ಶುಕ್ರವಾರ, ಜನವರಿ 6, 2017

ಪಾಕಿಸ್ತಾನದಲ್ಲೊಂದು ಉಗ್ರ ನಿಗ್ರಹ ಪ್ರಹಸನ

ಭಯೋತ್ಪಾದನಾ ನಿಗ್ರಹದ ವಿಷಯಕ್ಕೆ ಬಂದಾಗ ಒಳ್ಳೆಯ ಉಗ್ರರು ಮತ್ತು ಕೆಟ್ಟ ಉಗ್ರರು ಎಂಬ ವಿಚಿತ್ರ ವಿಂಗಡನೆಯೊಂದಿಗೆ, ಒಳ್ಳೆಯ ಉಗ್ರರರನ್ನು ನಾಶಮಾಡಮಾಡಬಾರದು ಎಂಬ ಹಾಸ್ಯಾಸ್ಪದ ತರ್ಕ ಮಂಡಿಸುವ ಪಾಕಿಸ್ತಾನದಿಂದ ಉಗ್ರ ನಿಗ್ರಹವನ್ನು ಅಪೇಕ್ಷಿಸುವುದೂ ಮೂರ್ಖತನ.
-  ಕೀರ್ತಿರಾಜ್

ಭಯೋತ್ಪಾದಕರ ತೊಟ್ಟಿಲು ಪಾಕಿಸ್ತಾನವೂ ಭಯೋತ್ಪಾದಕರ ನಿಗ್ರಹಕ್ಕಾಗಿ ಯೋಜನೆಯೊಂದನ್ನು ಹಾಕಿಕೊಂಡಿತ್ತು! ನನಸಾಗದ ಕನಸು ಅಥವಾ ಪಾಕಿಸ್ತಾನದ ಪರ ಪ್ರಚಾರ ಎಂದು ನೀವಂದುಕೊಳ್ಳಬಹುದು. ಆದರೂ ಇಂಥದ್ದೊಂದು ದ್ವಂದ್ವ ಎರಡು ವರ್ಷಗಳ ಹಿಂದೆ ನಡೆದಿತ್ತು!  2014ರಲ್ಲಿ ತಾಲಿಬಾನಿ ಉಗ್ರರು ಪಾಕಿಸ್ತಾನದ ಸೈನಿಕ ಶಾಲೆಯೊಂದಕ್ಕೆ ದಾಳಿ ನಡೆಸಿ 133 ಮಕ್ಕಳನ್ನು ಕೊಂದುಹಾಕಿದಾಗ, ಮೊದಲ ಬಾರಿಗೆ ಉಗ್ರರ ಮೇಲೆ ಮಮತೆ ತೋರಿ, ಉಗ್ರರಿಗೆ ಸಕಲ ಸೌಲಭ್ಯಗಳನ್ನೂ ನೀಡುತ್ತಿದ್ದ ಪಾಕಿಸ್ತಾನದ ತಲೆಯ ಮೇಲೆ ಭಯೋತ್ಪಾದಕರು ಸರಿಯಾಗಿಯೇ ಮೊಟಕಿದ್ದರು! ರಾಜಕೀಯ ಇಚ್ಚಾಶಕ್ತಿಯ ವಿಷಯ ಒತ್ತಟ್ಟಿಗಿರಿಸಿದರೂ, ಜನಾಕ್ರೋಶ ಶಮನ ಮಾಡುವ ಉದ್ದೇಶದಿಂದ ಪಾಕಿಸ್ತಾನ ಉಗ್ರರ ವಿರುದ್ಧ ಕಠೋರ ನಿಲುವು ವ್ಯಕ್ತಪಡಿಸಿತ್ತು. ಡಿಸೆಂಬರ್ 25, 2014ರದು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹಕ್ಕೆ ಕಾರ್ಯ ಯೋಜನೆಯೊಂದನ್ನು ಹಾಕಿಕೊಂಡಿತ್ತು. ರಾಷ್ಟ್ರೀಯ ಕಾರ್ಯ ಯೋಜನೆ (National Action Plan - NAP) ಎಂಬ ಹೆಸರಿನಲ್ಲಿ ಉಗ್ರದಮನಕ್ಕೆ ಪಾಕ್ ಸರಕಾರ ಯೋಜನೆಯೊಂದನ್ನು ರೂಪಿಸಿತ್ತು. ಈ ಅತ್ಯುತ್ಸಾಹದ ನ್ಯಾಪ್ ಕಾರ್ಯಯೋಜನೆ ಸರಿಯಾಗಿ ಎರಡು ವರ್ಷಗಳ ಬಳಿಕ ಎಲ್ಲಿಯವರೆಗೆ ತಲುಪಿದೆ? ಎಂಬ ಪ್ರಶ್ನೆಗೆ ಸಿಗುವ ಉತ್ತರ ನಿರಾಶಾದಾಯಕ. ಇವತ್ತಿಗೆ ಇದೊಂದು ಅವಾಸ್ತವಿಕ, ಅಪೂರ್ಣ, ಅವಿಶ್ವಸನೀಯ ಯೋಜನೆಯೆಂದು ಪರಿಗಣಿಸದೆ ಬೇರೆ ವಿಧಿಯಿಲ್ಲ.

