ಬುಧವಾರ, ಜನವರಿ 18, 2017

ಚೀನಾ ಆಕ್ರಮಣಕ್ಕೆ ಅಮೆರಿಕಾ-ಭಾರತ ಪ್ರತಿಬಾಣ

ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.
-  ಕೀರ್ತಿರಾಜ್

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನೀ ಮಿಲಿಟರಿ ಪ್ರಭಾವ ಮತ್ತು ಚೀನಾದ ಯುದ್ಧ ದಾಹಗಳಿಗೆ ಇದುವರೆಗೆ ಪರಿಣಾಮಕಾರಿ ಎದುರೇಟು ನೀಡಲು ಸಾಧ್ಯವಾಗಿಲ್ಲ. ತನ್ನ ನೆರೆಹೊರೆಯ ಎಲ್ಲಾ ದೇಶಗಳೊಂದಿಗೆ ವೈರತ್ವ ಸಾಧಿಸಿದಾಗಲೂ, ಅಮೆರಿಕಾವನ್ನೇ ಕೆಣಕುವ ಸಾಹಸ ಮಾಡಿದ್ದರೂ, ಚೀನಾಗೆ ಯಾರೂ ಏನೂ ಮಾಡಲಾರರು ಎಂಬ ವಿಷಯ ಮತ್ತೆ ಸಮರ್ಥಿಸಲ್ಪಟ್ಟಿತ್ತು. ಇತ್ತೀಚೆಗೆ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ತನ್ನ ತಂಟೆಗೆ ಬಂದರೆ ಅಮೆರಿಕಾ ಮೇಲೆ ಯುದ್ಧ ಸಾರುವುದಕ್ಕೂ ಸಿದ್ಧ ಎಂದಿರುವ ಚೀನಾ ವಿಶ್ವ ರಾಜಕೀಯದಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಚೀನಾವನ್ನು ಕಟ್ಟಿಹಾಕುವಂಥಾ ಸಮರ್ಥ ರಾಷ್ಟ್ರವೊಂದರ ಕೊರತೆ ಎದ್ದು ಕಾಣುತ್ತಿದೆ. ಚೀನಾ ಆಕ್ರಮಣಕಾರಿ ವರ್ತನೆ ಅಮೆರಿಕಾಗೆ ವಿಶ್ವ ನಾಯಕತ್ವದ ಪ್ರಶ್ನೆಯಾದರೆ, ಭಾರತಕ್ಕದು ಮೂಲ ರಾಷ್ಟ್ರೀಯ ಹಿತಾಸಕ್ತಿಗಳ ಪ್ರಶ್ನೆಯಾಗಿ ಕಾಡುತ್ತಿದೆ. ಚೀನಾ ವಿಶ್ವಶಕ್ತಿಯಾಗಿ ಅಮೆರಿಕಾವನ್ನು ಸರಿಗಟ್ಟಬೇಕಾದಲ್ಲಿ, ಕ್ರಮಿಸಬೇಕಾದ ದೂರ ಬಹಳಷ್ಟಿದೆಯಾದರೂ, ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರ ನೀಡುವಲ್ಲಿ ಅಮೆರಿಕಾ ಸೋಲುತ್ತಿದೆ ಎನ್ನುವುದೂ ಅಷ್ಟೇ ಸತ್ಯ!

