ ಪಾಕಿಸ್ತಾನದಿಂದ ಬೇರೆಯಾಗಿ ತನ್ನದೇ ಸ್ವತಂತ್ರ ದೇಶ ರೂಪಿಸಿಕೊಳ್ಳಲು ಹೊರಟ ಪೂರ್ವ ಪಾಕಿಸ್ತಾನಕ್ಕೆ ಭಾರತ ಸಕಲ ರೀತಿಯಲ್ಲಿ ನೆರವು ನೀಡಿತ್ತು. ತದನಂತರ ಭಾರತೀಯ ಸೈನ್ಯ ಪಾಕಿಸ್ತಾನೀ ಸೇನೆಯನ್ನು ಬಗ್ಗುಬಡಿಯುವುದರೊಂದಿಗೆ ಪೂರ್ವ ಪಾಕಿಸ್ತಾನ ಸ್ವತಂತ್ರಗೊಂಡು ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರ ವಿಶ್ವ ರಾಜಕೀಯಕ್ಕೆ ಪ್ರವೇಶ ಪಡೆದಿತ್ತು. ಬಾಂಗ್ಲಾ ವಿಮೋಚನೆಗೆ ಭಾರತ ನೀಡಿದ ಸಹಕಾರದ ಹಿಂದಿದ್ದ ಕೆಲವೊಂದು ಲೆಕ್ಕಾಚಾರಗಳನ್ನು ಜಾರಿಗೊಳಿಸುವಲ್ಲಿ ಇಸ್ಲಾಂ ಮೂಲಭೂತವಾದ ಭಾರತಕ್ಕೆ ಮುಳುವಾಗಬಹುದು. ಬಾಂಗ್ಲಾದೇಶದಲ್ಲಿ ಭಾರತದ ಹಿತಾಸಕ್ತಿಗಳಿಗೆ ಇಸ್ಲಾಮಿಕ್ ಮೂಲಭೂತವಾದ ಯಾವತ್ತಿದ್ದರೂ ಕಂಟಕಪ್ರಾಯ. ಬಾಂಗ್ಲಾ ವಿಮೋಚನ ಯುದ್ದದಲ್ಲಿ ಪಾಕಿಸ್ತಾನದೊಂದಿಗೆ ಕೈ ಜೊಡಿಸಿದ್ದ ಮೂಲಭೂತವಾದಿಗಳಿಗೆ, ತದನಂತರ ಪಾಕಿಸ್ತಾನ ಆಸರೆ ನೀಡಿತ್ತು. ಪಾಕಿಸ್ತಾನದಿಂದ ಪ್ರಚೋದಿತವಾದ ಈ ಗುಂಪು ಬಾಂಗ್ಲಾ ವಿಮೋಚನೆಯಲ್ಲಿ ಮುಖ್ಯಪಾತ್ರ ವಹಿಸಿದ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇದೇ ವೇಳೆ ಬಾಂಗ್ಲಾದೇಶ ಹಲವಾರು ರಾಜಕೀಯ ಪ್ರಹಸನಗಳಿಗೆ ಸಾಕ್ಷಿಯಾಯಿತು. 1971ರಲ್ಲಿ ನಡೆದ ಬಾಂಗ್ಲಾದೇಶಿ ವಿಮೋಚನೆಯ ಹಿಂದೆಯೂ ಬಂಗಾಳಿ ಅಸ್ಮಿತೆ ಪ್ರಮುಖ ಪಾತ್ರ ನಿರ್ವಹಿಸಿತ್ತು. ಪಶ್ಚಿಮ ಪಾಕಿಸ್ತಾನದ ಮುಸ್ಲಿಮ್ ಲೀಗನ್ನು ಧಿಕ್ಕರಿಸಿ ಬಂಗಾಳಿ ಅಸ್ಮಿತೆಯನ್ನು ಮುಂದಿಟ್ಟುಕೊಂಡೇ ಆಲ್ ಪಾಕಿಸ್ತಾನ್ ಅವಾಮಿ ಮುಸ್ಲಿಂ ಲೀಗ್ ಬಾಂಗ್ಲಾದಲ್ಲಿ ಅಸ್ಥಿತ್ವ ಕಂಡುಕೊಂಡಿತ್ತು.  