ಶುಕ್ರವಾರ, ಜನವರಿ 6, 2017

ಅಮೆರಿಕಾ ವಿದೇಶಾಂಗ ನೀತಿಯಲ್ಲಿ ತ್ರಿವಳಿ ಶಕ್ತಿಕೇಂದ್ರಗಳು

ಅಮೆರಿಕಾ ಮೊದಲು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳೆಂಬ ವಿಭಿನ್ನ ಆಲೋಚನಾ ಕ್ರಮಗಳಿಗೆ ಸೇರಿದ ವ್ಯಕ್ತಿಗಳು ಟ್ರಂಪ್ ಆಡಳಿತದ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಲಿದ್ದಾರೆ. ಒಟ್ಟಿನಲ್ಲಿ ಅಮೆರಿಕಾದ ವಿದೇಶಾಂಗ ನೀತಿ ಈ ಮೂರು ಶಕ್ತಿಕೇಂದ್ರಗಳ ಸಮನ್ವಯದ ಆಧಾರದಲ್ಲಿ ನಿರ್ಧರಿತವಾಗಲಿದೆ.
-  ಕೀರ್ತಿರಾಜ್


Image may contain: 4 peopleಪ್ರಪಂಚದ ಪ್ರತಿ ಮೂಲೆಯಲ್ಲೂ ಪರಿಣಾಮ ಬೀರಬಲ್ಲ ಪದವಿಯೊಂದಿದ್ದರೆ ಅದು ಅಮೆರಿಕಾದ ಅಧ್ಯಕ್ಷ ಪಟ್ಟ. ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ತನ್ನ ವಿದೇಶಾಂಗ ನೀತಿಯ ಸಲಹಾಗಾರರ ಹೆಸರನ್ನೂ ಘೋಷಿಸುವ ಮೂಲಕ ಭವಿಷ್ಯದ ಅಮೆರಿಕಾದ ಜಾಗತಿಕ ನಿಲುವು ಸ್ಪಷ್ಟವಾಗುತ್ತಿದೆ. ಟ್ರಂಪ್ ಅತಿಯಾಗಿ ಪುನರುಚ್ಛರಿಸುತ್ತಿರುವ 'ಅಮೆರಿಕಾ ಮೊದಲು' (America First) ಘೋಷವಾಕ್ಯ ಅಮೆರಿಕಾದ ವಿದೇಶಾಂಗ ನೀತಿಯನ್ನು ಬಹುಮಟ್ಟಿಗೆ ನಿರ್ಧರಿಸುತ್ತದೆಯಾದರೂ, ಟ್ರಂಪ್ ತನ್ನ ಆಡಳಿತ ಮತ್ತು ರಾಜನೀತಿಯಲ್ಲಿ ಆಯ್ದುಕೊಂಡ ಸಲಹೆಗಾರರು ಮತ್ತಿನ್ನಿತರ ಮಹತ್ವದ ಸ್ಥಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮೂರು ವಿಭಿನ್ನ ಗುಂಪುಗಳನ್ನು ಗುರುತಿಸಬಹುದು! ಟ್ರಂಪ್ ಆಡಳಿತದ ಮಹತ್ವದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಲಿರುವ ಅಮೆರಿಕಾ ಮೊದಲು ಎನ್ನುವ ಗುಂಪು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳು ಎಂಬ ಮೂರು ಪ್ರಭಾವಶಾಲಿ ಗುಂಪುಗಳನ್ನು ಬ್ರೂಕಿಂಗ್ ಸಂಸ್ಥೆಯ ವಿಶ್ಲೇಷಕ ಥಾಮಸ್ ರೈಟ್ ಗುರುತಿಸುತ್ತಾರೆ. ಪ್ರತಿಯೊಂದು ಗುಂಪು ಇನ್ನೊಂದು ಗುಂಪನ್ನು ಅಪನಂಬಿಕೆಯಿಂದಲೇ ನೋಡುತ್ತವಾದರೂ, ಮೂರನೇ ಗುಂಪಿನ ಪ್ರಭಾವವನ್ನು ತಡೆಯಲು ತಾತ್ಕಾಲಿಕ ಹೊಂದಾಣಿಕೆಗೂ ಸಿದ್ಧವಾಗುತ್ತದೆ.

