ಭಾನುವಾರ, ಮಾರ್ಚ್ 26, 2017

ಪಾಕಿಸ್ತಾನದೊಳಗೆ ಪಶ್ತೂನ್ ಪ್ರತ್ಯೇಕತೆಯ ಕೂಗು

ಯುದ್ಧ, ಭಯೋತ್ಪಾದಕರಿಗೆ ಕುಮ್ಮಕ್ಕು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವಿರೋಧಿ ನಿಲುವುಗಳು, ಭಾರತ ವಿರೋಧಿ ರಹಸ್ಯ ಮೈತ್ರಿಗಳು, ಬುಡಮೇಲು ಕೃತ್ಯಗಳು (Subversion), ಹೀಗೆ ಪಾಕಿಸ್ತಾನ ಏನೆಲ್ಲಾ ಮಾಡುತ್ತದೆಯೋ ಅದರಲ್ಲೆಲ್ಲಾ, ಪಾಕಿಸ್ತಾನಕ್ಕೆ ಲಾಭವಿರದಿದ್ದರೂ ಭಾರತಕ್ಕೆ ನಷ್ಟವಾದರೆ ಸಾಕು ಎನ್ನುವಂಥಾ ವಿಚಿತ್ರ ವಿಕೃತ ಮನೋಭಾವವೊಂದು ಪಾಕಿಸ್ತಾನದಲ್ಲಿ ಬೇರೂರಿಬಿಟ್ಟಿದೆ. ತನ್ನ ತಟ್ಟೆಯಲ್ಲಿ ರಾಶಿ ಹೆಗ್ಗಣಗಳು ಬಿದ್ದಿದ್ದರೂ ಭಾರತದ ತಟ್ಟೆಯ ಮೇಲೆ ನೊಣವೊಂದನ್ನು ಹಾಕಿ ಸಂಭ್ರಮಿಸುವಂಥ ದಟ್ಟದರಿದ್ರ ಸ್ಥಿತಿಯಲ್ಲಿದೆ ಪಾಕಿಸ್ತಾನ! ಭಾರತದಿಂದ ಕಾಶ್ಮೀರವನ್ನು ಕಿತ್ತುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಈಗಿರುವ ಪ್ರದೇಶಗಳನ್ನೇ ಗಟ್ಟಿಮಾಡಿಕೊಳ್ಳಲಾಗದಂಥ ಪರಿಸ್ಥಿತಿಯೊಂದು ನಿರ್ಮಾಣವಾಗಿದೆ. ಪಾಕಿಸ್ತಾನದೊಳಗೆ ಜನಾಂಗೀಯ ರಾಷ್ಟ್ರೀಯತೆ ಮತ್ತು ಅಫಘಾನಿಸ್ತಾನದ ಅಫ್ಘನ್ ರಾಷ್ಟ್ರೀಯತೆಗಳು ಪ್ರತ್ಯೇಕ ಸಾರ್ವಭೌಮ ರಾಷ್ಟ್ರಗಳಾಗಲು ಹಾತೊರೆಯುತ್ತಿವೆ. ಪಾಕಿಸ್ತಾನದ ಹುಟ್ಟಿನಿಂದಲೇ ಈ ಎರಡು ರಾಷ್ಟ್ರೀಯತೆಗಳು ದೇಶದ ಭೌಗೋಳಿಕ ಸಮಗ್ರತೆಗೆಯನ್ನು ಅಲ್ಲಾಡಿಸುವ ಕೆಲಸದಲ್ಲಿ ನಿರತವಾಗಿರುವುದು, ಪಾಕಿಸ್ತಾನಕ್ಕೆ ನುಂಗಲೂ ಆಗದೇ ಇತ್ತ ಉಗುಳಲೂ ಮನಸ್ಸು ಬಾರದಂಥ ಬಿಸಿ ತುಪ್ಪ. ಪೂರ್ವ ಪಾಕಿಸ್ತಾನದಲ್ಲಿದ್ದ ಅಸಮಧಾನಗಳು ಮೂರ್ತ ರೂಪ ಪಡೆದುಕೊಂಡು ಬಾಂಗ್ಲಾದೇಶದ ನಿರ್ಮಾಣವಾದಾಗಿನಿಂದ, ಪ್ರತ್ಯೇಕತೆಯ ಧ್ವನಿ ಕೇಳಿ ಪಾಕಿಸ್ತಾನ ನಡುವಂತಾಗಿತ್ತು. ಪಾಕಿಸ್ತಾನದೊಳಗಿನ ಸಮಾಜವಾದಿಗಳು, ಬಲೂಚಿಗಳು, ಪಶ್ತೂನ್ ರಾಷ್ಟ್ರೀಯವಾದಿಗಳು  ಮತ್ತು ಅಫ್ಘನ್ ರಾಷ್ಟ್ರೀಯತೆಗಳ ಪಾಕಿಸ್ತಾನವನ್ನು ಪ್ರತ್ಯೇಕಿಸುವ ತವಕದಲ್ಲಿದ್ದಾರೆ. ಪ್ರತ್ಯೇಕತಾವಾದವನ್ನು ನಿವಾರಿಸಲು ಪಾಕಿಸ್ತಾನ ಮಾಡಿದಂಥ ದೊಂಬರಾಟಗಳು ಇನ್ನೊಂದಷ್ಟು ಅವ್ಯವಸ್ಥೆಗೆ ಕಾರಣವಾಯಿತಲ್ಲದೇ ಬೇರೇನನ್ನೂ ಸಾಧಿಸಲಿಲ್ಲ.

ಶೀತಲ ಸಮರದ ಸಮಯದಲ್ಲಿ, ಪ್ರತ್ಯೇಕತೆಯ ಕೂಗು ಬಲಿಷ್ಟಗೊಂಡಿತ್ತು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿದ್ದ ಎಲ್ಲಾ ಜನಾಂಗೀಯ ರಾಜಕೀಯ ಪಕ್ಷಗಳ ಪ್ರಭಾವವನ್ನು ಹತ್ತಿಕಲು ಪಾಕಿಸ್ತಾನೀ ಸರಕಾರ ಪ್ರಯತ್ನಿಸಿತ್ತಲ್ಲದೇ, ಈ ಜನಾಂಗೀಯ ಪಕ್ಷಗಳ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಿದ್ದು ಮಾತ್ರವಲ್ಲದೇ ಅವರ ವಿರುದ್ಧದ ವ್ಯವಸ್ಥಿತ ಪ್ರಚಾರವನ್ನೂ ಮಾಡಿತ್ತು. ಉದಾಹರಣೆಗೆ ಪಶ್ತೂನ್ ರಾಷ್ಟ್ರೀಯವಾದಿ ಪಕ್ಷಗಳಿಗೆ ದೇಶದ್ರೋಹಿ ಪಕ್ಷಗಳು ಎಂಬ ಹಣೆಪಟ್ಟಿ ಕಟ್ಟಿದ್ದಲ್ಲದೇ ಪಾಕಿಸ್ತಾನದ ಸ್ವಾತಂತ್ರ್ಯದ ವಿರೋಧಿಗಳು ಎಂಬಂತೆ ಬಿಂಬಿಸಲಾಯಿತು. ಇವಿಷ್ಟು ಸಾಲದೆಂಬಂತೆ ಪಾಕಿಸ್ತಾನೀ ಸರಕಾರಿ ಪ್ರಾಯೋಜಿತ ಅಪಪ್ರಚಾರಗಳು ಈ ಪಕ್ಷಗಳನ್ನು 'ರೆಡ್ ಕಾಂಗ್ರೆಸ್ಸಿ' ಎಂದು ಮೂದಲಿಸಿದ್ದವು. ಹೇಗಾದರೂ ಮಾಡಿ ಪಶ್ತೂನ್ ಪಕ್ಷಗಳ ಪ್ರಭಾವಕ್ಕೆ ಮಸಿ ಬಳಿಯಲೇಬೇಕು ಎಂದು ತೀರ್ಮಾನಿಸಿದ್ದ ಪಾಕಿಸ್ತಾನದ ಸರಕಾರ ಇತಿಹಾಸವನ್ನು ಕೆದಕಿ ತನಗೆ ಬೇಕಾದಂತೆ ಉಪಯೋಗಿಸಿಕೊಂಡಿತ್ತು. ಮೊದಲನೆಯದಾಗಿ ಸ್ವಾತಂತ್ರ್ಯಪೂರ್ವದಲ್ಲಿ ಪಶ್ತೂನ್ ಪಕ್ಷಗಳು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಜೊತೆ ಕೈಗೂಡಿಸಿದ್ದು ಮುಸ್ಲಿಂ ಲೀಗನ್ನು ಶತ್ರುವಂತೆ ನೋಡಿತ್ತು ಎಂಬ ಆರೋಪ ಮಾಡಲಾಯಿತು. ಎರಡನೆಯದಾಗಿ 1947ರಲ್ಲಿ ಪಾಕಿಸ್ತಾನದ ವಾಯುವ್ಯ ಗಡಿನಾಡು ಪ್ರದೇಶ (ಈಗಿನ ಖೈಬರ್ ಪಖ್ತುನ್ಖುವಾ) ಭಾರತಕ್ಕೆ ಅಥವಾ ಪಾಕಿಸ್ತಾನ ಸೇರುವ ವಿಚಾರವಾಗಿ ಜನಮತಗಣನೆಗೆ (Referendum) ಪಶ್ತೂನ್ ರಾಷ್ಟ್ರೀಯವಾದಿಗಳು ವಿರೋಧ ವ್ಯಕ್ತಪಡಿಸಿದ್ದರು ಎಂಬ ವಾದ. ಈ ಆಧಾರಗಳನ್ನಿಟ್ಟುಕೊಂಡು ಪಶ್ತೂನ್ ರಾಷ್ಟ್ರೀಯವಾದಿಗಳು ಭಾರತಕ್ಕೆ ಬೆಂಬಲ ನೀಡುತ್ತಿರುವವರು ಮತ್ತು ಪಾಕಿಸ್ತಾನಕ್ಕೆ ದ್ರೋಹ ಬಗೆಯುತ್ತಿರುವವರು ಎನ್ನುವ ರೀತಿಯಲ್ಲಿ ಪಶ್ತೂನ್ ಪಕ್ಷಗಳನ್ನು ಸಾರ್ವಜನಿಕವಾಗಿ ವರ್ಚಸ್ಸು ಕಳೆದುಕೊಳ್ಳುವಂತೆ ಮಾಡಲಾಯಿತು. ವಾಸ್ತವವಾಗಿ ಪಶ್ತೂನ್ ಗಳೇನೂ ಭಾರತದ ಪರವಾಗಿರಲಿಲ್ಲ. ಜನಮತಗಣನೆಯನ್ನು ಪಶ್ತೂನ್ ಗಳು ವಿರೋಧಿಸುವುದಕ್ಕೆ ಕಾರಣ ಅವರು ಪಾಕಿಸ್ತಾನ ಮತ್ತು ಭಾರತಗಳೆರಡಕ್ಕೂ ಸೇರಬಯಸದೆ ಪ್ರತ್ಯೇಕ 'ಪಶ್ತೂನಿಸ್ತಾನ್' ನಿರ್ಮಿಸುವ ಆಲೋಚನೆಯಲ್ಲಿದ್ದರು! ಮುಂದೆ ಪಾಕಿಸ್ತಾನದ ಪ್ರತ್ಯೇಕವಾಗಿ ಪಶ್ತೂನಿಸ್ತಾನ್ ಸ್ಥಾಪನೆ ಸಾಧ್ಯವಾಗದೇ, 1973ರಲ್ಲಿ ಪಾಕಿಸ್ತಾನ ಸರಕಾರ ಪಶ್ತೂನಿ ಪ್ರಾಂತ್ಯಗಳಿಗೆ ದೇಶದೊಳಗಡೆ ಸ್ವಾಯತ್ತ ಪ್ರದೇಶಗಳಾಗಿರುವ ಅವಕಾಶ ಕಲ್ಪಿಸಿಕೊಟ್ಟಿತು. ಆದರೆ ಇವತ್ತಿಗೂ ಪಶ್ತೂನ್ ರಾಷ್ಟ್ರೀಯವಾದಿಗಳು ಪಾಕಿಸ್ತಾನ ಕೊಟ್ಟಿರುವ ಸ್ವಾಯತ್ತತೆ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗಿದೆಯೇ ವಿನಃ ಆಚರಣೆಯಲ್ಲಿಲ್ಲ ಎಂಬ ಅಸಮಧಾನ ವ್ಯಕ್ತಪಡಿಸುತ್ತಾರೆ.
Image may contain: 1 person
ಅಫ್ಘನಿಸ್ತಾನವೂ ಕೂಡ ಪಶ್ತೂನಿಗಳ ಪರವಾದ ನೀತಿ ಅನುಸರಿಸತೊಡಗಿತ್ತಷ್ಟೇ ಅಲ್ಲದೇ ಡ್ಯೂರಾಂಡ್ ರೇಖೆಯನ್ನು ಗುರುತಿಸಲು ಸಾಧ್ಯವಿಲ್ಲ ಎಂದಿದ್ದು ಪಾಕಿಸ್ತಾನದ ಗಾಯಕ್ಕೆ ಉಪ್ಪು ಸವರಿದಂತಾಗಿತ್ತು. ಅಫಘಾನಿಸ್ತಾನ ಇನ್ನೂ ಸ್ವಲ್ಪ ಮುಂದುವರಿದು ಪಾಕಿಸ್ತಾನದ ಜನಾಂಗೀಯ ರಾಷ್ಟ್ರೀಯವಾದಿ ಪಕ್ಷಗಳಾದ ರಾಷ್ಟ್ರೀಯ ಅವಾಮಿ ಪಕ್ಷ ಮತ್ತಿತರ ಗುಂಪುಗಳಿಗೆ ಆಶ್ರಯ ನೀಡಲಾರಂಭಿಸಿತ್ತು. ಇತ್ತ ಕಡೆ ಪಾಕಿಸ್ತಾನವೂ ಇಂಥ ಅವಕಾಶವೊಂದಕ್ಕಾಗಿ ಕಾಯುತ್ತಿತ್ತೆನ್ನಿ. ಪಾಕಿಸ್ತಾನಕ್ಕೆ ಈ ಅವಕಾಶ 1970 ದಶಕಲ್ಲಿ ಅಫ್ಘನ್ ಇಸ್ಲಾಮಿಸ್ಟ್ ಗಳ ರೂಪದಲ್ಲಿ ಬಂದಿತ್ತು. ಸರ್ದಾರ್ ಮಹಮ್ಮದ್ ದಾವುದ್ ಖಾನ್ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದಾಗ ಕೆಲ ಅಫ್ಘನ್ ಇಸ್ಲಾಮಿಸ್ಟ್ ಗಳು ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಾರೆ. ಈ ಸಮಯದಲ್ಲೇ ಈ ಗುಂಪಿನ ಪ್ರಭಾವಶಾಲಿ ನಾಯಕರಲ್ಲೊಬ್ಬರಾದ ಮೌಲ್ವಿ ಹಬಿಬುರ್ ರೆಹಮಾನ್ (ಈತ ಅಫ್ಘಾನಿಸ್ತಾನದ ಇಸ್ಲಾಮಿಕ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದವನು ಮಾತ್ರವಲ್ಲದೇ ನುಝಾತ್-ಇ-ಇಸ್ಲಾಮಿ-ಅಫ್ಘಾನಿಸ್ತಾನ್ ಎಂಬ ಸಂಘಟನೆಯ ಸ್ಥಾಪಕರಲ್ಲೊಬ್ಬ), ಪಾಕಿಸ್ತಾನದಿಂದ ಮಿಲಿಟರಿ ಸಹಾಯವನ್ನು ಬೇಡುತ್ತಾರೆ. ಆಗಿನ ಪಾಕ್ ಪ್ರಧಾನಿ ಝುಲ್ಫೀಕರ್ ಆಲಿ ಭುಟ್ಟೋ ಈ ಅವಕಾಶವನ್ನು ಬಳಸಿಕೊಂಡು ಈ ಅಫ್ಘಾನಿ ಇಸ್ಲಾಮಿಸ್ಟ್ ಗಳನ್ನು ಅಫ್ಘಾನಿ ರಾಷ್ಟ್ರೀಯವಾದಿಗಳ ವಿರುದ್ಧ ಬಳಸಿಕೊಳ್ಳುತ್ತಾರೆ. ಸುಮಾರು 700 ಅಫ್ಘನ್ ಇಸ್ಲಾಮಿಸ್ಟ್ ಗಳಿಗೆ ಪಾಕಿಸ್ತಾನದ ವಿಶೇಷ ಎಸ್.ಎಸ್.ಜಿ ಪಡೆಯ ಮೂಲಕ ತರಬೇತಿ ನೀಡಿ ಅಫ್ಘಾನಿಸ್ತಾನದೊಳಗಡೆ ಕಳುಹಿಸಲಾಗುತ್ತದೆ. ಇದೇ 1354 ಅಮಲ್ಯಾಟ್ (1354 ಕಾರ್ಯಾಚರಣೆ). ಆದರೆ ಈ ಕಾರ್ಯಾಚರಣೆ ದಾರುಣವಾಗಿ ವಿಫಲವಾಗುತ್ತದೆಯಷ್ಟೇ ಅಲ್ಲದೇ ಹಬಿಬುರ್ ರೆಹಮಾನ್ ಸೇರಿದಂತೆ ಅನೇಕ ಅಫ್ಘನ್ ಇಸ್ಲಾಮಿಸ್ಟ್ ನಾಯಕರನ್ನು ಬಂಧಿಸಿ ನೇಣಿಗೇರಿಸಲಾಗುತ್ತದೆ.

ಅಫ್ಘಾನಿಸ್ತಾನ ಪಾಕಿಸ್ತಾನದ ಜನಾಂಗೀಯ ರಾಷ್ಟ್ರೀಯವಾದಿಗಳಿಗೆ ಮತ್ತು ಪ್ರತ್ಯೇಕತವಾದಿಗಳಿಗೆ ನೀಡುವ ಬೆಂಬಲಕ್ಕೆ ಎದುರೇಟು ನೀಡುವ ಯತ್ನದಲ್ಲಿ ಪಾಕಿಸ್ತಾನ ಅಫ್ಘನ್ ಇಸ್ಲಾಮಿಸ್ಟ್ ಗಳಿಗೆ ಬೆಂಬಲ ನೀಡುತ್ತಾ ವಿಚಿತ್ರವಾದ ಅಫ್ಘನ್ ನೀತಿಯೊಂದನ್ನು ಜಾರಿಯಲ್ಲಿಡುತ್ತದೆ. ಈ ಮೂಲಕ ಅಫ್ಘಾನಿಸ್ತಾನದ ವಿಸ್ತಾರವಾದಿ ನೀತಿ ಮತ್ತು ಡ್ಯೂರಾಂಡ್ ರೇಖೆಯ ಬಗೆಗಿನ ಅಫ್ಘನ್ ನಿಲುವುಗಳ ಮೇಲೂ ಪಾಕಿಸ್ತಾನ ಒತ್ತಡ ಹೇರುವಂತಾಯಿತು. ಮುಂದೆ ಅಫ್ಘನ್ ಜಿಹಾದ್ ನ ಸಂದರ್ಭದಲ್ಲಿ ಮಗದೊಮ್ಮೆ ಅಫ್ಘಾನಿ ಇಸ್ಲಾಮಿಸ್ಟ್ ಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತದೆ ಮತ್ತು1973-1975ರಲ್ಲಿ ಸುಮಾರು 700 ಜನರಿಗೆ ಆಶ್ರಯ ನೀಡಿದ್ದ ಪಾಕಿಸ್ತಾನ, ಈ ಬಾರಿ ಲಕ್ಷಗಟ್ಟಲೆ ಅಫ್ಘಾನಿ ಇಸ್ಲಾಮಿಸ್ಟ್ ಗಳಿಗೆ ಆಶ್ರಯ , ಮಿಲಿಟರಿ ತರಬೇತಿ ನೀಡುತ್ತದೆ. ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿ ಈ ಮುಜಾಹಿದ್ದೀನ್ ಗುಂಪನ್ನು ಪಾಕಿಸ್ತಾನ ತನ್ನ ಸ್ವಾರ್ಥ ಸಾಧನೆಗಳಿಗಾಗಿ ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯವಾದಿಗಳ ವಿರುದ್ಧ ಛೂ ಬಿಡುತ್ತದೆ. ಈ ರೀತಿಯಾಗಿ ಪಾಕಿಸ್ತಾನ ಉಗ್ರ ಪಾನ್-ಇಸ್ಲಾಮಿಕ್ ಶಕ್ತಿಯೊಂದರ ಬೆಳವಣಿಗೆಗೆ ಕಾರಣವಾಗುತ್ತದೆ. ಸೈದ್ಧಾಂತಿಕವಾಗಿ ಮುಸ್ಲಿಂ ಬ್ರದರ್ ಹುಡ್ ಮತ್ತು ಜಮಾತ್-ಇ-ಇಸ್ಲಾಮಿಯಂಥ ಪ್ರಭಾವದಿಂದ ಅಫ್ಘಾನಿಸ್ತಾನದಲ್ಲಿ ಹುಟ್ಟಿಕೊಂಡ ಈ ಇಸ್ಲಾಮಿಕ್ ಉಗ್ರರನ್ನು ಪಾಕಿಸ್ತಾನ ಸೃಷ್ಟಿಸಲಿಲ್ಲ ಎಂಬ ವಾದವಿದೆ. ಆದರೆ ತನ್ನ ಸ್ವಾರ್ಥಕ್ಕೋಸ್ಕರ ಈ ಉಗ್ರರನ್ನು ದೈತ್ಯ ಶಕ್ತಿಯಾಗುವಂತೆ ಬೆಂಬಲ ನೀಡಿ, ವಿಶ್ವ ಶಾಂತಿಯನ್ನೇ ಕಾಡುವ ಆಧುನಿಕ ಭಸ್ಮಾಸುರರನ್ನಾಗಿ ಬೆಳೆಸಿದ ಕುಖ್ಯಾತಿ ನಿಸ್ಸಂಶಯವಾಗಿ ಪಾಕಿಸ್ತಾನಕ್ಕೆ ಸೇರುತ್ತದೆ.