ಚೀನಾವನ್ನು ನಿಯಂತ್ರಿಸಲು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಮಿತ್ರ ರಾಷ್ಟ್ರಗಳಾದ ಪಿಲಿಪ್ಪೈನ್ಸ್, ಜಪಾನ್, ಆಸ್ಟ್ರೇಲಿಯಾ ಸಿಂಗಾಪೂರ ಮತ್ತಿತರ ರಾಷ್ಟ್ರಗಳ ಕಡೆಗೆ ಅತಿಯಾಗಿ ಗಮನಹರಿಸುತ್ತಿರುವ ಅಮೆರಿಕಾದ ವಿದೇಶಾಂಗ ನೀತಿ ಧನಾತ್ಮಕ ಫಲಿತಾಂಶ ನೀಡಿಲ್ಲ. ಈ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಸದೃಡವಾಗಿದ್ದರೂ, ದೈತ್ಯ ಚೀನಾ ಆರ್ಭಟ ಮತ್ತು ಬೆದರಿಕೆಗೆ ಒಳಗಾಗಿವೆಯೇ ವಿನಹ ಚೀನಾಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಸವಾಲು ಒಡ್ಡುವುದು ದೂರದ ಮಾತು.  ಈ ಎಲ್ಲಾ ಕಾರಣಗಳಿಂದ,  ಅಮೆರಿಕಾ ವಿದೇಶಾಂಗ ನೀತಿ ತಜ್ಞರ ಗಮನ ಭಾರತದತ್ತ ತಿರುಗಿದೆ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ದಿನೇ ದಿನೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ಭಾರತ ಈ ನಿಟ್ಟಿನಲ್ಲಿ ಅಮೆರಿಕಾದ ಏಕೈಕ ಆಯ್ಕೆ ಎನ್ನುವುದನ್ನು ಅಮೆರಿಕಾದ ರಾಜತಾಂತ್ರಿಕ ನಿಪುಣರು ಮನಗಂಡಿದ್ದಾರೆ. ಟ್ರಂಪ್ ಅಥವಾ ಇನ್ಯಾರೇ ಅಧ್ಯಕ್ಷರಾಗಿದ್ದರೂ, ಏಷ್ಯಾ ಪೆಸಿಫಿಕ್ ನಲ್ಲಿ ಅಮೆರಿಕಾ ಮರುಸಮತೋಲನ ಸಾಧಿಸಲು ಭಾರತದ ಜೊತೆಗಿನ ಮಿತ್ರತ್ವ ಅಮೆರಿಕಾದ ಪಾಲಿಗೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಎರಡು ಬೃಹತ್ ಪ್ರಜಾಪ್ರಭುತ್ವಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಸಹಕಾರಗಳನ್ನು ವೃದ್ಧಿಸಿಕೊಳ್ಳಲಿವೆ. ಭಾರತ ಮತ್ತು ಅಮೆರಿಕಾಗಳ ಸದ್ಯದ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆಲಿಪ್ತ ನೀತಿಯಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತ  ಜಾಗತಿಕ ಮಟ್ಟದಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಿರುವ ರೀತಿಯಲ್ಲಿ ಬದಲಾವಣೆಗಳಾಗಿವೆ. ಅಮೆರಿಕಾವನ್ನು ಸಂಪೂರ್ಣವಾಗಿ ಭಾರತ ಒಪ್ಪಿಕೊಂಡಿಲ್ಲವಾದರೂ, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಾಷಿಂಗ್ಟನ್-ದೆಹಲಿ ರಕ್ಷಣಾ ಒಪ್ಪಂದಗಳು ಬಹುಮುಖ್ಯ ಪಾತ್ರವಹಿಸಲಿದೆ.