ಅಮೆರಿಕಾ ಮೊದಲು
ಚುನಾವಣಾ ಪ್ರಚಾರಕ್ಕಿಂತಲೂ ಹಲವು ವರ್ಷಗಳ ಹಿಂದಿನಿಂದಲೇ ಟ್ರಂಪ್ ಅಮೆರಿಕಾವನ್ನು ಶ್ರೇಷ್ಠತೆಯತ್ತ ಕೊಂಡುಯ್ಯುವುದು ಇತರ ಎಲ್ಲಾ ಜಾಗತಿಕ ಜವಾಬ್ದಾರಿಗಳಿಗಿಂತ ಮಹತ್ವದ ವಿಚಾರ ಎನ್ನುವುದನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ. 1987ರಿಂದಲೂ ಅಮೆರಿಕಾದ ರಕ್ಷಣಾ ಮೈತ್ರಿಗಳ ಬಗೆಗಿನ ಕಟು ಟೀಕಾಕಾರರಾಗಿ ಟ್ರಂಪ್ ಗುರುತಿಸಿಕೊಂಡಿದ್ದಾರೆ. ಅಮೆರಿಕಾದ ಮಿತ್ರ ರಾಷ್ಟ್ರಗಳು ಅಮೆರಿಕಾದಿಂದ ಉಚಿತವಾಗಿ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ಇದು ಅಮೆರಿಕಾದ ರಕ್ಷಣಾ ವೆಚ್ಚ ಮತ್ತು ಆರ್ಥಿಕತೆಯ ಮೇಲೆ ಅನಗತ್ಯ ಹೊರೆ ಬೀಳುವಂತೆ ಮಾಡಿದೆ. ಆದ್ದರಿಂದ ಅಮೆರಿಕಾ ನೀಡುವ ರಕ್ಷಣೆಯ ಪ್ರತಿಯಾಗಿ ಮಿತ್ರ ರಾಷ್ಟ್ರಗಳು ದೊಡ್ಡ ಪ್ರಮಾಣದ ಹಣವನ್ನು ರಕ್ಷಣಾವೆಚ್ಚವಾಗಿ ಅಮೆರಿಕಾಗೆ ನೀಡಬೇಕು ಎನ್ನುವುದು ಟ್ರಂಪ್ ವಾದ. ಇನ್ನು ವ್ಯಾಪಾರ  ವಹಿವಾಟಿನ ವಿಚಾರದಲ್ಲೂ ಬಹಳಷ್ಟು ಕಟ್ಟುನಿಟ್ಟಾಗಿರುವ ಟ್ರಂಪ್ ದ್ವಿತೀಯ ಯುದ್ಧದ ನಂತರ ಅಮೆರಿಕಾ ಮಾಡಿಕೊಂಡ ಎಲ್ಲಾ ಸುಂಕರಹಿತ ವ್ಯಾಪಾರ ಒಪ್ಪಂದಗಳನ್ನು ಟೀಕಿಸುತ್ತಲೇ ಬಂದಿದ್ದಾರೆ. ಸುಮಾರು ಮೂರು ದಶಕಗಳಿಂದ ಅಮೆರಿಕಾದ ವಿದೇಶಾಂಗ ನೀತಿಯ ಕಟು ಟೀಕಾಕಾರರಾಗಿರುವ ಟ್ರಂಪ್, ಅಮೆರಿಕಾ ಇತರರಿಗೆ ಕೊಡುವ ರಕ್ಷಣೆಯೇ ಇರಲಿ ಅಥವಾ ವ್ಯಾಪಾರವೇ ಇರಲಿ ಇದರಿಂದ ಅಮೆರಿಕಾಗೆ ಸಿಗುವ ಲಾಭವೇನು ? ಎಂಬ ಪ್ರಶ್ನೆಯ ಆಧಾರದ ಮೇಲೆ ಶತ್ರು ಮತ್ತು ಮಿತ್ರರಿಬ್ಬರನ್ನೂ ನಿರ್ಧರಿಸುತ್ತಾರೆ. ಸಂದರ್ಶನವೊಂದರಲ್ಲಿ ಆರ್ಥಿಕ ಲಾಭವಿಲ್ಲದೇ ಹೋದರೆ ಏಕ ಚೀನಾ ನೀತಿಯನ್ನು ಅನುಸರಿಸಬೇಕೆಂದಿಲ್ಲ ಎಂಬರ್ಥ ಬರುವ ಮಾತುಗಳನ್ನಾಡಿದ್ದು ಇದಕ್ಕೊಂದು ನಿದರ್ಶನ. ಹೀಗಿದ್ದರೂ ಟ್ರಂಪ್ ರ ಅಮೆರಿಕಾ ಮೊದಲು ನೀತಿಯನ್ನು ಜಾರಿಗೊಳಿಸುವುದು ಅಷ್ಟೊಂದು ಸರಳವಲ್ಲ ಮತ್ತು ಸ್ವತಃ ರಿಪಬ್ಲಿಕನ್ ಪಕ್ಷದ ವಿದೇಶಾಂಗ ನೀತಿ, ಟ್ರಂಪ್ ಧೋರಣೆಗಳಿಗೆ ವಿರುದ್ಧವಾಗಿವೆ. ರಿಪಬ್ಲಿಕನ್ ಪಕ್ಷದ ಕಲ್ಪನೆಯಲ್ಲಿರುವ ಅಂತರಾಷ್ಟ್ರೀಯ ವ್ಯವಸ್ಥೆಗೆ ಟ್ರಂಪ್ ವಿಚಾರಗಳು ಮಾರಕವಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. 