ಸ್ವತಃ ಮುಜಾಹಿದ್ ಆಗಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಪ್ರಕಾರ ಅಫ್ಘನ್ ಜಿಹಾದ್ ನ ಸಂಧರ್ಭದಲ್ಲಿ ಪಾಕಿಸ್ತಾನ ಇಸ್ಲಾಮಿಸ್ಟ್ ಗಳನ್ನು ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯವಾದಿಗಳ ವಿರುದ್ಧ ಹೋರಾಡುವಂತೆ ಮಾಡಿತ್ತು.  ಇದೇ ಕರ್ಜಾಯಿ 2003ರಲ್ಲಿ ಅಮೆರಿಕಾದ ರಾಯಭಾರಿ ಡಾನಾ ರೊಹ್ರಾಬ್ಯಾಚರ್ ಗೆ ಹೇಳಿದ ವಿಷಯಗಳು ಮುಂದೆ ವಿಕಿಲೀಕ್ಸ್ ಬಿಡುಗಡೆ ಮಾಡುತ್ತದೆ. ಆ ಸಾರಾಂಶ ಹೀಗಿದೆ. "ಪಶ್ತೂನ್ ರಾಷ್ಟ್ರೀಯವಾದಿಗಳು ಜಾತ್ಯಾತೀತರು. ಪಶ್ತೂನ್ ರಾಷ್ಟ್ರೀಯತೆಯ ವಿರುದ್ಧ ಹೋರಾಡಲು ಪಾಕಿಸ್ತಾನವೇ ತಾಲಿಬಾನನ್ನು ಹುಟ್ಟುಹಾಕುತ್ತದೆ. ಪಶ್ತೂನ್ ಜನಾಂಗ ಹೆಚ್ಚಿರುವ ಪಶ್ತೂನಿಸ್ತಾನ್ ಮುಂದೆ ಪ್ರತ್ಯೇಕ ರಾಷ್ಟ್ರವಾಗಬಹುದು ಎಂಬ ಭಯದಿಂದಾಗಿ ಪಾಕಿಸ್ತಾನ ವ್ಯವಸ್ಥಿತವಾಗಿ ಪಶ್ತೂನ್ ರಾಷ್ಟ್ರೀಯವಾದವನ್ನು ನಾಶಮಾಡಲಾರಂಭಿಸುತ್ತದೆ. ಪಾಕಿಸ್ತಾನಿ ಪಶ್ತೂನ್ ಗಳನ್ನು ಇಸ್ಲಾಮಿಕರಣಗೊಳಿಸಿ, ಅಫ್ಘನ್ ಪಶ್ತೂನ್ ಗಳನ್ನು ಕೊಂದು ಪಶ್ತೂನ್ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯನ್ನೇ ತೊಡೆದುಹಾಕಲು ನಿರ್ಧರಿಸಿತ್ತು ಪಾಕ್! ಮೂಲಭೂತವಾದಿ ಇಸ್ಲಾಂ ಅಫ್ಘಾನಿಸ್ತಾನವನ್ನು ಆಳಬೇಕು ಎನ್ನುವುದು ಪಾಕಿಸ್ತಾನದ ಗುರಿ." ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ನಲ್ಲಿ ಹಮೀದ್ ಕರ್ಜಾಯಿ ಭಾಷಣದಲ್ಲಿ ಈ ಮಾತುಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಾ, ಪಾಕಿಸ್ತಾನ, ಅಫ್ಘನ್ನರ 'ಅಫ್ಘಾನೀಯತೆ'ಯನ್ನೇ (Afghanness) ನಾಶಮಾಡಿ 'ಪಾನ್-ಇಸ್ಲಾಮಿಕ್' ಅಸ್ಮಿತೆಯನ್ನು ಬಲವಂತವಾಗಿ ತುಂಬುವ ಪ್ರಯತ್ನ ಮಾಡಿತ್ತು ಎಂದಿದ್ದರು. ಶೀತಲ ಸಮರೋತ್ತರದಲ್ಲಿ ಪಾಕಿಸ್ತಾನ, ಪಶ್ತೂನ್ ಗಳ ಸ್ಥಿತಿಗತಿಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾ ವಿಶ್ವಸಮುದಾಯದ ಕಣ್ಣಿಗೆ ಮಣ್ಣೆರಚುವ ಪ್ರಯತ್ನವೊಂದನ್ನು ಜಾರಿಯಲ್ಲಿಟ್ಟಿದೆ. ಆದರೆ ಪಾಕಿಸ್ತಾನದ ಕಾಳಜಿ ಪಾಕ್ ಪರವಾಗಿರುವ ಮುಜಾಹಿದ್ ಪಶ್ತೂನ್ ಮತ್ತು ತಾಲಿಬಾನಿ ಪಶ್ತೂನ್ ಗಳಿಗೆ ಮಾತ್ರ ಸೀಮಿತಗೊಂಡಿದೆ ಎನ್ನುವುದು ಇವತ್ತಿಗೆ ಬ್ರಹ್ಮರಹಸ್ಯವೇನಲ್ಲ. ಇವತ್ತಿಗೂ ನಿಜವಾದ ರಾಷ್ಟ್ರೀಯವಾದಿ ಪಶ್ತೂನ್ ಗಳ ಹೆಸರು ಕೇಳಿದರೂ ಪಾಕಿಸ್ತಾನ ಬೆಚ್ಚಿಬೀಳುತ್ತದೆ!

