ಶುಕ್ರವಾರ, ಜನವರಿ 6, 2017

ಬರಿಯ ಯುದ್ಧವಲ್ಲ, ನಮ್ಮ ಮಿಲಿಟರಿ-ರಾಜತಾಂತ್ರಿಕ ಹಿರಿಮೆಯ ಯಶೋಗಾಥೆ

1971ರ ಯುದ್ಧ ಭಾರತವನ್ನು ಮಿಲಿಟರಿ ಶಕ್ತಿಯಾಗಿ ನಿರೂಪಿಸಿದ್ದಷ್ಟೇ ಅಲ್ಲದೇ ಅದ್ಭುತ ರಾಜತಾಂತ್ರಿಕ ಸಾಹಸಗಳಿಗೂ ಭಾರತೀಯರು ಸೈ ಎಂದು ಷರಾ ಬರೆದುಬಿಟ್ಟಿತ್ತು. ವಿಶ್ವಕ್ಕೆ ರಾಜತಾಂತ್ರಿಕತೆ ಕಲಿಸಿದ ಗುರುಗಳು ನಾವು ಎಂದು ಬೀಗುತ್ತಿದ್ದ ಅಮೆರಿಕಾ ಇನ್ನಿತರ ಪಾಶ್ಚಾತ್ಯ ರಾಷ್ಟಗಳು, ಚಾಣಕ್ಯನನ್ನು ನೆನಪಿಸಿತ್ತು ಭಾರತ.
-  ಕೀರ್ತಿರಾಜ್


ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರವಾದ ಪಾಕಿಸ್ತಾನ, ಪೂರ್ವ ಮತ್ತು ಪಶ್ಚಿಮಗಳೆಂಬ ದ್ವಂದ್ವ ವ್ಯಕ್ತಿತ್ವದ (Split Personality Disorder)ಸಮಸ್ಯೆಯಿಂದ ನರಳತೊಡಗಿತ್ತು! ಪೂರ್ವ ಪಾಕಿಸ್ತಾನಕ್ಕೂ ಪಶ್ಚಿಮ ಪಾಕಿಸ್ತಾನಕ್ಕೂ ಸುಮಾರು ಸಾವಿರಾರು ಮೈಲಿಗಳ ಅಂತರ ಮಾತ್ರವಲ್ಲದೇ ಇವೆರಡರ ಮಧ್ಯದಲ್ಲಿ ಕಡುವೈರಿ ಭಾರತ! ಪಾಕಿಸ್ತಾನದ ಈ ದ್ವಂದ್ವ ವ್ಯಕ್ತಿತ್ವದ ಸಮಸ್ಯೆಗೆ ಪರಿಹಾರ ಸಿಕಿದ್ದು 1971ರ ಯುದ್ಧದಲ್ಲಿ ಭಾರತದ ಸೇನೆ ಪಶ್ಚಿಮ ಪಾಕಿಸ್ತಾನದ ಸೇನೆಯನ್ನು ಮಣಿಸಿ, ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವೆಂಬ ಹೆಸರಿನೊಂದಿಗೆ ಸ್ವತಂತ್ರ ದೇಶವಾದಾಗಲೇ.ಇಷ್ಟಕ್ಕೇ ಸೀಮಿತವಾಗದೆ ಮೊದಲ ಬಾರಿ ಭಾರತ ತನ್ನನ್ನು ತಾನು ರಾಜತಾಂತ್ರಿಕ ಮತ್ತು ಮಿಲಿಟರಿ ಶಕ್ತಿಯಾಗಿ ನಿರೂಪಿಸಿಕೊಂಡ ಯುದ್ದ ನಡೆದು ಈ ಡಿಸೆಂಬರ್ ಗೆ 45 ವರ್ಷಗಳಾಯಿತು. 90000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಬಂಧಿಸಲಾಯಿತು, ಪಾಕಿಸ್ತಾನದ ನೌಕಾದಳ ಬಹುತೇಕ ಮುಳುಗಿಹೋಗಿತ್ತು ಮತ್ತು ಭಾರತೀಯ ವಾಯುಸೇನೆ  ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ಸಾಬೀತುಪಡಿಸಿತ್ತು. ಪಾಕಿಸ್ತಾನಕ್ಕೆ ಇದು ಕೇವಲ ಸೋಲಾಗಿರದೆ ಚರಿತ್ರೆಯ ಬಹುದೊಡ್ಡ ಮುಖಭಂಗವಾಗಿತ್ತು. ಪಾಕಿಸ್ತಾನಕ್ಕೆ ನೆರವು ನೀಡಿ ಭಾರತವನ್ನು ಬೆದರಿಸಲು ಬಂದಿದ್ದ ಪ್ರಪಂಚದ ಬಲಾಢ್ಯ ಶಕ್ತಿಗಳು ಎಂದುಕೊಂಡಿದ್ದ ಬ್ರಿಟನ್ ಮತ್ತು ಅಮೆರಿಕಾಗಳಿಗೂ ಸಡ್ಡು ಹೊಡೆದು ಭಾರತ ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿತ್ತು.

1971ರ ಭಾರತ ಪಾಕಿಸ್ತಾನ ಯುದ್ಧಕ್ಕೆ ಕಾರಣ ಪೂರ್ವ ಪಾಕಿಸ್ತಾನದ ರಾಜಕೀಯ ಪ್ರಕ್ಷುಬ್ಧತೆ. ಪೂರ್ವ ಪಾಕಿಸ್ತಾನದ ಬೆಂಗಾಲಿಗಳು ಪಾಕಿಸ್ತಾನದ ಜನಸಂಖ್ಯೆಯ 54%ನಷ್ಟಿದ್ದರೂ, ಪಶ್ಚಿಮ ಪಾಕಿಸ್ತಾನದ ನಿರಂಕುಶ ಆಳ್ವಿಕೆಗೆ ತುತ್ತಾಗಿದ್ದರು. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು ಎರಡು ವಿಭಿನ್ನ ಭಾಷೆ ಜನಾಂಗಗಳಿಗೆ ಸೇರಿದ್ದು, ಪಶ್ಚಿಮ ಪಾಕಿಸ್ತಾನ ರಾಜಕೀಯ ಆರ್ಥಿಕತೆಯಿಂದ ಭಾಷೆ ಸಂಸ್ಕೃತಿಗಳನ್ನೂ ಪೂರ್ವ ಪಾಕಿಸ್ತಾನಿಗಳ ಮೇಲೆ ನಿರಂತರವಾಗಿ ಹೇರಲ್ಪಟ್ಟಿದ್ದು ಪೂರ್ವ ಪಾಕಿಸ್ತಾನೀಯರ ಅಸಮಧಾನಕ್ಕೆ ಕಾರಣವಾಗಿತ್ತು. ಬೆಂಗಾಲಿಗಳ ಸ್ವಾಯತ್ತತೆಯ ಬೇಡಿಕೆಯನ್ನು ಪಶ್ಚಿಮ ಪಾಕಿಸ್ತಾನ ನಿರಾಕರಿಸಿದ ಬಳಿಕ ಪೂರ್ವ ಪಾಕಿಸ್ತಾನದಲ್ಲಿ ಗೆರಿಲ್ಲಾ ಚಳುವಳಿ ಪ್ರಾರಂಭವಾಗುತ್ತದೆ. ಪಾಕಿಸ್ತಾನದ ಮಿಲಿಟರಿ ಆಡಳಿತ ಸುಮಾರು ಮೂವತ್ತು ಲಕ್ಷ ಬೆಂಗಾಲಿಗಳನ್ನು ಕೊಲ್ಲುವುದರ ಮೂಲಕ ಈ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತದೆ. ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಬೆಂಗಾಲಿಗಳ ರಕ್ಷಣೆಯ ಹೊಣೆ ಹೊರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದ ನವೆಂಬರ್ ಅಂತ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಯುದ್ಧಕ್ಕೆ ಪೂರ್ವಸಿದ್ಧತೆ ನಡೆಸುವಂತಾಗುತ್ತದೆ. 