ಧಾರ್ಮಿಕ ಯೋಧರು
ರಿಪಬ್ಲಿಕನ್ ಪಕ್ಷದ ಒಂದು ಗುಂಪು ಇವತ್ತಿಗೂ ಅಮೆರಿಕಾ ಇಸ್ಲಾಮಿಕ್ ಉಗ್ರರ ವಿರುದ್ಧದ ಒಂದು ಮಹಾಯುದ್ಧದಲ್ಲಿ ತೊಡಗಿದೆ ಮತ್ತು ಈ ಯುದ್ಧ ದ್ವಿತೀಯ ವಿಶ್ವಸಮರ ಮತ್ತು ಶೀತಲ ಸಮರಗಳಷ್ಟೇ ಮಹತ್ವದ ಯುದ್ಧ ಎಂದು ನಂಬುತ್ತದೆ. ಇಸ್ಲಾಮಿಕ್ ಸ್ಟೇಟ್ ಮತ್ತಿನ್ನಿತರ ಉಗ್ರ ಸಂಘಟನೆಗಳು ತಮ್ಮ ಪ್ರಭಾವ ವೃದ್ಧಿಸಿಕೊಂಡಿದ್ದು ಕೂಡ ಈ ಧಾರ್ಮಿಕ ಯೋಧರ ಗುಂಪು ವಿದೇಶಾಂಗ ನೀತಿಯನ್ನು ಧರ್ಮದ ನೆಲೆಗಟ್ಟಿನಲ್ಲಿ ನೋಡುವಂತೆ ಮಾಡಿದೆ. ಟ್ರಂಪ್ ಭದ್ರತಾ ಸಲಹೆಗಾರರಾಗಿರುವ ಲೆಫ್ಟಿನೆಂಟ್ ಜನರಲ್ ಮೈಕೆಲ್ ಫ್ಲಿನ್. ಹಿಂದೊಮ್ಮೆ ಫ್ಲಿನ್, ಇರಾಕ್ ನಲ್ಲಿ ಅಲ್ ಖೈದಾ ಚಟುವಟಿಕೆಗಳ ಕುರಿತಾಗಿ ಅತ್ಯಂತ ದಕ್ಷವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಿದ್ದಕ್ಕಾಗಿ ಅಮೆರಿಕಾದಾದ್ಯಂತ ಹೊಗಳಿಕೆಗೆ ಪಾತ್ರರಾಗಿದ್ದರು. ಆದರೆ ಮುಂದೆ ಇದೇ ಫ್ಲಿನ್ ರಕ್ಷಣಾ ಗುಪ್ತಚರ ದಳದ ಮುಖ್ಯಸ್ಥನಾಗಿ ನೇಮಿಸಲ್ಪಟ್ಟಾಗ, ತನ್ನ ಕಾರ್ಯವೈಖರಿಯಿಂದಾಗಿ ಖಂಡನೆಗೆ ಒಳಗಾಗಿ ಆ ಸ್ಥಾನದಿಂದ ಕೆಳಗಿಳಿಯಬೇಕಾಯ್ತು. ಈ ಸಂದರ್ಭದಲ್ಲಿ ಒಬಾಮ ಸರಕಾರ ಇಸ್ಲಾಮಿಕ್ ಉಗ್ರವಾದವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಫ್ಲಿನ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಮತ್ತೆ ಮೈಕೆಲ್ ಫ್ಲಿನ್ ಅಮೆರಿಕಾ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ವಾಲಿದ್ ಫಾರೆಸ್ ಎಂಬ ಇಸ್ಲಾಮಿಕ್ ಭಯೋತ್ಪಾದನೆಯ ಕಟುವಿರೋಧಿಯೂ ಟ್ರಂಪ್ ಸಲಹೆಗಾರರ ಗುಂಪಿನಲ್ಲಿದ್ದಾರೆ. ಈ ಧಾರ್ಮಿಕ ಯೋಧರ ಗುಂಪು ಇಸ್ಲಾಮಿ ವಿರೋಧಿ ಭಾವನೆಯನ್ನು ಅಮೆರಿಕನ್ ಮುಖ್ಯವಾಹಿನಿಯಲ್ಲಿ ಬಿಂಬಿಸುವುದರ ಮುಖಾಂತರ, ರಷ್ಯಾ ಜೊತೆಗಿನ ಅಮೆರಿಕಾದ ಸಂಬಂಧಗಳು