ಇದೇ ಪಕ್ಷ ಇವತ್ತು ಬಾಂಗ್ಲಾದೇಶ ಅವಾಮಿ ಲೀಗ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಾಂಗ್ಲಾ ನಿರ್ಮಾತೃ ಶೇಕ್ ಮುಜಿಬುರ್ ರಹಮಾನ್ ರ ಸೆಕ್ಯೂಲರ್ ಕನಸನ್ನು ಚೂರು ಮಾಡಿದ ಜಿಯಾ ರಹಮಾನ್ 1988 ರಲ್ಲಿ ಸಂವಿಧಾನಕ್ಕೆ ೮ನೇ ತಿದ್ದುಪಡಿ ತಂದು ಇಸ್ಲಾಂ ರಾಷ್ಟ್ರ ಎಂದು ಘೋಷಿಸುತ್ತಾರೆ. ಆದರೆ ಇದು ಬೆಂಗಾಳಿ ಅಸ್ಮಿತೆಯನ್ನು ಬಯಸಿದ್ದವರ ವಿರೋಧಕ್ಕೆ ಗುರಿಯಾಗಿತ್ತು. ಇದಲ್ಲದೆ ಅವಾಮಿ ಲೀಗ್ ಅಧಿಕಾರದಲ್ಲಿದ್ದಾಗ ನಿಷೇಧಕ್ಕೊಳಗಾದ ಮೂಲಭೂತವಾದಿ ಸಂಘಟನೆಗಳ ಮೇಲಿನ ನಿಷೇದವನ್ನು ರದ್ದುಗೊಳಿಸಿ, ರಾಜಾಶ್ರಯ ನೀಡಲಾಯಿತು. 2010 ರಲ್ಲಿ ಹುಟ್ಟಿಕೊಂಡ ಮತ್ತೊಂದು ಇಸ್ಲಾಂ ಮೂಲಭೂತವಾದ ಸಂಘಟನೆಯೆಂದರೆ 'ಹಿಫಾಜತ್-ಇ-ಇಸ್ಲಾಂ'. ಈ ಸಂಘಟನೆಯ ಹುಟ್ಟು ಇಸ್ಲಾಂ ಮೂಲಭೂತವಾದಕ್ಕೆ ಆನೆ ಬಲವನ್ನು ತಂದು ಕೊಟ್ಟಿತು. ಶಿಕ್ಷಣದ ಜಾತ್ಯಾತೀಕರಣ ಮತ್ತು ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡುವ ಕಾಯ್ದೆಯನ್ನು ವಿರೋಧಿಸುತ್ತ ಹುಟ್ಟಿಕೊಂಡ ಈ ಸಂಘಟನೆ ಇದೀಗ ಬಾಂಗ್ಲಾದಲ್ಲಿ ಬಂಗಾಳಿ ಅಸ್ಮಿತೆಯನ್ನು ಬಯಸಿದವರ ಮಾರಣ ಹೋಮವನ್ನೇ ತನ್ನ ಕಾಯಕ ಮಾಡಿಕೊಂಡಿದೆ! ಬ್ಲಾಗ್ ಬರಹಗಾರರು, ಪತ್ರಕರ್ತರು ಹಾಗೂ ವಿಚಾರವಾದಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ಸಂಘಟನೆಯ ಉದ್ಧಟತನ ಅದೆಷ್ಟರ ಮಟ್ಟಿಗಿದೆಯೆಂದರೆ, ಸರಕಾರದ ಮುಂದೆ 19 ಅಂಶಗಳನ್ನು ಮುಂದಿಟ್ಟಿದ್ದು ಅವುಗಳ ಈಡೇರಿಕೆಗೆ ಬೃಹತ್ ಪ್ರತಿಭಟನೆಯನ್ನು ಕೂಡ ನಡೆಸಿತ್ತು! ಈ ಎಲ್ಲಾ ಬೆಳವಣಿಗೆಗಳು ಬಾಂಗ್ಲಾದಲ್ಲಿ ಮೂಲಭೂತವಾದವನ್ನು ಇನ್ನಷ್ಟು ಭದ್ರವಾಗಿಸಿ, ಬಾಂಗ್ಲಾದಲ್ಲೊಂದು ಭೂಗತ ಅಧಿಕಾರಶಾಹಿಯನ್ನೇ ನಿರ್ಮಿಸಿಕೊಂಡಿದೆ! ಮುಜಿಬುರ್ ರಹಮಾನ್ ಬಂಗಾಳಿ ಅಸ್ಮಿತೆಯ ಹೆಸರಿನಲ್ಲಿ ಕಟ್ಟಿದ ಈ ಪಕ್ಷ ಹಲವಾರು ರಾಜಕೀಯ ಏಳು ಬೀಳುಗಳನ್ನು ಕಂಡು ಪ್ರಸಕ್ತ ಬಾಂಗ್ಲಾದಲ್ಲಿ ಶೇಕ್ ಹಸೀನಾ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಅಸ್ಮಿತೆಯ ಸಮಸ್ಯೆ ಇನ್ನಷ್ಟು ಸಂಕೀರ್ಣಗೊಂಡಿದೆ.

15 ಜನವರಿ 2013ರಂದು ಬಾಂಗ್ಲಾದೇಶದ ಪ್ರಖ್ಯಾತ ನಾಸ್ತಿಕವಾದಿ ಬ್ಲಾಗರ್ ಆಸಿಫ್ ಮೊಹಿಯುದ್ದೀನ್ ಮೇಲೆ ಹಂತಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸುತ್ತದೆ. ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ಅನ್ಸಾರುಲ್ಲಾಹ್ ಬಾಂಗ್ಲಾ ಈ ಹಲ್ಲೆಯ ಹೊಣೆ ಹೊತ್ತುಕೊಂಡಿತ್ತು. ಮುಂದೆ ಮೊಹಿಯುದ್ದೀನ್ ಅವರೇ ಹೇಳಿಕೊಂಡಿರುವಂತೆ ಅವರು ಹಲ್ಲೆಕೋರರನ್ನು ಜೈಲಿನಲ್ಲಿ ಭೇಟಿಯಾದಾಗ, "ನೀನು ಇಸ್ಲಾಂ ತೊರೆದ ಕಾರಣ, ನೀನು ಮುಸ್ಲಿಂ ಅಲ್ಲ. ಕುರಾನ್ ಟೀಕಿಸಿದ ಪರಿಣಾಮ ನೀನು ಎದುರಿಸಬೇಕಾಯಿತು" ಎಂದಿದ್ದಾರೆ. 15 ಫೆಬ್ರವರಿ 2013ರಲ್ಲಿ ಮತ್ತೊಬ್ಬ ನಾಸ್ತಿಕ ಬ್ಲಾಗರ್ ಅಹ್ಮದ್ ರಜಿಬ್ ಹೈದರ್ ರಕ್ತಸಿಕ್ತ ಶವ ಅವರ ಮನೆ ಮುಂಭಾಗದಲ್ಲಿ ಬಿದ್ದಿತ್ತು. ಇದಕ್ಕೆ ಕಾರಣ, ಹೈದರ್ ಸಂಘಟಿಸಿದ್ದ ಶಾಭಾಗ್ ಚಳುವಳಿ ಮತ್ತು ಈ ಮೂಲಕ ಜಮಾತ್- ಇ- ಇಸ್ಲಾಮಿ ಪಕ್ಷದ ವಿರೋಧ ಕಟ್ಟಿಕೊಂಡಿದ್ದು! ಶಾಭಾಗ್ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಸುನ್ನ್ಯೂರ್ ರಹಮಾನ್ ಮೇಲೆ 7 ಮಾರ್ಚ್ 2013ರಂದು ರಾತ್ರಿ ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬುರ್ಖಾ ಹಾಕುವುದನ್ನು ನಿಷೇಧಿಸಿದ್ದ ರಾಜ್ ಶಾಹಿ ವಿಶ್ವವಿದ್ಯಾಲಯದ  ಪ್ರೊಫೆಸರ್ ಶಫಿಯುಲ್ ಇಸ್ಲಾಂ ಅವರನ್ನು 15 ನವೆಂಬರ್ 2014ರಂದು ಹತ್ಯೆ ಮಾಡಲಾಗುತ್ತದೆ. ಮುಂದೆ ಅನ್ಸಾರ್ ಅಲ್ ಇಸ್ಲಾಂ ಬಾಂಗ್ಲಾದೇಶ್ -2 ಎಂಬ ಸಂಘಟನೆ ಈ ಹತ್ಯೆಯ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. 26 ಫೆಬ್ರವರಿ 2015ರಂದು ಬಾಂಗ್ಲಾದೇಶದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಮುಕ್ತೊ-ಮೋನಾ (ಮುಕ್ತ ಮನಸ್ಸು) ಎಂಬ ಬ್ಲಾಗ್ ಸ್ಥಾಪಕ ಅವಿಜಿತ್ ರಾಯ್ ದಾರುಣವಾಗಿ ಹತ್ಯೆಯಾಗುತ್ತಾರೆ. ಮುಕ್ತೊ-ಮೋನಾ ಬ್ಲಾಗ್ ಮೂಲಕ ಜಾತ್ಯತೀತವಾದ ಮತ್ತು ಮಾನವತಾವಾದಿ ಬರಹಗಳನ್ನು ಉತ್ತೇಜಿಸುತ್ತಿದ್ದ ಅವಿಜಿತ್ ಅಮಾನವೀಯ ಅಂತ್ಯ ಕಾಣಬೇಕಾಯಿತು. ಅವಿಜಿತ್ ಹತ್ಯೆ ಮಾದರಿಯಲ್ಲೇ ಇನ್ನೊಬ್ಬ ಬ್ಲಾಗರ್ ಒಯಾಸಿಕರ್ ರಹಮಾನ್ ಎಂಬ ಬ್ಲಾಗರ್ ಹತ್ಯೆ ಢಾಕಾದಲ್ಲಿ ನಡೆಯುತ್ತದೆ. ಮುಕ್ತೊ-ಮೋನಾ ಬ್ಲಾಗ್ ನಲ್ಲಿ ಬರಹಗಳನ್ನು ಪ್ರಕಟಿಸುತ್ತಿದ್ದ ಬ್ಲಾಗರ್ ಅನಂತ ಬಿಜೊಯ್ ದಾಸ್ ಮೇ 2015ರಲ್ಲಿ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾಗುತ್ತಾರೆ. ಮುಂದೆ ನಿಲೊಯ್ ನೀಲ್, ಫೈಜಲ್ ಅರ್ಫಿನ್ ದಿಪನ್, ನಾಝಿಮುದ್ದೀನ್ ಸಮದ್, ವಾಶಿಕುರ್ ರೆಹಮಾನ್..... ಹೀಗೆ ಹಲವಾರು ತಲೆಗಳು ಇಸ್ಲಾಂ ಮೂಲಭೂತವಾದಕ್ಕೆ ಬಲಿಯಾಗಬೇಕಾಗುತ್ತದೆ.