ಡಿಸೆಂಬರ್ 3ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತದ ವೈಮಾನಿಕ ನೆಲೆಗಳ ಮೇಲೆ ದಾಳಿನಡೆಸುತ್ತವೆ. ಈ ಪ್ರಯತ್ನದಲ್ಲಿ ಪಾಕಿಸ್ತಾನ 1967ರಲ್ಲಿ ಇಸ್ರೇಲ್ ಈಜಿಪ್ಟ್ ವಿರುದ್ಧ ಬಳಸಿದ್ದ ಸಮರತಂತ್ರವನ್ನು ನಕಲು ಮಾಡುತ್ತದೆ. ವ್ಯಂಗ್ಯವೆಂದರೆ, ಇಸ್ರೇಲ್ ಇನ್ನೂರು ಯುದ್ಧವಿಮಾನಗಳನ್ನು ಬಳಸಿ ಕೆಲವೇ ಘಂಟೆಗಳಲ್ಲಿ ಸುಮಾರು ಐದುನೂರು ಈಜಿಪ್ಟ್ ನೆಲೆಗಳನ್ನು ಧ್ವಂಸಗೊಳಿಸಿದರೆ, ಪಾಕಿಸ್ತಾನ ಐವತ್ತು ಯುದ್ಧವಿಮಾನಗಳನ್ನು ಬಳಸಿ, ಈ ಪ್ರಯತ್ನದಲ್ಲಿ ಮುಖಭಂಗ ಅನುಭವಿಸುತ್ತದೆ. ಈ ಯುದ್ಧದಲ್ಲಿ ಶೀತಲ ಸಮರದ ಬಹುತೇಕ ಯುದ್ಧವಿಮಾನಗಳು ಮತ್ತಿನ್ನಿತರ ತಂತ್ರಜ್ಞಾನ ಬಳಸಲ್ಪಡುತ್ತದೆ. ಪಾಕಿಸ್ತಾನ  F­-104 ಸ್ಟಾರ್ ಫೈಟರ್ ಗಳು, F-­86 ಸೆಬರ್ ಗಳು, ಮಿಗ್ -19 ಮತ್ತು ಬಿ­-57 ಕ್ಯಾನ್ಬೆರಾಗಳನ್ನು ಬಳಸಿದರೆ ಪ್ರತ್ಯುತ್ತರವಾಗಿ ಭಾರತ ಮಿಗ್-­21, ಸುಕೊಯ್-7, ಹಾಕರ್ ಹಂಟರ್ ಮತ್ತು ಫೊಲಂಡ್ ಗ್ನಾಟ್ ಗಳೊಂದಿಗೆ ವಿಕ್ರಾಂತ್ ಯುದ್ಧವಿಮಾನ ವಾಹಕಗಳನ್ನು ಉಪಯೋಗಿಸಿತ್ತು. ಭಾರತದ ನೌಕಾದಳದ ಕ್ಷಿಪಣಿ ಸಹಿತ ದೋಣಿಗಳು ಮತ್ತು ಸೊವಿಯೆತ್ ನಿರ್ಮಿತ ಕ್ಷಿಪಣಿಗಳು ಕರಾಚಿಯ ಬಂದರಿನ ಜೊತೆಗೆ ಅಲ್ಲಿದ್ದ ಪಾಕಿಸ್ತಾನಿ ನೌಕೆಗಳನ್ನು ಪುಡಿಗಟ್ಟಿದ್ದವು. ಯುದ್ಧವಿಮಾನ ವಾಹಕ ವಿಕ್ರಾಂತ್ ಯುದ್ಧದದಲ್ಲಿ ಬಹುಮುಖ್ಯ ಪಾತ್ರ ವಹಿಸಿ ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿ ಕಾಡಲಾರಂಭಿಸಿತ್ತು. ಪ್ರತ್ಯುತ್ತರವಾಗಿ ಪಾಕಿಸ್ತಾನ ಕಳುಹಿಸಿದ ಎರಡು ಜಲಾಂತರ್ಗಾಮಿ ನೌಕೆಗಳಲ್ಲೊಂದಾದ ಹ್ಯಾಂಗರ್, ಭಾರತದ ಯುದ್ಧನೌಕೆಯೊಂದನ್ನು ಮುಳುಗಿಸಿತ್ತಾದರೂ, ಬಹುನಿರೀಕ್ಷೆಯಿಟ್ಟಿದ್ದ ಘಾಜಿ ಜಲಾಂತರ್ಗಾಮಿಯನ್ನು ಭಾರತದ ನೌಕಾದಳ ಆಶ್ಚರ್ಯಕರ ರೀತಿಯಲ್ಲಿ ನಾಶಗೊಳಿಸಿತ್ತು. ಭಾರತದ ಸಮರತಾಂತ್ರಿಕ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ ರೀತಿ ವಿಶ್ವದ ಯುದ್ಧ ನಿಪುಣರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಪೂರ್ವ ಪಾಕಿಸ್ತಾನವನ್ನು ಜಲ ಮತ್ತು ನೆಲಮಾರ್ಗಗಳಿಂದ ಸಂಪೂರ್ಣ ದಿಗ್ಭಂಧನಕ್ಕೊಳಪಡಿಸಿದ ಮೇಲೆ ವಿಶ್ವದ ಅತ್ಯಂತ ಬಲಿಷ್ಠ ಸೇನೆಗೂ ಅಭೇಧ್ಯವಾಗುವಂತ ರಣವ್ಯೂಹ ನಿರ್ಮಿಸಿತ್ತು ಭಾರತ್!. ಕ್ಷಿಪ್ರವಾಗಿ ಭಾರತೀಯ ಸೇನೆ ಪೂರ್ವ ಪಾಕಿಸ್ತಾನದ ಢಾಕಾವನ್ನು ವಶಪಡಿಸಿಕೊಳ್ಳುತ್ತದೆ ಮತ್ತು ಪಾಕಿಸ್ತಾನ ಡಿಸೆಂಬರ್ 16ರಂದು ಸಂಪೂರ್ಣವಾಗಿ ಶರಣಾಗತವಾಗುತ್ತದೆ. 

Image may contain: 1 person, shoes45 ವರ್ಷಗಳ ಹಿಂದೆ ನಡೆದ ಈ ಯುದ್ಧ ಬಾಂಗ್ಲಾದೇಶದ ಉದಯ ಮತ್ತು ಪಾಕಿಸ್ತಾನದ ಮೇಲಿನ ಭಾರತದ ವಿಜಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1971ರ ಹಿಂದಿನ ಜಾಗತಿಕ ವ್ಯವಸ್ಥೆ ಭಾರತವನ್ನು ಅತ್ಯಂತ ಹೀನಾಯವಾಗಿ ಮತ್ತು ಅತ್ಯಂತ ದುರ್ಬಲ ಶಕ್ತಿಯಾಗಿ ಪರಿಗಣಿಸಿತ್ತು. ವಿಶ್ವದ ಮಾತಿರಲಿ ದಕ್ಷಿಣ ಏಷ್ಯಾ ಪ್ರದೇಶದ ಪ್ರಾದೇಶಿಕ ಶಕ್ತಿಯಾಗಿಯೂ ಭಾರತವನ್ನು ಗುರುತಿಸಲು ಇತರ ರಾಷ್ಟ್ರಗಳು ಹಿಂಜರಿಯುತ್ತಿದ್ದವು. ಇದನ್ನು ಸಾಬೀತುಪಡಿಸಲು 1971ರ ಯುದ್ಧಕ್ಕೂ ಮುನ್ನ ದೂರವಾಣಿ ಸಂಬಾಷಣೆಯಲ್ಲಿ ಅಮೆರಿಕಾದ ಅಧ್ಯಕ್ಷ ನಿಕ್ಸನ್ ಮತ್ತು ಅವನ ಸಲಹೆಗಾರ ಕಿಸಿಂಜರ್ ಭಾರತದ ಬಗ್ಗೆ ಆಡಿದ ಮಾತುಗಳೇ ಸಾಕು. ಈ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮಾನೆಕ್ ಷಾ, ಭಾರತೀಯ ಸೇನೆ ಸೇರಿದಂತೆ ಇನ್ನೂ ಹಲವರು ವಿಶ್ವಕ್ಕೆ ಭಾರತದ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟ ಯುದ್ಧವಿದು. ಮಾನೆಕ್ ಷಾ ನೇತೃತ್ವದ ಸೇನೆ ಭಾರತದ ಸಮರತಂತ್ರ ಮತ್ತು ಮಿಲಿಟರಿ ಶಕ್ತಿಯನ್ನು ನಿರೂಪಿಸಿದರೆ, ಇಂದಿರಾ ಗಾಂಧಿ ರಾಜತಾಂತ್ರಿಕ ಜಾಣ್ಮೆಯಲ್ಲಿ ಭಾರತೀಯರು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ 1971ರ ಯುದ್ಧವನ್ನು ನಿಭಾಯಿಸಿದ್ದರು