ನ್ಯಾಪ್ ಇಪ್ಪತ್ತು ಅಂಶಗಳ ಯೋಜನೆಯಾಗಿದ್ದು, ಭಯೋತ್ಪಾದಕರಿಗೆ ಮರಣದಂಡನೆ, ವಿಶೇಷ ಮಿಲಿಟರಿ ನ್ಯಾಯಾಲಯಗಳ ಸ್ಥಾಪನೆ, ದ್ವೇಷ ಬಿತ್ತುವ ಭಾಷಣಗಳ ನಿಷೇಧ, ಭಯೋತ್ಪಾದನೆಯ ಆರ್ಥಿಕ ಮೂಲಗಳ ನಾಶ, ಭಯೋತ್ಪಾದನಾ ನಿಗ್ರಹ ದಳವೊಂದರ ಸ್ಥಾಪನೆ, ಮದರಸಗಳನ್ನು ನೋಂದಾಯಿಸುವುದು ಮತ್ತು ಹಿಡಿತದಲ್ಲಿಟ್ಟುಕೊಳ್ಳುವುದು, ಭಯೋತ್ಪಾದನೆಯನ್ನು ಬೆಂಬಲಿಸುವ ಮಾಧ್ಯಮಗಳ ನಿಷೇಧ ಇನ್ನಿತರ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಯೋಜನೆ.

Image may contain: 1 personಮೊದಲನೆಯದಾಗಿ ನ್ಯಾಪ್ ಯೋಜನೆಯಲ್ಲಿ ಮರಣದಂಡನೆಯ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ವಿಚಾರವೇ ವಿವಾದಕ್ಕೊಳಗಾಗಿತ್ತು. ಯೋಜನೆ ಅನುಷ್ಠಾನಗೊಂಡ 13 ತಿಂಗಳುಗಳೊಳಗೆ 345 ಜನ ಮರಣದಂಡನೆಗೊಳಗಾಗಿ, ಪಾಕಿಸ್ತಾನ ಈ ವಿಚಾರದಲ್ಲಿ ವಿಶ್ವಕ್ಕೆ ದ್ವಿತೀಯ ಸ್ಥಾನವನ್ನಲಂಕರಿಸಿತ್ತು! ಇವತ್ತಿಗೆ ಈ ಸಂಖ್ಯೆ 419ಕ್ಕೆ ತಲುಪಿದೆ. ಈ ನಿರಂತರ ಮರಣದಂಡನೆಗಳು ನಾಗರಿಕ ಸಮಾಜ ಮತ್ತು ಮಾನವ ಹಕ್ಕು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು. ಮರಣ ದಂಡನೆಗೆ ಒಳಪಡಿಸಿದವರಲ್ಲಿ ಕೇವಲ 2 ಪ್ರತಿಶತ ಜನ ಭಯೋತ್ಪಾದಕರಾಗಿದ್ದರು ಎನ್ನುವುದನ್ನು ಈ ಮಧ್ಯೆ ಬೆಳಕಿಗೆ ಬಂದ ವರದಿಯೊಂದು ಬಹಿರಂಗ ಪಡಿಸಿದ್ದು ಪಾಕ್ ಸರಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಹಾಗಾದರೆ ಪಾಕಿಸ್ತಾನ ಇನ್ನಿಲ್ಲದಂತೆ ಮಾಡಿದ ಉಳಿದ 98 ಪ್ರತಿಶತ ಜನ ಯಾರು? ಎಂಬ ಪ್ರಶ್ನೆ ಹೊಸ ರಾಜಕೀಯ ಸಂಕೀರ್ಣತೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದರೊಂದಿಗೆ ಈ ಪ್ರಕರಣಗಳಿಗೋಸ್ಕರವೇ ವಿಶೇಷ ಮಿಲಿಟರಿ ನ್ಯಾಯಾಲಯಗಳ ಸ್ಥಾಪನೆಯಾದರೂ, ಅವುಗಳು ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗುತ್ತವೆ. ಉದಾಹರಣೆಗೆ ಸಿಂಧ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಗಳಲ್ಲೇ 3,360 ಇತ್ಯರ್ಥವಾಗದೆ ಉಳಿದ ಪ್ರಕರಣಗಳು ಒಂದೆಡೆಯಾದರೆ, ವರ್ಷಕ್ಕೆ 40 ಪ್ರಕರಣಗಳ ಇತ್ಯರ್ಥಕ್ಕೆ ಹೆಣಗಾಡುವ ಮಿಲಿಟರಿ ನ್ಯಾಯಾಲಯಗಳು ಇನ್ನೊಂದೆಡೆ! 

ನ್ಯಾಪ್ ಕಾರ್ಯಯೋಜನೆಯಂತೆ, ಉಗ್ರ ಕಾರ್ಯಾಚರಣೆಗಳಿಗೆ ಕಡಿವಾಣ ಹಾಕಲು ಸರಕಾರ ಸುಮಾರು 63 ಉಗ್ರ ಸಂಘಟನೆಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿದ್ದರೂ, ಇದರಿಂದ ಪರಿಣಾಮಕಾರಿ ಬದಲಾವಣೆಗಳೇನೂ ಆಗಿಲ್ಲ. ಈ ನಿಷೇಧಿತ ಪಟ್ಟಿ ಬಹಳಷ್ಟು ಹಿಂದಿನಿಂದಲೇ ಅಸ್ತಿತ್ವದಲ್ಲಿದ್ದು, ನ್ಯಾಪ್ ನಿಷೇಧಿತ ಪಟ್ಟಿಯಲ್ಲಿ ಕೇವಲ ಒಂದು ಸಂಘಟನೆ ಹೆಚ್ಚಿನದಾಗಿ ಸೇರಿಕೊಂಡಿತ್ತು, ಅದೇ ಇಸ್ಲಾಮಿಕ್ ಸ್ಟೇಟ್! ಈ ವರ್ಷ ಮತ್ತೆರಡು ಹೊಸ ಉಗ್ರ ಸಂಘಟನೆಗಳ ಸೇರ್ಪಡೆ ಹೊರತು ಪಡಿಸಿದರೆ, ಈ ಪಟ್ಟಿಯಿಂದ ಭಯೋತ್ಪಾದನಾ ನಿಗ್ರಹದತ್ತ ಗುಲಗಂಜಿಯ ಬೆಳವಣಿಗೆಯೂ ಆಗಿಲ್ಲ. ನ್ಯಾಪ್ ನಿಬಂಧನೆಗಳ ಪ್ರಕಾರ ಈ ಉಗ್ರ ಸಂಘಟನೆಗಳಿಗೆ ಸೇರಿದ ಉಗ್ರರ ಮುಕ್ತ ಚಲನೆ ಮತ್ತು ಸಂಪರ್ಕಗಳನ್ನು ನಿರ್ಬಂಧಿಸುತ್ತದೆ. ಆದರೆ ಇವತ್ತಿಗೂ ಉಗ್ರರೆಲ್ಲಾ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡು ತಮ್ಮ ಚಟುವಟಿಕೆಗಳನ್ನು ನಿರಾತಂಕವಾಗಿ ಮುಂದುವರಿಸಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿರುವ ಲಷ್ಕರ್-ಎ-ತಯ್ಬಾ ಸಂಘಟನೆ, ನಿಷೇಧಕ್ಕೊಳಗಾಗಿದ್ದರೂ, ಇವತ್ತಿಗೂ ಈ ಸಂಘಟನೆ ಜಮಾತ್-ಉದ್-ದಾವಾ ಎಂಬ ಹೆಸರಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಜೈಶ್-ಎ-ಮಹಮ್ಮದ್ ಎಂಬ ಉಗ್ರ ಸಂಘಟನೆ ಖುದಮ್-ಉಲ್-ಇಸ್ಲಾಂ ಹೆಸರಿನಲ್ಲಿ ವಿಜ್ರಂಭಿಸುತ್ತಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯೊಂದರಲ್ಲಿ ಉಗ್ರ ಗುಂಪಿನ ಮುಖಂಡ ಮಸ್ರೂರ್ ನವಾಜ್ ಜಾಂಗವಿ ಜಯಗಳಿಸಿದಾಗ ಪಾಕಿಸ್ತಾನ ಉಗ್ರ ನಿಗ್ರಹದ ಅಸಲೀಯತ್ತು ಜಗಜ್ಜಾಹೀರಾಗಿತ್ತು.