ಬಾಂಗ್ಲಾದಲ್ಲಿ ಈಗ ನಡೆಯುತ್ತಿರುವುದು ಅಕ್ಷರಶಃ ಅಸ್ಮಿತೆಯ ಹೋರಾಟ; ಬಂಗಾಳಿ ಅಸ್ಮಿತೆ ಮತ್ತು ಇಸ್ಲಾಂ ಅಸ್ಮಿತೆಗಳ ನಡುವಿನ ಈ ತಿಕ್ಕಾಟ ಬಾಂಗ್ಲಾವನ್ನು ಆಂತರಿಕವಾಗಿ ಜರ್ಜರಿತವನ್ನಾಗಿಸಿದ್ದಷ್ಟೇ ಅಲ್ಲದೇ ದಕ್ಷಿಣ ಏಷ್ಯಾದ ರಾಜಕೀಯ ವಾತಾವರಣದ ಮೇಲೂ ಗಮನಾರ್ಹ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಇಸ್ಲಾಂ ಬೋಧನೆಯನ್ನು ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಯು ಇದರಲ್ಲಿ ಒಳಗೊಂಡಿದೆ. ಓರ್ವ ಬಾಂಗ್ಲಾ ಮುಸ್ಲಿಂ ಬೆಂಗಾಳಿ ಅಸ್ಮಿತೆಯಲ್ಲಿ ಬದುಕುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ಲಾಂ ಮೂಲಭೂತವಾದವನ್ನು ಹತ್ತಿಕ್ಕುವ ಇಚ್ಚಾಶಕ್ತಿಯೂ ಸರಕಾರಕ್ಕಿಲ್ಲ ಮತ್ತು ಬಾಂಗ್ಲಾ ಸರಕಾರಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವುದೂ ತಪ್ಪು ಎಂದು ಜನ ಈಗಾಗಲೇ ತೀರ್ಮಾನಿಸಿಕೊಂಡಿರುವಂತಿದೆ! ಈಗಾಗಲೇ ಸಂವಿಧಾನದಿಂದ 'ಜಾತ್ಯತೀತ' ಎಂಬ ಪದವನ್ನು ಕಿತ್ತು ಹಾಕಲಾಗಿದೆ. ಅವಾಮಿ ಲೀಗ್ ಆರಂಭದಿಂದಲೂ ಜಾತ್ಯತೀತವಾಗಿಯೇ ಗುರುತಿಸಿಕೊಂಡಿದ್ದು, ಈಗ ಸ್ವತಃ ತಾನೇ ಅಧಿಕಾರದಲ್ಲಿದ್ದರೂ ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ 'ಜಾತ್ಯತೀತ' ಪದವನ್ನು ಸೇರಿಸುವಲ್ಲಿ ಹಿಂದೇಟು ಹಾಕುತ್ತಿದೆ. ಬಾಂಗ್ಲಾ ಮೂಲಭೂತವಾದ ಕೇವಲ ಸಂವಿಧಾನಿಕ ತಿದ್ದುಪಡಿಯಿಂದ ಸರಿದಾರಿಗೆ ಬರುತ್ತದೆ ಎಂದು ಅಪೇಕ್ಶಿಸುವುದೂ ನಮ್ಮ ಮೂರ್ಖತನವಾದೀತು. ಬಾಂಗ್ಲಾದಲ್ಲಿನ ಉಗ್ರ ಮೂಲಭೂತವಾದವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಬಾಂಗ್ಲಾದ ಈ ಆಂತರಿಕ ಸಮಸ್ಯೆ ಭಾರತದ ಪಾಲಿಗೂ ಮಗ್ಗುಲ ಮುಳ್ಳೇ ಸರಿ. ಇನ್ನೊಂದೆಡೆ, ಆರಂಭದಲ್ಲಿ ಭಾರತದಿಂದ ಸಹಾಯ ಪಡೆದು ಅಸ್ಥಿತ್ವಕ್ಕೆ ಬಂದ ಬಾಂಗ್ಲಾವನ್ನು ರಾಷ್ಟ್ರವಾಗಿ ಅಂಗೀಕರಿಸಲು ನಿರಾಕರಿಸಿದ ಚೀನಾ ತದನಂತರ ತನ್ನ ಮಿಲಿಟರಿ ಉತ್ಪನ್ನಗಳಿಗೆ ಬಾಂಗ್ಲಾವನ್ನು ಮಾರುಕಟ್ಟೆಯಾಗಿ ಮಾಡಿಕೊಂಡಿತು. ಇನ್ನೊಂದೆಡೆ ಪಾಕಿಸ್ತಾನ ಬಾಂಗ್ಲಾಕ್ಕೆ ಮತ್ತೆ ಹತ್ತಿರವಾಗುತ್ತಿದೆ. ಇದಲ್ಲದೆ ಆತಂಕಕಾರಿ ವಿಷಯವೇನೆಂದರೆ ಬಾಂಗ್ಲಾದಲ್ಲಿ ಇಸ್ಲಾಂ ಮೂಲಭೂತವಾದಿಗಳನ್ನು ಬೆಳೆಸುತ್ತಿರುವುದು ಕೂಡ ಪಾಕಿಸ್ತಾನ್! ಇವೆಲ್ಲವುಗಳ ಜೊತೆ ವಿಶ್ವದ ವಿನಾಶಕ್ಕೆ ಪಣ ತೊಟ್ಟಿರುವ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಕೂಡ ಮೂಲಭೂತವಾದಿಗಳು ನಂಟು ಬೆಳೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ .

ದ್ವಂದ್ವ ನೀತಿ ಅನುಸರಿಸುತ್ತಿರುವ ಬಾಂಗ್ಲಾ ಸರಕಾರ, ಆಕ್ರಮಣಕಾರಿ ಮೂಲಭೂತವಾದಗಳ ಜೊತೆಗೆ ಗೊಂದಲದ ಗೂಡಾಗಿರುವ ಬಾಂಗ್ಲಾ ಜನತೆಯೂ ಕೂಡ ಬಾಂಗ್ಲಾದ ಇವತ್ತಿನ ಬಿಕ್ಕಟ್ಟಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣಕರ್ತರೇ. ಮೀರ್ ಕಾಸಿಮ್ ಆಲಿ ಮರಣದಂಡನೆ ಬಾಂಗ್ಲಾದ ಸಮುದಾಯಗಳಲ್ಲಿ ಹೊಸ ಗ್ರಹಿಕೆಗಳನ್ನು ಪ್ರೇರೇಪಿಸಿದಂತಾಗಿದೆ. ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಶೇಕ್ ಹಸೀನಾ ತನ್ನ ರಾಜಕೀಯ ವಿರೋಧಿಗಳನ್ನು ನ್ಯಾಯಾಧಿಕರಣದ ಮೂಲಕ ಕಾನೂನು ಬಾಹಿರವಾಗಿ ನಿವಾರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. ಮೂಲಭೂತವಾದಿಗಳು ಮೀರ್ ಕಾಸಿಮ್ ಮರಣದಂಡನೆಯ ವಿರುದ್ಧ ಉಗ್ರವಾಗಿ ಪ್ರತಿಭಟಿಸುತ್ತಿದ್ದರೆ, ಸಾಮಾನ್ಯ ಜನತೆ ಸರಕಾರ ಮತ್ತು ಮೂಲಭೂತವಾದಿಗಳ ಮಧ್ಯೆ ಹೊಯ್ದಾಡುತ್ತಾ, ಮುಂದಿನ ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದಾರೆ. ಈ ಸಮಸ್ಯೆಗಳ ಮೂಲವಾದ ಅಸ್ಮಿತೆಗಳ ಸ್ಂಕೀರ್ಣತೆಯನ್ನು ಅರ್ಥೈಸಿಕೊಳ್ಳದೆ ಪರಿಹಾರ ಕಂಡುಕೊಳ್ಳುವುದು ವ್ಯರ್ಥ ಪ್ರಯತ್ನಕ್ಕೆ ಒಂದು ಆಕರ್ಷಕ ಉದಾಹರಣೆಯಾಗಬಲ್ಲುದೇ ಹೊರತು ಪರಿಹಾರವಲ್ಲ..



This article was published in Hosa Diganta newspaper on 04 October 2016)







      KEERTHIRAJ (keerthiraj092@gmail.com)
      Assistant Professor
International Relations and Political Science
Alliance University, Bangalore. 














PRASHANTH S. P. (prashsp92@gmail.com)
Guest Lecturer,
Political Science
Dr. S. Gopalaraju Govt. First Grade College,
Anekal

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