Image may contain: 1 personಹಿಂದೆಲ್ಲಾ ಪಾಕಿಸ್ತಾನದ ಪರವಹಿಸಿಕೊಂಡು ಭಾರತವನ್ನು ಟೀಕಿಸುತ್ತಿದ್ದ ಅಮೆರಿಕಾದ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನದ ಕಿಡಿಗೇಡಿ ಚಟುವಟಿಕೆಗಳಿಗೆ ಉತ್ತರವಾಗಿ ಭಾರತೀಯ ಸೇನೆ ಗಡಿನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸ ಮಾಡಿದಾಗ, ಈ ಕೃತ್ಯಕ್ಕಾಗಿ ಅಮೆರಿಕಾ ಭಾರತವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭ್ರಮನಿರಸನವಾಗಿತ್ತು. ತನ್ನ ಎಂದಿನ ವರಸೆ ಬದಲಿಸಿದ ಅಮೆರಿಕಾ, ಭಾರತವನ್ನು ಟೀಕಿಸದೆ ಎರಡೂ ದೇಶಗಳು ಈ ವಿವಾದಗಳನ್ನು ಕೊನೆಗೊಳಿಸಲು ಶ್ರಮಪಡಬೇಕು ಎಂದು ಕೈತೊಳೆದುಕೊಂಡಿತ್ತು. ಭಾರತದ ಸ್ನೇಹ ಕಳೆದುಕೊಳ್ಳಲು ಇಷ್ಟವಿಲ್ಲದೇ ಅಮೆರಿಕಾ ರಾಜಕೀಯ ಸಂದರ್ಭಕ್ಕೆ ಸರಿಯಾದ (Politically Correct) ಹೇಳಿಕೆ ಕೊಟ್ಟು ಜಾಣತನ ತೋರಿಸಿತ್ತು! ಈ ನಡೆ ಭಾರತದ ರಾಜಕಾರಣಿಗಳಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲೂ ಅಮೆರಿಕಾ ಭಾರತದ ಪರವಾಗಿದೆ ಎಂಬ ಭಾವನೆ ಮೂಡಿಸಿದ್ದಷ್ಟೇ ಅಲ್ಲದೇ ಅಮೆರಿಕಾ ತನ್ನ ವಿದೇಶಾಂಗ ನೀತಿಯ ಆದ್ಯತೆಯಾಗಿ ಪಾಕಿಸ್ತಾನದ ಬದಲು ಭಾರತವನ್ನು ಆಯ್ದುಕೊಂಡಿದ್ದು ಸ್ಪಷ್ಟ. ದಶಕಗಳಿಂದ ಪಾಕಿಸ್ತಾನ ಅಮೆರಿಕಾದ ನೆರವು ಪಡೆದುಕೊಂಡು ಅಮೆರಿಕಾದ ಬೆನ್ನಿಗೆ ಚೂರಿ ಹಾಕುತ್ತದೆ ಎಂಬ ವಿಚಾರ ತಡವಾಗಿಯಾದರೂ ಅಮೆರಿಕಾಗೆ ಅರಿವಾಗಿದೆ. ದೀರ್ಘಕಾಲದ ರಾಜತಾಂತ್ರಿಕ ಗೆಳೆತನಕ್ಕೆ ಸಮಯಸಾಧಕತೆಗಿಂತ, ಆಯಾ ರಾಷ್ಟ್ರಗಳ ಐತಿಹಾಸಿಕ ಮೌಲ್ಯಗಳು ಮುಖ್ಯವಾಗುತ್ತವೆ. ಈ ವಿಚಾರ ಅಮೆರಿಕಾ ಮತ್ತು ಭಾರತಗಳಿಗೂ ಅನ್ವಯವಾಗುತ್ತದೆ.

