ಭಾನುವಾರ, ಮಾರ್ಚ್ 26, 2017

ಜೈ ಮಹಾಕಾಳಿ, ಆಯೊ ಗೂರ್ಖಾಲಿ.!!

"ಒಬ್ಬ ವ್ಯಕ್ತಿ ಸಾವಿಗೆ ಭಯಪಡುವುದಿಲ್ಲ ಎಂದು ಹೇಳುತ್ತಾನೆಂದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ ಅಥವಾ ಅವನೊಬ್ಬ ಗೂರ್ಖಾ ಆಗಿರುತ್ತಾನೆ" ಇದು ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಭಾರತೀಯ ಸೇನೆಯಲ್ಲಿರುವ ಗೂರ್ಖಾ ಸೈನಿಕರ ಕುರಿತಾಗಿ ಹೇಳಿದ ಮಾತು. ಗೂರ್ಖಾಗಳಲ್ಲಿ ಭಾರತೀಯರಿದ್ದರೂ ಗಣನೀಯ ಪ್ರಮಾಣದ ಗೂರ್ಖಾ ಸೈನಿಕರು ನೇಪಾಳದ ಪ್ರಜೆಗಳು. ಭಾರತೀಯ ಸೇನೆಯ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಗೂರ್ಖಾಗಳ ರಣಘೋಷ "ಜೈ ಮಹಾಕಾಳಿ, ಆಯೊ ಗೂರ್ಖಾಲಿ" (ಮಹಾಕಾಳಿಗೆ ಜಯವಾಗಲಿ, ಗೂರ್ಖರು ಬರುತ್ತಿದ್ದಾರೆ!) ಯುದ್ಧಭೂಮಿಯಲ್ಲಿ ಘಟಾನುಗಟಿ ಶತ್ರುಗಳ ಎದೆಯಲ್ಲೂ ನಡುಕ ಹುಟ್ಟಿಸಬಲ್ಲುದು! ಈ ವರ್ಷ ಗೂರ್ಖಾ ಬ್ರಿಗೇಡಿನ ಹಳೆಯ ರೆಜಿಮೆಂಟುಗಳಲ್ಲೊಂದಾದ ಒಂಬತ್ತನೇ ಗೂರ್ಖಾ ರೈಫಲ್ ದ್ವಿಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ರೆಜಿಮೆಂಟಿನ ಮೊದಲ ಬೆಟಾಲಿಯನ್, ಬ್ರಿಟಿಷರಿಂದ 1817ರಲ್ಲಿ ರಚಿಸಲ್ಪಟ್ಟಿತು. ವಾಸ್ತವದಲ್ಲಿ ಬ್ರಿಟಿಷರಿಗಿಂತ ಮೊದಲು ಮಹಾರಾಜ ರಣಜಿತ್ ಸಿಂಗ್, ಗೂರ್ಖಾಗಳ ಧೈರ್ಯ ಸಾಹಸಗಳನ್ನು ಮೆಚ್ಚಿ 1809ರಲ್ಲೇ ಸಿಖ್ ಸೈನ್ಯದಲ್ಲಿ ಗೂರ್ಖಾ ಬೆಟಾಲಿಯನ್ ರಚಿಸಿದ್ದರು. ಲಾಹೋರ್ ರಣಜಿತ್ ಸಿಂಗ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾರಣಕ್ಕೆ ರಣಜಿತ್ ಸಿಂಗ್ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೂರ್ಖಾಗಳನ್ನು ನೇಪಾಳದಲ್ಲಿ 'ಲಾಹೋರಿ' ಎಂದು ಗುರುತಿಸಲಾರಂಭಿಸಿದರು. ಇವತ್ತಿಗೂ ಭಾರತೀಯ ಸೇನೆಯಲ್ಲಿರುವ ಗೂರ್ಖಾ ಸೈನಿಕರನ್ನು ನೇಪಾಳಿಗರು ಲಾಹೋರಿಗಳೆಂದೇ ಗುರುತಿಸುತ್ತಾರೆ.

