ಭಾನುವಾರ, ಮಾರ್ಚ್ 26, 2017

ನೂರು ವರ್ಷಗಳ ಹಿಂದೆ ನಡೆದ ಕ್ರಾಂತಿಯೊಂದರ ನೆನಪು

1917ರಲ್ಲಿ ರಷ್ಯಾ ಬೃಹತ್ ರಾಜಕೀಯ ಬದಲಾವಣೆಯೊಂದಕ್ಕೆ ಸಾಕ್ಷಿಯಾಗುತ್ತದೆ. ಸರಿಯಾಗಿ ನೂರು ವರ್ಷಗಳ ಹಿಂದೆ ವಿಶ್ವ ರಾಜಕೀಯದ ಪಥ ಬದಲಾಯಿಸುವಂಥಾ ಕ್ರಾಂತಿಯೊಂದು 1917ರ ಮಾರ್ಚ್ ನಲ್ಲಿ ನಡೆಯುತ್ತದೆ. ಕ್ರಾಂತಿ ನಡೆದಿದ್ದು ಮಾರ್ಚ್ ನಲ್ಲೇ ಆದರೂ ಅವತ್ತಿಗೆ ರಷ್ಯನ್ನರು ಪಾಲಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆ ಕ್ರಾಂತಿ ಫೆಬ್ರವರಿ ಕ್ರಾಂತಿ ಎಂದೇ ಪ್ರಸಿದ್ಧಿಯಾಗುತ್ತದೆ. ರಷ್ಯಾದ ಸರ್ವಾಧಿಕಾರಿ ದೊರೆಯಾಗಿದ್ದ ಝಾರ್ ದ್ವಿತೀಯ ನಿಕೊಲಾಸ್, ರಷ್ಯನ್ನರ ಆಕ್ರೋಶಕ್ಕೆ ಮಣಿದು ತನ್ನ ಪದತ್ಯಾಗ ಮಾಡಬೇಕಾಯ್ತು. ಇದೇ ಕ್ರಾಂತಿ ಮುಂದೆ ವಿಭಿನ್ನ ಸ್ವರೂಪ ಪಡೆದುಕೊಂಡು, ಅಕ್ಟೋಬರ್ ಕ್ರಾಂತಿಗೂ ದಾರಿ ಮಾಡಿಕೊಡುತ್ತದೆ. ವಿಶ್ವ ಭೂಪಟದಲ್ಲಿ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟದ ನಿರ್ಮಾಣಕ್ಕೂ ವೇದಿಕೆ ಸಿದ್ಧಗೊಳಿಸಿದ ಕ್ರಾಂತಿಯಿದು. ಆದರೆ ಗಮನಿಸಬೇಕಾದ ಅಂಶವೇನೆಂದರೆ ರಷ್ಯಾದಲ್ಲಿ ಕಮ್ಯುನಿಸಂ ನೆಲೆಗೊಳಿಸಿದ ಈ ಫೆಬ್ರವರಿ ಕ್ರಾಂತಿ, ಸೈದ್ಧಾಂತಿಕ ಕ್ರಾಂತಿಯಾಗಿರಲಿಲ್ಲ! ಯಾವ ಕಮ್ಯುನಿಸ್ಟ್ ನಾಯಕರೂ ಈ ಕ್ರಾಂತಿಯನ್ನು ಯೋಜಿಸಿರಲಿಲ್ಲ! ಮತ್ತು ಈ ಕ್ರಾಂತಿಯ ಹಾದಿಯನ್ನು ಯಾರೂ ಸಂಘಟಿಸಿರಲಿಲ್ಲ! ಅದೆಲ್ಲಕ್ಕಿಂತ ಮಿಗಿಲಾಗಿ, ಇಂಥ ಕ್ರಾಂತಿಯೊಂದರ ಕನಸಿನಲ್ಲೇ ವರ್ಷಗಳನ್ನು ಕಳೆದ ಲೆನಿನ್ ನೇತೃತ್ವದ ಬೊಲ್ಶೆವಿಕ್ ಗುಂಪು ಕೂಡ ಫೆಬ್ರವರಿ ಕ್ರಾಂತಿಯನ್ನು ಊಹಿಸಿರಲಿಲ್ಲ.!