ಯುದ್ಧ ನಡೆಯುವುದಕ್ಕೂ ಮೊದಲು ಭಾರತದ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹಲವಾರು ದೇಶಗಳಲ್ಲಿ ಪಾಕಿಸ್ತಾನ ಬೆಂಗಾಲಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗೆಗೆ ಅರಿವು ಮೂಡಿಸಿ ನೆರವು ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಂದಿರಾ ಗಾಂಧಿಯ ಶ್ರಮ ಬಹುಮಟ್ಟಿಗೆ ನಿರರ್ಥಕವಾಗುತ್ತದೆ. ವಿಶ್ವದ ಮುಂದುವರಿದ ಪ್ರಜಾಪ್ರಭುತ್ವಗಳಾದ ಮತ್ತು ಪ್ರಜಾಪ್ರಭುತ್ವದ ಸ್ವಯಂಘೋಷಿತ ಸಂರಕ್ಷಕರಾದ ಅಮೆರಿಕಾ ಮತ್ತು ಬ್ರಿಟನ್ ಗಳು ಪಾಕಿಸ್ತಾನವನ್ನು ಬೆಂಬಲಿಸುತ್ತವೆ! ಅಮೆರಿಕಾ ತನ್ನ ಸೂಪರ್ ಪವರ್ ಅಮಲಿನಿಂದ 1971ರ ಯುದ್ಧದಲ್ಲಿ  ಮೂಗು ತೂರಿಸುತ್ತದೆ. ಒಂದು ವೇಳೆ ಪಾಕಿಸ್ತಾನ ಈ ಯುದ್ಧದಲ್ಲಿ ಸೋತಲ್ಲಿ, ದಕ್ಷಿಣ ಏಷ್ಯಾದಲ್ಲಿ ಅಮೆರಿಕಾ ಪ್ರಭಾವ ಕುಗ್ಗಿ, ಸೊವಿಯೆತ್ ಪ್ರಭಾವಶಾಲಿಯಾಗುತ್ತದೆ ಎಂಬ ಕಾರಣಕ್ಕಾಗಿ ಭಾರತವನ್ನು ಶತಾಯಗತಾಯ ಸೋಲಿಸಲೇಬೇಕು ಎಂಬ ಪಣ ತೊಟ್ಟಿತ್ತು ಅಮೆರಿಕಾ.  ಪಾಕಿಸ್ತಾನ ಸರಕಾರ ಬೆಂಗಾಲಿಗಳ ಮೇಲೆ ನಡೆಸಿದ ದೌರ್ಜನ್ಯಗಳ ಅರಿವಿದ್ದರೂ, ಅಮೆರಿಕಾ ರಾಜತಂತ್ರಜ್ಞರ ವಿರೋಧದ ನಡುವೆಯೂ, ಅಮೆರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಪಾಕಿಸ್ತಾನವನ್ನು ಬೆಂಬಲಿಸುವ ನಿರ್ಧಾರಕ್ಕೆ ಬರುತ್ತಾರೆ. ಈಗಾಗಲೇ ಪೂರ್ವ ಮತ್ತು ಪಶ್ಚಿಮದಲ್ಲಿ ಹೋರಾಡುತ್ತಿರುವ ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನದ ಮಿತ್ರನಾದ ಚೀನಾ ಕೂಡ ಭಾರತದ ಉತ್ತರ ಗಡಿ ದಾಟಿ ಬರಬೇಕು ಎಂಬ ಯುದ್ಧತಂತ್ರವನ್ನು ನಿಕ್ಸನ್ ಮತ್ತು ಕಿಸಿಂಜರ್ ರಚಿಸುತ್ತಾರೆ. ಇವಿಷ್ಟೇ ಅಲ್ಲದೇ ಬಂಗಾಳ ಕೊಳ್ಳಿ ಮತ್ತು ಹಿಂದೂ ಮಹಾಸಾಗರವನ್ನು ಗುರಿಯಾಗಿರಿಸಿ ಯು.ಎಸ್.ಎಸ್ ಎಂಟರ್ ಪ್ರೈಸ್ ವಿಶ್ವದ ಬೃಹತ್ ಯುದ್ಧನೌಕೆಯನ್ನು ಭಾರತದ ವಿರುದ್ದ ಛೂ ಬಿಡುತ್ತದೆ ಅಮೆರಿಕಾ. ಅಮೆರಿಕನ್ನರ ಈ ಪ್ರಯತ್ನಕ್ಕೆ ಬ್ರೀಟನ್ ನ ಬಲಿಷ್ಟ ಯುದ್ಧನೌಕೆ ಈಗಲ್  ನೆರವಾಗಿ ನಿಲ್ಲುತ್ತದೆ. ಹೀಗೆ ಭಾರತವನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರಿದು ಭಾರತದ ಜಂಘಾಬಲವನ್ನುಡುಗಿಸುವ ಪ್ರಯತ್ನದಲ್ಲಿದ್ದವು ವಿಶ್ವದ ಬಲಾಢ್ಯ ಶಕ್ತಿಗಳು.