ಬ್ರಿಟಿಷ್ ಸೇನೆಯಲ್ಲಿದ್ದ ಹತ್ತು ಗೂರ್ಖಾ ರೆಜಿಮೆಂಟುಗಳು ಸ್ವಾತಂತ್ರ್ಯಾನಂತರದಲ್ಲಿ ವಿಭಜಿಸಲ್ಪಟ್ಟು ಆರು ರೆಜಿಮೆಂಟುಗಳು ಭಾರತದ ಸೇನೆಗೆ ಸೇರಿದರೆ ಇನ್ನುಳಿದ ನಾಲ್ಕು ರೆಜಿಮೆಂಟುಗಳು ಬ್ರಿಟಿಷ್ ಸೇನೆಯಲ್ಲಿ ಉಳಿದವು. ಆದರೆ ಬಹಳಷ್ಟು ಗೂರ್ಖಾ ಸೈನಿಕರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಲು ಬಯಸಿದ ಕಾರಣ ಹನ್ನೊಂದನೇ ರೆಜಿಮೆಂಟ್ ರಚಿಸಲಾಯಿತು. ಹೀಗಾಗಿ ಸದ್ಯ ಭಾರತೀಯ ಸೇನೆಯಲ್ಲಿರುವ ಗೂರ್ಖಾ ಬ್ರಿಗೇಡ್ ಏಳು ರೆಜಿಮೆಂಟುಗಳನ್ನು ಹೊಂದಿದೆ. ಪ್ರತಿಯೊಂದು ರೆಜಿಮೆಂಟಿನಲ್ಲೂ ಐದರಿಂದ ಆರು ಬೆಟಾಲಿಯನ್ ಗಳಿವೆ. ಸುಮಾರು 40,000  ಭಾರತ ಮತ್ತು ನೇಪಾಳಗಳಿಗೆ ಸೇರಿದ ಗೂರ್ಖಾ ಯೋಧರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ 3 ಪರಮವೀರ ಚಕ್ರ, 33 ಮಹಾವೀರ ಚಕ್ರ ಮತ್ತು 84 ವೀರ ಚಕ್ರಗಳು ಗೂರ್ಖಾ ರೆಜಿಮೆಂಟ್ ಸಾಹಸಗಳಿಗೆ ಸಾಕ್ಷಿಯಾಗಿದೆ. ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಗೂರ್ಖಾ ಬ್ರಿಗೇಡಿನವರೇ. ನಾಲ್ಕನೇ ಗೂರ್ಖಾ ರೈಫಲ್ಸ್ ರೆಜಿಮೆಂಟ್, ಸಿಯಾಚಿನ್ ಮೇಘದೂತ ಕಾರ್ಯಾಚರನೆಯ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಏಳು ಗೂರ್ಖಾ ರೆಜಿಮೆಂಟ್ ಗಳ ಅತ್ಯಂತ ಹಿರಿಯ ಅಧಿಕಾರಿ ಈ ಗೂರ್ಖಾ ಬ್ರಿಗೇಡಿನ ಮುಖ್ಯಸ್ಥರಾಗಿರುತ್ತಾರೆ. ಪ್ರಸಕ್ತ ಭಾರತದ ಭೂಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