1962ರ ಯುದ್ಧದ ಸಂದರ್ಭದಲ್ಲಿ ಚೀನಾದಿಂದ ಭಾರತಕ್ಕಿದ್ದ ಸವಾಲುಗಳು ಇವತ್ತಿನ ಸವಾಲುಗಳಿಗಿಂತ ಭಿನ್ನ. 1962ರಲ್ಲಿ ಭಾರತವನ್ನು ಉತ್ತರದ ಗಡಿಗಳಲ್ಲಿ ಕಾಡಿದ್ದ ಚೀನಾ ನೌಕಾಶಕ್ತಿ ಅಷ್ಟಕ್ಕಷ್ಟೇ ಎಂಬತ್ತಿತ್ತು. ಆದರೆ ಇವತ್ತಿಗೆ ಚೀನಾ ತನ್ನ ನೌಕಾಬಲವನ್ನು ವ್ಯವಸ್ಥಿತ ರೀತಿಯಲ್ಲಿ ಬಲಿಷ್ಟವನ್ನಾಗಿಸಿದೆ. ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬನ್ತೋಟಾ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತಿತರ ಕಡೆಗಳಲ್ಲಿ ನೌಕಾನೆಲೆ ಸ್ಥಾಪಿಸಿಕೊಂಡು ಭಾರತವನ್ನು ಸುತ್ತುವರಿದಿರುವ ಚೀನಾ ಸಮರತಂತ್ರ  ರಾಜತಂತ್ರಜ್ಞರ ವಲಯದಲ್ಲಿ ಮುತ್ತಿನ ಹಾರದ ನೀತಿ (String of Pearls) ಎಂದೇ ಚಿರಪರಿಚಿತ! ಇತ್ತೀಚೆಗೆ ಚೀನಾ ಹಿಂದೂಮಹಾಸಾಗರವನ್ನು ನಿಯಂತ್ರಿಸಲು, ಕನಿಷ್ಟ ಪಕ್ಷ ಈ ಪ್ರದೇಶದಲ್ಲಿ ಪ್ರಭಾವ ವಿಸ್ತರಿಸಲು ಪ್ರಯತ್ನಿಸುತ್ತಿರುವುದು, ಭಾರತ ಈ ಪ್ರದೇಶದಲ್ಲಿ ದಶಕಗಳಿಂದ ಕಾಪಾಡಿಕೊಂಡಿದ್ದ ಪ್ರಭಾವಕ್ಕೆ ಸವಾಲೊಡ್ಡುತ್ತಿದೆ. ಹೀಗಾಗಿ ಇವತ್ತಿಗೆ ಭಾರತ ಎಲ್ಲಾ ದಿಕ್ಕುಗಳಿಂದಲೂ ಚೀನಾದ ಪ್ರಭಾವದ ವಿರುದ್ಧ ಹೋರಾಡಬೇಕಾದ ಸಂದಿಗ್ಧತೆ ಮತ್ತು ಅನಿವಾರ್ಯತೆಗಳಿವೆ. ಭಾರತದ ವಿರುದ್ಧ ಪಾಕಿಸ್ತಾನಕ್ಕೂ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಎದುರೇಟು ನೀಡಬೇಕಾದಲ್ಲಿ ಭಾರತಕ್ಕೂ ಅಮೆರಿಕಾದಂಥ ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅವಶ್ಯಕತೆಯಿದೆ. ಹೀಗಾಗಿ ಅಮೆರಿಕಾ ಮತ್ತು ಭಾರತದ ಕಾಳಜಿಗಳಲ್ಲಿರುವ ಸಾಮ್ಯತೆಗಳು ಮತ್ತು ಪರಸ್ಪರ ಸಹಕಾರದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುವುದು ಹೊಸ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ.

ಭಾರತ ವಿಶ್ವಮಟ್ಟದಲ್ಲಿ ಪ್ರಭಾವಿ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತದ ಏಕಾಗ್ರತೆ ಕೆಡಿಸಲು ಪಾಕಿಸ್ತಾನವನ್ನು ಬಳಸಿಕೊಂಡು, ಭಾರತದ ಗಡಿಗಳಲ್ಲಿ ಒತ್ತಡ ಸಂಘರ್ಷಗಳನ್ನು ಸೃಷ್ಟಿಸುತ್ತಿದೆ ಚೀನಾ! ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿರುವ ಚೀನಾ ನಿಲುವುಗಳಿಗೂ, ತಕ್ಕ ಉತ್ತರ ನೀಡುತ್ತಿರುವ ಭಾರತಕ್ಕೆ ಅಮೆರಿಕಾ ಬೆಂಬಲ ಆನೆ ಬಲ ತುಂಬಿದಂತಾಗಿದೆ. ಚೀನಾದ ವೈರತ್ವಕ್ಕೆ ಒಳಗಾದ ದಲಾಯಿ ಲಾಮರವರಿಗೆ ಆಶ್ರಯ ನೀಡಲು ಏಷ್ಯಾದ ಬೇರೆ ಯಾವುದೇ ದೇಶವೂ ಒಪ್ಪಿಕೊಳ್ಳುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಚೀನಾಗೆ ಸಡ್ಡು ಹೊಡೆದು ಭಾರತ ದಲಾಯಿ ಲಾಮರವರಿಗೆ ಆಶ್ರಯ ನೀಡಿರುವುದು ರಾಜತಾಂತ್ರಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಇವತ್ತು ಜಾಗತಿಕ ರಾಜಕೀಯದಲ್ಲಿ ಭಾರತದ ರಾಜತಾಂತ್ರಿಕತೆಯಲ್ಲಿ ಕಾಣಿಸುತ್ತಿರುವ ಆತ್ಮವಿಶ್ವಾಸ ಚೀನಾದ ನಿದ್ದೆಗೆಡಿಸುತ್ತಿರುವುದು ಸುಳ್ಳಲ್ಲ. ರಾಜತಾಂತ್ರಿಕ ಸಂಕೋಚಗಳಿಂದ ನಿಧಾನವಾಗಿ ಹೊರಬರುತ್ತಿರುವ ಭಾರತ ಅಮೆರಿಕಾದೊಂದಿಗೆ ಸೇರಿಕೊಂಡು ಚೀನಾವನ್ನು ಕಟ್ಟಿಹಾಕುವಂಥಾ ಸಮರತಂತ್ರವೊಂದನ್ನು ರೂಪಿಸಿದರೂ ಆಶ್ಚರ್ಯವೇನಿಲ್ಲ.