ವ್ಲಾದಿಮಿರ್ ಲೆನಿನ್ ಪ್ರಕಾರ ಕ್ರಾಂತಿಯೊಂದು ಸಂಭವಿಸಬೇಕಾದಲ್ಲಿ ಮೂರು ಅಂಶಗಳ ಅವಶ್ಯಕತೆಯಿರುತ್ತದೆ. ಮೇಲ್ವರ್ಗಗಳ ಬಿಕ್ಕಟ್ಟು, ಶೋಷಿತ ವರ್ಗಗಳ ನೋವು ಮತ್ತು ಜನಸಾಮಾನ್ಯರು ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಕ್ರಾಂತಿಗೆ ಅವಶ್ಯಕ ಎಂದು ಲೆನಿನ್ ಹೇಳಿದ ಮೂರು ಅಂಶಗಳೂ 1917ರ ಮಾರ್ಚ್ ಗಿಂತ ಮೊದಲೇ ರಷ್ಯಾ ಪರಿಸ್ಥಿತಿಗೆ ಸರಿಹೊಂದುವಂತಿತ್ತು. ಲೆನಿನ್ ಹೇಳಿದ ಮೂರು ಅಂಶಗಳು ರಷ್ಯಾ ಸಮಾಜದಲ್ಲಿದ್ದಾಗ್ಯೂ ಹತ್ತಿಕೊಳ್ಳದ ಕ್ರಾಂತಿ ಕಿಡಿ, 1917ರ ಮಾರ್ಚ್ ನಲ್ಲಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ರಷ್ಯಾದಲ್ಲಿ ತಲೆಮಾರುಗಳಿಂದ ಬೇರೂರಿದ್ದ ಝಾರ್ ಸರ್ವಾಧಿಕಾರವನ್ನು ಬುಡಸಮೇತ ಕಿತ್ತುಹಾಕಿತ್ತು. ಸಿದ್ಧಾಂತದ ಗೊಡವೆಯಿಲ್ಲದೇ, ಯೋಜನೆಗಳ ನೀಲನಕ್ಷೆಯಿಲ್ಲದೇ, ಅಧಿಕೃತವಾಗಿ ಒಬ್ಬ ನಾಯಕನೂ ಇಲ್ಲದ ಈ ಕ್ರಾಂತಿ ರಷ್ಯಾದಲ್ಲಿ ಹೊಸ ಯುಗವೊಂದನ್ನು ತೆರೆದಿಟ್ಟಿತ್ತು.

Image may contain: 1 personರಷ್ಯನ್ ಚರಿತ್ರೆಯ ಬಗೆಗೆ ನಡೆದ ಅಧ್ಯಯನಗಳ ಪ್ರಕಾರ ಫೆಬ್ರವರಿ ಕ್ರಾಂತಿಗೆ ಮೂಲ ಕಾರಣ ಆ ಸಮಯದಲ್ಲಿ ರಷ್ಯಾವನ್ನು ಆವರಿಸಿದ ತೀವ್ರ ಚಳಿಯ ವಾತಾವರಣ. ತೀವ್ರ ಹಿಮಗಾಳಿ ಮತ್ತು ಹಿಮಪಾತದಿಂದಾಗಿ ರಷ್ಯಾದ ಜನಜೀವನ ಅಸ್ತವ್ಯಸ್ತವಾಗಿತ್ತಲ್ಲದೇ ರೈಲ್ವೆ ವ್ಯವಸ್ಥೆಯೂ ದಿಕ್ಕೆಟ್ಟು ನಿಂತಿತ್ತು. ಕಾರ್ಖಾನೆಗಳಿಗೂ ಬೀಗ ಜಡಿಯಲಾಗಿ, ಸಾವಿರಾರು ಹತಾಶ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಸಮಯಕ್ಕಾಗಿ ಕಾಯುತ್ತಿದ್ದರು. ಅನಿರೀಕ್ಷಿತವಾಗಿ ರಷ್ಯಾದ ವಾತಾವರಣ ಶೀತಲತೆಯಿಂದ ಬದಲಾಗಿ ಬಿಸಿಯೇರುತ್ತಿದ್ದಂತೆ, ರಷ್ಯನ್ ಕಾರ್ಮಿಕರು ಬೀದಿಗಿಳಿದುಬಿಟ್ಟಿದ್ದರು! ರಷ್ಯಾ ರಾಜಧಾನಿಯಲ್ಲಿ ಯಾವತ್ತೂ ಬರಿದಾಗದೇ ಇದ್ದ ಆಹಾರ ದಾಸ್ತಾನುಗಳ ಬಗೆಗೂ ವದಂತಿಗಳೂ ಹಬ್ಬಲಾರಂಬಿಸಿದವು. ರೈಲ್ವೇ ಸಂಪರ್ಕದಲ್ಲಾದ ತೊಡಕುಗಳಿಂದಾಗಿ ರಷ್ಯಾ ರಾಜಧಾನಿಯ ಕೆಲ ಅಂಗಡಿಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಸುಳ್ಳು ವದಂತಿಗಳನ್ನು ಇನ್ನಷ್ಟು ಬಲಪಡಿಸಿದ್ದವು. ಅನಾನುಕೂಲಕರ ವಾತಾವರಣ ಮತ್ತು ಆಹಾರದ ಕೊರತೆಯ ಕುರಿತಾಗಿ ಹಬ್ಬಿದ ಸುಳ್ಳು ಸುದ್ಧಿಗಳು ರಷ್ಯನ್ನರು ಯೋಚಿಸುವ ಧಾಟಿಯನ್ನು ಬದಲಾಯಿಸಿಬಿಟ್ಟಿದ್ದವು. ಆದರೆ ಕೇವಲ ಈ ಕಾರಣಗಳಿಂದಾಗಿಯೇ ಕ್ರಾಂತಿ ನಡೆಯುತ್ತದೆ ಎಂದುಕೊಂಡರೆ ಅದು ಖಂಡಿತ ಅತಿಶಯೋಕ್ತಿಯೇ ಸರಿ. ಯಾಕೆಂದರೆ ಈ ಹಿಂದೆಯೂ ಶೀತಲ ವಾತಾವರಣ ಮತ್ತು ಆಹಾರ ಸಮಸ್ಯೆ ರಷ್ಯಾ ರಾಜಧಾನಿಯನ್ನು ಕಾಡಿತ್ತಾದರೂ ಮತ್ತೆ ಆಹಾರ ಪೂರೈಕೆಯಾದಾಗ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇವಿಷ್ಟೇ ಅಲ್ಲದೇ ರಷ್ಯಾದ ಆಂತರಿಕ ಭದ್ರತೆಯ ಮುಖ್ಯಸ್ಥನಾಗಿದ್ದ ಅಲೆಕ್ಸಾಂಡರ್ ಪ್ರೊಟೊಪೊಪೊವ್, ಅನೇಕ ಸಮಾಜವಾದಿ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧನದಿಂದ ತಪ್ಪಿಸಿಕೊಂಡ ವ್ಲಾದಿಮಿರ್ ಲೆನಿನ್ ಮತ್ತು ಲಿಯೊನ್ ಟ್ರಾಟ್ ಸ್ಕಿ ಮುಂತಾದವರಿಗೆ ಕ್ರಾಂತಿಯೊಂದು ಸಂಭವಿಸಲಿದೆ ಎಂಬ ಕಲ್ಪನೆಯೂ ಇರಲಿಲ್ಲ!

ವಾತಾವರಣ ಮತ್ತು ಆಹಾರದ ಕೊರತೆಯಷ್ಟೇ ಕ್ರಾಂತಿಯ ಕಾರಣಗಳಾಗಿದ್ದರೆ ಝಾರ್ ರಾಜಪ್ರಭುತ್ವ ಯಾವತ್ತೋ ಅಧಿಕಾರ ಕಳೆದುಕೊಳ್ಳುತ್ತಿತ್ತು. ಆದರೆ ಈ ಕಾರಣಗಳ ಜೊತೆ ಜೊತೆಗೆ ಕೊನೆಯ ಝಾರ್ ರಾಜನಾಗಿದ್ದ ಎರಡನೇ ನಿಕೊಲಾಸ್ ವಿವೇಚನಾರಹಿತನಾಗಿ ಕೈಗೊಂಡ ಕೆಲ ತಪ್ಪು ರಾಜಕೀಯ ನಿರ್ಧಾರಗಳು ಕ್ರಾಂತಿಯ ಜ್ವಾಲೆಗೆ ತುಪ್ಪ ಸುರಿದಿದ್ದವು. 1905ರಲ್ಲೇ ರಷ್ಯಾದಲ್ಲಿ ನಡೆದ  ಶಾಂತಿಯುತ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗುಂಡಿಕ್ಕಲು ಆದೇಶ ನೀಡಿದ್ದ ಝಾರ್ ನಿಕೊಲಾಸ್, 1905ರ ಮೊದಲನೇ ರಷ್ಯಾ ಕ್ರಾಂತಿಗೆ ಕಾರಣನಾಗಿದ್ದ. ಹನ್ನೆರಡು ವರ್ಷಗಳ ಬಳಿಕ 1917ರಲ್ಲಿ ಝಾರ್ ನಿಕೊಲಾಸ್ ಮತ್ತದೇ ತಪ್ಪನ್ನು ಪುನರಾವರ್ತಿಸಿದ್ದ! ಝಾರ್ ರಷ್ಯಾದ ರಾಜಧಾನಿ ಪೆಟ್ರೊಗ್ರಾಡ್ (ಈಗಿನ ಸೈಂಟ್ ಪೀಟರ್ಸ್ ಬರ್ಗ್) ನಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರನ್ನು ಹೇಗಾದರೂ ಹಿಮ್ಮೆಟ್ಟಿಸುವಂತೆ, ಜನರಲ್ ಸೆರ್ಗೆಯ್ ಕಬಲೊವ್ ನಿಗೆ ಟೆಲಿಗ್ರಾಫ್ ಮೂಲಕ ಆದೇಶ ನೀಡಿದ್ದ ಝಾರ್ ನಿಕೊಲಾಸ್! ಪ್ರತಿಭಟನೆಯನ್ನು ತಡೆಯುವ ಆತುರದಲ್ಲಿ ರಷ್ಯನ್ ಸೇನೆ ಸುಮಾರು 200 ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತದೆ. ಆದರೆ ಆ ಹೊತ್ತಿಗಾಗಲೇ ಕ್ರಾಂತಿಯ ಪ್ರಭಾವ ರಷ್ಯನ್ ಸೇನೆಯೊಳಗೂ ನುಸುಳಿಕೊಂಡಿತ್ತು. ಸೈನಿಕರು ರಾಜನ ವಿರುದ್ಧ ದಂಗೆಯೆದ್ದು ಕ್ರಾಂತಿಗೆ ಬೆಂಬಲ ನೀಡುತ್ತಾರೆ. ಪ್ರಥಮ ವಿಶ್ವಯುದ್ಧದ ಬಳಿಕ, ರಷ್ಯನ ಜನಸಾಮಾನ್ಯರಲ್ಲಷ್ಟೇ ಅಲ್ಲದೇ ರಷ್ಯನ್ ಯೋಧರಲ್ಲೂ ಝಾರ್ ಆಳ್ವಿಕೆಯ ಮೇಲೆ ವಿಶ್ವಾಸ ಕಡಿಮೆಯಾಗಿತ್ತು. ಝಾರ್ ಗೆ ನಿಷ್ಠರಾಗಿ ಕ್ರಾಂತಿಯನ್ನು ತಡೆಯೆಲೆತ್ನಿಸಿದ ಪೊಲೀಸರನ್ನು ಮತ್ತು ಸೈನಿಕರನ್ನು ಕೊಂದು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತದೆಯಷ್ಟೇ ಅಲ್ಲದೇ ಝಾರ್ ಅಧಿಕಾರ ವ್ಯವಸ್ಥೆ ಶೀಘ್ರವಾಗಿ ಪತನದತ್ತ ಸಾಗುತ್ತದೆ. ಮೂರು ದಿನಗಳ ನಂತರ ಝಾರ್ ನಿಕೊಲಾಸ್, ಪದತ್ಯಾಗ ಮಾಡುತ್ತಾನೆ ಮತ್ತು ತಾತ್ಕಾಲಿಕವಾಗಿ ಪ್ರಜಾಪ್ರಭುತ್ವ ತತ್ವಗಳ ಆಧಾರದಲ್ಲಿ ಸರಕಾರವೊಂದು ರಚಿಸಲ್ಪಡುತ್ತದೆ.