Image may contain: 1 personಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೂರ್ಖಾ ಸೈನಿಕರು ಭಾರತ ಮತ್ತು ನೇಪಾಳದ ವಿಶೇಷ ರಾಜತಾಂತ್ರಿಕ ಸಂಬಂಧಗಳಿಗೂ ಸೇತುವೆಯಾಗುತ್ತಾರೆ. ಭಾರತ ತನ್ನ ರಕ್ಷಣಾ ಪಡೆಗಳಲ್ಲಿ ನೇಪಾಳಿಗರಿಗೆ ನೀಡಿದ ಅವಕಾಶಗಳನ್ನು ಯಾವುದೇ ಒಂದು ಸಾರ್ವಭೌಮ ರಾಷ್ಟ್ರ ತನ್ನ ಸೇನೆಯಲ್ಲಿ ನೆರೆ ರಾಷ್ಟ್ರದ ಪ್ರಜೆಗಳಿಗೆ ನೀಡಿಲ್ಲ! ಸೇನೆ ಸೇರಬೇಕೆಂದು ಬಯಸುವ ಪ್ರತಿ ನೇಪಾಳಿ ಯುವಕನಿಗೂ ಅವಳಿ ಅವಕಾಶಗಳಿದ್ದು, ಆತ ನೇಪಾಳೀ ಸೇನೆ ಮಾತ್ರವಲ್ಲದೇ ಭಾರತೀಯ ಸೇನೆಯಲ್ಲೂ ಯಾವುದೇ ಅಡೆತಡೆಗಳಿಲ್ಲದೇ ಆತನ ವೃತ್ತಿ ಜೀವನ ಆರಂಭಿಸಬಹುದು. ಈಗಾಗಲೇ ಹಲವು ನೇಪಾಳಿ ಪ್ರಜೆಗಳನ್ನು ಭಾರತೀಯ ಸೇನೆಯಲ್ಲಿ ಮೇಜರ್, ಲೆಫ್ಟಿನೆಂಟ್ ಜನರಲ್ ಗಳಂಥ ಉನ್ನತ ಮತ್ತು ಜವಾಬ್ದಾರಿಯುತ ಸ್ಥಾನಕ್ಕೇರಿಸಲಾಗಿದೆ. ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ, ದೇಶವೊಂದು ಇದಕ್ಕಿಂತ ದೊಡ್ದ ಗೌರವ ನೀಡಲು ಸಾಧ್ಯವಿಲ್ಲ ಮತ್ತು ಭಾರತ ನೇಪಾಳೀ ಸೈನಿಕರ ಮೇಲಿಟ್ಟಿರುವ ವಿಶ್ವಾಸಕ್ಕೆ ಸರಿಸಾಟಿಯಾಗಬಲ್ಲ ಉದಾಹರಣೆ ಬೇರೆಲ್ಲೂ ಸಿಗಲಾರದು. ನೇಪಾಳ ಮತ್ತು ಭಾರತದ ಮಧ್ಯೆ ಇರುವ ರಾಜಕೀಯ ಜಟಾಪಟಿಗಳನ್ನು ಸುದ್ಧಿ ಮಾಡುವ ಮಾಧ್ಯಮಗಳಿಗೂ ಇಂಥದ್ದೊಂದು ಅಪೂರ್ವ ಮೈತ್ರಿ ಕಾಣದೇ ಇರುವುದು ದುರದೃಷ್ಟವೇ ಸರಿ. ಇವಿಷ್ಟೇ ಅಲ್ಲದೇ ಭಾರತ ಮತ್ತು ನೇಪಾಳದ ವಿಶಿಷ್ಟ ಸಂಪ್ರದಾಯದ ಪ್ರಕಾರ ಸೇನಾ ಮುಖ್ಯಸ್ಥರು ಪರಸ್ಪರ ದೇಶಗಳ ಗೌರವ ಜನರಲ್ ಆಗಿರುತ್ತಾರೆ. ಸದ್ಯ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ರಾಜೇಂದ್ರ ಚೆಟ್ರಿ ಭಾರತೀಯ ಸೇನೆಯ ಗೌರವ ಜನರಲ್ ಆಗಿದ್ದಾರೆ. ಇದೇ ರೀತಿ ಭಾರತದ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ರವರ ಮೊದಲ ನೇಪಾಳ ಭೇಟಿಯಲ್ಲಿ ನೇಪಾಳ ಸೇನೆಯ ಗೌರವ ಜನರಲ್ ಎಂಬ ಗೌರವಕ್ಕೆ ಪಾತ್ರರಾಗುತ್ತಾರೆ.