ಪಶ್ತೂನ್ ಮತ್ತು ಅಫ್ಘನ್ ರಾಷ್ಟ್ರೀಯತೆಯನ್ನು ಹತ್ತಿಕ್ಕಲು ಪಾಕಿಸ್ತಾನ ಪಡಬಾರದ ಪಾಡುಪಟ್ಟಿದೆ. ತನ್ನದೇ ವಿಕೃತ ಕಲ್ಪನೆಗಳಿಂದ ಏಷ್ಯಾ ಮಾತ್ರವಲ್ಲದೇ ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲೂ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇಷ್ಟೆಲ್ಲಾ ಮಾಡಿದ ಬಳಿಕವೂ ಪಾಕಿಸ್ತಾನಕ್ಕೆ ಇದರಿಂದ ಒಳಿತೇನಾಗಿಲ್ಲ. ಪಾಕಿಸ್ತಾನ ಆಶ್ರಯ ಮತ್ತು ತರಬೇತಿ ನೀಡಿ ಸಿದ್ಧಗೊಳಿಸಿದ ಇಸ್ಲಾಮಿಸ್ಟ್ ಗುಂಪುಗಳು, ಇದೀಗ ಅಫ್ಘಾನಿಸ್ತಾನ ಸೇರಿಕೊಂಡು ಪಾಕಿಸ್ತಾನಕ್ಕೆ ಉಲ್ಟಾ ಹೊಡೆದಿವೆ. ಪಾಕಿಸ್ತಾನ ತನ್ನ ಪರವಾಗಿದ್ದಾರೆ ಎಂದು ನಂಬಿದ್ದ ತಾಲಿಬಾನಿಗಳು ಈಗ ತಿರುಮಂತ್ರ ಹೇಳುತ್ತಿದ್ದಾರೆ. ಪಾಕ್ ವಿರೋಧಿ ಅಫ್ಘನ್ ಸರಕಾರಗಳಂತೆಯೇ ತಾಲಿಬಾನ್ ಕೂಡ ಡ್ಯೂರಾಂಡ್ ರೇಖೆಯಿದೆ ಎನ್ನುವುದನ್ನೇ ಮರೆತಿದ್ದಾರೆ! ಉಗ್ರರನ್ನು ಬಳಸಿಕೊಂಡು ತನಗೆ ಬೇಕಾದದ್ದನ್ನು ಪಡೆಯಬಹುದು ಎಂದುಕೊಂಡಿದ್ದ ಪಾಕಿಸ್ತಾನದ ಹುಲಿ ಸವಾರಿ ಅಂತ್ಯವಾದಾಗ ಇಳಿಯಲೂ ಆಗದೆ, ಮುಂದೆ ಸಾಗಲೂ ಆಗದಿರುವ ಪರಿಸ್ಥಿತಿಯಲ್ಲಿದೆ! ಪಾಕಿಸ್ತಾನ ಭಾರತ ಮತ್ತು ಕಾಶ್ಮೀರದ ಚಿಂತೆ ಕೈಬಿಟ್ಟು ತನ್ನ ಸಮಗ್ರತೆಯತ್ತ ಗಮನಹರಿಸದೇ ಹೋದಲ್ಲಿ ಪಾಕಿಸ್ತಾನ ಹೋಳುಗಳಾಗುವ ದಿನ ದೂರವಿಲ್ಲ.

(This article was published in Hosadigantha Newsapaper on 22 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