ಮತ್ತು ನ್ಯಾಟೊ ಕುರಿತಾದ ತನ್ನ ಋಣಾತ್ಮಕ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಯೋಧರ ಗುಂಪು ಟ್ರಂಪ್ ರ ಇಸ್ಲಾಮಿಕ್ ವಿರೋಧಿ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದರೂ, ಟ್ರಂಪ್ ರ ಇತರ ನೀತಿಗಳನ್ನು ನಿಲುವುಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲು ತಯಾರಿಲ್ಲ.

ಸಂಪ್ರದಾಯವಾದಿಗಳು
ದ್ವಿತೀಯ ಮಹಾಯುದ್ಧದ ನಂತರ ಅಮೆರಿಕಾ ರೂಪಿಸಿಕೊಂಡ ವಿದೇಶಾಂಗ ನೀತಿ ಮತ್ತು ಆ ನೀತಿಗೆ ಪೂರಕವಾಗಿ ನಿರ್ಮಿಸಿಕೊಂಡ ಸಂಸ್ಥೆಗಳನ್ನು ಉಳಿಸಿಕೊಂಡು ಹೋಗುವ ಆಶಯವಿರುವ ಒಂದಷ್ಟು ಆಡಳಿತಾಧಿಕಾರಿಗಳ ಗುಂಪನ್ನು ಸಂಪ್ರದಾಯವಾದಿಗಳ ಗುಂಪು ಎಂದು ಗುರುತಿಸಲಾಗಿದೆ. ಮೊದಲೆರಡು ಗುಂಪುಗಳಿಗೆ ಹೋಲಿಸಿದಲ್ಲಿ ಸಂಪ್ರದಾಯವಾದಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಿಟ್ ರೋಮ್ನಿ, ಜೇಮ್ಸ್ ಮ್ಯಾಟ್ಟಿಸ್, ರಿಚರ್ಡ್ ಹಾಸ್, ಮೈಕ್ ರೋಜರ್ಸ್, ಸ್ಟೀಫನ್ ಹಾಡ್ಲಿ ಮುಂತಾದವರು ಜನಪ್ರಿಯ ಸಂಪ್ರದಾಯವಾದಿಗಳು. ರಿಪಬ್ಲಿಕನ್ ಪಕ್ಷದಲ್ಲಿರುವ ಹೆಚ್ಚಿನ ವಿದೇಶಾಂಗ ನೀತಿ ನಿಪುಣರು ಈ ಪಟ್ಟಿಯಲ್ಲಿದ್ದು, ಈ ಗುಂಪು ಟ್ರಂಪ್ ಸರಕಾರದ ವಿದೇಶಾಂಗ ನೀತಿಯ ಆಯಕಟ್ಟಿನ ಪ್ರಭಾವಶಾಲಿ ಸ್ಥಾನಗಳನ್ನು ಅಲಂಕರಿಸುವುದು ಖಚಿತ. ಈ ಪ್ರಭಾವಶಾಲಿ ಗುಂಪು ಯುರೋಪ್ ಮತ್ತು ಏಷ್ಯಾಗಳಲ್ಲಿ ಅಮೆರಿಕಾ ಪ್ರಾಬಲ್ಯವನ್ನು ಉಳಿಸಿಕೊಳ್ಳುವತ್ತ ಗಮನ ನೀಡುವುದಷ್ಟೇ ಅಲ್ಲದೆ, ಅಮೆರಿಕಾ ಫರ್ಸ್ಟ್ ಮತ್ತು ಧಾರ್ಮಿಕ ಯೋಧರ ಗುಂಪುಗಳ ಅತಿಯಾದ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದೆ. ಸಂಪ್ರದಾಯವಾದಿಗಳ ಮೊದಲ ಆದ್ಯತೆ ಅಮೆರಿಕಾದ ಮೈತ್ರಿ ಕೂಟಗಳು ಮತ್ತು ಅಮೆರಿಕಾದ ಜಾಗತಿಕ ಮಟ್ಟದ ಮಿಲಿಟರಿ ಪಾರಮ್ಯವನ್ನು ಉಳಿಸಿಕೊಳ್ಳುವುದೇ ಆಗಿದೆ. ಅಮೆರಿಕಾ ಫರ್ಸ್ಟ್ ಮತ್ತು ಧಾರ್ಮಿಕ ಯೋಧರ ಗುಂಪುಗಳೆರಡರಲ್ಲೀ ಸರಕಾರದ ನಿರ್ಧಾರಗಳನ್ನು ಬದಲಿಸುವಷ್ಟು ಸಂಖ್ಯಾಬಲವಿಲ್ಲ. ಇಷ್ಟೇ ಅಲ್ಲದೇ ಈ ಎರಡೂ ಗುಂಪುಗಳ ಆಶಯಗಳು ವಾಸ್ತವಿಕ ರಾಜಕೀಯದಿಂದ ದೂರ ನಿಲ್ಲುತ್ತವೆ. ವಿಶೇಷವಾಗಿ ಇತ್ತೀಚೆಗೆ ಟ್ರಂಪ್ ಕೂಡ ಸಂಪ್ರದಾಯವಾದಿಗಳ ಕಡೆಗೆ ವಾಲುತ್ತಿರುವುದು ಕಂಡುಬರುತ್ತಿದೆ. ಅಧ್ಯಕ್ಷೀಯ ಚುನಾವಣೆ ನಡೆದ ಎರಡು ದಿನಗಳ ನಂತರ ನವೆಂಬರ್ 10ರಂದು ದಕ್ಷಿಣ ಕೊರಿಯಾ ಅಧ್ಯಕ್ಷರಿಗೆ ಕರೆ ಮಾಡಿದ ಟ್ರಂಪ್, ದಕ್ಷಿಣ ಕೊರಿಯಾ ಜೊತೆಗಿನ ಮೈತ್ರಿಗೆ ತನ್ನ ಬೆಂಬಲವಿದೆ ಎಂದಿದ್ದು, ಇದಕ್ಕೊಂದು ನಿದರ್ಶನ.

ಟ್ರಂಪ್ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಲಿರುವ ರೆಕ್ಸ್ ಟಿಲ್ಲರ್ಸನ್, ರಕ್ಷಣಾ ಸಚಿವರಾಗಲಿರುವ ಜೇಮ್ಸ್ ಮ್ಯಾಟಿಸ್, ಭದ್ರತಾ ಸಲಹೆಗಾರರಾಗಲಿರುವ ಮೈಕೆಲ್ ಫ್ಲಿನ್ ಮತ್ತಿತರ ಪ್ರಮುಖ ವ್ಯಕ್ತಿಗಳ ವಿಚಾರಧಾರೆಗಳಲ್ಲಿ ಸಹಮತವಿಲ್ಲ. ಇದಲ್ಲದೇ ಈ ವಿದೇಶಾಂಗ ನೀತಿಯ ಪ್ರಭಾವಶಾಲಿ ವ್ಯಕ್ತಿತ್ವಗಳು ಟ್ರಂಪ್ ನಿಲುವನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಅಮೆರಿಕಾ ಮೊದಲು, ಧಾರ್ಮಿಕ ಯೋಧರು ಮತ್ತು ಸಂಪ್ರದಾಯವಾದಿಗಳೆಂಬ ವಿಭಿನ್ನ ಆಲೋಚನಾ ಕ್ರಮಗಳಿಗೆ ಸೇರಿದ ವ್ಯಕ್ತಿಗಳು ಟ್ರಂಪ್ ಆಡಳಿತದ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಲಿದ್ದಾರೆ. ಒಟ್ಟಿನಲ್ಲಿ ಅಮೆರಿಕಾದ ವಿದೇಶಾಂಗ ನೀತಿ ಈ ಮೂರು ಶಕ್ತಿಕೇಂದ್ರಗಳ ಸಮನ್ವಯದ ಆಧಾರದಲ್ಲಿ ನಿರ್ಧರಿತವಾಗಲಿದೆ.


(This article was published in Hosa Digantha Newsapaper on 20 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