ಫೆಬ್ರವರಿ ಕ್ರಾಂತಿಯಿಂದಾಗಿ ರಚಿಸಲ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಕಾಲ ಬಾಳಲಿಲ್ಲ.  ಮುಂದೆ 1917ರ ನವೆಂಬರ್ ನಲ್ಲಿ ನಡೆದ (ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್) ಅಕ್ಟೋಬರ್ ಕ್ರಾಂತಿ ರಷ್ಯಾವನ್ನು ಕಮ್ಯುನಿಸ್ಟ್ ಆಡಳಿತ ತನ್ನ ಹಿಡಿತ ಬಿಗಿಗೊಳಿಸುತ್ತದೆ. ಫೆಬ್ರವರಿ ಕ್ರಾಂತಿಯನ್ನು ಊಹಿಸಲು ವಿಫಲರಾಗಿದ್ದ ಲೆನಿನ್ ಮತ್ತು ಆತನ ಸಂಗಡಿಗರು ಈ ಕ್ರಾಂತಿಯ ನಂತರದ ದಿನಗಳನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ರಷ್ಯಾ, ಕಮ್ಯುನಿಸಂನ ಕಬ್ಬಿಣದ ಪರದೆಯಡಿಯಲ್ಲಿ ಸೊವಿಯೆತ್ ಒಕ್ಕೂಟದ ಹೆಸರಿನಲ್ಲಿ ವಿಶ್ವದ ಎರಡು ಸೂಪರ್ ಪವರ್ ಗಳಲ್ಲಿ ಒಂದಾಗುತ್ತದೆ. ಆದರೆ ಕಮ್ಯುನಿಸ್ಟ್ ಆಡಳಿತದ ಸೊವಿಯೆತ್ ರಷ್ಯಾದಲ್ಲಿ ಫೆಬ್ರವರಿ ಕ್ರಾಂತಿಯನ್ನು ಕಡೆಗಣಿಸಿ, ಅಕ್ಟೋಬರ್ ಕ್ರಾಂತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇವತ್ತಿಗೂ ರಷ್ಯಾ ಮತ್ತು ವಿಶ್ವದ ವಿವಿಧ ಭಾಗಗಳ ವಿದ್ವಾಂಸರು,  ರಷ್ಯಾಗೆ ಮೊದಲ ಬಾರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ ಈ ಫೆಬ್ರವರಿ ಕ್ರಾಂತಿಯನ್ನು, ವಿಶ್ವ ಕಂಡ ಮಹತ್ವದ ರಾಜಕೀಯ ಬದಲಾವಣೆಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಅಕ್ಟೋಬರ್ ಕಮ್ಯುನಿಸ್ಟ್ ಕ್ರಾಂತಿಯ ವೈಭವೀಕರಣದಿಂದಾಗಿ, ಮಾಸಿಹೋಗುತ್ತಿರುವ ಫೆಬ್ರವರಿ ಕ್ರಾಂತಿಗೆ ಈ ಮಾರ್ಚ್ ನಲ್ಲಿ ಶತಕದ ಸಂಭ್ರಮ. ಚರಿತ್ರೆಯ ಪುಟಗಳಲ್ಲಿ ಹುದುಗಿಕೊಂಡ ನೆನಪುಗಳನ್ನು ಹೊರತೆಗೆಯಲು ಇದಕ್ಕಿಂತ ಒಳ್ಳೆಯ ಸಮಯ ಸಿಗಲು ಸಾಧ್ಯವೇ?

(This article was published in Vishwavani Newsapaper on 9 March 2017)


Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