ಅಮೆರಿಕಾದಂಥಾ ಶ್ರೀಮಂತ ರಾಷ್ಟ್ರಗಳು ಸಮಯ ಸಂದರ್ಭಕ್ಕೆ ಇತರರನ್ನು ತನ್ನ ಲಾಭಕ್ಕೆ ಬಳಸಿಕೊಂಡು ತಮಗೆ ಬೇಡವಾದಾಗ ತಿರಸ್ಕರಿಸುವ ವಿಕೃತಿ ಪ್ರದರ್ಶಿಸುತ್ತಿದ್ದರೂ, ಭಾರತ ಯಾವತ್ತಿಗೂ ನೇಪಾಳದ ಗೂರ್ಖಾ ಯೋಧರನ್ನು ಮಲತಾಯಿ ಧೋರಣೆ ಅಥವಾ ಬಾಡಿಗೆ ಸೈನಿಕರ ರೀತಿ ನಡೆಸಿಕೊಂಡಿಲ್ಲ ಎನ್ನುವುದು ವಿಶೇಷ. ನೇಪಾಳದಲ್ಲಿರುವ ಭಾರತೀಯ ದೂತಾವಾಸ, ಭಾರತದ ಸೇನೆ ಮತ್ತು ಪ್ಯಾರಾಮಿಲಿಟರಿಗಳಲ್ಲಿ ಕಾರ್ಯ ನಿರ್ವಹಿಸಿದ ನೇಪಾಳದ ಮಾಜಿ ಸೈನಿಕರ ಯೋಗಕ್ಷೇಮದ ಜವಾಬ್ದಾರಿ ನೋಡಿಕೊಳ್ಳುತ್ತದೆ. ಭಾರತಕ್ಕೋಸ್ಕರ ಪ್ರಾಣಾರ್ಪಣೆ ಮಾಡಿದವರು ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ನೇಪಾಳದಲ್ಲಿರುವ ಭಾರತೀಯ ದೂತಾವಾಸ ಸಮರ್ಥವಾಗಿ ನಿಭಾಯಿಸುತ್ತಿದೆ. ಕಾಟ್ಮಂಡು, ಪೊಖಾರ ಮತ್ತು ಧರನ್ ಗಳಲ್ಲಿ ಪಿಂಚಣಿ ಕಛೇರಿಗಳನ್ನು ಹೊಂದಿರುವ ದೂತಾವಾಸ ಸುಮಾರು 90,000 ಮಾಜಿ ಸೈನಿಕರು ಮತ್ತು 37,000ದಷ್ಟು ಪ್ಯಾರಾಮಿಲಿಟರಿ ಮತ್ತಿನ್ನಿತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದವರಿಗೆ ನಿವೃತ್ತಿ ವೇತನ ಒದಗಿಸುತ್ತಿದೆ. ನೇಪಾಳದಲ್ಲಿರುವ ಭಾರತೀಯ ಮಾಜಿ ಸೈನಿಕರ ಕಲ್ಯಾಣ ಸಂಘ, ನೇಪಾಳದಲ್ಲಿರುವ ಭಾರತೀಯ ರಾಯಭಾರಿಯ ನೇತೃತ್ವದಲ್ಲಿರುವ ಸ್ವತಂತ್ರ ಸಂಘಟನೆಯಾಗಿದ್ದು ನೇಪಾಳದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವತ್ತ ಭಾರತ ಸರಕಾರ ಕೈಗೊಂಡ ದಿಟ್ಟ ನಿರ್ಧಾರವನ್ನು, ಗುರಿ ತಲುಪಿಸಲು ನೇಪಾಳದಲ್ಲಿನ ಮಾಜಿ ಸೈನಿಕರು ಅಸಾಮಾನ್ಯ ಶ್ರದ್ದೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡರು. ದೂರದ ಗುಡ್ಡಗಾಡು ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿಂದ ಮಾಜಿ ಯೋಧರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನೂ ಒದಗಿಸಿದ ಹಿರಿಮೆ ಈ ಯೋಜನೆಗಿದೆ. ಈ ಕೆಲಸಗಳಿಂದಾಗಿ ಮಾಜಿ ಯೋಧರಿಗೆ ಅವಕಾಶಗಳನ್ನು ಸೃಷ್ಟಿ ಮಾಡಿದ್ದಷ್ಟೇ ಅಲ್ಲದೇ ಸಾಮಾಜಿಕ ಗೌರವವನ್ನೂ ಸಂಪಾದಿಸಿವೆ. ಇವೆಲ್ಲಕ್ಕಿಂತಾ ಮಿಗಿಲಾಗಿ ಭಾರತದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವ ರಾಯಭಾರಿಗಳಾಗಿ ಒಂದು ಲಕ್ಷಕ್ಕೂ ಹೆಚ್ಚು ಮಾಜಿ ಯೋಧರು ನೇಪಾಳದಲ್ಲಿ ಸಾಮಾಜಿಕ ಹೋರಾಟವನ್ನೇ ನಡೆಸುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ ಗೂರ್ಖಾಗಳ ಅಸ್ಮಿತೆ ಮತ್ತು ಅಸ್ಥಿತ್ವಕ್ಕೆ ಇನ್ನೂ ಹತ್ತು ಹಲವು ಮುಖಗಳಿವೆ. ಆದರೂ ಗೂರ್ಖಾಗಳು ಮತ್ತು ಭಾರತೀಯ ಸೇನೆಯ ಈ ಅನನ್ಯ ಬಾಂಧವ್ಯವೂ ಟೀಕೆಗಳಿಂದ ಹೊರತಾಗಿಲ್ಲ. ಕೆಲ ಭಾರತೀಯರು, ಭಾರತದಲ್ಲೇ ಸಾಕಾಗುವಷ್ಟು ಮಾನವ ಸಂಪನ್ಮೂಲವಿರುವಾಗ ನೇಪಾಳದ ಗೂರ್ಖಾಗಳಿಗೇಕೆ ಕರೆದು ಕೆಲಸ ನೀಡಬೇಕು ಎನ್ನುತ್ತಿದ್ದರೆ, ಅತ್ತ ಕೆಲ ನೇಪಾಳಿಗಳು ನಮ್ಮ ಗೂರ್ಖಾಗಳೇಕೆ ಇನ್ನೊಂದು ರಾಷ್ಟ್ರದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುತ್ತಿದ್ದಾರೆ. ಸುತ್ತಲೂ ಭೂಮಿಯಿಂದ ಆವೃತವಾದ ನೇಪಾಳದ ಭೌಗೋಳಿಕ, ರಾಜಕೀಯ, ಆರ್ಥಿಕ ಮತ್ತಿನ್ನಿತರ ಅವಶ್ಯಕತೆಗಳನ್ನು ಗಮನಿಸಿದರೆ ಮೇಲಿನ ವಾದಗಳು ದೂರದೃಷ್ಟಿಯ ಕೊರತೆಯಿರುವ ಬಾಲಿಶ ವಾದಗಳು ಎನ್ನುವುದು ರುಜುವಾತಾಗುತ್ತವೆ. ಇವತ್ತಿಗೆ ಭಾರತ ಮತ್ತು ನೇಪಾಳ ಸಂಬಂಧಗಳಲ್ಲಿ ಅನೇಕ ಬಿರುಕುಗಳಿದ್ದರೂ ಭಾರತೀಯ ಸೇನೆ ಮತ್ತು ನೇಪಾಳದ ಗೂರ್ಖಾ ಸೈನಿಕರ ನಡುವಿನ ನಂಟು ತನ್ನ ಘನತೆಗೆ ಯಾವುದೇ ಚ್ಯುತಿ ಬರದಂತೆ ಮುಂದುವರಿಯುತ್ತಿದೆ. ಭಿನ್ನಾಭಿಪ್ರಾಯಗಳ ನಡುವೆ ಭಾರತ-ನೇಪಾಳ ಸಂಬಂಧಗಳು ಉಳಿದುಕೊಂಡಿದೆ ಎಂದಾದರೆ ಗೂರ್ಖಾ ಮತ್ತು ಭಾರತೀಯ ಸೇನೆಯ ಈ ಅಪೂರ್ವ ಸಂಗಮದ ಪಾತ್ರವೂ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.


(This article was published in Hosadigantha Newsapaper on 28 February 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