ನ್ಯಾಪ್ ನ ಇಪ್ಪತ್ತು ಅಂಶಗಳಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರವನ್ನು (NACTA) ಬಲಪಡಿಸುವುದೂ ಒಂದಾಗಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಈ ನಿಗ್ರಹ ದಳವನ್ನು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಿಬಿಟ್ಟಿದೆ. ಜೂನ್ 2014ರಲ್ಲಿ ಅಫಘಾನಿಸ್ತಾನ್ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಮತ್ತು ಮುಂದಕ್ಕೆ ಕರಾಚಿಯಲ್ಲೂ ಪಾಕಿಸ್ತಾನಿ ಸೇನೆ ತಳಹಂತದಲ್ಲಿ ಸಮಗ್ರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರ ಪ್ರಭಾವ ಕಡಿಮೆ ಮಾಡಲು ಪ್ರಯತ್ನಿಸಿತ್ತು. ಆಗಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಘೋಷಿಸಿದ ಪ್ರಕಾರ ಇದೊಂದು ಯಶಸ್ವೀ ಕಾರ್ಯಾಚರಣೆಯಾಗಿತ್ತು. ಆದರೆ ವಾಸ್ತವ ಶರೀಫ್ ಹೇಳಿಕೆಗೆ ವ್ಯತಿರಿಕ್ತವಾಗಿತ್ತು. ಭಯೋತ್ಪಾದಕ ದಾಳಿಗಳಲ್ಲಿ ಎಳ್ಳಷ್ಟೂ ತೀವ್ರತೆ ಕಡಿಮೆಯಾಗಿರಲಿಲ್ಲ. ಈ ವರ್ಷ ಜನವರಿಯಲ್ಲಿ ಕಾಲೇಜೊಂದಕ್ಕೆ ನುಗ್ಗಿದ ಉಗ್ರರು 20 ಜನರ ಪ್ರಾಣ ಬಲಿ ಪಡೆದಿದ್ದರು. ಮಾರ್ಚ್ ನಲ್ಲಿ ಕೋರ್ಟ್ ದಾಳಿಯಲ್ಲಿ 16 ಮತ್ತು ಲಾಹೋರ್ ನ ಮಕ್ಕಳ ಉದ್ಯಾನವನವೊಂದರಲ್ಲಿ ನಡೆದ ಬಾಂಬ್ ದಾಳಿ 70 ಜನರ ಹತ್ಯೆ ಮತ್ತು 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಆಗಸ್ಟ್ ನ ಕ್ವೆಟ್ಟಾ ಆತ್ಮಹತ್ಯಾ ದಾಳಿಯಲ್ಲಿ 72, ಒಕ್ಟೋಬರ್ ಪೊಲಿಸ್ ತರಬೇತಿ ಕೇಂದ್ರದ ಮೇಲಿನ ದಾಳಿಯಲ್ಲಿ 61, ನವೆಂಬರ್ ನಲ್ಲಿ ಧಾರ್ಮಿಕ ಕ್ಷೇತ್ರವೊಂದರಲ್ಲಿ 61 ಜೀವಗಳನ್ನು ಭಯೋತ್ಪಾದಕ ದಾಳಿಗಳು ಬಲಿ ತೆಗೆದುಕೊಂಡಿದ್ದವು. 

