ಭಾನುವಾರ, ಮಾರ್ಚ್ 26, 2017

ಏನಿದು ಯಜಿಡಿ ಯಾತನೆ.?

ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತವರ 'ಖಲಿಫೇಟ್' ಹುಚ್ಚು ಕನಸು ವಿಶ್ವದಾದ್ಯಂತ ಹಲವೆಡೆ ಪ್ರಕ್ಷುಬ್ಧ ಪರಿಸ್ಥಿತಿಗಳ ನಿರ್ಮಾಣಕ್ಕೆ ಕಾರಣವಾಗಿದೆ. ಒಂದೆಡೆ ಕರ್ದಿಶ್ ನ ಪೆಶ್ಮರ್ಗಾ, ಇರಾಕ್ ಸೇನೆಗಳು ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಸಮರ ಸಾರಿದ್ದರೆ, ಇನ್ನೊಂದೆಡೆ ವಿಶ್ವದ ಎಲ್ಲಾ ಪ್ರಮುಖ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಉದ್ಧಟತನವನ್ನು ಖಂಡಿಸಿವೆ. ಹಿಂಸೆ, ಸಿದ್ಧಾಂತ ಮತ್ತು ಶಕ್ತಿ ರಾಜಕೀಯದ ಲೆಕ್ಕಾಚಾರಗಳ ಮೇಲಾಟದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅತಿಯಾಗಿ ಶೋಷಣೆಗೊಳಗಾಗಿರುವ ಜನಾಂಗವೊಂದು ಯಾರ ಕಣ್ಣಿಗೂ ಬಿದ್ದಿಲ್ಲ. ತನ್ನ ಅಸ್ತಿತ್ವದೊಂದಿಗೆ ಅಭದ್ರತೆಯ ಭಾವನೆಯನ್ನು ಹೊತ್ತು ತಂದ, ಈ ವರೆಗೂ ಎಪ್ಪತ್ತಕ್ಕಿಂತಲೂ ಹೆಚ್ಚಿನ ಮಾರಣಹೋಮಗಳಿಗೆ ಬಲಿಯಾದ, ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತದಾಹಕ್ಕೆ ಬಲಿಯಾಗುತ್ತಿರುವ ಯಜಿಡಿ ಎನ್ನುವ ಜನಾಂಗ ಯಾವ ಮುಖ್ಯವಾಹಿನಿ ಚರ್ಚೆಯಲ್ಲೂ ಸ್ಥಾನ ಪಡೆದುಕೊಳ್ಳುತ್ತಿಲ್ಲ. ಯಜಿಡಿಗಳು ಮಧ್ಯಪ್ರಾಚ್ಯದ ಅಲ್ಪಸಂಖ್ಯಾತ ಜನಾಂಗಗಗಳಲ್ಲೊಂದು. ಈ ಜನಾಂಗದ ಜನಸಂಖ್ಯೆಯ ಕುರಿತಾಗಿ ಅಸ್ಪಷ್ಟ ಮಾಹಿತಿಗಳಿವೆ. ವಿಭಿನ್ನ ಆಧಾರಗಳು ನೀಡುವ ಮಾಹಿತಿಯಂತೆ ಜಗತ್ತಿನಾದ್ಯಂತ  70,000 ದಿಂದ 500,000 ಯಜಿಡಿಗಳಿದ್ದಾರೆ. ಇದೊಂದು ಅಲ್ಪಸಂಖ್ಯಾತ ಮತವಾಗಿದ್ದು ಕಾಲಕ್ರಮೇಣ ಅಳಿವಿನತ್ತ ಸಾಗುತ್ತಿರುವುದು ರುಜುವಾತಾಗಿದೆ. ಯಜಿಡಿಗಳ ಇನ್ನೊಂದು ವಿಶೇಷತೆಯೆಂದರೆ ಯಾರೊಬ್ಬರೂ ಯಜಿಡಿಯಿಸಂಗೆ ಮತಾಂತರವಾಗುವಂತಿಲ್ಲ, ಹುಟ್ಟಿನಿಂದಲೇ ಯಜಿಡಿಯಾಗಿರಬೇಕೆ ವಿನಃ ಮತಾಂತರದಿಂದ ಯಜಿಡಿಯಾಗಲು ಅಸಾಧ್ಯ!

ಮೆಸೊಪೊಟಾಮಿಯಾ ನಾಗರಿಕತೆಯ ಜೊತೆಗೆ ತಳುಕು ಹಾಕಿಕೊಂಡಿರುವ ಯಜಿಡಿಗಳ ಇತಿಹಾಸ, ಒಂದು ವಿಚಿತ್ರ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ಝೊರಾಸ್ಟ್ರಿಯನಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದಿಗಳ ಆಚಾರ ವಿಚಾರಗಳ ಪ್ರಭಾವವನ್ನು ಈ ಜನಾಂಗದಲ್ಲಿ ಕಾಣಬಹುದಾದರೂ, ಯಜಿಡಿಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯವೇನೆಂದರೆ, ಯಜಿಡಿಗಳ ಅನೇಕ ಸಂಪ್ರದಾಯಗಳು, ಲಾಂಛನಗಳು ಇನ್ನಿತರ ವಿಚಾರಗಳು ಹಿಂದೂ ಧರ್ಮವನ್ನು ಹೋಲುತ್ತವೆ. ಕೆಲ ವಿಶ್ಲೇಷಕರು ಯಜಿಡಿಗಳ ಚರಿತ್ರೆಗೆ ಹಿಂದೂ ಧರ್ಮದ ಕೊಂಡಿಗಳಿರುವುದು ಮತ್ತು ಮುಖ್ಯವಾಗಿ ತಮಿಳು ಸಂಸ್ಕೃತಿಯೊಂದಿಗೆ ಯಜಿಡಿ ಸಂಸ್ಕೃತಿ ಬೆಸೆದುಕೊಂಡಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ನೀಡುತ್ತಾರೆ. ತಮಿಳು ಸಂಸ್ಕೃತಿಯಲ್ಲಿ ಯಜ್ ಎನ್ನುವ ಸಂಗೀತ ಉಪಕರಣವೊಂದು ಬಳಕೆಯಲ್ಲಿದ್ದು, ತಿರುವಳ್ಳುವರ್ ಬರೆದ ಪ್ರಖ್ಯಾತ ಕೃತಿ 'ತಿರುಕ್ಕುರಲ್'ನಲ್ಲಿಯೂ ಈ ಬಗ್ಗೆ ಉಲ್ಲೇಖಗಳಿವೆ. ಪದದ ನಿಷ್ಪತ್ತಿಯ (Etymology) ಆಧಾರದಲ್ಲೂ ಯಜಿಡಿ ಮತ್ತು ಯಜ್ ಗಳಿಗೆ ಸಂಬಂಧವಿದೆ. ಯಜಿಡಿಗಳು ನವಿಲು ದೇವತೆಯನ್ನು ಪೂಜಿಸುತ್ತಿದ್ದು, ತಮಿಳರು ಪೂಜಿಸುವ ಮುರುಗನ ವಾಹನವೂ ನವಿಲು! ತಮಿಳಿನಲ್ಲಿ ನವಿಲಿಗೆ "ಮೈಲ್" ಎಂದರೆ ಯಜಿಡಿಗಳು ತಮ್ಮ ನವಿಲು ದೇವತೆಯನ್ನು "ಮೆಲೆಕ್ ಟವಾಸ್" ಎನ್ನುತ್ತಾರೆ! ತಮಿಳು ಅಸ್ಮಿತೆ ಮಾತ್ರವಲ್ಲದೇ ವಿಶಾಲ ಹಿಂದೂಧರ್ಮದ ಆಚಾರ ವಿಚಾರಗಳ ಜೊತೆಗೆ ಯಜಿಡಿ ಸಂಪ್ರದಾಯಗಳಿಗೆ ಸಾಮ್ಯತೆಯಿರುವ ನಿದರ್ಶನಗಳು ಸಾಕಷ್ಟಿವೆ. ಬಹಳ ವರ್ಷಗಳ ಹಿಂದೆ ಯಜಿಡಿಗಳು ಹಿಂದೂ ಧರ್ಮದಿಂದ ಬೇರ್ಪಟ್ಟ ಒಂದು ಗುಂಪಾಗಿರಬಹುದು ಎಂಬ ವಾದಗಳೂ ಇವೆಯಾದರೂ ಯಜಿಡಿಗಳಲ್ಲಿ ಇತರ ಆಚರಣೆಗಳೂ ಗಮನಾರ್ಹ ಪ್ರಮಾಣದಲ್ಲಿರುವುದೂ ಅಷ್ಟೇ ಸತ್ಯ.