ಅಮೆರಿಕಾದ ಈ ಹೆಜ್ಜೆಯನ್ನು ಮೊದಲೇ ಊಹಿಸಿದ್ದ ಇಂದಿರಾ ಗಾಂಧಿ ಆಗಸ್ಟ್ 9ರಂದು ಸೊವಿಯೆತ್ ಒಕ್ಕೂಟದೊಂದಿಗೆ ಶಾಂತಿ, ಮಿತೃತ್ವ ಮತ್ತು ಸಹಕಾರ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು. ಇಂದಿರಾ ಗಾಂಧಿಯ ಈ ದಿಟ್ಟ ರಾಜತಾಂತ್ರಿಕ ನಡೆ ಅಮೆರಿಕಾ ಮತ್ತಿತರ ಶಕ್ತಿಗಳು ಬೆಚ್ಚಿ ಬೀಳುವಂತೆ ಮಾಡಿತ್ತು. ತತ್ ಕ್ಷಣ ಎಚ್ಚೆತ್ತುಕೊಂಡ ಅಮೆರಿಕಾ ತನ್ನ ಸಿದ್ಧತೆಗಳನ್ನೆಲ್ಲಾ ಕೈಬಿಟ್ಟು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯುದ್ಧವಿರಾಮಕ್ಕೆ ಸಂಕಲ್ಪವೊಂದನ್ನು ಮಂಡಿಸುತ್ತಾರೆ. ಆದರೆ ಸೊವಿಯೆತ್ ಒಕ್ಕೂಟ ಈ  ಅಮೆರಿಕಾದ ಈ ನಡೆಯನ್ನು ವಿಟೊ ಮಾಡಿ, ಬೆಂಗಾಲಿಗಳ ರಕ್ಷಣೆಗೆ ಹೋರಾಡಲು ಭಾರತಕ್ಕೊಂದು ಅವಕಾಶ ಕಲ್ಪಿಸುತ್ತಾರೆ. ಡಿಸೆಂಬರ್ 10ರಂದು ಭಾರತದತ್ತ ಧಾವಿಸುತ್ತಿದ್ದ ಬ್ರಿಟನ್ ಯುದ್ಧ ನೌಕೆ 'ಈಗಲ್' ಪತ್ತೆ ಮಾಡಿ, ಸೊವಿಯೆತ್ ನೌಕಾದಳ ತಡೆಯೊಡ್ಡಿದ್ದರಿಂದ, ಈಗಲ್ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಬೇಕಾಯ್ತು.  ಸೊವಿಯೆತ್ ನೌಕಾಶಕ್ತಿ ಸ್ಪಷ್ಟವಾಗಿ ಭಾರತ ಪರವಾಗಿದ್ದುದರಿಂದ ಅಮೆರಿಕಾದ ಬಲಾಢ್ಯ ಯುದ್ಧ ನೌಕೆ ಯು.ಎಸ್.ಎಸ್ ಎಂಟರ್ ಪ್ರೈಸ್ ಕೂಡ ಯುದ್ಧದಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗುತ್ತದೆ. ಅಮೆರಿಕಾ ಆದೇಶದಂತೆ ಚೀನೀಯರೇನೋ ಭಾರತದ ಉತ್ತರ ಗಡಿಭಾಗದಲ್ಲಿ ಆಕ್ರಮಣ ನಡೆಸಲು ಸಿದ್ಧವಾಗಿದ್ದರು. ಆದರೆ ಭಾರತದ ತಂಟೆಗೆ ಹೋದಲ್ಲಿ ಕಠಿಣ ಪ್ರತ್ಯುತ್ತರಕ್ಕೆ ಸಿದ್ಧರಾಗಿರಿ ಸೊವಿಯೆತ್ ಘರ್ಜಿಸಿದಾಗ ಚೀನಾದ ಯುದ್ಧೋತ್ಸಾಹ ಇಳಿದುಹೋಗಿತ್ತು! ಇದು ಭಾರತ ತೋರಿದ ರಾಜತಾಂತ್ರಿಕ ಪ್ರಬುದ್ಧತೆಯ ಫಲ. ವಿಶ್ವಕ್ಕೆ ರಾಜತಾಂತ್ರಿಕತೆ ಕಲಿಸಿದ ಗುರುಗಳು ನಾವು ಎಂದು ಬೀಗುತ್ತಿದ್ದ ಅಮೆರಿಕಾ ಇನ್ನಿತರ ಪಾಶ್ಚಾತ್ಯ ರಾಷ್ಟಗಳು, ಚಾಣಕ್ಯನನ್ನು ನೆನಪಿಸಿತ್ತು ಭಾರತ.

1971ರ ಯುದ್ಧ ಭಾರತವನ್ನು ಮಿಲಿಟರಿ ಶಕ್ತಿಯಾಗಿ ನಿರೂಪಿಸಿದ್ದಷ್ಟೇ ಅಲ್ಲದೇ ಅದ್ಭುತ ರಾಜತಾಂತ್ರಿಕ ಸಾಹಸಗಳಿಗೂ ಭಾರತೀಯರು ಸೈ ಎಂದು ಷರಾ ಬರೆದುಬಿಟ್ಟಿತ್ತು. ಈ ಯುದ್ಧದ ಇನ್ನೊಂದು ರೋಚಕ ಅಧ್ಯಾಯ ಗಂಗಾ ವಿಮಾನ ಅಪಹರಣ. ಯುದ್ಧ ಆರಂಭವಾಗುವ ಕೆಲ ತಿಂಗಳ ಹಿಂದೆ ಆಗಷ್ಟೇ ಅಂಬೆಗಾಲಿಡುತ್ತಿದ್ದ ಭಾರತದ ಗುಪ್ತಚರ ಸಂಸ್ಥೆ 'ರಾ' ಯೋಜಿಸಿ ಕಾರ್ಯಾಚರನೆಗಿಳಿಸಿದ 'ಗಂಗಾ ವಿಮಾನ ಅಪಹರಣ' ಪ್ರಕರಣವನ್ನು ನಿಭಾಯಿಸಿ, ಇದೇ ಕಾರಣವನ್ನಿಟ್ಟುಕೊಂಡು ಪಾಕಿಸ್ತಾನಿ ವಿಮಾನಗಳು ನೇರವಾಗಿ ಪೂರ್ವ ಪಾಕಿಸ್ತಾನ ತಲುಪದಂತೆ ನಿಷೇಧ ಹೇರಿತ್ತು! ಹೀಗೆ ಯುದ್ಧತಂತ್ರ ಮತ್ತು ರಾಜತಂತ್ರಗಳೆರಡರಲ್ಲೂ ಭಾರತ ಯಾವತ್ತಿಗೂ ಚಾಣಕ್ಯನೇ ಎಂದು ರುಜುವಾತುಪಡಿಸಿದ  ಯುದ್ಧವನ್ನು ಪ್ರತಿಯೊಬ್ಬ ಭಾರತೀಯನೂ ನೆನಪಿಸಿಕೊಳ್ಳಲೇಬೇಕು.

(This article was published in Vishwavani newspaper on 21 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