ಒಂದು ರೀತಿಯಲ್ಲಿ ನ್ಯಾಪ್ ಒಂದು ಉಗ್ರ ನಿಗ್ರಹ ತಂತ್ರವೇ ಅಲ್ಲ. ಏಕೆಂದರೆ ಈ ಯೋಜನೆಯಲ್ಲಿ ಯಾವುದೇ ಸ್ಪಷ್ಟ ನೀತಿಗಳಾಗಲಿ ಮಾರ್ಗದರ್ಶಿ ಸೂತ್ರಗಳಾಗಲಿ ಇಲ್ಲ. ಉದಾಹರಣೆಗೆ ಬ್ರಿಟನ್ ನಲ್ಲಿರುವ ಕಂಟೆಸ್ಟ್ (Counter Terrorism Strategy - CONTEST) ನಲ್ಲಿರುವಂಥ ಯಾವುದೇ ಗುಣಗಳು ಈ ಯೋಜನೆಯಲ್ಲಿಲ್ಲ. ಇವೆಲ್ಲವನ್ನು ಗಮನಿಸಿದಾಗ, ಪಾಕಿಸ್ತಾನಿ ಮಿಲಿಟರಿ ಈ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ವಿರೋಧಿ ದಂಗೆಗಳ ದಮನಕ್ಕೆ ಬಳಸಿಕೊಂಡಿದ್ದು ಸ್ಪಷ್ಟವಾಗುತ್ತದೆ. ನ್ಯಾಪ್ ನೆಪದಲ್ಲಿ ತನ್ನ ವಿರೋಧಿಗಳ  ಹುಟ್ಟಡಗಿಸುವ ಪ್ರಯತ್ನದಲ್ಲಿ ಮಿಲಿಟರಿ ಯಶಸ್ವಿಯಾದರೆ, ಪಾಕಿಸ್ತಾನಿ ರಾಜಕಾರಣಿಗಳೂ ಇದನ್ನೊಂದು ರಾಜಕೀಯ ದಾಳವಾಗಿ ಉಪಯೋಗಿಸಿಕೊಂಡರು. ಭಯೋತ್ಪಾದನಾ ನಿಗ್ರಹದ ವಿಷಯಕ್ಕೆ ಬಂದಾಗ ಒಳ್ಳೆಯ ಉಗ್ರರು ಮತ್ತು ಕೆಟ್ಟ ಉಗ್ರರು ಎಂಬ ವಿಚಿತ್ರ ವಿಂಗಡನೆಯೊಂದಿಗೆ, ಒಳ್ಳೆಯ ಉಗ್ರರರನ್ನು ನಾಶಮಾಡಮಾಡಬಾರದು ಎಂಬ ಹಾಸ್ಯಾಸ್ಪದ ತರ್ಕ ಮಂಡಿಸುವ ಪಾಕಿಸ್ತಾನದಿಂದ ಉಗ್ರ ನಿಗ್ರಹವನ್ನು ಅಪೇಕ್ಷಿಸುವುದೂ ಮೂರ್ಖತನ. ಪಾಕಿಸ್ತಾನ ಬದಲಾದರೆ ಭಯೋತ್ಪಾದನೆಯನ್ನು ಹತ್ತಿಕ್ಕುವುದು ಕಷ್ಟದ ಕೆಲಸವೇನಲ್ಲ ಎಂದುಕೊಂಡಿತ್ತು ಭಾರತ. ದುರಾದೃಷ್ಟವಶಾತ್ ಅಂದುಕೊಂಡದ್ಯಾವುದೂ ನಡೆಯಲಿಲ್ಲ. ಪಾಕಿಸ್ತಾನದ ನಡೆಗಳೆಲ್ಲಾ ಡಂಭಾಚಾರ ಎನ್ನುವುದು ಈ ಎರಡು ವರ್ಷಗಳಲ್ಲಿ ಸಾಬೀತಾಗಿದೆ.



(This article was published in Hosa Digantha Newsapaper on 27 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