Image may contain: 1 personಯಜಿಡಿಗಳೆಂದರೆ "ದೇವರ ಆರಾಧಕರು" ಎಂದರ್ಥ. ಆದರೆ ಐತಿಹಾಸಿಕವಾಗಿ ಯಜಿಡಿ ಜನಾಂಗವನ್ನು ದೆವ್ವ/ದುಷ್ಟಶಕ್ತಿಯ ಆರಾಧಕರು ಎಂದು ಸುತ್ತಲಿದ್ದ ಅರಬ್ಬರು ಮತ್ತು ಟರ್ಕರು ತಪ್ಪಾಗಿ ಪರಿಭಾವಿಸಿದ್ದರು. ಈ ತಪ್ಪು ಪರಿಕಲ್ಪನೆಯಿಂದಾಗಿ ಯಜಿಡಿಯಿಸಂ ನಿರಂತರವಾಗಿ ಅರಬ್ ಮತ್ತು ಟರ್ಕ್ ದಾಳಿಗಳಿಗೆ ಒಳಗಾಯಿತು. ಮೂಲತಃ ಅತ್ಯಂತ ಶಾಂತಿಯುತ ಜನಾಂಗವಾಗಿದ್ದ ಯಜಿಡಿಯಿಸಂ ತಪ್ಪು ಕಲ್ಪನೆಗಳಿಂದಾಗಿ ಕ್ರಿಶ್ಚಿಯನ್ನರ ಅವಗಣನೆಗೂ ಒಳಗಾಗಬೇಕಾಯ್ತು! ಯಜಿಡಿಗಳು, ಇಸ್ಲಾಂ ಸಂಪ್ರದಾಯದಂತೆ ಒಬ್ಬನೇ ದೇವರಲ್ಲಿ ನಂಬಿಕೆಯಿರುವವರು. ಯಜಿಡಿ ಪುರಾಣಗಳು ಹೇಳುವಂತೆ ಯಜಿಡಿಗಳ ದೇವರು ಖುಡೆ, ಏಳು ದೇವತೆಗಳನ್ನು ಸೃಷ್ಟಿಸಿ ಅವರಿಗೊಬ್ಬ ಮೆಲೆಕ್ ಟಾವಸ್ (ನವಿಲು ದೇವತೆ) ಎಂಬ ನಾಯಕನನ್ನೂ ಸೃಷ್ಟಿಸುತ್ತಾನೆ. ಹೀಗೆ ದೇವರಿಂದ ನಿಯೋಜಿಸಲ್ಪಟ್ಟ ಮೆಲೆಕ್ ಟಾವಸ್ ಭೂಮಿಯ ಅವ್ಯವಸ್ಥೆಯನ್ನು ಸರಿಪಡಿಸಿ ಮನುಷ್ಯ ಮತ್ತು ದೇವರ ನಡುವಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ವಿಪರ್ಯಾಸವೆಂದರೆ, ಈ ಪುರಾಣದ ಕಥೆಯೇ ಯಜಿಡಿ ಜನಾಂಗದ ಮೇಲೆ ಪದೇ ಪದೇ ಮಾರಣಹೋಮಗಳಿಗೂ ಕಾರಣವಾಗುತ್ತದೆ. ದುರದೃಷ್ಟವಶಾತ್ ಯಜಿಡಿ ಪುರಾಣದಲ್ಲಿ ಬರುವ ನವಿಲು ದೇವತೆ ಮೆಲೆಕ್ ಟಾವಸ್ ಮತ್ತು ಇಸ್ಲಾಂ ನಲ್ಲಿ ಬರುವ ಸೈತಾನನ ಕಥೆಗೂ ಅಚ್ಚರಿ ಎನಿಸುವಷ್ಟು ಸಾಮ್ಯತೆಗಳಿವೆ! ಯಜಿಡಿಗಳು ಪೂಜಿಸುವ ಮೆಲೆಕ್ ಟವಾಸ್ ನನ್ನೇ, ತಮ್ಮ ಅಲ್ಲಾನ ವಿರೋಧಿ ಸೈತಾನ ಎಂದುಕೊಂಡ ಟರ್ಕರು ಮತ್ತು ಅರಬ್ಬರು ಹದಿನೈದನೇ ಶತಮಾನದಿಂದಲೂ ನಿರಂತರವಾಗಿ ಯಜಿಡಿಗಳ ರಕ್ತ ಹರಿಸುತ್ತಿದ್ದಾರೆ. ಇದುವರೆಗೂ ಎಪ್ಪತ್ತಕ್ಕಿಂತಲೂ ಹೆಚ್ಚಿನ ಮಾರಣಹೋಮಗಳಿಗೆ ಬಲಿಯಾದ ದುರಂತ ಕಥೆ ಯಜಿಡಿಗಳದ್ದು! ಕತ್ತಿಯೇಟಿನಿಂದ ತಪ್ಪಿಸಿಕೊಂಡ ಯಜಿಡಿಗಳು ಉತ್ತರ ಇರಾಕಿನ ಪರ್ವತಶ್ರೇಣಿಗಳಲ್ಲಿ ಕರ್ದಿಶ್ ಜನರೊಂದಿಗೆ ಆಶ್ರಯ ಪಡೆದರು. ಬಹಳಷ್ಟು ತಲೆಮಾರುಗಳ ಹಿಂದೆ ತಾವು ಕೂಡ ಪುರಾತನ ಯಜಿಡಿಯಿಸಂಗೆ ಸೇರಿದ್ದವರು ಎಂಬ ನಂಬಿಕೆ ಅನೇಕ ಕರ್ದಿಶ್ ಜನರಲ್ಲಿದೆ. ಹೀಗಾಗಿ ಆಶ್ರಯಕ್ಕಾಗಿ ಬಂದ ಯಜಿಡಿಗಳನ್ನು, ತಮ್ಮ ಹಳೆಯ ಸಂಪ್ರದಾಯ ಸಂಸ್ಕೃತಿಗಳ ದ್ಯೋತಕವಾಗಿ ಕರ್ದಿಶ್ ಜನರು ಪರಿಗಣಿಸುತ್ತಾರೆ. ಆದರೆ ಇತ್ತೀಚಿನ ಬೆಳವಣಿಗೆಗಳ ಜೊತೆ ಕರ್ದಿಶ್ ಪೆಶ್ಮರ್ಗಾ ಸೇನೆ ಮತ್ತು ಯಜಿಡಿಗಳ ಮಧ್ಯೆ ಭಿನಾಭಿಪ್ರಾಯಗಳು ಬಗೆಹರಿಸಲಾರದಷ್ಟು ವಿಕೋಪಕ್ಕೆ ಹೋಗಿವೆ.

ಸತತವಾಗಿ ಭಯ ಭೀತಿಯಿಂದಲೇ ಕಾಲ ಸವೆಸಿದ ಯಜಿಡಿಗಳ ನಿದ್ದೆಗೆಡಿಸಲು ಇದೀಗ ಇಸ್ಲಾಮಿಕ್ ಸ್ಟೇಟ್ ಅಬ್ಬರಿಸುತ್ತಿದೆ. ಇಸ್ಲಾಮಿಕ್ ಸ್ಟೇಟ್ ತನ್ನ ಹುಟ್ಟಿನೊಂದಿಗೇ ಯಜಿಡಿಗಳ ನರಮೇಧದತ್ತ ತನ್ನ ಚಿತ್ತ ನೆಟ್ಟಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ವೈರಿ ಎಂದು ಪರಿಗಣಿಸಿರುವ ಉಮಯ್ಯಾದ್ ಸಂತತಿಯ ಎರಡನೇ ಖಲೀಫ ಯಜಿಡ್ ಇಬಿನ್ ಮುಅವಿಯಾ ಮತ್ತು ಯಜಿಡಿ ಜನಾಂಗದ ಹೆಸರುಗಳಲ್ಲಿ ಸಾಮ್ಯತೆಯಿರುವುದರಿಂದ ಇಸ್ಲಾಮಿಕ್ ಸ್ಟೇಟ್ ಯಜಿಡಿಗಳ ಮೇಲೆ ತನ್ನ ವಕ್ರದೃಷ್ಟಿ ಬೀರಿದೆ. ಆದರೆ ಆಧುನಿಕ ಸಂಶೋಧನೆಗಳ ಪ್ರಕಾರ ಯಜಿಡ್ ಇಬಿನ್ ಮುಅವಿಯಾ ಗೂ ಯಜಿಡಿ ಜನಾಂಗಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ರುಜುವಾತಾಗಿದೆ. ಹೀಗೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ತಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೂ, ಯಜಿಡಿಗಳು ಕುರಾನ್ ಮತ್ತು ಬೈಬಲ್ ಗಳೆರಡನ್ನೂ ಪೂಜ್ಯ ದೃಷ್ಟಿಯಿಂದ ಕಾಣುತ್ತಾರೆ. ಈಗಾಗಲೇ 74 ನರಮೇಧಗಳಿಂದ ನಲುಗಿಹೋಗಿರುವ ಯಜಿಡಿಗಳು, ೨೦೦೪ರಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತಪಿಪಾಸುತನಕ್ಕೆ ಬಲಿಯಾಗುತ್ತಿದ್ದಾರೆ. ಕರ್ದಿಶ್ ಪೆಶ್ಮರ್ಗಾ ಸೇನೆಯೂ ಇದೀಗ ಯಜಿಡಿಗಳ ಬೆಂಬಲಕಿಲ್ಲ, ಪಾಶ್ಚಾತ್ಯ ರಾಷ್ಟ್ರಗಳಿಗೂ ಯಜಿಡಿಗಳ ಗೋಳು ಕೇಳಲು ಸಮಯವಿಲ್ಲ. ಮಧ್ಯಪ್ರಾಚ್ಯದ ಅತ್ಯಂತ ಪ್ರಾಚೀನ ಜನಾಂಗ/ಮತವಾಗಿರುವ ಯಜಿಡಿಗಳು ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಗೆ ಮತಾಂತರವಾಗಲು ಒಪ್ಪದಿರುವುದೇ ಇದಕ್ಕೆಲ್ಲಾ ಕಾರಣ. ಇಸ್ಲಾಮಿಕ್ ಸ್ಟೇಟ್ ಕಪಿಮುಷ್ಟಿಯಲ್ಲಿ ಸಿಲುಕುವ ಯಜಿಡಿಗಳಿಗೆ ಎರಡು ಅವಕಾಶಗಳಿರುತ್ತವೆ. ಒಂದೋ ಮತಾಂತರ ಇಲ್ಲವೇ ಸಾವು! ಹೆಣ್ಣಾಗಿದ್ದರೆ ಮೂರನೇ ಅವಕಾಶವೊಂದಿದೆ ಅದೇ ಗುಲಾಮಗಿರಿ!

ಇಸ್ಲಾಮಿಕ್ ಸ್ಟೇಟ್ ದುರಾಕ್ರಮಣವನ್ನು ನೋಡಿಕೊಂಡು ಯಜಿಡಿಗಳು ಕೈಕಟ್ಟಿ ಕುಳಿತಿಲ್ಲ. ಯಜಿಡಿಗಳ ಸ್ವತಂತ್ರ ಹೋರಾಟಗಾರರ ಗುಂಪೊಂದಿದೆ. ಮಟ್ಟಿಗೆ ತಮ್ಮ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಯಜಿಡಿಗಳು ಹೋರಾಡುತ್ತಿದ್ದಾರೆ. ಕರ್ದಿಶ್ ಸೇನೆಯೂ ಇಸ್ಲಾಮಿಕ್ ಸೇನೆಯ ವಿರುದ್ಧ ಹೋರಾಡುತ್ತಿದೆಯಾದರೂ ಇವರುಗಳ ಮಧ್ಯೆ ಸಮನ್ವಯತೆ ಇಲ್ಲ. 2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಯಾದಾಗ ಕರ್ದಿಶ್ ಪೆಶ್ಮರ್ಗಾ ಸೇನೆ ಯಜಿಡಿಗಳನ್ನು ಶತ್ರುವಿನ ಬಾಯಿಗೆ ತಳ್ಳಿ ತಾವು ತಪ್ಪಿಸಿಕೊಂಡಿದ್ದರು. ಹೀಗೆ ಪರಾರಿಯಾಗುವಾಗ ಆಯುಧಗಳ ಸಮೇತ ಪರಾರಿಯಾಗಿ ಅವರನ್ನೇ ನಂಬಿದ್ದ ಯಜಿಡಿಗಳಿಗೆ ನಂಬಿಕೆ ದ್ರೋಹವೆಸಗಿದ್ದನ್ನು ಇವತ್ತಿಗೂ ಯಜಿಡಿಗಳು ನೆನಪಿಸಿಕೊಳ್ಳುತ್ತಾರೆ. ಮಧ್ಯಪ್ರಾಚ್ಯದ ಬೃಹತ್ ಮೊಸುಲ್ ರಣರಂಗದಲ್ಲಿ ಯಜಿಡಿಗಳು ಅಲ್ಪಪ್ರಮಾಣದಲ್ಲಿದ್ದರೂ, ಕರ್ದಿಶ್ ಸೇನೆಯ ನಂಬಿಕೆ ದ್ರೋಹದ ನಂತರ ನಮ್ಮದೇ ಯುದ್ಧ, ನಾವೇ ಯೋಧರು ಎಂಬಂತೆ ಹೋರಾಟ ಮುಂದುವರಿಸಿರುವ ಯಜಿಡಿಗಳು ಸಿಂಜಾರ್ ನಗರವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

(This article was published in Hosadigantha Newsapaper on 16 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