ಅಮೆರಿಕಾ ಮತ್ತು ಭಾರತದ ಸಂಪೂರ್ಣವಾಗಿ ರಾಜತಾಂತ್ರಿಕ ಕೊಡುಕೊಳ್ಳುವಿಕೆಗಳಿಗೆ ಕೆಲ ಅಡೆತಡೆಗಳಿವೆ. ಈ ಹಿಂದೆ ಅಮೆರಿಕಾ ಮತ್ತು ಭಾರತಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹಾಗೂ ಅಂತರಾಷ್ಟ್ರೀಯ ವ್ಯವಸ್ಥೆ ಮತ್ತು ಒಪ್ಪಂದಗಳಲ್ಲಿ ಭಾರತದ ನಿಲುವುಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕಾ ಭಾರತದ ಮೇಲೆ ಕೆಲ ನಿರ್ಬಂಧಗಳನ್ನು ಹೇರಿತ್ತು. ಈ ನಿರ್ಬಂಧಗಳು ಇವತ್ತು ಅಮೆರಿಕಾದಿಂದ ತಂತ್ರಜ್ಞಾನ ವರ್ಗಾವಣೆ ಮತ್ತು ರಕ್ಷಣಾ ಸಹಕಾರಗಳಿಗೆ ತಡೆಯಾಗಿವೆ. ಈ ಎಲ್ಲಾ ಅಡೆ ತಡೆಗಳು ಸಣ್ಣಪ್ರಮಾಣದಲ್ಲಿದ್ದು, ಇವುಗಳನ್ನು ಬದಲಾಯಿಸಿಕೊಂಡು, ಭಾರತದ ಜೊತೆ ಸಹಕಾರ ಬೆಳೆಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.  ಚೀನಾದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಭಾರತ ಮತ್ತು ಅಮೆರಿಕಾಗಳ ಹಿತಾಸಕ್ತಿಗಳಿಗೆ ಮಾರಕ ಎನ್ನುವುದನ್ನು ಎರಡೂ ದೇಶಗಳು ಒಪ್ಪಿಕೊಂಡಿರುವುದರಿಂದ, ಈ ಎರಡು ದೇಶಗಳ ಮಧ್ಯೆ ದೊಡ್ಡ ಮಟ್ಟದ ಸಹಕಾರ ಈ ಹೊತ್ತಿನ ರಾಜತಾಂತ್ರಿಕ ಅವಶ್ಯಕತೆಯಾಗಿ ಬದಲಾಗಿದೆ. ಅಮೆರಿಕಾದ ವಿದೇಶಾಂಗ ನೀತಿ ನಿಪುಣರು ಭಾರತದ ಜೊತೆಗೆ ರಾಜತಾಂತ್ರಿಕ ಸಹಕಾರಕ್ಕಿರುವ ತಡೆಗಳನ್ನು ನಿವಾರಿಸುವಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದರೊಂದಿಗೆ, ಚೀನೀ ಡ್ರ್ಯಾಗನ್ ಆಟಾಟೋಪಗಳಿಗೆ ಕಡಿವಾಣ ಹಾಕಿ ಪಾಕಿಸ್ತಾನದ ತಲೆಯ ಮೇಲೂ ಮೊಟಕುವುದಕ್ಕೂ ಸುವರ್ಣಾವಕಾಶವೊಂದನ್ನು ಕಲ್ಪಿಸಿದಂತಾಗಿದೆ.

(This article was published in Hosa Digantha Newsapaper on 17 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